Tuesday, February 24, 2026
Google search engine
Home Blog Page 300

4ನೇ ಶನಿವಾರ ವಕೀಲರಿಗೆ ರಜೆ

ತುಮಕೂರು: ಪ್ರತಿ ತಿಂಗಳು ನಾಲ್ಕನೇ ಶನಿವಾರ ವಕೀಲರಿಗೆ ರಜೆ ನೀಡಿ ಹೈಕೋರ್ಟ್ ಆದೇಶಿಸಿದೆ.

ರಾಜ್ಯ ಸರ್ಕಾರ ನಾಲ್ಕನೇ ಶನಿವಾರ ರಜೆ ಹಿಂಪಡೆದ ಬಳಿಕ ವಕೀಲರು ನಾಲ್ಕನೇ ಶನಿವಾರ ರಜೆ ಮುಂದುವರೆಸುವಂತೆ ಒತ್ತಾಯಿಸಿ ಹಲವು ಕಡೆ ಪ್ರತಿಭಟನೆ ನಡೆಸಿದ್ದರು. ಹೈಕೋರ್ಟ್ ಗೆ ನೀಡಿರುವಂತೆ ಕೆಳಗಿನ ನ್ಯಾಯಾಲಯಗಳಿಗೂ ನಾಲ್ಕನೆ ಶನಿವಾರ ರಜೆ ನೀಡುವಂತೆ ವಕೀಲರು ಆಯಾ ಸಂಘಗಲ ಮೂಲಕ ಮನವಿ ಸಲ್ಲಿಸಿದ್ದರು.

ವಕೀಲರಿಗೆ ನಾಲ್ಕನೇ ಶನಿವಾರ ರಜೆ ನೀಡುವ ಜತೆಗೆ ಕೋರ್ಟ್ ಕೆಲಸದ ಅವಧಿಯನ್ನು ಬದಲಾಯಿಸಿದೆ. ಇನ್ನು ಮುಂದೆ ಬೆಳಿಗ್ಗೆ 11ಕ್ಕೆ ಕಲಾಪಗಳು ಆರಂಭವಾಗಿ ಸಂಜೆ 5.45ರವರೆಗೂ ಕಲಾಪ ನಡೆಯಲಿವೆ. ಮಧ್ಯಾಹ್ನ ಊಟದ ಅವಧಿ 2 ರಿಂದ3 ರ ಬದಲಿಗೆ 2ರಿಂದ 2.45 ಆಗಿರಲಿದೆ.

ನಾಲ್ಕನೇ ಶನಿವಾರ ಕೋರ್ಟ್ ಗೆ ಅರ್ಧ ದಿವಸ ಕೆಲಸ ಅವಧಿ ನಿಗದಿಪಡಿಸಲಾಗಿದೆ. ನ್ಯಾಯಾಲಯದ ಕಲಾಪಗಳು ಮಾತ್ರ ನಡೆಯುವುದಿಲ್ಲ. ಕೋರ್ಟ್ ನ ಬೇರೆ ಕೆಲಸಗಳು, ನ್ಯಾಯಾದೀಶರು ಜೈಲು, ಪೊಲೀಸ್ ಠಾಣೆಗೆ‌ ಭೇಟಿ ಮತ್ತಿತತ ಬೇರೆ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ಹೈಕೋರ್ಟ್ ರಿಜಿಸ್ಟರ್ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅಖಿಲ ಭಾರತ ಮುಷ್ಕರಕ್ಕೆ ಕಟ್ಟಡ ಕಾರ್ಮಿಕರ ಬೆಂಬಲ

ತುಮಕೂರು; ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿ.ಐ.ಟಿ.ಯು. ತೊಂಡಗೆರೆ ಘಟಕದ ಸಭೆ ಸೋಮವಾರ ನಡೆಯಿತು.

ಜನವರಿ 8, 2020ರ ಬುಧವಾರ ನಡೆಯುವ ಅಖಿಲ ಭಾರತ ಮುಷ್ಕರದ ಭಾಗವಾಗಿ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಕೇಂದ್ರದಲ್ಲಿ ಮುಷ್ಕರ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.

ಮುಷ್ಕರದ ಸಂಬಂಧ ಹೊರತಂದಿರುವ ಕಿರುಹೊತ್ತಿಗೆ ಬಿಡುಗಡೆ ಮತ್ತು ಮಾರಾಟಮಾಡಲಾಲಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಜಯರಾಮಯ್ಯ, ಕಾರ್ಯದರ್ಶಿ ಗಂಗಾದರ್, ಖಜಾಂಚಿ ಲೋಕೇಶ್, ಜಿಲ್ಲಾಮುಖಂಡ ಇಬ್ರಾಯಿಂ ಖಲೀಲ್, ಜಿಲ್ಲಾ ಅಧ್ಯಕ್ಷ ಬಿ. ಉಮೇಶ್ ಉಪಸ್ಥಿತರಿದ್ದರು.

ಶಾಲಿನಿ ರಜನೀಶ್ ತುಮಕೂರು ಉಸ್ತುವಾರಿಗೆ ಕೊಕ್

ತುಮಕೂರು: ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ಸಂಸದ ಜಿ.ಎಸ್.ಬಸವರಾಜ್ ಅವರ‌ ಕೆಂಗಣ್ಣಿಗೆ ಗುರಿಯಾಗಿದ್ದ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರಿಗೆ ರಾಜ್ಯ ಸರ್ಕಾರ ಜಿಲ್ಲೆಯಿಂದ ಕೊಕ್ ನೀಡಿದೆ.

ಜಿಲ್ಲೆಯ ಉಸ್ತುವಾರಿಯಾಗಿ ರಾಜ್ಯ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಸೋಮವಾರ ಸರ್ಕಾರ ನೇಮಕ ಮಾಡಿ ಆದೇಶಿಸಿದೆ.

