Saturday, October 24, 2026
Google search engine
Home Blog Page 306

ತುಮಕೂರು ಸರ್ಕಾರಿ ಬಸ್ ನಿಲ್ದಾಣ ಸ್ಥಳಾಂತರ

ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿಯನ್ನು ಶಾಸಕ‌ ಜ್ಯೋತಿ‌ಗಣೇಶ್ ಪರಿಶೀಲಿಸಿದರು.

ತುಮಕೂರು: ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿ ಕೊನೆಯ ಹಂತದಲ್ಲಿದ್ದು ಶೀಘ್ರದಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸ್ಥಳಾಂತರಿಸಲಾಗುವುದು ಎಂದು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ತಿಳಿಸಿದರು.

ತಾತ್ಕಾಲಿಕ ಬಸ್ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ತೆರವುಗೊಳಿಸಿ 5 ಮಹಡಿಗಳುಳ್ಳ ಇಂಟಿಗ್ರೇಟೆಡ್ ಬಸ್ ನಿಲ್ದಾಣ ಮಾಡಲಾಗುವುದು ಎಂದರು.

ನೂತನ ಸ್ಮಾರ್ಟ್ ಬಸ್ ನಿಲ್ದಾಣವಾಗುವವರೆಗೂ ಪರ್ಯಾಯವಾಗಿ ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ತಾತ್ಕಾಲಿಕ ಬಸ್‍ನಿಲ್ದಾಣ ಮಾಡಲು ಕಾಮಗಾರಿ ನಡೆಸುತ್ತಿದ್ದು, ಸದರಿ ಕಾಮಗಾರಿ ಕೊನೆಯ ಹಂತದಲ್ಲಿದೆ ಎಂದರು.

ತಾತ್ಕಾಲಿಕ ಬಸ್ ನಿಲ್ದಾಣ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕಿಂತ ಕಡಿಮೆ ಸ್ಥಳಾವಕಾಶ ಹೊಂದಿದ್ದು, ಸಾರ್ವಜನಿಕರು ಸ್ಮಾರ್ಟ್ ಬಸ್ ನಿಲ್ದಾಣವಾಗುವರೆಗೂ ಸಹಕರಿಸಬೇಕು ಎಂದರಲ್ಲದೇ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿಯವರ ಸಹಕಾರದಲ್ಲಿ ಕಾಮಗಾರಿಗಳು ತುರ್ತಾಗಿ ನಡೆಯುತ್ತಿದೆ. ಬಸ್‍ಗಳ ಸಂಚಾರ ಮಾರ್ಗದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮಾರ್ಗದರ್ಶನ ನೀಡಿದ್ದಾರೆ ಎಂದು ಅವರು ಹೇಳಿದರು.

ನಗರದ ಕೆಎಸ್‍ಆರ್‍ಟಿಸಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ಮಾತನಾಡಿ, ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಸುಮಾರು 400-500 ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳಿಯಬೇಕೆ? ಇಲ್ಲಿದೆ ಕನ್ನಡದ ಪುಸ್ತಕ

ತುಮಕೂರು: ‘ಬಹುರೂಪಿ’ ಪ್ರಕಾಶನದಿಂದ
ಇಂದು ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ
ಪೌರತ್ವ (ತಿದ್ದುಪಡಿ) ಕಾಯಿದೆ -2019 ರ ಬಗ್ಗೆ ಸಮಗ್ರ ಒಳನೋಟವನ್ನು ಕೊಡುವ ಕೃತಿ ಮಾರಾಟಕ್ಕೆ ಸಿದ್ಧವಾಗಿದೆ.

ಖ್ಯಾತ ಸಾಮಾಜಿಕ ಚಿಂತಕರಾದ ರಾಜಾರಾಂ ತಲ್ಲೂರು ಅವರು
ಪ್ರಶ್ನೆ-ಉತ್ತರ ಮಾದರಿಯಲ್ಲಿ ಸರಳವಾಗಿ
ಈ ಕಾಯಿದೆಯ ಬಗೆಗಿನ ಎಲ್ಲಾ ಮಾಹಿತಿ ನೀಡಿದ್ದಾರೆ.

ಕೃತಿಯ ಮುಖಬೆಲೆ 50 ರೂ. ಇದಕ್ಕೆ ಸೂಕ್ತ ರಿಯಾಯಿತಿ ಇದೆ.

