Thursday, February 19, 2026
Google search engine
Home Blog Page 285

ಇಲ್ಲೊಬ್ಬ ನಕಲಿ IAS ಸಾಧಕ!

ಲಕ್ಷ್ಮೀಕಾಂತರಾಜು ಎಂಜಿ


Gubbi: ನಕಲಿ ಐಎಎಸ್ ,ಐಪಿಎಸ್ ಅಧಿಕಾರಿಗಳು ರೇಡು ಮಾಡುವ ನೆಪದಲ್ಲಿ ಬಂದು ಸಿಕ್ಕಿಬೀಳುವುದನ್ನ ನೀವು ನೋಡಿದ್ದೀರಿ. ಆದರೆ ,ಐಎಎಸ್ ನಕಲಿ ಸಾಧಕರನ್ನ ಇದುವರೆಗೂ ನೀವು ಕಂಡಿಲ್ಲ. ಆ ನಕಲಿ ಸಾಧಕ‌ ಬೇರೆ ಯಾರು ಅಲ್ಲ ಬೆಂಗಳೂರಿನ ಬಿಎಂಟಿಸಿ ಯ ನಿರ್ವಾಹಕ ಮಧು.
ಹೌದು.
ಬಿಎಂಟಿಸಿಯಲ್ಲಿ ನಿರ್ವಾಹಕನಾಗಿರುವ ಮಧು ಎಂಬಾತ ತನ್ನ ನಿರಂತರ ಬಿಡುವಿಲ್ಲದ ಕೆಲಸದ ನಡುವೆಯೇ ಐಎಎಸ್ ಮುಖ್ಯಪರೀಕ್ಷೆಯನ್ನ ಪಾಸು ಮಾಡಿ ಬರಲಿರುವ ಮಾರ್ಚ್ ಇಪ್ಪತ್ತೈದರಂದು ನಡೆಯುವ ಸಂದರ್ಶನಕ್ಕೆ ತಯಾರುಗುತ್ತಿರುವ ಸುಳ್ ಸುದ್ದಿ ಕೆಲ ಮಾಧ್ಯಮಗಳಲ್ಲಿ ವೈಭವಿಕರಿಸಿ ಸುದ್ದಿ ಮಾಡಲಾಗಿತ್ತು.

ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಸ್ಸಿನ ನಿರ್ವಾಹಕನಾಗಿ ಕೆಲಸ ಮಾಡುತ್ತಾ ಕಬ್ಬಿಣದ ಕಡಲೆಯಾಗಿರುವ ಐಎಎಸ್ ಮುಖ್ಯ ಪರೀಕ್ಷೆಯನ್ನ ಪಾಸು ಮಾಡುವುದು ಸುಮ್ಮನೆ ಮಾತಲ್ಲ. ಈ ಕಾರಣಕ್ಕಾಗಿಯೇ ಈ ಸುದ್ದಿಯನ್ನ ಜನರು ನಂಬಿ,ಆತನಿಗೆ ಹೆಚ್ಚು ಅಭಿನಂದಿಸಿದ್ದರು.

ಬೆಂಗಳೂರಿನ ಆಂಗ್ಲ ಪತ್ರಿಕೆಯೊಂದು ಈ ಸುಳ್ ಸುದ್ದಿಯನ್ನ ಮುಖಪಟದಲ್ಲಿ ಪ್ರಕಟಿಸಿತ್ತು. ಇದೇ ಸುದ್ದಿಯನ್ನ ರಾಜ್ಯ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಫೇಸ್ ಬುಕ್ನಲ್ಲಿ ಶೇರ್ ಮಾಡಿದ್ದರ ಪರಿಣಾಮ ನಾನೂ ಓದಿದ್ದೆ.

ಮಾರನೇಯ ದಿನ ರಾಜ್ಯದ ಕೆಲ ಪ್ರಮುಖ ಪತ್ರಿಕೆಗಳು ಕೂಡ ಆಂಗ್ಲ ಪತ್ರಿಕೆಯ ಸುದ್ದಿಯನ್ನ ಯಥಾವತ್ತು ಅನುವಾದ ಮಾಡಿ ಪ್ರಕಟಿಸಿದ್ದವು. ವಿಪರ್ಯಾಸವೆಂದರೆ, ಸುದ್ದಿಯ ನೈಜತೆ ತಿಳಿಯುವದಿರಲಿ ಸುದ್ದಿಯನ್ನೂ ಎಡಿಟ್ ಮಾಡದೇ ನಕಲಿಸಿ ಅಂಟಿಸಿದ‌ ಸುದ್ದಿಯಾಗಿತ್ತು

ಇದೆಲ್ಲದೆ ಪರಿಣಾಮ‌ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಾಧಕ ಮಧು ಎಂಬಾತನಿಗೆ ಅಭಿನಂದನೆಗಳ ಸುರಿಮಳೆಯ ಜೊತೆಗೆ ಸುದ್ದಿ ಸಖತ್ ವೈರಲ್ ಆಗಿತ್ತು.

ಇದನ್ನರಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು ಸಂಸ್ಥೆಯ ವತಿಯಿಂದ ಅಭಿನಂದನಾ ಪತ್ರವನ್ನ ನೀಡಿದರು. ಅಷ್ಟೆ ಯಾಕೆ , ಬಿಎಂಟಿಸಿ ಎಂಡಿ ಶಿಖಾ ಕೂಡ ಆತನನ್ನ ಸಂದರ್ಶನಕ್ಕೆ ತಯಾರಿ ಮಾಡುತ್ತಿದ್ದಾರೆಂಬ ಸುದ್ದಿಗಳು ಪ್ರಕಟವಾದವು.

ಒಂದು ನೈಜ ಸುದ್ದಿಗಿಂತ ಒಂದು ಸುಳ್ ಸುದ್ದಿ ಹರಡುವಿಕೆಯ ವೇಗ ಹೆಚ್ಚು ಎಂಬುದು ಈ ಸುದ್ದಿಯಿಂದ ಮತ್ತೊಮ್ಮೆ ಸಾಬೀತಾಯ್ತು. ವರದಿಗಳನನ್ನ ಪ್ರಕಟಿಸುವ ಮುನ್ನ ಅವುಗಳ ನೈಜತೆ ಪರಿಶೀಲಿಸುವ ಕನಿಷ್ಟತೆ ವೃತ್ತಿ ಪರತೆ ಮೆರೆಯುವ ಕೆಲಸಕ್ಕೆ ಕೆಲ ಮಾಧ್ಯಮಗಳು ಮುಂದಾಗದಿದ್ದು‌ ಸೋಜಿಗದ ಸಂಗತಿಯಾಗಿದೆ.

