Thursday, February 26, 2026
Google search engine
Home Blog Page 257

ನಕಲಿ ವೈದ್ಯರ ಕ್ಲಿನಿಕ್ ಗೆ ಬೀಗಮುದ್ರೆ

ಉಪವಿಭಾಧಿಕಾರಿ ಡಾ.ನಂದಿನಿದೇವಿ ರವರು ವೈ.ಎನ್.ಹೊಸಕೋಟೆ ಗ್ರಾಮದ ನಕಲಿ ವೈದ್ಯರ ಅಂಗಡಿಗಳ ಪರಿಶೀಲನೆ ನಡೆಸಿದರು.Publicstory.in


ವೈ.ಎನ್.ಹೊಸಕೋಟೆ : ಗ್ರಾಮದಲ್ಲಿ ಅನಧಿಕೃತವಾಗಿ ಶುಶ್ರೂಷೆ ಮಾಡುತ್ತಿದ್ದ ನಕಲಿ ವೈದ್ಯರ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಉಪ ವಿಭಾಗಾಧಿಕಾರಿ ಡಾ.ನಂದಿನಿದೇವಿಯವರು 2 ಅನಧಿಕೃತ ಕ್ಲಿನಿಕ್ ಗಳಿಗೆ ಶುಕ್ರವಾರದಂದು ಬೀಗಮುದ್ರೆ ಹಾಕಿಸಿದರು.ಬುಡ್ಡಾರೆಡ್ಡಿಹಳ್ಳಿಯ ವೆಂಕಟೇಶ್ ಮತ್ತು ಅನಂತಪುರದ ಗೋಪಾಲನಾಯ್ಕ ಎಂಬುವರು ಗ್ರಾಮದಲ್ಲಿ ಲ್ಯಾಬ್ ಟೆಕ್ನೀಷಿಯನ್ ಕೇಂದ್ರಗಳನ್ನು ತೆರೆದುಕೊಂಡು ರೋಗಿಗಳಿಗೆ ಶೂಶ್ರೂಷೆ ನೀಡುತ್ತಿದ್ದರು.ರಕ್ತ, ಕಫ, ಮೂತ್ರ ಇತ್ಯಾದಿಗಳ ಪರೀಕ್ಷೆಯ ಜೊತೆಗೆ ಅನಧಿಕೃತವಾಗಿ ಚುಚ್ಚುಮದ್ಧು ನೀಡುವ, ಮಾತ್ರೆಗಳನ್ನು ನೀಡುವುದು, ಗ್ಲುಕೋಸ್ ಮತ್ತು ರಕ್ತ ಏರಿಸುವ ಕೆಲಸವನ್ನು ಮಾಡುತ್ತಿದ್ದರು. ಇದಕ್ಕಾಗಿ ರೋಗಿಗಳಿಂದ ಸಾವಿರಾರು ರೂಪಾಯಿಗಳನ್ನು ಪಡೆಯುತ್ತಿದ್ದರು.ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದೆ ಮತ್ತು ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ ತಿಳಿಸಿದ್ದಾರೆ.ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಪರಿಶೀಲನೆಗಾಗಿ ಆಗಮಿಸಿದ್ದ ಉಪ ವಿಭಾಗಾಧಿಕಾರಿಗಳಿಗೆ ಗ್ರಾಮಪಂಚಾಯಿತಿ ಸದಸ್ಯರು ಸ್ಥಳೀಯ ಪರಿಸ್ಥಿತಿಯನ್ನು ವಿವರಿಸಿದರು.ಈ ವಿಚಾರವಾಗಿ ತಿಳಿಸುತ್ತಾ, ಖಾಸಗಿ ತುರ್ತುವಾಹನಗಳ ಮೂಲಕ ಬೆಂಗಳೂರಿನಿಂದ ಕೆಲವು ಜನ ಗ್ರಾಮಕ್ಕೆ ಆಗಮಿಸಿರುವುದು ಕಂಡುಬಂದಿದೆ.ನ್ಯಾಯಬೆಲೆ ಅಂಗಡಿಯವರು ಗುಂಪುಗೂಡಿಸಿಕೊಂಡು ಪಡಿತರ ವಿತರಿಸುತ್ತಿದ್ದಾರೆ. ಜೊತೆಗೆ ಪ್ರತಿಯೊಬ್ಬರಿಂದ 20-40 ರೂ ವಸೂಲು ಮಾಡುತ್ತಿದ್ದಾರೆ. ಬೆರಳಚ್ಚು ಅಥವಾ ಓಟಿಪಿ ಹೊಂದಾಣಿಕೆಯಾದರೆ ಮಾತ್ರ ಪಡಿತರ ವಿತರಿಸುತ್ತಿದ್ದಾರೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಕೋಳಿ ಮತ್ತು ಮಾಂಸದ ಅಂಗಡಿಗಳಿದ್ದು, ನಿಷೇದಾಜ್ಞೆಯ ನಡುವೆಯೂ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೋಳಿ ಅಂಗಡಿಗಳನ್ನು ಗ್ರಾಮದ ಹೊರಬಾಗಕ್ಕೆ ಸ್ಥಳಾಂತರಿಸಬೇಕು.ಅಂಧ್ರಪ್ರದೇಶದ ಜನತೆ ಗಡಿಭಾಗದ ಕಳ್ಳದಾರಿಗಳಲ್ಲಿ ಗ್ರಾಮಕ್ಕೆ ಪ್ರವೇಶಿಸುತ್ತಿದ್ದು, ಇವರಿಂದ ವೈರಸ್ ಹರಡುವ ಭೀತಿ ಇದೆ. ಗ್ರಾಮದಲ್ಲಿರುವ ತಂಬಾಕು ಉತ್ಪನ್ನಗಳ ಸಬರಾಜುದಾರರು ಏಕಾಏಕಿ ಬೆಲೆಗಳನ್ನು ದುಪ್ಪಟ್ಟು ಮಾಡಿ ಮಾರುತ್ತಿದ್ದಾರೆ. ಹಾಗೂ ಆಂದ್ರಪ್ರದೇಶಕ್ಕೆ ರಾತ್ರೋರಾತ್ರಿ ಸರಬರಾಜು ಮಾಡುತ್ತಿದ್ದಾರೆ. ಕೆಲವೊಂದು ಹೋಟೆಲ್‌ಗಳು ತೆರೆಯುತ್ತಿವೆ ಎಂದರು.ಈ ಬಗ್ಗೆ ಮಾತನಾಡಿದ ಉಪವಿಭಾಧಿಕಾರಿಗಳು ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ತಿಳಿಸಿದರು.ಲಾಕ್‌ಡೌನ್ ವೇಳೆ ನಿಗಧಿತ ಸಮಯದಲ್ಲಿ ಮಾತ್ರ ದಿನಸಿ, ಹಾಲು ಮತ್ತು ತರಕಾರಿ ಅಂಗಡಿಗಳನ್ನು ತೆರೆಯಬೇಕು. ಇವುಗಳನ್ನು ಹೊರತುಪಡಿಸಿ ಮತ್ತಾವುದೇ ಅಂಗಡಿ ತೆರೆದರೆ ಅವುಗಳಿಗೆ ಬೀಗ್ರಮುದ್ರೆ ಹಾಕುವಂತೆ ಸೂಚಿಸಿದರು.ಗ್ರಾಮಕ್ಕೆ ಹೊಸಬರು ಪ್ರವೇಶಿಸಿದರೆ ತಕ್ಷಣವೇ ಆರೋಗ್ಯ, ಪೋಲೀಸ್ ಮತ್ತು ಪಂಚಾಯಿತಿ ಇಲಾಖೆಗೆ ಮಾಹಿತಿ ಸಿಗಬೇಕು. ಅವರ ಬಗ್ಗೆ ತೀವ್ರ ನಿಗಾ ವಹಿಸಬೇಕು. ಈ ಬಗ್ಗೆ ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ತಿಳಿಸಿದರು.ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪೋಲೀಸ್ ಇಲಾಖೆಗೆ ಕಂದಾಯ ಮತ್ತು ಪಂಚಾಯಿತಿ ಇಲಾಖೆಯ ನಾಲ್ಕು ಜನರನ್ನು ಹೆಚ್ಚುವರಿಯಾಗಿ ಜೋಡಿಸಲು ಸಿದ್ದವಿದ್ದು, ರಾತ್ರಿಯ ಗಸ್ತಿಗಾಗಿ ಇಲಾಖೆಯ ಈ ನೌಕರರನ್ನು ಬಳಸಿಕೊಳ್ಳಲು ಸೂಚಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ವರಧರಾಜು, ತಾಲ್ಲೂಕು ವೈಧ್ಯಾಧಿಕಾರಿ ತಿರುಪತಯ್ಯ, ಪಿಡಿಓ ತಿಪ್ಪಣ್ಣ, ಆರಕ್ಷಕ ಉಪನಿರೀಕ್ಷಕ ಬಿ.ರಾಮಯ್ಯ ಮತ್ತು ಗ್ರಾಮಪಂಚಾಯಿತಿ ಹಲವು ಸದಸ್ಯರು ಇದ್ದರು.

