Thursday, May 7, 2026
Google search engine
Home Blog Page 143

ದಾನವಾಗಿ ನೀಡಿದ ಜಮೀನು ವಾಪಸ್ ಪಡೆಯಬಹುದೇ

0

ಮಹೇಂದ್ರಕೃಷ್ಣಮೂರ್ತಿ, ವಕೀಲರು


ಆರವತ್ತು ವರ್ಷದ ಹಿಂದೆ ಜಮೀನನ್ನು ಶಾಲೆ ನಿರ್ಮಾಣಕ್ಕೆ ಕೆಲವು ಷರತ್ತಿನ ಅನ್ವಯ ದಾನ ನೀಡಲಾಗಿತ್ತು .
ಶಾಲೆಯ ಹೆಸರಿನಲ್ಲಿ ಜಮೀನು ಇದೆ ಅದರೆ ಖಾತೆಯಾಗಿಲ್ಲ .ಇದೀಗ ಜಮೀನು ನೀಡಿದವರು ಇದೀಗ ನಮ್ಮ ಷರತ್ತು ಉಲ್ಲಂಘನೆಯಾಗಿದೆ ಜಮೀನು ನಮ್ಮದೇ ಅನ್ನುತ್ತಾರೆ ಇದಕ್ಕೆ ಪರಿಹಾರವೇನು ? ಸರ್.
ಶಾಲೆ ಪ್ರಾರಂಭದಲ್ಲಿ ಅವರ ಹೆಸರನ್ನು ಇಡಲಾಗಿತ್ತು ನಂತರದಲ್ಲಿ upgrade ಆದ ಸಮಯದಲ್ಲಿ ಅದು ಪಾಲನೆಯಾಗಿಲ್ಲ ಇದೀಗ ಮತ್ತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಅಗಿ ಪರಿವರ್ತನೆಯಾಗಿದೆ .

ಮಧುಸೂದನ್, ಪ.ನಾ.ಹಳ್ಳಿ


ದಾನ ಪತ್ರದಲ್ಲಿರುವ ಷರತ್ತುಗಳ ಬಗ್ಗೆ ನೋಡಬೇಕು.‌ಷರತ್ತು ಉಲ್ಲಂಘನೆ ಮಾಡಿದ ಪಕ್ಷದಲ್ಲಿ ಕರಾರು ಅಥವಾ ದಾನ ರದ್ಧತಿಯ ಅಂಶ ಸೇರಿಸಿದ್ದಾರೆಯೇ, ಇಲ್ಲವೇ ಎನ್ನುವುದು ಸಹ ಮುಖ್ಯವಾಗಲಿದೆ. ಷರತ್ತು ಉಲ್ಲಂಘಿಸಿದ ತಕ್ಷಣವೇ ಜಮೀನನ್ನು ಏಕಾಏಕಿ ವಾಪಸ್ ಮರಳಿಸಲು ಬರುವುದಿಲ್ಲ. ಅವರು ಈ ಬಗ್ಗೆ ಕೋರ್ಟ್ ನಲ್ಲಿ ದಾವೆ ಹೂಡಬೇಕಾಗುತ್ತದೆ. ಆನಂತರ ಸಾರ್ವಜನಿಕ ಹಿತಾಸಕ್ತಿ, ಷರತ್ತು ಉಲ್ಲಂಘನೆ ವಿಷಯ, ಕಾಲಮಿತಿ ಈ ಎಲ್ಲದರ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಲಿದೆ.

ದಾನ ಪತ್ರವನ್ನು ಕಂದಾಯ ಅಧಿಕಾರಿಗೆ ಹಾಜರುಪಡಿಸಿ ಆರ್ ಟಿಸಿ ಅನ್ನು ನಿಮ್ಮ ಶಾಲೆಯ ಹೆಸರಿಗೆ ಬದಲಿಸಿಕೊಳ್ಳಲು ಅವಕಾಶವಿದೆ.

ಸಾಮಾನ್ಯ ಸಂದರ್ಭಗಳಲ್ಲಿ ದಾನವನ್ನು ದಾನ ಪಡೆದವ ಒಮ್ಮೆ ಅಂಗೀಕರಿಸಿದ್ದರೆ ಆ ದಾನವನ್ನು ವಾಪಸ್ ಪಡೆಯಲು ಬರುವುದಿಲ್ಲ


ಲೇಖಕರು ತುಮಕೂರಿನಲ್ಲಿ ವಕೀಲರು, ಪ್ರಶ್ನೆ ಕೇಳಲು ವಾಟ್ಸಾಪ್ ನಂ 9844817737

ದೇವೇಗೌಡರ ಹುಟ್ಟುಹಬ್ಬ ನಾಡ ಹಬ್ಬವಾಗಲಿ

0

ದಯಾನಂದ್ ಗೌಡ (ದೀಪುಗೌಡ)


ಮಣ್ಣಿನ ಮಗ, ಕರ್ನಾಟಕದ ಹೆಮ್ಮೆಯ ಪುತ್ರ, ಕೆಂಪು ಕೋಟೆಯ ಮೇಲೆ ತಿರಂಗವನ್ನು ಹಾರಿಸಿದ ಏಕೈಕ ಕನ್ನಡಿಗನ ಜನ್ಮ ದಿನ ನಮ್ಮ ಮನೆಯ ಹಬ್ಬ, ನಮ್ಮ ನಾಡಹಬ್ಬವಿದು.

ಯಾಕೆ ಈ ಪರಿ ಹೆಮ್ಮೆಯಿಂದೇಳುತ್ತಿನೆಂದರೇ ಈ ವ್ಯಕ್ತಿ ಶಕ್ತಿಯಾದ ರೀತಿಯೇ ಬೇರೆ ಸಾಮಾನ್ಯ ರೈತನ ಮಗನಾಗಿ ಹುಟ್ಟಿ,

ತಳಮಟ್ಟದಿಂದ ಎದ್ದು ಬಂದು ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಕೀರ್ತಿ ದೇವೆಗೌಡರದ್ದು.

ಗೌತಮ ಬುದ್ಧನ ಸಾಮಾಜಿಕ ಚಿಂತನೆ, ಬಸವಣ್ಣನವರ ಸಮಾನತೆ, ಬಾಬಾ ಸಾಹೇಬರ ಹೋರಾಟ & ಚಿಂತನೆಗಳ ಮೈಗೂಡಿಸಿಕೊಂಡ ವಿಶೇಷ ವ್ಯಕ್ತಿತ್ವ ದೇವೆಗೌಡರದು. ಅವರು ಪ್ರಧಾನಿಯಾದಾಗ ಮಾಡಿದ್ದು ಅಪಾರ.

ಕೃಷಿ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ವಿಶೇಷ ಕೊಡುಗೆ ನೀಡಿದವರು.
ನೀರಾವರಿಗೆ ಅತೀ ಹೆಚ್ಚು ಪ್ರಾಶಸ್ತ್ಯ ನೀಡಿ, ಮಹಿಳಾ ಮೀಸಲಾತಿಯನ್ನು ಸಾಂವಿಧಾನಿಕವಾಗಿ ಜಾರಿಗೆ ತಂದು ಶೈಕ್ಷಣಿಕವಾಗಿ, ರಾಜಕೀಯವಾಗಿ, ಔದ್ಯೋಗಿಕ ವಾಗಿ ಜಾರಿ ಮಾಡಿ ಮಹಿಳಾ ಸಬಲೀಕರಣಕ್ಕೆ ಪ್ರಾಶಸ್ತ್ಯ ನೀಡಿದವರು.

ಇಂಥಹ ನೂರಾರು ಕಾರ್ಯಕ್ರಮಗಳನ್ನು ದೇಶದ ಜನರಿಗೆ ಅವರು ನೀಡಿದ್ದಾರೆ. ಕರ್ನಾಟಕದ ಮಣ್ಣಿನ ಮಗನಾಗಿ ದೇಶವನ್ನಾಳಿದ ದೇವೇಗೌಡರ ಜನ್ಮದಿನ ನಾಡಹಬ್ಬದಂತೆ ಎಂದರೆ ತಪ್ಪೇನಿಲ್ಲ.

ಇಂತಹ ದಿಗ್ಗಜ ರಿಗೆ ಈ ಮಣ್ಣಿನ ಪರವಾಗಿ, ದೇಶದ ಸಮಸ್ತ ನಾಗರಿಕರ ಪರವಾಗಿ ಹೃದಯ ತುಂಬಿ ಜನ್ಮ ದಿನದ ಶುಭಾಷಯವನ್ನು ಅರ್ಪಿಸುತ್ತಿದ್ದೇನೆ.

ಗೌರವ ವಂದನೆಗಳೊಂದಿಗೆ,

ದಯಾನಂದ್ ಗೌಡ (ದೀಪುಗೌಡ)
ರಾಜ್ಯ ಪ್ರಧಾನ ಕಾರ್ಯದರ್ಶಿಗಳು,
ಯುವ ಜಾತ್ಯಾತೀತ ಜನತಾದಳ.

ಬಹುಮುಖ ಪ್ರತಿಭೆಯ ಹಿರಿಮರಳಿ ಧರ್ಮರಾಜ್ ಇನ್ನಿಲ್ಲ.

ಮೈಸೂರು ಸಾಂಸ್ಕೃತಿಕ ವಲಯದಲ್ಲಿ ಅಜಾತಶತ್ರುವಾಗಿ ಗುರುತಿಸಿಕೊಂಡು ಹಿರಿಯ ಮತ್ತು ಕಿರಿಯ ಸಾಹಿತಿಗಳ ಪ್ರೀತಿಗೆ, ಗೌರವಕ್ಕೆ ಪಾತ್ರರಾಗಿದ್ದ ನಲುಮೆಯ ಸ್ನೇಹಿತರಾದ ಹಿರಿಮರಳಿ ಧರ್ಮರಾಜ್ ಹೃದಯಾಘಾತದಿಂದ ಭಾನುವಾರ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಆತ್ಮೀಯರ ಸರಣಿ ಸಾವಿನಿಂದ ಘಾಸಿಗೊಂಡಿರುವ ಮನಸ್ಸು ಧರ್ಮರಾಜ್ ಅವರ ಅಗಲಿಕೆಯಿಂದ ಮತ್ತಷ್ಟು ವಿಲಗುಟ್ಟತೊಡಗಿದೆ. ಧರ್ಮರಾಜ್ ಮತ್ತು ನನ್ನ ಗೆಳೆತನ ಒಂದೂವರೆ ದಶಕದ್ದು. ನಾನು ಮತ್ತು ಅವರು ಆಯೋಜಿಸುತ್ತಿದ್ದ ಬಹುತೇಕ ಸಮಾರಂಭಗಳಲ್ಲಿ ಪರಸ್ಪರ ಭಾಗಿಯಾಗುತ್ತಿದ್ದೆವು. ನನ್ನ ತವರು ಮಂಡ್ಯ ನೆಲದ ಪ್ರತಿಭೆ ಎಂಬ ಕಾರಣಕ್ಕೆ ವಿಶೇಷ ಆದರ ಅವರೆಡೆಗಿತ್ತು.

ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಸ್ನಾತ್ತಕೋತ್ತರ ಪದವಿ ಪಡೆದ ನಂತರ, ಪಾಂಡವಪುರದ ಹಿರಿಮರಳಿಯಿಂದ ಬದುಕನ್ನು ಕಟ್ಟಿಕೊಳ್ಳಲು ಮೈಸೂರಿಗೆ ಬಂದ ಧರ್ಮರಾಜ್ ಅವರು, ಹುಟ್ಟೂರಿನ ಹೆಸರನ್ನು ತಮ್ಮೊಂದಿಗೆ ಹಾಸುಹೊಕ್ಕಾಗಿಸಿಕೊಂಡು ನೆಲೆನಿಂತವರು. ಮೈಸೂರಿನ ಪ್ರತಿಷ್ಠಿತ ಹಾರ್ಡ್ವಿಕ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬಳಿಕ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾಲೇಜಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳನ್ನು ಅವಿರತವಾಗಿ ಕೈಗೊಂಡು ಮುನ್ನಡೆಸುತ್ತಿದ್ದರು. ಹಿರಿಯ ಸಾಹಿತ್ಯ ಚೇತನಗಳನ್ನು ತಮ್ಮ ಕಾಲೇಜಿಗೆ ಕರೆಸುವ ಮೂಲಕ ವಿದ್ಯಾರ್ಥಿಗಳಿಗೆ ಅವರ ಒಡನಾಟ ಸಿಗುವಂತೆ ಮಾಡುತ್ತಿದ್ದ ಕ್ರಿಯಾಶೀಲ ವ್ಯಕ್ತಿತ್ವ ಅವರದ್ದಾಗಿತ್ತು.

ಹಿರಿಯ ಸಾಹಿತಿಗಳಾದ ನಾಡೋಜ ಡಾ. ದೇಜಗೌ, ಡಾ. ಸಿಪಿಕೆ, ಡಾ. ಮಳಲಿ ವಸಂತಕುಮಾರ್ ಅವರಂತಹ ದಿಗ್ಗಜರ ಅತ್ಯಾಪ್ತ ಒಡನಾಟದಲ್ಲಿ ಅನುಗಾಲವೂ ಇದ್ದ ಧರ್ಮರಾಜ್ ಅವರು, ಮಳಲಿಯವರಿಗೆ ಒಂದು ರೀತಿಯಲ್ಲಿ ‘ಬಲಗೈ’ ಆಗಿದ್ದರು. ಮಳಲಿಯವರೂ ಸಹ ಧರ್ಮರಾಜರ ವೃತ್ತಿ, ಬರಹ, ಸಂಘಟನೆ, ಬದುಕಿಗೆ ಬೆನ್ನೆಲುಬಾಗಿದ್ದರು. ಸಾಹಿತ್ಯ ಕೃಷಿಗೆ ತಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಂಡು ‘ಪ್ರೇಮ ವಸಂತ’, ‘,ಮುತ್ತು ಉದುರಿತು’, ‘ಕನ್ನಡ ಸರಳ ವ್ಯಾಕರಣ’ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಮೂರು ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಕವನಗಳು, ಲೇಖನಗಳು ಹಲವಾರು ಪತ್ರಿಕೆಯಲ್ಲಿ ಸಹ ಪ್ರಕಟವಾಗಿವೆ.

ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದ ಧರ್ಮರಾಜ್ ಅವರು ಕರ್ನಾಟಕ ವಿಚಾರ ವೇದಿಕೆ ಮತ್ತು ಹಿರಿಮರಳಿ ಸಾಂಸ್ಕೃತಿಕ ಸಿರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ವಿಚಾರ ಸಂಕಿರಣ, ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ, ಉಪನ್ಯಾಸ, ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಆಯೋಜಿಸುವ ಮೂಲಕ ನೂರಾರು ಮಂದಿ ಹಿರಿಯ ಮತ್ತು ಕಿರಿಯ ಪ್ರತಿಭಾವಂತರಿಗೆ ‘ವೇದಿಕೆ’ ಕಲ್ಪಿಸಿದ ಹೆಗ್ಗಳಿಕೆ ಹೊಂದಿದ್ದರು. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಸಹಕಾರ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿ ‘ಸಹಕಾರ ಕ್ಷೇತ್ರ’ದಲ್ಲಿ ಸಹ ಪಯಣ ಆರಂಭಿಸಿದ್ದರು.

