Tuesday, February 24, 2026
Google search engine
Home Blog Page 290

30% ಯುವಕರು ತಂಬಾಕಿಗೆ ದಾಸರು

ತುಮಕೂರು: ಮಾದಕದ್ರವ್ಯ ಮತ್ತು ತಂಬಾಕು ಸೇವನೆ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜನರ ನೈತಿಕಮಟ್ಟ ಕಡಿಮೆಯಾಗುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯಲ್ಲಿ ಹಮ್ಮಿಕೊಂಡಿದ್ದ ‘ತಂಬಾಕು ನಿಯಂತ್ರಣ’ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ತಪ್ಪು ಮಾಡಿದಾಗ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ ಎಂದರು.ಅನೌಪಚಾರಿಕ ನಿಯಂತ್ರಣಗಳು ಇಂದು ತುಂಬಾ ಕೆಲಸಕ್ಕೆ ಬರುತ್ತವೆ. ಸ್ವತಃ ನಾವೇ ಪೋಲಿಸ್ ಅಥವಾ ಜಡ್ಜ್‍ಗಳಾಗಿ ನಿಯಂತ್ರಣದ ಶಕ್ತಿಯಾಗಿ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು. ಅನಾರೋಗ್ಯ ನಿಯಂತ್ರಣಕ್ಕೆ ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲಿ ತುಮಕೂರು ಜಿಲ್ಲೆ ಮುಂದಿದೆ. ನಿರ್ಮಲ ಜೀವನ, ತ್ಯಾಗಮಯ ಮನಸ್ಸು ಇವುಗಳಿಗೆ ತುಮಕೂರು ಹೆಸರುವಾಸಿಯಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಮಾಜಕ್ಕೆ ತಿಳಿಸುತ್ತೇನೆ, ತಾನು ತಂಬಾಕು ಸೇವಿಸದೆ ಇನ್ನೊಬ್ಬರಿಗೂ ಸೇವಿಸದಂತೆ ತಿಳುವಳಿಕೆಯನ್ನು ನೀಡುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು. ಸಕಾರಾತ್ಮಕ, ಶ್ರದ್ಧೆ, ಶಿಸ್ತು ಇಲ್ಲದ ಮೇಲೆ ಜೀವನದಲ್ಲಿ ಏನ್ನನ್ನೂ ಸಾಧಿಸಲು ಸಾಧ್ಯವಿಲ್ಲ. ಮನಸ್ಸು ಪರಿಪಕ್ವವದಾಗ ಮಾತ್ರ ಗುರಿಯನ್ನು ತಲುಪಲು ಸಾಧ್ಯ ಎಂದರು. ನಾರಾಯಣ ಹೃದಯಾಲಯದ ವೈದ್ಯೆ ಡಾ. ತೃಪ್ತಿ ಸಿ. ಕೊಟ್ಟೂರ್ ಮಾತನಾಡಿ ತಂಬಾಕು, ಗುಟ್ಕಾದಂತ ಸೇವನೆಯೂ ಕ್ಯಾನ್ಸರ್‍ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಇತ್ತೀಚಿನ ವರದಿಯ ಪ್ರಕಾರ ದೇಶದಲ್ಲಿ 30% ಯುವಕರು ತಂಬಾಕಿಗೆ ದಾಸರಾಗಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಒಂದು ದಿನಕ್ಕೆ ಮಾತ್ರ ಸೀಮಿತ ಅಲ್ಲ, ಅದು ಬಹಳಷ್ಟು ದಿನಗಳ ಕಾಲ ನಡೆಯಬೇಕಾಗುತ್ತದೆ. ಎಷ್ಟೋ ಕ್ಯಾನ್ಸರ್ ರೋಗಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ ಎಂದರು.

ಮಷಿನ್ ಲರ್ನಿಂಗ್ ಚರ್ಚೆ

Tumkur: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಗಮನ ಕೊಡುವುದರ ಮೂಲಕ ಸ್ಪರ್ಧಾತ್ಮಕ ಯುಗವನ್ನು ಎದುರಿಸಲು ಸಿದ್ಧರಾಗಿ ಎಂದು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್ ರವಿಪ್ರಕಾಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಇಂಜಿನೀಯರಿಂಗ್ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ‘ಮಷಿನ್ ಲರ್ನಿಂಗ್ ಯೂಸಿಂಗ್ ಪೈಥಾನ್ ಅಂಡ್ ಇಂಟರ್ನೆಟ್ ಥಿಂಗ್ಸ್’ ಎಂಬ ವಿಷಯದ ಕುರಿತು ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೂರು ವರ್ಷಗಳಲ್ಲಿ ಸರಿಯಾದ ಮಾರ್ಗದರ್ಶನದೊಂದಿಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕೆಂದರು.

ವಿಚಾರಮಂಥನ, ಕಾರ್ಯಗಾರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಭವಿಷ್ಯದಲ್ಲಿ ಉದ್ಯೋಗ ಮತ್ತು ಕೌಶಲ್ಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಜೀವನದಲ್ಲಿ ಅನುಭವಗಳು ಉತ್ತಮ ಪಾಠಗಳನ್ನು ಕಲಿಸುತ್ತವೆ. ಆ ಪಾಠಗಳನ್ನು ಸದುದ್ದೇಶಗಳಿಗೆ ಬಳಸಿಕೊಳ್ಳಬೇಕೆಂದು ಪ್ರಾಂಶುಪಾಲರು ಹೇಳಿದರು.

ಕಲಿಕಾ ಹಂತದಲ್ಲಿ ಸವಾಲುಗಳು ಎದುರಾಗುವುದು ಸಾಮಾನ್ಯ. ಆದರೆ, ಅವುಗಳನ್ನು ಮೆಟ್ಟಿನಿಂತಾಗ ಸಾಧನೆಯ ಹಾದಿ ಸುಗಮವಾಗುತ್ತದೆ. ಮತ್ತು ಕಲಿಯುವ ತುಡಿತದ ಜತೆಗೆ ಸತತ ಪ್ರಯತ್ನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ರವಿಪ್ರಕಾಶ್ ಕಿವಿಮಾತು ಹೇಳಿದರು.