ಪ್ಲೇಗ್ ತಡೆದ ದೇವಿ ಕೊರೊನಾ ನಿಯಂತ್ರಿಸುವರೇ?

0

ರಾಘವೇಂದ್ರ, ಪಾವಗಡ

1600 ರಿಂದ ಈ ಪ್ರದೇಶದ ಜನತೆಯನ್ನು ಕಾಪಾಡಿಕೊಂಡು ಬಂದಿರುವ ಮಾತೆ ಇದೀಗ ಕೊರೊನಾ ಬಾರದಂತೆ ತಡೆಯುವಳೆ?

ಅದು 1920 ನೇ ಇಸವಿ ಗ್ರಾಮಗಳನ್ನು ತೊರೆದು ಜನತೆ ತೋಟ, ಹೊಲ, ಗದ್ದೆ ಸೇರಿದ್ದರು. ಇಡೀ ಗ್ರಾಮಗಳು, ಪಟ್ಟಣ ಅಕ್ಷರಷಃ ನಿರ್ಜನ ಪ್ರದೇಶಗಳಾಗಿದ್ದವು. ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಪಂಡಿತರೋರ್ವರು ಶೀತಲಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸುವಂತೆ ಸೂಚಿಸಿದ್ದರು. ಅವರು ಹೇಳಿದ ವಿಧಿ ವಿಧಾನಗಳನ್ನು ಅನುಸರಿಸಿ ಮಾತೆಗೆ ನಿಷ್ಠೆಯಿಂದ ಪೂಜೆ ಸಲ್ಲಿಸಲಾಗಿತ್ತು. ಪಂಡಿತರು ಹೇಳಿದಂತೆ ಫ್ಲೇಗ್ ಸಹ ನಿಯಂತ್ರಣಕ್ಕೆ ಬಂದು ಜನತೆ ಮತ್ತೆ ಮನೆ ಸೇರಿದ್ದರು.

ಇದ್ಯಾವುದೊ ಕಟ್ಟು ಕಥೆಯಲ್ಲಿ ತುಮಕೂರು ಜಿಲ್ಲೆ ಪಾವಗಡದ ಶನೈಶ್ಚರ ದೇಗುಲಕ್ಕೆ ಕಾಲಿಟ್ಟ ಕೂಡಲೆ ಶೀತಲಾಂಭಾ ದೇವಿ ವಿಗ್ರಹ ಕಾಣುತ್ತದೆ. ವಿಗ್ರಹದ ಒಂದು ಬದಿಯಲ್ಲಿ ಗಣಪತಿ, ಮತ್ತೊಂದು ಬದಿಯಲ್ಲಿ ಸತ್ಯನಾರಾಯಣ ಸ್ವಾಮಿ ವಿಗ್ರಹವಿದೆ. ಮಧ್ಯದಲ್ಲಿ ಬೀಜಾಕ್ಷರಗಳ ಕೆತ್ತನೆಯುಳ್ಳ ಶೀತಲ ಯಂತ್ರವಿದೆ. ಈ ಶೀತಲ ಯಂತ್ರಕ್ಕೆ ಪೂಜೆ ಸಲ್ಲಿಸಿದರೆ ವಿವಾಹ, ಸಂತಾನ, ಉದ್ಯೋಗ, ಮನೆ, ಜಮೀನು, ನಿವೇಶನ ಸೇರಿದಂತೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ.

1600 ರಲ್ಲಿ ವ್ಯಾಸ ಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶೀತಲಾಂಭ ಫ್ಲೇಗ್ ನಿಯಂತ್ರಿಸುವುದರ ಜೊತೆಗೆ ಬರಗಾಲದಲ್ಲಿ ಈ ಪ್ರದೇಶವನ್ನು ಕಾಪಾಡಿದ್ದಾರೆ. ಆರಂಭದಲ್ಲಿ ಪಾವಗಡ ಗ್ರಾಮ ಕೋಟೆ ಒಳಭಾಗದಲ್ಲಿತ್ತು, ಈಗಿನ ದೇಗುಲ ಇರುವ ಪ್ರದೇಶ ಪಾವಗಡದ ಹೊರ ಪ್ರದೇಶವಾಗಿತ್ತು. 1950 ರ ಸುಮಾರಿಗೆ ಶೀತಲಾಂಭ ಪಕ್ಕದಲ್ಲಿ ನವಗ್ರಹಗಳನ್ನು ಪ್ರತಿಷ್ಠಾಪಿಸಿ ಶೀತಲಾಂಭ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಲಾಯಿತು.

ಕೊರೊನಾ ಮಹಾಮಾರಿಯಿಂದ ಈ ಪ್ರದೇಶವನ್ನು ಕಾಪಾಡಲು 1920 ರಲ್ಲಿ ಪ್ಲೇಗ್ ನಿಯಂತ್ರಿಸಲು ಪಂಡಿತರು ಸೂಚಿಸಿದ ವಿಧಿವಿಧಾನವನ್ನು ಅನುಸರಿಸಿ, ಆ ಪೂಜಾ ಪದ್ದತಿಯನ್ನು ದಾಖಲಿಸಲಾಗಿತ್ತು.

ಅದೇ ಪದ್ದತಿಯ ಪ್ರಕಾರ  ಕಳೆದ 7 ದಿನಗಳಿಂದ ಶೀತಲಾ ಮೂಲ ಯಂತ್ರಕ್ಕೆ ವೀಳ್ಯದೆಲೆ, ನಿಂಬೆಹಣ್ಣು, ಎಳನೀರಿನಿಂದ ಅಭಿಷೇಕ ಮಾಡಲಾಗಿದೆ. ದುರ್ಗಾಶಾಂತಿ ಹೋಮ, ಮೃತ್ಯುಂಜಯ ಹೋಮ, ಗಣಹೋಮ, ಲಲಿತಾ ಸಹಸ್ರನಾಮ ಹೋಮ ಮಾಡಿ ಶುಕ್ರವಾರ ಪೂರ್ಣಾಹುತಿ ಸಲ್ಲಿಸಲಾಯಿತು.

 

ಪಡಿತರ ವಿತರಣೆಯಲ್ಲಿ ಅಕ್ರಮ, ಜನರಿಗೆ ಹಿಂಸೆ: ಬೆಳಗುಂಬ ವೆಂಕಟೇಶ್ ಆರೋಪ

Public story.in


ತುಮಕೂರು: ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ಅನ್ಯಾಯ, ಅಕ್ರಮ ನಡೆಯುತ್ತಿದೆ. ಜಿಲ್ಲಾಧಿಕಾರಿ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಆರೋಪಿಸಿದ್ದಾರೆ.

ಕರೊನಾ ಕಾರಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳ ಪಡಿತರವನ್ನು ವಿತರಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿದೆ. ಇದನ್ನೇ ನ್ಯಾಯಬೆಲೆ ಅಂಗಡಿಗಳು ದುರುಪಯೋಗಪಡಿಸಿಕೊಂಡು ಜನರಿಗೆ ಹಿಂಸೆ ನೀಡುತ್ತಿವೆ ಎಂದು ಹೇಳಿದ್ದಾರೆ.

