Wednesday, May 6, 2026
Google search engine
Home Blog Page 142

ಇನ್ಮೇಲೆ ಇಂಥ ಗ್ರಾಮಗಳು ರೆಡ್‌ಝೋನ್ ಗೆ

Publicstory


ತುಮಕೂರು: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಗಣನೀಯವಾಗಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 20ಕ್ಕಿಂತ ಹೆಚ್ಚು ಹೆಚ್ಚು ಕೋವಿಡ್ ಸಕ್ರಿಯ ಸೋಂಕಿತರಿರುವ ಗ್ರಾಮಗಳನ್ನು ರೆಡ್ ಝೋನ್ ಎಂದು ಗುರುತಿಸಿ ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರತಿ ಗ್ರಾಮಗಳಲ್ಲಿ ಕೋವಿಡ್ ಸೋಂಕಿನ ನಿಗ್ರಹಕ್ಕಾಗಿ ಹೆಚ್ಚು 20ಕ್ಕಿಂತ ಹೆಚ್ಚು ಪ್ರಕರಣಗಳಿರುವ ಗ್ರಾಮಗಳನ್ನು ರೆಡ್‌ಝೋನ್ (ಕೆಂಪು ವಲಯ) ಪ್ರದೇಶವೆಂದು ಹಾಗೂ 11ಕ್ಕಿಂತ ಹೆಚ್ಚು 20ಕ್ಕಿಂತ ಕಡಿಮೆ ಸೋಂಕಿತರಿರುವ ಗ್ರಾಮಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

ಕೆಂಪುವಲಯ ಹಾಗೂ ಹಾಟ್ ಸ್ಪಾಟ್ ವಲಯದ ಗ್ರಾಮಗಳಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಕುಟುಂಬದ ಎಲ್ಲಾ ಸದಸ್ಯರು ಮತ್ತು ಸೋಂಕಿನ ಲಕ್ಷಣಗಳಿರುವ ಎಲ್ಲರಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡುವುದರ ಜೊತೆಗೆ ಐಇಸಿ ಕಾರ್ಯಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಬೇಕು. ಇದಲ್ಲದೆ, ಸ್ಥಳೀಯ ಪಿಹೆಚ್‌ಸಿ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗಿನ ಆರೋಗ್ಯ ತಂಡವು ಪ್ರತಿದಿನ ಗ್ರಾಮಕ್ಕೆ ಭೇಟಿ ನೀಡಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.

ಸೋಂಕು ದೃಢಪಟ್ಟು ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಕೊಠಡಿ ವ್ಯವಸ್ಥೆ ಇಲ್ಲದಿದ್ದಲ್ಲಿ ಅಂತಹ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಬೇಕು. ಕೆಂಪುವಲಯದ ಗ್ರಾಮಗಳಲ್ಲಿ ಸಾರ್ವಜನಿಕರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
ಸೋಂಕು ದೃಢಪಟ್ಟ ಸೋಂಕಿತರಿಗೆ ಫಲಿತಾಂಶ ಬಂದ ದಿನದಂದೇ ಕೋವಿಡ್ ಮೆಡಿಕಲ್ ಕಿಟ್ ವಿತರಿಸಬೇಕು.

ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮತ್ತು ತಾಲೂಕು ವೈದ್ಯಾಧಿಕಾರಿಗಳು ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳೊಂದಿಗೆ ಗ್ರಾಮಗಳಿಗೆ ಪ್ರತಿ ಎರಡು ದಿನಗಳಿಗೊಮ್ಮೆ ಭೇಟಿ ನೀಡಿ ಸೋಂಕು ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯವಾಗಿ ಲಭ್ಯವಿರುವ ಸಿಎಸ್ ಆರ್ ಅನುದಾನ, ಎನ್‌ಜಿಒ ಹಾಗೂ ಸ್ವಯಂ ಸೇವಕರನ್ನು ಬಳಸಿಕೊಂಡು ಗ್ರಾಮಗಳಲ್ಲಿ ಸಾರ್ವಜನಿಕರ ಅಗತ್ಯತೆಗೆ ಅನುಗುಣವಾಗಿ ಅವರ ಅವಶ್ಯಕತೆಗಳನ್ನು ಪೂರೈಸಲು ಕ್ರಮವಹಿಸಬೇಕು.

ಸದರಿ ಗ್ರಾಮವನ್ನು ಸ್ಯಾನಿಟೈಸ್ ಮಾಡಿಸಬೇಕು ಹಾಗೂ ಸಕ್ರಿಯ ಪ್ರಕರಣಗಳು ಗುಣಮುಖವಾಗುವವರೆಗೂ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಹೊಸ ಪ್ರಕರಣಗಳು ವರದಿಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

ಸಾಧ್ಯವಾದಲ್ಲಿ ಕೆಂಪು ವಲಯದಲ್ಲಿರುವ ಗ್ರಾಮವನ್ನು ಸೀಲ್ ಡೌನ್ ಮಾಡುವ ಸಂಬಂಧ ಸ್ಥಳೀಯ ಮಟ್ಟದ ಕಾರ್ಯಪಡೆ ಸಮಿತಿ ನಿರ್ಧಾರದಂತೆ ಕ್ರಮಕೈಗೊಳ್ಳಬೇಕು.

.
ಉಳಿದಂತೆ ಇತರೆ ಗ್ರಾಮಗಳಲ್ಲಿ ವರದಿಯಾಗುವ (೧೦ಕ್ಕಿಂತ ಕಡಿಮೆ ಕೋವಿಡ್-೧೯ ಸೋಂಕಿತರ ಸಕ್ರಿಯ ಪ್ರಕರಣಗಳು ಇರುವ) ಗ್ರಾಮಗಳಲ್ಲಿ ಎಲ್ಲಾ ಕೋವಿಡ್-೧೯ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ಅಧಿನಿಯಮ ಹಾಗೂ ವಿಪತ್ತು ನಿರ್ವಹಣಾ ಕಾಯಿದೆ ೨೦೦೫ ರಡಿ ಮುಂದಿನ ಕ್ರಮವಹಿಸಲಾಗುವುದೆಂದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಕೊರೊನಾ ಸೋಂಕು: ಗ್ರಾಮಗಳ ಸೀಲ್ಡ್ ಡೌನ್: ಜಿಲ್ಲಾ ಉಸ್ತುವಾರಿ ಸಚಿವ

Publicstory


ತುಮಕೂರು: ಗ್ರಾಮಗಳು ಕೊರೋನಾ ಬಾಧಿತ ಪ್ರದೇಶಗಳಾಗದಂತೆ ಸೋಂಕಿನ ಸಂಪೂರ್ಣ ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಸೋಂಕು ಪತ್ತೆಯಾಗಿರುವ ಗ್ರಾಮಗಳಲ್ಲಿ‌ ಸೋಂಕಿನ ನಿಯಂತ್ರಣಕ್ಕೆ ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದು ನಿರ್ದೇಶಿಸಿದರು.

