Wednesday, February 25, 2026
Google search engine
Home Blog Page 270

ಕರೋನಾ: ಅಪಾಯ ಕಮ್ಮಿ-ಹೆದರಿಸಬೇಡಿ ಕೆಮ್ಮಿ!

0

ತುರುವೇಕೆರೆ ಪ್ರಸಾದ್


ಬೆಳಿಗ್ಗೆ ಎದ್ದು ಮೊಬೈಲ್ ತೆರೆದರೆ ಹಲವು ನಿಸರ್ಗ ಸೌಂದರ್ಯದ ಚಿತ್ರಗಳು, ಉತ್ತೇಜನಕಾರಿ ಸಂದೇಶಗಳನ್ನೊಳಗೊಂಡ ಶುಭಾಶಯಗಳು ಬಂದಿರುತ್ತಿದ್ದವು. ಅವನ್ನು ನೋಡಿ, ಓದಿ ಮನಸ್ಸು ಪ್ರಪುಲ್ಲವಾಗುತ್ತಿತ್ತು.

ಆದರೆ ಈಗ ಕೆಲವು ದಿನಗಳಿಂದ ಬೆಳಿಗ್ಗೆ ಎದ್ದ ಕೂಡಲೇ ಇಡೀ ವಾಟ್ಸಪ್,ಫೇಸ್‍ಬುಕ್ ತುಂಬಾ ಕರೋನ ವೈರಸ್ ಕುರಿತ ಚಿತ್ರಗಳು, ಜಾಗೃತಿ ಸಂದೇಶಗಳು, ಔಷಧೋಪಚಾರಗಳ ಕ್ರಮ, ತಡೆಗಟ್ಟುವ ಕ್ರಮಗಳು, ಅದರಲ್ಲಿ ಆಯುರ್ವೇದ, ಯುನಾನಿ,ಅಲೋಪತಿ ಇತ್ಯಾದಿ ವಿವಿಧ ಚಿಕಿತ್ಸಾ ಕ್ರಮಗಳ ಉದ್ದುದ್ದ ಸಾಲುಗಳೇ ತುಂಬಿ ತಲೆ ಕೆಟ್ಟು ಹೋದಂತಾಗುತ್ತಿದೆ.

ಅದರಲ್ಲೂ ಬಹಳಷ್ಟು ಸಂದೇಶಗಳು ನಮ್ಮ ಮನಸ್ಸಿನಲ್ಲಿ ಆತಂಕ,ಭಯ ಮೂಡಿಸುವಂತಹವುಗಳೇ ಅಗಿರುತ್ತವೆ. ಟಿವಿ ಆನ್ ಮಾಡಿದರಂತೂ ಮುಗಿದೇ ಹೋಯಿತು.

ನ್ಯೂಸ್ ಚಾನಲ್‍ಗಳು ಕೊರೋನೋ ವೈರಸ್‍ನಿಂದ ಸತ್ತವರ ಮಾಹಿತಿ, ಹೊಸ ಸೋಂಕು ಪೀಡಿತರ ಕುರಿತ ಉತ್ಪ್ರೇಕ್ಷಿತ ವರದಿಗಳು, ಕೊರೋನಾ ಎನ್ನುವುದು ಮನುಕುಲ ವಿನಾಶಕ, ಪ್ರಳಯಸ್ವರೂಪಿ, ಮಹಾ ಮೃತ್ಯಕಂಟಕ ಇತ್ಯಾದಿ ಎತ್ತರದ ಸ್ತರದ ಅಬ್ಬರದ ವರ್ಣನೆಗಳನ್ನು ಮಾಡುತ್ತಾ ಮನಸ್ಸನ್ನು ನಡುಗಿಸುತ್ತವೆ.

ಮುದ್ರಣ ಮಾಧ್ಯಮದ ಪತ್ರಿಕೆಗಳು ಸಹ ಇದಕ್ಕೇನೂ ಕಡಿಮೆ ಇಲ್ಲ. ಯಾರಿಗಾದರೂ ಫೋನ್ ಮಾಡಲೆಂದು ಮೊಬೈಲ್ ಒತ್ತಿದರೆ ಸಾಕು, ಅತ್ತಲಿಂದ ಕೊರ ಕೊರ ಕೆಮ್ಮವ ಧ್ವನಿ ಬಂದು ನಮ್ಮ ಪ್ರೀತಿಪಾತ್ರರು ಹುಶಾರು ತಪ್ಪಿದ್ದಾರೇನೋ ಎಂದು ಆತಂಕವಾಗುತ್ತದೆ. ಆಮೇಲೆ ಅದು ಕೊರೋನಾ ಜಾಗೃತಿ ಸಂದೇಶ ಎಂದು ಗೊತ್ತಾದಾಗ ಮನಸ್ಸಿಗೆ ಸಮಾಧಾನವಾಗುತ್ತದೆ.

ಈ ಜಾಗೃತಿ ಸಂದೇಶ ದಿನಕ್ಕೆ ಒಂದೆರಡು ಬಾರಿ ಬಂದರೆ ಸರಿ, ಆದರೆ ಮೊಬೈಲ್ ಒತ್ತಿದಾಗಲೆಲ್ಲಾ ಈ ಕೆಮ್ಮುವ ಧ್ವನಿ ಕರ ಕರ ಎಂದು ತೀವ್ರ ಕಿರಿಕಿರಿಯಾಗುತ್ತಿದೆ. ಕೊನೆಮೊದಲಿಲ್ಲದ ಸಲಹೆಗಳು, ಭಯಗೊಳಿಸುವ ಉತ್ಪ್ರೇಕ್ಷಿತ ವರದಿಗಳು, ಕೆಟ್ಟ/ ಅಸಹಜ ಭವಿಷ್ಯಗಳು ಮೊಬೈಲ್, ಸಾಮಾಜಿಕ ಜಾಲತಾಣದ ತುಂಬಾ ಉಕ್ಕಿ ಹರಿಯುತ್ತಿವೆ. ಆದರೆ ಜನ ನಂಬಿರುವಂತೆ ಈ ಯಾವ ವ್ಯಕ್ತಿಯೂ ಭವಿಷ್ಯ ಬರೆಯುವ ನಾಸ್ಟ್ರಾಡಮಸ್ ಖಂಡಿತಾ ಅಲ್ಲ.

ಕರೋನ ವೈರಸ್ ಬಹಳಷ್ಟು ವರ್ಷಗಳಿಂದ ನಮ್ಮ ಮಧ್ಯೆಯೇ ಇದೆ ಎನ್ನುವುದು ಆಶ್ಚರ್ಯವಾದರೂ ನಿಜ! ತೀವ್ರ ಉಸಿರಾಟದ ಸಮಸ್ಯೆ( ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್(sars) ಮತ್ತು ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್(mers) ಸಾಂಕ್ರಾಮಿಕಗಳಿಗೂ ಸಹ ಕೊರೋನಾ ವೈರಸ್‍ಗಳೇ ಕಾರಣ. ಕ್ರಿಮಿನಾಶಕಗಳಾದ ಡೆಟಾಲ್ ಮತ್ತು ಲೈಸಾಲ್‍ಗಳ ಲೇಬಲ್‍ಗಳ ಮೇಲೆ ಸಹ ‘ಇವು ಕೊರೋನಾ ವೈರಸ್‍ಗಳನ್ನು (ಸಾಮಾನ್ಯ ಪ್ರಬೇಧ)ಕೊಲ್ಲುತ್ತವೆ’ ಎಂದು ಬರೆಯಲಾಗುತ್ತಿತ್ತು.

ಚೀನಾದ ವೊಹಾನ್‍ನಲ್ಲಿ ಕಂಡು ಬಂದಿರುವುದು ನಮಗೆಲ್ಲ ಗೊತ್ತಿದ್ದ ಕೊರೋನಾ ವೈರಸ್‍ನ ಒಂದು ಹೊಸ ಬಗೆಯ ಪ್ರಬೇದವಾಗಿದ್ದು ಇದನ್ನು ಕೋವಿಡ್-19 ಎಂದು ಹೆಸರಿಸಲಾಗಿದೆ.

ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ಯುಗದ ಈ ಕಾಲಮಾನದಲ್ಲಿ ಯಾವುದೇ ತಪ್ಪುಮಾಹಿತಿ ವೈರಸ್ ಹರಡುವ ವೇಗಕ್ಕಿಂತ ಸಾವಿರ ಪಟ್ಟು ವೇಗವಾಗಿ ಹರಡುತ್ತದೆ ಮತ್ತು ನಾವು ಹಿಂದೆ ಮುಂದೆ ಯೋಚಿಸದೆ, ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ಅಗ್ಗದ ಪ್ರಚಾರಕ್ಕಾಗಿ ಇವನ್ನು ಫಾರ್ವರ್ಡ್ ,ಶೇರ್ ಮಾಡುತ್ತಿದ್ದೇವೆ.

