Friday, December 8, 2023
spot_img
Home Blog

ತುರುವೇಕೆರೆಯಲ್ಲಿ ಕಂಡ ಕೃಷ್ಣೇಗೌಡನ ಆನೆ

0

ನಾಟಕ ಕಲೆ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುತ್ತದೆ; ಪ್ರಾಂಶುಪಾಲ ಎಸ್.ಎಂ.ಕಾಂತರಾಜು

ತುರುವೇಕೆರೆ: ಪಟ್ಟಣದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಬೋಳೆಶಂಕರ ಹಾಗು ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ ಮಂಗಳವಾರ ಸಂಜೆ ಜರುಗಿತು.

ನಾಟಕಕ್ಕೂ ಮುನ್ನಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಾಂಶುಪಾಲ ಎಸ್.ಎಂ.ಕಾಂತರಾಜು ಮಾತನಾಡಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಠ್ಯ ವಿಷಯದಲ್ಲಿನ ‘ಬೋಳೆಶಂಕರ ಹಾಗು ಕೃಷ್ಣೇಗೌಡನ ಆನೆ’ ಈ ನಾಟಕವನ್ನು ರತ್ನ ನಗೇಶ್ ನೇತೃತ್ವದ ನಂದನ ತಂಡದ ಕಲಾವಿದರು ಅತ್ಯಂತ ಮನಮೋಹಕವಾಗಿ ಪ್ರದರ್ಶಿಸಿದ್ದಾರೆ.

ಇಂತಹ ದೃಶ್ಯ ಕಲೆಗಳು ವಿದ್ಯಾರ್ಥಿಗಳ ಮನಸ್ಸನ್ನು ಬಹು ಬೇಗ ಆಕರ್ಷಿಸಿ ಅವರಲ್ಲಿ ಸೃಜನಶೀಲಾತ್ಮಕ ಚಿಂತನೆಯನ್ನು ಬೆಳೆಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯಕ್ಕಿಂತಲೂ ದೃಶ್ಯ ಮಾದ್ಯಮದ ಈ ನಾಟಕಗಳನ್ನು ತೋರಿಸಿ ಅವರಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಉಂಟು ಮಾಡುವ ಹಾಗು ವಿಶೇಷವಾಗಿ ಮಕ್ಕಳಲ್ಲಿ ದೇಶೀಯ ಕಲೆಯಾದ ರಂಗಭೂಮಿಯ ಬಗೆಗಿನ ಹೆಚ್ಚಿನ ಆಸ್ಥೆ ಬೆಳೆಸುವ ಉದ್ದೇಶದಿಂದ ಇಂತಹ ಪ್ರಯತ್ನ ಮಾಡಲಾಗಿದೆ ಎಂದರು.

ಇದೇ ವೇಳೆ ಇಂತಹ ಕಾರ್ಯಕ್ರಮ ಆಯೋಜಿಸಲು ಮುಂದಾಳತ್ವ ವಹಿಸಿದ್ದ ಉಪನ್ಯಾಸಕಿ ಹಂಸದಿಲೀಪ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರುಗಳಾದ ಪ್ರಕಾಶ್, ಡಾ.ಚಂದ್ರಯ್ಯ, ಹರ್ಷಾ ಗೊಪ್ಪೇನಹಳ್ಳಿ ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಹೇಮಾವತಿ ನಾಲೆಗೆ ಭೂಮಿ ಹೋಗಿದೆ, ಪರಿಹಾರ ಕೊಟ್ಟಿಲ್ಲ. ಏನ್ ಮಾಡ್ಲಿ?

0

ನಮ್ಮ ಅನುಮತಿ ಇಲ್ಲದೆಯೇ ನಮ್ಮ ಭೂಮಿಯಲ್ಲಿ ಹೇಮಾವತಿ ಕುಡಿಯುವ ನೀರಿನ ಪೈಪ್ ಲೈನ್ ತೆಗೆದುಕೊಂಡು ಹೋಗಿರುತ್ತಾರೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಏನೇನೋ ಸಬೂಬು ಹೇಳುತ್ತಾರೆ. ಪರಿಹಾರ ಸಹ ನೀಡಿರುವುದಿಲ್ಲ. ಸಣ್ಣ ಪೈಪು. ಹೆಚ್ಚು ಹಾನಿಯಾಗಿಲ್ಲ, ಊರಿನ ಕೆಲಸ ಬಿಡಿ ಎನ್ನುತ್ತಾರೆ. ಸುಮಾರು ಮೂರುವರೆ ಕೋಟಿಯ ಯೋಜನೆ. ಈ ಕಾಮಗಾರಿಯಿಂದ ನನ್ನ ತೆಂಗು, ಅಡಿಕೆ ಮರಗಳು ಹೋಗಿವೆ. ಈಗ ನಾನೇನು ಮಾಡಲಿ?

ಚಿಕ್ಕಸ್ವಾಮಿ ಗೌಡ, ಕೋಡಿಹಳ್ಳಿ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ

ಯಾವುದೇ ಇಲಾಖೆಯ ಅಧಿಕಾರಿ ನಿಮ್ಮ ಅನುಮತಿ ಇಲ್ಲದೇ ನಿಮ್ಮ ತೋಟದಲ್ಲಿ ಕೆಲಸ ಮಾಡಿಸಿರುವುದು ಟ್ರಸ್ ಪಾಸ್ ಕಾಯ್ದೆ ಅಡಿ ಅಪರಾಧವಾಗಲಿದೆ. ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದು.

RFCTLARRA-13 ಹೊಸ ಭೂಸ್ವಾಧೀ‌ನ ಕಾಯ್ದೆ ಪ್ರಕಾರ ರೈತರ ಭೂಮಿಯಲ್ಲಿ ಯೋಜನೆಗಳನ್ನು ಮಾಡಬೇಕಾದರೆ, ಸಾರ್ವಜನಿಕ ಉದ್ದೇಶವಾಗಿದ್ದರೆ ಸರ್ಕಾರ ಮೊದಲಿಗೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕಾಗುತ್ತದೆ. ಸಾಮಾಜಿಕ ಪರಿಣಾಮ ಅಧ್ಯಯನ ನಡೆಸಿ ಸೂಕ್ತ ಪರಿಹಾರದ ಅವಾರ್ಡ್ ಘೋಷಿಸಬೇಕಾಗುತ್ತದೆ. ತದನಂತರದಲ್ಲಿ ಕಾಮಗಾರಿ ಆರಂಭಿಸಬೇಕಾಗುತ್ತದೆ.
ನಿಮ್ಮ ವಿಚಾರದಲ್ಲಿ ಇದು ಭೂ ಸ್ವಾಧೀನ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ನೀವು, ಮೊದಲಿಗೆ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಸಂಬಂಧಿಸಿದ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದು ಕೂಡಲೇ ಪರಿಹಾರ ನೀಡುವಂತೆ ಕೋರಿ. ಅವರು ಅದಕ್ಕೆ ಸ್ಪಂದಿಸದಿದ್ದರೆ ಪರಿಹಾರ ಕೋರಿ ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಬಹುದಾಗಿದೆ.

@ ನಾನು ನನ್ನ ಸ್ನೇಹಿತನಿಗೆ ದಿಚಕ್ರ ವಾಹನವನ್ನು ಮಾರಾಟ ಮಾಡಿ ನಾಲ್ಕು ವರ್ಷಗಳಾದವು. ಆದರೆ ಈಗ ಕ್ರಿಮಿನಲ್ ಪ್ರಕರಣದಲ್ಲಿ ವಾಹನವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮುಂದೇನಾಗಬಹುದು?

ಜಯಶಂಕರ್, ಮತ್ತಿ ಘಟ್ಟ,

ಆರ್ ಟಿಒ ನಿಯಮಾವಳಿ ಪ್ರಕಾರ ಯಾವುದೇ ವಾಹನವನ್ನು ಮಾರಾಟ ಮಾಡಿದ ಕೂಡಲೇ ವಾಹನವನ್ನು ಮಾಲೀಕತ್ವವನ್ನು ಬದಲಾವಣೆ ಮಾಡಬೇಕು. ಆದರೆ ಸಾಕಷ್ಟು ಜನರು ಈ ರೀತಿ ಮಾಡುವುದಿಲ್ಲ.

ಇಂಥ ಘಟನೆಗಳು ಘಟಿಸಿದಾಗ ಅಥವಾ ಅಪಘಾತಗಳು ಸಂಭವಿಸಿದಾಗ ಮೂಲ ಮಾಲೀಕನೆ ಹೊಣೆ ಹೊರ ಬೇಕಾಗುತ್ತದೆ.
ನಿಮ್ಮ ವಿಚಾರದಲ್ಲೂ ಇದೇ ಆಗಿದೆ.

ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಕೆಳಗೆ ಅರ್ಜಿ ಸಲ್ಲಿಸಿ ವಾಹನವನ್ನು ಮರುಳಿ ಪಡೆದುಕೊಳ್ಳಬಹುದು.
ಪೊಲೀಸರು ವಿಚಾರಣೆಗೆ ಕರೆದಾಗ ಧೈರ್ಯ ವಾಗಿ ಹೋಗಿ ಇರುವ ವಿಷಯವನ್ನು ಹೇಳಿ. ನಿಮ್ಮ ಹೇಳಿಕೆಯ ಆಧಾರದಲ್ಲಿ ನಿಮಗೆ ತೊಂದರೆಯಾಗಲಾರದು. ಸ್ಥಳೀಯ ವಕೀಲರನ್ನು ಸಂಪರ್ಕಿಸಿ.

ಬಿ.ಸುರೇಶಗೌಡರಿಂದ ಮೋದಿ, ಶಾ, ನಡ್ಡಾಗೆ ಅಭಿನಂದನೆ

0

 

 

 ತುಮಕೂರು : ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು ಈ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವಕ್ಕೆ ಮತ್ತು ಅವರ ನೇತೃತ್ವದ ಅಭಿವೃದ್ಧಿ ಯೋಜನೆಗಳಿಗೆ ಕೊಟ್ಟ ಜನಾದೇಶವಾಗಿದೆ. ಈ ಫಲಿತಾಂಶದ ಮೂಲಕ ಜನರು ಕಾಂಗ್ರೆಸ್‌ ಪ್ರಣೀತ ಹುಸಿ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ್ದಾರೆ.

 

 ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಇಡೀ ದೇಶದಾದ್ಯಂತ ಸಾಧಿಸಲಿರುವ ದಿಗ್ವಿಜಯಕ್ಕೆ ಇದು ಮುನ್ನುಡಿಯಂತಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದೆ. ರಾಜಸ್ತಾನ ಮತ್ತು ಛತ್ತೀಸಗಡದಲ್ಲಿ ಜನರು ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಬಿಜೆಪಿಗೆ ಮರಳಿ ಅಧಿಕಾರ ಕೊಟ್ಟಿದ್ದಾರೆ. ಅಂದರೆ ಇದು ಬಿಜೆಪಿಗೆ ಸಿಕ್ಕ ಸಕಾರಾತ್ಮಕ ಜಯವಾಗಿದೆ ಮತ್ತು ಇದುವರೆಗೆ ಕಾಂಗ್ರೆಸ್‌ ಪಕ್ಷ ಮಾಡಿಕೊಂಡಿರುವ ಬಂದಿರುವ ನಕಾರಾತ್ಮಕ ರಾಜಕಾರಣವನ್ನು ಜನರು ಧಿಕ್ಕರಿಸಿರುವುದರ ದ್ಯೋತಕವಾಗಿದೆ.

 

 ಭಾರತ ದೇಶವನ್ನು ಜಾಗತಿಕ ಐದು ಬಲಿಷ್ಠ ಆರ್ಥಿಕತೆಗಳಲ್ಲಿ ಒಂದಾಗಿ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಕೀರ್ತಿಯನ್ನು ಪ್ರಪಂಚದ ಬಲಿಷ್ಠ ರಾಷ್ಟ್ರಗಳ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರ ಜತೆಗೆ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಕೈ ಜೋಡಿಸಿ ರೂಪಿಸಿದ ಚುನಾವಣಾ ಕಾರ್ಯತಂತ್ರ ಕಾಂಗ್ರೆಸ್‌ ಮಾತ್ರವಲ್ಲ ಇತರ ಎಲ್ಲ ವಿರೋಧ ಪಕ್ಷಗಳಿಗೆ ಮರ್ಮಾಘಾತ ಕೊಟ್ಟಿದೆ. ಇಂಥ ಅಮೋಘ ಗೆಲುವನ್ನು ಸಾಧ್ಯ ಮಾಡಿದ ಈ ಮೂವರು ಅಪ್ರತಿಮ ನಾಯಕರಿಗೂ ಹಾರ್ದಿಕ ಅಭಿನಂದನೆಗಳು.

 

 ಕಾಂಗ್ರೆಸ್‌ ಪಕ್ಷವು ಕೊಟ್ಟ ಸುಳ್ಳು ಗ್ಯಾರಂಟಿ ಯೋಜನೆಗಳಿಗೆ ಜನರು ಮರುಳಾಗಲಿಲ್ಲ. ದೇಶದ ಅಭಿವೃದ್ಧಿ ಮುಖ್ಯ, ದುಡಿಯುವ ಕೈಗಳಿಗೆ ಕೆಲಸ ಮುಖ್ಯ ಎಂಬುದನ್ನು ಅವರು ಈ ಫಲಿತಾಂಶದ ಮೂಲಕ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳಿಗೆ ಸಾರಿ ಹೇಳಿದ್ದಾರೆ.

