Thursday, October 16, 2025
Google search engine
Home Blog

ತುಮಕೂರು ಜಿಲ್ಲೆಯ ಆಶಾಕಿರಣ

ಒಂದು ಕಾಲದಲ್ಲಿ ತುಮಕೂರು ಜಿಲ್ಲೆಯ ರಾಜಕಾರಣಿಗಳು ರಾಜ್ಯ ರಾಜಕಾರಣ ಮೇಲೆ ಛಾಪು ಮೂಡಿಸುತಿದ್ದರು.
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಟಿಕೆಟ್ ಗಾಗಿ ಬಾಣಸಂದ್ರದ ಹುಚ್ಚೇ ಗೌಡ ರ ಮನೆ ಬಾಗಿಲಿಗೆ ಹುಡುಕಿ ಬಂದಿದ್ದರು.
ಆದ್ರೆ ಈಗ ಅಂತಹ ರಾಜಕಾರಣಿಗಳ ಕೊರತೆ ಕಲ್ಪತರು ನಾಡನ್ನು ಕಾಡುತಿದೆ. ಇದನ್ನು ನೀಗಿಸುವ ನಾಯಕರ ಯಾರಿದ್ದಾರೆ ಎಂದು ನೋಡಿದರೆ ಇಬ್ಬರ ಹೆಸರನ್ನು ಹೇಳಬಹುದು.

ಒಂದು, ಗೃಹ ಸಚಿವರಾದ Dr. G. ಪರಮೇಶ್ವರ್, ಇನ್ನೊಂದು ಹೆಸರು ಶಾಸಕರಾದ B.ಸುರೇಶಗೌಡ.
ವ್ಯವಸಾಯ ಮೂಲದ ಸುರೇಶ ಗೌಡರು ತಮ್ಮ ಕೆಲಸ, ಶ್ರಮದ ಮೂಲಕ ರಾಜ್ಯದ ಗಮನ ಸೆಳೆದ ರಾಜಕಾರಣಿ.
ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಜಿಲ್ಲೆಯ ಒಂದು ಬಣ ನಡೆಸಿದ ಎಲ್ಲ ತಂತ್ರ, ಕುಂತಂತ್ರ ಗಳನ್ನು ಮೆಟ್ಟಿ ತುಮಕೂರು ಗ್ರಾಮಾಂತರ ಕ್ಷೇತ್ರ ದಲ್ಲಿ ಗಟ್ಟಿಯಾಗಿ ನೆಲೆನಿಂತು ಎಲ್ಲರಿಗೂ ಸವಾಲು ಹಾಕಿದ ಚತುರ ರಾಜಕೀಯ ಮುತ್ಸದಿ.


ಗ್ರಾಮಾಂತರ ಕ್ಷೇತ್ರದಿಂದ ಅವರನ್ನು ಆಚೆ ಸರಿಸಲು ಎಲ್ಲ ಪಕ್ಷಗಳ ಕೆಲವು ನಾಯಕರು ಪಟ್ಟ ಶ್ರಮ ಅಷ್ಟಿಷ್ಟಲ್ಲ.  ಈ ಕಾರಣದಿಂದಲೇ ಕೆಲವೊಮ್ಮೆ ಅವ್ರು ಪಕ್ಷದ ಸ್ಥಳೀಯ ನಾಯಕರ ವಿರುದ್ಧವೇ ಸಿಟ್ಟಾಗಿದ್ದು ಉಂಟು.

ಬಿಜೆಪಿ ಗೆ ಜಿಲ್ಲೆಯಲ್ಲಿ ಒಂದು ಗಟ್ಟಿ ನೆಲೆ ತಂದುಕೊಟ್ಟ ಗಟ್ಟಿ ರಾಜಕಾರಣಿ ಅವರು. ಇದಕ್ಕಾಗಿ ಅವರು ಕೆಲವು ರಾಜಕೀಯ ವ್ಯೆರಿ ಗಳನ್ನು ಹುಟ್ಟಿಹಾಕಿಕೊಂಡರು. ಮಾಜಿ ಪ್ರಧಾನಿ ದೇವೇಗೌಡರ ರೀತಿ ಹಗಲು ರಾತ್ರಿ ರಾಜಕಾರಣ ಮಾಡುವ ಜಿಲ್ಲೆಯ ಏಕ ಮಾತ್ರ ರಾಜಕಾರಣಿ ಎಂದರೆ ಅದು ಸುರೇಶ ಗೌಡರು ಮಾತ್ರ.


ಜನರ ನಡುವೆ ನಿಂತು ಕೆಲಸ ಮಾಡುವ ಶಾಸಕ ಯಾರಾದರೂ ಇದ್ದರೆ ಅದು ಸುರೇಶ ಗೌಡರು ಮಾತ್ರ. ಇದಕ್ಕೆ ಇವನ್ನು ಉದಾಹರಿಸಬಹುದು.

ತಮ್ಮ ಕ್ಷೇತ್ರದ ಶಾಲೆಗಳಲ್ಲಿ ಕಸವನ್ನು ಸಹ ಅವರು ಗುಡಿಸಿದ್ದಾರೆ. ಬೇರೆ ಯಾವುದೇ ರಾಜಕಾರಣಿ, ಶಾಸಕರು ಗಾಂಧಿ ಜಯಂತಿ ದಿನ ಮಾತ್ರ ಕಸ ಗುಡಿಸುವ ಚಿತ್ರಕ್ಕೆ ಫೋಸು ಕೊಡುತಾರೆ. ಆದ್ರೆ ಸುರೇಶ ಗೌಡ್ರು ಆಗಲ್ಲ. ದೇಶ, ರಾಜ್ಯ ಮಟ್ಟದಲ್ಲಿ ಪ್ರಚಾರಕ್ಕೆ ಬರಬೇಕಾದ ಅನೇಕ ವಿಚಾರಗಳಲ್ಲಿ ಅವರು ದೂರವೇ ಇದ್ದಾರೆ. ಜನರ ಹೃದಯದಲ್ಲಿ ನೆಲೆ ನಿಲ್ಲಬೇಕು ಎಂದು ಪದೇಪದೇ ಅವರು ಹೇಳಿಕೊಳ್ಳುತ್ತಾರೆ.

ರಸ್ತೆಗಳನ್ನ ಹೇಗೆ ಗುಣಮಟ್ಟದಲ್ಲಿ ಮಾಡಬೇಕು ಎಂಬುದಕ್ಕೆ ಅವರು ಇಂದಿಗೂ ರಾಜ್ಯದ ಆದರ್ಶಪ್ರಾಯ ರಾಜಕಾರಣಿ.
ಸರಕಾರಿ ಶಾಲೆಗಳಲ್ಲಿ ಕ್ರಾಂತಿ ತಂದವರು. ಅವರ ಕ್ಷೇತ್ರದ ದೇವಸ್ಥಾನ ಗಳ ಅಭಿವೃದ್ಧಿ ಯಲ್ಲಿ ಅವರು ಒಂದು model creat ಮಾಡಿದ್ದಾರೆ. ಅವರ ಕ್ಷೇತ್ರದ ಪ್ರತಿ ಕೃಷಿಕನ ಬೋರೆವೆಲ್ ಗೆ ಉಚಿತ ಟ್ರಾನ್ಸ ಫಾರ್ಮ್ ರ್ ಕೊಟ್ಟ  ದೇಶದ ಮೊದಲ ಶಾಸಕ ಇವರು. ಆದರೆ ಇದನ್ನೆಲ್ಲ ಅವರು ಪ್ರಚಾರಕ್ಕೆ ಮುಂದು ಮಾಡಲಿಲ್ಲ.

ತಮ್ಮ ಕೆಲಸಗಳಿಗಾಗಿ ಸುರೇಶ್ ಗೌಡರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೆ ಅವರ ಸರಕಾರ ಬರುತ್ತೆ ಎಂದು ಗೊತ್ತಾಗುತಲೇ ಇಲ್ಲಿಯ ಅವರ ಪಕ್ಷದವರು ಕೆಲವರ ಜತೆ ಸೇರಿ ಅವರನ್ನು ಸೋಲಿಸಿದರು. ಆದರೂ ಅವರು ಎದೆಗುಂದಲಿಲ್ಲ. ಮಾಜಿ ಶಾಸಕರಾದರೂ ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರಿಂದ ಕೋಟ್ಯಂತರ ರೂಪಾಯಿ ಅನುದಾನ ತರುವ ಮೂಲಕ ಶಾಸಕರುಗಳು ಹುಬ್ಬೇರುವಂತೆ ಮಾಡಿದ್ದರು.

ಅವರು ಏನು ತಪ್ಪು ಮಾಡದಿದ್ದರೂ ಅವರ ವಿರುದ್ಧದ ಅಪಪ್ರಚಾರಕ್ಕೇನು ಕೊರತೆ ಇಲ್ಲ. ಸ್ವಲ್ಪ ಸಿಟ್ಟನ್ನು ಈಗ ಕಡಿಮೆ ಮಾಡಿಕೊಂಡಿದ್ದಾರೆ.

ತುಮಕೂರಿಗೆ ಹೇಮಾವತಿ ನೀರು ಬರಲು ಕಾರಣ ಮಾಜಿ ಸಚಿವ ಹುಚ್ಚಮಾಸ್ತಿಗೌಡರು. ದೇವರಾಜ್ ಅರಸು ಕಾಲದಲ್ಲಿ ಮಂತ್ರಿ ಸ್ಥಾನವನ್ನೇ ದಿಕ್ಕರಿಸುವ ಬೆದರಿಕೆ ಹಾಕಿ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಕಾರಣರಾದರು. ಅದೇ ರೀತಿ ಪರಿಸರ, ಹೇಮಾವತಿ ನೀರಿನ ಬಗ್ಗೆ ಕಾಳಜಿಯಳ್ಳ ರಾಜಕಾರಣಿ ವೈ.ಕೆ.ರಾಮಯ್ಯ, ಕುವೆಂಪು ಅವರ ವಿಚಾರಧಾರೆ ಅಳವಡಿಸಿಕೊಂಡಿದ್ದ ವೈ.ಕೆ.ಆರ್. ದೇವೇಗೌಡರನ್ನು ಎದುರು ಹಾಕಿಕೊಳ್ಳುವ ಮೂಲಕ ರಾಜಕೀಯ ಪಡಸಾಲೆಯಲ್ಲಿ ಹೆಸರಾದವರು.
ಇವರಿಬ್ಬರ ಗುಣವನ್ನು ಮೇಳೈವಿಸಿಕೊಂಡಿರುವ ರಾಜಕಾರಣಿಯಾಗಿ ಸುರೇಶ ಗೌಡರನ್ನು ಈಗ ಜಿಲ್ಲೆ ನೋಡಬಹುದಾಗಿದೆ.


ಕುಣಿಗಲ್ ನಲ್ಲಿ ನೀರಿನ ರಾಜಕಾರಣದ ಮೂಲಕ ಜೈಲು ಸೇರಿ ಹೆಸರು ಮಾಡಿದ ಸುರೇಶಗೌಡರು ನಂತರ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ತಮ್ಮ ನಲೆಯಾಗಿ ರೂಪಿಸಿಕೊಂಡರು. ಈ ಹಿಂದೆ ಕುಣಿಗಲ್ ಗೆ ಸೇರಿದ್ದ ಅನೇಕ ಗ್ರಾಮಗಳು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಂದ ಕಾರಣ ಅವರು ತುಮಕೂರು ಗ್ರಾಮಾಂತರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ. ಪರಿಸರದ ಮೇಲೆ ವಿಶೇಷ ಪ್ರೀತಿಯೂ ಇರುವ ಸುರೇಶಗೌಡರು ಮರಳು ಗಣಿಗಾರಿಕೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ಮುಂದಾಗಿ ಒಂದು ವರ್ಗದ ಕೋಪಕ್ಕೆ ತುತ್ತಾದರು. ಇದು ರಾಜಕೀಯವಾಗಿ ಅವರಿಗೆ ತುಂಬಾ ನಷ್ಟದ ಬಾಬತ್ತು ಆಗಿತ್ತು.


ನಿನ್ನೆಯಷ್ಟೇ 60 ವರ್ಷಕ್ಕೆ ಪದಾರ್ಪಣೆ ಮಾಡಿರುವ ಸುರೇಶಗೌಡರು ತುಮಕೂರು ರಾಜಕಾರಣದಲ್ಲಿ, ರಾಜ್ಯ ರಾಜ್ಯಕಾರಣದಲ್ಲಿ ಆಗಾಗ ‘ಹಾಹಾಕಾರ’ ಉಂಟು ಮಾಡುತ್ತಲೇ ಸಾಗಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಮೂಲಕವೇ ಹೆಸರು ಗಳಿಸಿದವರು. ಜಿಲ್ಲೆಯ ಏಕೈಕ ಧೈರ್ಯವಂತ, ಚತುರ ರಾಜಕಾರಣಿ. ಅವರಿಗೆ ಸರಿ ಅನ್ನಿಸದಿದ್ದರೆ ಯಾರನ್ನು ಬಿಡುವುದಿಲ್ಲ. ರಾಜಕೀಯದಲ್ಲಿ ಅಷ್ಟೇನು ಒಳ್ಳೆಯದು ಅಲ್ಲದ ಎಲ್ಲರನ್ನು ಎದುರುಹಾಕಿಕೊಂಡು ಈಜುವ ಛಲ ಅವರ ರಕ್ತದಲ್ಲೇ ಇರುವಂತಿದೆ. ಇದನ್ನು ಅವರದೇ ಪಕ್ಷದ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿಯ ವಿಷಯದಲ್ಲಿ ನಾವು ನೋಡಬಹುದಾಗಿದೆ.