ಈ ಸುಳ್ ಸುದ್ದಿಯ ಸ್ವಾರಸ್ಯಕರ ಸಂಗತಿ ಎಂದರೆ ಸುದ್ದಿಯ ಅಸಲಿಯತ್ತು ತನಿಖೆಯಿಂದ ಬಹಿರಂಗವಾಗಿಲ್ಲ. ನಕಲಿ ಸಾಧಕ ಮಧು ಸ್ವಯಂ ತಪ್ಪೊಪ್ಪೊಗಿಯಿಂದ ನೈಜತೆ ಹೊರಬಿದ್ದಿದೆ.

ಸುದ್ದಿಯನ್ನು ನಂಬಿ ನಿಗಮದ ಉನ್ನತ ಅಧಿಕಾರಿಗಳು, ಸಚಿವರು ಈಗ ಜನರ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ.

ಮಾಧುಸ್ವಾಮಿಗೆ ಸಚಿವ ಸ್ಥಾನ ತಪ್ಪಿದರೆ ತುಮಕೂರಿನಿಂದ ಯಾರಾಗಬಹುದು ಸಚಿವರು!

0

Publicstory. in


ತುಮಕೂರು: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕಾನೂನು ಸಚಿವ, ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರಿಗೆ ಸಚಿವ ಸ್ಥಾನ ತಪ್ಪಲಿದೆ ಎಂದು ಊಹಾಪೋಹದ ಗಾಳಿ ಜೋರಾಗಿಯೇ ಬೀಸ ತೊಡಗಿದೆ.

ಮಾಧುಸ್ವಾಮಿ ಅದೃಷ್ಟವಂತ ರಾಜಕಾರಣಿ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಅವರ ಸಂಬಂಧಿಕರು, ಆತ್ಮೀಯರು ಅವರಿಗೆ ಮಾತಿನ ಮಂತ್ರಿ ಎಂಬ ಅಡ್ಡ ಹೆಸರು ಇಟ್ಟಿದ್ದಾರೆ.

ಬಿಜೆಪಿ ಸೇರುತ್ತಲೇ ಶಾಸಕರಾಗಿ ಗೆಲುವು ಸಾಧಿಸಿದ್ದಲ್ಲದೇ ಯಾವುದೇ ಲಾಬಿ ಇಲ್ಲದೇ, ಕಾನೂನು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದು ಎಂಥವರನ್ನು ಹುಬ್ಬೇರುವಂತೆ ಮಾಡಿದೆ.

ಜೆ.ಸಿ,ಮಾಧುಸ್ವಾಮಿ ಅವರು ಯುಡಿಯೂರಪ್ಪ ಅವರೊಂದಿಗೆ ಇಷ್ಟೊಂದು ಆತ್ಮೀಯರಾಗಿ ಬಿಡಬಲ್ಲರು ಎಂಬುದು ಸಂಸದ ಜಿ.ಎಸ್.ಬಸವರಾಜ್ ಅವರಿಗೂ ಮಾಧುಸ್ವಾಮಿ ಅವರನ್ನು ಕೆಜೆಪಿಗೆ ಕರೆದುಕೊಂಡು ಬಂದಾಗ ಗೊತ್ತಿರಲಿಕ್ಕಿರಲಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಜಿ.ಎಸ್.ಬಸವರಾಜ್ ಅವರದು ಗಳಸ್ಯ ಕಂಠಸ್ಯ. ಯಡಿಯೂರಪ್ಪ ಅವರು ಎಂಥದೇ ಅಡೆ-ತಡೆ ಬಂದರೂ ಜಿ.ಎಸ್ ಬಿ ಅವರನ್ನು ಕೈ ಬಿಡುವುದಿಲ್ಲ. ಅದಕ್ಕೆ ತಾಜಾ ಉದಾಹಣೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜಿಎಸ್ ಬಿ ಅವರಿಗೆ ಟಿಕೆಟ್ ಕೊಡಿಸಿದ್ದು. ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಜಿಎಸ್ ಬಿ ಸೋಲುತ್ತಾರೆ ಎಂದು ಲೆಕ್ಕಾಚಾರ ಹಾಕಿದ್ದರೂ ಸಹ ಒಂದು ಸೀಟು ಸೋತರೂ ಪರವಾಗಿಲ್ಲ ಬಸವರಾಜ್ ಅವರಿಗೇನೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದವರು. ಇದೇನೇ ಇರಲಿ.

ನ್ಯಾಯವಾಗಿ ನೋಡಿದರೆ ತುಮಕೂರು ಜಿಲ್ಲೆಗೆ ಇಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು. ನಾಲ್ವರು ಬಿಜೆಪಿ ಶಾಸಕರನ್ನು ಜಿಲ್ಲೆಯ ಮತದಾರರು ನೀಡಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನೇ ಸೋಲಿಸಿ ಬಿಜೆಪಿಗೆ ಮನ್ನಣೆ ನೀಡಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಪಾವಗಡ, ಶಿರಾ ತಾಲ್ಲೂಕಿನಲ್ಲೂ ಬಿಜೆಪಿಯನ್ನು ಜನರು ಕೈಹಿಡಿದರು. ಈ ಎಲ್ಲ ಲೆಕ್ಕಾಚಾರಗಳಲ್ಲಿ ಜಿಲ್ಲೆಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕಾದದ್ದು ಆ ಪಕ್ಷದ ಕರ್ತವ್ಯ.