ಸಾಹೆ ರಿಜಿಸ್ಟ್ರಾರ್ ಡಾ.ಎಂ.ಝಡ್ ಕುರಿಯನ್ ಮಾತನಾಡಿ, ಕಲಿಕಾ ಮಟ್ಟದಲ್ಲಿ ಶಿಸ್ತು, ಸಂಯಮವನ್ನು ಅಳವಡಿಸಿಕೊಳ್ಳಬೇಕು, ಆ ಶಿಸ್ತು ಭವಿಷ್ಯದಲ್ಲೂ ರೂಢಿಯಲ್ಲಿರುತ್ತದೆ ಹಾಗೂ ವ್ಯಕ್ತಿತ್ವ ಘನತೆಗೆ ಶಿಸ್ತು ಬಹುಮುಖ್ಯ. ವಿದ್ಯಾರ್ಥಿಗಳು ಸಮಯಕ್ಕೆ ಬೆಲೆ ಕೊಡಬೇಕು, ಅಂದಾಗ ಮಾತ್ರ ಜೀವನದಲ್ಲಿಯೂ ಒಳ್ಳೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯ ಎಂದರು.

Tumukuru: 6 ಅಂತಸ್ತಿನ ಹೊಸ ಬಸ್ ನಿಲ್ದಾಣ ಹೇಗಿರಲಿದೆ ಗೊತ್ತಾ?

0

ಲೇಖನ: ಆರ್.ರೂಪಕಲಾ


Tumukuru: ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ತುಮಕೂರು ನಗರದಲ್ಲಿ ಈಗಿರುವ ಹಳೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ನೆಲಸಮ ಮಾಡಿ ಹೊಸ ಸ್ವರೂಪವನ್ನು ನೀಡುವ ಮೂಲಕ ಹೈಟೆಕ್ ಬಸ್ ನಿಲ್ದಾಣವನ್ನಾಗಿ ನಿರ್ಮಿಸಲು ಹೊರಟಿದೆ.

ಈ ಹೈಟೆಕ್ ಬಸ್ ನಿಲ್ದಾಣವು ಪ್ರಯಾಣಿಕರ ವಾಹನಗಳಿಗೆ ಪಾರ್ಕಿಂಗ್, ನಗರ ಬಸ್ ಹಾಗೂ ಅಂತರ ನಗರ ಬಸ್‍ಗಳಿಗೆ ಪ್ರತ್ಯೇಕ ನಿಲ್ದಾಣ, ಕ್ಯಾಂಟೀನ್, ರೆಸ್ಟ್ ರೂಂ ಹೀಗೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿದ್ದು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳ ನಡುವೆ ಸುಲಭವಾಗಿ ಪ್ರಯಾಣಿಕರಿಗೆ ಸಂಪರ್ಕ ಸಾಧಿಸಲು ನೆರವಾಗುವಂತೆ ವಿನ್ಯಾಸವನ್ನು ರೂಪಿಸಲಾಗುತ್ತಿದೆ.

ನಗರದ ಮಧ್ಯ ಭಾಗದಲ್ಲಿರುವ ಈ ಉದ್ದೇಶಿತ ಸಂಯೋಜಿತ ಬಸ್ ನಿಲ್ದಾಣವು ವಾಣಿಜ್ಯ ಕೇಂದ್ರವಾಗಿ ಮಾರ್ಪಡಾಗಲಿದೆ.

ವಿಶ್ವ ದರ್ಜೆಯ ಬಸ್ ನಿಲ್ದಾಣವನ್ನಾಗಿಸುವ ಯೋಜನೆ:

ತುಮಕೂರು ಬಸ್ ನಿಲ್ದಾಣದಿಂದ ರಾಜ್ಯದ ವಿವಿಧೆಡೆಗೆ ಪ್ರತಿನಿತ್ಯ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗಧೂತ ಸಾರಿಗೆಗಳು ಸೇರಿ ಸುಮಾರು 2,992 ಬಸ್‍ಗಳು ಸಂಚರಿಸುತ್ತವೆ.


ಬಹುತೇಕ ಜಿಲ್ಲೆಗಳಿಗೆ ಈ ನಿಲ್ದಾಣ ಸಂಪರ್ಕ ಕೊಂಡಿಯಾಗಿದ್ದರೂ ಸಹ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿತ್ತು. ಸಮರ್ಪಕ ಶೌಚಾಲಯ ವ್ಯವಸ್ಥೆ, ತಂಗಲು ಕೊಠಡಿಗಳಿಲ್ಲದೆ ಮತ್ತು ಇತರೆ ಸೌಕರ್ಯಗಳಿಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು.

ಇದನ್ನು ಮನಗಂಡ ಸ್ಮಾರ್ಟ್ ಸಿಟಿ ಸಂಸ್ಥೆಯು ಹಳೆಯ ನಿಲ್ದಾಣವನ್ನು ವಿಶ್ವ ದರ್ಜೆಯ ನೂತನ ಇಂಟಿಗ್ರೇಟೆಡ್ ಬಸ್ ನಿಲ್ದಾಣವನ್ನಾಗಿ ಮಾರ್ಪಾಡು ಮಾಡಿ ಅತಿ ಹೆಚ್ಚು ಸಂಖ್ಯೆಯ ಪ್ರಯಾಣಿಕರಿಗೆ ನೆರವಾಗುವ ಜೊತೆಗೆ ಪ್ರಯಾಣಿಕರು ಮತ್ತು ಸರಕುಗಳ ಸುಗಮ ಸಾಗಾಟಕ್ಕೆ ಅನುಕೂಲವಾಗುವಂತೆ ಒಳಾಂಗಣವನ್ನು ರೂಪಿಸಲು ಯೋಜಿಸಿದೆ.

82 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ:


ಸ್ಮಾರ್ಟ್ ಸಿಟಿ ಸಂಸ್ಥೆಯು ತುಮಕೂರು ಸ್ಮಾರ್ಟ್‍ಸಿಟಿ ಯೋಜನೆಯಡಿ ಈ ಬಹುಮಹಡಿಯ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ತುಮಕೂರು ಜನತೆಯ ನೂತನ ನಿಲ್ದಾಣದ ಬಹುದಿನದ ಬೇಡಿಕೆ ಕೆಲವೇ ವರ್ಷದಲ್ಲಿ ಈಡೇರಲಿದೆ.

ನಗರದ ಈಗಿರುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಹಳೆಯ ಕಟ್ಟಡಗಳನ್ನು ಈಗಾಗಲೇ ನೆಲಸಮಗೊಳಿಸುವ ಕಾರ್ಯ ಚಾಲನೆಗೊಂಡಿದ್ದು, ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಕೆಎಸ್‍ಆರ್‍ಟಿಸಿ ಸಹಭಾಗಿತ್ವದಲ್ಲಿ 82 ಕೋಟಿ ರೂ.ಗಳ ವೆಚ್ಚದಲ್ಲಿ ಈ ಇಂಟಿಗ್ರೆಟೆಡ್ ಬಸ್ ಟರ್ಮಿನಲ್ ನಿರ್ಮಾಣವಾಗಲಿದೆ.