ಸೋಂಕಿತರನ್ನು ಕಡ್ಡಾಯವಾಗಿ ಕೊರೋನಾ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಕೊರೋನಾ ಆರೈಕೆ ಕೇಂದ್ರಕ್ಕೆ ಬರಲು ಹಿಂದೇಟು ಹಾಕುವ ಸೋಂಕಿತರಿಗೆ ಆಯಾ ಸ್ಥಳೀಯ ಜನಪ್ರತಿನಿಧಿಗಳು ಅವರಿಗೆ ಮನವರಿಕೆ ಮಾಡಿ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲು ಹೆಚ್ಚು ಜವಾಬ್ದಾರಿವಹಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಹೆಚ್ಚು ಪ್ರಕರಣಗಳಿರುವ ಗ್ರಾಮಗಳನ್ನು ಲಾಕ್ ಡೌನ್ ಮಾಡಿ, ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಈಗಾಗಲೇ ‌ನಿಗಧಿಯಾಗಿರುವ ಮದುವೆಗಳು ನಡೆಯಲು ಅನುಮತಿ ನೀಡಿ, ಹೊಸ ಮದುವೆಗಳು ನಡೆಯಲು ಅವಕಾಶ ಮಾಡಿಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿ, ಆಶಾ ಕಾರ್ಯಕರ್ತೆರನ್ನು ಬಳಸಿಕೊಂಡು ಈಗಾಗಲೇ ಸೋಂಕಿಗೆ ಒಳಗಾಗಿ ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರ ಆರೈಕೆಗೆ ಹೆಚ್ಚು ಆದ್ಯತೆ ಕೊಡಬೇಕು. ಸೋಂಕು‌ ದೃಢಪಟ್ಟ ಸೋಂಕಿತರಿಗೆ ಆರಂಭದ ದಿನದಿಂದಲೇ ಚಿಕಿತ್ಸೆ ನೀಡುವ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕು‌ ಎಂದು ತಿಳಿಸಿದರು.

ಪ್ರತಿ ಕೊರೋನಾ ಆರೈಕೆ ಕೇಂದ್ರಗಳಲ್ಲಿಯೂ ಗುಣಮಟ್ಟದ ಆಹಾರ ವಿತರಣೆ ಮಾಡುವುದರ ಜೊತೆಗೆ ಉತ್ತಮ ನಿರ್ವಹಣೆ ಮಾಡಬೇಕು. ಸೋಂಕಿತರಿಂದ ದೂರುಗಳು ಕೇಳಿಬರದಂತೆ ಆರೈಕೆ ಕೇಂದ್ರಗಳನ್ನು ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.

ಹಲವು ಹೋಬಳಿ, ಗ್ರಾಮಗಳಲ್ಲಿ ಸಾರ್ವಜನಿಕರ ಅನಗತ್ಯ ಓಡಾಟ ಹೆಚ್ಚಿದ್ದು, ಅದರಲ್ಲೂ ಮುಖ್ಯವಾಗಿ ಜೂಜಾಟದ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವುದಕ್ಕೆ ಪೊಲೀಸ್ ಇಲಾಖೆ ತಕ್ಷಣವೇ ಕ್ರಮವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಎಲ್ಲಿಯೂ ಸೋಂಕಿತರಿಗೆ ಔಷಧ‌ದ ಕೊರತೆಯಾಗಬಾರದು. ಚಿಕಿತ್ಸಾ ಆರೈಕೆಯಲ್ಲೂ ಸಮಸ್ಯೆಯಾಗದಂತೆ ಕ್ರಮವಹಿಸಬೇಕು‌. ಕೊರೋನಾ ನಿಯಂತ್ರಣಕ್ಕಾಗಿ ಈಗಾಗಲೇ ಆದೇಶಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ತಾಲೂಕುವಾರು ನಿಗಧಿಪಡಿಸಿದ ಕೋವಿಡ್ ಪರೀಕ್ಷೆಗಳನ್ನು ಮಾಡುವುದರ ಜೊತೆಗೆ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಅವರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಕಾರ್ಯವೂ ಅಚ್ಚುಕಟ್ಟಾಗಿ ನಡೆಯಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಆಯಾ ತಾಲೂಕಿನ, ಗ್ರಾಮದ ಜನಪ್ರತಿನಿಧಿಗಳೊಂದಿಗೆ ಕೊರೋನಾ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ,‌ಮಾಹಿತಿ‌ ಪಡೆದರು. ಅಗತ್ಯವಿದ್ದರೆ ಕೊರೋನಾ ಆರೈಕೆ ಕೇಂದ್ರಗಳನ್ನು ತೆರೆಯಬೇಕು.‌ ಹಳ್ಳಿಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ನಿರ್ದೇಶಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಲಾಗುವ ಆಹಾರ ಪಡಿತರಕ್ಕೆ ಹೆಬ್ಬೆಟ್ಟು ಕಡ್ಡಾಯವಲ್ಲ. ತಂಬಿಂಗ್ ನಿಂದ ಸೋಂಕು ಹರಡುವ ಸಾಧ್ಯತೆಯಿದೆ. ಹಾಗಾಗಿ ದಿನಕ್ಕೆ 20-30 ಪಡಿತರದಾರರಿಗೆ ಕೂಪನ್ ನೀಡಿ ಪಡಿತರ ವಿತರಣೆಗೆ ಅಧಿಕಾರಿಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.
‌ವೀಡಿಯೋ ಕಾನ್ಪರೆನ್ಸ್

ಸಂಸದ ಜಿ.ಎಸ್.‌ಬಸವರಾಜು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರನ್ನು ಸಿ.ಸಿ. ಕೇಂದ್ರಕ್ಕೆ ಸ್ಥಳಾಂತರಿಸಲು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಶಾ/ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಜನರು ಸಹಕಾರ ನೀಡದೆ ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ತಪ್ಪಿಸಲು ಸ್ಥಳೀಯ ಕಾರ್ಯಪಡೆ ನೆರವಿನೊಂದಿಗೆ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಸಿಬ್ಬಂದಿ ಕೊರತೆ ಇದ್ದರೆ ಮೀಸಲು ಪಡೆಯನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ ಪಲ್ಸ್ ಆಕ್ಸಿಮೀಟರ್, ಸ್ಯಾನಿಟೈಸರ್, ಮಾಸ್ಕ್, ಮಾತ್ರೆ ಸೇರಿದಂತೆ ಮತ್ತಿತರ ಕೋವಿಡ್ ನಿರ್ವಹಣೆಗಾಗಿ ದಾನಿಗಳಿಂದ ನೆರವು ಬಂದಿದ್ದು. ಕೋವಿಡ್ ನಿರ್ವಹಣೆಗಾಗಿ ಪ್ರತಿ ಪಂಚಾಯತಿಗೆ ಸರ್ಕಾರ ನೀಡಿರುವ ತಲಾ 50000 ರೂ.ಗಳನ್ನು ಕುಡಿಯುವ ನೀರು ನಿರ್ವಹಣೆಗೆ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು ಸೇರಿದಂತೆ ಇತರರಿದ್ದರು.

