Friday, February 27, 2026
Google search engine
Home Blog Page 250

ನನ್ನನ್ನು ಉಪಯೋಗಿಸಿಕೊಳ್ಳಿ- ಶಾಸಕ ಗೌರಿಶಂಕರ್

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು ಗ್ರಾಮಾಂತರ: ಸಿಂಗನಹಳ್ಳಿ ಕಾಲೋನಿಯಲ್ಲಿ ಪಡಿತರ ಕಿಟ್ ವಿತರಿಸುತ್ತಾ, ಇಂದು ಇಡೀ ವಿಶ್ವವೇ ಕೊರೋನಾ ಮಾರಿಗೆ ತಲ್ಲಣಿಸಿದೆ. ಇಂತಹ ಪ್ರಕ್ಷುಬ್ಧ ಸ್ಥಿತಿಯಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಕೊರೋನಾ ವಿರುದ್ಧ ಹೋರಾಡಬೇಕಿದೆ ಎಂದು ಶಾಸಕ‌ ಗೌರಿಶಂಕರ್ ತಿಳಿಸಿದರು.

ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಸ್ವೀಕರಿಸಿ ಈ ಕ್ಷೇತ್ರದ ಜನಗಳ ಜವಬ್ದಾರಿ ನನ್ನದು ಎಂದರು.

ನಿನ್ನೆ ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕುಟುಂಬಗಳಿಗೆ ದಿನಸಿ & ಗೃಹಪಯೋಗಿ ಪಧಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸೋ ವ್ಯವಸ್ಥೆಗೆ ಮಾಜಿ ಪ್ರಧಾನಿ ದೇವೇಗೌಡರು ಚಾಲನೆ ನೀಡಿದರು.

1 ಲಕ್ಷ ಮಾಸ್ಕ್, 50000 ಕುಟುಂಬಗಳಿಗೆ ತಿಂಗಳಿಗಾಗುವಷ್ಟು ಪಡಿತರ ವಿತರಣೆ, ಹಣ್ಣು , ತರಕಾರಿಗಳನ್ನು ಭಾನುವಾರದೊಳಗೆ ಪ್ರತಿ ಮನೆಗೂ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ದಿನವೊಂದಕ್ಕೆ 5000 ಕಿಟ್ ಗಳನ್ನು ಮಾಡಬಹುದಾಗಿದೆ, ಆಹಾರ ಪದಾರ್ಥಗಳು ಸಿಗುತ್ತಿಲ್ಲಾ. ನನ್ನ ಕ್ಷೇತ್ರಕ್ಕೆ 300 ಟನ್ ಅಕ್ಕಿ ಬೇಕು. ಪ್ರತಿದಿನ 25-30 ಟನ್ ಎಲ್ಲೆಲ್ಲಿಂದ ಸಾಧ್ಯವೋ ಅಲ್ಲಲ್ಲಿ ತರಿಸುತ್ತಿದ್ದೇನೆ. ನನಗೆ ಅನ್ನದ ಬೆಲೆ ಗೊತ್ತಿದೆ ಎಂದು ತಿಳಿಸಿದರು.

ಇಂದು ಎಷ್ಚೇ ಆರ್ಥಿಕವಾಗಿ ಸದೃಡರಾಗಿದ್ದರೂ ಪಡಿತರ ಸಿಗದಂತಹ, ಇಲ್ಲಾ ದೂರದ ನಗರಕ್ಕೆ ಹೋಗಿ ತರುವ ಕೆಲಸ ಮಾಡಬೇಕಿದೆ, ಅಂತಹ ಕೆಲಸ ಕೊರೋನಾ ಸೊಂಕಿಗೆ ದಾರಿ ಮಾಡಿಕೊಟ್ಟಂತೆ. ಹಾಗಾಗಿ ಯಾರು ಮನೆಯಿಂದ ಹೊರ ಬರಬೇಡಿ. ನನ್ನ ಹೆಗಲಿಗೆ ಆ ಜವಾಬ್ದಾರಿ ಬಿಡಿ ಎಂದು ಮನವಿ ಮಾಡಿದರು.

ಉದ್ಯಮಿಗಳು, ಶ್ರೀಮಂತರು ನೆರವಿನ ಕೈಚಾಚಲಿ: ಸುರೇಶಗೌಡ

Publicstory. in


ನಾಗವಲ್ಲಿ: ಕರೊನಾ, ಲಾಕ್ ಡೌನ್ ಕಾರಣದಿಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮಾಂತರ ಕ್ಷೇತ್ರದಿಂದ ಬೆಂಗಳೂರು ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಉದ್ಯಮಿಗಳು, ಶ್ರೀಮಂತರು, ಸಾಪ್ಟವೇರ್ ಎಂಜಿನಿಯರ್ ಗಳು ಕ್ಷೇತ್ರಕ್ಕೆ ನೆರವಾಗುವ ನಿಟ್ಟಿನಲ್ಲಿ ಮುಂದೆ ಬರಬೇಕು ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಮನವಿ ಮಾಡಿದರು.


ಕಾರ್ಟೂನ್ ಕಾರ್ನರ್: ಮುಸ್ತಫ ಕೆ.ಎಂ. ರಿಪ್ಪನ್ ಪೇಟೆ


ನಾಗವಲ್ಲಿ ಬಡ ಜನರಿಗೆ ಆಹಾರ ಸಾಮಾಗ್ರಿ, ಮಾಸ್ಕ್ ವಿತರಿಸಿ ಮಾತನಾಡಿದರು. ಎಲ್ಲರೂ ಸಹಾಯದ ಹಸ್ತ ಚಾಚಬೇಕಾಗಿದೆ. ಈಗಾಗಲೇ ಅವರರವರ ನೆಲೆಯಲ್ಲಿ ಸಹಾಯ ಮಾಡುತ್ತಿದ್ದೇವೆ. ಇದರಲ್ಲಿ ಯಾರೂ ಯಾವುದೇ ರಾಜಕೀಯ ಹಿತಾಸಕ್ತಿ ಹುಡುಕಬಾರದು. ಈಗ ನಾವು ಮಾಡುತ್ತಿರುವ ನೆರವಿನ ಕೆಲಸ ಏನೇನು ಸಾಲದಾಗಿದೆ ಎಂದು ನೊಂದು ನುಡಿದರು.

ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾದೆ. ಮುಂದೆ ಅವರ ಮಕ್ಕಳ ಶಿಕ್ಷಣ ಕೊಡಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಈ ಮಣ್ಣಿನ ಋಣ ತೀರಿಸಲು ದಾನಿಗಳು ಮುಂದೆ ಬರಬೇಕು, ಪ್ರತಿಭಾವಂತ ಬಡ ಮಕ್ಕಳನ್ನು ಶೈಕ್ಷಣಿಕ ದತ್ತು ತೆಗೆದುಕೊಂಡು ಉನ್ನತ ಶಿಕ್ಷಣ ಕೊಡಿಸಬೇಕು. ಪ್ರತಿಷ್ಠಿತ ಕಾಲೇಜುಗಳಿಗೆ ಪ್ರವೇಶ ನೀಡಿಸಬೇಕು. ಆಗಷ್ಟೇ ಬಡವರು ಒಂದಿಷ್ಟು ನಿರಾಳರಾಗಬಹುದು ಎಂದು ಅಭಿಪ್ರಾಯಪಟ್ಟರು.

ಕೆರೆ ತುಂಬಿಸದಿದ್ದರೆ ಈ ಕಷ್ಟ ಬರುತ್ತಿರಲಿಲ್ಲ: ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸಿದ್ದರೆ ರೈತರಿಗೆ ಇಷ್ಟೊಂದು ಕಷ್ಟ ಬರುತ್ತಿರಲಿಲ್ಲ. ನೀರಿಲ್ಲದ ಕಾರಣ ಸಾವಿರಾರು ಕೊಳವೆಬಾವಿಗಳು ಒಣಗಿಹೋಗಿವೆ. ಇದು ರೈತರನ್ನು ಮತ್ತಷ್ಟ ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು.

ತಾವು ಶಾಸಕರಾಗಿದ್ದಾಗ ಪ್ರತಿ ಹೋಬಳಿಗೊಂದು ಶಾಲೆಗಳನ್ನು ಅಭಿವೃದ್ಧಿಪಡಿಸಿದೆ. ಈಗ ಈ ಶಾಲೆಗಳಲ್ಲಿ ವಿದ್ಯಾರ್ಥಗಳ ಶಿಕ್ಷಣದ ಗುಣಮಟ್ಟ ಹೆಚ್ಚಾಗಿದೆ. ಇದು ಸಂತಸ ತರುವ ವಿಷಯವಾಗಿದೆ ಎಂದರು. ನಾಗವಲ್ಲಿ ಪಂಚಾಯಿತಿ ಹಲವು ಗ್ರಾಮಗಳಿಗೆ ಮನೆ ಮನೆಗೆ ಆಹಾರದ ಕಿಟ್, ಮಾಸ್ಕ್ ವಿತರಿಸುವ ಕೆಲಸಕ್ಕೂ ಚಾಲನೆ ನೀಡಿದರು. ಬಿಜೆಪಿಯ ಹಲವು ಮುಖಂಡರು, ಗ್ರಾಮ ಪಂಚಾಯತ್ತಿ ಸದಸ್ಯರು ಹಾಜರಿದ್ದರು.