ಭೌತಿಕವಾಗಿ ದೈತ್ಯರಾಗಿದ್ದ ಧರ್ಮರಾಜ್ ಅವರು ಸಾಂಸ್ಕೃತಿಕವಾಗಿ ಸಹ ದೈತ್ಯರಾಗಿಯೇ ಮೈಸೂರಿನಲ್ಲಿ ಬೆಳೆಯುತ್ತಿದ್ದರು. ಹಿರಿಯರು ಕಿರಿಯರೆಂಬ ಭೇದವೆಣಿಸದೆ ಎದುರು ಸಿಕ್ಕವರೆಲ್ಲರನ್ನೂ ಹೃದಯಪೂರ್ವಕವಾಗಿ ‘ಅಣ್ಣಯ್ಯ’ ಎಂದೇ ಕರೆಯುತ್ತಿದ್ದ ವಿನಯವಂತರು. ಸರಳತೆ, ಸಜ್ಜನಿಕೆ, ನಿಗರ್ವಿತನ, ಪರೋಪಕಾರಿ, ನಿಸ್ವಾರ್ಥತೆ, ಸಾಮರಸ್ಯ ಗುಣಗಳ ಗಣಿಯಾಗಿದ್ದರು. ಯಾರನ್ನೂ ಸುಖಾಸುಮ್ಮನೆ ಟೀಕಿಸಿದವರಲ್ಲ, ದೂಷಿಸಿದವರಲ್ಲ, ದ್ವೇಷಿಸಿದವರೂ ಅಲ್ಲ. ಮೈಸೂರಿನ ಎಲ್ಲಾ ಸಾಂಸ್ಕೃತಿಕ ಸಂಘಟಕರು ಮತ್ತು ಸಾಹಿತಿಗಳ ಜೊತೆಗೆ ಸೌಹಾರ್ದ ಬಾಂಧವ್ಯ ಇಟ್ಟುಕೊಂಡಿದ್ದರು. ಅದರಲ್ಲೂ ಸಾಹಿತಿ ಮತ್ತು ಸಹೋದ್ಯೋಗಿ ಬೆಸೂರ್ ಮೋಹನ್ ಪಾಳೇಗಾರ್ ಮತ್ತು ಭೂಮಿಗಿರಿ ಪ್ರಕಾಶನದ ಬೆಟ್ಟೇಗೌಡರ ಜೊತೆಗೆ ಖಾಸ ಗೆಳತನವಿತ್ತು.

ಶಿಕ್ಷಣ, ಸಾಹಿತ್ಯ, ಸಂಘಟನೆ, ಸಹಕಾರ ಕ್ಷೇತ್ರದಲ್ಲಿ ದಕ್ಷತೆ ಮತ್ತು ಬದ್ಧತೆಯಿಂದ ಕೆಲಸ ಮಾಡುತ್ತಿದ್ದ ಹಿರಿಮರಳಿ ಧರ್ಮರಾಜ್ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲಿ ಸಹ ತಮ್ಮ ಕವನ ವಾಚಿಸಿ ಗಮನಸೆಳೆದಿದ್ದರು. ಇವರ ಬಹುಮುಖ ಪ್ರತಿಭೆಯ ಸಾಧನೆಗೆ ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ವತಿಯಿಂದ ನೀಡಲಾಗುವ ‘ಕನ್ನಡ ಸೇವಾರತ್ನ ಪ್ರಶಸ್ತಿ, ಬೆಂಗಳೂರಿನ ಕುವೆಂಪು ಕಲಾನಿಕೇತನ ಸಂಘಟನೆಯ ‘ಕುವೆಂಪು ಸಾಹಿತ್ಯ ರತ್ನ ಪ್ರಶಸ್ತಿ’ ಸೇರಿದಂತೆ ಹತ್ತಾರು ಪ್ರಶಸ್ತಿಗಳು ದೊರಕಿವೆ.

ಯಾವತ್ತಿಗೂ ಯಾರಿಗೂ ಕೇಡನ್ನು ಬಯಸದ ಹಿರಿಮರಳಿ ಧರ್ಮರಾಜ್ ಅವರ ಅಕಾಲಿಕ ಅಗಲಿಕೆ ಕನ್ನಡ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವುಂಟು ಮಾಡಿದೆ. ಸದಾ ಕನ್ನಡ ಕೆಲಸ ಮಾಡಲು ಪತರುಗುಟ್ಟುತ್ತಿದ್ದ ಅವರ ಯೋಜನೆಗಳು, ಆಲೋಚನೆಗಳು ಅಪೂರ್ಣಗೊಂಡಿವೆ. ಮರುಜನ್ಮವಿರುವುದಾದರೆ ಮತ್ತೊಮ್ಮೆ ಹುಟ್ಟಿ ಬನ್ನಿ ಧರ್ಮಣ್ಣ…ನೀವು ನನ್ನನ್ನು ಕಿರಿಯ ಎನ್ನದೆ ಸದಾ ಬಾಯಿತುಂಬ ‘ಅಣ್ಣಯ್ಯ’, ‘ಸಜಗೌ’ ಎಂದು ಕರೆಯುತ್ತಿದ್ದ ಪ್ರೀತಿಯ ದನಿ ನನ್ನೊಳಗೆ ಅನುಗಾಲವೂ ಅನುರಣಿಸುತ್ತಿರುತ್ತದೆ…

ಟಿ. ಸತೀಶ್ ಜವರೇಗೌಡ, ಮಂಡ್ಯ*

ಇಸ್ರೇಲ್ -ಪ್ಯಾಲಿಸ್ತೇನ್ ಸಂಘರ್ಷ:ಜೆರುಸಲೇಮಿನಲ್ಲಿ ಏನು ನಡೆಯುತ್ತಿದೆ ?

ಡಾ.ಪ್ರೀತಂ ಅವರು ಮೂಲತಃ ವೈದ್ಯರು. ಅವರು ಯೂರೋಪ್ ನಲ್ಲಿ ಸ್ನಾತಕೋತ್ತರ ವೈದ್ಯ ಶಿಕ್ಷಣ ಪಡೆಯುವಾಗ ಅಂತರ ರಾಷ್ಟ್ರೀಯ ರಾಜಕೀಯ, ಭೌಗೋಳಿಕ, ಜನಾಂಗೀಯ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದವರು. ಪ್ಯಾಲೆಸ್ಟೈನ್, ಇಸ್ರೇಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರು ಈ ಲೇಖನ ಬರೆದಿದ್ದಾರೆ.

ಕೆಲವು ದಿನಗಳಿಂದ ನಡೆಯುತ್ತಿರುವ ಇಸ್ರೇಲಿಗಳು ಮತ್ತು ಪ್ಯಾಲಿಸ್ತೇನಿಯರ ಸಂಘರ್ಷವು ಕಳೆದ ಹಲವಾರು ವರ್ಷಗಳಲ್ಲಿ ಉಭಯ ಕಡೆಯ ನಡುವಿನ ಹಿಂಸಾಚಾರದ ಅತ್ಯಂತ ಕೆಟ್ಟ ಘಟ್ಟಗಳಲ್ಲಿ ಒಂದಾಗಿದೆ.
ರಂಜಾನ್ ಪ್ರಾರಂಭವಾಗುತ್ತಿದ್ದಂತೆ
ಪ್ಲಾಜಾವನ್ನು ಮುಚ್ಚುವ ಬಗ್ಗೆ ಜೆರುಸಲೆಮ್ ಓಲ್ಡ್ ಸಿಟಿಯ ಬಳಿಯ 7 ಪ್ಯಾಲಿಸ್ತೇನಿಯನ್ ಕುಟುಂಬಗಳನ್ನು ತಮ್ಮ ಮನೆಗಳಿಂದ ಹೊರ ಹಾಕುವ ಕ್ರಮಗಳಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು .

1948ರಲ್ಲಿ ಇಸ್ರೇಲ್ ಉದಯವಾದಾಗ ತಮ್ಮ ಆಸ್ತಿಯನ್ನು ಕಳೆದುಕೊಂಡ ಕುಟುಂಬಗಳಿಗೆ ಯುನೆಟೆಡ್ ನೇಷನ್ ಪೂರ್ವ ಜೆರುಸಲೆಂನಲ್ಲಿ ವ್ಯವಸ್ಥೆಯನ್ನು ಕಲ್ಪಿಸಿತ್ತು. ಈ ಕುಟುಂಬಗಳು 1956 ರಿಂದ ಓಲ್ಡ್ ಸಿಟಿಯಲ್ಲಿ ವಾಸಿಸುತ್ತಿವೆ ಇದು ನಗರದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದುವೇ ಬಿಕ್ಕಟ್ಟಿಗೆ ಕಾರಣ.

ಈ ಜಾಗವನ್ನು ಮುಸ್ಲಿಮರು ಹರಾಮ್ ಇಶ್ ಷರೀಫ್ ಮತ್ತು ಯಹೂದಿಗಳು ಟೆಂಪಲ್ ಮೌಂಟ್ ಎಂದು ಕರೆಯುತ್ತಾರೆ .

ಇಸ್ರೇಲಿ ಪೊಲೀಸರು ಅಲ್ ಅಕ್ಸಾ ಮಸೀದಿಗೆ ಪ್ರವೇಶಿಸಿ ಪವಿತ್ರ ಸ್ಥಳದೊಳಗೆ ಪ್ಯಾಲಿಸ್ತೇನಿಯರೊಂದಿಗೆ ಘರ್ಷಣೆ
ನಡೆಸಿದರು. ಪ್ಯಾಲಿಸ್ತೀನಿಯರು ಕಲ್ಲು ಎಸೆದಾಗ ಸ್ಟನ್ ಗ್ರೆನೇಡ್ ಗಳನ್ನು ಹಾರಿಸಿದರು.
ಪರಿಣಾಮವಾಗಿ ಅಲ್ಲಿ ಮತ್ತು ಓಲ್ಡ್ ಸಿಟಿಯ ಇತರ ಭಾಗಗಳಲ್ಲಿ ನಡೆದ ಘರ್ಷಣೆಗಳಲ್ಲಿ ನೂರಾರು ಪ್ಯಾಲೆಸ್ತೇನಿಯರು ಮತ್ತು ಕೆಲವು ಇಸ್ರೇಲಿ ಪೊಲೀಸ್ ಅಧಿಕಾರಿಗಳು ಗಾಯಗೊಂಡರು.

ಗಾಜಾದ ಪ್ಯಾಲಿಸ್ತೇನ್ ಉಗ್ರಗಾಮಿ ಗುಂಪುಗಳು ಇಸ್ರೇಲಿಗೆ ರಾಕೆಟ್ ಹಾರಿಸುವ ಮೂಲಕ ಕಣದಲ್ಲಿ ಸೇರಿಕೊಂಡವು. ಅದು ವೈಮಾನಿಕ ದಾಳಿಯೊಂದಿಗೆ ಪ್ರತಿಕ್ರಿಯಿಸಿತು.

ಅಂದಿನಿಂದ ಗಾಜಾದಿಂದ ಪ್ಯಾಲಿಸ್ತೇನಿಯನ್ ಉಗ್ರಗಾಮಿ ಗುಂಪುಗಳು ಇನ್ನೂ ನೂರಾರು ರಾಕೆಟ್ ಗಳನ್ನು ಮತ್ತು ಇಸ್ರೇಲ್ ತನ್ನ ಫಿರಂಗಿ ಮತ್ತು ವಾಯುದಾಳಿಯ ಬಾಂಬ್ ಸ್ಫೋಟವನ್ನು ಹೆಚ್ಚಿಸಿದೆ.

ಏತನ್ಮಧ್ಯೆ ಅರಬ್ ಮತ್ತು ಯಹೂದಿ ನಾಗರಿಕರ ನಡುವಿನ ಗಲಭೆ ಮತ್ತು ಹಿಂಸಾತ್ಮಕ ಘರ್ಷಣೆಗಳಿಂದ ಇಸ್ರೇಲ್ ನ ಹಲವಾರು ನಗರಗಳು ಕಂಪಿಸುತ್ತಿವೆ.
ರಾಜಕೀಯ, ಧಾರ್ಮಿಕ ಮತ್ತು ರಾಷ್ಟ್ರೀಯತವಾದ ಅಂಶಗಳೆಲ್ಲವೂ ಈ ಪರಿಸ್ಥಿತಿಯಲ್ಲಿ ಪಾತ್ರ ವಹಿಸಿರುವುದರಿಂದ ಈ ಹಿಂಸಾಚಾರಕ್ಕೆ ಮುಚ್ಚಳವನ್ನು ಹಾಕೋದು ಅಷ್ಟು ಸುಲಭವಲ್ಲ

ಹುಟ್ಟುಹಬ್ಬ ಆಚರಣೆ ಬದಲು ಹಸಿದವರಿಗೆ ಅನ್ನ ನೀಡಿದ ಪುಟಾಣಿಗಳು

ಹುಟ್ಟುಹಬ್ಬ ಎಂದರೆ
ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಹುಟ್ಟು ಹಬ್ಬಕ್ಕೆ ಹೊಸಬಟ್ಟೆ,
ಕೇಕ್ ತಂದು, ಅಕ್ಕಪಕ್ಕದ ಸ್ನೇಹಿತರನ್ನೆಲ್ಲಾ ಸೇರಿಸಿ ಕೇಕ್ ಕತ್ತರಿಸಿ ಸಂಭ್ರಮಿಸುವುದನ್ನು ನೋಡಲು ಪಾಲಕರಿಗೆ ಖುಷಿ.ಆದರೆ ಸಿರಾ ನಗರದ ಅಣ್ಣತಮ್ಮಂದಿರು ಭಾನುವಾರ ಅವರ ಹುಟ್ಟುಹಬ್ಬವನ್ನು
ಹಸಿದವರಿಗೆ ಅನ್ನ ನೀಡುವ ಮೂಲಕ‌ ಆಚರಿಸಿಕೊಂಡಿರುವುದು ವಿಶೇಷ.ಸಿರಾ ನಗರ ವಾಸಿ ಶಿಕ್ಷಕ ಆರ್. ತಿಪ್ಪೇಸ್ವಾಮಿಯವರ ಮಕ್ಕಳಾದ ವಿನೀತ್ 3ನೇ ವರ್ಷದ ಪ್ರಣೀತ್ ತನ್ನ 5 ನೇ ವರ್ಷದ ಹುಟ್ಟುಹಬ್ಬವನ್ನು ಹಸಿದವರಿಗೆ ಅನ್ನ ನೀಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.ಕೊರೋನ ಎರಡನೇ ಅಲೆಗೆ ಸರ್ಕಾರ ಲಾಕ್ ಡೌನ್ ಘೋಷಿಸಿರುವುದರಿಂದ ಕೆಲ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹಲವರ ಜೀವನೋಪಾಯ ತೀರ ಕಷ್ಟವೆನಿಸಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಈ ಪುಟಾಣಿಗಳ ನಿರ್ಧಾರ ಶ್ಲಾಘನೀಯವಾದದ್ದು.ಈ ಮಕ್ಕಳ ಒತ್ತಾಸೆಗೆ ನೀರೆದವರು ಸಿರಾ ಮಾನವ ಬಂದುತ್ವ ವೇದಿಕೆಯ ಪದಾಧಿಕಾರಿಗಳು.ವೇದಿಕೆ ವತಿಯಿಂದ ಕಳೆದ 13 ದಿನಗಳಿಂದ ನಗರದಲ್ಲಿರುವ ಅಸಹಾಯಕರು ಮತ್ತು ನಿರ್ಗತಿಕರು ನಗರಸಭೆಯ ಪೌರಕಾರ್ಮಿಕರು, ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್ ಸ್ವಚ್ಛಗೊಳಿಸುವ ಕಾರ್ಮಿಕರು, ಡಿಪೋದಲ್ಲಿ ರಕ್ಷಣೆ ಮಾಡುವ ರಕ್ಷಕರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿವರ್ಗದವರಿಗೆ ಆಹಾರದ ಪೊಟ್ಟಣ ಮತ್ತು ನೀರನ್ನು ವಿತರಿಸಲಾಯಿತು.ಆಹಾರ ವಿತರಣೆಯ‌ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ಎಸ್. ರಂಗರಾಜು ಹಾಗೂ ಜಿಲ್ಲಾ ಸಂಯೋಜಕ ಧರಣಿ ಕುಮಾರ್, ವೇದಿಕೆ ಕಾರ್ಯಕರ್ತರಾದ ಮೋಹನ್, ಬೊಮ್ಮಣ್ಣ, ಅಹಿಂದ ಮುಖಂಡ ರಾಜೇಂದ್ರಪ್ರಸಾದ್‌ ಇತರರು ಹಾಜರಿದ್ದರು.

