Saturday, July 5, 2025
Google search engine
Home Blog Page 2

ಮೊಬೈಲ್, ಮಕ್ಕಳ ಮನಸ್ಸನ್ನ ಮಾಸದಿರಲಿ..

0

ಲೇಖನ: ತುಳಸೀತನಯಚಿದು

ಇದು ಮದುವೆ ಇನ್ನಿತರೆ ಶುಭ ಸಮಾರಂಭದ ಕಾಲ. ಬಹಳಷ್ಟು ಮದುವೆ ಸಮಾರಂಭಗಳಿಗೆ ಆಹ್ವಾನ ಕೂಡ ಬಂದಿದ್ದವು. ಹಾಗಾಗಿ ನಾನು ಇದ್ದಿದುರಲ್ಲಿ ಒಂದಷ್ಟು ಮದುವೆಗಳಿಗೆ ಹೋಗಿದ್ದೆ. ಅಲ್ಲಿ ಸ್ನೇಹಿತರೊಂದಿಗೆ ಹರಟುವಾಗ ನನಗೆ ಕಣ್ಣಿಗೆ ಬಿದ್ದದ್ದು, ಸುಮಾರು ಐದು ವರ್ಷ ಒಳಗಿನ ಅತೀ ಸಣ್ಣ ವಯಸ್ಸಿನ ಮಕ್ಕಳು ತಮ್ಮ ಕೈಗಳಲ್ಲಿ ಮೊಬೈಲ್ ಹಿಡಿದು ಎವೆಇಕ್ಕದೆ ಅದನ್ನು ನೋಡುತ್ತಿದ್ದದ್ದು.

ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ತಾವು ನೆಂಟರಿಷ್ಟರ ಜೊತೆ ಹರಟೆಯಲ್ಲಿ ತೊಡಗಿದ್ದರು. ಇತ್ತ ಮಕ್ಕಳು ಮೊಬೈಲ್ ಗೆ ದಾಸರಾದಂತೆ ಎಡೆಬಿಡದೇ ಕಣ್ಣರಳಿಸಿ ನೋಡುತ್ತಲೆ ಇದ್ದರು.

ಪೋಷಕರು, ಮಕ್ಕಳು ಹಠ ಮಾಡುತ್ತಾರೆ, ಹಠ ಮಾಡದಿರಲಿ, ಸುಮ್ಮನಿರಲ್ಲ ತೀಟೆ ಮಾಡುತ್ತಾರೆ, ಮೊಬೈಲ್ ಇಲ್ಲದೆ ನಮ್ಮ ಮಗು ಊಟವೇ ಮಾಡೋಲ್ಲ ಅನ್ನೋಕಾರಣಕ್ಕೆ ಪೋಷಕರೇ ಮಕ್ಕಳ ಕೈಗೆ ಮೊಬೈಲ್ ಇತ್ತು ಅವರವರ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ನಾನು ಕಂಡಂತೆ ಇತ್ತೀಚೆಗೆ ಇಂತಹ ಬಹಳಷ್ಟು ಸಮಾರಂಭಗಳಲ್ಲಿ ಬಹುತೇಕ ಮಕ್ಕಳು ಇದೇ ತರ ಮೊಬೈಲ್ ಬಳಸುತ್ತಿರುತ್ತಾರೆ. ಗೆಳೆಯರೊಂದಿಗೆ ಮಾತನಾಡುವಾಗ ಅದ್ಯಾಕೋ ಏನೋ ಪುಟ್ಟ ಮಕ್ಕಳ ಕೈಲಿನ ಮೊಬೈಲ್ ನನ್ನನ್ನು ಗಮನ ಹರಿಸುವಂತೆ ಮಾಡಿತ್ತು.

ಮಕ್ಕಳು ತಾವೇ ಮೊಬೈಲ್ ಗೀಳು ಹತ್ತಿಸಿಕೊಂಡರೇ.? ಇಲ್ಲಾ ಪೋಷಕರು ತಮ್ಮತಮ್ಮ ಕೆಲಸ ಮಾಡಿಕೊಳ್ಳಲು ಮಕ್ಕಳು ಅಡ್ಡಿಯಾಗುತ್ತಾರೆಂಬ ಕಾರಣದಿಂದ ಮೊಬೈಲ್ ಕೈಗಿಟ್ಟು ಕೂರಿಸುವ ಸಲುವಾಗಿ ಕೊಟ್ಟಿದ್ದರಿಂದ ಗೀಳಾಗಿ ಪರಿವರ್ತಿತೇ.? ಇಂತಹದೊಂದು ಪ್ರಶ್ನೆ ನನ್ನನ್ನು ಗಾಢವಾಗಿ ಕಾಡತೊಡಗಿತು. ಈ ಕುರಿತಾಗಿ ನನಗನ್ನಿಸಿದ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ಇದು ನಮ್ಮ ಕಾಲಘಟ್ಟದಲ್ಲಿ ಅತ್ಯಂತ ತೀವ್ರವಾಗಿ ಚರ್ಚೆಗೆ ಒಳಪಡುವ ವಿಷಯ. “ಮಕ್ಕಳಿಗೆ ಮೊಬೈಲ್‌– ಅನುಕೂಲದ ಮುಖವೋ, ಅಪಾಯದ ಬಲೆಯೋ?” ಎಂಬಂತೆ, ನಾವೆಲ್ಲಾ ವಿವರಣೆ ಮಾಡಿದ ಸಂದರ್ಭಗಳು ಇಂದು ಸಾಮಾನ್ಯವಾಗಿಬಿಟ್ಟಿವೆ. ಈ ಹಿನ್ನಲೆಯಲ್ಲಿ, ಈ ಸಮಸ್ಯೆಯ ಮೂಲವನ್ನು, ಪೋಷಕರ ಜವಾಬ್ದಾರಿಯನ್ನು, ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನು ಮತ್ತು ಏನು ಮಾಡಿದರೆ ಸಮಸ್ಯೆ ನಿಯಂತ್ರಣಕ್ಕೊಳಪಡಬಹುದು ಎಂಬುದನ್ನು ವಿಶ್ಲೇಷಿಸಬಯಸುತ್ತೇನೆ.

ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳು, ಕುಟುಂಬ ಕೂಟಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಾಣಸಿಗುವ ಒಂದು ಸಾಮಾನ್ಯ ದೃಶ್ಯವೆಂದರೆ: ಪುಟ್ಟ ಮಕ್ಕಳು ಕೈಯಲ್ಲಿ ಮೊಬೈಲ್ ಹಿಡಿದು ಅದಕ್ಕೆ ಮಗ್ನವಾಗಿರುವುದು.

ಕೆಲವರು ಕಾರ್ಟೂನ್ ನೋಡುತ್ತಿದ್ದಾರೆ, ಇನ್ನೂ ಕೆಲವರು ಗೇಮ್‌ಗಳಲ್ಲಿ ಮುಳುಗಿದ್ದಾರೆ. ಪೋಷಕರು ಅಲ್ಲಿಗೆ ಗಮನ ಹರಿಸದೇ, ಅವರು “ಶಾಂತವಾಗಿದ್ದಾರೆ” ಎಂಬ ನೆಮ್ಮದಿಯಲ್ಲಿ ತಮ್ಮತಮ್ಮ ಮಾತುಕತೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಮಕ್ಕಳಿಗೆ ಮೊಬೈಲ್ ಕೊಡುವುದರಿಂದ ತಾತ್ಕಾಲಿಕವಾಗಿ ತೀವ್ರ ಹಠ, ಅಳಿವು, ಅಸಹನೆಯ ಪರಿಸ್ಥಿತಿಯನ್ನು ತಪ್ಪಿಸಬಹುದು. ಆದರೆ ಇದರಿಂದ ಉಂಟಾಗುವ ದೀರ್ಘಕಾಲೀನ ಪರಿಣಾಮಗಳನ್ನು ಹಲವು ಪೋಷಕರು ಅರ್ಥ ಮಾಡಿಕೊಂಡಿಲ್ಲ.

ಮಕ್ಕಳಿಗೆ ಮೊಬೈಲ್ ನೀಡುವ ಮೊದಲು ಪೋಷಕರಿಗೆ ಈ ಕೆಳಗಿನ ವಿಷಯಗಳನ್ನು ತಿಳಿದಿರಬೇಕು:

ಮಕ್ಕಳ ಮೆದುಳಿನ ಬೆಳವಣಿಗೆ: ಐದು ವರ್ಷದೊಳಗಿನ ಮಕ್ಕಳ ಮೆದುಳಿನ ಬೆಳವಣಿಗೆಯು ಅತ್ಯಂತ ತೀವ್ರವಾಗಿದೆ. ಈ ಸಮಯದಲ್ಲಿ ಅವರು ಅಮ್ಮನ ಮುಖ, ತಂದೆಯ ಮಾತು, ಆಟದ ಖುಷಿ, ಕಥೆಗಳ ಕಲ್ಪನೆ—ಇವೆಲ್ಲ ನಿರ್ಣಾಯಕ ಅಂಶಗಳು. ಈ ಸಮಯದಲ್ಲಿ ಪರದೆಯ ಪರಿಮಿತ ಜಗತ್ತಿನಲ್ಲಿ ಮುಳುಗುವುದು ಅವರ ಕಲ್ಪನೆ ಶಕ್ತಿಗೆ ತೀವ್ರ ಧಕ್ಕೆ ತರುತ್ತದೆ.

ಮಾನಸಿಕ ಆರೋಗ್ಯ: ಮೊಬೈಲ್‌ಗೆ ಚಟವಾಗುವುದು ಮಕ್ಕಳಲ್ಲಿ ಕೋಪ, ಧೈರ್ಯ ನಾಶ, ಅಶಾಂತಿ, ನಿದ್ರೆ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ದಾರಿ ಮಾಡುತ್ತದೆ.

ಭಾಷಾ ಬೆಳವಣಿಗೆಗೆ ಅಡ್ಡಿ: ಮೊಬೈಲ್‌ನಲ್ಲಿನ ಒತ್ತಡದ ವಿಡಿಯೋಗಳು, ವೇಗದ ದೃಶ್ಯಗಳು, ನಿಷ್ಠೂರ ಡೈಲಾಗ್‌ಗಳು ಮಕ್ಕಳ ಭಾಷಾ ಅಭಿವೃದ್ಧಿಗೆ ಅಡ್ಡಿಯಾಗಬಹುದು. ಬದುಕಿನ ನೈಜ ಸಂಭಾಷಣೆಯ ಅನುಭವವಿಲ್ಲದೆ, ಅವರ ವಾಕ್ ಶಕ್ತಿ ಕುಂದುತ್ತದೆ.

ದುಷ್ಪರಿಣಾಮ

ದೃಷ್ಟಿದೋಷ: ಹಳೆಯದಕ್ಕಿಂತ ಹೆಚ್ಚಾಗಿ ಈಗ ಮಕ್ಕಳಿಗೆ ಚಿಕ್ಕ ವಯಸ್ಸಲ್ಲಿ ಗ್ಲಾಸ್ ಬೇಕಾಗುತ್ತಿರುವುದು ಆಶ್ಚರ್ಯದ ವಿಷಯವಲ್ಲ.

ನಿದ್ರೆಗತಸ್ಥಿತಿ: ಪರದೆ ಬೆಳಕು ನಿದ್ರೆ ಹಾರ್ಮೋನ್‌ಗಳಿಗೆ ವ್ಯತಿರಿಕ್ತವಾಗಿದೆ. ಇವು ಮಕ್ಕಳ ನಿದ್ರೆಯನ್ನು ಕೆಡಿಸಬಹುದು.

