Friday, July 19, 2024
Google search engine
Homeಕಾನನದ ಕುಸುಮಅಗಲಿದ ಅನ್ನ ಮತ್ತು ಅಕ್ಷರದ ಆದಿಬಂಧು

ಅಗಲಿದ ಅನ್ನ ಮತ್ತು ಅಕ್ಷರದ ಆದಿಬಂಧು

ಹಿರಿಯ ದಲಿತ ಮುಖಂಡ, ಜನಾನುರಾಗಿ, ಅಪ್ರತಿಮ ಹೋರಾಟಗಾರ ನಾರಾಯಣರಾಜು ಅವರಿಗೆ ಚಿಕ್ಕನಾಯಕನಹಳ್ಳಿಯ ಸಂಚಲನ ಅವರ ನುಡಿನಮನದ ಲೇಖನ ಪಬ್ಲಿಕ್ ಸ್ಟೋರಿ ಓದುಗರಿಗಾಗಿ

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಬನಶಂಕರಿ ನಗರದ ತಮ್ಮ ತೋಟದ ಮನೆಯಲ್ಲಿ ವಾಸವಿದ್ದ ನಾರಾಯಣರಾಜು(87) ರವರು ವಯೋಸಹಜ ಸಾವನ್ನಪ್ಪಿದ್ದಾರೆ.

ಎಂಭತ್ತೇಳು ವರ್ಷಗಳ ತುಂಬು ಜೀವನ ನಡೆಸಿರುವ ಇವರು, ಪತ್ನಿ ರತ್ನಮ್ಮ ಮತ್ತು ಪುತ್ರ ಚಿದಾನಂದಮೂರ್ತಿಯವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಅವರ ತೋಟದಲ್ಲೇ ನೆರವೇರಿಸಲಾಯ್ತು.

ಜಿಲ್ಲೆಯ ದಸಂಸ ಮೊದಲ ತಲಮಾರು ::

ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಜಿಲ್ಲೆಯಲ್ಲಿ ಹಾಗೂ ತಾಲ್ಲೂಕಿನಲ್ಲಿ ಕಟ್ಟಿ ಬೆಳೆಸಿದವರಲ್ಲಿ ಮೊದಲ ತಲಮಾರಿನ ಹಿರಿಯರು ಈ ನಾರಾಯಣರಾಜರು. ಜಿಲ್ಲೆಯಲ್ಲಿ ದಸಂಸ ಹುಟ್ಟಿದಾಗಿನಿಂದಲೂ ಅದರ ಮುಖ್ಯಾಂಗವಾಗಿ ನಿರಂತರ ದುಡಿದವರು ಇವರು.

ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿ ಸರ್ಕಾರಿ ನೌಕರಿ ಗಳಿಸಿಕೊಂಡಿದ್ದ ಇವರು, ತಮಗೆ ಸಿಗುತ್ತಿದ್ದ ತಿಂಗಳ ಸಂಬಳದಲ್ಲಿ ಕುಟುಂಬ ನಿರ್ವಹಣೆಯ ಜೊತೆಗೆ ದಸಂಸ ಹೋರಾಟಗಾರರ ಹೊಟ್ಟೆಗೂ ಅನ್ನವನ್ನು ಕೊಡಿಸುವ ಮಮತೆಯನ್ನಿಟ್ಟುಕೊಂಡಿದ್ದವರು. .

ಎಪ್ಪತ್ತು-ಎಂಭತ್ತು-ತೊಂಭತ್ತರ ದಸಂಸದ ಎಲ್ಲ ಕಾರ್ಯಕರ್ತರು, ಎಲ್ಲ ಹೋರಾಟಗಾರರು ನಾರಾಯಣರಾಜು ರವರ ತಿಂಗಳ ಸಂಬಳದಲ್ಲಿ ನಿತ್ಯದ ತಮ್ಮ ಹಸಿವನ್ನು ನೀಗಿಕೊಂಡವರೇ. ಇವರು ತಿಪಟೂರು ಭಾಗದಲ್ಲಿ ದಲಿತ ಚಳವಳಿ ಕಟ್ಟುತ್ತಿದ್ದ ಕಾಲದಲ್ಲಿ, ದಲಿತ ಸಂಘರ್ಷ ಸಮಿತಿಯ ಹೋರಾಟಗಾರರ ಊಟ-ತಿಂಡಿಗೆಂದೇ ತಿಪಟೂರು ನಗರದಲ್ಲಿ ಊಟದ ಮೆಸ್ಸೊಂದನ್ನು ಗೊತ್ತುಮಾಡಿ, ಹೋರಾಟಗಾರ-ಕಾರ್ಯಕರ್ತರ ಹೊಟ್ಟೆ ತುಂಬಿಸುತ್ತಿದ್ದರು. ತಮ್ಮ ತಿಂಗಳ ಸಂಬಳದಲ್ಲಿ ಪ್ರತೀ ತಿಂಗಳು ಮೆಸ್ಸಿನ ಊಟದ ಬಿಲ್ ಪಾವತಿಸುತ್ತಿದ್ದರು ಎಂದು ಕುಂದೂರು ತಿಮ್ಮಯ್ಯ ಸ್ಮರಿಸಿಕೊಂಡರು