ನಿಮಗೆ ಎಷ್ಟು ಪ್ರತಿಗಳು ಬೇಕು ಎನ್ನುವುದನ್ನು ಈ ನಂಬರ್ ಗೆ 7019182729 ವಾಟ್ಸ್ ಆಪ್ ಮಾಡಬೇಕು ‌ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರು ಹಾಗೂ ನಿವೃತ್ತ ನೌಕರರಿಗೆ ಸನ್ಮಾನ

ಮಧುಗಿರಿ: ಮಧುಗಿರಿ ತಾಲೂಕು ಛಲವಾದಿ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಛಲವಾದಿ ಮಹಾಸಭಾ ಇವರ ಸಂಯುಕ್ತಾಶ್ರಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಡಿ.22 ರ ಭಾನುವಾರ ಬೆಳಿಗ್ಗೆ 10-30ಕ್ಕೆ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ನೇ.ರಂ.ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸುವರು. ಮಧುಗಿರಿ ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ಚಿತ್ರದುರ್ಗ
ಛಲವಾದಿ ಗುರುಪೀಠದ ಅಧ್ಯಕ್ಷ ಎನ್.ಲಕ್ಷ್ಮೀನರಸಯ್ಯ, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್.ದಿನೇಶ್ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರು ಹಾಗೂ ಸಾಧಕರನ್ನು ಅಭಿನಂದಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಯುವಕನ ಹತ್ಯೆ

ಕೊರಟಗೆರೆ:ಯುವಕನೊಬ್ಬನನ್ನು ಲಾಂಗು, ಮಚ್ಚುಗಳಿಂದ ಬರ್ಬರವಾಗಿ ಕೊಚ್ಚಿಕೊಲೆ ಮಾಡಿರುವ ಘಟನೆ ದಾಬಸ್ ಪೇಟೆ, ಕೊರಟಗೆರೆ ಮುಖ್ಯರಸ್ತೆಯ ಜಿ. ನಾಗೇನಹಳ್ಳಿ ಬಳಿ ಗುರುವಾರ ಸಂಜೆ 7 ಗಂಟೆ ಸುಮಾರಿನಲ್ಲಿ ನಡೆದಿದೆ.

ಮಧುಗಿರಿ ತಾಲ್ಲೂಕಿನ‌ ಮಿಡಿಗೇಶಿ ಹೋಬಳಿಯ ಬಿದರಗೆರೆ ವಾಸಿ ಶ್ರೀನಿವಾಸ(25)ಕೊಲೆಗೀಡಾದ ಯುವಕ.

ಶ್ರೀನಿವಾಸ ಬೆಂಗಳೂರಿನ ಬಾಗಲಗುಂಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಬಾಗಲಗುಂಟೆಯ ಅಕ್ಷಿತ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದರು. ಐದು ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ.

ಇಬ್ಬರೂ ಸ್ಕಾರ್ಪಿಯೋ ವಾಹನದಲ್ಲಿ ಬಿದರಗೆರೆಗೆ ಬಂದು ವಾಪಸ್ ಬೆಂಗಳೂರಿಗೆ ಹೋಗುತ್ತಿದ್ದಾಗ ಮತ್ತೊಂದು ಸ್ಕಾರ್ಪಿಯೋ ವಾಹನದಲ್ಲಿ ಬಂದ ಆರು ಜನರ ಗುಂಪು ಕಾರನ್ನು ಅಡ್ಡಗಟ್ಟಿ ಲಾಂಗು ಮಚ್ಚುಗಳಿಂದ ಶ್ರೀನಿವಾಸನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ.

ಈ ವೇಳೆ ಅಕ್ಷಿತ ಕಾರಿನಲ್ಲಿಯೇ ಇದ್ದರು. ತರಕಾರಿ, ಹಣ್ಣು ವ್ಯಾಪಾರ ವೈಶಮ್ಯ ಕೊಲೆಗೆ ಕಾರಣ ಎನ್ನಲಾಗಿದೆ. ಸ್ನೇಹಿತರೆ ಕೊಲೆ‌ಮಾಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ಎಂ.ಪ್ರವೀಣ್, ಸಿಪಿಐ ಎಫ್.ಕೆ.ನದಾಪ್ ಭೇಟಿ ನೀಡಿದ್ದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ದದ ಹೇಳಿಕೆಗೆ ಆಕ್ರೋಶ

ಮಧುಗಿರಿ – ಜಿಲ್ಲಾ ಕಾಂಗ್ರೆಸ್ ಗೆ ತಮ್ಮ ಕೊಡುಗೆ ಏನೆಂದು ತಿಳಿಸಿ ನಂತರ ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ದ ಮಾತನಾಡಿ ಎಂದು ಚಿಕ್ಕಮಾಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಆರ್.ಭಾಸ್ಕರ್ ಕಾಂಗ್ರೆಸ್  ಅಧ್ಯಕ್ಷ ರಿಗೆ ಸವಾಲು ಹಾಕಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು,   ಚುನಾವಣೆ ಸಮಯದಲ್ಲಿ  ಅಭ್ಯರ್ಥಿಗಳ ಗೆಲುವಿಗೆ  ತಮ್ಮ ಕೊಡುಗೆ ಏನು?   ನಿಮ್ಮ ಅಧಿಕಾರಾವಧಿಯಲ್ಲಿ ಪಕ್ಷದ ಬಲವರ್ದನೆಗೆ ಯಾವ ರೀತಿ ಯೋಜನೆಗಳನ್ನು ರೂಪಿಸಿದ್ದೀರಾ ಹಾಗೂ ಮಧುಗಿರಿ ಕ್ಷೇತ್ರಕ್ಕೆ ಎಷ್ಟು ಭಾರಿ ಬಂದು ಪಕ್ಷ ಸಂಘಟನೆ ಮಾಡಿದ್ದೀರಾ ಎಂದು  ತಿಳಿಸಿ ನಂತರ ಕೆ.ಎನ್.ರಾಜಣ್ಣ ವಿರುದ್ದ ಮಾತನಾಡಿ ಎಂದು ಗುಡುಗಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿಕೊಂಡು ಬಂದಿರುವ ಕೆ.ಎನ್.ರಾಜಣ್ಣ ಅವರು ಮೂಲ ಕಾಂಗ್ರೆಸ್ ಹಿನ್ನೆಲೆಯವರು . ಒಬ್ಬ ಜನಪರ ನಾಯಕನ ಮೇಲೆ ಮತ್ತೊಬ್ಬ ನಾಯಕನನ್ನು ಮೆಚ್ಚಿಸಲು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಪಕ್ಷದ ಸಂಘಟನೆಗಾಗಿ ಶ್ರಮಿಸಿ, ಆಗಲಾದರೂ ಜಿಲ್ಲೆಯಲ್ಲಿ  ಪಕ್ಷ   ಸುಭಧ್ರವಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೆ.ಎನ್.ರಾಜಣ್ಣ ಅವರು ಜನರ  ಕಷ್ಟ-ಸುಖಗಳಿಗೆ ಸ್ಪಂದಿಸಿಸುತ್ತಾ ಇಡೀ ಜಿಲ್ಲೆಯಲ್ಲಿ ಅವರದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಅವರಿಗೆ ಅಧಿಕಾರವಿರಲಿ ಇಲ್ಲದಿರಲಿ ಜನರು ಸದಾ ಅವರೊಂದಿಗೆ ಇರುತ್ತಾರೆ. ಇದನ್ನು ಅರಿಯದೆ ಡಿಸಿಸಿ ಬ್ಯಾಂಕಿನ ಅದ್ಯಕ್ಷ ಸ್ಥಾನ ತೊರೆದರೆ ಅವರ ಸುತ್ತಾ ಇರುವೆ ಕೂಡ ಇರುವುದಿಲ್ಲ ಎಂಬ ನಿಮ್ಮ ಹೇಳಿಕೆ ಖಂಡನೀಯ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಇರುವುದರಿಂದಲೇ ನಾವೆಲ್ಲರೂ ಅವರ ಜೊತೆ ಪಕ್ಷದಲ್ಲಿದ್ದೇವೆ. ಒಂದು ವೇಳೆ ಅವರಿಗೆ ಇರುಸು-ಮುರುಸು ಉಂಟು ಮಾಡಿದಲ್ಲಿ ಅವರ ಜೊತೆಯಲ್ಲಿ  ನಾವೆಲ್ಲರೂ  ಪಕ್ಷವನ್ನು ತ್ಯೆಜಿಸುವ ಅನಿವಾರ್ಯತೆ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಿರ್ಗತಿಕ ಕುಟುಂಬಕ್ಕೆ ದಾರಿದೀಪವಾದ ಜಪಾನಂದ ಸ್ವಾಮೀಜಿ

ಪಾವಗಡ ತಾಲ್ಲೂಕಿನ ನೀಲಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಂಕಿಯ ಅವಘಡದಿಂದ ಬೀದಿಗೆ ಬಂದಿದ್ದ ನರಸಿಂಹಪ್ಪ, ಅನಿತಾ ದಂಪತಿಗಳಿಗೆ ಸ್ವಾಮಿ ಜಪಾನಂದ ಜಿ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಕುಟುಂಬದ ಪಾಲಿನ ಅಪದ್ಭಾಂದವರಾಗಿದ್ದಾರೆ.

ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ ದಿನ ನಿತ್ಯ ಬಟ್ಟೆಗಳನ್ನು ಶುದ್ಧಿಗೊಳಿಸಿ ಜೀವನ ಸಾಗಿಸುತ್ತಿದ್ದರು. ಬೆಂಕಿಯ ಅವಘಡ ಜರುಗಿ ಇದ್ದ ಪುಟ್ಟ ಗುಡಿಸಿಲು ಆಹುತಿಯಾಗಿ ಬೂದಿಯಾಯಿತು. ಮನೆಯಲ್ಲಿದ್ದ ಸರ್ವಸ್ವವೂ ಭಸ್ಮವಾಗಿದ್ದವು. ಬಟ್ಟೆ, ಪಾತ್ರೆ ಮತ್ತಿತರ ಸಮಸ್ತ ವಸ್ತುಗಳು ಒಂದು ಕಪಾಟು ಸಮೇತ ಸಂಪೂರ್ಣವಾಗಿ ಕರಕಲಾಗಿದ್ದನ್ನು ಸಮಸ್ತ ಜನತೆ ಮಾಧ್ಯಮದ ಮೂಲಕ ಅರಿಯುವಂತಾಯಿತು. ಈ ಬಗ್ಗೆ ಪಬ್ಲಿಕ್ ಸ್ಟೋರಿ ವರದಿ ಮಾಡಿ, ಕುಟುಂಬ ಸದಸ್ಯರ ಸ್ಥಿತಿಯ ಬಗ್ಗೆ ಸ್ವಾಮೀಜಿಯವರ ಗಮನಕ್ಕೆ ತಂದಿತ್ತು.