ಹೇಮಾವತಿ ಬಾಕಿ ನೀರು ಕೂಡಲೇ ಬಿಡಬೇಕು: ಸುರೇಶ ಗೌಡ

Publicstory. in


ತುಮಕೂರು: ಜಿಲ್ಲೆಯ ಪಾಲಿನ ಬಾಕಿ ಉಳಿಸಿಕೊಂಡಿರುವ ಹೇಮಾವತಿ ನೀರನ್ನು ಕೂಡಲೇ ಹರಿಸಲು ಕ್ರಮ ಕೈಗೊಳ್ಳಬೇಕು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಬಿ.ಸುರೇಶ ಗೌಡ ಸಲಹೆ ನೀಡಿದ್ದಾರೆ.

ಗೊರೂರು ಜಲಾಶಯದಲ್ಲಿ ಇನ್ನೂ 7 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿದೆ. ಇದು ತುಮೂರು ಪಾಲಿನ ನೀರು ಆಗಿದೆ. ಈ ನೀರನ್ನು ಕೂಡಲೇ ತುಮಕೂರಿಗೆ ಬಿಡಬೇಕು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಅಷ್ಟೇ ಅಲ್ಲದೇ ಅಂತರ್ಜಲದ ಕುಸಿತದ ಕಾರಣ ರೈತರು ಬೀದಿಗೆ ಬೀಳುತ್ತಿದ್ದಾರೆ. ಹೀಗಾಗಿ ತುಮಕೂರು ಪಾಲಿನ ನೀರನ್ನು ಕೂಡಲೇ ಹರಿಸಬೇಕು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರೊಂದಿಗೆ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.

ಕಳೆದ ಜಲಾಶಯದಲ್ಲಿ ನೀರಿದ್ದರೂ ತುಮಕೂರು ಗ್ರಾಮಾಂತರ ಕ್ಷೇತ್ರದ ಕೆರೆಗಳನ್ನು ತುಂಬಿಸಿಕೊಳ್ಳುವಲ್ಲಿ ಶಾಸಕ ಬಿ.ಸಿ.ಗೌರಿಶಂಕರ್ ವಿಫಲರಾದರು. ಸರ್ಕಾರದ ಮೇಲೆ ಒತ್ತಡ ತರುವ ಬದಲಿಗೆ ಮೌನವಹಿಸಿದರು. ಇದರಿಂದಾಗಿ ಗ್ರಾಮಾಂತರ ಕ್ಷೇತ್ರದ ಕೆರೆಗಳು ಒಣಗಿ ನಿಂತಿವೆ. ಪ್ರಾಣಿ-ಪಕ್ಷಗಳಿಗೂ ಹನಿ ನೀರು ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ತುಮಕೂರು ಜಿಲ್ಲೆಗೆ ನೀರು ಹರಿಸಿದರೆ ಮೊದಲಿಗೆ ಗ್ರಾಮಾಂತರ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಆಧ್ಯತೆ ನೀಡಬೇಕು. ಕರೊನಾ, ಬರಗಾಲದ ಕಾರಣ ಗ್ರಾಮಾಂತರ ಕ್ಷೇತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.

ತುಮಕೂರು ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಯನ್ನು ಆರಂಭಿಸಲಾಗಿದೆ. ಹೀಗಾಗಿ ತಕ್ಷಣವೇ ನೀರು ಹರಿಸಿಸಬೇಕು. ಒಂದು ತಿಂಗಳ ಕಾಲ ನೀರು ಹರಿಸಬೇಕು, ಮಳೆಗಾಲದೊಳಗೆ ಕಾಮಗಾರಿ ಮುಗಿಸಲು ಸಹ ಆದ್ಯತೆ ನೀಡಲಾಗುವುದು. ಕಾಲುವೆಯಲ್ಲಿ ಬೆಳೆದಿರುವ ಗಿಡಗಂಟೆ ತೆಗೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಡುವೆಯೂ ಕಾಲುವೆಯ ಆಧುನೀಕರಣಕ್ಕೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಣ ಬಿಡುಗಡೆಗೊಳಿಸಿದರು. ಕಾಮಗಾರಿ ಆಧುನೀಕರಣಗೊಂಡರೆ ಜಿಲ್ಲೆಗೆ ನೀರಿನ ಅನ್ಯಾಯ ತಪ್ಪಲಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಸಂಕಷ್ಟವೂ ನೀಗಲಿದೆ. ತುಮಕೂರು ಜಿಲ್ಲೆಯ ಜನರು ಮುಖ್ಯಮಂತ್ರಿಗೆ ಅಭಾರಿಯಾಗಿದ್ದೇವೆ ಎಂದು ಹೇಳಿದ್ದಾರೆ.

ಈ ರಾತ್ರಿ ನಾ ಬರೆಯಬಲ್ಲೆ

0

ಪ್ರಸಿದ್ಧ ಸ್ಪ್ಯಾನಿಷ್ ಕವಿ ಪ್ಯಾಬ್ಲೋ ನೆರೂದ 1924ರಲ್ಲಿ ಪ್ರಕಟಿಸಿದ ‘Twenty Love Poems and a Song of Despair’ ಸಂಕಲನದಲ್ಲಿನ ಕೊನೆಯ ಕವಿತೆ

‘Tonight I can Write’ ಭಾವಾನುವಾದ

ಕನ್ನಡಿಕರಿಸಿದ್ದಾರೆ. ಶಶಿಕುಮಾರ ವೈ ಬಿ

ಇವರು ಗುಬ್ಬಿ ತಾಲ್ಲೂಕಿನ ಯರಬಳ್ಳಿ ಗ್ರಾಮದವರು. ವೃತ್ತಿಯಲ್ಲಿ ಇಂಗ್ಲೀಷ್ ಉಪನ್ಯಾಸಕರು. ಕನ್ನಡ ಸಾಹಿತ್ಯದ ಬಗ್ಗೆ ಒಲವುಳ್ಳ ಬಹುಮುಖ ಪ್ರತಿಭೆ. ಬರವಣಿಗೆ, ಅನುವಾದ, ಚಿತ್ರಕಲೆ, ಪೋಸ್ಟರ್ ಮೇಕಿಂಗ್, ಇತ್ಯಾದಿ ಹವ್ಯಾಸಗಳನ್ನು ಹೊಂದಿರುವ ಇವರು ವಿದ್ಯಾರ್ಥಿಗಳ ಮೆಚ್ಚುಗೆ ಪಡೆದ ಉಪನ್ಯಾಸಕರೂ ಹೌದು.

ಪ್ರಸ್ತುತ ತುಮಕೂರಿನ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ರಾತ್ರಿ ನಾ ಬರೆಯಬಲ್ಲೆ

ಈ ರಾತ್ರಿ ನಾ ಬರೆಯಬಲ್ಲೆ ಉಮ್ಮಳ ತುಂಬಿದ ಸಾಲುಗಳ.

ಬರೆಯಬಲ್ಲೆ, ಉದಾಹರಣೆಗೆ, ‘ರಾತ್ರಿಯು ಛಿದ್ರಗೊಂಡಿದೆ
ಮತ್ತು ನೀಲ ತಾರೆಗಳು ದೂರದಲ್ಲೆಲ್ಲೋ ಕಂಪಿಸುತ್ತವೆ’.

ಇರುಳ ಎಲರು ಆಗಸದಲ್ಲಿ ತಿರುಗುತ್ತದೆ, ಹಾಗೇ ಹಾಡುತ್ತದೆ.

ಈ ರಾತ್ರಿ ನಾ ಬರೆಯಬಲ್ಲೆ ಉಮ್ಮಳ ತುಂಬಿದ ಸಾಲುಗಳ.
ನಾನವಳನ್ನು ಪ್ರೀತಿಸಿದೆ, ಹಾಗೆಯೇ ಕೆಲವೊಮ್ಮೆ ಅವಳೂ ನನ್ನ ಪ್ರೀತಿಸಿದಳು.

ಇಂಥವೇ ರಾತ್ರಿಗಳುದ್ದಕ್ಕೂ ನಾನವಳ ತೋಳ ತೆಕ್ಕೆಯಲ್ಲಿ ಹಿಡಿದಿದ್ದೆ.
ಕಡೆಯಿರದ ಗಗನದಡಿ ನಾನವಳ ಮತ್ತೆ ಮತ್ತೆ ಚುಂಬಿಸಿದ್ದೆ.

ಅವಳೆನ್ನ ಪ್ರೀತಿಸಿದಳು, ಕೆಲವೊಮ್ಮೆ ನಾನೂ ಅವಳ ಪ್ರೀತಿಸಿದೆ.
ಯಾರಾದರಾಗಲೀ ಪ್ರೀತಿಸದಿರಲು ಹೇಗೆ ಸಾಧ್ಯ ಸದಾ ವಿಶೇಷವಾದ ಅವಳ ಕಣ್ಣುಗಳ?

ಈ ರಾತ್ರಿ ನಾ ಬರೆಯಬಲ್ಲೆ ಉಮ್ಮಳ ತುಂಬಿದ ಸಾಲುಗಳ.
ನಾನವಳ ಪ್ರೀತಿಸುವುದಿಲ್ಲೆಂದು ಗಣಿಸಲು. ನಾನವಳ ಕಳೆದುಕೊಂಡೆನೆಂದೆಣಿಸಲು.