ಹಣ, ಹೆಂಡ ರಾಜಕಾರಣಕ್ಕೆ ಸೋಕಬಾರದು ಎಂದು ನಂಬುವ ಅವರು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರುವವರು ವಿರುದ್ಧ ಸಿಡಿದೆದಿದ್ದರು. ಸರಿಯಾಗಿ ಆಸ್ಪತ್ರೆಗೆ ಬಾರದ ವೈದ್ಯರ ವಿರುದ್ಧ, ಪಾಠ ಮಾಡದ ಶಿಕ್ಷಕರ ವಿರುದ್ಧವೂ ಕೋಪಗೊಂಡರು. ಇದರಿಂದಾಗಿಯೇ ಗ್ರಾಮಾಂತರ ಸುಶಿಕ್ಷಿತರ ಕ್ಷೇತ್ರವಾಗಿ, ಅಭಿವೃದ್ಧಿಯ ಕ್ಷೇತ್ರವಾಗಿ ಈಗ ಗಮನ ಸೆಳೆಯುವಂತಾಗಿದೆ.


ಅವರು ಕಟ್ಟಿರುವ ಸರ್ಕಾರಿ ಶಾಲೆಗಳು ಸಾರ್ವಕಾಲಕ್ಕೂ ದೇಶಕ್ಕೆ ಮಾದರಿಯಾಗಿ ನಿಲ್ಲುತ್ತವೆ.


ತುಮಕೂರು ರಾಜಕಾರಣದ ಮೇಲೆ ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣ ಅವರ ಪ್ರಭಾವ ಹೆಚ್ಚು. ಗೆಲ್ಲುವವರನ್ನು ಸೋಲಿಸಲು, ಸೋಲುವವರನ್ನು ಗೆಲ್ಲಿಸಲು ಅವರ ಪಕ್ಷಾತೀತ ತಂತ್ರಗಾರಿಕೆ ಹೆಸರುವಾಸಿಯಾಗಿದೆ. ಆದರೆ ಸುರೇಶಗೌಡರು ಇದಕ್ಕೆ ವಿರುದ್ಧದ ರಾಜಕಾರಣಿ. ಅವರು ಪಕ್ಷನಿಷ್ಠೆಯ ರಾಜಕಾರಣಿ. ಇದಕ್ಕಾಗಿ ಯಾವುದೇ ಬೆಲೆ ತೆರಲು ಸಹ ಸಿದ್ಧ. ಹೀಗಾಗಿಯೇ ಅವರು ಪಕ್ಷಕಟ್ಟಲು ಅನೇಕರನ್ನು ಎದುರುಹಾಕಿಕೊಂಡು ತಮ್ಮ ಅಭಿವೃದ್ಧಿಯ ಕ್ಷೇತ್ರದಲ್ಲಿ ಗೆಲ್ಲಲು ಸಾಕಷ್ಟು ಬೆವರು ಹರಿಸಬೇಕಾಯಿತು ಎನ್ನುವುದು ಈಗ ಇತಿಹಾಸ.

ಸ್ವಲ್ಪ ಮಾಗಿದಂತೆ ಕಾಣುವ ಸುರೇಶಗೌಡರು, ರಾಜ್ಯ ರಾಜಕಾರಣದ ಮೇಲೆ ಕಣ್ಣು ನೆಟ್ಟಿದ್ದಾರೆ ಎಂಬುದನ್ನು ಅವರ ಮಾತುಗಳೇ ಹೇಳುತ್ತವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೀಲಿಗಣ್ಣಿನ ಹುಡುಗ ಆಗಿರುವ ಸುರೇಶಗೌಡರು ಈಗಲೂ ಯಡಿಯೂರಪ್ಪ ಮಾತಿಗೆ ಎದುರಾಡುವುದಿಲ್ಲ. ಈ ಹಿಂದೆ ಲೋಕಸಭಾ ಕ್ಷೇತ್ರವೊಂದರ ಟಿಕೆಟ್ ಸಿಕ್ಕರೂ ಯಡಿಯೂರಪ್ಪ ಅವರು ಬೇಡ ಎಂದಿದ್ದಕ್ಕೆ ಸುಮ್ಮನೇ ಹಿಂದೆ ಸರಿದವರು.


ಮುಖ್ಯಮಂತ್ರಿಯಾಗುವ ಯಾದಿಯಲ್ಲಿರುವ ಡಾ.ಜಿ.ಪರಮೇಶ್ವರ್ ಅವರನ್ನೂ ಸಹ ಟೀಕಿಸದೇ ಬಿಡಲಾರರು ಸುರೇಶಗೌಡರು. ಅದೇ ರೀತಿ ಅವರೊಂದಿಗೆ ಸ್ನೇಹವನ್ನೂ ಉಳಿಸಿಕೊಳ್ಳಬಲ್ಲರು ಎಂಬುದಕ್ಕೆ ಅವರ ಈಗಿನ ಕೆಲ ನಡೆಗಳಲ್ಲಿ ಕಾಣಬಹುದು.


ಜಿಲ್ಲೆಯಲ್ಲಿ ನಡೆಯುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಹೋರಾಟದಲ್ಲಿ ಜಿಲ್ಲೆಯ ಕೇಂದ್ರಬಿಂದುವಾಗಿದ್ದು ಸಣ್ಣ ಮಾತೇನಲ್ಲ. ಸುರೇಶಗೌಡರನ್ನು ಜಿಲ್ಲೆಯ ಜನರು ಈಗ ದಿವಂಗತರಾದ ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ ಅವರ ಸರಿಸಮಾನ ಸ್ಥಾನಕ್ಕೇರಿಸಿದ್ದಾರೆ. ಹೀಗಾಗಿಯೇ ನೀರಾವರಿ ವಿಚಾರದಲ್ಲಿ ಅವರು ಕರೇ ಕೊಟ್ಟರೆ ಸಾವಿರಾರು ಜನರು ಜಿಲ್ಲೆಯಲ್ಲಿ ಜಾತಿ ಅತೀತರಾಗಿ,  ಪಕ್ಷಾತೀತವಾಗಿ ಸೇರುತ್ತಿದ್ದಾರೆ.

ತುಮಕೂರಿನಾದ್ಯಂತ ಪಕ್ಷಾತೀತವಾಗಿ ಅವರನ್ನು ಪ್ರೀತಿಸುವ ಸಾಮಾನ್ಯ ಜನರು ಇದ್ದಾರೆ. ಸುರೇಶಗೌಡರಂಥ ಶಾಸಕರು ನಮಗೂ ಬರಲಿ ಎಂದು ಹಂಬಲಿಸುವ ಲಕ್ಷಾಂತರ ಜನರು ತುಮಕೂರು ಜಿಲ್ಲೆಯಲ್ಲಿ ಇದ್ದಾರೆ. ಇದು ಅವರು ಶಾಸಕರಾಗಿ ನಡೆದಿರುವ ಹಾದಿಗೆ ಸಾಕ್ಷಿಯಾಗಿದೆ.


ಜಿಲ್ಲೆಯ ರಾಜಕಾರಣ ಈಗ ಸೊರಗಿದಂತಿದೆ. ಡಾ.ಜಿ.ಪರಮೇಶ್ವರ್ ಹೆಚ್ಚು ಗಟ್ಟಿಯಾಗಿ ಮಾತನಾಡದ ಪ್ರಚಾರದ ಕೇಂದ್ರಬಿಂದುವಾಗಿ ಕಾಣಿಸಿಕೊಳ್ಳಲು ಇಷ್ಟಪಡದ ರಾಜಕಾರಣಿಯಾಗಿ ಗುರುತಿಸಿಕೊಂಡರೆ, ಸುರೇಶಗೌಡರು ಇದಕ್ಕೆ ತದ್ವಿರುದ್ದ. ಯಾವಾಗಲೂ ಬಿರುಸು ಮಾತುಗಳಿಂದ, ಗಟ್ಟಿ ದನಿಯಿಂದಲೇ ಜಿಲ್ಲೆ, ರಾಜ್ಯದಗಮನ ಸೆಳೆದವರು.


ಈಗಿನ ಬಂದ  ವಿಧಾನಸಭೆಯ ಅಧಿವೇಶನದಲ್ಲೂ ಗಮನ ಸೆಳೆಯುವಂತ ಮಾತುಗಳನ್ನು ಆಡಿದ್ದಾರೆ. ಸದನದಲ್ಲಿ ಅವರ ಭಾಗವಹಿಸುವಿಕೆ, ಅವರು ಎತ್ತುವ ಪ್ರಶ್ನೆಗಳು ರಾಜ್ಯದ ಗಮನ ಸೆಳೆದಿವೆ.


ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ಸಖ್ಯ ಎಚ್.ಡಿ.ಕುಮಾರಸ್ವಾಮಿ ಹಾಗೂ ಸುರೇಶಗೌಡರನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ. ಅನೇಕ ವಿಚಾರಗಳಲ್ಲಿ ಅವರು ಕುಮಾರಸ್ವಾಮಿ ಜತೆ ಗಟ್ಟಿಯಾಗಿ ನಿಂತಿರುವುದು ಸಹ ಇದೆ. ಇದು ಗ್ರಾಮಾಂತರ ಕ್ಷೇತ್ರದಲ್ಲಿ ಹೊಸ ರಾಜಕೀಯ ನಂಟಿಗೆ ಕಾರಣವಾಗಿದೆ.


ಮುಂದೆ ಏನಾದರೂ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರ ಬಂದರೆ ಸುರೇಶಗೌಡರಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದೇ ಆ ಎರಡೂ ಪಕ್ಷಗಳ ಕಾರ್ಯಕರ್ತರು ನಂಬಿದ್ದಾರೆ. ಮಾಗಿದ ರಾಜಕಾರಣಿಯಾಗಿ ಸುರೇಶಗೌಡರ ವಿಚಾರಧಾರೆಗಳು, ಅಭಿವೃದ್ಧಿಯ ದೃಷ್ಠಿಕೋನ ರಾಜ್ಯಕ್ಕೂ ಬೇಕಾಗಿದೆ. ಈ ಸರ್ಕಾರದಲ್ಲಿ ಡಾ.ಜಿ. ಪರಮೇಶ್ವರ್ ಅವರು ರಾಜ್ಯ ರಾಜಕಾರಣದ ಕೇಂದ್ರಬಿಂದುವಾಗಿದ್ದಾರೆ. ಇಂಥ ಸಾಧ್ಯತೆಯನ್ನು ಸುರೇಶಗೌಡರು ಸಚಿವರಾದರೆ ತುಮಕೂರು ಮತ್ತೊಮ್ಮೆ ಕಾಣಬಹುದಾಗಿದೆ.

ಯುವ ವಕೀಲರಲ್ಲಿ ಶಿಸ್ತು, ಅಧ್ಯಯನದ ಕೊರತೆ: ನ್ಯಾಯಾದೀಶ ಜಯಂತ್ ಕುಮಾರ್

0

ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸತೀಶ್ ಗೌಡ ಬಿ. ಅವರನ್ನು ಸನ್ಮಾನಿಸಲಾಯಿತು.

ತುಮಕೂರು: ಯುವ ವಕೀಲರಲ್ಲಿ ಶಿಸ್ತು, ಅಧ್ಯಯನ ಕೊರತೆ ಹೆಚ್ಚಾಗುತ್ತಿದೆ. ಇದು ನ್ಯಾಯದಾನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಯಂತ ಕುಮಾರ್ ಕಳವಳ ವ್ಯಕ್ತಪಡಿಸಿದರು.
ತುಮಕೂರಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ಮೊದಲ ವರ್ಷದ ಕಾನೂನು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.


ಹಿರಿಯ ವಕೀಲರು ಬಂದಾಗ ಅವರಿಗೆ ನ್ಯಾಯಾಲಯದಲ್ಲಿ ಸೀಟು ಬಿಟ್ಟು ಕೊಡುವುದು ಮೊದಲಿನಿಂದಲೂ ಬೆಳೆದುಬಂದ ವಾಡಿಕೆ. ಆದರೆ ಈಗಿನ ಯುವ ವಕೀಲರಲ್ಲಿ ಇದು ಕಾಣುತ್ತಿಲ್ಲ. ಹಿರಿಯ ಅನುಭವಿ ವಕೀಲರಿಂದ ಕಲಿಯುವುದು ಸಾಕಷ್ಟಿದೆ. ಅವರಿಗೆ ಗೌರವ ಕೊಡುವುದನ್ನು, ಅವರೊಂದಿಗೆ ಸೌಜನ್ಯದ ವರ್ತನೆ ತೋರುವುದು ಮುಖ್ಯ ಎಂದರು.