ಅಭಿವೃದ್ಧಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ಮಾಜಿ ಶಾಸಕ, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿ.ಸುರೇಶ್ ಗೌಡ ಅವರು ಬಿಎಸ್ ವೈ ಅವರೊಂದಿಗೆ ಹೊಂದಿರುವ ನಂಟಿಗೆ ಈ ಸಲ ಗೆಲುವು ಸಾಧಿಸಿದ್ದರೆ ಸಚಿವ ಸ್ಥಾನದ ಪಟ್ಟಿಯಲ್ಲಿ ಮೊದಲಿಗೇನೆ ಅವರ ಹೆಸರು ಇರುತ್ತಿತ್ತು ಎಂಬ ಮಾತಿಗೆ ಯಾರೂ ಇಲ್ಲ ಎನ್ನುವುದಿಲ್ಲ. ಬಿಜೆಪಿ ಸರ್ಕಾರ ಬಂದರೆ ಸುರೇಶ್ ಗೌಡ ಅವರು ಸಚಿವರಾಗುತ್ತಾರೆ ಎಂಬ ಕಾರಣದಿಂದಲೇ, ಅವರು ರಾಜಕಾರಣದಲ್ಲಿ ಇನ್ನು ಮೇಲಕ್ಕೆ ತಲುಪುತ್ತಾರೆ ಎಂಬ ಈರ್ಷ್ಯೆಯ ಕಾರಣದಿಂದಲೇ ಬಿಜೆಪಿಯ ಕೆಲವರೇ ಅವರನ್ನು ಸೋಲಿಸಿದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಇನ್ನೂ ಆರ್ ಎಸ್ ಎಸ್ ಹಿನ್ನೆಲೆಯ ತಿಪಟೂರು ಕ್ಷೇತ್ರದ ಬಿ.ಸಿ.ನಾಗೇಶ್ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧ ಅಷ್ಟಕಷ್ಟೇನೆ. ಇದು ಯಾವ ಕಾರಣಕ್ಕೆ ಎಂಬುದು ಆ ಪಕ್ಷದ ಎಲ್ಲರಿಗೂ ಗೊತ್ತು. ಆರ್ ಎಸ್ ಎಸ್ ಜತೆಗಿನ ನಂಟು ಅವರನ್ನು ಸಚಿವ ಸ್ಥಾನಕ್ಕೆ ತಂದು ನಿಲ್ಲಿಸಬೇಕಿತ್ತು. ಆದರೆ ಅವರಿಗೆ ಸಚಿವ ಸ್ಥಾನ ತಪ್ಪಿದೆ. ಈಗ ಮಾಧುಸ್ವಾಮಿ ಬದಲಾದರೆ ನಾಗೇಶ್ ಅವರಿಗೆ ಸಿಗಬಹುದೇನೋ?

ಇನ್ನೂ ತುರುವೇಕೆರೆಯ ಶಾಸಕ ಮಸಾಲ ಜಯರಾಂ ಅವರು ಇದೇ ಮೊದಲ ಸಲ ಶಾಸಕರಾಗಿರುವ ಕಾರಣ ಅವರು ಸಚಿವ ಸ್ಥಾನದಿಂದ ಗಾವುದ್ದ ದೂರ ಇದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮೊದಲ ಸಲ ಗೆಲುವು ಸಾಧಿಸಿದ್ದರೂ ಯಡಿಯೂರಪ್ಪ ಅವರೊಂದಿಗಿನ ನಂಟು ಅವರನ್ನು ಸಚಿವ ಸ್ಥಾನದ ಹತ್ತಿರಕ್ಕೆ ಕರೆದುಕೊಂಡು ಹೋಗಬಹುದೇನೋ? ಆದರೆ ಸಚಿವ ಸ್ಥಾನ ಅವರಿಗೆ ಸಿಗುವುದು ಈಗಿನ ಸ್ಥಿತಿಯಲ್ಲಿ ಸಾಧ್ಯವಾಗದ ಮಾತು.

ಬಿಜೆಪಿಗಾಗಿ ಅಧಿಕಾರ ತ್ಯಾಗದ ಮಾತುಗಳನ್ನು ಮಾಧುಸ್ವಾಮಿ ಆಡಿದ್ದಾರೆ. ,ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೆ ಜಿಲ್ಲೆಗೆ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಜಿಲ್ಲೆಗೆ ಪ್ರಾತಿನಿಧ್ಯ ನೀಡದೇ ಹೋದರೆ ಜಿಲ್ಲೆಗೆ ಅಷ್ಟರಮಟ್ಟಿಗೆ ಆದ ಹಿನ್ನಡೆಯೇ ಆಗಲಿದೆ. ಇದಕ್ಕೆ ಬಿಜೆಪಿಯ ಮುಖಂಡರು ಏನ್ನೆನ್ನುತ್ತಾರೆ ನೋಡಬೇಕು.

ಮಾಧುಸ್ವಾಮಿ ಅವರನ್ನು ಕೈ ಬಿಡುವ ಪ್ರಚಾರ/ ಕೈ ಬಿಡುವಂತೆ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿರುವವರ ಹಿಂದೆ ಜಿಲ್ಲೆಯವರೇ ಇದ್ದಾರೆ ಎಂಬುದು ಆ ಪಕ್ಷದ ಬಹುತೇಕ ಜನರಿಗೆ ಗೊತ್ತಿದೆ. ಸಚಿವ ಸ್ಥಾನ ಕಳೆದುಕೊಂಡರೆ ಅದನ್ನು ಮಾಧುಸ್ವಾಮಿ ಅವರು ಎಂದಾದರೂ ಒಂದು ದಿನ ಬಹಿರಂಗಪಡಿಸಬಹುದು. ಆದರೆ ಅಲ್ಲಿಯವರೆಗೂ ಎಲ್ಲರೂ ಕಾಯಬೇಕು.

ಪಕ್ಷದ ಹಿತದೃಷ್ಟಿಯಿಂದ, ಅಭಿವೃದ್ಧಿ ಕಾರಣದಿಂದ ಸೋತವರಿಗೂ ಸಚಿವ ಸ್ಥಾನ ನೀಡಿರುವ ಬಿಜೆಪಿಯ ಅಜೆಂಡಾ ಜಿಲ್ಲೆಗೆ ವಿಸ್ತರಿಸಿದರೆ ಮಾಜಿ ಶಾಸಕ ಸುರೇಶ್ ಗೌಡ ಅವರಿಗೆ ಸಚಿವ ಸ್ಥಾನ ಸಿಗಬಹುದು. ಆದರೆ ಅಂತ ಅವಕಾಶ ಕ್ಷೀಣವಾಗಿದೆ. ಅವರೇನಿದ್ದರೂ ನಿಗಮ- ಮಂಡಳಿಯಲ್ಲಿ ಸ್ಥಾನ ಸಿಗಬಹುದೇನೋ?

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನದ ವಿಚಾರದಲ್ಲೇ ಮೂರು ಬಣಗಳಾಗಿ ಜಿಲ್ಲಾ ಬಿಜೆಪಿ ಒಡೆದುಹೋಗಿದೆ. ಸಚಿವ ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜ್, ಮಾಜಿ ಸಚಿವ, ಹಿರಿಯ ನಾಯಕ ಎಸ್.ಶಿವಣ್ಣ ಈ ಮೂವರಲ್ಲೂ ಒಮ್ಮತ ಮೂಡಿಬಂದಿಲ್ಲ. ಜಿಲ್ಲೆಯಿಂದ ಯಾರನ್ನು ಸಚಿವರಾಗಿ ಮಾಡಬಹುದು, ಇರುವವರನ್ನೇ ಮುಂದುವರೆಸಬೇಕೆ ಎಂಬ ವಿಚಾರದಲ್ಲಿ ಈ ನಾಯಕರ ನಡುವೆ ಒಗ್ಗಟ್ಟು ಮೂಡಲಿದೆ ಎಂದು ನಿರೀಕ್ಷಿಸಲು ಸಾಧ್ಯವೇ ಎನ್ನುತ್ತಾರೆ ಬಿಜೆಪಿಯ ಮುಖಂಡರೊಬ್ಬರು.