ಸಾಮಾಜಿಕ ಕೌಶಲ್ಯ ಕೊರತೆ: ಮಕ್ಕಳಿಗೆ ಸಂಬಂಧಗಳನ್ನು ನಿರ್ಮಿಸಿಕೊಳ್ಳುವ, ಶೈಕ್ಷಣಿಕವಾಗಿ ಬೆಳೆಸಿಕೊಳ್ಳುವ ಅವಕಾಶಗಳು ಕಡಿಮೆಯಾಗುತ್ತವೆ.

ಅತಿಯಾದ ಒಂಟಿ ತನ: ಇಷ್ಟ, ವೀಕ್ಷಣೆ, ಪ್ರತಿಕ್ರಿಯೆ ಮೇಲೆ ನಂಬಿಕೆ ಬೆಳೆಸಿದರೆ, ಜೀವನದ ನೈಜ ಸಂತೋಷಗಳ ಅರಿವೇ ಉಳಿಯುವುದಿಲ್ಲ.

ಮಕ್ಕಳಿಗೆ ಮೊಬೈಲ್ ನೀಡುವುದು ಅಪರಾಧವಲ್ಲ. ಆದರೆ ಅವು ಬಳಸುವ ವಿಧಾನ, ಸಮಯ, ಉದ್ದೇಶ, ಮತ್ತು ಮೇಲ್ವಿಚಾರಣೆ ಇಲ್ಲದೆ ಮಾಡುವ ಬಳಕೆ ಹಾನಿಕಾರಕ. ಪೋಷಕರು ತಮ್ಮ ಸಮಯವನ್ನು, ಪ್ರೀತಿಯನ್ನು, ಮತ್ತು ಸಹನೆಯುಳ್ಳ ಮಾರ್ಗದರ್ಶನವನ್ನು ಮಕ್ಕಳಿಗೆ ನೀಡುವ ಮೂಲಕ ಅವರಿಗೆ ಸುಸ್ಥಿರ, ಸಮತೋಲನದ ಜೀವನದ ದಿಕ್ಕು ನೀಡಬಹುದು.

ಮಕ್ಕಳ ಮುಗ್ಧತೆಯ ಮುಂದೆ ತಂತ್ರಜ್ಞಾನ ಮಣಿಯದಿರಲಿ; ತಂತ್ರಜ್ಞಾನ ನಮ್ಮ ಮಕ್ಕಳಿಗೆ ಆಜ್ಞೆಯಲ್ಲ, ಸಾಧನವಾಗಿರಲಿ.

–ಲೇಖಕರು:-ತುಳಸಿತನಯ ಚಿದು..✍️

“ಸಮಯದ ನದಿಯಲ್ಲಿ ಬದುಕಿನ ಹಡಗು”

ಸಮಯ – ಅದು ಮೌಲ್ಯವಿಲ್ಲದ ಅಂಶವಲ್ಲ. ಅದು ಬದುಕಿನ ದಾರಿದೀಪ. ಪ್ರತಿಯೊಂದು ಕ್ಷಣವೂ ಅದು ಮುಂದೆ ಮಾತ್ರ ಓಡುತ್ತಿದೆ. ನಾವು ಯಾವಾಗಲೂ ಅದನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದರೂ ಅದು ನಮ್ಮ ಬೆರಳ ಹಿಂದೆ ಸಿಡಿದು ಹೋಗುತ್ತಿದೆ. ಈ ಓಡುವ ಸಮಯದ ಹಾದಿಯಲ್ಲಿ, ಬದುಕು ತನ್ನ ಹಡಗನ್ನು ಸಾಗಿಸುತ್ತಿದೆ – ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಕತ್ತಲ ಕಣಿವೆಯಲ್ಲಿ, ಇನ್ನೊಮ್ಮೆ ಭವಣೆಗಳ ಏರುಪೇರಿನಲ್ಲಿ.

ಸಂತೋಷ, ನೋವು, ನಿರಾಶೆ, ಆಕಾಂಕ್ಷೆ — ಇವೆಲ್ಲಾ ಬದುಕಿನ ನಾಟಕದಲ್ಲಿ ನಮಗೆ ಅನಿಸುವ ಹಾಗೆ ಭಾವನೆಗಳ ಪಾತ್ರವಹಿಸುತ್ತವೆ. ಪ್ರತಿ ಭಾವನೆ, ಒಂದು ಪಾಠ, ಒಂದು ಅನುಭವ. ಒಮ್ಮೆ ಸುಖದ ಎದೆಯಲ್ಲಿ ಹಾರಾಡಿದ ಹಗಲು, ಮತ್ತೊಮ್ಮೆ ದುಃಖದ ಮಬ್ಬಿನಲ್ಲಿ ಕರಗಿ ಹೋಗುವ ರಾತ್ರಿ. ಆದರೆ ಇವೆಲ್ಲವೂ ಜೀವನದ ನಿಜವಾದ ಬಣ್ಣ.

ಜೀವನದ ಸಾಗರದಲ್ಲಿ ನಾವು ಎಲ್ಲರಿಗೂ ನಾವೇ, ನಾವಾಗಿ, ನಾವಿಲ್ಲದ ಅನೇಕ ಕನಸುಗಳ ನೌಕೆಹೊಕ್ಕಿದ ನಾವಿಕರು. ನಾವು ಎಲ್ಲಿ ಹೋಗಬೇಕು ಎಂಬ ಅರಿವಿಲ್ಲದಿದ್ದರೂ, ಸಾಗುವ ಪ್ರಯಾಣದಲ್ಲಿರುವ ಭಾವನೆಗಳು ನಮಗೆ ಬದುಕು ಬದಲಿಸುವ ಪಾಠಗಳನ್ನು ಕಲಿಸುತ್ತವೆ. ಈ ಪಾಠಗಳು – ಅವು ನಮ್ಮನ್ನು ಹೆಚ್ಚು ಮಾನವೀಯವಾಗಿಸಿಕೊಳ್ಳುತ್ತವೆ. ಹೆಚ್ಚು ಗಂಭೀರವಾಗಿ ಬದುಕನ್ನು ಅರ್ಥಮಾಡಿಕೊಳ್ಳುವಂತೆ ಮಾಡುತ್ತವೆ.

ಹೀಗೇ, ಸಮಯ ತೀರವಿಲ್ಲದ ನದಿಯಲ್ಲಿ ಬದುಕು ಸಾಗುತ್ತಿದೆ. ನಾವು ಹತ್ತಿರುವ ಈ ಹಡಗು ಎಲ್ಲಿಗೆ ತಲುಪುತ್ತದೆ ಎಂಬದು ಅಷ್ಟು ಮುಖ್ಯವಲ್ಲ. ಅದರಲ್ಲಿರುವ ಪ್ರತಿ ಕ್ಷಣ, ಪ್ರತಿಯೊಂದು ಭಾವನೆ, ಮತ್ತು ಬದುಕಿದ ರೀತಿಯೇ ನಿಜವಾದ ಜಯ.

ಏಕೆಂದರೆ, ಬದುಕು – ಓಡುತ್ತಿರುವ ಸಮಯದಲ್ಲಿ ಕಾಣಿಸಿಕೊಳ್ಳುವ ನಿಜವಾದ ಕಲೆ.

—ತುಳಸಿತನಯ ಚಿದು..✍️

ಸಿವಿಲ್ ಕೇಸು ನಡೆಸುವ ವಕೀಲರ ಕೊರತೆ; ನ್ಯಾಯಾಧೀಶರ ಕಳವಳ

ತುಮಕೂರು:

ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರು ಮೊದಲು ಹಣ ಗಳಿಕೆಗೆ ಆಸೆ ಪಡದೇ ತಮ್ಮ ವೃತ್ತಿಯ ಬಗ್ಗೆ ಗೌರವ ಹಾಗೂ ನೊಂದವರಿಗೆ ನ್ಯಾಯ ದೊರಕಿಸುವ ನಿಷ್ಠೆ ಹೊಂದಿದಾಗ ಮಾತ್ರ ವೃತ್ತಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಿ.ಜಯಂತ ಕುಮಾರ್ ತಿಳಿಸಿದರು.

ನಗರದ ಸೂಫಿಯಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಕೀಲ ವೃತ್ತಿ ಆಯ್ಕೆ ಮಾಡಿಕೊಳ್ಳುವಂತವರು ಮೊದಲು ಹಣದ ಹಿಂದೆ ಓಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇದು ವೃತ್ತಿಯಲ್ಲಿ ಹೆಚ್ಚಿನ ವಿಷಯಗಳನ್ನು ಕಲಿಕೆಗೆ ಕುಂಠಿತ ಉಂಟಾಗಲಿದೆ. ಬಹುಬೇಗ ಹಣ ಮಾಡುವ ಉದ್ದೇಶವೇನೋ ಈಡೇರಬಹುದು ಆದರೆ ವೃತ್ತಿಯಲ್ಲಿ ನೈಪುಣ್ಯತೆ ಹೊಂದಲು ಸಾಧ್ಯವಾಗುವುದಿಲ್ಲ ಎಂದರು.

ಹಣದ ಆಸೆಗೆ ಬಹಳಷ್ಟು ಜನ ಕ್ರಿಮಿನಲ್ ಕೇಸುಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಿರುವ ಕಾರಣದಿಂದಾಗಿ ಸಿವಿಲ್ ಕೇಸುಗಳನ್ನು ತೆಗೆದುಕೊಳ್ಳುವ ವಕೀಲರ ಸಂಖ್ಯೆಯೇ ಕಡಿಮೆಯಾಗಿದೆ. ಸಿವಿಲ್ ವ್ಯಾಜ್ಯಗಳಲ್ಲಿ ನೊಂದವರಿಗೆ ನ್ಯಾಯ ಒದಗಿಸಿದರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಎಂದರು.

ಉದ್ಘಾಟನಾ ಕಾರ್ಯಕ್ರಮದ ಚಿತ್ರ

ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸದಸ್ಯ ಎ.ಎನ್.ಗೌರೀಶ್ ಮಾತನಾಡಿ, ಕಾನೂನು ಪದವಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದೆ. ಆ ಕಾರಣದಿಂದಾಗಿ ವಿಶ್ವವಿದ್ಯಾಲಯದಲ್ಲಿ ಅನೇಕ ಶೈಕ್ಷಣಿಕ ಬದಲಾವಣೆಗಳನ್ನು ತರಲು ಉದ್ದೇಶಿಸಲಾಗಿದೆ. ಈ ವೃತ್ತಿ ಆಯ್ಕೆ ಮಾಡಿಕೊಳ್ಳುವವರು ವೃತ್ತಿ ಘನತೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದ ಅವರು ಕಾಲೇಜಿನ ಶೈಕ್ಷಣಿಕ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ್ಸಾ ಮಾತನಾಡಿ, ವೃತ್ತಿಪರತೆ ಹಾಗೂ ಸತತ ಪ್ರಯತ್ನದಿಂದ ನಾವು ಮಾಡುವ ಕೆಲಸದಲ್ಲೆ ಉನ್ನತ ಸಾಧನೆ ಮಾಡಬಹುದು. ವಕೀಲ ವೃತ್ತಿ ವಿಶಾಲವಾಗಿದ್ದು, ಪದವಿ ಗಳಿಸಿದ ನಂತರವೂ ಸತತ ಓದು ಹಾಗೂ ಪ್ರಯತ್ನ, ಪರಿಶ್ರಮ ವಕೀಲ ವೃತ್ತಿಗೆ ಅತ್ಯಗತ್ಯ. ಈ ವೃತ್ತಿಯಲ್ಲಿ ಪ್ರತಿ ದಿನವೂ ಹೊಸತನ್ನು ಕಲಿಯಲು ಅವಕಾಶ ಇದೆ ಎಂದರು.