ವಿಶ್ವ ಆರೋಗ್ಯ ಸಂಸ್ಥೆ ಜನರಲ್ಲಿ ಗೊಂದಲ, ಭಯ ಮೂಡಿಸುವ ಇನ್‍ಫೋಡಮಿಕ್ (ಸಾಂಕ್ರಾಮಿಕ ಸುಳ್ಳು ಮಾಹಿತಿ) ವಿರುಧ್ಧ ಎಚ್ಚರಿಕೆಯ ಹೇಳಿಕೆ ಬಿಡುಗಡೆ ಮಾಡಿದೆ. ಕೋವಿಡ್-19 ವೈರಸ್ ನಿಜವಾಗಿ ಇರುವುದಕ್ಕಿಂತ ಹೆಚ್ಚು ಅಪಾಯಕಾರಿ ಎನ್ನುವ ಭಯ ಹರಡುತ್ತಿದೆ.

ಕೋವಿಡ್-19ರ ದುಷ್ಪರಿಣಾಮದ ಸಾವಿನ ಪ್ರಮಾಣ ಕೇವಲ ಶೇ.3.4. ಚೀನಾದ ವೋಹಾನ್‍ನಲ್ಲಿ ಆರಂಭಿಕ ಹಂತದಲ್ಲಿ ಕಾಣಿಸಿಕೊಂಡ ತೀವ್ರತೆ 17.3%ರಷ್ಟಿತ್ತು. ಆ ಪ್ರಮಾಣ ಈಗ ವೋಹಾನ್‍ನಲ್ಲಿ ಶೇ.5.8ಕ್ಕೆ ಹಾಗೂ ಇಡೀ ಚೀನಾದಲ್ಲಿ ಶೇ.0.7ಕ್ಕೆ ಇಳಿದಿದೆ. ಸಾರ್ಸ್ (10%)ಮತ್ತು ಮಿಯರ್ಸ್‍ಗೆ(34%) ಹೋಲಿಸಿದೆರೆ ಇದು ಅಂತಹ ಗಣನೀಯ ಸಾವಿನ ಪ್ರಮಾಣವೇನಲ್ಲ.

ಆದರೆ ಆಗ ಈಗಿನಂತೆ ಸಾಮಾಜಿಕ ಜಾಲತಾಣಗಳಿರಲಿಲ್ಲ, ಹಾಗಾಗಿ ಯಾರೂ ಈಗಿನಂತೆ ಹೆಜ್ಜೆ ಹೆಜ್ಜೆಗೂ ನಿರಂತರ ಭಯದಲ್ಲಿ ನರಳುವ ಪ್ರಮೇಯವಿರಲಿಲ್ಲ, ಒಂಭತ್ತು ವರ್ಷದೊಳಗಿನ ಯಾವುದೇ ಹುಡುಗ/ಹುಡುಗಿ ಕೊವಿಡ್-19ರಿಂದ ಸತ್ತಿಲ್ಲ ಹಾಗೂ 60 ವರ್ಷದೊಳಗಿನ ವ್ಯಕ್ತಿಗಳ ಸಾವಿನ ಪ್ರಮಾಣವೂ ತೀರಾ ಕಡಿಮೆಯೇ! 60 ವರ್ಷಕ್ಕೆ ಮೇಲ್ಪಟ್ಟವರು, ಅದರಲ್ಲೂ ಶ್ವಾಸಕೋಶ ಸಂಬಂಧೀ ಸಮಸ್ಯೆ, ಕಾಯಿಲೆಗಳನ್ನು ಹೊಂದಿದವರು, ಇತರೆ ರೋಗದಿಂದ ಬಳಲಿ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡಿರುವವರು ಮಾತ್ರ ಕೋವಿಡ್-19ನ ಅಪಾಯಕಾರಿ ವರ್ತಲದಲ್ಲಿದ್ದಾರೆ ಎನ್ನುವುದನ್ನು ಬಿಟ್ಟರೆ ಅದು ಮಾಧ್ಯಮಗಳು ವರ್ಣಿಸುವಂತೆ ಮನುಕುಲದ ಕಂಟಕವೇನಲ್ಲ.

ಕಳೆದ ವಾರದ ಅಂಕಿಅಂಶಗಳ ಪ್ರಕಾರ ಪ್ರಪಂಚದಾದ್ಯಂತ 1,03,882 ಕೊವಿಡ್-19 ಪ್ರಕರಣಗಳು ದಾಖಲಾಗಿದ್ದವು ಮತ್ತು ಅವುಗಳಲ್ಲಿ 3522 ಸಾವುಗಳು ಸಂಭವಿಸಿತ್ತು. ಇವುಗಳಲ್ಲಿ 80,651 ಪ್ರಕರಣಗಳು ಚೀನಾದಲ್ಲಿ ವರದಿಯಾಗಿದ್ದವು. ಚೀನಾ ದೇಶವೊಂದರಲ್ಲೇ 3070 ಜನ ಕೊವಿಡ್-19ಗೆ ಬಲಿಯಾಗಿದ್ದರು. (ಇದರಲ್ಲಿ ಬಹುತೇಕರು ಸಾವನ್ನಪ್ಪಿದ್ದು ಆರಂಭದಲ್ಲಿ ಉಂಟಾದ ಬೇಕಿಂಗ್‍ನಲ್ಲಿ) ಭಾರತದಲ್ಲಿ 33 ಜನ ಕೋವಿಡ್-19 ಸೋಂಕಿತರಿದ್ದರು.ಅವರಲ್ಲಿ ಮೂವರು ಪೂರ್ಣಪ್ರಮಾಣದಲ್ಲಿ ಗುಣಮುಖರಾಗಿದ್ದರು.

ಅಲ್ಲದೆ ಬೇರೆ ಯಾರೂ ತೀವ್ರವಾಗಿ ನರಳಿ ಸಾವು ಬದುಕಿನ ನಡುವೆ ಹೋರಾಡಿದ ಉದಾಹರಣೆ ಇಲ್ಲ. ಹಾಗಿದ್ದರೂ ನಾವೇಕೆ ಇಷ್ಟು ಭಯಭೀತರಾಗಿ ನಮ್ಮ ನೆರಳಿಗೇ ನಾವು ಹೆದರುವಂತಾಗಿದ್ದೇವೆ ?.ಜನರು ಆರೇಳು ಪಟ್ಟು ಹೆಚ್ಚು ಬೆಲೆ ತೆತ್ತು ಮಾಸ್ಕ್‍ಗಳನ್ನು ಏಕೆ ಕೊಳ್ಳಬೇಕು ? ಎಂಬುದೇ ಅರ್ಥವಾಗುತ್ತಿಲ್ಲ. ಆ ಮಟ್ಟಿಗೆ ನಾವು, ನಮ್ಮ ಮಾಧ್ಯಮಗಳು ಜನರನ್ನು ಹೆದರಿಸಿ ಹಿಂಡಿ ಹಿಪ್ಪೆಮಾಡಿಟ್ಟಿವೆ.

ಇನ್ನು ಮುಖಕ್ಕೆ ಧರಿಸುವ ಮಾಸ್ಕ್‍ಗಳಿಂದ ನಮಗೆ ಕೋವಿಡ್-19ನಿಂದ ರಕ್ಷಣೆ ಸಿಗುತ್ತದೆ ಎಂಬುದು ಶೇ.100ನಿಜವಲ್ಲ. ಯಾರಾದರೂ ಕೋವಿಡ್-19 ಸೋಂಕು ಪೀಡಿತರು ನಿಮ್ಮ ಮುಖದ ಮುಂದೆ ಸೀನದೆ ವಾತಾರಣದ ಗಾಳಿಯ ಮೂಲಕ ಹರಡುವುದಿಲ್ಲ. ಅಂದರೆ ಕರೋನ ವೈರಸ್ ಹರಡುವಿಕೆಗೆ ಗಾಳಿ ಮಾಧ್ಯಮವಾಗಲಾರದು. ಅದು ಮೇಲ್ಮೈಗಳ (ಸರ್‍ಫೇಸ್) ಮೂಲಕ ಹರಡುತ್ತದೆ. ಹಾಗಾಗಿ ಮಾಸ್ಕ್ ಕೋವಿಡ್-19ರಿಂದ ಸಂಪೂರ್ಣ ರಕ್ಷಣೆಯೇನಲ್ಲ. ಅದರಿಂದ ಇನ್ನೂ ಹೆಚ್ಚು ಕರೋನ ವೈರಸ್‍ಗೆ ನಾವಾಗೇ ಆಹ್ವಾನಕೊಟ್ಟಂತೆ ಎನ್ನುವುದು ವಿಚಿತ್ರವಾದರೂ ನಿಜ.

ಮಾಸ್ಕ್ ಮುಜಗರ, ಕಿರಿಕಿರಿ ಅನಿಸಿದಾಗ, ಯಾರೊಂದಿಗಾದರೂ ಮಾತಾಡಲೇಬೇಕಾದಾಗ, ತಿಂಡಿ, ಊಟ ಮಾಡುವಾಗ ನಾವು ಪದೇ ಪದೇ ಮಾಸ್ಕರನ್ನು ಕೆಳಗೆ ಎಳೆಯಬೇಕಾಗುತ್ತದೆ. ಪ್ರತಿಸಾರಿ ಹಾಗೆ ಮಾಡಿದಾಗಲೂ ನಾವು ಮುಖ ಅದರಲ್ಲೂ ಮೂಗು ಮುಟ್ಟಿಕೊಳ್ಳುವ ಸಂಭವವೇ ಹೆಚ್ಚು.