ಬಡ ಕುಟುಂಬಕ್ಕೆ ತತ್ ಕ್ಷಣದ  ಆಸರೆಯಾಗಿ ರಾಮಕೃಷ್ಣ ಸೇವಾಶ್ರಮ ಗೃಹೋಪಯೋಗಿ ವಸ್ತುಗಳನ್ನು, ಪಾತ್ರೆಗಳನ್ನು ಮತ್ತು ಚಳಿಯ ಈ ಸ್ಥಿತಿಯಲ್ಲಿ ಮಕ್ಕಳಿಗೆ ಹಾಗೂ ದಂಪತಿಗಳಿಗೆ ನೂತನ ಸ್ವೆಟರ್ಗಳು, ಕಂಬಳಿಗಳು, ಸೀರೆಗಳು, ದವಸ ಧಾನ್ಯಗಳನ್ನು ನೀಡಲಾಯಿತು. ಚುಮು ಚುಮು ಚಳಿಯಲ್ಲಿ ಮೂರು ದಿನಗಳಿಂದ ಉಟ್ಟ ಬಟ್ಟೆಯಲ್ಲಿಯೇ ಇದ್ದಂತಹ ಪುಟ್ಟ ಮಕ್ಕಳ ಮುಖದಲ್ಲಿ ಬೆಚ್ಚನೆಯ ಸ್ವೆಟರ್ ಗಳನ್ನು ಪೂಜ್ಯ ಸ್ವಾಮೀಜಿಯವರೇ ತೊಡಿಸಿದ ಸಂದರ್ಭದಲ್ಲಿ ಆನಂದದ ಸೆಲೆ ಹರಿದು ಬರುತ್ತಿರುವುದನ್ನು ಕಾಣಬಹುದಾಗಿತ್ತು.


ಕೊಟ್ಟ ವಸ್ತುಗಳನ್ನು ಕೊಂಡೊಯ್ಯುವ ಬಗ್ಗೆಯೂ ಚಿಂತಿಸುತ್ತಿದ್ದ ಅವರ ನಿಸ್ಸಹಾಯ ಸ್ಥಿತಿ ಗಮನಿಸಿ ಸಂಸ್ಥೆಯ ವಾಹನದಲ್ಲಿ ಅವರ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆಯನ್ನೂ ಸ್ವಾಮೀಜಿ  ಮಾಡಿದರು.  ಮುಖಂಡ ಕಿರಣ್ ಇದ್ದರು.

ನಾನು ಪ್ರಶಸ್ತಿ ವಾಪಸ್ ಮಾಡುವುದಿಲ್ಲ: ಡಾ ವಿಜಯಾ

Publicstory.in


ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ನನ್ನ ‘ಕುದಿ ಎಸರು’ ಕೃತಿಗೆ ಕೊಟ್ಟಿರುವ ಪ್ರಶಸ್ತಿಯನ್ನು ನಾನು ಹಿಂದಿರುಗಿಸುವುದಿಲ್ಲ ಎಂದು ಲೇಖಕಿ ಡಾ ವಿಜಯಾ ಖಚಿತ ಮಾತುಗಳಲ್ಲಿ ತಿಳಿಸಿದ್ದಾರೆ.

