Wednesday, February 25, 2026
Google search engine
Home Blog Page 276

ಮಂಚೇಗೌಡಗೆ ‘ಗೌಡಾ’

0

Tumkur: ಸಿ.ಎನ್. ಮಂಚೇಗೌಡ ಕುಣಿಗಲ್ ತಾಲೂಕಿನ ಚಿಕ್ಕಮಾವತ್ತೂರು ಗ್ರಾಮದವರು. ತಾಲೂಕಿನ ಜನರಿಗೆ ಅಷ್ಟೊಂದು ಪರಿಚಿತರಲ್ಲ. ಉದ್ಯೋಗದ ಕಾರಣಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋದವರು. ಹಾಗಾಗಿಯೇ ಮಂಚೇಗೌಡ ಹೆಸರು ತುಮಕೂರು ಜಿಲ್ಲೆಯಲ್ಲಿ ಚಾಲ್ತಿಯಲ್ಲಿಲ್ಲ.

ಹಾಸನ, ಮಂಡ್ಯ ಮತ್ತು ಮೈಸೂರಿನಲ್ಲಿ ಹಾಲು ಒಕ್ಕೂಟದಲ್ಲಿ ವ್ಯವಸ್ಥಾಪಕ ನಿರ್ದೇಶಕಾಗಿ ಕೆಲಸ ನಿರ್ವಹಿಸಿದವರು. ನಿವೃತ್ತಿಯ ನಂತರ ಬೆಂಗಳೂರಿನ ರಾರಾಜಿನಗರದಲ್ಲಿರುವ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೂ ಸಹಾಯ ಮಾಡಿದ್ದಾರೆ.

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಚಿಕ್ಕಮಾವತ್ತೂರು ಗ್ರಾಮದ ಒಂದು ರೈತ ಕುಟುಂಬದವರದ ನಂಜೆಗೌಡ ನಂಜಮ್ಮ ದಂಪತಿಯ ಮಗನಾಗಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢಶಾಲಾ ವ್ಯಾಸಂಗವನ್ನು ನಮ್ಮ ಗ್ರಾಮೀಣ ಪರಿಸರದಲ್ಲಿಯೇ ನಡೆಸಿ ಉನ್ನತ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಂದುವರೆಸಿದರು.

ಬಿ.ಎಸ್ಸಿ ಪದವಿ ಪಡೆದ ನಂತರ ಪಂಜಾಬ್ ನ ನ್ಯಾಷನಲ್ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್ ನಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಸ್ನಾತಕೋತ್ತರ ಪದವಿ ಪಡೆದರು. ಅಲ್ಲದೆ ಡೈರಿಟೆಕ್ ಸ್ನಾತಕೋತ್ತರ ಪದವಿಯನ್ನು ಕಾಮನ್ ವೆಲ್ತ್ ಕಾಲೇಜ್, Australia British Board, London and management, USA ನಲ್ಲಿ ಪೂರೈಸಿದರು.

Britain, America, Germany, Denmark, ದೇಶಗಳಲ್ಲಿ ಉನ್ನತ ವ್ಯಾಸಂಗದ ಜೊತೆಯಲ್ಲಿ ಸಂಶೋಧನೆಯನ್ನು ನಡೆಸಿದರು.

ಮಂಚೇಗೌಡರು ಸುಮಾರು 40 ವರ್ಷಗಳ ವೃತ್ತಿ ಜೀವನದಲ್ಲಿ ಬೆಂಗಳೂರು ಡೈರಿ, ಯಲಹಂಕ ಮದರ್ ಡೇರಿಯ ಕಾರ್ಯನಿರ್ವಾಹಕರಾಗಿ ಸುದೀರ್ಘ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ಹಾಗೂ 1974 ರ World Bank Appraisal Team ಮೇಲ್ವಿಚಾರಕರಾಗಿದ್ದರು. ಕರ್ನಾಟಕ ಸರ್ಕಾರ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಪ್ರಶಂಸನೀಯ ಸೇವೆಯನ್ನು ಸಲ್ಲಿಸಿದಾರೆ.

ಕರ್ನಾಟಕ ಡೈರಿ ಅಭಿವೃದ್ಧಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ನಡೆಸಿ ಗ್ರಾಹಕರು ಮತ್ತು ರೈತರಿಗೆ ಅಪಾರ ಕೊಡುಗೆ ನೀಡಿದ್ದಾರೆ. ‘ನಂದಿನಿ’ KMF ಬ್ರಾಂಡ್ ನ ಮಾರುಕಟ್ಟೆಗೆ ಪರಿಚಯಿಸಿ ಅನುಷ್ಠಾನಗೊಳಿಸಿದ ರೂವಾರಿಯಾಗಿದ್ದಾರೆ. ಕನ್ನಡ ನಾಡಿನ ಗ್ರಾಮೀಣ ಪ್ರದೇಶದ ಸ್ಥಳೀಯ ತಳಿ ಅಭಿವೃದ್ಧಿಗಾಗಿ ‘ಮುರ್ರಾ’ ಎಮ್ಮೆ ತಳಿಯನ್ನು ಪ್ರಪ್ರಥಮವಾಗಿ ಪಂಜಾಬಿನಿಂದ ತರಿಸಿ ಡೈರಿ ಉತ್ಪಾದನೆಯ ಹೆಚ್ಚಳವನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

Australia, Germany, I land and Denmark ದೇಶಗಳಲ್ಲಿ ಸಂಚರಿಸಿ ಕನ್ನಡ ನೆಲದ ಹವಾಗುಣಕ್ಕೆ ಹೊಂದಿಕೊಳ್ಳವ ವಿಶೇಷ ಪಶು ತಳಿಗಳನ್ನು ತಂದು, ‘ಕ್ಷೀರಕ್ರಾಂತಿ’ ಗೆ ಮೂಲ ಕಾರಣಕರ್ತರಾಗಿದ್ದಾರೆ.

ನಿಸ್ವಾರ್ಥ ಸೇವೆ ಮತ್ತು ಗಣನೀಯ ಸಾಧನೆಗಾಗಿ ಭಾರತ ‘ರಾಷ್ಟ್ರೀಯ ಉತ್ಪಾದನಾ ಪ್ರಶಸ್ತಿ ‘ ನೀಡಿ ಗೌರವಿಸಿದೆ ಹಾಗೂ ಬೆಂಗಳೂರು ಡೈರಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾಗ ಭಾರತ ಅತ್ಯುತ್ತಮ ಡೈರಿ ಎಂದು ಪರಿಗಣಿಸಿ ‘ರಾಷ್ಟ್ರೀಯ ಪ್ರಶಸ್ತಿ ‘ ನೀಡಿ ಪುರಸ್ಕರಿಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆ ‘ಕೆಂಪೇಗೌಡ ಪ್ರಶಸ್ತಿ ‘ ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಇವರ ಅವಿಸ್ಮರಣೀಯ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿ, ಗೌರವ, ಸನ್ಮಾನಗಳನ್ನು ಅರ್ಪಿಸಿವೆ.

ಇವರ ಅಂತರರಾಷ್ಟ್ರೀಯ ಸೇವೆಯನ್ನು ಪರಿಗಣಿಸಿ, ವಿಶ್ವ ಬ್ಯಾಂಕ್ ಇವರನ್ನು ಯೆಮೆನ್ ಗಣರಾಜ್ಯದ ಡೈರಿ ಅಭಿವೃದ್ಧಿ ಸಲಹೆಗಾರರನ್ನಾಗಿ ನೇಮಕ ಮಾಡಿದ್ದರು. ಭಾರತ ಸರ್ಕಾರ ಇವರ ಸೇವೆಯನ್ನು ಪರಿಗಣಿಸಿ ನವದೆಹಲಿ ಯಲ್ಲಿ ‘ಮೆಂಬರ್ ನ್ಯಾಷನಲ್ ಡೈರಿ ಅಡ್ವೈಸರಿ ಬೋರ್ಡ್ ‘ ಸದಸ್ಯರನ್ನಾಗಿ ನೇಮಕ ಮಾಡಿದ್ದರು.

ಈ ಎಲ್ಲಾ ಕಾರ್ಯಕ್ಷಮತೆಗೆ ಪೂರಕವಾಗಿ ಇವರು ಹಲವಾರು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದು, ಇವುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಖ್ಯಾತ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಜನತಾ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾಗಿ ತಮ್ಮ ಅಪಾರ ಅನುಭವವನ್ನು ಶೈಕ್ಷಣಿಕ ಪ್ರಗತಿಗೆ ಮೀಸಲಿಟ್ಟು ನಿಸ್ವಾರ್ಥದಿಂದಲೂ ದಕ್ಷತೆಯಿಂದಲೂ ಕಾರ್ಯನಿರ್ವಾಹಿಸುತ್ತಿದ್ದಾರೆ.

ಇವರು ನಮ್ಮ ತುಮಕೂರಿನ ಮುಖ್ಯ ಕಳಸ ಎಂದರೆ ತಪ್ಪಾಗಲಾರದು

ತುಮಕೂರು ವಿ.ವಿ.ಘಟಿಕೋತ್ಸವ

Publicstory. in


Tumkur: ತುಮಕೂರು ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವ ಫೆಬ್ರವರಿ 25ರಂದು ಬೆಳಗ್ಗೆ 11 ಗಂಟೆಗೆ ವಿವಿಯ ಡಾ.ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ವೈ.ಎನ್.ಸಿದ್ದಗೌಡ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1587 ಸ್ನಾತಕೋತ್ತರ ವಿದ್ಯಾರ್ಥಿಗಳು, 6257 ಸ್ನಾತಕ ವಿದ್ಯಾರ್ಥಿಗಳು ಸೇರಿ 7800 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.

ಘಟಿಕೋತ್ಸವದಲ್ಲಿ 94 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಕುಣಿಗಲ್ ತಾಲೂಕಿನ ಮಂಚೇಗೌಡ ಎಂಬುವರು, ಶಿಕ್ಷಣ, ಸಮಾಜಸೇವೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಇವರು ಸೇರಿದಂತೆ ಮೂವರಿಗೆ ಡಿಲಿಟ್ ಪದವಿ ನೀಡಲಾಗುವುದು ಎಂದರು.

