Monday, December 29, 2025
Google search engine
Home Blog Page 314

ಸ್ಮಾರ್ಟ್ ಸಿಟಿಯಿಂದ ಸಂಶೋಧನಾ ಕೇಂದ್ರ

ತುಮಕೂರು; ತುಮಕೂರು ತಾಲೂಕು ಅಮಲಾಪುರ(ವಿಜ್ಞಾನ ಗುಡ್ಡ)ದಲ್ಲಿ ಎಂಎಸ್‍ಎಂಇ ಟೆಕ್ನಾಲಜಿ ಸೆಂಟರ್ ಅನ್ನು ಸ್ಥಾಪಿಸಲು ಕೇಂದ್ರ ಸರ್ಕಾರದಿಂದ 100 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.

ಕೌಶಲ್ಯ ತರಬೇತಿಗಳ ರೂಪುರೇಷೆ ಸಿದ್ಧಪಡಿಸುವ ಕುರಿತು ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದಿಂದ ಜಿಲ್ಲೆಯಲ್ಲಿ ಎಂಎಸ್‍ಎಂಇ ಟೆಕ್ನಾಲಜಿ ಸೆಂಟರ್ ಸ್ಥಾಪಿಸಲು 100 ಕೋಟಿ ರೂ.ಗಳು ಮಂಜೂರಾಗಿದ್ದು, ರಾಜ್ಯ ಸರ್ಕಾರವು ಅಮಲಾಪುರ(ವಿಜ್ಞಾನ ಗುಡ್ಡ)ದಲ್ಲಿ ಈಗಾಗಲೇ 15 ಎಕರೆ ಪ್ರದೇಶವನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಈ ಸೆಂಟರ್ ನಲ್ಲಿ ಪ್ರತಿ ವರ್ಷ ಸುಮಾರು 5000 ಅಭ್ಯರ್ಥಿಗಳಿಗೆ ಕೈಗಾರಿಕಾಧಾರಿತ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ನಿರುದ್ಯೋಗಿ ಯುವಕ/ಯುವತಿಯರಿಗಾಗಿ ಉದ್ಯೋಗ ನೀಡಲು ಕೃಷಿ, ರೇಷ್ಮೆ, ತೋಟಗಾರಿಕೆ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ಉತ್ಪಾದಿಸುವ ಮೌಲ್ಯವರ್ಧಿತ ಉತ್ಪನ್ನಗಳನ್ನು ಕ್ಲಸ್ಟರ್ ಮಾದರಿಯಲ್ಲಿ ಸ್ಥಾಪಿಸುವ ಬಗ್ಗೆ 15 ದಿನಗಳೊಳಗಾಗಿ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ಮಾರ್ಟ್ ಸಿಟಿ ವತಿಯಿಂದ 20 ಕೋಟಿ ರೂ.ವೆಚ್ಚದಲ್ಲಿ ತುಮಕೂರು ತಾಲೂಕಿನ ಅಮಲಾಪುರ, ಯಲ್ಲಾಪುರ, ಅರಕೆರೆ, ಅಜ್ಜಪ್ಪನಹಳ್ಳಿ, ವೀರನಕಲ್ಲು, ಸ್ವಾಂದೇನಹಳ್ಳಿ ಮತ್ತು ಮುತ್ಸಂದ್ರ ಗ್ರಾಮಗಳಲ್ಲಿ ಸಂಶೋಧನಾ ಕೇಂದ್ರ ಮತ್ತು ಸ್ಕಿಲ್ ಪಾರ್ಕ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಆಹಾರ ಸಂಸ್ಕರಣ ಘಟಕಗಳಿಗೆ ಹೆಚ್ಚಿನ ಒತ್ತು ನೀಡುವ ದೃಷ್ಠಿಯಿಂದ ಆಹಾರ ಸಂಸ್ಕರಣ ಘಟಕಗಳನ್ನು ಕ್ಲಸ್ಟರ್ ಮಾದರಿಯಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಡೆನ್ಮಾರ್ಕ್ ಮಾದರಿಯಲ್ಲಿ ವಸತಿ ಸೌಕರ್ಯಗಳನ್ನು ಒಳಗೊಂಡಂತೆ 342 ಉತ್ಪನ್ನಗಳನ್ನು ಕ್ಲಸ್ಟರ್ ಮಾದರಿಯಲ್ಲಿ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಅಲ್ಲದೇ ಪ್ರತಿ ಕ್ಲಸ್ಟರ್‍ನಲ್ಲಿ 20 ಉದ್ದಿಮೆದಾರರಂತೆ ಸುಮಾರು 6840 ಉದ್ದಿಮೆಗಳನ್ನು ಸ್ಥಾಪಿಸುವ ಜೊತೆಗೆ ವಸತಿ ಸೌಕರ್ಯವನ್ನು ಕಲ್ಪಿಸಲಾಗುವುದು. ಅಲ್ಲದೇ ಎಂಎಸ್‍ಎಂಇ ಸಾರ್ಥಕ್ ಯೋಜನೆಯಡಿ ಉತ್ಪನ್ನಗಳಿಗೆ ಮೌಲ್ಯವರ್ಧಿತ ಬೆಲೆ ಕಲ್ಪಿಸಿ ಮತ್ತು ಬ್ರಾಂಡ್ ಇಮೇಜ್ ಕಲ್ಪಿಸಿ ಪಾರ್ವಡ್ ಮತ್ತು ಬ್ಯಾಕ್‍ವರ್ಡ್, ಸಾಮಾನ್ಯ ಪ್ಲಾಟ್‍ಪಾರ್ಮ್ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಿಪಟೂರಿಗೆ ವಿದ್ಯುತ್ ಕೊಟ್ಟವರು ಯಾರು?

ತುಮಕೂರು: ಜನಪರ ಹಾಗೂ ಸಮಾಜಮುಖಿ ಅರಸರೆಂದು ಖ್ಯಾತರಾಗಿದ್ದ ಮೈಸೂರು ಸಂಸ್ಥಾನದ 25ನೆಯ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಾಬ್ದಿಯನ್ನು ಡಿಸೆಂಬರ್ 08 ರಂದು ಬೆಳಗ್ಗೆ 10.30ಕ್ಕೆ ತುಮಕುರು ನಗರದ ಅಮಾನಿಕೆರೆ ಮುಂಭಾಗದಲ್ಲಿರುವ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಾ.ಹ.ರಮಾಕುಮಾರಿ ತಿಳಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಮೈಸೂರು ಸಂಸ್ಥಾನಕ್ಕೆ ನೀಡಿದ ಕೊಡುಗೆ ಅಪಾರ. ಸ್ವಾತಂತ್ರ್ಯ ಪೂರ್ವದಲ್ಲೇ ಜನಪರ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತಂದರು. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಮೈಸೂರು ಸಂಸ್ಥಾನಕ್ಕೆ ಸೇರಿದ್ದ ತುಮಕೂರು ಜಿಲ್ಲೆಗೂ ಜಯಚಾಮರಾಜೇಂದ್ರ ಒಡೆಯರ್ ಅವರು ಹಲವು ಬಾರಿ ಭೇಟಿ ನೀಡಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆ, ಕೆ.ಆರ್. ಮಾರುಕಟ್ಟೆ, ಪಾವಗಡ, ಶಿರಾ, ಮಧುಗಿರ ಮತ್ತು ತುರವೇಕೆರೆಯಲ್ಲಿ ಮುನಿಪಲ್ ಪ್ರೌಢಶಾಲೆಗಳ ನಿರ್ಮಾಣ, ತೀತಾ ಜಲಾಶಯ ಮತ್ತು ಬೋರನಕಣಿವೆ ಜಲಾಶಯ ನಿರ್ಮಾಣ, ತುಮಕೂರು ಜಿಲ್ಲೆಯ ಕೊರಟಗೆರೆ, ತಿಪಟೂರು, ಕೆಸರುಮಡು, ಮಧುಗಿರಿ, ಅಮೃತೂರು, ಹೊನ್ನವಳ್ಳಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ಹಲವು ಪಟ್ಟಣಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಹಲವು ದೇವಾಲಯ ನಿರ್ಮಾಣ ಮಾಡಿಸಿದರು. ಜಯಂಗಲಿ ನದಿಗೆ ಸೇತುವೆ ನಿರ್ಮಾಣ ಮಾಡುವಂತೆ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ಸ್ಮರಿಸಬೇಕಗಿದೆ ಎಂದು ವಿವರಿಸಿದರು.

ಯಚಾಮರಾಜೇಂದ್ರ ಒಡೆಯರ್ ತುಮಕೂರು ಜಿಲ್ಲೆಗೆ ನೀಡಿರುವ ಕೊಡುಗೆ ಸಂಬಂಧ ಕಿರುಹೊತ್ತಿಗೆ ಹೊರತರಲಾಗಿದೆ. ಲೇಖಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್ ಕಿರುಹೊತ್ತಿಗೆ ಬರೆದಿದ್ದಾರೆ. ಜಿಲ್ಲೆಗೆ ಸಂಬಂಧಿಸಿದ ದಾಖಲೆಗಳು ದೊರೆಯುವ ಈ ಕೃತಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಜಯಚಾಮರಾಜೇಂದ್ರ ಒಡೆಯರ್ ಅಳಿಯ ಆರ್. ರಾಜಚಂದ್ರ ಮಂಟೇಸ್ವಾಮಿ ಮಠದ ಎಂ.ಎಲ್. ಶ್ರೀಕಂಠಸಿದ್ದಲಿಂಗರಾಜೇ ಅರಸ್, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಲಕ್ಷ್ಮೀಕಾಂತರಾಜೇ ಅರಸ್ ಭಾಗವಹಿಸುವರು.
ಮಾಧ್ಯಮಗೋಷ್ಟಿಯಲ್ಲಿ ಕಸಾಪ ಕೋಶಾಧ್ಯಕ್ಷ ಬಿ.ಮರುಳಯ್ಯ, ಲೇಖಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಣಿಚಂದ್ರಶೇಖರ್ ಉಪಸ್ಥಿತರಿದ್ದರು.

ಡಿ.11ಕ್ಕೆ ಇಸ್ರೋದಿಂದ ಮತ್ತೊಂದು ಉಡಾವಣೆ

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹಲವಾರು ಮೈಲಿಗಳನ್ನು ನಿರ್ಮಿಸಿರುವ ಇಸ್ರೋ ಮತ್ತೊಂದು ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಡಿಸೆಂಬರ್ 11 ರಂದು ಸಿಂಥೆಟಿಕ್ ಅಪಾರ್ಚರ್ ರೇಡಾರ್ನೊಂದಿಗೆ ರಿಸ್ಯಾಟ್-2ಬಿಆರ್1 ಎಂಬ ಕಣ್ಗಾವಲು ಉಪಗ್ರಹ ಹಾಗೂ 9 ವಾಣಿಜ್ಯ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದಾಗಿ ಇಸ್ರೋ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ರಿಸ್ಯಾಟ್-2ಬಿಆರ್1 ರೇಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು, 615 ಕೆ.ಜಿ ತೂಕ ಹೊಂದಿದೆ. ಪೋಲಾರ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್(ಪಿಎಸ್ಎಲ್ವಿ) ರಾಕೆಟ್ ಮೂಲಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಗುತ್ತದೆ. ವಿದೇಶಗಳ ನಾಲ್ಕು ಉಪಗ್ರಹಗಳನ್ನು ಉಚಿತವಾಗಿ ರಿಸ್ಯಾಟ್ ಜೊತೆ ನಿಗದಿತ ಕಕ್ಷೆಗೆ ಸೇರಿಸಲಾಗುತ್ತದೆ ಎಂದು ಇಸ್ರೋ ಮಂಗಳವಾರ ತಿಳಿಸಿದೆ.
ರಿಸ್ಯಾಟ್ ಕಣ್ಗಾವಲು ಉಪಗ್ರಹಗಳ ಸರಣಿಯಾಗಿದೆ.ರಿಸ್ಯಾಟ್-2ಬಿಆರ್1 ಉಡಾವಣೆಯ ನಂತರ ಇದೇ ಸರಣಿಯ ರಿಸ್ಯಾಟ್-2ಬಿಆರ್2 ಅನ್ನು ಕೆಲವೇ ದಿನಗಳ ಭೂಸ್ಥಿರ ಕಕ್ಷೆಯಲ್ಲಿ ನೆಲೆಗೊಳಿಸುವುದಾಗಿ ಇಸ್ರೋ ಹೇಳಿದೆ.ಇದೇ ವರ್ಷ ಮೇನಲ್ಲಿ 615 ಕೆ.ಜಿ ತೂಕದ ರಿಸ್ಯಾಟ್-2ಬಿ ಕಣ್ಗಾವಲು ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು.

ಹುಣುಸೆ ಬೆಳೆಗಾರರ ಕೈ ಹಿಡಿಯಲಿ ಸ್ಮಾರ್ಟ್ ಸಿಟಿ‌ಯ ಸ್ಕಿಲ್ ಪಾರ್ಕ್

0

ಮಹಾವೀರ ಜೈನ್

ತುಮಕೂರು; ತುಮಕೂರು ಜಿಲ್ಲಾ ರೈತರ ಕಷ್ಟಗಳಿಗೆ ಫುಡ್ ಪಾರ್ಕ್ಸ್ ದಾರೀ ದೀಪವಾಗಬಹುದು ಎಂಬ ಅಸೆ ಕಮರಿ ಹೋಗಿದೆ. ಈಗ ಮತ್ತೊಂದು ಹೊಸ ಅಸೆ ಹುಟ್ಟಿದೆ. ಅದುವೇ ಸ್ಕಿಲ್ ಪಾರ್ಕ.

ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷರಾದ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ರಾಕೇಶ್ ಕು‌ಮಾರ್ ಅವರುಗಳು ಸಂಸದ‌ ಜಿ.ಎಸ್.ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಆರಂಭಿಸಲು ಹೊರಟಿರುವ ಸ್ಕಿಲ್ ಪಾರ್ಕ್ ನಿಜಕ್ಕೂ ಕಾರ್ಯರೂಪಕ್ಕೆ ಬರುವುದೇ ಎಂಬುದನ್ನು ನೋಡಬೇಕಾಗಿದೆ.

ಕೃಷಿ, ಹೈನೋದ್ಯಮ, ಕುಂಬಾರಿಕೆ, ಬಡಗಿ, ತೋಟಗಾರಿಕೆ ಹೀಗೆ‌ ಸುಮಾರು 342 ಉತ್ಪನ್ನಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ರಪ್ತೋದ್ಯಮ, ಮಾರುಕಟ್ಟೆಗೆ ಸಂಬಂಧಿಸಿದಂತೆ ಕ್ಲಸ್ಟರ್ ಗಳನ್ನು ಆರಂಭಿಸಲು ತುಮಕೂರು ಸ್ಮಾರ್ಟ್ ಸಿಟಿ ಮುಂದಾಗಿರುವುದು ಸರಿ. ಇದು ಹೇಗಿರಬೇಕು ಎಂಬ ರೈತರನ್ನೂ ಕರೆದು ಚರ್ಚಿಸಬೇಕು.

ಸ್ಕಿಲ್ ಪಾರ್ಕನ ಉದ್ಧೇಶಗಳು ಸ್ವರ್ಗ ಎನ್ನುವ ರೀತಿ ಇದೆ. ಅದರೆ ಅಲ್ಲಿಗೆ ಕರೆದುಕೊಂಡು ಹೋಗುವವರು ಯಾರು.
ತುಮಕೂರು ಜಿಲ್ಲೆಯ ರೈತರು ವಾರ್ಷಿಕ ಬೆಳೆಗಳಾದ ತೆಂಗು, ಅಡಿಕೆ, ಮಾವು, ಹಲಸು, ಮುಖ್ಯವಾಗಿ ಹುಣಸೆ ಹಣ್ಣು ಸೀಸನ್ ನೋಡಿಕೊಂಡು ತರಕಾರಿ, ಕೆಲವು ಹೂವು ಬೆಳೆದರೆ ಮಳೆ ಆಶ್ರಯದಲ್ಲಿ ರಾಗಿ, ಜೋಳ, ದ್ವಿದಳ ಏಕದಳ ಧಾನ್ಯಗಳನ್ನು ಬೆಳೆಯುತ್ತಾರೆ.

ತುಮಕೂರು ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಯಾಗಲು ನೂರಾರು ಕೋಟಿ ಕಾಮಗಾರಿ ಗಳು ಕಣ್ಣು ಕುಕ್ಕವಂತೆ ನಡೆಯುತ್ತಿವೆ. ಜಿಲ್ಲೆಯ ರೈತರುಗಳ ಅಭಿವೃದ್ಧಿಯನ್ನು ಗುರಿಯಾಗಿ ಇಟ್ಟುಕೊಂಡು ಸಿಲ್ಕ ಪಾರ್ಕ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಕಂಪನಿಯವರು ತಿರ್ಮಾನಿಸಿ ಪೂರಕವಾದ ಯೋಜನೆಗಳನ್ನು ರೂಪಿಸುತ್ತಿರುವ ಬಗ್ಗೆ ಮಾಹಿತಿ ಹರಡಿದೆ.

ಅಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಸಮಗ್ರವಾದ ಯೋಜನೆಯನ್ನು ರೈತರ ಪರವಾಗಿ ರೂಪಿಸ ಬೇಕಾಗುತ್ತದೆ.
ಉದಾಹರಣೆಯಾಗಿ ದಕ್ಷಿಣ ಭಾರತದಲ್ಲಿ ತುಮಕೂರು ಹುಣಸೆ ಹಣ್ಣಿನ ಮಾರುಕಟ್ಟೆ ಎರಡನೇ ಸ್ಥಾನದಲ್ಲಿದೆ. ಬೆಲೆಗಳು ಪ್ರತಿವರ್ಷ ಕುಗ್ಗುವುದು ಏರುವುದು ನಡೆದು ಬೆಳೆಗಾರರಿಗೆ ನೆಮ್ಮದಿ ನೀಡದೇ ಅತಂಕ ತರುತ್ತದೆ.

ಹುಣಸೆ ಹಣ್ಣಿನ ಬೆಳೆ ಪ್ರಾರಂಭವಾದ ಕೂಡಲೇ ತಂತ್ರಜ್ಞಾನ ವನ್ನು ಉಪಯೋಗಿಸಿಕೊಂಡು ಇಳುವರಿ ಅಂದಾಜು ಮಾಡಬೇಕು. ಸ್ಥಳೀಯ ಮಾರುಕಟ್ಟೆ ಬೇಡಿಕೆಗಿಂತ ಹೆಚ್ಚು ಬೆಳೆಯಿದ್ದದು ಕಂಡು ಬಂದರೆ ಅದನ್ನು ಬೇಡಿಕೆ ಹೆಚ್ಚುಯಿರುವ ಬೇರೆ ಮಾರುಕಟ್ಟೆಗೆ ಕಳುಹಿಸುವಯೋಜನೆಯನ್ನು ರೂಪಿಸ ಬೇಕು ಎನ್ನುತ್ತಾರೆ ಹೋಸದಾಗಿ ಕೃಷಿ ನಿರತ ಯುವ ಕೃಷಿಕರು.

ಹುಣಸೆ ಹಣ್ಣಿನ ಒಂದಕ್ಕೆ ಅಲ್ಲದೇ ಇತರೆ ಬೆಳೆಗಳಿಗೆ ಈ ರೀತಿಯ ಕ್ರಮವನ್ನು ಅಳವಡಿಸಿ ಕೊಳ್ಳ ಬೇಕು ಎನ್ನುತ್ತಾರೆ.

ಸಿಲ್ಕ್ ಪಾರ್ಕನ ಮೂಲ ಉದ್ದೇಶ ತುಮಕೂರು ಜನಕ್ಕೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸ ಬೇಕು ಎನ್ನುವ ಗುರಿಯಿಂದ ರೈತರ ಹೆಸರಿನಲ್ಲಿ ಸಿಲ್ಕ್ ಪಾರ್ಕ ನಿರ್ಮಾಣವಾಗುತ್ತಿದ್ದರೆ ಕೃಷಿಕರಿಗೆ ಉಪಯೋಗವಿಲ್ಲ. ಇದು ಮತ್ತೊಂದು ಫುಡ್ ಪಾರ್ಕ ಅಗಿ ದೇಶ ವಿದೇಶಗಳಲ್ಲಿ ಪ್ರಚಾರಕ್ಕೆ ಮಾತ್ರ ಸೀಮಿ ವಾಗುತ್ತದೆ. ಅದು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದರ ರೂವಾರಿಗಳ ಮೇಲಿದೆ.

ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ

ಮಧುಗಿರಿ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮೀಣ ಶೈಕ್ಷಣಿಕ , ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿ ದೇವಿ ಉದ್ಘಾಟಿಸಿದರು

ಮಧುಗಿರಿ : ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕೆಂದು ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿ ದೇವಿ ತಿಳಿಸಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮೀಣ ಶೈಕ್ಷಣಿಕ , ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯದ ಬಗ್ಗೆ ಯಾರೂ ಕಡಗಣನೆ ಮಾಡಬಾರದು ಎಂದು ತಿಳಿಸಿ, ಮಹಿಳೆಯರಲ್ಲಿ ಕಾಡುವ ರಕ್ತ ಹೀನತೆ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕೆಂದರು. ಬಡ ರೋಗಿಗಳಿಗೆ ಉಚಿತ ಆರೋಗ್ಯ ಶಿಬಿರಗಳು ವರದಾನವಾಗಲಿವೆ ಎಂದರು.ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸುವುದಕ್ಕೆ ಸಂಸ್ಥೆಯು ಮುಂದಾಗಿರುವುದು ಶ್ಲಾಘನೀಯ ಎಂದರು. ಇದರ ಸದುಪಯೋಗ ಜನರು ಪಡೆದುಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ 300 ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಔಷಧವನ್ನು ಪಡೆದುಕೊಂಡರು.

ಡಾ.ಶಿವಪ್ರಸಾದ್ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷೆ ಮೋಹನ್ ಕುಮಾರಿ, ಪುರಸಭೆ ಮುಖ್ಯಾಧಿಕಾರಿ ಅಮರ್ ನಾರಾಯಣ್, ಆರೋಗ್ಯ ನಿರೀಕ್ಷಕ ಬಾಲಾಜಿ,ವೈದ್ಯರಾದ ರತ್ನಾವತಿ, ಶ್ರೀನಿವಾಸ್ ಯಾದವ್, ನವೀನ್ ಕುಮಾರ್, ತಾ.ಪಂ.ಮಾಜಿ ಸದಸ್ಯ ಶಾಂತಬಾಯಿ ಇದ್ದರು.

ಇಂದು ತಿಪಟೂರಿನಲ್ಲಿ ಪ್ರತಿಭಟನೆ

ತಿಪಟೂರು; ದೇಶದ‌ ವಿವಿಧೆಡೆ ನಡೆದ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಅಗ್ರಹಿಸಿ ನಗರ ಸಬೆ ವೃತ್ತದ ಬಳಿ
ದಿನಾಂಕ 5-12-2019 ಗುರುವಾರ ತಿಪಟೂರಿನ ನಗರಸಭಾ ವೃತ್ತದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅತ್ಯಾಚಾರ ನಡೆಸಿ ಕೊಲೆಗೈದಿರುವ ಪೈಶಾಚಿಕ ಕೃತ್ಯವನ್ನು ಖಂಡಿಸಿ ಅರೋಪಿಗಳಿಗೆ ಗಲ್ಲು ಶಿಕ್ಷೆಗೆ ಅಗ್ರಹಿಸಿ ತಿಪಟೂರು ನಗರದ ನಗರಸಭಾ ವೃತ್ತದ ಬಳಿ ಸಂಜೆ 6 ಗಂಟೆಗೆ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ,ಈ ಹೋರಾಟದಲ್ಲಿ ಸೌಹಾರ್ದ ತಿಪಟೂರು, ಜನಸ್ಪಂದನ ಟ್ರಸ್ಟ್, ಭಾರತೀಯ ವೈದ್ಯಕಿಯ ಸಂಘ ಕರ್ನಾಟಕ ರಾಜ್ಯ ರೈತಸಂಘ , ಸಿ ಐ ಟಿ ಯು ಮುಸ್ಲಿಂ ಜಮಾಯತ್ ಕರ್ನಾಟಕ ರಕ್ಷಣಾ ವೇದಿಕೆ , ಹಸಿರು ಸೇನೆ, ಬೆಲೆ ಕಾವಲು ಸಮಿತಿ, ಭೂಮಿ ಸಾಂಸ್ಕೃತಿಕ ಅಧ್ಯಯನ ಕೇಂದ್ರ , ದಲಿತ ಸಾಹಿತ್ಯ ಪರಿಷತ್ , ಇನ್ನರ್ ವೀಲ್, ದಲಿತ ಸಂಘರ್ಷ ಸಮಿತಿ, ಭೌದ್ದ ಮಹಾ ಸಭಾ ಅಂಭೇಡ್ಕರ್ ಸೇನೆ, ಜಯಕರ್ನಾಟಕ, ದಕ್ಷಿಣ ಒಳನಾಡು ನೀರಾವರಿ ಸಮಿತಿ, ಕಲ್ಪತರು ಮಹಿಳಾ ಸಂಸ್ಥೆ, ಜೈ ಭಾರತ್ ಯುವ ಸೇನೆ ಸೇರಿದಂತೆ ಹಲವಾರು ಜನಪರ ಸಂಘಟನೆಗಳು ಭಾಗವಹಿಸುತ್ತಿದ್ದು ತಾವುಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿವೆ ಎಂದು ಪ್ರಕಟಣೆ ತಿಳಿಸಿದೆ.
ಸೌಹಾರ್ಧ ತಿಪಟೂರು

ಚಡ್ಡಿ ಅಂದರೆ ಈಗ ಬೇರೆ ಅರ್ಥ ಇದೆ: ಬರಗೂರು

ತುಮಕೂರು: ಸಾವೇ ಸರ್ವಾಧಿಕಾರಿ, ಸಾವೇ ನೀನೇಕೆ ಸಾಯುವುದಿಲ್ಲ ಎಂದು ನಾನು ಬಹುಕಾಲ ಪ್ರಶ್ನಿಸಿಕೊಂಡಿದ್ದೇನೆ ಎಂದು ನಾಡೋಜ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಹಮ್ಮಿಕೊಂಡಿದ್ದ ಕವಿ ಕೆ.ಬಿ.ಸಿದ್ದಯ್ಯ ಕಾವ್ಯ ಗೌರವ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆ.ಬಿ.ಸಿದ್ದಯ್ಯಅವರಿಗೆ ಅಪಘಾತವಾದಾಗ ನಾನು ಶಿವಮೊಗ್ಗದ ಸಿನಿಮಾ ಚಿತ್ರೀಕರಣದಲ್ಲಿದ್ದೆ. ಅವರನ್ನು ನೋಡಬೇಕು ಎನ್ನುವ ಹೊತ್ತಿಗೆ ಅವರು ನಿಧನರಾಗಿದ್ದಾರೆ ಎಂಬ ಸುದ್ಧಿ ಬಂತು. ಕಳೆದ ಒಂದು ತಿಂಗಳಲ್ಲಿ ನಾಲ್ವರು ಸಾಹಿತಿಗಳನ್ನು ಕಳೆದುಕೊಂಡಿದ್ದೇವೆ. ಅದರಲ್ಲಿ ಚನ್ನಣ್ಣ ವಾಲೀಕರ್ ಕೂಡ ಒಬ್ಬರಾಗಿದ್ದಾರೆ ಎಂದರು.

ನನಗೂ ಕೆ.ಬಿ.ಸಿದ್ದಯ್ಯ ಅವರಿಗೂ ಅಷ್ಟೇನೂ ಒಡನಾಟವಿರಲಿಲ್ಲ. ಬಹಿರಂಗದ ಗೆಳೆಯರಾಗಿರಲಿಲ್ಲ. ಬಹಿರಂಗದ ಗೆಳೆಯರು ಬೇಗ ಮುನ್ನೆಲೆಗೆ ಬರುತ್ತಾರೆ. ಆದರೆ ನಾನು ಅಂತರಂಗದ ಗೆಳೆಯ. ಹಾಗಾಗಿ ಹೆಚ್ಚು ಪರಿಚಿತನಲ್ಲ. ಅಂದರೆ ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದಲ್ಲ ಎಂದರು.

ತುಮಕೂರು ಆರ್ಟ್ಸ್ ಕಾಲೇಜಿಗೆ ನಾನು ಹೊಸದಾಗಿ ಅಧ್ಯಾಪಕನಾಗಿ ಬಂದಾಗ ಕೆ.ಬಿ.ಸಿದ್ದಯ್ಯ ನನ್ನ ವಿದ್ಯಾರ್ಥಿ. ನಾನು ಕೆಲವು ತಿಂಗಳು ಅವರಿಗೆ ಪಾಠ ಮಾಡಿದ್ದೇನೆ. ಅದು ಬಿಟ್ಟರೆ ಬಂಡಾಯ ಸಾಹಿತ್ಯ ಸಂಘಟನೆ ಸ್ಥಾಪನೆಯಾದಾಗ ನಾನು ರಾಜ್ಯ ಸಂಚಾಲಕನಾಗಿದ್ದೆ. ಕೆ.ಬಿ.ಸಿದ್ದಯ್ಯ ತುಮಕೂರು ಜಿಲ್ಲಾ ಸಂಚಾಲಕರಾಗಿದ್ದರು. ಹಾಗಾಗಿ ಸಂಘಟನೆಯ ಮೂಲಕ ಪರಿಚಿತರಾಗಿದ್ದರು. ಇದೇ ಕಾರಣಕ್ಕಾಗಿಯೇ ಬಂಡಾಯ ಸಾಹಿತ್ಯ ಸಂಘಟನೆಯ ಮೂಲಕ ಕೆ.ಬಿ.ಸಿದ್ದಯ್ಯನವರಿಗೆ ಕಾವ್ಯ ಗೌರವವನ್ನು ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

:ಕೆ.ಬಿ.ಸಿದ್ದಯ್ಯ ಸಾಮಾನ್ಯವಾಗಿ ಕಾರ್ಯಕ್ರಮಗಳಿಗೆ ಬಂದು ಸಭಿಕರಾಗಿ ಕುಳಿತುಕೊಳ್ಳುವುದು ತುಂಬಾ ಅಪರೂಪ ಎಂದು ನನ್ನ ಗೆಳೆಯರು ಹೇಳುತ್ತಿರುತ್ತಾರೆ. ಆದರೆ ನಾನು ಇದೇ ಸಭಾಂಗಣದಲ್ಲಿ ನಡೆದ ಮೂರು ಸಮಾರಂಭಗಳಲ್ಲಿ ಸಭಿಕರಾಗಿ ಬಂದು ಕುಳಿತಿದ್ದಾರೆ. ಹೀಗಾಗಿಯೇ ಸಿದ್ದಯ್ಯ ಬಂದಿರುವುದು ತುಮಕೂರು ಬಂದಂತೆ ಎಂದು ಸಭೆಯಲ್ಲೇ ಹೇಳುತ್ತಿದ್ದೆ ಎಂದು ಸ್ಮರಿಸಿಕೊಂಡರು.

ಹಿಂದೆ ದೇವರಾಜ ಅರಸು ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಕೊಡುವ ಪದ್ದತಿ ಇತ್ತು. ಆಗ ಗ್ರಾಮ ಗ್ರಾಮಗಳಿಗೆ ಹೋಗಿ ದಲಿತ ಕೇರಿಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ಶಿವಾಜಿ ಕಾರ್ಣಿಕರ್ ಅವರನ್ನು ಗುರುತಿಸಿದ್ದೆವು. ಅವರು ಚೆಡ್ಡಿಯಲ್ಲಿದ್ದರು. ಚಡ್ಡಿ ಅಂದರೆ ಈಗ ಬೇರೆ ಅರ್ಥ ಇದೆ. ಅಂತಹವರ ಆಯ್ಕೆಯನ್ನು ಕೇವಲ 13 ನಿಮಿಷದಲ್ಲಿ ಮಾಡಿದ್ದೆವು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಪ್ರಶಸ್ತಿಯನ್ನು ವಿತರಣೆ ಮಾಡಿದ್ದರು. ಮತ್ತೊಂದು ಘಟನೆಯೆಂದರೆ ಕೋಣಂದೂರು ಲಿಂಗಪ್ಪ ಅವರಿಗೆ ಪ್ರಶಸ್ತಿಯನ್ನು ನೀಡಿದೆವು. ಅದಕ್ಕೆ ಕೆ.ಬಿ.ಸಿದ್ದಯ್ಯ ಕೂಡ ಸಮ್ಮತಿ ಸುಚಿಸಿದ್ದರು. ಪ್ರಶಸ್ತಿ ಸಮಾರಂಭದಲ್ಲಿ ಸ್ವತಃ ಯು.ಆರ್.ಅನಂತಮೂರ್ತಿ ಸಭಿಕರಾಗಿ ಬಂದು ಕೂತಿದ್ದರು. ಆಯ್ಕೆ ಸಮಿತಿಯಿಂದ ಕೆ.ಬಿ.ಸಿದ್ದಯ್ಯ ಕೂಡ ಬಂದಿದ್ದರು ಎಂದು ಸ್ಮರಿಸಿದರು.

ತುಮಕೂರು ಸ್ಮಾರ್ಟ್ ಸಿಟಿ ಪರಿಶೀಲನಾ ತಂಡಕ್ಕೆ ಹಾಕಿರುವ ಷರತ್ತುಗಳೇನು ಗೊತ್ತಾ ನಿಮಗೆ?

ತುಮಕೂರು ನಗರದಲ್ಲಿ ನಡೆಸಿದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗಾಗಿ ನೇಮಕ ಮಾಡಿರುವ ಸ್ಮಾರ್ಟ್ ಸಿಟಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿಗೆ ಹಲವು ಷರತ್ತುಗಳನ್ನು ಹಾಕಲಾಗಿದೆ.

ಈ ಸಮಿತಿಯೂ ಯಾವುದೇ ಗೌರವಧನ ಸ್ವೀಕರಿಸದೇ ಕೆಲಸ ಮಾಡಬೇಕಾಗಿದೆ. ಆದರೆ ಕಾಮಗಾರಿ ಗುಣಮಟ್ಟ ಮತ್ತಿತರರ ಕಾರಣಗಳಿಗಾಗಿ ತಜ್ಷರನ್ನು ನೇಮಕ ಮಾಡಿಕೊಂಡರೆ ಮಾತ್ರ ಅವರಿಗೆ ಗೌರವ ಧನ ನೀಡಲಾಗುವುದು ಎಂದು ತಿಳಿಸಲಾಗಿದೆ.

ಬೆಂಗಳೂರಿನ ಕಾವೇರಿ ಭವನದಲ್ಲಿ ನಡೆದ ಸಭೆಯಲ್ಲಿ ಈ ಷರತ್ತುಗಳನ್ನು ಒಳಗೊಂಡು ಪರಿಶೀಲನಾ ಸಮಿತಿಯನ್ನು ನೇಮಕ ಮಾಡಲಾಗಿದೆ, ಈ ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜ್, ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್, ಸಮಿತಿ ಅಧ್ಯಕ್ಷ ಜಯಪ್ರಕಾಶ್ ಇದ್ದರು.

ಈ ಸಮಿತಿಯು ಯಾವಾಗಲೂ ಕಾರ್ಯತತ್ಪರವಾಗಿರುವುದಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳು, ಕೆಲಸದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರು ಬಂದರೆ ಅಥವಾ ಸಂಸದರು, ಶಾಸಕರು ಆರೋಪ ಮಾಡಿದರೆ ಅಂಥಹ ಕಾಮಗಾರಿಗಳ ಪಟ್ಟಿಯನ್ನು ಮಾತ್ರ ಪರಿಶೀಲನೆ ಮಾಡಿ ವರದಿ ನೀಡುವ ಅಧಿಕಾರ ನೀಡಲಾಗಿದೆ.
ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಹೊರಗಿನ ಹೆಸರಾಂತ ತಜ್ಞರು ಅಥವಾ ಸಂಸ್ಥೆಗಳನ್ನು ನೇಮಿಸಿಕೊಂಡ ಅವರಿಂದ ವರದಿ ಪಡೆಯುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.

ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಯಾವುದೇ ಅಧಿಕಾರಿಯನ್ನು ಸ್ಥಳಕ್ಕೆ ಕರೆದು ವಿವರಣೆ ಪಡೆಯುವ, ಯಾವುದೇ ದಾಖಲೆಯನ್ನು ಪರಿಶೀಲಿಸುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.

ಬೇಕಾಬಿಟ್ಟಿ, ಅನಗತ್ಯ ಕಾಮಗಾರಿಗಳಿಗೆ ತಡೆ ಹಾಕುವ ಅಥವಾ ಅಂತಹ ಕಾಮಗಾರಿಗಳನ್ನು ಕೈ ಬಿಡುವಂತೆ ಶಿಫಾರಸು ಮಾಡುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.

ಮಹಾನಗರ ಪಾಲಿಕೆಯ ಸದಸ್ಯರಿಗೆ ಯಾವುದೇ ಹಕ್ಕು ನೀಡಿಲ್ಲ. ಮಹಾಪಾಲಿಕೆ ಸಾಮಾನ್ಯಸಭೆಯಲ್ಲಿ ಯಾವುದಾದರೂ ಕಾಮಗಾರಿ ಅಥವಾ ಯೋಜನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ಅಂಥಹ ವಿಷಯಗಳಲ್ಲೂ ಈ ಸಮಿತಿಯು ತನಿಖೆ ಮಾಡಬಹುದೇ ಅಥವಾ ಪಾಲಿಕೆಯು ತನಿಖೆ ಮಾಡುವಂತೆ ನೇರವಾಗಿ ಸಮಿತಿಗೆ ಸೂಚಿಸಬಹುದೇ ಎಂಬ ಬಗ್ಗೆ ಯಾವುದೇ ಉಲ್ಲೇಖ ಇಲ್ಲವಾಗಿದೆ.

ಪಾಲಿಕೆಗೂ ಅಧಿಕಾರ ನೀಡಬೇಕು


ಸ್ಮಾರ್ಟ್ ಸಿಟಿ ಕಾಮಗಾರಿ ವಿಷಯದಲ್ಲಿ, ಯೋಜನೆಗಳ ವಿಷಯದಲ್ಲಿ ಈಗಾಗಲೇ ನೇಮಕಗೊಂಡಿರುವ ಸಮಿತಿಯಿಂದ ತನಿಖೆ ನಡೆಸಿ ಆ ಬಗ್ಗೆ ವರದಿ ತರಿಸಿಕೊಳ್ಳುವ ಅಧಿಕಾರವನ್ನು ಪಾಲಿಕೆಗೆ ನೀಡಬೇಕು ಎಂದು ಚಿಕ್ಕಪೇಟೆ ವಾರ್ಡ್ ಸದಸ್ಯ ಕುಮಾರ್ ಪ್ರತಿಕ್ರಿಯಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಸಂಗ್ರಹಿಸಿದ್ದ ಪೈಪ್ ಗಳು ಭಸ್ಮ

ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿ ದಾಸ್ತಾನು ಮಾಡಲಾಗಿದ್ದ ಸಾವಿರಾರು ಪಿವಿಸಿ ಪೈಪ್ ಗಳು ಸುಟ್ಟು ಭಸ್ಮವಾಗಿರುವ ಘಟನೆ ಬುಧವಾರ ಮುಂಜಾನೆ 2 ಗಂಟೆ ಸುಮಾರಿನಲ್ಲಿ ಸಂಭವಿಸಿದೆ.

ಸುಮಾರು ನಾಲ್ಕು ಲಾರಿ ಲೋಡ್ ಪಿವಿಸಿ ಪೈಪ್ ಗಳು ಬೆಂಕಿಯಲ್ಲಿ ಬೂದಿಯಾಗಿವೆ. ಯಾವ ಕಾರಣಕ್ಕಾಗಿ ಬೆಂಕಿ ಹೊತ್ತಿಕೊಂಡಿದೆ ಎಂಬುದು ತಿಳಿದು ಬಂದಿಲ್ಲ.

ಪಿವಿಸಿ ಪೈಪ್ ಗಳು ಹೊತ್ತಿಕೊಂಡು ಉರಿಯುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಒಂಚು ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದರೂ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ.

ತುಮಕೂರು ನಗರದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಮೀಪ ಉಪ್ಪಾರಹಳ್ಳಿ ಮೇಲ್ಸೇತು ಪಕ್ಕದಲ್ಲಿ ಪಿವಿಸಿ ಪೈಪ್ ಗಳನ್ನು ದಾಸ್ತಾನು ಮಾಡಲಾಗಿತ್ತು. ಈ ಪೈಪ್ ಗಳು ಬೆಂಕಿಯಲ್ಲಿ ಹೊತ್ತಿ ಉರಿಯುವ ದೃಶ್ಯಗಳನ್ನು ