Tuesday, February 24, 2026
Google search engine
Home Blog Page 287

ರಾಜಕೀಯ ಚತುರತೆ, ಆದರ್ಶ ಮೆರೆದ ಶಾಸಕ ಜ್ಯೋತಿಗಣೇಶ್

Publicstory. in


ತುಮಕೂರು: ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ಎರಡು ಕಾರಣಗಳಿಂದಾಗಿ ಜಿಲ್ಲೆಯ ಇತರ ಜನಪ್ರತಿನಿಧಿಗಳಿಗಿಂತ ವಿಭಿನ್ನ ಎಂದು ತೋರಿಸಿಕೊಟ್ಟಿದ್ದಾರೆ.

ಮೃಧು ಹಾಗೂ ಸರಳತೆಯ ಕಾರಣಳಿಂದಾಗಿಯೇ ಅವರ ವಿರೋಧಿ ಪಾಳೆಯದಲ್ಲಿ ಇಂದಿಗೂ ಟೀಕೆಗೆ ಒಳಗಾಗುತ್ತಿರುವ, ಅವರ ಮೃದು ಧೋರಣೆಯ ನಡೆಯನ್ನೇ ಅವರ ಹಿನ್ನಡೆಯಾಗಿ ತೋರಿಸಲು ಯತ್ನಿಸಿ ರಾಜಕೀಯವಾಗಿ ಅವರನ್ನು ಹಿಂದಕ್ಕೆ ನೂಕಲು ಯತ್ನಿಸುತ್ತಿರುವರಿಗೆ ಅವರು ಈಗ ಉತ್ತರ ನೀಡತೊಡಗಿದ್ದಾರೆ.

ಎಂಜಿನಿಯರಿಂಗ್ ಓದಿರುವ, ಗುಬ್ಬಿಯಂತಹ ಸಣ್ಣ ಪಟ್ಟಣದಲ್ಲಿ ಎಂಜಿನಿಯರಿಂಗ್ ಕಾಲೇಜು ಕಟ್ಟಿ ಇಂದು ದೇಶದಲ್ಲಿ ಮಂಜೂಣಿಯ ಗುಣಮಟ್ಟದ ಶಿಕ್ಷಣ ನೀಡುವ ಗ್ರಾಮೀಣ ಪ್ರದೇಶದ ಎಂಜಿನಿಯರಿಂಗ್ ಕಾಲೇಜು ಎಂದು ಬಿರುದಿಗೆ ಪಾತ್ರವಾಗಿರುವಂತೆ ಮಾಡಿರುವ ಹಿಂದೆ ಈ ಮೃದು, ಸರಳತೆಯೇ ಕಾರಣ ಎಂಬುದು ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. ಜ್ಯೋತಿ ಗಣೇಶ್ ಒಂದು ರೀತಿಯಲ್ಲಿಒಲ್ಲದ ಮನಸ್ಸಿನಲ್ಲೇ ರಾಜಕಾರಣಕ್ಕೆ ಬಂದವರು.

ಎರಡು ವರ್ಷಗಳಿಂದಲೂ ಅವರು ರಾಜಕೀಯ ವಿವಾದದಿಂದಲೇ ದೂರು ಇದ್ದವರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಜ್ಯೋತಿ ಗಣೇಶ್ ತಮ್ಮ ರಾಜಕೀಯ ಶಕ್ತಿಯನ್ನು ತೋರಿಸ ತೊಡಗಿದ್ದಾರೆ.

ರಾಜಕಾರಣ ಜನರ ಆಶೋತ್ತರಗಳಿಗೆ ಒಗ್ಗಿ ನಡೆಯುವುದಿಲ್ಲ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಆದರೆ ಜನರ ಆಶೋತ್ತರಗಳಿಗೆ ಪೂರಕವಾಗಿ ಹೆಜ್ಜೆ ಇಡುವ ಮೂಲಕ ಈ ಶಾಸಕರು ಜಿಲ್ಲೆಯಲ್ಲಿ ಹೊಸ ನಡೆಗೆ ಕಾರಣವಾಗಿದ್ದಾರೆ.

ತಿಪಟೂರು ಎಪಿಎಂಸಿ ಕಾರ್ಯದರ್ಶಿಯಾಗಿದ್ದ ನ್ಯಾಮಗೌಡ ಅವರನ್ನು ಆಗಿನ ಕಾಂಗ್ರೆಸ್ ಸರ್ಕಾರ ವರ್ಗಾವಣೆ ಮಾಡಿದಾಗ ರೈತರು ತಿಪಟೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಸಾವಿರಾರು ರೈತರು ಪಾದಯಾತ್ರೆ ನಡೆಸಿದಾಗ ಗುಬ್ಬಿ ಸಮೀಪದ ರೈತರೊಂದಿಗೆ ಸಭೆ ನಡೆಸಿದ ಅಂದಿನ ಜಿಲ್ಲಾ ಉಸ್ತುವಾರಿ ಟಿ.ಬಿ.ಜಯಚಂದ್ರ ಅವರು ಈ ಅಧಿಕಾರಿಯನ್ನು ಪುನಃ ತಿಪಟೂರು ಎಪಿಎಂಸಿ ಕಾರ್ಯದರ್ಶಿಯಾಗಿ ನೇಮಕ ಮಾಡುವ ಭರವಸೆ ನೀಡಿ ಅದರಂತೆ ನಡೆದುಕೊಳ್ಳಲಿಲ್ಲ.

ಆಗಿನ ಶಾಸಕರೊಬ್ಬರು ಇದಕ್ಕೆ ಅವಕಾಶವನ್ನು ಕೊಡಲಿಲ್ಲ.

ಇಂಥದೇ ಘಟನೆಗೆ ಈಚೆಗೆ ಸಾಕ್ಷಿಯಾಗಿದ್ದು ತುಮಕೂರು ನಗರ ಕ್ಷೇತ್ರ. ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಭೂಬಾಲನ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದಾಗ ನಗರದ ಜನರು ಸರ್ಕಾರದ ವಿರುದ್ಧ, ಶಾಸಕರ ನಡೆಯನ್ನು ಟೀಕಿಸಿದ್ದರು. ಬೇರೆ ಶಾಸಕರಾಗಿದ್ದರೆ ಇದನ್ನು ತಮ್ಮ ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿದ್ದರೇನೋ ಅಥವಾ ವಿರೋಧಿಗಳ ಮಾತಿಗೆ ಮಣಿಯಬಾರದು ಎಂದು ಹಠಕ್ಕೆ ಬೀಳುತ್ತಿದ್ದರೇನೋ?