ಇದೇ ವೇಳೆ ಮೂರು ನಗದು ಬಹುಮಾನಗಳನ್ನು ನೀಡಲು ಉದ್ದೇಸಿಸಿದೆ. ಸ್ನಾತಕ ಪದವಿಯಲ್ಲಿ ಪ್ರತಿಯೊಂದು ವಿಭಾಗದ 10 ಮಂದಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಗುವುದು, ಸ್ನಾತಕೋತ್ತರ ಪದವಿಯಲ್ಲಿ ಪ್ರತಿವಿಭಾಗದ ಐದು ಮಂದಿ ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಫೆ.25ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಅಧ್ಯಕ್ಷತೆ ವಹಿಸುವರು. ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ ಮಾಣಿಕ್ ರಾವ್ ಎಂ ಸಲುಂಬೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಘಟಿಕೋತ್ಸವದ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಭಾಗವಹಿಸುವರು ಎಂದು ಸಿದ್ದೇಗೌಡ ತಿಳಿಸಿದರು.

ಘಟಿಕೋತ್ಸವದಲ್ಲಿ 94 ಮಂದಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು. ಕುಣಿಗಲ್ ತಾಲೂಕಿನ ಮಂಚೇಗೌಡ ಎಂಬುವರು, ಶಿಕ್ಷಣ, ಸಮಾಜಸೇವೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಇವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ಮೂವರಿಗೆ ಡಿಲಿಟ್ ಪದವಿ ನೀಡಲಾಗುವುದು ಎಂದರು.

ಗೌರವ ಡಾಕ್ಟರೇಟ್ ಗಾಗಿ 9 ಅರ್ಜಿಗಳು ಬಂದಿದ್ದವು. ಅವುಗಳ ಪೈಕಿ ಮಂಚೇಗೌಡ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ತುಮಕೂರು ಜಿಲ್ಲೆಗೆ ಕೊನೆಗೂ ಬಂದವು ಆನೆಗಳು.

0

K.E.ಸಿದ್ದಯ್ಯ


ತುಮಕೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ತಡವಾಗಿ ಕಾಡಾನೆಗಳು ಬಂದಿವೆ. ಆಹಾರ ಹುಡುಕಿಕೊಂಡು ತುಮಕೂರು ಜಿಲ್ಲೆಯ ಕೆಲವು ಪ್ರದೇಶಗಳಿಗೆ ಬಂದು ಜಲಕ್ರೀಡೆಯಾಡಿ ಹೊಟ್ಟೆತುಂಬ ಮೇಯ್ದು ಹೋಗುವುದು ಮಾಮೂಲಿ.

ಪ್ರತಿ ಬಾರಿಯೂ ಜನವರಿ ಮೊದಲ ವಾರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಆನೆಗಳುಸಾಕಷ್ಟು ಹಾನಿ ಮಾಡಿ ಹೋಗು್ತ್ತಿದ್ದವು. ಬತ್ತದ ಗದ್ದೆ, ಬಾಳೆ ತೋಟ, ಅಡಿಕೆ ಮತ್ತು ತೆಂಗಿನ ಮರಗಳು ಆನೆಗಳಿಗೆ ಆಹಾರವಾಗುತ್ತಿದ್ದವು. ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದರು. ಪರಿಹಾರ ಮಾತ್ರ ಕಡಿಮೆ.

ಈ ಬಾರಿ ಫೆಬ್ರವರಿಯ ಕೊನೆಯ ವಾರದಲ್ಲಿ ಬಂದಿವೆ. ಗುಬ್ಬಿ ತಾಲೂಕಿನ ಡಿ.ರಾಮಪುರದ ತೋಟಗಳಿಗೆ ನುಗ್ಗಿ ಬೆಳೆ ಹಾಳುಮಾಡತೊಡಗಿವೆ. ಈ ಬಾರಿ ಸಾಕಷ್ಟು ಮಳೆ ಬಂದರೂ ಕೆರೆಗಳಲ್ಲಿ ನೀರು ನಿಂತಿಲ್ಲ. ಹೀಗಾಗಿ ಆನೆಗಳು ಸಾಕಷ್ಟು ಹಾನಿಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.

ಆನೆಗಳ ಹಿಂಡು ಬೆಳೆದ ಹೊಲಗಳಿಗೆ ನುಗ್ಗಿದರೆ ಇಡೀ ಬೆಳೆಯನ್ನೇ ನಾಶಪಡಿಸುತ್ತವೆ. ಕಾಲಿಗೆ ಸಿಕ್ಕ ಮರಗಿಡ-ಬೆಳೆಯನ್ನು ನಾಸಪಡಿಸುತ್ತ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಗಳಿಗೆ ಸಂಚರಿಸುವುದು ಅವುಗಳ ಗುಣ.

ಅರಣ್ಯ ಇಲಾಖೆ ಸಿಬ್ಬಂದಿಗೆ ತುಮಕೂರು ಜಿಲ್ಲೆಗೆ ಆನೆಗಳ ಹಿಂಡು ಬಂದಿತೆಂದರೆ ನಿದ್ದೆಯೂ ಇಲ್ಲವಾಗುತ್ತದೆ. ಜನರನ್ನು ನಿಯಂತ್ರಿಸಬೇಕು. ಪಟಾಕಿ ಹೊಡೆಯದಂತೆ ನೋಡಿಕೊಳ್ಳಬೇಕು. ಆನೆಗಳ ಯಾವ ದಿಕ್ಕಿನತ್ತ ಹೋಗುತ್ತವೆ ಎಂಬ ಬಗ್ಗೆ ನಿಗಾವಹಿಸಬೇಕು. ಗ್ರಾಮಗಳ ಜನರನ್ನು ರಕ್ಷಿಸಬೇಕು – ಹೀಗೆ ಏನೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಆನೆಗಳ ದಾಳಿ ಮಾತ್ರ ನಿಲ್ಲುವುದಿಲ್ಲ.

ಆನೆಗಳ ದಾಳಿಗೆ ಇದುವರೆಗೆ ಐದಾರು ಮಂದಿ ಸಾವನ್ನಪ್ಪಿದ್ದಾರೆ. ರಾತ್ರಿ ತೋಟತುಡಿಕೆಗಳಿಗೆ, ಗದ್ದೆಗೆ ನೀರು ಹರಿಸುವ ಸಂದರ್ಭದಲ್ಲಿ ಒಬ್ಬೊಬ್ಬರೇ ಇರುತ್ತಾರೆ. ಕತ್ತಲಲ್ಲಿ ಆನೆಗಳು ಬರುವುದು ಕೂಡ ಕಾಣವುದಿಲ್ಲ. ಹೀಗಾಗಿ ರೈತರು ಆನೆಗಳ ದಾಳಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

ಬನ್ನೇರುಘಟ್ಟ ಮತ್ತು ಸಾವನದುರ್ಗದ ಅರಣ್ಯದಿಂದ ಪ್ರತಿವರ್ಷ ವಾಕ್ ದಿ ಡೆಸ್ಟ್ರಾಯ್ ಮಾಡಿಕೊಂಡು ಜಾಲಿ ರೈಡ್ ಮಾಡುವ ಆನೆಗಳು ನೀರು ಇರುವ ಕೆರೆಗಳನ್ನು ಹುಡುಕಿ ಬಿಸಿಲಲ್ಲಿ ಹಲವು ಗಂಟೆಗಳ ಕಾಲ ಜಲಕ್ರೀಡೆಯಲ್ಲಿ ಮುಳುಗಿರುತ್ತವೆ. ಅವುಗಳನ್ನು ಕೆರೆಯ ನೀರಿನಿಂದ ಹೊರಗೆ ಹೊರಡಿಸಬೇಕೆಂದರೆ ಅತ್ಯಂತ ಪ್ರಯಾಸದ ಕೆಲಸ. ಅರಣ್ಯ ಇಲಾಖೆ ಸಿಬ್ಬಂದಿ ಕೆರೆಯ ಸುತ್ತಲೂ ಎಚ್ಚರದಿಂದ ಇರಬೇಕು.

ಆನೆಗಳನ್ನು ನೋಡಲು ಸುತ್ತಮುತ್ತಲ ಗ್ರಾಮದ ಜನರು ನುಗ್ಗಿ ಬರುತ್ತಾರೆ. ಆನೆಗಳನ್ನು ಕಂಡು ಶಿಳ್ಳೆ ಹೊಡಯುತ್ತಾರೆ. ಕೇಕೆ ಹಾಕುತ್ತಾರೆ. ಪಟಾಕಿ ಸಿಡಿಸುತ್ತಾರೆ. ಆನೆಗಳಿರುವತ್ತ ಕಲ್ಲು ತೂರುತ್ತಾರೆ. ಆನೆಗಳನ್ನು ಹತ್ತಿರದಿಂದ ನೋಡಬೇಕೆಂಬ ಧಾವಂತಕ್ಕಾಗಿ ಅವುಗಳಿರುವ ಬಳಿಗೇ ಹೋಗುತ್ತಾರೆ. ಜನರನ್ನು ನಿಯಂತ್ರಿಸುವುದು ಕಷ್ಟದ ಕೆಲಸ.

ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಮನವಿ ಮಾಡಿದರು ಇದು ನಿಲ್ಲುವುದಿಲ್ಲ. ಅವರ ಮಾತನ್ನು ಕೇಳುವವರೇ ಇಲ್ಲ. ಬಿಳಿಯ ಬಟ್ಟೆಯನ್ನು ಕಂಡರೆ ಆನೆಗಳು ಕೆರಳುತ್ತವೆ. ಇಂಥವರಿಗೂ ಮನವರಿಕೆ ಮಾಡಿಕೊಡಬೇಕು ಅರಣ್ಯ ಇಲಾಖೆ ಸಿಬ್ಬಂದಿ.

ಕಿವಿಗೊಡುವವರು ಯಾರು?


ಆನೆಗಳ ಕಾರಿಡಾರ್ ನಲ್ಲಿ ವರ್ಷದ ಮೂರು ತಿಂಗಳು ಆನೆಗಳು ಸಂಚರಿಸುತ್ತವೆ. ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಪಟಾಕಿ ಖರೀದಿ ಇತರೆ ವಸ್ತುಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುವ ಲೆಕ್ಕ ತೋರಿಸುತ್ತದೆ. ಆದರೆ ಶಾಶ್ವತವಾಗಿ ಆನೆಗಳು ಬೆಳೆ ಹಾಳು ಮಾಡದಂತೆ ನಿಯಂತ್ರಿಸಲು ಸಾಧ್ಯವಾಗಿಲ್ಲ.