ಭಾನುವಾರದ ಕವಿತೆ :ಕಿರೀಟ ಕೊರೋನಾ

ಡಾ// ರಜನಿ .ಎಂ

ವಜ್ರದುಂಗರ ,💍
ಅವಳ ಓಲೆ⭐

ಆತನ ಮೀಸೆ🧔
ಹಂಚಿನ ಮೇಲಣ ದೋಸೆ🍥

ನೆಲಕ್ಕೆ ಬಿದ್ದ ಕಾಫಿಯ ಹನಿ
ಮೊಟ್ಟೆ ಆಮ್ಲೆಟ್🍳

ಕಂಬಳಿ ಹುಳು🐡
ನೈಟಿಯ ಮೇಲಣ ಗುಂಡಿ💮

ದತ್ತೂರ, ಗಾಳಿ ಹೂ🌼
ಉಪ್ಪುನೇರಳೆ🦠

ಉಲ್ಲನ್ ಉಂಡೆ 🧶
ಕಿವಿ🥝ಪ್ರುಟ್

ಎಲ್ಲದರಲ್ಲೂ ಕರೋನಾ ಆಕಾರ
ಕಾಣುತಿದೆ😁

ಕಾಣದ ವೈರಸ್

ಉಗಿದ ಉಗುಳು🗣️
ಸೀತ ಸೀನಲ್ಲಿ ಅಡಗಿ

ಕಂಡವರ ಕಿತ್ತು ಗೊಂಡು
ಮಾತಾಡಲು ಅಂಜಿ

ಮನೆಯಲ್ಲೇ ಕುಕ್ಕರಿಸಿ
ದುಃಖ ಉಕ್ಕರಿಸಿ

ಕೊರೋನಾ ಕಾರುಬಾರು
ಓಡಿ ಊರು ಸೇರು

ಮಾತೆಲ್ಲಾ ಕರೋನಾ

ಗೆದ್ದು ಕೊರೋನಾ
ಎದ್ದು ಹಲ್ಲುಜ್ಜಿ😁

ಸಿಂಕಲ್ಲಿ
ಉಗಿದ ಪೆಸ್ಟ್ ಲ್ಲೂ ಕೋರೋನಾ🗯️

ಮನೆಗೆ ಬಂದರೆ👍

ಅವಳ ಹಣೆಯ ಸ್ಟಿಕರ್ ಅಲ್ಲೂ ಕೊರೋನಾ🥰

ಪಾಪು ಬರೆದ ಸೂರ್ಯ ಕೊರೋನಾ🥰☀️

( ಈ ಕವಿತೆ ಕರೋನಾ ಆಕಾರದ ಕುರಿತಾದ ವಿಡಂಬನಾತ್ಮಕ ಕವಿತೆಯಾಗಿದೆ. ಕರೋನಾ ವೈರಸ್ ಸೂಕ್ಷ್ಮ ದರ್ಶಕ ಯಂತ್ರ ದಲ್ಲಿ ನೋಡಿದಾಗ ಮುಳ್ಳುಗಳನ್ನು ತನ್ನ ಮೈ ಮೇಲೆ ಹೊಂದಿರು ಕೀರಿಟದ ಆಕಾರವಿದೆ ಎಂಬ ಕಾರಣದಿಂದ ಕರೋನಾ ಎಂಬ ಹೆಸರು ಬಂದಿದೆ. ಕರೋನಾದ ಅರ್ಥವೂ ಕೂಡ ಇದೇ ಆಗಿದೆ. ಕರೋನಾದ ಚಿತ್ರ ಮನದಲ್ಲಿ ಮೂಡಿದಾಗ ಎಲ್ಲಾ ವಸ್ತುಗಳಲ್ಲೂ ಕರೋನಾ ಆಕಾರ ಕಲ್ಪಿಸಿಕೊಳ್ಳುವ ಪ್ರಯತ್ನ ಮಾಡುವುದು ಸಹಜ. ಅಂತೆಯೇ ಕರೋನಾ ವೈರಸ್ ಚಿತ್ರವೂ ಸೀರೆ, ಬಟ್ಟೆಯ ಮೇಲೆ ಕಲೆಯಾಗಿ ಮೂಡಿದೆ. ಮಕ್ಕಳು ಬಿಡಿಸುವ ಚಿತ್ರದಲ್ಲೂ ಕರೋನಾ ಕಂಡ ಕವಯತ್ರಿ ಕರೋನದ ವಿರುದ್ಧ ಹೋರಾಡಿ ಗೆದ್ದುಬಂದು,ಕೊರೊನಾ ಸೋಲಿಸಿದ ಹಮ್ಮನ್ನು ಬಹಳ ಗಮ್ಮತ್ತಾಗಿ ಬರೆದಿದ್ದಾರೆ. ಕರೋನ ವೈರಸನ್ನು ಕುರಿತ ವಿಡಂಬನೆಯನ್ನು ಈ ಕವಿತೆಯಲ್ಲಿ ಮನಗಾಣಿಸಿದ್ದಾರೆ)

ತುಮಕೂರು ಕೊರೊನಾ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ

ತುಮಕೂರು ಮೇ15


ಕೋವಿಡ್ -19 ನಿರ್ವಹಣೆ ಕುರಿತು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೋವಿಡ್ ಕರ್ತವ್ಯ ನಿರತ ವೈದ್ಯರು ಹಾಗೂ
ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಸಂಜೆ ವರ್ಚುಯಲ್ ಸಭೆ ನಡೆಸಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಮತ್ತು ಸಲಹೆ-ಸೂಚನೆ, ಅಭಿಪ್ರಾಯಗಳ ಮಾಹಿತಿ‌ ಪಡೆದರು.

