Tuesday, February 24, 2026
Google search engine
Home Blog Page 295

ಚೆಲ್ಲಾಪಿಲ್ಲಿಯಾದ ಕಡತಗಳು-ಡಿಎಫ್ಓಗೆ ಶಾಸಕ ಗೌರಿ ಶಂಕರ್ ಕ್ಲಾಸ್

ತುಮಕೂರು: ತುಮಕೂರು-ನಗರದ ರಾಮಕೃಷ್ಣ ನಗರದಲ್ಲಿರುವ ಡಿ.ಎಫ್.ಓ ಕಚೇರಿಯ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಡತಗಳನ್ನ ಕಂಡು ಶಾಸಕ ಗೌರಿಶಂಕರ ಅಕ್ಷರಶಃ ಕೆಂಡಾಮಂಡಲವಾಗಿದ್ದಾರೆ.

ಡಿಎಫ್ಓ ಕಚೇರಿಯ ನೆಲ ಮಹಡಿ, ಮೊದಲ ಮಹಡಿಯ ಎಲ್ಲೆಂದರಲ್ಲಿ ಕಡತಗಳನ್ನ ಮೂಟೆ ಕಟ್ಟಿ ಇಡಲಾಗಿದೆ. ಸಾರ್ವಜನಿಕರು ಓಡಾಡುವ ಸಾರಿಯಲ್ಲೂ ಫೈಲ್ ಗಳನ್ನ ಇಡಲಾಗಿದೆ. ಈ ಅವ್ಯವಸ್ಥೆ ಕಂಡೆ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ ಸಿಟ್ಟು ನೆತ್ತಿಗೇರಿ ಹೋಗಿತ್ತು.

ನರಭಕ್ಷಕ ಚಿರತೆಯನ್ನ ಸೆರೆ ಹಿಡಿಯುವಂತೆ ಪ್ರತಿಭಟಿಸಲು ಹೋಗಿದ್ದ ಶಾಸಕರು ತಾವು ಭೇಟಿ ನೀಡಿದ ವಿಚಾರವನ್ನೇ ಮರೆತು ಕಡತಗಳ ಅವ್ತವಸ್ಥೆ ಕಂಡು ಹರಿಹಾಯ್ದರು. ಅಷ್ಟರಮಟ್ಟಿಗೆ ಫೈಲನ್ನ ಎಲ್ಲೆಂದರಲ್ಲಿ ಎಸೆಯಲಾಗಿತ್ತು.
ಯಾಕ್ರಿ ಹೀಗೆ ಇಟ್ಟಿದ್ರಾ…ಫೈಲ್ ಗಳನ್ನ.. ಇದು ಸರಿ ಏನ್ರಿ….ನೀಟಾಗಿ ಇಟ್ಕೊಳ್ಳೋಕೆ ಆಗಲೇನ್ರಿ. ಎಲ್ಲಾ ಫೈಲ್ ಗಳ ಇದಾವೇನ್ರಿ..ಹಿಂಗಿಟ್ರೆ ಮಿಸ್ ಆಗಲೇನ್ರಿ.. ನಮ್ಮ ಕ್ಷೇತ್ರದ ೧೯೬೫ ಇಸ್ವಿ ಫೈಲ್ ತೋರಿಸ್ರಿ..ಎಂದು‌ ಡಿ.ಎಫ್.ಓ ಗಿರೀಶ್ ಗೆ ತರಾಟೆ ತೆಗೆದುಕೊಂಡರು.
ಶಾಸಕರ ತರಾಟೆಯಿಂದ ಕಕ್ಕಾಬಿಕ್ಕಿಯಾದ ಡಿಎಫ್.ಓ ಗಿರೀಶ್
ಇಲ್ಲ ಸಾರ್ ಸರಿ ಮಾಡ್ತಿವಿ ಎಂದರು.

ಟ್ರಾಕ್ಟರನ್ನು ರೈತರು ಮರುಜಪ್ತಿ ಮಾಡಿದ ರೈತರು

ತುಮಕೂರು: ಯಾವುದೇ ನೋಟೀಸ್ ನೀಡದ ಪಿಎಲ್.ಡಿ ಬ್ಯಾಂಕ್ ಅಧಿಕಾರಿಗಳು ಜಪ್ತಿಮಾಡಿದ್ದ ಟ್ರಾಕ್ಟರನ್ನು ರೈತರು ಮರುಜಪ್ತಿ ಮಾಡಿದ ಪ್ರಸಂಗ ತುಮಕೂರಿನಲ್ಲಿ ನಡೆಯಿತು. ಬಿ.ಎಚ್.ರಸ್ತೆಯಲ್ಲಿರುವ ಪಿಎಲ್.ಡಿ. ಬ್ಯಾಂಕ್ ಗೇಟ್ ಬೀಗ ಮುರಿದ ರೈತರು ಟ್ರಾಕ್ಟರ್ ಅನ್ನು ಸಂಬಂಧಪಟ್ಟ ರೈತರಿಗೆ ನೀಡಿದರು.

ಚಿಕ್ಕನಾಯಕನಹಳ್ಳಿ ತಾಲೂಕು ತಿಮ್ಮನಹಳ್ಳಿ ರೈತರೊಬ್ಬರು ಕಳೆದ ನಾಲ್ಕು ವರ್ಷಗಳ ಹಿಂದೆ ಪಿಎಲ್.ಡಿ. ಬ್ಯಾಂಕ್ ನಲ್ಲಿ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು. ಅಂದು ಬ್ಯಾಂಕ್ ನಿಂದ 7 ಲಕ್ಷ ಸಾಲ ಪಡೆದಿದ್ದ ರೈತರು ಅರ್ಧಕ್ಕೂ ಹೆಚ್ಚಿನ ಸಾಲವನ್ನು ತೀರಿಸಿದ್ದರು.

ಅಂದರೆ ಟ್ರಾಕ್ಟರ್ ಮೇಲೆ 5.58ಲಕ್ಷ, ಬದುಹಾಕಲು 60 ಸಾವಿರ, ಅಡಿಕೆ ಡೆವಲಪ್ಮೆಂಟ್ ಗಾಗಿ 90 ಸಾವಿರ ಸಾಲವನ್ನು ಪಿಎಲ್.ಡಿ. ಬ್ಯಾಂಕ್ ನಿಂದ ಪಡೆದಿದ್ದರು. ಇದರಲ್ಲಿ ಟ್ರಾಕ್ಟರ್ ನ ಬಾಬ್ತು 3 ಲಕ್ಷ, ಬದು ಹಾಕುವ ಬಾಬ್ತು 30 ಸಾವಿರ ಮತ್ತು ಅಡಿಗೆ ಅಭಿವೃದ್ಧಿ ಬಾಬ್ತು 80 ಸಾವಿರ ಸಾಲವನ್ನು ಬ್ಯಾಂಕ್ ಗೆ ಪಾವತಿಸಲಾಗಿತ್ತು.

ಎರಡು ವರ್ಷದ ಹಿಂದೆ ಸಾಲ ಪಡೆದಿದ್ದ ರೈತ ಮೃತರಾಗಿದ್ದರು. ಬಹುತೇಕ ಸಾಲವನ್ನು ಮೃತ ರೈತನ ಕುಟುಂಬ ತೀರಿಸಿತ್ತು. ಆದರೆ ಜನವರಿ 09ರಂದು ದಿಢೀರ್ ಗ್ರಾಮಕ್ಕೆ ತೆರಳಿದ ಅಧಿಕಾರಿಗಳು ಸಂಬಂಧಪಟ್ಟ ರೈತನಿಗೆ ನೋಟೀಸ್ ನೀಡದೆ, ಮಾಹಿತಿಯನ್ನೂ ಕೊಡದೆ ಟ್ರಾಕ್ಟರ್ ಜಪ್ತಿ ಮಾಡಿಕೊಂಡು ಬಂದಿದ್ದಾರೆ.

ವಿಷಯ ತಿಳಿದ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ತುಮಕೂರು ನಗರದ ಪಿಎಲ್.ಡಿ. ಬ್ಯಾಂಕ್ ಗೆ ಬಂದ ರೈತರು ಟ್ರಾಕ್ಟರ್ ಅನ್ನು ಮರುಜಪ್ತಿ ಮಾಡಿದರು.