ಹೈಟೆಕ್ ನಿಲ್ದಾಣವು ಒಟ್ಟು 6 ಅಂತಸ್ತುಗಳನ್ನು ಒಳಗೊಂಡಿದ್ದು, 4.39 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದೆ.

ಹೈಟೆಕ್ ಬಸ್ ನಿಲ್ದಾಣದ ಎರಡು ಮಹಡಿಗಳಲ್ಲಿ ವಾಣಿಜ್ಯ ಪ್ರದೇಶವನ್ನು ನಿರ್ಮಿಸಲಾಗುತ್ತಿದ್ದು, ಇದರಿಂದ ಬರುವ ಆದಾಯವನ್ನು ಕೆಎಸ್‍ಆರ್‍ಟಿಸಿ ಹಾಗೂ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಸಂಸ್ಥೆಗಳು ಪಡೆಯಲಿವೆ.

ಕೆಳಗಿನ ಎರಡು ಅಂತಸ್ತುಗಳಲ್ಲಿ ಅಂದರೆ ಬಿ1 (ಬೇಸ್ಮೆಂಟ್ -1) ಮತ್ತು ಬಿ2 (ತಳ ಬೇಸ್ಮೆಂಟ್ ಮೇಲಿನ ಅಂತಸ್ತು) ಪ್ರದೇಶದಲ್ಲಿ ದ್ವಿಚಕ್ರ ಮತ್ತು ಕಾರು ಪಾರ್ಕಿಂಗ್‍ಗೆ ಅವಕಾಶ ಕಲ್ಪಿಸಲಾಗುವುದು.

ನಗರ ಸಾರಿಗೆ ಬಸ್ಸುಗಳು (30 ಸಂಖ್ಯೆ), ಉಪಹಾರ ಮಂದಿರ, ಬುಕ್ಕಿಂಗ್ ಆಫೀಸ್, ಕಂಟ್ರೋಲ್ ರೂಂ, ರೆಕರ್ಡ್ ರೂಂ, ಮತ್ತು ವಿಚಾರಣೆ ಕೇಂದ್ರ, ಮಹಿಳಾ ನಿರೀಕ್ಷಣಾ ಕೊಠಡಿ, ಮತ್ತು ಶೌಚಾಲಯಗಳು. ಅಂತರ್ ನಗರ ಸಾರಿಗೆ ಬಸ್ಸುಗಳು (35 ಸಂಖ್ಯೆ), ಉಪಹಾರ ಮಂದಿರ, ಬುಕ್ಕಿಂಗ್ ಆಫೀಸ್, ಕಂಟ್ರೋಲ್ ರೂಂ, ರೆಕಾರ್ಡ್ ರೂಂ, ಮತ್ತು ವಿಚಾರಣಾ ಕೇಂದ್ರ, ಮಹಿಳಾ ನಿರೀಕ್ಷಣಾ ಕೊಠಡಿ, , ಶೌಚಾಲಯಗಳನ್ನು ನಿರ್ಮಿಸಲಾಗುವುದು.

ಮೊದಲನೇ, ಎರಡನೇ ಹಾಗೂ ಮೂರನೇ ಅಂತಸ್ತಿನಲ್ಲಿ ತಲಾ 4 ವಾಣಿಜ್ಯ ಮಳಿಗೆಗಳು, ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನಲ್ಸ್, ಲಿಫ್ಟ್ ಮತ್ತು (ಚಲಿಸುವ ಮೆಟ್ಟಿಲುಗಳು) ಗಳನ್ನು ಅಳವಡಿಸಲಾಗುವುದು. ನಿಲ್ದಾಣಕ್ಕೆ


ಡಿಜಿಟಲ್ ಟಚ್:


ಇದರ ಜೊತೆಗೆ ತುಮಕೂರು ನಗರ ಸಾರಿಗೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಇರುವ 49 ಸಿಟಿ ಬಸ್ ಗಳಿಗೆ ವಾಹನಗಳ ಟ್ರ್ಯಾಕಿಂಗ್ ವ್ಯವಸ್ಥೆ, ಸಾರ್ವಜನಿಕ ಪ್ರಯಾಣಿಕರ ಮಾಹಿತಿಗಾಗಿ ಎಲ್‍ಇಡಿ ಡಿಸ್‍ಪ್ಲೇ ಮತ್ತು ಸಿ.ಸಿ. ಟಿ.ವಿ. ಕ್ಯಾಮರಾ ಅಳವಡಿಕೆ, ಪ್ರಮುಖ ತಂಗುದಾಣಗಳಲ್ಲಿ ಡಿಸ್‍ಪ್ಲೇ ಅಳವಡಿಕೆ, ಮೊಬೈಲ್ ಅಪ್ಲಿಕೇಷನ್ ಮೂಲಕ ನಗರ ಸಾರಿಗೆ ಬಸ್‍ಗಳ ಮಾಹಿತಿ ಹಾಗೂ ಬಸ್ ನಿಲ್ದಾಣದಲ್ಲಿ ನಿಯಂತ್ರಣ ಕೊಠಡಿಗಳ ಸ್ಥಾಪನೆ, ವೈಫೈ ಸೇರಿದಂತೆ ನಿಲ್ದಾಣಕ್ಕೆ ಡಿಜಿಟಲ್ ಟಚ್ ನೀಡುವ ಯೋಜನೆಯನ್ನು ರೂಪಿಸಲಾಗಿದೆ.



ಪ್ರಯಾಣಿಕರಿಗೆ ಸ್ಮಾರ್ಟ್ ಸೌಲಭ್ಯ:

ಬಸ್ ನಿಲ್ದಾಣ ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಗಡಿಭಾಗದಲ್ಲಿರುವ ಪ್ರಮುಖ ನಗರ ತುಮಕೂರಿಗೆ ಎಲ್ಲ ಬಗೆಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಇಲ್ಲಿನ ಜನರಿಗೆ ಗುಣಮಟ್ಟದ ಜೀವನ ನಡೆಸಲು ಅನುಕೂಲ ಕಲ್ಪಿಸುವುದು ಸ್ಮಾರ್ಟ್ ಸಿಟಿ ಸಂಸ್ಥೆಯ ಉದ್ದೇಶವಾಗಿದೆ. ಪ್ರಯಾಣಿಕರ ತಂಗುವಿಕೆ, ಫುಡ್ ಸ್ಟಾಲ್, ಹೈಟೆಕ್ ಆಸನದ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಆಧುನಿಕ ಶೌಚಾಲಯ, ಪ್ರಯಾಣಿಕರಿಗೆ ಸ್ಮಾರ್ಟ್ ಸೌಲಭ್ಯಗಳು ದೊರಕಲಿವೆ.

