Monday, February 23, 2026
Google search engine
Home Blog Page 307

ಅಂತರರಾಜ್ಯ ದ್ವಿಚಕ್ರ ವಾಹನ ಕಳವು ಆರೋಪಿ ಬಂಧನ

ಪಾವಗಡ: ಪಟ್ಟಣ, ಆಂಧ್ರಪ್ರದೇಶದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಅಂತರರಾಜ್ಯ ಕಳವು ಆರೋಪಿಯನ್ನು ತಾಲ್ಲೂಕಿನ  ಅಪರಾಧ ಪತ್ತೆ ತಂಡ ಬಂಧಿಸಿದೆ.

ಆಂಧ್ರ ಪ್ರದೇಶದ ಪುಟ್ಟಪರ್ತಿ ಬಳಿಯ ಕೊಟ್ಟಪಲ್ಲಿ ರವಿ ಆರೋಪಿ. ಆರೋಪಿಯಿಂದ ಮೂರು ದ್ವಿಚಕ್ರ ವಾಹನಗಳನ್ನು ಪತ್ತೆ ತಂಡ ವಶಪಡಿಸಿಕೊಂಡಿದೆ. ಮಂಗಳವಾರ  ತನಿಖಾಧಿಕಾರಿ ಸಹಾಯಕ ಸಬ್ ಇನ್ ಸ್ಪೆಕ್ಟರ್ ರಾಮಚಂದ್ರಪ್ಪ ಆರೋಪಿಯನ್ನು ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದಾರೆ.

ಪಟ್ಟಣದ ಗಣೇಶ್ ಪೇಂಯಿಂಟರ್ಸ, ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ 2 ದ್ವಿಚಕ್ರ ವಾಹನವನ್ನು ಆರೋಪಿ ಕಳವು ಮಾಡಿದ್ದ. ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಧುಗಿರಿ ಡಿ.ಎಸ್.ಪಿ ಎಂ.ಪ್ರವೀಣ್  ರಚಿಸಿದ್ದ ತಂಡ ಕಾರ್ಯ ಪ್ರವೃತ್ತರಾಗಿತ್ತು. ಆರೋಪಿಯ ಚಲನ ವಲನದ ಬಗ್ಗೆ ನಿಗಾ ವಹಿಸಿ   ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.

ಸರ್ಕಲ್ ಇನ್ ಸ್ಪೆಕ್ಟರ್ ಶ್ರೀಶೈಲಮೂರ್ತಿ ಅವರ ನೇತೃತ್ವದಲ್ಲಿ, ಸಹಾಯಕ ಸಬ್ ಇನ್ ಸ್ಪೆಕ್ಟರ್ ರಾಮಚಂದ್ರಪ್ಪ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಎ.ಎಸ್.ಐ ರಾಮಾಂಜಿನಪ್ಪ, ಸೋಮಶೇಖರ್, ಗಂಗರಾಜು, ಗೋಪಿ,  ಕೇಶವರಾಜು ಅಪರಾಧಿ ಪತ್ತೆಗಾಗಿ ಶ್ರಮಿಸಿದ್ದಾರೆ.

ಚಿರತೆ‌‌ ದಾಳಿ: ವ್ಯಕ್ತಿಗೆ ಗಾಯ

ತುಮಕೂರು: ಜಿಲ್ಲೆಯ ಮಧುಗಿರಿ ಗುರಮ್ಮನ ಕಟ್ಟೆ ಬಳಿ ಚಿರತೆ ದಾಳಿ ನಡೆಸಿದ್ದು
ಕುರಿ ಕಾಯಲು ಹೋಗಿದ್ದ ವ್ಯಕ್ತಿಯನ್ನು ಗಾಯಗೊಳಿಸಿದೆ.

ಸಂಜೆ ಸುಮಾರು 5 ರ ಸಮಯದಲ್ಲಿ ಚಿರತೆ ದಾಳಿ ಮಾಡಿದ್ದು ಗುರುಮ್ಮನ ಕಟ್ಟೆ ವಾಸಿ ಲೋಕೇಶ್ ಗೆ ಗಂಭೀರವಾಗಿ ಗಾಯವಾಗಿದೆ

ಹೆಚ್ವಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆ ಗೆ ಕರೆ ತರಲಾಗಿದೆ.

ನನಗೆ ನನ್ನ ಭಾರತ ಬೇಕು

0

ಲೇಖನ: ಮನೋಹರ ಪಟೇಲ್


“ಜಗತ್ತಿಗೆ ಸಹಿಷ್ಣುತೆ ಮತ್ತು ವಿಶ್ವವ್ಯಾಪಿ ಸ್ವೀಕಾರ ಮನೋಧರ್ಮವನ್ನು ಕಲಿಸಿದ ಧರ್ಮಕ್ಕೆ ಸೇರಿದವನೆಂದು ನನಗೆ ಹೆಮ್ಮೆಇದೆ. ನಾವುಗಳು ವಿಶ್ವವ್ಯಾಪಿ ಸಹಿಷ್ಣತೆಯಳ್ಳವರು ಮಾತ್ರವಲ್ಲ, ಜಗತ್ತಿನ ಎಲ್ಲಾ ಧರ್ಮಗಳು ಸತ್ಯವೆಂದು ಒಪ್ಪಿಕೊಳ್ಳುತ್ತೇವೆ. ಈ ಭೂಮಿಯ ಮೇಲಿನ ಎಲ್ಲಾ ರಾಷ್ಠ್ರಗಳ ಧರ್ಮಗಳ ನಿರಾಶ್ರಿತರು ಮತ್ತು ಕಿರುಕುಳಕ್ಕೆ ಒಳಪ್ಪಟ್ಟವರಿಗು ಆಶ್ರಯ ನೀಡಿದ ದೇಶಕ್ಕೆ ಸೇರಿದವನು ಎಂದು ನನಗೆ ಹೆಮ್ಮೆ ಇದೆ. “
~ ಸ್ವಾಮಿ ವಿವೇಕಾನಂದ, ಸೆಪ್ಟಂಬರ್ 11,1893. ಅಮೇರಿಕಾದ ಚಿಕ್ಯಾಗೋದಲ್ಲಿ ನೆಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣದ ಕೆಲವು ವಿಚಾರ.