ಈ ಸಂದರ್ಭದಲ್ಲಿ ಪಬ್ಲಿಕ್ ಸ್ಟೋರಿ.ಇನ್ ಜೊತೆ ಮಾತನಾಡಿದ ಆನಂದ್ ಪಟೇಲ್, ಬ್ಯಾಂಕ್ ನಿಂದ ಸಾಲ ಪಡೆದ ರೈತ ಮುಕ್ಕಾಲು ಭಾಗ ತೀರಿಸಿದ್ದಾರೆ. ರೈತ ಮೃತಪಟ್ಟು ಎರಡು ವರ್ಷಗಳ ನಂತರ ನೋಟಿಸ್ ನೀಡದೆ ಕಳ್ಳರಂತೆ ಅಧಿಕಾರಿಗಳು ಟ್ರಾಕ್ಟರ್ ಜಪ್ತಿ ಮಾಡಿದ್ದಾರೆ. ಇದು ಸರಿಯಲ್ಲ. ಹೀಗಾಗಿಯೇ ನಾವು ಮರುಜಪ್ತಿ ಮಾಡಿದ್ದೇವೆ. ಇನ್ನು ಮುಂದೆ ಅಧಿಕಾರಿಗಳು ರೈತರ ಮನೆಗಳಿಗೆ ಭೇಟಿ ನೀಡಿ ವಸ್ತುಗಳನ್ನು ಜಪ್ತಿ ಮಾಡಿದರೆ ಕಂಬಕ್ಕೆ ಕಟ್ಟಿಹಾಕಿ ಚಳವಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪಿಎಲ್.ಡಿ. ಬ್ಯಾಂಕ್ ಅಧಿಕಾರಿಗಳು ಟ್ರಾಕ್ಟರ್ ಗಾಗಿ ಸಾಲನ ನೀಡಿದ ಮೇಲೆ ಅದಕ್ಕೆ ವಿಮೆ ಮಾಡಿಸಬೇಕಿತ್ತು. ಟ್ರಾಕ್ಟರ್ ಗೆ ವಿಮೆ ಮಾಡಿಸಿದ್ದರೆ ರೈತ ಮೃತಪಟ್ಟ ಮೇಲೆ ವಿಮೆ ಹಣ ಬರುತ್ತಿತ್ತು. ಆದರೆ ವಿಮೆ ಮಾಡಿಸಿಲ್ಲ. ಅದು ಅಧಿಕಾರಿಗಳ ತಪ್ಪು. ರೈತ ಸಾವನ್ನಪ್ಪಿದ ಮೇಲೆ ಸಾಲ ಮನ್ನಾ ಮಾಡಬೇಕಾಗಿತ್ತು. ಅದನ್ನು ಮಾಡಲಿಲ್ಲ. ಈಗ ಏಕಾಏಕಿ ಟ್ರಾಕ್ಟರ್ ಜಪ್ತಿ ಮಾಡಿದರೆ ರೈತರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.

ಸರ್ಕಾರಗಳು ಜನರ ವಿರುದ್ಧ ಬಂಡೆದ್ದಿವೆ. ರೈತರು ಪ್ರತಿಭಟನೆ ನಡೆಸಿದರೆ ಕಾನೂನು ಪ್ರಯೋಗ ಮಾಡಬಹುದು. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ರೈತರು ಏನು ಮಾಡಲು ಸಾಧ್ಯವೆಂಬ ಧೋರಣೆಯನ್ನು ಸರ್ಕಾರ ತಳೆದಿದೆ. ಈ ಹಿನ್ನೆಲೆಯಲ್ಲಿ ರೈತರು ಕೂಡ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.

ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಿದ್ದರೆ ಕೊಬ್ಬರಿಗೆ 50 ಸಾವಿರ ರೂಪಾಯಿ ಸಿಗುತ್ತಿತ್ತು. ಬ್ಯಾಂಕ್ ಗಳಿಂದ ಪಡೆದ ಸಾಲವನ್ನು ರೈತರು ಸುಲಭವಾಗಿ ತೀರಿಸುತ್ತಿದ್ದರು. ಆದರೆ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ರೈತರ ಪರ ಎಂದು ಹೇಳುತ್ತಾರೆ. ಬರಗಾಲದ ಹಿನ್ನೆಲೆಯಲ್ಲಿ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ಹೇಳುತ್ತಿದ್ದರೂ ಅಧಿಕಾರಿಗಳು ಹಿಂಬಾಗಿಲ ಮೂಲಕ ಪ್ರವೇಶ ಮಾಡುತ್ತಿದ್ದಾರೆ. ದೌರ್ಜನ್ಯ ನಡೆಸುತ್ತಿದ್ದಾರೆ. ಇದು ನಿಲ್ಲಬೇಕು. ಇಲ್ಲದೇ ಹೋದರೆ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿಹಾಕುವ ಚಳವಳಿ ಆರಂಭಿಸುತ್ತೇವೆ ಎಂದು ಹೇಳಿದರು.

ನರಭಕ್ಷಕ ಚಿರತೆಗೆ ಬಾಲಕ ಬಲಿ: ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿದ ಶಾಸಕ

ತುಮಕೂರು: ನರಭಕ್ಷಕ ಚಿರತೆಗೆ ಬಾಲಕ ಬಲಿ ಹಿನ್ನೆಲೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ನೂರಕ್ಕೂ ಹೆಚ್ಚು ಬೆಂಬಲಿಗರರೊಂದಿಗೆ ಶಾಸಕ ಗೌರಿಶಂಕರ್ ತುಮಕೂರಿನ ಅಮರ್ ಜ್ಯೋತಿ ನಗರದ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಗುಬ್ಬಿ ತಾಲೂಕಿನ ಮಣಿಕುಪ್ಪೆ ಗ್ರಾಮ 5 ವಷ೯ದ ಸಮಥ೯ಗೌಡನನ್ನ ಚಿರತೆಯೊಂದು ಬಲಿ ಪಡೆದಿತ್ತು. ಅದರಿಂದ ಕೂಡಲೇ ಚಿರತೆ ಹಾವಳಿ ತಪ್ಪಿಸುವಂತೆ ಹಾಗೂ ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಇದೇ ವೇಳೆಗೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್ , ಮೃತ ಬಾಲಕನ ಕುಟುಂಬಕ್ಕೆ 7.5 ಲಕ್ಷ ಪರಿಹಾರ ನೀಡಲಾಗುವುದು. ಈವರೆಗೆ ಸರಕಾರದಿಂದ 5 ಲಕ್ಷ ಪರಿಹಾರ ನೀಡಲಾಗುತ್ತಿತ್ತು.ಆದರೇ ಇದೇ ಮೊದಲ ಬಾರಿಗೆ 7.5 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ

ಹೆಚ್ಚುತ್ತಿವೆ ನರಭಕ್ಷಕ ಚಿರತೆಗಳು

ಕೆ.ಈ.ಸಿದ್ದಯ್ಯ


ತುಮಕೂರು ಜಿಲ್ಲೆಯಲ್ಲಿ ನರಭಕ್ಷಕ ಚಿರತೆ ದಾಳಿಗೆ ಮೂವರು ಬಲಿಯಾಗಿದ್ದಾರೆ. ಇದುವರೆಗೆ ಕುರಿ, ಮೇಕೆ, ದನಕರುಗಳು ಮತ್ತು ನಾಯಿಗಳ ಮೇಲೆ ದಾಳಿ ಮಾಡಿ ತಿನ್ನುತ್ತಿದ್ದ ಚಿರತೆಗಳು ಇದೀಗ ಮನುಷ್ಯನ ಮೇಲೆ ಎರಗತೊಡಗಿವೆ.

ಜಿಲ್ಲೆಯಲ್ಲಿ ಚಿರತೆಯ ಸಂತತಿ ಹೆಚ್ಚಿರುವುದು ಮತ್ತು ಆಹಾರದ ಕೊರತೆಯೂ ದಾಳಿ ಅಧಿಕಗೊಳ್ಳಲು ಕಾರಣವಾಗಿದೆ.

ಈ ದಾಳಿಗಳನ್ನು ಗಮನಿಸಿದರೆ ನರಭಕ್ಷಕ ಚಿರತೆ ತನ್ನ ಆವಾಸ ಸ್ಥಾನವನ್ನು ದಿನದಿನಕ್ಕೂ ಬದಲಿಸುತ್ತಿರುವಂತೆ ಕಂಡುಬರುತ್ತಿದೆ.