ಸರ್ಕಾರಿ ಅಧಿಕಾರಿಯೊಬ್ಬರನ್ನು ಜನರ ಒತ್ತಾಯಕ್ಕೆ ಮಣಿದು ಮತ್ತೇ ಸ್ವ ಸ್ಥಾನಕ್ಕೆ ವರ್ಗಾವಣೆ ಮಾಡಿಸಿದ ಉದಾಹರಣೆ ಈ ದಶಕದ ಅವಧಿಯಲ್ಲಿ ಜಿಲ್ಲೆಯಲ್ಲಿ ಎಲ್ಲೂ ನಡೆದಿಲ್ಲ. ಇದು ಆದರ್ಶದ ರಾಜಕಾರಣಕ್ಕೆ ಮುನ್ನಡಿಯೇ ಆಗಿದೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಶಾಲಿನಿ ರಜನೀಶ್ ಅವರನ್ನು ಜಿಲ್ಲೆಯಿಂದ ವರ್ಗ ಮಾಡಿಸಲು ಅವರ ತೋರಿದ ದೈರ್ಯ, ರಾಜಕೀಯ ನಡೆ ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಹಿಂದಕ್ಕಿ ಈ ವಿಷಯದಲ್ಲಿ ಅವರು ಚತುರತೆ ತೋರಿದರು. ಒಂದೇ ದಿನದಲ್ಲಿ ವರ್ಗಾವಣೆಯನ್ನು ಸಚಿವರೊಬ್ಬರು ರದ್ದು ಮಾಡಿಸಿದ್ದರು. ಆದರೆ ಮರುದಿನ ಈ ವರ್ಗಾವಣೆ ರದ್ದು ಮಾಡಿಸಿಕೊಂಡು ನೀರಾವರಿ ಯೋಜನೆಗಳ ಬಗ್ಗೆ ವಿಶೇಷ ಆಸಕ್ತಿ, ಬದ್ಧತೆ ಇರುವ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ಹಾಕಿಸಿಕೊಂಡು ತಾವು ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ವಾರ್ಡ್ ಸಮಿತಿ


ಯಾರೂ ಕೂಡ ಕೈ ಹಾಕದ ಕೆಲಸಕ್ಕೆ ಶಾಸಕ ಜ್ಯೋತಿ ಗಣೇಶ್ ಕೈ ಹಾಕಿದ್ದಾರೆ. ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ಗಳಲ್ಲಿ ವಾರ್ಡ್ ಸಮಿತಿ ನೇಮಕ ಮಾಡಲು ಈವರೆಗಿನ ಯಾವ ಶಾಸಕರು ಅವಕಾಶ ಮಾಡಿಕೊಟ್ಟಿರಲಿಲ್ಲ. ಆಯುಕ್ತರಾದ ಭೂ ಬಾಲನ್ ಈಗಾಗಲೇ ಆದೇಶ ಹೊರಡಿಸಿದ್ದಾರೆ.

ವಾರ್ಡ್ ಸಮಿತಿಗಳು ರಚನೆಯಾದರೆ ತುಮಕೂರು ನಗರದ ಆಡಳಿತದಲ್ಲಿ ಸ್ವಚ್ಛತೆ ಕಾಣುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಟ್ಟಾರೆ ಈಮೂರು ವಿಷಯಗಳಲ್ಲಿ ಜ್ಯೋತಿ ಗಣೇಶ್ ಅವರ ನಡೆ ಎಲ್ಲ ರಾಜಕಾರಣಿಗಳಿಗೂ ಬರಲಿ. ಜನರು ಕೇಳುವ ಅಧಿಕಾರಿಗಳು ಆಯಾ ಕಚೇರಿಯಲ್ಲಿ ಇರುವಂತಾಗಲಿ, ಮಧ್ಯವರ್ತಿಗಳು, ಗುತ್ತಿಗೆದಾರರು ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗ ಮಾಡಿಸಿಕೊಂಡು ಬರುವ ಕೆಲಸ ನಿಲ್ಲಲು ಈ ಹೆಜ್ಜೆ ಮುನ್ನಡಿಯಾಗಲಿದೆ.

PLD BANK ನಿರ್ದೇಶಕರಾಗಿ ಶೇಖರ್ ಆಯ್ಕೆ

Publicstory. in


ತುಮಕೂರು: ತುಮಕೂರಿನ ಪಿ ಎಲ್ ಡಿ, ಬ್ಯಾಂಕ್ ನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಕೀಲರಾದ ಟಿ. ಶೇಖರ್ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ತುಮಕೂರಿನ ದಿಬ್ಬೂರಿನವರಾದ ಶೇಖರ್ ಅವರು, ಹಲವು ಸಂಘ –ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದಾರೆ. ತುಮಕೂರು ವಕೀಲರ ಸಂಘದ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮನೆ ಮುಂದೆಯೇ ಗಾಂಜಾ ಬೆಳೆದಿದ್ದ ದೇವಸ್ಥಾನದ ಪೂಜಾರಿ!

ಬಿಗಿನೇಹಳ್ಳಿ ಪೂಜಾರಿ ಮನೆಯಲ್ಲಿ 7 ಕೆ.ಜಿ. ಗಾಂಜ ಗಿಡ ವಶಪಡಿಸಿಕೊಂಡ ಅಬಕಾರಿ ಪೊಲೀಸರು.

Thuruvekere: ಈತ ಅಂತಿಂತ ಪೂಜಾರಿ ಅಲ್ಲ. ಎಲ್ಲರೂ ಬೆಟ್ಟಗುಡ್ಡಗಳಲ್ಲಿ, ಕಾಡಿನ ಮಧ್ಯೆ, ಯಾರೂ ಸುಳಿಯದ ಕಡೆ ಗಾಂಜಾ ಬೆಳೆದರೆ ಈ ಪೂಜಾರಿ ಮನೆ ಮುಂದೆಯೇ ಗಾಂಜಾ ಬೆಳೆದಿದ್ದ.

ಎಲ್ಲರೂ ತಿರುಗಾಡುವ ಸ್ಥಳದಲ್ಲೇ ಬೆಳೆದರೂ ಈ ವರ್ಷ ಯಾರಿಗೂ ಗೊತ್ತೇ ಆಗಿರಲಿಲ್ಲ. ಬರೋಬರಿ 74 ಸಾವಿರ ರೂಪಾಯಿಗಳ ಮೌಲ್ಯದ 7 ಕೆ.ಜಿಯಷ್ಟು ಗಾಂಜಾ ಗಿಡ ಇದಾಗಿತ್ತು.

ಪಟ್ಟಣದ ಅಬಕಾರಿ ಪೊಲೀಸರು ಮಂಗಳವಾರ ಇದನ್ನು  ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಬಿಗಿನೇಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಪಟ್ಟಣದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯೊಂದಿಗೆ ಜಿಲ್ಲಾ ಅಬಕಾರಿ ಉಪ ಆಯುಕ್ತ ಹಾಗು ತಾಲ್ಲೂಕಿನ ತಹಶೀಲ್ದಾರ್ ಆರ್.ನಯೀಂಉನ್ನೀಸಾ ಅವರ ಮಾರ್ಗದರ್ಶನದ ಮೇರೆಗೆ ಬಿಗಿನೇಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಸರ್ಪ ಶನೇಶ್ವರ ದೇವಸ್ಥಾನದ ಪೂಜಾರಿ ಸೋಮಶೇಖರ್ ಅವರ ಮನೆಯ ಮೇಲೆ ಅಬಕಾರಿ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದಾಗ ಮನೆಯ ಮುಂದೆ ಅಕ್ರಮವಾಗಿ ಬೆಳೆದಿದ್ದ ಸು.7 ಕೆ.ಜಿ 550 ಗ್ರಾಂ ತೂಕದ ಒಂದು ಗಾಂಜ ಗಿಡ ಪತ್ತೆಯಾಗಿದೆ.

ಇದರ ಜೊತೆಗೆ ಮನೆಯಲ್ಲಿದ್ದ 200 ಗ್ರಾಂ ಒಣ ಗಾಂಜ ಪುಡಿಯೂ ಸಹ ಪತ್ತೆಯಾಗಿದೆ. ಗಾಂಜ ಸಾಗಿಸಲು ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನೂ ಕೂಡ ಜಪ್ತಿ ಮಾಡಿಕೊಂಡಿದ್ದಾರೆ ವಶಪಡಿಸಿಕೊಂಡ ಒಟ್ಟು ಗಾಂಜ ಮೌಲ್ಯ 74 ಸಾವಿರ ರೂಪಾಯಿಗಳದ್ದಾಗಿದೆಂದು ಅಬಕಾರಿ ಅಧಿಕಾರಿಗಳು ಅಂದಾಜಿಸಿದ್ದು ಆರೋಪಿ ಪೂಜಾರಿ ಸೋಮಶೇಖರ್ ವಿರುದ್ದ ಪಟ್ಟಣದ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕರುಗಳಾದ ಬಿ.ಎಲ್.ರವಿಶಂಕರ್, ಕೆ.ಟಿ.ವಿಜಯಕುಮಾರ್,ಎಂ.ಆರ್.ಸೋಮಶೇಖರ್,ಉಪನಿರೀಕ್ಷಕರುಗಳಾದ ಗಂಗರಾಜು, ರಾಚಮ್ಮ, ಸಿಬ್ಬಂದಿಗಳಾದ ರಾಮು, ಕೇಶವ ಅಂಗಡಿ, ರವಿಕುಮಾರ್, ನರಸಿಂಹಮೂರ್ತಿ ಇದ್ದರು.

