Wednesday, February 25, 2026
Google search engine
Home Blog Page 272

ಮಾವಿನಹಣ್ಣಿನ ಪ್ಯಾಕಿಂಗ್ ಹೀಗಿರಲಿ

0

ಸುಜಾತ ಎಸ್.ಎನ್


ಹಣ್ಣುಗಳ ರಾಜನೆನಿಸಿಕೊಂಡಿರುವ ಮಾವಿನಹಣ್ಣಿನ ಸ್ವಾದವನ್ನು ಸವಿಯದವರಿಲ್ಲ. ಹಣ್ಣುಗಳ ಯಶಸ್ವಿ ಮಾರಾಟ ಮತ್ತು ರುಚಿಯು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದ್ದು, ಫಸಲು ಕೊಯ್ಲಿನ ಸಮಯ, ವಿಧಾನ, ಕೊಯ್ಲೋತ್ತರ ಉಪಚಾರ, ಶ್ರೇಣೀಕರಣ, ಪ್ಯಾಕಿಂಗ್ ಮುಂತಾದ ಅಂಶಗಳನ್ನು ಹೊಂದಿರುತ್ತದೆ.

ಕೊಯ್ಲಿನ ಹಂತ
ಮಾವಿನ ವಿವಿಧ ತಳಿಗಳಿಗನುಸಾರವಾಗಿ ಹೂವು ಬಿಟ್ಟ ನಂತರ 120 ರಿಂದ 140 ದಿನಗಳಲ್ಲಿ ಫಸಲು ಕೊಯ್ಲಿಗೆ ಬರುತ್ತದೆ. ಹಣ್ಣಿನ ಭುಜಗಳು ತೊಟ್ಟಿನ ಮಟ್ಟಕ್ಕಿಂತ ಹೆಚ್ಚು ಉಬ್ಬಿ ಬೆಳೆದು ಗಾಢ ಹಸಿರಿನಿಂದ ತೆಳು ಹಸಿರು ಅಥವಾ ಹಳದಿ ಅಥವಾ ಕೆಂಪುವರ್ಣಕ್ಕೆ ತಿರುಗಲು ಪ್ರಾರಂಭಿಸಿದ ಹಂತದಲ್ಲಿ ಕೊಯ್ಲು ಮಾಡುವುದು ಉತ್ತಮ.

ಈ ಹಂತದಲ್ಲಿ ಹಣ್ಣಿನ ತೊಟ್ಟನ್ನು ಸುಲಭವಾಗಿ ಮುರಿದು ಕೊಯ್ಲು ಮಾಡಬಹುದಾಗಿರುತ್ತದೆ. ಕೆಲವು ಅರ್ಧ ಮಾಗಿದ ಹಣ್ಣುಗಳು ಮರದಿಂದ ಬೀಳುವ ಹಂತ ಕೂಡ ಕೊಯ್ಲಿಗೆ ಸರಿಯಾದ ಸಮಯವಾಗಿದ್ದು, ಹಣ್ಣು ಪೂರ್ತಿಯಾಗಿ ಮಾಗಿ ಮೆತ್ತಗಾಗುವವರೆಗೆ ಮರದ ಮೇಲೆ ಬಿಡಬಾರದು.

ಕೊಯ್ಲು ಮಾಡುವ ವಿಧಾನ
ಮಾವಿನ ಫಸಲು ಕೊಯ್ಲಿಗೆ ಸಿದ್ಧವಾದಾಗ ಕೈಗಳಿಂದ, ಬಲೆ ಮತ್ತು ಚಾಕು ಅಳವಡಿಸಿದ ಕೋಲಿನ ಸಾಧನ ಅಥವಾ ಇತರೆ ಸುಧಾರಿತ ಅಥವಾ ಯಾಂತ್ರೀಕೃತ ಉಪಕರಣಗಳಿಂದ ಕೊಯ್ಲು ಮಾಡಬಹುದು. ಮರಗಳನ್ನು ಅಲ್ಲಾಡಿಸಿ ಅಥವಾ ಕೋಲಿನಿಂದ ಬಡಿದು ನೆಲಕ್ಕೆ ಬೀಳಿಸಿ ಕೊಯ್ಲು ಮಾಡಬಾರದು. ಈ ವಿಧಾನದಿಂದ ಹಣ್ಣುಗಳಿಗೆ ಪೆಟ್ಟುತಗುಲಿ ಹಾನಿಯುಂಟಾಗುತ್ತದೆ. ಮಳೆ ಬೀಳುತ್ತಿರುವ ಸಮಯದಲ್ಲಿ ಕೊಯ್ಲು ಮಾಡಬಾರದು. ಇದರಿಂದ ಹಣ್ಣುಗಳ ಮಣ್ಣಿನ ಜೊತೆ ಬೆರೆತು ಸೂಕ್ಷ್ಮ ಜೀವಿಗಳಿಂದ ಕೊಳೆಯುವಿಕೆಯನ್ನು ತಡೆಗಟ್ಟಿದಂತಾಗುತ್ತದೆ.

ಫಸಲನ್ನು ತೀರಾ ನಸುಕಿನಲ್ಲಿ ಕೊಯ್ಲು ಮಾಡಬಾರದು. ಮಾಡಿದಲ್ಲಿ ಹಣ್ಣುಗಳ ಬಣ್ಣವು ಮಾಸುತ್ತದೆ. ಹಣ್ಣುಗಳ ತೊಟ್ಟನ್ನು ಹಣ್ಣಿಗೆ ಸಮೀಪದಲ್ಲಿ ಕತ್ತರಿಸಬಾರದು. ತೊಟ್ಟು ಸುಮಾರು ಒಂದು ಸೆಂ.ಮೀ ಉದ್ದವಾಗಿರುವಂತೆ ಕತ್ತರಿಸಿ ಕೊಯ್ಲು ಮಾಡುವುದು ಒಳಿತು. ಹಣ್ಣಿನ ಸಮೀಪದಲ್ಲಿ ತೊಟ್ಟು ಕತ್ತರಿಸಿದಾಗ ಆ ಭಾಗದಿಂದ ಹೊರ ಸೂಸುವ ರಸ ಅಥವಾ ಹಾಲು ಹಣ್ಣಿನ ಚರ್ಮವನ್ನು ಸುಟ್ಟು ಕಲೆಗಳನ್ನು ಉಂಟು ಮಾಡುತ್ತದೆ.