ಕುಣಿಗಲ್ ತಾಲೂಕಿನ ದೊಡ್ಡಮಳಲವಾಡಿಯಲ್ಲಿ ವ್ಯಕ್ತಿಯೊಬ್ಬನ ಕುತ್ತಿಗೆ ಸೀಳಿ ರಕ್ತ ಕುಡಿದು ಸಾಯಿಸಿತ್ತು. ಜೊತೆಗೆ ಗಿಡದಪಾಳ್ಯದಲ್ಲಿ ಮಹಿಳೆಯೊಬ್ಬರನ್ನು ಕೊಂದು ಹಾಕಿತ್ತು. ಇದೀಗ ಗುಬ್ಬಿ ತಾಲೂಕಿನ ಮಣಿಕುಪ್ಪೆಯಲ್ಲಿ ಬಾಲಕ ಸಮರ್ಥ್ ನ ಕುತ್ತಿಗೆ ಬಾಯಿ ಹಾಕಿ ರಕ್ತಹೀರಿ ಸಾಯಿಸಿದೆ.

ಪ್ರತಿ ಚಿರತೆ ದಾಳಿಯ ಸಮಯದಲ್ಲೂ ಆಯಾ ಗ್ರಾಮಸ್ಥರು ಚಿರತೆಗಳ ಹಾವಳಿ ಹೆಚ್ಚಿಸಿದೆ. ಅವುಗಳು ದಾಳಿ ನಡೆಯದಂತೆ ಕ್ರಮ ವಹಿಸಬೇಕು ಎಂದು ಮನವಿಗಳ ಮೇಲೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ತುಮಕೂರು ಜಿಲ್ಲೆಯ ಕುಣಿಗಲ್, ಕೊರಟಗೆರೆ, ಸಿರಾ ಮತ್ತು ಪಾವಗಡ ತಾಲೂಕುಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಕುರಿ, ಮೇಕೆ, ದನಕರು ಮತ್ತು ನಾಯಿಗಳನ್ನು ತಿಂದು ಹೋಗುತ್ತಿದ್ದವು.

ಕುರಿಗಾಹಿಗಳು ಮೇಕೆ ಕಾಯುವವರು ಮತ್ತು ದನಗಾಹಿಗಳು ಚಿರತೆ ಕಂಡರೆ ಜೋರಾಗಿ ಕೂಗಿಕೊಂಡು ಅವುಗಳನ್ನು ಕಾಡಿಗೆ ಅಟ್ಟುತ್ತಿದ್ದರು. ಪದೇ ಪದೇ ಕುರಿಗಳ ಹಿಂಡಿನ ಮೇಲೆ ದಾಳಿ ನಡೆಸುತ್ತಿದ್ದುದು ಸಿರಾ ತಾಲೂಕಿನಲ್ಲಿ.

ಕೊರಟಗೆರೆಯಲ್ಲಿ ದನಗಳನ್ನು ಕಚ್ಚಿ ತಿಂದು ಹೋಗಿದ್ದ ಪ್ರಕರಣಗಳು ವರದಿಯಾಗಿದ್ದವು. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ದಾಳಿ ಪ್ರದೇಶಗಳಿಗೆ ತೆರಳಿ ನಾಯಿಯನ್ನು ಬೋನಿನೊಳಗೆ ಕಟ್ಟಿ ಚಿರತೆಯನ್ನು ಹಿಡಿದು ಕಾಡಿಗೆ ಬಿಟ್ಟುಬರುತ್ತಿದ್ದರು. ಈ ಕೆಲಸ ನಿರಂತರವಾಗೇ ನಡೆದುಕೊಂಡುಬಂದಿತ್ತು.

ಚಿರತೆಗಳು ವಾಸಿಸಲು ಸೂಕ್ತ ಆವಾಸ ಸ್ಥಾನಗಳ ಕೊರತೆ ಇದೆ. ಪೊದೆಗಳನ್ನು ಬಿಟ್ಟರೆ ಬೇರೆ ದಟ್ಟವಾದ ಅರಣ್ಯ ಪ್ರದೇಶಗಳು ಇಲ್ಲದೇ ಇರುವುದು ಮತ್ತು ಅಲ್ಲಿ ಮಾಂಸಾಹಾರಿ ಪ್ರಾಣಿಗಳಿಗೆ ಬೇಕಾದ ಆಹಾರ ಇಲ್ಲದೇ ಇರುವುದರಿಂದ ಚಿರತೆಗಳು ಗ್ರಾಮಗಳಿಗೆ ದಾಳಿ ಇಡುತ್ತಿವೆ.

ಸಸ್ಯಹಾರಿ ಪ್ರಾಣಿಗಳಿಗೆ ಬೇಕಾದ ಹಣ್ಣಿನ ಗಿಡಗಳನ್ನು ಹುಲ್ಲು ವ್ಯಾಪಕವಾಗಿ ಬಳಸಿದರೆ ಜಿಂಕೆ, ಮೊಲ, ಕೋತಿಗಳ ಸಂತತಿ ಹೆಚ್ಚುತ್ತದೆ. ಆಗ ಮಾಂಸಾಹಾರಿ ಪ್ರಾಣಿಗಳು ಕಾಡಿನಿಂದ ಹೊರಬರದೆ ಅಲ್ಲಿಯೇ ಆಹಾರ ಹುಡುಕೊಂಡು ತಿನ್ನುತ್ತವೆ. ಆದರೆ ಇಂತಹ ಕ್ರಮಗಳನ್ನು ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.

ಚಿರತೆಗಳು ರಾತ್ರಿಯ ವೇಳೆ ಹೆಚ್ಚು ಸಂಚಿಸುತ್ತಿದ್ದವು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವೇಗವಾಗಿ ಹೋಗುತ್ತಿದ್ದವು. ಆಹಾರದ ಕೊರತೆ ಉಂಟಾಗಿ ಈಗ ಹಗಲು ವೇಳೆಯಲ್ಲೂ ಸಾಕುಪ್ರಾಣಿಗಳು ಮತ್ತು ಒಬ್ಬಂಟಿ ಮನುಷ್ಯನ ಮೇಲೆ ದಾಳಿಯಿಡಲಾರಂಭಿಸಿವೆ. ಇದು ಚಿರತೆ ಸಂಚರಿಸುವ ಗ್ರಾಮಗಳಲ್ಲಿ ಜನರು ಭೀತಿಗೊಳಗಾಗುವಂತೆ ಮಾಡಿದೆ.

ಚಿರತೆ ದಾಳಿ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಬೆಳೆಗಳಿಗೆ ನೀರು ಹಾಯಿಸಲು ಕೂಡ ಒಬ್ಬೊಬ್ಬರೇ ಹೋಗಲಾರದಂತಹ ಪರಿಸ್ಥಿತಿ ಇದೆ. ಹಗಲು ವೇಳೆ ವಿದ್ಯುತ್ ಇಲ್ಲದೆ ರಾತ್ರಿ ವೇಳೆ ರೈತರು ತೋಟತುಡಿಕೆಗಳಿಗೆ ನೀರು ಹರಿಸಲು ಹೋಗಬೇಕು.

ಚಿರತೆಯ ಹಾವಳಿಯಿಂದ ಭಯಗೊಂಡಿರುವ ಜನರು ಬೆಳೆ ಹೋದರೂ ಪರವಾಗಿಲ್ಲ ಜೀವ ಉಳಿದರೆ ಸಾಕು ಎಂದು ಯೋಚಿಸುತ್ತಿದ್ದಾರೆ.

ಜೊತೆಗೆ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಕೆಟ್ಟಶಬ್ದಗಳಿಂದ ಬೈಯ್ಯುತ್ತಿದ್ದಾರೆ.
ಇತ್ತೀಚೆಗಷ್ಟೇ ಹೆಬ್ಬೂರು ಹೋಬಳಿಯಲ್ಲಿ ನರಭಕ್ಷಕ ಚಿರತೆಯನ್ನು ಹಿಡಿದಿದ್ದರು ಎಂದು ಹೇಳಲಾಗಿತ್ತು. ಜನರು ಕೂಡ ಇದೇ ನರಭಕ್ಷಕ ಚಿರತೆ. ಇನ್ನು ಮುಂದೆ ಚಿರತೆ ದಾಳಿಯ ಭಯವಿಲ್ಲ ಎಂದು ಭಾವಿಸುತ್ತಿರುವಾಗಲೇ ಮಣಿಕುಪ್ಪೆಯಲ್ಲಿ ಐದು ವರ್ಷದ ಬಾಲಕ ಸಮರ್ಥ್ ನನ್ನು ಚಿರತೆ ರಕ್ತ ಹೀರಿ ಕೊಂದಿದೆ.