ಈ ನಿಟ್ಟಿನಲ್ಲಿ ತುಮಕೂರು ನಗರದ ಒಟ್ಟಾರೆ ಬೆಳವಣಿಗೆಗೆ ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಆದ್ಯತೆ ನೀಡುತ್ತಿದ್ದು, ತಾತ್ಕಾಲಿಕವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವನ್ನು ಡಿಪೋಗೆ ಸ್ಥಳಾಂತರಿಸಲಾಗಿದೆ.

ನಗರದ ಜನತೆಗೆ ಈ ಕಾಮಗಾರಿಯಿಂದ ತೊಂದರೆಗಳಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಭೂಬಾಲನ್ ಮನವಿ ಮಾಡಿದ್ದಾರೆ.


ಲೇಖಕರು ವಾರ್ತಾ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.

Tumukuru ಮಹಾನಗರ ಪಾಲಿಕೆ: BJP ಕೈ ಹಿಡಿಯುತ್ತಾ JDS?

ಕೆ.ಇ.ಸಿದ್ದಯ್ಯ


Tumukuru: ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಜನವರಿ 30ರಂದು ಚುನಾವಣೆಯ ನಡೆಯಲಿರುವುದರಿಂದ ಜೆಡಿಎಸ್ ಕಾಂಗ್ರೆಸ್ ಮತ್ತು ಬಿಜೆಪಿ ಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮೇಯರ್ ಮತ್ತು ಉಪಮೇಯರ್ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ. ಪಾಲಿಕೆಯ ಮೇಯರ್ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೂ ಉಪ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೂ ನಿಗದಿ ಮಾಡಿ ಅಧಿಕಾರ ಹಂಚಿಕೆಯಾಗಿತ್ತು. ಅದರಂತೆ ಮೊದಲ ಅವಧಿ ಮುಗಿದಿದೆ. ಹೀಗಾಗಿ ಚುನಾವಣೆ ನಡೆಯಲಿದೆ.

ಅಧಿಕಾರ ಹಂಚಿಕೆ ಸೂತ್ರದಂತೆ ಈಗ ಕಾಂಗ್ರೆಸ್ ಗೆ ಮೇಯರ್ ಸ್ಥಾನ ಮತ್ತು ಉಪಮೇಯರ್ ಸ್ಥಾನ ಜೆಡಿಎಸ್ ಪಡೆಯಬೇಕಾಗಿದೆ. ಆದರೆ ‘ಸೂತ್ರ’ ಧಾರರು ಮೈತ್ರಿ ಮುಂದುವರಿಕೆಗೆ ಒಪ್ಪಬೇಕು. ಸೂತ್ರ ಹಿಂದೆನಂತೆಯೇ ಇರುತ್ತದೆಯೇ ಅಥವಾ ಬದಲಾಗುತ್ತದೆಯೇ ಎಂಬುದು ಇಲ್ಲಿ ಉದ್ಭವಿಸಿರುವ ಪ್ರಮುಖ ಪ್ರಶ್ನೆ.

ಈ ಪ್ರಶ್ನೆಗೆ ಉತ್ತರ ಸಿಗುವುದು ಸದ್ಯದ ಮಟ್ಟಿಗೆ ಕಷ್ಟ. ಅಧಿಕಾರಕ್ಕಾಗಿ ಯಾರೂ ಯಾವ ಕಡೆ ಬೇಕಾದರೂ ವಾಲಬಹುದು. ಇದುವರೆಗೆ ಮೇಯರ್ ಆಗಿ ಲಲಿತಾ ರವೀಶ್ ಮತ್ತು ಉಪಮೇಯರ್ ಆಗಿ ರೂಪ ಕೆಲಸ ನಿರ್ವಹಿಸಿದ್ದು ಅವರ ಅವಧಿ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದ್ದು ಪಕ್ಷದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಮುಖಂಡರು ತೀವ್ರ ಕಸರತ್ತು ನಡೆಸಿದ್ದಾರೆ.

ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿರುವುದರಿಂದ ಈ ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ನಲ್ಲಿ ಒಟ್ಟು ನಾಲ್ವರು ಸಾಮಾನ್ಯ ವರ್ಗದ ಮಹಿಳಾ ಸದಸ್ಯರಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳಾ ಸದಸ್ಯರೂ ಕೂಡ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶವಿದೆ. ಇದು ಪೈಪೋಟಿ ತೀವ್ರಗೊಳ್ಳಲು ಕಾರಣವಾಗಿದೆ.


ಪಾಲಿಕೆಯ ಜೆಡಿಎಸ್ ಸದಸ್ಯರು ಒಟ್ಟಾಗಿದ್ದು ಒಮ್ಮತದ ತೀರ್ಮಾನಕ್ಕೆ ಬದ್ದರಾಗಿದ್ದಾರೆ. ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಕೈಗೊಳ್ಳುವ ನಿರ್ಧಾರಕ್ಕೆ ಕಟಿಬದ್ದರಾಗಿದ್ದಾರೆ. ಮೇಯರ್ ಮತ್ತು ಉಪಮೇಯರ್ ಯಾರಾಗಬೇಕೆಂಬ ಬಗ್ಗೆ ಚರ್ಚಿಸಲು ಸಭೆಯನ್ನೂ ಕರೆಯಲಾಗಿದೆ. ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿದೆ ಎಂದು ತಿಳಿದುಬಂದಿದೆ.


ಈಗ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿಯನ್ನು ಜೆಡಿಎಸ್ ತೀವ್ರ ವಾಗಿ ವಿರೋಧಿಸುತ್ತಿದ್ದರೂ ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆಯನ್ನು ಹಂಚಿಕೊಂಡು ಅಧಿಕಾರ ನಡೆಸುತ್ತಿವೆ. ಆದರೆ ಸದಸ್ಯರು ಗೈರಾಗಿ ಅಧ್ಯಕ್ಷರನ್ನು ಕೆಳಗಿಳಿಸುವ ಪ್ರಯತ್ನ ನಡೆದಿದೆ.