ಅಗಾಧವಾದ, ಅವಳಿಲ್ಲದೆ ಇನ್ನೂ ಅಗಾಧವಾದ, ರಾತ್ರಿಗೆ ಕಿವಿಗೊಡಲು.
ಮತ್ತು ಕವಿತೆ ಹಾಸು ಹುಲ್ಲಿನ ಮೇಲಿಳಿಯುವ ಇಬ್ಬನಿಯಂತೆ ಮನಕ್ಕಿಳಿಯುತ್ತದೆ.

ನನ್ನ ಪ್ರೀತಿ ಅವಳನ್ನು ಉಳಿಸಿಕೊಳ್ಳದಿದ್ದರೇನಂತೆ?
ರಾತ್ರಿಯು ಛಿದ್ರಗೊಂಡಿದೆ, ಮತ್ತೆ ಅವಳೆನ್ನೊಡನಿಲ್ಲ.

ಅಷ್ಟೇ. ದೂರದಲ್ಲೆಲ್ಲೋ ಯಾರೋ ಹಾಡುತ್ತಿದ್ದಾರೆ. ದೂರದಲ್ಲಿ.
ಅವಳನ್ನು ಕಳೆದುಕೊಂಡದ್ದಕ್ಕೆ ನನ್ನೆದೆಗೆ ತುಷ್ಟಿಯಿಲ್ಲ.

ಅವಳೆಡೆಗೆ ಹೋಗಲೇನೋ ಎಂಬಂತೆ ನನ್ನ ನೋಟ ಅವಳ ಅರಸುತ್ತದೆ.
ನನ್ನ ಹೃದಯ ಅವಳಿಗಾಗಿ ಹುಡುಕುತ್ತದೆ, ಆದರೆ ಅವಳು ನನ್ನೊಡನಿಲ್ಲ.

ಅದೇ ರಾತ್ರಿಯು ಅವೇ ಮರಗಳ ಬೆಳ್ಳಗಾಗಿಸುತ್ತಿದೆ.
ಆದರೆ ಅದೇ ಕಾಲದ ನಾವು ಹಾಗೆಯೇ ಉಳಿದಿಲ್ಲ.

ನಾನಿನ್ನು ಅವಳ ಪ್ರೀತಿಸೆ, ಖಂಡಿತವಾಗಿ, ಆದರೆ ಹೇಗೆ ಪ್ರೀತಿಸಿದ್ದೆ ಅವಳನ್ನು!
ನನ್ನ ದನಿ ಗಾಳಿಯ ಹುಡುಕಲು ಯತ್ನಿಸಿತು ಅವಳು ಕಿವಿಗೊಡುವುದ ತಾಕಲು.

ಇನ್ಯಾರಿಗೋ! ಹೌದು ಆಕೆ ಇನ್ನೊಬ್ಬರವಳಾಗುವಳು. ಈ ಮೊದಲಿನ ನನ್ನ ಚುಂಬನಗಳಂತೆ.
ಅವಳ ದನಿ, ಅವಳ ಕಾಂತಿಯುತ ದೇಹ, ಆ ಆಳವಾದ ಕಣ್ಣುಗಳು.

ನಾನಿನ್ನು ಅವಳ ಪ್ರೀತಿಸೆ, ಖಂಡಿತವಾಗಿ, ಆದರೆ ನಾನವಳ ಪ್ರೀತಿಸುತ್ತೇನೆ, ಬಹುಶಃ.
ಪ್ರೀತಿಸುವುದು ಕೆಲಕಾಲ, ಮರೆಯಲಾದ ಬಹುಗಾಲ!

ಏಕೆಂದರೆ, ಇಂಥವೇ ರಾತ್ರಿಗಳುದ್ದಕ್ಕೂ ನಾನವಳ ತೋಳ ತೆಕ್ಕೆಯಲ್ಲಿ ಹಿಡಿದಿದ್ದೆ.
ಅವಳನ್ನು ಕಳೆದುಕೊಂಡದ್ದಕ್ಕೆ ನನ್ನೆದೆಗೆ ತುಷ್ಟಿಯಿಲ್ಲ.

ಅವಳೆನಗೆ ಕೊಡಬಹುದಾದ ಕಡೆಯ ನೋವು ಇದಾದರೂ!
ಮತ್ತು ನಾನವಳಿಗಾಗಿ ಬರೆಯಬಹುದಾದ ಕೊನೆಯ ಸಾಲುಗಳು ಇವಾದರೂ!

ಆ ಹಾಡು ರೆಕ್ಕೆ ಬಿಡಿಸಿತು..

0

ಜಿ ಎನ್ ಮೋಹನ್


‘ಮೊನ್ನೆ ಅಮೃತ ಸೋಮೇಶ್ವರರ ಮನೆಗೆ ಹೋಗಿದ್ದೆ. ಅವರು ಒಂದು ಹಾಡು ಹೇಳಿ ಎಂದು ಒತ್ತಾಯಿಸಿದರು
ನನಗೆ ತಕ್ಷಣ ನೆನಪಿಗೆ ಬಂದದ್ದು ನಿಮ್ಮ ಹಾಡು. ಅದನ್ನೇ ಹಾಡಿದೆ’.

ಹಾಗೆ ಕಾಮೆಂಟಿಸಿದ್ದು ಗೆಳೆಯರಾದ ಮಂಗಳೂರಿನ ಪ್ರಭಾಕರ ಕಾಪಿಕಾಡ್.
‘ದ್ವೀಪ’ ನಾಟಕದ ಮೂಲಕ ಸಾಕಷ್ಟು ಹೆಸರಾದ ರಂಗಕರ್ಮಿ.
ಅವರು ಹಾಗೆ ಕಾಮೆಂಟಿಸಿದ್ದು ಬೆಳ್ತಂಗಡಿಯ ರಾಜೇಶ್ವರಿ ಚೇತನ್ ಅವರು ಸಾಮರಸ್ಯದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದ ಒಂದು ಪುಟ್ಟ ಬರಹಕ್ಕೆ.

ನಾನೋ ಅದನ್ನು ಓದಿದವನೇ 30 ವರ್ಷ ಹಿಂದಕ್ಕೆ ಓಡಿದೆ.

ಆಗತಾನೆ ಕವಿತೆಗೆ ಮನಸ್ಸು ಕೊಟ್ಟಿದ್ದ ದಿನಗಳು
ಗಾಂಧಿನಗರದಲ್ಲಿ ಭಾರತ ಸೋವಿಯತ್ ಸಾಂಸ್ಕೃತಿಕ ಮೈತ್ರಿ ಕಛೇರಿಯಿತ್ತು.
ಅಲ್ಲಿಗೆ ಹೋದಾಗ ಜಿ ಆರ್ ಸಿಕ್ಕರು.

ಜಿ ಆರ್ ಎಂದರೆ ನಾನು ತುಂಬು ಪ್ರೀತಿಯಿಂದ ಕಾಣುವ ಡಾ ಜಿ ರಾಮಕೃಷ್ಣ

ಅಮೆರಿಕಾ ಅಣ್ವಸ್ತ್ರದ ಅಹಂಕಾರದಿಂದ ಘರ್ಜಿಸುತ್ತಿದ್ದ ಕಾಲ.
ಹಾಲಿವುಡ್ ನಟನಾಗಿ, ಈಗ ಅಮೆರಿಕಾದ ಚುಕ್ಕಾಣಿ ಹಿಡಿದಿದ್ದ ರೊನಾಲ್ಡ್ ರೇಗನ್ ಗೆ ಯುದ್ಧದ ದಾಹ ಆರಂಭವಾಗಿತ್ತು.
ಪಕ್ಕ ಹಾಲಿವುಡ್ ಸ್ಟೈಲ್ ನಲ್ಲಿ ಯಾರನ್ನು ಬೇಕಾದರೂ ಸದೆಬಡಿಯಬಹುದು ಎಂದುಕೊಂಡು ಯುದ್ಧಕ್ಕೆ ಕಾಲು ಕೆರೆಯುತ್ತಿದ್ದ ಕಾಲ.

ಯುದ್ಧ ಇನ್ನೇನು ಆರಂಭವಾಗಿಯೇ ಬಿಡುತ್ತದೆ ಎನ್ನುವ ಆತಂಕ ಕವಿದಿತ್ತು.
ಜಗತ್ತಿನ ಎಲ್ಲೆಡೆ ಇದರ ವಿರುದ್ಧ ಪ್ರತಿಭಟನೆಗಳು ಆರಂಭವಾಗಿದ್ದವು.

ಬೆಂಗಳೂರಿನಲ್ಲೂ ಒಂದು ಬೃಹತ್ ಪ್ರತಿಭಟನೆಗೆ ನಾಂದಿ ಹಾಡಲು ಜಿ ಆರ್ ಹಾಗೂ ಅವರ ಬಳಗ ಸಜ್ಜಾಗಿತ್ತು
ಆಗ ಆಕಸ್ಮಿಕವಾಗಿ ಸಿಕ್ಕವನೇ ನಾನು

ಜಿ ಆರ್ ನನ್ನನ್ನು ನೋಡಿದವರೇ ‘ಈ ಬಗ್ಗೆ ಒಂದು ಕವಿತೆ ಬರೆದುಕೊಡಿ’ ಎಂದರು.
ಯಥಾಪ್ರಕಾರ ಎಲ್ಲಕ್ಕೂ ‘ಓಕೆ, ಅದಕ್ಕೇನಂತೆ..’ ಎನ್ನುವ ನಾನು ಹಾಗೆಯೇ ಅಂದು ಬಂದಿದ್ದೆ.
ಆದರೆ ಜಿ ಆರ್ ತುಂಬಾ ಸೀರಿಯಸ್ಸಾಗಿ ಇದನ್ನು ತೆಗೆದುಕೊಂಡಿದ್ದರು.
ಬಿಡಲಿಲ್ಲ.