 

ಕಾಂಗ್ರೆಸ್‌ನ ನಾಯಕರಾದ ರಾಹುಲ್‌ ಗಾಂಧಿಯವರು ಚುನಾವಣಾ ಸಮಯದಲ್ಲಿ ಪ್ರಧಾನಿಯವರ ವಿರುದ್ಧ ʻದುರದೃಷ್ಟ (ಪನೌತಿ)ʼ ಎಂಬ ಹೊಣೆಗೇಡಿತನದ ಟೀಕೆ ಮಾಡಿದ್ದರು. ಈಗ ಸ್ವತಃ ರಾಹುಲ್‌ ಗಾಂಧಿಯವರು ತಮ್ಮ ಪಕ್ಷಕ್ಕೆ ಎಂಥ ʼದುರದೃಷ್ಟʼ ಎಂಬುದು ಸಾಬೀತಾಗಿದೆ.

 

 ಅವರು, ಅವರ ಸೋದರಿ ಪ್ರಿಯಾಂಕ ಮತ್ತು ಅವರ ತಾಯಿ ಸೋನಿಯಾ ಗಾಂಧಿಯವರು ಕಾಂಗ್ರೆಸ್‌ ಪಕ್ಷಕ್ಕೆ ಯಾವ ಗೆಲುವನ್ನೂ ತಂದುಕೊಡಲು ಸಾಧ್ಯವಾಗಿಲ್ಲ. ಅದಕ್ಕೆ ಅವರು ಮಾಡುತ್ತಿರುವ ನಕಾರಾತ್ಮಕ ರಾಜಕೀಯವೇ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ವೈಯಕ್ತಿಕ ಮತ್ತು ನಿರಾಧಾರದ ಆರೋಪಗಳನ್ನು ಜನರು ಸಹಿಸುವುದಿಲ್ಲ ಎಂದು ಇನ್ನಾದರೂ ಕೇಂದ್ರದ ಮತ್ತು ರಾಜ್ಯದ ಕಾಂಗ್ರೆಸ್‌ ನಾಯಕರು ಅರ್ಥ ಮಾಡಿಕೊಳ್ಳಬೇಕು.

 

 ರಾಜಸ್ಥಾನ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಒಳಜಗಳ, ಅಧಿಕಾರಕ್ಕಾಗಿ ನಡೆದ ಕಚ್ಚಾಟ ಆ ಪಕ್ಷಕ್ಕೆ ಮುಳುವಾಗಿದೆ. ಇಲ್ಲಿಯೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಅದೇ ಮುಸುಕಿನ ಗುದ್ದಾಟ ನಡೆದಿದೆ. ಅದು ಅವರ ಪಕ್ಷಕ್ಕೆ ಮುಳುವಾಗಲಿದೆ.

 

 ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತವು ಜನರನ್ನು ಭ್ರಮ ನಿರಸನದಲ್ಲಿ ಮುಳುಗಿಸಿದೆ. ಯಾಕಾದರೂ ನಾವು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದೆವು ಎಂದು ಪರಿತಾಪ ಪಡುತ್ತಿದ್ದಾರೆ. ಅವರ ಸಿಟ್ಟು ಮತ್ತು ಆಕ್ರೋಶ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವ್ಯಕ್ತವಾಗಲಿದೆ.

  

 ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸಗಡ ರಾಜ್ಯಗಳ ಫಲಿತಾಂಶ ರಾಜ್ಯ ಬಿಜೆಪಿಯಲ್ಲಿ ಹೊಸ ಹುರುಪನ್ನು ಮತ್ತು ಹುಮ್ಮಸ್ಸನ್ನು ತುಂಬಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ನೇತೃತ್ವದಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಾದಿಯಾಗಿ ಎಲ್ಲ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಕರ್ನಾಟಕದ ಎಲ್ಲ ಇಪ್ಪತ್ತೆಂಟು ಸೀಟುಗಳಲ್ಲಿ ಕಾಂಗ್ರೆಸ್‌ ಅನ್ನು ಪರಾಜಯಗೊಳಿಸಿ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಮೂಲಕ ನಾವು ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಜೆ.ಪಿ.ನಡ್ಡಾ ಅವರ ಕೈ ಬಲಪಡಿಸುತ್ತೇವೆ.

ರಾಜಕಾರಣ ನನ್ನ ಆದ್ಯತೆಯಲ್ಲ: ನಾಡೋಜ ಡಾ ವೂಡೇ ಪಿ ಕೃಷ್ಣ

0

ಕಳೆದ ಸಂಚಿಕೆಯಿಂದ…….

ಯುವಜನ ಸೇವೆ.

ನಮ್ಮ ಸಮಾಜದ ನಾಳಿನ ಪ್ರಜೆಗಳಾದ ಇಂದಿನ ಯುವಜನಾಂಗದ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಅಪಾರ ಆಸಕ್ತಿಯಿರುವ ಡಾ. ಕೃಷ್ಣ ಅವರು ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಾ, ವಿವಿಧ ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ. ಯುವಶಕ್ತಿಯನ್ನು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸುವ ಅಂತಹ ಕಾರ್ಯಕ್ರಮಗಳಲ್ಲಿ ಮತ್ತು ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೇರಕರಾಗಿದ್ದಾರೆ. ಯುವಜನರ ಶ್ರೇಯೋಭಿವೃದ್ಧಿಗಾಗಿ ಯೂತ್ ಹಾಸ್ಟೆಲ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷರಾಗಿರುವ ಇವರು ಹಿಮಾಲಯ ಟ್ರೆಕ್ಕಿಂಗ್ (ಚಾರಣ) ಕಾರ್ಯಕ್ರಮಗಳೂ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಡ್ವೆಂಚರ್ ಕ್ಲಬ್‌ಗಳನ್ನು ರೂಪಿಸುವಲ್ಲಿ ಶ್ರಮಿಸಿದ್ದಾರೆ. ಇವರು ನವಜೀವನ ಫಿಸಿಕಲ್ ಕಲ್ಟರ್ ಇನ್‌ಸ್ಟಿಟ್ಯೂಟ್‌ನ ಉಪಾಧ್ಯಕ್ಷರೂ ಹೌದು. ಈ ಸಂಸ್ಥೆಯು ಯುವಕರಿಗಾಗಿ ಉಚಿತ ವ್ಯಾಯಾಮ ಶಾಲೆ, ವಿದ್ಯಾರ್ಥಿನಿಲಯ ಹಾಗೂ ಒಂದು ಚಿಕಿತ್ಸಾಲಯವನ್ನು ನಡೆಸುತ್ತಿದೆ. 1863ರಲ್ಲಿ ಪ್ರಾರಂಭಗೊಂಡ ಒಂದು ಸೇವಾಸಂಸ್ಥೆ- ಶ್ರೀನಿವಾಸ ಮಂದಿರಮ್ ಧರ್ಮಸಂಸ್ಥೆ. ಡಾ. ಕೃಷ್ಣ ಅವರು ಇದರ ಆಡಳಿತ ಮಂಡಳಿಯಲ್ಲಿ ಸರ್ಕಾರದಿಂದ ನಾಮನಿರ್ದೇಶನ ಗೊಂಡ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ಯುವಜನ ಸೇವಾಕ್ಷೇತ್ರಕ್ಕೆ ಇವರು ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರವು 1992ರಲ್ಲಿ ಇವರಿಗೆ ‘ರಾಜ್ಯ ಯುವ ಪ್ರಶಸ್ತಿ’ಯನ್ನಿತ್ತು ಸತ್ಕರಿಸಿದೆ.