ವಿವೇಕಾನಂದರು ಹೇಳಿದ ಭಾರತ ಅದು.

“ಹೇಗೆ ವಿವಿಧ ಜಲತೊರೆಗಳು ಹರಿದು ಕೊನೆಗೆ ಸಮುದ್ರವನ್ನು ಸೇರುತ್ತದೆಯೋ ; ಹಾಗೆಯೇ, ಓ ದೇವ ! ಭಿನ್ನ ಭಿನ್ನವಾದ ಪ್ರವೃತ್ತಿಗಳ ಮೂಲಕ ಮನುಷ್ಯರು ಆಯ್ದುಕೊಳ್ಳುವ ವಿಭಿನ್ನ ಮಾರ್ಗಗಳು, ನೇರವಾಗಿಯೋ ಅಥವ ವಕ್ರವಾಗಿಯೋ, ಬಗೆಬಗೆಯಾಗಿ ಕಾಣಿಸಿದರು ಕೂಡ, ಅವೆಲ್ಲವೂ ನಿಮ್ಮನೇ ಸೇರುತ್ತವೆ.” ಎಂದು ದಿನವು ಪ್ರಾರ್ಥನೆ ಮಾಡುತ್ತಿದ್ದ ಭಾರತ ಅದು.

“ ಜಾತಿ,ನೀತಿ,ಕುಲ,ಗೋತ್ರದಿಂದ ಅನಂತ ದೂರಕ್ಕಿರುವ, ನಾಮ,ರೂಪ,ಗುಣ,ದೋಷಗಳಿಂದ ವರ್ಜಿತವಾಗಿರುವ, ಸತ್ಯವು-ಪ್ರಜ್ಙೆಯಳ್ಳ-ಆನಂದ ಸ್ವರೂಪಿಗಳು ನಾವುಗಳೆಲ್ಲರೂ ಎಂದು ಧ್ಯಾನಿಸುತ್ತಿದ್ದ ಭಾರತವದು.

ಬುದ್ದ, ಬಸವ, ಅಂಬೇಡ್ಕರ್ ಮತ್ತು ಗಾಂಧಿಯವರ ಪರಮ ಸತ್ಯವು, ಸಮಾನತೆಯು, ಅಹಿಂಸಯುತವು ಮತ್ತು ಸೌಹಾರ್ದಯುತವು ಆಗಿ ನೆಡೆದ ಭಾರತ.

ಆದರೆ , ಇಂದು ನನ್ನ ಬಂಧುಗಳು, ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರುಗಳು ತಿಳಿದು ಕೊಂಡಿರುವ ಭಾರತ ಪರಧರ್ಮ ಅಸಹಿಷ್ಣುತೆ ಮತ್ತು ತಿರಸ್ಕಾರ ಮನೋಧರ್ಮ ದ ಭಾರತ.

ಜ್ಞಾನ-ಶಾಂತಿ-ಸೌಹಾರ್ಧತೆಯ ಸನ್ಯಾಸ ಭಾರತದಲ್ಲಿ ಇಂದು ಅಜ್ಞಾನಿ-ಕಪಟಿ-ಕ್ರೂರಿ- ಸನ್ಯಾಸಿಗಳ! ಭಾರತದವಾಗಿದೆ.

ಪುರೋಹಿತ ಶಾಹಿಗಳಜೋತಿಷ್ಯ-ಹೋಮ-ಹವನಗಳೇ ಹಿಂದು ಧರ್ಮವೆಂದು ತಿಳಿದುಕೊಂಡ ಭಾರತವಾಗುತ್ತಿದೆ.

ಜ್ಞಾನಿಗಳು ಕುಳಿತು ಹೋದ ಸ್ಥಳವನ್ನು ಸಗಣಿಯಿಂದ ಶುದ್ದಿ ಮಾಡಿಕೊಳ್ಳವ ಭಾರತವಾಗುತ್ತಿದೆ.!!

ದೇವರು-ಧರ್ಮದ ಹೆಸರಲ್ಲಿ ಚೀಟಿಹರಿದು ವ್ಯಾಪಾರ ಮಾಡುತ್ತಿರುವ ಭಾರತವಾಗುತ್ತಿದೆ.

ಆತ್ಮಸಾಕ್ಷಾತ್ಕಾರ ಮಾರ್ಗ ನೀಡಿದ ಪತಂಜಲಿ ಯೋಗಿಯ ಹೆಸರನ್ನು ಇಂದು ಟಾಯ್ಲೆಟ್ ಕ್ಲೀನಿಂಗ್ ದ್ರವದ ಹೆಸರನ್ನಾಗಿಸಿದ ಭಾರತ, ಆಧ್ಯಾತ್ಮಿಕವಾಗಿ ಸೋತಿದೆ.

ನೀವು ನಾವೆಲ್ಲರೂ ಭಾರತವನ್ನು ಸೋಲಿಸಿದ್ದೇವೆ. ನನಗೆ ನನ್ನ ಭಾರತ, ಭಾರತವಾಗಿಯೇ ಬೇಕಾಗಿದೆ.