ನಾನೋ ಆಗ ತಾನೇ ಕವಿತೆ ಬರೆಯುವುದಕ್ಕೆ ಶುರು ಮಾಡಿದ್ದವ. ಅಂತಹದ್ದರಲ್ಲಿ ಹಾಡು ಬರಿ ಎಂದರೆ ಸಾಧ್ಯವೇ ಇಲ್ಲ ಎಂದು ಕೈ ಚೆಲ್ಲಿ ಕೂತೆ.
ಆಗಲೇ ನೋಡಿ ನನ್ನೆದುರು, ನನ್ನ ಕಪಾಟಿನಲ್ಲಿ ನಾನು ಎಂದೋ ತಂದಿಟ್ಟಿದ್ದ ಆ ಪುಸ್ತಕ ಕಂಡಿದ್ದು
Dont shoot at our rainbow’ ಎನ್ನುವ ಪುಸ್ತಕ ಅದು

ಜಗತ್ತಿನ ಮಕ್ಕಳ ಮೇಲೆ ಯುದ್ಧ ಮಾಡಿದ ಪರಿಣಾಮದ ಬಗೆಗಿನ ಪುಸ್ತಕ.
ಹೇಳಿಕೇಳಿ ಅದು ಫೋಟೋ ಬುಕ್.
ಒಂದೊಂದೇ ಪುಟ ತಿರುಗಿಸುತ್ತಾ ಹೋದಂತೆ ಮನಸ್ಸು ಭಾರವಾಗುತ್ತಾ ಹೋಯಿತು. ಕೈ ಇಲ್ಲದ ಮಕ್ಕಳು, ಮೈ ತುಂಬಾ ಕಲೆ ಹೊದ್ದ ಕಂದಮ್ಮಗಳು, ಆರ್ತನಾದ ಮಾಡುತ್ತಿರುವ ಅಮ್ಮಂದಿರು.
ಪುಸ್ತಕದ ಕೊನೆ ಪುಟ ತಿರುಗಿಸುವ ವೇಳೆಗೆ ಮನ ಕದಡಿಹೋಗಿತ್ತು.

ಆಗಲೇ ಆ ಪತ್ರವೂ ಕಣ್ಣಿಗೆ ಬಿದ್ದದ್ದು.
ಕೇರಳದ ಕೊಟ್ಟಾಯಂನಿಂದ ರೀನಾ ಜೋಸೆಫ್ ಎನ್ನುವ ಪುಟ್ಟ ಹುಡುಗಿ ನೇರವಾಗಿ ರೇಗನ್ ಗೇ ಪತ್ರ ಬರೆದಿದ್ದಳು.

‘ಅಂಕಲ್ ರೇಗನ್,
ನಿಮ್ಮ ಪದಕೋಶದಲ್ಲಿ ‘ಶಾಂತಿ’ ಎಂಬುದಕ್ಕೆ ‘ಯುದ್ಧ’ ಎಂಬ ಅರ್ಥವಿದೆಯೆ?
ನಮಗೆಲ್ಲಾ ತುಂಬಾ ಹೆದರಿಕೆಯಾಗಿದೆ.
ನಾವು ಉಳಿಯಲು ಒಂದು ಸ್ವಲ್ಪವಾದರೂ ಪ್ರಯತ್ನಪಡಲು ಆಗುವುದಿಲ್ಲವೆ?’

ಎನ್ನುವ ಸಾಲು ಓದಿದ್ದೇ ನನ್ನೊಳಗೊಂದು ‘ಶಾಲ್ಮಲೆ’.

ರೆಕ್ಕೆ ಬಿಡಿಸಿ ಬಿಳಿ ಪಾರಿವಾಳಗಳೆ
ಯುದ್ಧ ನಾಡಿನಲ್ಲಿ
ಶಾಂತಿ ಅರಳಲಿ ಎದೆಗಳಲ್ಲಿ
ಹಾಡು ಕೊರಳಿನಲ್ಲಿ

ಅಷ್ಟೇ ಅಲ್ಲಿಂದ ಹಾಡು ಅದೇಗೆ ಮುಕ್ತಾಯ ಕಂಡಿತೋ ಗೊತ್ತಿಲ್ಲ

ಬೆಟ್ಟದ ಸಾಲು ನಡೆದಾಡಿದ ರಸ್ತೆ
ತಾಯಿಯ ಕರುಳು ಬಂಗಾರದ ಮರಳು
ತಣ್ಣನೆ ಕೊರೆಯುವ ರಾತ್ರಿಗಳಿಂದ
ಸ್ವಾತಿಯ ಮುತ್ತನು ಕಸಿಯದಿರಿ

ಅದಾಗಿ ಕೆಲ ದಿನಗಳಲ್ಲೇ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಮುಂದಿರುವ, ಆಗ ಬೃಹತ್ ಆಗಿದ್ದ ಪಾರ್ಕ್ ನಲ್ಲಿ ಯುದ್ಧ ವಿರೋಧಿ ಸಮಾವೇಶ.
ರಾಜ್ಯದ ಎಲ್ಲೆಡೆಯಿಂದ ಜನ ಸಾಲುಗಟ್ಟಿ ಬಂದಿದ್ದರು.

ಹಾಡಿನ ಬ್ಯಾಂಡ್ ವೇದಿಕೆಯ ಮೇಲೆ ಬಂತು
‘ಕಾರ್ಯಕ್ರಮಕ್ಕೆ ಮುನ್ನ ಸಮಾವೇಶದ ಆಶಯ ಬಿಂಬಿಸುವ ಹಾಡು ಈಗ’ ಎಂದು ಸಂಘಟಕರು ಘೋಷಿಸಿದರು.
ನಾನು ಜನಜಂಗುಳಿಯ ಮಧ್ಯೆ, ಗೆಳೆಯರ ದಂಡು ಕಟ್ಟಿಕೊಂಡು ಕಡಲೇಕಾಯಿ ಮಾರುತ್ತಿದ್ದವನ ಜೊತೆ ಚೌಕಾಸಿ ಮಾಡುತ್ತಿದ್ದೆ.
ಆಗಲೇ ಕಿವಿಗೆ ಬಿತ್ತು- ರೆಕ್ಕೆ ಬಿಡಿಸಿ ಪಾರಿವಾಳಗಳೇ…

ನನ್ನ ಕಿವಿಯನ್ನು ನಾನೇ ನಂಬಲಿಲ್ಲ.
ನನಗಾದ ಶಾಕ್ ನಲ್ಲಿ ನಾನು ಕೊಂಡುಕೊಂಡಿದ್ದ ಕಡಲೇಕಾಯಿ ಯಾರು ತಿಂದು ಮುಗಿಸಿದರೋ ಅದೂ ಗೊತ್ತಾಗಲಿಲ್ಲ.
ಜಿ ಆರ್ ಗಾಗಿ ಮಾತ್ರ ಬರೆದ ಕವಿತೆ ಆ ದೊಡ್ಡ ಬ್ಯಾಂಡ್ ನಲ್ಲಿ ರೇಗನ್ ಗೆ ಚುರುಕು ಮುಟ್ಟಿಸುತ್ತಾ ಇತ್ತು.

ಇದಾದ ಸ್ವಲ್ಪ ತಿಂಗಳಲ್ಲಿ ‘ಸಮುದಾಯ’ ರಂಗ ತಂಡ ನೂರು ಅಡಿಗಳ ಕ್ಯಾನವಾಸ್ ನಲ್ಲಿ ಯುದ್ಧ ವಿರೋಧಿ ಚಿತ್ರ ರಚಿಸಿ
ರಾಜ್ಯಾದ್ಯಂತ ಕೊಂಡೊಯ್ಯುವ ಜಾಥಾ ರೂಪಿಸಿತು.
ಆಗಿನ ಕಾಲಕ್ಕೆ ಅದು ದೊಡ್ಡ ಸಾಹಸವೂ ಹೌದು ಹಾಗೂ ಮಹತ್ವದ್ದೂ ಹೌದು.

ಚಿತ್ರಕಲಾ ಪರಿಷತ್ ನಲ್ಲಿ ಜಾತಾದ ಉದ್ಘಾಟನೆ.
‘ಜಾತಾದ ಆಶಯ ಗೀತೆ ಈಗ ಸಿ ಬಸವಲಿಂಗಯ್ಯನವರಿಂದ’ ಎಂದು ಘೋಷಿಸಿದರು.
ಬಸೂ ವೇದಿಕೆ ಮೇಲೆ ಬಂದವನೇ ತನ್ನ ಕೊರಳು ಕೊಟ್ಟದ್ದು ಅದೇ ನನ್ನ ಹಾಡಿಗೆ.
ನನ್ನನ್ನು ನಾನೇ ನಂಬಿಸಿಕೊಳಬೇಕಾಯಿತು.