ಕಾಲೇಜು ಪ್ರಾಂಶುಪಾಲ ಎಸ್.ರಮೇಶ್ ಮಾತನಾಡಿ, ನಮ್ಮನ್ನು ನಾವು ಆಕಾಶದೆತ್ತರೆಕ್ಕೆ ಬೆಳೆಯಲು ವಿದ್ಯೆಯೊಂದೆ ಸೂಕ್ತ ದಾರಿ. ಪರಿಶ್ರಮ ಪಟ್ಟಂತ ವ್ಯಕ್ತಿಗಳು ಇಂದು ವಿಶ್ವದ ಅಗ್ರಗಣ್ಯ ನಾಯಕರಾಗಿ ಎಲ್ಲರಿಗೂ ಮಾದರಿ ಎನಿಸಿದ್ದಾರೆ ಎಂದು ಅಬ್ದುಲ್ ಕಲಾಂ ಹಾಗೂ ಮಾಜಿ ರಾಷ್ಟ್ರಪತಿ ನಾರಾಯಣ್ ಅವರ ಜೀವನ ಚರಿತ್ರೆಯನ್ನು ನೆನಪಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ, ಕಾಲೇಜಿನ ಕಾರ್ಯದರ್ಶಿ ಶಫಿ ಅಹಮದ್ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಿದರು.

ಕಾನೂನು ಪದವಿ ಮುಗಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಟಿ.ಓಬಯ್ಯ, ಪ್ರಾದ್ಯಾಪಕರಾದ ಸಿ.ಕೆ.ಮಹೇಂದ್ರ, ಮಮತಾ, ಕಾಶಿಫ್, ತರನಂ, ಸವಿತಾ, ನರೇಶ್ ಬಾಬು, ಸುಬ್ರಮಣ್ಯ, ಜಗದೀಶ್ ಇತರರು ಇದ್ದರು.

Tumkuru: ಕಾಮಗಾರಿ ಹೆಸರಲ್ಲಿ ರಸ್ತೆ ಬಂದ್ ಸರಿಯಲ್ಲ: ಹೆತ್ತೇನಹಳ್ಳಿ ಮಂಜುನಾಥ್

ತುಮಕೂರು ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ಕುಣಿಗಲ್ ರಸ್ತೆಯಲ್ಲಿರುವ ರೈಲ್ವೆ ಅಂಡರ್ ಪಾಸ್ ದುರಸ್ಥಿ ಕಾಮಗಾರಿ ಮಾಡುವ ಉದ್ದೇಶದಿಂದ ಮಳೆಗಾಲದಲ್ಲಿ ಒಂದು ತಿಂಗಳ ಕಾಲ ಈ ಮಾರ್ಗ ಬಂದ್ ಮಾಡುವ ಜಿಲ್ಲಾಡಳಿತ ನಿರ್ಧಾರದಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಲಿದೆ. ಕೂಡಲೇ ಜಿಲ್ಲಾಡಳಿತ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಜನಪರ ಹೋರಾಟಗಾರ ಹೆತ್ತೇನಹಳ್ಳಿ ಮಂಜುನಾಥ್ ಒತ್ತಾಯಿಸಿದ್ದಾರೆ.

ಕುಣಿಗಲ್ ಅಂಡರ್ ಪಾಸ್ ದುರಸ್ತಿ ಕಾಮಗಾರಿಯಿಂದಾಗಿ ಔಟರ್ ರಿಂಗ್ ರೋಡ್‌ನಲ್ಲಿ ತುಂಬಾ ವಾಹನಗಳು ಸಂಚಾರಿಸುವ ಕಾರಣ ಮಕ್ಕಳನ್ನು ಶಾಲೆಗೆ ಬಿಡಲು, ವಯೋವೃದ್ಧರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತುಂಬಾ ಸಮಸ್ಯೆಯಾಗುತ್ತಿದೆ. ಜಿಲ್ಲಾಡಳಿತ ಮುಂದಾಲೋಚನೆ ಇಲ್ಲದೆ ನಗರದ ಅಮಾನಿಕೆರೆ ಕೋಡಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಸಲುವಾಗಿ ಶಿರಾ ಗೇಟ್ ರಸ್ತೆ ಬಂದ್ ಮಾಡಿದ್ದಾಗ ಸಂಚಾರ ಮಾಡಲು ಜನರು ಪರದಾಡಿದ್ದು ಮಾಸುವ ಮುನ್ನವೇ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಶಾಲೆ, ಕಾಲೇಜುಗಳು ಆರಂಭವಾಗಿದ್ದು ಮಕ್ಕಳನ್ನು ಶಾಲೆಗೆ ಬಿಡಲು ತೊಂದರೆಯಾಗುತ್ತದೆ. ಇಂತಹ ಕಾಮಗಾರಿಗಳನ್ನು ಶಾಲೆ, ಕಾಲೇಜುಗಳು ರಜೆ ಇರುವಾಗ ಮತ್ತು ಮಳೆ ಇಲ್ಲದ ಸಂದರ್ಭದಲ್ಲಿ ಮಾಡಿದರೆ ಸಾರ್ವಜನಿಕರಿಗೆ ಅನುಕೂಲಕರವಾಗಿರುತ್ತದೆ ಎಂದರು.

ಈ ಹಿನ್ನೆಲೆಯಲ್ಲಿ ಸುಮಾರ 50 ಲಕ್ಷ ರೂ. ವೆಚ್ಚದಲ್ಲಿ ಅಂಡರ್‌ಪಾಸ್ ರಸ್ತೆ, ಚರಂಡಿ ವ್ಯವಸ್ಥೆ, ಫುಟ್‌ಪಾತ್ ಹಾಗೂ ರೈಲಿಂಗ್ಸ್ ನವೀಕರಣ ಮಾಡುವುದು, ಗ್ರಾಂಟಿಗ್ಸ್ ಅಳವಡಿಸುವುದು, ರಸ್ತೆ ದುರಸ್ಥಿ, ತಡೆಗೋಡೆ ದುರಸ್ಥಿ, ಚರಂಡಿ ದುರಸ್ಥಿ ಕಾಮಗಾರಿ, ಆರ್‌ಸಿಸಿ ರೈಲಿಂಗ್ಸ್ ಅಳವಡಿಕೆ ಸೇರಿದಂತೆ ಹಲವು ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಮಾರ್ಗವನ್ನು ಬಂದ್ ಮಾಡಲಾಗಿದೆ. ಸಾರ್ವಜನಿಕರ ಸುಗಮ ಸಂಚಾರದ ದೃಷ್ಠಿಯಿಂದ ಕಾಮಗಾರಿಯನ್ನು ದಸರ ರಜೆ, ಮತ್ತು ಬೇಸಿಗೆ ರಜೆ ಸಮಯದಲ್ಲಿ ಮಾಡಬೇಕು. ಮಳೆಗಾಲದಲ್ಲಿ ಇಂತಹ ಹುಚ್ಚಾಟಕ್ಕೆ ಕೈ ಹಾಕಬಾರದು ಎಂದರು.

ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿದ್ದಾರೆ. ಅದು ಸಾಧ್ಯವೇ ಎಂಬುದನ್ನು ಜಿಲ್ಲಾಡಳಿತ ಸ್ಪಸ್ಟಪಡಿಸಬೇಕು. ಕುಣಿಗಲ್, ಹೆಬ್ಬೂರು, ನಾಗವಲ್ಲಿ, ಗೂಳೂರು ಸೆರಿದಂತೆ ತುಮಕೂರು ನಗರದ ವಿವಿಧ ಬಡಾವಣೆಯ ನಾಗರಿಕರಿಗೆ ಮಳೆಗಾಲದಲ್ಲಿ ಈ ಕಾಮಾಗಾರಿ ಮಾಡುವುದರಿಂದ ತೀವ್ರ ತೊಂದರೆಯಾಗುತ್ತದೆ.

ಅಂಡರ್ ಪಾಸ್ ಕಾಮಗಾರಿಯಿಂದಾಗಿ ಒಂದು ತಿಂಗಳ ಕಾಲ ಭಾನುವಾರ ಬೆಳಿಗ್ಗೆಯಿಂದ ಈ ಅಂಡರ್‌ಪಾಸ್ ಬಂದ್ ಮಾಡಲಾಗಿದೆ. ಕುಣಿಗಲ್ ಕಡೆಗೆ ಹೋಗುವ ಮತ್ತು ಕುಣಿಗಲ್ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಅದರೆ ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಏಕಮುಖವಾಗಿ ಈ ರೀತಿ ನಿರ್ಧಾರ ಮಾಡುವುದು ಸಾರ್ವಜನಿಕ ಹಿತದೃಷ್ಠಿಯಿಂದ ಒಳ್ಳೆಯದಲ್ಲ.ಕೂಡಲೇ ಈ ಭಾಗದ ಸಾರ್ವಜನಿಕರ ಸಭೆ ನಡೆಸಿ ಅಭಿಪ್ರಾಯ ಪಡೆದು ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಶ್ರದ್ಧೆಯ ನೆರಳಲ್ಲಿ ಬೆಳಗಿದ ಭವಿಷ್ಯದ ದೀಪ: ಕೊರಟಗೆರೆ ಶ್ರೀರಾಮ್ ಫ್ಯೂಚರ್ ಟೆಕ್‌(ಕಿಯೋನಿಕ್ಸ್)ನ ಸಂಗ್ರಾಮಗಾಥೆ

0

“ಶ್ರದ್ಧೆಯ ನೆರಳಲ್ಲಿ ಬೆಳಗಿದ ಭವಿಷ್ಯದ ದೀಪ: ಶ್ರೀರಾಮ್ ಫ್ಯೂಚರ್ ಟೆಕ್‌(ಕಿಯೋನಿಕ್ಸ್)ನ ಸಂಗ್ರಾಮಗಾಥೆ

ಅಂದು , 2004ರ ಒಂದು ಶಾಂತ ಬೆಳಗ್ಗೆ. ಕೊರಟಗೆರೆ ಪಟ್ಟಣದಲ್ಲಿ ಜನಜೀವನದ ಸಾಮಾನ್ಯ ಚಟುವಟಿಕೆ ನಡೆಯುತ್ತಿದ್ದಾಗ, ಪಟ್ಟಣದ ಶಿವಗಂಗಾ ಚಿತ್ರ ಮಂದಿರದ ಮುಂಭಾಗದಲ್ಲಿರುವ ಒಂದು ಪುಟ್ಟ ಕಟ್ಟಡದ ಒಳಗೆ ದೊಡ್ಡ ಕನಸು ಹುಟ್ಟುತ್ತಿತ್ತು. ಶ್ರೀರಾಮ್ ಫ್ಯೂಚರ್ ಟೆಕ್ — ಹೆಸರು ಕೇಳುತ್ತಿದ್ದಾಗಲೇ ಭವಿಷ್ಯವೊಂದು ಸ್ಪಷ್ಟವಾಗುವ ಭಾವನೆ. ಕೇಲವೇ ಕೆಲವು (2) ಕಂಪ್ಯೂಟರ್‌ಗಳು, 12 ಕುರ್ಚಿ, ಒಂದು ಟೇಬಲ್, ಒಂದು ಫ್ಯಾನ್, ಸಿಮೆಂಟ್ ಗೋಡೆಗಳ ಮಧ್ಯೆ, ಭವಿಷ್ಯ ಕಟ್ಟುವ ಕೆಲಸ ಶುರುವಾಯಿತು.