ಚಿತ್ರ ಬಿಡಿಸುವುದರಿಂದ ಪಠ್ಯದ ಕಡೆಗೆ ಗಮನ ಹೆಚ್ಚಲಿದೆ

Publicstory. in


Tumukuru: ಮಕ್ಕಳು ಚಿತ್ರಗಳನ್ನು ಬಿಡಿಸುವುದನ್ನು ರೂಡಿಸಿಕೊಂಡರೆ ಅವರ ಮನಸ್ಸು ಹತೋಟಿಗೆ ಬಂದು ಅಭ್ಯಾಸದ ಕಡೆಗೆ ಕೇಂದ್ರೀಕೃತವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್. ನಟರಾಜ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬಾಲಭವನ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ 5 ರಿಂದ 16ರ ವಯೋಮಾನದ ಮಕ್ಕಳಿಗೆ ಏರ್ಪಡಿಸಿದ್ದ ವೇಷಭೂಷಣ ಸ್ಪರ್ಧೆ ಉದ್ಘಾಟಿಸಿ ಅವರು ಮತನಾಡಿದರು.

ಮಕ್ಕಳು ಎಲ್ಲಾ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಆಗುವುದರ ಜೊತೆಗೆ ಬುದ್ಧಿಮತ್ತೆ ಹೆಚ್ಚಾಗುವುದೆಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರಮೇಶ್ ಅವರು ಮಾತನಾಡಿ, ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ರಾಷ್ಟ್ರಭಕ್ತಿ, ದೇಶಪ್ರೇಮ ವೃದ್ಧಿಸುವುದರ ಜೊತೆಗೆ ಯಾವುದೇ ಜಾತಿ, ಮತ, ಬೇಧ-ಭಾವವಿಲ್ಲದೇ ಒಟ್ಟಿಗೆ ಬೆಳೆಯುವಂತಾಗುತ್ತದೆ ಎಂದರು.

ಜಿಲ್ಲಾ ಬಾಲಭವನ ವ್ಯವಸ್ಥಾಪಕ ಕೃಷ್ಣನಾಯ್ಕ್, ಸಂಯೋಜಕಿ ಮಮತ ಪಿ, ಸ್ಪರ್ಧಾ ತೀರ್ಪುಗಾರರು, ಪೋಷಕರು, ವಿವಿಧ ಶಾಲೆಗಳ ಮಕ್ಕಳು ಉಪಸ್ಥಿತರಿದ್ದರು. ವಿಜೇತ ಮಕ್ಕಳಿಗೆ ಬಹುಮಾನ ಮತ್ತು ಪ್ರಶಂಸನ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಹೀಗಿರಲಿ ನಿಮ್ಮ ತೆಂಗಿನ ತೋಟ

ಡಾ. ಗಿರಿಜಮ್ಮ ಜಿ.


Tumukuru: ತೆಂಗು ರಾಜ್ಯದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿದ್ದು, ಇದೊಂದು ದೀರ್ಘಾವಧಿ ಬೆಳೆಯಾಗಿರುವುದರಿಂದ ತೆಂಗಿನ ತೋಟ ಅಭಿವೃದ್ಧಿಪಡಿಸುವಾಗ ಉತ್ತಮ ಗುಣಮಟ್ಟದ ಸಸಿಗಳನ್ನು ಆಯ್ಕೆ ಮಾಡಿ ನಾಟಿ ಮಾಡಬೇಕು.

ಕೆಲವು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ಉತ್ಪಾದನೆ ಮಾಡಿ ಅಧಿಕ ಇಳುವರಿ ಹೊಂದಲು ಸಾಧ್ಯವಿದೆ.

ತೆಂಗಿನ ಬೀಜದಿಂದ ಸಸಿಯನ್ನು ಉತ್ಪಾದಿಸಿ ನಾಟಿ ಮಾಡಿ ಫಲ ಪಡೆಯುವ ಹಂತಕ್ಕೆ ಬರಲು ಸುಮಾರು 7-8 ವರ್ಷಗಳು ಬೇಕಾಗಬಹುದು. ಮುಂಬರುವ ದಿನಗಳಲ್ಲಿ ಉಂಟಾಗುವ ನಷ್ಟ ತಪ್ಪಿಸಲು ಪ್ರಾರಂಭದಲ್ಲಿಯೇ ಉತ್ತಮ ಗುಣಮಟ್ಟದ ಸಸಿಗಳನ್ನು ಆಯ್ಕೆ ಮಾಡಿ ನಾಟಿ ಮಾಡುವುದು ಸೂಕ್ತ.

ಸಸ್ಯೋತ್ಪಾದನೆಯ ವೈಜ್ಞಾನಿಕ ಕ್ರಮಗಳು:


ಬೀಜದ ತೆಂಗಿನಕಾಯಿ ಆಯ್ಕೆ ಮಾಡುವ ತೋಟವು ಮಳೆಯಾಶ್ರಿತವಾಗಿರಬೇಕು. ತೆಂಗಿನ ಇಳುವರಿಯನ್ನು ದುಪ್ಪಟ್ಟುಗೊಳಿಸಲು ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕು ಈ ಹಿನ್ನೆಲೆಯಲ್ಲಿ ಬೀಜ ಸಂಗ್ರಹಣೆಗಾಗಿ ಮಳೆಯಾಶ್ರಯದಲ್ಲೇ ಹೆಚ್ಚಿನ ಇಳುವರಿ ಕೊಡುವ ತೆಂಗಿನ ತೋಟವನ್ನು ಆಯ್ಕೆ ಮಾಡಿಕೊಳ್ಳಬೇಕು. ತೆಂಗು ಬೀಜ ಸಂಗ್ರಹಿಸುವ ತೋಟದಲ್ಲಿ ಆರೋಗ್ಯವಂತ, ಸದೃಢ ಮತ್ತು ಹೆಚ್ಚು ಇಳುವರಿ ಕೊಡುವ ಮರಗಳು ಶೇ.60ಕ್ಕಿಂತಲೂ ಹೆಚ್ಚಿರಬೇಕು.

ತೆಂಗು ಬೆಳೆಯಲ್ಲಿ ಪರಕೀಯ ಪರಾಗಸ್ಪರ್ಶ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಹಾಗೂ 80ಕ್ಕೂ ಹೆಚ್ಚು ಇಳುವರಿ ಕೊಡುವ ಮರಗಳಿರುವುದು ಅತ್ಯಂತ ಅವಶ್ಯಕ. ಕೇವಲ ಒಂದೆರೆಡು ಮರಗಳಲ್ಲಿ ಹೆಚ್ಚುವರಿ ಇಳುವರಿ ಇದ್ದು, ಉಳಿದ ಮರಗಳಲ್ಲಿ ಇಳುವರಿ ಕಳಪೆಯಾಗಿದ್ದಲ್ಲಿ ಅಂತಹ ತೋಟದಲ್ಲಿ ಮರಗಳನ್ನು ಆಯ್ಕೆ ಮಾಡಬಾರದು.