ಒಟಿಪಿ, ಹೆಬ್ಬೆಟ್ಟಿನ ಗುರುತು ಏನನ್ನು ಕೇಳುತ್ತಿಲ್ಲ. ಆದರೆ ಹತ್ತು ರೂಪಾಯಿ ನೀಡಿ ಟೋಕ‌ನ್ ಪಡೆದುಕೊಳ್ಳುವಂತೆ ಹೇಳಲಾಗುತ್ತಿದೆ ಎಂದು ಹೇಳಿದ್ದಾರೆ.

ಒಂದೊಂದು ಕಡೆ ಒಂದೊಂದು ದರವನ್ನು ಪಡೆಯಲಾಗುತ್ತಿದೆ. ಕೆಲವು ಅಂಗಡಿಗಳಲ್ಲಿ 150 ರೂಪಾಯಿ ವರೆಗೂ ಪಡೆಯಲಾಗುತ್ತಿದೆ. ಈ ಬಗ್ಗೆ ಕರೆ ಮಾಡಿ‌ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿರುವುದಾಗಿಯೂ ತಿಳಿಸಿದ್ದಾರೆ.

ಎರಡು ತಿಂಗಳ ಪಡಿತರನ್ನು ಪುಕ್ಕಟೆಯಾಗಿ ವಿತರಿಸುವಂತೆ ಸರ್ಕಾರ ಆದೇಶಿಸಿದೆ. ಆದರೆ ಡಿಪೊ ಮಾಲೀಕರು, ಕೆಲವು ಕಡೆಗಳಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ( ಸೊಸೈಟಿ) 75-150 ರೂಪಾಯಿ ವರೆಗೂ ವಸೂಲಿ ಮಾಡುತ್ತಿದ್ದಾರೆ. ಆಹಾರ ಇಲಾಖೆ ಇದನ್ನು ನೋಡಿಯೂ ಮೌನವಹಿಸಿದೆ ಎಂದು ಕಿಡಿ ಕಾರಿದ್ದಾರೆ.

ಸಹಾಯವಾಣಿ ಆರಂಭಿಸಿ


ಪಡಿತರ ಸಮಸ್ಯೆ, ಹಣ ವಸೂಲಿ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನರಿಂದ‌ ದೂರು ಸ್ವೀಕರಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಧೀನದಲ್ಲೇ ಕೂಡಲೇ ಸಹಾಯ ವಾಣಿ ಆರಂಭಿಸಬೇಕು ಎಂದು ಬೆಳಗುಂಬ ವೆಂಕಟೇಶ್ ಒತ್ತಾಯಿಸಿದ್ದಾರೆ.

ಹಣ ಮತ್ತಿತರ ಆರೋಪ ಕೇಳಿಬಂದರೆ, ಸಹಾಯವಾಣಿಗೆ ದೂರುಗಳು ಬಂದರೆ ದೂರುಗಳ ಆಧಾರಸಲ್ಲಿ ತನಿಖೆ ನಡೆಸಿ ಅಂತಹ ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸಬೇಕು. ಪ್ರಾಥಮಿಕ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಯಾರಿಗಾದರೂ ಪಡಿತರ ಸಿಗದಿದ್ದರೆ ಅಂತವರು ಈ ಸಹಾಯವಾಣಿಗೆ ಕರೆ ಮಾಡಬೇಕು. ಕರೆ ಮಾಡಿದವರಿಗೆ ಪಡಿತರ ತಲುಪಿಸುವ ಕೆಲಸ ಮಾಡಲು ಈ ಸಹಾಯವಾಣಿಯನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.

ದಣಿದಿರುವೆ ಗಂಗೆ…

ರಘು ಶ್ರವಣಗೆರೆ


ಸೂರ್ಯನೆದುರು ನಿಂತು
ಭಾರಿ ದಣಿದಿರುವೆ
ಎನ್ನ ಬಾಯಿಗೆ ನೀರ ಚೆಲ್ಲುವೆಯಾ…

ಎಷ್ಟೋ ಜನರ ಪಾಪ ತೊಳೆದಿರುವೆ,
ಎಷ್ಟೋ ಜನರ ಬಾಯರಿಕೆ ತೀರಿಸಿರುವೆ,
ಎಷ್ಟೋ ಜನ, ಪ್ರಾಣಿಯ ಕಲ್ಮಶವ ಲೆಕ್ಕಿಸದೆ ಹರಿದಿರುವೆ, ಓ‌ ಗಂಗೆ ಬಾಯಾರಿರುವೆ ದಣಿವು ತೀರಿಸುವೆಯಾ


ಕಾರ್ಟೂನ್ ಕಾರ್ನರ್; ಕೆ.ಎಂ.ಮುಸ್ತಾಫ, ರಿಪ್ಪನ್ ಪೇಟೆ


ಮುಂಜಾನೆಯ ಸಮಯದಲ್ಲಿ ನಿನ್ನ ನಮಸ್ಕರಿಸಲು ಬರುವವರನ್ನು ನನ್ನ ಹೆಗಲ ಮೇಲೆತ್ತಿ ಮೆರವೆ..
ಬಾರಿ ದಣಿದಿರುವೆ
ಎನ್ನ ಬಾಯಿಗೆ ನೀರ ಚಲ್ಲುವೆಯಾ

ಸೂರ್ಯದೇವ‌, ಮೋಡಗಳ ಜೊತೆ ಮಾತುಕತೆ ಮುಗಿಸು ಬೇಗ, ಬೇಗ… ಮಳೆಯ ಮಖಾಂತರ ಬಾಯಾರಿಕೆ ತೀರಿಸಲಿ ಗಂಗೆ,

ಕಾದಿರುವೆ, ಬಾಯಾರಿರುವೇ, ದಣಿದ ಮನ…ನನ್ನ ಕಡೆಗೊಮ್ಮೆ ನೋಡಿ‌ ಬಿಡು, ಕ್ಷಮೆ ಎನ್ನುವುದು ನಿನ್ನ ಮೂಲ ಗುಣದಲ್ಲೇ ಇದೆಯಲ್ಲವೇ…ಗಂಗೆ…


ರಘು ಶ್ರವಣಗೆರೆ ಅವರದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಶ್ರವಣಗೆರೆ. ಗುಬ್ಬಿ ಸಿಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಅವರು ಸಾಹಿತ್ಯದ ಕಡೆಯೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಪ್ರಕೃತಿಯನ್ನು ನೋಡುವ ಅವರ ಬಗೆ ಕುತೂಹಲ ಮೂಡಿಸುತ್ತದೆ.

ಕೊರೊನಾ: ಪತ್ರಕರ್ತರ ಕಡೆಗಣನೆ ಎಷ್ಟು ಸರಿ?

0

ರಾಘವೇಂದ್ರ, ಪಾವಗಡ


ಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳ ಜನತೆಯನ್ನು ತಲ್ಲಣಗೊಳಿಸಿದೆ. ಕೋವಿಡ್ 19 ಎಂಬ ಹೆಸರಿನ ವಿಧ್ವಂಸಕ ಸೋಂಕು ಮಾಧ್ಯಮ ಕ್ಷೇತ್ರಕ್ಕೂ ಮುಳುವಾಗಿ ಪರಿಣಮಿಸಿದೆ.

ಲಾಕ್ ಡೌನ್ ನಿಂದಾಗಿ ಪತ್ರಕರ್ತರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ನಗರ, ಗ್ರಾಮೀಣ ಸೇರಿದಂತೆ ಎಲ್ಲ ಪ್ರದೇಶದ ಮಾಧ್ಯಮ ಸಿಬ್ಬಂದಿ ಆರ್ಥಿಕ ಸಂಕಷ್ಠಕ್ಕೊಳಗಾಗಿದ್ದಾರೆ.

ಜಾಹಿರಾತುಗಳಿಲ್ಲದೆ ಕಂಪನಿಗಳು ಅಧೋಗತಿಯತ್ತ ಸಾಗುತ್ತಿವೆ. ವೇತನ ಕೊಡಲೂ ಶಕ್ತಿಯಿಲ್ಲದೆ ಏನು ಮಾಡಬೇಕು ಎಂದು ದಿಕ್ಕು ತೋಚದೆ ಕೆಲವು ಸಣ್ಣಪುಟ್ಟ ಕಂಪನಿಗಳ ಮಾಲೀಕರು ಕಂಪನಿ ಉಳಿಸಿಕೊಳ್ಳಲು ಹೊಸ ಹಾದಿಗಳನ್ನು ಹುಡುಕುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಹಸಿದ ಪತ್ರಕರ್ತರ ನೋವು ಮಾಲೀಕರಿಗೆ ಕಾಣುವುದಾದರೂ ಹೇಗೆ?