ಇಂದು ‘ಅವಧಿ’ ಅಂತರ್ಜಾಲ ಪತ್ರಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಪ್ರಶಸ್ತಿ ನನಗೆ ವಯಕ್ತಿಕವಾಗಿ ಕೊಟ್ಟ ಪ್ರಶಸ್ತಿ ಅಲ್ಲ. ಇದು ಮಹಿಳಾ ಲೋಕದ ದನಿಗೆ ಕೊಟ್ಟ ಪ್ರಶಸ್ತಿ. ವೈದೇಹಿ ಅವರಿಗೆ ಪ್ರಶಸ್ತಿ ನೀಡಿದ ೧೦ ವರ್ಷಗಳ ನಂತರ ಇನ್ನೊಬ್ಬ ಲೇಖಕಿಗೆ ಈ ಪ್ರಶಸ್ತಿ ಸಿಕ್ಕಿದೆ. ಹಾಗಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದೂ ಸಹಾ ಒಂದು ಪ್ರತಿಭಟನೆಯೇ ಎಂದು ಅವರು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ. ಇದು ಸರ್ಕಾರದ ಪ್ರಶಸ್ತಿ ಅಲ್ಲ ಎಂದ ಅವರು ನಾನು ಇದುವರೆಗೂ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನಾಗಲೀ, ಅತ್ತಿಮಬ್ಬೆ ಪ್ರಶಸ್ತಿಯನ್ನಾಗಲೀ ಸ್ವೀಕರಿಸಿಲ್ಲ. ಆದರೆ ಅಕಾಡೆಮಿಗಳು ನೀಡುವ ಪ್ರಶಸ್ತಿಯನ್ನು ಸ್ವೀಕರಿಸುತ್ತಲೇ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಈ ಕೃತಿಯಲ್ಲೂ ನಾನು ಸಂಘ ಪರಿವಾರವನ್ನೂ ಸಹಾ ನೇರವಾಗಿ ಪ್ರಶ್ನಿಸಿದ್ದೇನೆ. ಈ ಪ್ರಶಸ್ತಿಗಳಿಂದ ನನ್ನ ಮಾತನ್ನು, ನನ್ನ ಹೋರಾಟವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ನಾನು ಯಾವತ್ತೂ ಹೋರಾಟದ ಅಂಗಳದಲ್ಲಿರುವವಳು ಹಾಗೂ ನಿರ್ಭಿಡೆಯ ಮಾತನ್ನಾಡುವವಳು ಎಂದು ಅವರು ನೇರವಾಗಿ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯಿದೆಯ ಔಚಿತ್ಯವನ್ನು ಪ್ರಶ್ನಿಸಿದ ಅವರು ತುರ್ತು ಪರಿಸ್ಥಿತಿಯನ್ನೂ ಮೀರಿದ ಒಂದು ಭಯಾನಕ ಪರಿಸ್ಥಿತಿ ನಮ್ಮ ಮುಂದಿದೆ. ಈ ವ್ಯವಸ್ಥೆಗೆ ಯಾರನ್ನೂ ಕೇಳುವ ಮನಸ್ಸಿಲ್ಲ. ಇದು ಸಂಪೂರ್ಣವಾಗಿ ಸರ್ವಾಧಿಕಾರಿ ಸರ್ಕಾರ ಎಂದು ಆತಂಕ ವ್ಯಕ್ತಪಡಿಸಿದರು.

ಕಾಫ್ಕಾ, ಕಳೆದೋದ ಗೊಂಬೆ ಮತ್ತು ಹುಡುಗಿ

0

ಮನೋಹರ ಪಟೇಲ್


ಬೋಹೀಮಿಯನ್ ಕಾದಂಬರಿಕಾರ ಮತ್ತು ಸಣ್ಣಕಥೆಗಾರ ಫ್ರಾಂಜ್ ಕಾಫ್ಕಾ (1883-1924),
ಒಂದು ದಿನ ಎಂದಿನಂತೆ ಬರ್ಲಿನ್‌ನ ಸ್ಟೆಗ್ಲಿಟ್ಜ್ ಪಾರ್ಕ್‌ನ ಮೂಲಕ ಅಡ್ಡಾಡುತ್ತಿದ್ದಾಗ, ಪಾರ್ಕನಲ್ಲಿ ತನ್ನ ನೆಚ್ಚಿನ ಗೊಂಬೆಯನ್ನು ಕಳೆದುಕೊಂಡಿದ್ದ ಕಾರಣ ಕಣ್ಣೀರು ಹಾಕುತ ಗೊಂಬೆಯನ್ನು ಹುಡುಕುತ್ತಿದ್ದ ಪುಟ್ಟ ಹುಡುಗಿಯನ್ನು ಕಂಡರು.

ಆಗ ಆ ಹುಡುಗಿಯೊಂದಿಗೆ ತಾವೂ ಕೂಡ ಸೇರಿಕೊಂಡು ಗೊಂಬೆಯನ್ನು ಹುಡುಕಲು ವಿಫಲ ಪ್ರಯತ್ನಗಳನ್ನು ಮಾಡಿದ ಕಾಫ್ಕಾ ಕೊನೆಗೆ ತಾವು ಮತ್ತು ಆಕೆ ಮರುದಿನ ಅದೇ ಜಾಗದಲ್ಲಿ ಭೇಟಿಯಾಗಿ ಕಳೆದುಹೋದ ಗೊಂಬೆಯನ್ನು ಪುನಃ ಹುಡುಕುವ ಒಟ್ಟು ನಿರ್ಧಾರಕ್ಕೆ ಬರುತ್ತಾರೆ.

ಮರುದಿನ, ಇಬ್ಬರೂ ಸೇರಿ ಗೊಂಬೆಯನ್ನ ಹುಡುಕಲು ಹೊರಡುತ್ತಾರೆ. ಆದರೆ ಕೊನೆಗೂ ಗೊಂಬೆಯನ್ನು ಕಂಡುಹಿಡಿಯಲು ಆಗುವುದಿಲ್ಲ. ಆಗ ಕಾಫ್ಕಾ ತಮ್ಮ ಜೇಬಿನಲ್ಲಿ ಮುಂಚೆಯೇ ಬರೆದಿಟ್ಟಿಕೊಂಡಿದ್ದ ಪತ್ರವನ್ನು ತೆಗೆದು ಇದು ಗೊಂಬೆ “ಬರೆದ” ಪತ್ರ ಸಿಕ್ಕಿತು ಎಂದು ಕಾಫ್ಕಾ ಆ ಹುಡುಗಿಗೆ ನೀಡಿದರು. ಆ ಪತ್ರದಲ್ಲಿ “ದಯವಿಟ್ಟು ಅಳಬೇಡ” , ನಾನು ಜಗತ್ತನ್ನು ನೋಡಲು ಪ್ರವಾಸಕ್ಕೆ ಹೋಗಿದ್ದೇನೆ. ನನ್ನ ಸಾಹಸಗಳ ಬಗ್ಗೆ ನಾನು ನಿಮಗೆ ಬರೆಯಲಿದ್ದೇನೆ. ” ಎಂದು ಒಕ್ಕಣೆಯಿತ್ತು.