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಸಹ ಆಗಿದ್ದ ಶಾಲಿನಿ ರಜನೀಶ್ ಹಲವು ಯೋಜನೆಗಳನ್ನು ರೂಪಿಸಿಕೊಟ್ಟಿದ್ದರು. ಆದರೆ ಸ್ಮಾರ್ಟ್ ಸಿಟಿ ಕಾಮಗಾರಿಗಳು, ನಿಧಾನಗತಿಯ ಕೆಲಸದ ಬಗ್ಗೆ ಶಾಸಕ ಜ್ಯೋತಿ ಗಣೇಶ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು.

ಮಾಜಿ‌ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ರಫೀಕ್ ಅಹಮದ್, ಹಲವು ನಾಗರಿಕ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದರು. ಸಂಸದ ಜಿ.ಎಸ್.ಬಸವರಾಜ್ ಸಹ ಅಸ‌ಮಾಧಾನ ಹೊಂದಿದ್ದರು.

ಲೇಖಕಿ ಪ್ರೇಮಾ ಮಲ್ಲಣ್ಣ ಮಕ್ಕಳಿಗೆ ಹೇಳಿದ್ದೇನು ಗೊತ್ತಾ?

ತುಮಕೂರು: ನಾವೆಲ್ಲಾ ವಿಶ್ವಮಾನವರಾಗೋಣ
ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿರುವ ಕೇಳು ಮಗುವೆ ಕಥೆಯಾ ಸರಣಿಯ ಕಾರ‍್ಯಕ್ರಮ-೬ ತುಮಕೂರು ದೋಭಿಘಾಟ್ ನಲ್ಲಿರುವ ಶಾರದಾ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಡೆಯಿತು.

ಸಂಘದ ಉಪಾಧ್ಯಕ್ಷೆ ಪ್ರೇಮಾ ಮಲ್ಲಣ್ಣ, ಕುವೆಂಪುರವರ ಕರಿಸಿದ್ದ ಕಥನಕಾವ್ಯವನ್ನು ಮಕ್ಕಳಿಗೆ ಕಥೆಯಾಗಿಸಿ ಹೇಳಿದರು. ಪ್ರಕೃತಿಯ ಜೊತೆಯಲ್ಲಿ ಬದುಕಿದಾಗ ಬದುಕು ಸಹಜವಾಗಿ ಇರುತ್ತದೆ ಎಂದು ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜುರ ಮಾತನಾಡಿ, ಕುವೆಂಪು ಬದುಕು ಬರಹದ ಬಗ್ಗೆ ಮಕ್ಕಳಿಗೆ ಹೇಳಿದರು. ಕುವೆಂಪು ೧೧೫ನೇ ಜನ್ಮದಿನಾಚರಣೆ ಹಾಗೂ ಅವರ ಕೃತಿ ಶ್ರೀರಾಮಾಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ಬಂದು ಐವತ್ತು ವರ್ಷಗಳಾದ ಸಂದರ್ಭದಲ್ಲಿ ಕಥೆ ಹೇಳುವ ಕಾರ‍್ಯಕ್ರಮದಲ್ಲಿ ಕುವೆಂಪು ಕಥೆಗಳನ್ನೇ ಆರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಕುವೆಂಪು ತಾಯಿಯ ತವರು ಹಿರೇಕೂಡಿಗೆಯಲ್ಲಿ ಜನಿಸಿ, ಕುಪ್ಪಳಿಯಲ್ಲಿ ಬೆಳೆದು ತೀರ್ಥಹಳ್ಳಿ, ಶಿವಮೊಗ್ಗ ಮೈಸೂರಿನಲ್ಲಿ ವಿಧ್ಯಾಭ್ಯಾಸ ಪಡೆದ ಅವರ ಬದುಕು, ಬರಹ ಒಂದು ಮಹಾಯಾನ ಇದ್ದಂತೆ ಎಂದರು.

ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಕುವೆಂಪು ಚಿಂತನೆಗಳನ್ನು ಮೈಗೂಡಿಸಿಕೊಂಡು ವಿಶ್ವಮಾನವರಾಗೋಣ ಎಂದು ತಿಳಿಸಿದರು .

ಅತಿಥಿಯಾಗಿ ಆಗಮಿಸಿದ್ದ ಉಮಾದೇವಿ ಗ್ಯಾರಳ್ಳ ಕರಿಸಿದ್ದ ಕಥನ ಕಾವ್ಯವನ್ನು ವಾಚಿಸಿದರು. ನಗರ ಕೇಂದ್ರ ಗ್ರಂಥಾಲಯದಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾದ ಓದುವ ವ್ಯವಸ್ಥೆ ಇದ್ದು, ಅಲ್ಲಿಗೆ ಭೇಟಿಕೊಟ್ಟು ಓದುವಂತೆ ,ಮತ್ತು ಕಥೆ ಕವನಗಳನ್ನೂ ರಚಿಸುವಂತೆ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ಸಿ.ಎ.ಇಂದಿರಾ ಉಪಸ್ಥಿತರಿದ್ದರು.

ಪಾವಗಡದೊಂದಿಗೆ ಶ್ರೀಗಳ ಸಂಬಂಧ

0

ಪಾವಗಡ: ಪಟ್ಟಣದ ರಾಮಕೃಷ್ಣ ಸೇವಾಶ್ರಮ ಎಂದರೆ ಪೇಜಾವರ ವಿಶ್ವೇಶ್ವರ ತೀರ್ಥರಿಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ.

ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದ ಜಿ ಅವರ ಕಾರ್ಯಕ್ರಮಗಳ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶ್ರೀಗಳು ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಮಕೃಷ್ಣ ಸೇವಾಶ್ರಮದ ವತಿಯಿಂದ ಬರಗಾಲದಲ್ಲಿ ಜಾನುವಾರುಗಳಿಗಾಗಿ ಉಚಿತವಾಗಿ ಮೇವು ವಿತರಿಸುವ ಕಾರ್ಯಕ್ರಮಕ್ಕೆ ಕಳೆದ ಬಾರಿ ಸ್ವತಃ ಅವರು ಆಗಮಿಸಿ ಚಾಲನೆ ನಿಡಿದ್ದರು. ರೋಗಿಗಳಿಗೆ ಹಾಲು, ಹಣ್ಣು ನೀಡಿ ಆಶೀರ್ವಾದ ಮಾಡಿದ್ದರು.

ವಿವೇಕಾನಂದ ಸಂಘಟಿತ ಆರೋಗ್ಯ ಕೆಂದ್ರ ಆವರಣದಲ್ಲಿ ನೂತನ ಆಸ್ಪತ್ರೆ ಕಟ್ಟಡಕ್ಕೆ ಅವರು ಸ್ವ ಹಸ್ತದಿಂದ ಶಂಕು ಸ್ಥಾಪನೆ ನೆರವೇರಿಸಿದ್ದರು.

ಹೀಗೆ ಅವರು ಪಾವಗಡಕ್ಕೆ ಆಗಮಿಸಿ ಆಶ್ರಮದ ಕಾರ್ಯಕ್ರಮಗಳಲ್ಲಿ ಸಾನಿಧ್ಯ ವಹಿಸಿದ್ದ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಜಪಾನಂದಜಿ ಎಂದರೆ ಅವರಿಗೆ ಸಾಕಷ್ಟು ಆಪ್ಯಾಯತೆ. ಜಪಾನಂದಜಿ ಅವರಿಗೂ ಪೇಜಾವರ ಶ್ರೀ ಎಂದರೆ ಗೌರವ, ಅಭಿಮಾನ.

ಪ್ರವಾಹ ಪೀಡಿತ ಪ್ರದೇಶಕ್ಕೆ ಕರೆದೊಯ್ಯುವಂತೆ ಪೆಜಾವರ ಶ್ರೀಗಳು, ಜಪಾನಂದ ಸ್ವಾಮೀಜಿಯವರನ್ನು ಕೆಲ ತಿಂಗಳ ಹಿಂದೆ ಒತ್ತಾಯಿಸಿದ್ದರಂತೆ. ಬೇಡ ಶ್ರೀಗಳೆ ನೀವು ಅಲ್ಲಿಗೆ ಬರುವುದು ಬೇಡ ಎಂದು ಎಷ್ಟು ಹೇಳಿದರೂ ಕೇಳದೆ ಕರೆದುಕೊಂಡು ಹೋಗಲೇ ಬೇಕು ಎಂದು ಹಠ ಹಿಡಿದು ಅವರೊಡನೆ ಹೋಗಿದ್ದಾರೆ. ಜಪಾನಂದ ಸ್ವಾಮೀಜಿ ಅವರೊಡನೆ ನೆರೆ ಪೀಡಿತರಿಗೆ ಅಗತ್ಯ ಸಾಮಗ್ರಿ ವಿತರಿಸಿ ತೃಪ್ತಿಪಟ್ಟುಕೊಂಡಿದ್ದಾರೆ.

ಇದು ಸಮಾಜದಲ್ಲಿ ಕಷ್ಟದಲ್ಲಿರುವವರ ಬಗ್ಗೆ ಶ್ರೀಗಳಿಗಿದ್ದ ಕಳಕಳಿ, ಕಷ್ಟಕ್ಕೆ ಸ್ಪಂದಿಸುವ ಕಾತುರತೆಗೆ ಒಂದು ನಿದರ್ಶನ.

ಬೆಂಗಳೂರು ಸೇರಿದಂತೆ ಎಲ್ಲಿ ಕಾರ್ಯಕ್ರಮ ನಡೆದರೂ ಪೇಜಾವರಶ್ರೀಗಳಿದ್ದಲ್ಲಿ ಜಪಾನಂದ ಸ್ವಾಮಿಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಬಡವರು, ದೀನ ದಲಿತರ ಬಗ್ಗೆ ಏಕ ಬಗೆಯ ಕಳಕಳಿ, ಈರ್ವರು ಸ್ವಾಮೀಜಿಗಳಲ್ಲಿದ್ದ ಮಾನವೀಯತೆ, ಸಮಾಜಮುಖಿ ಕಾರ್ಯಗಳ ಬಗೆಗಿನ ಸೆಳೆತ ಹಾಗೂ ತುಡಿತ, ಸಮಾನ ಮನಸ್ಥಿತಿ ಸ್ವಾಮೀಜಿಗಳೀರ್ವರನ್ನು ಒಂದೆಡೆ ಸೇರಿಸುತ್ತಿತ್ತು ಎಂದರೆ ಅತಿಶಯೋಕ್ತಿ ಎನಿಸದು.


ಭಗವಂತನ ಕೃಪೆಯೇನೆಂಬುದು ಯಾರೂ ಅರಿಯಲಾಗುವುದಿಲ್ಲ. ನನ್ನ ಜೀವನದಲ್ಲಿ ಪರಮಾತ್ಮನೇ ಕೈಹಿಡಿದು ಮುನ್ನಡೆಸಲು ವಿಶ್ವೇಶತೀರ್ಥರನ್ನೇ ಈ ಧರೆಗೆ ಕಳುಹಿದ ಎನ್ನಬಹುದು . ನಮ್ಮಂತಹ ಲಕ್ಷಾಂತರ ಜೀವಿಗಳನ್ನು ಮುನ್ನಡೆಸುತ್ತಾ ಸಮಯ ಬಂದಾಗಲೆಲ್ಲ ಧೈರ್ಯನೀಡಿ, ಅಭಯ ನೀಡುತ್ತಾ ಸಾಕ್ಷಾತ್ ಶ್ರೀ ಕೃಷ್ಣನೇ ನಮ್ಮನ್ನು ಸಲಹುವಂತೆ ಸಲುಹುತ್ತಿದ್ದರು ಪೂಜ್ಯ ಶ್ರೀ ಶ್ರೀ ಗಳವರು.! ನಮ್ಮ ಹಾಗು ಶ್ರೀ ಶ್ರೀ ಗಳವರ ಒಡನಾಟ ಸರಿ ಸುಮಾರು ಮೂರೂವರೆ ದಶಕಗಳಿಂದಲೂ ಇದ್ದದ್ದು ನಮ್ಮ ಪೂರ್ವಜನ್ಮದ ಪುಣ್ಯದ ಫಲವೋ ಎಂಬಂತಿತ್ತು.
ಸ್ವಾಮಿ ಜಪಾನಂದ ಜಿ