ಜಿಲ್ಲೆಗೆ ಸಚಿವ ಸ್ಥಾನ ತಪ್ಪಿದರೂ ಸಹ ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಒಟ್ಟಾಗಿ ಕೇಳಲಾರರು. ಇನ್ನೂ, ಮತ್ತೊಂದು ಸ್ಥಾನ ಬೇಕೆಂದು ಒತ್ತಡ ಹಾಕುತ್ತಾರೆ ಎಂಬುದು ಕನಸಿನ ಮಾತು ಎಂದರು.

ರಾಜ್ಯದ ಎರಡನೇ ದೊಡ್ಡ ಜಿಲ್ಲೆಯ ಅದ್ವಾನ!

ಲಕ್ಷ್ಮೀಕಾಂತರಾಜು ಎಂಜಿ


Gubbi: ಸರ್ಕಾರಿ‌ ಪ್ರಕಟಣೆ ಹಾಗೂ ಮಾಹಿತಿ ಸತ್ಯಕ್ಕೆ ಹತ್ತಿರವಲ್ಲ ,ಸತ್ಯವಾಗಿಯೇ ಇರುತ್ತವೆ. ಆದರೆ,ಸರ್ಕಾರಿ ಇಲಾಖೆಯ ಕಚೇರಿಯೊಂದು ತನ್ನ ತನ್ನ ವೆಬ್ ಸೈಟಿನಲ್ಲಿ ತಪ್ಪು ಮಾಹಿತಿ ಪ್ರಕಟಿಸಿಕೊಂಡಿದೆ.

ಹೌದು. ರಾಜ್ಯದ ಎರಡನೇಯ ದೊಡ್ಡ ಜಿಲ್ಲೆಯಾದ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ಸರ್ಕಾರಿ ವೆಬ್ ಸೈಟಿನಲ್ಲಿ ಮಾಹಿತಿಗಳನ್ನ ತಪ್ಪಾಗಿ ಪ್ರಕಟಿಸಿದೆ.

ಜಿಲ್ಲೆಯ ಜಿಲ್ಲಾಡಳಿತದ ವಿಷಯಗಳು,ಜಿಲ್ಲೆಯ ಕುರಿತು ಹಾಗೂ ಆಡಳಿತ ಅಧಿಕಾರಿಗಳ ಮಾಹಿತಿಗಳನ್ನ ಈ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿರುತ್ತದೆ‌. ಈ ವೆಬ್ ಸೈಟಿನಲ್ಲಿ ಜಿಲ್ಲೆಯ ಪ್ರಮುಖ ಅಧಿಕಾರಿಗಳಾದ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಯ ಎಸ್ ಪಿ ಹಾಗೂ ಜಿಪಂ ಕಾರ್ಯನಿರ್ವಹಣಾಧಿಕಾರಿಗಳ ಮಾಹಿತಿಯನ್ನ ಪ್ರಕಟಿಸಲಾಗಿರುತ್ತದೆ.

 

ಈ ವೆಬ್ ಸೈಟಿಗೆ ಬೇಟಿಕೊಟ್ಟ ನೆಟ್ಟಿಗರು ಜಿಲ್ಲೆಯ ಅಧಿಕಾರಿಗಳು ಆಡಳಿತ ಸಮಗ್ರ ಮಾಹಿತಿ ಪಡೆಯಬಹುದು. ಇಂಥಹ ಮಹತ್ತರವುಳ್ಳ ವೆಬ್ ಸೈಟಿನಲ್ಲಿ ಪ್ರಸಕ್ತ ಇರುವ ಅಧಿಕಾರಿಗಳ ಹೆಸರು ನಮೂದಿಸದೇ ಹಿಂದೆ ಕಾರ್ಯನಿರ್ವಹಿಸಿದ ಅಧಿಕಾರಿಗಳ ಹೆಸರೇ ಇದ್ದು ಜಿಲ್ಲಾಧಿಕಾರಿಗಳ ಕಚೇರಿಯ ಬೇಜವ್ದಾರಿ ಎದ್ದು ಕಾಣುತ್ತಿದೆ.

ತುಮಕೂರು ಜಿಲ್ಲಾಧಿಕಾರಿಗಳ ವೆಬ್ ಸೈಟಿನ ಪ್ರಕಾರ ಇಂದಿಗೂ ಜಿಲ್ಲೆಯ ಎಡಿಸಿ ಅನಿತಾ , ಜಿಪಂ ಸಿಇಓ ಅನೀಸ್ ಹಾಗೂ ಎಸ್ ಪಿ ದಿವ್ಯಾಗೋಪಿನಾಥ್ ಅವರೇ ಇದ್ದಾರೆ. ವಿಪರ್ಯಾಸ ಅಂದ್ರೆ,ಈ ಅಧಿಕಾರಿಗಳು ಇಲ್ಲಿಂದ ವರ್ಗಾವಣೆಗೊಂಡು ಒಂದೂವರೆ ವರ್ಷಗಳೇ ಕಳೆದು ಎಸ್ ಪಿ ಯಾಗಿ ವಂಶಿಕೃಷ್ಣ ಹಾಗೂ ಜಿಪಂ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಜಿಲ್ಲೆಯ ವೆಬ್ ಸೈಟ್ ನ ನಿರ್ವಹಣೆ ಹೊತ್ತಿರುವ ಎನ್ ಐ ಸಿ ಯು ಬೇವಜಬ್ದಾರಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ವೆಬ್ ಸೈಟ್ ತಪ್ಪು ಮಾಹಿತಿಗಳಿಂದ ಕೂಡಿರುವುದಂತು ಸತ್ಯ.

ಜಿಲ್ಲೆಯ ವೆಬ್ ಸೈಟಿಗೆ ಬೇಟಿಕೊಡುವ ನೆಟ್ಟಿಗರಿಗೆ ಇಲ್ಲಿ ಪ್ರಸ್ತುತವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿವರ ತಿಳಿಯದೇ ತಪ್ಪು ಮಾಹಿತಿ‌ ಪಡೆಯುತ್ತಿದ್ದಾರೆ.