ಜಿಲ್ಲಾಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರ ಸ್ಥಳಾಂತರ

0

Publicstory


ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿರುವ ಕೋವಿಡ್-19 ಲಸಿಕಾ ಕೇಂದ್ರವನ್ನು ಮೇ 24 ರಿಂದ ನಗರದ ಎಂಪ್ರೆಸ್ ಸರ್ಕಾರಿ ಬಾಲಕಿಯರ ಶಾಲಾ ಅವರಣಕ್ಕೆ ಸ್ಥಳಾಂತರಿಸಲಾಗುತ್ತದೆ.

ಸಾರ್ವಜನಿಕರು ಮೇ 24 ರಿಂದ ಎಂಪ್ರೆಸ್ ಸರ್ಕಾರಿ ಶಾಲಾ ಆವರಣದಲ್ಲಿ ಲಸಿಕೆಯನ್ನು ಪಡೆಯಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ಖಾಸಗಿ ಆ್ಯಂಬುಲೆನ್ಸ್ ಗಳಿಗೆ ದರ ನಿಗದಿ

Publicstory


ತುಮಕೂರು: ಕೋವಿಡ್-19 ಕಾರ್ಯಾಚರಣೆ ಹಾಗೂ ಸೋಂಕಿನಿಂದ ಮೃತಪಟ್ಟ ಸೋಂಕಿತರ ಶವ ಸಾಗಣೆ‌ ಮಾಡುವ ಖಾಸಗಿ ಆ್ಯಂಬುಲೆನ್ಸ್ ಗಳಿಗೆ ಸರ್ಕಾರ ದರ ನಿಗಧಿಗೊಳಿಸಿದ್ದು, ಅದರ ಆಧಾರದ ಮೇಲೆಯೇ ಹಣ ಪಡೆಯಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದ್ದಾರೆ.

PTA (Patient Transport Ambulance) ಆ್ಯಂಬುಲೆನ್ಸ್ ಗಳಿಗೆ ಪ್ರಾರಂಭದ 10 ಕಿ.ಮೀ.ಗೆ 1500ರೂ.ಗಳ ದರ ನಿಗದಿಪಡಿಸಲಾಗಿದ್ದು, ಆನಂತರ ಪ್ರಾರಂಭವಾಗುವ ಪ್ರತಿ ಕಿ.ಮೀ.ಗಳಿಗೆ 120 ರೂ. ಹಾಗೂ ಕಾಯುವಿಕೆಯ ಶುಲ್ಕವನ್ನು ಪ್ರತಿ ಗಂಟೆಗೆ 200 ರೂ.ಗಳ ದರವನ್ನು ನಿಗದಿಗೊಳಿಸಲಾಗಿದೆ.

ಅದೇ ರೀತಿ BLS (Basic Life support) ಆ್ಯಂಬುಲೆನ್ಸ್ ಗಳಿಗೆ ಪ್ರಾರಂಭದ 10‌ ಕಿ.ಮೀ.ಗಳಿಗೆ 2000 ರೂ.‌ಗಳ ದರವನ್ನು ನಿಗಧಿ‌ಪಡಿಸಿದ್ದು ಆನಂತರ ಪ್ರಾರಂಭವಾಗುವ ಪ್ರತಿ ಕಿ.ಮೀ.ಗೆ 120 ರೂ.‌ಗಳ ಹಾಗೂ ಪ್ರತಿ ಗಂಟೆಯ ಕಾಯುವಿಕೆಯ ಶುಲ್ಕವನ್ನು 250 ರೂ.‌ಗಳಿಗೆ ನಿಗಧಿ‌ ಮಾಡಲಾಗಿದೆ.

ನಿಗಧಿಗೊಳಿಸಿರುವ ದರವು ಪಿಪಿಇ ಕಿಟ್, ಕೈಗವಸು,ಮಾಸ್ಕ್ ಶೀಲ್ಡ್, ಸ್ಯಾನಿಟೈಜೇಷನ್, ಚಾಲಕ, EMT ಹಾಗೂ ಇಂಧನ ವೆಚ್ಚ ಸೇರಿದಂತೆ ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ. ವಾಹನ ಚಾಲಕರಿಗೆ ನೀಡಲಾಗುವ ಪಿಪಿಇ ಕಿಟ್ ಹಾಗೂ ಇನ್ನಿತರೆ ಸೇವೆಗಳನ್ನು ಆಸ್ಪತ್ರೆಯಿಂದ ನೀಡತಕ್ಕದ್ದಲ್ಲ. ನಿಗದಿಗೊಳಿಸಿದ ದರವು ಇಂಧನ ವೆಚ್ಚವನ್ನೊಳಗೊಂಡಿರುತ್ತದೆ.

ಸದರಿ ವಾಹನಗಳಿಗೆ ಸರ್ಕಾರದ ವತಿಯಿಂದ ಯಾವುದೇ ಇಂಧನವನ್ನು ನೀಡಲಾಗುವುದಿಲ್ಲ. ಖಾಸಗಿ ಆ್ಯಂಬುಲೆನ್ಸ್ ನವರು ಕಡ್ಡಾಯವಾಗಿ ನಿಗದಿ ಮಾಡಿದ ದರವನ್ನು ಮಾತ್ರ ಪಡೆಯಬೇಕು. ಹೆಚ್ಚಿನ ಮೊತ್ತವನ್ನು ಪಡೆಯಲು ಬೇಡಿಕೆಯಿಟ್ಟಲ್ಲಿ ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ತುಮಕೂರು ಜಿಲ್ಲೆ (ದೂ: 9742649999) ಇವರಿಗೆ ದೂರು ನೀಡಬಹುದು.

ಆದೇಶ ಉಲ್ಲಂಘಿಸಿದ ಪಕ್ಷದಲ್ಲಿ The Disaster Management Act 2005 ರ ಕಲಂ 65(ಬಿ) ರನ್ವಯ ಕ್ರಮ ಕೈಗೊಳ್ಳಲಾಗುವುದು
ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಆಕ್ಸಿಜನ್ ಸಾಂದ್ರಕ ನೀಡಿದ ಎಂಡಿಎಲ್

Publicstory


ತುರುವೇಕೆರೆ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನಂತರ ಅವಶ್ಯಕವಾಗುವ ಪ್ರಾಣವಾಯು ಆಕ್ಸಿಜನ್ ಪೂರೈಕೆಗಾಗಿ ಮಾಜಿಶಾಸಕ ಹಾಗೂ ಕಾಂಗ್ರೆಸ್ ಸಮಿತಿಯ ಹಿಂದುಳಿದವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಲಯನ್ ಎಂ.ಡಿ.ಲಕ್ಷ್ಮೀನಾರಾಯಣ್ ಎರಡು ಆಕ್ಸಿಜನ್ ಸಾಂದ್ರಕಗಳನ್ನು (ಸ್ಯಾಚರೇಟ್‍ಗಳನ್ನು) ಇಂದು ಕೊಡುಗೆಯಾಗಿ ನೀಡಿದರು.