ರಾಮಕೃಷ್ಣ ಸೇವಾಶ್ರಮ, ಪಾವಗಡ.

ವಿಶ್ವೇಶತೀರ್ಥ ಸ್ವಾಮೀಜಿ ವೃಂದಾವನಕ್ಕೆ ಸಕಲ ಸಿದ್ದತೆ

ಬೆಂಗಳೂರುಭಾನುವಾರ ಬೆಳಗ್ಗೆ ವಿಧಿವಶರಾದ ಪೇಜಾವರ ಮಠದ  ವಿಶ್ವೇಶತೀರ್ಥ ಸ್ವಾಮೀಜಿ ಅಂತಿಮ ವಿಧಿ ವಿಧಾನಕ್ಕೆ ಸಕಲ ಸಿದ್ದತೆ ನಡೆದಿದೆ.

ಮಾಧ್ವ ಸಂಪ್ರದಾಯದಂತೆ ಸ್ವಾಮೀಜಿ ವಿಧಿವಿಧಾನ ಮಾಡಲು ಶ್ರೀ ಮಠದ ಸಿಬ್ಬಂದಿ ಅಗತ್ಯ ಸಿದ್ದತಾ ಕಾರ್ಯ ಕೈಗೊಂಡಿದ್ದಾರೆ.

ಬೆಂಗಳೂರಿನ ವಿದ್ಯಾಪೀಠದಲ್ಲಿರುವ ಶ್ರೀಕೃಷ್ಣ ದೇಗುಲದ ಪಕ್ಕದಲ್ಲೇ ಶ್ರೀಗಳು ವೃಂದಾವನಸ್ಥರಾಗಲಿದ್ದಾರೆ. ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳನ್ನು, ಭಾನುವಾರ ಬೆಳಗಿನ ಜಾವ ಉಡುಪಿ ಕೃಷ್ಣಮಠಕ್ಕೆ ಕರೆತರಲಾಗಿತ್ತು.  ಸ್ವಾಮೀಜಿ  ಕೊನೆಯ ಆಸೆಯಂತೆ, ಶ್ರೀಮಠದಲ್ಲಿ ಅವರು ಇಹ ಲೋಕ ತ್ಯಜಿಸಿದರು. ವೈದ್ಯರು ಮಠದಲ್ಲಿ ಚಿಕಿತ್ಸೆ ಮುಂದುವರೆಸಿದ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ 88 ವರ್ಷ ವಯಸ್ಸಿನ ಪೇಜಾವರ ಶ್ರೀಗಳು ವಿಧಿವಶರಾದರು. ಉಡುಪಿ ಮಠದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ  ಭಕ್ತಾದಿಗಳ ದರ್ಶನಕ್ಕಾಗಿ   ಅವಕಾಶ ಕಲ್ಪಿಸಲಾಗಿತ್ತು. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪಾರ್ಥಿವ ಶರೀರ ತರಲಾಯಿತು.

ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ವಿಧಿವಿಧಾನ ನೆರವೇರುತ್ತಿದೆ. ವಿದ್ಯಾಪೀಠದ ಕೃಷ್ಣ ಮಂದಿರದ ಪಕ್ಕದಲ್ಲಿ ಶ್ರೀಗಳು ಬೃಂದಾವನಸ್ಥರಾಗಲಿದ್ದಾರೆ. ಬೃಂದಾವನ ಪ್ರವೇಶಕ್ಕೆ ಮುನ್ನ ಶ್ರೀಗಳಿಂದ ಶ್ರೀಕೃಷ್ಣನ ಪೂಜೆ ಮಾಡಿಸುವುದೂ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ವಿದ್ಯಾಪೀಠಕ್ಕೆ ಶ್ರೀಗಳ ಪಾರ್ಥಿವ ಶರೀರ ಆಗಮಿಸಿದ ಕೂಡಲೇ ಪೊಲೀಸರು ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಸಿಎಂ ಯಡಿಯೂರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


    ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 2 ಗಂಟೆಗಳ ಕಾಲ ಸಾರ್ವಜನಿಕ ದರ್ಶನದ ಬಳಿಕ ಶ್ರೀಗಳ ಪಾರ್ಥಿವ ಶರೀರವನ್ನು ವಿದ್ಯಾಪೀಠಕ್ಕೆ ತರಲಾಯಿತು. ಮೈದಾನದಲ್ಲಿ ಹಾಗೂ ರಸ್ತೆಯುದ್ಧಕ್ಕೂ ಭಕ್ತಸಾಗರವೇ ನೆರೆದಿತ್ತು. ನೂರಾರು ಜನ ದರ್ಶನ ಸಿಗದೆ ನಿರಾಶರಾಗಿ  ದೂರದಿಂದಲೇ ತೆರೆದ ವಾಹನದಲ್ಲಿದ್ದ ಶ್ರೀಗಳಳಿಗೆ ನಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

 