ತಮ್ಮೊಡನೆ ಸದಾ ಜೋಳಿಗೆಯಂಥದ್ದೊಂದು ಬ್ಯಾಗನ್ನಿಟ್ಟುಕೊಂಡೇ ಮನೆಯಿಂದ ಹೊರಡುತ್ತಿದ್ದ ನಾರಾಯಣರಾಜು ರವರು, ಇಂದು ಆ ಜೋಳಿಗೆಯನ್ನು ನಮಗೆ ಕಾಣ್ಕೆ ಕೊಟ್ಟು ನಮ್ಮನ್ನೆಲ್ಲ ಇಲ್ಲಿ ಬಿಟ್ಟುಹೋಗಿದ್ದಾರೆ. ಆ ಜೋಳಿಗೆಯಲ್ಲಿ ಅರ್ಧ ಶತಮಾನಕ್ಕೂ ಮೀರಿದ ಚಳವಳಿ ಅನುಭವವಿದೆ. ಸಂಘಟನೆಯ ಕಾವಿದೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಕೆಚ್ಚಿದೆ. ಅವರ ಈ ಜೋಳಿಗೆಯನ್ನು ನಾವು ನಮ್ಮ ಮುಂದಿನ ತಲಮಾರಿಗೆ ದಾಟಿಸುವವರೆಗೂ ತುಡಿಯಬೇಕಿದೆ.

ನಾರಾಯಣರಾಜು ಅವರಲ್ಲಿದ್ದ ಸಂಘರ್ಷದ ತುಡಿತವನ್ನು ಮುಂದಿನ ತಲಮಾರುಗಳವರೆಗೂ ನಾವು ಕೊಂಡೊಯ್ಯಬೇಕು ಎಂದು ಕೆ.ದೊರೆರಾಜು ಎಚ್ಚರಿಕೆಯ ಮಾತುಗಳನ್ನು ಆಡಿ ನಮನ ಸಲ್ಲಿಸಿದರು.

ಸರ್ವೀಸ್ ಟು ಸೊಸೈಟಿ ಎಂಬ ಧ್ಯೇಯವನ್ನು ಸದಾ ಪಾಲಿಸುತ್ತಿದ್ದ ನಾರಾಯಣರಾಜು ಅವರು, ತಾವು ದುಡಿದಿದ್ದರಲ್ಲಿ ಅರ್ಧಷ್ಟನ್ನಾದರೂ ಸಮುದಾಯಕ್ಕೆ ನೀಡಬೇಕು ಎಂದು ನಂಬಿದ್ದವರು. ಅವರು ತಂದುಕೊಟ್ಟ ಮೆಸ್ಸಿನ ಊಟದ ಟೋಕನ್ ಮತ್ತು ಬಿಳೇಹಾಳೆ ಹಾಗೂ ಪುಸ್ತಕಗಳಿಂದ ಓದಿ ಬೆಳೆದ ಪೀಳಿಗೆಯವರು ನಾವು. ನಮ್ಮ ಬಡ ಕುಟುಂಬಗಳ ನೂರಾರು ವಿದ್ಯಾರ್ಥಿಗಳಿಗೆ ಅನ್ನ ಮತ್ತು ವಿದ್ಯೆಗೆ ಸಹಾಯ ನೀಡಿದ ಮಹಾನುಭಾವರು ಇವರು ಎಂದು ಜಿಲ್ಲೆಯ ಪ್ರಮುಖ ದಲಿತ ಮುಖಂಡರಾದ ಬೆಲ್ಲದಮಡು ಕೃಷ್ಣಪ್ಪನವರು ನಾರಾಯಣರಾಜು ರನ್ನು ಸ್ಮರಿಸಿಕೊಂಡರು.