ಈ ಎರಡೂ ಸಾಂದ್ರಕಗಳನ್ನು ಪಟ್ಟಣ ಪಂಚಾಯಿತಿಯ ಹಳೆಯ ಆಡಳಿತ ಕಛೇರಿಯಲ್ಲಿ ಸ್ಥಾಪಿಸಿದ್ದು ಎಂ.ಡಿ. ಲಕ್ಷ್ಮೀನಾರಾಯಣ್ ಅವರ ಸಹೋದರ ಉದ್ಯಮಿ ಎಂ.ಡಿ.ಮೂರ್ತಿ ಅವರು ಶುಕ್ರವಾರ ಬೆಳಿಗ್ಗೆ ವಿದ್ಯುಕ್ತವಾಗಿ ಈ ಘಟಕವನ್ನು ಉದ್ಘಾಟನೆ ಮಾಡುವ ಮೂಲಕ ಸೇವೆಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಎಂ.ಡಿ.ಮೂರ್ತಿ “ನಮ್ಮ ಕುಟುಂಬ ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದು ಚೇತರಿಸಿಕೊಂಡಿದ್ದೇವೆ. ಹಾಗಾಗಿ ನಮಗೆ ಸೋಂಕು ಪೀಡಿತ ರೋಗಿಗಳ ಸಮಸ್ಯೆಯ ಪ್ರತ್ಯಕ್ಷ ಅನುಭವವಾಗಿದೆ. ಈ ಹಿನ್ನಲೆಯಲ್ಲಿ ರೋಗಿಗಳು ಶೀಘ್ರ ಚೇತರಿಸಿಕೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಸಹೋದರ ಎಂ.ಡಿ. ಲಕ್ಷ್ಮೀನಾರಾಯಣ್ ಅವರು ನಮ್ಮ ತಂದೆ. ದಿ.ದಾಸಪ್ಪಶೆಟ್ಟರ ಸ್ಮರಣಾರ್ಥ ಎರಡು ಆಕ್ಸಿಜನ್ ಸಾಂದ್ರಕಗಳನ್ನು ನೀಡಿದ್ದಾರೆ. ಕರೋನಾದಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳು ಇದರ ಸದುಪಯೋಗ ಪಡೆಯಬೇಕು” ಎಂದರು.

ಆಕ್ಸಿಜನ್ ಸಾಂದ್ರಕಗಳ ನಿರ್ವಹಣೆಯ ಜವಾಬ್ಧಾರಿ ಹೊತ್ತಿರುವ ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ವಕೀಲ ಪಿ.ಎಚ್.ಧನಪಾಲ್ ಮಾತನಾಡಿ “ ಎಂಡಿಎಲ್ ಸಹೋದರರು ಕೋವಿಡ್ ಉಛ್ರಾಯ ಸ್ಥಿತಿಯಲ್ಲಿರುವ ಈ ಕಷ್ಟಕಾಲದಲ್ಲಿ ಅತ್ಯಂತ ಶ್ರೇಷ್ಠ ಕಾರ್ಯವನ್ನು ಮಾಡಿದ್ದಾರೆ. ಈ ಸೇವಾ ಪರಂಪರೆ ಹೀಗೆ ಮುಂದುವರೆಯಲಿ” ಎಂದು ಆಶಿಸಿ ಎಂಡಿಎಲ್ ಮತ್ತು ಎಂ.ಡಿ.ಮೂರ್ತಿಯವರನ್ನು ಅಭಿನಂದಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್ ಕುಮಾರ್ ಸಾಂದ್ರಕಗಳಿಗೆ ಚಾಲನೆ ನೀಡಿ ಶುಭಹಾರೈಸಿದರು. ಜನಪ್ರಿಯ ವೈದ್ಯ ಡಾ.ನಾಗರಾಜ್, ಲಯನ್ಸ್ ಅಧ್ಯಕ್ಷ ರಾಜಣ್ಣ, ಟ್ರಸ್ಟ್ ಕಾರ್ಯದರ್ಶಿ. ಟಿ.ವಿ.ಮಹೇಶ್, ಶಿವಾನಂದಯ್ಯ, ಖಜಾಂಚಿ ಬಸವರಾಜು, ಎಸ್.ಎಂ.ಕುಮಾರಸ್ವಾಮಿ, ಸಾರ್ವಜನಿಕ ಆಸ್ಪತ್ರೆಯ ಭಾಸ್ಕರ್, ಮಿಹಿರಾ ಕುಮಾರ್, ಬರಹಗಾರ ತುರುವೇಕೆರೆ ಪ್ರಸಾದ್ ಇತರರು ಭಾಗವಹಿಸಿದ್ದರು.

ಎಂ ಆರ್ ಪಿ ಗಿಂತ ಹೆಚ್ಚಿನ ದರದಲ್ಲಿ ಮಾರಾಟ: 6 ಮೆಡಿಕಲ್ ಸ್ಟೋರ್ ವಿರುದ್ಧ ಮೊಕದ್ದಮೆ ದಾಖಲು

ತುಮಕೂರು(ಕವಾ)ಮೇ21:

ಕಾನೂನು ಮಾಪನಶಾಸ್ತ್ರ ಇಲಾಖೆಯು ಕೋವಿಡ್ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್, ಆಕ್ಸಿಮೀಟರ್ ಗಳನ್ನು ಎಂಆರ್‌ಪಿ ಗಿಂತ ಹೆಚ್ಚಿನ‌ ದರದಲ್ಲಿ ಮಾರಾಟ ಮಾಡಿದ 6 ಮೆಡಿಕಲ್ ಸ್ಟೋರ್ ಗಳ ವಿರುದ್ಧ ಮೊಕದ್ದಮೆ ದಾಖಲಿಸಿದೆ.

ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ ನಡೆಸಿದ ತಪಾಸಣೆಯಲ್ಲಿ ಈ ಮೊಕದ್ದಮೆ ದಾಖಲಿಸಲಾಗಿದೆ.
ಸಹಾಯಕ ನಿಯಂತ್ರಕರ ನೇತೃತ್ವದಲ್ಲಿ ತುಮಕೂರು ಉಪವಿಭಾಗ-1 ಹಾಗೂ 2, ತಿಪಟೂರು ಉಪವಿಭಾಗ ಮತ್ತು ಮಧುಗಿರಿ ಉಪವಿಭಾಗದ ನಾಲ್ಕು ನಿರೀಕ್ಷಕರ ತಂಡ ತಪಾಸಣೆ ನಡೆಸಿದ್ದು, ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ 6 ಔಷಧಿ ಮಳಿಗೆ ಸೇರಿದಂತೆ ಪೊಟ್ಟಣ ಸಾಮಾಗ್ರಿ‌ ರೂಪದ ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ 4 ದಿನಸಿ ಅಂಗಡಿಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಒಟ್ಟಾರೆ 26 ಔಷಧಿ ಮಳಿಗೆ, 64 ದಿನಸಿ ಅಂಗಡಿ ಹಾಗೂ 14 ನ್ಯಾಯ ಬೆಲೆ ಅಂಗಡಿಗಳನ್ನು ತಪಾಸಣೆ ಮಾಡಲಾಗಿದೆ.