ಆ ನಂತರ ಜಾತಾದ ಅಂಗವಾಗಿ ಹೊರತಂದ ಸ್ಮರಣ ಸಂಚಿಕೆಯಲ್ಲಿ ಈ ಹಾಡು ಪ್ರಕಟವಾಯಿತು.
ಬಸೂ ಮುತುವರ್ಜಿ ವಹಿಸಿ ರಾಯಚೂರು ಸಮುದಾಯದಿಂದ ಈ ಹಾಡನ್ನು ಹೊತ್ತ ಕ್ಯಾಸೆಟ್ ತಂದರು.
ಆಮೇಲೆ ಈ ಹಾಡು ಥೇಟ್ ರೆಕ್ಕೆ ಬಿಚ್ಚಿದ ಪಾರಿವಾಳದಂತೆ ನನ್ನ ಮಡಿಲು ಬಿಟ್ಟು ದಿಕ್ಕು ದಿಕ್ಕಿಗೆ ಹಾರಿತು

ಇದೆಲ್ಲಾ ಆದ ತಿಂಗಳುಗಳ ನಂತರ ನಾನು ಝಾನ್ಸಿಯಲ್ಲಿದ್ದೆ. ರಾಣಿ ಲಕ್ಷ್ಮೀಬಾಯಿಯ ಝಾನ್ಸಿಯಲ್ಲಿ.
ರಾಷ್ಟ್ರಮಟ್ಟದ ಒಂದು ಸಮಾವೇಶಕ್ಕಾಗಿ
ಸಮಾವೇಶಕ್ಕೆ ಬಂದವರಲ್ಲಿ ಹೋರಾಟದ ಬಿಸಿಯುಸಿರು ಇತ್ತು.

ತಿಂಗಳಿಗೂ ಹೆಚ್ಚು ಕಾಲ ಕರ್ನಾಟಕದ ಹಳ್ಳಿ ಹಳ್ಳಿಗಳನ್ನು ಸುತ್ತಿ ಬೀದಿ ನಾಟಕವನ್ನು ಮಾಡಿ ಮಹಿಳೆಯರಿಗೆ ದನಿಯಾಗಿದ್ದ ಗುಂಪೊಂದು ನನ್ನ ಬಳಿ ‘ಒಂದು ಹಾಡು ಹೇಳ್ತೀವಿ ಕೇಳಿ’ ಎಂದರು
‘ನಮ್ಮ ಇಷ್ಟದ ಹಾಡು’ ಎಂದರು. ಹೇಳಿ ಅಂದೆ

ಅವರು ತಮ್ಮ ಜೊತೆ ಇದ್ದ ತಮಟೆಗೆ ಜೀವ ಕೊಟ್ಟವರೇ
‘ರೆಕ್ಕೆ ಬಿಡಿಸಿ ಪಾರಿವಾಳಗಳೇ..’ ಎಂದು ದನಿ ಎತ್ತಿದರು.

ಅವರಿಗೆ ಆ ಹಾಡು ನಾನು ಬರೆದದ್ದು ಎಂದೇ ಗೊತ್ತಿರಲಿಲ್ಲ.
ನಾನೂ ಸಹಾ ಅದು ನನ್ನದು ಎಂದು ಹೇಳಿಕೊಳ್ಳದೆ ಆಕಾಶದತ್ತ ನೋಡಿದೆ.
ಎಷ್ಟೊಂದು ಬೆಳಕಿನ ಚುಕ್ಕಿ ಕಂಡವು ಅಲ್ಲಿ..

ಹಿನ್ನೆಲೆಯಲ್ಲಿ-
ಕನಸು ಹೊತ್ತ ಆ ಕಣ್ಣುಗಳನ್ನು
ಬಣ್ಣ ಬಣ್ಣದ ಪಕಳೆಗಳನ್ನು
ಬರೆಯದ ಕವಿತೆಯ ಸಾಲುಗಳನ್ನು
ಹಾಡುತಿರುವ ಈ ಕೊರಳುಗಳನ್ನು
ಯುದ್ಧದ ಭೀತಿಯೆ ಕಲಕದಿರಿ
ಎನ್ನುವ ದನಿ ಕೇಳುತ್ತಿತ್ತು…

ನನ್ನ ಕೊರಳೂ ಉಬ್ಬಿ ಬಂದಿತ್ತು..

ಬಸವಣ್ಣ ದೇವರ ಮಠದಲ್ಲಿ ನಡೆದೇ ಹೋಯಿತು ಪವಾಡ

ಮಹೇಂದ್ರ ಕೃಷ್ಣಮೂರ್ತಿ


ನೆಲಮಂಗಲ: ಇಲ್ಲಿನ ಬಸವಣ್ಣ ದೇವರಮಠ ಯಾರಿಗೆ ತಾನೇ ಗೊತ್ತಿಲ್ಲ. ಹಲವು ದಶಕಗಳಿಂದ ಈ ಮಠ ಪವಾಡ ದೇವರ ಬಸವಣ್ಣನ ಮಠ ಎಂದೇ ಖ್ಯಾತಿ ಗಳಿಸಿದೆ.

ಕರೊನಾ ಸಂಕಷ್ಟದಲ್ಲಿ‌ ಮಠದಲ್ಲಿ ಪವಾಡವೊಂದು ನಡೆದಿದೆ. ಅದೇನು ಎಂಬುದನ್ನು ಮುಂದೆ ಓದಿ.

ಈ ಮಠದ ಮಠಾಧೀಶರಾದ ಸಿದ್ದಲಿಂಗ ಸ್ವಾಮೀಜಿಗಳು ಇಲ್ಲಿ ಜನಾನುರಾಗಿಗಳು. ಈ ಭಾಗದಲ್ಲಿ ಶ್ರೀಗಳ ಹೆಸರು ಕೇಳದವರೇ ಇಲ್ಲ.

ಈ ಮಠಕ್ಕೆ ಹೆಸರು ಬಂದಿರುವುದೇ ಇಲ್ಲಿ ನಡೆದಿದ್ದ ಪವಾಡಗಳ ಕಾರಣದಿಂದ. ಹೀಗಾಗಿ ಈ ಮಠ ಪವಾಡ ಬಸವಣ್ಣ ದೇವರ ಮಠ ಎಂದೇ ಖ್ಯಾತಿಗಳಿಸಿದೆ. ಅನಾದಿ ಕಾಲದಿಂದಲೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ತುಮಕೂರಿನ ಸಿದ್ದಗಂಗಾ ಮಠದ ಅಧೀನ ಮಠವೆಂದೇ ಈ ಮಠವನ್ನು ಇಲ್ಲಿನ ಜನರು ಕರೆಯುತ್ತಾರೆ. ಮಠಾದೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಜನರ ನಡುವೆ ದೇವರಂತೆ ಕಾಣುತ್ತಾರೆ. ಜನರ ಕಷ್ಟ ಸುಖಗಳನ್ನು ಆಲಿಸುತ್ತಾರೆ.

ಇಷ್ಟಾಗಿಯೂ, ಅನ್ನದಾಸೋಹದ ಕೇಂದ್ರವಾಗಿ ಮಠ ಯಾವತ್ತೂ ಗಮನ ಸೆಳೆದಿರಲಿಲ್ಲ. ಆದರೆ ಶಿಕ್ಷಣ ದಾಸೋಹದ ಕೇಂದ್ರವಾಗಿ ಈ ಮಠ ಗಮನ ಸೆಳೆಯುತ್ತಿತ್ತು. ಕರೋನಾ ಈ ಮಟ್ಟದಲ್ಲಿ ಒಂದು ಪವಾಡವನ್ನೇ ಸೃಷ್ಟಿಸಿಬಿಟ್ಟಿದೆ .


ಪವಾಡ ಬಸವಣ್ಣ ದೇವರ ಮಠದಲ್ಲಿ ಅನ್ನ ದಾಸೋಹದ ಕೆಲಸಕ್ಕಿಂತ ಬೇರೇನೂ ಬೇಕಿಲ್ಲ. ಇದು ಪವಾಡ ಬಸವಣ್ಣ ದೇವರ ಅರ್ಶೀವಾದ ಎಂದು ತಿಳಿದಿದ್ದೇನೆ ಎನ್ನುತ್ತಾರೆ ಎಚ್. ಬಿ. ಮಂಜುನಾಥ್.

ಶ್ರೀಗಳು ಹೇಳಿದ ತಕ್ಷಣವೇ ನಾವೆಲ್ಲರೂ ನೆರವಾಗಲು ಮುಂದಾದೆವು. ಇದು ನನ್ನೊಬ್ಬನಿಂದ ನಡೆಯುತ್ತಿರುವ ಕೆಲಸವಲ್ಲ. ನನ್ನ ಸ್ನೇಹಿತರು ನೂರಾರು ಭಕ್ತರು ಸೇರಿಕೊಂಡು ಅನ್ನದಾನದ ವ್ಯವಸ್ಥೆಯನ್ನು ಮಾಡಿದ್ದೇವೆ. ಶ್ರೀಗಳು ಇದರ ನೇತೃತ್ವವನ್ನು ವಹಿಸಿದ್ದಾರೆ ಎನ್ನುತ್ತಾರೆ ಅವರು.