ನಮ್ಮ ಕೈ ಅಕಸ್ಮಾತ್ ಜೀವಂತ ವೈರಸ್ ಇರುವ ಮೈಲ್ಮೈನ ಸಂಪರ್ಕ ಪಡೆದಿದ್ದರೆ ಸೋಂಕು ನಮಗೆ ತಗಲುವ ಸಂಭವವೇ ಹೆಚ್ಚು. ಪ್ರತಿಭಾರಿ ನಾವು ಮಾಸ್ಕ್ ಸರಿಸುವಾಗ, ತೆಗೆಯುವಾಗ ಕೈ ತೊಳೆದುಕೊಳ್ಳುವುದು ಸಾಧ್ಯವಿಲ್ಲದ ಮಾತು.

ಮಾಸ್ಕ್ ಧರಿಸುವ ವ್ಯಕ್ತಿ ಇತರೆ ಸಾಮಾನ್ಯ ವ್ಯಕ್ತಿಗಿಂದ ಹೆಚ್ಚು ಸಾರಿ ಮುಖ/ಮೂಗು ಮುಟ್ಟಿಕೊಳ್ಳುತ್ತಾನೆ. ಹಾಗಾಗಿ ಅವನಿಗೆ ಇತರರಿಗಿಂತ ಹೆಚ್ಚು ಬೇಗ ಸೋಂಕು ತಗಲುವ/ಹರಡುವ ಸಂಭವವೇ ಹೆಚ್ಚು. ನಮಗೆ ನಿಜಕ್ಕೂ ವೈರಸ್ ಸೋಂಕು ತಗುಲಿದೆ ಎಂದು ಖಾತರಿಯಾಗಿದ್ದರೆ ಅಥವಾ ಆ ಅನುಮಾನವಿದ್ದರೆ ಮಾತ್ರ ನಾವು ಅದನ್ನು ಹರಡದಂತೆ ಮಾಸ್ಕ್ ಧರಿಸುವುದು ವಿಹಿತ.

ಅಮೇರಿಕಾದ ಸರ್ಜನ್ ಜನರಲ್ ಡಾ.ಜೆರೊಮೋವ್ ಅಡಮ್ಸ್ ‘ಮಾಸ್ಕ್ ಕೊಳ್ಳುವುದನ್ನು ಕೂಡಲೇ ನಿಲ್ಲಿಸಿ’ ಎಂದು ಫೆ.29ರಂದು ಟ್ವೀಟ್ ಮಾಡಿ ಜನರನ್ನು ಎಚ್ಚರಿಸಿರುವುದನ್ನು ಗಮನಿಸಬೇಕು.

ಫೇಸ್‍ಬುಕ್, ಟ್ವಿಟ್ಟರ್, ಯೂಟ್ಯೂಬ್ ಮತ್ತಿತ್ತರ ಸಾಮಾಜಿಕ ಜಾಲತಾಣ ವೇದಿಕೆಗಳು ಇನ್‍ಫೋಡೆಮಿಕ್ ವಿರುದ್ಧ ಜಾಗೃತಿ ಮೂಡಿಸಲು ಕೋವಿಡ್-19ರ ಕುರಿತ ಅಧಿಕೃತ ಮಾಹಿತಿ ಇರುವ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಓ) ಮತ್ತು ಅಮೇರಿಕಾದ ಸಿಡಿಸಿ ಜಾಲ ತಾಣಗಳ ಕುರಿತು ಮಾಹಿತಿ, ನಿರ್ದೇಶನ ನೀಡುತ್ತಿವೆ.

ಫೇಸ್‍ಬುಕ್ ವಸ್ತು ವಿಮರ್ಶಕರು (ಫ್ಯಾಕ್ಟ್ ಚೆಕರ್ಸ್ )ಸಹ ಹಗಲು ರಾತ್ರಿ ತಪ್ಪು ಹಾಗೂ ಕಪೋಲಕಲ್ಪಿತ ಮಾಹಿತಿಗಳು, ಬೋಗಸ್ ಚಿಕಿತ್ಸಾ ಕ್ರಮಗಳು ಮೊದಲ ಸತ್ಯಕ್ಕೆ ದೂರವಾದ, ಜನರಲ್ಲಿ ಗಾಬರಿ ಹುಟ್ಟಿಸುವ ವಿಷಯಗಳನ್ನು ತೆಗೆದು ಹಾಕಲು ಶ್ರಮಿಸುತ್ತಿದ್ದಾರೆ. ಆದರೆ ಈ ಪ್ರಯತ್ನ ನದಿ ಪ್ರವಾಹಕ್ಕೆ ವಿರುದ್ಧವಾಗಿ ಈಜಿದಂತಾಗಿದೆ. ತಮ್ಮ ಜಾಲತಾಣದ ವೇಗ ಮತ್ತು ಪಾರಸ್ಪರಿಕತೆಯೇ ಅವರಿಗೆ ಮುಳ್ಳಾಗಿದೆ. ಫೇಸ್‍ಬುಕ್ ಸತ್ಯಶೋಧಕರು ಒಂದು ಪೋಸ್ಟ್ ತೆಗೆಯುವಷ್ಟರಲ್ಲಿ ಅದು ಮಿಂಚಿನಂತೆ ಲಕ್ಷಾಂತರ ಬಾರಿ ಶೇರ್ ಆಗಿರುತ್ತದೆ. ಅದರಲ್ಲೂ ಹೆದರಿಕೆಯ, ಪ್ರಚೋದನೆಯ ಪೋಸ್ಟ್‍ಗಳು ಮಿತಿಯಿಲ್ಲದೆ ಶೇರ್ ಆಗುತ್ತವೆ. ಇದೇ ಸಾಮಾಜಿಕ ಜಾಲತಾಣ ನಿರ್ವಾಹಕರಿಗೆ ಒಂದು ದೊಡ್ಡ ತಲೆನೋವಿನ ಕೆಲಸವಾಗಿದೆ.

ಹಾಗೆಂದು ಕೊರೋನಾದ ಹೊಸ ರೂಪ ಕೋವಿಡ್-19 ಬಗ್ಗೆ ಒಂದಿಷ್ಟು ಜಾಗೃತಿ ಮೂಡಿಸಲೇಬಾರದೆಂದಲ್ಲ. ಖಂಡಿತವಾಗಿ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಆದರೆ ಕೋವಿಡ್-19 ಕುರಿತು ಅತಿರಂಜಿತ ವರದಿಗಳು, ಭಯಾನಕ ಕಥನಗಳು, ವ್ಯಾಖ್ಯೆಗಳು ಗಂಭೀರತೆಯನ್ನು ಮೀರಿದ ತಮಾಷೆ ಎನಿಸುವಂತಿವೆ.

ಭಾರತೀಯರಾದ ನಮ್ಮ ದೇಹದಲ್ಲಿ ಪ್ರಪಂಚದಲ್ಲೇ ಹೆಮ್ಮೆ ಪಡಬಹುದಾದ ಅತಿ ದಕ್ಷ ರೋಗನಿರೋಧಕ ವ್ಯವಸ್ಥೆ ಇದೆ. ನಾವು ಸಾಕಷ್ಟು ಕಲುಶಿತ ವಾತಾವರಣದಲ್ಲೇ ಬೆಳೆದಿರುವುದರಿಂದ ಮುಂದುವರಿದ ರಾಷ್ಟ್ರಗಳ ಜನರಿಗಿಂತ ನಮ್ಮ ರೋಗನಿರೋಧಕ ಶಕ್ತಿ ಬಲಿಷ್ಠವಾಗಿದೆ. 2003ರಲ್ಲಿ ಕಾಣಿಸಿಕೊಂಡ ಸಾರ್ಸ್ ಪ್ರಪಂಚದ 29 ದೇಶಗಳಲ್ಲಿ ವ್ಯಾಪಿಸಿ 1000ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು.ಆದರೆ ಭಾರತದಲ್ಲಿ 3 ಜನರಲ್ಲಿ ಮಾತ್ರ ಈ ಸೋಂಕು ಕಾಣಿಸಿಕೊಂಡು ಅವರು ಸಂಪೂರ್ಣ ಗುಣಮುಖರಾದರು.

ಭಾರತ ಮತ್ತು ಪಶ್ಚಿಮ ಏಷ್ಯಾ ದೇಶಗಳ ನಡುವಣ ನಿಕಟ ಸಂಪರ್ಕವಿದ್ದರೂ ಮೀರ್ಸ್ ಭಾರತಕ್ಕೆ ಕಾಲಿಡಲೇ ಇಲ್ಲ. ಕೋವಿಡ್-19ರ ವಿಷಯವನ್ನೇ ತೆಗೆದುಕೊಳ್ಳಿ. ವೊಹಾನ್‍ನಲ್ಲಿ ಈ ರೋಗ ತೀವ್ರವಾಗಿ ಸಾವಿನ ಪ್ರಮಾಣ ಏರುಗತಿಯಲ್ಲಿದ್ದಾಗ ಅಲ್ಲಿಂದ ಬಂದ 327 ಭಾರತೀಯರಿಗೆ ಈ ಸೋಂಕು ತಗುಲಿರಲೇ ಇಲ್ಲ.