ಇವರು ರಾಜಕೀಯವಾಗಿ ಬೆಳೆಯಬಹುದಿತ್ತಾದರೂ, ‘ನನಗೆ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಇಷ್ಟ. ಹಾಗಾಗಿ ರಾಜಕಾರಣ ನನ್ನ ಆದ್ಯತೆಯಲ್ಲ’ ಎಂದು ಪ್ರಾಮಾಣಿಕವಾಗಿ ನುಡಿಯುತ್ತಾರೆ. ಪರಿಸರದ ಬಗ್ಗೆ, ಕಾನೂನಿನ ಅನುಕೂಲತೆ-ಅನಾನುಕೂಲತೆಗಳ ಬಗ್ಗೆ, ಗಾಂಧೀ ವಿಚಾರಧಾರೆಯ ಬಗ್ಗೆ ನಿರರ್ಗಳವಾಗಿ ಮನಮುಟ್ಟುವಂತೆ, ಕೇಳುಗರಿಗಿಷ್ಟವಾಗುವಂತೆ ಮಾತನಾಡಬಲ್ಲರು. ಹಲವು ಹತ್ತು ಪ್ರತಿಷ್ಠಿತ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿರುವ ಕೃಷ್ಣ ಅವರದ್ದು ಬಹುಮುಖ ಅನ್ನುವುದಕ್ಕಿಂತ ಶತಮುಖ ಪ್ರತಿಭೆ ಎಂದರೆ ಮಾತ್ರ ಸರಿಹೋದೀತು.

ಸದಾಶಿವನಗರ ವಾಸಿಗಳಿಗೆ ಸಾಮಾನ್ಯ ಜನರ ನೋವು-ನಲಿವು, ಕಷ್ಟ-ಸುಖ ಅರ್ಥವಾಗುವುದು ಕಷ್ಟ ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ಅಲ್ಲಿನ ಹೃದಯ ಭಾಗದಲ್ಲಿದ್ದುಕೊಂಡೇ ರಚನಾತ್ಮಕ ಕಾರ್ಯಗಳಲ್ಲಿ ವೈಯಕ್ತಿಕವಾಗಿ ಮತ್ತು ವೂಡೇ ಪ್ರತಿಷ್ಠಾನದ ಮುಖಾಂತರ ತೊಡಗಿಸಿಕೊಂಡಿರುವ ಕೃಷ್ಣ, ಸದಾಶಿವನಗರ ಯುವಕ ಸಂಘದ ಸಂಸ್ಥಾಪಕ ಸದಸ್ಯರಾಗಿ ಹಲವು ವರ್ಷಗಳಿಂದ ಅದರ ಅವಿಭಾಜ್ಯ ಅಂಗವಾಗಿ ದುಡಿಯುತ್ತಿರುವ ಅವರ ಪ್ರಾಮಾಣಿಕತೆ ಅನನ್ಯವಾದುದು.

ಹತ್ತು ಹಲವು ಪದವಿಗಳನ್ನು ಪಡೆದು ವೃತ್ತಿಯಲ್ಲಿ ಇಂಜಿನಿಯರ್ ಎಂದು ಕರೆಸಿಕೊಂಡು ಮನೆಯಲ್ಲೇ ಕುಳಿತು ಸುಖಪಡುವ ಎಲ್ಲ ಸೌಲಭ್ಯಗಳಿದ್ದರೂ ಕೃಷ್ಣ ಜನಸಾಮಾನ್ಯರಿಗಾಗಿ ಸ್ಪಂದಿಸುತ್ತಾರಲ್ಲ ಅದೇ ವೂಡೇ ವಂಶದ ವಿಶೇಷ ಎನ್ನಬಹುದು. ಇವರ ಇಡೀ ಮನೆತನವೇ ಸಮಾಜ ಸೇವೆಯಲ್ಲಿ

ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಜನಾನುರಾಗಿಯಾಗಿ ಸೇವೆ ಮಾಡಲು ರಾಜಮಾರ್ಗವನ್ನು ಹಾಕಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಅದನ್ನು ನಿರ್ವಂಚನೆಯಿಂದ ಡಾ.ಕೃಷ್ಣರವರು ನೆರವೇರಿಸುತ್ತಿದ್ದಾರೆ.

ಅವರು ವಿದ್ಯಾರ್ಥಿಯಾಗಿದ್ದಾಗಲೇ ಸಾರ್ವಜನಿಕ ಕಾಳಜಿಯ ಪತ್ರಗಳನ್ನು ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಗಳ ‘Letters to the Editor’ ಕಾಲಂಗೆ ಸತತವಾಗಿ ಬರೆಯುವ ಹವ್ಯಾಸ ಅವರದಾಗಿತ್ತು. ಇಂಥ ನೂರಾರು ಪತ್ರಗಳು ಅವರ ಸೇವಾಮನೋಭಾವದ ವಿವಿಧ ಮುಖಗಳನ್ನು ಬಿಂಬಿಸುತ್ತವೆ. ಹಾಗೂ ತಮ್ಮಂತೆಯೇ ಸೇವಾಕ್ಷೇತ್ರದಲ್ಲಿರುವ ಧುರೀಣರ ಬಗ್ಗೆ ಅನೇಕ ವ್ಯಕ್ತಿಚಿತ್ರಗಳನ್ನು ಬರೆದಿದ್ದಾರೆ. ಅವು ‘ಬೆಳ್ಳಕ್ಕಿ ಸಾಲು’ ಎಂಬ ಕೃತಿಯಲ್ಲಿ ಸಂಕಲಿತಗೊಂಡಿವೆ. ಸ್ವಯಂ ಇಂಜಿನಿಯರ್ ಆಗಿರುವ ತಾವು ತಮ್ಮ ಆದರ್ಶದ ಇಂಜಿನಿಯರ್ ಆಗಿದ್ದ ಸರ್.ಎಂ. ವಿಶ್ವೇಶ್ವರಯ್ಯನವರ ಸಿದ್ಧಿ-ಸಾಧನೆಗಳನ್ನು ಕುರಿತು ಒಂದು ಕಿರುಹೊತ್ತಿಗೆಯನ್ನು ಪ್ರಕಟಿಸಿದ್ದಾರೆ.