ಇಂಧನ ಉಳಿಸಿ, ಆದಾಯ ಹೆಚ್ಚಿಸಿ

Publicstory.in


ತುಮಕೂರು: ಇಂಧನ ಉಳಿತಾಯ ಮಾಡುವ ಮೂಲಕ ದೇಶದ ಆದಾಯ ಹೆಚ್ಚಿಸಿ. ಎಲ್ಲರೂ ಇಂಧನವನ್ನು ಮಿತವಾಗಿ ಬಳಸಿ- ಉಳಿಸುವ ಮೂಲಕ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಎಂದು ಎಸ್‍ಎಸ್‍ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಮ್.ಎಸ್ ರವಿಪ್ರಕಾಶ್ ತಿಳಿಸಿದರು.

ನಗರದ ಎಸ್.ಎಸ್.ಐ.ಟಿ ಕಾಲೇಜಿನ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಕಾಲೇಜು ಆವರಣದಿಂದ ಟೌನ್ ಹಾಲ್ ಸರ್ಕಲ್‍ವರೆಗೆ ಹಮ್ಮಿಕೊಂಡಿದ್ದ ಇಂಧನ ಉಳಿತಾಯ ಸಂರಕ್ಷಣಾ ಸಪ್ತಾಹ ಜಾಥಾ ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಥಾ ಕಾರ್ಯ ನಡೆಯುತ್ತಿದೆ ಎಂದರು.
ಜನ ವಿದ್ಯುತ್ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಂಡು ಸರ್ಕಾರದ ಜತೆ ಕೈಜೋಡಿಸಬೇಕು ಎಂದರು.

ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಎಮ್.ಝೆಡ್.ಕುರಿಯನ್ ಮಾತನಾಡಿ, ಇಂಧನ ಉತ್ಪಾದನಾ ಮೂಲಗಳು ಕಡಿಮೆಯಾಗಿದೆ. ವೈಯಕ್ತಿಕವಾಗಿ ಯಾರೂ ಇಂಧನ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ನಮ್ಮಿಂದ ಸಾಧ್ಯವಾದಷ್ಟು ಇಂಧನ ಉಳಿತಾಯ ಮಾಡಿ ಎಂದು ಕರೆ ನೀಡಿದರು.

ಪ್ರತಿಯೊಬ್ಬರು ವಿದ್ಯಾರ್ಥಿ ತಮ್ಮ ಮನೆಯಿಂದ ಆಚೆ ಬರುವಾಗ ಫ್ಯಾನ್, ಟಿ.ವಿ ಸ್ವಿಚ್ ಆಫ್ ಮಾಡಿ, ಹಾಗೆ ಎಲ್ಲಿಯಾದರೂ ನೀರು ಪೋಲ್ ಆಗುವುದನ್ನು ತಡೆಯಿರಿ. ಸಾರ್ವಜನಿಕರು ಈ ಕುರಿತು ಹೆಚ್ಚಿನ ಆಸಕ್ತಿ ವಹಿಸಿ ಇಂಧನ ಉಳಿತಾಯ ಮಾಡಿ. ಅನವಶ್ಯಕವಾಗಿ ವ್ಯರ್ಥ ಮಾಡುತ್ತಿರುವ ಇಂಧನವನ್ನು ಉಳಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಹೇಳಿದರು.

ವಿಜ್ಞಾನ ಕಲಿಯಲು ಮಕ್ಕಳಿಗೆ ಪ್ರೋತ್ಸಾಹ ನೀಡಿ: ಶಾಸಕ ಗೌರಿಶಂಕರ್

Publicstory.in


ತುಮಕೂರು: ಪೋಷಕರು ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಲು, ಕಲಿಯಲು ಮಕ್ಕಳಿಗೆ ವಿಶೇಷ ಪ್ರೋತ್ಸಾಹವನ್ನು, ಮಕ್ಕಳನ್ನು ಹುರಿದುಂಬಿಸುವ ಕೆಲಸವನ್ನು ಮಾಡುವಂತೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮನವಿ ಮಾಡಿದರು.

ತುಮಕೂರು ತಾಲ್ಲೂಕು ಬೆಳ್ಳಾವಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಮಕ್ಕಳ ವಿಜ್ಞಾನಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಕಲಿಕೆಗೆ ಇರುವ ಅವಕಾಶಗಳು, ಕಲಾ ವಿಷಯಗಳ ಕಲಿಕೆಯಲ್ಲಿ ಸಿಗುವುದಿಲ್ಲ, ವಿಜ್ಞಾನಕ್ಕೆ ದೇಶದಲ್ಲೆಡೆ ಮಾನ್ಯತೆ ಇದ್ದು, ಪೋಷಕರು ಮಕ್ಕಳಿಗೆ ವಿಜ್ಞಾನ ವಿಷಯ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ವಿಜ್ಞಾನ ಕಲಿಕೆಗೆ ಮುಂದಾಗುವುದು ಖಾಸಗಿ ಶಾಲೆಯ ಮಕ್ಕಳೇ, ಸರ್ಕಾರಿ ಶಾಲೆಯ ಮಕ್ಕಳಿಗೆ ವಿಜ್ಞಾನ ಕಲಿಕೆಯ ಸಾರ್ಮಥ್ಯವಿದ್ದರೂ, ಪೋಷಕರು ಪ್ರೋತ್ಸಾಹ ನೀಡುವುದಿಲ್ಲ, ಕಲಾ,ವಾಣಿಜ್ಯ ವಿಷಯಗಳನ್ನೇ ಸರ್ಕಾರಿ ಶಾಲೆಯ ಮಕ್ಕಳು ಆಯ್ಕೆ ಮಾಡಿಕೊಳ್ಳುತ್ತಾರೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ ನೀಡಿದರೆ ವಿಜ್ಞಾನ ವಿಷಯದಲ್ಲಿ ಉತ್ತಮ ಸಾಧನೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಮಕ್ಕಳ ವಿಜ್ಞಾನ ಹಬ್ಬದಂತಹ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸ ಬೇಕಾದರೆ, ಅಧಿಕಾರಿಗಳು ಕಾಳಜಿವಹಿಸಬೇಕು, ಬೇರೆ ತಾಲ್ಲೂಕುಗಳಿಂದ ಆಗಮಿಸುವ ಮಕ್ಕಳಿಗೆ ಅಗತ್ಯ ಸೌಲಭ್ಯವನ್ನು ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದ ಅವರು, ಸರ್ಕಾರಿ ಅನುದಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಗುತ್ತದೆಯೇ? ಅಧಿಕಾರಿಗಳು ಎಲ್ಲರ ಸಹಕಾರವನ್ನು ಪಡೆದು ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.