ಮಣಿಕುಪ್ಪೆ ಗ್ರಾಮಕ್ಕೆ ಅನತಿದೂರದಲ್ಲೇ ಇರುವ ತೋಟದಿಂದ ಸಂಜೆ 5.30ರ ಸುಮಾರಿನಲ್ಲಿ ಅಜ್ಜಿ ಮತ್ತು ಮೊಮ್ಮಗ ಸಮರ್ಥ್ ಎಮ್ಮೆ ಹೊಡೆದುಕೊಂಡು ಬರುವಾಗ ಏಕಾಏಕಿ ಬಂದ ಚಿರತೆ ಬಾಲಕನ ಮೇಲೆ ಎರಗಿ ಅವನನ್ನು ಪೊದೆಗೆ ಎಳೆದುಕೊಂಡು ಹೋಗಿ ರಕ್ತ ಹೀರಿ ಸಾಯಿಸಿದೆ. ಇದು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭಯವನ್ನು ಉಂಟು ಮಾಡಿದೆ.

ಮನುಷ್ಯನ ರಕ್ತದ ರುಚಿ ಕಂಡಿರುವ ನರಭಕ್ಷಕ ಚಿರತೆಗಳು ಮನುಷ್ಯನ ಮೇಲೆ ದಾಳಿ ಇಡುತ್ತಿವೆ. ಆದರೂ ಸರ್ಕಾರ ಮತ್ತು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಮೌನವಹಿಸಿದೆ. ಇಂತಹ ದಾಳಿಗಳು ಮುಂದೆ ನಡೆಯದಂತೆ ಕ್ರಮ ಕೈಗೊಳ್ಳಬೇಕು.

ಚಿರತೆಗಳ ಗಣತಿ ಆಗಬೇಕು. ಅವುಗಳಿಗೆ ಬೇಕಾದ ಆವಾಸ ಸ್ಥಾನ ನಿರ್ಮಾಣ ಮತ್ತು ಆಹಾರ ಒದಗಿಸಿ ಮನುಷ್ಯನ ಮೇಲೆ ಎರಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ಮಗುವಿನ ರಕ್ತ ಹೀರಿ ಕೊಂದ ಚಿರತೆ: ಹೆಬ್ಬೂರಿನಲ್ಲಿ ಬಿಗು ವಾತಾವರಣ

ಹೆಬ್ಬೂರು: ಚಿರತೆ ಮನುಷ್ಯರನ್ನು ಬಲಿತೆಗೆದುಕೊಳ್ಳುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಅರಣ್ಯ ಇಲಾಖೆಯ ವಿರುದ್ಧ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಕೇಂದ್ರದಲ್ಲಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ತುಮಕೂರು ಮತ್ತು ಕುಣಿಗಲ್ ಭಾಗದ ಎರಡೂ ಕಡೆಯೂ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ಇನ್ನೊಂದು ಕಡೆಯಲ್ಲಿ ಮಗನನ್ನು ಕಳೆದುಕೊಂಡಿರುವ ಪೋಷಕರ ದುಃಖ ಮಡುಗಟ್ಟಿದೆ. ಗ್ರಾಮಸ್ಥರು ಕೂಡ ಮೃತದೇಹವನ್ನು ಮುಂದಿಟ್ಟುಕೊಂಡು ರೋಧಿಸುತ್ತಿದ್ದಾರೆ.

ಹೆಬ್ಬೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬೂರಿಗೆ ಬರಬೇಕು. ಇಲ್ಲದಿದ್ದರೆ ಜನರನ್ನು ತುಮಕೂರಿಗೆ ಕರೆತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗುರುವಾರ ರಾತ್ರಿ 7 ಗಂಟೆಯಿಂದ 9 ಗಂಟೆಯವರೆಗೂ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಚಿರತೆಗೆ ಇನ್ನು ಎಷ್ಟು ಜೀವಗಳು ಬಲಿಯಾಗಬೇಕು. ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಸತ್ತು ಹೋಗಿದೆಯೇ ಎಂದು ಕಿಡಿಕಾರಿದರು.

ಜನರ ಆಕ್ರೋಶವನ್ನು ತಣಿಸಲು ಪೊಲೀಸರು ಮಾಡಿದ ಯತ್ನ ವಿಫಲವಾಯಿತು. ರಸ್ತೆಯಲ್ಲೇ ನಿಂತ ಪ್ರತಿಭಟನಾಕಾರರು ಅರಣ್ಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಕುಣಿಗಲ್ ಮತ್ತು ಗುಬ್ಬಿಯಲ್ಲಿ ಮೂರು ಮಂದಿ ಅಮಾಯಕರು ಚಿರತೆಗೆ ಬಲಿಯಾಗಿದ್ದಾರೆ. ಆದರೂ ಯಾರೂ ಬಂದು ನೋಡುತ್ತಿಲ್ಲ ಎಂದು ಸಿಟ್ಟು ಹೊರಹಾಕಿದರು.

ಗ್ರಾಮದ ಗಂಗಣ್ಣ ಮಾತನಾಡಿ ಇದುವರೆಗೂ ಚಿರತೆಗಳು ಸಾವಿರಾರು ಜಾನುವಾರುಗಳನ್ನು ಬಲಿತೆಗೆದುಕೊಂಡಿವೆ. ಲಕ್ಷಾಂತರ ರೂಪಾಯಿ ರೈತರಿಗೆ ನಷ್ಟವಾಗಿದೆ. ಇದಕ್ಕಾಗಿ ಪುಡಿಗಾಸು ಪರಿಹಾರ ನೀಡುವುದರಿಂದ ರೈತರಿಗೆ ಯಾವುದೇ ಪ್ರಯೋಜ ಆಗುವುದಿಲ್ಲ. ಕುರಿ, ಮೇಕೆ, ದನಕರು, ನಾಯಿ, ಕೋತಿ ಹೀಗೆ ಎಲ್ಲಾ ಪ್ರಾಣಿಗಳನ್ನು ತಿಂದುಹಾಕುತ್ತಿವೆ. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಜನರ ಗೋಳನ್ನು ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನರಭಕ್ಷಕ ಚಿರತೆಗಳ ಮನುಷ್ಯರ ರಕ್ತದ ರುಚಿಕಂಡಿವೆ. ಹೊಲಗಳಲ್ಲಿ, ತೋಟಗಳಲ್ಲಿ ಒಬ್ಬಂಟಿಯಾಗಿರುವವರ ಮೇಲೆ ದಾಳಿ ನಡೆಸುತ್ತಿವೆ. ಗುಬ್ಬಿ ಮಣಿಕುಪ್ಪೆಯಲ್ಲಿ ಐದು ವರ್ಷದ ಬಾಲಕನ ರಕ್ತ ಹೀರಿ ಸಾಯಿಸಿದೆ. ಇನ್ನೆಷ್ಟು ಜನ ಬಲಿಯಾಗಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

4 ವರ್ಷದ ಬಾಲಕನ ರಕ್ತ ಹೀರಿ ಕೊಂದ ಚಿರತೆ

ತುಮಕೂರು: ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಕಣಕುಪ್ಪೆಯಲ್ಲಿ ನಡೆದಿದೆ.

ಚಿರತೆ ದಾಳಿಯಿಂದ ಸಾವನ್ನಪ್ಪಿರುವ ಬಾಲಕನನ್ನು ಶಮಂತ್ ಗೌಡ ಎಂದು ಗುರುತಿಸಲಾಗಿದೆ.

ಚಿರತೆ ಬಾಲಕನ ಕುತ್ತಿಗೆ ಬಾಯಿ ಹಾಕಿ ರಕ್ತವನ್ನು ಹೀರಿದೆ. ಹೀಗಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಕಣಕುಪ್ಪೆಯ ಶಿವಕುಮಾರ್ ಮತ್ತು ಪುಷ್ಪಲತ ದಂಪತಿಯ ಪುತ್ರ ಸುಮಾರು 5 ವರ್ಷದ ಸಮರ್ಥ ಹೊಲದಲ್ಲಿ ಆಟವಾಡುತ್ತಿದ್ದಾಗ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ಚಿರತೆಯೊಂದು ಕುಣಿಗಲ್ ತಾಲೂಕಿನಲ್ಲಿ ಇಬ್ಬರನ್ನು ಕಚ್ಚಿ ರಕ್ತ ಹೀರಿದ್ದ ಸಾಯಿಸಿರುವುದು ಹಸಿರಾಗಿರುವಾಗಲೇ ಮತ್ತೊಬ್ಬ ಬಾಲಕನನ್ನು ಚಿರತೆ ಬಲಿ ತೆಗೆದುಕೊಂಡಿದೆ.

