Tuesday, February 24, 2026
Google search engine
Home Blog Page 298

ಧಾರ್ಮಿಕ ಮೂಲಭೂತವಾದ ರಾಷ್ಟ್ರೀಯತೆ ಅಲ್ಲ: ಬರಗೂರು

ಸಮಾರಂಭದಲ್ಲಿ ಪ್ರಸಿದ್ಧ ಲೇಖಕ, ಸಿನಿಮಾ ವಿಮರ್ಶಕ ರಾಮಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಜಿ.ಎಂ.ಶ್ರೀನಿವಾಸಯ್ಯ, ಬರಗೂರು ರಾಮಚಂದ್ರಪ್ಪ ಇದ್ದಾರೆ

ತುಮಕೂರು: ಧಾರ್ಮಿಕ ಮೂಲಭೂತವಾದ ರಾಷ್ಟ್ರೀಯತೆ ಅಲ್ಲ ಎಂದು ನಾಡೋಜ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ತುಮಕೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಯುವಬರಹಗಾರರ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,ದೇಶದಲ್ಲಿ ಧರ್ಮ, ಸಂಸ್ಕೃತಿ ಇತಿಹಾಸದ ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳ ಅಪಾಯದ ಸೂಚನೆಯಾಗಿದೆ ಎಂದು ಹೇಳಿದರು.

ಪಕ್ಷ, ಜಾತಿ, ಧರ್ಮ ಮೀರಿದ ನಾಯಕತ್ವದ ಬಗ್ಗೆ ಆರೋಗ್ಯವಂತ ಸಮಾಜ ನಿರೀಕ್ಷಿಸುತ್ತಿದೆ ಎಂದು ಹೇಳಿದರು.

ನಾಲಿಗೆ ಮಾರಾಟ ಮಾಡುವ ಪಕ್ಷಬದ್ಧ ಬೌದ್ದಿಕ ನಾಯಕತ್ವದಿಂದ ಸಾಮಾಜಿಕ ನ್ಯಾಯವನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಪಕ್ಷಬದ್ಧ ಬೌದ್ಧಿಕ ವಲಯಕ್ಕಿಂತ ಜನಬದ್ಧ ಬೌದ್ಧಿಕ ವಲಯ ಬೇಕಾಗಿದೆ ಎಂದರು.

ಇಂದು ನ್ಯಾಯಾಂಗದ ಬಗ್ಗೆಯೂ ಅಪನಂಬಿಕೆ ಬೆಳೆಯುತ್ತಿದೆ. ಸಂವಿಧಾನದ‌ ಆಶಯಗಳನ್ನು ಬುಡಮೇಲು ಮಾಡಲಾಗುತ್ತಿದೆ. ಪಕ್ಷ ಬದ್ಧತೆ ನ್ಯಾಯಾಂಗದಲ್ಲೂ ಕಂಡು ಬರುತ್ತಿರುವುದು ವಿಷಾದನೀಯ ಎಂದರು.

ಎಲ್ಲರಿಗೂ, ಎಲ್ಲರಲ್ಲೂ ರಾಜಕೀಯ ಹಿತಾಸಕ್ತಿಗಳಿರುತ್ತವೆ. ಆದರೆ ಅಭಿಪ್ರಾಯ ಬದ್ಧತೆ ಬಂದಾಗ ಅದು ರಾಜಕೀಯ ಪ್ರೇರಿತವಾಗಿರಬಾರದು. ಈ ವಿಷಯದಲ್ಲಿ ಕುಮಾರ ವ್ಯಾಸ, ಪಂಪ, ಬಸವಣ್ಣ, ಅಕ್ಕ ಮಹಾದೇವಿ, ಅಂಬಿಗರ ಚೌಡಯ್ಯ, ಸೂಳೆ ಸಂಕವ್ವೆ, ಕುಮಾರ ವ್ಯಾಸ, ಕುವೆಂಪು, ರೂಸೊ ಆದರ್ಶವಾಗಬೇಕು. ಪ್ರಸ್ತುತ ಬಿತ್ತಿರುವ ಅಪನಂಬಿಕೆಗೆ ನಮ್ಮ‌ ಕನ್ನಡ ಸಾಹಿತ್ಯದಲ್ಲಿ ಉತ್ತರ ಇದೆ ಎಂದು ಅಭಿಪ್ರಾಯಪಟ್ಟರು.

ಪಡಿತರಕ್ಕೆ ಬಂತು ಮತ್ತೊಂದು ತಲೆನೋವು…

ಲಕ್ಷ್ಮೀಕಾಂತರಾಜು ಎಂಜಿ


ಗುಬ್ಬಿ: ರಾಜ್ಯದ ನಾಗರಿಕರ ಪಡಿತರ ಚೀಟಿಗೆ ಕುಟುಂಬದ ಎಲ್ಲ ಸದಸ್ಯರ ಬಯೋ ಸಂಗ್ರಹಣೆಯನ್ನ ರಾಜ್ಯದ ಆಹಾರ ಇಲಾಖೆ ಮಾಡುತ್ತಿದೆ. ಈ ಹಿಂದೆ ಪಡಿತರ ಚೀಟಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿದ್ದ ಇಲಾಖೆ ಈಗ ಪಡಿತರ ಚೀಟಿಯಲ್ಲಿರುವ ಸದಸ್ಯರು ತಮ್ಮ ಕಾರ್ಡಿಗೆ ಇ ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು ಈ ಜನವರಿ ತಿಂಗಳ ಹತ್ತನೇಯ ತಾರೀಖಿನ ಗಡುವು ನೀಡಿದೆ.

ಪಡಿತರ ಅಂಗಡಿಗೆ ಸುಮಾರು ಒಂದೂವರೆ ಸಾವಿರದಿಂದ ಎರಡು ಸಾವಿರದವರೆಗೂ ಪಡಿತರ ಚೀಟಿಗಳಿದ್ದು ನೀಡಿರುವ ಕಾಲವಕಾಶದಲ್ಲಿ ಎಲ್ಲ ಸದಸ್ಯರದ್ದು ಬಯೋ ಸಂಗ್ರಹಣೆ ಮಾಡಲು ಸಾಧ್ಯವಿಲ್ಲದಾಗಿದೆ ಎನ್ನುತ್ತಾರೆ ಪಡಿತರ ಅಂಗಡಿಯ ಸಿಬ್ಬಂದಿ.