ಇಂತಹ ಕ್ಲಿಷ್ಠ, ಕಷ್ಟದ ಪರಿಸ್ಥಿತಿಯಲ್ಲಿ ಗ್ರಾಮೀಣ ಪತ್ರಕರ್ತರ ಕಷ್ಟ ಕೇಳುವವರಿಲ್ಲದಂತಾಗಿದೆ. ಕೊರೊನಾ ಅಟ್ಟಹಾಸದ ನಡುವೆಯೂ ಜೀವವನ್ನೂ ಲೆಕ್ಕಿಸದೆ ಸುದ್ಧಿ ಸಂಗ್ರಹಿಸಿ ಹಸಿವೆಯಿಂದಲೇ ಹಲವು ಮಂದಿ ಕೆಲಸ ಮಾಡುತ್ತಿದ್ದಾರೆ.

ಪಕ್ಷಗಳ ಪ್ರಚಾರ, ಕಾರ್ಯಕ್ರಮಗಳು, ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳು, ಸೂಚನೆಗಳು, ಸಾಧನೆ, ಇತ್ಯಾದಿ ಗಳ ಪ್ರಚಾರಕ್ಕೆ ಮಾದ್ಯಮಗಳೇ ಬೇಕು. ಮಾಧ್ಯಮಗಳು, ಪತ್ರಕರ್ತರ ಕಷ್ಟಗಳ ಬಗ್ಗೆ ಮಾತ್ರ ಇವರುಗಳು ಚಕಾರ ಎತ್ತುತ್ತಿಲ್ಲ.

ಗ್ರಾಮ ಪಂಚಾಯಿತಿ ಸದಸ್ಯರಿಂದ ಪ್ರಧಾನಮಂತ್ರಿ, ರಾಷ್ಟ್ರಪತಿಗಳು ಸಮಾಜಕ್ಕೆ ತಮ್ಮ ಸಂದೇಶ, ಕಾರ್ಯ ವೈಖರಿ, ಸಾಧನೆ ತಿಳಿಸಲು ಮಾದ್ಯಮವನ್ನು ಅವಲಂಬಿಸಿದ್ದಾರೆ. ಆದರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಪತ್ರಿಕೋದ್ಯಮ, ವರದಿಗಾರರ ಭದ್ರತೆಯ ಪ್ರಶ್ನೆಗಳನ್ನು ಇಟ್ಟುಕೊಂಡು ಹೊಸ ನೀತಿಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸುವಂತೆ ಇವರುಗಳು ದನಿ ಎತ್ತಬೇಕಾಗಿದೆ.

ಯಾಕ್ರಿ ನನ್ನ ಹೆಸರು ಬಿಟ್ಟಿದ್ದೀರಿ? ನಾನಿರುವ ಫೋಟೋ ಏಕೆ ಹಾಕಿಲ್ಲ? ಸುದ್ದಿ ತುಂಬಾ ಚಿಕ್ಕದಾಗಿ ಪ್ರಕಟವಾಗಿದೆ. ಕಾರ್ಯಕ್ರಮಕ್ಕೆ ತಡವಾಗಿ ಬಂದಿರೀ. ಸುದ್ದಿ ಮುಖ ಪುಟದಲ್ಲಿ ಪ್ರಕಟವಾಗಿಲ್ಲ. ನಿಮಗೆ ಸುದ್ದಿ ಮಾಡೋಕೆ ಬರುತ್ತಾ? ನೀವು ತಾರತಮ್ಯ ಮಾಡುತ್ತೀರಿ? ಆ ಜನಾಂಗದ, ಈ ಪಕ್ಷದ ಸುದ್ದಿ ಹೆಚ್ಚು ಹಾಕುತ್ತೀರಿ…… ಇತ್ಯಾದಿಯಾಗಿ ಪ್ರಶ್ನಿಸುತ್ತಿದ್ದವರು ಎಲ್ಲರೂ ಇಂದು ಕೊರೊನಾ ಭಯದಿಂದ ಮನೆ ಸೇರಿದ್ದಾರೆ. ಆದರೆ ಪತ್ರರ್ತರು ಸುದ್ದಿಯೆಂಬ ಬೇಟೆ ಹರಸಿ ಓಡಾಡುತ್ತಿದ್ದಾರೆ.

ವ್ಯಕ್ತಿಯ ಸಾಧನೆ, ಸಕಾರಾತ್ಮಕ ಸುದ್ದಿ ಪ್ರಕಟಿಸಿದಾಗ ಹೊಗಳಿ ಅಟ್ಟಕ್ಕೇರಿಸುವವರು, ನಕಾರಾತ್ಮಕ ಅಥವಾ ಅವರ ತಪ್ಪುಗಳನ್ನು ಸಮಾಜದ ಮುಂದೆ ಬೆತ್ತಲಾಗಿಸಿದಾಗ ನಿನ್ನ ನೋಡಿಕೊಳ್ಳುತ್ತೇನೆ! ನನ್ನ ಬಗ್ಗೆಯೇ ಬರೆದಿದ್ದೀಯಾ ಇರಲಿ ನೋಡಿಕೊಳ್ತೀನಿ ಎಂಬಿತ್ಯಾದಿಯಾಗಿ ಸೇರಿಸಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ.

ವ್ಯಕ್ತಿಯ ಸಾಧನೆ, ಉತ್ತಮ ಕೆಲಸವನ್ನು ಹೊಗಳುವುದರಿಂದಾಗಲಿ, ಅಧಿಕಾರಿಗಳ ಭ್ರಷ್ಟಾಚಾರ, ರಾಜಕಾರಣಿಗಳ ದೌರ್ಜನ್ಯ, ಬೇಜವಾಬ್ಧಾರಿ, ಅವ್ಯವಹಾರ ಇತ್ಯಾದಿ ತಪ್ಪುಗಳ ಬಗ್ಗೆ ಸುದ್ದಿ ಪ್ರಕಟಿಸಿದಾಗ ಪತ್ರಕರ್ತರಿಗೆ ಅವರ ಕುಟುಂಬಕ್ಕೆ ಯಾವುದೇ ಲಾಭವಿಲ್ಲ.

ಉತ್ತಮ ಕೆಲಸದ ಬಗ್ಗೆ ಸಮಾಜಕ್ಕೆ ಮಾದ್ಯಮದ ತಿಳಿಸಿದಾಗ ಇತರರು ಪ್ರೇರೇಪಣೆಗೊಂಡು ಸಮಾಜಮುಖಿ ಕೆಲಸಗಳತ್ತ ತೊಡಗಿಕೊಳ್ಳುತ್ತಾರೆ. ಒಂದು ವರದಿ ಲಕ್ಷಾಂತರ ಮಂದಿಗೆ ಪ್ರೇರಣೆಯಾಗುತ್ತದೆ. ಅವ್ಯವಹಾರ, ಭ್ರಷ್ಟಾಚಾರ, ಸುಲಿಗೆ, ದೌರ್ಜನ್ಯಗಳ ಬಗೆಗಿನ ವರದಿ ತಪ್ಪು ಮಾಡುವವರಿಗೆ ಎಚ್ಚರಿಕೆ ಸಂದೇಶವಾಗಿ ಪರಿಣಮಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಾಯವಾಗುತ್ತದೆ.

ತನಿಖಾ ವರದಿಗಳ ಹಿಂದೆ ಬಿದ್ದು ಅದೆಷ್ಟೊ ವರದಿಗಾರರು ತಮ್ಮ ಕುಟುಂಬಗಳನ್ನು ತಬ್ಬಲಿಯಾಗಿಸಿದ್ದಾರೆ. ವರದಿಗಳಿಗಾಗಿ ಪ್ರಾಣವನ್ನೇ ಬಲಿಕೊಟ್ಟ ವರದಿಗಾರರ ಕುಟುಂಬಗಳಿಗೆ ಸಿಕ್ಕಿರುವುದಾದರೂ ಏನು?