ತೆಂಗು ಬೀಜ ಸಂಗ್ರಹಣೆಗೆ ಆಯ್ಕೆ ಮಾಡುವ ತೋಟದ ಮರಗಳ ವಯಸ್ಸು 25 ರಿಂದ 50 ವರ್ಷಗಳಾಗಿರಬೇಕಲ್ಲದೆ 50 ವರ್ಷಗಳಿಗಿಂತ ಮೇಲ್ಪಟ್ಟ ಹಾಗೂ ತುಂಬಾ ಹಳೆಯ ಮರಗಳಲ್ಲಿ ಚೈತನ್ಯ ತುಂಬಾ ಕಡಿಮೆ ಇರುವುದರಿಂದ ಇಂತಹ ಮರಗಳಲ್ಲಿ ಬೀಜದ ಕಾಯಿ ಸಂಗ್ರಹಿಸಬಾರದು.

ಈ ಮರಗಳಲ್ಲಿ ತೋಟದಲ್ಲಿರುವ ಮರಗಳ ಪೈಕಿ ಆರೋಗ್ಯವಂತ, ಕೀಟ ರೋಗ ಬಾಧೆಗಳಿಲ್ಲದ ಮತ್ತು ಛತ್ರಿಯಾಕಾರದಲ್ಲಿ ಜೋಡಿಸಲ್ಪಟ್ಟ 12ಕ್ಕಿಂತ ಹೆಚ್ಚು ಗರಿಗಳುಳ್ಳ ಮತ್ತು ಹೆಚ್ಚು ಇಳುವರಿ ಕೊಡುವ ಮರಗಳನ್ನು ತಾಯಿ ಮರಗಳೆಂದು ಗುರುತಿಸಬೇಕು.

ಕಾಯಿಗಳ ಗೊಂಚಲು ತೆಂಗಿನ ಗರಿಯ ಎಡೆಮಟ್ಟೆಯ ಮೇಲೆ ಕುಳಿತುಕೊಂಡಿರಬೇಕು, ಅಲ್ಲದೇ ಜೋತಾಡುತ್ತಿರುವ ಗೊನೆ ಬಿಟ್ಟಿರುವ ಮರಗಳನ್ನು ಆಯ್ಕೆ ಮಾಡಬಾರದು, ಜೋತಾಡುವ ಗೊನೆಗಳ ಕಾಯಿಗಳು ಚೆನ್ನಾಗಿ ಅಭಿವೃದ್ಧಿಯಾಗದೇ ಗಾತ್ರ ಕುಂಠಿತವಾಗುವುದರಿಂದ ಹಾಗೂ ಎಳೆಯ ಕಾಯಿಗಳು ಬಿದ್ದು ಹೋಗಬಹುದು.

ಗುಂಡಾದ ಅಥವಾ ಗೋಳಾಕಾರದ ಮಧ್ಯಮ ಗಾತ್ರದ ಕಾಯಿಗಳನ್ನು ಬಿಡುವ ಮರಗಳನ್ನು ಆಯ್ಕೆ ಮಾಡಬೇಕು ದಪ್ಪ ಅಥವಾ ಎಮ್ಮೆ ತಲೆ ಮತ್ತು ಸಣ್ಣ ಗಾತ್ರದ ಮತ್ತು ಏಣು ಕಾಯಿಗಳನ್ನು ಬಿಡುವ ಮರಗಳನ್ನು ಆಯ್ಕೆ ಮಾಡಬಾರದು.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ಮಾಹೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ತಾಯಿ ಮರದಿಂದ ಚೆನ್ನಾಗಿ ಬಲಿತ ಬೀಜಗಳನ್ನು ಕೊಯ್ಲು ಮಾಡಿ ಸಂಗ್ರಹಿಸಬೇಕು.

ತೆಂಗಿನ ಕಾಯಿಗಳಿಗೆ ಏಟು ಬೀಳದಂತೆ ಕಟಾವು ಮಾಡಬೇಕು, ಕೊಯ್ಲಾದ ಕಾಯಿಗಳಲ್ಲಿಯೂ ಸಹ ಗುಂಡಾದ ಮಧ್ಯಮ ಗಾತ್ರದ ಕಾಯಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ಕಾಯಿಗಳನ್ನು ನೆರಳಿನಲ್ಲಿ ಗಾಳಿಯಾಡುವ ಪ್ರದೇಶದಲ್ಲಿ ಸಂಗ್ರಹಿಸಬೇಕು. ಕಾಯಿಗಳಲ್ಲಿ ನೀರು ಬತ್ತುವವರೆಗಿನ ಅವಧಿಯಲ್ಲಿ ವಾರಕ್ಕೊಮ್ಮೆ ಬೂಷ್ಟು ಹಿಡಿಯದಂತೆ ತಿರುವಿಹಾಕುತ್ತಿರಬೇಕು.

ಚಿಲುಕು ನೀರು ಇರುವ ಕಾಯಿಗಳನ್ನು 25ಘಿ4 ಅಡಿ ಅಳತೆಯ ಸಸಿ ಮಡಿಗಳಲ್ಲಿ ತೊಟ್ಟಿನ ಭಾಗ ಮೇಲೆ ಬರುವಂತೆ ನಾಟಿ ಮಾಡಬೇಕು. ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಕಾಯಿಗಳನ್ನು ಅಡ್ಡಲಾಗಿ ಮಲಗಿಸಿ ನಾಟಿ ಮಾಡಬಹುದು. ಇದರಿಂದ ಕಣ್ಣುಕೊಳೆಯುವ ರೋಗವನ್ನು ನಿಯಂತ್ರಿಸಬಹುದು.

ಹದವರಿತು ಆಗಾಗ್ಗೆ ನೀರು ಹಾಯಿಸುತ್ತಿರಬೇಕು. ಚಿಲುಕು ನೀರು ಇರುವ ನಾಟಿ ಮಾಡಿದ ಕಾಯಿಗಳು ಮೂರು ತಿಂಗಳ ಅವಧಿಯಲ್ಲಿ ಮೊಳಕೆ ಬರುತ್ತವೆ. ಆ ನಂತರವು ಕೆಲವು ಕಾಯಿಗಳಲ್ಲಿ ತಡವಾಗಿ ಮೊಳಕೆ ಬರುತ್ತಿರುತ್ತದೆ. ಮೂರು ತಿಂಗಳಲ್ಲಿ ಮೊಳಕೆ ಬಂದ ಸಸಿಗಳು ಉತ್ತಮ ಗುಣಮಟ್ಟದ ಮತ್ತು ಭವಿಷ್ಯದಲ್ಲಿ ಅಧಿಕ ಇಳುವರಿ ನೀಡುವ ಸಾಮಥ್ರ್ಯ ಹೊಂದಿರುತ್ತವೆ.

ತಡವಾಗಿ ಮೊಳಕೆ ಬಂದ ಸಸಿಗಳು ಕಳಪೆ ಗುಣಮಟ್ಟದವಾಗಿದ್ದು, ಅಧಿಕ ಇಳುವರಿ ನೀಡುವ ಸಾಮಥ್ರ್ಯ ಹೊಂದಿರುವುದಿಲ್ಲ. ಇಂತಹ ಸಸಿಗಳನ್ನು ನಾಟಿ ಮಾಡಲು ಬಳಸಬಾರದು. ಸುಮಾರು ಮೂರು ತಿಂಗಳ ಅವಧಿಯಲ್ಲಿ ಮೊಳಕೆ ಬಂದ ಸಸಿಗಳು ಬೇರೆ ಎಲ್ಲಾ ಸಸಿಗಳಿಗಿಂತ ಮೊದಲು ಪೀಪಿ ಗರಿಗಳನ್ನು ಬಿಡುತ್ತವೆ.