ಏಡ್ಸ್ ಜಾಗೃತಿ ಕಾರ್ಯಕ್ರಮ

ಪಾವಗಡ ತಾಲ್ಲೂಕು ನಲಿಗಾನಹಳ್ಳಿಯಲ್ಲಿ ಭಾನುವಾರ ಮಾರ್ಗೋದಯ ಫೌಂಡೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ ಸಂಸ್ಥೆ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ನಡೆಸಿತು. ಕಾರ್ಯದರ್ಶಿ ಗೋವಿಂದರಾಜು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪೇಜಾವರ ಶ್ರೀಗೆ ಮುಸ್ಲಿಂ ರಿಂದ ಭಾವಪೂರ್ಣ ಶ್ರದ್ಧಾಂಜಲಿ

ತಿಪಟೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಲಾ ಬಕಾಶ್

ತಿಪಟೂರು: ಗಾಂಧಿನಗರ ದ ಮದೀನಾ ಶಾಧಿ ಮಹಲ್ ನಲ್ಲಿ ಸೇರಿದ್ದ ತಿಪಟೂರು ನಗರದ ಎಲ್ಲಾ ಮಸೀದಿಗಳ ಜಮಾಯತ್ ನ ವತಿಯಿಂದ ವಿಶ್ವೇಶ್ವರ ತೀರ್ಥ ಪೇಜಾವರ ಸ್ವಾಮಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲಾಬಕಾಶ್ ಎ ರವರು ಪೇಜಾವರ ಮಠ ಹಲವಾರು ಜನಪರ ಕಾರ್ಯಗಳನ್ನು ಹಮ್ಮಿಕೊಂಡಿದ್ದು ತಮ್ಮ ಮಠದಲ್ಲಿ ಹಲವಾರು ವೀರೋಧಗಳ ನಡುವೆಯು ಮುಸ್ಲಿಂರಿಗೆ ರಂಜಾನ್ ಹಬ್ಬದ ಇಪ್ತಾರ್ ಕೂಟವನ್ನು ಹಮ್ಮಿ ಕೊಳ್ಳುವ ಮೂಲಕ ಭಾವಕ್ಯತೆಯನ್ನುಸಾರಿದ ಸಂತ ಎಂದರು.

ಸೋಮವಾರ ಎನ್ ಆರ್ ಸಿ ವೀರೋದಿಸಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಪೇಜಾವರ ಶ್ರೀ ಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಮುಂದೂಡ ಲಾಗಿದೆ ಎಂದರು.

ಬಿಲಾಲ್ ಮಸೀದಿಯ ಮುತವಲ್ಲಿ ಶಫೀಉಲ್ಲಾ ಶರೀಫ್ ಮಾತನಾಡಿ ಪೇಜಾವರ ಸ್ವಾಮಿಗಳು ಧರ್ಮಗಳ ಬಗ್ಗೆ ಸಾಮರಸ್ಯ ಹೊಂದಿದ್ದರು ಎಂಬುದಕ್ಕೆ ಅವರ ಕಾರಿನ ಚಾಲಕ ಮುಸ್ಲಿಂ ಆಗಿದ್ದು ಅವರ ಸಾಮರಸ್ಯಕ್ಕೆ ಸಾಕ್ಷಿ ಎಂದರು.

ಅಲ್ಪಸಂಖ್ಯಾತ ರ ಘಟಕದ ಅಧ್ಯಕ್ಷ ರಾದ ಸೈಫುಲ್ಲಾ ಮಾತನಾಡಿ ನಮ್ಮ ರಾಜ್ಯದ ಅತಿ ಉನ್ನತ ಮಠದ ಪೇಜಾವರ ಶ್ರೀಗಳ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ .ಅವರ ಕೊಡುಗೆ ದೇಶಕ್ಕೆ ಅಪಾರ ಎಂದ ಅವರು ಸೋಮವಾರ ನಾವು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದು . ಇಡೀ ರಾಜ್ಯವೇ ಶೋಕದಲ್ಲಿದ್ದು ನಾವು ಅದರಲ್ಲಿ ಭಾಗಿ ಎಂದರು.

ಸಭೆಯಲ್ಲಿ ಮದೀನಾ ಮಸೀದಿಯ ಮುತವಲ್ಲಿಯವರಾದ ಮಹಬೂಬ್ ಜಾನ್ ,ಟಿ ಎಲ್ ಶಫೀಕ್, ಜಾಮೀಯಾ ಮಸೀದಿಯ ಸಮೀವುಲ್ಲಾ ಖಾನ್, ಮಹಜರೀನ್ ಮಸೀದಿಯ ಮುನೀರ್, ಸೈಯದ್ ಮಹಮೂದ್, ನೂರಾನಿ ಮಸೀದಿಯ ಶೌಕತ್ ಪಾಷ, ಶಬ್ಬಿರ್ ಅಹಮದ್, ಅನ್ಸರ್ ಪಾಷ,ಸಿದ್ದಿಕೆ ಅಕ್ಬರ್ ಮಸೀದಿಯ ಆದಿಲ್, ಅನ್ಸಾರ್ ಮಸೀದಿಯ ಮುತವಲ್ಲಿ ಗೌಸ್ ಪೀರ್, ರಶೀದಿಯಾ ಮಸೀದಿಯ ಮುತವಲ್ಲಿ ರಹಮತ್, ಮುಸ್ಲಿಂ ಮುಖಂಡರಾದ ಹಬೀಬುಲ್ಲಾ, ಮುಯೀನ್ ಖಾನ್, ದಸ್ತು ಹಬೀಬ್ ಖಾನ್, ಪೈರೋಜ್, ಸೇರಿದಂತೆ ಎಲ್ಲಾ ಮಸೀದಿಯ ಮುಖ್ಯಸ್ಥರು ಗಳು ಸೇರಿದಂತೆ ಗಾಂಧಿನಗರದ ಜನತೆ ಭಾಗವಹಿಸಿದ್ದರು.