ಕ್ರಿಮಿನಲ್ ಪ್ರಕರಣಗಳಲ್ಲಿ ಯುವ ವಕೀಲರು ತೋರುತ್ತಿರುವ ನಡೆ ನಿಜಕ್ಕೂ ನ್ಯಾಯದಾನದ ಮೇಲೆ ಪರಿಣಾಮ ಬೀರುತ್ತಿದೆ. ವಕೀಲರನ್ನು ನಂಬಿ ಕಕ್ಷಿದಾರರು ಬಂದಿರುತ್ತಾರೆ. ಕೇಸಿನ ಬಗ್ಗೆ ಅಧ್ಯಯನವೇ ಇಲ್ಲದೇ ಕೇಸು ನಡೆಸುವುದರ ಪರಿಣಾಮವನ್ನು ನ್ಯಾಯಾಧೀಶರ ಮೇಲೆ ಹಾಕುವ ಮನಸ್ಥಿತಿ ಹೆಚ್ಚುತ್ತಿದೆ. ಇದು ಸರಿಯಲ್ಲ ಎಂದು ತಿಳಿ ಹೇಳಿದರು.


ಓದಿ ಕಲಿಯುವುದಕ್ಕಿಂತಲೂ ಅನುಭವದಿಂದ ಕಲಿಯುವುದು ಹೆಚ್ಚು. ವಕೀಲ ವೃತ್ತಿಯಲ್ಲಿ ಓದಿಗಿಂತಲೂ ಅನುಭವದಿಂದ ಬಂದ ಕಲಿಕೆ ಹೆಚ್ಚು ಪರಿಣಾಮಕಾರಿ ಎಂದು ಹೇಳಿದರು.


ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಸತೀಶ್ ಗೌಡ ಬಿ ಮಾತನಾಡಿ, ಹಳ್ಳಿಯಿಂದ ಬಂದಿದ್ದೇವೆ, ಕನ್ನಡ ಮಾಧ್ಯಮದಲ್ಲಿ ಓದಿದ್ದೇವೆ ಎಂಬ ಕೀಳರಿಮೆ ಬಿಡಬೇಕು. ಸಾಧಕರ ಪಟ್ಟಿ ನೋಡಿದರೆ ಹಳ್ಳಿಯವರೇ ಹೆಚ್ಚಿರುತ್ತಾರೆ. ಹಳ್ಳಿಯಲ್ಲಿ ಹುಟ್ಟುವುದು, ಬಡವರಾಗಿ ಹುಟ್ಟುವುದು ಶಾಪ ಅಲ್ಲ, ಸಾಧನೆ ಮಾಡಲು ಇರುವ ಅವಕಾಶ ಎಂದು ವಿದ್ಯಾರ್ಥಿಗಳು ಅಂದುಕೊಳ್ಳಬೇಕು ಎಂದು ಹೇಳಿದರು.


ನಾನೂ ಸಹ ಹಳ್ಳಿಯಿಂದ ಬಂದವನೇ. ನನ್ನಂತ ನೂರಾರು ಸಾಧಕರು ಹಳ್ಳಿಯಿಂದ ಬಂದವರೇ ಆಗಿರುತ್ತಾರೆ. ಪ್ರೊಫೆಸರ್ ಮಗ ಐಎಎಸ್ ಆಗುವುದನ್ನು ಸಾಧನೆ ಎಂದೂ ಯಾರು ಹೇಳಲಾರರು. ಆದರೆ ಹಳ್ಳಿಯ ಕೃಷಿಕರ ಮಗ, ಚಪ್ಪಲಿ ಹೊಲೆಯವವರ ಮಗ ಐಎಎಸ್ ಮಾಡಿದಾಗ ಅದು ಸಾಧನೆಯಾಗುತ್ತದೆ. ಇಂಥ ಸಾಧನೆ ಎಲ್ಲರೂ ಮಾಡಬಹುದು ಎಂದರು.


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶರಾದ ನೂರುನ್ನೀಸಾ ಅವರು ಮಾತನಾಡಿ, ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ರೂಪಿಸಬೇಕು. ಧರ್ಮ, ಜಾತಿಯ ಬಗ್ಗೆ ದ್ವೇಷ,  ಅಸೂಸೆ ಬರಬಾರದು. ಎಲ್ಲ ಧರ್ಮಗಳು ನೆರೆಹೊರೆಯವರನ್ನು ಪ್ರೀತಿಸಿ ಎಂದು ಹೇಳಿವೆ ಹೊರತು ದ್ವೇಷಿಸಿ ಎಂದು ಹೇಳಿಲ್ಲ ಎಂದರು.


ಪ್ರಾಂಶುಪಾಲರದ ಡಾ. ಎಸ್.ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಓಬಯ್ಯ, ಪಾಧ್ಯಾಪಕರಾದ ಸಿ.ಕೆ.ಮಹೇಂದ್ರ, ಮಮತಾ, ಶ್ರೀನಿವಾಸ್, ಗೌರಿಶಂಕರ್, ಖಾಷಿಪ್, ಅಶ್ವತ್ಥನಾರಾಯಣ, ನರೇಶ್, ಕಾಲೇಜಿನ ಗ್ರಂಥಪಾಲಕ ಸುಬ್ರಹ್ಮಣ್ಯ, ಮೇಲ್ವಿಚಾರಕರಾದ ಜಗದೀಶ್ ಇದ್ದರು.

ಬೆಂಗಳೂರು ರಿಂಗ್ ರಸ್ತೆ ಭೂ ಸ್ವಾಧೀನ ಕೈಬಿಡಲು ಸಿದ್ದಗಂಗಾ ಶ್ರೀ ಒತ್ತಾಯ

0


ತುಮಕೂರು: ಬೆಂಗಳೂರು ರಿಂಗ್ ರಸ್ತೆಯ (ಬಿಆರ್ ಆರ್) ಭೂ ಸ್ವಾಧೀನವನ್ನು ಕೈ ಬಿಡುವಂತೆ ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಕೇಂದ್ರ ಸಚಿವ ಸೋಮಣ್ಣ ಅವರ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.


ಶನಿವಾರ ಸಿದ್ದಗಂಗಾ ಮಠದಲ್ಲಿ ನೂರಾರು ರೈತರ ಸಮ್ಮುಖದಲ್ಲಿ ಅವರು ರೈತರು ನೀಡಿದ ಈ ಒತ್ತಾಯದ ಮನವಿ ಪತ್ರವನ್ನು ಕೇಂದ್ರ ಸಚಿವರಿಗೆ ಸಲ್ಲಿಸಿದರು.


ಭಾರತ ಮಾಲಾ ಯೋಜನೆಯಲ್ಲಿ ಈ ರಸ್ತೆಗಾಗಿ 2019ರಲ್ಲಿ ಭೂ ಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕಕನಪುರ- ಅನೇಕಲ್, ರಾಮನಗರ-ಮಾಗಡಿ-ಶಿವಗಂಗೆ ಮಾರ್ಗವಾಗಿ ದಾಬಸಪೇಟೆ ಗೆ ಸೇರುವ ಬೆಂಗಳೂರು ರಿಂಗ್ ರಸ್ತೆಗೆ (ಬಿಆರ್ ಆರ್) ಈಗಾಗಲೇ ಭೂ ಸ್ವಾಧೀನವನ್ನು ಮಾಡಿಕೊಳ್ಳಲಾಗಿದೆ. ಕೆಲವೇ ಮಂದಿಗೆ ಮಾತ್ರ ಪರಿಹಾರ ನೀಡಿ ಉಳಿದ ರೈತರಿಗೆ ಪರಿಹಾರವನ್ನು ನೀಡಿಲ್ಲ. ಅಧಿಕಾರಿಗಳು ಯೋಜನೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಲ್ಲಿಸಿದೆ. ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ರೈತರಿಗೆ ಭೂಮಿಯೂ ಇಲ್ಲ, ಪರಿಹಾರವೂ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ, ಪರಿಹಾರ ಕೊಡಬೇಕು ಇಲ್ಲವೇ ರೈತರಿಗೆ ಭೂಮಿಯನ್ನಾದರೂ ವಾಪಸ್ ನೀಡಲಿ. ಈ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಮಾತನಾಡಬೇಕು ಎಂದರು.


ಶಿವಗಂಗೆಯ ಹೊನ್ನಮ್ಮಗವಿ ಮಠದ ಶ್ರೀಗಳಾದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭೂ ಸ್ವಾಧೀನದ ಹಣ ಬರಲಿದೆ ಎಂದು ಅನೇಕ ರೈತರು ಸಾಲ ಮಾಡಿ ಮನೆ ಕಟ್ಟಿದ್ದಾರೆ, ಮದುವೆ ಮಾಡಿದ್ದಾರೆ. ಸಾಲಕ್ಕೆ ಬಡ್ಡಿಕಟ್ಟಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಯ ಭೂಮಿಯನ್ನ ಕೆಲವೇ ಲಕ್ಷ ನೀಡಿ ಸ್ವಾಧೀನದ ನೋಟಿಸ್ ನೀಡಿ ನಾಲ್ಕು ವರ್ಷ ಕಳೆಯುತ್ತಾ ಬಂದಿದೆ. ಪರಿಹಾರ ಬೇಡ, ಸ್ವಾಧೀನವನ್ನೇ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.


ವಕೀಲರಾದ ಸಿ.ಕೆ. ಮಹೇಂದ್ರ ಅವರು ರೈತರ ನಿಯೋಗದ ನೇತೃತ್ವವಹಿಸಿದ್ದರು. ಅಧಿಕಾರಿಗಳು ಯೋಜನೆ ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ಪತ್ರ ನೀಡಿದ್ದಾರೆ. ಹೀಗಾಗಿ ಭೂ ಸ್ವಾಧೀನ ರದ್ದುಗೊಳಿಸಬೇಕು. ಭಾರತ ಮಾಲಾ ಯೋಜನೆ ಕೂಡ ಬದಲಾಗಿರುವುದರಿಂದ ಜಾಗ ಬೇಕಿದ್ದರೆ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮನವರಿಕೆ ಮಾಡಿಕೊಟ್ಟರೆ ರೈತರಿಗೂ ಹೆಚ್ಚು ಪರಿಹಾರ ಸಿಗಲಿದೆ, ಇಲ್ಲದಿದ್ದರೆ ಅನ್ಯಾಯವಾಗಲದೆ ಎಂದು ಸಚಿವರಿಗೆ ತಿಳಿಸಿದರು.


ಸಭೆಯಲ್ಲಿ ರೈತ ಮುಖಂಡರಾದ ಉಮೇಶ್ ಕಂಬಾಳು, ಕರಿಮಣ್ಣೆಯ ದೇವಕುಮಾರ್, ಡಾಬಸಪೇಟೆಯ ಗಟ್ಟಿಬೈರಪ್ಪ, ಶಿವಗಂಗೆಯ ಸುರೇಶ್, ಬೆಳಗುಂಬ ನಾಗೇಂದ್ರಕುಮಾರ್, ಪ್ರಕಾಶ್ ರಂಗೇನಹಳ್ಳಿ, ಗುಡೇಮಾರನಹಳ್ಳಿ ಶಿವರುದ್ರಪ್ಪ, ಗುರುಪ್ರಸಾದ್ ಡಾಬಸಪೇಟೆ, ರಮೇಶ್ ಡಾಬಸಪೇಟೆ, ಮಾಗಡಿಯ ಬೋರಯ್ಯ, ಬೀರಗೊಂಡನಹಳ್ಳಿ ನಾರಾಯಣ ಗೌಡ, ಬಿಡದಿಯ ಶ್ರೀಧರ್, ರಾಮನಗರ ಹೇಮಂತಕುಮಾರ್ ಇತರರು ಇದ್ದರು.