ನಾಟಿ ಮಾಡಲು ಪೀಪಿ ಗರಿ ಬಂದಿರುವ ಮತ್ತು ಮುಷ್ಟಿ ಗಾತ್ರದ ಕಾಂಡ ಹೊಂದಿರುವ ಆರು ತಿಂಗಳಿಂದ ಎರಡು ವರ್ಷಗಳ ವಯೋಮಾನದ ಸಸಿಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಮುಂದೆ ಉತ್ತಮ ಗುಣಮಟ್ಟದ ಶೀಘ್ರ ಫಲಕ್ಕೆ ಬರುವ ಮತ್ತು ಹೆಚ್ಚು ಇಳುವರಿ ಕೊಡುವ ತೋಟಗಳನ್ನು ಅಭಿವೃದ್ಧಿ ಪಡಿಸಬಹುದಾಗಿರುತ್ತದೆ.

ತೆಂಗಿನ ಬೆಳೆಯಲ್ಲಿ ಪರಕೀಯ ಪರಾಗಸ್ಪರ್ಶದಿಂದ ಕಾಯಿ ಕಚ್ಚುವುದರಿಂದ ಒಂದೇ ತಾಯಿ ಮರದ ಬೀಜಗಳನ್ನು ಬಳಸಿ ಬೆಳೆಸಿದ ಸಸಿ ಮಡಿಗಳಲ್ಲಿ ಸಹ ಮೊಳಕೆ ಬರುವ ಅವಧಿಯಲ್ಲಿ ವ್ಯತ್ಯಾಸವಾಗುತ್ತದೆ. ಆದುದರಿಂದ ಶೀಘ್ರ ಮೊಳಕೆ ಬಂದ ಸಸಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಉಳಿದ ಸಸಿಗಳನ್ನು ತಿರಸ್ಕರಿಸಬೇಕು.

ಶೀಘ್ರ ಮೊಳಕೆ ಬಂದ ಸಸಿಗಳು ನೀರು ಮತ್ತು ಗೊಬ್ಬರದ ಉಪಚಾರ ಮತ್ತಿತರೆ ಬೇಸಾಯ ಕ್ರಮಗಳಿಗೆ ಸಕಾರಾತ್ಮಕ ಸ್ಪಂದನೆಯನ್ನು ನೀಡುವುದರಿಂದ ತೆಂಗಿನ ಉತ್ಪಾದನೆ ಹೆಚ್ಚುತ್ತದೆ ಎಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಹಾರ್ಟಿಕ್ಲಿನಿಕ್ ಅಥವಾ ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.


ಲೇಖಕಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತುಮಕೂರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.

ಸುಗ್ಗಿ-ಹುಗ್ಗಿ: ಸಚಿವ ಮಾಧುಸ್ವಾಮಿ ಸಂತಸ

Tumukuru: ಹಿಂದಿನ ಕಾಲದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಹೊಲದಿಂದ ಮನೆಗೆ ತರುವಾಗ ಸುಗ್ಗಿ ಹಬ್ಬವೆಂದು ಸಂಭ್ರಮಿಸುತ್ತಿದ್ದರು. ಆದರೆ ಈಗಿನ ಧಾವಂತ ಜೀವನದಲ್ಲಿ ಯಾಂತ್ರೀಕೃತ ಬದುಕಾಗಿದ್ದು ಸುಗ್ಗಿ ಹಬ್ಬವನ್ನು ಆಚರಿಸುವುದನ್ನು ಬಿಡುತ್ತಿದ್ದಾರೆ. ಇದನ್ನು ಮನಗಂಡ ಸರ್ಕಾರ ಸುಗ್ಗಿ-ಹುಗ್ಗಿ ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಕನ್ನಡ ಸಂಸ್ಕತಿ ಇಲಾಖೆಯಿಂದ ಅನುಷ್ಠಾನಗೊಳಿಸಿ ಅರ್ಥಪೂರ್ಣ ಆಚರಣೆಗೆ ಚಾಲನೆ ನೀಡಿದಂತಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಚಿಕ್ಕನಾಯಕನಹಳ್ಳಿಯ ಅಣೆಕಟ್ಟೆ ಸರ್ಕಾರಿ ಶಾಲಾ ಮೈದಾನದಲ್ಲಿ ಜ. 25ರಂದು ಏರ್ಪಡಿಸಿದ್ದ ಸುಗ್ಗಿ-ಹುಗ್ಗಿ ಸಿರಿಧಾನ್ಯಗಳೊಂದಿಗೆ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಜಾನಪದ ಕಲಾತಂಡಗಳ ಮೆರವಣಿಗೆಯನ್ನು ನಡೆಯಿತು. ತಹಶೀಲ್ದಾರ್ ತೇಜಸ್ವಿನಿ ಮತ್ತು ಹಿರಿಯ ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಜು ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಪಟ ಕುಣಿತ, ವೀರಗಾಸೆ, ಚಕ್ಕ ಭಜನೆ, ಪೂಜಾ ಕುಣಿತ, ತಮಟೆ, ಕೊಂಬುಕಹಳೆ, ಡೊಳ್ಳು ಕುಣಿತ, ಕಂಸಾಳೆ, ನಂದಿಧ್ವಜ ಕುಣಿತ, ನಾಸಿಕ್‍ಡೋಲು, ಲಂಬಾಣಿ ನೃತ್ಯ ಮತ್ತು ಸೋಮನ ಕುಣಿತ ಕಲಾವಿದರು ಭಾಗವಹಿಸಿ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನ ಮಾಡಿದರು.

ವೇದಿಕೆಯ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಜಾನಪದ ಗೀತ ಗಾಯನ, ನೃತ್ಯರೂಪಕ, ನೀಲಗಾರರ ಪದಗಳು, ತೊಗಲುಗೊಂಬೆ ಕಾರ್ಯಕ್ರಮ ಪ್ರದರ್ಶನಗೊಂಡವು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿದೇಶಕ ಬಸವರಾಜಪ್ಪ ಆಪಿನಕಟ್ಟೆ, ತಾಲ್ಲೂಕು ಕನ್ನಡ ಜಾನಪದ ಪರಿಷತ್ ಕಾರ್ಯದರ್ಶಿ ಸಿ.ರವಿಕುಮಾರ್, ಎ.ಜಿ.ಸಿದ್ಧಲಿಂಗಸ್ವಾಮಿ ಮತ್ತು ಎ.ಆರ್.ಪ್ರವೀಣ್, ಇವರು ಉಪಸ್ಥಿತರಿದ್ದರು.

ದೇವರ ಕುದುರೆಗೆ ವೀಚಿ ಪ್ರಶಸ್ತಿಯ ಗರಿ

Publicstory. in


ತುಮಕೂರು: ಕಥೆಗಾರ ಎಸ್ ಗಂಗಾಧರಯ್ಯ, ಸುರೇಶ್ ನಾಗಲಮಡಿಕೆ ಮತ್ತು ಭುವನಾ ಹಿರೇಮಠ ಅವರು 2019ನೇ ಸಾಲಿನ ವೀಚಿ ಸಾಹಿತ್ಯ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.

2018ರಲ್ಲಿ ಪ್ರಕಟವಾಗಿದ್ದ ಆಯ್ಕೆಗೆ ಬಂದಿದ್ದ 162 ಕೃತಿಗಳನ್ನು ಅವಲೋಕನ ಮಾಡಿ ಈ ಆಯ್ಕೆಯನ್ನು ಮಾಡಲಾಗಿದೆ.