ಅನೇಕ ಸಭೆ-ಸಮಾರಂಭಗಳಲ್ಲಿ ಇವರು ಮಾಡಿದ ವಿದ್ವತ್ತೂರ್ಣ ಭಾಷಣಗಳು, ಅವರು ಇಂಗ್ಲಿಷ್ ಪತ್ರಿಕೆಗಳ ವಾಚಕರವಾಣಿಗೆ ಬರೆದ ಪತ್ರಗಳು ಸೇರಿದಂತೆ ಅವು ‘Beyond the Boundaries’ ಕೃತಿಯಲ್ಲಿ ಸಂಕಲಿತಗೊಂಡಿವೆ. ಅವರ ಈ ಎಲ್ಲಾ ಕೃತಿಗಳೂ ಮನನೀಯವಾಗಿವೆ.

ಅಂಥ ಬಹುಮುಖ ವ್ಯಕ್ತಿತ್ವದ ಕೃಷ್ಣ ಅವರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಸಮರ್ಪಿಸಿದ ‘ಕೃಷ್ಣಸಿರಿ” ಎಂಬ ಸಂಭಾವನಾ ಗ್ರಂಥ ಅವರ ಬದುಕಿನ ವಿವಿಧ ಮಜಲುಗಳ ವಿರಾಟ್ ದರ್ಶನ ಮಾಡಿಸುತ್ತದೆ.

ಮುಂದುವರೆಯುವುದು……

ಕನ್ನಡಿಗರಿಗೆ ಅನ್ಯಾಯ: ಬೇಸರ

0

ತುರುವೇಕೆರೆ: ಕೇಂದ್ರ ಸರ್ಕಾರದ ಹಲವು ಉದ್ಯೋಗವಕಾಶಗಳು ಬೇರೆ ರಾಜ್ಯಗಳ ಪರೀಕ್ಷಾರ್ಥಿಗಳ ಪಾಲಾಗುತ್ತಿದ್ದು ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಇಂತಹ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲೇ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ತುಮಕೂರು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಯುವಕರಿಗೆ ಕರೆ ನೀಡಿದರು.
ತಾಲ್ಲೂಕಿನ ಗುಡ್ಡೇನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುರುಳೀಧರ್ ಹಾಲಪ್ಪ ಟ್ರಸ್ಟ್ ವತಿಯಿಂದ ಶನಿವಾರ ನಡೆದ ಕೌಶಲ್ಯ ಪಥ ಯುವ ಸಬಲೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
ವಿದ್ಯಾರ್ಥಿಗಳು ಕೇವಲ ಕೆಳಮಟ್ಟದ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಮಾತ್ರ ಯೋಚಿಸದೇ, ದೇಶದ ಆಡಳಿತಾತ್ಮಕ ಐಎಎಸ್, ಐಪಿಎಸ್ ನಂತಹ ಉತ್ತಮ ದರ್ಜೆಯ ಕೆಲಸಕ್ಕೂ ಪ್ರಯತ್ನ ಮಾಡಬೇಕು. ಹೆಚ್ಚು ತರಬೇತಿಗಳನ್ನು ಪಡೆಯಬೇಕು, ಹೆಚ್ಚು ಪುಸ್ತಕಗಳನ್ನು ಓದಬೇಕು. ಆಗ ಸಹಜವಾಗಿ ಜ್ಞಾನಬಂಡಾರ ಹೆಚ್ಚಾಗಿ ಸ್ಪರ್ಧಾತ್ಮಕವಾಗಿ ಉತ್ತಮ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ
ಯುವಕರು ಕೇವಲ ಸರ್ಕಾರಿ ಕೆಲಸಕ್ಕೆ ಮಾತ್ರ ಸೀಮಿತವಾಗಬಾರದು. ಯಾವುದೇ ಸರ್ಕಾರ ಎಲ್ಲವನ್ನೂ ಕೊಡಲು ಸಾಧ್ಯವಿಲ್ಲ. ಬದಲಾಗಿ ಸ್ವಯಂ ಉದ್ಯೋಗವನ್ನು ಸೃಷ್ಠಿ ಮಾಡಿಕೊಳ್ಳಬೇಕು. ಸೀಡಾಕ್ ಎಂಬ ಸಂಸ್ಥೆ ಸ್ವಯಂ ಉದ್ಯೋಗದ ಕುರಿತು ಮಾಹಿತಿ ನೀಡಲಿದೆ. ಉದ್ಯೋಗ, ಉತ್ಪಾದನೆ, ಮಾರುಕಟ್ಟೆ ಅಗತ್ಯ ಹಣಕಾಸು ಸೌಲಭ್ಯ, ಸೂಕ್ತ ಮಾರ್ಗದರ್ಶನವನ್ನೂ ಸಹ ಆ ಸಂಸ್ಥೆ ನೀಡಲಿದೆ.
ಜನವರಿ ತಿಂಗಳಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಲ್ಯಾಪ್ ಟಾಪ್, ಮತ್ತು ಬಾಕಿ ಇರುವ ಸ್ಕಾಲರ್ ಶಿಪ್ ಗಳನ್ನೂ ಸಹ ನಮ್ಮ ಸರ್ಕಾರ ನೀಡಲಿದೆ. ಶೀಘ್ರದಲ್ಲೇ ನಾಲ್ಕು ಸಾವಿರ ಪೋಲಿಸ್ ಹುದ್ದೆಗಳ ಭರ್ತಿ, ಪಿಎಸೈ ಹುದ್ದೆಗಾಗಿ ಹೊಸದಾಗಿ ಪರೀಕ್ಷೆ ಸಹ ನಡೆಯಲಿದೆ. ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಈ ಸರ್ಕಾರ ಕಟಿಬದ್ಧವಾಗಿದೆ.
ಮುರುಳೀಧರ್ ಹಾಲಪ್ಪ ನವರೊಂದಿಗೆ ನಡೆದ ಸಂವಾದದಲ್ಲಿ ಹಲವಾರು ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಬಸ್ ಗಳ ಸಮಸ್ಯೆ ಕುರಿತು ಮಾತನಾಡಿದರು. ವಿದ್ಯಾರ್ಥಿನಿಯರಿಗೆ ಮಾತ್ರ ಉಚಿತ ಪ್ರಯಾಣ ಮಾಡಿರುವ ಸರ್ಕಾರ ವಿದ್ಯಾರ್ಥಿಗಳನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಹೇಳಿದರು. ಉನ್ನತ ವ್ಯಾಸಾಂಗ ಕುರಿತು ಕೆಲವು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ತಿಪ್ಪೇಸ್ವಾಮಿ, ಕೌಶಲ್ಯಾಭಿವೃದ್ಧಿ ಇಲಾಖೆಯ ಶಿವಕುಮಾರ್, ಸಿಡಾಕ್ ಸಂಸ್ಥೆಯ ತರಬೇತುದಾರರಾದ ಚೈತ್ರಾ, ಎಚ್.ಸಿ ಎಲ್ ನ ಮುಖ್ಯಸ್ಥರಾದ ಬಿಂದು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಎಂ.ಟಿ.ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ತುರುವೇಕೆರೆ: ರಾಜರತ್ನ ಅಂಬೇಡ್ಕರ್ ಏನ್ ಹೇಳಿದ್ರು ಗೊತ್ತಾ?