ಕೊಯ್ಲಿನ ನಂತರ ತೆಗೆದುಕೊಳ್ಳಬೇಕಾದ ಕ್ರಮ
ಕೊಯ್ಲು ಮಾಡಿದ ಫಸಲನ್ನು ಬಿಸಿಲಿನಲ್ಲಿ ಇಡಬಾರದು ಮರದ ನೆರಳಿನಲ್ಲಿ ಮಣ್ಣಿನ ಸಂಪರ್ಕಕ್ಕೆ ಬಾರದಂತೆ ಹುಲ್ಲಿನ ಮೇಲೆ ಸಂಗ್ರಹಿಸಬೇಕು. ಹಣ್ಣುಗಳನ್ನು ಪ್ಯಾಕಿಂಗ್ ಮಾಡುವ 20 ರಿಂದ 30 ನಿಮಿಷ ಮುಂಚಿತವಾಗಿ ಹಣ್ಣುಗಳನ್ನು ತಲೆಕೆಳಗಾಗಿ ಅಥವಾ ತೊಟ್ಟಿನ ಭಾಗ ಕೆಳಗಾಗಿರುವಂತೆ ಹಿಡಿದು ತೊಟ್ಟನ್ನು ಪೂರ್ತಿ ತೆಗೆದುಹಾಕಬೇಕು ಮತ್ತು ತೊಟ್ಟಿನ ರಸ ಅಥವಾ ಹಾಲು ಪೂರ್ತಿ ಸೋರಿ ಹೋಗುವಂತೆ ತಲೆಕೆಳಗಾಗಿ ಇಟ್ಟು ನಂತರ ಪ್ಯಾಕಿಂಗ್ ಮಾಡಬೇಕು.

ಪ್ಯಾಕಿಂಗ್ ಮಾಡುವ ಮುನ್ನ ಗಾತ್ರಕ್ಕನುಗುಣವಾಗಿ ಶ್ರೇಣೀಕರಣ ಮಾಡಿ, ಹಣ್ಣು ತಲೆಕೆಳಗಾಗಿರುವಂತೆ ಪ್ಯಾಕಿಂಗ್ ಮಾಡಬೇಕು. ಇದರಿಂದ ತೊಟ್ಟಿನ ರಸ ಅಥವಾ ಹಾಲು ಹಣ್ಣಿನ ಮೇಲೆ ಸೋರಿಕೆಯಾಗಿ ಸುಟ್ಟ ಕಲೆ ಆಗುವುದನ್ನು ತಡೆಗಟ್ಟಬಹುದು. ಪ್ಯಾಕಿಂಗ್ ಮಾಡುವ ಮುನ್ನ ಪೂರ್ತಿ ಮಾಗಿದ, ಕೊಳೆತ, ಪೆಟ್ಟುತಿಂದ, ಹಾನಿಯಾದ ಕಾಯಿಗಳನ್ನು ಆರಿಸಿ ತೆಗೆದು ಹಾಕುವುದು.

ಹಣ್ಣನ್ನು ಮಾಗಿಸಲು ಯಾವುದೇ ಕಾರಣಕ್ಕೂ ಕ್ಯಾಲ್ಸಿಯಂ ಕಾರ್ಬೈಡ್ ಬಳಸಬಾರದು. ನೈಸರ್ಗಿಕ ವಿಧಾನದಿಂದ ಅಥವಾ ಎಥಿಲಿನ್ ಬಳಕೆಯಿಂದ ಮಾತ್ರ ಹಣ್ಣನ್ನು ಮಾಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಹಾರ್ಟಿಕ್ಲಿನಿಕ್ ಅಥವಾ ಆಯಾ ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕ ಬಿ.ರಘು ತಿಳಿಸಿದ್ದಾರೆ.


ಲೇಖಕರು ವಾರ್ತಾ ಇಲಾಖೆಯಲ್ಲಿದ್ದಾರೆ, ತುಮಕೂರು

ಮಂಜುಳಮ್ಮನಿಗೆ ಅನುಪಮಾ ಸೇವಾ ಪ್ರಶಸ್ತಿ ಪುರಸ್ಕಾರ

0

Publicstory. in


ತುರುವೇಕೆರೆ: ಶಿಕ್ಷಣ ಕ್ಷೇತ್ರದಲ್ಲಿ ವಿನೂತ ಸಾಧನೆ ಮಾಡಿದ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ದೇವಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯಶಿಕ್ಷಕಿ ಮಂಜುಳಮ್ಮ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಅನುಪಮಾ ಸೇವಾಪುರಸ್ಕಾರ ನೀಡಿ ಗೌರವಿಸಲಿದೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದ ಅತ್ಯುತ್ತಮ ಸೇವೆ ಪರಿಗಣಿಸಿ ‘ಅನುಪಮ ಸೇವಾ’ ಪ್ರಶಸ್ತಿಯನ್ನು ಇವರಿಗೆ ಮಾ.8ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.

ಮಂಜುಳಮ್ಮ ಅವರು ದೇವಿಹಳ್ಳಿ ಗ್ರಾಮದ ಶಾಲೆ ಒಂದರಲ್ಲೇ ಕಳೆದ 29 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಜನಮನ್ನಣೆ ಗಳಿಸಿದ್ದಾರೆ.

ಇವರಿಗೆ ಇಬ್ಬರು ಮಕ್ಕಳಿದ್ದು ಅವರಲ್ಲಿ ಭಾಗ್ಯಜ್ಯೋತಿ ತಾಯಿಯಂತೆಯೇ ಶಿಕ್ಷಕಿಯಾಗಿದ್ದು ಮತ್ತೊಬ್ಬ ಮಗ ಶಶಿಕಿರಣ್ ರಾಜ್ಯ ರಸ್ತೆ ಸಾರಿಗೆ ಬಸ್ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಮಂಜುಳಮ್ಮ ಅವರ ಪರಿಣಾಮಕಾರಿ ಬೋಧನೆ, ತರಗತಿಭಾಗವಹಿಸುವಿಕೆ, ಮಕ್ಕಳೊಂದಿಗಿನ ಅನ್ಯೋನ್ಯತೆ, ವಿಶಿಷ್ಟ ರೀತಿ ಪಾಠೋಪಕರಣಗಳ ತಯಾರಿಕೆ, ಸಾಮಾಜಿಕ ಸೇವೆ, ಹೆಣ್ಣು ಮಕ್ಕಳ ಆರೋಗ್ಯ, ಸಂಪನ್ಮೂಲ ವ್ಯಕ್ತಿಯಾಗಿ, ಮಕ್ಕಳ ತಾಲ್ಲೂಕು ಮಟ್ಟದ ವಿಜ್ಞಾನ ಹಬ್ಬಗಳಲ್ಲಿ ತೊಡಗಿಸಿಕೊಳ್ಳುವಿಕೆ ಹೀಗೆ ವಿಭಿನ್ನ ಆಯಾಮಗಳಲ್ಲಿ ಪ್ರತಿಭಾವಂತರಾಗಿ ದುಡಿದವರು.