ಹಾಗಾಗಿ ನಮ್ಮ ಸಹಜ ಜೀವನ ಶೈಲಿಯಿಂದ ವರವಾಗಿ ಬಂದಿರುವ ನಮ್ಮ ರೋಗನಿರೋಧಕ ಶಕ್ತಿ ನಿಜಕ್ಕೂ ಸಾಟಿಯಿಲ್ಲದ್ದು.

ಭಾರತೀಯರಾದ ನಮ್ಮ ಬಲಿಷ್ಠ ರೋಗನಿರೋಧಕ ಶಕ್ತಿಯನ್ನು ಈ ಕೆಳಕಂಡ ಅಂಕಿ-ಅಂಶಗಳು ಸಾಬೀತು ಪಡಿಸುತ್ತವೆ. 2010-11 ರಿಂದ 2018-19ರವರೆಗೆ ಅಮೇರಿಕಾದಲ್ಲಿ ವರ್ಷಕ್ಕೆ 37,444 ಜನರಂತೆ ಒಟ್ಟು 3,37,000 ಜನ ಫ್ಲೂಗೆ ಬಲಿಯಾದರು. ಆದರೆ ಈ 10 ವರ್ಷಗಳಲ್ಲಿ ಭಾರತದಲ್ಲಿ ಅಮೇರಿಕಾದ ನಾಲ್ಕು ಪಟ್ಟು ಜನಸಂಖ್ಯೆ ಇದ್ದೂ ಕೇವಲ 11030 ಜನ ಮಾತ್ರ ಫ್ಲೂನಿಂದ ಮೃತರಾಗಿದ್ದಾರೆ.

ನಾವು ಅತ್ಯುತ್ತಮ ರೋಗನಿರೋಧಕ ಶಕ್ತಿ ಮತ್ತು ದೀರ್ಘಾಯುಷ್ಯ ಹೊಂದಿದ್ದೇವೆ. ಹಾಗಾಗಿ ನಾವು ವಿನಾಕಾರಣ ಕರೋನಾ ಭೀತಿಯಂದ ಆತಂಕ ಪಡಬೇಕಿಲ್ಲ. ದುಬಾರಿ ಬೆಲೆ ತೆತ್ತು ಮಾಸ್ಕ್ ಕೊಳ್ಳಬೇಕಿಲ್ಲ. ಅವಾಗವಾಗ ನಾವು ಸೋಪಿನಿಂದ ಕೈ ತೊಳೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡರೆ ಸಾಕು.

ಊಟ, ತಿಂಡಿಗೆ ಮುಂಚೆ ಕೈ ಕಾಲು ತೊಳೆದುಕೊಳ್ಳುವ ಅಭ್ಯಾಸ ನಮಗೆ ಹೇಗೂ ಇದ್ದೇ ಇದೆ. ಅದನ್ನೇ ದಿನಕ್ಕೆ ಇನ್ನೊಂದು ನಾಲ್ಕು ಬಾರಿ ಮಾಡಿದರಾಯಿತು. ನಮ್ಮ ಶತಾಯುಷಿ ವಜ್ರದೇಹಕ್ಕೆ ಖಂಡಿತಾ ಕರೋನಾ ಹಿಮ್ಮೆಟ್ಟಿಸುವ ತಾಕತ್ತಿದೆ.


( ಫೈನಾನ್ಸಿಯಲ್ ಎಕ್ಸ್‍ಪ್ರೆಸ್‍ನ ಮಾಜಿ ಸಂಪಾದಕ ಹಗೂ ಸ್ವರಾಜ್ಯ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಸಂದಿಪನ್ ದೇಬ್ ಅವರ ಲೇಖನ ಆಧಾರಿತ)
ತುರುವೇಕೆರೆ ಪ್ರಸಾದ್
ಎಲ್.ಎನ್.ಪ್ರಸಾದ್
ನಂ.6, ಪಂಚವಟಿ
ಗಾಂಧಿನಗರ
ತುರುವೇಕೆರೆ-572 227
ಮೊಬೈಲ್:94486 77560

ತಿಪ್ಪೂರು ಘಟನೆ: ರಾಜಸ್ವ ನಿರೀಕ್ಷಕರನ್ನು ರಕ್ಷಿಸುತ್ತಿದೆಯೇ ಸರ್ಕಾರ?

0

https://youtu.be/FS31pxPGVkA

ಲಕ್ಷ್ಮೀಕಾಂತರಾಜು ಎಂಜಿ


ಗುಬ್ಬಿ: ತಾಲ್ಲೂಕಿನ ತಿಪ್ಪೂರು ಗ್ರಾಮದ ಉಡುಸಲಮ್ಮ ದೇವಸ್ಥಾನದ ಇನಾಂ ಜಮೀನಿನ ಒತ್ತುವರಿ ತೆರವು ಪ್ರಕರಣದಲ್ಲಿ ತಹಸೀಲ್ದಾರ್ ಹಾಗೂ ವಿಎ ತಲೆದಂಡವಾದರೂ ಪ್ರಕರಣದ ಮತ್ತೊಬ್ಬ ಭಾಗಿದಾರ ಗುಬ್ಬಿ ಕಸಬಾ ರಾಜಸ್ವ ನಿರೀಕ್ಷಕರ ಮೇಲೆ ಯಾವುದೇ ಶಿಸ್ತುಕ್ರಮ ಜರುಗಿಸಿಲ್ಲದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ರಾಜಸ್ವ ನಿರೀಕ್ಷಕರ ವರದಿ ಉಲ್ಲೇಖ ಮಾಡಿರುವ ತಹಶೀಲ್ದಾರ್

ಹೌದು. ತಾಲ್ಲೂಕಿನ ತಿಪ್ಪೂರು ಒತ್ತುವರಿ ತೆರವು ಪ್ರಕರಣದಲ್ಲಿ ಕಸಬಾ ಆರ್ ಐ ಅವರನ್ನ ಇಲಾಖೆ ರಕ್ಷಸುತ್ತಿದೆಯಾ ಎಂಬ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.

ಗುಬ್ಬಿ ತಹಸೀಲ್ದಾರ್ ಆಗಿದ್ದ ಮಮತಾ ಅವರು ತೆರವು ಸಂದರ್ಭದಲ್ಲಿ ಅಲ್ಲಿನ ಆರ್ ಐ ವರದಿಯ ಆಧಾರದ ಮೇರೇಯೆ ತೆರವು ಆದೇಶ ಹೊರಡಿಸಿದ್ದು ಅರ್ ಐ ತನ್ನ ವರದಿಯಲ್ಲಿ ಒತ್ತುವರಿ ತೆರವುಗೊಳಿಸಬಹುದೆಂದು ತಹಸೀಲ್ದಾರ್ ಅವರಿಗೆ ಮಾಹಿತಿ ಒದಗಿಸಿ ತಪ್ಪು ಮಾಹಿತಿ ನೀಡಿ ನಡೆದಿರುವ ಮರಗಳ ಮಾರಣ ಹೋಮಕ್ಕೆ ಕಾರಣವಾಗಿರುವಂಥೂ ಸತ್ಯ.

ರಾಜಸ್ವ ನಿರೀಕ್ಷಕರ ವರದಿ ಆಧರಿಸಿಯೇ ತೆರವು ನಡೆದಿರುವದರಿಂದ ಆರ್ ಐ ಕೂಡ ಪ್ರಕರಣದ ಜವಬ್ದಾರಿ ಹೊರಬೇಕಿದ್ದು ಅವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ತಾಲ್ಲೂಕಿನ ರೈತಾಪಿ ವರ್ಗದಲ್ಲಿ ಕೇಳಿಬರುತ್ತಿದೆ.

ಸಾಮಾನ್ಯವಾಗಿ ಯಾವುದೇ ತಹಸೀಲ್ದಾರ್ ಅವರುಗಳು ತಮ್ಮ ಆದೇಶಗಳನ್ನ ಗ್ರಾಮ ಲೆಕ್ಕಿಗ ಹಾಗೂ ಆರ್ ಐ ವರದಿಯ ಅನ್ವಯವೇ ಆದೇಶ ಮಾಡುವುದು ವಾಡಿಕೆ.

ಅದರಂತೆ ಗುಬ್ಬಿ ತಹಸೀಲ್ದಾರ್ ಅವರೂ ಕೂಡ ಸ್ಥಳ ಪರಿಶೀಲಿಸದೆ ವರದಿಯನ್ನೇ ಆಧರಿಸಿ ತೆರವು ಆದೇಶ ಹೊರಡಿಸಿ ಎಡವಟ್ಟು ಮಾಡಿಕೊಂಡಿರುವುದೇ ಈ ಮರಗಳ ಮಾರಣ ಹೋಮಕ್ಕೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಶ್ರೀ‌ಉಡುಸಲಮ್ಮ‌ದೇವಸ್ಥಾನದ ಬಳಿ ಈಗಾಗಲೇ ಸಾಕಷ್ಟು ಜಾಗವನ್ನ ಒತ್ತುವರಿದಾರರು ದೇವಸ್ಥಾನಕ್ಕೆ ಬಿಟ್ಟುಕೊಟ್ಟಿರುವ ಮಾಹಿತಿಯನ್ನ ಮರೆಮಾಚಿ ತಹಸೀಲ್ದಾರ್ ಅವರನ್ನ ತಪ್ಪು ದಾರಿಗೆ ಎಳೆದಿದ್ದಾರೆ ಎಂಬುದು ಅಲ್ಲಿನ ಗ್ರಾಮಸ್ಥರ ಆರೋಪವಾಗಿದೆ.