ಎಸ್. ಗಂಗಾಧರಯ್ಯ ಅವರ ‘ದೇವರ ಕುದುರೆ’ ಕಥಾಸಂಕಲನ ಮತ್ತು ಸುರೇಶ್ ನಾಗಲಮಡಿಕೆ ಅವರ ‘ಹಲವು ಬಣ್ಣದ ಹಗ್ಗ’ ವಿಮರ್ಶಾ ಕೃತಿ ವೀಚಿ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಪ್ರಶಸ್ತಿಯನ್ನು ಇಬ್ಬರಿಗೂ ಸಮನಾಗಿ ಹಂಚಿಕೆ ಮಾಡಲಾಗಿದೆ. ಪ್ರಶಸ್ತಿಯು ರೂ.25000/- ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಸುರೇಶ್ ನಾಗಲಮಡಿಕೆ

ಭುವನಾ ಹಿರೇಮಠ ಅವರ ‘ಟ್ರಯಲ್ ರೂಮಿನ ಅಪ್ಸರೆಯರು’ ಎಂಬ ಕವನ ಸಂಕಲನ ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾಗಿದ್ದು, ಪ್ರಶಸ್ತಿಯು ರೂ.5000/-ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಲೇಖಕರಾದ ಡಾ.ಕರೀಗೌಡ ಬೀಚನಹಳ್ಳಿ, ಡಾ.ವಸುಂಧರಾ ಭೂಪತಿ ಮತ್ತು ಡಾ.ರವಿಕುಮಾರ್ ನೀಹ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಈ ಸಾಲಿನ ಈ ಪ್ರಶಸ್ತಿಗಳನ್ನು ಆಯ್ಕೆಮಾಡಿದೆ.

ಭುವನ ಹಿರೇಮಠ

ಫೆಬ್ರವರಿ 23 ರಂದು ತುಮಕೂರು ಕನ್ನಡ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಎಲ್ಲಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ತುಮಕೂರು ಜಿಲ್ಲೆಯಲ್ಲಿ 250 ಚಿರತೆಗಳು!

0

ಲಕ್ಷ್ಮೀಕಾಂತರಾಜು ಎಂ.ಜಿ


ತುಮಕೂರು: ತುಮಕೂರು ಜಿಲ್ಲೆ ಭೌಗೋಳಿಕವಾಗಿ ಶುದ್ಧ ಬಯಲು ಸೀಮೆ ಪ್ರದೇಶ. ಇಲ್ಲಿ ದಟ್ಟಾರಣ್ಯ ಇಲ್ಲವೇ ಇಲ್ಲ‌. ಇರುವ ಅರಣ್ಯ ಪ್ರದೇಶ ಕುರುಚುಲು ಅರಣ್ಣದಿಂದ ಕೂಡಿದ್ದು ಇತ್ತೀಚಿನ ವರ್ಷಗಳಲ್ಲಿ ಈ ಕಾಡು ಚಿರತೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.

ಈಚೆಗೆ ಹೆಬ್ಬೂರು ಸಮೀಪ ಚಿರತೆಗೆ ಬಲಿಯಾದ ಮಗು

ಹೌದು. ತುಮಕೂರು ಜಿಲ್ಲೆಯು ದೊಡ್ಡ ದೊಡ್ಡ ಕಾಡು ಹೊಂದಿಲ್ಲದಿದ್ದರೂ ಇಲ್ಲಿರು ಕುರುಚುಲು ಕಾಡಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಅರಣ್ಯದಂಚಿನ ಗ್ರಾಮಗಳಲ್ಲೀಗ ಚಿರತೆಗಳ ಭಯದ ವಾತಾವರಣ ಹೆಚ್ಚಾಗಿದ್ದು ರೈತಾಪಿ ವರ್ಗ ತೋಟಗಳಲ್ಲಿ ಹಗಲೊತ್ತು ಭಯದಲ್ಲಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಉಂಟಾಗಿದೆ.

ಗುಬ್ಬಿ ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ ಕಂಡ ಚಿರತೆ

ಇತ್ತೀಚೆಗೆ ಗುಬ್ಬಿ ತಾಲ್ಲೂಕು ಮಣಿಕುಪ್ಪೆಯ ಆರು ವರ್ಷದ ಬಾಲಕನ ಸಾವು ಸೇರಿದಂತರ ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ 2019 ರಲ್ಲಿ ನಾಲ್ಕು ಸಾವುಗಳಾಗಿವೆ.

ತುಮಕೂರು ಜಿಲ್ಲೆಯಲ್ಲಿ ಕುರಿ ಸಾಕಣಿಕೆ ಹೆಚ್ಚಿದ್ದು ಕುರಿ ಮೇಯಿಸಲು ಅಡವಿ ಕಡೆ ಹೊರಟ ಕುರಿ ಹಿಂಡನ್ನೇ ಕಾಯುವ ಚಿರತೆಗಳು ಕುರಿ ಹೊತ್ತೊಯ್ದು ತಿನ್ನುವ ಪ್ರಕರಣಗಳು ಮಾಮೂಲಾಗಿಬಿಟ್ಟಿವೆ ಎನ್ನುತ್ತಾರೆ ಇಲ್ಲಿನ ಕುರಿಗಾಯಿಗಳು.

ಪಾವಗಡ ಸಮೀಪ ಚಿರತೆಗೆ ಬಲಿಯಾದ ಮೇಕೆಗಳು


250 ಚಿರತೆಗಳಿರುವುದು ನಿಜ: ಡಿಸಿಎಫ್
ತುಮಕೂರು‌ ಜಿಲ್ಲೆಯಲ್ಲಿ ಎಲ್ಲ ಕಡೆ ಚಿರತೆ ಇದ್ದು ನಮ್ಮ ಸಮೀಕ್ಷೆಯ ಪ್ರಕಾರ 250 ಚಿರತೆಗಳಿವೆ. ಚಿರತೆಗಳಿವೆ ಎಂದ ಮಾತ್ರಕ್ಕೆ ಎಲ್ಲವನ್ನೂ ಹಿಡಿಯಲು ಆಗುವುದಿಲ್ಲ. ಕಾಡು ವಾಸಿ ಪ್ರಾಣಿ ಎಲ್ಲ ಚಿರತೆಗಳನ್ನ ಹಿಡಿಯುವದಾದರೆ ಕಾಡೇಕೆ? ಈ ಭಾಗದಲ್ಲಿ ಮಾನವನ ಮೇಲೆ ದಾಳಿ ಮಾಡುವ ನಾಲ್ಕೈದು ಚಿರತೆಗಳಿವೆ. ಅವುಗಳನ್ನ ಸೆರೆ ಹಿಡಿಯಲು ನಿರಂತರ ಪ್ರಯತ್ನದಲ್ಲಿದ್ದೇವೆ. ಜನ ಆತಂಕಕ್ಕೆ ಒಳಗಾಗುವುದು ಬೇಡ.
ಗಿರೀಶ್ . ಡಿಸಿಎಫ್
ತುಮಕೂರು


2019 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ರಸ್ತೆ ದಾಟುವಾಗ ವಾಹನಗಳ ಅಪಘಾತದಿಂದ ನಾಲ್ಕು ಚಿರತೆಗಳು ಸಾವನ್ನಪ್ಪಿದ್ದು ಈ ಸಾವಿನ ಸಂಖ್ಯೆಯು ಇಲ್ಲಿನ ಚಿರತೆಗಳ ಸಂತತಿ ಹೆಚ್ಚಿರುವುದಕ್ಕೆ ಸ್ವಷ್ಟ ಉದಾಹರಣೆಯಾಗಿದೆ.

