ವರದಿ: ಸಂಚಲನ, ಚಿ.ನಾ.ಹಳ್ಳಿ
ಚಿಕ್ಕನಾಯಕನಹಳ್ಳಿ : ಪಟ್ಟಣದ ಪ್ರತಿಷ್ಠಿತ ಹಳೆಯೂರು ಆಂಜನೇಯ ಸ್ವಾಮಿ ದೇವಳದ ಮೂಲಭೂತ ಸೌಕರ್ಯ ಮತ್ತು ಸಮಸ್ಯೆಗಳಿಗೆ ಸ್ಪಂದಿಸದ ತಾಲ್ಲೂಕಿನ ಮುಜುರಾಯಿ ಇಲಾಖೆ ಅಧಿಕಾರಿಗಳ ಬಗ್ಗೆ ದೇವಸ್ಥಾನ ಜೀರ್ಣೋದ್ಧಾರ ಮಂಡಳಿ ಹಾಗೂ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಜುರಾಯಿ ದೇಖರೇಕಿಗೆ ಸಂಬಂಧಪಡುವ ಹಳೆಯೂರು ಆಂಜನೇಯ ಸ್ವಾಮಿಯ ಏಕಾದಶಿ ಜಾತ್ರಾ-ರಥೋತ್ಸವ ಮುಂದಿನ ತಿಂಗಳ ಎರಡು ಮೂರನೇ ವಾರದಲ್ಲಿ
ನೆರವೇರಲಿದೆ. ಅದಕ್ಕೆ ಸಂಬಂಧಿಸಿದ ತಯಾರಿಗಳು ಈಗಿನಿಂದಲೇ ಪ್ರಾರಂಭಗೊಂಡಿವೆ.
ಮುಜುರಾಯಿ ಸಹಯೋಗ ಮತ್ತು ಸಹಕಾರವಿಲ್ಲದೆ ಜಾತ್ರೆಯ ತಯಾರಿಗಳಿಗೆ ತೊಡಕುಂಟಾಗುತ್ತಿದೆ ಎಂದು ಜೀರ್ಣೋದ್ಧಾರ ಸಮಿತಿಯ ಹಿರಿಯ ಸದಸ್ಯರಾದ ಅಂಕನಹಳ್ಳಿ ಶ್ರೀನಿವಾಸ್ ಬೇಸರ ವ್ಯಕ್ತಪಡಿಸುತ್ತಾರೆ.
ದೇವಸ್ಥಾನದ ಹಿಂಬದಿಯಲ್ಲಿರುವ ಐತಿಹಾಸಿಕ ಕಲ್ಯಾಣಿಯ ಮಾಡುಗೋಡೆ ಕುಸಿದುಬಿದ್ದಿದೆ. ಇದರ ದುರಸ್ತಿ ಕಾರ್ಯ ತ್ವರಿತವಾಗಿ ನಡೆಯಬೇಕಿತ್ತು. ಆದರೆ, ಕಲ್ಯಾಣಿಯ ಸ್ಥಿತಿಯನ್ನು ಒಮ್ಮೆ ಬಂದು ನೋಡುವ ಕನಿಷ್ಠ ಜವಾಬ್ದಾರಿಯನ್ನು ತಾಲ್ಲೂಕು ಮುಜುರಾಯಿ ಇಲಾಖೆಯ ಭಾರತಿ’ರವರು ತೋರುತ್ತಿಲ್ಲ. ನಾವು ಚಿತ್ರಸಹಿತ ವಿವರಗಳನ್ನು ಅವರಿಗೆ ತಲುಪಿಸಿದರೂ ಅವರು ಕಲ್ಯಾಣಿ ದುರಸ್ತುಗೊಳಿಸುವ ಹೊಣೆಗಾರಿಕೆಯನ್ನು ಪ್ರದರ್ಶಿಸುತ್ತಿಲ್ಲ. ಲಕ್ಷಾಂತರ ಮಂದಿ ಭಕ್ತಾದಿಗಳು ಬಂದು ಸೇರುವ ಅಭಯಹಸ್ತ ಆಂಜನೇಯ ಸ್ವಾಮಿಯ ರಥೋತ್ಸವದ ತಯಾರಿಗಳಲ್ಲಿರುವ ನಾವು ಪದೇಪದೇ ಮುಜುರಾಯಿ ಇಲಾಖೆಯ ಅಧಿಕಾರಿಗಳ ಸಮಕ್ಷಮ ಹೋಗಿ ನಿಲ್ಲಬೇಕೇ ಎಂದು ಹಿರಿಯರಾದ ಅಂಕನಹಳ್ಳಿ ಶ್ರೀನಿವಾಸ್’ರವರು ಬೇಸರ ವ್ಯಕ್ತಪಡಿಸಿದರು.