ಕಂದಾಯ ಇಲಾಖೆಯು ಪ್ರಕರಣದಲ್ಲಿನ ಒಂದು ಭಾಗವಾಗಿರುವ ಕಸಬಾ ಆರ್ ಐ ಅವರನ್ನ ಪ್ರಕರಣದಿಂದ ಕೈ ಬಿಟ್ಟಿರುವುದು ರಾಜಕೀಯ ಕಾರಣಗಳಿರುವುದು ಕಂಡುಬರುತ್ತಿದೆ.

ಆರ್ ಐ ರಮೇಶ್ ಅವರನ್ನ ಈ ಕೂಡಲೇ ಅಮಾನತ್ತುಪಡಿಸದಿದ್ದಲ್ಲಿ ಹೋರಾಟ ಮಾಡುವ ಎಚ್ಚರಿಕೆಯನ್ನ ಅನೇಕ ಸಂಘಟನೆಗಳು ಎಚ್ಚರಿಸಿವೆ.

ರಾಜಸ್ವ ನಿರೀಕ್ಷಕರ ಅಮಾನತು ಆಗಲೇಬೇಕು:ಶಾಸಕ ಶ್ರೀನಿವಾಸ್

ತಹಶೀಲ್ದಾರ್ ಮತ್ತು ಗ್ರಾಮಲೆಕ್ಕಿಗರ ಮೇಲೆ ಶಿಸ್ತುಕ್ರಮ ಜರುಗಿಸಿದ ಕಂದಾಯ ಇಲಾಖೆ ಆರ್ ಐ ಅವರನ್ನ ರಕ್ಷಿಸುತ್ತಿದೆ. ಈ ಕೂಡಲೇ ರಾಜಸ್ವ ನಿರೀಕ್ಷರನ್ನೂ ಅಮಾನತು ಪಡಿಸಿ ಸಾಮಾಜಿಕ ನ್ಯಾಯ ಒದಗಿಸಬೇಕು.ಇಲ್ಲದಿದ್ದಲ್ಲಿ ಹೋರಾಟ ಮಾಡಲಾಗುವುದು.


ಎಸ್ ಆರ್ ಶ್ರೀನಿವಾಸ್
ಶಾಸಕರು ,ಗುಬ್ಬಿ

ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಯ ಬ್ರಹ್ಮರಥೋತ್ಸವ

https://youtu.be/znJ2kvizMDg

Y.N.Hosakote: ವೈಎನ್ ಹೊಸಕೋಟೆ: ಹೋಬಳಿಯ ಮಾರಮ್ಮನಹಳ್ಳಿ ಗ್ರಾಮದಲ್ಲಿ ಗುರುವಾರದಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ದೇವರ ಗದ್ದುಗೆ

ಕರ್ನಾಟಕದಲ್ಲಿ ಏಕಕಾಲಕ್ಕೆ ನಾಯಕನಹಟ್ಟಿ, ವದನಕಲ್ಲು, ಮಾರಮ್ಮನಹಳ್ಳಿ ಕೊಂಡ್ಲಹಳ್ಳಿ ಮತ್ತು ಎರಡುಕೆರೆ ಗ್ರಾಮಗಳಲ್ಲಿ ಪಾಲ್ಗುಣ ಮಾಸದ ಚಿತ್ತಾ ನಕ್ಷತ್ರ ದಿನ ರಥೋತ್ಸವ ನಡೆಯುವುದು ಸಂಪ್ರದಾಯವಾಗಿದೆ.

ನಾಯಕನಹಟ್ಟಿ ಮತ್ತು ಮಾರಮ್ಮನಹಳ್ಳಿಗಳಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಮಾಧಿಗಳಿವೆ.

ಎಂದಿನಂತೆ ರಥವನ್ನು ಭಕ್ತರು ಭಕ್ತಿಭಾವದಿಂದ ಎಳೆದರು. ಬಾಳೆಹಣ್ಣು ಮತ್ತು ಮೆಣಸನ್ನು ತೂರಿ ಭಕ್ತಿ ಸಮರ್ಪಿಸಿದರು. ರಥದ ಗಾಲಿಗಳಿಗೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದರು.

ನಂದಿಕೋಲು ಕುಣಿತ ದೊಂದಿಗೆ ಪ್ರಾರಂಭವಾಗಿ ಗ್ರಾಮದ ಹೊರವಲಯದ ಹೊರ ಮಠದವರೆಗೆ ರಥ ಸಾಗಿ ಹಿಂತಿರುಗಿತು.

ಅಲ್ಪಸಂಖ್ಯಾತರಿಗೆ ಅನುದಾ‌ನ ಕಡಿತ: ಮಾಜಿ ಶಾಸಕ‌ ರಫೀಕ್ ಗರಂ

Tumkuru: ಮುಖ್ಯಮಂತ್ರಿ ಯಡಿಯೂರಪ್ಪ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿದ್ದಾರೆ ಎಂದು ಮಾಜಿ ಶಾಸಕ ರಫೀಕ್ ಅಹಮದ್ ದೂರಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಜೆಟ್ ನಲ್ಲಿ ಹೊಸ ಘೋಷಣೆ ಮಾಡಿಲ್ಲ. ಮುಖ್ಯಮಂತ್ರಿಯೇ ಹೇಳುವಂತೆ ಕೇಂದ್ರ ಕೂಡ ಅನುದಾನ ಕಡಿಮೆ ಮಾಡಿದೆ. ಹೀಗಾರಿ ರಾಜ್ಯದಲ್ಲಿ ಅಭಿವೃದ್ಧಿ ಕಾರಣಲು ಆಗುವುದಿಲ್ಲ ಎಂದರು.

ಮುಖ್ಯಮಂತ್ರಿಗಳು ಕೆಲವೊಂದು ಯೋಜನೆಗಳಿಗೆ ಅನುದಾನ ಕಡಿತ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿದ್ದ 7 ಕೆ.ಜಿ. ಅಕ್ಕಿ ಬದಲಿಗೆ 5 ಕೆಜಿಗೆ ಇಳಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಹಿಂದಿನ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ 2300 ಕೋಟಿ ರೂಪಾಯಿ ನೀಡಿತ್ತು. ಈಗ 1200 ಕೋಟಿ ರೂಪಾಯಿ ನೀಡಿ ಒಂದು ಸಾವಿರ ಕೋಟಿ ಕಡಿತಗೊಳಿಸಿದ್ದಾರೆ ಎಂದು ತಿಳಿಸಿದರು.

ಹಿಂದಿನ ಸರ್ಕಾರದ ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದರು. ಈಗ ಒಂದು ಯೋಜನೆಯೂ ಇಲ್ಲ. ಇದು ಆತಂಕ ಸೃಷ್ಟಿ ಮಾಡಿದೆ. ಅಲ್ಲಸಂಖ್ಯಾತರಿಗಾಗಿ ಸಿದ್ದರಾಮಯ್ಯ ಸರ್ಕಾರ 800 ಕೋಟಿ ರೂಪಾಯಿ ನೀಡಿತ್ತು. ಎಚ್.ಡಿ.ಕುಮಾರಸ್ವಾಮಿ ಸರ್ಕಾರ 400 ಕೋಟಿ ನೀಡಿತ್ತು. ಆದರೆ ಯಡಿಯೂರಪ್ಪ ಸರ್ಕಾರ ಕೇವಲ 200 ಕೋಟಿ ನೀಡಿ ಅಪಾರ ಪ್ರಮಾಣದ ಹಣವನ್ನು ಕಡಿತ ಮಾಡಿದೆ ಎಂದು ದೂರಿದರು.

ಪಾವಗಡ, ಕೊರಟಗೆರೆ ವಿದ್ಯಾರ್ಥಿಗಳ ಝಲಕ್ ಗೆ ಮನಸೋತ ಉತ್ತರಖಂಡ್ ಜನ…

0

ಡಾ.ಓ.ನಾಗರಾಜ್


Tumkuru: ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸುವ ಸಂಗೀತ ನೃತ್ಯಕಲೆಯು ಭಿನ್ನಭಾಷಿಗರ ನಡುವೆ ಭಾವನಾತ್ಮಕಅನು ಸಂಧಾನವನ್ನು ಮತ್ತು ಪ್ರೀತಿ ಸ್ನೇಹಗಳ ಬಾಂದವ್ಯವನ್ನು ಕ್ಷಣ ಮಾತ್ರದಲ್ಲಿ ವೃದ್ಧಿಸುವ ಕಾರ್ಯಕಾರಣ ಸಂಬಂಧದ ಪ್ರಕ್ರಿಯೆ ನಿಜಕ್ಕೂಅಚ್ಚರಿ ಮೂಡಿಸುವಂತದ್ದು.

ಪರಸ್ಟರ ಭಾವನೆಗಳ ವಿನಿಮಯಕ್ಕೆ ಭಾಷೆ ಮಾಧ್ಯಮವಾಗಿರುವುದು ಸಾಮಾನ್ಯ ಸಂಗತಿ.ಅದೇಅನ್ಯಭಾಷಿಗರ ಮಧ್ಯೆ ಸಂವಹನ ಏರ್ಪಟ್ಟಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮತ್ತು ಪ್ರತಿಕ್ರಿಯಿಸುವಾಗಿನ ಭಾಷಾತೊಡಕು ಅಷ್ಟಿಷ್ಟಲ್ಲ.