ಇದು ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಹುದ್ದೆಯನ್ನು ಉಳಿಸಿಕೊಳ್ಳಲು ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಸ್ಥಾನವನ್ನು ನೀಡಲು ಮುಂದಾಗಬಹುದು.

ಜೆಡಿಎಸ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಹುದ್ದೆಯನ್ನು ಬಿಟ್ಟುಕೊಡುವ ಮನಸ್ಸಿಲ್ಲ. ಹೀಗಾಗಿ ಪಾಲಿಕೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿ ಉದ್ಭವಿಸಿದರೆ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡಿದ್ದ ಮೈತ್ರಿ ಮುರಿದು ಬೀಳಲಿದೆ.

ಸ್ಥಳೀಯ ಸಂಸ್ಥೆಯಾಗಿರುವುದರಿಂದ ಯಾವ ಸದಸ್ಯರು ಯಾರೊಂದಿಗೆ ಗುರುತಿಸಿಕೊಳ್ಳುತ್ತಾರೆ ಹೇಳಲಾಗುದು. ಇದು ಸರ್ವೇಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ ಎನ್ನುತ್ತಾರೆ ರಾಜಕೀಯ ಬಲ್ಲವರು.

ನೈತಿಕವಾಗಿ ನಡೆದುಕೊಂಡರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಬೇಕು. ಹಂಚಿಕೆ ಸೂತ್ರದಂತೆ ಜೆಡಿಎಸ್ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಬೇಕು. ಇದು ಸಾಧ್ಯವಾಗದಿದ್ದರೆ ಹಿಂದಿನ ಮೈತ್ರಿಯೇ ಮುಂದುವರೆದು ಜೆಡಿಎಸ್ ತನ್ನ ಹಿಡಿತವನ್ನು ಪುನರ್ ಸ್ಥಾಪಿಸಬಹುದು ಎನ್ನುತ್ತವೆ ಮೂಲಗಳು.

ಅಧಿಕಾರ ಹಂಚಿಕೆ ಸೂತ್ರ ಮುಂದುವರೆಯುತ್ತದೋ, ಅಧಿಕಾರ ಪಲ್ಲಟವಾಗುತ್ತೋ ಅಥವಾ ಹೊಸ ಮೈತ್ರಿ ಏರ್ಪಡುತ್ತೋ ನೋಡಬೇಕಾಗಿದೆ.

ಅಪಘಾತಕ್ಕೆ ಯುವಕ ಬಲಿ

ಗುಬ್ಬಿ:ವೇಗವಾಗಿ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನಲ್ಲಿ ಸಂಭವಿಸಿದೆ.

ಚೇಳೂರು ಹೋಬಳಿಯ ಅನುಪನಕುಂಟೆ ಗೇಟ್ ಬಳಿ ಈ ಘಟನೆ ಸಂಭವಿಸಿದ್ದು 35 ವರ್ಷದ ಮಂಜುನಾಥ್ ಮೃತಪಟ್ಟಿದ್ದಾರೆ.

ಚಿರತೆಗೆ ಬಲಿಯಾದ ಮೇಕೆಗಳು

ಪಾವಗಡ: ತಾಲ್ಲೂಕಿನ ಕನ್ನಮೇಡಿ ಬಳಿಯ ಕೃಷ್ಣಪ್ಪ ಎಂಬುವರಿಗೆ ಸೇರಿದ 4 ಮೇಕೆಗಳನ್ನು ಬುಧವಾರ ರಾತ್ರಿ ಚಿರತೆ ಕೊಂದಿದೆ.

ಗ್ರಾಮದ ಹೊರ ವಲಯದ ರೊಪ್ಪದಲ್ಲಿದ್ದ 3 ಮೇಕೆಗಳ ರಕ್ತ ಹೀರಿ, ಮೇಕೆ ಮರಿಯನ್ನು ತಿಂದಿದೆ. ಸುಮಾರು 40 ಸಾವಿರ ನಷ್ಟವಾಗಿದೆ ಎಂದು ಕುರಿಗಾಹಿ ತಿಳಿಸಿದ್ದಾರೆ.

ಇತ್ತೀಚೆಗೆ ಚಿರತೆ, ಕರಡಿ ಹಾವಳಿ ಹೆಚ್ಚಿದೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ವಲಯ ಅರಣ್ಯಾಧಿಕಾರಿ ಸುರೇಶ್, ಉಪ ವಲಯ ಅರಣ್ಯಾಧಿಕಾರಿ ಬಸವರಾಜು, ಪಶು ವೈದ್ಯೆ ಚೈತ್ರ ಸ್ಥಳ ಪರಿಶೀಲನೆ ನಡೆಸಿದರು.

ಪಾವಗಡ ತಾಲ್ಲೂಕು ಕನ್ನಮೇಡಿ ಬಳಿ ಕೃಷ್ಣಪ್ಪ ಎಂಬುವರಿಗೆ ಸೇರಿದೆ ಮೇಕೆಗಳನ್ನು ಚಿರತೆ ಕೊಂದಿರುವುದು.

Gubbi PU COllege: ರಾಷ್ಟ್ರ ಧ್ವಜ ಕ್ಕೆ ಅಪಮಾನ ?

ಲಕ್ಷ್ಮೀಕಾಂತರಾಜು ಎಂ.ಜಿ


Gubbi: “ಏರುತಿಹುದು ತೋರುತಿಹುದು ನೋಡು ನಮ್ಮ ಬಾವುಟ. ಧ್ವಜದ ಶಕ್ತಿ ನಮ್ಮ‌‌ ಶಕ್ತಿ ನೋಡಿರಣ್ಣ ಹೇಗಿದೆ. ಸತ್ಯ ಶಾಂತಿ ತ್ಯಾಗಮೂರ್ತಿ ಗಾಂಧಿ ಹಿಡಿದ ಚರಕವು…” ಹೀಗೆ ನಮ್ಮ ಭಾರತ ದೇಶದ ಧ್ವಜವನ್ನ ನಾವು ಹೊಗಳಿ ಗೌರವಿಸುವ ಪದ್ಯವೊಂದನ್ನ ನಮ್ಮ‌ ಶಾಲಾ‌ದಿನಗಳಲ್ಲಿ ನಾವೆಲ್ಲಾ ಹಾಡಿದ್ದೇವೆ.