ಕರ್ನಾಟಕದ ಮಾನ ಮಾರ್ಯಾದೆ ಕಳೆದಿದ್ದಾರೆ: ಸೋಮಣ್ಣ
ತುಮಕೂರು: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮುಂದೆ ಮುಖ ಇಟ್ಟು ಮಾತನಾಡದಂತೆ ಕರ್ನಾಟಕದ ಮಾರ್ಯದೆಯನ್ನು ಕಳೆಯಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಬೇಸರ ವ್ಯಕ್ತಪಡಿಸಿದರು.
ಸಿದ್ದಗಂಗಾ ಶ್ರೀಗಳೊಂದಿಗೆ ತುಂಬಾ ಬೇಸರಿಕೊಂಡೇ ಮಾತನಾಡಿದ  ಸಚಿವರು, ರಾಜ್ಯದ ಹೆದ್ದಾರಿಗಳ ಇಂಚಿಂಚು ಮಾಹಿತಿ ಸಚಿವರಾಧ ಗಡ್ಕರಿಯವರ ಬಳಿ ಇದೆ. ಯಾವ ರೈತರ ಜಾಗ ಎಷ್ಟಿದೆ, ಮಧ್ಯವರ್ತಿಗಳು ಎಷ್ಟು ಜಾಗ ಖರೀದಿಸಿದ್ದಾರೆ ಎಂಬ ಎಲ್ಲಾ ಮಾಹಿತಿ ಅವರಲ್ಲಿದೆ. ಇಲ್ಲಿ ಮಧ್ಯವರ್ತಿಗಳು ರೈತರ ಭೂಮಿಯನ್ನು ಕೆಲವೇ ಲಕ್ಷ ನೀಡಿ ಪತ್ರ ಹಾಕಿಸಿಕೊಂಡಿರುತ್ತಾರೆ. ಖರೀದಿ ಮಾಡಿರುತ್ತಾರೆ. ಹೀಗಾಗಿಯೇ ಹೆದ್ದಾರಿಯ ಬಗ್ಗೆ ಮಾತನಾಡುವುದೆಂದರೆ ದಳ್ಳಾಳಿಗಳ ಪರ ಮಾತನಾಡಿದಂತೆ ಆಗುತ್ತದೆ. ಇದರಿಂದಾಗಿ ಅಲ್ಲಿ ಕರ್ನಾಟಕದವರು  ಮುಖಎತ್ತದಂತೆ ಆಗಿದೆ. ಆದರೂ ಶ್ರೀಗಳು ಹೇಳಿರುವುದರಿಂದ ಯೋಜನೆಯ ಬಗ್ಗೆ ಮಾತನಾಡಲು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವೆ ಎಂದು ಹೇಳಿದರು.

ಹೈಕೋರ್ಟ್ ನ್ಯಾಯಾಧೀಶರ ಭೇಟಿ ಮಾಡಿದ ತುಮಕೂರು ವಕೀಲರ ಸಂಘದ ಪದಾಧಿಕಾರಿಗಳು

ಬೆಂಗಳೂರು; ತುಮಕೂರು ವಕೀಲರ ಸಂಘದ ಪದಾಧಿಕಾರಿಗಳು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ತುಮಕೂರು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಬಿ.ಎಂ. ಶ್ಯಾಮ್ ಪ್ರಸಾದ್ ಅವರನ್ನು  ಇಲ್ಲಿ ಭೇಟಿ ಮಾಡಿ ಚರ್ಚಿಸಿದರು.

ತುಮಕೂರು ಆಡಳಿತಾತ್ಮಕ ನ್ಯಾಯಮೂರ್ತಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್‌. ಕೆಂಪರಾಜಯ್ಯ ಉಪಾಧ್ಯಕ್ಷರಾದ ಎಂಎಲ್ ರವಿಗೌಡ ಪ್ರಧಾನ ಕಾರ್ಯದರ್ಶಿಯಾದ ಮಹೇಶ್ ಹೀರೆಹಳ್ಳಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಬೇಟಿ ಮಾಡಿದರು.

  ತುಮಕೂರು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಶುಭಾಶಯ ಅರ್ಪಿಸಲು ಭೇಟಿ ನೀಡಿದ್ದರು, ಹಾಗೂ ಇತ್ತೀಚಿಗೆ ತುಮಕೂರು ಜಿಲ್ಲೆಯ ನ್ಯಾಯಾಂಗ ಇಲಾಖೆ ಹೊಸದಾಗಿ ಜಾಗ ಪಡೆಯುವ ಸಲುವಾಗಿ ನಡೆಯುತ್ತಿರುವ ಹೋರಾಟದ ಬಗ್ಗೆಯೂ ಮಾಹಿತಿ ನೀಡಿದರು. ಈ ಬಗ್ಗೆ ನ್ಯಾಯಮೂರ್ತಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ತಿಳಿಸಿದರು .

ಸಂಘದ ಪ್ರತಿನಿಧಿಗಳು ನ್ಯಾಯಮೂರ್ತಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಉಪಾಧ್ಯಕ್ಷ ಎಂ.ಎಲ್‌. ರವಿಗೌಡ, ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ, ಜಂಟಿ ಕಾರ್ಯದರ್ಶಿ ಟಿ.ಎಂ. ಧನಂಜಯ, ಖಜಾಂಚಿ ಸಿಂಧು ಬಿ.ಎಂ. ಸೇರಿದಂತೆ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಗೋವಿಂದರಾಜು ಪಿ, ಡಿ.ಎ. ಜಗದೀಶ್, ಶ್ರೀನಿವಾಸಮೂರ್ತಿ ಕೆ.ವಿ., ಶ್ರೀನಿವಾಸಮೂರ್ತಿ ವಿ.ಕೆ., ಸುರೇಶ್ ಎಸ್., ಪದ್ಮಶ್ರೀ ಸಿ.ಆ‌ರ್., ಸೇವಾಪ್ರಿಯ ಜೆ.ಎಸ್. ಮತ್ತು ಇತರರು ಭಾಗವಹಿಸಿದ್ದರು.

ನ್ಯಾಯಾಲಯಕ್ಕೆ ಜಾಗ:  ಪ್ರತಿಭಟನೆಗೆ ವಕೀಲರ ನಿರ್ಧಾರ

ತುಮಕೂರು: ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅಮಲಾಪುರದಲ್ಲಿ 20 ಎಕರೆ ಜಾಗದ ಬದಲು 10 ಎಕರೆ ಜಾಗ ನೀಡಲು ಸರ್ಕಾರಕ್ಜೆ ಜಿಲ್ಲಾಧಿಕಾರಿ ಬರೆದಿರುವ ಪತ್ರಕ್ಕೆ ಮಂಗಳವಾರ ನಡೆದ ಸಭೆಯಲ್ಲಿ ವಕೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಗೆ ಜಿಲ್ಲಾಧಿಕಾರಿ ಗೈರು ಆಗಿದ್ದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾದೀಶರಾದ ಜಯಂತ ಕುಮಾರ್ ಅವರನ್ನು ಕೆರಳಿಸಿತು. ಪ್ರತಿ ಸಲ ಸಭೆ ಕರೆದಾಗಲೂ ಜಿಲ್ಲಾಧಿಕಾರಿ ಅವರ ಸಮಯವನ್ನು ನಿಗದಿಪಡಿಸಿಕೊಂಡೇ ಕರೆಯಲಾಗುತ್ತಿದೆ. ಅವರು ನ್ಯಾಯಾಂಗಕ್ಕೆ ಸುಳ್ಳು ಹೇಳುತ್ತಿದ್ದಾರೆ. ನ್ಯಾಯಾಂಗದ ಬಗ್ಗೆ ಇಷ್ಟೊಂದು ಅಸಡ್ಡೆ ಸರಿ ಅಲ್ಲ ಎಂದರು.

ಉಪ ಲೋಕಾಯುಕ್ತರ ನಿರ್ದೇಶನವಿದೆ. ಕನಿಷ್ಠ 20 ಎಕರೆ ಇಲ್ಲದಿದ್ದರೆ 18 ಎಕರೆಯಷ್ಟಾದರೂ ಭೂಮಿ ಬೇಕು. ಇಲ್ಲದಿದ್ದರೆ ಏನು ಪ್ರಯೋಜನವಾಗದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಂದಿದ್ದ ಹತ್ತು ಎಕರೆ ಜಾಗ ನೀಡಲು ಸರ್ಕಾರಕ್ಕೆ ಬರೆದಿದ್ದ ಪತ್ರವನ್ನು ಸ್ವೀಕರಿಸಲು ನಿರಾಕರಿಸಿದರು.

ಜಾಗ ನೀಡಿದರೆ, ಈಗಿರುವ ಕೋರ್ಟ್ ಜಾಗ, ಕಟ್ಟಡಗಳನ್ನು ಕಂದಾಯ ಇಲಾಖೆಗೆ ನೀಡಲಾಗುವುದು. ಇದರಿಂದ ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿನ ಸರ್ಕಾರಿ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬಹುದು. ನಗರದ ಅಭಿವೃದ್ಧಿ ದೃಷ್ಟಿಯಿಂದಲೂ ಇದು ಮುಖ್ಯವಾಗಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ ಮಾತನಾಡಿ, ಜಿಲ್ಲಾಧಿಕಾರಿ ಅವರಿಗೆ ಜಾಗ ನೀಡಲು ಏನು ಸಮಸ್ಯೆ ಎಂದರು

ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ ಮಾತನಾಡಿ, ಜಿಲ್ಲಾಧಿಕಾರಿ ಅವರು ನ್ಯಾಯಾಂಗದ ಜತೆ ಚೆಲ್ಲಾಟವಾಡುತ್ತಿದ್ದಾರೆ‌. ಎಂ ಎಸ್ ಎಂ ಇ ಗೆ ನೀಡಿದ್ದ ಹದಿನೈದು ಎಕರೆ ಜಾಗದಲ್ಲಿ ಹತ್ತು ಎಕರೆ ನೀಡಿ, ಐದು ಎಕರೆ ಆಗೇ ಉಳಿಸಿಕೊಳ್ಳಲು ಕಾರಣವೇನು. ಇದರ ಹಿಂದೆ ಏನು ಉದ್ದೇಶ ಅಡಗಿದೆ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಧೋರಣೆ ಬಗ್ಗೆ ಕೆಂಡಾಮಂಡಲವಾದ ಅವರು, ನಾಳೆಯಿಂದಲೇ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳ ಕೋರ್ಟ್ ಕಲಾಪ ಬಹಿಷ್ಕರಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸುತ್ತೇವೆ. ಕಾನೂನು ಸಂಘರ್ಷ ಎದುರಾದರೆ ಜಿಲ್ಲಾಧಿಕಾರಿಯೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷ ಎಂ.ಎಲ್.ರವಿಗೌಡ ಮಾತನಾಡಿ, ಜಿಲ್ಲಾಡಳಿತದ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಹತ್ತು ಎಕರೆ ಜಾಗ ಸ್ವೀಕರಿಸಬಾರದು. ಜಾಗ ಕೊಡದಿದ್ದರೆ ವಕೀಲರ ಶಕ್ತಿ ಏನೆಂಬುದನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಎಚ್ಚರಿಸಿದರು.

ಕೈಗಾರಿಕೆ, ಐಟಿ, ಬಿಟಿ ಅವರಿಗೆ ಓಡೋಡಿ ಬನ್ನಿ ಜಾಗ ಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ, ಬಡವರಿಗೆ ನ್ಯಾಯ ಕೊಡುವ ನ್ಯಾಯಾಂಗಕ್ಕೆ ಆದರೆ ಜಾಗ ಇಲ್ಲವೇ ಎಂದು ಪ್ರಶ್ನಿಸಿದರು.

ಹಿರಿಯ ವಕೀಲರಾದ ಎಂ.ಬಿ.ನವೀನ್ ಕುಮಾರ್ ಮಾತನಾಡಿ, ಜೆಲ್ಲಿ ಕ್ರಷರ್ ಗಳ ಒತ್ತಡಕ್ಕೆ ಜಿಲ್ಲಾಡಳಿತ ಮಣಿದಂತೆ ಕಾಣುತ್ತಿದೆ. ಜಿಲ್ಲೆಯಲ್ಲಿ ಒಳ್ಳೆಯ ಸತ್ ಸಂಪ್ರದಾಯವಿದೆ. ಜಿಲ್ಲಾಧಿಕಾರಿ ಅದನ್ನು ಹಾಳು ಮಾಡಬಾರದು. ಇದು, ನಮ್ಮ ಜಿಲ್ಲೆ. ನಮ್ಮ ಜಿಲ್ಲೆ ಅಭಿವೃದ್ಧಿ ನಮಗೆ ಬೇಕಾಗಿದೆ. ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಹಿರಿಯ ವಕೀಲರಾದ ಜಿ.ನಾಗರಾಜ್, ಶಿವಕುಮಾರ್, ಸಿ.ಕೆ.ಮಹೇಂದ್ರ ಅವರುಗಳು ಮಾತನಾಡಿ, ಜಿಲ್ಲಾಧಿಕಾರಿ ನಡೆ ಖಂಡಿಸಿದರು.

ಬುಧವಾರ ಸಂಜೆಯೊಳಗೆ ಜಿಲ್ಲಾಧಿಕಾರಿ ಅವರು ತಮ್ಮ ನಿರ್ಧಾರ ಬದಲಿಸಿ 20 ಎಕರೆ ಜಾಗ ನೀಡದಿದ್ದರೆ ಗುರುವಾರದಿಂದಲೇ ಪ್ರತಿಭಟನೆ ನಡೆಸುವುದಾಗಿ ಅಧ್ಯಕ್ಷ ಕೆಂಪರಾಜಯ್ಯ ಪ್ರಕಟಿಸಿದರು.

ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಸಿಂಧು, ಸೇವಪ್ರಿಯ, ಗೋವಿಂದರಾಜು, ವಕೀಲರಾದ ಮಧು, ಚಂದ್ರಶೇಖರ್ ಇತರರು ಇದ್ದರು.