ಸ್ವಾತಂತ್ರ್ಯಕ್ಕೆ ಅಪಾಯದಲ್ಲಿದೆ – ಅರವಿಂದ ದಳವಾಯಿ

Publicstory.in


Tumkuru: ಆಳುವ ಸರ್ಕಾರಗಳು ಜಾರಿಗೊಳಿಸುತ್ತಿರುವ ಕಾನೂನುಗಳಿಂದ ಸ್ವಾತಂತ್ರ್ಯ ಅಪಾಯದಲ್ಲಿದೆ. ಧರ್ಮಾಧಾರಿತ, ರಾಜ್ಯ, ರಾಷ್ಟ್ರ ಮತ್ತು ಸಮಾಜ ನಿರ್ಮಾಣ ಮಾಡುವ ಇಲ್ಲವೇ ಹಿಂದೂರಾಷ್ಟ್ರ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದು ಗಾಂಧೀ ವಿಚಾರಧಾರೆಗಳಿಗೆ ವಿರುದ್ದವಾಗಿದೆ ಎಂದು ಗಾಂಧೀ ನೂರೈವತ್ತು, ಸಮಾಜವಾದಿ ಎಂಭತ್ತೈದು ವಿಚಾರ ಯಾತ್ರೆಯ ರಾಜ್ಯ ಸಂಚಾಲಕ ಅರವಿಂದ ದಳವಾಯಿ ಹೇಳಿದರು.

ಸರ್ವೋದಯ ಮಂಡಲ, ಬಾಪೂಜಿ ಶಿಕ್ಷಣ ಸಂಸ್ಥೆ, ಸಿಐಟಿಯು, ಸಮತಾ ಬಳಗ, ಸಹಮತ್ ಟ್ರಸ್ಟ್,
ಜನಚಳವಳಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಇದೊಂದು ವೈಚಾರಿಕ ಯಾತ್ರೆ, ಶಾಂತಿ, ಅಹಿಂಸೆ ಸತ್ಯದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ನಾಥೂರಾಮ್ ಗೋಡ್ಸೆ ಗಾಂಧಿ ಹತ್ಯೆ ಮಾಡಿದ ಸ್ಮೃತಿ ಸ್ಥಳದಿಂದ ಹೊರಟ ಈ ವಿಚಾರ ಯಾತ್ರೆ ತಮಿಳುನಾಡಿ ನಲ್ಲಿ ಅಂತ್ಯಗೊಳ್ಳಲಿದೆ ಎಂದರು.

ದೇಶದಲ್ಲಿ ಆತಂಕದ ಸ್ಥಿತಿ ಇದೆ. ಪೊಲೀಸ್, ಅಧಿಕಾರಿಗಳು ಮತ್ತು ಸರ್ಕಾರ ಏಕವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ನಿರ್ಬಂಧಿಸುವ ಕೆಲಸ ಮಾಡುತ್ತಿವೆ. ಕವಿಗಳು, ಬರಹಗಾರರು ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ಘೋಷಣೆಯಾಗಿಲ್ಲ ಅಷ್ಟೇ. ಪದವಿಗಳ ಮೇಲೆ ಪದವಿ ಪಡೆದವರು ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ. ಸರ್ಕಾರ ಇರದ ಬಗ್ಗೆ ಆಲೋಚಿಸುವುದು ಬಿಟ್ಟಿದೆ. ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಭೇಧಭಾವ ಮಾಡುತ್ತಿದೆ ಎಂದು ಟೀಕಿಸಿದರು.

ಬ್ಯಾರಿಸ್ಟರ್ ಜಿನ್ನಾ, ಆರ್.ಎಸ್.ಎಸ್. ಗೋಳ್ವಾಲ್ಕರ್, ಸಾವರ್ಕರ್, ಹೆಡಗೆವಾರ್ ದ್ವಿರಾಷ್ಟ್ರ ಸಿದ್ದಾಂತದ ಮೂಲಕ ದೇಶದ ವಿಭಜನೆಗೆ ಕಾರಣರಾದರು. ಗಾಂಧಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಧರ್ಮಾಧಾರಿತ ಸಿದ್ದಾಂತವನ್ನು ಗಾಂಧೀಜಿ ಒಪ್ಪಲಿಲ್ಲ. ಆಧರೆ ಕಾಂಗ್ರೆಸ್ ಮತ್ತು ಗಾಂಧೀ ದೇಶದ ವಿಭಜನೆಗೆ ಕಾರಣ ೆಎಂದು ಸುಳ್ಳು ಹರಡುವ ಕೆಲಸ ನಡೆಯುತ್ತಿದೆ. ಇದನ್ನು ಯುವಕರು ಅರ್ಥಮಾಡಿಕೊಳ್ಳಬೇಕು ಎಂದರು.

ಹಿಂದೂ, ಸಿಖ್, ಮುಸ್ಲೀಂ, ಕ್ರಿಶ್ಚಿಯನ್, ಪಾರ್ಸಿ ಹೀಗೆ ಎಲ್ಲ ಧರ್ಮೀಯರು ಸೌಹಾರ್ದತೆಯಿಮದ ಬದುಕಬೇಕೆಂದು ಗಾಂಧಿ ಬಯಸಿದ್ದರು. ಆದರೆ ಇಂದಿನ ಕೇಂದ್ರ ಸರ್ಕಾರ ಧರ್ಮದ ಆಧಾರ ಮೇಲೆ ಧರ್ಮಗಳ ನಡುವಿನ ಸೌಹಾರ್ದ ನೆಲೆಗಳನ್ನು ವಿಭಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಯಾತ್ರಿಗಳಾದ ಅರುಣ್ ಕುಮಾರ್, ಸುನಿಲ್, ಆರಾಧನ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಗಾಂಧಿವಾದಿ ಎಂ.ಬಸವಯ್ಯ, ಪುಟ್ಟಕಾಮಣ್ಣ, ಬಿ.ಆರ್. ಪಾಠೀಲ್ ಮೊದಲಾಧವರು ಉಪಸ್ಥಿತರಿದ್ದರು.

CAA : cpimನ ಬೇಬಿ ತುಮಕೂರಿನಲ್ಲಿ ಕಿಡಿ

Tumkur: ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಎನ್.ಪಿ.ಆರ್ ನಂತಹ ಮಹತ್ವ ಮಸೂದೆಗಳನ್ನು ವ್ಯವಹಾರಗಳ ಸಲಹಾ ಸಮಿತಿ ಮುಂದೆ ಚರ್ಚೆಗಿಡದೆ ನೇರವಾಗಿ ಸಂಸತ್ತಿನಲ್ಲಿ ಅಧಿವೇಶನದಲ್ಲಿ ಮಂಡಿಸಿ ಕಾಯ್ದೆಗಳನ್ನಾಗಿ ಜಾರಿಗೊಳಿಸಿರುವುದು ಅಸಂವಿಧಾನಿಕ ಎಂದು ಸಿಪಿಎಂ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ ಆರೋಪಿಸಿದರು.

ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಫೆ.23ರಂದು ಭಾರತ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ಸಿಎಎ, ಎನ್ಆರ್.ಸಿ. ಎನ್.ಪಿ.ಆರ್ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ರಾಜಕೀಯ ಮತ್ತು ಸಂಸದೀಯ ಇತಿಹಾಸದಲ್ಲಿ ಇದೇ ಮೊದಲಿಗೆ ಧರ್ಮಾಧಾರಿತ ಪೌರತ್ವ ನೋಂದಣಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಈಗ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ಮೂರು ದೇಶ ಗಳನ್ನು ಪೌರತ್ವ ನೀಡುವುದರಿಂದ ಹೊರಗಿಟ್ಟಿದೆ. ಮುಂದಿನ ದಿನಗಳಲ್ಲಿ ಬೇರೆ ರಾಷ್ಟ್ರಗಳು ಎನ್.ಆರ್.ಸಿ. ಯಿಂದ ಹೊರಗಿಡುವ ಪ್ರಯತ್ನಗಳು ನಡೆಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಧರ್ಮಾಧಾರಿತ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅವರ ನಿಜವಾದ ಬಣ್ಣ ಬಯಲಾಗಿದೆ. ಸಂವಿಧಾನಕ್ಕೆ ಪರ್ಯಾಯವಾಗಿ ದೇಶದಲ್ಲಿ ಅಧಿಕಾರ ಕೇಂದ್ರವೊಂದಿದೆ. ಅದು ಆರ್.ಎಸ್.ಎಸ್. ಮೂಲಸ್ಥಾನ ನಾಗಪುರ. ಅಲ್ಲಿ ಸಿದ್ದಗೊಳ್ಳುವ ನಿಯಮಗಳು ಕಾನೂನುಗಳಾಗುತ್ತಿವೆ. ಭಾರತೀಯ ಜನತಾ ಪಕ್ಷ ಆರ್.ಎಸ್.ಎಸ್.ನ ರಾಜಕೀಯ ಅಸ್ತ್ರವಾಗಿದೆ ಎಂದು ಹೇಳಿದರು.

ಹಿಂದೆ ಯಾವುದೇ ಕಾಯ್ದೆಗಳು ರೂಪುಗೊಳ್ಳುವ ಮೊದಲು ಸಾರ್ವಜನಿಕವಾಗಿ ಚರ್ಚೆಗೆ ಒಳಪಡುತ್ತಿದ್ದವು. ಹಲವು ಸಭೆಗಳಲ್ಲಿ, ಸಂಸತ್ ನಲ್ಲಿ ಗಂಭೀರವಾದ ಚರ್ಚೆ ನಡೆದು ಅದರ ಸಾಧಕಬಾಧಕಗಳನ್ನು ಗುರುತಿಸಿ ಆನಂತರ ಕಾಯ್ದೆಗಳು ಜಾರಿಯಾಗುತ್ತಿದ್ದವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಮಸೂಸೆಯ ಬಗ್ಗೆ ಚರ್ಚೆಗಳು ನಡೆದಿಲ್ಲ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇರವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಸೂದೆಗಳನ್ನು ಮಂಡಿಸಿ ಚರ್ಚಿಸಲು ಅವಕಾಶ ನೀಡದೆ ಕಾಯ್ದೆ ಜಾರಿಗೆ ತರಲಾಗಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ವಿವರಿಸಿದರು.