ರಾಷ್ಟ್ರಭಕ್ತಿ,ರಾಷ್ಟ್ರ ಲಾಂಚನ,ರಾಷ್ಟ್ರಧ್ವಜ ಇವುಗಳಿಗೆ ಭಾರತೀಯರಾದ ನಾವು ನಮ್ಮ ದೇಶದ ಲಾಂಚನಗಳಿಗೆ ನಾವು ನಾವು ಪೂಜಿಸುವ ದೇವರುಗಳಷ್ಟೆ ಗೌರವ ಕೊಡಬೇಕಿದೆ.

ಇಂಥಹ ಗೌರವಯುತವಾಗಿ ನಡೆಸಿಕೊಳ್ಳುವ ಭಾರತದ ಧ್ವಜವನ್ನ ಗುಬ್ಬಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಗೌರವವಾಗಿ ನಡೆಸಿಕೊಳ್ಳಲಾಗಿದೆ.

ಹೌದು. ಕಳೆದ ಡಿಸೆಂಬರ್ ನ ಹನ್ನೆರಡರಂದು ಗುಬ್ಬಿ ಮಾಧ್ಯಮದವರಿಗೆ ಒಂದು ಕರೆ ಬರುತ್ತದೆ. ಪಟ್ಟಣದ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರಧ್ವಜವನ್ನ ಕಸದ ರೀತಿ ಎಸೆದಿದ್ದಾರೆಂದು ಬರುವ ಮಾಹಿತಿಗನುಸಾರವಾಗಿ ಮಾಧ್ಯಮದ ವರದಿಗಾರರು ಬಾವುಟದ ಸ್ಥಿತಿಯನ್ನ ಚಿತ್ರಿಕರಿಸಿ ಸುದ್ದಿಯನ್ನ ಮಾಡಿದ್ದಾರೆ.

ರಾಷ್ಟ್ರ ಧ್ವಜದ ಸ್ಥಿತಿ

ಕಾಲೇಜಿನ ಸಿಬ್ಬಂದಿ ಬೇಜವಬ್ದಾರಿಯಿಂದ ಭಾರತದ ಧ್ವಜಕ್ಕೆ ಆಗಿರುವ ಅಪಚಾರವನ್ನ ಪ್ರಶ್ನಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಇದುವರೆಗೆ ಪ್ರಯೋಜನವಾಗಿಲ್ಲವೆಂದು ದೂರುತ್ತಾರೆ ಗುಬ್ಬಿಯ ಪತ್ರಕರ್ತ ರಮೇಶ್ ಗೌಡ.

ಶಾಲಾ ದಿನಗಳಲ್ಲಿ ರಾಷ್ಟ್ರಹಬ್ಬಗಳ ಆಚರಣೆಯಿಂದ ಮತ್ತು ಪಠ್ಯಗಳಲ್ಲಿರುವ ದೇಶದ ಅಭಿಮಾನದ ವಿಷಯಗಳಿಂದ ದೇಶಾಭಿಮಾನ ರೂಢಿಸುವ ಶಾಲೆಗಳಲ್ಲಿಯೇ ಮಕ್ಕಳೆದುರಲ್ಲಿ ಧ್ವಜಕ್ಕೆ ಅಪಮಾನವಾಗಿರುವುದು ತುಂಬಾ ನೋವಿನ ಸಂಗತಿ ಎನ್ನುತ್ತಾರೆ ಗುಬ್ಬಿಯ ಹಲವು ನಾಗರಿಕರು.

ಈ ಘಟನೆ ನಡೆದು ಒಂದು ತಿಂಗಳು ಕಳೆದರು ತಪ್ಪಿತಸ್ಥ ಶಾಲಾ ಸಿಬ್ಬಂದಿಯ ಮೇಲೆ ಶಿಸ್ತುಕ್ರಮವನ್ನ ಜರುಗಿಸಿಲ್ಲ. ಬರಲಿರುವ ಜನವರಿ ಇಪ್ಪತ್ತಾರರ ಗಣರಾಜ್ಯೋತ್ಸವದ ದಿನಕ್ಕೆ ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಗುಬ್ಬಿಯ ಪತ್ರಕರ್ತರು ಹಾಗೂ ವಿವಿಧ ಸಂಘಟನೆಗಳು ತಹಸೀಲ್ದಾರ್ ಅವರಿಗೆ ಮನವಿಯನ್ನೂ ಸಲ್ಲಿಸಿವೆ.

ಭಾರತ ದೇಶದ ಧ್ವಜ ,ಲಾಂಚನಕ್ಕೆ ಅಪಚಾರವಾಗಿರುವುದು ವಿಡೀಯೋ ಹಾಗೂ ಫೋಟೋಗಳಿಂದ ನಮಗೆ ತಿಳಿದುಬರುತ್ತದೆ. ಇದರಿಂದ ದೇಶಾಭಿಮಾನಿಗಳು ಪಕ್ಷ,ಜಾತಿ,ಧರ್ಮ ಪಕ್ಕಕ್ಕಿಟ್ಟು ಪಕ್ಷಾತೀತವಾಗಿ ಹೋರಾಟ ನಡೆಸಿ ಧ್ವಜಕ್ಕೆ ಅಗೌರವ ತೋರಿರುವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಹೋರಾಟ ಮಾಡಬೇಕಿದೆ.


ನಾವು ದೇಶಾಭಿಮಾನಿಗಳು. ರಾಷ್ಟ್ರ ಧ್ವಜಕ್ಕೆ ಆಗಿರುವ ಅಪಮಾನವನ್ನ ನಾವು ಖಂಡಿಸುತ್ತೇವೆ. ಅಪಮಾನ ಮಾಡಿರುವವರ ವಿರುದ್ಧ ಇಲಾಖೆ ಶಿಸ್ತುಕ್ರಮ ಕೈಗೊಳ್ಳದಿದ್ದರೆ ನಾವು ಹೋರಾಟ ಮಾಡುತ್ತೇವೆ.