ಪುತ್ರನನ್ನು ಕಳೆದುಕೊಂಡಿರುವ ಪೋಷಕರು ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ. ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್.ಆರ್ ಹಿರೇಮಠ್ ಅವರಿಂದ ನಾಯಕತ್ವ ತರಬೇತಿ ಶಿಬಿರ

ತುಮಕೂರು: “ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್ ಅವರಿಂದ ರಾಜ್ಯಮಟ್ಟದ 2ದಿನದ ನಾಯಕತ್ವ ತರಬೇತಿ ಶಿಬಿರ ತುಮಕೂರಿನ ಸಿದ್ಧರಬೆಟ್ಟದಲ್ಲಿ” ನಡೆಯಲಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮಲ್ಲಿಕಾರ್ಜುನ ಭಟ್ಟರಹಳ್ಳಿ ತಿಳಿಸಿದ್ದಾರೆ.

ಪ್ರಸ್ತುತ ದೇಶ ಮತ್ತು ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರ, ಅಪ್ರಾಮಾಣಿಕ ನಾಯಕರಿಂದ ಕೂಡಿದ್ದು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಎಲ್ಲೆಲ್ಲೂ ಜಾತೀಯತೆ ,ಅಸಮಾನತೆ, ತಿದ್ದುಪಡಿಯಾಗುತ್ತಿರುವ ಕಾಯ್ದೆಯನ್ನು ವಿರೋಧಿಸಿ ಪ್ರಜೆಗಳ ಹೋರಾಟಗಳನ್ನು ಮತ್ತು ಜನಾಭಿಪ್ರಾಯಗಳಿಗೆ ಮನ್ನಣೆಕೊಡದ ಸರ್ಕಾರಗಳನ್ನು ನೋಡಿದರೆ ಒಂದು ಒಂದು ರೀತಿ ಅಧಿಕಾರಶಾಹಿ ಪದ್ಧತಿಯನ್ನು ಅಳವಡಿಸಿಕೊಂಡಂತೆ ಕಾಣುತ್ತಿದೆ ಎಂದಿದ್ದಾರೆ.

ಇನ್ನು ಸ್ಥಳೀಯ ಸರ್ಕಾರಗಳಲ್ಲಂತೂ ಜನರಿಗೆ ಸ್ಪಂಧಿಸುವ ಜನನಾಯಕರನ್ನು ಕಾಣಲು ಸಾಧ್ಶವೇ ಇಲ್ಲ ಹೀಗಾಗಿ ಸ್ಥಳೀಯ ಸಂಸ್ಥೆಗಳು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುತ್ತಿವೆ. ಹೀಗೆ ಸ್ಥಳೀಯ ಸಂಸ್ಥೆಗಳಲ್ಲಿನ ಕಾರ್ಯವಿಧಾನ ಹಾಗೂ ಅವುಗಳಿಗೆ ಬರುವ ಅನುದಾನವನ್ನು ಯಾವ ರೀತಿ ಬಳಸಿಕೊಂಡು ಜನಸೇವೆಗೆ ಮುಂದಾಗಬೇಕು ಎಂಬುದನ್ನು ಸದರಿ ತರಬೇತಿ ಶಿಬಿರದಲ್ಲಿ ತಿಳಿಸಲಾಗುವುದು.

ಸ್ವಚ್ಚ, ಪ್ರಾಮಾಣಿಕ, ಜನಪರ ಜನಸೇವಕರನ್ನು ರಾಜಕೀಯ ನಾಯಕರನ್ನಾಗಿ ಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಸಲುವಾಗಿ ಜಿಲ್ಲಾಪಂಚಾಯ್ತಿ,ತಾಲೂಕುಪಂಚಾಯ್ತಿ, ಗ್ರಾಮಪಂಚಾಯ್ತಿ, ಪಟ್ಟಣಪಂಚಾಯ್ತಿ, ಪುರಸಭೆ, ನಗರಸಭೆ, ಹಾಗೂ ಮಹಾನಗರಪಾಲಿಕೆಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜನಸೇವೆ ಮಾಡ ಬಯಸುವರಿಗೆ ಯಾವುದೇ ಹಣ ,ಹೆಂಡ, ಜಾತಿಧರ್ಮವನ್ನು ಹೊರತು ಪಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಪಣತೊಟ್ಟ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತುಮಕೂರಿನ ಸಿದ್ದರಬೆಟ್ಟದಲ್ಲಿ ಜನವರಿ 11 ಮತ್ತು 12ರಂದು ಎರಡು ದಿನದ ನಾಯಕತ್ವ ತರಬೇತಿ ಶಿಬಿರವನ್ನು ಆಯೋಜಿಸಿದೆ.

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಇಂಥದ್ದೊಂದು ತರಬೇತಿ ಶಿಬಿರ ಮಾಡುವ ಮುಖಾಂತರ ರಾಜ್ಶದಲ್ಲಿ ಹೊಸತನದ ನಾಯಕತ್ವದ ಜೀವಪರ ಮನಸ್ಥಿತಿಗಳ ಪಾಂಚಜನ್ಶ ಮೊಳಗಿಸಲು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಜ್ಜಾಗಿದೆ.

ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜನಜಾಗೃತಿ ಮೂಡಿಸಿದೆ ಮತ್ತು ಹಲವಾರು ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಿದೆ ಎಂದು ಹೇಳಿದ್ದಾರೆ.

ದೇಶದ ಪ್ರಗತಿ ರಾಜಕಾರಣದ ಮೇಲೆ ನಿಂತಿದೆ ಆದಕಾರಣ ನಿಷ್ಪಕ್ಷಪಾತ ಜನಪರ ನಾಯಕರನ್ನು ತಯಾರು ಮಾಡುವತ್ತ ಹೆಜ್ಜೆಹಾಕಿದೆ ಪ್ರಸ್ತುತ ತರಬೇತಿ ತುಮಕೂರಿನಲ್ಲಿ ನಡೆಯಲಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಇಂಥ ತರಬೇತಿ ಶಿಬಿರಗಳು ನಡೆಯಲಿವೆ.

ಎರಡು ದಿನವೂ ಶಿಬಿರದಲ್ಲಿ ಜನಪರ ಚಿಂತಕರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಆರ್. ಹೀರೆಮಠ್ ರವರುˌಉಡುಪಿಯ ಅಂತರಾಷ್ರ್ಟೀಯ ತರಬೇತುದಾರರಾದ ಜಯಶ್ರೀ ಭಟ್ˌ ಪಂಚಾಯತ್ ರಾಜ್ ಪರಿಷತ್ ಅಧ್ಶಕ್ಷರಾದ ಕಾಡಶೆಟ್ಟೀಹಳ್ಳಿ ಸತೀಶ್ ರವರು ಸಂಪೂರ್ಣ ಚಟುವಟಿಕೆ ಆಧಾರಿತವಾಗಿ ವಿಭಿನ್ನ ರೀತಿಯ ತರಬೇತಿ ನೀಡಿ ಪ್ರತೀ ವ್ಶಕ್ತಿಯಲ್ಲಿರುವ ನಾಯಕನನ್ನು ಜಾಗ್ರುತಗೊಳಿಸಿ ಶಿಬಿರಾರ್ಥಿಗಳಿಗೆ ಮಾರ್ಗ ದರ್ಶನ ಮಾಡುತ್ತಾರೆ.