ತುಮಕೂರು ಅರಣ್ಯ ಇಲಾಖೆಯು 2019 ರಲ್ಲಿ ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಮತ್ತು ಮಾಂಸಹಾರಿ ಪ್ರಾಣಿಗಳ ಸಮೀಕ್ಷೆ ಮಾಡಿದಾಗ ಜಿಲ್ಲೆಯ ಅರಣ್ಯದಲ್ಲಿ 250 ಚಿರತೆಗಳಿರುವುದು ವರದಿಯಾಗಿದೆ. ಈ ಪ್ರಮಾಣದಲ್ಲಿ ಈ ಬಯಲು ಸೀಮೆಯ ಕಾಡಿನಲ್ಲಿ ಚಿರತೆ ಹೆಚ್ವಿದ್ದು ರೈತಾಪಿ ವರ್ಗಕ್ಕೂ ತೊಂದರೆಯಾಗಿ ಅರಣ್ಯ ಇಲಾಖೆಯ ಮಾನವ ಸಂಪನ್ಮೂಲವು ವ್ಯರ್ಥವಾಗುತ್ತಿದೆ ಎನ್ನುತ್ತಾರೆ ಇಲಾಖೆ ಹೆಸರೇಳದ ನೌಕರರೊಬ್ಬರು.

ಕಳೆದ ಎರೆಡು ವರ್ಷಗಳ ಹಿಂದೆ ತುಮಕೂರು ನಗರದ ಮಧ್ಯ ಭಾಗದ ಮನೆಯೊಂದಕ್ಕೆ ಚಿರತೆ ನುಗ್ಗಿದ್ದು ಇಲ್ಲಿನ ಚಿರತೆ ದಾಳಿಯನ್ನ ಉದಾಹರಿಸುತ್ತದೆ.

ಅರಣ್ಯನಾಶ ಹಾಗೂ ಪ್ರಾಣಿಗಳ ಆವಾಸ ಸ್ಥಾನವನ್ನ ಮಾನವ ದಿನೇ ದಿನೆ ಅಕ್ರಮಿಸಿರುವಿದು ಕಾಡಿನ ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ ಎನ್ನುತ್ತಾರೆ ಪರಿಸರವಾದಿಗಳು.

ಈ ಬಯಲು ಸೀಮೆಯಲ್ಲಿ‌ಇತ್ತೀಚಿನ ವರ್ಷಗಳಲ್ಲಿ ಹೆಚ್ಷಾಗಿರುವ ಕೋಳಿಫಾರಂಗಳಿಂದ ಸಹ ಆಕರ್ಷಿತವಾದ ಚಿರತೆಗಳು ಗ್ರಾಮಗಳತ್ತ ಮುಖ ಮಾಡಲು ಇದು ಸಹ ಕಾರಣವಾಗಿದೆ.

ಚಿರತೆಗಳ ದಾಳಿಗಳಿಂದ ಸಾವೀಗೀಡಾದ ಮನೆಯವರಿಗೆ ಈಗ ಸರ್ಕಾರದ ಹೊಸ ಆದೇಶದಂತೆ ಅರಣ್ಯ ಇಲಾಖೆ 7.5 ಲಕ್ಷ ಪರಿಹಾರ ನೀಡುತ್ತಿದೆ. ಇದರಿಂದ ಇಲಾಖೆಗೆ ಹೊರೆಯಾಗುವದರ ಜೊತೆಗೆ ಅರಣ್ಯದ ಇತರೆ ಕೆಲಸ ಮಾಡುವುದು ಬಿಟ್ಟು ಚಿರತೆಗಳ ಚಲನವಲನ ನೋಡುವುದೇ ಕೆಲಸವಾಗಿದೆ.

ಜಿಲ್ಲೆಯಲ್ಲಿ ಕೃತಕ ನೀರಾವರಿ ಪ್ರಮಾಣವೇ ಹೆಚ್ಚು. ಆದ್ದರಿಂದ ರೈತರು ಪಂಪುಸೆಟ್ಟುಗಳಿಂದ‌ ನೀರನ್ನ ತೋಟಗಳಿಗೆ ಬಿಡಲು ರಾತ್ರಿ ವೇಳೆಯಲ್ಲಿ ಹೆಚ್ಚು ಹೋಗುತ್ತಾರೆ. ಈಗ ಬೇಸಿಗೆ ಆರಂಭವಾಗಿದ್ದು ರಾತ್ರಿ ವೇಳೆ ತೋಟಕ್ಕೆ ಹೋಗುವ ಅನಿವಾರ್ಯತೆ ಹೆಚ್ಚಿದ್ದು ಇದೇ ಸಮಯಕ್ಕೆ ಚಿರತೆಗಳ ಹಾವಳಿಯಿಂದ ರೈತ ಕಂಗಲಾಗಿರುವುದಂತೂ ಸತ್ಯ.

ಸಿದ್ಧಾರ್ಥ ಸಂಪದ ಬಿಡುಗಡೆ

ತುಮಕೂರು: ಮುದ್ರಣ ಮಾಧ್ಯಮದ ಬೆಳವಣಿಗೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಉತ್ತಮವಾದ ಜನಮನ್ನಣೆಯನ್ನು ಪಡೆಯುವಲ್ಲಿ ಪತ್ರಿಕೆಗಳು ವಿಶ್ವಾಸನಾರ್ಹ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂಜಯ್ ಮಾಲಗತ್ತಿ ಅಭಿಪ್ರಾಯಪಟ್ಟರು.

ತುಮಕೂರಿನ ಎಸ್ಎಸ್ಐಟಿ ಕ್ಯಾಂಪಸ್ನಲ್ಲಿರುವ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಭಾಗದಿಂದ ಪ್ರಕಟಿಸುತ್ತಿರುವ ಸಿದ್ಧಾರ್ಥ ಸಂಪದ 42 ನೇ ಪ್ರಾಯೋಗಿಕ ಪತ್ರಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳ ಬದಲಾವಣೆಯಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಮುದ್ರಣ ಮಾಧ್ಯಮದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗಿವೆ, ಆದರೆ ಸತ್ಯಾಸತ್ತತೆಯನ್ನು ಇನ್ನೂ ಉಳಿಸಿಕೊಂಡಿದೆ. ಜನರು ಇಂದಿನ ಪತ್ರಿಕೆಗಳನ್ನು ವಿಶ್ವಾಸನೀಯವಾಗಿ ಓದುತ್ತಿದ್ದಾರೆಂದು ತಿಳಿಸಿದರು.
ಕಂಪ್ಯೂಟರನ್ನು ಎಲ್ಲಾ ಕ್ಷೇತ್ರಗಳಲ್ಲು ಬಳಕೆಮಾಡುತ್ತಿದ್ದಾರೆ. ಇದು ಕೇವಲ ಪತ್ರಿಕಾ ಕಾರ್ಯಗಳನ್ನಲ್ಲದೆ ತಾಂತ್ರಿಕ ತಾಂತ್ರಿಕವನ್ನು ಉಂಟುಮಾಡಿದೆ. ಮಾಧ್ಯಮ ಕ್ಷೇತ್ರದಲ್ಲಿ ಇದರ ಸದುಪಯೋಗವನ್ನು ಧನಾತ್ಮಕವಾಗಿ ಬಳಸಿಕೊಳ್ಳುವುದನ್ನು ಬಿಟ್ಟು ನಕಲಿತನಕ್ಕೆ ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.