ನ್ಯಾಯಾಲಯಕ್ಕೆ ಜಾಗ: ವಾರದ ಗಡವು

0



ತುಮಕೂರು: ನಗರದ ಹೊರವಲಯದ ಅಮಲಾಪುರದಲ್ಲಿ ನ್ಯಾಯಾಲಯಕ್ಕೆ ಭೂಮಿ ಮಂಜೂರು ಮಾಡಲು ಜಿಲ್ಲಾಡಳಿತಕ್ಕೆ ಇನ್ನೂ, ಒಂದು ವಾರದ ಗಡವು ನೀಡಲು ಇಲ್ಲಿ ನಡೆದ ಸಭೆಯಲ್ಲಿ ವಕೀಲರು ನಿರ್ಧರಿಸಿದರು.


ಮಂಗಳವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಕೀಲರು ಈ ನಿರ್ಧಾರ ಕೈಗೊಂಡರು.

‘ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸಭೆ ನಡೆಸಿ ಹೋದ ಬಳಿಕ ಜಾಗ ನೀಡುವ ಸಂಬಂಧ ಒಂದಿಷ್ಟು ಪ್ರಕ್ರಿಯೆಗಳು ಮುಗಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ಇನ್ನೂ ಸ್ವಲ್ಪದಿನ ಕಾಲಾವಕಾಶ ನೀಡೋಣ’ ಎಂದು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರವಿಗೌಡ ಸಭೆಗೆ ತಿಳಿಸಿದರು.


ನ್ಯಾಯಾಲಯ ಸಂಕೀರ್ಣಕ್ಕಾಗಿ ಕನಿಷ್ಠ 20 ಎಕರೆ ಜಾಗ ನೀಡುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ. ಆದರೆ ಈ ಸಂಬಂಧ ಜಿಲ್ಲಾಡಳಿತ ನ್ಯಾಯಾಲಯಕ್ಕೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಜಾಗದ ಸಂಬಂಧ ಹದಿನೈದು ದಿನ ಕಾಲಾವಕಾಶ ನೀಡುವಂತೆ ಈ ಹಿಂದೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕೋರಿದ್ದರು. ಕಾಲಾವಕಾಶ ಮುಗಿದಿದೆ. ಆದರೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ ಎಂದು ವಕೀಲರು ಅಸಮಾಧಾನ ವ್ಯಕ್ತಪಡಿಸಿದರು.


ಒಟ್ಟು 20 ಎಕರೆ ಜಾಗ ನೀಡಬೇಕು. ಇಲ್ಲದಿದ್ದರೆ ಭವಿಷ್ಯದ ದೃಷ್ಟಿಯಿಂದ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಷ್ಟವಾಗಬಹುದು. ಈಗಿರುವ ನ್ಯಾಯಾಲಯದಲ್ಲಿ ಕಲಾಪ ನಡೆಸುವುದೇ ಕಷ್ಟವಾಗಿದೆ. ಕಕ್ಷಿದಾರರು, ವಕೀಲರು, ನ್ಯಾಯಾಂಗ ಸಿಬ್ಬಂದಿ ಸರಿಯಾದ ಜಾಗ ಇಲ್ಲದೇ ಪರಿತಪಿಸುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಹೇಳಿದರು.


ಸಭೆಯಲ್ಲಿ ಹಿರಿಯ ವಕೀಲರಾದ ಮಂಜುನಾಥ್ ಮಾತನಾಡಿ, ಜಾಗಕ್ಕಾಗಿ ಪ್ರತಿಭಟನೆ ಮಾಡದೇ ನಮಗೆ ಬೇರೆ ಮಾರ್ಗ ಇಲ್ಲ ಎಂದರು. ವಕೀಲರಾದ ಶಿವಕುಮಾರ್, ನವೀನ್ ಕುಮಾರ್ ಎಂ.ಬಿ., ಸಿ.ಕೆ.ಮಹೇಂದ್ರ, ಓಬಣ್ಣ, ಬಿ.ಜಿ.ನಾಗರಾಜ್ ಅವರುಗಳ ಮಾತನಾಡಿ, ಜಿಲ್ಲಾಡಳಿತಕ್ಕೆ ಇನ್ನೊಂದು ವಾರ ಸಮಯ ನೀಡೋಣ. ಅಷ್ಟರಲ್ಲಿ ಜಾಗ ನೀಡದಿದ್ದರೆ ಪ್ರತಿಭಟನೆ ಮಾಡುವ ನಿರ್ಧಾರ ತೆಗೆದುಕೊಳ್ಳೋಣ’ ಎಂದು ಸಲಹೆ ನೀಡಿದರು.


ಇದೇ ತಿಂಗಳು 15 ರಂದು ಸಭೆ ವಕೀಲರ ಸಭೆ ಕರೆಯುವುದಾಗಿ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಜಯಂತ್ ಕುಮಾರ್ ಪ್ರಕಟಿಸಿದರು. ಸಂಘದ ಅಧ್ಯಕ್ಷರಾದ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಮಹೇಶ್ ಹಿರೇಹಳ್ಳಿ ಅನ್ಯ ಕಾರ್ಯ ನಿಮಿತ್ತ ಸಭೆಗೆ ಹಾಜರಾಗಲಿಲ್ಲ.  ಎಂ.ಬಿ, ಸಂಘದ ಸಹ ಕಾರ್ಯದರ್ಶಿ ಧನಂಜಯ್, ಪದಾಧಿಕಾರಿಗಳಾದ ಸಿಂಧೂ, ಗೋವಿಂದರಾಜು, ವಕೀಲರಾದ ನಿರಂಜನ್ ಇತರರು ಇದ್ದರು.


ಅಮಲಾಪುರದಲ್ಲಿ ಎಂಎಸ್ಎಂಇಗೆ ಗುರುತಿಸಲಾಗಿದ್ದ ಜಾಗದಲ್ಲಿ ಮೊದಲ ಕಂತಿನಲ್ಲಿ 10 ಎಕರೆ ಜಾಗ ನೀಡುವ ಸಂಬಂಧ ಜಿಲ್ಲಾಧಿಕಾರಿ ಅವರು ಎನ್.ಒ.ಸಿ. (ನಿರಪ್ರೇಕ್ಷಣಾ ಪ್ರಮಾಣ ಪತ್ರ) ನೀಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಅಲ್ಲದೇ ಜಾಗದ ಸರ್ವೆ  ನಡೆಸಿ ವರದಿ ನೀಡುವಂತೆ ಉಪ ವಿಭಾಗಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದರು. ಈ ನಡುವೆ, ರಾಜ್ಯ ಕಂದಾಯ ಆಯುಕ್ತರು ವಿಶೇಷ ತನಿಖಾ ತಂಡ ರಚಿಸಿದ್ದು, ಅಮಲಾಪುರದಲ್ಲಿರುವ ಸರ್ಕಾರಿ ಜಾಗ, ಅರಣ್ಯ ಇಲಾಖೆ ಜಾಗದ ಒತ್ತುವರಿ ಬಗ್ಗೆ ತನಿಖೆಗೆ ಆದೇಶಿಸಿರುವುದು ಕುತೂಹಲ ಮೂಡಿಸಿದೆ.

ತುಮಕೂರು ನ್ಯಾಯಾಲಯಕ್ಕೆ ಜಾಗ ಏಕೆ ಬೇಕು?

0

ಲೇಖಕ: ರವಿಗೌಡ, ಹಿರಿಯ ವಕೀಲರು, ಉಪಾಧ್ಯಕ್ಷರು, ಜಿಲ್ಲಾ ವಕೀಲರ ಸಂಘ

ತುಮಕೂರು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಜಾಗದ ವಿಚಾರವಾಗಿ ನಡೆಯುತ್ತಿರುವ ಈ ಒಂದು ಹೋರಾಟ ತಾರ್ಕಿಕ ಅಂತ್ಯವನ್ನು ಕಾಣಬೇಕಾಗಿದೆ

. ನಾನಾದರೂ ಹೇಳುವುದು ಇಷ್ಟೇ, ಆಧುನಿಕತೆ ಬೆಳೆದಂತೆ ಮನುಷ್ಯನು ಸಹ ಆಧುನಿಕತೆಯ ಕಡೆಗೆ ಸಾಗಬೇಕಾಗುತ್ತದೆ, ಪ್ರಸ್ತುತ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ 21 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ, ಇನ್ನು ಮೂರು ನಾಲ್ಕು ನ್ಯಾಯಾಲಯಗಳು ಇಷ್ಟೊತ್ತಿಗಾಗಲೇ ಕಾರ್ಯನಿರ್ವಹಿಸಬೇಕಿತ್ತು.

ಜಾಗದ ಅನಿವಾರ್ಯತೆಯಿಂದ ಇದು ಸಾಧ್ಯವಾಗಿಲ್ಲ, ಪ್ರತಿದಿನವೂ ಸಹ ಹೊಸ ಹೊಸ ಪ್ರಕರಣಗಳು ದಾಖಲಾಗುತ್ತಿರುತ್ತವೆ, ತುಮಕೂರು ನಗರ ಮಹಾನಗರ ಪಾಲಿಕೆಯಾಗಿ ಸ್ಮಾರ್ಟ್ ಸಿಟಿಯಾಗಿ ಮೇಲ್ದರ್ಜೆಗೇರಿದೆ. ಇಂತಹ ಸನ್ನಿವೇಶದಲ್ಲಿ ಪ್ರತಿ ವರ್ಷವೂ ಸಹ ನೂರಾರು ಜನ ಯುವ ವಕೀಲರುಗಳು ಸಂಘದಲ್ಲಿ ಸದಸ್ಯರಾಗಿ ನೋಂದಾಯಿಸಿಕೊಳ್ಳುತ್ತಿದ್ದಾರೆ,

ಪ್ರಸ್ತುತ ಈಗಿರುವ ನ್ಯಾಯಾಲಯ ಸಂಕೀರ್ಣದ ಜಾಗ ಯಾವುದಕ್ಕೂ ಕೂಡ ಸಾಕಾಗುವುದಿಲ್ಲ, ಎಷ್ಟು ಸಮಸ್ಯೆಗಳಿವೆ ಎಂದರೆ ಬರುವ ಯುವ ವಕೀಲರುಗಳಿಗೆ ಲಾಕರ್ ಗಳನ್ನು ಇಡಲು ಸಂಘದಲ್ಲಿ ಜಾಗವನ್ನು ಒದಗಿಸಿಕೊಡಲು ಆಗುತ್ತಿಲ್ಲ,

ದೂರದ ಊರುಗಳಿಂದ ಬರುವ ವಕೀಲರುಗಳು ಮಧ್ಯಾಹ್ನದ ಊಟವನ್ನು ಡಬ್ಬಿ ಗಳಲ್ಲಿ ತರುತ್ತಾರೆ, ಹಾಗೆ ತರುವ ಡಬ್ಬದ ಊಟಗಳನ್ನು ಪ್ರಶಾಂತವಾಗಿ ಕುಳಿತುಕೊಂಡು ತಿನ್ನಲು ಜಾಗವಿಲ್ಲ,

ಪ್ರತಿದಿನ ಸಾವಿರಾರು ಜನ ಕಕ್ಷಿದಾರರು ಅವರುಗಳ ವಾಹನಗಳು, ಜಿಲ್ಲಾಧಿಕಾರಿಗಳ ಕಚೇರಿಗೆ ಉಪ ನೋಂದಣಾಧಿಕಾರಿಗಳ ಕಚೇರಿ, ಕೃಷಿ ಇಲಾಖೆ ಬರುವಂತ ನಾಗರಿಕರುಗಳು ತಮ್ಮ ವಾಹನಗಳನ್ನು ವಕೀಲರಗಳಿಗೆ ಮೀಸಲಾತಿರುವ ಜಾಗದಲ್ಲಿ ನಿಲ್ಲಿಸಿ ಹೋಗುತ್ತಾರೆ, ಹಾಗೂ ಅತ್ಯಂತ ಮುಖ್ಯವಾಗಿ ವಕೀಲರು ಅವರುಗಳ ಕಕ್ಷಿದಾರರುಗಳ ತಲೆತಲಾಂತರದಿಂದ ಬಗೆಹರಿಸಿಕೊಳ್ಳಲಾಗದ ಸಮಸ್ಯೆಗಳನ್ನ ತಮ್ಮ ಹೆಗಲುಗಳ ಮೇಲೆ ಹಾಕಿಕೊಂಡು ಕೇಸ್ ಗಳನ್ನು ನಡೆಸಬೇಕಾಗಿರುತ್ತದೆ.