ನೀವು ಮಿಸ್ ಮಾಡದೇ ನೋಡಬೇಕಾದ ಫಲಪುಷ್ಪ ಪ್ರದರ್ಶನ

ಸುಜಾತ ಎಸ್.ಎನ್


Tumkur: ತುಮಕೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಬಗೆಯ ಪುಷ್ಪರಾಣಿಯರ ಆಗಮನದಿಂದ ತೋಟಗಾರಿಕೆ ಆವರಣವು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕಾ ಸಂಘ ಹಾಗೂ ಕೃಷಿ ಇಲಾಖೆ ಆತ್ಮ ಯೋಜನೆ ಇವರ ಸಹಯೋಗದಲ್ಲಿ ಜನವರಿ 31 ರಿಂದ ಫೆಬ್ರುವರಿ 2ರವರೆಗೆ 3 ದಿನಗಳ ಕಾಲ ನಡೆಯುವ ಫಲ-ಪುಷ್ಪ ಪ್ರದರ್ಶನದಲ್ಲಿ ಮೋಹಕ ಮತ್ತು ಅತ್ಯಾಕರ್ಷಕ ಜಗತ್ತನ್ನೇ ತೆರೆದಿಡುವ ವಿವಿಧ ವರ್ಣಮಯ ಹೂವುಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ.

ವಿಶೇಷವಾಗಿ ಹೂವಿನಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಕಲಾಕೃತಿಗಳನ್ನು ನೋಡುಗರ ಕಣ್ಣಿಗೆ ತಂಪೆರೆಯುವ ಅವಕಾಶವನ್ನು ತೋಟಗಾರಿಕೆ ಇಲಾಖೆಯು ಫಲಪುಷ್ಪ ಪ್ರದರ್ಶನದ ಮೂಲಕ ಕಲ್ಪಿಸಿದೆ. ಘಮ-ಘಮ ಸುವಾಸೆನೆಗಳಿಂದ ಕೂಡಿರುವ ಪ್ರದರ್ಶನ ವೀಕ್ಷಿಸಲು ಪ್ರವೇಶ ಉಚಿತವಾಗಿದೆ.

ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10ರವೆರೆಗೆ ನಾಗರಿಕರು ಕಣ್ತುಂಬಿಕೊಳ್ಳಬಹುದು. ಇದರ ಜತೆಗೆ ಮೂರು ದಿನಗಳ ಕಾಲ ಕೃಷಿ ತಜ್ಞರು, ವಿಜ್ಞಾನಿಗಳಿಂದ ರೈತರಿಗೆ ತರಬೇತಿ, ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಪ್ರದರ್ಶನದಲ್ಲಿ ಏನೇನಿದೆ…?


ಗುಲಾಬಿ, ಮಾರಿಗೋಲ್ಡ್, ಕೋಲಿಯಸ್, ಜೀನಿಯಾ, ಕ್ರೈಸಾನ್, ತಮಮ್, ಪೆಟೂನಿಯ, ಆರ್ಕಿಡ್ ಸೆಲೋಷಿಯಾ, ಸಾಲ್ವಿಯ, ಡೆಲಿಯೋ, ಚೆಂಡು ಹೂ, ಸೆಲೋಶಿಯ, ಗೋಲ್ಡನ್‍ಶೆಪ್ಸ್‍ಘಿ, ಬಟನ್ ಹೂ ಸೇರಿದಂತೆ 25ಕ್ಕೂ ಹೆಚ್ಚು ಬಗೆಯ 18 ಸಾವಿರ ಹೂವಿನ ಗಿಡಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಲ್ಲದೇ ತರಕಾರಿ-ಹಣ್ಣುಗಳ, ಕೈ ತೋಟ, ಛಾವಣಿ ತೋಟ, ಮನೆ ಮುಂದಿನ ಅಲಂಕಾರಿಕ ತೋಟ, ಕುಂಡದಲ್ಲಿ ಬೆಳೆಸಿದ ಅಲಂಕಾರಿಕ ಗಿಡಗಳು, ರೈತರು ಬೆಳೆದಿರುವ ಉತ್ತಮ ತೋಟಗಾರಿಕೆ ಬೆಳೆಗಳ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಮಧುವನ ಮಳಿಗೆ ತೆರೆಯಲಾಗಿದ್ದು, ಇದರಲ್ಲಿ ಜೇನು ಕೃಷಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರದರ್ಶನದ ಜತೆಯಲ್ಲಿಯೇ ಸಾಂಸ್ಕøತಿಕ ರಸದೌತಣ ಏರ್ಪಡಿಸಲಾಗಿದೆ. ಸಂಜೆ ವೈವಿಧ್ಯಮಯ ಕಲಾವಿದರಿಂದ ಸಂಗೀತ, ಭರತನಾಟ್ಯ ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ರೈತರು ಮತ್ತು ನಾಗರಿಕರಿಗೆ ಮಾಹಿತಿ ನೀಡಲು ತೊಟಗಾರಿಕೆ ಇಲಾಖೆಯಿಂದ 40 ಮಳಿಗೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳಿಂದ ಸುಮಾರು 120 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಆಯಾ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಿವೆ. ಸರ್ಕಾರಿ ಅಲ್ಲದೆ ಖಾಸಗಿ ಸಂಘ ಸಂಸ್ಥೆಗಳಿಗೆ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಡಿಸ್ನಿ ಥೀಮ್ ನಿರ್ಮಾಣ: ಫಲಪುಷ್ಪ ಪ್ರದರ್ಶನದ ಮತ್ತೊಂದು ವಿಶೇಷವೆಂದರೆ ಸಂಪೂರ್ಣ ಹೂವಿನ ಅಲಂಕೃತ ಡಿಸ್ನಿ (ಕಾರ್ಟೂನ್)ಥೀಮ್. ಬೆಂಗಳೂರಿನ ಕಲಾವಿದರು ಸುಮಾರು 1.8 ಲಕ್ಷ ಹೂಗಳನ್ನು ಬಳಸಿ 30ಅಡಿ ಅಗಲ ಮತ್ತು 20ಅಡಿ ಎತ್ತರದ ಡಿಸ್ನಿ ಥೀಮ್ ನಿರ್ಮಿಸಿದ್ದಾರೆ. ಅಲ್ಲದೇ ಮಕ್ಕಳನ್ನು ಆಕರ್ಷಿಸಲು ವಿವಿಧ ಹೂಗಳನ್ನು ಬಳಸಿ ಪ್ರಾಣಿಗಳ ಕಲಾಕೃತಿ, ಕಾರ್ಟೂನ್‍ಗಳನ್ನು ಅಲಂಕರಿಸಿದ್ದಾರೆ.