ಆರ್.ಎಸ್.ಎಸ್ ಹೇಳಿದಂತೆ ಬಿಜೆಪಿ ಕೇಳುತ್ತಿದೆ. ನಾಗಪುರದಲ್ಲಿ ಸಿದ್ದವಾಗುವ ನಿಯಮಗಳನ್ನು ಜನರ ಮೇಲೆ ಹೇರುವ ಕೆಲಸ ನಡೆಯುತ್ತಿದೆ. ಫ್ಯಾಸಿಸ್ಟ್ ಶಕ್ತಿಗಳು ದೇಶವನ್ನು ಹಾಳುಗೆಡವುತ್ತಿವೆ. ಜರ್ಮನಿಯ ಹಿಟ್ಲರ್ ಮಾಡಿದಂತೆ ಭಾರತದಲ್ಲಿ ಮೋದಿ, ಅಮಿತ್ ಶಾ ಮತ್ತು ಯಡಿಯೂರಪ್ಪ ಬಂಧನ ಕೇಂದ್ರಗಳನ್ನು ಕಟ್ಟಲು ಹೊರಟಿದ್ದಾರೆ. ಇದರ ವಿರುದ್ದ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಆರ್.ಎಸ್.ಎಸ್ ಮತ್ತು ಬಿಜೆಪಿ ಜನರನ್ನು ಭೀತರಾಗುವಂತಹ ವಾತಾವರಣ ಸೃಷ್ಟಿಸುತ್ತಿವೆ. ತನ್ನ ಸಿದ್ದಾಂತ ಒಪ್ಪದವರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದೆ. ಗೌರಿ ಲಂಕೇಶ್, ಎಂ.ಎಂ. ಕಲ್ಬುರ್ಗಿ ಹತ್ಯೆಯಾಗಿದೆ. ದೇಶದಲ್ಲಿ ಅಘೋಷಿತ ತುರ್ತುಪಡಿಸ್ಥಿತಿ ಇದೆ. ಇದರ ವಿರುದ್ಧ ಜಾತ್ಯತೀತ ಶಕ್ತಿಗಳು ಹೋರಾಡಬೇಕು ಎಂದರು.

ಸಿಎಎ, ಎನ್ಆರ್.ಸಿ ಮತ್ತು ಎನ್.ಪಿ.ಎ ವಿರುದ್ಧ ವಿದ್ಯಾರ್ಥಿಗಳು, ಯುವಜನರು, ರೈತರು ಮತ್ತು ಮಹಿಳಾ ಸಂಘಟನೆಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಬಲ ಹೋರಾಟಗಳನ್ನು ಮಾಡಬೇಕು. ಮನೆಮನೆಗೂ ಹೋಗಿ ಜನರಿಗೆ ಈ ಕಾಯ್ದೆಗಳ ಅಪಾಯದ ಕುರಿತು ಮನವರಿಕೆ ಮಾಡಬೇಕು ದೇಶದಲ್ಲಿ ಕೇರಳ ಸೇರಿದಂತೆ 13 ರಾಜ್ಯಗಳು ಸಿಎಎ, ಎನ್ಆರ್.ಸಿ ಮತ್ತು ಎನ್.ಪಿ.ಆರ್ ಜಾರಿಗೊಳಿಸುವುದಿಲ್ಲ ಎಂದು ಹೇಳಿವೆ. ಇದು ಬಿಜೆಪಿಯ ಶಕ್ತಿಯನ್ನು ಕುಂದಿಸುವಂತೆ ಮಾಡಿದೆ ಎಂದರು.

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ಆರ್.ಸಿ ಪ್ರಕಾರ ಮಹಾತ್ಮ ಗಾಂಧೀಗೂ ಪೌರತ್ವ ನೀಡಲು ಬರುವುದಿಲ್ಲ. ಗಾಂಧೀ ರಾಮ್-ರಹೀಮ್ ಇಬ್ಬರೂ ಒಂದೇ ಎಂದರು. ಈಗಿನ ಪರಿಸ್ಥಿತಿ ರಾಮನನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ರಹೀಮನನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ರಾಮನಿಗೆ ಪೌರತ್ವ ನೀಡಿದರೆ, ರಹೀಮನಿಗೆ ಪೌರತ್ವ ಇಲ್ಲ. ಹಿಂದೂಗಳು ಪೌರತ್ವ ಪಡೆಯುವುದು ಕಷ್ಟದ ಕೆಲಸ. ಹೀಗಾಗಿ ಕೇಂದ್ರದ ಕಾಯ್ದೆಗಳ ವಿರುದ್ಧ ಜನರು ಅಸಹಕಾರ ತೋರಬೇಕು ಎಂದು ವಿವರಿಸಿದರು.

ಕಮ್ಯೂನಿಸ್ಟರು ಎಲ್ಲ ಧರ್ಮಗಳನ್ನ ಸಮಾನವಾಗಿ ಗೌರವಿಸುತ್ತಾರೆ. ಜನರ ನಂಬಿಕೆಗಳನ್ನು ಗೌರವಿಸುತ್ತಾರೆ. ಎಲ್ಲರೂ ಸಮಾನತೆಯಿಂದ ಇರಬೇಕು ಎಂದು ಬಯಸುತ್ತಾರೆ. ಆದರೆ ತಾರತಮ್ಯವನ್ನು ಸಹಿಸುವುದಿಲ್ಲ. ಗಾಂಧೀ, ಬುದ್ಧ ಇದೇ ಹಾದಿಯಲ್ಲಿ ನಡೆದವರು. ಸಂವಿಧಾನವೂ ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವುದನ್ನು ವಿರೋಧಿಸುತ್ತದೆ. ಈ ಹಿನ್ನೆಲೆಯಲ್ಲಿ ಜನಪರ ಹೋರಾಟಗಳಲ್ಲಿ ಎಲ್ಲ ಜನವಿಭಾಗವು ಪಾಲ್ಗೊಳ್ಳಬೇಕು. ಜನ ವಿರೋಧಿ ನೀತಿಗಳನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ವಿಶ್ರಾಂತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ, ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು, ರಾಜ್ಯ ಮುಖಂಡ ಕೆ.ಎನ್.ಉಮೇಶ್, ಮುಖಂಡರಾದ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ ಉಪಸ್ಥಿತರಿದ್ದರು.

ಎಸ್.ಗಂಗಾಧರಯ್ಯ ಅವರಿಗೆ ವೀ.ಚಿ.ಸಾಹಿತ್ಯ ಪ್ರಶಸ್ತಿ ಪ್ರಧಾನ

0

Tumkur: ತುಮಕೂರಿನ ಕನ್ನಡ ಭವನದಲ್ಲಿ ಇಂದು ನಡೆದ 2019ನೇ ಸಾಲಿನ ವೀಚಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್. ಗಂಗಾಧರಯ್ಯನವರ ದೇವರ ಕುದುರೆ ಕಥಾ ಸಂಕಲನ ಮತ್ತು ಸುರೇಶ್ ನಾಗಲಮಡಿಕೆ ಅವರ ಹಲವು ಬಣ್ಣದ ಹಗ್ಗ ವಿಮರ್ಶಾ ಕೃತಿಗಳಿಗೆ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಭುನನಾ ಹೀರೇಮಠ ಅವರ ಟ್ರಯಲ್ ರೂಮಿನ ಅಪ್ಸರೆಯರು ಕವನ ಸಂಕಲನಕ್ಕೆ ವೀಚಿ ಉದಯೋನ್ಮಖ ಸಾಹಿತ್ಯ ಪ್ರಶಸ್ತಿ, ಸಿ ಎನ್ ಹನುಮಯ್ಯನವರಿಗೆ ಜಾನಪದ ಪ್ರಶಸ್ತಿ ಹಾಗು ಎಂ ಆರ್ ವೆಂಕಟೇಶ್ ರವರಿಗೆ ಕನಕ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಜಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾದ ಕರೀಗೌಡ ಬೀಚನಹಳ್ಳಿ, ಡಾ‌ ವಸುಂಧರ ಭೂಪತಿ ಹಾಗು ಡಾ ರವಿಕುಮಾರ್ ಕೃತಿಗಳ ಕುರಿತು ವಿಮರ್ಷಿಸಿದರು. ವೀಚಿ ಟ್ರಸ್ಟ್ ನ ಅಧ್ಯಕ್ಷರಾದ ಬಸವಯ್ಯ ಉಪಸ್ಥಿತರಿದ್ದರು.

ಕೊನೇಹಳ್ಳಿಯಲ್ಲಿ ಯಕ್ಷಗಾನದ ಸಂಭ್ರಮ

Tipturu: ತಿಪಟೂರಿನ ಕೊನೆಹಳ್ಳಿ ಮೂಡಲಪಾಯ ಯಕ್ಷಗಾನ ಟ್ರಸ್ಟ್ ವತಿಯಿಂದ ಮೂಡಲಪಾಯ ಸುವರ್ಣ ವಸಂತೋತ್ಸವ ಕಾರ್ಯಕ್ರಮವನ್ನು ಫೆಬ್ರವರಿ 22 ಮತ್ತು 23 ರಂದು ಕೊನೆಹಳ್ಳಿಯ ಯಕ್ಷಗಾನ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಇಂದು ಸಂಜೆ 6.30ಕ್ಕೆ ಭಾಗವತ ಪೂರ್ವಾಚಾರ್ ಮತ್ತು ಸಂಗಡಿಗರಿಂದ ಕರಪಾಲ ಮೇಳ ಕಾರ್ಯಕ್ರಮವಿದೆ. ಸಂಜೆ 7.30ಕ್ಕೆ ಎಡೆಯೂರು ರಾಮಯ್ಯ ಮತ್ತು ಜಯಮ್ಮ ತಂಡದವರಿಂದ ಬಭ್ರುವಾಹನ ಕಾಳಕ ತೊಗಲುಬೊಂಬೆ ಮೇಳವಿದೆ. ರಾತ್ರಿ 8.30ಕ್ಕೆ ಮೂಡಲಪಾಯ ಮಕ್ಕಳ ಮೇಳ ಅಭಿನಯಿಸಿರುವ ಲವಕುಶ ಯಕ್ಷಗಾನ ಪ್ರದರ್ಶನ ಇದೆ.

ಫೆ.23ರಂದು ಭಾನುವಾರ ಸಂಜೆ 6.30ಕ್ಕೆ ತುಮಕೂರಿನ ನಾಟಕ ಮನೆ ವತಿಯಿಂದ ಕೃಷ್ಣ ಸಂಧಾನ ಹಾಸ್ಯ ನಾಟಕ ಪ್ರದರ್ಶನವಿದೆ. 8.30ಕ್ಕೆ ಮೂಡಲಪಾಯ ಯಕ್ಷಗಾನ ಕೇಂದ್ರದಿಂದ ಕರಿಭಂಟನ ಕಾಳಗ ಯಕ್ಷಗಾನ ಪ್ರದರ್ಶನ ಎರ್ಪಡಿಸಿದೆ.

ಇಂದು ಸಂಜೆ 6.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು ಕೆರೆಗೋಡಿ ರಂಗಾಪುರ ಕ್ಷೇತ್ರದ ಶ್ರೀಗುರು ಪರದೇಶೀಕೇಂದ್ರ ಸ್ವಾಮಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಮಾಜಿ ಶಾಸಕ ಕೆ. ಷಡಕ್ಷರಿ ಅಧ್ಯಕ್ಷತೆ ವಹಿಸುವರು. ಮಾಜಿ ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ಕಾರ್ಯಕ್ರಮ ಉದ್ಘಾಟಿಸುವರು.