ತಪಾಸಣೆ ಸಂದರ್ಭದಲ್ಲಿ ಮೆಡಿಕಲ್ ಸ್ಟೋರ್ ಗಳಿಂದ 7500 ರೂ. ಹಾಗೂ ದಿನಸಿ ಅಂಗಡಿಗಳಿಂದ 4500 ರೂ.ಗಳನ್ನು ವಸೂಲಿ ಮಾಡಲಾಗಿದೆ. ಎಂಆರ್ ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ
ಮೆಡಿಕಲ್ ಸ್ಟೋರ್/ದಿನಸಿ ಅಂಗಡಿಗಳು ಹಾಗೂ ಪಡಿತರ ವಿತರಣೆಯಲ್ಲಿ ತೂಕ ಮತ್ತು ಅಳತೆಯಲ್ಲಿ ವಂಚನೆ ಮಾಡುವ ನ್ಯಾಯ ಬೆಲೆ ಅಂಗಡಿಗಳ ವಿರುದ್ಧ ಸಾರ್ವಜನಿಕ ದೂರು ದಾಖಲಿಸಲು ರಾಜ್ಯ ಮಟ್ಟದ ಸಹಾಯ ವಾಣಿ (080-22253500)ಯನ್ನು ಸ್ಥಾಪಿಸಲಾಗಿದೆ. ದೂರು ನೀಡುವವರು ಸಹಾಯವಾಣಿ ಅಥವಾ ಇ-ಮೇಲ್ ವಿಳಾಸ clm-lm-ka@nic.in ಅನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8310756754/6362207873ನ್ನು ಸಂಪರ್ಕಿಸಬಹುದಾಗಿದೆ
ಎಂದು ಸಹಾಯಕ ನಿಯಂತ್ರಕ ಶ್ರೀಕಾಂತ್ ಎಂ ಬುರಾನಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ

ತುಮಕೂರು(ಕವಾ)ಮೇ.21:
ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ 18-44 ವರ್ಷದ ಒಳಗಿನ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಮಂಚೂಣಿ ಕಾರ್ಯಕರ್ತರ ಇಲಾಖಾ ಮುಖ್ಯಸ್ಥರೊಂದಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸಭೆ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಕೋವಿಡ್ ನಿಗ್ರಹಕ್ಕೆ ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರ ಇಲಾಖೆ ಮುಖ್ಯಸ್ಥರು ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಬೇಕು.‌ ನಿಗಧಿ ಪಡಿಸಿದ ದಿನಾಂಕಗಳಂದು ಆಯಾ ಇಲಾಖೆ ಮುಖ್ಯಸ್ಥರು
ತಮ್ಮ ವ್ಯಾಪ್ತಿಯ ಕಾರ್ಯಕರ್ತರನ್ನು ಗುರುತಿಸಿ
annexure-3 ಅನುಬಂಧ ಪತ್ರದಲ್ಲಿ ಪ್ರಮಾಣೀಕರಿಸಿ ಅವರಿಗೆ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು‌ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

ಕೊರೋನಾ ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಲಾದ ಅಂಗವೈಕಲ್ಯ ಹೊಂದಿರುವ(ಮಾನಸಿಕ ಅಸ್ವಸ್ಥತೆ ಸೇರಿದಂತೆ) ‌ಫಲಾನುಭವಿಗಳು ಮತ್ತು ಒಬ್ಬ ಆರೈಕೆದಾರರು, ಖೈದಿಗಳು, ಚಿತಾಗಾರ/ಸ್ಮಶಾನ/ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರಿಗೆ ಮೇ 22ರಂದು ಕೋವಿಡ್ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳ್ಳಬೇಕು.

ಉಳಿದಂತೆ ನಿಗಧಿಪಡಿಸಿದ ಮೇ 23, 24, 25ರಂದು ಲಸಿಕೆ ಲಭ್ಯತೆ ನೋಡಿಕೊಂಡು
ಆರೋಗ್ಯ ಕಾರ್ಯಕರ್ತರ ನಿಕಟ ಕುಟುಂಬಸ್ಥರು, ಪ್ರಸ್ತುತ ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು,
ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆಯ ಸಿಬ್ಬಂದಿ, ಬೀದಿ ಬದಿ ವ್ಯಾಪಾರ ಮಾಡುವವರು, ಭದ್ರತೆ ಮತ್ತು ಕಛೇರಿಗಳ ಹೌಸ್‌ ಕೀಪಿಂಗ್‌ ಸಿಬ್ಬಂದಿಗಳು, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರ / ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರ ಆರೈಕೆದಾರರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಧ್ಯಮದವರು, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವ ವ್ಯಕ್ತಿಗಳು, ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು (ಪೆಟ್ರೋಲ್ ಬಂಕ್, ಕರ್ಮಚಾರಿ ಒಳಗೊಂಡಂತೆ), ಔಷಧಿ ತಯಾರಿಸುವ ಕಂಪನಿಯ ಸಿಬ್ಬಂದಿಗಳು, ಆಸ್ಪತ್ರೆಗಳಿಗೆ ಆಕ್ಸಿಜನ್, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿಗಳು, ಅಧಿಕೃತ ಗುರುತಿನ ಚೀಟಿ ಹೊಂದಿರದ ಫಲಾನುಭವಿಗಳು (ಉದಾಹರಣೆ: ವೃದ್ಧಾಶ್ರಮ ವಾಸಿಗಳು, ನಿರ್ಗತಿಕರು), ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು,
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.)ಕೆಲಸಗಾರರಿಗೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಹಾಗೂ ಆದ್ಯತೆ ಗುಂಪುಗಳಾದ ಕಟ್ಟಡ ಕಾರ್ಮಿಕರು, ಟೆಲಕಾಮ್ ಮತ್ತು ಇಂಟರ್‌ನೆಟ್ ಸೇವಾದಾರರು, ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್‌ ಕೆಲಸಗಾರರು,ಚಿತ್ರೋದ್ಯಮದ ಉದ್ಯಮಿ/ಕಾರ್ಯಕರ್ತರು/ಸಿಬ್ಬಂದಿ, ಅಡ್ವೊಕೇಟ್ ಗಳು, ಹೋಟೆಲ್ ಮತ್ತು ಆತಿಥ್ಯ ಸೇವಾದಾರರು, ಕೆ.ಎಂ.ಎಫ್ ,ರೈಲ್ವೆ, ಗಾರ್ಮೆಂಟ್ ಕಾರ್ಖಾನೆ, ಅರಣ್ಯ ಇಲಾಖೆ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, GAIL ಸಿಬ್ಬಂದಿ ಮತ್ತು RSK ಕೆಲಸಗಾರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಸ್ವಧಾರ್ ಗೃಹ ವಾಸಿಗಳು ಮತ್ತು ರಾಜ್ಯ ಮಹಿಳಾ ನಿಲಯ ವಾಸಿಗಳು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿಗಳಿಗೆ ಲಸಿಕಾಕರಣ ಮುಗಿಸಬೇಕು‌ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಇಲಾಖಾವಾರು ಅಧಿಕಾರಿಗಳಿದ್ದರು.