ಸರ್ವಜನಾಂಗದ ತೋಟವಾಗಲಿ

Publicstory. in


ತುಮಕೂರು: ಸಮಾಜವನ್ನು ವಿಭಜಿಸುವ ಶಕ್ತಿಗಳ ಹಿಂದೆ ಹೋಗದೆ ಜನರನ್ನು ಒಗ್ಗೂಡಿಸುವವವರ ಹಿಂದೆ ಹೋಗಬೇಕಾದ ಅಗತ್ಯವಿದೆ. ಇದರ ಜೊತೆಗೆ ಸರ್ವಜನಾಂಗದ ಶಾಂತಿಯ ತೋಟದಂತೆ ಎಲ್ಲರೂ ಕೂಡಿಬಾಳುವಂತಹ ವಾತಾವರಣವನ್ನು ನಿರ್ಮಿಸಬೇಕಾಗಿದೆ ಎಂದು ಜನಪರ ಚಿಂತಕೆ ಕೆ.ದೊರೈರಾಜ್ ಹೇಳಿದರು.

ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ಸಹಸ್ರ ಸಹಭೋಜನ ಸರ್ವಜನಾಂಗದ ಶಾಂತಿಯ ತೋಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂವಿಧಾನವನ್ನು ಪ್ರತಿಯೊಬ್ಬರು ಓದಿ ಅರ್ಥ ಮಾಡಿಕೊಳ್ಳಬೇಕು. ಅದನ್ನು ಸಣ್ಣಸಣ್ಣ ಗುಂಪುಗಳ ನಡುವೆ ಚರ್ಚೆ ಮಾಡಬೇಕು. ಆಗ ಪ್ರತಿಯೊಬ್ಬರಿಗೂ ಸ್ಪಷ್ಟತೆ ಬರುತ್ತದೆ ಎಂದರು.

ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಎಲ್ಲರೂ ಓದುವ ಮೂಲಕ ನಮ್ಮ ಹಕ್ಕುಗಳನ್ನು ತಿಳಿದುಕೊಳ್ಳಬೇಕು. ಅಂಬೇಡ್ಕರ್ ಸಂವಿಧಾನವೆಂದು ಓದದಿದ್ದರೂ ಅದು ನಮ್ಮ ಸಿಂವಿಧಾನವೆಂದು ಓದಬೇಕು. ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತೀಯ ಪ್ರಜೆಗಳಾದ ನಾಔಉ ನಮ್ಮ ಸಂವಿಧಾನವನ್ನು ನಾವೇ ಅಂಗೀಕರಿಸಿದ್ದೇವೆ. ಇಂತಹ ಸರ್ವಜನಾಂಗದ ಒಳಿತನ್ನೇ ಬಯಸುವ ಸಂವಿಧಾನ ನಮ್ಮ ದೇಶದ ಜೀವಾಳವಾಗಬೇಕು. ಬುದ್ದ ಬಸವ, ಪೈಗಂಬರ್, ಏಸು, ಜೈನ ಎಲ್ಲ ಧರ್ಮಗಳಿಗೆ ಸಮಾನ ಅವಕಾಶವನ್ನು ನೀಡಿದೆ. ಅದು ಯಾರೊಬ್ಬರ ಸ್ವತ್ತೂ ಅಲ್ಲ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಜಾತಿಜಾತಿಗಳ ನಡುವೆ, ಧರ್ಮಧರ್ಮಗಳ ನಡುವೆ ಕಿಚ್ಚನ್ನು ದ್ವೇಷವನ್ನು ಹರಡುವ ಘಟನೆಗಳು ನಡೆಯುತ್ತಿವೆ. ಜಾತಿಯ, ಧರ್ಮದ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸುವ ಶಕ್ತಿಗಳನ್ನು ಹತ್ತಿರ ಸೇರಿಸಬೇಡಿ. ಈ ಧರ್ಮದವರು ಇರಬಾರದು, ಈ ಜಾತಿಯವರು ಇಲ್ಲಿರಬಾರದು ಎಂದು ಹೇಳುವವರನ್ನು ನಂಬಬೇಡಿ. ಸಮಾಜ ವಿಭಜಿಸುವ ಶಕ್ತಿಗಳನ್ನು ಕಂಡರೆ ನೇರವಾಗಿ ಹೇಳಿ. ಹೀಗೆ ಹೇಳಲು ನಿಮಗೆ ಹಕ್ಕಿಲ್ಲವೆಂದು. ಹೀಗೆ ಹೇಳುವ ಎದೆಗಾರಿಕೆ ಸಂವಿಧಾನದ ಓದಿನಿಂದ ಬರುತ್ತದೆ ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮಜೀಬ್ ಮಾತನಾಡಿ, ಕುವೆಂಪು ಆಶಯದಂತೆ ಇಂದು ಸತ್ತಂತೆ ಇರುವವರನ್ನು ಬಡಿದೆಚ್ಚರಿಸಬೇಕು. ಕಚ್ಚಾಡುವವರನ್ನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು ಒಟ್ಟಿಗೆ ಬಾಳುವ ತೆರದಲಿ ಹರಸು ಎಂಬ ಕವನದ ಸಾಲುಗಳನ್ನು ವರಿಸಿದರು.
ಪಾದರ್ ಆದಂ ಮಾತನಾಡಿ ಇಂದಿನ ಪರಿಸ್ಥಿತಿಗೆ ನಮ್ಮ ಕಾಣಿಕೆಯೂ ಇದೆ. ನಾವು ಸೂಕ್ತ ಕಾಲದಲ್ಲಿ ಎಚ್ಚರಗೊಳ್ಳದಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ ಎಂದರು.