ಕೊರೊನಾ 19 ತುರ್ತು ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರಿಗೆ, ಆರೋಗ್ಯ ಇಲಾಖೆ ಸಿಬ್ಬಂದಿಗೆ ವಿಮೆ ಘೋಷಿಸಲಾಗಿದೆ. ಪೊಲೀಸರಿಗೆ, ಇತರೆ ಇಲಾಖೆ ಅಧಿಕಾರಿಗಳಿಗೆ ವೇತನ ಬರುತ್ತದೆ. ವರದಿಗಾರರಿಗೆ ಯಾವ ಸವಲತ್ತು ಕೊಡಲಾಗಿದೆ?

ಸ್ವತಃ ಪ್ರಧಾನ ಮಂತ್ರಿಗಳು ಮಾದ್ಯಮದ ಕಾರ್ಯ ವೈಖರಿಯನ್ನು, ಕೊರೊನಾ ತಡೆಗಟ್ಟಲು ಅಗತ್ಯವಿರುವ ಮಾರ್ಗಸೂಚಿಯನ್ನು, ವಿಶ್ವದಲ್ಲಿ ನಡೆಯುತ್ತಿರುವ ಆಗು ಹೋಗುಗಳನ್ನು, ಸರ್ಕಾರದ ನಿರ್ಧಾರಗಳನ್ನು ಪ್ರಕಟಿಸುತ್ತಿರುವ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಮಾದ್ಯಮಗಳ ಕಾರ್ಯ ವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಕೆಲ ಸಚಿವರು, ಮುಖ್ಯಮಂತ್ರಿಗಳು ಮಾದ್ಯಮಗಳ ಕೆಲಸಕ್ಕೆ ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಬೇಡಿ ಎಂದು ಸೂಚನೆ ನೀಡಿದರು. ಅಂದರೆ ಎಲ್ಲರಿಗೂ ಮಾದ್ಯಮಗಳು ಬೇಕು. ವರದಿಗಾರರು ಕೆಲಸ ಮಾಡಬೇಕಷ್ಟೆ.

ವರದಿಗಾರರನ್ನು ನೆಚ್ಚಿಕೊಂಡಿರುವ ಕುಟುಂಬ ಏನಾದರೇನು? ಕೊರೊನಾ ಕಾರ್ಯಚರಣೆಯಲ್ಲಿ ಸೋಂಕು ತಗುಲಿದರೂ ಚಿಕಿತ್ಸೆ ಹೊರತುಪಡಿಸಿ ಯಾವುದೇ ಸೌಲಭ್ಯ ಕೊಡುವುದಾಗಿ ಸರ್ಕಾರ ಘೋಷಿಸಿಲ್ಲ. ಪೌರ ಕಾರ್ಮಿಕರಿಂದ ಅಧಿಕಾರಿಗಳವರೆಗೆ ಮಾಸ್ಕ್, ಸ್ಯಾನಿಟೈಸರ್ ಕೊಡಲಾಗಿದೆ. ಆದರೆ ಸರ್ಕಾರ ಕನಿಷ್ಠ ಸೌಕರ್ಯ ಕೊಡುವ ಭರವಸೆಯನ್ನೂ ಕೊಟ್ಟಿಲ್ಲ.

ಬೇರೆ ಬೇರೆ ಕಾರಣಗಳಿಂದ ಪತ್ರಿಕಾ ಕಂಪನಿಗಳು ನಷ್ಟದಲ್ಲಿವೆ. ಪತ್ರಕರ್ತರನ್ನು ಕೆಲಸದಿಂದ ತೆಗೆಯುತ್ತಿವೆ. ತಾಲ್ಲೂಕು ಮಟ್ಟದ ಅರೆಕಾಲಿಕ ವರದಿಗಾರರ ಸ್ಥಿತಿಯೂ ಕಷ್ಟದಲ್ಲೇ ಇದೆ. ಹೀಗಾಗಿ ಸರ್ಕಾರ ಪತ್ರಕರ್ತರ ಕಲ್ಯಾಣ. ನಿಧಿ ಸ್ಥಾಪನೆ ಮೂಲಕ ಜನಪರ, ವೃತ್ತಿ ಬದ್ಧತೆಯ ಪತ್ರಿಕೋದ್ಯಮ ಬೆಂಬಲಿಸುವ ಅಗತ್ಯವಿದೆ. ಯಂಗ್ ಟ್ಯಾಲೆಂಟ್‌ ಸೆಳೆಯಲು ಇದು ಅಗತ್ಯವೂ ಆಗಿದೆ. ಇಲ್ಲದಿದ್ದರೆ ಪತ್ರಿಕೋದ್ಯಮ ಸೊರಗಿ ಹೋಗುವುದರಲ್ಲಿ ಅನುಮಾನವಿಲ್ಲ.

ದಾವಣಗೆರೆ ಸಂಸದರ ಪುತ್ರಿ ಕರೊನಾ ಗುಣಮುಖರಾದ ಬಳಿಕ ಹೇಳಿದ್ದೇನು?

ತುಮಕೂರು: ದಾವಣಗೆರೆ ಸಂಸದರಾದ ಸಿದ್ದೇಶ್ ಅವರ ಪುತ್ರಿ ಅಶ್ವಿನಿ ಅವರು ಗಯಾ‌‌ನ ದೇಶದಿಂದ ಬಂದ ಬಳಿಕ ಕರೊನಾ ದೃಢಪಟ್ಟಿತ್ತು. ಅವರೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಂದಿದ್ದು ಕರೊನಾ ಚಿಕಿತ್ಸೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

https://youtu.be/OTRo9ENOlmw

https://youtu.be/OTRo9ENOlmw

ಕರೊನಾ: ತುಮಕೂರು ದೇಶಕ್ಕೆ ಮಾದರಿ ಎಂದ ಕೇಂದ್ರ ಸರ್ಕಾರ

ತುಮಕೂರು: ಕೋವಿಡ್-19 ಸೋಂಕು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಲ್ಲಿ ತುಮಕೂರು ನಗರ ದೇಶಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಸ್ಮಾರ್ಟ್ ಸಿಟಿ ಅಭಿಯಾನದಡಿ ಕ್ವಾರೆಂಟೈನ್ ಮೇಲೆ ಕಣ್ಗಾವಲು ಹಾಕುವ, ಅವರ ಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸುವ ಸ್ಮಾರ್ಟ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೇಶಕ್ಕೇ ಮಾದರಿಯಾಗಿದೆ ಎಂದು ಹೇಳಿದೆ ಎಂದು ಭೂಬಾಲನ್ ತಿಳಿಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಡುವ ಸೂರತ್ ಮತ್ತು ಪುಣೆ ನಗರಗಳು ಸಹ ಇದೇ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಹೋಂ ಕ್ವಾರೆಂಟೈನ್‍ನಲ್ಲಿರುವವರ ನಿರ್ವಹಣೆ, ನಿಗಾ, ಪತ್ತೆ ಹಚ್ಚುವ, ಮಾಹಿತಿ ಪ್ರಸರಣ, ತರಬೇತಿ ನೀಡುವ, ವಿಶ್ಲೇಷಣೆ ಮಾಡುವ, ಕೌನ್ಸಿಲಿಂಗ್ ಸೌಲಭ್ಯ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದಿಗ್ಬಂಧನದಲ್ಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಲಾಖೆಯ ಜಂಟಿ ಕಾರ್ಯದರ್ಶಿ ಲಾವ ಅಗರ್ ವಾಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್ ತಿಳಿಸಿದ್ದಾರೆ.

ಮಾಜಿ ಶಾಸಕ ರಫೀಕ್ ಕೆಲಸಕ್ಕೆ ಫಿದಾ ಆದ ತುಮಕೂರು ನಗರದ ಜನರು…

Publicstory. in


ತುಮಕೂರು: ತುಮಕೂರು‌‌ ನಗರದ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಕೆಲಸಕ್ಕೆ ತುಮಕೂರು ನಗರ ಜನರು ಫಿದಾ ಆಗ ತೊಡಗಿದ್ದಾರೆ.

ಜಿಲ್ಲೆಯಲ್ಲಿ ಮಾಜಿ ಶಾಸಕರೊಬ್ಬರು ಈ ರೀತಿ ಕೆಲಸ ಮಾಡುತ್ತಿರುವುದು ಕಂಡು ಮೂಕ ವಿಸ್ಮಿತಗೊಂಡಿದ್ದಾರೆ.

ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಈ ರೀತಿಯ ಕೆಲಸ ಮಾಜಿ ಶಾಸಕರುಗಳಿಂದ ಈವರೆಗೂ ವರದಿಯಾಗಿಲ್ಲ.

ಅಷ್ಟಕ್ಕೂ ಡಾ.ರಫೀಕ್ ಅಹಮದ್ ಮಾಡುತ್ತಿರುವ ಕೆಲಸವಾದರೂ ಏನು?

ಕೊರೊನಾ ಕಾರಣ ಲಾಕ್ ಡೌನ್ ಕಾರಣ‌ ನಗರದ ಬಡಜನರು, ಗುತ್ತಿಗೆ ಕಾರ್ಮಿಕರು, ಪರವೂರಿನಿಂದ ಬಂದಿರುವ ವಿದ್ಯಾರ್ಥಿಗಳು, ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.‌ಇವರ ಕೈ ಹಿಡಿಯುವ ಕೆಲಸವನ್ನು ರಫೀಕ್ ಮಾಡುತ್ತಿರುವುದು ಎಲ್ಲರಿಗೂ ಮೆಚ್ಚುಗೆಗೆ ಕಾರಣವಾಗುತ್ತಿದೆ.

ರಫೀಕ್ ಅಹಮದ್ ದೊಡ್ಡಮಟ್ಟದಲ್ಲಿ ಆಹಾರ ನೀಡುವ ಕೆಲಸ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಪೌರ ಕಾರ್ಮಿಕರು, ಭಿಕ್ಷುಕರು, ಅನಾಥರಿಗಷ್ಟೇ ಅಲ್ಲದೇ ನಗರದ 35 ವಾರ್ಡ್ ಗಳಲ್ಲಿ ತೀರಾ ಕಡುಕಷ್ಟದ ಜನರಿಗೆ, ವೃದ್ಧರಿಗೆ ಮನೆ‌ಮನೆಗೆ ಆಹಾರ ತಲುಪಿಸುವ ಕೆಲಸವನ್ನು ಸದ್ದಿಲ್ಲದೇ ಮಾಡತೊಡಗಿದ್ದಾರೆ.‌ಮಾಜಿ ಶಾಸಕರೊಬ್ಬರ ಜನರ ಕೈ ಹಿಡಿದಿರುವ ಕೆಲಸಕ್ಕೆ ಜಿಲ್ಲೆಯ ಬೇರೆ ಬೇರೆ ಭಾಗದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಮಯದಲ್ಲಿ ಮಾತ್ರ ಜನರ ಬಾಗಿಲಿಗೆ‌ ಬರುವುದಲ್ಲ.‌‌ ಸೋತರು ಸಹ ಜನಪರ ಕಾಳಜಿ ತೋರುತ್ತಿರುವ ಮಾಜಿ ಶಾಸಕರ ನಡೆ ಪ್ರಶಂಸನೀಯ. ಊಟದ ಜತೆಗೆ ಸಾಕಷ್ಟು ಬಡ ಜನರಿಗೆ ಔಷಧಿಯ ಕೊರತೆ ಎದುರಾಗಿದೆ. ಜಿಲ್ಲಾಸ್ಪತ್ರೆಯಿಂದ ಉಚಿತ ಔಷಧಿ ವಿತರಿಸುವ ಕಡೆಯೂ ಮಾಜಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು ಎನ್ನುತ್ತಾರೆ ವಕೀಲರಾದ ನಿರಂಜನ್.

ಕಡೆ ಯಾರೂ ನೋಡಿರಲಿಲ್ಲ. ಮನೆ ಬಾಗಿಲಿಗೆ ಬಂದು ಆಹಾರ ವಿತರಿಸಿದರು. ದೇವರೆ ನಮ್ಮ‌ ನೆರವಿಗೆ ಬಂದಂತೆ ಆಯಿತು ಎಂದು ಬನಶಂಕರಿಯಲ್ಲಿ ಆಹಾರ ಸ್ವೀಕರಿಸಿದರೊಬ್ಬರು publicstory in ಗೆ ತಿಳಿಸಿದರು.

ನಗರದ ಉಪ್ಪಾರಹಳ್ಳಿ, ಕಾಳಿದಾಸ ವೃತ್ತ, ಶಿರಾಗೇಟ್, ಜಯನಗರ ಹೀಗೆ ಎಲ್ಲೆಲ್ಲಿ ಅಗತ್ಯ ಇದೆಯೂ ಅಂತಹ ಕಡೆಯಲೆಲ್ಲ ಆಹಾರ ಹೊತ್ತ ಮಾರುತಿ ವ್ಯಾನ್ ಹೋಗುತ್ತದೆ.

ತುಮಕೂರು ನಗರದ ಜನರಿಗಾಗಿ‌ ನನ್ನ ಹೃದಯ ಯಾವಾಗಲೂ ಮಿಡಿಯುತ್ತಿರುತ್ತದೆ. ಜನರ ಸಂಕಷ್ಟಕ್ಕೆ ನೆರವಾಗಲು ಅಧಿಕಾರ ಮುಖ್ಯವಾಗುವುದಿಲ್ಲ. ನಗರದಲ್ಲಿ ವಾಸ್ತವಕ್ಕಿಂತಲೂ ಹೆಚ್ಚು ಜನರು‌ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇನ್ನು ದೊಡ್ಡಮಟ್ಟದಲ್ಲಿ ಸಹಾಯ ಚಾಚುವ ಕೈಗಳು‌‌ ಬೇಕಾಗಿವೆ ಎನ್ನುತ್ತಾರೆ ರಫೀಕ್ ಅಹಮದ್.

ಆಟೊ‌‌‌ ಚಾಲಕರು, ಕೂಲಿ ಕಾರ್ಮಿಕರು, ಕೊಳೆಗೇರಿ ಜನರು, ಗುತ್ತಿಗೆ ಕೆಲಸಗಾರರು, ಸಣ್ಣ ಪುಟ್ಟ‌ ಕೃಷಿಕರು ಹೀಗೆ‌ ನಾನಾ ಬಗೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸಾಧ್ಯವಾದಷ್ಟು ಅವರ ಹಸಿವು ನೀಗಿಸಲು ಪ್ರಯತ್ನಿಸುವುದಾಗಿ ಹೇಳಿದರು.

12 ದಿನಗಳಿಂದಲೂ ಊಟ ನೀಡುತ್ತಿದ್ದೇನೆ. ಪ್ರತಿದಿನ. ಸಾವಿರಕ್ಕೂ ಜನರಿಗೂ ಅಧಿಕ ಮಂದಿ ಊಟ ಮಾಡುತ್ತಿದ್ದಾರೆ. ಬಡವರ ಜತೆಗೆ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೂ ಊಟ ನೀಡುವಂತೆ ಪಾಲಿಕೆ ಆಯುಕ್ತರು ಕೇಳಿದರು. ಅವರಿಗೂ ಬೆಳಿಗ್ಗೆ ವೇಳೆ ತಿಂಡಿ ನೀಡಲಾಗುತ್ತಿದೆ ಎಂದರು.

ಹಾಸ್ಟೆಲ್ ವೊಂದರಲ್ಲಿ 14 ವಿದ್ಯಾರ್ಥಿಗಳು ಬಂಧಿಯಾಗಿದ್ದಾರೆ. ಅವರಿಗೂ ಪ್ರತಿದಿನ ಊಟ ನೀಡಲಾಗುತ್ತಿದೆ ಎಂದು ಹೇಳಿದರು.

ಲಾಕ್ ಡೌನ್ ಮುಗಿಯುವವರೆಗೂ ಊಟದ ವ್ಯವಸ್ಥೆ ಮುಂದುವರೆಯಲಿದೆ. ಕರೊನಾ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಉತ್ತಮ ಹೆಜ್ಜೆ. ಜನರು ಸಾಮಾಜಿಕ ಅಂತರ ಕಾದುಕೊಳ್ಳಬೇಕು. ಹೊರಗೆ ಬರಬಾರದು. ಬಡವರಿಗೆ, ಅಸಹಾಯಕರಿಗೆ ಎಲ್ಲರೂ ನೆರವು ನೀಡಲು ಉದಾರ ಮನಸ್ಸು ಮಾಡಬೇಕು. ತುಮಕೂರು ನಗರ ಕ್ಷೇತ್ರದಲ್ಲಿ ಯಾರೊಬ್ಬರೂ ಹಸಿವಿನಿಂದ ನರಳಬಾರದು ಎಂದರು.