ವಿವೇಕಾನಂದರ ಕಲಾಕೃತಿ: ಪ್ರದರ್ಶನದಲ್ಲಿ ಮೈಸೂರಿನ ಕಲಾವಿದೆ ಗೌರಿ ಅವರು ಸ್ವಾಮಿ ವಿವೇಕಾನಂದರ 15 ಅಡಿ ಉದ್ದ ಮತ್ತು 15 ಅಡಿ ಎತ್ತರದ ಮರಳಿನ ಕಲಾಕೃತಿ ತಯಾರಿಸಿದ್ದಾರೆ. ಇದರ ಜತೆಗೆ ಯುವಜನತೆ ಮತ್ತು ಮಹಿಳೆಯರನ್ನು ಆಕರ್ಷಿಸಲು ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ.


ವರದಿಗಾರರು ತುಮಕೂರು ವಾರ್ತಾ ಇಲಾಖೆಯಲ್ಲಿ ನೌಕರರು

ನಾಗಲಮಡಿಕೆಯಲ್ಲಿ ಷಷ್ಠಿಯಂದು ಅನ್ನದ ರಾಶಿ ಇಬ್ಬಾಗವಾಗುತ್ತದೆ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಶುಕ್ರವಾರ ಕುಮಾರ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ, ಜಾತ್ರಾ ಮಹೋತ್ಸವ ಅದ್ದೂರಿಯಿಂದ ನಡೆಯಿತು.

ಕುಮಾರ ಷಷ್ಠಿ ಪ್ರಯುಕ್ತ ಬೆಳಿಗ್ಗೆಯಿಂದ ವಿಶೇಷ ಅಲಂಕಾರಏಕಾದಶ ರುಧ್ರಾಭಿಷೇಕಪಂಚಾಮೃತ ಅಭಿಷೇಕಪ್ರಾಕಾರೋತ್ಸವ

ಇತ್ಯಾದಿ ಪೂಜೆಯ ನಂತರ ಉತ್ಸವ ಮೂರ್ತಿಯನ್ನು ಅನ್ನದ ರಾಶಿಯ ಮೇಲಿರಿಸಿ ಪೂಜೆ ಸಲ್ಲಿಸಲಾಯಿತು.

ಅನ್ನದ ರಾಶಿ ಇಬ್ಬಾಗವಾಗುವುದನ್ನು ನೆರೆದಿದ್ದ ಭಕ್ತಾದಿಗಳು ಕುತೂಹಲದಿಂದ ವೀಕ್ಷಿಸಿದರು.

   ಪೂಜೆಗಾಗಿ ಆಗಮಿಸಿದ್ದ ಸಹಸ್ರಾರು ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರುದೇಗುಲ ಪ್ರಾಂಗಣ, ದೇಗುಲದ ಮುಂದಿರುವ ನಾಗರ ವಿಗ್ರಹಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.

ಜಾತ್ರೆಯಲ್ಲಿ ಬಳೆ, ಬೆಂಡು ಬತ್ತಾಸು, ಆಟಿಕೆಗಳನ್ನು ಕೊಂಡು ಮಹಿಳೆಯರು ಮಕ್ಕಳು ಸಂಭ್ರಮಿಸಿದರು.

ಟೋಪಿ ಇಟ್ಟುಕೊಂಡ ಮಾತ್ರಕ್ಕೆ ಗಾಂಧೀಜಿ ಆಗಲು ಸಾಧ್ಯವಿಲ್ಲ

Publicstory. in


Tumkur; ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿ.ಟಿ.ರವಿ, ಟೋಪಿ ಇಟ್ಟುಕೊಂಡ ಮಾತ್ರಕ್ಕೆ ಗಾಂಧೀಜಿ ಆಗಲು ಸಾಧ್ಯವಿಲ್ಲ ಎಂದರು.

ನೃತ್ಯ ಮತ್ತು ಸಂಗೀತ ಮನೋವಿಕಾಸದ ದೃಷ್ಠಿಯಿಂದ ಆರಂಭವಾಯಿತೇ ಹೊರತು ಕೇವಲ ಮನರಂಜನೆಯ ಉದ್ದೇಶಕ್ಕಾಗಿ ಆರಂಭವಾಗಲಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದರು.

ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಾಸ್ತ್ರೀಯ ನೃತ್ಯಕಲಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲೆಯ ಕ್ಷೇತ್ರವನ್ನು ಶುದ್ಧಗೊಳಿಸುವ ಕೆಲಸ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸಂಸ್ಕಾರ ಭಾರತಿ ಕೆಲಸ ಮಾಡುತ್ತಿದೆ ಎಂದರು.

ಕಲೆಗೆ ಅಂಟಿಕೊಂಡಿರುವ ಕತ್ತಲೆ ದೂರಮಾಡುತ್ತಾ ಸಾಗುತ್ತಿದೆ. ಸಂಗೀತ ಮನಸ್ಸನ್ನು ಮುದಗೊಳಿಸುವ ಕಾರ್ಯವನ್ನು ಮಾಡುತ್ತದೆ. ಸರ್ಕಾರ ಉತ್ತಮ ಶಿಕ್ಷಣ ನೀಡಿ, ಹೊಸ ಅನ್ವೇಷಣೆ ಮಾಡಲು ಸಹಕಾರಿಯಾಗಿದೆ. ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾರಭರಣ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಅರ್ಥ ಮಾಡಿಕೊಂಡರೆ ಸಮಾಜ ಕಟ್ಟುವಲ್ಲಿ ಕಲೆ ಹಾಗೂ ಕಲಾವಿದನ ಕರ್ತವ್ಯ ಏನೆಂಬುದು ಅರ್ಥ ಆಗುತ್ತದೆ. ಕಲೆ ಪ್ರತಿಯೊಬ್ಬರ ಮನಸ್ಸನ್ನು ಹದಗೊಳಿಸುವ ಕೆಲಸ ಮಾಡುತ್ತಿದೆ. ಕಲಾವಿದನು ಪ್ರೀತಿಯ ಮೂಲಕ ಕಲೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಆರೋಗ್ಯ ಸಮಾಜ ನಿರ್ಮಾಣಕ್ಕೆ ಕಲಾವಿದನ ಪಾತ್ರ ಬಹುದೊಡ್ಡದು. ಅದರತ್ತ ನಾವೆಲ್ಲಾರೂ ಸಾಗಬೇಕಾಗಿದೆ. ಶಿಕ್ಷಣದಲ್ಲಿ ಆಗುತ್ತಿರುವ ವ್ಯತ್ಯಾಸ ಸಮಾಜ ಯಾವ ಕಡೆ ಸಾಗುತ್ತಿದೆ ಎಂಬುದರ ಅರಿವು ನಮಗೆ ಬರುತ್ತದೆ. ಮನಸ್ಸನ್ನು ಮುದಗೊಳಿಸುವ ಗುರು ಶಿಷ್ಯರ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಕೆಲಸವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಭರತ ನಾಟ್ಯ ಕಲಾವಿದೆ ಪದ್ಮಶ್ರೀ ಡಾ. ಚಿತ್ರಾ ವಿಶ್ವೇಶ್ವರನ್, ಚಲನಚಿತ್ರ ನಟಿ ಮಾಳವಿಕ ಅವಿನಾಶ್, ಪ್ರಾಂತ ಶಾಸ್ತ್ರೀಯ ನೃತ್ಯೋತ್ಸವ ಅಧ್ಯಕ್ಷ ಎಚ್.ಪಿ. ಚಂದ್ರಶೇಖರ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಯಡಿಯೂರಪ್ಪ ಬಲಿಷ್ಟ ಮುಖ್ಯಮಂತ್ರಿ