ರಮೇಶ್ ಗೌಡ,ಪತ್ರಕರ್ತ.ಗುಬ್ಬಿ


ಶಾಸಕರು ಏನ್ ಹೇಳ್ತಾರೆ ಇಲ್ಲಿದೆ ನೋಡಿ


ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ದುರುದ್ದೇಶದ ಕಾರಣಕ್ಕೆ ಬೇರೆ ಯಾರೋ ಈ ಕೆಲಸ ಮಾಡಿದ್ದಾರೆ ಅಂತ ಅನಿಸ್ತಿದೆ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಎಸ್ ಆರ್ ಶ್ರೀನಿವಾಸ್,ಶಾಸಕರು ಗುಬ್ಬಿ


ತನಿಖೆ ನಡೆಸಿದ್ದೇವೆ

ಗುಬ್ಬಿ ತಹಸೀಲ್ದಾರ್ ಹಾಗೂ ನಾನು ಪ್ರಕರಣವನ್ನ ಜಂಟಿಯಾಗಿ ತನಿಖೆ ನಡೆಸಿ ತನಿಖಾ ವರದಿಯನ್ನ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಮುಂದಿನಕ್ರಮ ಜಿಲ್ಲಾಧಿಕಾರಿಗಳ ಸೂಚನೆಯಂತೆ ನಡೆಯಲಿದೆ.


ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ,ಗುಬ್ಬಿ

ಗಣರಾಜ್ಯೋತ್ಸವ: ತುಮಕೂರಿನಲ್ಲಿ ಅಧಿಕಾರಿಗಳ ಸಭೆ

ತುಮಕೂರು: ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯನ್ನು ಯಾವುದೇ ಲೋಪದೋಷಗಳು ಇಲ್ಲದೆ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯಾನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ದಿನಾಚರಣೆ ನಡೆಯುವ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಧೂಳು ಎಳದಂತೆ ನೀರನ್ನು ಹಾಕಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂದು ಬೆಳಿಗ್ಗೆ ನಡೆಯುವ ಸಮಾರಂಭದಲ್ಲಿ ಶಾಲಾ ಮಕ್ಕಳಿಂದ 4 ಸಾಂಸ್ಕತಿಕ ಕಾರ್ಯಕ್ರಮಗಳಿರುತ್ತದೆ. ಸಂಜೆ 4 ಗಂಟೆಗೆ ಗಾಜಿನ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 13 ಕಾರ್ಯಕ್ರಮಗಳು ಜರುಗಲಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಗಣರಾಜ್ಯೋತ್ಸವವನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ರಚಿಸಿರುವ ಉಪಸಮಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸಮಿತಿಯ ಅಧ್ಯಕ್ಷರುಗಳಿಗೆ ಸೂಚನೆ ನೀಡಿದರು.

ಸಚಿವ ಸಂಪುಟ ವಿಸ್ತರಣೆ: ಸೂಕ್ತ ಸಮಯದಲ್ಲಿ ಸಿಎಂ ತೀರ್ಮಾನ

ತುಮಕೂರು: ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿಗಳು ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿದೇಶಕ್ಕೆ ಹೋಗಿದ್ದಾರೆ. ಅವರು ಬಂದ ಮೇಲೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಉಪಮುಖ್ಯಮಂತ್ರಿ ಕೊಡುವವರು ಮತ್ತು ತೆಗೆದುಕೊಳ್ಳುವವರು ಅವರೇ ಆಗಿದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ಹೇಳಿದರು.

ಪೌರತ್ವದ ಕುರಿತು ಜಾರಿಗೆ ತಂದಿರುವ ಕಾನೂನನ್ನು ಎಲ್ಲರೂ ಗೌರವಿಸಬೇಕು. ಹಿಂದೆ ವಿರೋಧ ಪಕ್ಷದ ಮುಖಂಡರು ಕೂಡ ಪೌರತ್ವದ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಈಗ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.

ವಿದೇಶಗಳಿಂದ ವಲಸೆ ಬಂದವರನ್ನು ಏನು ಮಾಡಬೇಕು. ಅವರನ್ನು ಇಲ್ಲೇ ಇಟ್ಟುಕೊಳ್ಳಲು ಆಗುವುದಿಲ್ಲ. ಹಾಗಾಗಿ ಪೌರತ್ವ ಕಾನೂನು ಜಾರಿಗೆ ತಂದಿದೆ. ಜನರಿಗೆ ಇದರಿಂದ ಒಳ್ಳೆಯದಾಗುತ್ತದೆ. ಆದರೆ ವಿರೋಧ ಪಕ್ಷಗಳ ನಾಯಕರು ಜನರಲ್ಲಿ ಗೊಂದಲ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ದೇಶಕ್ಕೆ ಒಳ್ಳೆಯದಾಗಲ್ಲ ಎಂದು ಹೇಳಿದರು.

ವಿರೋಧ ಪಕ್ಷಗಳು ಜನರಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಆತಂಕ ಮೂಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಭಯ ಹುಟ್ಟಿಸುವ ಕೆಲಸ ಮಾಡಬಾರದು. ಹಿಂದಿನಿಂದ ಭಯ ಹುಟ್ಟಿಸುವ ಕೆಲಸ ಮಾಡುವುದನ್ನು ವಿರೋಧ ಪಕ್ಷದ ನಾಯಕರು ಬಿಡಬೇಕು ಎಂದು ತಿಳಿಸಿದರು.

ಮುಸ್ಲೀಮರಿಗೂ ಪೌರತ್ವ ನೀಡಲಾಗುವುದು. ಅವರನ್ನು ಇಲ್ಲಿಂದ ಓಡಿಸುವುದಿಲ್ಲ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದಿಲ್ಲ. ನಮ್ಮ ಸರ್ಕಾರ ಧರ್ಮವನ್ನು ಮೀರಿ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಸೌಹಾರ್ದತೆ, ಸೋದರತ್ವ ಮೂಡಿಸುವುದು ನಮ್ಮ ನೆಲದಲ್ಲೇ ಅಡಗಿದೆ. ನಮ್ಮ ನೆಲ ಯಾರನ್ನೂ ದ್ವೇಷಿಸುವುದಿಲ್ಲ. ಮಾಡುವುದಕ್ಕೂ ಬಿಡುವುದಿಲ್ಲ ಎಂದು ಹೇಳಿಕೊಂಡರು.

ದೀನದಲಿತರು, ಹಿಂದುಳಿದವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಹೇಳಿಕೊಡುವುದು ಸುಲಭ. ಇಂತಹ ಹೇಳಿಕೆಗಳನ್ನು ಯಾಕೆ ಕೊಡುತ್ತಿದ್ದಾರೆ ಎಂದು. NRC, NPR, ಯಾರು ಆರಂಭಿಸಿದ್ದು, 130 ಕೋಟಿ ಜನರಿಗೆ ಆಧಾರ್ ಇದೆ. ಅವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆಯೇ? ಇಲ್ಲವಲ್ಲ. ಒಳ್ಳೆಯ ವ್ಯವಸ್ಥೆ ಇದೆ. ವ್ಯವಸ್ಥೆಯನ್ನು ಉತ್ತಮಗೊಳಿಸುವುದು ಇದರ ಉದ್ದೇಶ ಎಂದರು.