ಶಾಸಕರ‌ ನಡೆ ಬೇರೆಯವರಿಗೂ ಮಾದರಿಯಾಗಿದೆ. ಲಾಕ್ ಡೌನ್ ಆದ ಮರುದಿನವೇ ಅವರು ಊಟದ ವ್ಯವಸ್ಥೆಗೆ ಮುತುವರ್ಜಿ ವಹಿಸಿದರು. ಪ್ರಚಾರಕ್ಕೆ ಬಾರದಂತೆ ಅನೇಕ ಸಹಾಯಗಳನ್ನು ಮಾಡುತ್ತಿದ್ದಾರೆ. ಜನರ ಕಷ್ಟಕ್ಕೆ ಮಿಡಿಯುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಹಾವೀರ ಜೈನ್ ತಿಳಿಸಿದರು.

ನಾನು ಬಿದಿರು…

ಸೂರಿ ತೋವಿನಕೆರೆ


ನನ್ನ ಬಗ್ಗೆ ಅಂದರೆ ನನ್ನ ಹೆಸರಿನ ಬಗ್ಗೆ ಸ್ವತಹ ನನಗೆ ಹಲವು ಗೊಂದಲಗಳಿವೆ. ನಾನು ಹುಲ್ಲೆ, ಗಿಡವೆ ಅಥವ ಮರವೆ. ಏಕೆಂದರೆ ನನ್ನ ಬಾಲ್ಯದಿಂದ ಹಿಡಿದು ಇಂದಿನವರಿಗೂ ಈ ಜನರು ನನ್ನನ್ನು ಬಿದಿರು ಅಂತಲೇ ಸಂಭಾಳಿಸುತ್ತಾ ಬಂದಿದ್ದರೆ. ತೆಂಗು ಅಡಿಕೆ ಆಲ ಅರಳಿ ಗೋಣಿ ಹುಣಸೆ ಮತ್ತು ನುಗ್ಗೆ ಈ ಎಲ್ಲಕ್ಕೂ ಅವುಗಳ ವಯಸ್ಸಿನ ಅನುಗುಣವಾಗಿ ಗಿಡ ಮರ ಎಂದು ಕರೆಯುತ್ತಾರೆ ಆದರೆ ನಾನು ಮಾತ್ರ ವಿಚಿತ್ರವಾಗಿ ಮೆಳೆ ಅಥವ ಬಿದಿರು ಮೆಳೆಯಾಗಿದ್ದೇನೆ ಈ ಜನರಿಗೆ.

ಮನುಷ್ಯರು ನನ್ನನ್ನು ಒಂದಲ್ಲ ಎರಡಲ್ಲ ಹಲವು ರೀತಿಯಾಗಿ ನನ್ನ ದೇಹವನ್ನ ಕಡಿದು ಮುರಿದು ಚಚ್ಚಿ ಜಜ್ಜಿ ಸುಲಿದು ಒಂದು ನಿರ್ಜೀವ ವಸ್ತುವನ್ನಾಗಿ ಮಾಡಿಬಿಡುತ್ತಾನೆ ಆದರೂ ಕೊನೆಗೆ ಉಳಿಯುವುದು ಅದೆ ಹೆಸರು ಬಿದಿರುಮೆಳೆ.

ಅಂದು ಆ ಬಟ್ಟಜ್ಜನ ಮಗ ಮದ್ದಯ್ಯ ನನ್ನ ಕುತ್ತಿಗೆ ಮುರಿದು ನನ್ನ ಮೈನೆಲ್ಲಾ ಬೆಂಕಿಯಲ್ಲಿ ಹದವಾಗಿ ಸುಟ್ಟು ನನ್ನ ಎರಡು ಬದಿಯಲ್ಲಿ ನನ್ನಿಂದಲೆ ನನ್ನನ್ನ ಬಂಧಿಸಿ ಆ ಹೊಗೆಯಲ್ಲಿ ಉಸಿರುಗಟ್ಟಿಸಿ, ಕಾದ ಕಬ್ಬಿಣದ ಸಲಾಕೆಯಿಂದ ಒಂದರ ಪಕ್ಕಕ್ಕೆ ಒಂದರಂತೆ ರಂದ್ರಗಳನ್ನ ಕೊರೆದು ಕೊರೆದು ನನ್ನ ದೇಹವನ್ನೆಲ್ಲ ರಂದ್ರದ ಗೂಡು ಮಾಡಿಬಿಟ್ಟ.

ನನ್ನ ಮೈಕೊಡವಿ ಅವನ ಸೊಂಟಕ್ಕೆ ಸಿಕ್ಕಿಸಿ ಕಾಡಿನೊಳಗೆ ಹೊಕ್ಕಿ ಹೆಮ್ಮರದಡಿಯ ಕರಿಕಲ್ಲನೇರಿ ಕುಳಿತು. ಅವನ ಉಸಿರನ್ನೆಲ್ಲ ಒಂದೆಡೆಗೆ ಒಗ್ಗೂಡಿಸಿ ಬೆರಳುಗಳಿಂದ ನನ್ನ ಮೈಸವರುತ್ತಲೇ ಒಮ್ಮೆಯೇ ಒಂದು ಅಮೋಘವಾದ ನಾದವನ್ನೇ ಹೊರಸೂಸಿ ಕರೆದ ಅವನ ಗಂಗೆ ತುಂಗೆ ಕೃಷ್ಣೆಯರನ್ನ. ನಾನು ಅದ್ಭುತವಾದ ಕೊಳಲಾಗಿಬಿಟ್ಟೆ ಮದ್ದಯ್ಯನ ಕೈಯಲ್ಲಿ.

ಮತ್ತೊಂದುದಿನ ಪೂರ್ವದಲ್ಲಿ ಸೂರ್ಯ ಉದಯಿಸಿ ನನ್ನ ನೆತ್ತಿಯ ಸುಡುವ ಹೊತ್ತಿಗೆ ನನ್ನೆದುರು ಕೈಯಲ್ಲಿ ಮಚ್ಚನೀಡಿದು ಮಾರಜ್ಜ ಪ್ರತ್ಯಕ್ಷನಾಗಿಬಿಟ್ಟಿದ್ದ. ನೇರವಾಗಿ ಬಂದವನೆ ನೀಳವಾಗಿರುವ ಬಂಬುಗಳನ್ನ ಪರೀಕ್ಷಿಸಿ ಒಂದೊಂದನ್ನೆ ಒಂದೊಂದನ್ನೆ ಕಡಿದು ದರದರನೆ ಧರೆಗುರುಳಿಸಿದ್ದ.


ನೀವೂ ಬರೆಯಿರಿ: ವಾಟ್ಸಾಪ್ ನಂ. 9844817737


ಮಾರಜ್ಜ ನನ್ನನ್ನ ಮನೆಗೆ ಹೊತ್ತೊಯ್ದು ನನ್ನ ದೇಹವನ್ನ ಮಚ್ಚಿನಿಂದ ಸೀಳಿ ಸುಲಿದು ಒಂದರ ಪಕ್ಕಕ್ಕೆ ಒಂದರಂತೆ ನನ್ನೆಲ್ಲ ಎಲುಬುಗಳನ್ನ ಜೊಡಿಸಿ ಒಂದು ಹೊಸ ರೂಪವನ್ನ ಕೊಟ್ಟ. ಅದೆ ಸ್ವಾಮಿ ನಿಮ್ಮ ಮನೆಯಲ್ಲಿ ಅಕ್ಕಿ ರಾಗಿ ಮಾಡುತ್ತೀರಲ್ಲ ಮೊರ, ನಿಮಗೆ ಭಯಂಕರ ಸೆಕೆಯಾದಾಗ ಬೀಸಣಿಗೆ, ನಿಮ್ಮ ದನಕರುಗಳ ಸಗಣಿಯನ್ನ ಹೊರುವ ಮಂಕರಿಯಾದೆ ಕೊನೆಗೆ ತೋವಿನಕೆರೆಯ ಶುಕ್ರವಾರದ ಸಂತೆಯಲ್ಲಿ ಮೊರ ಬೀಸಣಿಗೆ ಮಂಕರಿ ಎಂದು ಕೂಗಿಕೂಗಿ ಮಾರಿಬಿಟ್ಟ ಮಾರಜ್ಜ.