ಇಂಥಹ ಸನ್ನಿವೇಶದಲ್ಲಿ ವಕೀಲರುಗಳಿಗೆ (Peace of Mind ) ಪ್ರಶಾಂತವಾದ ಒಂದು ಪರಿಸರವನ್ನು ನಿರ್ಮಾಣ ಮಾಡಬೇಕಿದೆ, ಇಲ್ಲದಿದ್ದರೆ ಕೆಲವೊಮ್ಮೆ ಮಾನಸಿಕ ಖಿನ್ನತೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ನಾವು ಕೂಡ ವೈಜ್ಞಾನಿಕವಾಗಿ ಆಲೋಚನೆಯನ್ನು ಮಾಡಬೇಕಾಗುತ್ತದೆ.

ಈಗ ಬಾಕಿ ಇರುವ ಒಟ್ಟು ಪ್ರಕರಣಗಳು 38 ರಿಂದ 40,000, ಇನ್ನು ಮುಂದಿನ ಐದಾರು ವರ್ಷಗಳಲ್ಲಿ ಇದರ ಎರಡರಷ್ಟು ಪ್ರಕರಣಗಳು ಜಾಸ್ತಿಯಾಗುತ್ತವೆ ಹಾಗೂ ಇಂದಿನ ಎರಡರಷ್ಟು ವಕೀಲರುಗಳು ಜಾಸ್ತಿ ಆಗುತ್ತಾರೆ. ಹಾಗಾಗಿ ಇವತ್ತಿನ ಪರಿಸ್ಥಿತಿಯಲ್ಲಿ ಈಗಿರುವ ವಕೀಲರುಗಳಿಗೆ ಜಾಗವಿಲ್ಲ. ಅವರ ವಾಹನಗಳನ್ನು ನಿಲ್ಲಿಸಲು ಜಾಗವಿಲ್ಲ.

ಹೇಮಾವತಿ, ಭಾರತೀಯ ರೈಲ್ವೆ, ಭಾರತೀಯ ಹೆದ್ದಾರಿಗಳ, ಎತ್ತಿನಹೊಳೆ KIADB ಯಿಂದ ಕೈಗಾರಿಕೆಗಳಿಗೆ ಭೂ ಸ್ವಾಧೀನ ಆಗುತ್ತಿರುವ ಪ್ರತಿದಿನವೂ ಸಾವಿರಾರು ಹೊಸ ಕೇಸ್ ಗಳು ದಾಖಲಾಗುತ್ತಿವೆ., ಹಾಗಾಗಿ ಸರ್ಕಾರ ಮೀನಮೇಮೇಷ ಎಣಿಸದೆ ಅತ್ಯಂತ ಜರೂರಾಗಿ ಜಿಲ್ಲಾ ವಕೀಲರ ಸಂಘ ಪ್ರಸ್ತಾಪಿಸಿರುವಂತೆ ಅಮಲಾಪುರದ ಜಾಗವನ್ನು ಈ ಕೂಡಲೇ ಕಾನೂನು ಇಲಾಖೆಗೆ ಹಸ್ತಾಂತರಿಸಬೇಕೆಂದು ಕೇಳಿಕೊಳ್ಳುತ್ತೇವೆ.

ತುಮಕೂರು ಜಿಲ್ಲೆಯಲ್ಲಿ ಮಾದಿಗರಿಗೆ ಚಾರಿತ್ರಿಕ ಅನ್ಯಾಯ, ಸಮುದಾಯದ ಋಣ ತೀರಿಸಲು ಕಾಂಗ್ರೆಸ್ ಗೆ ಸಕಾಲ : ಹೆತ್ತೇನಹಳ್ಳಿ ಮಂಜುನಾಥ್

0

ತುಮಕೂರು ಜಿಲ್ಲೆಯಲ್ಲಿ 1989 ರಿಂದ ಮಾದಿಗ ಸಮುದಾಯಕ್ಕೆ ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಚುನಾವಣೆಗಳಲ್ಲಿ ಟಿಕೆಟ್ ನೀಡದೆ
ಎಡಗೈ ಸಮುದಾಯಕ್ಕೆ ನಿರಂತರವಾಗಿ ಅನ್ಯಾಯವಾಗಿದೆ.
ಹಾಗಾಗಿ ಈ ಬಾರಿ ವಿಧಾನ ಪರಿಷತ್ ಸ್ಥಾನಕ್ಕೆ ತುಮಕೂರು ಜಿಲ್ಲೆಯ ಮಾದಿಗ ಸಮುದಾಯದವರನ್ನು ಆಯ್ಕೆ ಮಾಡುವ ಮೂಲಕ ಈ ಅನ್ಯಾಯ ಸರಿಪಡಿಸಬೇಕು. ಇದಕ್ಕೆ ಗೃಹ ಸಚಿವರಾದ ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಸಹೋದರ ನಿಷ್ಠೆ ತೋರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹೆತ್ತೇನಹಳ್ಳಿ ಮಂಜುನಾಥ್ ಆಗ್ರಹಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೆತ್ರಗಳಿದ್ದು 2 ಎಸ್ ಸಿ ಮೀಸಲು ಕ್ಷೇತ್ರಗಳಿವೆ. ಈ ಎರಡು ಮೀಸಲು ಕ್ಷೇತ್ರದಲ್ಲಿ ನ್ಯಾಯಯುತವಾಗಿ ಕಾಂಗ್ರೆಸ್ ಪಕ್ಷ ಜಿಲ್ಲೆಯ ಬಹುಸಂಖ್ಯಾತ 6.5 ಲಕ್ಷವಿರುವ ಮಾದಿಗ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿತ್ತು ಆದರೆ ಟಿಕೆಟ್ ನೀಡದಿದ್ದರೂ ಮಾದಿಗ ಸಮುದಾಯ ಸಹೋದರ ನಿಷ್ಠೆ ಹಾಗೂ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಗೃಹ ಸಚಿವ ಪರಮೆಶ್ವರ್ ಮತ್ತು ಸಚಿವ ರಾಜಣ್ಣ ಅವರನ್ನು ಹೆಗಲ ಮೇಲೆ ಒತ್ತು ಗೆಲ್ಲಿಸಿಕೊಂಡು ಬಂದಿದ್ದಾರೆ. ಆದರೆ 1989 ರಿಂದ ಕಾಂಗ್ರೆಸ್ ಪಕ್ಷದಿಂದ ಮಾದಿಗ ಸಮುದಾಯಕ್ಕೆ ಅಧಿಕಾರ ದೊರೆತಿಲ್ಲ. ತುಮಕೂರು ಜಿಲ್ಲೆಯಲ್ಲಿ ತುಮುಲ್ ಅಧ್ಯಕ್ಷ ಸ್ಥಾನ ಸೇರಿದಂತೆ
ತುಮಕೂರು ವಿವಿಯ ಸಿಂಡಿಕೇಟ್ ಸದಸ್ಯ ಸ್ಥಾನವನ್ನು ಮಾದಿಗ ಸಮುದಾಯಕ್ಕೆ ನೀಡಿಲ್ಲ,
ಒಂದು ಅಭಿವೃದ್ಧಿ ನಿಗಮಕ್ಕೂ ನೇಮಕಮಾಡಿಲ್ಲ.
ಕೋಮುವಾದಿ ಶಕ್ತಿಗಳನ್ನು ಮಣಿಸುವ ಅನಿವಾರ್ಯತೆಯಿಂದ ಮಾದಿಗರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾ ಬಂದಿದ್ದಾರೆ. ಹೀಗಾಗಿ ಈ ಬಾರಿಯಾದರೂ ಎಂಎಲ್ಸಿ ಹಾಗೂ ಟೂಡ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ಅಧಿಕಾರದ ಅವಕಾಶಗಳನ್ನು ಮಾದಿಗ ಸಮುದಾಯಕ್ಕೆ ಕೊಡುವ ಮೂಲಕ ಸಾಮಾಜಿಕ ನ್ಯಾಯದ ಬದ್ದತೆ ತೋರಬೇಕು ಎಂದು ಗುರುವಾರ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಸಿದರು.

ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಮಾದಿಗರನ್ನು ಕಡೆಗಣಿಸಲಾಗಿದೆ. ಮಾದಿಗ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ತನು, ಮನ, ಧನವನ್ನು ಅರ್ಪಿಸಿದ ಮಾದಿಗ ಸಮುದಯವನ್ನು ಅಧಿಕಾರ ಸ್ಥಾನಮಾನದ ವಿಚಾರ ಬಂದಾಗ ಪರಿಗಣಿಸಬೇಕು ಎಂದು ಹೇಳಿದರು.

ಮಾದಿಗ ಸಮುದಾಯವನ್ನು ಅವಕಾಶಗಳಿಂದ ವಂಚಿಸಿ ಅಧಿಕಾರದಿಂದ ದೂರ ಇಟ್ಟಿರುವುದರಿಂದ ಎಡಗೈ ಸಮುದಾಯದ ನಾಯಕತ್ವವೇ ಜಿಲ್ಲೆಯಲ್ಲಿ ಕ್ಷಿಣಿಸುತ್ತಿದೆ. ಹೀಗೆ ಅಲಕ್ಷಿಸಿದರೆ ಮಾದಿಗ ಸಮುದಾಯ ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರು ಇದುವರೆಗೆ ತುಮಕೂರು ಜಿಲ್ಲೆಯಲ್ಲಿ ಮಾದಿಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಈ ಬಾರಿ ಪರಿಷತ್ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ನ ಅನುಕೂಲ ಸಿಂಧು ರಾಜಕಾರಣ ಖಾತ್ರಿಯಾಗಲಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಮಾದಿಗ ಸಮುದಾಯ ಬಹಿರಂಗವಾಗಿಯೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಇದರ ಪರಿಣಾಮ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್
ಅಭೂತಪೂರ್ವ ಗೆಲುವು ಸಾಧಿಸಿತು. ಆದ್ದರಿಂದ ಈ ಬಾರಿ ಮಾದಿಗ ಸಮುದಾಯದ ಋಣ ತೀರಿಸಲು ಕಾಂಗ್ರೆಸ್ ಗೆ ಇದು ಸಕಾಲ ಎಂದು ಕಾಂಗ್ರೆಸ್ ಮುಖಂಡ ಹೆತ್ತೇನಹಳ್ಳಿ ಮಂಜುನಾಥ್ ಸಲಹೆ ನೀಡಿದರು..

ತುಮಕೂರು ನ್ಯಾಯಾಲಯಕ್ಕೆ ಜಾಗ ಏಕೆ ಬೇಕು?


ಲೇಖನ:    ಡಾ.ಎಸ್.ರಮೇಶ್, LLM, Phd

ಹಿರಿಯ ನ್ಯಾಯವಾದಿಗಳು


ಎಸ್.ರಮೇಶ್

ತುಮಕೂರು ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ಹೊಸದಾಗಿ ಜಾಗ ನೀಡುವ ವಿಷಯ ಈಗ ಜಿಲ್ಲಾಧಿಕಾರಿಯವರ ಮುಂದೆ ಇದೆ. ನಗರಕ್ಕೆ ಅಂಟಿಕೊಂಡಿರುವ ಅಮಾಲಪುರದಲ್ಲಿರುವ ನೂರಾರು ಎಕರೆ ಸರ್ಕಾರಿ ಜಾಗದಲ್ಲಿ 20 ಎಕರೆ ಜಾಗ ನೀಡುವಂತೆ ತುಮಕೂರು ವಕೀಲರ ಸಂಘ, ಕರ್ನಾಟಕದ ಲೋಕಾಯುಕ್ತದ ಉಪ ಲೋಕಾಯುಕ್ತರು ತುಮಕೂರು ಜಿಲ್ಲಾಧಿಕಾರಿ ಅವರ ಮುಂದೆ ಬೇಡಿಕೆ ಮಂಡಿಸಿದ್ದಾರೆ.

ಇನ್ನೂ, ನ್ಯಾಯಾಂಗದ ಆಸೆಯೂ ಇದೇ ಆಗಿದೆ. ಆದರೆ ಈವರೆಗೂ ಜಿಲ್ಲಾಧಿಕಾರಿಯವರು ನಿರ್ಧಾರ ಪ್ರಕಟಿಸಿಲ್ಲ ಎಂಬ ಮಾಹಿತಿ ಇದೆ.

ನಿಜಕ್ಕೂ, ನ್ಯಾಯಾಲಯಕ್ಕೆ ಜಾಗ ಏಕೆ ಬೇಕು ಎಂಬುದರತ್ತ ನಾವೀಗ ನೋಣೋಣ. ತುಮಕೂರು ನಗರದ ಜನಸಂಖ್ಯೆ ಬೆಳೆದಂತೆ, ನ್ಯಾಯಾಂಗದ ಆಡಳಿತದಲ್ಲಿ ಆಗಾಧ ಬದಲಾವಣೆಗಳಾಗಿವೆ. ಈಗಾಗಲೇ ಇದನ್ನು ಕಾಣಬಹುದಾಗಿದೆ. ಮುಂದೆ ಇದಕ್ಕೆ ತಕ್ಕಂತೆ ನ್ಯಾಯಾಲಯವೂ ಸನ್ನದ್ಧವಾಗಬೇಕಾಗಿದೆ. ‘ನ್ಯಾಯ ವ್ಯವಸ್ಥೆ’ಯ ಅಸ್ಥೆಯೇ ಆಡಳಿತವನ್ನು ಅಳೆಯುವ ಮೇರುಗೋಲಾಗಿದೆ.