ಇವರ ಶಿಕ್ಷಣ ಕ್ಷೇತ್ರದ ಅವಿರತ ಸೇವೆಯನ್ನು ಮನಗಂಡು ಹತ್ತಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ.

ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ನಲಿಕಲಿ ಉತ್ತಮ ಶಾಲಾ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಳೆದ ಸಾಲಿನಲ್ಲಿ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಉತ್ತಮ ಸಾಧಕಿಯರಿಗೆ ಸನ್ಮಾನ ಹಾಗು ದೇವಿಹಳ್ಳಿ ಗ್ರಾಮಸ್ಥರಿಂದ ಅನೇಕ ಸನ್ಮಾನ ಮತ್ತು ಅಭಿನಂದನೆಗಳ ಮಹಾಪೂರವೇ ಬಂದಿವೆ.

ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯನವರು ಮಂಜುಳಮ್ಮ ಅನುಪಮಾ ಪ್ರಶಸ್ತಿ ಪಡೆದಿರುವುದು ತಾಲ್ಲೂಕಿನ ಶಿಕ್ಷಣ ಇಲಾಖೆಯ ಕೀರ್ತಿಯನ್ನು ಹೆಚ್ಚಿಸಿದ್ದು ಎಲ್ಲ ಶಿಕ್ಷಕರು ಮತ್ತು ಇಲಾಖಾ ವತಿಯಿಂದ ಆತ್ಮೀಯ ಅಭಿನಂದನೆ ಸಲ್ಲಿಸಿದರು.

ಅಪ್ಪ, ಮಗಳಿಗೆ ಒಲಿದ ಅಕಾಡೆಮಿ ಪುಸ್ತಕ ಬಹುಮಾನ

Tumkuru: ಅಪ್ಪ ಮಗಳು ಇಬ್ಬರೂ ಈ ಬಾರಿಯ ಪುಸ್ತಕ ಬಹುಮಾನಕ್ಕೆ ಭಾಜನರಾಗಿದ್ದಾರೆ.

ತುಮಕೂರಿನ ಸಾಹಿತಿಗಳಾದ ಎಸ್ ಗಂಗಾಧರಯ್ಯ ಹಾಗೂ ಅವರ ಮಗಳು ಸ್ಮಿತಾ ಮಾಕಳ್ಳಿ ಇಬ್ಬರಿಗೂ ಈ ಸಾಲಿನ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸಂದಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಪ್ರೊ.ಕೆ.ಜಿ.ನಾಗರಾಜಪ್ಪ, ಆಯ್ಕೆಯಾಗಿದ್ದಾರೆ.

ಇವರ ಜೊತೆಗೆ ಬಾಬು ಕೃಷ್ಣಮೂರ್ತಿ,, ಉಷಾ ಪಿ.ರೈ, ಪ್ರೊ.ಲಕ್ಷ್ಮಣ ತೆಲಗಾವಿ, ಡಾ.ವೀರಣ್ಣ ರಾಜೂರ ಅವರೂ ಕೂಡ 2019ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತಕುಮಾರ್ ತಿಳಿಸಿದ್ದಾರೆ.

ಗೌರವ ಪ್ರಶಸ್ತಿ 50 ಸಾವಿರ ರೂಪಾಯಿ ನಗದು, ಪ್ರಮಾಣಪತ್ರವನ್ನು ಒಳಗೊಂಡಿದೆ. ಇದೇ ವೇಳೆ ಕನ್ನಡ ಸಾಹಿತ್ಯ ಅಕಾಡೆಮಿ ನೀಡುವ ಸಾಹಿತ್ಯಶ್ರೀ ಪ್ರಶಸ್ತಿಗೆ 10 ಮಂದಿ ಕವಿಗಳು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.

ಸೃಜನಶೀಲ ಸಾಹಿತ್ಯದಲ್ಲಿ 5 ಮಂದಿ, ಸೃಜನೇತರ ಕ್ಷೇತ್ರದಿಂದ 3 ಮತ್ತು ಸಾಹಿತ್ಯ ಪರಿಚಾರಿಕೆ ವಿಭಾಗದಿಂದ 1 ಹಾಗೂ ಹೊರನಾಡು ಕನ್ನಡಿಗ ವಿಭಾಗದಿಂದ ಒಬ್ಬರಿಗೆ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಹಿತ್ಯಶ್ರೀ ಪ್ರಶಸ್ತಿಗೆ ಡಾ. ಅಮರೇಶ್ ನುಗಡೋಣಿ, ಡಾ.ವಿ.ಎಸ್.ಮಾಳಿ, ಸುಬ್ಬ ಹೊಲೆಯಾರ್, ಡಾ.ಶಾರದ ಕುಪ್ಪಂ, ಪಿ.ಶಿವಣ್ಣ, ಡಾ.ಎಂ.ಎಸ್. ವೇದಾ, ಪ್ರೊ.ಎಫ್.ಟಿ. ಹಳ್ಳಿಕೇರಿ, ಡಾ. ಮಾಧವ ಪರಾಜೆ, ವಸುಧೇಂದ್ರ ಆಯ್ಕೆಯಾಗಿದ್ದಾರೆ.

ಸಾಹಿತ್ಯಶ್ರೀ ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು, ಪ್ರಮಾಣ ಪತ್ರವನ್ನು ಒಳಗೊಂಡಿದೆ.

ತುಮಕೂರಿನಲ್ಲಿ ಮಹಿಳೆಯರ ಪ್ರತಿಭಟನೆ

Publicstory.in


ತುಮಕೂರು: ಮಹಿಳೆಯರ ಕೆಲಸವನ್ನು ಮಾನ್ಯ ಮಾಡಬೇಕು, ಸಂಬಳವಿಲ್ಲದ ಕೆಲಸವನ್ನು ಜಿಡಿಪಿ ಲೆಕ್ಕಕ್ಕೆ ಸೇರಿಸಬೇಕು, ಸಮಾನ ವೇತನ ನೀಡಬೇಕು. ಸ್ಕೀಮ್ ಕೆಲಸಗಾರರನ್ನು ಕಾರ್ಮಿಕರಾಗಿ ಪರಿಗಣಿಸುವುದು, ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಿಐಟಿಯು ಮತ್ತು ದುಡಿಯುವ ಮಹಿಳೆಯರ ಸಮನ್ವಯ ಸಮತಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತುಮಕೂರಿನ ಟೌನ್‍ಹಾಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲ ಮಾತನಾಡಿ ಸಮಾಜದ ಅರ್ಧದಷ್ಟು ಮಹಿಳೆಯರಿಗೆ ಸಮಾನ ಅವಕಾಶಗಳು ದೊರೆತಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳು ಪೂರೈಸಿದರೂ ಮಹಿಳೆಯ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ನಿಂತಿಲ್ಲ ಎಂದು ದೂರಿದರು. ಕೇಂದ್ರ ಸರ್ಕಾರ ಕಾರ್ಮಿಕ ಕಾನೂನು ಬದಲಿಸಿ 8 ಗಂಟೆಯ ಕೆಲಸ ಮತ್ತು ಮೂಲ ವೇತನದ ಹಕ್ಕುಗಳನ್ನು ನಿರಾಕರಿಸುತ್ತಿದೆ. ದುಡಿಯುವ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆ ಜೊತೆಗೆ ವೇತನ ಇಲ್ಲದೆ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದರು.

ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಭಾನು ಮಾತನಾಡಿ ನಮ್ಮ ದೇಶದಲ್ಲಿ ಸÀರ್ಕಾರವೇ ಮಹಿಳೆಯರನ್ನು ಶಿಶುಪಾಲನೆ ಇತ್ಯಾದಿ ಕೆಲಸಗಳಲ್ಲಿ ಉಪಯೋಗಿಸಿಕೊಂಡು ಶೋಷಣೆಗೆ ಒಳಪಡಿಸುತ್ತದೆ. ಅಗತ್ಯ ಸೇವೆಗಳನ್ನು ಮಾಡುತ್ತಿರುವ ಸ್ಕೀಮ್ ಕೆಲಸಗಾರರಾದ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಗುರುತಿಸುತ್ತಿಲ್ಲ. ಕನಿಷ್ಟ ಕೂಲಿ ನೀಡುತ್ತಿಲ್ಲ ಮತ್ತು ಕೆಲಸ ಸ್ಥಳದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆಗಳು ನಡೆಯುತ್ತಿವೆ ಎಂದು ದೂರಿದರು.

ಅಂಗನವಾಡಿ ನೌಕರರ ಸಂಟನೆಯ ಖಜಾಂಚಿ ಅನಸೂಯ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎ.ನರಸಿಂಹಮೂರ್ತಿ, ಸಿಐಟಿಯು ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಹಿಂಪಡೆಯಬೇಕು. ಎನ್‍ಪಿಆರ್ ಮತ್ತು ಎನ್‍ಆರ್‍ಸಿ ಅನುಷ್ಟಾನಗೊಳಿಸಬಾರದು ಎಂದು ಆಗ್ರಹಿಸಿದರು.

ಬೌದ್ಧಿಗೆ ಗುಲಾಮಗಿರಿ ಹಾಗೂ ಧರ್ಮ ಸಂಪ್ರಾದಯ ಹಾಗೂ ಪಾಳೇಗಾರಿ ಮೌಲ್ಯಗಳು ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡುವಲ್ಲಿ ತೊಡಕಾಗಿ ಪರಿಣಮಿಸುತ್ತಿದೆ. ಇದರ ವಿರುದ್ದ ದೃಢ ಹಾಗೂ ನಿರ್ಣಾಯಕ ಹೋರಾಟಕ್ಕೆ ಮುಂದಾಗಬೇಕಿದೆ. ಎಲ್ಲಾ ಇಲಾಖೆ ಮತ್ತು ರಂಗದಲ್ಲಿ ಮಹಿಳೆಯರಿಗೆ ಹೇಳಿಕೊಳ್ಳಲಾರದ ಸಂಕಟಗಳು ಹೆಚ್ಚುತ್ತಿರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಸಮ ಸಮಾಜದ ನಿರ್ಮಾಣದತ್ತ ಮುಂದಾಗುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಕರೆ ನೀಡಿದರು.

ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ಲೈಂಗಿಕ ಕಿರುಕುಳಗಳ ಬಗ್ಗೆ ವಿಚಾರಣೆ ಕಾರ್ಮಿಕರ ಸಂಘಟನೆಗಲು ಹಾಗೂ ಸರ್ಕಾರತೇರ ಸಮಿಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು. ಹಾಗೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕೆಂದು ಒತ್ತಾಯಿಸಿದರು.

ಈ ನಗರದಲ್ಲಿ ಕುಡಿಯಲು ನೀರು ಕೊಡಲ್ಲ, ಆದರೆ ರಸ್ತೆಗೆ ನೀರು ಬಿಡುತ್ತಾರೆ…!

Tumkuru: ಸ್ಮಾರ್ಟ್, ಗೀಟು ಎಂದೆಲ್ಲ ಬಹುಪರಾಕಿನ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.

ಹನಿ ನೀರು ಉಳಿಸುತ್ತೇವೆಂದು ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕೋಟ್ಯಂತರ ರೂಪಾಯಿ ಹಣ ಮೀಸಲಿಡುತ್ತಿದ್ದರೆ, ತುಮಕೂರು ಮಹಾನಗರ ಪಾಲಿಕೆ ಮಾತ್ರ ನೀರನ್ನೂ ರಸ್ತೆಯ ಚರಂಡಿಗಳಿಗೆ ಬಿಡುತ್ತಿದೆ.

ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಧೂಳೆದ್ದು ಹೋಗಿರುವ ನಗರದಲ್ಲಿ ಕುಡಿಯುವ ನೀರು ಎಲ್ಲೆಂದರಲ್ಲಿ ಪೋಲಾಗಿ ಹೋಗುತ್ತಿದೆ. ಇನ್ನೊಂದು ಕಡೆ, ಬೇಸಿಗೆಗೆ ಮುನ್ನವೇ ನಗರದ ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತೋರತೊಡಗಿದೆ.

ನಗರದ ಬಟವಾಡಿ 80 ಅಡಿ ರಸ್ತೆಯಲ್ಲಿ ಮೂರು-ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ನೀರು ಸಾಲದ ಕಾರಣ ಜನರೇ ಸ್ವಯಂ ಆಗಿ ನೀರಿನ ರೇಷನ್ ಪದ್ಧತಿ ಅನುಸರಿಸತೊಡಗಿದ್ದಾರೆ.

ಕೊರೋನಾ ವೈರಸ್ ಕಾರಣ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅಲ್ಲದೇ ಪ್ರತಿ ದಿನ ಎರಡು ಸಲ ಸ್ನಾನ, ಪ್ರತಿದಿನ ಬಟ್ಟೆಯನ್ನು ಒಗೆಯಬೇಕಾಗಿದೆ. ಆದರೆ, ನೀರಿನ ಕೊರತೆ ಕಾರಣ ಜನರು ಇದನ್ನೆಲ್ಲ ಮುಂದೂಡಬೇಕಾಗಿದೆ. ಇನ್ನೊಂದು, ಕಡೆ ನಗರದ ಕೆಲವು ಬಡಾವಣೆಗಳಲ್ಲಿ ನೀರನ್ನು ಚರಂಡಿಗೆ ಹರಿದು ಬಿಡಲಾಗುತ್ತಿದೆ. ಇದೇನು ಪಾಲಿಕೆ. ಇದೇನು ಹುಚ್ಚಾಟ ಎನ್ನುತ್ತಿದ್ದಾರೆ ಜನರು.