ಕಾರ್ಯಕ್ರಮದಲ್ಲಿ ಭಾಗವತರಾದ ಗೌಡನಕಟ್ಟೆ ಬಸವರಾಜು ಮತ್ತು ಪೂರ್ವಾಚಾರ್ ಅವರನ್ನು ಸನ್ಮಾಲಿಸಲಾಗುವುದು.

ಮುಖ್ಯ ಅತಿಥಿಗಳಾಗಿ ಕರಾವಳಿ ರಕ್ಷಣಾ ಪಡೆ ಪೊಲೀಸ್ ವರಿಷ್ಟಾಧಿಕಾರಿ ಆರ್ ಚೇತನ್, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಬಿ.ಶಶಿಧರ್, ಕ.ಸಂ.ಇ ಸಹಾಯಕ ನಿರ್ದೇಶಕ ಬಸವರಾಜು ಅಪಿನಕಟ್ಟಿ, ಪಿಡಿಒ ಗೋಪಿನಾಥ್ ಭಾಗವಹಿಸುವರು.

ಸಮಾಜ ವಿರೋಧಿ ಶಕ್ತಿಗಳ ಜೊತೆ ಮುಸ್ಲಿಂ ಸಮುದಾಯ ಇಲ್ಲ – ತಿಪಟೂರು ಮುಸ್ಲಿಂ ಸಮುದಾಯ

Publicstory. in


Tipturu: ಸಮಾಜದಲ್ಲಿ ಶಾಂತಿ ಕದಡುವ ಸೌಹಾರ್ದತೆಗೆ ದಕ್ಕೆಯಾಗುವ ಶಕ್ತಿಗಳ ಜೊತೆ ತಿಪಟೂರು ಮುಸ್ಲಿಂ ಸಮಯದಾಯ ಇಲ್ಲ. ಕಾನೂನು ಬಾಹಿರವಾಗಿ ಸಮಾಜವನ್ನು ಒಡೆಯಲು ಯತ್ನಿಸುವ ಯಾರೆ ಅಗಲಿ ಅವರ ಮೇಲೆ ಕಾನೂನು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಪಟೂರಿನ ಸೌಹಾರ್ದ ಸಂಘಟನೆಯ ಕಾರ್ಯದರ್ಶಿ ಅಲ್ಲಾಬಕಾಶ್ ಎ ಸಮಸ್ತ ಮುಸ್ಲಿಂ ಸಮುದಾಯ ಪರವಾಗಿ ಅಗ್ರಹಿಸಿದರು.

ಅವರು ನಗರದ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಭಾಂದವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಗುರುವಾರ ತಿಪಟೂರು ನಗರದ ಯುವಕ ಇಂದಾದ್ ಖಾನ್ ಎಂಬುವವನು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಒಂದನ್ನು ಮಾಡಿದ್ದು, ಅದು ಧರ್ಮ ವಿರೋಧಿಯಾಗಿದ್ದು ಅದನ್ನು ನಾಗರಿಕ ಸಮಾಜ ಒಪ್ಪಲು ಸಾದ್ಯವಿಲ್ಲ. ಇಂತಹ ಕೃತ್ಯಗಳನ್ನು ಮಾಡುವವರ ಬಗ್ಗೆ ಕರುಣೆ ತೋರುವ ಪ್ರಶ್ನೆಯೇ ಇಲ್ಲ. ಇಂತಹ ಕೃತ್ಯದಲ್ಲಿ ಭಾಗಿಯಾಗಿರುವವರು ಎಷ್ಟೆ ಪ್ರಭಾವಿಗಳಾಗಿದ್ದರೂ ಅದನ್ನು ಲೆಕ್ಕಿಸದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ತಿಪಟೂರು ತಾಲ್ಲೂಕು ಅಧ್ಯಕ್ಷ ಸೈಫುಲ್ಲಾ ಎಂ ಮಾತನಾಡಿ ತಿಪಟೂರು ಸೌಹಾರ್ದತೆಯ ಬೀಡಾಗಿದ್ದು ಇಲ್ಲಿ ಎಲ್ಲಾ ಧರ್ಮದವರು ಪರಸ್ಪರ ಸಹೋದರರಂತೆ ಬದುಕುತ್ತಿದ್ದು ನಮ್ಮಗಳ ಮಧ್ಯೆ ಇರುವ ಭಾವೈಕ್ಯತೆಯನ್ನು ಕದಡಲು ಪ್ರಯತ್ನಿಸುವ ಯಾವುದೆ ಧರ್ಮದ ವಿಕೃತ ಶಕ್ತಿಗಳು ಬೆಳೆಯಲು ಕಲ್ಪತರು ನಾಡಿನ ಜನತೆ ಅವಕಾಶ ನೀಡುವುದಿಲ್ಲ ಎಂದರು.

ಇಂತಹ ಶಕ್ತಿಗಳನ್ನು ತಡೆಯುವ ಯಾವುದೇ ಹೋರಾಟಗಳಲ್ಲಿ ಮುಸ್ಲಿಂ ಸಮಾಜ ಮುಂಚೂಣಿಯಲ್ಲಿ ನಿಂತು ವಿಚಿದ್ರಕಾರಿ ಶಕ್ತಿಗಳನ್ನು ಬೆಳೆಯಲು ಬಿಡುವುದಿಲ್ಲ ಎಂದರು.

ಬಿಲಾಲ್ ಮಸೀದಿಯ ಮುತವಲ್ಲಿ ಶಫಿಉಲ್ಲಾ ಶರೀಫ್ ಮಾತನಾಡಿ ಅಪ್ರಭುದ್ಧತೆ ಬೇಜವಾಬ್ದಾರಿತನದ ಪರಮಾವದಿ ಸಮಯ ಸಂದರ್ಭ ಪರಿಸ್ಥಿತಿಯ ಅರಿವಿಲ್ಲದೆ ಪ್ರಚಾರದ ಗೀಳಿಗೆ ಬಿದ್ದವರಿಂದ ನಿಜವಾಗಿ ನಡೆಯಬೇಕಿರುವ ಜನಪರ ಚಳುವಳಿಯನ್ನು ಮೂಲೆ ಗುಂಪು ಮಾಡುವ ಇಂತಹ ಮಾತುಗಳು ಖಂಡನೀಯ ಎಂದರು.

ಜಾಮೀಯ ಮಸೀದಿಯ ಸಮೀಉಲ್ಲಾ ಖಾನ್ ರವರು ಮಾತನಾಡಿ ಇಸ್ಲಾಂ ಧರ್ಮ ಶಾಂತಿ ಸಹೋದರತೆ ಸಹಬಾಳ್ವೆಗೆ ಒತ್ತು ನೀಡುತ್ತದೆ. ಇಂತಹ ವಿಶಾಲವಾದ ಅಶಯವಿರುವ ಇಸ್ಲಾಂ ಧರ್ಮದ ಅನುಯಾಯಿಗಳಾದ ನಾವುಗಳು ಶಾಂತಿ ಮತ್ತು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟಿರುವವರು ಎಂದರು.

ಯಾವುದೇ ವಿಚಿತ್ರಕಾರಿ ಶಕ್ತಿ ನಮ್ಮನ್ನು ದುರ್ಬಲಗೊಳಿಸಲು ಸಾದ್ಯವಿಲ್ಲ. ಇಂತಹ ದಾರಿತಪ್ಪಿದ ಯುವಕರನ್ನು ಸರಿದಾರಿಗೆ ತರಲು ಕೂಡ ನಾವುಗಳು ಸನ್ನದ್ಧರಾಗುತ್ತೇವೆ. ಮುಂದಿನ ದಿನಗಳಲ್ಲಿ ಯಾವುದೆ ಜನ ವಿರೋಧಿ ಶಕ್ತಿಗಳು ಆಕ್ರಮಣ ಮಾಡಿದರೆ ತಿಪಟೂರಿನ ಎಲ್ಲಾ ಧರ್ಮಿಯರು ಒಟ್ಟಾಗಿ ಸೇರಿ ಅಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸೋಣ. ಅದಕ್ಕಾಗಿ ತಿಪಟೂರಿನ ಸಮಸ್ತ ಸಮಾಜ ಭಾಂದವರ ಸಹಕಾರವನ್ನು ಕೋರುತ್ತೇವೆ ಎಂದರು.

ಪ್ರಚಾರದಗೀಳು ಅಂಟಿಸಿಕೊಂಡ ಕೆಲವರು ಸಮಾಜದ ಸ್ವಾಸ್ಥವನ್ನು ಕೆಡಿಸುವ ಕೆಲಸಕ್ಕೆ ಇಳಿದಿದ್ದು ಇಂತಹ ಎಲ್ಲಾ ಘಟನೆಗಳನ್ನು ಸಮಾನವಾಗಿ ಗಂಭೀರವಾಗಿ ಪರಿಗಣಿಸಿ ಕಾನೂನು ಕಠಿಣ ಕ್ರಮ ಕೈಗೊಳ್ಳುವ ಮೂಲಕ ಆರೋಗ್ಯಕರ ಸಮೃದ್ದ ಸೌಹಾರ್ದ ಭಾರತವನ್ನು ಉಳಿಸಿ ಭೆಳೆಸುವ ಮುನ್ನೆಡೆಸುವ ಕಡೆಗೆ ಸಮಾಜ ಚಿಂತಿಸಬೇಕಿದೆ ಎಂದು ಮದೀನಾ ಮಸೀದಿಯ ಕಾರ್ಯದರ್ಶಿ ಟಿ ಎಲ್ ಶಫೀಕ್ ಅಹಮದ್ ತಿಳಿಸಿದರು. ಮುಖಂಡರುಗಳಾದ ಸೈಯದ್ ಫೈರೋಜ್ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಜರೀನ್ ಮಸೀದಿಯ ಸೈಯದ್ ಮೊಹಮೂದ್, ಮುನಿರ್, ಉಸ್ಮಾನೀಯ ಮಸೀದಿಯ ಖಲೀಲ್ ಸಾಬ್, ಸೈದಾನಅಲಿ ಮಸೀದಿಯ ಮಹಮ್ಮದ್ ಹಯಾತ್ , ರಶೀದಿಯಾ ಮಸೀದಿಯ ರಹಮತುಲ್ಲಾ, ಮಕ್ಕ ಮಸೀದಿಯ ಶೌಕತ್ ಸಾಬ್, ಅನ್ಸಾರ್ ಮಸೀದಿಯ ಗೌಸ್ ಪೀರ್ (ಡಿ,ಕೆ.ಬಾಬು) ಸಮಾಜ ಸೇವಕರಾದ ಪೈರೋಜ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ನೆನಪಾಗಿ ಕಾಡುವ ಗೆಳೆಯ ಡಾ.ಸೋ.ಮು.ಭಾಸ್ಕರಾಚಾರ್

0

ಎನ್. ನಾಗಪ್ಪ, 9449084510


Tumkur: ನಾನು ಸರ್ಕಾರಿ ಕಲಾ ಕಾಲೇಜು ತುಮಕೂರು ಇಲ್ಲಿ 22-09-1980 ಸೋಮವಾರದಂದ ಕರ್ತವ್ಯಕ್ಕೆ ಹಾಜರಾಗಿದ್ದು ಅಂದು ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯನವರು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಅವರ ಬಳಿಗೆ ಹೋಗಿ ನಾನು ನನ್ನ ಪರಿಚಯವನ್ನು ಮಾಡಿಕೊಂಡೆ. ನಂತರ ಅಲ್ಲಿಯೇ ಇದ್ದ ಸೋ.ಮು. ಭಾಸ್ಕರಾಚಾರ್ ಅವರನ್ನು ಪರಿಚಯ ಮಾಡಿಕೊಟ್ಟರು. ನಾನು ಕರ್ತವ್ಯಕ್ಕೆ ಹಾಜರಾದ ಪ್ರಯುಕ್ತ ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಅನಿವಾರ್ಯವಾಗಿ ಬಿಡುಗಡೆ ಮಾಡಬೇಕಾಗಿತ್ತು.