ತುಮಕೂರು ಜಿಲ್ಲೆಯಿಂದ ಜಿಲ್ಲಾ ಆಸ್ಪತ್ರೆಯ ಫಿಜಿಷಿಯನ್
ಡಾ. ಪಿ. ಭಾನುಪ್ರಕಾಶ್ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು “ತುಮಕೂರು ಜಿಲ್ಲೆ ಬೆಂಗಳೂರಿನ ಪ್ರತಿಬಿಂಬವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ?” ಎಂದು ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದ ಡಾ. ಭಾನುಪ್ರಕಾಶ್
ಜಿಲ್ಲೆಯಲ್ಲಿ ಪ್ರಸ್ತುತ 77,039 ಪಾಸಿಟಿವ್ ಪ್ರಕರಣಗಳಿವೆ. ಹತ್ತು ತಾಲೂಕುಗಳ ಪೈಕಿ ತುಮಕೂರು ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳಿವೆ. ಈವರೆಗೆ 660 ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಈವರೆಗೆ 3609 ಕೋವಿಡ್ ಸೋಂಕಿತರು ದಾಖಲಾಗಿದ್ದಾರೆ. ಐಸಿಯುನಲ್ಲಿ 663 ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, 441 ಸೋಂಕಿತರು ಮೃತಪಟ್ಟಿದ್ದಾರೆ.

ತುಮಕೂರು-ಬೆಂಗಳೂರು ಓಡಾಡುವವರ ಸಂಖ್ಯೆ ಹೆಚ್ಚಿಗೆ ಇರುವ ಪರಿಣಾಮ, ಬೆಡ್ ಸಿಕ್ಕಿಲ್ಲವೆಂದು ಬೆಂಗಳೂರಿನಿಂದ ತುಮಕೂರಿಗೆ ಹಾಗೂ ತುಮಕೂರಿನಿಂದ ಬೆಂಗಳೂರಿಗೆ ಹೋಗುವವರಿಂದ, ಲಸಿಕೆ ಪಡೆಯುವ ಸಲುವಾಗಿ ತುಮಕೂರಿಗೆ ಬಂದಿದ್ದ ಕಾರಣದಿಂದ ಸೋಂಕಿನ ಪ್ರಮಾಣ ಜಿಲ್ಲೆಯಲ್ಲಿ ಏರಿಕೆಯಾಗಿದೆ.

ಆದರೂ ಜಿಲ್ಲೆಯಲ್ಲಿ ಅಧಿಕಾರಿಗಳ ಸಮನ್ವಯತೆ ಉತ್ತಮವಾಗಿರುವುರಿಂದ ಲಭ್ಯವಿರುವ ಸೌಲಭ್ಯಗಳಲ್ಲೇ ನಿರ್ವಹಣೆ ಸಾಧ್ಯವಾಗಿದೆ‌‌ ಎಂದರು.

ನಂತರ ಮುಖ್ಯಮಂತ್ರಿಗಳು “ನಿಮ್ಮ ಅನುಭವದ ಪ್ರಕಾರ ಮೊದಲನೇ ಅಲೆ ಹಾಗೂ ಎರಡನೇ ಅಲೆ ನಡುವೆ ಇರುವ ವ್ಯತ್ಯಾಸವೇನು?” ಎಂಬ ಬಗ್ಗೆ ಮಾಹಿತಿ ಕೇಳಿದಾಗ
ಮೊದಲನೆ ಅಲೆಯಲ್ಲಿ‌ ಹೋಂ ಐಸೋಲೇಷನ್ ಕಡ್ಡಾಯವಾಗಿ ಮಾಡಲಾಗುತ್ತಿತ್ತು. ಸೋಂಕಿತರ ಪ್ರದೇಶ ಗುರುತಿಸುವಿಕೆ ಕೆಲಸ ಮಾಡಲಾಗುತ್ತಿತ್ತು. ಇದರಿಂದ ಜನರು ಎಚ್ಚರಿಕೆ ಮತ್ತು ಜಾಗೃತಿ ವಹಿಸುತ್ತಿದ್ದರು. ಎರಡನೇ ಅಲೆಯಲ್ಲಿ ಈ ಕ್ರಮಗಳು ನಡೆಯುತ್ತಿಲ್ಲ. ಸೋಂಕಿತರು ಮನೆ ಒಳಗೆ ಮತ್ತು ಹೊರಗೆ ಓಡಾಡುತ್ತಿದ್ದಾರೆ. ಸೋಂಕಿತರೆಂದು ಅಕ್ಕಪಕ್ಕದವರಿಗು ಗೊತ್ತಾಗುವುದಿಲ್ಲ. ಮೊದಲನೇ ಅಲೆಯಲ್ಲಿ ವಯಸ್ಸಾದವರಿಗೆ ಹೆಚ್ಚು ಸೋಂಕು ಹರಡುತ್ತಿತ್ತು. ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು, ಯುವಕರು ಹಾಗೂ ಕೆಲವು‌ ಮಕ್ಕಳಿಗೂ ಸೋಂಕು ತಗುಲುತ್ತಿದೆ. ಮೊದಲನೆ ಅಲೆಯಲ್ಲಿ ಆರ್ಟಿಪಿಸಿರ್ ನಲ್ಲಿ ಪಾಸಿಟಿವ್ ಬಂದವರನ್ನು ಸೋಂಕಿತರೆಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಅರ್ಟಿಪಿಸಿಅರ್ ನೆಗೆಟಿವ್ ಬಂದಿರುತ್ತೆ. ಆದರೂ, ಸೋಂಕಿನ ಲಕ್ಷಣಗಳು ಇರುತ್ತದೆ. ಜೊತೆಗೆ ಸಿಟಿ ಸ್ಕ್ಯಾನಿಂಗ್ ಮಾಡಿದರೆ ಸೋಂಕಿನ ಸ್ಕೋರಿಂಗ್ ಹೆಚ್ಚಿರುತ್ತೆ. ಆಕ್ಸಿಜನ್ ಪ್ರಮಾಣ ಕಡಿಮೆ ಇರುತ್ತೆ. ಅವರು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ತೀವ್ರತೆ ಜಾಸ್ತಿಯಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ ಎಂದು ಭಾನುಪ್ರಕಾಶ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಎಷ್ಟು ಜನರಿಗೆ ಈಗಾಗಲೇ ಕೋವಿಡ್ ಲಸಿಕೆ ನೀಡಲಾಗಿದೆ? ಎಂಬ ಮುಖ್ಯ ಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ
*ಡಾ. ಭಾನುಪ್ರಕಾಶ್* ಜಿಲ್ಲೆಯಲ್ಲಿ ಈವರೆಗೆ 4,44,000 ಕೋವಿಡ್ ಲಸಿಕೆ ನೀಡಲಾಗಿದೆ. ಇದರಲ್ಲಿ 45 ವರ್ಷ ಮೇಲ್ಪಟ್ಟವರಿಗೆ 40% ಲಸಿಕೆ ಹಾಗೂ 18-44 ವರ್ಷದೊಳಗಿನ 3,‌372 (0.3%) ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು

ಗೋವಿಂದರಾಜು ಎಂ ಕಲ್ಲೂರು ಅವರಿಗೆ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಪ್ರಶಸ್ತಿ

೨೦೨೧ ನೇ ಸಾಲಿನ ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಪ್ರಶಸ್ತಿಯು ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಎಂಬ ಕಥೆಯ ಹಸ್ತಪ್ರತಿಗೆ ದೊರೆತಿದೆ. ಹಿರಿಯ ಬರಹಗಾರರೂ ಕಥೆಗಾರರೂ ಆದ ಚೆನ್ನಪ್ಪ ಅಂಗಡಿ ಮತ್ತು ಸಿ.ಎಂ ಮುನಿಸ್ವಾಮಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ. ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ಹಾಗೂ ಶ್ರೀಮತಿ ವಿಜಯಾ ಅಗಸನಕಟ್ಟೆ ಸಹಯೋಗದಲ್ಲಿ ನಡೆವ ಸತತ ನಾಲ್ಕನೇ ವರ್ಷದ ಸ್ಪರ್ಧೆಯಿದಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೊರೊನಾ ನಂತರದ ಸುರಕ್ಷಿತ ದಿನಗಳಲ್ಲಿ ನೆರವೇರಿಸಲಾಗುವುದು ಎಂದು ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಥೆಗಾರನ ಪರಿಚಯ:

ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಪ್ರಶಸ್ತಿ-೨೦೨೧, ಪಡೆದ ಗೋವಿಂದರಾಜು ಎಂ ಕಲ್ಲೂರು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಲ್ಲೂರಿನವರು. ಸದ್ಯ ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರೊ.ನಿತ್ಯಾನಂದ ಬಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ‘ನಾಡು-ನುಡಿಯ ರೂಪ : ಡಾ. ರಾಜಕುಮಾರ್ ಸಿನೆಮಾ’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ದಿ.ಮೀನಾಕುಮಾರಿ ಕಥಾ ಪ್ರಶಸ್ತಿ, ಕ್ರೈಸ್ಟ್ ಯುನಿವರ್ಸಿಟಿ, ಈ-ಹೊತ್ತಿಗೆ ಕಥಾ ಸ್ಪರ್ಧೆಗಳಲ್ಲಿ ಬಹುಮಾನ, ಬೇಂದ್ರೆ ಕವನ ಕೂಟದಿಂದ ಕವನ, ಲೇಖನ ಸ್ಪರ್ಧೆಗಳಲ್ಲಿ ಬಹುಮಾನ ಲಭಿಸಿದೆ. ಹೊಸಮನುಷ್ಯ, ಪ್ರಜಾವಾಣಿ, ಸಮಾಜಮುಖಿ, ಸಂವಾದ, ಸಂಗಾತ ಪತ್ರಿಕೆಗಳಲ್ಲಿ ಬರಹಗಳನ್ನು ಪ್ರಕಟಿಸಿದ್ದಾರೆ.

ಕೊರೊನಾ ಸಾವು: ಅಂತ್ಯಕ್ರಿಯೆಗೆ ಕರೆ ಮಾಡಿದರೆ ಸಾಕು ಬರುತ್ತೆ ಮುಸ್ಲಿಂರ ತಂಡ

0

Publicstory


Tumkuru: ತಿಪಟೂರಿನ ಮದೀನಾ ಮಸೀದಿ ಯ ನೇತೃತ್ವದಲ್ಲಿ ಯುವಕರ ತಂಡ ಕೋರೊನಾದಿಂದ ಮೃತರಾದವರ ಅಂತ್ಯಕ್ರಿಯೆಯನ್ನು ಅವರವರ ಧರ್ಮಗಳ ಅನುಸಾರ ಉಚಿತವಾಗಿ ಯಾವುದೆ ಪ್ರತಿಫಲಾಪೇಕ್ಷೆಯಿಲ್ಲದೆ ಸೇವೆ ಮಾಡಲು ಕಂಕಣ ಬದ್ದರಾಗಿದ್ದು. ಅಗತ್ಯವಿದ್ದರೆ ಈ ಕೆಳಗಿನ ನಂಬರ್ ಗಳಿಗೆ ಕರೆ ಮಾಡ ಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಮ್ಮದ್ ದಸ್ತಗೀರ್ ಅಧ್ಯಕ್ಷರು 9448660279, ಸೈಪುಲ್ಲಾ ಎಂ ಉಪಾಧ್ಯಕ್ಷರು 9632823444, ಅತೀಕ್ ಪಾಶ 9791523225 ಮತ್ತು ಮಹಮ್ಮದ್ ಇಸಾಕ್ 9611411212 ಈ ನಂಬರ್ ಗಳಿಗೆ ಸಂಪರ್ಕಿಸ ಬೇಕಾಗಿ ಹೇಳಲಾಗಿದೆ.

ಕೊರೊನಾ ಸೋಂಕಿತರಿನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ: ಮಾಧುಸ್ವಾಮಿ

Publicstory


ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೋನಾ ನಿಗ್ರಹಕ್ಕೆ ಸದಸ್ಯರೆಲ್ಲರೂ ಹೆಚ್ಚಿನ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸುವ ಮುಖೇನ ನಗರವನ್ನು ಸೋಂಕಿನಿಂದ ಪಾರು ಮಾಡಲು‌ ಸಹಕರಿಸಬೇಕು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧುಸ್ವಾಮಿ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣ ಸಂಬಂಧ ಪಾಲಿಕೆ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಟ್ಟುನಿಟ್ಟಿನ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಪರಿಣಾಮ ಕೆಂಪು ವಲಯದಲ್ಲಿದ್ದ ತುಮಕೂರು ಪ್ರಸ್ತುತ ಪಿಂಕ್ ವಲಯಕ್ಕೆ ಬಂದಿದೆ. ಆದರೂ, ಜಿಲ್ಲೆ ಸಮಾಧಾನದ ಸ್ಥಿತಿಗೆ ತಲುಪಬೇಕೆಂದರೆ ಸಂಪೂರ್ಣ ಕೋವಿಡ್ ನಿಗ್ರಹಕ್ಕೆ‌ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಸೋಂಕಿತರ ಆರೈಕೆಗಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ ಸೆಂಟರ್ ಗೆ ಸೋಂಕಿತರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮುಂದೆ ಪಾಸಿಟಿವ್ ಬಂದ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸುವ ವ್ಯವಸ್ಥೆಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಹಾಗಾಗಿ ಹೊಸ ಪಾಸಿಟಿವ್ ಪ್ರಕರಣಗಳ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಗೆ ಸ್ಥಳಾಂತರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಸದಸ್ಯರೆಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.

ಆಕ್ಸಿಜನ್, ಐಸಿಯು, ವೆಂಟಿಲೇಟರ್, ಸೋಂಕಿತರಿಗೆ ನೀಡುವ ಚಿಕಿತ್ಸೆ, ಸೋಂಕಿತರ ಆರೈಕೆ, ಸೋಂಕು ಹರಡದಂತೆ ತಡೆಗಟ್ಟವುದು ಸೇರಿದಂತೆ ನಾನಾ ಸಮಸ್ಯೆಗಳ ನಿವಾರಣೆಗಾಗಿ ತೆಗೆದುಕೊಂಡು ಕ್ರಮಗಳಿಂದಾಗಿ ಸೋಂಕಿನ ನಿಯಂತ್ರಣದಲ್ಲಿ ಜಿಲ್ಲೆ ಸುಧಾರಣೆ ಕಂಡಿದೆ. ಮತ್ತಷ್ಟು ಸುಧಾರಣೆ ಆಗಲೇಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.

ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ಶ್ರಮಿಸುವ ಮೂಲಕ ಸದಸ್ಯರು ಸಹಕರಿಸಬೇಕು. ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಿ ಎಂದು‌ ಹೇಳಿದರು.