ಸಿದ್ಧಾರ್ಥ ಸಂಪದ ಪತ್ರಿಕೆಯು ಪ್ರಾಯೋಗಿಕ ಪತ್ರಿಕೆಯಾಗಿದ್ದರೂ ಉತ್ತಮವಾದ ಅಭಿವೃದ್ಧಿ ಸುದ್ಧಿಗಳನ್ನು ಹೊರತರಬೇಕು. ಸಮಾಜಕ್ಕೆ ಬೇಕಾಗಿರುವ ಉತ್ತಮ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕೆ ಕಾರ್ಯ ನಿರ್ವಹಿಸಬೇಕು. ನಿರಂತರವಾದ, ಚಲನಶೀಲವಾಗಿ, ನಿಖರವಾಗಿರಲಿ ಎಂದು ಮಾಧ್ಯಮ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಡಾ.ವೈ.ಎಂರೆಡ್ಡಿ ಮಾತನಾಡಿ ಪ್ರಾಯೋಗಿಕ ಪತ್ರಿಕೆಯಾದರೂ ಸಂಪಾದಕೀಯ ಹಾಗೂ ಇತರ ಲೇಖನಗಳು ಸಮಾಜದ ಪ್ರತಿಬಿಂಬತೆ ಇವೆ ಎಂದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿದ್ಯಾರ್ಥಿ ಸತೀಶ್ ವಂದಿಸಿದರು, ಉಪನ್ಯಾಸಕ ಎಂ.ಪಿ. ಶ್ವೇತ. ಸುಲೋಚನ, ವಿಜಯಕೃಷ್ಣ, ಮನೋಜ ಕುಮಾರಿ.ಬಿ ಉಪಸ್ಥಿತರಿದ್ದರು.

ನಾಡಿಗ್ ಗೆ ಸಾಹಿತ್ಯ ದತ್ತಿ ಪ್ರಶಸ್ತಿ

Tumukuru: ಬರಹಗಾರರು ಮತ್ತು ಲೇಖಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದೆ. ಹಲವು ಮಂದಿ ತಮ್ಮ ತಂದೆ-ತಾಯಿ, ಅತ್ತೆ ಮೊದಲಾದವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಇಟ್ಟಿದ್ದು ಸಾಹಿತ್ಯ ಲೋಕಕ್ಕೆ ಬೇರೆ ಬೇರೆ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ ಹೇಳಿದರು.

ತುಮಕೂರಿನ ಅಮಾನಿಕೆರೆ ಎದುರಿನಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದೇವಪ್ರಕಾಶ್-ಶಾಲಿನಿ ದಂಪತಿ ಭಗೀರಥಮ್ಮ ಅವರ ಹೆಸರಿನಲ್ಲಿಟ್ಟಿದ್ದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಜಿಲ್ಲೆಯ ಬರಹಗಾರರನ್ನು ಗುರುತಿಸುವ ಕೆಲಸವನ್ನು ಸಾಹಿತ್ಯ ಪರಿಷತ್ತು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಅದರ ಭಾಗವಾಗಿಯೇ ಈ ದತ್ತಿ ಪ್ರಶಸ್ತಿಯನ್ನು ನೀಡುತ್ತಿರುವುದು. ಕನ್ನಡ ಸಾಹಿತ್ಯದ ಬೆಳವಣಿಗೆ, ನೆಲ, ಜಲ ಸಂರಕ್ಷಣೆಯಂತಹ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಯಪ್ರಕಾಶ್ ತಮ್ಮ ಮಾತೃಶ್ರೀ ಭಾಗೀರಥಮ್ಮನವರ ಸ್ಮರಣಾರ್ಥ ಪ್ರವಾಸ ಸಾಹಿತ್ಯ ಕೃತಿಗೆ ದತ್ತಿ ಪ್ರಶಸ್ತಿ ನೀಡುತ್ತಿದ್ದಾರೆ. ಶಾಲಿನಿ ದೇವಪ್ರಕಾಶ್ ತಮ್ಮ ಅತ್ತೆ ಭಾಗೀರಥಮ್ಮ ಸ್ಮರಣಾರ್ಥ ಮಕ್ಕಳ ಸಾಹಿತ್ಯಕ್ಕಾಗಿ ದತ್ತಿ ಪ್ರಶಸ್ತಿ ನೀಡುತ್ತಿದ್ದಾರೆ. ಜಯಪ್ರಕಾಶ್ ಮತ್ತು ಶಾಲಿನಿಯವರು ಸಾಹಿತ್ಯ ಪರಿಷತ್ತಿನಲ್ಲಿಟ್ಟಿರುವ ನಿಧಿಯಿಂದ ಪ್ರತಿ ವರ್ಷ ಇಬ್ಬರಿಗೆ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದೆ ಎಂದರು.

ಪ್ರವಾಸ ಸಾಹಿತ್ಯಕ್ಕೆ ಪ್ರಕಾಶ್ ನಾಡಿಗ್ ಅವರ ‘ನಾ ಕಂಡ ಯೂರೋಪ್ ಖಂಡ’ ಕೃತಿ ಪ್ರಶಸ್ತಿಗೆ ಭಾಜನವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಲೇಖಕಿ ಸುಮಾ ಬೆಳಗೆರೆ ಬರೆದÀ ’30 ದಿನಕ್ಕೆ 30 ಕಥೆಗಳು’ ಕೃತಿ ಪ್ರಶಸ್ತಿ ಭಾಜನವಾಗಿದೆ. ಪ್ರಶಸ್ತಿ ಪಡೆಯುತ್ತಿರುವ ಇಬ್ಬರೂ ಲೇಖPರಿಗೆ ಅಭಿನಂದನೆಗಳು ಸಲ್ಲಬೇಕು ಎಂದು ತಿಳಿಸಿದರು.

ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇವುಗಳಿಂದ ಲೇಖಕರನ್ನು ಉತ್ತೇಜಿಸಿದಂತಾಗುತ್ತದೆ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಕನ್ನಡ ಸಹಾಯ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಬಂಡವಾಳಶಾಹಿಯು ಮನುಷ್ಯನ ಶತ್ರು. ಅದನ್ನು ಬೆಂಬಲಿಸುವ ಪ್ರಭುತ್ವಕ್ಕೆ ನೈತಿಕತೆ ಇಲ್ಲ ಎಂದು ತಿಳಿಸಿದರು.

ನಾ ಕಂಡ ಯೂರೋಪ್ ಖಂಡ ಕೃತಿಯ ಪ್ರಕಾಶ್ ಕೆ. ನಾಡಿಗ್, 30 ದಿನಕ್ಕೆ 30 ಕಥೆಗಳು ಕೃತಿಯ ಸುಮಾ ಬೆಳಗೆರೆ ಅವರಿಗೆ ಭಗೀರಥಮ್ಮ ದತ್ತಿ ಪ್ರಶಸ್ತಿಯನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಶಾಲಿನಿ ದೇವಪ್ರಕಾಶ್ ಮಾತನಾಡಿದರು.

ಮೂಕಜ್ಜಿ ಕನಸುಗಳು ಚಲನಚಿತ್ರ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೊದಲ ಬಹುಮಾನ ಎಲ್.ಉಷಾ ಮತ್ತು ದ್ವಿತೀಯ ಬಹುಮಾನ ಜಿ.ಎಸ್.ನಾಗೇಶ್ ಗುಬ್ಬಿ, ತೃತೀಯ ಬಹುಮಾನ ಸಂತೋಷ್ ನೀಡಲಾಯಿತು. ಕುಸುಮಾ ಜೈನ್ ಮತ್ತು ತಂಡ ಪ್ರಾರ್ಥಿಸಿದರು. ಲೇಖಕಿ ಶೈಲಾ ನಾಗರಾಜ್ ಸ್ವಾಗತಿಸಿದರು