ಆಗ ನನ್ನ ಕಣ್ಣುಗಳಲ್ಲಿ ಒಣಗಿದ ತೋಟದ ಹೊಲವನ್ನೇ ಹಸುರುಗೊಳಿಸುವ ಅಭಿಲಾಷೆ ಇದ್ದಂತೆ. “ಗ್ರಾಮೀಣ ವಿದ್ಯಾರ್ಥಿಗಳು ಕನ್ನಡ ಮಾತ್ರವಲ್ಲ, ತಂತ್ರಜ್ಞಾನದಲ್ಲಿಯೂ ನಿಪುಣರಾಗಬೇಕು” ಎಂಬ ಆಶಯ ಮಡಿಲಲ್ಲಿತ್ತು. ಅವರು ಸ್ವತಃ ತರಗತಿಗೆ ನಿಂತು, ಪವರ್‌ಕಟ್ ಆಗಿದ್ರೆ ಮೇಣದ ಬತ್ತಿ ಬೆಳಕಿನಲ್ಲಿ ಪಾಠ ಮುಗಿಸುತ್ತಿದ್ದ ಕಾಲವದು. ಅದು ಪಾಠ ಮಾತ್ರವಲ್ಲ — ತ್ಯಾಗದ ಪಾಠ, ಶ್ರಮದ ಪಾಠ, ಆತ್ಮವಿಶ್ವಾಸದ ಪಾಠ.

ಮೊದಲ ಬಾರಿಗೆ ಮೈಕ್ ಬಳಸಿ ಮಾತನಾಡಿದ ವಿದ್ಯಾರ್ಥಿ, ಮೊದಲ ಕಂಪ್ಯೂಟರ್ ಎಕ್ಸಾಮ್ ಬರೆದು ನಗುತ್ತಿದ್ದ ವಿದ್ಯಾರ್ಥಿಗಳು, ಮೊದಲ ಬಾರಿಗೆ ಆಗಿನ ಹೊಸ ಸಿನಿಮಾಗಳನ್ನು ಕಂಪ್ಯೂಟರ್‌ನಲ್ಲಿ ನೋಡಿದ ಸಂತೋಷ — ಇವು ಎಲ್ಲಾ ಸಂಸ್ಥೆಯ ಹೃದಯದ ಸ್ಪಂದನೆಗಳು. ಈ ಸಂಸ್ಥೆ ಬಹುಪಾಲು ಮಕ್ಕಳು ಮೊದಲ ಬಾರಿಗೆ ತಮ್ಮ ಕೈಯಲ್ಲಿ ಮೌಸ್ ಹಿಡಿದ ಕ್ಷಣವನ್ನ ಮರೆಯುವುದಿಲ್ಲ.

ಇದರ ಬೆಳವಣಿಗೆ ಹೀಗೆಯೇ ನಡೆಯುತ್ತಾ, ಒಂದು ಹಂತದಲ್ಲಿ ಸಂಸ್ಥೆ ಸರ್ಕಾರದ ಕಿಯೋನಿಕ್ಸ್ ಸಂಸ್ಥೆಗೆ ಒಳಪಟ್ಟು ತನ್ನ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿತು. ಹೊಸ ತರಗತಿಗಳೊಂದಿಗೆ ಹೊಸ ಕೋರ್ಸ್‌ಗಳು, ರಾಜ್ಯ ಮಟ್ಟದ ಮಾನ್ಯತೆ, ಜತೆಗೆ ತಂತ್ರಜ್ಞಾನ ಶಿಬಿರಗಳು, ಮಹಿಳಾ ಶಕ್ತೀಕರಣ ಯೋಜನೆಗಳು, ಹಾಗೂ ವಯಸ್ಕರು, ವೃದ್ಧರಿಗೂ ಕಂಪ್ಯೂಟರ್ ಕಲಿಕೆಗೆ ಅವಕಾಶ. ಇವೆರಡನ್ನು ಸಂಯೋಜಿಸಿದ ಈ ಸಂಸ್ಥೆಯು ಎಲ್ಲ ಕಾಲಗತಿಗಳಿಗೂ ಹೊಂದುವ ಮಾದರಿಯಾಯಿತು.

ಪ್ರತಿಯೊಂದು ವರ್ಷದ ವಾರ್ಷಿಕೋತ್ಸವವೂ ಒಂದು ಸ್ಮರಣೀಯ ಸಂಗಮವಾಗಿತ್ತು. ಹಳೆಯ ವಿದ್ಯಾರ್ಥಿಗಳು ಬಂದು, ಹೊಸ ವಿದ್ಯಾರ್ಥಿಗಳಿಗೆ ತಮ್ಮ ಯಶೋಗಾಥೆ ಹಂಚಿಕೊಳ್ಳುವಾಗ, ಪ್ರಸಕ್ತವಾಗಿ ಕಲಿಕೆಯಲ್ಲಿದ್ದ ವಿದ್ಯಾರ್ಥಿಗಳ ಕಣ್ಣು ತೇವವಾಗುತ್ತಿತ್ತು. ಕೆಲವರು ಮೊದಲು ಸ್ಟುಡೆಂಟ್ ಆಗಿ ಬಂದಿದ್ದರು, ನಂತರ ಅಲ್ಲಿ ಇನ್‌ಸ್ಟ್ರಕ್ಟರ್ ಆಗಿದ್ದರು. ಸಂಸ್ಥೆಯ ಈ ಬದಲಾವಣೆಯು ಕೇವಲ ವೃತ್ತಿಪರ ಮಾತ್ರವಲ್ಲ, ಮಾನವೀಯ ಬೆಳವಣಿಗೆಯೂ ಆಗಿತ್ತು.

ಸಂಸ್ಥೆ ಕಟ್ಟುವಲ್ಲಿ ಸಹಚರರಾಗಿ ಸೇವೆ ಸಲ್ಲಿಸಿದವರು ಇದರ ಏಳಿಗೆಯ ಒಂದು ಭಾಗವೂ ಹೌದು. ಪ್ರಾರಂಭದಿಂದ ಇಲ್ಲಿವರೆಗೆ ತಮ್ಮದೇ ಅನುಭವದ ಕಲಿಕೆ ನೀಡಿದ ಆತ್ಮೀಯ ಸ್ನೇಹಿತ ಇರ್ಷಾದ್, ಆರಂಭದ ದಿನಗಳಲ್ಲಿ ಶಿಕ್ಷಕರಾಗಿದ್ದ ಲಕ್ಷ್ಮಿ‌, ಜಯಸಿಂಹ, ಶ್ರೀದೇವಿ, ಚೈತ್ರ ಲೋಕೇಶ್, ಗುಡಿಆನಂದ, ಹನುಮಂತು, ಹರೀಶ, ಚೈತ್ರ ಸೇರಿದಂತೆ ಈಗಿನ ಗಣೇಶ, ವಿಜಿ ಎಲ್ಲರೂ ಕೂಡ ಸಂಸ್ಥೆ‌ ಇಷ್ಟು ದೂರ ಸಾಗಲು ಒಂದೊಂದು ರೀತಿಯ ಕೈ ಜೋಡಿಸಿದವರು. ಎಲ್ಲರೂ ಸಂಸ್ಥೆಗೆ ಪ್ರಾಥಸ್ಮರಣೀಯರೆ.‌ ಅನೇಕ ಏಳು, ಬೀಳಿನ ನಡುವೆ ಸಂಸ್ಥೆಯನ್ನು 21 ವರ್ಷ ನಡೆಸಿಕೊಂಡು ಬರಲು ಸಹಕರಿಸಿದ ಪೋಷಕರು, ವಿದ್ಯಾರ್ಥಿಗಳು ಎಲ್ಲರೂ ಅಗಣಿತರೆ. ಅವರನ್ನೆಲ್ಲ ಒಮ್ಮೆ ಅಂತರಾಳದಲ್ಲಿ ಸ್ಮರಿಸಿದಾಗ ಏನೋ ಕೃತಜ್ಞ‌ ಭಾವ.

ಇಲ್ಲಿಯ ಪ್ರತಿಯೊಬ್ಬ ನೌಕರ — ಕೇವಲ ಉದ್ಯೋಗಿಯಲ್ಲ, ಈ ಸಂಸ್ಥೆಯ ಸೇವಕ. ಈ ತತ್ವವೇ ಈ ಕೆದಳದ ಚರಿತ್ರೆಗೆ ಮೂಲಭೂತ.

2020ರ ಕೊರೋನಾ ಕಾಲ — ಇಡೀ ಜಗತ್ತು ಸ್ಥಬ್ಧವಾದಾಗ, ಈ ಸಂಸ್ಥೆಯ ಗೇಟು ಕೂಡ ಕೆಲ ತಿಂಗಳುಗಳು ಬಂದ್ ಆಗಿದ್ದವು. ಆದರೆ ಆ ಸ್ಥಬ್ಧತೆಯ ಮಧ್ಯೆ ಇನ್ನೇನು ಸಂಸ್ಥೆಯ ಕಥೆ ಕೂಡ ಇತಿಹಾಸ ಎಂದೆನಿಸ ತೊಡಗಿತ್ತು. ಮತ್ತೆ‌ ಅದೆಲ್ಲದರಿಂದ ಹೊರಬಂದಾಗ ವಿದ್ಯಾರ್ಥಿ, ‌ಪೋಷಕರಿಂದ ಸಿಕ್ಕ ಮತ್ತದೆ ಪ್ರೋತ್ಸಾಹ ನಮ್ಮಲ್ಲಿ ಮರು ಹುಟ್ಟು ತಂದಿತ್ತು. ಮರುಭೂಮಿಯಲ್ಲಿ ನೀರು ಕಂಡಷ್ಟೆ ಖುಷಿ. ಮತ್ತೇ ಏನೋ ಒಂದು ಆಶಾ ಭಾವದ ಬೆಳಕು ಮೂಡಿ ಮುನ್ನೆಡೆಸುವ ದಾರಿ ತೋರಿತು.

ಇಂದು, 22ನೇ ವರ್ಷದ ಹೆಜ್ಜೆ ಇಡುತ್ತಾ, ಸಂಸ್ಥೆ ತನ್ನ ಹಿಂದಿನ ಹಾದಿಯತ್ತ ಹಿಂತಿರುಗಿ ನೋಡುವಾಗ, ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆ ಅದರ ಮೆಡಲ್ಲಾಗಿ ಮಿನುಗುತ್ತದೆ. ಕೇವಲ ಟೈಪಿಂಗ್ ಕಲಿತ ವಿದ್ಯಾರ್ಥಿ ಇಂದು ಐಟಿ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್. ಒಂದು ಕಾಲದಲ್ಲಿ ಗ್ರಾಮೀಣ ಬಡ ಯುವತಿಯೊಬ್ಬಳು, ಈಗ ಆನ್‌ಲೈನ್ ತರಬೇತಿ ನೀಡುತ್ತಿರುವ ಸಂಸ್ಥೆ ಉದ್ಯೋಗಿ. ಹೀಗೆ ಅನೇಕ ವಿದ್ಯಾರ್ಥಿಗಳು ಇಲ್ಲಿಂದ ಬದುಕು ಕಟ್ಟಿಕೊಂಡ ಉದಾಹರಣೆ ‌ಸಿಗುತ್ತವೆ.

‘ಶ್ರೀರಾಮ್ ಫ್ಯೂಚರ್ ಟೆಕ್’ ಎಂಬುದು ಕಂಪ್ಯೂಟರ್ ತರಬೇತಿ ಕೇಂದ್ರವಲ್ಲ. ಅದು ಕನಸುಗಳಿಗೆ ಆಕಾರ ಕೊಡುವ ಒಂದು ಜೀವಂತ ದೀಪ. ಗ್ರಾಮಾಂತರದ ಪುಟ್ಟ ಹಾದಿಗಳಲ್ಲಿ ಜ್ಞಾನ ಬೆಳೆದಿರುವ ಈ ಹಳ್ಳಿ ಐವರೆದ ಶಾಲೆಯ ಶಕ್ತಿಯು ಇನ್ನು ಅನೇಕ ಹೃದಯಗಳಲ್ಲಿ ಬೆಳಕಾಗಲಿದೆ.