ಪಡಿತರ ಚೀಟಿಗೆ ಜೀವಮಾಪನ ಮಾಡಿಸುವುದು ಕಡ್ಡಾಯವಾಗಿದ್ದು, ಮಾಡಿಸದ ಗ್ರಾಹಕರುಗಳಿಗೆ ಧವಸ ನೀಡುವುದೆಲ್ಲವೆಂಬ ಕಾರಣಕ್ಕೆ ಎಲ್ಲ ಗ್ರಾಹಕರುಗಳು ಸೊಸೈಟಿಗಳ ಮುಂದೆ ಕಾದು ಕುಳಿತುಕೊಳ್ಳುವಂತಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳಿಗೆ ಸದಸ್ಯರ ಜೀವಮಾಪನ ತುಂಬಲು ಖಾಸಗಿ ಸೈಬರ್ ಸೆಂಟರ್ ಗಳಿಗೆ ಅವಕಾಶ ನೀಡದೆ ಸೊಸೈಟಿಗಳಲ್ಲಿಯೇ ಬಯೋ ಸಂಗ್ರಹಣೆ ಮಾಡುವುದರಿಂದ ಸೊಸೈಟಿಗಳಲ್ಲಿ ನೂಕು ನುಗ್ಗಲಾಗಿ ಇಲಾಖೆಯ ಸರ್ವರ್ ಕೊರತೆಯೂ ಇರುವುದರಿಂದ ಗ್ರಾಹಕರಿಗೆ ತೊಂದರೆಯಾಗಿದೆ.

ಕಾರ್ಡಿನಲ್ಲಿರುವ ಆರು ವರ್ಷಕ್ಕೂ ಮೇಲ್ಪಟ್ಟ ಎಲ್ಲ ಸದಸ್ಯರು ಕೂಡ ಜೀವಮಾಪನ ನೀಡಬೇಕಿರುವ ಕಾರಣ ಶಾಲಾ ವಿದ್ಯಾರ್ಥಿಗಳು ಕೂಡ ಶಾಲೆಗೆ ರಜೆ ಹಾಕಿ ಸೊಸೈಟಿಗಳ ಮುಂದೆ ನಿಲ್ಲುವಂತಾಗಿದೆ. ಇಲಾಖೆಯ ಜನವರಿಯ ಹತ್ತಕ್ಕೆ ಗಡುವು ನೀಡಿರುವುದು ಜನರ ಆತಂಕಗೊಂಡಿದ್ದಾರೆ.

ಕಾರ್ಡುದಾರರ ಎಲ್ಲರ ಜೀವಮಾಪನ ಪಡೆಯುವ ಕಾರ್ಯ ಈ ಹಿಂದೆ ನಡೆಸಬೇಕಿದ್ದು ಕಾರಣಾಂತರ ಇಲಾಖೆ ತಡೆ ಹಿಡಿದು ಈಗ ಒಮ್ಮೆಲೆ ಕಡಿಮೆ ಕಾಲವಕಾಶದಲ್ಲಿ ಜೀವಮಾಪನ ಸಂಗ್ರಹಣೆ ಮಾಡಲು ಹೊರಟಿರುವುದು ನಾಗರಿಕರಿಗೆ ತೊಂದರೆಯಾಗಿದೆ ಎನ್ನುತ್ತಾರೆ ಪಡಿತರ ಚೀಟಿಯ ಸದಸ್ಯರು.

ಇಲಾಖೆಯು ನೀಡಿರುವ ಸಮಯಾವಕಾಶದಲ್ಲಿ ರಾಜ್ಯ ವ್ಯಾಪಿ ಎಲ್ಲ ಸದಸ್ಯರುಗಳ ಜೀವಮಾಪನ ಪಡೆಯಲು ಸಾಧ್ಯವಿಲ್ಲದಾಗಿದ್ದು ಅವಧಿಯನ್ನ ವಿಸ್ತರಿಸುವಂತೆ ಜನರ ಒತ್ತಾಯ ಕೇಳಿ ಬರುತ್ತಿದೆ

ಆಗದ ಮಾತು


ರಾಜ್ಯ ವ್ಯಾಪಿ ಜೀವ ಮಾಪನ ಸಂಗ್ರಹಣೆಗೆ ನೀಡಿರುವ ಕಾಲಾವಕಾಶದಲ್ಲಿ ಎಲ್ಲ ಸದಸ್ಯರ ವಿವರ ಪಡೆಯುವುದು ಅಸಾಧ್ಯವಾದ ಮಾತು. ಇದುವರೆಗೆ ಕೇವಲ 32% ಸದಸ್ಯರ ಸಂಗ್ರಹಣೆಯಾಗಿದ್ದು ಅವಧಿಯನ್ನ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ.

ರಂಗನಾಥ್
ಕಾರ್ಯದರ್ಶಿ.

ವಿಎಸ್ ಎಸ್ ಎನ್,ಮಂಚಲದೊರೆ

ಇದು ಸರಿ ಇಲ್ಲ


ಕಡಿಮೆ ಕಾಲಾವಧಿಯಲ್ಲಿ ಜೀವಮಾಪನ ಸಂಗ್ರಹಣೆ ಮಾಡ ಹೊರಟಿರುವುದು ಸರಿಯಲ್ಲ. ಇದರಿಂದ ಜನರಿಗೆ ಆತಂಕದ ಜೊತೆಗೆ ಎಲ್ಲರೂ ಒಮ್ಮೆಲೆ ಇಕೆವೈಸಿ ಮಾಡಿಸಲು ಸಾಧ್ಯವಿಲ್ಲ. ಇಲಾಖೆ ಗಡುವು ದಿನಾಂಕವನ್ನು ಮುಂದೂಡಬೇಕಿದೆ.