ಈ ಮಕ್ಕಳ ವಿಜ್ಞಾನಹಬ್ಬದ ಭಾಗವಹಿಸಿರುವ ಎಲ್ಲ ಮಕ್ಕಳಿಗೂ ಹಾಗೂ ಬೇರೆ ತಾಲ್ಲೂಕುಗಳಿಂದ ಆಗಮಿಸಿರುವ ಎಲ್ಲ ಪೋಷಕರಿಗೂ ಅಗತ್ಯವಾದ ವಸತಿ ಹಾಗೂ ಊಟದ ಸೌಲಭ್ಯವನ್ನು ವೈಯಕ್ತಿಕವಾಗಿ ಭರಿಸುವುದಾಗಿ ಹೇಳಿದ ಅವರು, ಮಕ್ಕಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ವೈಯಕ್ತಿಕವಾಗಿ ಅಗತ್ಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ನಮ್ಮ ತಾಲ್ಲೂಕಿನ ಸರ್ಕಾರಿ ಶಾಲೆಯ ಮಕ್ಕಳಲ್ಲಿಯೂ ಪ್ರತಿಭೆ ಹಾಗೂ ಖಾಸಗಿ ಶಾಲೆಯ ಮಕ್ಕಳನ್ನು ಮೀರಿ ಸಾಧಿಸುವ ಶಕ್ತಿ ಇದೆ ಎಂಬುದನ್ನು ತೋರಿಸಬೇಕು, ಈ ನಿಟ್ಟಿನಲ್ಲಿ ಮಕ್ಕಳಿಗೆ ಸೌಲಭ್ಯವನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಬೆಳ್ಳಾವಿಯ ಸರ್ಕಾರಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಬೋಧಿಸುತ್ತಿರುವ ಶಿಕ್ಷಕರ ವೇತನಕ್ಕಾಗಿ ವೈಯಕ್ತಿಕ 10 ಲಕ್ಷ ರೂ ನೀಡುವುದಾಗಿ ಹೇಳಿದ್ದೇ, ಅದರಂತೆ ಹಣವನ್ನು ನೀಡಿದ್ದೇನೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ನಮ್ಮ ತಾಲ್ಲೂಕಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನಾ ಶಾಸಕರೊಂದಿಗೆ ಚರ್ಚಿಸಿದರೆ, ಅದ್ದೂರಿಯಾಗಿ ಕಾರ್ಯಕ್ರಮವನ್ನು ರೂಪಿಸಬಹುದು, ನಮ್ಮ ತಾಲ್ಲೂಕಿಗೆ ಬರುವವರಿಗೆ ಉತ್ತಮ ಆತಿಥ್ಯವನ್ನು ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಅಧಿಕಾರಿಗಳು ಅರಿಯಬೇಕು ಎಂದ ಅವರು, ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಉತ್ತಮ ಕೋಚಿಂಗ್ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

ಒಂದು ವರ್ಷದ ವೇತನ: ಬೆಳ್ಳಾವಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಹಾಯಕರು, ಶಾಸಕ ಗೌರಿಶಂಕರ್ ಅವರಿಗೆ ಕಡಿಮೆ ವೇತನ ನೀಡುತ್ತಿರುವ ಬಗ್ಗೆ ಮನವಿ ಮಾಡಿದಾಗ, ವೈಯಕ್ತಿಕವಾಗಿ 6 ಮಂದಿ ಅಡುಗೆ ಸಹಾಯಕರಿಗೆ ತಲಾ 500ರೂಗಳಂತೆ ಒಂದು ವರ್ಷದ ವೇತನವನ್ನು ನೀಡಿದರು.

ಕೆರೆಗಳಿಗೆ ಎತ್ತಿನಹೊಳೆ ನೀರು: ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿಯಲ್ಲಿ ಬರುವ ಬೆಳ್ಳಾವಿ, ದೊಡ್ಡವೀರನಹಳ್ಳಿ, ದೊಡ್ಡೇರಿ, ಪಿ.ಗೊಲ್ಲಹಳ್ಳಿ, ಚೆನ್ನನಹಳ್ಳಿ, ಸೊರೇಕುಂಟೆ ಕೆರೆಗಳಿಗೆ 95.06ಎಫ್ಸಿಎಫ್ಟಿ ನೀರನ್ನು ಗುರುತ್ವಾಕರ್ಷಣೆಯಿಂದ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದು, ಎತ್ತಿನಹೊಳೆಯಿಂದಲೂ ಈ ಭಾಗದ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರುಧ್ರಭೂಮಿಗಾಗಿ ಪ್ರತಿಭಟನೆ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಾದ್ಯಂತ ಗ್ರಾಮಗಳಲ್ಲಿ ರುಧ್ರಭೂಮಿ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಬೌಧ್ಧ ಸಮಾಜದ ನೇತೃತ್ವದಲ್ಲಿ ದಲಿತ ಸಮುದಾಯದವರು ಸೊಮವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದರು.