ಕರೊನಾ ಕಾಲದಲ್ಲಿ ಹಸಿವಿನಿಂದ ಬಳಲುತ್ತಿರುವ ಜನರಿಗೆ ಏನಾದರೂ ಮಾಡಬೇಕೆಂಬ ಸಂಕಲ್ಪವನ್ನು ಸ್ವಾಮೀಜಿ ದೇವರ ದೇವರ ಮುಂದೆ ಮಾಡಿಕೊಂಡರಂತೆ. ಅಷ್ಟೇ, ಏಕಾಏಕಿ ದಾನಿಗಳೇ ಮುಂದೆ ಬಂದು ಬಿಟ್ಟರು ಎನ್ನುತ್ತಾರೆ ಶ್ರೀಗಳು.

ಯಾವ ಮಠಗಳು ಈಗ ಅನ್ನ ದಾಸೋಹದ ಕೆಲಸ ಮಾಡುತ್ತಿಲ್ಲ. ಆದರೆ ಈ ಮಠ ಪ್ರತಿದಿನ ಸಾವಿರ ಜನ ಬಡವರು, ಕೂಲಿ ಕಾರ್ಮಿಕರು ಇದ್ದಲ್ಲಿಗೆ ಊಟ ಕೊಡುವ ಕೆಲಸ ಮಾಡುತ್ತಿದೆ.

ಹಸಿವಿನಿಂದ ಬಳಲುವ ಜನರಿಗೆ ಊಟ ಕೊಡಬೇಕೆಂದು ಸಂಕಲ್ಪ ಮಾಡಿದ ಮರು‌‌ದಿನವೇ ಮಠಕ್ಕೆ ಬಂದ ಭವಾನಿಶಂಕರ್ ಗ್ರೂಪ್ ನ ಮಂಜುನಾಥ್ ಅವರಿಗೆ ಮಠದಿಂದ ಅನ್ನದಾಸೋಹ ವ್ಯವಸ್ಥೆ ಮಾಡುವ ಬಗ್ಗೆ ಕನಸುಗಳನ್ನು ಹಂಚಿಕೊಂಡೆ. ಅವರು ಒಪ್ಪಿಗೆ ಬಿಟ್ಟರು. ಅವರೊಂದಿಗೆ ನೆಲಮಂಗಲದ ಪ್ರಾಧಿಕಾರದ ಅಧ್ಯಕ್ಷ ಮಲ್ಲಣ್ಣ, ಹರ್ಷ, ನಿಶಾಂತ್ ಸೋಮಶೇಖರ್ ದೊಡ್ಡ ಮಟ್ಟದಲ್ಲಿ ಕೈ ಜೋಡಿಸಿದರು. ಇನ್ನೂ ನಾಲ್ಕಾರು ದಾನಿಗಳು ಮುಂದೆ ಬಂದರು. ಇವರೊಂದಿಗೆ ಈಗ ನೂರಾರು ಭಕ್ತರು ಕೈ ಜೋಡಿಸಿದ್ದಾರೆ. ಹೀಗೆ ಆರಂಭವಾಯಿತು ಅನ್ನದಾಸೋಹ ಎಂದು ಹೇಳುತ್ತಾರೆ ಶ್ರೀಗಳು.

ಇದೊಂದು ಪವಾಡವೇ ಸರಿ. ಈಗ ಪ್ರತಿದಿನ ಹಸಿದವರಿಗೆ ಮಠದಿಂದ ಊಟ ಹಾಕಲಾಗುತ್ತಿದೆ. ಇಲ್ಲಿಯವರೆಗೂ ಶಿಕ್ಷಣ ದಾಸೋಹದ ಕೇಂದ್ರವಾಗಿ ಗಮನ ಸೆಳೆದ ಮಠ ಈಗ ಅನ್ನದಾಸೋಹದ ಕೇಂದ್ರವಾಗಿ ಗಮನ ಸೆಳೆದಿದೆ. ಇದು ಪವಾಡ ಅಲ್ಲದೆ ಮತ್ತೇನೂ ಅಲ್ಲ ಎನ್ನುತ್ತಾರೆ ಇಲ್ಲಿನ ಭಕ್ತರು.

ಇದನ್ನೂ ಓದಿ

ಮಠದ ಜತೆ ನನ್ನ ಸಂಪರ್ಕ ತುಂಬಾ ವರ್ಷಗಳಿಂದಲೂ ಇದೆ. ಶಿಕ್ಷಣ ಕ್ಷೇತ್ರದಲ್ಲಿ ಮಠ ತುಂಬಾ ಹೆಸರು ಮಾಡಿದೆ. ಈಗ ಅನ್ನದಾಸೋಹ ಆರಂಭವಾಗಿರುವುದು ಹರ್ಷ ತಂದಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ ಎನ್ನುತ್ತಾರೆ ಭಕ್ತ ಸತೀಶ್ ಯಲಚಗೆರೆ.

ಮಠ ಅಧ್ಯಾತ್ಮಿಕ ಹಸಿವನ್ನಷ್ಟೇ ತೀರಿಸುತ್ತಿಲ್ಲ. ಈಗ ಹೊಟ್ಟೆ ಹಸಿವನ್ನು ತೀರಿಸಲು ಮುಂದಾಗಿದೆ. ಮಠದ ಅನ್ನ ದಾಸೋಹದ ಈ ದೀಪ ಇನ್ನೂ ಹೀಗೆ ಬೆಳಗಲಿ ಎನ್ನುತ್ತಾರೆ ದಾನಿಗಳಾದ ಎಚ್.ಬಿ.ಮಂಜುನಾಥ್.

ಮಠದ ಅನ್ನ ದಾಸೋಹದ ಸುದ್ದಿ ಕೇಳಿ ಮಠಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಶ್ರೀಗಳ ಆರ್ಶೀವಾದ ಪಡೆದರು. ಮಠದ ಕೆಲಸ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಮಠವೊಂದು ಈ ರೀತಿ ತಾನೇ ಸ್ವಯಂ ಮುಂದೆ ನಿಂತು ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಿರುವುದು ಇದೇ ಮೊದಲಾಗಿದೆ ಎಂದರು.

ಶಾಸಕ ಎಸ್ ಆರ್ ವಿಶ್ವನಾಥ್ ಸೇರಿದಂತೆ ಅನೇಕ ರಾಜಕೀಯ ಧುರೀಣರು, ಸಮಾಜ ಸೇವಕರು ಗಣ್ಯ ವ್ಯಕ್ತಿಗಳು ಮಠಕ್ಕೆ ಬಂದು ವ್ಯವಸ್ಥೆಯನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಶೀಗಳ ಕಾರ್ಯಕ್ಕೆ ತಲೆದೂಗುತ್ತಿದ್ದಾರೆ.

ಹೆಡ್ ಕಾನ್ ಸ್ಟೆಬಲ್ ನಯನಾ ಕೆಲಸಕ್ಕೆ ತಲೆದೂಗುತ್ತಿರುವ ವೈದ್ಯರು

0

ಮಂಗಳೂರು: ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮಹಿಳಾ ಹೆಡ್ ಕಾನ್ಸ್ಟೇಬಲ್ ನಯನಾ ಅವರ ಕೆಲಸಕ್ಕೆ ಇಡೀ ಮಂಗಳೂರಿನ ಕರೊನಾ ವೈದ್ಯರ ತಂಡ ತಲೆತೂಗುತ್ತಿದೆ.

ವೈದ್ಯರಷ್ಟೇ ಅಲ್ಲ, ಪೊಲೀಸರಿಗೂ ಇವರ ಕೆಲಸ ಹೆಮ್ಮೆ ತರಿಸಿದೆ.

ನಯನಾ ಅವರು ಪ್ರಸ್ತುತ ಕೋವಿಡ್-19ಗೆ ಸಂಬಂದಿಸಿದ ವೆನ್ಲಾಕ್ ಆಸ್ಪತ್ರೆಯ ಕೋವಿಡ್-19ನ ವಿಶೇಷ ಕಟ್ಟಡ ಆಯುಷ್ ಬಿಲ್ಡಿಂಗ್ ನ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

ವೆನ್ಲಾಕ್ ಆಸ್ಪತ್ರೆಯ ಆಯುಷ್ ಬಿಲ್ಡಿಂಗ್ ನಲ್ಲಿ ಕೊರೊನಾ ವೈರಸ್ ದೃಢಪಟ್ಟ ರೋಗಿಗಳು ಮತ್ತು ಸಂಶಯಾಸ್ಪದ ರೋಗಿಗಳನ್ನು ಚಿಕಿತ್ಸೆ ನೀಡುವ ಬಿಲ್ಡಿಂಗ್ ನಲ್ಲಿ ಸ್ವಇಚ್ಛೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕರೊನಾ ಪೀಡಿತ ರೋಗಿಗಳ ಸೇವೆ ಮಾಡಬೇಕೆಂಬ ಕಾರಣದಿಂದಲೇ ತಾವೇ ಕೇಳಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಹಾಗೂ ಚಿಕಿತ್ಸೆ ಪಡೆದು ಗುಣಮುಖಗೊಂಡು ಬಿಡುಗಡೆ ಹೊಂದಿರುವವರ ಸ್ವ-ವಿವರವುಳ್ಳ ಮಾಹಿತಿಯನ್ನು ಆಸ್ಪತ್ರೆಯಿಂದ ಪಡೆದು ಕ್ಲಿಪ್ತ ಸಮಯದಲ್ಲಿ ಸಂಬಂದಪಟ್ಟ ಪೊಲೀಸ್ ಠಾಣೆಗಳಿಗೆ ನಿಗಾವಹಿಸಲು ಹಾಗೂ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.