ರೆಡ್ ಝೋನ್, ಹಾಟ್ ಸ್ಪಾಟ್ ಪ್ರದೇಶಗಳ ಸೋಂಕಿತರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿ

ತುಮಕೂರು(ಕವಾ)ಮೇ.21
ಕೊರಟಗೆರೆ ತಾಲೂಕಿನ‌‌ ರೆಡ್ ಝೋನ್ ಗ್ರಾಮ ತೀತಾ,
ಹಾಟ್ ಸ್ಪಾಟ್ ಗ್ರಾಮಗಳಾದ
ಜಟ್ಟಿ ಅಗ್ರಹಾರ ಮತ್ತು ಎಲೆರಾಂಪುರ ಗ್ರಾಮಗಳಿಗಿಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.

ಸೋಂಕಿತರಿಗೆ ಕೋವಿಡ್ ಔಷಧ ಕಿಟ್ ಸಮರ್ಪಕವಾಗಿ ತಲುಪುತ್ತಿದೆಯಾ ಎಂಬುದನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿಗಳು ಸೋಂಕಿತರ ಮನೆ‌-ಮನೆಗೆ ಭೇಟಿ ನೀಡಿ ಕೋವಿಡ್ ಕಿಟ್ ನೀಡಿರುವ ಬಗ್ಗೆ ಪರಿಶೀಲನೆ ನಡೆಸಿ, ಆರೋಗ್ಯ ವಿಚಾರಿಸಿ, ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ವಿಶ್ವಾಸ ತುಂಬಿದರು.

ತೀತಾ ಗ್ರಾಮದಲ್ಲಿ44 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು‌ ರೆಡ್ ಝೋನ್ ಎಂದು ಘೋಷಿಸಲಾಗಿದೆ.. ಅದೇ ರೀತಿ 22 ಪ್ರಕರಣಗಳಿದ್ದ ಜಟ್ಟಿ ಅಗ್ರಹಾರ ಗ್ರಾಮವನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿತ್ತು. ತಾಲುಕು ಆಡಳಿತ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಪ್ರಸ್ತುತ 8 ಸಕ್ರಿಯ ಪ್ರಕರಣಗಳಿಗೆ ಇಳಿದಿದೆ.
ಜಟ್ಟಿ ಅಗ್ರಹಾರ ಸೇರಿದಂತೆ ಉಳಿದ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಸೋಂಕಿನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡೀಸಿ ಸೂಚಿಸಿದರು.
ಈ ವೇಳೆ ಎಸ್ ಪಿ ಡಾ.ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಕೊರಟಗೆರೆ ತಾಲೂಕು ತಹಸೀಲ್ದಾರ್ ಡಿ.ಎಂ.ಗೋವಿಂದರಾಜು ಇದ್ದರು.

ಕೋವಿಡ್ ಬಾಧಿತ ಅನಾಥ ಮಕ್ಕಳ ಪಾಲನೆ: ಆಸಕ್ತ ಪೋಷಕರಿಂದ ಅರ್ಜಿ ಆಹ್ವಾನ

Publicstory


ತುಮಕೂರು: ಕೋವಿಡ್-19ರ 2ನೇ ಅಲೆಯ ಹಿನ್ನೆಲೆಯಲ್ಲಿ ಕೆಲವು ಕುಟುಂಬಗಳಲ್ಲಿ ಮಕ್ಕಳ ತಂದೆ-ತಾಯಿಗಳಿಬ್ಬರು ಕೋವಿಡ್-19 ಸೋಂಕಿಗೆ ಒಳಗಾಗಿ ಮರಣ ಹೊಂದುವ ಸಂದರ್ಭಗಳು ಎದುರಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದಾದರೂ ಕುಟುಂಬದಲ್ಲಿ ತಂದೆ-ತಾಯಿಗಳಿಬ್ಬರು ಕೋವಿಡ್ ಸೋಂಕಿಗೆ ಒಳಗಾಗಿ ಮರಣ ಹೊಂದಿ ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದಂತಹ ಪರಿಸ್ಥಿತಿ ಒದಗಿಬಂದಲ್ಲಿ ಅಂತಹ ಮಕ್ಕಳನ್ನು ಪಾಲನೆ ಮಾಡುವ ಆಸಕ್ತ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೋವಿಡ್ ಬಾಧಿತ 0-6 ವರ್ಷದೊಳಗಿನ ಹಾಗೂ 6-18 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಇಚ್ಛಿಸುವವರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಅಶೋಕನಗರ, 5ನೇ ಅಡ್ಡರಸ್ತೆ, ತುಮಕೂರು ಇವರನ್ನು ಅಥವಾ 0816-2956699/ 9481965770/ 9986041990/ 9964927371/ 9844080412ನ್ನು ಸಂಪರ್ಕಿಸಿ ತಮ್ಮ ಹೆಸರು ಮತ್ತು ವಿವರಗಳನ್ನು ನೀಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.

ಇವರ ಮಾನವ ಸೇವೆಗೆ ಶರಣೆಂದ ಹಿಂದೂ ಸಮಾಜ

ಉಜ್ಜಜ್ಜಿ ರಾಜಣ್ಣ

ಬೆನ್ನಿಗೆ ಬೋರ್ಡ, ಬ್ಯಾನರ್ ಕಟ್ಟಿಕೊಳ್ಳದೆ ಕೊರೊನದಿಂದ ಮಡಿದ ಜನರ ಅಂತಿಮ ಸಂಸ್ಕಾರ ನೆಡೆಸಿಕೊಡುತ್ತಿದ್ದಾರೆ ಅಲ್ಪ ಸಂಖ್ಯಾತ ಧರ್ಮದ, ಸಮುದಾಯ ಬಂದುಗಳು. ಇವರದು ಕೇವಲ ಅಳಿಲು ಸೇವೆ ಅಷ್ಟೇ ಅಲ್ಲ; ನಿಜವಾದ ” ಮಾನವ ಸೇವೆ ” ಎಂದು ಭಾರತೀಯ ಸಮಾಜ, ಎಲ್ಲೆಲ್ಲೂ ಕೈ ಎತ್ತಿ ಗೌರವಿಸತೊಡಗಿದೆ.