ತಾಲ್ಲೂಕಿನ ಸಾಕಷ್ಟು ಗ್ರಾಮಗಳಲ್ಲಿ ರುಧ್ರಭೂಮಿಯಿಲ್ಲದೆ ದಲಿತ ಸಮುದಾಯದವರು ಸಮಸ್ಯೆ ಅನುಭವಿಸುತ್ತಿದ್ದಾರೆ. ನೂರಾರು ವರ್ಷಗಳಿಂದ ಅಂತ್ಯಸಂಸ್ಕಾರ ಮಾಡುತ್ತಿರುವ ಸ್ಥಳಗಳಲ್ಲಿ ಕೆಲವರು ಶವ ಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕತಿಕ್ಯಾತನಹಳ್ಳಿ ಗ್ರಾಮದಲ್ಲಿ ದಲಿತರನ್ನು ಶವ ಸಂಸ್ಕಾರ ಮಾಡದಂತೆ ತಡೆದ ನಿದರ್ಶನಗಳಿವೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ದಲಿತ ಮುಖಂಡ ಸುಬ್ಬರಾಯಪ್ಪ. ಕೆಲ ಗ್ರಾಮಗಳಲ್ಲಿ ಬಂಡೆ ಇರುವ ಸ್ಥಳವನ್ನು ಸರ್ಕಾರ ರುಧ್ರಭೂಮಿಗೆ ಮಂಜೂರು ಮಾಡಿಕೊಟ್ಟಿದೆ. ಶವ ಸಂಸ್ಕಾರದ ನಂತರ ಮೃತದೇಹಗಳನ್ನು ಪ್ರಾಣಿಗಳು ಹೊರತೆಗೆಯುವ ಸಂಭವವಿದೆಸತ್ತ ನಂತರವೂ ದಲಿತರನ್ನು ಶೋಷಿಸಲಾಗುತ್ತಿದೆ ಎಂದು ಆರೋಪಿಸಿದರು.

ಮುಖಂಡ ಕೋರ್ಟ್ ನರಸಪ್ಪ, ಹಿಂದಿನಿಂದ ಶವಸಂಸ್ಕಾರ ಮಾಡಿಕೊಂಡು ಬರುತ್ತಿರುವ ಸ್ಥಳವನ್ನು ರುಧ್ರಭೂಮಿಯಾಗಿ ಪರಿವರ್ತಿಸಬೇಕು. ಗ್ರಾಮದಿಂದ ಸಾಕಷ್ಟು ಇರುವ ಸ್ಥಳಗಳಿಗೆ ಹೋಗಲು ಸಾದ್ಯವಾಗುವುದಿಲ್ಲ. ಅಧಿಕಾರಿಗಳು ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸಬೇಕು ಎಂದರು.

ಪಳವಳ್ಳಿ ಸುಬ್ಬರಾಜು, ಸಾಕಷ್ಟು ಬಾರಿ ತಹಶೀಲ್ದಾರರು ಸೇರಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಕೇವಲ ಭರವಸೆ ನಿಡಲಾಗುತ್ತಿದೆಯೇ ಹೊರತು ಸಮಸ್ಯೆ ಪರಿಹರಿಸುತ್ತಿಲ್ಲ ಎಂದು ದೂರಿದರು.

ಪಟ್ಟಣದ ಶನೈಶ್ಚರ ದೇಗುಲ ವೃತ್ತದಿಂದ ತಹಶೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ನಂದೀಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು.

ದಲಿತ ಮುಖಂಡರಾದ ಬಿ.ಎಸ್.ಪಿ. ಮಂಜುನಾಥ್, ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ಸಿ.ಕೆ.ಪುರ ಹನುಮಂತರಾಯ, ರಾಮಕೃಷ್ಣ  ಉಪಸ್ಥಿತರಿದ್ದರು.

ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ

ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಉಪಚುನಾವಣೆಯಲ್ಲಿ ಗೆದ್ದಿರುವ ಶಾಸಕರಿಗೂ ಸಚಿವ ಸ್ಥಾನ ದೊರೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿದ ಸಿ.ಟಿ.ರವಿ. ಡಾ.ಶಿವಕುಮಾರಸ್ವಾಮಿಗಳ ಗದ್ದುಗೆಯ ಬಳಿ ನಮಿಸಿ ಧ್ಯಾನಮಂದಿರಲ್ಲಿ ಧ್ಯಾನ ಮಾಡಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಉಪಮುಖ್ಯಮಂತ್ರಿಗಳ ಹುದ್ದೆಯನ್ನು ಸೃಷ್ಟಿಸುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟವಿಚಾರ. ಪಕ್ಷದ ಹೈಕಮಾಂಡ್ ವರಿಷ್ಠರ ಜೊತೆ ಮಾತುಕತೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆಗೂ ಮೊದಲು ಕೆಲವರಿಗೆ ಕೊಟ್ಟ ಮಾತಿನಂತ ಮುಖ್ಯಮಂತ್ರಿ ಯಡಿಯೂರಪ್ಪ ನಡೆದುಕೊಳ್ಳಲಿದ್ದಾರೆ. ಹೀಗಾಗಿ ಹೊಸಬರಿಗೂ ಅವಕಾಶ ದೊರೆಯಲಿದೆ. ಪಕ್ಷ ಸಚಿವ ಸ್ಥಾನ ತೊರೆಯುವಂತೆ ಸೂಚಿಸಿದರೆ ಅದಕ್ಕೆ ಬದ್ದನಾಗಿರುತ್ತೇನೆ ಎಂದರು.

ಕೊರಟಗೆರೆ ಯಲ್ಲಿ ಆಧಾರ ಕಾರ್ಡ್ ಗಾಗಿ ಸರದಿಯಲ್ಲಿ ನಿಂತಿರುವ ಸಾರ್ವಜನಿಕರು.