ಪರಿಚಿತವಲ್ಲದ ಭಾಷೆ ಅದನ್ನಾಡುವಜನರ ಪ್ರಾದೇಶಿಕತೆಯ ವಿಚಾರ ಹಾಗೂ ಅವರಜೀವನಾಡಿಯಾಗಿರುವ ಪರಂಪರೆಯೊಂದಿಗೆ ಮಗದೊಂದು ಭಾಷಿಕ ಹಿನ್ನೆಲೆಯುಳ್ಳವರಿಗೆ ಮುಖಾಮುಖಿಯಾಗುವಾಗ ಖಂಡಿತ ಅಲ್ಲೊಂದು ಸಣ್ಣ ಆತಂಕ ಏರ್ಪಡುತ್ತದೆ.

ಸಂವಾದಿಸಲಾಗದ ಕೀಳರಿಮೆಯೊಂದು ಸುಳಿದಾಡುತ್ತದೆಇಂತಹ ಆತಂಕ : ಕೀಳರಿಮೆಯನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಪ್ರೇರಿತವಾದ ಸಂಗೀತ ನೃತ್ಯದಂತಹ ಲಲಿತ ಕಲೆ ಸಮೂಹ ಮಾಧ್ಯಮಿಕ ಭಾಷೆಯಾಗಿ ನೆರವಿಗೆ ಬಂದು ಪರಸ್ಟರ ಬೆಸುಗೆಗೆ ಕಾರಣವಾಗಿ ಎರಕದಂತೆ ಪಾತ್ರ ನಿರ್ವಹಿಸುವುದು ನಿಜಕ್ಕೂ ಸೋಜಿಗದ ಸಂಗಂತಿ.

ಒಂದರ್ಥದಲ್ಲಿ ಸಂಗೀತ ನೃತ್ಯರೂಪಕವು ಕಲೆಯಾಗಿ ಮತ್ತು ವಿಶ್ವಾತ್ಮಕ ಪರಿಭಾಷೆಯಾಗಿ ರೂಪಾಂತರಗೊಳ್ಳುವುದು ಪವಾಡವೆ ಸರಿ. ಹಾಗಾಗಿ ಕಲೆಯಾಗಿ ಮತ್ತು ಹೃನ್ಮನಗಳ ಬೆಸೆಯುವ ವಿಶಿಷ್ಟ ಭಾಷೆಯಾಗಿ ಸಂಗೀತ ನೃತ್ಯರೂಪಕ ದ್ವಿಪಾತ್ರವನ್ನು ನಿರ್ವಹಿಸುತ್ತದೆ ಎಂದರೆ ತಪ್ಪಾಗಲಾರದು.

ಅಂತಹದೊಂದು ಗಮನ ಸೆಳೆಯುವ ವಿದ್ಯಮಾನ ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಪಾವಗಡ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ತಲಾ 25 ವಿದ್ಯಾರ್ಥಿಗಳಂತೆ 50 ಜನರುಳ್ಳ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ತಂಡವೊಂದು ಉತ್ತರ ಭಾರತದ ಉತ್ತರಖಂಡ ರಾಜ್ಯದ ಉದಾಮ್ ಸಿಂಗ್ ನಗರಜಿಲ್ಲೆಯ ಕಾಶೀಪುರದ ರಾಧೇಹರಿ ಸರ್ಕಾರಿ ಸ್ನಾತಕೋತ್ತರವಿದ್ಯಾಲಯಕ್ಕೆ ಭೇಟಿಕೊಟ್ಟಾಗಜರುಗಿತು.

ಭಾರತ ಸರ್ಕಾರದ ಎಂ.ಹೆಚ್.ಆರ್.ಡಿಯ ರಾಷ್ಟ್ರೀಯ ಉಚ್ಚ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಇತ್ತೀಚೆಗೆ ಭಾರತದಅಖಂಡತೆ ಬಗ್ಗೆ ಭಾವೈಕ್ಯತೆ ಮೂಡಿಸುವ ಸಲುವಾಗಿ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಘೋಷ ವಾಕ್ಯದೊಂದಿಗೆ ಪ್ರಾದೇಶಿಕ ಸಾಂಸ್ಕೃತಿಕ ವಿನಮಯ ಏರ್ಪಡಿಸಿ ಆ ಮೂಲಕ ಮಕ್ಕಳಲ್ಲಿ ಪರಸ್ಪರ ಸಾಂಸ್ಕೃತಿಕ ಅನುಸಂಧಾನ ಕ್ಕೆ ಅವಕಾಶ ಕಲ್ಪಿಸಿತ್ತು.

ದಿನಾಂಕ : 01.3.2020 ರಿಂದ 05.3.2020ರ ವರೆಗೆ 5 ದಿನಗಳ ಕಾಲ ನಡೆದ ಸಾಂಸ್ಕೃತಿಕ ವಿನಿಮಯ ಶಿಭಿರದಲ್ಲಿ ಉತ್ತರಖಂಡ ಮತ್ತುಕರ್ನಾಟಕ ರಾಜ್ಯಗಳ ಭೌಗೋಳಿಕತೆ, ಸಾಂಸ್ಕøತಿಕ ಪರಂಪರೆ, ಇತಿಹಾಸ ಹಾಗೂ ಭಾಷಿಕವಾದ ಮಹತ್ತರ ಅಂಶಗಳನ್ನು ಪರಿಚಯ ಮತ್ತು ವಿನಿಮಯ ಮಾಡಿಕೊಳ್ಳುವ ಸದಾವಕಾಶವನ್ನು ಒದಗಿಸಿತ್ತು.

ಕರ್ನಾಟಕವನ್ನು ಪ್ರತಿನಿಧಿಸಿದ್ದ ಈ ಎರಡು ಕಾಲೇಜಿನ ವಿದ್ಯಾರ್ಥಿಗಳು ಶಿಭಿರದಲ್ಲಿ ಕನ್ನಡನಾಡು ನುಡಿ ನೆಲ ಜಲ ಮತ್ತುಕರ್ನಾಟಕ ಸಂಸ್ಕೃತಿ ಬಗೆಗಿನ ಅಭಿಮಾನ ಪೂರಕವಾದ ಲಲಿತ ಕಲೆಗಳನ್ನು ಪ್ರದರ್ಶಿಸುವ ಸಾರ್ಥಕ ಕೆಲಸ ಮಾಡಿದರು.ಡಿ.ಎಸ್‌ ಕರ್ಕಿ ಅವರ ಹಚ್ಚೇವು ಕನ್ನಡದ ದೀಪ,ಚೆನ್ನಪ್ಪಚನ್ನೇಗೌಡ, ಚೆಲುವಯ್ಯ ಚೆಲುವೋ ತಾನಿ ತಂದಾನ, ಹುಟ್ಟಿದರೆಕನ್ನಡ ನಾಡಲ್ಲಿ ಹುಟ್ಟಬೇಕು ಮತ್ತುಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ ಮುಂತಾದ ಜನಪದ ನೃತ್ಯರೂಪಕ ಹಾಗೂ ಜನಪದ ಸೊಗಡಿನ ಕೋಲಾಟ ನೃತ್ಯ ರೂಪಕಗಳನ್ನು ಪ್ರದರ್ಶಿಸಿ ಅಲ್ಲಿನ ವಿದ್ಯಾರ್ಥಿಗಳನ್ನು ಬೆರಗುಗೊಳಿಸಿದರು.

ಹಾಗೆಯೆ, ರಾಧೇ ಹರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತರಾಖಂಡದಎರಡು ದೇಸಿ ಪರಂಪರೆಯಕುಮಾಯಿ ಮತ್ತುದಡ್‍ಕರ್ ಸಂಸ್ಕೃತಿ ಪ್ರಾತಿನಿಧಿಕ ನೃತ್ಯ ಪ್ರಸಂಗಗಳನ್ನು ಅಭಿನಯಿಸಿ ಕನ್ನಡದ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದರು.

ಒಟ್ಟಾರೆ ರೋಸಾ ಪ್ರಾಯೋಜಿತವಾದ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಹೆಸರಿನ ಶ್ರೇಷ್ಠ್ ಭಾರತ್’ ಹೆಸರಿನ ಅರ್ಥ ಪೂರ್ಣಕಾರ್ಯಕ್ರಮವು ನಮ್ಮ ಸಂವಿಧಾನದ ಪ್ರಿಯಾಂಬಲ್‍ನಲ್ಲಿ ತಿಳಿಸಿರುವ ಸ್ವಾತಂತ್ರ್ಯ ಸಮಾನತೆಜಾತ್ಯತೀತತೆ ಮತ್ತು ಬ್ರಾತೃತ್ವದ ಪರಿಕಲ್ಪನೆಯನ್ನು ಸಾಂಸ್ಕೃತಿಕ ಪ್ರಸರಣ ಪ್ರಕ್ರಿಯೆ ಮೂಲಕ ಪರಿಚಯಾತ್ಮಕ ವಾಗಿ ಕಟ್ಟಿಕೊಡುವ ಮಹತ್ತರ ಕೆಲಸವನ್ನು ಮಾಡಿದೆಎಂದು ಹೇಳಬಹುದು.