ತೋವಿನಕೆರೆಯ ಸೋಮಣ್ಣನ ಕುಲುಮೆ ಮನೆಯಿಂದ ನೇರವಾಗಿ ಬಂದ್ದ ಬುಡ್ಡಿರಜ್ಜನ ಮಚ್ಚು ನೋಡ ನೋಡುತ್ತಲೇ ನನ್ನ ಮೈಮೇಲೆ ಎರಗಿ ನನ್ನ ದೇಹದ ಸುತ್ತಲು ಸುತ್ತುವರಿದಿದ್ದ ನನ್ನ ಕೈಕಾಲುಗಳಂತಿದ್ದ ನನ್ನ ರೆಂಬೆ ಕೊಂಬೆಗಳನ್ನ ಕಡಿದು ರಾಶಿ ರಾಶಿ ಮುಳ್ಳುಗಳನ್ನ ಒಂದೆಡೆಗೆ ಸೇರಿಸಿ, ಯಾವ ಕನಿಕರವೂ ಇಲ್ಲದೆ ಆ ಬಿರುಬಿಸಿಲಿನಲ್ಲಿ ದರದರನೆ ಎಳೆದು ತಂದು ಒಂದರ ಮೇಲೊಂದು ಸೈಜ್ ಕಲ್ಲುಗಳನ್ನ ಏರಿ ಉಸಿರುಗಟ್ಟಿಸಿದ ಆ ಬುಡ್ಡಿರಜ್ಜ.

ಒಂದು ವಾರದ ನಂತರ ಬಂದವನು ನನ್ನನ್ನ ಬಲೆಯಂತೆ ಒಂದಕ್ಕೆ ಮತ್ತೊಂದರಂತೆ ಜೊಡಿಸಿ ಹೆಣೆದು ಕಟ್ಟಿ ನಿಲ್ಲಿಸಿ ಬಿಗಿದು ಅವನ ಗದ್ದೆಯ ಸುತ್ತಲು ಸುತ್ತುವರಿದ ಬೇಲಿಯನ್ನಾಗಿಸಿಕೊಂಡ. ಇಷ್ಟೆಲ್ಲ ಮಾಡಿದರು ಇಂದು ಅವನ ಗದ್ದೆಗೆ ಬರುವ ದನಕರುಗಳು ಮತ್ತು ಕಳ್ಳಕಾಕರುಗಳಿಂದ ರಕ್ಷಿಸುವ ಬೇಲಿಯಾಗಿದ್ದೇನೆ.

ಸರಿಸುಮಾರು ಮೂರುಘಂಟೆ ಇರಬಹುದು ಬಪ್ಪರಾಯಿಕದುರಪ್ಪನ ಮೇಕೆಗಳು ನೋಡನೋಡುತ್ತಲೇ ನನ್ನ ಮೈಮೇಲೆ ಅವುಗಳ ಹುಚ್ಚಾಟವನ್ನ ಪ್ರದರ್ಶಿಸಿ ನನ್ನ ಕಣ್ ರೆಪ್ಪೆಯಂತಿದ್ದ ಹಸಿ ಹಸಿಯಾದ ಹಸಿರು ಎಲೆಗಳನ್ನ ತಿಂದು ಸುತ್ತಲೂ ತಿರುಗಿ ನೋಡಿದಾಗ ದಬ್ಬ ಎಂದು ಶಬ್ಬವಾಯಿತು ಅದೇನಂದರೆ ಬಪ್ಪರಾಯಿಕದುರಪ್ಪ ತನ್ನ ಜವಳಿಯ ಕುಡುಗೋಲಿನಿಂದ ನನ್ನ ತೋಳ್ಗಳನ್ನ ಕುಯ್ದು ಕುಯ್ದು ಉರುಳಿಸಿದ್ದ, ಆ ಮೇಕೆಗಳಿಗೆ ನಾನು ಆಹಾರವಾಗಿಬಿಟ್ಟಿದ್ದೆ.

ಸೂರಿ ನಿನ್ನ ಕೊನೆಯದಿನಗಳು ಮುಗಿದು ನಿನ್ನ ಅಂತಿಮ ಯಾತ್ರೆ ಸಾಗುವಾಗ, ಆ ಯಾತ್ರೆಯಲಿ ಬಹುಮುಖ್ಯಪಾಲು ನನ್ನದು, ಅದರಲ್ಲೂ ನಿನ್ನ ಶವದ ಮೆರವಣಿಗೆಯ ಕೇಂದ್ರಬಿಂದುವಾಗುವುದು ನಾನೇ ಹೊರೆತು ನೀನಲ್ಲ, ನನ್ನನ್ನ ನೀ ಮರೆತರು ಸರಿಯೇ ನಿನ್ನ ನಾ ಮರೆಯುವುದಿಲ್ಲ ಕಾರಣ. ನಿನ್ನ ಶವ ಯಾತ್ರೆಯಲ್ಲಿ ಜನರು ನನ್ನನ್ನ ದಸರಾ ಹಬ್ಬದಲ್ಲಿ ಎಸ್ ಆರ್ ಎಸ್ ಬಸ್ಸನ್ನ ಹೇಗೆ ಸಿಂಗರಿಸುವೋರೋ ಅದಕ್ಕಿಂತ ಆ ಬಸ್ಸಿಗಿಂತಲೂ ಸುಂದರವಾಗಿ ಸಿಂಗರಿಸಿ ವಿಜ್ರಮಿಸುತ್ತಾರೆ ನನ್ನನ್ನ ಹೊತ್ತುಸಾಗುತ್ತಾರೆ ನೀ ಬಾರದೂರಿನ ಕಡೆಗೆ.


ತೋವಿನಕೆರೆ ಸೂರಿ ಹೆಸರಿನಲ್ಲಿ ಬರೆಯುವ ತೋವಿನಕೆರೆಯ ಸೂರ್ಯಪ್ರಕಾಶ್ ಅವರು ತುಮಕೂರಿನಲ್ಲಿ ಆಂಗ್ಲ ಉಪನ್ಯಾಸಕರು.‌ಪರಿಸರದ ಬಗ್ಗೆ ಹೆಚ್ಚು ಕುತೂಹಲ ಉಳ್ಳವರು.

ಹಾವಾಡಿಗರಿಗೆ ಏಕತಾ ಟ್ರಸ್ಟ್ ನೆರವು: ಆಹಾರ ಕಿಟ್ ವಿತರಣೆ

0

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಹರಿದೇವನಹಳ್ಳಿ (ಶ್ರೀನಿವಾಸನಗರ )ನಿವಾಸಿಗಳಾದ ಹಾವಡಿಗ ಕುಟುಂಬದವರಿಗೆ ಪ್ರಬುದ್ಧ ಭಾರತ ಏಕತಾ ಟ್ರಸ್ಟ್ ವತಿಯಿಂದ ದಿನಬಳಕೆಯ ಆಹಾರ ಕಿಟ್ ಮತ್ತು ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.

ಲಾಕ್ ಡೌನ್ ನಿಂದ ಈ ಕುಟು‌ಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು.


ಕಾರ್ಟೂನ್ ಕಾರ್ನರ್: ಮುಸ್ತಾಫ ಕೆ.ಎಂ. ರಿಪ್ಪನ್ ಪೇಟೆ


ಪ್ರಬುದ್ಧ ಭಾರತ ಏಕತಾ ಟ್ರಸ್ಟ್ ಅಧ್ಯಕ್ಷ ಎನ್. ಮೋಹನ್ ಕುಮಾರ್ ಮತ್ತು ಕಾರ್ಯದರ್ಶಿ ಡಿ.ಎನ್. ಚಂದನ್ ವಿತರಣೆ ಮಾಡಿದರು.

ಸಾಮಾಜಿಕ ಅಂತರ ಮತ್ತು ವೈಯಕ್ತಿಕ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಕೊಡುವ ಬಗ್ಗೆ ಮಾಹಿತಿ ನೀಡಲಾಯಿತು.