ತುಳಸೀತನಯಚಿದು-  ಲೇಖಕರು, ಸಂಸ್ಥೆಯ ಸಂಸ್ಥಾಪಕರು ಹಾಗೂ ಪತ್ರಕರ್ತರು.

ತಲಾತಲಾಂತರಗಳಿಂದ ನಿನಾದಿಸುವ ನಾದ – ಶಹನಾಯಿ, ಕಣಿವಾದ್ಯ

0

ತುಳಸಿತನಯ ಚಿದು..✍️

ನಾನು ಈಚೆಗೆ ಸಿದ್ದರಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮೀಜಿಗಳ ಜೊತೆಯಲ್ಲಿ ಹೂವಿನಹಡಗಲಿ ತಾಲ್ಲೂಕು, ಇಟಗಿ ಹೋಬಳಿ ವ್ಯಾಪ್ತಿಯ ಸೋಗಿ ಗ್ರಾಮಕ್ಕೆ ನನ್ನ ಒಡನಾಡಿಯೊಬ್ಬರ ವಿವಾಹಕ್ಕೆಂದು ಹೋಗಿದ್ದೆ. ಅಲ್ಲಿ ನನಗೆ ಕಂಡಿದ್ದು ಎಲ್ಲ ವೈಶಿಷ್ಯ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗಕ್ಕೆ ಹೋಗಿದ್ದಕ್ಕೇನೋ ಅಲ್ಲಿನ ಜನಜೀವನ ಅತ್ಯಂತ ಕುತೂಹಲ ಹುಟ್ಟಿಸಿತು. ಅಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಮದುವೆ ದಿಬ್ಬಣ ಕರೆದೊಯ್ಯುವಾಗ ನುಡಿಸುತ್ತಿದ್ದ ಶಹನಾಯಿ ಹಾಗೂ ಕಣಿವಾದ್ಯ. ಅವರು ನುಡಿಸುತ್ತಿದ್ದ ಮಂಗಳವಾದ್ಯ ನನ್ನ ಕರ್ಣಗಳನ್ನು ಅತಿಯಾಗಿ ಆಮಂತ್ರಿಸಿತು. ಈ ಮಧ್ಯೆ ಅವರು ವಾದ್ಯ ನುಡಿಸುವುದನ್ನ ನಿಲ್ಲಿಸಿದಾಗ ಅದೇಕೋ ಏನೋ ನಾನು ಆಗ ಅವರನ್ನು ಮಾತನಾಡಿಸಬೇಕು ಅಂತ ತುಂಬಾ ಅನಿಸತೊಡಗಿತು. ಆಗ ಅವರನ್ನ ಒಂದಿಷ್ಟು ಮಾತಿಗೆಳೆದು ಅವರ ಹಿನ್ನೆಲೆಯನ್ನ ಕೆದಕಿದೆ. ಆಗ ಅವರಿಂದ ತಿಳಿದ ಒಂದಷ್ಟು ವಿಚಾರಗಳನ್ನ ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ಈ ವಾದ್ಯವೃಂದದ ಮೇಟಿ ಮಲ್ಲಪ್ಪನನ್ನು ಮಾತಿಗೆ ಎಳೆದಾಗ ಅವರು ನನ್ನೊಂದಿಗೆ ಅತ್ಯಂತ ವಿನಯ ಹಾಗೂ ಗೌರವದಿಂದಲೇ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಛಲವಾದಿ ಸಮುದಾಯದವರಾದ ಮಲ್ಲಪ್ಪ ಹಾಗೂ ಅವರ ಅಣ್ಣತಮ್ಮಂದಿರದ್ದು ಹಿಟ್ಟಿನಿಂದಲೂ ಇದೇ ಕಾಯಕ. ಸುತ್ತ ಹತ್ತೂರಿನಲ್ಲಿ ಎಲ್ಲೇ ಮಂಗಳ ಕಾರ್ಯ ಹಾಗೂ ಮರಣದ ಅಂತ್ಯಕ್ರಿಯೆಯಲ್ಲೂ ಇವರದ್ದೇ ನಾದ ಸ್ವರ. ಹತ್ತೂರಿನಲ್ಲೂ ಶಹನಾಯಿ ಮಲ್ಲಪ್ಪ ಅಂತನೇ ಅವರನ್ನ ಕರಿತಾರೆ. ಅವರೊಂದಿಗೆ ಅವರ ಅಣ್ಣತಮ್ಮಂದಿರಾದ ಶೃತಿ ವಾದಕರಾದ ನಾಗಪ್ಪ, ಸೋಗಿ ಮಲ್ಲಪ್ಪ, ಸಮ್ಮಾಳ ವಾದಕ ಕೊಟ್ರೇಶ್ ಇಟಗಿ, ದಿಮ್ಮ ಬಾರಿಸುವ ಸೋಗಿ ಕೊಟ್ರೇಶ್, ಮಲ್ಲಪ್ಪನಿಗೆ ಶಹನಾಯಿ ಜೊತೆಯಾಗುವ ಪರಸಪ್ಪ ಗುಡಾಳ್, ಇವರೆಲ್ಲರೂ ತಮ್ಮ ಹುಟ್ಟಿನಿಂದಲೂ ಇದೇ ಕಾಯಕ ಮಾಡಿಕೊಂಡು ಬಂದಿದ್ದಾರೆ. ಇದು ಅವರ ಹಿರಿಕರು ಕೊಟ್ಟ ಬಳುವಳಿ ಎನ್ನುವುದು ಅವರ ಆಂಬೋಣ. ಅದನ್ನು ಅತ್ಯಂತ ಗೌರವದಿಂದಲೇ ಇಂದಿಗೂ ಮುಂದುವರೆಸುತ್ತಿದ್ದಾರೆ.

ಭಾರತೀಯ ಸಂಗೀತ ಪರಂಪರೆ ಅನೇಕ ವಿಶಿಷ್ಟವಾದ ವಾದ್ಯವೃಂದಗಳಿಂದ ಸಮೃದ್ಧವಾಗಿದೆ. ಈ ಪೈಕಿ ಶಹನಾಯಿ ಮತ್ತು ಕಣಿವಾದ್ಯಗಳು ಶ್ರವಣಸುಖದ ನಾದಮಯ ಅನುಭವವನ್ನು ಕೊಡುವುದಲ್ಲದೆ, ಸಂಸ್ಕೃತಿ, ಭಕ್ತಿ ಸಂವೇದನೆಗಳಿಗೂ ಜೀವಂತ ಸಾಕ್ಷಿಯಂತೆ ಇವೆ. ಇವುಗಳನ್ನು ತಲಾತಲಾಂತರದಿಂದ ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವ ಇಲ್ಲಿನ ಕೆಲವು ಕುಟುಂಬಗಳು ಇವತ್ತಿಗೂ ಅದರ ನಾದಪಾರಂಪರ್ಯವನ್ನು ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ.

ವಿಡಿಯೋ ಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಹನಾಯಿ ಎಂಬ ಶಬ್ದವೇ ತನ್ನಲ್ಲಿ ಒಂದು ರಾಜಸಂಪತ್ತಿಯ ಛಾಯೆಯನ್ನು ಹೊಂದಿದೆ. ಈ ವಾದ್ಯವು ಮೂಲತಃ ಮಿಥಿಲಾ ಮತ್ತು ಉತ್ತರ ಭಾರತದ ರಾಜದರ್ಬಾರಿಗಳಲ್ಲಿ ನಿನಾದಿಸುತ್ತಿದ್ದ ಶ್ರೇಷ್ಠ ವಾದ್ಯವಾಗಿದ್ದು, ಮುಂದೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಮದುವೆಗಳಲ್ಲಿ, ವಿಶೇಷ ಪೂಜೆಗಳಲ್ಲಿ ಪ್ರಮುಖವಾಗಿಬಿಟ್ಟಿತು. ಶಹನಾಯಿಯ ನಾದ ಶಾಂತ, ಭಕ್ತಿಯ ಶ್ರಾವಣಾನುಭವವನ್ನು ನೀಡುತ್ತದೆ.

ಇಂತಹ ಶಹನಾಯಿಯನ್ನು ವಂಶಪಾರಂಪರ್ಯವಾಗಿ ತಂದು, ಅದನ್ನು ಕೇವಲ ವಾದ್ಯವಲ್ಲದೆ ಜೀವನದ ಭಾಗವನ್ನಾಗಿ ಮಾಡಿಕೊಂಡು ಬಂದಿರುವ ಇಲ್ಲಿನ ಕುಟುಂಬಗಳ ಕತೆ ಎದ್ದೇಳಿಸುವಂತಹದು. ಪಿತಾಮಹರಿಂದ ಮೊಮ್ಮಕ್ಕಳವರೆಗೆ ಸಾಗಿದ ಈ ಪಾರಂಪರ್ಯ ಶಕ್ತಿ ಕೇವಲ ಕಲೆಯ ಪೋಷಣೆಗಲ್ಲದೆ, ಒಂದು ಜೀವಮಾನದ ಸನ್ನಿವೇಶವನ್ನೂ ಹೊತ್ತಿದೆ.

ಅದು ಒಬ್ಬ ಪಿತೃ ಶ್ರೀಮಂತವಾಗಿ ಉಳಿದಿದ್ದರೂ, ತನ್ನ ಮುದ್ದಿನ ಮಕ್ಕಳಿಗೆ ಶಹನಾಯಿ ಕಲಿಸುವಾಗ ಬಳಸುತ್ತಿದ್ದ ಧೂಳಿನಿಂದ ಮುರಿದ ಹಳೆಯ ಶಹನಾಯಿ ಇನ್ನೂ ಮನೆಯ ಕೋಣೆಯಲ್ಲಿ ಇರಿಸಿಕೊಂಡಿರುವ ನಂಬಿಕೆಯ ಕಥೆಗಳಿವೆ. ಪುರೋಹಿತ ಕರ್ಮದ ಜೊತೆಗೆ ಶಹನಾಯಿ ನಾದವೂ ಸಂಪೂರ್ಣವಾದ ಪೂಜೆಯ ಭಾಗವಾಗಿ ನೆಲೆನಿಂತಿರುವ ಈ ರೀತಿಯ ಕುಟುಂಬಗಳ ಸಾಧನೆಯ ಹಿಂದೆ ಶ್ರಮ, ಭಕ್ತಿ, ಹಾಗೂ ನಾದಪ್ರೀತಿಯ ಶ್ರೇಷ್ಠ ಸಂಕಲನ ಇದೆ.

ಕಣಿವಾದ್ಯಗಳು ದೇಹದ ಭಾಗಗಳಂತೆ ಬದುಕನ್ನು ಬಿಡುತ್ತವೆ. ತಮಟೆ, ಕಣಿವಾದ್ಯ ನಾದಸ್ವರ, ಜಾನಪದ ತಾಳವೃದಂಗಳು, ಶೃಂಗಾರದ ಹಾಡುಗಳಿಗೆ ತಾನಾಗಿ ಜೀವ ತುಂಬುವಂತಹ ಈ ವಾದ್ಯಗಳು ಗ್ರಾಮೀಣ ಹಾಗೂ ಜಾನಪದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿವೆ. ಕೆಲವೊಂದು ಕುಟುಂಬಗಳು ಈ ಕಣಿವಾದ್ಯಗಳನ್ನು ತಾವು ಅಜ್ಜಿಯವರಿಂದ, ತಾತಂದಿರಿಂದ ಕಲಿತಂತೆ ಮುಂದಿನ ತಲೆಮಾರಿಗೆ ಸೇರಿಸುತ್ತ ಬಂದಿದ್ದಾರೆ.