Publicstory. in


Tumkur: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಲಿಷ್ಟ ಮುಖ್ಯಮಂತ್ರಿಯಾಗಿದ್ದು ಅವರನ್ನು ಯಾರೂ ಆಟವಾಡಿಸಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಬೇರೆ ಬೇರೆ ಕಾರಣಗಳಿವೆ. ಹೀಗಾಗಿ ಯಡಿಯೂರಪ್ಪ ಅವರನ್ನು ಆಟವಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರೇ ಬೇಕಾದರೆ ಆಟವಾಡಿಸುವ ಶಕ್ತಿ ಇದೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಳಂಕ್ಕೆ ದೆಹಲಿಯ ವಿಧಾನಸಭಾ ಚುನಾವಣೆ ಪ್ರಮುಖ ಕಾರಣ. ದೆಹಲಿ ಚುನಾವಣೆ ಸಮೀಪ ಇರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಪಕ್ಷದಲ್ಲಿ ಪ್ರಮುಖ ವಿಷಯಗಳು ಬಂದಾಗ ಸಣ್ಣ ವಿಷಯಗಳು ಪಕ್ಕಕ್ಕೆ ಸರಿಯುತ್ತವೆ. ಗೌರ್ನರ್ ಬಂದರೆ ಅವರಿಗೆ ಮೊದಲು ದಾರಿ ಬಿಡುವುದಿಲ್ಲವೇ? ಹಾಗೆ ಇಲ್ಲೂ ಕೂಡ ನಡೆದಿದೆ ಎಂದರು.

ಯಡಿಯೂರಪ್ಪನವರು ಬಲಶಾಲಿಗಳು. ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ. ಆದರೆ ಸದ್ಯದ ಮಟ್ಟಿಗೆ ಹೈಕಮಾಂಡ್ ಎಲ್ಲವನ್ನೂ ಗಂಭೀರವಾಗಿ ನೋಡುತ್ತಿದೆ. ಒಬ್ಬ ವೈದ್ಯ ರೋಗಿಯನ್ನು ನೋಡುವ ಹಾಗೆ. ಮೊದಲು ರೋಗಿಯ ಬಿ.ಪಿ ಮತ್ತು ಶುಗರ್ ಕಂಟ್ರೋಲ್ ಆದ ಮೇಲೆ ಶಸ್ತ್ರಚಿಕಿತ್ಸೆ ಮಾಡುವುದಿಲ್ಲವೇ ಹಾಗೆ ಸಚಿವ ಸಂಫುಟ ವಿಸ್ತರಣೆಯೂ ನಡೆಯಲಿದೆ ಎಂದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಸಚಿವ ವಿಳಂಬಕ್ಕೆ ಹೈಕಮಾಂಡ್ ತನ್ನದೇ ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ತಂತ್ರಗಳನ್ನು ಮಾಡುತ್ತಿರುತ್ತದೆ. ಆದ್ಯತೆಯ ಮೇಲೆ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತದೆ ಎಂದು ತಿಳಿಸಿದರು.

ಕವಿತೆಯ ವಿರುದ್ಧ ಕ್ರಮ : ಎಸ್  ದಿವಾಕರ್ ಖಂಡನೆ

Publicstory.


Tumkur: ಇಂತಹದ್ದನ್ನೇ ಬರಿ ಎಂದು ಪ್ರಭುತ್ವ ಯಾವುದೇ ಬರಹಗಾರನ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ಕವಿ ಸಿರಾಜ್ ಬಿಸರಳ್ಳಿ ವಿರುದ್ಧದ ಪ್ರಭುತ್ವದ ಕ್ರಮವನ್ನು ನಾನು ಖಂಡಿಸುತ್ತೇನೆ ಎಂದು ಖ್ಯಾತ ಸಾಹಿತಿ, ವಿಮರ್ಶಕ ಎಸ್ ದಿವಾಕರ್ ತಿಳಿಸಿದರು.

‘ಬಹುರೂಪಿ’ ಪ್ರಕಟಿಸಿದ ದಿವಾಕರ್ ಅವರ ಕವನ ಸಂಕಲನ ‘ಸೋತ ಕಣ್ಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ಅವಧಿ’ ಅಂತರ್ಜಾಲ ತಾಣ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕವಿಗೆ ಬರೆಯುವ ಸ್ವಾತಂತ್ರ್ಯ ಅತಿ ಮುಖ್ಯ. ಸಿರಾಜ್ ಬಿಸರಳ್ಳಿ ವಿರುದ್ಧದ ಕ್ರಮ ಈ ರೀತಿಯ ಸ್ವಾತಂತ್ರ್ಯದ ಹರಣ. ಏನು ಬರೆಯಬೇಕು ಹೇಗೆ ಬರೆಯಬೇಕು ಎಂದು ಯಾವುದೇ ಪ್ರಭುತ್ವ ನಿರ್ದೇಶಿಸಲು ಸಾಧ್ಯವಿಲ್ಲ. ಹಾಗೇನಾದರೂ ನಿರ್ದೇಶಿಸಿದರೆ ಎಲ್ಲಾ ಲೇಖಕರೂ ಅದರ ವಿರುದ್ಧ ನಿಲ್ಲಬೇಕು ಎಂದು ದಿವಾಕರ್ ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಚ ಹ ರಘುನಾಥ್ ಅವರು ಮಾತನಾಡಿ ಈ ಹಿಂದೆ ಗೋಪಾಲಕೃಷ್ಣ ಅಡಿಗರು ಕವಿತೆಗಳನ್ನು ಬರೆದಾಗಲೂ ಈ ರೀತಿಯ ವಾತಾವರಣ ನಿರ್ಮಾಣ ಆಗಿದ್ದನ್ನು ಸ್ಮರಿಸಿದರು. ದಿವಾಕರ್ ಅವರ ಪ್ರಸ್ತುತ ಸಂಕಲನ ರಾಜಕೀಯ ಆಶಯದ ವಸ್ತುವನ್ನು ಹೊಂದಿದ್ದು ಉತ್ತಮ ಶಿಲ್ಪವನ್ನು ಹೊಂದಿದೆ ಎಂದು ಪ್ರಶಂಶಿಸಿದರು.