ನೊಂದ ಗ್ರಾಹಕ

ಜಾತಿ ವ್ಯವಸ್ಥೆ ಬಲಪಡಿಸುವ ಫ್ಯಾಸಿಸ್ಟ್: ರಾಮಚಂದ್ರನ್

ಸಮಾರಂಭದಲ್ಲಿ ಜಿ.ಎಸ್.ಸೋಮಣ್ಣ, ಬರಗೂರು ರಾಮಚಂದ್ರಪ್ಪ, ರಾಮಚಂದ್ರನ್, ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಎಸ್.ರಮೇಶ್ ಇತರರು ಇದ್ದರು

ಕೆ.ಇ.ಸಿದ್ದಯ್ಯ


ತುಮಕೂರು: ಫ್ಯಾಸಿಸ್ಟ್ ಶಕ್ತಿಗಳು ದೇಶದ ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿವೆ. ಆ ಶಕ್ತಿಗಳಿಗೆ ಸಂವಿಧಾನ ಮುಖ್ಯವಲ್ಲ. ಬದಲಿಗೆ ಮನುಸ್ಮೃತಿಯೇ ಅವರ ಸಂವಿಧಾನ. ಮನುಸ್ಮೃತಿ ಜಾತಿ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ದಲಿತರ ಮೇಲಿನ ದೌರ್ಜನ್ಯ ‌ಹೆಚ್ಚಿಸುತ್ತದೆ. ಜಾತಿ ವ್ಯವಸ್ಥೆ ಮುಂದುವರೆಯುವಂತೆ ನೋಡಿಕೊಳ್ಳುತ್ತದೆ. ಇದನ್ನು ವಿರೋಧಿಸುವ ಪ್ರಗತಿಪರ ಸಾಹಿತಿಗಳು, ಕಲಾವಿದರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಪ್ರಸಿದ್ದ ಮಲೆಯಾಳಿ ಸಾಹಿತಿ ಹಾಗೂ ಸಿನಿಮಾ ವಿಮರ್ಶಕ ಜಿ.ಪಿ.ರಾಮಚಂದ್ರನ್ ಅಭಿಪ್ರಾಯಪಟ್ಟರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರು

ತುಮಕೂರಿನಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕತೆ, ಕವನ, ಸಿನೆಮಾ ಎಲ್ಲದರಲ್ಲೂ ರಾಜಕೀಯ ಅಡಗಿದೆ. ರಾಜಕೀಯವಿಲ್ಲದ ಕ್ಷೇತ್ರವೇ ಇಲ್ಲ. ಸಾಹಿತಿಯೂ ಸೇರಿದಂತೆ ಪ್ರತಿಯೊಬ್ಬರೂ ಒಂದಲ್ಲ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡಿರುತ್ತಾರೆ ತುಮಕೂರಿನಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸಾಂಸ್ಕೃತಿಕ ಕ್ಷೇತ್ರ ರಾಜಕೀಯದಿಂದ ಕೂಡಿದೆ. ರಾಜಕೀಯ ಪ್ರವೇಶಿಸದ ಕ್ಷೇತ್ರಗಳೇ ಇಲ್ಲ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಂಭೀರವಾದ ಮತ್ತು ಆಳವಾದ ರಾಜಕೀಯ ನಡೆಯುತ್ತಿದೆ. ಸಾಹಿತಿಗಳು, ಕಲಾವಿದರು ನಾವೇಕೆ ಬರೆಯುತ್ತಿದ್ದೇವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಶೂನ್ಯ. ಸಾಹಿತಿಗಳು ಒತ್ತಡ ನಿವಾರಣೆಗೆ ಬರೆಯುತ್ತಿರಬಹುದು. ತೃಪ್ತಿಗೆ ಬರೆಯಬಹುದು. ಆದರೆ ಪ್ರತಿಯೊಬ್ಬರೂ ಒದೊಂದು ವಿಷಯವನ್ನು ಪ್ರಚಾರ ಮಾಡುತ್ತಾರೆ. ಅದು ಬಲಪಂಥೀಯ ವಿಚಾರವಿರಬಹುದು. ಎಡಪಂಥೀಯ ವಿಚಾರವಿರಬಹುದು ಎಂದು ತಿಳಿಸಿದರು.

ತುಮಕೂರು ನಗರದ ಕನ್ನಡಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ ಯುವಬರಹಗಾರರ ಕಾರ್ಯಾಗಾರವನ್ನು ಉದ್ದಾಟಿಸಿ ಅವರು ಮಾತನಾಡಿದರು. ಸಾಹಿತಿಗಳು ಮತ್ತು ಪ್ರಗತಿಪರರು ಜಾತ್ಯತೀತ ನೆಲೆಯಲ್ಲಿ ತಮ್ಮನ್ನು ವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ ಎಂದು ಹೇಳಿದರು.

1930-60ರ ದಶಕದಲ್ಲಿ ಬಲಪಂಥೀಯ ಮತ್ತು ಎಡಪಂಥೀಯ ಸಾಹಿತಿಗಳು ಚಳವಳಿಗಳಲ್ಲಿ ಭಾಗಿಯಾಗುತ್ತಿದ್ದರು. ಪ್ರಗತಿಪರರ ಹೋರಾಟಕ್ಕೆ ಅಂದಿನ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಕೂಡ ಬೆಂಬಲ ನೀಡಿದ್ದರು. ಆದರೆ ಇಂದು ಅಂತಹ ವಾತಾವರಣ ಇಲ್ಲ. ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದ ನೀತಿಗಳಿಂದ ನಮ್ಮ ನಿಲುವುಗಳು ಬದಲಾಗಿವೆ. ಪ್ರಗತಿಪರರು ಮಾತ್ರ ಸಮಾಜದಲ್ಲಿ ಸೌಹಾರ್ದತೆ, ಶಾಂತಿ, ಸಹಿಷ್ಟುತೆ ನೆಲೆಸುವಿಕೆಗಾಗಿ ಹೋರಾಡುತ್ತಿದ್ದಾರೆ. ಬಲಪಂಥೀಯರು ಇದರಲ್ಲಿ ಭಾಗಿಯಾಗುತ್ತಿಲ್ಲ ಎಂದು ದೂರಿದರು.

ದೇಶದಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರ ಹಿಡಿದಿರುವುದರಿಂದ ಸಾಮಾನ್ಯರ ನಂಬಿಕೆಗಳನ್ನು, ನೆಮ್ಮದಿಯನ್ನು, ದೇಶವನ್ನು ಸ್ವಾತಂತ್ರ್ಯ ಮತ್ತು ಮೌಲ್ಯಗಳನ್ನು ನಮ್ಮಿಂದಿ ಕಿತ್ತುಕೊಂಡಿದ್ದಾರೆ. ಬಿಜೆಪಿ ಮತ್ತು ಆರ್ ಎಸ್ಎಸ್ ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ಇಂದಿನ ಸಿನಿಮಾ ಬದಲಾವಣೆಯಾಗಿದೆ. ಮಲ್ಟಿಪ್ಲಕ್ಸ್ , ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಕುಳಿತು ಸಿನೆಮಾ ವೀಕ್ಷಿಸುವವರಿಗಾಗಿ ಚಿತ್ರ ನಿರ್ಮಾಣ ಮಾಡಬೇಕಾಗಿ ಬಂದಿದೆ. ಆಟೋ ಚಾಲಕರು, ರಿಕ್ಷಾವಾಲಾಗಳು, ಜನಸಾಮಾನ್ಯರು ಅಲ್ಲಿಗೆ ಹೋಗಿ ಸಿನೆಮಾ ವೀಕ್ಷಿಸಲು ಸಾಧ್ಯವಿಲ್ಲ. ಅಲ್ಲಿ ಶ್ರೀಮಂತರು ಮಾತ್ರ ಕುಳಿತು ಐಶಾರಾಮಿ ಆಗಿ ಸಿನೆಮಾ ವೀಕ್ಷಿಸಬಹುದಾಗಿದೆ. ಸಾಮಾನ್ಯರಿಗೆ ಅಷ್ಟೊಂದು ಹಣ ತೆತ್ತು ನೋಡಲು ಆಗುತ್ತಿಲ್ಲ. ಹೀಗಾಗಿ ನಾನು ಎಂಬುದು ಮಹತ್ವ ಪಡೆದುಕೊಂಡಿದೆ. ನಾವು ನಗಣ್ಯವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ. ಜಿ.ಎಂ.ಶ್ರೀನಿವಾಸಯ್ಯ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಭೂಮಿ ಬಳಗದ ಅಧ್ಯಕ್ಷ ಸೋಮಶೇಖರ್, ವಕೀಲ ಎಸ್. ರಮೇಶ್, ಕಾರ್ಯಾಗಾರದ ನಿರ್ದೇಶಕ ಭಕ್ತರಹಳ್ಳಿ ಕಾಮರಾಜ್, ಡಾ.ರಂಗಾರೆಡ್ಡಿ ಕೋಡಿರಾಂಪುರ ಉಪಸ್ಥಿತರಿದ್ದರು.

ಚಾರ್ವಾಕ ಪರಂಪರೆ ಮುಂದುವರೆಯಬೇಕು


  1. ದೇಶದಲ್ಲಿ ಚಾರ್ವಾಕ ಪರಂಪರೆಯನ್ನು ಮುಂದುವರಿಸಬೇಕು. ಈ ಮಾರ್ಗದಲ್ಲಿ ಹೆಜ್ಜೆ ಹಾಕಿದ ಹಲವರನ್ನು ಹತ್ಯೆ ಮಾಡಿದ್ದು ಫ್ಯಾಸಿಸ್ಟ್ ಶಕ್ತಿಗಳು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸವಾಲಾಗಿವೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ತಮ್ಮ ವಿರೋಧಿಗಳು ಯಾರು ಎಂಬುದನ್ನು ಗುರುತಿಸಿಕೊಂಡು ಯುದ್ದವನ್ನು ಆರಂಭಿಸಿವೆ. ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಪ್ರತಿಭಟಿಸುವ ಮತ್ತು ಪ್ರಶ್ನಿಸುವ ಯುವಕರನ್ನು ಲೇಖಕರು ಬೆಳೆಸಿಕೊಳ್ಳಬೇಕು .


  1. ರಾಮಚಂದ್ರನ್

ಸಾವಿತ್ರಿ ಬಾಪುಲೆ ಜಯಂತಿ

ಪಾವಗಡ ತಾಲ್ಲೂಕು ದೇವಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಹಾಗೂ ಮಾನವ ಬಂಧುತ್ವ ವೇದಿಕೆ ವತಿಯಿಂದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆ ರವರ ಜಯಂತಿ ಆಚರಣೆ ಮಾಡಲಾಯಿತು.

ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲಕ ಪಾಳೇಗಾರ ಲೋಕೇಶ ಮಾತನಾಡಿ, ಸಾವಿತ್ರಿ ಬಾಪುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ ಅವರ ಪರಿಶ್ರಮದಿಂದ ಮಹಿಳೆಯರಿಗೆ ಶಿಕ್ಷಣ ಸಿಗುವಂತಾಗಿದೆ. ದಶಕಗಳ ಹಿಂದೆಯೇ ಮಹಿಳೆಯರ ಸಮಾನತೆಗಾಗಿ ಹೋರಾಟ ನಡೆಸಿದ ಅವರ ಸಮಾಜಮುಖಿ ತತ್ವ ಅದರ್ಶನೀಯ ಎಂದರು.

ಈ ಸಂದರ್ಭ ದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಸಹ ಶಿಕ್ಷಕ ನರೇಂದ್ರ. ಅತಿಥಿ ಶಿಕ್ಷಕ ಲೋಕೇಶ ನಾಯಕ, ಶಿಲ್ಪ, ಎಸ್. ಡಿ.ಎಮ್. ಸಿ.ಅಧ್ಯಕ್ಷರಾದ ಈರಣ್ಣ, ಎಸ್. ಬಿ.ಸಿ.ಸಮಿತಿ ಅಧ್ಯಕ್ಷರಾದ ಅಂಬರೀಷ್. ಮುಖಂಡರಾದ ಅಜಯ್ ಕುಮಾರ್. ರಮೇಶ, ಗೌತಮಿ, ನಾರಯಣರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಮ್ಮ ಇತರರು ಭಾಗವಹಿಸಿದ್ದರು.

ವಿಶ್ವ ಮಾನವ ತತ್ವದಲ್ಲಿ ಸಮಾಜದ ಭವಿಷ್ಯ ಅಡಗಿದೆ

ಸಮಾರಂಭವನ್ನು ಪ್ರೊ. ಚಿದಾನಂದ ಗೌಡ ಉದ್ಘಾಟಿಸಿದರು. ಕುಲಪತಿ ಪ್ರೊ.ಸಿದ್ದೇಗೌಡ, ಗೀತಾ ವಸಂತ ಇದ್ದಾರೆ

ತುಮಕೂರು: ಕುವೆಂಪು ವಿಶ್ವ ಮಾನವ ಸಂದೇಶವನ್ನು ಲೋಕಕ್ಕೆ ಸಾರಿದರು. ಅದರಲ್ಲಿ ಸಮಾಜದ ಭವಿಷ್ಯ ಅಡಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಚಿದಾನಂದ ಗೌಡ ತಿಳಿಸಿದರು.