ಹೀಗೆ ಆರಂಭವಾದ ಅವರಿಬ್ಬರ ಕಥೆ ಕಾಫ್ಕಾರ ಕೊನೆಯ ದಿನಗಳವರೆಗೂ ಮುಂದುವರಿದಿತ್ತು.

ಅವರು ಪುನಃ ಭೇಟಿಯಾದಾಗೆಲ್ಲಾ, ಕಾಫ್ಕಾ ಅವರು ತಾವು ಬಹು ಜಾಗೂರುಕವಾಗಿ ಸಂಯೋಜಿಸಿದ ಹುಡುಗಿಯ ಪ್ರೀತಿಯ ಗೊಂಬೆಯ ಸಾಹಸ ಪತ್ರಗಳನ್ನು ಮತ್ತು ಸಂಭಾಷಣೆಗಳನ್ನು ಆಕೆಯೊಂದಿಗೆ ಗಟ್ಟಿಯಾಗಿ ಓದುತ್ತಿದ್ದರುರು, ಅದು ಆ ಪುಟ್ಟ ಹುಡುಗಿಗೆ ಮನಸನ್ನು ಮೋಡಿಮಾಡಿದಂತಾಗುತ್ತಿತ್ತು.

ಅಂತಿಮವಾಗಿ, ಒಂದು ದಿನ ಕಾಫ್ಕಾ ತಾವೇ ಬರ್ಲಿನ್ ನಿಂದ ಖರೀದಿಸಿ ತಂದ ಒಂದು ಗೊಂಬೆಯೊಂದನ್ನು ಆಕೆಗೆ ಕೊಟ್ಟು ಗೊಂಬೆಯ ಕಥೆಯಿರುವ ಒಂದು ಪತ್ರವೊಂದನ್ನು ಆಕೆಗೆ ಓದಿದರು. ಆ ಹುಡುಗಿ “ಇದು ನನ್ನ ಗೊಂಬೆಯಂತೆ ಕಾಣ್ತಾಯಿಲ್ಲ” ಎಂದು ಹೇಳಿದಾಗ. ಕಾಫ್ಕಾ ಆಕೆಗೆ ಮತ್ತೊಂದು ಪತ್ರವನ್ನು ಹಸ್ತಾಂತರಿಸಿದರು, ಅದರಲ್ಲಿ “ನನ್ನ ಪ್ರವಾಸಗಳು, ನನ್ನನ್ನು ಬದಲಾಯಿಸಿಬಿಟ್ಟಿದೆ” ಎಂದು ಬರೆದಿತ್ತು. ಹುಡುಗಿ ಸಂತೋಷದಿಂದ ತನ್ನ ಗೊಂಬೆಯನ್ನು ತಬ್ಬಿಕೊಂಡು ತನ್ನೊಂದಿಗೆ ಮನೆಗೆ ಕರೆದೊಯ್ದಳು.

ತದನಂತರ ಹಲವು ವರ್ಷಗಳ ಬಳಿಕ, ಬೆಳೆದ ದೊಡ್ಡವಳಾದ ಆ ಹುಡುಗಿ ತನ್ನ ಗೊಂಬೆಯಲ್ಲಿ ಎಂದೂ ಗಮನಿಸದ ಬಿರುಕಿನಲ್ಲಿ ಸಿಕ್ಕಿಸಿದ ಸಣ್ಣ ಪತ್ರವೊಂದನ್ನು ಕಂಡುಳು. ಕಾಫ್ಕಾ ಸಹಿ ಮಾಡಿದ್ದ ಆ ಸಣ್ಣ ಪತ್ರದಲ್ಲಿ, “ನೀವು ಪ್ರೀತಿಸುವ ಪ್ರತಿಯೊಂದುವೂ ಕಳೆದುಹೋಗುವ ಸಾಧ್ಯತೆಯಿದೆ, ಆದರೆ ಕೊನೆಯಲ್ಲಿ, ಆ ಪ್ರೀತಿ ಬೇರೆ ರೀತಿಯಲ್ಲಿಯೆ ಮರಳಿಬರುತ್ತದೆ” ಎಂದು ಬರೆದಿತ್ತು.