ತುಮಕೂರು ಶಿಬಿರದಲ್ಲಿ ಸಾಮಾಜಿಕ ಹೋರಾಟಗಾರ ಶ್ರೀ.ರವಿಕೃಷ್ಣಾ ರೆಡ್ಡಿ , ಪರಿಸರ ಹೋರಾಟಗಾರ ಜ್ಞಾನಸಿಂಧೂಸ್ವಾಮಿ,ಮಂಗಳೂರಿನ ಅಮ್ರುತ್ ಶೆಣೈ ಸೇರಿದಂತೆ ಹಲವರು ಉಪಸ್ಥಿತರಿರುತ್ತಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಊಟˌವಸತಿ ಸಹಿತ ಟ್ರೆಕ್ಕಿಂಗ್ ಆಧಾರಿತ ವಿಶಿಷ್ಠ ತರಬೇತಿಗೆ 100ಜನರಿಗೆ ಮಾತ್ರ ಅವಕಾಶವಿದ್ದು ಹೆಸರು ನೊಂದಣಿಗಾಗಿ ಮೊ. 9880665397, 9066133377 ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆ: ಸಚಿವ ಭರವಸೆ

ತುಮಕೂರು: ಕಲೆ, ಸಾಹಿತ್ಯ, ಸಂಸ್ಕತಿ ಹಾಗೂ ಸ್ಥಳೀಯ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ. ಈ ಸಂಬಂಧ ಸಂಬಂಧಪಟ್ಟ ಸಚಿವರೊಂದಿಗೂ ಮಾತನಾಡಿ ಒತ್ತಾಯಿಸುತ್ತೇನೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತು ತುಮಕೂರು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮೂಡಲಪಾಯ ಯಕ್ಷಗಾನ ಪರಂಪರೆ-ಪುನಶ್ಚೇತನ ವಿಚಾರ ಸಂಕಿರಣ ಮತ್ತು ಭಾಗವತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಮನವಿ ಸ್ವೀಕರಿಸಿದ ಸಚಿವರು ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆಗೆ ನೆರವು ನೀಡುವುದಾಗಿ ಹೇಳಿದರು.

ಕಲೆ ಸಾಹಿತ್ಯ, ಭಾಷೆ ಮತ್ತು ಸಂಸ್ಕತಿಗೆ ಪೂರಕವಾಗಿ ಶಕ್ತಿತುಂಬುವ ಕೆಲಸ ಮಾಡಿದರೆ ಸಂಸ್ಕಾರವಂತರು ಸೃಷ್ಟಿಯಾಗುತ್ತಾರೆ ಎಂದು ನಂಬಿದ್ದೇನೆ. ಈಗಿನ ಸಂದರ್ಭದಲ್ಲಿ ಸಂಸ್ಕಾರವಂತರು ಬೇಕಾಗಿದ್ದಾರೆ. ಹೀಗಾಗಿ ಯುವಜನಕ್ಕೆ ಖುಷಿ ನೀಡುವ ಮಜಾ ಕೊಡುವ ಸ್ಥಿತಿ ನಿರ್ಮಾಣ ಮಾಢುವ ಜವಾಬ್ದಾರಿ ಕಲಾವಿದರ ಮೇಲಿದೆ. ಹಳೆಯ ಜಾನಪದ ಕಲೆಗಳನ್ನು ಹೊಸದಾಗಿ ಕಟ್ಟಬೇಕು. ಆಗ ಇಂದಿನ ಪೀಳಿಗೆಯೂ ನೋಡುತ್ತದೆ. ಎಲ್ಲರನ್ನು ಒಳಗೊಳ್ಳುವ ಪ್ರಕ್ರಿಯೆ ಇದಾಗುತ್ತದೆ. ಇದಕ್ಕೆ ಸರ್ಕಾರವೂ ಪ್ರೋತ್ಸಾಹ ನೀಡುತ್ತದೆ ಎಂದರು.

ಮುಖವೀಣೆ, ಮೂಡಲಪಾಯ ಕಲೆಯನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಸಾಧನೆ. ಸರ್ಕಾರ ಇದಕ್ಕೆ ಪೋಷಣೆ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ. ಮೂಡಲಪಾಯ ಯಕ್ಷಗಾನ ಜೀವಂತ ಕಲೆ. ಇದು ಗಂಡುಕಲೆ. ಮಹಿಳೆಯರಿಗೆ ಒಮ್ಮೆ ಹೇಳಿದ್ದೆ. ತಾಳಕ್ಕೆ ನೀವು ಕಾಲು ಹಾಕುತ್ತೀರ. ಪುರುಷರು ಕುಣಿಯುತ್ತಾರೆ. ಪುರುಷರು ಕಾಲು ಹಾಕುವ ಶೈಲಿಯೇ ಬೇರೆ. ಮಹಿಳೆಯರು ಹಾಕುವ ರೀತಿಯ ಬೇರೆ ಎಂದು ಹೇಳಿದರು.

ಬೆಳ್ಳಿತೆರೆ ಮತ್ತು ಟಿವಿ ಜಗತ್ತಿನಲ್ಲಿ ಪ್ರಾಚೀನ ಕಲೆ ಮರೆಯಾಗಿದೆ. ಇದು ಕಾಲಚಕ್ರ ಇದ್ದಂತೆ. ಒಂದಲ್ಲ ಒಂದು ದಿನ ಪ್ರಾಚೀನ ಕಲೆಗೆ ಹೆಚ್ಚಿನ ಮಹತ್ವ ಬರುತ್ತದೆ. ಅದಕ್ಕಾಗಿ ಕಲಾವಿದರು ಕಲೆಯನ್ನು ಉಳಿಸುವ ಮತ್ತು ಹೊಸ ಕಾಲಕ್ಕೆ ನಾವೀನ್ಯಗೊಳಿಸುವ ಕೆಲಸ ಮಾಡಬೇಕು. ಇದಕ್ಕೆ ಸರ್ಕಾರ ಪ್ರೋತ್ಸಾಹ ಕೊಡಬೇಕು ಎಂದರು. ತುಮಕೂರು ಜಿಲ್ಲೆ ಕಲೆಗೆ ಹೆಸರುಪಡೆದಿದೆ. ಗುಬ್ಬಿ ವೀರಣ್ಣನವರ ನಾಡಿನಲ್ಲಿ ಕಲೆಗೆ ಹಿನ್ನಡೆಯಾದಂತೆ ಕಂಡುಬರುತ್ತಿದೆ. ಹೀಗಾಗಿ ಕಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಮಂದಿ ಮೂಡಲಪಾಯ ಯಕ್ಷಗಾನ ಕಲಾವಿದರು ಇದ್ದಾರೆ. ತುಮಕೂರು ನಗರದಲ್ಲೇ 150ಕ್ಕೂ ಭಾಗವತರು, ಮುಖವೀಣೆಯವರು ಇದ್ದಾರೆ. ಹೀಗಾಗಿ ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪಿಸುವಂತೆ ಕನ್ನಡ ಮತ್ತು ಸಂಸ್ಕತಿ ಸಚಿವರಿಗೆ ಮನವಿ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರ ಮೇಲೆ ಒತ್ತಡ ಹೇರಬೇಕು ಎಂದು ಮನವಿ ನೀಡಿದರು.

ವಿಶ್ವವಿದ್ಯಾಲಯಗಳು ಸ್ಥಳೀಯ ಕಲೆ, ಇತಿಹಾಸ, ಸಂಸ್ಕøತಿ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜಿಲ್ಲೆಗೊಂದು ವಿಶ್ವವಿದ್ಯಾಲಯಗಳು ಆಗಿವೆ. ಪ್ರಾದೇಶಿಕ ಸಂಸ್ಕøತಿ, ವೈಶಿಷ್ಟ್ಯಗಳನ್ನು ಇತಿಹಾಸವನ್ನು ಕಟ್ಟಿಕೊಡುವ ಜವಾಬ್ದಾರಿ ವಿವಿಗಳ ಮೇಲಿದೆ. ಆದರೆ ಇಂತಹ ಕಾರ್ಯವನ್ನು ಮಾಡಲು ವಿಶ್ವವಿದ್ಯಾಲಯಗಳು ಮುಂದೆ ಬರುತ್ತಿಲ್ಲ. ತುಮಕೂರು ವಿಶ್ವವಿದ್ಯಾಲಯವೂ ಇಂತಹ ಕೆಲಸ ಮಾಡಲು ಹಿಂದೇಟು ಹಾಕುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಅರಳಗುಪ್ಪೆ ನಂಜಪ್ಪ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇಗೌಡ, ಬಿ.ಮರುಳಯ್ಯ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಚಿಕ್ಕಣ್ಣ ಯಣ್ಣೇಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ನೀಲಗಿರಿ ನೆಟ್ಟರೆ ಕೊಳವೆಬಾವಿಯೇ ಬಂದ್

ಲಕ್ಷ್ಮೀಕಾಂತರಾಜು ಎಂಜಿ


ತುಮಕೂರು: ಹೌದು. ನೀಲಗಿರಿ ಎಂಬುದು ಅಂತರ್ಜಲವನ್ನ ಕೊಳವೆ ಬಾವಿಗಿಂತಲೂ ಅಧಿಕವಾಗಿ ಹೀರುವ ಬಕಾಸುರ ಮರವಾಗಿದೆ. ಈ ನೀಲಗಿರಿ ಮರಗಳಲ್ಲಿ ಹಸಿ ನೀರಿನಾಂಶವಿದ್ದರೂ ಬೆಂಕಿ‌ ಇಟ್ಟರೆ ಹಸಿ ಮರವೇ ಧಗ ಧಗ ಎಂದು ದಹಿಸುವ ಮರ ಇದಾಗಿದೆ.