ತುಮಕೂರು ನಗರವನ್ನೇ ನೋಡುವುದಾದರೆ, ತುಮಕೂರು ನಗರಸಭೆಯಾಗಿತ್ತು. ನಂತರ ಮಹಾನಗರ ಪಾಲಿಕೆಯಾಗಿ 2016 ರಲ್ಲಿ ಸ್ಮಾರ್ಟ್‌ ಸಿಟಿಯಾಗಿಯೂ ರೂಪಾಂತರಗೊಂಡಿತು. ಇದಕ್ಕೆ ಅನುಗುಣವಾಗಿ ತುಮಕೂರು ಜಿಲ್ಲಾ ಕೇಂದ್ರದ ನ್ಯಾಯಾಲಯಗಳ ಸಂಖ್ಯೆಗಳಲ್ಲಿಯೂ ಬದಲಾವಣೆಯಾಗಿ 2010 ರಲ್ಲಿ ಇದ್ದ ಒಟ್ಟು 9 ನ್ಯಾಯಾಲಯಗಳಿಂದ ಈಗ 21 ನ್ಯಾಯಾಲಯಗಳಿಗೆ ವಿಸ್ತರಣೆಗೊಂಡಿದೆ. ಇನ್ನೂ ಮೂರು ನ್ಯಾಯಾಲಯಗಳು, ಜಾಗವಿಲ್ಲದ ಕಾರಣ ಆರಂಭಗೊಂಡಿಲ್ಲ.

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಹಾಲಿ 38,205 ಕೇಸುಗಳು ಎಲ್ಲಾ ಪ್ರಕಾರಗಳಿಂದ ಬಾಕಿ ಇವೆ. ಇವುಗಳಲ್ಲಿ 20496 ಸಿವಿಲ್ ಪ್ರಕರಣಗಳು,17709 ಕ್ರಿಮಿನಲ್ ಪ್ರಕರಣಗಳು ಸದ್ಯ ವಿಚಾರಣೆಗೆ ಬಾಕಿ ಉಳಿದಿವೆ. ಅದರಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ 6371 ಸಿವಿಲ್ ಪ್ರಕರಣಗಳು, 2315 ಸೆಷನ್ಸ್ ಪ್ರಕರಣಗಳು, ಹಿರಿಯ ಸಿವಿಲ್ ನ್ಯಾಯಾಲಯಗಳಲ್ಲಿ 7462 ಸಿವಿಲ್ ಪ್ರಕರಣಗಳು, 1212 ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಕಿರಿಯ ಸಿವಿಲ್ ನ್ಯಾಯಾಲಯಗಳಲ್ಲಿ 6603 ಸಿವಿಲ್ ಪ್ರಕರಣಗಳು, 14182 ಕ್ರಿಮಿನಲ್ ಪ್ರಕರಣಗಳು ಹಾಗೂ ಲೇಬರ್ ಕೋರ್ಟ್ ನಲ್ಲಿ 136 ಲೇಬರ್ ಪ್ರಕರಣಗಳು ಬಾಕಿ ಇವೆ. ಅಲ್ಲದೇ ಪ್ರತಿ ತಿಂಗಳು 1400-1500 ಹೊಸ ಪ್ರಕರಣಗಳು ದಾಖಲಾಗುತ್ತಿವೆ.


ಈ ಒಟ್ಟು ಪ್ರಕರಣಗಳಿಗೆ ಹೋಲಿಸಿಕೊಂಡರೆ, ನ್ಯಾಯಾಲಯಗಳ ಸಂಖ್ಯೆ ಕಡಿಮೆ ಇರುವುದರಿಂದ ಈಗಿರುವ ನ್ಯಾಯಾಲಯಗಳ ಮೇಲೆ, ನ್ಯಾಯಾಧೀಶರ ಮೇಲೆ ಒತ್ತಡ ಹೆಚ್ಚಿ, ನ್ಯಾಯ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸಲು ಕಷ್ಟವಾಗುತ್ತದೆ. ಈ ದೃಷ್ಟಿಕೋನದಿಂದ ಹಾಲಿ ಇರುವ ನ್ಯಾಯಾಲಯಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ.

ಇ- ವ್ಯಾಜ್ಯ ವ್ಯವಸ್ಥೆ ಬಲಗೊಳ್ಳುತ್ತಿರುವ ಸನ್ನಿವೇಷದಲ್ಲಿ ನ್ಯಾಯಾಲಯವು ಇ- ವ್ಯಾಜ್ಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಿದ್ದಲ್ಲಿ ಪ್ರತ್ಯೇಕವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲು, ಪೈಲಿಂಗ್ ಕೌಂಟರ್ ಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸಬೇಕಾಗುತ್ತದೆ. ಇದಕ್ಕಾಗಿ ವಿಶಾಲ ಜಾಗದ ಅಗತ್ಯವಿರುತ್ತದೆ.

ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಪ್ರತ್ಯೇಕ ಫೈಲಿಂಗ್ ಕೌಂಟರ್ ಇರುವುದನ್ನು ಗಮನಿಸಬಹುದು. ತುಮಕೂರು ಬೆಳೆಯುತ್ತಿದ್ದರೂ ತುಮಕೂರು ನ್ಯಾಯಾಲಯದ ವ್ಯವಸ್ಥೆ ಮಾತ್ರ ಕಿಷ್ಕಿಂಧೆಯಂತೆಯೇ ಇದೆ. ತುಮಕೂರು ನಗರದ ಬೆಳವಣಿಗೆಗೆ ಪೂರಕವಾಗಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ನ್ಯಾಯಾಲಯ ಸಂಕೀರ್ಣದ ಅವಶ್ಯಕತೆ ಇದೆ,

ಈಗಿರುವ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಿ ಈಗಾಗಲೇ ರಾಜ್ಯ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಿದೆ. ತುಮಕೂರು ನಗರ ವ್ಯಾಪಿಯ ಸುತ್ತಳತೆ 12 ಕಿಲೋ ಮೀಟರ್ ವ್ಯಾಪ್ತಿಗೆ ಹಿಗ್ಗಿಸಲಾಗಿದೆ. ಈಗ ವಕೀಲರ ಸಂಘ ಕೇಳುತ್ತಿರುವ ಅಮಲಾಪುರದ ವಿಜ್ಞಾನಗುಡ್ಡ ಪ್ರದೇಶ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಲಿದೆ. ಇದು ನ್ಯಾಯಾಂಗದ ದೃಷ್ಟಿಯಿಂದ ಮಹತ್ವದ್ದಾಗಿದೆ.

ಇನ್ನು, ತುಮಕೂರು ನ್ಯಾಯಾಲಯದಲ್ಲಿ  ದಿನ ಪ್ರತಿ ನ್ಯಾಯಾಲಯವೊಂದರಲ್ಲಿ ಕನಿಷ್ಠ 100-150 ಪ್ರಕರಣಗಳನ್ನು ನಿರ್ವಹಿಸಲಾಗುತ್ತಿದೆ. ಒಟ್ಟು 21 ನ್ಯಾಯಾಲಯಗಳಿಂದ ಪ್ರತಿದಿನ ಕನಿಷ್ಠ 2300 ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಗಳಲ್ಲಿ ಭಾಗವಹಿಸಲು ಪ್ರತಿ ದಿನ ನ್ಯಾಯಾಲಯಕ್ಕೆ ಕಕ್ಷಿದಾರರು, ಅವರ ಸಹಾಯಕರು, ಸಾಕ್ಷಿದಾರರು, ವಕೀಲರು ಸೇರಿದರೆ 6000 ಕ್ಕೂ ಹೆಚ್ಚು ಜನರು ಒಂದು ಹೋಗುತ್ತಾರೆ. ಇವರಲ್ಲದೇ ನ್ಯಾಯಾಲಯದ ಸಿಬ್ಬಂದಿಯೂ ಇರುತ್ತಾರೆ. ಇದು – ನ್ಯಾಯಾಲಯಕ್ಕೆ ಪ್ರತಿ ದಿನ ಎಷ್ಟು ಕಾರುಗಳು, ದ್ವಿಚಕ್ರವಾಹನಗಳು, ಪೊಲೀಸ್ ವಾಹನಗಳು ಬರಬಹುದು ಎಂಬುದರ ಊಹೆಯನ್ನು ನೀವುಗಳೇ ಮಾಡಿಕೊಳ್ಳಬಹುದು.

ಇನ್ನೂ ಮುಂದೆ, ಮುಂದೆ ವಾಹನಗಳ ಸಂಖ್ಯೆ ಇನ್ನೂ ಹೆಚ್ಚುತ್ತವೆ. ಇದು ನ್ಯಾಯಾಲಯದ ಕಾರ್ಯಕಲಾಪಗಳಿಗೆ, ಸುಗಮ ಸಂಚಾರಕ್ಕೆ ಈಗಾಗಲೇ ಸಾಕಷ್ಟು ತೊಡಕನ್ನು ಉಂಟು ಮಾಡುತ್ತಿದ್ದು, ನ್ಯಾಯಾಲಯದ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ವಕೀಲರಿಗೂ ನ್ಯಾಯದಾನ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅಡ್ಡಿಯುಂಟಾಗುತ್ತಿದೆ. ಈ ದೃಷ್ಟಿಯಿಂದ ವಿಶಾಲ ಜಾಗದ ಅಗತ್ಯವಿದೆ.

ಇನ್ನೂ, ವಸಂತನರಾಸಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿ, ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ತುಮಕೂರು ನ್ಯಾಯಾಲಯದ ಮೇಲೆ ನೇರ ಪರಿಣಾಮ ಬೀರಲಿವೆ. ಹೆಚ್ಚು ಹೆಚ್ಚು ಕ್ರಿಮಿನಲ್, ವಾಹನ ಅಫಘಾತ ಪ್ರಕರಣಗಳು. ಕೌಟುಂಬಿಕ ವಿವಾಹ ಪ್ರಕರಣಗಳು ಮೇರೆ ಮೀರಿ ಬೆಳೆಯಲಿವೆ. ಬಹುಭಾಷಿಕ, ಬಹುರಾಜ್ಯಗಳ ಜನರ ಪ್ರಕರಣಗಳ ನಿರ್ವಹಣೆಗೆ ನ್ಯಾಯಾಲಯ ಈಗಿನಿಂದಲೇ ಸನ್ನದ್ಧವಾಗಬೇಕಾಗಿದೆ. ತಿಂಗಳಿಗೆ ಏಳೆಂಟು ಸಾವಿರ ಪ್ರಕರಣಗಳು ದಾಖಲಾಗುವ ಕಾಲ ಹೆಚ್ಚೇನು ದೂರವಿಲ್ಲ ಎಂಬುದನ್ನು ನಾವುಗಳು ಈಗಿನಿಂದಲೇ ಗಮನಿಸಬೇಕಾಗಿದೆ.


ಈಗಿನ ನ್ಯಾಯಾಲಯದ ಕೊಠಡಿಗಳು ಹೇಗಿವೆ ಎಂದರೆ ವಕೀಲರು ಸಹ ಗಂಟೆಗಟ್ಟಲೆ ನಿಂತುಕೊಂಡೇ ಕಲಾಪದಲ್ಲಿ ಪಾಲ್ಗೊಳ್ಳಬೇಕಾದ ಸ್ಥಿತಿ ಇದೆ. ಕಕ್ಷಿದಾರರು ತಮ್ಮ ಪ್ರಕರಣಗಳನ್ನು ದಿನಗಟ್ಟಲೇ ನಿಂತುಕೊಂಡೇ ಕಾಯಬೇಕಾಗಿದೆ. ಈ ಪರಿಸ್ಥಿತಿಯನ್ನು ಗಮನಿಸಿದರೇ ಈಗಿರುವ ಇಡೀ ನ್ಯಾಯಾಲಯದ ಕಟ್ಟಡವೇ ಅಪ್ರಸ್ತುತವಾಗಿದೆ ಎಂದೇ ಹೇಳಬೇಕಾಗುತ್ತದೆ. ಇನ್ನೂ ಮುಂದಿನ ದಿನಗಳಲ್ಲಿ ಆಗುವ ದುಃಪರಿಸ್ಥಿತಿಯನ್ನು ಊಹಿಸಲೂ ಅಸಾಧ್ಯವಾಗಿದೆ.

ವಿಜ್ಜಾನಗುಡ್ಡವೇ ಏಕೆ ಬೇಕು?