ಮದುವೆ, ಜಾತ್ರೆ, ಹೊರಟಾಗ, ಮಂಗಳ ಕಾರ್ಯ ಎಲ್ಲವೂ ಈ ನಾದವಿಲ್ಲದೆ ಅಪೂರ್ಣವೆನಿಸುತ್ತವೆ. ಕೆಲವು ಕುಟುಂಬಗಳ ಗೃಹದೇವತೆಗಳಿಗೆ ಪ್ರಸಾದಕ್ಕಿಂತ ಮುಂಚೆ ತಮಟೆಯ ಒರಟಾದ ಧ್ವನಿಯಲ್ಲಿ ಒಂದು ಸಾರಿ ಕಿವಿಕೊಟ್ಟು ತರುವ ಮರ್ಯಾದೆಯಿದೆ. ಅವರು ಕಲೆಯನ್ನೇ ಪೂಜೆಯಾಗಿ ಪರಿಗಣಿಸುತ್ತಾರೆ.

ಈ ಕುಟುಂಬಗಳು ಶಹನಾಯಿ, ಕಣಿವಾದ್ಯಗಳನ್ನು ಕಲೆಗೆ ಮೀರಿ ತಾವು ತಾಳಿದ ಜೀವಶಕ್ತಿ ಎಂದು ಭಾವಿಸುತ್ತವೆ. ವಾದ್ಯದ ತಯಾರಿಕೆಯಿಂದ ಹಿಡಿದು ಅದರ ನಿರಂತರ ಅಭ್ಯಾಸ, ಪುನರ್ ಸಂಸ್ಕರಣೆ ಮತ್ತು ಕಾರ್ಯಕ್ರಮಗಳಲ್ಲಿ ನಿಭಾಯಿಸುವ ಶಿಸ್ತು — ಈ ಎಲ್ಲವೂ ತಲಾ ತಲೆ ಪೋಷಿತವಾಗಿದೆ.

ಇಂದಿನ ತಂತ್ರಜ್ಞಾನ ಕಾಲದಲ್ಲಿಯೂ, ಈ ವಂಶಪಾರಂಪರ್ಯವನ್ನು ಮೀರಿ ಉಳಿಸಿಕೊಂಡಿರುವ ಮನೆಗಳು ತಮ್ಮ ಮನೆ ಮಕ್ಕಳಿಗೆ ಮೊದಲು ಶಹನಾಯಿ ಅಥವಾ ಕಣಿವಾದ್ಯ ತೋರಿಸುತ್ತಾರೆ – ಮೊಬೈಲ್ ಫೋನ್ ಅಲ್ಲ. ಇದು ನಾದದ ಕಲೆ, ಶಿಸ್ತಿನ ಪಾಠ ಹಾಗೂ ಸಂಸ್ಕೃತಿಯ ಗೌರವವನ್ನೂ ಕಲಿಸುತ್ತದೆ.

ಇಂದಿನ ಪೀಳಿಗೆ ತಂತ್ರಜ್ಞಾನದತ್ತ ಮುಖ ಮಾಡಿದರೂ, ಇಂತಹ ವಂಶಪಾರಂಪರ್ಯ ಕುಟುಂಬಗಳು ತಮ್ಮ ನಾದಪಾಠವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುತ್ತಿದ್ದಾರೆ. ಇದೇ ನಾದಪೂಜೆಯ ಮುಂದಿನ ತಲೆಮಾರಿಗೆ ಹೊಸ ರೂಪ.

ಶಹನಾಯಿ ಮತ್ತು ಕಣಿವಾದ್ಯಗಳ ಪಾರಂಪರ್ಯವನ್ನು ತಲಾತಲಾಂತರದಿಂದ ಸಾಗಿಸುತ್ತಿರುವ ಕುಟುಂಬಗಳು ನಾಡು-ನುಡಿಗೆ ಜೀವ ತುಂಬಿದವರು. ಇವರು ಕೇವಲ ಕಲಾವಿದರು ಅಲ್ಲ, ನಾದಯೋಗಿಗಳೂ ಹೌದು. ಇಂತಹ ಕುಟುಂಬಗಳ ಕಥೆಗಳನ್ನು ದಾಖಲಿಸುವುದು, ಪೋಷಿಸುವುದು ಹಾಗೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.

ನಾನು ಬಾಲ್ಯದಲ್ಲಿ ಶಹನಾಯಿ ಹಿಡಿಯುವುದು ನನ್ನ ದಿನಚರಿಯಾದ್ದು. ಪ್ರಾರಂಭದಲ್ಲಿ ಅಜ್ಜ ಗದರಿಸುತ್ತಿದ್ದರು – ಶ್ರುತಿ ತಪ್ಪುತ್ತಿತ್ತು, ಉಸಿರಾಟ ಸರಿಯಾಗಿರಲಿಲ್ಲ. ಆದರೆ ಅವರು ಬಿಡಲಿಲ್ಲ. ಪ್ರತಿದಿನವೂ ಮುಂಜಾನೆ 5 ಗಂಟೆಗೆ ಎದ್ದು ನಾದಾಭ್ಯಾಸ ಮಾಡುವುದು ಮನೆಯ ನಿಯಮವಾಗಿತ್ತು. ಅವರಿಗೆ ಸಂಗೀತವೆಂದರೆ ಪೂಜೆ – ಪ್ರತಿದಿನವೂ ಕಸರತ್ತಾಗಿ ನಡೆಯಬೇಕಾದ ಚಟುವಟಿಕೆ.

ನಲವತ್ತು ವರ್ಷಗಳ ಹಿಂದೆ ನನ್ನ ಮೊಟ್ಟ ಮೊದಲ ಕಾರ್ಯಕ್ರಮ ನನ್ನ ಊರಿನ ದೇವಸ್ಥಾನದ ಪೂಜೆ. ಅಜ್ಜನು ಶಹನಾಯಿ ಹಿಡಿದು ನನಗೆ ಮೊದಲ ತಾಳ ಕೊಟ್ಟ ದಿನ. ನನ್ನ ಕೈ ನಡುಗುತ್ತಿತ್ತು. ಆದರೆ ಮೊದಲ ನೋಟದಲ್ಲೇ ಅವರ ಕಣ್ಣಲ್ಲಿ ನಂಬಿಕೆಯ ಮೂಡಿದರೆನಿಸಿತು. ಅವರ ನಗು ನನ್ನ ಮೊದಲ ಪ್ರಶಸ್ತಿ.

ಇಂದಿಗೂ ಅಜ್ಜನ ಹಳೆಯ ಶಹನಾಯಿ ನಾನು ಆರಾಧಿಸುವ ದೇವರೊಡನೆ ಇರುತ್ತದೆ. ಅದನ್ನು ಸ್ಪರ್ಶಿಸುವ ಮೊದಲು ನಾನು ಕೈತೊಳೆದುಕೊಳ್ಳುತ್ತೇನೆ – ಅದು ನನಗೆ ಒಂದು ನಾದದ ದರ್ಶನ, ಆಪ್ತ ಸಂಬಂಧ ಎನ್ನುವಾಗ ಮಲ್ಲಪ್ಪ ಭಾವುಕರಾದರು.

ಸಾಂಸ್ಕೃತಿಕ ಲೋಕದಲ್ಲಿ ಕಾರ್ಪೊರೇಟ್ ಸಂಸ್ಕೃತಿ: ಜಿ ಎನ್ ಮೋಹನ್ ಆತಂಕ

ಕರ್ನಾಟಕ ನಾಟಕ ಅಕಾಡೆಮಿ ತಿಂಗಳ ನಾಟಕ ಸಂಭ್ರಮ

ಬೆಂಗಳೂರು- ಸಾಂಸ್ಕೃತಿಕ ಲೋಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕಾರ್ಪೊರೇಟ್ ಲೋಕ ಯತ್ನಿಸುತ್ತಿದೆ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ಹಿರಿಯ ಪತ್ರಕರ್ತ, ಸಾಹಿತಿ ಜಿ ಎನ್ ಮೋಹನ್ ಅಭಿಪ್ರಾಯಪಟ್ಟರು.

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಿಂಗಳ ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿ ಗೌರವವನ್ನು ಸ್ವೀಕರಿಸಿ ಮಾತನಾಡಿದರು.

ನಾಲ್ಕು ಗೋಡೆಗಳ ಮಧ್ಯೆ ಇದ್ದ ರಂಗಭೂಮಿಯನ್ನು ಅಲ್ಲಿಂದ ಬಿಡುಗಡೆ ಮಾಡಿ ಜನರ ಬಳಿಗೆ ಕೊಂಡೊಯ್ಯಲು ದೊಡ್ಡ ಚಳವಳಿ ನಡೆಯಿತು. ಜನರ ಸಮಸ್ಯೆಗಳನ್ನು ಬಿಂಬಿಸುವ ಕೆಲಸ ನಡೆಯಿತು. ಆದರೆ ಈಗ ಕಾರ್ಪೊರೇಟ್ ಜಗತ್ತು ಜನರ ಬಳಿಯಿಂದ ಕಿತ್ತು ಮತ್ತೆ ಅದನ್ನು ನಾಲ್ಕು ಗೋಡೆಯ ಮಧ್ಯೆ ಬಂಧಿಸಲು ಯತ್ನಿಸುತ್ತಿದೆ ಎಂದರು.

ರಂಗಭೂಮಿ ಜನರ ಒಡನಾಡಿ. ಅದು ಪ್ರಶ್ನಿಸಲು ಪ್ರೇರೇಪಿಸುತ್ತದೆ. ಸಮಾಜ ಬದಲಾವಣೆಗೆ ದಾರಿಮಾಡಿಕೊಡುತ್ತದೆ. ಆದ ಕಾರಣಕ್ಕಾಗಿಯೇ ರಂಗಭೂಮಿಯ ಮನಸ್ಥಿತಿಯನ್ನು ಬದಲಿಸುವ ತುರ್ತು ಪ್ರಭುತ್ವಕ್ಕೆ ಇದೆ. ಸಾಹಿತ್ಯ ಹಾಗೂ ರಂಗಭೂಮಿಯ ಮೇಲೆ ಭಯದ ಪರದೆಯನ್ನು ಸೃಷ್ಟಿಸಿ ಅವು ಸ್ವಯಂ ಸೆನ್ಸಾರ್ ಶಿಪ್ ಹೇರಿಕೊಳ್ಳುವಂತೆ ಪ್ರಭುತ್ವ ಒತ್ತಾಯಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಇದರ ವಿರುದ್ಧ ರಂಗ ಲೋಕ ಎಚ್ಚೆತ್ತುಕೊಳ್ಳಬೇಕು ಎಂದರು.

ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ ಕೆ ವಿ ನಾಗರಾಜಮೂರ್ತಿ ಅವರು ಮಾತನಾಡಿ ನಾಟಕ ಅಕಾಡೆಮಿ ಬೆಂಗಳೂರಿನ ಹೊರಗಿನ ತಂಡಗಳನ್ನು ಆಹ್ವಾನಿಸಿ ನಾಟಕ ಪ್ರದರ್ಶನಕ್ಕೆ ದಾರಿ ಮಾಡಿಕೊಟ್ಟಿದೆ. ಈ ಮೂಲಕ ನಗರ ಹಾಗೂ ಗ್ರಾಮೀಣ ತಂಡಗಳ ನಡುವೆ ಸಂವಾದ ಸಾಧ್ಯವಾಗಿದೆ. ಇದು ಆಶಾದಾಯಕ ಬೆಳವಣಿಗೆ ಎಂದರು.