0

ಕಾಯಿಸೀಮೆ ನಾಡಿನಲ್ಲಿ ಮೊಳಗಿದ ಅಂಬೇಡ್ಕರ್ ನಾದ, ಸಾವಿರಾರು ಜನರು ಭಾಗಿ

ತುರುವೇಕೆರೆ:
ಜಾತಿ ಮತಗಳೆಂಬ ಕೋಮುವಾದವನ್ನು ಬುಡಸಮೇತ ಕಿತ್ತು ಎಸೆದು; ಬುದ್ದ, ಬಸವ, ಅಂಬೇಡ್ಕರ್ ಹಾಕಿಕೊಟ್ಟ ಕಾರುಣ್ಯ ಸಮತೆಯ ಪಥದತ್ತ ಸಾಗಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಹಾಗು ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷರಾದ ರಾಜರತ್ನ ಅಂಬೇಡ್ಕರ್ ದಲಿತರಿಗೆ ಕಿವಿ ಮಾತು ಹೇಳಿದರು.


ತಾಲ್ಲೂಕು ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಮತ್ತು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ವತಿಯಿಂದ ಶುಕ್ರವಾರ ಪಟ್ಟಣದ ಕೆ.ಹಿರಣ್ಣಯ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಭೀಮೋತ್ಸವ ಸೋದರತ್ವ ಸಮಾರೋಪ ಹಾಗು ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ನಾನು ನಿಮ್ಮಲ್ಲಿ ಒಂದು ಕಿವಿ ಮಾತು ಹೇಳಲು ಇಚ್ಛಿಸುತ್ತೇನೆ ಕೋಮುವಾದ ಈ ದೇಶದಲ್ಲಿ ಉಳಿದುಕೊಂಡರೆ ಅದೆಷ್ಟು ಅಪಾಯಗಳು ಘಟಿಸುತ್ತವೆ ಎಂಬುದನ್ನು ಒಮ್ಮೆ ಅವಲೋಕಿಸಿ ನೋಡಿ. ನಾವು ಒಂದು ದೊಡ್ಡ ಬಿರುಗಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ನಾವು ವಿಮಾನದಲ್ಲಿ ಹೋಗುವಾಗ ಬಿರುಗಾಳಿಗೆ ಸಿಲುಕು ಹಾಕಿಕೊಂಡಾಗ ವಿಮಾನ ಹೇಗೆ ಅಲ್ಲೋಲ ಕಲ್ಲೋವಾಗುತ್ತದೆಯೋ ಅಂತಹ ಬಿರುಗಾಳಿ ಇಂದು ಇಡೀ ಭಾರತವನ್ನು ಕಪಿಸುತ್ತಿದೆ.


ದೇಶದ ಜನ ಇವತ್ತು ತಮ್ಮ ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ರವರ ಸಂವಿಧಾನ ನಮಗೆ ಕೊಟ್ಟ ಸಾಂಸ್ಥಿಕ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿದುಕೊಂಡು ಭಾರತದ ಅಃತಸತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸಂವಿಧಾನ ಪೀಠಿಕೆ ಭಾರತೀಯರೆಲ್ಲಾ ಒಂದು ಎಂದು ಸಾರುತ್ತದೆ. ನಾವೆಲ್ಲ ಸಂವಿಧಾನ ಪೀಠಿಕೆಯ ಮಹತ್ವವನ್ನು ಅರಿತು ನಮಗೆ ತೊಡಕುಂಟು ಮಾಡುತ್ತಿರುವ ವಿಚಿದ್ರಕಾರಿ ಶಕ್ತಿಯನ್ನು ಒಡೆದೊಡಿಸುವ ಕೆಲಸವನ್ನು ಒಕ್ಕೊರಳಿನಿಂದ ಮಾಡಬೇಕಿದೆ ಎಂದರು.


ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟ ದಿನವನ್ನು ಇಡೀ ದೇಶವೇ ವಿಜೃಂಭಣೆಯಿಂದ ಸಂಭ್ರಮ ಆಚರಿಸುತ್ತಿದೆ. ಸಾಲದಕ್ಕೆ ಅವರ ಮೂರ್ತಿಯನ್ನು ಸುಪ್ರಿಂಕೋರ್ಟ್ನ ಮುಂದೆ ಸುಪ್ರಿಂಕೋರ್ಟ್ನ ನ್ಯಾಯಾದೀಶರು ಉದ್ಘಾಟನೆ ಮಾಡುವ ಮೂಲಕ ಅಂಬೇಡ್ಕರ್ ಘನತೆಯನ್ನು ವಿಶ್ವವ್ಯಾಪಿಗೊಳಿಸಿದ್ದಾರೆ.


ಅಂಬೇಡ್ಕರ್ ಒಂದು ಮಾತು ಹೇಳಿದರು ನೀವು ಎಲ್ಲ ಜಾತಿ, ಮತಗಳನ್ನು ಪಕ್ಕಕ್ಕಿಟ್ಟು, ಎಡಬಲ ಎನ್ನದೆ ಎಲ್ಲರೂ ಒಂದಾಗ ಬೇಕು ಎಂದು ಹೇಳಿದರಲ್ಲದೇ ಯಾವ ಧರ್ಮದಲ್ಲಿ ಜಾತಿಪದ್ಧತಿ ಇದೆಯೋ ಅದನ್ನು ತ್ಯಜಿಸಿ ಭಗವಾನ್ ಬುದ್ದನ ಬುದ್ಧ ದಮ್ಮ ಸೇರುವ ಮೂಲಕ ಜಾತಿ ರಹಿತ ಸಮಾಜ ನಿರ್ಮಿಸೋಣ ಎಂದು ಸಂದೇಶನ ಸಾರಿದ್ದಾರೆ ಎಂದರು.


ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಅಂಬೇಡ್ಕರ್ ಹೋರಾಟ ಅವರು ಹಾಕಿಕೊಟ್ಟಂತಹ ಸಂವಿಧಾನದಿಂದ ನಾವು ಮನುಷ್ಯರಾಗಿ ಬಾಳುತ್ತಿದ್ದೇವೆ. ಈ ಭೂಮಿ ಇರುವರೆವಿಗೂ ಸಂವಿಧಾನ ಉಳಿಯಬೇಕಿದೆ. ಕೇವಲ ದಲಿತರಲ್ಲ ಇಡೀ ಮನು ಕುಲವೇ ಸಂವಿಧಾನದ ಪರವಾಗಿ ನಿಲ್ಲಬೇಕಿದೆ. ಭೀಮೋತ್ಸವದ ಹೋರಾಟದ ಕಿಡಿ ಇಡೀ ರಾಜ್ಯಾದ್ಯಂತ ಹಬ್ಬಬೇಕಿದೆ. ನಾವುಗಳು ಅಂಬೇಡ್ಕರ್ ನೋಡಿಲ್ಲ ನಮ್ಮ ಕಾಲದಲ್ಲಿ ಅವರ ಮೊಮ್ಮೊಗನನ್ನು ನೋಡುತ್ತಿದ್ದೇವೆ. ನಿಮ್ಮೆಲ್ಲರ ಆಶಯದಂತೆ ಸಿದ್ದರಾಮಯ್ಯರ ಸರ್ಕಾರ ಬಂದಿದೆ. ದಲಿತರಿಗೆ ಬಹಳ ಅನ್ಯಾಯವಾಗಿದೆ. ದಲಿತರು ಕೊಡುವ ಕೈಗಳಾಗಬೇಕು ಬೇಡುವ ಕೈಗಳಾಗಬಾರದು. ಅಂಬೇಡ್ಕರ್ ಆಶಯದಂತೆ ಜಾತಿ ಗಣತಿ ವರದಿಯನ್ನು ಸರ್ಕಾರ ಸುದೀರ್ಘ ಚರ್ಚೆ ಮಾಡಿ ಜಾರಿಗೊಳಿಸಲು ಬದ್ದವಾಗಿದ್ದೇವೆ ಎಂದರು.


ಇದಕ್ಕೂ ಮೊದಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್, ಸಚಿವ ಸತೀಶ್ ಜಾರಕಿಹೊಳಿ, ಸಮುದಾಯದ ಸ್ವಾಮೀಜಿಗಳು ಹಾಗು ಗಣ್ಯರನ್ನು ತೆರೆದ ವಾಹನದಲ್ಲಿ ಪಟ್ಟಣದ ಮಾಯಸಂದ್ರ ರಸ್ತೆಯಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ವೇದಿಕೆ ಕಾರ್ಯಕ್ರಮದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ನಂತರ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಹಾಗು ಗಣ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.

ರಾಜ್ಯದ ಹೆಸರಾಂತ ಕ್ರಾಂತಿ ಗೀತೆ ಹಾಗು ಭೂಮಿಗಳ ತಂಡದಿಂದ ಕ್ರಾಂತಿಗೀತೆ ಮೊಳಗಿತು.
ಸಮಾರಂಭದಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್ ಲೋಕಸಭಾ ಸಂಭಾವನೀಯ ಅಭ್ಯರ್ಥಿ ನಿಕೇತ್ ರಾಜ್ ಮೌರ್ಯ, ತುಮಕೂರು ಕಾಂಗ್ರೆಸ್ ಯುವ ಮುಖಂಡ ಕೊಟ್ಟಾ ಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ತಾಲ್ಲೂಕು ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್. ಮೂರ್ತಿ, ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಷಡಕ್ಷರ ಮುನಿ ಸ್ವಾಮೀಜಿ, ಪ್ರತಿಪರ ಚಿಂತಕ ಕೆ.ದೊರೆರಾಜು, ಚಿಂತಕ ಮಂಜುನಾಥ್ ಅದ್ದೆ, ದಸಂಸ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ, ಕುಂದೂರ್ ಮುರುಳಿ, ಮುಖಂಡರಾದ ವಿ.ಟಿ.ವೆಂಕಟರಾಮು, ದಂಡಿನಶಿವರ ಕುಮಾರ್, ಚಂದ್ರಯ್ಯ, ಬಾಣಸಂದ್ರ ಕೃಷ್ಣ ಮಾದಿಗ, ಚಿದಾನಂದ್ ಸಮುದಾಯದ ಜನರು ಭಾಗವಹಿಸಿದ್ದರು.

ತುಮಕೂರಿನ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ.

0

ತುಮಕೂರು:

ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಹಾಗೂ ತುಮಕೂರು ನಗರದ ಪ್ರೌಢಶಾಲೆಗಳ  ಆದರ್ಶ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಈ  ಕಾರ್ಯಕ್ರಮಕ್ಕೆ ಶೇಷಾದ್ರಿಪುರಂ ಕಾಲೇಜಿನ ಹಳೆಯ ವಿದ್ಯಾರ್ಥಿ, ಪ್ರಸ್ತುತ ವಿಸ್ತಾರ ನ್ಯೂಸ್ ನ  ವಿಶೇಷ ವರದಿಗಾರರಾದ ಶ್ರೀಯುತ ಅಭಿಷೇಕ್ ಬಿ.ವಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಕ್ಕಳನ್ನುದ್ದೇಶಿಸಿ ಮಾತನಾಡಿದರು ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ. ಗುರುಗಳು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಸುತ್ತಾರೆ. ಅವರ ಮಾತಿನಂತೆ ನಡೆದು ಜೀವನದಲ್ಲಿ ಯಶಸ್ವಿಯಾಗಿ ಎಂದರು. ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಮೂಡಿಸಿಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶ್ರೀಯುತ ಕೆ ಕೃಷ್ಣಸ್ವಾಮಿಯವರು ಧರ್ಮದರ್ಶಿಗಳು ಶೇಷಾದ್ರಿಪುರಂ ಶಿಕ್ಷಣ ದತ್ತಿ  ಇವರು ವಹಿಸಿದ್ದರು. ವಿದ್ಯಾರ್ಥಿಗಳಿಗೆ ಅನೇಕ ಹಳೆಯ ವಿದ್ಯಾರ್ಥಿ ಗಳ ಸಾಧನೆಯ ಬಗ್ಗೆ ಹೇಳಿ ಸ್ಪೂರ್ತಿಯ ಮಾತನಾಡಿದರು.  