ಉಪನ್ಯಾಸಕ ಜಯಶೀಲ ಮಾತನಾಡಿ ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ನಾಡು ಇಂದು ಸಮಸ್ಯೆಗಳ ಬೀಡಾಗಿದೆ. ಬಾಬಾಬುಡನ್‍ಗಿರಿ ಸೌಹಾರ್ದತೆಯ ತವರಾಗಿತ್ತು. ಈಗ ಅಲ್ಲಿ ಪ್ರಕ್ಷುಬ್ದತೆ ಉಂಟಾಗಿದೆ ಎಂದರು.

ಕಾರ್ಯಕ್ರಮದ ಆಯೋಜಕ ಡಾ. ಮುರಳೀಧರ್ ಮಾತನಾಡಿ, ಎಲ್ಲರೂ ಶಾಂತಿ, ನೆಮ್ಮದಿಯಿಂದ ಬಾಳಬೇಕು. ಈ ನಿಟ್ಟಿನಲ್ಲಿ ಸರ್ವಜನಾಂಗದವರು ಒಗ್ಗೂಡಿ ಊಟ ಮಾಡುವುದರಿಂದ ಸಮಾಜದಲ್ಲಿ ಸೌರ್ಹಾತೆ ನೆಲೆಸುತ್ತದೆ. ಸಂವಿಧಾನದ ಓದು ಇದನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಹಿಂದೂ, ಮುಸ್ಲೀಂ, ಕ್ರೈಸ್ತ, ಜೈನ, ಪಾರ್ಸಿ, ಬೌದ್ದರು ಹೀಗೆ ಹಲವು ಧರ್ಮಗಳ ಜನರು ಒಂದಾಗಿ ಬಾಳಬೇಕು ಎನ್ನುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.

ಕೆಇಬಿ ನಾಗರಾಜು ಮಾತನಾಡಿ ಸರ್ವರು ಸೌಹಾರ್ದತೆಯಿಂದ ಬಾಳಬೇಕು. ಹಲವು ಧರ್ಮಗಳು, ಹಲವು ಜಾತಿಗಳು, ಬುಡಕಟ್ಟುಗಳು ಇರುವ ಈ ದೇಶದಲ್ಲಿ ಎಲ್ಲರಿಗೂ ಅವರದೇ ಆದ ಧರ್ಮಗಳಿವೆ. ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ನಡೆಸಬೇಕು ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ತಾಜುದ್ದೀನ್ ಶರೀಪ್ ಮಾತನಾಡಿ ಕುವೆಂಪುರವರ ಆಶಯಗಳನ್ನು ಮತ್ತು ಸಂವಿಧಾನದ ಆಶಯಗಳನ್ನು ರಕ್ಷಿಸಲು ನಾವೆಲ್ಲರೂ ಬದ್ದರಾಗಬೇಕು ಎಂದರು.

ನಿವೃತ್ತ ಸೈನಿಕ ಇಂತಿಹಾಜ್ ಮಾತನಾಡಿ, ಈಗಿನ ಪರಿಸ್ಥಿತಿ ತುಂಬ ದುಃಖದಾಯಕವಾಗಿದೆ. ಸೇನೆಯ ಹೆಸರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದವರು ಮತ್ತೆ ಸೈನಿಕರ ಕಷ್ಟ ಸುಖಗಳನ್ನು ಗಮನಿಸುವುದಿಲ್ಲ. ಸೈನಿಕರು ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೂ ನಮ್ಮ ದನಿ ಅವರಿಗೆ ಮುಟ್ಟಲಿಲ್ಲ. ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡಲು ಜನರು ತೀರ್ಮಾನ ಮಾಡಬೇಕು ಎಂದು ತಿಳಿಸಿದರು.

ದಲಿತ ಮುಖಂಡ ನರಸಿಂಹಯ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಯುವಕರ ಮೆದುಳು ಕಸಿದ ಗುಂಪು

ಕಾರ್ಯಕ್ರಮದಲ್ಲಿ ಕಥೆಗಾರ ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿದರು

Publicstory. in


ತುಮಕೂರು: ದೇಶ ನಿರಾಶೆಯ ಕಂದರಲ್ಲಿ ಬಿದ್ದುಹೋಗಿದೆ. ಹಿಂಸೆ ವಿಜೃಂಭಿಸುತ್ತಿದೆ. ಸಾಮಾಜಿಕ ಕ್ಷೋಭೆ, ಅಸಹನೆ, ಅಸಹಿಷ್ಣುತೆ ತುಂಬಿ ತುಳುಕುತ್ತಿದೆ. ಯುವಕರು ಗುಂಪುಹತ್ಯೆ, ಹಲ್ಲೆ, ಹಿಂಸೆಯಂತಹ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಇಂತಹ ಹೊತ್ತಿನಲ್ಲಿ ಕುವೆಂಪು ವಿಧಾರಧಾರೆಗಳು ಈ ಸಮಸ್ಯೆಗಳಿಗೆ ಪರಿಹಾರಗಳಾಗಿವೆ ಎಂದು ಕಥೆಗಾರ ಹಾಗೂ ನಿವೃತ್ತ ಪ್ರಾಂಶುಪಾಲ ಡಾ. ಜಿ.ವಿ. ಆನಂದಮೂರ್ತಿ ಅಭಿಪ್ರಾಯಪಟ್ಟರು.