ತುಮಕೂರುವಿಶ್ವ ವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯದ ವತಿಯಿಂದ ತುಮಕೂರು ವಿವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆ ಹಾಗೂ ಕುವೆಂಪು ಓದು ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವಮಾನವ ಸಂದೇಶದಲ್ಲಿ ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣದೃಷ್ಟಿಗಳ ಮಂತ್ರ ಇದೆ. ಅದನ್ನು ಆಧುನಿಕ ಸಮಾಜ ಮರೆಯಬಾರದು ಎಂದರು.
ಕುವೆಂಪು ಕನ್ನಡ ಸಾಹಿತ್ಯ ಕ್ಷೇತ್ರದ ಕಥೆ, ಕವನ, ಕಾದಂಬರಿ, ಲೇಖನ ಇತ್ಯಾದಿ 32 ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕನ್ನಡ ಪ್ರೀತಿ, ಪ್ರಕೃತಿ, ಅಧ್ಯಾತ್ಮ, ವಿಜ್ಞಾನ ಹಾಗೂ ವಿಶ್ವ ಮಾನವ ಸಂದೇಶದ ವಿವಿಧ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.

ಕುವೆಂಪುರವರ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂಬ ಭಾಷಣ ಇಂದಿನ ವಿದ್ಯಾರ್ಥಿಗಳ ಆತ್ಮದ ಸಂಪತ್ತನ್ನು ಹೆಚ್ಚಿಸುತ್ತದೆ. ಕುವೆಂಪು ಓದು ಇದಕ್ಕೆ ಸಹಕಾರಿಯಾಗಿದೆ ಎಂದರು.

ಕುವೆಂಪುರವರ ಪುತ್ರಿ ಹಾಗೂ ‘ಮಗಳು ಕಂಡ ಕುವೆಂಪು’ ಕೃತಿಯ ಲೇಖಕಿ ತಾರಿಣಿ ಚಿದಾನಂದ ಮಾತನಾಡಿ ಕುವೆಂಪು ಯಾವುದೇ ಕಾದಂಬರಿಯನ್ನು ಬರೆಯುವಾಗ ಮೊದಲು ಮ್ಯಾಪ್ ಅನ್ನು ತಯಾರಿಸಿಕೊಳ್ಳುತ್ತಿದ್ದರು ಎಂದು ಕುವೆಂಪು ಬರವಣಿಗೆಯ ಶೈಲಿಯನ್ನು ವಿವರಿಸಿದರು. ಹೀಗೆ ಕುವೆಂಪು ಕಾಲದ ಸಾಹಿತ್ಯ ಸೊರಗುತ್ತಿದ್ದ ಬಗೆ ಮತ್ತು ಅದರಲ್ಲಿಯೂ ಕುವೆಂಪುರವರ ಬೆಳವಣಿಗೆಯನ್ನು ಸವಿಸ್ತಾರವಾಗಿ ತಿಳಿಸಿದರು.

ಬದ್ಧತೆಯದೇ ಕೊರತೆ


ಕುಲಪತಿ ಎಸ್. ಸಿದ್ದೇಗೌಡ ಮಾತನಾಡಿದರು

ತುಮಕೂರು ವಿವಿಯ ಕುಲಪತಿ ಪ್ರೊ ವೈ ಎಸ್ ಸಿದ್ದೇ ಗೌಡ ಮಾತನಾಡಿ ಕುವೆಂಪುರವರ ವೈಚಾರಿಕ ಚಿಂತನೆಯನ್ನು ಎಲ್ಲರು ಓದುತ್ತಾರೆ. ಆದರೆ ಅವುಗಳ ಆಚರಣೆಗೆ ತರುವ ಬದ್ದತೆಯ ಕೊರತೆ ನಮ್ಮಲ್ಲಿದೆ. ವಿದ್ಯಾರ್ಥಿಗಳಲ್ಲಿನ ಹೃದಯ ಶ್ರೀಮಂತಿಕೆಯನ್ನು ಆತ್ಮಶ್ರೀ ಲೇಖನ ಹೆಚ್ಚಿಸಿದೆ ಎಂದರು.

ಕುವೆಂಪು ಓದಿನಿಂದ ನಮ್ಮ ಭಾವನೆಗಳು ಸದ್ಭಾವನೆಗಳೆಡೆಗೆ ಹೊರಳುತ್ತವೆ. ಕಾರಣ ಕುವೆಂಪುರವರ ವೈಚಾರಿಕ ಚಿಂತನೆಯೇ ಆಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ ಕೆ ಎನ್ ಗಂಗಾನಾಯಕ್, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ ಹ ರಮಾಕುಮಾರಿ, ಕುವೆಂಪು ಅಧ್ಯಯನ ಪೀಠದ ನಿರ್ದೇಶಕಿ ಡಾ. ಗೀತಾ ವಸಂತ, ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯದ ಮಲ್ಲಿಕಾ ಬಸವರಾಜು ಉಪಸ್ಥಿತರಿದ್ದರು. ಕುವೆಂಪು ಅವರ ಗೀತೆಗಳ ಗಾಯನ ನಡೆಯಿತು.

ರೈತರಿಗೆ ಧ್ವನಿಗೂಡಿಸಿದ ಪ್ರಧಾನಿ ನರೇಂದ್ರ ಮೋದಿ

ಸಸಿಗೆ ನೀರೆರೆಯುವ ಮೂಲಕ ಸಮಾವೇಶ ಉದ್ಘಾಟಿಸಿದ ಪ್ರಧಾನಿ

ತುಮಕೂರು: ದಕ್ಷಿಣ ಭಾರತದಲ್ಲಿ ಕಾಫಿ, ತೆಂಗು, ರಬ್ಬರ್, ಅರಿಶಿಣ, ಸಾಂಬಾರ್ ಪದಾರ್ಥಗಳನ್ನು ಹೆಚ್ಚು ಬೆಳೆಯುತ್ತಿದ್ದು ಈ ಭಾಗ ಸಶಕ್ತವಾದ ಪ್ರದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ ಬಿಎಸ್ ವೈ

ತುಮಕೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರೈತರ ಸಮಾವೇಶದಲ್ಲಿ ಕೃಷಿ ಸನ್ಮಾನ್ ನಿಧಿಯ ನಾಲ್ಕನೇ ಕಂತು ಹಣ ಬಿಡುಗಡೆ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳನ್ನು ಉಲ್ಲೇಖಿಸಿ ಅಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.

ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅರಿಶಿಣವನ್ನು ಹೆಚ್ಚು ಬೆಳೆಯಲಾಗುತ್ತಿದೆ. ರಾಜ್ಯದ ಚಿಕ್ಕಮಗಳೂರು ಕೊಡಗಿನಲ್ಲಿ ಕಾಫಿ ಬೆಳೆಯುತ್ತಿದೆ. ಚಿಕ್ಕಬಳ್ಳಾಪುರ ಮತ್ತು ಮೈಸೂರು ಭಾಗದಲ್ಲಿ ಗುಲಾಬಿ ಈರುಳ್ಳಿ ಉತ್ಪಾದನೆ ಹೆಚ್ಚಾಗಿದ್ದು ಇವುಗಳ ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು. ಸಾಂಬಾರ್ ಪದಾರ್ಥಗಳ ರಫ್ತು ಮಾಡುವಲ್ಲಿ ದಕ್ಷಿಣ ರಾಜ್ಯಗಳು ಹೆಚ್ಚು ಶಕ್ತಿಶಾಲಿಯಾಗಿವೆ ಎಂದು ತಿಳಿಸಿದರು.

ರೈತರಿಗೆ ನಮಿಸಿದ ಮೋದಿ. ಸಚಿವ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಸೋಮಣ್ಣ, ಲಕ್ಷ್ಮಣ ಸವದಿ

ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಗುರಿಮುಟ್ಟಲು ರೈತರ ಕೊಡುಗೆ ಅಪಾರವಾಗಿದೆ. ವಾಣಿಜ್ಯ ಬೆಳೆ ರಫ್ತು ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಹವಾಮಾನ, ಮಣ್ಣು, ಸಮುದ್ರ ವ್ಯವಸ್ತೆ ಚೆನ್ನಾಗಿರುವುದರಿಂದ ಇಲ್ಲಿನ ಉತ್ಪಾದನೆಯನ್ನು ರಫ್ತು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣದಲ್ಲಿ ಬೆಳೆಯುವ ಬೆಳೆಗಳನ್ನು ರಫ್ತು ಅಭಿವೃದ್ಧಿ ಪ್ರಾಧಿಕಾರದ ಮೂಲಕ ರಫ್ತು ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ತೆಂಗಿನ ಬೆಳೆಗೆ ಬೆಲೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕೃಷಿಕರಿಗೆ ಸಂಬಂಧಿಸಿದಂತೆ ನೀರಾವರಿ ಯೋಜನೆ, ಫಸಲ್ ಬಿಮಾ ಯೋಜನೆ, ಮಣ್ಣು ಪರೀಕ್ಷೆ ಕಾರ್ಯ ಸೇರಿದಂತೆ ಹಲವು ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬಹಳ ವರ್ಷಗಳಿಂದ ಬೇಡಿಕೆ ಇದ್ದ ಕನಿಷ್ಟ ಬೆಂಬಲ ಬೆಲೆ ಒಂದೂವರೆ ಪಟ್ಟು ಹೆಚ್ಚಳ ಮಾಡಲು ಚಿಂತನೆ ಮಾಡಲಾಗಿದೆ ಎಂದರು. ಅಲ್ಲದೇ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ್ಣು-ತರಕಾರಿಗಳ ಶೇಖರಣೆಯ ಕ್ಷಮತೆಯನ್ನು ಹೆಚ್ಚಿಸಲಾಗುವುದು ಎಂದರು.

ಕರ್ನಾಟಕದಲ್ಲಿ ಬೆಳಗಾಂ-ಮೈಸೂರಿನಿಂದ ಬಾದಾಮಿ, ಚಿಕ್ಕಬಳ್ಳಾಪುರ-ಬೆಂಗಳೂರಿನಿಂದ ಈರುಳ್ಳಿ, ಕೊಡಗು-ಚಿಕ್ಕಮಗಳೂರು ಜಿಲ್ಲೆಯಿಂದ ಕಾಫಿ ಹಾಗೂ ಒಣಮೆಣಿಸಿಕಾಯಿಯನ್ನು ಬೆಳೆಯುತ್ತಿದ್ದು, ಈ ಪದಾರ್ಥಗಳಿಗೆ ಕ್ಲಸ್ಟರ್ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಅಲ್ಲದೇ ಭಾರತದ ಸಾಂಬಾರು ಪದಾರ್ಥಗಳ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ರಫ್ತಿನಲ್ಲಿ ಸುಮಾರು 15 ಸಾವಿರ ಕೋಟಿಯಿಂದ 19 ಸಾವಿರ ಕೋಟಿಯವರೆಗೆ ಹೆಚ್ಚಳವಾಗಿದೆ ಎಂದರು.

ಸಮಾವೇಶದಲ್ಲಿ ಭಾಗವಹಿಸಿದ್ದ ರೈತರು

ದಕ್ಷಿಣ ಭಾರತದಲ್ಲಿ ತೆಂಗು, ಗೋಡಂಬಿ ಬೆಳೆಗಳನ್ನು ಬೆಳೆಯುತ್ತಿದ್ದು, ಕರ್ನಾಟಕದಲ್ಲಿ ಸುಮಾರು 550ಕ್ಕೂ ಹೆಚ್ಚು ಸೊಸೈಟಿಗಳಿರುವ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತೆಂಗು ಬೆಳೆಗೆ ಸೂಕ್ತ ಬೆಲೆ ನೀಡಲಾಗುವುದು ಎಂದರು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ನಷ್ಟವಾಗಿರುವ ಬಗ್ಗೆ ಪ್ರಧಾನ ಮಂತ್ರಿಯವರ ಗಮನಕ್ಕೆ ತಂದಿದ್ದೇನೆ. ಕರ್ನಾಟಕಕ್ಕೆ 50 ಸಾವಿರ ಕೋಟಿ ರೂ.ಗಳನ್ನು ಪ್ರಕೃತಿ ಪರಿಹಾರ ನಿಧಿಯಿಂದ ನೀಡುವಂತೆ ಪ್ರಧಾನ ಮಂತ್ರಿಗಳಲ್ಲಿ ಕೋರಿದರು.