ಇಂದಿನ ಚಿತ್ರ
ಹೀಗಿತ್ತು ನೋಡಾ ಕಲ್ಯಾಣಿ
ಅರ್ಚಕರ ಪಗಾರಕ್ಕೂ ವಿಳಂಬ : ಪಟ್ಟಣದ ಪ್ರಸನ್ನರಾಮೇಶ್ವರ ದೇವಸ್ಥಾನದ ಅರ್ಚಕರಾದ ಸತ್ಯನಾರಾಯಣ’ರವರು, ತಾವು ಸಲ್ಲಿಸುವ ಅರ್ಚಕ ಸೇವೆಗಾಗಿ ಸರ್ಕಾರ ಕೊಡಮಾಡುವ ಪಗಾರ ಪಡೆದುಕೊಳ್ಳಲಿಕ್ಕಾಗಿ ತಾಲ್ಲೂಕಿನ ಮುಜುರಾಯಿ ಇಲಾಖೆ ಅಧಿಕಾರಿಗಳ ಬಳಿ ತಾವು ದಿನೇದಿನೇ ಹೋಗಿ ಗೋಗರೆಯಬೇಕಾದ ಸ್ಥಿತಿಯನ್ನು ತೋಡಿಕೊಂಡರು.
ನಾವು ದೇವರ ಕೆಲಸ ಮಾಡುವವರು. ನಮಗೆ ಹೀಗೆ ಈ ಅಧಿಕಾರಿಗಳು ಸತಾಯಿಸುತ್ತಾರೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಓದಿದ್ದೆವು. ಆದರಿಲ್ಲಿ ದೇವರ ಕೆಲಸ ಮಾಡುವವರ ಸಂಬಳಕ್ಕೂ ವಿನಾಕಾರಣ ಕಾಲ ವಿಳಂಬ ಮಾಡಿ ಅಲೆದಾಡಿಸುತ್ತಾರೆ ಎಂದು ಅರ್ಚಕ ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದರು.
ದೇವಸ್ಥಾನದ ಜಮೀನು ::
ಹಿಂದೆ ರಾಜಪ್ರಮುಖರು ಹಳೆಯೂರು ಆಂಜನೇಯ ಸ್ವಾಮಿ ದೇವಸ್ಥಾನಕ್ಕಾಗಿ ಬರೆದುಕೊಟ್ಟಿದ್ದ ಜಮೀನನ್ನು ಗುರ್ತು ಮಾಡಿಕೊಡಿ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗೋಗರೆದು ಸಾಕಾಗಿದೆ.
ತಾಲ್ಲೂಕಿನ ಭಾವನಹಳ್ಳಿ ಸರ್ವೆ ನಂಬರ್ 62/3’ರಲ್ಲಿ ಹಳೆಯೂರು ಆಂಜನೇಯ ದೇವಸ್ಥಾನಕ್ಕಾಗಿ ರಾಜಪ್ರಮುಖರು ಬರೆದುಕೊಟ್ಟ ಜಮೀನಿದೆ. ಅದರ ದಾಖಲೆಗಳನ್ನು ಕೊಟ್ಟು ದೇವಸ್ಥಾನದ ಜಮೀನು ಗುರ್ತು ಮಾಡಿಕೊಡುವಂತೆ ಇಲಾಖೆಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ತಾಲ್ಲೂಕು ಆಡಳಿತ ಹಾಗೂ ಅಧಿಕಾರಿಗಳು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಮಾನ್ಯ ಶಾಸಕರಾದ ಸಿ ಬಿ ಸುರೇಶ್ ಬಾಬುರವರು ಇತ್ತ ಗಮನ ಹರಿಸಬೇಕು ಎಂದು ಅಂಕನಹಳ್ಳಿ ಶ್ರೀನಿವಾಸ್, ಅರ್ಚಕ ಸತ್ಯನಾರಾಯಣ ಹಾಗೂ ಆಂಜನೇಯ ಸ್ವಾಮಿಯ ಭಕ್ತಾದಿಗಳು ಆಗ್ರಹಿಸಿದರು.