ನಾಡಿನಾದ್ಯಂತ ದಸಂಸ ಕಟ್ಟಿದ ಹಲವಾರು ಹೋರಾಟಗಳ ಕರಪತ್ರ, ಪತ್ರಿಕಾ ಸುದ್ದಿ, ಬ್ರೋಶರ್, ಬ್ಯಾನರ್, ಪೋಸ್ಟರ್, ಸಲ್ಲಿಸಿದ ಮನವಿಪತ್ರ, ಚಳವಳಿ ಸಾಹಿತ್ಯ ಇತ್ಯಾದಿ ದಾಖಲೆಗಳನ್ನು ಜೋಪಾನ ಮಾಡಿ ಕಾಪಿಟ್ಟುಕೊಂಡವರು ಅಪರೂಪ ಎಂದೇ ಹೇಳಬಹುದು.

ಆದರೆ, ನಾರಾಯಣರಾಜು’ರವರು ದಸಂಸದ ಅಂಥ ಅಪರೂಪದ ಕಾರ್ಯಕರ್ತರಲ್ಲಿ ಬಹುಮುಖ್ಯರು. ಸಂಘರ್ಷ ಸಮಿತಿಯ ಪ್ರತಿಯೊಂದು ಹೋರಾಟದ ಕರಪತ್ರ, ಪೇಪರ್ ಕಟಿಂಗ್ಸ್, ಪೋಟೋ, ಆಡಿಯೋ ರೆಕಾರ್ಡಿಂಗ್ಸ್, ಮತ್ತಿತರೆ ದಾಖಲೆಗಳನ್ನೆಲ್ಲ ಅವರು ಬಹಳ ಎಚ್ಚರಿಕೆಯಿಂದ ಸಂಗ್ರಹಿಸಿಟ್ಟುಕೊಂಡಿದ್ದರು. ಅದರಲ್ಲಿ ಮುಖ್ಯವಾಗಿ, 1990ರ ದಶಕದಲ್ಲಿ ತಿಪಟೂರಿನಲ್ಲಿ ನಡೆದ ಮೂರು ದಿನಗಳ ಅಧ್ಯಯನ ಶಿಬಿರದ ಎಲ್ಲಾ ಗೋಷ್ಠಿಗಳ ಮಾತುಕತೆಯನ್ನು ನಾರಾಯಣರಾಜರು ರೆಕಾರ್ಡಿಂಗ್ ಮಾಡಿಟ್ಟುಕೊಂಡಿದ್ದರು.

ಅಂದಿನ ಆ ಶಿಬಿರದಲ್ಲಿ ಪ್ರೊ.ಬಿ. ಕೃಷ್ಣಪ್ಪನವರು “ದಲಿತ ಸಂಘರ್ಷ ಸಮಿತಿಯ ತಾತ್ವಿಕ ನೆಲೆಗಳು” ಎಂಬ ವಿಷಯದ ಕುರಿತು ಸುದೀರ್ಘವಾಗಿ ಮಾತನಾಡಿದ್ದರು. ಅದಕ್ಕೆ ಕೆ.ಬಿ ಸಿದ್ದಯ್ಯನವರು ಅಷ್ಟೇ ಸುದೀರ್ಘವಾಗಿ ಪ್ರತಿಕ್ರಿಯಿಸಿದ್ದರು. ಆಯೆಲ್ಲ ವಿಚಾರ, ವಾದ-ವಾಗ್ವಾದ, ಮಾತು-ಕತೆ ಎಲ್ಲವೂ ನಾರಾಯಣರಾಜುರವರ ಕ್ಯಾಸೆಟ್ಟುಗಳಲ್ಲಿ ರೆಕಾರ್ಡ್ ಆಗಿತ್ತು. ಮತ್ತದು ಇಂದು ಉಪಯೋಗಕ್ಕೆ ಬರುತ್ತಿದೆ ಎಂದು ಬರಹಗಾರ ಗುರುಪ್ರಸಾದ್ ಕಂಟ್ಲಗೆರೆ ಮಾತನಾಡಿದರು.