Image courtesy ; @Kafka’s doll

ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ; ಮೋಹನ್ ಭಾಗವತ್

ಪಾವಗಡ:  ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಆರ್.ಎಸ್.ಎಸ್. ಸರ ಸಂಚಾಲಕ ಮೋಹನ್ ಭಾಗವತ್ ತಿಳಿಸಿದರು

ತಾಲ್ಲೂಕಿನ ಚನ್ನಕೇಶಪುರದಲ್ಲಿ ಬುಧವಾರ ಸಂಜೆ ನಡೆದ ಗ್ರಾಮ ವಿಕಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮಗಳು ವಿಸ್ತಾರಗೊಳ್ಳುತ್ತಿವೆ.  ಗ್ರಾಮಸ್ಥರ ಅಭಿವೃದ್ಧಿಪರ ಚಿಂತನೆ, ಪಾಲ್ಗೊಳ್ಳುವಿಕೆಯಿಂದ ಹಳ್ಳಿಗಳು ಉದ್ಧಾರವಾಗುತ್ತವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರಲ್ಲಿ ಗ್ರಾಮಗಳ ಬಗ್ಗೆ ಸಂಘಟನಾತ್ಮಕ ಚಿಂತನೆಗಳಿರಬೇಕು. ಆಧುನಿಕ ತಂತ್ರಜ್ಞಾನವನ್ನು ಪ್ರಗತಿಗಾಗಿ ಬಳಸಿಕೊಳ್ಳಬೇಕು  ಎಂದರು.

ಗ್ರಾಮದ ಚನ್ನಕೇಶವ ದೇಗುಲದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಸುತ್ತ ಮುತ್ತಲ ಗ್ರಾಮದ ಮಹಿಳೆಯರು ದೇಗುಲದ ಆವರಣದಲ್ಲಿ  ದೀಪಗಳನ್ನು ಬೆಳಗಿಸಿದರು.

ಕಲಾವಿದರು, ಗ್ರಾಮಸ್ಥರು, ವಿದ್ಯಾರ್ಥಿಗಳು ನಡೆಸಿಕೊಟ್ಟ ಜನಪದ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಆರ್.ಎಸ್.ಎಸ್ ಸಹ ಸಂಚಾಲಕ ಪಿ.ಆರ್. ಮುಕುಂದ್, ದತ್ತಾತ್ರೇಯ, ಆನಂದ ರಾವ್ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಪ್ರತಿಭಟನೆಗೆ ನಿರಾಕರಣೆ – ಪೊಲೀಸರೊಂದಿಗೆ ಮುಖಂಡರ ವಾಗ್ವಾದ

ತುಮಕೂರು/ಹಾಸನ: ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಗಳನ್ನು ವಿರೋಧಿಸಿ ಪ್ರಗತಿಪರ ನಾಗರಿಕ ಸಂಘಟನೆಗಳ ಒಕ್ಕೂಟದಿಂದ ಗುರುವಾರ ತುಮಕೂರು, ಹಾಸನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ತುಮಕೂರಿನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರೊಂದಿಗೆ ವಾಗ್ವಾದ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ಸಜ್ಜಾಗಿದ್ದ ಮುಖಂಡರನ್ನು ಸುತ್ತುವರಿದ ನೂರಾರು ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ ಪ್ರತಿಭಟನೆ ಅವಕಾಶ ನೀಡುವುದಿಲ್ಲ ಎಂದರು. ಇದಕ್ಕೆ ಪ್ರಗತಿಪರ ನಾಗರಿಕ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಪೊಲೀಸರಿಗೂ-ಮುಖಂಡರ ನಡುವೆ ವಾಗ್ವಾದ ನಡೆಯಿತು.

ಹಾಸನದಲ್ಲಿ ಸೇರಿದ್ದ ಪ್ರತಿಭಟನಾಕಾರರು

ಪೊಲೀಸರು ಸುತ್ತುವರಿಯುತ್ತಿದ್ದಂತೆಯೇ ಅಲ್ಲಲ್ಲಿ ಚದುರಿದಂತಿದ್ದ ಪ್ರತಿಭಟನಾಕಾರರು ಪೊಲೀಸರತ್ತ ಧಾವಿಸಿದರು. ಆಗ ಮೈಕ್ ಮೂಲಕ 144 ನಿಷೇಧಾಜ್ಞೆ ಜಾರಿಯಲ್ಲಿದೆ. ಗುಂಪು ಸೇರಬಾರದು ಎಂದು ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿ ಕಳಿಸಿದರು.

ಹಾಸನದಲ್ಲಿ‌ ನಿಷೇಧಾಜ್ಞೆ ಉಲ್ಲಂಗಿಸಿ NRC CAA ವಿರೋಧಿಸಿ ಎಡಪಕ್ಷಗಳು ಮತ್ತು ಜಾತ್ಯಾತೀತ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಹಾಸನದಲ್ಲಿ ಸೇರಿದ್ದ ಪ್ರತಿಭಟನಾಕಾರರು

ತುಮಕೂರಿನಲ್ಲಿ ಪಿಯುಸಿಎಲ್ ಜಿಲ್ಲಾಧ್ಯಕ್ಷ ಕೆ.ದೊರೈರಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಸ್ಲಂ ಜನಾಂದೋಲ ಸಂಚಾಲಕ ಎ.ನರಸಿಂಹಮೂರ್ತಿ, ಸಾಮಾಜಿಕ ಕಾರ್ಯಕರ್ತರಾದ ತಾಜುದ್ದೀನ್, ಅತೀಕ್ ಅಹಮದ್, ಸೈಯದ್ ಮುಜಪೀರ್, ಕರ್ನಾಟಕ ಪ್ರಾಂತ ಸಂಘದ ಸಹಸಂಚಾಲಕ ಬಿ.ಉಮೇಶ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಅವರನ್ನು ಪೊಲೀಸರು ಮಾತುಕತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಕರೆದೊಯ್ದರು.
ಎಎಸ್‍ಪಿ ನೇತೃತ್ವದಲ್ಲಿ ಮಾತುಕತೆ ನಡೆಯಿತು.