ಜೆ ಸಿ ಬಿ ಯಿಂದ ಅಮಾನವೀಯವಾಗಿ ತಳ್ಳಲ್ಪಡುತ್ತಿದ್ದ ಕೊರೊನದಿಂದ ಮೃತರಾದ ಭಾರತೀಯರ ಹೆಣಗಳನ್ನು ಕಂಡ ದೇಶ ನಿವಾಸಿ ಅಲ್ಪ ಸಂಖ್ಯಾತ ಧರ್ಮೀಯರಾದ ಈ ಪ್ರಬುದ್ಧ ಭಾರತೀಯರು, ಅಂತಿಮವಾಗಿ ಮೃತ ಭಾರತೀಯರ ಶವಸಂಸ್ಕಾರಕ್ಕೆ ಮುಂದಾಗಿದ್ದನ್ನು ಮಾನವಂತರು ಮಾತ್ರ ಮರೆಯದಂತಹ ವಿಷಯ. ” ಸೌಹಾರ್ದ ಭಾರತದ ನಿರ್ಮಾಣ ” ಕಾರ್ಯದಲ್ಲಿ ಸಹಭಾಗಿತ್ವ ಹೊಂದಿದವರಾಗಿ ಕಾಣತೊಡಗಿದ್ದಾರೆ ಈ ಮಾನವ ಪ್ರೇಮಿಗಳು ನಾಡಿನಾದ್ಯಂತ.

ಮಾನವ ಧರ್ಮವನ್ನು ಎತ್ತಿ ಹಿಡಿಯುವ ‘ಸಂತ’ ಕೆಲಸಕ್ಕೆ ಮುಂತಾದ ಇವರ ಆರೋಗ್ಯ ಯೋಗಕ್ಷೇಮವೂ ಬಹಳ ಮುಖ್ಯ. ಸಾವು ಬಂದು ಹೆಗಲು ಮೇಲೆ ಕುಳಿತಿದ್ದರೂ ದೋಚುವ ಕೆಲಸದಲ್ಲಿ ಮನಮಗ್ನರಾದವರ ಸುದ್ದಿಗಳನ್ನು ಜಾಲತಾಣಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಕೇಳುತ್ತಿದ್ದೇವೆ, ಓದುತ್ತಿದ್ದೇವೆ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ.

ಇದು ಇಂದಿನ ಭಾರತೀಯರ ದಯಾನೀಯ ಸ್ಥಿತಿಯನ್ನು ತೋರುಗಾಣಿಸುತ್ತಿದೆ. ಸಾವೇ ಬೆನ್ನಿಗೆ ಬಿದ್ದರೂ ಬೆಚ್ಚದೆ ಸಾವನ್ನೇ ಬೆನ್ನಟ್ಟಿ ಬಹುದೂರ ಬಂದವರಂತೆ ಸ್ವಂತ ವಾಹನಗಳನ್ನು ಬಳಸಿ ಸ್ವ ಇಚ್ಛೆ, ಸ್ವಪರಿಶ್ರಮದಿಂದ ಸ್ವಂತ ವೆಚ್ಚದಲ್ಲೇ ಕೊರೊನದಿಂದ ಮೃತರಾದವರ ದೇಹಗಳನ್ನು ಅವರವರ ಧಾರ್ಮಿಕ ಅನುಸರಣೆಗಳ ಮೂಲಕ ಸಂಸ್ಕಾರ ಕಾರ್ಯಗಳನ್ನು ನಿರ್ವಹಿಸುತ್ತಿರುವ ಮುಸ್ಲಿಂ ಧರ್ಮೀಯರ ಕಾರ್ಯ ಅಭಿನಂದನಾರ್ಹ ಹಾಗು ಮಾನವತೆಯ ಮಹತ್ಕಾರ್ಯವಾಗಿ ನಾಡಿನಾದ್ಯಂತ ಮೆಚ್ಚುಗೆಗೆ ಕಾಣತೊಡಗಿದೆ.

ಇದನ್ನು ಅಳಿಲು ಸೇವೆ ಎಂಬುದಕ್ಕಿಂತ ಇವರು ಕೈಗೊಂಡಿರುವುದು ನಿಜವಾದ ಮಾನವ ಸೇವೆ. ಮಂದ ಬುದ್ದಿ, ಮತೀಯತೆ, ಅಂದ ಭಕ್ತಿಗಿಂತಲೂ ಅದಮ್ಯ ಮಾನವೀಯ ನಿಲುವುಳ್ಳವರಾಗಿ ದಿನವಹಿ ಶ್ರಮಿಸುತ್ತಿರುವ ಈ ಭಾರತೀಯರ ಕೈಂಕರ್ಯ ಮರೆಯಲಾಗದ ಮಹತ್ಕಾರ್ಯ. 

ಪರಸ್ಥಳಗಳಲ್ಲಿ  ಪ್ರಾಣ ಬಿಟ್ಟವರ ಪರಿಸ್ಥಿತಿಯನ್ನು ಅರಿತು, ಅವರ ಕಳೇಬರಗಳನ್ನು ಅವರವರ ಊರು ಉದ್ಮಾನಗಳಿಗೆ ತಲುಪಿಸುತ್ತಿರುವರು. ಗೋಳೋ ಎನ್ನಬೇಕಾದವರೂ ಸಹ ಹತ್ತಿರ ಸುಳಿಯದಂತಹ ಸಂದರ್ಭದಲ್ಲಿ, ಕೊರೊನ ತಂದ ಸಾವಿನಿಂದ ಮುರಿದು ಬಿದ್ದ ಭಾರತೀಯರ ಶಿರ ಹೊನ್ನ ಕಲಶವನ್ನು ಹತ್ತರದಲ್ಲೇ ನಿಂತು ಆತುಕೊಂಡು, ಬಾಚಿ ತಂಬಿ ಹೊತ್ತು ತಂದು,  ಬಂದುಮಿತ್ರರ ಅನುಪಸ್ಥಿತಿಯಲ್ಲಿಯೂ ಮೃತರಿಗೆ ಅಂತಿಮ ಸಂಸ್ಕಾರ ನೆರವೇರಿಸಲು ಮುಂದಾದವರು ಈ ಮಾನವ ಬಂಧುಗಳು. 