ಕಾರ್ಯಕ್ರಮದ ಅಂಗವಾಗಿ ಸಂತೋಷ ನಾಯಕ ಪಟ್ಲ ಅವರು ನಿರ್ದೇಶಿಸಿದ ‘ದಿ ಫೈಯರ್’ ನಾಟಕವನ್ನು ಪ್ರದರ್ಶಿಸಲಾಯಿತು. ಉಡುಪಿಯ ಭೂಮಿಗೀತ ಸಾಂಸ್ಕೃತಿಕ ವೇದಿಕೆ ನಾಟಕವನ್ನು ಪ್ರದರ್ಶಿಸಿತು. ನಾಟಕ ಅಕಾಡೆಮಿ ಸದಸ್ಯರಾದ ಜಗದೀಶ್ ಜಾಲ ಹಾಗೂ ಲವಕುಮಾರ್ ಉಪಸ್ಥಿತರಿದ್ದರು.

ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ತಿಂಗಳ ಅತಿಥಿ ಗೌರವವನ್ನು ಸ್ವೀಕರಿಸಿ ಮಾತನಾಡಿದರು. ಚಿತ್ರದಲ್ಲಿ ಜಗದೀಶ ಜಾಲ, ಕೆ ವಿ ನಾಗರಾಜ ಮೂರ್ತಿ ಹಾಗೂ ಲವಕುಮಾರ್ ಇದ್ದಾರೆ.

“ಎಸ್‌ಎಫ್‌ಐ ಹೋರಾಟದ ಧ್ವಜಧಾರಿ ತಿಮ್ಮೇಗೌಡ ಇನ್ನಿಲ್ಲ”


ಸಂಚಲನ


ತುಮಕೂರು:
ಹಿರಿಯ ಕಾರ್ಮಿಕ ಹೋರಾಟಗಾರ, ಜನಪರ ವಕೀಲ ಹಾಗೂ ಎಸ್‌ಎಫ್‌ಐ ಪ್ರಬಲ ಸಂಗಾತಿ ತಿಮ್ಮೇಗೌಡ (65) ವಯೋಸಹಜ ಕಾರಣದಿಂದ ನಿಧನರಾಗಿದ್ದಾರೆ. ಅವರು ತಮ್ಮ ಇಡೀ ಜೀವನವನ್ನೂ ಸಾಮಾಜಿಕ ನ್ಯಾಯ, ಕಾರ್ಮಿಕ ಹಕ್ಕುಗಳ ರಕ್ಷಣೆಗೆ ಮೀಸಲಿಟ್ಟಿದ್ದರು.

1970ರ ದಶಕದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕುಗ್ರಾಮ ಆಲೇನಹಳ್ಳಿ-ಗೊಲ್ಲರಹಟ್ಟಿಯಲ್ಲಿ ಜನಿಸಿದ ತಿಮ್ಮೇಗೌಡ ಅವರು, ವಿದ್ಯಾರ್ಥಿ ಜೀವನದಲ್ಲೇ ಎಸ್‌ಎಫ್‌ಐನಲ್ಲಿ ಸೇರ್ಪಡೆಯಾಗಿ ವಿದ್ಯಾರ್ಥಿ ಚಳವಳಿಗಳನ್ನು ಮುನ್ನಡೆಸಿದವರು. ಬಳಿಕ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ವಿವಿಧ ಜಾಗೃತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದರು.

ಹಿರಿಯ ಸಾಹಿತಿ ಹೆಚ್.ಎಸ್. ಶಿವಪ್ರಕಾಶ್, ಲೋಹಿತಾಶ್ವ, ಸಿ.ಯತಿರಾಜು, ಡಾ. ಹೆಚ್.ಎಸ್. ನಿರಂಜನಾರಾಧ್ಯ ಮತ್ತು ಸೂರಿ ಅವರ ಜೊತೆಗೂಡಿ ಸಾಮಾಜಿಕ ಬದಲಾವಣೆಗಳ ಬಲವಾದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿ, ಕಾರ್ಮಿಕ ನಾಯಕರಾದ ಕೆ.ಆರ್. ನಾಯಕ್, ಹಾಗಲವಾಡಿ ಚನ್ನಪ್ಪ, ಮಹಮದ್ ದಸ್ತಗೀರ್, ಬಿ.ಡಿ. ರಾಮಯ್ಯರೊಂದಿಗೆ ಕೈಜೋಡಿಸಿ ಕಾರ್ಮಿಕ ಹಕ್ಕುಗಳಿಗಾಗಿ ಹೋರಾಡಿದ್ದಾರೆ.

ಸಿಪಿಐಎಂ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳಲ್ಲಿ decades‌ಗಳ ಅನುಭವ ಹೊಂದಿದ ತಿಮ್ಮೇಗೌಡ ಅವರ ಪಾರ್ಥಿವ ಶರೀರಕ್ಕೆ ನೂರಾರು ಮಂದಿ ಸಂಗಾತಿಗಳು ಅಂತಿಮ ವಂದನೆ ಸಲ್ಲಿಸಿದರು. ಅಂತ್ಯಸಂಸ್ಕಾರವನ್ನು ತಿಪಟೂರು ಬಳಿಯ ಆಲೇನಹಳ್ಳಿ-ಗೊಲ್ಲರಹಟ್ಟಿಯಲ್ಲಿ ನೆರವೇರಿಸಲಾಯಿತು.


ನಶಿಸುತ್ತಿರುವ ಮಾನವೀಯ ಸಂಬಂಧಗಳು: ಗಿರೀಶ್ ಕಾಸರವಳ್ಳಿ ವಿಷಾದ

ಕಡಿದಾಳ್ ಪ್ರಕಾಶ್ ಅವರ ಎರಡು ಕೃತಿಗಳ ಬಿಡುಗಡೆ

ತೀರ್ಥಹಳ್ಳಿ, ಮೇ 05- ಮಾನವ ಸಂಬಂಧಗಳನ್ನು ಜಾಗತೀಕರಣ ನುಂಗಿ ಹಾಕುತ್ತಿದೆ. ಸಾಮಾಜಿಕ ಚಿಂತನೆ ದೂರ ಸರಿದು ಏಕವ್ಯಕ್ತಿ ಚಿಂತನೆ ಮುನ್ನೆಲೆಗೆ ಬರುತ್ತಿದೆ. ಇಂತಹ ಕಾಲಘಟ್ಟದಲ್ಲಿ ಕಡಿದಾಳ್ ಪ್ರಕಾಶ್ ಅವರು ತಾವು ಕಂಡ ವಿಶ್ವ ಮಾನವರನ್ನು ನಮಗೆ ಪರಿಚಯಿಸಿದ್ದಾರೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಅಭಿಪ್ರಾಯಪಟ್ಟರು.

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಅಭಿರುಚಿ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಕೃತಿ ‘ನನ್ನೂರಿನ ಶ್ರೀಸಾಮಾನ್ಯರು’ಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಾಮಾನ್ಯರ ಅಸಾಮಾನ್ಯ ಬುದ್ದಿವಂತಿಕೆ, ಪ್ರಾಮಾಣಿಕತೆ, ಚಾಕಚಕ್ಯತೆಗಳ ವ್ಯಕ್ತಿತ್ವದ ಅನಾವರಣ ಕೃತಿಯಲ್ಲಿ ಬಿಂಬಿತವಾಗಿವೆ. ಗತವು ಪ್ರಸ್ತುತವಾಗುವ ಪಠ್ಯದ ಚಿತ್ರಣವನ್ನು ಕಾಣಬಹುದು. ಗತದ ನಡೆಯೊಂದಿಗೆ ಮೌಲ್ಯವನ್ನು ಬಿಚ್ಚಿಡುವ ಪ್ರಯತ್ನ ಹಾಗೂ ಸಂವಾದಕ್ಕೆ ಆಹ್ವಾನಿಸುವ ಬರವಣಿಗೆ ಕೃತಿಯಲ್ಲಿದೆ. ಸಾಂಸ್ಕೃತಿಕ ನೆಲೆಯು ಗತದ ವೈಭವೀಕರಣವಿಲ್ಲದೆ ದಾಖಲಾಗಿದೆ ಎಂದು ತಿಳಿಸಿದರು.

‘ನಾ ಕಂಡಂತೆ ತೇಜಸ್ವಿ-ಶಾಮಣ್ಣ’ ಕೃತಿಯ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ಕೃತಿಯ ಕನ್ನಡಿಯಲ್ಲಿ ತೇಜಸ್ವಿ, ಶ್ಯಾಮಣ್ಣ ಮತ್ತು ಪ್ರಕಾಶ್ ಅವರ ಪ್ರತಿಬಿಂಬವಿದೆ. ಸಂಬಂಧಗಳ ಗ್ರಹಿಸುವಿಕೆಯೊಂದಿಗೆ ಜನರ ಮೆರವಣಿಗೆ ಕಾಣಬಹುದು. ಇದೊಂದು ಜುಗಲ್‌ಬಂದಿ ಕೃತಿ. ಸಾಮಾನ್ಯ ಮತ್ತು ಅಸಾಮಾನ್ಯರ ನಡುವಿನ ಪಾತ್ರಗಳು ಚಿತ್ತಾರ ಮೂಡಿಸಿವೆ. ಓದುಗರನ್ನು ಆಕರ್ಷಿಸುವ ಗುಣ ಹೊಂದಿದೆ ಎಂದರು.

‘ಕಟ್ಟುವ ಹಾದಿಯಲ್ಲಿ ಕುವೆಂಪು ಪ್ರತಿಷ್ಠಾನದ ಉಗಮ-ವಿಕಾಸ’ ಕೃತಿ ಕುರಿತು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತನಾಡಿ ಕುವೆಂಪು ಅವರ ಕವಿಮನೆ ಸೇರಿದಂತೆ ಕುಪ್ಪಳಿಯಲ್ಲಿ ಜರುಗಿದ ಎಲ್ಲಾ ಮಹತ್ವದ ಕೆಲಸಗಳ ಹಿಂದೆ ಕಡಿದಾಳ್ ಪ್ರಕಾಶ್ ಅವರ ಮುನ್ನೋಟವಿದೆ. ಹೀಗಾಗಿ ಕವಿ ರವೀಂದ್ರರ ಶಾಂತಿ ನಿಕೇತನವನ್ನೂ ಮೀರಿ ಕುಪ್ಪಳಿ ಅಭಿವೃದ್ಧಿಗೊಂಡಿದೆ ಎಂದರು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಕಡಿದಾಳ್ ಪ್ರಕಾಶ್, ಅಭಿರುಚಿ ಗಣೇಶ್ ಉಪಸ್ಥಿತರಿದ್ದರು. ಲೇಖಕ ಬಿ.ಆರ್. ಸತ್ಯನಾರಾಯಣ್ ಕಾರ್ಯಕ್ರಮ ನಿರ್ವಹಿಸಿದರು.

ಕೃತಿ ವಿವರ: ನನ್ನೂರಿನ ಶ್ರೀಸಾಮಾನ್ಯರು
ಪುಟ: 160
ಬೆಲೆ: ರೂ 175
ಪ್ರ: ಅಭಿರುಚಿ

ಕೃತಿ: ನಾ ಕಂಡಂತೆ ತೇಜಸ್ವಿ ಶಾಮಣ್ಣ
ಪುಟ: 176
ಬೆಲೆ: ರೂ 175
ಪ್ರ: ಅಭಿರುಚಿ

ಕಾಯಕ-ಗುರುವಿನ ಜಯಂತಿ

0

ತುಮಕೂರು : ನಗರದ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್(ರಿ) ವತಿಯಿಂದ ಮೇ-1’ರ ಗುರುವಾರದಂದು ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು ಬಸವ-ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚುಮಂದಿ ವಿಶೇಷಚೇತನ-ಅಂಗವಿಕಲರು ಹಾಗೂ ಹತ್ತಾರು ಮಂದಿ ಪರಿತ್ಯಕ್ತ ವಯೋವೃದ್ಧರು ಉಪಸ್ಥಿತರಿದ್ದರು.

ಗಿಡಕ್ಕೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ ಸಿ ಶೈಲಾ ನಾಗರಾಜ್’ರವರು, ವಿಶೇಷಚೇತನರ ಕ್ಷೇಮಾಭಿವೃದ್ಧಿಗಾಗಿ ಟ್ರಸ್ಟೊಂದನ್ನು ಸ್ಥಾಪಿಸಿ, ಸ್ವತಃ ಅಂಗವಿಕಲರಾಗಿದ್ದರೂ ಪರಿತ್ಯಕ್ತ ವಯೋವೃದ್ಧರು ಹಾಗೂ ವಿಶೇಷಚೇತನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಉತ್ಸಾಹಿ ಯುವಕವಿ ಮತ್ತು ಸಂಘಟಕ ಬಾಬುಟ ಮನಸೇ’ರವರ ಮಾನವೀಯ ಕಳಕಳಿಯನ್ನು ಮನಸಾರೆ ಶ್ಲಾಘಿಸಿದರು. ಬಾಬು ಮನಸೇ ತರಹದ ಯುವಕರ ಬದ್ಧತೆ ಮತ್ತು ಕಳಕಳಿಯಲ್ಲಿ ನಾವು ಬಸವ-ಸ್ಫೂರ್ತಿಯನ್ನು ಇಂದು ಕಾಣಬೇಕಾಗಿದೆ ಎಂದು ಹಾರೈಸಿದರು.

ಶೋಷಿತ ಹಾಗೂ ದುಃಖಿತ ಸಮಾಜದಲ್ಲಿ ಮಾನವೀಯ-ಚೈತನ್ಯದ ಅಪೂರ್ವ ಶಕ್ತಿಯಂತೆ ಹನ್ನೆರಡನೇ ಶತಮಾನದಲ್ಲಿ ಸಂಭವಿಸಿದ ಬಸವಣ್ಣ ಹಾಗೂ ಶರಣ ಚಳವಳಿಯ ಮಹತ್ತತೆಯನ್ನು ಅವರು ವಿವರಿಸಿದರು. ಮೇಲು-ಕೀಳು, ಪುರುಷ-ಮಹಿಳೆ, ಶ್ರೇಷ್ಠ-ಕನಿಷ್ಠ, ಜಾತಿ-ಧರ್ಮ ಎಲ್ಲದರ ಆಚೆಗೆ ಚಾಚಿಕೊಂಡು ಹಬ್ಬಿದ ಬಸವಣ್ಣನವರ ಜಾತ್ಯತೀತ ಜನಪರ ಆಂದೋಲನವನ್ನು ಅವರು ಸ್ಮರಿಸಿದರು. ಅದೇರೀತಿ, ಕಾಯಕಯೋಗಿಗಳ ಕುರಿತು ತತ್ವ ರೂಪಿಸಿದ ಬಸವಣ್ಣನವರ ಜಯಂತಿ ಮತ್ತು ವಿಶ್ವ ಕಾರ್ಮಿಕ ದಿನಾಚರಣೆ ಎರಡನ್ನೂ ಒಟ್ಟಿಗೇ ಆಚರಿಸುತ್ತಿರುವುದರ ಪ್ರಸ್ತುತತೆಯನ್ನು ಅವರು ಮೆಚ್ಚಿ, ಬಾಬು ಮನಸೇ’ರವರ ಉತ್ಸಾಹವನ್ನು ಪ್ರಶಂಸಿಸಿದರು. ಕಡೆಯಲ್ಲಿ, ಕಾರ್ಮಿಕರ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಬಸವಣ್ಣನವರ ವಚನವನ್ನು ವಾಚಿಸಿದರು.

ಸಿಐಟಿಯು-ತುಮಕೂರು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಬೇಡುವುದು ಮತ್ತು ನೀಡುವುದು ಎಂಬುದಷ್ಟೇ ಮಾನವ-ಕಳಕಳಿಯ ಮಾನದಂಡವಾಗಬಾರದು. ಜೊತೆಗೆ ನಿಲ್ಲುವುದು ಮತ್ತು ಜೀವಂತ ಇರುವನಕ ಜೊತೆ ನಡೆಯುವುದು ಬದ್ಧತೆಯಾಗಬೇಕು. ನೀಡಿದ್ದನ್ನು ಫೋಟೊ-ವಿಡಿಯೋ ಮಾಡಿ ದಾಖಲಿಸಿಕೊಳ್ಳುವುದಷ್ಟೇ ಸೇವೆ ಆಗಬಾರದು. ದಾನ, ಸೇವೆ, ಸಹಾಯ ಎಂಬುದು ದಾಸ್ತಾನು ಮಾಡಿಡಬಹುದಾದ ಸರಕಲ್ಲ. ಅದು, ಎಂದಿಗೂ ಸಶೇಷ. ಹಾಗಾಗಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿ ನಿಲ್ಲುವುದೇ ನಿಜವಾದ ಮಾನವಸೇವೆ. ಬಸವಣ್ಣನವರು ನಿರೂಪಿಸಿ ಹೋದಂತೆ ‘ಕಾಯಕದಿಂದಲೇ ಕೈಲಾಸ’ದ ಅವಕಾಶಗಳು ತೆರೆದುಕೊಳ್ಳುವಂತಹ ಸಾಧ್ಯತೆಗಳಿಗೆ ಹೆಗಲೆಣೆಯಾಗಿ ನಿಲ್ಲಬೇಕು. ಕಾಯಕ-ಗುರುವಿನ ಜಯಂತಿ ಮತ್ತು ಕಾರ್ಮಿಕರ ದಿನ ಎರಡನ್ನೂ ಒಟ್ಟಿಗೇ ಆಚರಿಸುವ ಅಪರೂಪದ ಆಶಯಗಳನ್ನು ಹೊಂದಿರುವ ಬಾಬು ಮನಸೇ ಮತ್ತು ಪ್ರೇರಣಾ ಸಂಸ್ಥೆಯ ಜೊತೆ ತಾನಿರುವವರೆಗೂ ಸದಾಕಾಲ ನಿಲ್ಲುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.

ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಶ್ರೀಮತಿ ಶಮಂತ ಶ್ರೀಗಣೇಶ್’ರವರು ಮಾತನಾಡುತ್ತಾ, ಇಂದು ನಾವೆಲ್ಲರೂ ಇಲ್ಲಿ ಹೀಗೆ ಸೇರಲು ಬಸವಣ್ಣನವರೇ ಆದ್ಯಪುರುಷರು. ಮಹಿಳೆಯೂ ಜನರನ್ನು ಉದ್ದೇಶಿಸಿ ಮಾತನಾಡುವಷ್ಟು ಸಮಾನತೆಯನ್ನು ಸಮಾಜಕ್ಕೆ ಕಲ್ಪಿಸಿಕೊಟ್ಟ ಮಹಾನುಭಾವರು ಬಸವಣ್ಣ. ಅಂತಹ ಮಹಾನುಭಾವರ ಜಯಂತಿಯನ್ನು ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಜೊತೆಗೆ ಆಚರಿಸಿಕೊಳ್ಳುತ್ತಿರುವುದು ನನಗೆ ಸಂತಸ ತಂದಿದೆ ಎಂದರು. ಕಡೆಯಲ್ಲಿ, ಅವರು ವಚನವೊಂದನ್ನು ಹಾಡಿ ಸಭಿಕರನ್ನು ಗದ್ಗದಗೊಳಿಸಿದರು.

ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್’ನ ಸಂಸ್ಥಾಪಕ ಬಾಬು ಮನಸೇ ಮಾತನಾಡಿ, ತಮ್ಮ ಸಂಸ್ಥೆಯಲ್ಲಿರುವ ವಯೋವೃದ್ಧರು ಹಾಗೂ ವಿಕಲಚೇತನರಿಗೆ ಶ್ರೀಮತಿ ಶಮಂತ ಶ್ರೀಗಣೇಶ್’ರವರು ಬಟ್ಟೆಗಳನ್ನು ತಂದು ವಿತರಿಸುತ್ತಿರುವುದನ್ನು ಕೃತಙ್ಞತೆಯಿಂದ ನೆನೆದರು. ಶ್ರೀಮತಿ ಬಿ ಸಿ ಶೈಲಾ ನಾಗರಾಜ್ ಹಾಗೂ ಸೈಯದ್ ಮುಜೀಬ್’ರವರ ಸಹಾಯ-ಸಹಕಾರಗಳನ್ನು ನೆನೆದ ಅವರು, ಅಂಗವಿಕಲರ ಸ್ವಾವಲಂಬಿ ಬದುಕಿಗಾಗಿ ಕೂತಲ್ಲೇ ನಿರ್ವಹಿಸಬಹುದಾದ ಬಗೆಬಗೆಯ ಕೆಲಸ-ಕಾರ್ಯಗಳ ಕೌಶಲ್ಯ-ತರಬೇತಿ ಕೊಡಿಸುವ ಕಾರ್ಯಾಗಾರ ರೂಪಿಸಿಕೊಡುವ ಬಗ್ಗೆ ಕೇಳಿಕೊಂಡರು. ಹಾಗೂ ಸರ್ಕಾರಿ ಕಚೇರಿಗಳಲ್ಲಿ ನೇಮಕವಾಗುತ್ತಿರುವ ಡೇಟಾ-ಆಪರೇಟರ್ ತರಹದ ಕೆಲಸ-ಕಾರ್ಯಗಳಿಗೆ ನಮ್ಮ ವಿಕಲಚೇತನರನ್ನು ನೇಮಿಸಿಕೊಳ್ಳುವಂತಹ ಪ್ರಾತಿನಿಧ್ಯತೆ ಸಾಧ್ಯವಾಗಬೇಕಿದೆ, ಈ ದಿಸೆಯಲ್ಲಿ ನಮಗೆ ಸಹಾಯ ಮಾಡಿ ಎಂದು ಎಲ್ಲರಲ್ಲಿ ಕೇಳಿಕೊಂಡರು.

ಕಡೆಯಲ್ಲಿ, ಶ್ರೀಮತಿ ಶಮಂತ ಶ್ರೀಗಣೇಶ್’ರವರು ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ತಾವು ತಂದಿದ್ದ ಬಟ್ಟೆಗಳನ್ನು ವಿತರಿಸಿದರು. ಪ್ರೇರಣಾ ಸಂಸ್ಥೆಯ ವತಿಯಿಂದ ಎಲ್ಲರಿಗೂ ಸಿಹಿ ಹಂಚಲಾಯಿತು.

ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) ಸಂಸ್ಥೆಯ ಇಂತಹ ಸತ್ಕಾರ್ಯಕ್ಕೆ
ಸಹಾಯ-ಸಹಕಾರಗಳನ್ನು ನೀಡಬಯಸುವವರು ನೇರವಾಗಿ ಸಂಸ್ಥೆಯ ಕಚೇರಿಗೆ ಭೇಟಿ ನೀಡಬಹುದು. ನಗರದ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಬಿಸಿಎಂ ವುಮೆನ್ಸ್ ಹಾಸ್ಟೆಲ್ ಎದುರಿನ ಆಂತೋಣಿ-ಚರ್ಚ್ ಪಕ್ಕದ ಕಟ್ಟಡದಲ್ಲಿ ‘ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್(ರಿ) ಕಚೇರಿ ಹಾಗೂ ಆಶ್ರಮ’ ಎರಡೂ ಇವೆ. ಜೊತೆಗೆ, ಪ್ರೇರಣಾ ಬಾಬು(ಮನಸೇ) ರವರ +91 86601 78143 ಮೊಬೈಲ್ ಸಂಖ್ಯೆಯನ್ನೂ ಸಂಪರ್ಕಿಸಬಹುದು.

ಸಂಚಲನ