ನನ್ನ ಹತ್ತಿರ ಬಂದ ಭಾಸ್ಕರಾಚಾರ್ ನಿಮಗೆ ಒಳ್ಳೆಯದಾಗಲೆಂದು ಹೇಳಿ ನನ್ನ ಕೈಕುಲಿಕಿ ನಸುನಕ್ಕು ತಮ್ಮ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಹೊರಟು ಹೋದರು.

[ಭಾಸ್ಕರಾಚಾರ್ ತೆಗೆದುಕೊಳ್ಳುತ್ತಿದ್ದ ತರಗತಿ ನಾನು ಪಾಠ ಮಾಡಲು ಹೋದಾಗ ಗೊತ್ತಾದದ್ದು. ಇವರು ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಮತ್ತು ಇಡೀ ತರಗತಿಯನ್ನು ಹಾಸ್ಯಮಯದಿಂದ ನಗುವಂತೆ ಮಾಡುತ್ತಿದ್ದರೆಂದು. ನಾನು ಪ್ರಾರಂಭದಲ್ಲಿ ಸ್ವಲ್ಪ ಶ್ರಮಪಡಬೇಕಾಗಿತ್ತು. ಕಾಲಕ್ರಮೇಣ ನಾನು ಸಹ ಪಾಠ ಮಾಡುವುದರಲ್ಲಿ ಸೈ ಎನಿಸಿಕೊಂಡೆ.

ಭಾಸ್ಕರಾಚಾರ್ ಸಿದ್ದಗಂಗಾ ಸಂಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದುದು ನನಗೆ ಒಂದು ದಿನ ಅವರೇ ಕಾಲೇಜಿಗೆ ಬಂದಿದ್ದಾಗ ತಿಳಿಸಿದ್ದರು. ಅವರು ಕೆಪಿಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕೆಜಿಐಡಿ ರಾಯಚೂರು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾದರು.

ಅಲ್ಲಿಗೆ ಹೋಗಿ ಕೆಲವು ದಿನಗಳ ನಂತರ ಒಬ್ಬ ಆತ್ಮೀಯ ಗೆಳೆಯನಿಗೆ ಪತ್ರ ಬರೆಯುವಂತೆ ನನಗೆ ಪತ್ರ ಬರೆದಿದ್ದರು. ಅಲ್ಲಿಯ ಬಿಸಿಲು, ಅನಾರೋಗ್ಯ, ಊಟ, ಅವುಗಳ ವಿಷಯದ ಜೊತೆಗೆ ನನಗೆ ಈಗಲೂ ನೆನಪಿದೆ. ನನಗೆ ಅವರು ಈ ರೀತಿ ಹೇಳಿದ್ದು, ನೀವು ಬರವಣಿಗೆಯನ್ನು ರೂಢಿಸಿಕೊಳ್ಳಿ ಎಂದು.

ಇತ್ತ ವಿದ್ಯಾವಾಹಿನಿ ಕಾಲೇಜು ಪ್ರಾರಂಭ. ಅಲ್ಲಿಗೆ ಒಳ ಒಪ್ಪಂದ ಮಾಡಿಕೊಂಡ ಗುಮಾಸ್ತನ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ವಿದ್ಯಾವಾಹಿನಿ ಕಾಲೇಜಿಗೆ ಪೂರ್ಣ ಪ್ರಮಾಣದ ಉಪನ್ಯಾಸಕರಾಗಿ ಸೇರಿಕೊಂಡರು. ಅವರು ಅನೇಕ ಕಾರಣಗಳಿಗೆ ಕಾಲೇಜಿಗೆ ಬರುತ್ತಿದ್ದರರು. ಬಂದಾಗ ಕನ್ನಡ ವಿಭಾಗಕ್ಕೆ ಬಂದು ಬನ್ನಿ ಟೀ ಕುಡಿಯುವ ಎಂದು ಕ್ಯಾಂಟೀನಿಗೆ ಕರೆದುಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ನಮ್ಮ ಜೊತೆ ಸಣ್ಣಗುಡ್ಡಯ್ಯ, ಲೋಹಿತಾಶ್ವ, ಎಚ್.ಎಸ್.ಶಿವಪ್ರಕಾಶ್, ಅವರುಗಳು ಸಹ ಇರುತ್ತಿದ್ದರು.

ಪ್ರಗತಿಪರವಾಗಿ ಚಿಂತಿಸುತ್ತಿದ್ದ ಗೆಳೆಯ ಭಾಸ್ಕರಾಚಾರ್ ಅವರು ಬರೆದ ಕತೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಆ ಕತೆ ಅವರ ಹಳ್ಳಿಯಲ್ಲಿ ನಡೆದ ಕತೆ. ಆ ಕತೆಯಲ್ಲಿ ಮೂಢನಂಬಿಕೆಯ ವಿಷಯ, ಅಂತರಜಾತಿ ವಿಷಯ – ಇನ್ನೂ ಅನೇಕ ವಿಷಯಗಳಿದ್ದವು. ನನಗೆ ಇವತ್ತಿಗೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈ ಸಂದರ್ಭದಲ್ಲಿ ಅವರ ಮದುವೆ ವಿಷಯವನ್ನು ಇಲ್ಲಿ ಅವಶ್ಯಕವಾಗಿ ಹೇಳಬೇಕಾಗಿದೆ. ಅತ್ಯಂತ ಸರಳವಾಗಿ ಮದುವೆಯಾದದ್ದು.

ಹೊರಪೇಟೆಯಲ್ಲಿರುವ ನೀಲಕಂಠೇಶ್ವರ ದೇವಸ್ಥಾನದ ಸಣ್ಣ ಛತ್ರದಲ್ಲಿ. ಈ ಮದುವೆಗೆ ಕೆಲವು ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ. ನನಗೆ ನೆನಪಿರುವಂತೆ ಪ್ರೇಮಕುಮಾರ್ ಹರಿಯಬ್ಬೆ ಮತ್ತು ಇವರ ಶ್ರೀಮತಿ ಮಂಜುಳ ಬಂದಿದ್ದರು.

ವಿದ್ಯಾವಾಹಿನಿ ಕಾಲೇಜಿನ ಕೆ.ಬಿ.ಜಯಣ್ಣ ಮತ್ತು ಕುಮಾರಸ್ವಾಮಿ ಇನ್ನೂ ಮುಂತಾದವರು. ಮದುವೆ ಮಾಲಾರ್ಪಣೆ, ಸರಳವಾದ ಮಂತ್ರ ಉಚ್ಛಾರಣೆ, ತಾಳಿಕಟ್ಟಿದ್ದು. ಇದಾದ ನಂತರ ಊಟದ ವ್ಯವಸ್ಥೆ. ಮದುವೆಗೆ ಬಂದಿದ್ದವರಿಗೆ ಆಶ್ಚರ್ಯವೋ ಆಶ್ಚರ್ಯ. ಕೆಲವು ಸಂಪ್ರದಾಯಗಳನ್ನು ಕೈಬಿಟ್ಟು ಸಂಪ್ರದಾಯಸ್ಥರ ಮುಂದೆ ಮದುವೆಯಾಗುವುದು ಸಾಮಾನ್ಯವಾದ ಮಾತಲ್ಲ ಎಂಬುದು ಅಂದು ನನ್ನ ಅರಿವಿಗೆ ಬಂದಿತ್ತು.

ಏಪ್ರಿಲ್ ಎರಡು, ಸಾವಿರದ ಒಂಬೈನೂರ ಎಂಭತ್ತ್ಮೂರಂದು ನಾವು ಮದುವೆಯಾದದ್ದು. ತುಮಕೂರಿನಲ್ಲಿ ದೊಡ್ಡ ಸುದ್ದಿಯಾಗಿತ್ತು. ದೋಬಿಘಾಟ್ ನ ಹತ್ತಿರ ಮನೆ ಮಾಡಿದ್ದೆ. ಅದರ ಹತ್ತಿರ ಈಗ ಒಂದು ಉದ್ಯಾನ ಇದೆ.

ಅಲ್ಲಿಯೇ ಮಹಡಿ ಮನೆಯಲ್ಲಿ ಭಾಸ್ಕರಾಚಾರ್ ಮನೆ ಮಾಡಿದ್ದರು. ನನ್ನಾಕೆಯು ಕುಡ ಭಾಸ್ಕರಾಚಾರ್ ಅವರ ಶಿಷ್ಯೆಯಾಗಿದ್ದವಳು. ನಾವು ಮನೆಗೆ ಬಂದಿರುವುದು ಗೊತ್ತಾಗಿ ತಕ್ಷಣ ಗಂಡ-ಹೆಂಡತಿ ಇಬ್ಬರು ಬಂದು ಮಾತಿಗೆ ಮಾತು ಬೆಳೆದು ನಿಮ್ಮದು ನಿಜವಾದ ಬಂಡಾಯದ ಮದುವೆ ಎಂದು ಹೇಳಿ ನನ್ನನ್ನು ಪ್ರಶಂಸಿದ್ದರು.

ಇದಾದ ನಂತರ ಪ್ರತಿನಿತ್ಯ ನಾವು ಕಾಲೇಜಿಗೆ ಹೋದನಂತರ ನನ್ನಾಕೆ ಮತ್ತು ಭಾಸ್ಕರಾಚಾರ್ ಶ್ರೀಮತಿಯವರು ತುಂಬಾ ಆಪ್ತರಾಗಿಬಿಟ್ಟರು.