ಗುರುಪ್ರಸಾದ್ ಕಂಟಲಗೆರೆ

ದಸಂಸ 50’ರ ಸಂದರ್ಭದಲ್ಲಿ ತುಮಕೂರು ದಲಿತ ಸಂಘರ್ಷ ಸಮಿತಿ ವತಿಯಿಂದ ನಾರಾಯಣರಾಜು ರವರು ಸಂಪಾದಿಸಿಕೊಟ್ಟ ‘ದಲಿತ ಚಳುವಳಿಯ ತಾತ್ವಿಕ ನೆಲೆಗಳು’ ಮಹದ್ಕೃತಿಯನ್ನು ಬಿಡುಗಡೆಗೊಳಿಸಲಾಗಿತ್ತು. ನಮ್ಮೆಲ್ಲರ ಸ್ವಾಭಿಮಾನದ ಸಂಕೇತವಾಗಿದ್ದ ನಾರಾಯಣರಾಜು’ರವರು ಪ್ರೊ.ಬಿ.ಕೃಷ್ಣಪ್ಪನವರು ಪ್ರತಿಪಾದಿಸಿದ ನಮ್ಮ ಧರ್ಮ-ಬೌದ್ಧ ಧರ್ಮ,
ನಮ್ಮ ಪಕ್ಷ-ಬಹುಜನ ಸಮಾಜ ಪಕ್ಷ ಹಾಗೂ ನಮ್ಮ ವಾದ-ಅಂಬೇಡ್ಕರ್ ವಾದ ಎಂಬುದನ್ನು ನಿರ್ವಿವಾದವಾಗಿ ತಮ್ಮ ಜೀವನಪೂರ್ತಿ ಅನುಸರಿಸಿದಂಥವರು.

ತನ್ಮೂಲಕ ನನ್ನಂತಹ ನೂರಾರು ಯುವಕರಿಗೆ ಅನುಕರಣೀಯರಾದವರು. 85ರ ವಯಸ್ಸನ್ನು ದಾಟಿದ ಮೇಲೂ ಅವರು, ಜಿಲ್ಲೆಯಲ್ಲಿ ಎಲ್ಲೇ ದಸಂಸ ಕಾರ್ಯಕ್ರಮ ಇದ್ದರೆ, ಹೆಗಲಿಗೊಂದು ಜೋಳಿಗೆ-ಬ್ಯಾಗ್ ತಗುಲಾಕಿಕೊಂಡು ತಮ್ಮ ಹಾಜರಿ ಕೊಟ್ಟೇಬಿಡುತ್ತಿದ್ದರು. ಅವರಿಲ್ಲದ ದಸಂಸ ತನ್ನ ಪಿತೃತ್ವಶಕ್ತಿಯನ್ನು ಕಳೆದುಕೊಂಡಂತಾಯ್ತು ಅನಿಸುತ್ತಿದೆ ಎಂದು ಭಗತ್ ಕುಂದೂರು ವಿಷಾದ ವ್ಯಕ್ತಪಡಿಸಿದರು.

ಗಣ್ಯರ ಸಂತಾಪ ::
ಶಾಸಕರಾದ ಸಿ ಬಿ ಸುರೇಶ್ ಬಾಬು’ರವರು ನಾರಾಯಣರಾಜು ರವರ ಅಂತಿಮ ದರ್ಶನ ಪಡೆದರು. ತಾಲ್ಲೂಕಿನ, ಜಿಲ್ಲೆಯ, ರಾಜ್ಯದ ಹಲವು ಕಡೆಗಳಿಂದ ಹೋರಾಟಗಾರರು, ಸಾಹಿತಿಗಳು, ಜನಪರ ಕಾರ್ಯಕರ್ತರು, ಪ್ರಗತಿಪರರು, ಬುದ್ಧಿಜೀವಿಗಳು ಆಗಮಿಸಿ ನಾರಾಯಣರಾಜು ರವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ತಾಲೂಕು ದಸಂಸ, ಜಿಲ್ಲೆಯ ದಸಂಸ ಎಲ್ಲ ಬಣಗಳ ಬಹುತೇಕ ಎಲ್ಲ ಪದಾಧಿಕಾರಿಗಳು, ಸದಸ್ಯರು ನಾರಾಯಣರಾಜು ರವರ ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು.

__ಸಂಚಲನ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?