ಹಲವು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಈ ಯೋಜನೆಗಾಗಿ ಕರ್ನಾಟಕ ರಾಜ್ಯಕ್ಕೆ 50 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಪ್ರಧಾನಿಗೆ ಪ್ರತಿಭಟನೆ ಸ್ವಾಗತ: ತಿಪಟೂರಿನಲ್ಲಿ ಮುಖಂಡರ ಬಂಧನ

ತಿಪಟೂರು: ತಿಪಟೂರಿನ ರೈತ ಸಂಘ ದ ನೇತೃತ್ವದಲ್ಲಿ ರೈತ ಸಮ್ಮಾನ್ ಯೋಜನೆಯ ಉದ್ಘಾಟನೆಗೆ ತುಮಕೂರಿಗೆ ಅಗಮಿಸುತ್ತಿರುವ ನರೇಂದ್ರ ಮೋದಿಯವರ ಕಾರ್ಯಕ್ರಮ ವೀರೊದಿಸಿ, ತ ಸ್ವಾಮಿನಾಥನ್ ವರದಿ ಜಾರಿಯಾಗ ಬೇಕು ಎಂದು ಒತ್ತಾಹಿಸಿ , ತೆಂಗು ಮತ್ತು ಅಡುಕೆ ಅಮದು ನೀತಿ ವೀರೋಧಿಸಿ ನರೇಂದ್ರ ಮೋದಿ ಯವರ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಹೋರಟಿದ್ದ ರೈತ ಸಂಘಟನೆಯ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಬೆನ್ನಾನಾಯಕನಹಳ್ಳಿ ದೇವರಾಜ್, ಹಸಿರು ಸೇನೆಯ ದೇವರಾಜ್ ತಿಮ್ಲಾಪುರ, ಎತ್ತಿನ ಹೋಳೆ ಹೋರಾಟ ಸಮಿತಿ ಯ ಮನೋಹರ್ ಪಟೇಲ್, ಜನಸ್ಪಂದನ ಟ್ರಸ್ಟ್ ನ ಸಿ ಬಿ ಶಶಿಧರ್, ಮಹಜರಿನ್ ಮಸೀದಿ ಮುಖಂಡರಾದ ಸೈಯದ್ ಮಹಮೂದ್, ಮುಜ್ಜಮಿಲ್ ಪಾಷ,ಜಮಾಲ್ ಮಹಮೂದ್ , ರೈತ ಸಂಘದ ತಾಲ್ಲೂಕ್ ಅದ್ಯಕ್ಷರಾದ ಬಸ್ತಿಹಳ್ಳಿ ರಾಜಣ್ಣ, ಮಾದಿಹಳ್ಳಿ ಪ್ರಸಾದ್, ಗೌರೀಶ್, ಯೋಗಾನಂದ್, ತಿಮ್ಮೇಗೌಡ, ಉಜ್ಜಜ್ಜಿ ರಾಜಣ್ಣ, ಸೌಹಾರ್ದ ತಿಪಟೂರು ಅಲ್ಲಾಬಕಾಶ್, ಅವಿನಾಶ್,ಚಂದನ್ ರಾಜ್,ಶಿವಪ್ಪ, ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರತಿಭಟನಾ ಕಾರರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಈ ಸಂರ್ದರ್ಭದಲ್ಲಿ ಪ್ರತಿಭಟನಾ ಕಾರರು ಕಪ್ಪು ಬಾವುಟ ಪ್ರದರ್ಶಿಸಿದರು ಹಾಗೂ ಜನವರಿ 8 ರ ಹೋರಾಟ ಕ್ಕೆ ಭಾಗವಹಿಸಲು ಜನತೆಗೆ ಕರೆ ನೀಡಿದರು.

ಮಠದ ಮಕ್ಕಳಿಗೆ ರಾಜಕೀಯ ಪಾಠ ಹೇಳಿದ ನರೇಂದ್ರ ಮೋದಿ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಬಂದಿಳಿದಿದ್ದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಜೊತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದು ಮಠದ ದ್ವಾರದಲ್ಲಿ ಪ್ರಧಾನಿಗಳನ್ನುಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.

ವ್ಯಾಪಕ ಭದ್ರತೆ ಕಲ್ಪಿಸಿರುವುದರಿಂದ ಕೆಲವೇ ಮಂದಿಗೆ ಸ್ವಾಗತಿಸಲು ಅವಕಾಶ ದೊರೆಯಿತು.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಡಿ.ವಿ.ಸದಾನಂದಗೌಡ, ಸಚಿವ ಆರ್. ಅಶೋಕ್ ಪ್ರಧಾನಿಗೆ ಸಾಥ್ ನೀಡಿದ್ದಾರೆ.

ಕೇಂದ್ರ ಸರ್ಕಾರ, ನವಭಾರತಕ್ಕಾಗಿ ಯುವಕರು, ಮಹಿಳೆಯರು, ಮಕ್ಕಳು, ಬಡವರು, ದಲಿತರು, ವಂಚಿತರು, ಹಿಂದುಳಿದವರು ಮತ್ತು ಆದಿವಾಸಿಗಳ ಆಕಾಂಕ್ಷೆಗಳನ್ನು ಈಡೇರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ನಮಿಸಿ ಬಂದ ಬಳಿಕ ವೇದಿಕೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಶ್ರೀಮಠ ಶಿಕ್ಷಣ, ಸಮಸಮಾಜ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದೆ. ಶ್ರೀಗಳ ಪ್ರೇರಣೆಯಿಂದ ಅದ್ಬುತ ಕೆಲಸವಾಗಿದೆ. ಆದರೆ ಇಂದು ಅವರ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಅದರೂ ಅವರ ಪ್ರೇರಣೆ ನಮ್ಮೆಲ್ಲರ ಮೇಲೆ ಇದೆ ಎಂದು ತಿಳಿಸಿದರು.