ಯಾವ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲ. ಅಲ್ಲಿ ಸ್ಥಾಪನೆ ಮಾಡುತ್ತೇವೆ ಎಂದರು.

ಟಾಡ್ಲರ್ಸ್ ಕ್ಯಾಸೆಲ್ ಸ್ಕೂಲ್ ನಲ್ಲಿ ಮಕ್ಕಳ ಮಾತು

Publicstory. in


ತುಮಕೂರು: ಮಕ್ಕಳ ಮನಸ್ಸು ಮೃದು. ಮಕ್ಕಳ ಮನಸ್ಸು ಶುದ್ದ ನೀರಿನಂತೆ. ನೀರಿಗೆ ನಿರ್ಧಿಷ್ಟ ಆಕಾರವಿರುವುದಿಲ್ಲ. ಅದೇ ರೀತಿ ಮಕ್ಕಳ ವ್ಯಕ್ತಿತ್ವ ನೀರನ್ನು ಹಿಡಿದಿಡುವ ಪಾತ್ರೆಯ ಅಕಾರ ಪಡೆಯುತ್ತದೆ. ಒಳ್ಳೆಯ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ, ಶಿಕ್ಷಕರ ಹಾಗು ಸಮಾಜದ ಜವಾಬ್ದಾರಿ ಸರಿಸಮನಾಗಿರುತ್ತದೆ. ಹಾಗಾಗಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಆಲೋಚನೆಗಳ, ಉತ್ತಮ ಸಂಸ್ಕಾರ ಚಿಂತನೆ ಬಿತ್ತಬೇಕಾಗಿದೆ ಎಂದು ತುಮಕೂರಿನ ನರ ಹಾಗು ಮಾನಸಿಕ ರೋಗ ತಜ್ಞ ಡಾ. ಲೋಕೇಶ್ ಬಾಬು ತಿಳಿಸಿದರು. ಮರಳೂರು ರಿಂಗ್ ರಸ್ತೆಯಲ್ಲಿರುವ ಟಾಡ್ಲರ್ಸ್ ಕ್ಯಾಸೆಲ್ ಇಂಟರ್ ನ್ಯಾಷನಲ್ ಪ್ರಿ-ಸೂಲ್ಕ್ ನಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ ಸ್ಪಾರ್ಕೆಲ್ -2020 ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಯಾವುದೇ ಒತ್ತಡ ನೀಡದೆ ಉತ್ತಮ ಅಭ್ಯಾಸಗಳ ಹಾಗು ಚಟುವಟಿಕೆಗಳ ಮೂಲಕ ಉತ್ತಮ ಶಿಕ್ಷಣ ಮತ್ತು ಉನ್ನತ ವ್ಯಕಿತ್ವ ಹೊಂದಲು ಅವಕಾಶ ಮಾಡಿಕೊಡಬೇಕೆಂದು ಪೋಷಕರಿಗೆ ಸಲಹೆ ನೀಡಿದರು. ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಹಾಗು ಆತ್ಮವಿಶ್ವಾಸದ ಕೊರತೆ ಕಂಡುಬರುತ್ತಿದ್ದು ಇದಕ್ಕೆಲ್ಲಾ ಅಸಮಂಜಸ ಬಾಲ್ಯ ಚಟುವಟಿಕೆಗಳೇ ಮೂಲಕಾರಣ. ಪೋಷಕರ ವಿವೇಕ ರಹಿತ ನಡವಳಿಕೆಗಳೂ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ಎಚ್ಚರಿಸಿದರು. ಹಿರಿಯ ಪ್ರಾದ್ಯಾಪಕ ಡಾ. ಎಂ.ಎಸ್. ಕೇಶವ್‍ ಪೋಷಕರಿಗೆ ಆಹಾರ ಪದ್ದತಿಯ ಮಹತ್ವ ತಿಳಿಸಿಕೊಟ್ಟರು. ಬೆಳೆಯುವ ಮಕ್ಕಳಿಗೆ ಪೌಷ್ಠಿಕ ಆಹಾರದ ಅಗತ್ಯ ಹೆಚ್ಚಾಗಿದ್ದು ಉತ್ತಮ ಅಹಾರ ಪದ್ದತಿಯನ್ನು ರೂಪಿಸಿಕೊಳ್ಳಲು ಸಲಹೆ ನೀಡಿದರು. ನೈಸರ್ಗಿಕ ರೋಗ ನಿರೋಧಕ ಗುಣಗಳನ್ನು ಮಕ್ಕಳು ಹೊಂದಲು ಪೌಷ್ಠಿಕ ಆಹಾರ ಅತ್ಯವಶ್ಯಕ ಎಂದು ತಿಳಿಸಿದರು. ಶಾಲೆಯು ಗುಣಮಟ್ಟದ ಶಿಕ್ಷಣ ನೀಡುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು ಉತ್ತಮ ಕಲಿಕಾ ವಾತಾವರಣವನ್ನು ಮಕ್ಕಳ ಬೌದ್ಧಿಕ ಬೆಳವಣಿಗೆಯ ಅಗತ್ಯಕ್ಕೆ ಅನುಸಾರವಾಗಿ ದೊರಕುವಂತೆ ಮಾಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಜಬ್ಬೀರ್ ಮನ್ಸೂರ್ ತಿಳಿಸಿದರು, ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ, ಪೋಷಕರಿಗೆ ಹಾಗು ಶಾಲೆಯ ಸಿಬ್ಬಂದಿ ವರ್ಗದವರಿಗೆ ಬಹುಮಾನ ವಿತರಣೆ ಮಾಡಲಾಯಿತು, ಕಾರ್ಯಕ್ರಮವನ್ನು ಪ್ರಾಂಶುಪಾಲ ದೀಪಿಕಾ ನಿರೂಪಿಸಿದರು. ಆಡಳಿತಾಧಿಕಾರಿ ಮಲ್ಲೇಶ್‍ ಸ್ವಾಗತಿಸಿದರು. ಶಿಕ್ಷಕಿ ಅಫ್ರಾ ವಂದಿಸಿದರು.