ತುಮಕೂರು ನಗರದಲ್ಲಿ 24X7 ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ನಲ್ಲಿಗಳಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದ್ದರೂ ಯಾರೂ ಕೇಳುವವರೇ ಇಲ್ಲದಂತಾಗಿದೆ. ನೀರು ಫೋಲಾಗುತ್ತಿದ್ದರೂ ಅದನ್ನು ನಿಲ್ಲಿಸುವ ಕೆಲಸಕ್ಕೆ ನೀರು ಪೂರೈಕೆ ಗುತ್ತಿಗೆ ಪಡೆದಿರುವವರು ಮುಂದಾಗುತ್ತಿಲ್ಲ.

ಸೋಮೇಶ್ವರಪುರಂ ನ ಎಂಟನೇ ಮುಖ್ಯರಸ್ತೆಯಲ್ಲಿ ಪೈಪ್ ಲೈನ್ ನಿಂದ ನಲ್ಲಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಕೆಲವು ನಲ್ಲಿಗಳಿಗೆ ಮೀಟರ್ ಅಳವಡಿಸಿಲ್ಲ. ನೀರು ಬಿಟ್ಟಾಗ ವ್ಯರ್ಥವಾಗಿ ರಸ್ತೆಗೆ ಹರಿಯುವುದು ಕಳೆದ ಎರಡು ವಾರಗಳಿಂದಲೂ ಮುಂದುವರಿದಿದೆ.

ಎಂಟನೆ ಕ್ರಾಸ್ ನಲ್ಲಿ ಪೈಪ್ ಲೈನ್ ಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಅದಕ್ಕೆ ಮೀಟರ್ ಅಳವಡಿಸಿಲ್ಲ. ಪೈಪ್ ನ್ನು ರಸ್ತೆಯ ಬದಿಯಲ್ಲಿ ಬಿಟ್ಟಿದ್ದು ಪ್ರತಿ ಬಾರಿ ನೀರು ಬಿಟ್ಟಾಗಲೂ ಅದು ರಸ್ತೆಗೆ ಹರಿದು ವ್ಯರ್ಥವಾಗುತ್ತಿದೆ. ಇಂತಹ ಪ್ರಕರಣಗಳು ನಗರದಲ್ಲಿ ಸಾಕಷ್ಟು ಇವೆ.

ವ್ಯರ್ಥವಾಗಿ ಹರಿದು ಹೋಗುತ್ತಿದ್ದರೂ ಮಹಾನಗರ ಪಾಲಿಕೆಯ ಸಿಬ್ಬಂದಿಯಾಗಲೀ ಅಥವಾ ಗುತ್ತಿಗೆ ಪಡೆದವರಾಗಲಿ ಅದನ್ನು ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ. ಲೀಕೇಜ್ ಪರೀಕ್ಷಿಸುವುದು ಮುಕ್ತಾಯವಾಗಿ ವಾರ ಕಳೆಯಿತು. ಈಗ ನೀರು ಬಿಡುತ್ತಿದ್ದು ಕೆಲವು ನಲ್ಲಿಗಳಿಗೆ ಮೀಟರ್ ಅಳವಡಿಸಿಲ್ಲ.

ಇಂತಹ ನಲ್ಲಿಗಳಿಂದ ನೀರು ವ್ಯರ್ಥವಾಗುತ್ತಿದೆ. ಮನೆಯ ಮಾಲಿಕರೂ ಕೂಡ ಇಲ್ಲದೆ ಇರುವುದು ಮತ್ತು ಬಾಡಿಗೆದಾರರು ಅದರ ಗೋಜಿಗೆ ಹೋಗದೇ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಇದರಿಂದ ನೀರಿನ ಕರ ವಸೂಲಿಗೆ ಸಮಸ್ಯೆಯಾಗಲಿದೆ.

ಕುಣಿಗಲ್ ಬಳಿ ಅಪಘಾತ: 13 ಮಂದಿ ಸ್ಥಳದಲ್ಲೇ ಸಾವು

ಕುಣಿಗಲ್ : ತಾಲ್ಲೂಕು ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಲದಕೆರೆ ಬಳಿ ಶುಕ್ರವಾರ 3 ಗಂಟೆ ವೇಳೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. 13 ಜನರು ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ನಾಲ್ಕು ಯುವಕರಿದ್ದ ಕಾರು ಬ್ಯಾಲದಕೆರೆ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಎದುರಿಗೆ ಬರುತ್ತಿದ್ದ ಟವೇರಾ ವಾಹನಕ್ಕೆ ಡಿಕ್ಕಿ ಆಗಿದೆ. ಟವೇರಾದಲ್ಲಿದ್ದ 9 ಹಾಗೂ ಕಾರಿನಲ್ಲಿದ್ದ 3 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಟವೇರಾದಲ್ಲಿದ್ದ ಪ್ರಯಾಣಿಕರು ತಮಿಳುನಾಡಿನ ಹೊಸೂರಿನವರಾಗಿದ್ದು ಅವರು ಸಹ ಧರ್ಮಸ್ಥಳ ಪ್ರವಾಸ ಮುಗಿಸಿ ಹೊಸೂರಿಗೆ ವಾಪಸ್ ಆಗುತ್ತಿದ್ದರು‌.

ಹೊಸೂರಿನ ಮಂಜುನಾಥ್ ತಮ್ಮ 9 ತಿಂಗಳ ಹೆಣ್ಣು ಮಗುವಿನ ಮುಡಿ ತೆಗೆಸಲು ಹಾಗೂ ನಾಮಕರಣ ಮಾಡಲು ಧರ್ಮಸ್ಥಳಕ್ಕೆ ತಮ್ಮ ಕುಟುಂಬ ಹಾಗೂ ಸಂಬಂಧಿಕರ ಜತೆ ಬಂದಿದ್ದರು.

ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಶವಗಳನ್ನು ಇಡಲಾಗಿದೆ‌. ಹೆಚ್ಚು ಜನರು ಸೇರುವ ಸಾಧ್ಯತೆ ಇದೆ ಎಂದು ಪೊಲೀಸರು ಶವಾಗಾರ ಮತ್ತು ಆಸ್ಪತ್ರೆ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.