ಆಸ್ಪತ್ರೆಯ ವೈದ್ಯರೊಂದಿಗೆ ಹಾಗೂ ಸಿಬ್ಬಂದಿ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲಿರಿಸಿದ್ದರಿಂದ, ಇತರೆ ಖಾಯಿಲೆಯ ಚಿಕಿತ್ಸೆಗೆಂದು ಬರುವ ರೋಗಿಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ ವೈದ್ಯರ ಸೂಚನೆಯಂತೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.

ರೋಗಿಗಳ ಜತೆ ಆಪ್ತತತೆಯ ಇವರ ಕೆಲಸ ಕಂಡು ರೋಗಿಗಳು ಮಾತ್ರವಲ್ಲ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಕೊಂಡಿ ಕಳಚುವ ಕಾಲ

0

ದೇವರಹಳ್ಳಿ ಧನಂಜಯ


ಜಗವ ನಲುಗಿಸಿರುವ
ಕ್ರೂರಿ ಕೊರೋನಾದ,
ಸಾವಿನ ಸರಪಳಿಯ ತುಂಡರಿಸಲು,
ಸುಳ್ಳರ ಚೈನ್ ಲಿಂಕ್ ನಲ್ಲಿ ಹಬ್ಬುತ್ತಿರುವ,
ಧರ್ಮಾಂಧ ವೈರಸ್ ನಿಷ್ಕ್ರಿಯಗೊಳಿಸಲು.
ಅಂತರ ಕಾಯ್ದುಕೊಳ್ಳಬೇಕು.
ಮರೆಯ ಬೇಡಿ ಇದು ಕೊಂಡಿ ಕಳಚುವ ಕಾಲ.

ಸ್ಯಾನಿಟೈಸರ್ ಬಳಸಿ ಕೈ ತೊಳೆಯಿರಿ ಪದೇ ಪದೆ.
ಅಂಟಿದ ಸೋಂಕು ದೇಹ ಸೇರದಿರಲಿ.
ವಿವೇಕ ಬಳಸಿ ಆತ್ಮ ತೊಳೆಯಿರಿ ಮತ್ತೆ ಮತ್ತೆ.
ಜಾತಿ, ಮೇಲುಕೀಳಿನ ಜಾಡ್ಯ
ಆಲೋ ಚನೆಯ ಆಳದಿರಲಿ
ಎಚ್ಚರದಿಂದಿರಿ ವೈರಸ್ ದೇಹ ದೇಶದ
ಶ್ವಾಸಕೋಶ ಸೇರಿದೆ.
ಯೋಚಿಸಿ ಇದು ಕೊಂಡಿ ಕಳಚುವ ಕಾಲ.

ವಿಜ್ಞಾನ ಆತಂಕಕಾರಿ
ಜ್ಞಾನ-ಇತಿಹಾಸ ಪರಂಪರೆಯ
ಮರೆಮಾಚಿರುವ ಮುಸುಕುದಾರಿ.
ವಿದ್ಯೆಯೇ ಅಧ್ವಾನಗಳ ಹೆದ್ದಾರಿ.
ಜ್ಞಾನ-ವಿಜ್ಞಾನ ಸುಜ್ಞಾನ ಎಂಬ ಸವಕಲು ಪದಗಳು
ಕುಸಿದ ಕುದುರೆಯ ಕಾಲಿನ ಸವೆದ ಲಾಳಗಳು.
ಜಾಣರಾಗಿ ಸ್ಟೇಟ್ ಹೋಂ ಸ್ಟೇ ಸೇಫ್.

ಸಿರಿಗರ ಬಡಿದವರ
ನೆಲ-ಜಲ ಸಂಬಂಧಗಳ ಮರೆತವರ
ಬೆವರ ಬೆಲೆ ತಿಳಿಯದವರ ಕೊಡುಗೆ
ಕೊಲ್ಲುತ್ತಿದೆ ಬಡವರ ದುಡಿಯುವವರ .
ಎಚ್ಚರ! ಇದು ದೇವರು ಕೈ ಚೆಲ್ಲಿರುವ ಕಾಲ.
ನಮ್ಮನ್ನು ನಾವೇ ಕಾಪಾಡಿಕೊಳ್ಳುವ ಕಾಲ.
ಭ್ರಮೆಯ ಕೊಂಡಿಯ ಕಳಚುವ ಕಾಲ.

ನಿಮಗೆ ರೋಗ ಇದೆ ಎಂದಲ್ಲ.
ಸೋಂಕಿತರು ಯಾರೆಂಬುದು ತಿಳಿಯುತ್ತಿಲ್ಲ.
ಲಕ್ಷಣಗಳು ಬೇಗ ಕಾಣಿಸಿಕೊಳ್ಳುತ್ತಿಲ್ಲ.
ಶಂಕಿತರು ಶಂಕಿಸುವವರು ಮನುಷ್ಯರಾಗಿಲ್ಲ.
ಯಾವುದಕ್ಕೂ ಇರಲಿ ವಸ್ತಿಲು ದಾಟುವಾಗ
ಮಾಸ್ಕ್ ಧರಿಸಿ ಮುಖಕ್ಕೆ.
ಮನಸ್ಸಿಗೂ ಒಂದು ಭಾವನೆಗಳಿಗೆ ಮತ್ತೊಂದು.

ಅಭಿವೃದ್ಧಿ ಗ್ರೂಪಿನ ಹುಡುಗರ ಸದ್ದಿಲ್ಲದ ಕೆಲಸ…

Publicstory. in


ಚಿಕ್ಕನಾಯಕನಹಳ್ಳಿ: ಒಳ್ಳೆಯದನ್ನು ಒಳ ಉದ್ದೇಶವನ್ನಿಟ್ಟುಕೊಂಡೇ ಮಾಡುತ್ತಿರುವುದು, ಪ್ರಚಾರಕ್ಕಾಗಿ ಸಹಾಯ ಹಸ್ತ ದ ಫೋಸ್ ಕೊಡುತ್ತಿರುವುದು ಈ ಕೋರೋ ನ ಕಾಲದ ಫ್ಯಾಶನ್ ಆಗಿದೆ.


ನಿಮ್ಮೂರಿನ ಸುದ್ದಿಗಳನ್ನು ನೀವೂ ಬರೆಯಿರಿ;: ವಾಟ್ಸಾಪ್ : 98448177


ಇದರ ಮಧ್ಯೆ ಚಿಕ್ಕನಾಯಕನಹಳ್ಳಿ ಅಭಿವೃದ್ಧಿ ಗ್ರೂಪಿನ ಹುಡುಗರು ಸದ್ದಿಲ್ಲದ ಹೊರರಾಜ್ಯಗಳ ಕಟ್ಟಡ ಕಾರ್ಮಿಕರು ಅಲೆಮಾರಿಗಳು ನಿರ್ಗತಿಕರು,ಚಾಲಕರು ಹಾಗೂ ಲಾಕ್ಡೌನ್ ಅನುಷ್ಠಾನಕ್ಕೆ ಕಟಿಬದ್ಧರಾಗಿರುವ ಪೊಲೀಸ್ ಮತ್ತು ವೈದುಕೀಯ ಸಿಬ್ಬಂದಿಗಳಿಗೆ ನೆರವಾಗುತ್ತಿದ್ದಾರೆ.ಇವರ ಸೇವೆ ಯುವಕರಿಗೆ ಮಾದರಿಯಾಗಿದೆ.

ಗುಂಪಿನ ಸದಸ್ಯರಾದ ಮಂಜುನಾಥ್ ಆಟೊ ರಾಘವೇಂದ್ರ ,ವಸಂತ್ ,ಜಬಿ ಖಾನ್, ತಿಲಕ್ ರಾಜ್,ಕೆ.ಪಿ. ಮಂಜುನಾಥ್ ,ಮೊಹಮದ್ ಹುಸೇನ್(ಗುಂಡ) ಹಾಗೂ ಬಾಬು ಪ್ರತಿದಿನ ಬೆಳಿಗ್ಗೆ ತಾತಯ್ಯನ ದರ್ಗಾದಲ್ಲಿ ಸೇರಿಕೊಂಡು ಆಹಾರ ತಯಾರಿಸುತ್ತಾರೆ.

ಸಿದ್ಧಗೊಂಡ ಆಹಾರ ಪೊಟ್ಟಣಗಳನ್ನು ಹಿಡಿದು ಪಟ್ಟಣದ ಮೂಲಕ ಹಾದುಹೋಗಿರುವ ಚಾಮರಾಜನಗರ ಜೇವರ್ಗಿ ಅಂತರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲುತ್ತಾರೆ. ಸರಕು ಸಾಗಾಣಿಕೆ ವಾಹನಗಳ ಚಾಲಕರು ಹಾಗೂ ನಿರ್ವಾಹಕರಿಗೆ ಆಹಾರ ಪಟ್ಟಣಗಳನ್ನು ಮಧ್ಯಾಹ್ನ 2 ಗಂಟೆಯವರೆಗೂ ವಿತರಿಸುತ್ತಾರೆ.ಪ್ರತಿದಿನ ನೂರರಿಂದ 125 ಪಟ್ಟಣಗಳನ್ನು ವಿತರಿಸಲಾಗುತ್ತದೆ.