ಬೇಂದ್ರೆ ದಿನದ ಅಂಗವಾಗಿ ಜರುಗಿದ ಈ ಕಾರ್ಯಕ್ರಮದಲ್ಲಿ ಎಸ್ ದಿವಾಕರ್ ಅವರು ಬೇಂದ್ರೆ ಕವಿತೆಗಳನ್ನು ವಾಚಿಸಿ ಬೇಂದ್ರೆಯವರ ಅನನ್ಯತೆಯ ಲೋಕವನ್ನು ತೆರೆದಿಟ್ಟರು. ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಈ ಕೃತಿ bahuroopi.in ನಲ್ಲಿ ಕೊಳ್ಳಲು ಲಭ್ಯ.

ಅಭಿವೃದ್ಧಿಯೇ ನನ್ನ ಗುರಿ: ಫರೀದಾ

Tumkur: ನಗರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದು ನೂತನ ಮೇಯರ್ ಫರೀದಾ ಬೇಗಂ ತಿಳಿಸಿದರು. ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಬಾರಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿರುವುದು ತಮಗೆ ಸಂತಸ ತಂದಿದೆ.

ಪಾಲಿಕೆಯ ಎಲ್ಲ ವಾರ್ಡ್‍ಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಯನ್ನು ಅರಿತು ಜನರ ಬೇಡಿಕೆಗನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅವಿರೋಧವಾಗಿ ಆಯ್ಕೆ ಮಾಡಿ ನನ್ನ ಮೇಲಿಟ್ಟಿರುವವರ ಭರವಸೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆಂದು ಪ್ರಮಾಣ ಮಾಡಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಂದ ನಗರವು ಧೂಳ್‍ಸಿಟಿಯಾಗಿ ರೂಪಾಂತರಗೊಳ್ಳುತ್ತಿದೆ. ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದೆ ಎಂಬ ಪತ್ರಕರ್ತರ ಮಾತಿಗೆ ಪ್ರತಿಕ್ರಿಯಿಸಿದ ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ ಕಳಪೆ ಕಾಮಗಾರಿ ಕಂಡುಬಂದರೆ ಕ್ರಮ ಕೈಗೊಳ್ಳುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆಂದರು.

ನೂತನ ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ ಮಾತನಾಡಿ, ಮೇಯರ್ ಹಾಗೂ ಉಳಿದ ಸದಸ್ಯರ ವಿಶ್ವಾಸವನ್ನು ತೆಗೆದುಕೊಂಡು ಒಗ್ಗಟ್ಟಾಗಿ ನಗರದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು. ಜನರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು. ನಾಗರಿಕರ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಅಭಿವೃದ್ಧಿ, ಒಳ ಚರಂಡಿ ವ್ಯವಸ್ಥೆ, ವಿದ್ಯುತ್ ದೀಪ, ಉದ್ಯಾನವನಗಳ ಅಭಿವೃದ್ಧಿಗೆ ಪ್ರಥಮಾದ್ಯತೆ ನೀಡಲಾಗುವುದು ಎಂದು ತಿಳಿಸಿದರು

ಗುಲಾಮಗಿರಿ ಚಿತ್ರಕ್ಕೆ ಅಡಿಷನ್

Publicstory. in


ತುಮಕೂರು: ಸಂವಿಧಾನ ಸಿನಿ ಕಂಬೈನ್ಸ್ ನಿರ್ಮಾಣದಲ್ಲಿ ಕನ್ನಡ, ತೆಲುಗು, ತಮಿಳು ಮೂರು ಭಾಷೆಯಲ್ಲಿ ತಯಾರಾಗುತ್ತಿರುವ ತುಮಕೂರು ವಿವಿಯಲ್ಲಿ ನಡೆದ ಗುಲಾಮಗಿರಿ ಚಿತ್ರದ ಕಲಾವಿದರ ಆಡಿಷನ್ ಗೆ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿದೆ ಎಂದ ಚಿತ್ರದ ನಿರ್ದೇಶಕ ಅರುಣ್ ಕೃಷ್ಣ ತಿಳಿಸಿದ್ದಾರೆ.

ತುಮಕೂರು ಜಿಲ್ಲೆಯ ಕಲಾವಿದ ಟೈಗರ್ ನಾಗ್, ನಿರ್ಮಾಪಕ ಸಿ.ವಾಸು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಕಲಾವಿದರ ಆಯ್ಕೆಗೆ ವಿವಿಯಲ್ಲಿ ನಡೆದ ಆಡಿಷನ್ ಪ್ರಕ್ರಿಯೆಯಲ್ಲಿ ಐದು ನೂರಕ್ಕೂ ಹೆಚ್ಚು ಆಸಕ್ತರು ಭಾಗವಹಿಸಿದ್ದರು.

ತುಮಕೂರು ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಕಲಾವಿದರ ಆಡಿಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಎರಡು ಹಂತಗಳಲ್ಲಿ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಕಲಾವಿದರ ಆಯ್ಕೆ ಪೂರ್ಣಗೊಂಡ ನಂತರ ಚಿತ್ರೀಕರಣಕ್ಕೆ ತೆರಳುವುದಾಗಿ ಅವರು ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೆಯಲ್ಲಿ ಚಿತ್ರದ ಸಂಗೀತ ನಿರ್ದೇಶಕ ಸ್ಟೀಫನ್, ನಿರ್ದೇಶನ ತಂಡ ಹಾಗೂ ಚಿತ್ರದ ನಾಯಕ ಟೈಗರ್ ನಾಗ್, ನಿರ್ಮಾಪಕ ಸಿ.ವಾಸು ಸೇರಿದಂತೆ ಇತರರು ಪಾಲ್ಗೊಂಡಿದ್ದರು.