ಮೃತರ ವಿವರ

ಮಂಜುನಾಥ್ (35), ತನುಜಾ (25), ಒಂಬತ್ತು ತಿಂಗಳ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ಸೌಂದರರಾಜ್ (48), ರಾಜೇಂದ್ರ (27), ಸರಳಾ (32), ಪ್ರಶನ್ಯಾ (14), ಮಾಲಾಶ್ರೀ (4) ಲಕ್ಷ್ಮೀಕಾಂತ್ (24), ಸಂದೀಪ (36), ಮಧು (28) ಮೃತರು.

ಶ್ವೇತಾ (32), ಹರ್ಷಿತಾ (12), ಗಂಗೋತ್ರಿ (14). ಕ ಪ್ರಕಾಶ ಗಾಯಗೊಂಡಿದ್ದಾರೆ.

ಭಾಷಾಂತರ ಬಹುಕೋಟಿ ಉದ್ಯಮ

Tumkuru: ಭಾಷಾಂತರ ಬಹುಕೋಟಿ ಉದ್ಯಮವಾಗಿ ಬೆಳೆದಿದೆ.ಯುವಜನತೆ ಭಾಷಾಂತರದಂತಹ ಹೊಸಕಾಲದ ಉದ್ಯೋಗಾವಕಾಶಗಳತ್ತ ಗಮನ ಹರಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಪಿ.ಶಿವರಾಂ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಭಾಷಾಂತರ ಕಮ್ಮಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷಾಂತರವು ಜ್ಞಾನ ಪ್ರಸಾರದ ಅನಿವಾರ್ಯ ಸಾಧನವೆನಿಸಿದೆ. ವೈದ್ಯಕೀಯ, ವಿಜ್ಞಾನ, ಕಾನೂನು, ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳ ಜ್ಞಾನ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ತಲುಪುವುದರ ಹಿಂದೆ ಭಾಷಾಂತರ ಪಾತ್ರ ಅದ್ವಿತೀಯವೆನಿಸಿದೆ ಎಂದರು.

ಭಾಷಾಂತರದಲ್ಲಿ ವಿಷಯಗ್ರಹಿಕೆ ಮುಖ್ಯ. ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತವೆ. ಶಬ್ದಾನುವಾದ ಅನೇಕ ಸಂದರ್ಭಗಳಲ್ಲಿ ಅಪಾರ್ಥಕ್ಕೆಎಡೆಮಾಡಿಕೊಡುತ್ತದೆ.ಕೆಲವೊಮ್ಮೆ ಕಾನೂನು ಶಿಕ್ಷೆಯೂ ಎದುರಾಗಬಹುದು.ಆದ್ದರಿಂದ ಸಂದರ್ಭ ಅರಿತುಕೊಂಡು ಎಚ್ಚರಿಕೆಯಿಂದ ಅರ್ಥಾನುವಾದ ಮಾಡಬೇಕಿದೆ ಎಂದರು.

ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಮಾತನಾಡಿ,ಸಮಾಜದ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ ಧನಾತ್ಮಕತೆ ತುಂಬುವ ಸಾಮಥ್ರ್ಯ ಮಾಧ್ಯಮಗಳಿಗಿದೆ.ಸಮೂಹ ಮಾಧ್ಯಮ ಆಧುನಿಕಯುಗದಲ್ಲಿ ಹೊಸ ನಾಗರಿಕತೆಯನ್ನೇ ಸೃಷ್ಟಿಸಿವೆ ಎಂದರು.

ಭಾಷೆಯ ಬಳಕೆ ಸಮಾಜದ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ.ಉತ್ತಮ ಗುಣಮಟ್ಟದ ಭಾಷೆಯನ್ನು ಬೆಳೆಸುವಲ್ಲಿ ಮಾಧ್ಯಮಗಳ ಪಾತ್ರದೊಡ್ಡದು. ಮಾಧ್ಯಮ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸಿನಲ್ಲಿ ಸುಸಜ್ಜಿತ ಮಾಧ್ಯಮಕೇಂದ್ರ ಸ್ಥಾಪಿಸುವ ಉದ್ದೇಶವಿದೆ ಎಂದರು.

ಕುಲಸಚಿವ ಪ್ರೊ.ಕೆ.ಎನ್. ಗಂಗಾನಾಯಕ್, ಹಿರಿಯ ಪತ್ರಕರ್ತ ಎಂ.ಜಯರಾಮಅಡಿಗ, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯ ಎಂ. ಎಸ್. ಚೈತ್ರ ಭಾಗವಹಿಸಿದ್ದರು.

ಹೆಬ್ಬೂರಿನಲ್ಲಿವೆ 3 ಚಿರತೆಗಳು, ಇದರಲ್ಲಿ ಯಾವುದು ನರಭಕ್ಷಕ ಚಿರತೆ

Publicstory.in


Tumkuru:

ತುಮಕೂರು ತಾಲ್ಲೂಕಿನ ಹೆಬ್ಬೂರು ಸುತ್ತಮುತ್ತಲ ಇಬ್ಬರು ಮಕ್ಕಳನ್ನು ಕೊಂದಿರುವ ನರ ಭಕ್ಷಕ ಚಿರತೆ ಹಿಡಿಯಲು ಅರಣ್ಯ ಇಲಾಖೆ ಇಟ್ಟಿರುವ ಕ್ಯಾಮರಾ ಗೆ ಬಗೆಬಗೆಯ ಪ್ರಾಣಿಗಳು ಗೋಚರಿಸಿವೆ.

ಒಟ್ಟು ಮೂರು ಚಿರತೆಗಳು ಕಂಡು ಬಂದಿದ್ದು ಇದರಲ್ಲಿ ನರಭಕ್ಷಕ ಚಿರತೆ ಯಾವುದು ಎಂಬುದೀಗ ಅರಣ್ಯ ಇಲಾಖೆಗೆ ತಲೆನೋವಾಗಿದೆ.

ನರಭಕ್ಷಕ ಚಿರತೆ ಗುಂಡಿಕ್ಕಿ ಕೊಲ್ಲಲು ಆದೇಶ ಮಾಡುವುದಾಗಿ ಅರಣ್ಯ ಸಚಿವರು ಈಗಾಗಲೇ ಹೇಳಿದ್ದಾರೆ.

ತಾಲೂಕು ಹೆಬ್ಬೂರು ಹೋಬಳಿ ವ್ಯಾಪ್ತಿಯ ಅರಣ್ಯದಲ್ಲಿ ಎರಡು ಮೂರು ಚಿರತೆಗಳು ಓಡಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೆಬ್ಬೂರು ಹೋಬಳಿಯ ವ್ಯಾಪ್ತಿಯಲ್ಲಿ ಚಿರತೆಗಳ ರಾತ್ರಿಯ ವೇಳೆ ನಿರಂತರವಾಗಿ ಆಹಾರವನ್ನು ಹುಡುಕುತ್ತ ಓಡಾಡುತ್ತಿವೆ ಎಂಬುದನ್ನು ಈ ದೃಶ್ಯಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಂಡುಕೊಂಡಿದ್ದಾರೆ.