Sufia law college

ಕುವೆಂಪು ವೇದಿಕೆಯಿಂದ ತುಮಕೂರು ತಾಲೂಕು ನಾಗವಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕುವೆಂಪು ವಿಚಾರಧಾರೆ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಮತ್ತು ಯುವಜನರ ಆಲೋಚನಾಸಕ್ತಿ ಮತ್ತು ಮೆದುಗಳನ್ನು ಕೆಲವೇ ಜನರ ಗುಂಪು ಕಸಿದುಕೊಂಡಿದೆ. ಹೀಗಾಗಿ ಯುವಕರು ಕೋಮು-ಮತೀಯವಾದಿಗಳ ಕೀಲುಗೊಂಬೆಗಳಂತಾಗಿದ್ದಾರೆ. ಅಸಹನೆಯ ಬೆಂಕಿ ಹಬ್ಬಿಸುತ್ತಿದ್ದಾರೆ. ಭಾರತಕ್ಕೆ ಬೆಂಕಿ ಬಿದ್ದರೆ ನಮ್ಮನ್ನೇ ಸುಟ್ಟುಕೊಳ್ಳುತ್ತಿದ್ದೇವೆ ಎಂಬ ಪರಿಜ್ಞಾನವೇ ಇಲ್ಲದಂತಾಗಿರುವುದು ಶೋಚನೀಯ ಸಂಗತಿ ಎಂದು ಹೇಳಿದರು.

ಅನಕ್ಷರತೆ, ವಿಚಾರಹೀನತೆ ಸಮಾಜದ ದೊಡ್ಡ ಕಂಟಕ ಎಂದು ಕುವೆಂಪು ಹೇಳುತ್ತಾರೆ. ಜಾತಿ-ಧಾರ್ಮಿಕ ಕೇಂದ್ರತವಾದ ಹಿಂಸೆಗಳಿಗೆ ವಿದ್ಯಾವಂತರೇ ಕಾರಣವಾಗಿದ್ದಾರೆ. ಯುವಕರು ಕುವೆಂಪು ಹೇಳಿದಂತೆ ಪರೀಕ್ಷೆ, ವಿಚಾರ, ವಿಮರ್ಶೆ ಮಾಡಿಕೊಳ್ಳಬೇಕು. ಆದರೆ ಇಂದು ವಾಟ್ಸಪ್ ನಲ್ಲಿ ಬರುವ ಮೆಸೇಜನ್ನೇ ಭಗವದ್ಗೀತೆಯ ಸಾಲುಗಳು ಎಂಬಂತೆ ಗ್ರಹಿಸಲಾಗುತ್ತಿದೆ ಎಂದರು.

ಸಂದೇಶ ಎಲ್ಲಿಂದ ಬಂತು, ಯರಿಂದ ಬಂತು ಎಂಬುದನ್ನು ಪರೀಕ್ಷಿಸುವ ಗೋಜಿಗೂ ಹೋಗುವುದಿಲ್ಲ. ಗ್ರಹಣ ಕಾಲದಲ್ಲಿ ತಿಂಡಿ ತಿನ್ನಬೇಡಿ, ನೀರು ಕುಡಿಯಬಾರದು ಎಂದು ಹೇಳುವುದನ್ನೇ ನಂಬಿಕೊಂಡು ಬರಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನೀರನ್ನು ಮನೆಯಿಂದ ಹೊರಗೆ ಚೆಲ್ಲಿದರೆ ಬುಗುಡನಹಳ್ಳಿ ಕೆರೆ, ಕೆಆರ್‍ಎಸ್‍ನಲ್ಲಿರುವ ನೀರು ಎಲ್ಲಿಗೆ ಚೆಲ್ಲಬೇಕು.ಹೀಗಾಗಿಯೇ ಕುವೆಂಪು ಇಂತಹ ಮೌಢ್ಯ-ಕಂದಾಚಾರದಿಂದ ಹೊರಬೇಕೆಂದು ಕರೆ ನೀಡಿದ್ದು. ಪರೀಕ್ಷಿಸಿಕೊಳ್ಳದೆ, ವಿಚಾರ ಮಾಡದೆ, ಪ್ರಶ್ನಿಸಿಕೊಳ್ಳದೆ ಯಾವುದನ್ನೂ ನಂಬಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವೆಂದರ ಕುವೆಂಪು. ಸರ್ವರಿಗೂ ಸಮಪಾಲ, ಸಮಬಾಳು ಎಂದರು.

ಜಗತ್ತಿನ ಆದರ್ಶವೇ ಇದು. ಪ್ರಕ್ಷುಬ್ಧ ಭಾರತದಲ್ಲಿ ಇಂತಹ ಸಮಾನತೆ ಶಾಂತಿತೋಟದಂತಹ ಸಮಾಜ ನಿರ್ಮಾಣ ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ಒಳ್ಳೆಯ ಪುಸ್ತಕಗಳನ್ನು ಓದಬೇಕು. ಸುಳ್ಳು ಸುದ್ದಿಗಳನ್ನು ನಂಬದೆ, ಹಿಂಸೆಗೆ ಪ್ರಚೋದನೆಗೆ ಕಾರಣವಾಗಬಾರದು. ಯುವಕರು-ಯುವತಿಯರು ಸೌಹಾರ್ದಯುತವಾಗಿ ಜೀವನ ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಗವಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಸುಜಾತ ಎಸ್. ಜಂಬಗಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಮೂಡಿಸಿಕೊಳ್ಳಬೇಕು. ಹಿರಿಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕುವೆಂಪು ವೇದಿಕೆಯ ಅಧ್ಯಕ್ಷ ಜಿ.ಎಂ.ಶ್ರೀನಿವಾಸಯ್ಯ ಕುವೆಂಪು ವಿಚಾರಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.

ಜನಪರ ಚಿಂತಕ ಕೆ.ದೊರೈರಾಜ್ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ನಿವೃತ್ತ ಇಂಜಿನಿಯರ್ ರಾಮಚಂದ್ರ, ಶರತ್ ಚಂದ್ರ, ಉಪನ್ಯಾಸಕರಾದ ಬಿ.ಆರ್.ರೇಣುಕಮ್ಮ, ಸಂಗೀತ, ಚಾರುಲತ, ಹೊನ್ನಯ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಕೃಷ್ಣಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಎ.ಆರ್.ವನಿತ ವಂದಿಸಿದರು. ಉಪನ್ಯಾಸಕ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.