ಆಧಾರ ತಿದ್ದುಪಡಿ, ಹೊಸ ಕಾರ್ಡ್ ಸೇರಿದಂತೆ ಇತರೆ ಆಧಾರ್ ಕೆಲಸಕ್ಕಾಗಿ ಭಾನುವಾರ ರಾತ್ರಿಯಿಂದ ಚಳಿಯನ್ನು ಲೆಕ್ಕಿಸದೆ ತಾಲ್ಲೂಕು ಕಚೇರಿ ಮುಂಭಾಗ ಟೋಕನ್ ಗಾಗಿ ಸರದಿ ನಿಂತಿದ್ದಾರೆ.

ಪ್ರತಿ ದಿನ ಕೇವಲ ಮುವತ್ತು ಆಧಾರ್ ಕಾರ್ಡ್ ಅಷ್ಟೆ ಮಾಡಲಾಗುತ್ತಿದೆ. ಪ್ರತೀ ಸೋಮವಾರ ಆಧಾರ್ ತಿದ್ದುಪಡಿಗಾಗಿ ದಿನಕ್ಕೆ ಮುವತ್ತರಂತೆ ವಾರಕ್ಕಾಗುವಷ್ಟು ಟೋಕನ್ ನೀಡಲಾಗುತ್ತಿದೆ. ಆ ಕಾರಣಕ್ಕಾಗಿ ಟೋಕನ್ ಪಡೆಯಲು ಜನ ದಿನಗಟ್ಟಲೆ ಕಾದು ನಿಲ್ಲುತ್ತಿದ್ದಾರೆ.

ಎಳೆಮಕ್ಕಳನ್ನು ಎತ್ತುಕೊಂಡು ಸರದಿಯಲ್ಲಿರುವ ತಾಯಂದಿರು, ವಯೋ ವೃದ್ಧರು, ಶಾಲೆಯನ್ನು ತಪ್ಪಿಸಿ ವಿದ್ಯಾರ್ಥಿಗಳನ್ನು ಕರೆತಂದಿರುವ ಪೋಷಕರು. ತಾಲ್ಲೂಕು ಕಚೇರಿ, ಎಸ್ಬಿಐ ಬ್ಯಾಂಕ್ ಹೊರತು ಪಡಿಸಿ ಬೇರೆಲ್ಲೂ ಆಧಾರ ಕಾರ್ಡ್ ಮಾಡದಿರುವುದು ಸಮಸ್ಯೆ ಉಲ್ಬಣಿಸಲು ಕಾರಣ.

ಜನರ ಸೇವೆ ಮಾಡಲು ಮತ್ತೆ ಚುನಾವಣೆಗೆ ನಿಲ್ಲುತ್ತೇನೆ:ಮಾಜಿ ಶಾಸಕ ಕೆ.ಎನ್.ರಾಜಣ್ಣ

ಮಧುಗಿರಿ – ಜನರ ಸೇವೆ ಮಾಡಲು ಮತ್ತೆ ಚುನಾವಣೆಗೆ ನಿಲ್ಲುತ್ತೇನೆ. ಆದರೆ ಯಾವ ಪಕ್ಷದಿಂದ ಬರುತ್ತೇನೆ ಎಂದು ತೀರ್ಮಾನಿಸಿಲ್ಲ. ನಾನು ಯಾವುದೇ ಪಕ್ಷದಿಂದ ನಿಂತರೂ ನಿಮ್ಮ ಸಹಕಾರ ಹಾಗೂ ಆಶಿರ್ವಾದವೇ ಮುಖ್ಯ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ನೂತನ ಟಿಡಿಸಿಸಿ ಬ್ಯಾಂಕಿನ 31ನೇ ಶಾಖೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರ ಇದ್ದಾಗ ಜನರ ವಿಶ್ವಾಸ ಗಳಿಸುವುದು ಮುಖ್ಯ. ಬರುವ ದಾರಿಯಲ್ಲಿ ಎಲ್ಲಾ ಗ್ರಾಮಗಳಲ್ಲೂ ಅದ್ಭುತ ಸ್ವಾಗತ ಕೋರಿದ ಎಲ್ಲರಿಗೂ ಅಭಿನಂದನೆಗಳು. ಅಧಿಕಾರ ಇರಲಿ ಬಿಡಲಿ ನಿಮ್ಮ ಪ್ರೀತಿ ವಿಶ್ವಾಸ ಸದಾ ನಮ್ಮ ಮೇಲೆ ಇರಲಿ. ನನ್ನ ಅಧಿಕಾರಾವಧಿಯಲ್ಲಿ ಜಾತಿ ಹಾಗೂ ಪಕ್ಷಬೇದ ಮಾಡದೇ ಎಲ್ಲರಿಗೂ ಕೆಲಸ ಮಾಡಿದ್ದೇನೆ, ಎಲ್ಲರಿಗೂ ಸರಕಾರಿ ಸೌಲಭ್ಯ ಸಿಗುವಂತೆ ಕಾರ್ಯ ನಿರ್ವಹಿಸಿದ್ದೇನೆ.

ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ನೀಡಿದ್ದೇವೆ. ಸುಮಾರು 25 ಸಾವಿರಕ್ಕೂ ಹೆಚ್ಚು ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಮನೆ ಮನೆಗೆ ತಲುಪಿಸಿದ್ದೇವೆ. ತಾಲೂಕಿನಲ್ಲಿ ಸುಮಾರು 160 ಕೋಟಿಗೂ ಹೆಚ್ಚು ಸಾಲ ಮನ್ನ ಆಗಿದೆ, ನಾವು ಬಡವರ ಪರ ಕೆಲಸ ಮಾಡುತ್ತಿದ್ದರೆ ಕೆಲವರು ನಮ್ಮ ಬ್ಯಾಂಕನ್ನು ಸೂಪರ್ ಸೀಡ್ ಮಾಡಲು ಯತ್ನಿಸಿದ್ದರು. ಆದರೆ ಇಂದು ಅವರೇ ಅಧಿಕಾರ ಕಳೆದುಕೊಂಡು ಜೀರೋ ಟ್ರಾಫಿಕ್ ಇಲ್ಲದೆ ಓಡಾಡುತ್ತಿದ್ದಾರೆ ಎಂದರು.