ಚಿರತೆಗಳ ಬಗೆಬಗೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೆಲವೊಮ್ಮೆ ಇನ್ನೊಂದು ಪ್ರಾಣಿಯನ್ನು ಬೇಟೆಯಾಡುವಾಗ ದಾಳಿ ಮಾಡುತ್ತಿರುವಂತೆ ಕಂಡುಬಂದಿದ್ದರೆ, ಹಲವು ದೃಶ್ಯಗಳಲ್ಲಿ ಚಿರತೆಗಳು ಕ್ಯಾಮೆರಾಗಳತ್ತ ನೋಡಿರುವುದು ಕಂಡುಬಂದಿದೆ.

ಚಿರತೆಗಳ ಚಲನವಲನಗಳ ಮೇಲೆ ನಿಗಾ ಇಡಲು ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಹಲವು ವೈವಿಧ್ಯಮಯ ಪ್ರಾಣಿಗಳ ದೃಶ್ಯಗಳೂ ಕೂಡ ಸೆರೆಯಾಗಿರುವುದು ಕುತೂಹಲವನ್ನು ಮೂಡಿಸಿದೆ.

ಕೇವಲ ನರಭಕ್ಷಕ ಚಿರತೆಗಳ ಹುಡುಕಾಟದ ವೇಳೆ ಮುಳ್ಳು ಹಂದಿ, ನವಿಲು, ಕಾಡುಬೆಕ್ಕುಗಳು ಮತ್ತು ಮೊಲಗಳು ಓಡಾಟ ನಡೆಸಿರುವುದು ಕಂಡುಬಂದಿದೆ. ಕ್ಯಾಮೆರಾ ಜೊತೆ ಲೈಟ್ ಗಳನ್ನು ಅಳವಡಿಸಿರುವುದರಿಂದ ನಿಶಾಚರಗಳು ಆ ಬೆಳಕಿನತ್ತ ವಿಶೇಷವಾಗಿ ನೋಡಿರುವುದು ದೃಶ್ಯಗಳಿಂದ ತಿಳಿದುಬರುತ್ತದೆ.

ಕ್ಯಾಮೆರಾದಲ್ಲಿ ಚಿರತೆಗಳ ದೃಶ್ಯಗಳು ಸೆರೆಯಾಗಿದ್ದರೂ ಯಾವುದು ನರಭಕ್ಷಕ ಎಂಬುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುತಿಸುವಲ್ಲಿ ವಿಫಲವಾಗಿದೆ. ಆದರೆ ಚಿರತೆಗಳ ಇರುವನ್ನು ದೃಢಪಡಿಸಿರುವುದು ಶ್ಲಾಘನೀಯವಾಗಿದೆ.

ಚಿರತೆ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನು ಕೊಲ್ಲಲು ಸಾಧ್ಯವಿಲ್ಲ. ಜನರೇ ಸಂಜೆಯ ವೇಳೆ ಮನೆ ಒಳಗೆ ಸೇರಿಕೊಳ್ಳುವುದು ಉತ್ತಮ ಎಂದು ಸ್ಪಷ್ಟಪಡಿಸಿದ್ದಾರೆ.

ಚಿರತೆಗಳ ದಾಳಿ ನಡೆಸುವುದು ಸಾಮಾನ್ಯ. ಹೀಗಾಗಿ ಜನರೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಸಲಹೆಯನ್ನು ನೀಡಿದ್ದಾರೆ.

ಚಿರತೆಯ ದಾಳಿ ಜಾಗ್ರತೆ ವಹಿಸಿ: ತಹಶೀಲ್ದಾರ್

ಮಧುಗಿರಿ :ಕಾಡಿನಿಂದ ಊರಿಗೆ ಬಂದು ಮನುಷ್ಯ ಮತ್ತು ಪ್ರಾಣಿಗಳ ಮೇಲೆ ದಾಳಿ ನಡೆಸುವ ಚಿರತೆಯ ಕುರಿತು ಜಾಗೃತೆ ವಹಿಸುವಂತೆ ತಹಶೀಲ್ದಾರ್ ಡಾ॥ಜಿ ವಿಶ್ವನಾಥ್ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಮುಖವಾಗಿ ಚಿರತೆಗಳು ಒಂಟಿ ಮನೆ ಇರುವ ಕಡೆ ಸಂಚು ನಡೆಸಿ ದಾಳಿಗೆ ಮುಂದಾಗುವ ಸ್ವಭಾವ ಹೊಂದಿದ್ದು , ಮನೆಯವರು ತಮ್ಮ ಚಿಕ್ಕ ಮಕ್ಕಳನ್ನು ಒಂಟಿಯಾಗಿ ಬಿಡದೆ ಹಾಗೂ ಸಂಜೆಯ ನಂತರ ಹೊರಗಡೆ ಬಾರದಂತೆ ನೋಡಿಕೊಳ್ಳುವುದು ಅವಶ್ಯಕ ಎಂದರು .

ಹೊಲ ಗದ್ದೆಗಳಲ್ಲಿ ಒಂಟಿಯಾಗಿ ಕಾರ್ಯನಿರ್ವಹಿಸದೇ ಗುಂಪುಗಳಲ್ಲಿ ಕಾರ್ಯನಿರ್ವಹಿಸುವುದು, ತಮ್ಮ ಮನೆಯ ಸುತ್ತಮುತ್ತ ಪೊದೆ ಇರದಂತೆ ನೋಡಿಕೊಳ್ಳುವುದು ಮತ್ತು ತ್ಯಾಜ್ಯ ವಸ್ತುಗಳು ಇಲ್ಲದಂತೆ ನೋಡಿಕೊಳ್ಳಬೇಕು ಎಂದರು .
ನಾಯಿ ಮಾಂಸ ಚಿರತೆಗೆ ಅತ್ಯಂತ ನೆಚ್ಚಿನ ಆಹಾರವಾಗಿದ್ದು , ನಾಯಿಗಳು ಇರುವ ಕಡೆ ಹೆಚ್ಚು ನಿಗಾ ವಹಿಸಬೇಕು. ಮನುಷ್ಯರ ಮೇಲೆ ಅದು ಎರಗುವ ಸಾಧ್ಯತೆಗಳು ಇವೆ ಎಂದು ತಿಳಿಸಿದರು .