ನನ್ನಾಕೆ ಗರ್ಭಿಣಿಯಾದಾಗ ಒಬ್ಬ ಅಕ್ಕನ ರೀತಿಯಲ್ಲಿ ಅವರು ನೋಡಿಕೊಂಡರು. ನನ್ನಾಕೆಯ ಬಸುರಿ ಬಯಕೆಯನ್ನು ಸಹ ಪೂರೈಸುವಲ್ಲಿ ಅವರ ಪಾತ್ರ ಮರೆಯುವಂತಿಲ್ಲ. ಮಗುವಿದ್ದಾಗ ಪ್ರತಿದಿನ ಮಗುವನ್ನು ಮುದ್ದಾಡಲು ಮನೆಗೆ ಬಂದು ಸಾಕಷ್ಟು ಸಮಯ ಕಳೆಯುತ್ತಿದ್ದರು. ನನಗೆ ಕುಣಿಗಲ್ ಕಾಲೇಜಿಗೆ ವರ್ಗಾವಣೆಯಾದಾಗ ಭಾಸ್ಕರಾಚಾರ್ ಅವರ ಮನೆಯಲ್ಲಿ ನಮಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.

: ಇದಾದ ನಂತರ ನಾನು ಕುಣಿಗಲ್ ನಿಂದ ಚಿಕ್ಕಮಗಳೂರಿನ ಕಡೆಗೆ ಕರ್ತವ್ಯದ ನಿಮಿತ್ತ ಹೋಗಿ 1989ರಲ್ಲಿ ಬಿಳಿಗೆರೆ ಕಾಲೇಜಿಗೆ ಬಂದ ನಂತರ ತುಮಕೂರಿನಲ್ಲಿ ನಡೆಯುತ್ತಿದ್ದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾವು ಸಹಜವಾಗಿ ಭೇಟಿಯಾಗುತ್ತಿದ್ದೆವು.

ಚಿಕ್ಕನಾಯಕನಹಳ್ಳಿಯಲ್ಲಿ ಕೆ.ದೊರೈರಾಜ್ ಪ್ರಿನ್ಸಿಪಾಲರು. ಅಲ್ಲಿಗೆ ನಾನು ವರ್ಗವಾಗಿ ಹೋದೆ. ಆಗ ತುಮಕೂರು ಜಿಲ್ಲಾ ಬಂಡಾಯ ಸಂಘಟನೆಯ ಸಂಚಾಲಕರಾಗಿ ಸೋ.ಮು. ಭಾಸ್ಕರಾಚಾರ್ ಹೆಸರು ಮಾಡಿದ್ದರು.

ಬರಗೂರು ರಾಮಚಂದ್ರಪ್ಪನವರು ತುಮಕೂರಿನಲ್ಲಿ ಇಡೀ ಜಿಲ್ಲೆಯಲ್ಲಿ ಪುಸ್ತಕ ಜಾಥಾದ ಜವಾಬ್ದಾರಿಯನ್ನು ವಹಿಸಿದರು. ಅಂದು ತುಮಕೂರಿನಲ್ಲಿ ಕೆ.ಬಿ., ಬಾ.ಹ.ರಮಾಕುಮಾರಿ, ಶೈಲಾನಾಗರಾಜ್ ನನಗೆ ಚಿಕ್ಕನಾಯಕನಹಳ್ಳಿ ತಾಲೂಕು ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರನ್ನಾಗಿ ಮಾಡಿದ್ದರು.

ಚಿಕ್ಕನಾಯಕನಹಳ್ಳಿಯಲ್ಲಿ ಮೊದಲ ಬಾರಿಗೆ ಕೆ.ದೊರೈರಾಜ್ , ನಾನು ಅಲ್ಲಿಯ ಅನೇಕ ಪ್ರಗತಿಪರ ಚಿಂತಕರು ಆ ದಿನ ಪುಸ್ತಕ ಜಾಥಾ ಬಿಡುಗಡೆ ಕಾರ್ಯಕ್ರಮಕ್ಕೆ ಭಾಸ್ಕರಾಚಾರ್ ಬಂದಿದ್ದರು. ಅದ್ಯುತವಾಗಿ ಮಾತನಾಡಿದರು. ನಂತರ ಪುಸ್ತಕಗಳನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಬೀದಿ ಬೀದಿಯಲ್ಲಿ ಪುಸ್ತಕ ಮಾರಾಟ ಮಾಡಲಾಯಿತು. ಭಾಸ್ಕರಾಚಾರ್ ಸಂಜೆಯ ತನಕ ನಮ್ಮ ಜೊತೆ ಇದ್ದು ಸಂತಸ ವ್ಯಕ್ತಪಡಿಸಿದ್ದರು.

ನಾನು ದಂಡಿನಶಿವರ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಸರ್ಕಾರದ ಒಂದು ಯೋಜನೆ “ಆಡಳಿತದಲ್ಲಿ ಕನ್ನಡ’ ಮೊದಲು ಬೆಂಗಳೂರಿನಲ್ಲಿ ನಡೆದಾಗ ನಾನು, ಭಾಸ್ಕರಾಚಾರ್ ಮತ್ತು ಡಾ. ಯೋಗೀಶ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆವು.

ಆಡಳಿತದಲ್ಲಿ ಕನ್ನಡ ಎಂಬ ಕಾರ್ಯಾಗಾರ ಹಂಪಿ ವಿಶ್ವವಿದ್ಯಾಲಯದಲ್ಲಿ ಕಾ.ತ. ಚಿಕ್ಕಣ್ಣನವರ ನೇತೃತ್ವದಲ್ಲಿ ನಡೆಯಿತು. ತುಮಕೂರಿನಿಂದ ಹೋಗಿದ್ದ ನಾನು ಮತ್ತು ಭಾಸ್ಕರಾಚಾರ್ ಒಂದೇ ಕೊಠಡಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಆಗಿತ್ತು. ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿದಿನ ವಿಷಯ ಮಂಡನೆ, ಪ್ರಶ್ನೆಗಳಿಗೆ ಉತ್ತರ, ಇದೊಂದು ಅಪರೂಪದ ಕಾರ್ಯಾಗಾರವಾಗಿತ್ತು.

ಈ ಕಾರ್ಯಾಗಾರಕ್ಕೆ ಹೋದ ಪ್ರಯುಕ್ತ ನನಗೆ ಚಿಕ್ಕಮಗಳೂರಿನಿಂದ ಪರಿಚಯವಿದ್ದ ಬಿ.ಎಂ.ಪುಟ್ಟಯ್ಯನವರು ಭಾಸ್ಕರಾಚಾರ್ ಅವರ ಪಿಎಚ್.ಡಿ ಗೈಡ್ ಆಗಿದ್ದರು. ಅವರೇ ಒಂದು ದಿನ ಊಟದ ವ್ಯವಸ್ಥೆ ಮಾಡಿ ಒಬ್ಬ ಗೆಳೆಯನಿಗೆ ಅತ್ಯಂತ ಪ್ರೀತಿಯಿಂದ ಏನೇನು ಹೇಳಬೇಕೋ ಅದನ್ನೆಲ್ಲಾ ಹೇಳಿದ್ದು. ಇದಾದ ನಂತರ ನನಗೆ ಆ ದಿನವೇ ಒಂದು ಮಾತು ಹೇಳಿದರು ‘ ನಾಗಪ್ಪನವರೇ ನಿಮ್ಮ ಗೆಳೆಯರಾದ ಭಾಸ್ಕರಾಚಾರ್ ‘ಮಾತೃತ್ವದ’ ಬಗ್ಗೆ ಅದ್ಬುತವಾದ ಪ್ರಬಂಧ ಮಂಡಿಸುತ್ತಿದ್ದಾರೆ. ಅವರಿಗೆ ಡಾಕ್ಟರೇಟ್ ಬರುವುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದರು. ಈ ಮಾತು ಸತ್ಯವಾಯಿತು.

ನಾನು ಬಿಡುವಿದ್ದಾಗ ಮತ್ತು ಅನೇಕ ವಿಷಯಗಳ ಬಗ್ಗೆ ಮಾತನಾಡಲು ಭಾಸ್ಕರಾಚಾರ್ ಮನೆಗೆ ಹೋಗುತ್ತಿದ್ದೆ. ಅವರ ಟೇಬಲ್ ಮೇಲೆ ನೂರಾರು ಪುಸ್ತಕಗಳ ರಾಶಿ, ಓದು, ಹುಡುಕಾಟ, ಹಿರಿಯರು ಗೆಳೆಯರ ಜೊತೆ ಚರ್ಚೆ ಹೀಗೆ ಶ್ರಮಪಟ್ಟು ತಯಾರಿಸಿದ ಅವರ ಸಂಶೋಧನಾ ಗ್ರಂಥ ಆಧುನಿಕ ಕನ್ನಡ ಕಾವ್ಯದಲ್ಲಿ ಮಾತೃತ್ವದ ಸ್ವರೂಪ’ ಅಪರೂಪದ ಕೃತಿ.

ಅರ್ಹರಿಗೆ ಡಾಕ್ಟರೇಟ್ ಬಂದಾಗ ಸಂತೋಷವಾಗುತ್ತದೆ. ತುಮಕೂರು ಜಿಲ್ಲೆಯಲ್ಲಿ ಕೇವಲ ಕೆಲವರು ಅರ್ಹರಾದ ಡಾಕ್ಟರೇಟ್ ಪಡೆದವರುಗಳಿದ್ದಾರೆ. ಅವರ ಜೊತೆ ಮಾತನಾಡಲು ಸಂತೋಷವಾಗುತ್ತದೆ. ಆದರೆ ಇತ್ತೀಚೆಗೆ ಅರ್ಹರಲ್ಲದವರುಗಳಿಗೆ ಡಾಕ್ಟರೇಟ್ ಎಂಬುದು ಬಿಕರಿಯ ವಸ್ತುವಾಗಿದೆ. ಇದೊಂದು ಬೇಸರದ ಸಂಗತಿ.

ಪ್ರೊ. ಮರಿದೇವರು ಮತ್ತು ಭಾಸ್ಕರಾಚಾರ್ ಇವರಿಬ್ಬರ ಸ್ನೇಹ ಹೇಗಿತ್ತೆಂದರೆ ಗಳಸ್ಯ-ಕಂಠಸ್ಯ. ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ನಿಂತು ಮರಿದೇವರು ಸೋತ ನಂತರ ಅವರು ಕಲ್ಪತರು ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟುಹಾಕಿದರು. ಅದರ ಕಾರ್ಯದರ್ಶಿಯಾಗಿ ಭಾಸ್ಕರಾಚಾರ್ ವಹಿಸಿಕೊಳ್ಳುತ್ತಾರೆ. ಈ ವೇದಿಕೆ ಇಡೀ ಜಿಲ್ಲೆಯಲ್ಲಿ ಮನೆ ಮಾತಾಗುತ್ತದೆ. ಮನೆಮನೆಯಲ್ಲಿ ಸಾಹಿತ್ಯ ಚರ್ಚೆ ಇದು ತಾಲೂಕಿಗೂ ವಿಸ್ತರಿಸುತ್ತದೆ. ಭಾಸ್ಕರಾಚಾರ್ ನನಗೆ ತಿಂಗಳಿಗೆ ಒಂದು ಅಥವಾ ಎರಡು ಕಾರ್ಯಕ್ರಮಗಳನ್ನು ಕೊಡುತ್ತಿದ್ದರು. ಇದರಿಂದ ಅವರಿಗೆ ನಾನು ಮತ್ತಷ್ಟು ಹತ್ತಿರವಾದೆ.