ನನ್ನ ಅಧಿಕಾರಾವದಿಯಲ್ಲಿ ಗೋಶಾಲೆಗಳನ್ನು ತೆರೆದು ಉಚಿತ ಮೇವು ನೀಡುವುದರ ಜೊತೆಗ್ಲೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈಗ ಮೇವು ನೀಡುವುದು ದೊಡ್ಡ ದಂದೆಯಾಗಿದ್ದು, ಕಳ್ಳ ಬಿಲ್ಲುಗಳ ಹಗರಣವಾಗಿದೆ ಎಂದರು.

ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ಉಂಟಾಗಲು ದೇವೇಗೌಡರ ಕುಟುಂಬವೇ ಕಾರಣ ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ಉತ್ತಮ ತೀರ್ಪು ನೀಡಿದ್ದಿರಾ. ಮುಂದಿನ ದಿನಗಳಲ್ಲಿ ಮಧುಗಿರಿಯಲ್ಲಿ ಜಿಲ್ಲಾ ಕೇಂದ್ರವನ್ನಾಗಿಸಲು ಹಾಗೂ ತಾಲೂಕಿನ 54 ಕೆರೆಗಳಿಗೆ ನೀರು ತುಂಬಿಸಲು ನನಗೆ ಮತ್ತು ಸಂಸದರಿಗೆ ಸಹಕಾರ ನೀಡಬೇಕು ಎಂದರು.

ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ಪ್ರತಿ ಹೋಬಳಿಯಲ್ಲಿ ಡಿಸಿಸಿ ಬ್ಯಾಂಕ್ ತೆರೆಯಲಾಗುತ್ತಿದ್ದು, ನೂತನವಾಗಿ ಪ್ರಾರಂಭವಾಗುತ್ತಿರುವ ಬ್ಯಾಂಕ್ ನಿಮ್ಮೆಲ್ಲರ ಆಸ್ತಿ, ಇಲ್ಲಿ ಪ್ರತಿನಿತ್ಯದ ವ್ಯವಹಾರ ನಡೆಸುವುದರಿಂದ ನಿಮ್ಮ ಬ್ಯಾಂಕ್ ಅಭಿವೃದ್ಧಿ ಹೊಂದುತ್ತದೆ. ಬ್ಯಾಂಕಿನಲ್ಲಿ ಚಿನ್ನಾಭರಣಗಳ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದ ಅವರು ಗ್ರಾಮೀಣ ಮಕ್ಕಳಲ್ಲಿ ಉತ್ತಮ ಪ್ರತಿಭೆಯಿದ್ದು, ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡಿಸುವುದು ಪೋಷಕರ ಆದ್ಯ ಕರ್ತವ್ಯ ಎಂದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಹೆಚ್ಚು ಕೆಲಸ ಮಾಡುವವರನ್ನು ಜನ ಸೋಲಿಸುತ್ತಾರೆ, ಆದರೆ ಬೆಂಗಳೂರಿನಲ್ಲಿ ಕುಳಿತುಕೊಂಡು ಆಡಳಿತ ನಡೆಸುವವರನ್ನು ಗೆಲ್ಲಿಸುತ್ತಾರೆ ಇದು ನಮ್ಮ ದುರ್ವಿಧಿ. ಮಧುಗಿರಿ ತಾಲೂಕು ಸಹಕಾರ ಕ್ಷೇತ್ರದಲ್ಲಿ ತುಂಬಾ ಮುಂದುವರೆದಿದೆ. ತಾಲೂಕಿನಲ್ಲಿ ಈಗಾಗಲೇ ಸುಮಾರು 160 ಕೋಟಿಗೂ ಹೆಚ್ಚು ಸಾಲ ಮನ್ನ ವಾಗಿದೆ. ಇದಕ್ಕೆ ಮೂಲಕಾರಣ ರಾಜಣ್ಣನವರು ಆದರೆ ಅವರನ್ನು ಸೋಲಿಸಿ ಕ್ಷೇತ್ರದ ಜನತೆಯ ದೊಡ್ಡ ತಪ್ಪು ಮಾಡಿದ್ದಿರಾ, ಆದರೆ ಮುಂದಿನ ದಿನಗಳಲ್ಲಿ ಆ ತಪ್ಪನ್ನೂ ಮಾಡದೆ ಅವರ ಕೈ ಬಲಪಡಿಸಿ ಎಂದ ಅವರು, 25 ನದಿಗಳ ನೀರು ಸಮುದ್ರದ ಪಾಲಾಗುತ್ತಿದ್ದು, ಅವುಗಳನ್ನು ನಮ್ಮ ಜಿಲ್ಲೆಗೆ ತರುವುದು ನಮ್ಮ ಆದ್ಯ ಕರ್ತವ್ಯ. ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವುದೇ ನನ್ನ ಮೊದಲ ಗುರಿ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಎನ್.ಗಂಗಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಜೆ.ರಾಜಣ್ಣ, ಚೌಡಪ್ಪ, ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ಚಿನ್ನಪ್ಪ, ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ಸದಸ್ಯಗಳಾದ ರಾಜು, ಜೆ.ಡಿ.ವೆಂಕಟೇಶ್, ಚಂದ್ರಕಲಾ, ರುದ್ರಮ್ಮ ಈರಣ್ಣ, ಜಿಲ್ಲಾ ಬ್ಯಾಂಕ್‍ನ ನಿರ್ದೇಶಕರುಗಳಾದ ಲಕ್ಷ್ಮೀನಾರಾಯಣ, ಹನುಮಾನ್, ಜಿ.ಎಸ್.ರವಿ, ನರಸಿಂಹಯ್ಯ, ರಾಜಕುಮಾರ್, ತಿಮ್ಮರಾಜು, ಡಿ.ಪಿ.ಮಂಜುನಾಥ್, ಗ್ರಾ.ಪಂ ಅಧ್ಯಕ್ಷರುಗಳಾದ ದೇವರಾಜು, ಕಾಂತರಾಜು, ವಿ.ಅರ್.ಭಾಸ್ಕರ್, ತುಮುಲ್ ನಿರ್ದೇಶಕ ಈಶ್ವರಯ್ಯ, ಮುಖಂಡರುಗಳಾದ ಲಕ್ಷ್ಮೀನಾರಾಯಣ್, ಪಿ.ಸಿ.ಕೃಷ್ಣರೆಡ್ಡಿ, ಎಸ್.ಎನ್.ರಾಜು, ಈರಣ್ಣ, ಶ್ರೀನಿವಾಸ್, ಶ್ರೀನಿವಾಸ್ ರೆಡ್ಡಿ, ಎಂ.ಬಿ.ಮರಿಯಣ್ಣ, ನಾಗೇಶ್ ಬಾಬು, ಸುವರ್ಣಮ್ಮ, ಎಸ್.ಆರ್.ರಾಜಗೋಪಾಲ್, ಎಂ.ಎಸ್.ಮಲ್ಲಿಕಾರ್ಜುನಯ್ಯ, ಮುದ್ದಲಿಂಗಪ್ಪ, ಸಿದ್ದಗಂಗಪ್ಪ, ಸಾಧಿಕ್, ನಾಗರಾಜು, ರಂಗಪ್ಪ, ರಾಜಕುಮಾರ್, ಸೀತಾರಾಮ್ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಾಮಕೃಷ್ಣ, ಹಾಗೂ ಸಿಬ್ಬಂದಿಗಳು ಇದ್ದರು.