ಸಾಮಾನ್ಯವಾಗಿ ಚಿರತೆಗಳು ನಾಯಿಗಳು, ಮೇಕೆಗಳು ಕುರಿಗಳು, ಇರುವ ದೊಡ್ಡಿ ಅಥವಾ ಸ್ಥಳಗಳಲ್ಲಿ ದಾಳಿ ನಡೆಸಲು ಮುಂದಾಗುತ್ತವೆ ಆದ್ದರಿಂದ ಅಂತಹ ಸ್ಥಳಗಳಲ್ಲಿ ವಿದ್ಯುತ್ ದೀಪ ಅಳವಡಿಸುವುದರಿಂದ ಚಿರತೆಗಳು ಬೆಂಕಿ ಎಂದು ಭಾವಿಸಿ ಹೆದರಿ ಓಡಿ ಹೋಗುತ್ತವೆ ಎಂದರು .
ಪೌಲ್ಟ್ರಿ ಫಾರಂ, ಮಾಂಸದಂಗಡಿಗಳು ಮುಂತಾದವೆಡೆ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಊರಿನ ಹೊರ ವಲಯಗಳಲ್ಲಿ ಗುಂಡಿ ತೋಡಿ ಮಣ್ಣಿನಿಂದ ಮುಚ್ಚಿ ವಾಸನೆ ಬರದಂತೆ ಕ್ರಮ ವಹಿಸಿ ಎಂದು ಪುರಸಭೆಯವರಿಗೆ ತಹಶೀಲ್ದಾರ್ ಅವರು ಸೂಚಿಸಿದರು .

ಕಸಬಾ ಹೋಬಳಿಯ ಅಗಸರ ಹೊಳೆ ,ಕಮ್ಮನಕೋಟೆ ,ಆವೇ ಕಟ್ಟೆ , ದೊಡ್ಡೇರಿ ಹೋಬಳಿಯ ತಿಮ್ಮಲಾಪುರ ಮತ್ತು ,ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು , ಈ ಸ್ಥಳಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ ಎಂದರು .

ಅರಣ್ಯ ಇಲಾಖೆಯ (ರೇಂಜರ್
ಫಾರೆಸ್ಟ್ ) ಜಿ ವಾಸುದೇವಮೂರ್ತಿ ಮಾತನಾಡಿ ಮೊಲ ಕಾಡು ಹಂದಿ ಮತ್ತು ನಾಯಿ ಚಿರತೆಯು ಅತಿ ಹೆಚ್ಚು ಇಷ್ಟಪಡುವ ಆಹಾರವಾಗಿದ್ದು ,ಇವ್ಯಾವೂ ಸಿಗದೇ ಇದ್ದಾಗ ಮನುಷ್ಯನ ಮೇಲೆ ಅದರಲ್ಲೂ ಚಿಕ್ಕಮಕ್ಕಳ ಮೇಲೆ ಎರಗುತ್ತವೆ ಎಂದರು .

ನೀಲಗಿರಿ ಮರಗಳ ಮರೆಯಲ್ಲಿ ಕುಳಿತು ಹೊಂಚು ಹಾಕಿ ಬೇಟೆಯಾಡುವುದು ಚಿರತೆಗೆ ಮಾಮೂಲಾಗಿದೆ, ಹಾಗಾಗಿ ಎಲ್ಲೆಡೆ ನೀಲಗಿರಿ ಮರಗಳನ್ನು ತೆರವು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು .

ಪಿಎಸ್ಐ ಕಾಂತರಾಜು ಮಾತನಾಡಿ ಚಿರತೆಯನ್ನು ಕಂಡಾಗ ಹೆದರಿ ಓಡಿ ಹೋಗದೆ, ಅದನ್ನು ಹಿಮ್ಮೆಟ್ಟಿಸಲು ಮುಂದಾದಲ್ಲಿ ಅದು ಹೆದರಿ ಓಡಿ ಹೋಗುತ್ತದೆ ಎಂದರು .

ಡಿಡಿಪಿಐ ಕಚೇರಿಯ ಪ್ರಾಣೇಶ್ ,ಪುರಸಭೆಯ ಕಂದಾಯಾಧಿಕಾರಿ ಉಮೇಶ್ ಗೀತಾ ಉಪಸ್ಥಿತರಿದ್ದರು .

ಬೆಸ್ಕಾಂ, ಜಿಯೋಗೆ ದಂಡ ವಿಧಿಸಿದ ಮಹಾನಗರ ಪಾಲಿಕೆ ಆಯುಕ್ತ

Public story.in


ತುಮಕೂರು: ತುಮಕೂರು ನಗರದಲ್ಲಿ ರಸ್ತೆ ಅಗೆದು ಕೈಗೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ಪುನರ್ ಸ್ಥಾಪಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಂಪನಿಗಳಿಗೆ ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ದಂಡ ವಿಧಿಸಿದ್ದಾರೆ.

ರಸ್ತೆಯಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ತುರ್ತಾಗಿ ಯಥಾಸ್ಥಿತಿಯಲ್ಲಿ ನಿರ್ವಹಿಸಲು ವಿವಿಧ ಇಲಾಖೆಗಳಿಗೆ ಮತ್ತು ಏಜೆನ್ಸಿಗಳಿಗೆ ಸೂಚಿಸಲಾಗಿದ್ದರೂ ಸೂಕ್ರ ಕ್ರಮ ಕೈಗೊಂಡಿಲ್ಲ ಎಂದು ಬೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಪರ್ಮಪಕವಾಗಿ ಕಾಮಗಾರಿಯನ್ನು ಪೂರೈಸದೆ ಇರುವ ಹಿನ್ನೆಲೆಯಲ್ಲಿ ಕೆಯುಡಬ್ಲ್ಯೂಎಸ್ ಅಂಡ್ ಡಿಬಿ ಗೆ 60 ಲಕ್ಷ, ಬೆಸ್ಕಾಂ ಇಲಾಖೆಗೆ 10 ಲಕ್ಷ, ಮೆಘಾ ಗ್ಯಾಸ್ ಕಂಪನಿಗೆ 20 ಲಕ್ಷ ಮತ್ತು ರಿಲಯನ್ಸ್ ಜಿಯೋ ಕಂಪನಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಅಗೆದಿರುವ ರಸ್ತೆಗಳನ್ನು ಪುನರ್ ಸ್ಥಾಪನೆ ಕನಿಷ್ಠಾವಧಿಯಲ್ಲಿ ಸಮರ್ಪಕವಾಗಿ ನಿರ್ವಹಿಸಿ ಸಾರ್ವಜನಿಕರ ಅನುಕೂಲ ಮಾಡಲು ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.