ತುಮಕೂರಿನಲ್ಲಿ ….

ಪ್ರತಿಭಟಟನೆ ನಮ್ಮ ಹಕ್ಕು ಅದನ್ನು ಹತ್ತಿಕ್ಕುವುದು ಸರಿಯಲ್ಲ. ಸಂವಿಧಾನಬದ್ದವಾಗಿರುವ ಪ್ರತಿಭಟನೆಯ ಹಕ್ಕನ್ನು ನಿಷೇಧಾಜ್ಞೆ ಜಾರಿಗೊಳಿಸಿ ಬೆದರಿಸಿರುವುದು ಖಂಡನೀಯ. ಪ್ರತಿಭಟನೆ ನಡೆಸಲು ನಮಗೆ ಅವಕಾಶ ನೀಡಬೇಕು ಎಂದು ನಾಯಕರು ಪಟ್ಟುಹಿಡಿದರು. ನಂತರ ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿಯಲ್ಲಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಿ ಕಾಯ್ದೆಯನ್ನಾಗಿ ಜಾರಿಗೆ ತರಲು ಹೊರಟಿದೆ. ಸಿಎಎ-2019 ಕಾಯ್ದೆಯಂತೆ ಆಫ್ಘಾನಿಸ್ತಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ದಿಂದ ಬಂದಿರುವ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದವರು ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದು ಕೇವಲ ಐದು ವರ್ಷ ನೆಲೆಸಿದ್ದರೆ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸದೆ ಪೌರತ್ವ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆದಿವಾಸಿಗಳು, ದಲಿತರು, ಬಡವರು, ನಿರಾಶ್ರಿತರು, ದೊಡ್ಡ ಯೋಜನೆಗಳಿಂದ ಸ್ಥಳಾಂತರಗೊಂಡವರು, ವಲಸೆ ಕಾರ್ಮಿಕರು, ಅಲೆಮಾರಿಬುಡಕಟ್ಟು ಸಮುದಾಯಗಳು, ಕಳ್ಳಸಾಗಾಣಿಕೆಯಾದವರು, ಮದುವೆ ನಂತರ ಗಂಡನ ಮನೆಗೆ ಹೋದ ಮಹಿಳೆಯರು ಸೇರಿದಂತೆ ಇವರೆಲ್ಲರೂ ಎನ್.ಆರ್.ಸಿ. ಪೌರತ್ವದ ಆಧಾರಕ್ಕಾಗಿ ಬೇಕಾಗುವ 50 ವರ್ಷಗಳ ದಾಖಲೆಗಳನ್ನು ಪಡೆಯುವುದು ಕಷ್ಟಸಾಧ್ಯವೇ ಸರಿ ಎಂದು ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ಈ ಕ್ರಮ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನ ಆರ್ಟಿಕಲ್ 14 ಮತ್ತು 21ರ ಪ್ರಕಾರ ನೀಡಿರುವ ಸಮಾನತೆ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ ಈಗ ಜಾರಿಗೊಳ್ಳುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‍ಸಿ ಕಾಯ್ದೆ ಮೂಲಭೂತ ಹಕ್ಕುಗಳು, ನೈಸರ್ಗಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.

ಈಗಾಗಲೇ ಅಸ್ಸಾಂನಲ್ಲಿ ಎನ್‍ಆರ್‍ಸಿ ಯಿಂದ 19 ಲಕ್ಷ ಮಂದಿ ಪೌರತ್ವದಿಂದ ವಂಚಿತರಾಗಿದ್ದಾರೆ. ಇದೇ ದೇಶದಲ್ಲಿ ಹುಟ್ಟಿ ಬೆಳೆದು ಮರಣದ ಸಮೀಪದಲ್ಲಿರುವ ಜನರು ಪೌರತ್ವವನ್ನು ಸಾಬೀತುಪಡಿಸಲು ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆಯೂ ಇದೇ ಪರಿಸ್ಥಿತಿ ದೇಶಾದ್ಯಂತ ಉದ್ಭವವಾಗಲಿದೆ. ಈ ಹಿನ್ನೆಲೆಯಲ್ಲಿ ಸಿಎಎ ಮತ್ತು ಎನ್‍ಆರ್‍ಎ ಕಾಯ್ದೆ ಜಾರಿಗೊಳಿಸಬಾರದೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು‌ ಕೋರಿಕೊಂಡಿದ್ದಾರೆ.