ಆಹಾರ ತಯಾರಿಸುವಾಗ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಸಾಮಾಜಿಕ ಅಂತರದ ಬಗ್ಗೆ ಎಚ್ಚರ ವಹಿಸುತ್ತೇವೆ. ಪೊಲೀಸ್ ಸಿಬ್ಬಂದಿಯ ನೆರವಿನಿಂದ ಆಹಾರ ಪಟ್ಟಣಗಳನ್ನು ನೀಡುತ್ತೇವೆ. ದಾನಿಗಳು ಹಾಗೂ ಸ್ನೇಹಿತರ ಸಹಕಾರದಿಂದ ಈ ಕಾಯಕ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಲಾಕ್ ಡೌನ್ ಮುಗಿಯುವವರೆಗೂ ಈ ಕೆಲಸವನ್ನು ಮುಂದುವರೆಸುತ್ತೇವೆ ಎಂದು ಗುಂಪಿನ ಸದಸ್ಯರಲ್ಲಿ ಒಬ್ಬರಾದ ಮಹಮ್ಮದ್ ಹುಸೇನ್ ಗುಂಡ ಹೇಳುತ್ತಾರೆ.

ನಾವೇನು ಮಹಾ ಕೆಲಸ ಮಾಡುತ್ತಿಲ್ಲ. ನಾನು ಪ್ರತಿನಿತ್ಯ ಅಡುಗೆ ಕೆಲಸವನ್ನೇ ಮಾಡುತ್ತೇನೆ. ಕರೊನಾ ಕಾರಣದಿಂದ ನನಗೆ ವಿರಾಮ ಸಿಕ್ಕಿದೆ. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಉದ್ದೇಶದಿಂದ ಪ್ರತಿದಿನ ಬಂದು ಉಚಿತವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದೇನೆ. ಊರಿನ ಗಾಂಧಿ ಎಂದೇ ಹೆಸರಾಗಿರುವ ಮಲ್ಲಿಕಾರ್ಜುನಯ್ಯ ಅವರು ಸಾಯಿಮಂದಿರದ ಪರವಾಗಿ ಅಡುಗೆ ಪಾತ್ರೆಗಳನ್ನು ನೀಡಿದ್ದಾರೆ ಎಂದರು.

ನನ್ನ ಸೇವೆಗೆ ನನ್ನ ತಾಯಿಯೇ ಸ್ಫೂರ್ತಿ- ಗೌರಿಶಂಕರ್

ಚಿತ್ರ: ಜೆಪಿ

ಹೆತ್ತೇನಹಳ್ಳಿ ಮಂಜುನಾಥ್


ಹೊನ್ನುಡಿಕೆ: ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದೇಶ ಲಾಕ್ ಡೌನ್ ಆದ ಮೊದಲನೇ ದಿನದಿಂದಲೂ ನಿರಂತರ ಸೇವೆಯಲ್ಲಿ ತೊಡಗಿದ್ದೇನೆ. ಇಲ್ಲಿಯವರೆಗೂ 2 ಲಕ್ಷ ಮಾಸ್ಕ್ 1 ಲಕ್ಷ ಸ್ಯಾನಿಟೈಸರ್, 50 ಸಾವಿರ ಹ್ಯಾಂಡ್ ವಾಷ್ ನೀಡಿದ್ದೇವೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ತಿಳಿಸಿದರು.

ಸೋಮವಾರ ಕ್ಷೇತ್ರದ ಜನರಿಗೆ ಮನೆ ಮನೆಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತ‌ನಾಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದ್ದರು.

ರೈತರ ಬೆಳೆಗಳನ್ನು ಅಲ್ಲೇ ಖರಿದಿಸಿ ಅಲ್ಲೇ ವಿತರಿಸುತ್ತಿದ್ದೇವೆ, ದಿನನಿತ್ಯ ಬರುವ ಎಲ್ಲಾ ಜನಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ದಿನ ತಡರಾತ್ರಿ ಮನೆಗೆ ಹೋದಾಗ ತಾಯಿಯವರನ್ನ ಊಟ ಮಾಡಿದ್ಯೇನಮ್ಮಾ ಎಂದಾಗ, ಇಲ್ಲಾ ಕಣೋ, ಕೊರೋನಾದಿಂದ ದಿನನಿತ್ಯ ದೇಶ, ರಾಜ್ಯದಲ್ಲಿ ಆಗುತ್ತಿರುವ ಘಟನೆ ತುಂಬಾ ಬೇಸರ ತಂದಿದೆ. ನಿನ್ನ ಕ್ಷೇತ್ರದ ಜನಗಳು ಹೇಗಿದ್ದಾರೆ ಎಂದು ವಿಚಾರಿಸುತ್ತಾ ಅಲ್ಲಿರುವ ಎಲ್ಲಾ ಮನೆಗಳಿಗೂ ತಿಂಗಳಿಗಾಗುವ ದಿನಸಿಯನ್ನ ಗೃಹಪಯೋಗಿ ಪಧಾರ್ಥಗಳನ್ನು ನೀಡು ಎಂದೇಳಿದ “ನನ್ನ ತಾಯಿಯೇ ಈ ಕಾರ್ಯಕ್ಕೆ ಸ್ಪೂರ್ತಿ” ( ಶ್ರೀಮತಿ ಸಿದ್ದಗಂಗಮ್ಮ ಚನ್ನಿಗಪ್ಪ) ಎಂದು ಹೇಳಿದರು.

50 ಟನ್ ಬಾಳೆ, 30 ಟನ್ ಗಿಂತ ಹೆಚ್ಚು ತರಕಾರಿ, 20 ಟನ್ ಕಲ್ಲಂಗಡಿ ಖರಿದಿಸಿದೆ. ಇದಕ್ಕೆ ಮೂಲ ಕಾರಣ ಈ ನೆಲದ ಮಣ್ಣಿನ ಮಗ “ದೇವೇಗೌಡರು”. ಯಾಕಂದ್ರೆ ಈ ನೆಲದಲ್ಲಿ ರೈತಪರ ಗಟ್ಟಿ ಧ್ವನಿ, ನೀರಾವರಿ ವಿಚಾರದಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಿದದಂತಹ ಅಪ್ಪಾಜಿಯವರ ಆದೇಶದಂತೆ ರೈತರ ಪರ ನಿಂತಿದ್ದೇನೆ ಎಂದು ತಿಳಿಸಿದರು.

ಇಂದು ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕುಟುಂಬಗಳಿಗೆ ದಿನಸಿ & ಗೃಹಪಯೋಗಿ ಪಧಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸೋ ವ್ಯವಸ್ಥೆ ಮಾಡುತ್ತಿದ್ದೇವೆ. ಇಂದು ಮತ್ತೆ 1 ಲಕ್ಷ ಮಾಸ್ಕ್, 50000 ಕುಟುಂಬಗಳಿಗೆ ತಿಂಗಳಿಗಾಗುವಷ್ಟು ಪಡಿತರ ವಿತರಣೆ, 25 ಟನ್ ಬಾಳೆ, 10 ಟನ್ ತರಕಾರಿ, 10 ಟನ್ ಕಲ್ಲಂಗಡಿ ಅನ್ನು ಭಾನುವಾರದೊಳಗೆ ಪ್ರತಿ ಮನೆಗೂ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.

ಈ ಕಾರ್ಯದಲ್ಲಿ ಸಕ್ರಿಯವಾಗಿರುವ ನನ್ನ ಸಹೋದರರಿಗೆ ಪಕ್ಷದ ಕಾರ್ಯಕರ್ತರಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಹರ್ಷಿಸುತ್ತೇನೆ ಎಂದರು.

ಎಂತಹ ಪರಿಸ್ಥಿತಿ ಬಂದರೂ ನನ್ನ ಕ್ಷೇತ್ರದ ಜನ ಯಾವುದಕ್ಕೂ ಪರಿತಪಿಸಲು ಬಿಡುವುದಿಲ್ಲಾ. ದಯವಿಟ್ಟು ಎಲ್ಲರೂ ಮನೆಗಳಲ್ಲೇ ಉಳಿಯಿರಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೊರೊನಾ ಮಹಾಮಾರಿಯನ್ನ ಹಿಮ್ಮೆಟ್ಟಿಸಲು ಎಲ್ಲರೂ ಒಂದಾಗಿ ಕೆಲಸ ಮಾಡೋಣಾ ಎಂದು ಕರೆ ನೀಡಿದರು.

ನನ್ನುಸಿರಿರುವ ವರೆಗೂ ನನ್ನ ಕ್ಷೇತ್ರದ ಜನಗಳಿಗೆ ಕಿಂಚಿತ್ತು ತೊಂದರೆ ಆಗದಂತೆ ನೋಡಿಕೊಳ್ಳುವ ಸಂಪೂರ್ಣ ಜವಬ್ದಾರಿ ನನ್ನದು ಎಂದು ಶಾಸಕ ಗೌರಿಶಂಕರ ಹೇಳಿದರು.

ಇದನ್ನು ಓದಿ: ಬೆಳಗುಂಬದ ಹುಡುಗರ ಬಾವಿಯ ಕತೆ