ಕೊರಟಗೆರೆ ಮತ್ತು ಪಾವಗಡ ಕಾಲೇಜುಗಳ ವಿದ್ಯಾರ್ಥಿ ತಂಡವನ್ನು ಶ್ವೇತಾ ಎಂ., ಡಾ. ಓ ನಾಗರಾಜು, ಪೂಜಾ ಮತ್ತು ರವಿಕುಮಾರ್ ಹಾಗೂ ಸಹಾಯಕರಾಗಿ ಜಯನರಸಿಂಹಮೂರ್ತಿ ರವರನ್ನು ಒಳಗೊಂಡ ಅಧ್ಯಾಪಕ ತಂಡ ಉತ್ತರ ಖಂಡಕ್ಕೆ ಕರೆದೊಯ್ದು ಮತ್ತು ಈ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರವಾಸಕ್ಕೆ ಅನುವು ಮಾಡಿಕೊಟ್ಟ ಕಾರಣಕ್ಕೆ ಕೊರಟಗೆರೆ ಕಾಲೇಜಿನ ಪ್ರಾಂಶುಪಾಲರಾದ ಪಶು ಪಾಲ ರಾದ.ಬಾಳಪ್ಪ ಹಾಗೂ ಪಾವಗಡ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಆರ್‍ರಾಧಾಕೃಷ್ಣರವರಿಗೆಎರಡುಕಾಲೇಜಿನ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು.


ಲೇಖಕರು ಕನ್ನಡ ಸಹ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊರಟಗೆರೆ

Tumkur: 563 ಊರುಗಳಿಗೆ ಬರಲಿದೆ ಕುಡಿಯುವ ನೀರಿಗೆ ಬರ!

Publicstory. in


ತುಮಕೂರು: ಜಿಲ್ಲೆಯಲ್ಲಿ ಸುಮಾರು 563 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಗುರುತಿಸಲಾಗಿದೆ. ತೀವ್ರ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಿನ ಸಮಸ್ಯೆ ಕಂಡುಬರುವ ಮೊದಲೇ ಅಧಿಕಾರಿಗಳು ಆ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಮೂಲ ಇರುವ ಬೋರ್‍ವೆಲ್‍ಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು, ಖಾಸಗಿ ವ್ಯಕ್ತಿಗಳ ಬೋರ್‍ವೆಲ್‍ಗಳಿಂದಲೂ ನೀರು ಪಡೆಯುವ ಅವಕಾಶ ಕಲ್ಪಿಸಲಾಗಿದೆ.ಅದನ್ನು ಸಹ ಬಳಸಿಕೊಂಡು ತೀವ್ರವಾಗಿ ನೀರಿನ ಸಮಸ್ಯೆ ಕಂಡಿರುವ ತುಮಕೂರು, ಕುಣಿಗಲ್ ತಾಲ್ಲೂಕುಗಳ ಗ್ರಾಮಗಳಿಗೆ ಸಿ.ಆರ್. ಫಂಡ್‍ನಿಂದ ಹಣ ಬಳಸಿಕೊಂಡು ನೀರು ಸರಬರಾಜು ಮಾಡಬೇಕೆಂದು ತಿಳಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಜಿಲ್ಲೆಯಲ್ಲಿ ಕರೋನ ವೈರಸ್‍ಗಳ ಸೋಂಕಿನ ಬಗ್ಗೆ ಅಧ್ಯಕ್ಷರು ಮಾಹಿತಿ ಪಡೆದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಆರ್. ಚಂದ್ರಿಕಾ ಅವರು ಜಿಲ್ಲೆಯಲ್ಲಿ ಕರೋನ ವೈರಸ್‍ಗಳ ಸೋಂಕು ಎಲ್ಲಿಯೂ ಕಂಡುಬಂದಿರುವುದಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ 2 ಬಾರಿ ತರಬೇತಿ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಬೆಂಗಳೂರು, ತುಮಕೂರಿಗೆ ಹತ್ತಿರ: ಕರೋನಾ ಬಗ್ಗೆ ಇರಲಿ ಎಚ್ಚರಿಕೆ: ಜಿಲ್ಲಾಧಿಕಾರಿ

Publicstory. in


Tumkuru: ಬೆಂಗಳೂರು ನಗರದಲ್ಲಿ 4 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ತುಮಕೂರು ನಗರವು ಬೆಂಗಳೂರಿಗೆ ಸಮೀಪವಿರುವುದರಿಂದ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಕೊರೋನಾ ವೈರಸ್ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದೇಶದಿಂದ ಬರುವ ಜಿಲ್ಲೆಯ ಜನರನ್ನು ಪರೀಕ್ಷಿಸಿ, ಕೊರೋನಾ ವೈರಸ್ ಲಕ್ಷಣ ಕಂಡು ಬಂದಲ್ಲಿ ಕೂಡಲೇ ಅವರನ್ನು 14 ದಿನಗಳಿಂದ 28 ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವ ಕುರಿತು ಒಂದು ಸುತ್ತು ತರಬೇತಿ ನೀಡಲಾಗಿದೆ. ತಾಲ್ಲೂಕು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದು, ಈ ವೈಧ್ಯರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯರು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಲಿದ್ದಾರೆ ಎಂದು ಡಿಹೆಚ್‍ಓ ತಿಳಿಸಿದರು.

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕೈಗಳನ್ನು ಸೋಪಲ್ಲಿ ತೊಳೆದುಕೊಳ್ಳುವಂತೆ ಎಲ್ಲಾ ಶಾಲೆಯ ಮಕ್ಕಳಿಗೆ ಅರಿವು ಮೂಡಿಸಬೇಕು ಶಾಲೆಯಲ್ಲಿ ಕೈತೊಳೆದುಕೊಳ್ಳುವ ಸೋಪನ್ನು ಕಡ್ಡಾಯವಾಗಿ ಇಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊರೋನಾ ವೈರಸ್ ಇರುವ ಬಗ್ಗೆ ಅನುಮಾನ ಬಂದ ವ್ಯಕ್ತಿಗಳ ಮಾದರಿಯನ್ನು ಸಂಗ್ರಹಿಸಿ ಹಾಸನ, ಬೆಂಗಳೂರು ಹಾಗೂ ಮೈಸೂರು ವೈಧ್ಯಕೀಯ ಕಾಲೇಜುಗಳಲ್ಲಿನ ಪ್ರಯೋಗಾಲಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಅನುಮತಿ ಪಡೆಯದೇ ರಜೆ ತೆಗೆದುಕೊಳ್ಳುವ ಆಗಿಲ್ಲ ಹಾಗೂ ದಿನದ 24 ಗಂಟೆಯೂ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಬೇಕು ಎಂದರು.

ಮಾನವೀಯತೆ ಮೆರೆದ ಆರ್.ರಾಜೇಂದ್ರ: ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹ

ತುಮಕೂರು: ಗುಬ್ಬಿ ತಾಲೂಕಿನ ತಿಪ್ಪೂರಿನ ನೊಂದ ರೈತ ಮಹಿಳೆ ಸಿದ್ದಮ್ಮನವರ ತೋಟಕ್ಕೆ ಕೃಷಿಕ್ ಭಾರತೀಯ ಕೋ ಆಪರೇಟಿವ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕರಾದ _R_ರಾಜೇಂದ್ರರವರು ಭೇಟಿ ಮಾಡಿ ಮರಗಳನ್ನು ಕಳೆದುಕೊಂಡ ನೋವಿನಲ್ಲಿ ಅನ್ನ ಆಹಾರ ತೇಜಿಸಿದ್ದ ಸಿದ್ದಮ್ಮನವರಿಗೆ ದೈರ್ಯ ತುಂಬಿ ಎಳನೀರನ್ನು ನೀಡಿದರು.

ನೊಂದ ಕುಟುಂಬಕ್ಕೆ 50,000 ಧನ ಸಹಾಯ ಮಾಡಿದರು…ಮಾನವೀಯತೆ ಮರೆತು 260 ತೆಂಗು ಮತ್ತು ಅಡಿಕೆ ಮರಗಳ ಮಾರಣ ಹೋಮ ಮಾಡಿದವರ ವಿರುದ್ಧ,ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ಧ,ಕುಮ್ಮಕ್ಕು ನೀಡಿದ ಇತರರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು.