ಸಂಸದ ಜಿ.ಎಸ್.‌ಬಸವರಾಜು ಮಾತನಾಡಿ, ನಾವೆಲ್ಲರೂ ಕೋವಿಡ್ ಸಂಕಷ್ಟದಲ್ಲಿದ್ದೇವೆ. ಹೋಂ‌ ಕ್ವಾರಂಟೈನ್ ಅನ್ನು ಕಟ್ಟುನಿಟ್ಟಾಗಿ ಪಾಲನೆ‌ ಮಾಡಿ, ಕುಟುಂಬದವರಿಗೆ ಸೋಂಕು ಹಬ್ಬುವುದನ್ನು ತಪ್ಪಿಸಬೇಕು. ಸೋಂಕಿತರನ್ನು ಕೋವಿಡ್ ಕೇರ್ ಗೆ ಸ್ಥಳಾಂತರಿಸುವ ಕೆಲಸ ಮಾಡಬೇಕು. ವಾರ್ಡ್ ಸಭೆ ಮಾಡಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ 8ನೇ ವಾರ್ಡಿನ ಪಾಲಿಕೆ ಸದಸ್ಯ ಸಯ್ಯಾದ್ ನಯಾಜ್ ಅಹಮದ್ ಮಾತನಾಡಿ, ಮೂರನೇ ಅಲೆ ಪ್ರಾರಂಭದ ವೇಳೆಗೆ ಕೋವಿಡ್ ಕಡಿವಾಣಕ್ಕೆ ಜಿಲ್ಲೆಯಲ್ಲಿ ಅತ್ಯಗತ್ಯ ಕ್ರಮ ಕೈಗೊಳ್ಳಬೇಕಿದೆ. ನಮ್ಮ ವ್ಯಾಪ್ತಿಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಗೆ ಆಕ್ಸಿಜನ್ ಪೂರೈಕೆ ಮಾಡಲು ಪೈಪ್ ಲೈನ್ ಅಳವಡಿಕೆಗೆ ಒಪ್ಪಿಗೆ ಕೊಡಬೇಕು. ಅಗತ್ಯವಿರುವ ಆಕ್ಸಿಜನ್ ಅನ್ನಿ ನಾವೇ ಪೂರೈಕೆ ಮಾಡಿಕೊಳ್ಳುತ್ತೇವೆ ಎಂದು ಮನವಿ‌ ಮಾಡಿದರು.

ಇದಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಪ್ರತಿಕ್ರಿಯಿಸಿ, ಆಮ್ಲಜನಕ ಪೂರೈಕೆ ಜಿಲ್ಲಾಡಳಿತದಿಂದಲೇ ಆಗಬೇಕು. ಯಾರೂ ಸ್ವಯಂ ಆಗಿ ಪೂರೈಕೆ ಮಾಡಿಕೊಳ್ಳುವಂತಿಲ್ಲ. ಜಿಲ್ಲಾಡಳಿತದ ಗಮನಕ್ಕೆ ಬಾರದೆ ಆಮ್ಲಜನಕ ರವಾನೆ ಹಾಗೂ ಬಳಕೆ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಹಾಗಾಗಿ ಜಿಲ್ಲಾಡಳಿತದ ಒಪ್ಪಿಗೆ ಮೇರೆಗೆ ಆಮ್ಲಜನಕ ಪೂರೈಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಆಮ್ಲಜನಕ ಪೂರೈಕೆ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಲಭ್ಯವಿಲ್ಲ.‌ ಆಮ್ಲಜನಕ ಪೂರೈಕೆಯಾದರೆ ಜಿಲ್ಲಾಸ್ಪತ್ರೆಯಲ್ಲೆ 200 ಹಾಸಿಗೆಗಳನ್ನು ಹೆಚ್ವಿಸಲಾಗುವುದು. ಆಮ್ಲಜನಕವನ್ನು ಜಿಲ್ಲಾಧಿಕಾರಿ ಒಪ್ಪಿಗೆ ಮೇರೆಗೆ ಪಡೆಯಬೇಕು. ಹಾಗಾಗಿ‌ ಆಮ್ಲಜನಕ ಸಾಂದ್ರಕಗಳ ಮೂಲಕ ಬೆಡ್ ಗಳ ವ್ಯವಸ್ಥೆ ಮಾಡುಕೊಳ್ಳುವಂತೆ ತಿಳಿಸಿದರು.

3ನೇ ವಾರ್ಡ್ ಸದಸ್ಯ ಲಕ್ಷ್ಮಿನರಸಿಂಹರಾಜು ಹಾಗೂ 7ನೇ ವಾರ್ಡ್ ಕುಮಾರ್ ಮಾತನಾಡಿ, ನಗರದ ಬಹುತೇಕ ಪಿಎಚ್ ಸಿ ಗಳಲ್ಲಿ ಕೋವಿಡ್ ಔಷಧಗಳ ಕೊರತೆಯಿದೆ. ಅಲ್ಲದೆ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕೋವಿಡ್ ಸೋಂಕು ತಗುಲಿದ ಪರಿಣಾಮ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಮರ್ಪಕ ಸಿಬ್ಬಂದಿಗಳ ವ್ಯವಸ್ಥೆ‌‌ ಇಲ್ಲದೆ‌ ಸೋಂಕಿತರ ಆರೈಕೆ ಕಷ್ಟವಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ತೆಗೆದುಕೊಳ್ಳುವ ಮೂಲಕ‌ ಸಿಬ್ಬಂದಿಗಳ ಕೊರತೆ ಸಮಸ್ಯೆ ಸರಿದೂಗಿಸಲಾಗುತ್ತಿದೆ. ಮಾರ್ಗಸೂಚಿ ಅನ್ವಯ ಪಿಎಚ್ ಸಿ ಗಳಿಗೆ ಸಮರ್ಪಕ ಔಷಧ ವಿತರಣೆ ಮಾಡುವಂತೆ ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.
20ನೇ ವಾರ್ಡಿನ ಸದಸ್ಯ ಶ್ರೀನಿವಾಸ್ ಮಾತನಾಡಿ, ಪಾಲಿಕೆಯಿಂದ ರೆಫರ್ ಆಗಿ ಹೋದರೂ ಸೋಂಕಿತನಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಯೊಂದು ಒಂದು ಲಕ್ಷ ರೂ. ಹಣ ಪಡೆದಿದೆ ಎಂದು ಸಭೆ ಗಮನಕ್ಕೆ ತಂದಾಗ, ದಾಖಲೆ ಸಮೇತ ದೂರು ಕೊಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.

ಕೋವಿಡ್ ಪರೀಕ್ಷೆ ಮತ್ತು ಲಸಿಕೆ ಹಾಕುವ ವ್ಯವಸ್ಥೆ ಒಂದೇ ಕಡೆ ನಡೆಯುತ್ತಿದೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತಿದೆ. ಹಾಗಾಗಿ, ಈ ವ್ಯವಸ್ಥೆ ಪ್ರತ್ಯೇಕವಾಗಿ ಆಗಬೇಕು. ಸೋಂಕಿತರ ಮನೆಗೆ ಸ್ಯಾನಿಟೈಸ್ ಮಾಡುವ ಸಿಬ್ಬಂದಿಗಳಿಗೆ ಅಗತ್ಯವಿರುವಷ್ಟು ಪಿಪಿಇ‌ ಕಿಟ್ ನೀಡಬೇಕು ಎಂದು ಸದಸ್ಯರು ಸಭೆ ಗಮನಕ್ಕೆ ತಂದರು.

ಸದಸ್ಯರ ಮನವಿ ಮೇರೆಗೆ ಸದಸ್ಯರು ನಿರ್ಣಯಿಸಿದ ಜಾಗದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಅಗತ್ಯಕ್ಕೆ ಅನುಗುಣವಾಗಿ ಪಿಪಿಇ ಕಿಟ್ ನೀಡುವಂತೆ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ನಿರ್ದೇಶಿಸಿದರು.

ಕೊಳಚೆ ಪ್ರದೇಶಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಸಂಸಾರ ಹಾಳುಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ , ದಾಖಲೆ ಸಮೇತ ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮೇಯರ್ ಕೃಷ್ಣಪ್ಪ ಮಾತನಾಡಿ, ಆಸ್ಪತ್ರೆಗಳಲ್ಲಿ ಎಷ್ಟೆಷ್ಟು ಐಸಿಯು, ವೆಂಟಿಲೇಟರ್, ಆಮ್ಲಜನಕ ಹಾಸಿಗೆಗಳಿವೆ ಎಂಬ ಮಾಹಿತಿ ಸಿಗುವ ವ್ಯವಸ್ಥೆ ಮಾಡಿದರೆ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಅನುಕೂಲವಾಗಲಿದೆ ಎಂದು‌ ಮನವಿ ಮಾಡಿದರು. ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದೆಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.