ದಲಿತರು, ಆದಿವಾಸಿಗಳು, ಬಡವರು, ವಂಚಿತರ ಆಕಾಂಕ್ಷೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಜನರ ಸಾರ್ಥಕ ಬದಲಾವಣೆಗೆ ಶ್ರಮಿಸುತ್ತಿದ್ದೇವೆ. ಕಳೆದ 2014 ರಿಂದ ಈಚೆಗೆ ನಮ್ಮ ರಾಷ್ಟ್ರ ಸಾರ್ಥಕ ಆಕಾಂಕ್ಷೆಯ ಶಿಖರಕ್ಕೆ ಏರಿದೆ. ಅದೇ ಕಾರಣಕ್ಕಾಗಿ ನಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ ಎಂದು ವಿವರಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ವಚ್ಛ ಭಾರತ ಯೋಜನೆಯಡಿ ದೇಶಾದ್ಯಂತ ಬಯಲುಮುಕ್ತ ಶೌಚಾಲಯ ನಿರ್ಮಿಸಿ ಯಶಸ್ವಿಯಾಗಿದ್ದೇವೆ. ಎಲ್ಲ ಬಡವರ ಮನೆಗೆ ಗ್ಯಾಸ್ ಒದಗಿಸಿದ್ದೇವೆ. ರೈತರಿಗೆ ನೇರ ಹಣ ವರ್ಗಾವಣೆ ಮಾಡಿದ್ದೇವೆ. ಶ್ರಮಿಕರು, ಕಾರ್ಮಿಕರು, ಸಣ್ಣವ್ಯಾಪಾರಿಗಳಿಗೆ ವಿಮಾ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸರ್ಕಾರದ ಸಾಧನೆಗಳನ್ನು ಪಟ್ಟಿಮಾಡಿದರು.

ಕೇಂದ್ರ ಸರ್ಕಾರ ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅಲ್ಲಿನ ಆತಂಕವನ್ನು ದೂರಮಾಡಿದೆ. ಅತ್ಯಂತ ಹಳೆಯದಾದ ರಾಮಜನ್ಮಭೂಮಿ -ಬಾಬ್ರಿ ಮಸೀದಿ ವಿವಾದವನ್ನು ಬಗೆಹರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಮಕ್ಕಳಿಗೆ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಪಾಕಿಸ್ತಾನ, ಆಫ್ಗಾನಿಸ್ತಾನ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಬೌದ್ಧರು, ಸಿಖ್ಖರು, ಪಾರ್ಸಿಗಳು, ಜೈನರು ಮತ್ತು ಕ್ರಿಶ್ಚಿಯನ್ನರಿಗೆ ಭಾರತದ ಪೌರತ್ವ ನೀಡಲಾಗುವುದು. ಅಲ್ಲಿನ ಅಲ್ಪಸಂಖ್ಯಾತರು ಹಿಂಸೆಗೆ ತುತ್ತಾಗಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಇತರರು ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸುವುದು ಬಿಟ್ಟು ಸಂಸತ್ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಠದ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಪಾಠ ಹೇಳಿದರು. ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಾದವರು ಹಾಜರಿದ್ದರು.

PM ಕಾರ್ಯಕ್ರಮ: ಪ್ರತಿಭಟನೆಗೆ ಯತ್ನ- ಪೊಲೀಸರ ತಳ್ಳಾಟದಲ್ಲಿ ರೈತ ಮುಖಂಡನ ಕೈಗೆ ಗಾಯ

ಪೋಲಿಸರ ವಶದಲ್ಲಿರುವ ರೈತ ಮುಖಂಡ ಆನಂದ ಪಟೇಲ್ ಕೈಗೆ ಗಾಯವಾಗಿರುವುದು

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರ ರೈತ ವಿರೋಧಿ ನೀತಿಯನ್ನು ಖಂಡಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಮೆರವಣಿಗೆ ನಡೆಲು ಬರುತ್ತಿದ್ದ ರೈತ ಮುಖಂಡರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ರೈತ ಮುಖಂಡರು ಮೋದಿ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಧರಿಸಿ ಪಾಲ್ಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಅದರಂತೆ ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ ಬಂದ ಮುಖಂಡರನ್ನು ಬಲವಂತವಾಗಿ ಎಳೆದಾಡಿದ್ದಾರೆ. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಅನಂದ್ ಪಟೇಲ್ ಅವರ ಕೈಗೆ ಗಾಯವಾಗಿದೆ.

ಬಸ್ ಡೋರ್ ನಲ್ಲಿ ಪೊಲೀಸರು ಆನಂದ ಪಟೇಲ್ ಅವರನ್ನು ಎಳೆದಾಗ ಡೋರ್ ಕೈ ಸಿಲುಕಿಕೊಂಡು ಗಾಯವಾದರು ಬಿಡದೆ ಒಳಗೆ ಎಳೆದೊಯ್ದಿದ್ದಾರೆ.

ಪ್ರತಿಭಟನಾ ಮೆರವಣಿಗೆಗಾಗಿ ಆಗಮಿಸಿದ್ದ ಒಟ್ಟು 30 ಮಂದಿ ರೈತರನ್ನು ಪೊಲೀಸರು ಬಂಧಿಸಿದ್ದಾರೆ.

Modi ರೈತರ ಸಮಾವೇಶ: ರೈತರನ್ನು ಬಂಧಿಸಿದ ಪೊಲೀಸರು!

ತುಮಕೂರು: ನಗರದಲ್ಲಿ ಬುಧವಾರ ಆಯೋಜಿಸಿರುವ ರೈತರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬರುವ ನಾಲ್ಕೈದು ಗಂಟೆಗಳ ಮುಂಚಿತವಾಗಿ ಪೋಲಿಸರು ಕೆಲವು ರೈತ ಮುಖಂಡರನ್ನು ಬಂಧಿಸಿದರು.

ಸ್ವಾಮಿ ನಾಥನ್ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ, ಬೀಜ ಮಸೂದೆ ಜಾರಿ ವಿರೋಧಿಸಿ ಪ್ರಧಾನಿ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸುವುದಾಗಿ ರಾಜ್ಯ ರೈತ ಸಂಘ ಹೇಳಿತ್ತು.

ಇವರೆಲ್ಲರೂ ಪ್ರತಿಭಟನೆ ನಡೆಸಲು ಬರುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದರು.

ಮೋದಿ ಅವರಿಗೆ ತುಮಕೂರಿನ ರೈತರು ಹಾಗೂ ರೈತ ಸಂಘಟನೆಗಳು ವಿವಿಧ ಪ್ರಶ್ನೆಗಳನ್ನು ಕೇಳಿದ್ದು ಮೋದಿ ತಮ್ಮ ಭಾಷಣದಲ್ಲಿ ಅವುಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.