ಈ ಪರಿಣಾಮದಿಂದ ನೀಲಗಿರಿಯು ಭೂಮಿಯಲ್ಲಿನ ಅಂತರ್ಜಲ ಬಸಿಯುವ ಯಂತ್ರಗಳಾದ ಬೋರ್ ವೆಲ್ ನ ಸಬ್ ಮರ್ಸಿಬಲ್ ಮೊಟಾರ್ ಪಂಪುಗಳಂತಾಗಿ‌ಬಿಟ್ಟಿವೆ. ಅಂತರ್ಜಲ ಹೀರಿಕೊಳ್ಳುವುದರಲ್ಲಿ ನೀಲಗಿರಿಯು ಕೊಳವೆ ಬಾವಿಗಳಷ್ಟೆ ಪಾತ್ರವಹಿಸುತ್ತವೆ .

ನೆಡದಿರಿ‌ ನೀಲಗರಿ ಎಂಬ ಜಾಗೃತಿ ಪುಸ್ತಕವೊಂದನ್ನ ಲೇಖಕ ಚಳ್ಳಕೆರೆ ಯರ್ರಿಸ್ವಾಮಿ ದಶಕಗಳ ಹಿಂದೆಯೇ ಬರೆದು ನೀಲಗಿರಿ ಕುರಿತು ಬಾಧಕಗಳ ಕುರಿತು ಎಚ್ಚರಿಸಿದ್ದಾರೆ.

ನೀಲಗಿರಿಯನ್ನ ಈ ಹಿಂದಿನಿಂದಲೂ ಬೆಂಗಳೂರು, ಕೋಲಾರ,ಬೆಂಗಳೂರು‌ ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ‌ ಅತಿ ಹೆಚ್ಚಾಗಿ ಒಂದು ಬೆಳೆಯನ್ನಾಗಿ ರೈತರು ತಮ್ಮ ಜಮೀನುಗಳಲ್ಲಿ ದೀರ್ಘಾವಧಿಯಲ್ಲಿ ಬೆಳೆದು ಸೌದೆಯಾಗಿ ಮಾರಾಟ ಮಾಡುವ‌ ಪರಿಪಾಠ ಹೊಂದಿರುತ್ತಾರೆ.

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ತನ್ನ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚಾಗಿ ನೀಲಗಿರಿ‌ ನೆಡೆಸಿ‌ ಪೋಷಿಸಿಸುತ್ತಿದೆ. ಇಂಥಹ ನೀಲಗಿರಿ ಮರಗಳು ಪ್ರತಿದಿನಕ್ಕೆ ಭೂಮಿಯಲ್ಲಿನ ನಲವತ್ತು ಲೀಟರ್ ನೀರನ್ನ ಹೀರಿಕೊಳ್ಳಲಿದೆ ಎಂದು ಪ್ರಾಯೋಗಿಕವಾಗಿ ಸಾಬೀತಾಗಿದೆ.

ಈ ಪರಿಣಾಮದಿಂದ ನೀಲಗಿರಿಯು ಭೂಮಿಯಲ್ಲಿನ ಅಂತರ್ಜಲ ಬಸಿಯುವ ಯಂತ್ರಗಳಾದ ಬೋರ್ ವೆಲ್ ನ ಸಬ್ ಮರ್ಸಿಬಲ್ ಮೊಟಾರ್ ಪಂಪುಗಳಂತಾಗಿ‌ಬಿಟ್ಟಿವೆ. ಅಂತರ್ಜಲ ಹೀರಿಕೊಳ್ಳುವುದರಲ್ಲಿ ನೀಲಗಿರಿಯು ಕೊಳವೆ ಬಾವಿಗಳಷ್ಟೆ ಪಾತ್ರವಹಿಸುತ್ತವೆ .



ಅರಣ್ಯದಲ್ಲಿ ನೀಲಗಿರಿಗೆ ಇತಿಶ್ರೀ

ತಾಲ್ಲೂಕು ಜಾಗೂ, ಶಿರಾ ತಾಲ್ಲೂಕಿನ ಭೌಗೋಳಿಕ‌ ಪ್ರದೇಶದಲ್ಲಿರುವ ಅಂಕಸಂದ್ರ ಮೀಸಲು ಅರಣ್ಯದಲ್ಲಿ ಸುಮಾರು 2 ಸಾವಿರ ಎಕರೆಯಲ್ಲಿ‌ ನೀಲಗಿರಿ ಇದೆ.ಕಳೆದ ಐದು ವರ್ಷದಿಂದ ಸರ್ಕಾರದ ಆದೇಶದಂತೆ ನಾವು ನೀಲಗಿರಿ ಮತ್ತು ಅಕೇಶಿಯಾ ಸಸಿಗಳನ್ನ ನಾವು ನೆಟ್ಟಿಲ್ಲ.ಯಾವುದೇ ಆದೇಶವಿಲ್ಲದೆ ನಾವು ಅರಣ್ಯದಲ್ಲಿನ ನೀಲಗಿರಿಯನ್ನ ತೆಗೆಯುವುದಾಗಲಿ , ಕತ್ತರಿಸುವುದಾಗಲಿ ಮಾಡುವುದಿಲ್ಲ. ಅರಣ್ಯ ಇಲಾಖೆಯಲ್ಲಿನ ನೀಲಗಿರಿಯನ್ನ ಸಸಿ ಹಾಕಿಸಿದ ನಂತರದ 30 ವರ್ಷದ ನಂತರ ನೀಲಗಿರಿಯನ್ನ ಇಲಾಖೆಯ ಅನುಮತಿಯಂತೆ ತೆಗೆದು ಹೊಸ ಪ್ಲಾಂಟೇಶನ್ ಮಾಡಲಾಗುವುದು.

ರವಿ, ವಲಯ ಅರಣ್ಯಾಧಿಕಾರಿಗಳು.‌

ಗುಬ್ಬಿ ವಲಯ



ನೀಲಗಿರಿಯ ಹಿನ್ನೆಲೆ

ನೀಲಗಿರಿಯು ಆಸ್ಟ್ರೇಲಿಯಾ ದ ಸ್ಥಳೀಯ ಸಸ್ಯವಾಗಿದ್ದು ಗುಂಪಾಗಿ ಬೆಳೆಯುವ ಪೊದೆ ರೂಪವಾಗಿ ಬೆಳೆಯುವ ಮರಗಳಾಗಿವೆ. ಇದು ನೈಸರ್ಗಿಕ‌ ಕೀಟನಾಶಕವಾಗಿದ್ದು ನೀಲಗಿರಿ ಎಣ್ಣೆಯು ಅತ್ಯಂತ ಉಷ್ಣಾಂಶವಾಗಿದೆ. ಇದರ ಅಂತರ್ಜಲ ಹೀರುವಿಕೆಯ ಉದಾಹರಣೆಯೆಂದರೆ ಜೌಗು ನೆಲಗಳನ್ನ ಒಣಗಿಸಲು ನೀಲಗಿರಿ ಬೆಳೆಸುತ್ತಾರೆಂದರೆ ನೀಲಗಿರಿ ಮಹಾತ್ಮೆಯನ್ನ ಊಹಿಸಿಕೊಳ್ಳಲೂ ಅಸಾಧ್ಯ.

ನೀಲಗಿರಿಯು ಅತ್ಯಂತ ಉಷ್ಣಾಂಶ ಇರುವ ಮರಗಳಾಗಿದ್ದು ಕಾಳ್ಗಿಚ್ಚು ಉದ್ಬವವಾಗಲು ನೀಲಗಿರಿಯೂ ಪ್ರಮುಖ ಕಾರಣ . ಪ್ರಸ್ತು‌ತ ಆಸ್ಟ್ರೇಲಿಯಾದ ಕಾಡಿನ ಕಾಳ್ಗಿಚ್ಚಿಗೆ ಅಲ್ಲಿನ ನೀಲಗಿರಿಯೇ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು.