ರಾಜ್ಯ_ಸರ್ಕಾರ ಮತ್ತು ಜಿಲ್ಲಾಡಳಿತ ಸಿದ್ದಮ್ಮನವರಿಗೆ ಸೂಕ್ತ ಆರ್ಥಿಕ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು..ಇನ್ನೂ ಎರಡು ಮೂರು ದಿನಗಳ ಒಳಗೆ ಸೂಕ್ತ ಪರಿಹಾರ ದೊರೆಯಬೇಕು, ಜೊತೆಗೆ ತಹಶೀಲ್ದಾರ, ಗ್ರಾಮ ಲೆಕ್ಕಿಗ, ಸೆಕ್ರೆಟರಿ ವಿರುದ್ಧ ಕ್ರಮ ಕೈಗೊಳ್ಳಬೇಕು ತಡವಾದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಎತ್ತಿ‌ನಹೊಳೆ: ಭೂಮಿ ಬಿಡದಿರಲು ರೈತರ ನಿರ್ಧಾರ: ಗುತ್ತಿಗೆದಾರರ ಒಪ್ಪಂದಕ್ಕೆ ವ್ಯಾಪಕ ಆಕ್ರೋಶ

0

Publicstory.in


Tipturu: ಎತ್ತಿನಹೊಳೆ ಹೋರಾಟ ಸಮಿತಿಯ ನೇತೃತ್ವದಲ್ಲಿ ತಿಪಟೂರು ತಾಲೂಕಿನ ನಾಗತಿಹಳ್ಳಿಯಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ, ತಿಪಟೂರಿಗೆ ನೀರಿನ ಹಂಚಿಕೆ, ಸಂತ್ರಸ್ತರಿಗೆ ಸೂಕ್ತ ಭೂ ಹಾಗೂ ಇನ್ನಿತರ ಪರಿಹಾರ, ಸಂತ್ರಸ್ತರಿಗೆ ನಿರಾಶ್ರಿತರ ಪ್ರಮಾಣ ಪತ್ರ ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಮಾರ್ಚ್ ತಿಂಗಳ 20ನೇ ರಿಂದ ನಾಗತಿಹಳ್ಳಿ ಗೇಟ್‌ನಿಂದ ತಿಪಟೂರು ಎಸಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ’ ಹೋಗಲು ನಿರ್ಧರಿಸಲಾಯಿತು.

ನೂರಾರು ಸಂತ್ರಸ್ತರು ಇದರಲ್ಲಿ ಭಾಗವಹಿಸುತ್ತಾರೆ. ತಿಪಟೂರು ಜೊತೆಗೆ ಬೇರೆ ತಾಲೂಕುಗಳ ಸಂತ್ರಸ್ತರೂ ಮತ್ತು ನಾಗರಿಕರು ಸಹ ಜೊತೆ ಸೇರುತ್ತಾರೆ.

ರೈತರಿಗೆ ಕನಿಷ್ಠ ಅಧಿಸೂಚನೆಯನ್ನೂ ನೀಡದೆ ಕೆಲವೇ ಸಾವಿರಗಳನ್ನು ಕೊಟ್ಟು, ತ್ರಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡು ಪರಿಹಾರದ ಕನ್ನಡಿಗಂಟು ತೋರಿಸಿ ಹೋಗುತ್ತಿದ್ದಾರೆ.

ತಿಪಟೂರಿನ ಗುಬ್ಬಿ ತಾಲೂಕು, ಹಾಸನದ ಅರಸೀಕೆರೆ, ಬೇಲೂರು ತಾಲೂಕುಗಳಲ್ಲಿ ಐದಾರು ವರ್ಷ ಕಳೆದರೂ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡವರಿಗೆ ಪರಿಹಾರದ ಹಣ ಬಂದಿಲ್ಲ. ಹಾಗಿದ್ದರೂ ಏಜೆಂಟರನ್ನು ಮುಂದಿಟ್ಟುಕೊಂಡು ತಿಪಟೂರು ಭಾಗದಲ್ಲೂ ಅದೇ ರೀತಿಯಲ್ಲಿ ತ್ರಿಪಕ್ಷೀಯ ಒಪ್ಪಂದಗಳನ್ನು ಮಾಡಲು ಏಜೆಂಟರನ್ನು ಬಿಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲವೆಂದು ಸಂತ್ರಸ್ತರು ಸಭೆಯಲ್ಲಿ ನಿರ್ಧಾರ ತೆಗೆದುಕೊಂಡರು.

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ರೈತರ ಸಭೆ ನಡೆಸಲಾಗುವುದು ಮತ್ತು ನೀರಿನ ಹಂಚಿಕೆ ಹಾಗೂ ಭೂ ಪರಿಹಾರಗಳ ಕುರಿತು ಚರ್ಚಿಸಲಾಗುವುದು ಎಂದು ಆಶ್ವಾಸನೆ ನೀಡಲಾಗಿದೆ. ಆದ್ದರಿಂದ ಈ ಸಭೆ ನಡೆಯುವುದಕ್ಕೂ ಮುಂಚೆ ಎತ್ತಿನಹೊಳೆ ಯೋಜನೆಯ ಯಾವುದೇ ಸಿಬ್ಬಂದಿಯನ್ನು ಜಮೀನಿನ ಒಳಗೆ ಬಿಡುವುದಿಲ್ಲವೆಂದು ನಿರ್ಧರಿಸಿದರು.

ಎತ್ತಿನಹೊಳೆ ಯೋಜನೆಯ ಜಾರಿಗೆ ಕೊರಟಗೆರೆಯಲ್ಲಿ ಆದಂತೆ ಪೊಲೀಸ್ ಬಲ ಬಳಸಿ ದೌರ್ಜನ್ಯದಿಂದ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ; ಜಿಲ್ಲಾಧಿಕಾರಿ, ತಹಸೀಲ್ದಾರರ ಆದೇಶದ ಹೆಸರಿನಲ್ಲಿ ಬಲವಂತವಾಗಿ ಕಾಮಗಾರಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಭೆ ನಿರ್ಧರಿಸಿತು. ಸಂತ್ರಸ್ತರಿಗೆ ಎಲ್ಲಾ ಪರಿಹಾರಗಳನ್ನು ನೀಡಿದ ನಂತರವೇ ಕಾಮಗಾರಿಯನ್ನು ಆರಂಭಿಸಬೇಕು; ಇಲ್ಲವಾದರೆ ಜಮೀನು ಬಿಡುವುದಿಲ್ಲ ಎಂದು ಸಂತ್ರಸ್ತರು ಒಕ್ಕೊರಲಿನಿಂದ ನಿರ್ಧರಿಸಿದರು. ಹಾಗೆಯೇ ಯಾವುದೇ ಸುಳ್ಳು ವಂದಗತಿಗಳಿಗೆ ರೈತರು ಕಿವಿಗೊಡಬಾರದೆಂದು ಸಭೆ ಕರೆ ನೀಡಿತು.

ಸಭೆಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯ ಅಧ್ಯಕ್ಷ ತಿಮ್ಲಾಪುರ ದೇವರಾಜು, ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಉಪಾಧ್ಯಕ್ಷ ಬಿ.ಬಿ.ಸಿದ್ದಲಿಂಗಮೂರ್ತಿ, ಸಹಕಾರ್ಯದರ್ಶಿ ಶ್ರೀಕಾಂತ್, ಜನಸ್ಪಂದನದ ಶಶಿಧರ್, ಯೋಗಾನಂದ ಸ್ವಾಮಿ, ಅರಸೀಕೆರೆಯ ಆದಿಹಳ್ಳಿ ಮಧು ಮತ್ತು ನಾಗತಿಹಳ್ಳಿ, ಮಾರಗೊಂಡನಹಳ್ಳಿ, ಬೊಮ್ಮಲಾಪುರ, ತಿಮ್ಮಲಾಪುರ ಹಾಗೂ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ತಿಪ್ಪೂರು ಘಟನೆ: ಅಧಿಕಾರಿಗಳಿಗೆ ರೈತ ಸಂಘ ಛೀಮಾರಿ

ತುಮಕೂರು: ತಿಪ್ಪೂರು ಗ್ರಾಮದ ರೈತರೊಬ್ಬರಿಗೆ ಸೇರಿದ ತೆಂಗು ಮತ್ತು ಅಡಿಕೆ ಮರಗಳನ್ನು ಅಮಾನುಷವಾಗಿ ಕತ್ತರಿಸಿರುವ ಕ್ರಮವನ್ನು ಖಂಡಿಸಿ ನೊಂದ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡುವಂತೆ ಕುಪ್ಪೂರು ಮತ್ತು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳು ಪ್ರತಿಭಟನೆ ನಡೆಸಿದವು.ಅಧಿಕಾರಿಗಳ ಕ್ರಮಕ್ಕೆ ಛೀಮಾರಿ ಹಾಕಿದವು.ಸಿದ್ದಮ್ಮ ಅವರಿಗೆ ಸೇರಿದ 50 ತೆಂಗು ಮತ್ತು 150ಕ್ಕೂ ಅಡಿಕೆ ಮರಗಳನ್ನು ಕತ್ತರಿಸಿ ಹಾಕಲು ಆದೇಶಿಸಿದ ತಹಶೀಲ್ದಾರ್ ಹಾಗೂ ಕಂದಾಯ ಮತ್ತು ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು..ತಿಪ್ಪೂರು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದ ರೈತರು, ಸಿದ್ದಮ್ಮ ಅವರಿಗೆ ಆಗಿರುವ ನಷ್ಟವನ್ನು ಕೂಡಲೇ ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ತಿಪ್ಪೂರಿನಲ್ಲಿ ಅಧಿಕಾರಿಗಳು ಮಾಡಿರುವುದು ತಪ್ಪು. ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದಿತ್ತು. ರೈತರ ತೋಟಕ್ಕೆ ನುಗ್ಗಿ ಇಂತಹ ಕೃತ್ಯ ನಡೆಸಿರುವುದು ಸರಿಯಲ್ಲ ಎಂದು ಹೇಳಿದರು.ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.