ಎಂಪ್ರೆಸ್ ಕೆಪಿಎಸ್ ಶಾಲೆಯಲ್ಲಿ ‘ಕೇಳು ಮಗುವೆ ಕಥೆಯಾ’ ಕಾರ್ಯಕ್ರಮ

ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿರುವ “ಕೇಳು ಮಗುವೆ ಕಥೆಯಾ” ಸರಣಿಯ ಕಾರ್ಯಕ್ರಮ- 4
ಎಂಪ್ರೆಸ್ ಕೆಪಿಎಸ್ ಶಾಲೆಯಲ್ಲಿ ನಡೆಯಿತು.

ಕುವೆಂಪು ರವರ,’ನರಿಗಳಿಗೇಕೆ ಕೋಡಿಲ್ಲ ‘ಕಥೆಯನ್ನು ಸಿ.ಎಲ್.ಸುನಂದಮ್ಮ ಮಕ್ಕಳಿಗೆ ಆಕರ್ಷಕವಾಗಿ, ಸ್ವಾರಸ್ಯಕರವಾಗಿ ಹೇಳಿದರು .
ಕುವೆಂಪು ಈ ಕಥೆಯನ್ನು ಅತ್ಯಂತ ಅದ್ಬುತವಾಗಿ ಒಡಮೂಡಿಸಿದ್ದಾರೆ ಎಂದು ಹೇಳುವ ಮೂಲಕ ಕತೆಯ ಸಾರಾಂಶವನ್ನು ಮಕ್ಕಳಿಗೆ ಮನವರಿಕೆ ಮಾಡಿಸಿದರು.

ಅತಿಥಿಗಳಾಗಿ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಮಾತನಾಡಿ, ಮಕ್ಕಳು ಒಳ್ಳೆಯ ಕತೆಗಳನ್ನು ಕೇಳಬೇಕು ಮತ್ತು ಓದಬೇಕು ಆಗ ಜ್ಞಾನವೃದ್ದಿಯಾಗುತ್ತದೆ ಎಂದರು..ಕತೆಯೆಂದರೆ ಹಾಗೇ ಹಸಿವು ಬಾಯಾರಿಕೆ ಮರೆತು ಮಕ್ಕಳು ಕೇಳಿದವು
ಅಳುತ್ತಿದ್ದ ಮಗು ಕತೆ ಕೇಳಿ ನಕ್ಕಿತು.

ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಮಾತನಾಡಿ, ನಮ್ಮ ಸಂಘಟನೆ ಇಂತಹ ಅಪರೂಪದ ಕಾರ್ಯಕ್ರಮವನ್ನು ಎಲ್ಲಾ ಶಾಲೆಗಳಲ್ಲಿ ಆಯೋಜಿಸಲು ಸಿದ್ದತೆ ಮಾಡಿಕೊಂಡು ಬರುತ್ತಿದೆ. ಇದು ನಾಲ್ಕನೇ ಕಾರ್ಯಕ್ರಮ. ಕೇಳು ಮಗುವೇ ಕತೆಯ ಸರಣಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು.

ಮಕ್ಕಳು ಕತೆಯನ್ನು ಗ್ರಹಿಸಿ ತಾವೂ ಹೇಳಿದರು.ಎಲ್ಲ ಮಕ್ಕಳಿಗೂ ಬಣ್ಣದ ಕ್ರಿಯಾನ್ ಹಾಗೂ ಬಿಸ್ಕತ್ ಹಂಚಲಾಯಿತು.

ಕಾಯ೯ಕ್ರಮದ ರೂವಾರಿ ಮಲ್ಲಿಕಾ ಬಸವರಾಜು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಭಾಗಿಯಾಗಿದ್ದರು.