ಇಂಥಹ ಅಂತರ್ಜಲ ಮತ್ತು‌ಅರಣ್ಯಕ್ಕೂ ಮಾರಕವಾಗಿರುವ ನೀಲಗಿರಿಯನ್ನ ಅರಣ್ಯ ಇಲಾಖೆ ಇನ್ನೂ ನಾಟಿ ಮಾಡಿ ಪೋಷಿಸುತ್ತಿದೆ.

ಗುಬ್ಬಿ ತಾಲ್ಲೂಕು ಅಂಕಸಂದ್ರ ಮೀಸಲು‌ ಅರಣ್ಯವು ಸುಮಾರು‌ 7 ಸಾವಿರ ಎಕರೆಯಷ್ಟು ಅರಣ್ಯ ಭೂಮಿಯಿದ್ದು ಅದರಲ್ಲಿ ಸುಮಾರು ಎರೆಡು ಸಾವಿರ ಎಕರೆಯಷ್ಟು ಅರಣ್ಯ ಭೂಮಿಯಲ್ಲಿ ನೀಲಗಿರಿ‌ ಕುರುಚಲು ಕಾಡಿದೆ ಎನ್ನುತ್ತಾರೆ ಗುಬ್ಬಿಯ ವಲಯ ಅರಣ್ಯ‌ಅಧಿಕಾರಿಗಳಾದ ರವಿ ಅವರು.

ಈ ಮೀಸಲು ನೀಲಗಿರಿ ಅರಣ್ಯದ ಆಸು ಪಾಸಿನಲ್ಲಿರುವ ರೈತರ ಜಮೀನುಗಳಲ್ಲಿ ಅಂತರ್ಜಲ ಬತ್ತಲು ಈ ನೀಲಗಿರಿಯೂ ಒಂದು ಪ್ರಮುಖ ಕಾರಣವಾಗಿದೆ. ಈ ಪರಿಣಾಮವನ್ನ ಅರಿತ‌ ಬೆಂಗಳೂರು‌ ಗ್ರಾಮಾಂತರ ಜಿಲ್ಲಾಧಿಕಾರಿಗಳು ರಾಜ್ಯ ಉಚ್ಛನ್ಯಾಯಾಲಯದ‌ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆದಿರುವ ರೈತರೆಲ್ಲರೂ ನೀಲಗಿರಿಯನ್ನ ತೆರವು ಮಾಡುವಂತೆ ಆದೇಶ ಮಾಡಿದ್ದಾರೆ.

ಈ ಬಗೆಯ ಆದೇಶಗಳು ನೀಲಗಿರಿ ಹೊಂದಿರುವ ಎಲ್ಲ‌ ಜಿಲ್ಲೆಗಳಲ್ಲೂ ಆಗಿ ಅರಣ್ಯ ಮತ್ತು ಖಾಸಗಿ ರೈತರ ಜಮೀನಿನಲ್ಲಿರುವ ನೀಲಗಿರಿಯನ್ನ ತೆಗೆಸುವ ನಿರ್ಧಾರವನ್ನ ಸರ್ಕಾರವನ್ನ ಶೀಘ್ರವಾಗಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ರೈತಾಪಿ ವರ್ಗ.

ಅಂತರ್ಜಲ ವೃದ್ಧಿಸಲು ಸಣ್ಣನೀರಾವರಿ ಇಲಾಖೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಇದರ ಜೊತೆಗೆ ಅಂತರ್ಜಲ ಕಸಿಯುತ್ತಿರುವ ನೀಲಗಿರಿಯನ್ನ ಸರ್ಕಾರ ನಿಷೇಧಿಸುವ ಅಗತ್ಯತೆ ಇದೆ.

ನೀಲಗಿರಿ ತೆಗೆಯಿರಿ


ನಮ್ಮ ಊರು ಅರಣ್ಯದಂಚಿನಲ್ಲಿದ್ದು ಅತಿ ಹೆಚ್ಚು ನೀಲಗಿರಿ ಇದೆ. ಇದರಿಂದ ನಮ್ಮ ಭಾಗದಲ್ಲಿ ಅಂತರ್ಜಲ ಕುಸಿಯಲಿಕ್ಕೆ ನೀಲಗಿರಿಯು ಪ್ರಮುಖ ಕಾರಣ. ಆದ್ದರಿಂದ ಅರಣ್ಯ ಇಲಾಖೆಯು ಇಲ್ಲಿನ ನೀಲಗಿರಿ ತೆಗೆದು ಇತರೆ ಜಾತಿ ಮರಗಳ ಸಸಿಗಳನ್ನ ಬೆಳೆಸಬೇಕು.

ಗಜೇಂದ್ರ ,ಬಿ ಇ‌ ವಿದ್ಯಾರ್ಥಿ ಅಂಕಸಂದ್ರ

ತುಮಕೂರಿನಲ್ಲಿ ಎರಡು ದಿನ ನಾಟಕೋತ್ಸವ

ತುಮಕೂರು: ನಾಟಕಮನೆ ತುಮಕೂರು ವತಿಯಿಂದ ಜನವರಿ 9 ಮತ್ತು 10ರಂದು ಎರಡು ದಿನಗಳ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಮೊದಲ ದಿನ ಕೃಷ್ಣ ಸಂಧಾನ ಮತ್ತು ಎರಡನೇ ದಿನ ಗರ್ಗಂಟಪ್ಪನ ಮಗ ಪರ್ಗಂಟಪ್ಪ ನಾಟಕ ಪ್ರದರ್ಶನ ನಡೆಯಲಿದೆ.

ಜನವರಿ 9ರಂದು ಸಂಜೆ 6.30ಕ್ಕೆ ನಾಟಕ ಪ್ರದರ್ಶನದ ವೇದಿಕೆ ಸಮಾರಂಭ ನಡೆಯಲಿದ್ದು, ಅಪರ ಜಿಲ್ಲಾಧಿಕಾರಿ ಚನ್ನವಸಪ್ಪ ಉದ್ಘಾಟಿಸುವರು. ಶಾಸಕ ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸುವರು.

ಮುಖ್ಯಅತಿಥಿಗಳಾಗಿ ಹಿರಿಯ ರಂಗಕರ್ಮಿ ಡಾ.ಲಕ್ಷ್ಮಣ್ ದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಅಪ್ಪಿನಕಟ್ಟಿ, ಡಾ. ದಿನೇಶ್ ಕುಮಾರ್ ಭಾಗವಹಿಸುವರು.

ಕಾರ್ಯಕ್ರಮದ ನಂತರ ಕೃಷ್ಣಸಂಧಾನ ನಾಟಕ ಪ್ರದರ್ಶನಗೊಳ್ಳಲಿದೆ.

ಜನವರಿ 10ರಂದು ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಉದ್ಘಾಟಿಸುವರು, ಲೇಖಕಿ ಬಿ.ಸಿ.ಶೈಲಾ ನಾಗರಾಜ್, ನಾಗರತ್ನ ಚಂದ್ರಪ್ಪ, ಜಿ.ಕೃಷ್ಣಪ್ಪ, ಪರಶುರಾಮ್ ಭಾಗವಹಿಸುವರು ಎಂದು ನಾಟಕಮನೆ ಮಹಾಲಿಂಗು ತಿಳಿಸಿದರು.

ಕೃಷ್ಣಸಂಧಾನ ನಾಟಕವನ್ನು ವಿ.ಎನ್.ಅಶ್ವತ್ಥ್ ರಚಿಸಿದ್ದು ಎಸ್.ಆರ್. ಪ್ರಕಾಶ್ ನಾಟಕ ನಿರ್ದೇಶಿಸಿದ್ದಾರೆ. ಬಸವೇಗೌಡ ರಂಗವಿನ್ಯಾಸ ಮಾಡಿದ್ದಾರೆ.

ಗರ್ಗಂಟಪ್ಪನ ಮಗ ಪರ್ಗಂಟಪ್ಪ ನಾಟಕವನ್ನು ಸಂಗೀತ ರಚಿಸಿದ್ದು, ಸುರೇಶ್ ಅನಗಳ್ಳಿ ನಿರ್ದೇಶಿಸಿದ್ದಾರೆ. ಅನೇಕಾರಂಗ ಕಲಾವಿದರು ಪ್ರಸ್ತುತಪಡಿಸಿದ್ದಾರೆ.