ಕಾರ್ಯಕ್ರಮದಲ್ಲಿ ಶ್ರೀಯುತ  ಶರ್ಮ ಎ ಎಂ, ಮುಖ್ಯ ಶಿಕ್ಷಕರು, ಅಂಕಿತ ಶಾಲೆ, ಛಾಯಾಶ್ರೀ ಎಂ, ಮುಖ್ಯಶಿಕ್ಷಕರು ನ್ಯಾಷನಲ್ ಹೈ ಸ್ಕೂಲ್, ಶ್ರೀಮತಿ ಚಂದ್ರಕಲಾ.ಜಿ, ಮುಖ್ಯ ಶಿಕ್ಷಕರು ಅನಿಕೇತನ ವಿದ್ಯಾಮಂದಿರ, ಶ್ರೀಯುತ ಟಿ ಶ್ರೀನಿವಾಸ್ ಮುಖ್ಯಶಿಕ್ಷಕರು, ಕನ್ನಿಕಾ ಹೈಸ್ಕೂಲ್, ಶ್ರೀಯುತ ಮಲ್ಲಿಕಾರ್ಜುನಯ್ಯ, ಮುಖ್ಯ ಶಿಕ್ಷಕರು, ಎಸ್ ಜಿ ಆರ್ ಹೈಸ್ಕೂಲ್, ಇವರನ್ನು ಸನ್ಮಾನಿಸಲಾಯಿತು.  

  ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಬಿ.ವಿ ಬಸವರಾಜುರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ಜಿ ಟಿ. ಶೇಷಾದ್ರಿಪುರಂ ಶಾಲೆ ಪ್ರಾಂಶುಪಾಲರಾದ ಶ್ರೀಮತಿ ನಂದಾರಾಜ್ ಅವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ಶ್ರೀಮತಿ  ಕಿಮ್ಶುಖ ಅವರು ನಿರ್ವಹಿ ಸಿದರು,    ಡಾ. ಶ್ವೇತಾರಾಣಿ .ಹೆಚ್  ಸ್ವಾಗತಿಸಿದರು. ಶ್ರೀ ಲಕ್ಷ್ಮಿ ಪ್ರಸಾದ್ ವಂದಿಸಿದರು.

ಡಿ.9ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ : ಪಿ.ಕಾಂತರಾಜು

0

ತುರುವೇಕೆರೆ: ತಾಲ್ಲೂಕು ವಿದಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಡಿ.9 ರವರೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಪಿ.ಕಾಂತರಾಜು ತಿಳಿಸಿದ್ದಾರೆ.
ಡಿ 02- ಮತ್ತು 03 ರಂದು ವಿಶೇಷ ನೋಂದಣಿ ಅಭಿಯಾನ ದಿನಗಳೆಂದು ಪರಿಗಣಿಸಿ, ಮತಗಟ್ಟೆ ಅಧಿಕಾರಿಗಳು ಅಂದು ಎಲ್ಲಾ ಮತಗಟ್ಟೆಗಳಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಹಾಜರಿದ್ದು, ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಿದ್ದಾರೆ. ಕ್ಷೇತ್ರದ ಮತದಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ತುಮುಲ್ ವಿರುದ್ಧ ರೈತರ ಆಕ್ರೋಶ

0

ಮಲ್ಲಸಂದ್ರ: ಹಾಲಿನ ದರ ಕಡಿತ ಮಾಡಿರುವ ತುಮುಲ್ ಕ್ರಮವನ್ನು ಖಂಡಿಸಿ ಮಲ್ಲಸದ್ರದಲ್ಲಿರುವ ತುಮಕೂರು ಹಾಲು ಒಕ್ಕೂಟದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬೇಸಿಗೆಯಲ್ಲಿ ಹಾಲಿನ ಅವಕ ಹೆಚ್ಚಾಗಿದೆ ಎಂಬ ನೆಪವೊಡ್ಡಿ ಹಾಲಿನ ದರವನ್ನು 2 ರೂ ಕಡಿತಗೊಳಿಸಿದೆ. ಪಶು ಆಹಾರದ ದರವನ್ನು ಕೆ.ಜಿ.ಗೆ ಎರಡು ರೂ ಹೆಚ್ಚಳ ಮಾಡಿದೆ. ಇದರಿಂದ ರೈತರಿಗೆ ಒಂದು ಲೀಟರ್‌ಗೆ 4 ರೂ ನಷ್ಟವಾಗಿದೆ.ಇದನ್ನು ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಡಿಸೆಂಬರ್ 4 ರವರೆಗೆ ಕಾಲಾವಕಾಶ ನೀಡಿದ್ದು, ಕಡಿತ ಮಾಡಿರುವ ಹಾಲಿನ ದರ ಮರುಸ್ಥಾಪನೆ ಮತ್ತು ಪಶು ಆಹಾರದ ದರ ಕಡಿತ ಮಾಡದಿದ್ದರೆ ಚಳಿಗಾಲದ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ಶ್ರೀನಿವಾಸ್ ಮನವಿ ಸ್ವೀಕರಿಸಿ ಮಾತನಾಡಿ, ರೈತ ಸಂಘ ಸಲ್ಲಿಸಿರುವ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಮತ್ತು ಕೆ.ಎಂ.ಎಫ್‌ಗೆ ಪತ್ರ ಬರೆದು, ಅಲ್ಲಿಂದ ಬರುವ ಸೂಚನೆಗಳ ಅನ್ವಯ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡು ರೈತರಿಗೆ ಅನುಕೂಲವಾಗುವ ರೀತಿ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.

ಹಾಲಿನ ಪ್ರೋತ್ಸಾಹಧನವನ್ನು ಆಗಸ್ಟ್ ತಿಂಗಳವರೆಗೆ ನೀಡಲಾಗಿದೆ. ಅದು ನೇರವಾಗಿಯೇ ರೈತರ ಖಾತೆಗಳಿಗೆ ಹೋಗುವುದರಿಂದ ತೊಂದರೆಯಿಲ್ಲ. ನಂತರದ ಬಾಕಿಯನ್ನು ಶೀಘ್ರವೇ ಬಿಡುಗಡೆ ಮಾಡುವ ನೀರಿಕ್ಷೆ ಇದೆ ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್, ತುಮಕೂರು ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್.ಧನಂಜಯ ಆರಾಧ್ಯ, ಮಹಿಳಾ ಅಧ್ಯಕ್ಷೆ ಶಿವರತ್ನಮ್ಮ, ತಾಲೂಕು ಅಧ್ಯಕ್ಷ ನಾಗೇಂದ್ರ, ಸಣ್ಣದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ಸಿದ್ದರಾಜು ಸೇರಿ ಹಲವರು ಇದ್ದರು.

ಕಂಬಳಾಪುರ: ಆಯ್ಕೆ

0

ತುಮಕೂರು ತಾಲ್ಲೂಕಿನ ಕಂಬಳಾಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ರಂಗದಾಮಯ್ಯ, ಉಪಾಧ್ಯಕ್ಷ ರಾಗಿ ವೆಂಕಟರಂಗಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಐದು ವರ್ಷಗಳ ಕಾಲ ಇವರ ಅಧಿಕಾರ ಅವಧಿ ಇರಲಿದೆ. ಈ ವೇಳೆ ಸಂಘದ ನಿರ್ದೇಶಕ ರು ಹಾಜರಿದ್ದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡ ಶಿವಕುಮಾರ್ ಅಭಿನಂದಿಸಿದ್ದಾರೆ.