ಹಳ್ಳಿಗಳಲ್ಲಿ ನಗರಗಳಂತೆ ಪ್ರತ್ಯೇಕವಾದ ಶವಾಗಾರಗಳಿಲ್ಲ. ಸತ್ತವರ ಹೊಲ ಮನೆಗಳನ್ನು ಹುಡುಕುವುದೂ ಕಷ್ಟ. ಮೃತರ ಸಂಬಂದಿಗಳೂ ದೂರ ದೂರ. ಸತ್ತ ಸುದ್ದಿ  ಬಂದರೆ ಕೂಗಳತೆಗಾಗಲಿ ಕಣ್ಪಾಡಿಗಾಗಲಿ ಕಡೇಪಕ್ಷ ಸಂಪರ್ಕಕ್ಕಾಗಲಿ ಸಿಗದಂತಾಗುತ್ತಿದ್ದಾರೆ ಮೃತರ ಸಂಬಂಧಿಗಳು, ಕಾರಣ ಕೊರೊನ ಭಯ ಭೀತಿ ಅವರ ತಲೆ ತುಂಬಿಕೊಂಡಿದೆ.

ತಲೆಯ ಮೇಲೊಂದು ಕುಂಬ ಬಳಗದ ನೀರನ್ನೂ ಕಾಣದ ಹಾಗೆ, ಕಡೆಯ ಪಕ್ಷ ಹೆಣಿಂಡೆಖೂಳಿಗೂ ಗತಿ ಇಲ್ಲದವರ ಹಾಗೆ ಮೃತರು ಮಣ್ಣಾಗುತ್ತಿರುವರು. ‘ ತಲೆಗೊಳ್ಳಿ’  ತಿವಿಯುವವರಿಲ್ಲ; ‘ಸಿಡಿಗೆಸೂಡಿ ‘ ತೋರುವವರೂ ಹತ್ತಿರ ಬರದಂತಾಗಿರುವುದು. ಹೆಗಲಿಳಿವಿಕೊಂಡು ಮೃತರ ಮನೆಯ ‘ ದೀಗೆ ‘ ಪದರ್ಶನ ಮಾಡಲೂ ಬಳಗ ಸೇರದಂತಾಗಿರುವುದು. ಮೂರು ದಿನದ ಲೇಸಿಗೆ ಬಂದವರ ಸಾವಿನ ಕೇಡು ಮಾತನಾಡಿಸಲೂ ಊರಿನ ಜನರು ಸಮೀಪ ಸಳಿಯದಂತೆ ಮಾಡಿದೆ ಕರೋನ. 

ಕೊರೊನ, ಬಂದು ಬದುಕಿರುವಾಗಲೇ ರೋಗಿಗಳನ್ನು ಹತ್ತಿರದಿಂದ ಹಾರೈಕೆ ಮಾಡಲಾಗುತ್ತಿಲ್ಲ. ಹೊಲ್ದ ಮನೆ, ತೋಟದ ಮನೆ, ಪಂಸೆಟ್ ಮನೆಗಳೆಂದು ಪ್ರತ್ಯೇಕಗೊಳಿಸಲಾಗುತ್ತಿದೆ ಎನ್ನುವ ಕಳವಳ ಕಾರಿ ಸಂಗತಿಗಳು ಕೇಳಿಬರುತ್ತಿವೆ. ಕೊರೊನ ಬಂದರೂ ಬದುಕಿ ಉಳಿಯುವ ಎಲ್ಲಾ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಲೋಕವೇ ಧೈರ್ಯ ತುಂಬುತ್ತಿದ್ದರೂ ಜನರು ಭೀತಿಯಿಂದ ಎನೆಲ್ಲಾ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಕಾಣತೊಡಗಿದೆ.

ಸಂಸ್ಕಾರ ಕಾರ್ಯಗಳನ್ನು ನೆರವೇರಿಸಲು ಮುಂದಾದವರು  ಶವಗಳನ್ನು ಹೂಳುವ ಜಾಗಗಳನ್ನು ಹುಡುಕಾಟ ಮಾಡುವುದರಿಂದ ಹಿಡಿದು ಸುಡುವ ಸೌದೆಯನ್ನೂ ಹುಡುಕಿ ತಂದು ಶವಸಂಸ್ಕಾರ ನಡೆಸುತ್ತಿದ್ದಾರೆ, ನಡೆಸುವಂತಾಗಿದೆ.

ಮಣ್ಣಿಗೆ ಬರಬೇಕಾದವರು ಮನೆಯಲ್ಲಿಯೇ ಅತ್ತುಕರೆದು ಸುಮ್ಮನಾಗುತ್ತಿರುವರು. ದೂರದಲ್ಲಿ ನಿಂತು ಸತ್ತವರ ಮುಖ ದರ್ಶನವನ್ನೂ ಮಾಡದೆ ವಾರಸುದಾರರೇ ಹಿಂದೆ ಸರಿದು ನಿಲ್ಲುತ್ತಿರುವಾಗ ಈ ಆಪ್ತಮಿತ್ರರು ಆಪತ್ಬಾಧವರಂತೆ ಬಂದು ಕೊರೊನದಿಂದ ಮಡಿದವರನ್ನು ಮಣ್ಣಿನ ಮಡಿಲಿಗೆ ಸೇರಿಸಲು ಮುಂದಾಗಿದ್ದಾರೆ, ಹರಸಾಹಸ ಪಾಡು ಪಡುತ್ತಿದ್ದಾರೆ. ಮೃತರ ಶರೀರಗಳನ್ನು ಪಂಚ ಭೂತಗಳಲ್ಲಿ ವಿಲೀನಗೊಳಿಸಲು ನಗರ ಮತ್ತು ಗ್ರಾಮೀಣ ಭಾರತದಲ್ಲಿ ಶ್ರಮಿಸುತ್ತಿದ್ದಾರೆ.

ಕೊರೊನಕ್ಕೆ ಬಲಿಯಾದ ಭಾರತೀಯರನ್ನು ಬೇವರ್ಸಿ ಹೆಣಗಳಾಗಲು ಬಿಡದೆ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿಕೊಂಡು ಸತ್ತವರಿಗೆ ಅಂತಿಮ ಸಂಸ್ಕಾರ ನೆರವೇರಿಸಲು ಸಾಕಷ್ಟು ಪ್ರಮಾಣದಲ್ಲಿ ಭಾರತೀಯ ಮುಸ್ಲಿಮರು ಗೌರವ ಮತ್ತು ಮಾನವ ಘನತೆಯನ್ನು ಎತ್ತಿ ಹಿಡಿಯುವ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರವುದು ಗ್ರಾಮ ಭಾರತದಲ್ಲಿ ಎದ್ದುಕಾಣುವ ರೀತಿಯಲ್ಲಿ ಗೋಚರಿಸುತ್ತಿದೆ.

ಇಂತಹ ಅಗ್ರ ಕಾರ್ಯದಲ್ಲಿ ತೊಡಗಿರುವ ಅಗ್ರಜರನ್ನು ಅಗ್ರಸ್ಥಾನದಲ್ಲಿ ಗ್ರಾಮೀಣ ಭಾರತವೂ ಗೌರವಗಳೊಂದಿಗೆ ಎಲ್ಲೆಲ್ಲೂ ಕಾಣುವ ಮೂಲಕ ಅಭಿನಂದನೆಗಳನ್ನು ಸಮರ್ಪಿಸುತ್ತಿದೆ.