ಪ್ರೊ. ಮರಿದೇವರು ಮತ್ತು ಭಾಸ್ಕರಾಚಾರ್ ಅವರ ಅಧ್ಯಕ್ಷತೆಯಲ್ಲಿ ನನಗೆ ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚಿಸಲು ಮತ್ತು ಕವಿಗೋಷ್ಠಿ ಅಧ್ಯಕ್ಷತೆ ವಹಿಸಲು ಅವಕಾಸ ಮಾಡಿಕೊಟ್ಟಿದ್ದರು. ಇವರ ಜೊತೆಗೆ ಎಲ್ಲೇ ಸಮ್ಮೇಳನ ನಡೆದರೆ ಅಲ್ಲಿಗೆ ನಾವು ಹೋಗುತ್ತಿದ್ದೆವು. ಇದಾದ ನಂತರ ಭಾಸ್ಕರಾಚಾರ್ ಕಂಟಲಗೆರೆ ಸಣ್ಣಹೊನ್ನಯ್ಯನವರನ್ನು ಕಾರ್ಯದಶರ್ಶಿಯಾಗಿ ಮಾಡಿಕೊಂಡ ನಂತರ ಅನೇಕ ನೆನಪಿನಲ್ಲು ಉಳಿಯುವಂತಹ ಕಾರ್ಯಕ್ರಮಗಳನ್ನು ಮಾಡಿದರು.

ಇತ್ತೀಚೆಗೆ ಹೇಮಾದ್ರಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ನಾನು, ಮುರಳಿಕೃಷ್ಣಪ್ಪ ಜೊತೆಯಲ್ಲಿದ್ದೆವು. ನಮ್ಮ ಮುಖ ನೋಡುತ್ತಾರೆಯೇ ಹೊರತು ನಮ್ಮ ಹೆಸರು ಹೇಳಲು ಭಾಸ್ಕರಾಚಾರ್ ಅವರಿಗೆ ಆಗಲಿಲ್ಲ.

ಹಲವು ಕಾರ್ಯಕ್ರಮಗಳಲ್ಲಿ ಸೊಗಸಾಗಿ ಮಾತನಾಡುತ್ತಿದ್ದ ಭಾಸ್ಕರಾಚಾರ್ ಹೀಗೇಕೆ ಆದರು. ನನಗಿಂತಲೂ ಚನ್ನಾಗಿ ಮಾತನಾಡುತ್ತಿದ್ದವರು ನಗಿಸುತ್ತಿದ್ದವರು ಹೀಗಾದರಲ್ಲ ಎಂದು ನೊಂದುಕೊಂಡಿದ್ದೆ. ಇಂದು ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿದ್ದೇನೆ.

ಅವರು ಬರೆದ ಕೃತಿಗಳಿಗೆ ಒಳ್ಳೆಯ ವಿಮರ್ಶೆ ಬರಲಿಲ್ಲ. ನಾನೇ ಹಿಂದೆ ಹಲವುವಿಮರ್ಶೆಗಳನ್ನು ಬರೆದಿದ್ದೆ. ಜಿಲ್ಲಾ ಮಟ್ಟದಲ್ಲಿ ಒಳ್ಳಯ ಗೌರವ ಸಂಪಾದಿಸಿದ್ದರು. ರಾಜ್ಯ ಮಟ್ಟದಲ್ಲಿ ಇವರಿಗೆ ಸಲ್ಲಬೇಕಾದ ಸಾಹಿತ್ಯಕವಾದ ಸ್ಥಾನಮಾತನ ಸಿಕ್ಕಲಿಲ್ಲವೆಂಬುದು ನನ್ನ ಅನಿಸಿಕೆ.


ಲೇಖಕರು ಹಿರಿಯ ಸಾಹಿತಿ. ತುಮಕೂರು

ಚೆನ್ನಿಗಪ್ಪ ಅಂದರೆ ಜನಸಾಮಾನ್ಯರ‌ ದೇವರು…

0

ಬೆಳಗುಂಬ ವೆಂಕಟೇಶ್


Tumkuru: ಲೇ ಯಾರೂ ಹಸ್ಕೊಂಡು ಇರಬಾರದು. ಮೊದಲು ಊಟ, ಟೀ ಅಮೇಲೇನಿದ್ದರೂ‌ ಕಷ್ಟದ ಮಾತು. ಹೀಗೆ ಹೇಳುತ್ತಿದ್ದ ಮಾಜಿ ಸಚಿವರಾದ
ಚೆನ್ನಿಗಪ್ಪನವರ ಮನೆ ಎಂದರೆ ಕಡು ಬಡವರಿಗೆ, ಜನ ಸಾಮಾನ್ಯರಿಗೆ ಯಾವಾಗಲೂ ತೆರೆದಿರುತ್ತಿದ್ದ ದೇವರ ಮನೆ.

ದೇವಸ್ಥಾನಗಳಲ್ಲಿ ಮೊದಲಿಗೆ ಕಷ್ಟ ಹೇಳಿಕೊಂಡು ನಂತರ ಪ್ರಸಾದವಾದರೆ ಈ ಜನಸಾಮಾನ್ಯರ ದೇವರ ಮನೆಯಲ್ಲಿ ಮೊದಲಿಗೆ ಪ್ರಸಾದ (ಊಟ) ನಂತರ ಕೋರಿಕೆಗಳ ಮಾತು.

ಲೇ ನನ್ನವ್ವನಿಗೆ ಎದೆ ಹಾಲು ಇರಲಿಲ್ಲ. ಪಕ್ಕದೂರಿನ ದಲಿತ ತಾಯಿ ಗಂಗವ್ವನ ಎದೆ ಹಾಲು ಕುಡಿದು ಬೆಳೆದವ ನಾನು. ಇಟ್ಟಿನ ತಪ್ಪಲೆಯ ಸೀಕೇ ನಮ್ಮ ಊಟ. ಹರಿದ ಚೆಡ್ಡಿಯೇ ನನ್ನ ಬಟ್ಟೆ ಎಂದು ನನ್ನೊಂದಿಗೆ ಯಾವಾಗಲೂ ನೆನಪು ಮಾಡಿಕೊಳ್ಳುತ್ತಿದ್ದ ಚೆನ್ನಿಗಪ್ಪ ಸಾಹೇಬರಿಗೆ ಯಾವ ರಾಜಕಾರಣಿಯೂ ಸಾಟಿ ಆಗಲಾರರು ಎಂದೇ ನನಗೆ ಅನ್ನಿಸುತ್ತಿದೆ.

ದಲಿತ ತಾಯಿ ಎದೆ ಹಾಲು ಕುಡಿದು ಬೆಳೆದ‌ ಮಗ ಎಂಬುದನ್ನೂ ಅವರು ಸಾಯುವ ಕೊನೆವರೆಗೂ ಮರೆಯಲೇ ಇಲ್ಲ. ಬಡವರನ್ನು ಕಂಡರೆ ಅವರಿಗೆ ಅವರ ಅರಾಧ್ಯ ದೇವರಾದ ಹದ್ದಿನಕಲ್ಲು ಆಂಜನೇಯ ಸ್ವಾಮಿ ಕಂಡಷ್ಟೇ ಸಂತಸ. ಹೀಗಾಗಿಯೇ ಅವರ ಬಳಿ ಬಡವರು ಸಹಾಯ ಕೇಳಿದರೆ ತಮ್ಮ ಕೈಯಲ್ಲಿ ಇದ್ದುದ್ದನ್ನೆಲ್ಲ ಕೊಟ್ಟು ಬಿಡುತ್ತಿದ್ದರು. ಕೇಳಿದರೆ, ಆಂಜನೇಯ ಇದ್ದಾನೆ, ಅವನು ಕೊಡ್ತಾನೆ, ನಾನೇನು ಕೊಡೋದು ಅನ್ನೋರು.

ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿ ಆಗಿದ್ದ ಅವರಿಗೆ ಮಠದ ಬಗ್ಗೆ, ಶಿವಕುಮಾರ ಸ್ವಾಮಿಗಳ ಬಗ್ಗೆ ಇನ್ನಿಲ್ಲದ ಗೌರವ. ಮಠಕ್ಕೆ ಅವರು ಕೊಟ್ಟಿರುವಷ್ಟು ಅಕ್ಕಿಯನ್ನು ಯಾರೂ ಕೊಟ್ಟಿರಲಾರರು.

ನನನ್ನು ಬಲ್ಲೇ ಎಂದೇ ಪ್ರೀತಿಯಿಂದ ಕರೆಯುತ್ತಿದ್ದ ಅವರು ಮೂರು ದಿನ ಹಿಂದಷ್ಟೇ ಆಸ್ಪತ್ರೆಯಿಂದ ಮನೆಗೆ ಬರುತ್ತೇನೆ ಎಂದು ಹೇಳಿದ್ದರು.

ನಾನು ಹುಷಾರು ತಪ್ಪಿದಾಗ ಅವರು ಮಾಡಿದ ಆರೈಕೆ ನಾನು ಮರೆಯಲಾರೆ. ಅವರ ಋಣ ತೀರಿಸಲು ನನ್ನಿಂದ ಸಾಧ್ಯವಿಲ್ಲ.
ತಂದೆ ಹಾಕಿಕೊಟ್ಟ ದಾರಿಯಲ್ಲಿ ಅವರ‌ ಮಗ, ಶಾಸಕ ಗೌರಿಶಂಕರ್ ಅವರು ನಡೆಯುವುದನ್ನು ನಾವು ಕಾಣುತ್ತಿದ್ದೇವೆ. ಚನ್ನಿಗಪ್ಪ ಸಾಹೇಬರನ್ನು ನಾವೆಂದೂ ಮರೆಯಲು ಸಾಧ್ಯವೇ ಇಲ್ಲ.


ಲೇಖಕರು ಚೆನ್ನಿಗಪ್ಪ ಅವರೊಂದಿಗೆ ತೀರಾ ಆತ್ಮೀಯತೆ‌ ಹೊಂದಿದ್ದರು.