ವಿಜ್ಞಾನಗುಡ್ಡದಲ್ಲೇ ಏಕೆ ಜಾಗ ಬೇಕು ಎಂದರೆ, ನಗರದೊಳಗೆ ಈ ಜಾಗ ಬಿಟ್ಟರೆ ಬೇರ ಜಾಗ ಇಲ್ಲವಾಗಿದೆ.
ಈಗಿನ ನ್ಯಾಯಲಯದಲ್ಲಿ ವಕೀಲರಿಗೆ ಛೇಂಬರಗಳೇ ಇಲ್ಲ. ಹೊಸ ಜಾಗದಲ್ಲಿ ನೂರಾರು ಛೇಂಬರ್ ಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಇದರಿಂದ ವಕೀಲರು ತಮ್ಮ ತಮ್ಮ ಕಕ್ಷಿದಾರರೊಂದಿಗೆ ವ್ಯವಹರಿಸಲು ಸಾಧ್ಯವಾಗಲಿದೆ. ಕೇಸುಗಳಿಗೆ ತಯಾರಾಗಲು ಸಹ ನೆರವಾಗಲಿದೆ. ಇದು ನ್ಯಾಯ ವ್ಯವಸ್ಥೆಯ ಮೇಲೂ ಪರಿಣಾಮ ಬೀರಲಿದೆ.


ವಿಜ್ಞಾನಗುಡ್ಡ ಪ್ರದೇಶ ನಗರದ ಹೆದ್ದಾರಿಗೆ ಅಂಟಿಕೊಂಡಿರುವುದರಿಂದ ಅಲ್ಲಿಗೆ ಸಿಟಿ ಬಸ್ ವ್ಯವಸ್ಥೆ ಇರುವುದರಿಂದ ಬಸ್ಸುಗಳಲ್ಲಿ ಓಡಾಡುವ ಕಕ್ಷಿದಾರರಿಗೆ, ವಕೀಲರುಗಳಿಗೆ ಕೋರ್ಟ್ ಗೆ ಓಡಾಡಲು ಕಷ್ಟವಾಗದು. ಎಷ್ಟೇ ಸಾವಿರ ಕಾರುಗಳು, ದ್ವಿಚಕ್ರ ವಾಹನಗಳು ಬಂದರೂ ತೊಂದರೆಯಾಗದು.


ಅಲ್ಲಿ ನೂರಾರು ಎಕರೆ ಸರ್ಕಾರಿ ಜಾಗ ಇರುವುದರಿಂದ ಅಲ್ಲಿಯೇ ನ್ಯಾಯಾಧೀಶರ ವಸತಿ ಸಮುಚ್ಛಯಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರ ವಸತಿ ಸಮುಚ್ಛಯಗಳ ನಿರ್ಮಾಣಕ್ಕೂ ಮುಂದಾಗಬಹುದಾಗಿದೆ.


ವಿಜ್ಞಾನಗುಡ್ಡದ ಮೇಲೆ ವಿಶಾಲವಾಗಿರುವ 5 ಎಕರೆ ಜಾಗದಲ್ಲಿ “ನ್ಯಾಯಾಂಗ ಮ್ಯೂಸಿಯಂ’ ನಿರ್ಮಾಣ ಮಾಡುವ ಮೂಲಕ ಇಡೀ ಜಗತ್ತಿನಲ್ಲಿ, ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬೆಳೆದುಬಂದ ಬಗೆಯನ್ನು ಚಿತ್ರಿಸಿದರೆ, (ಗೋವಾದ ಬಿಗ್ ಫೂಟ್ ನಂತೆ) ನ್ಯಾಯಾಂಗ ಪ್ರವಾಸೋದ್ಯಮದ ಹೊಸ ಪರಿಕಲ್ಪನೆಯನ್ನು ಜಗತ್ತಿಗೆ ನಾವು ಕೊಟ್ಟಂತಾಗುತ್ತದೆ. ಇಡೀ ದೇಶದ ಕಾನೂನು ವಿದ್ಯಾರ್ಥಿಗಳು, ನ್ಯಾಯಾಧೀಶರು, ವಕೀಲರು, ಜನ ಸಾಮಾನ್ಯರು ಇಲ್ಲಿಗೆ ಭೇಟಿ ನೀಡಿ ನ್ಯಾಯ ವ್ಯವಸ್ಥೆಯ ಮಜಲುಗಳನ್ನು ಅರಿತುಕೊಳ್ಳಲು ಈ  ಜ್ಯೂಡಿಶಿಯಲ್ ಟೂರಿಸಂ ನೆರವಾಗಲಿದೆ. ಇದು ತುಮಕೂರು ನಗರದ ಪ್ರವಾಸೋದ್ಯಮ ಆದಾಯವನ್ನು ಹೆಚ್ಚಿಸುವುದಲ್ಲದೇ, ತುಮಕೂರಿನ ಖ್ಯಾತಿಯನ್ನು ದೇಶವ್ಯಾಪಿ, ವಿಶ್ವವ್ಯಾಪಿ ಹರಡಲಿದೆ. ಈ ಹಿನ್ನೆಲೆಯಲ್ಲಿ, ಈ ದೃಷ್ಟಿಕೋನದಲ್ಲಿ ಜಿಲ್ಲಾಡಳಿತ, ಇಲ್ಲಿನ ಉಸ್ತುವಾರಿ ಸಚಿವರು, ಸಚಿವರುಗಳು, ಶಾಸಕರುಗಳು, ಸಂಘಸಂಸ್ಥೆಗಳು ನ್ಯಾಯಾಂಗದ ಬೇಡಿಕೆಯನ್ನು ಸಹೃದತೆಯಿಂದ ನೋಡಬೇಕಾಗಿದೆ ಎನ್ನುವುದು ನನ್ನ ಅನಿಸಿಕೆಯಾಗಿದೆ.

15 ದಿನದಲ್ಲಿ ನ್ಯಾಯಾಲಯಕ್ಕೆ ಜಾಗ ನಿರ್ಧಾರ: ಜಿಲ್ಲಾಧಿಕಾರಿ

ತುಮಕೂರು: ಅಮಲಾಪುರದಲ್ಲಿ ಎಂಎಸ್ಇಎಂ ಗೆ ನೀಡಿದ್ದ ಜಾಗವನ್ನು ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ನೀಡುವ ಬಗ್ಗೆ ಇನ್ನೂ ಹದಿನೈದು ದಿನಗಳಲ್ಲಿ ನಿರ್ಧಾರ ತಿಳಿಸುವುದಾಗಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭರವಸೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಯಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಕೀಲರು ಪಟ್ಟು ಹಿಡಿದ ಕಾರಣ ಕೊನೆಗೂ ಜಾಗದ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದರು.

ಆರಂಭದಲ್ಲಿ ತಿಮ್ಮರಾಜನಹಳ್ಳಿ, ವಿಶ್ವವಿದ್ಯಾನಿಲಯದ ಜಾಗ ನೀಡುವ ಬಗ್ಗೆ ಜಿಲ್ಲಾಧಿಕಾರಿ ಹೇಳಿದರು. ತಿಮ್ಮರಾಜನಹಳ್ಳಿ ದೂರ ಇರುವುದರಿಂದ ಕಕ್ಷಿದಾರರಿಗೆ, ಸಾಕ್ಷಿದಾರರಿಗೆ ತೊಂದರೆಯಾಗಲಿದೆ. ಈ ಜಾಗ ಬೇಡ ಎಂದು ಮೊದಲ ಸಭೆಯಲ್ಲಿ ಹೇಳಿದ್ದೇವೆ. ಅಮಲಾಪುರದಲ್ಲಿರುವ ಜಾಗ ನೀಡಿ ಎಂದು ಜಿಲ್ಲಾ ಪ್ರಧಾನ ನ್ಯಾಯಾದೀಶರಾದ ಜಯಂತ್ ಕುಮಾರ್ ಹೇಳಿದರು.

ಇದಕ್ಕೆ ದನಿಗೂಡಿಸಿದ ಜಿಲ್ಲಾ ವಕೀಲರದ ಸಂಘದ ಅಧ್ಯಕ್ಷ ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್ , ಆ ಜಾಗ ನಮಗೆ ಬೇಡ. ಅಮಲಾಪುರದ ಜಾಗ ನೀಡಿ ಎಂದು ಒತ್ತಾಯಿಸಿದರು.

ಅಮಲಾಪುರದಲ್ಲಿ ಜಾಗ ನೀಡಲು ಏನು ಸಮಸ್ಯೆ. ಅಲ್ಲಿ 15 ಎಕರೆ ಜಾಗವನ್ನು ಈ ಹಿಂದೆ ಎಂಎಸ್ ಎಇ ಗೆ ನೀಡಲಾಗಿತ್ತು. ಕೇಂದ್ರ ಸರ್ಕಾರ ಆ ಜಾಗ ವಾಪಸ್ ನೀಡಿದೆ. ಇನ್ನೂ ವಿಜ್ಞಾನ ಕೇಂದ್ರಕ್ಕೆ ನೀಡಿದ 5 ಎಕರೆಯೂ ಖಾಲಿ ಇದೆ. ವಿಜ್ಞಾನ ಕೇಂದ್ರಕ್ಕೆ ನೀವೆ ಅಧ್ಯಕ್ಷರು. ಈ ಎರಡನ್ನೂ ಸೇರಿಸಿ 20 ಎಕರೆ ಜಾಗವನ್ನು ನ್ಯಾಯಾಲಯಕ್ಕೆ ನೀಡಿ ಎಂದು ವಕೀಲರಾದ ಜಿ.ಎನ್. ನಾಗರಾಜ್,  ಓಬಯ್ಯ, ಶಿವಕುಮಾರ್, ಸಿ.ಕೆ.ಮಹೇಂದ್ರ, ಸಿಂಧು ಮತ್ತಿತರರು ಒತ್ತಾಯಿಸಿದರು.

ಅರಣ್ಯಕ್ಕೆ ನೀಡಿರುವ ಜಾಗವನ್ನು ಸಹ ನ್ಯಾಯಾಲಯಕ್ಕೆ ನೀಡಬಹುದಾಗಿದೆ. ನ್ಯಾಯಾಲಯಕ್ಕೆ ಜಾಗ ಬೇಕಾಗಿದೆ. ಜಾಗ ನೀಡಲು ಏನಾದರೂ ಸಮಸ್ಯೆ ಇದ್ದರೆ ಹೇಳಿ ಎಂದು ಹಿರಿಯ ವಕೀಲರಾದ ಕೃಷ್ಣಶಾಸ್ತ್ರಿ ಹೇಳಿದರು.

ಸದ್ಯಕ್ಕೆ, ಕೃಷಿ ಇಲಾಖೆ, ಪೊಲೀಸ್ ಠಾಣೆ, ಲೇಬರ್ ಕಮಿಷನರ್ ಜಾಗ ಬಿಡಿಸಿಕೊಟ್ಟರೂ ಸಾಕು ಎಂದರು. ಆದರೆ ಈ ಜಾಗ ಬಿಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಮಗೆ ಅಮಲಾಪುರದ 20 ಎಕರೆ ಜಾಗ ಬೇಕೇಬೇಕು ಎಂದು ಕೆಂಪರಾಜಯ್ಯ ಹೇಳಿದರು.

ಜಿಲ್ಲಾಡಳಿತ ಜಾಗ ನೀಡದಿದ್ದರೆ ವಕೀಲರು, ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಬೀದಿಗೆ ಇಳಿಯಲಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ಒಳ್ಳೆಯ ನ್ಯಾಯಾಲಯ ಸಂಕೀರ್ಣ ಇದ್ದರೆ ಜಿಲ್ಲೆಗೆ ಹೆಸರು ಬರಲಿದೆ. ಜಿಲ್ಲಾಧಿಕಾರಿ ಅವರಿಗೂ ಹೆಸರು ಬರಲಿದೆ. ಜಾಗ  ನೀಡಲು ಜಿಲ್ಲಾಧಿಕಾರಿ ಮುಂದಾಗಬೇಕು. ನಿರ್ಧಾರ ಪಾಸಿಟಿವ್ ಆಗಿರಲಿ ಎಂದು ಹಲವು ವಕೀಲರು ಹೇಳಿದರು.

ನನ್ನದು ಓ ಪಾಸಿಟಿವ್ ಬ್ಲಡ್. ಅಭಿವೃದ್ಧಿಯೇ ನನಗೆ ಬೇಕಿರುವುದು ಎಂದು ಶುಭಕಲ್ಯಾಣ್ ಮಾತಿಗೆ ಸಭೆ ಮೆಚ್ಚುಗೆ ವ್ಯಕ್ತಪಡಿಸಿತು.

ಸಭೆಯಲ್ಲಿ ಹಿರಿಯ ವಕೀಲರಾದ ರಂಗನಾಥ ರೆಡ್ಡಿ, ಎಂ.ಬಿ.ಬಸವರಾಜ್, ಮಹೇಶ್, ನವೀನ್ ನಾಯ್ಕ, ತಿಪ್ಪೇಸ್ವಾಮಿ,  ಸಂಘದ ಪದಾಧಿಕಾರಿಗಳಾದ  ಧನಂಜಯ್, ಸುರೇಶ್, ಶ್ರೀನಿವಾಸ್, ಗೋವಿಂದರಾಜು, ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್, ಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಂಜುಳಾ, ಹಲವು ಅಧಿಕಾರಿಗಳು, ವಕೀಲರು ಹಾಜರಿದ್ದರು.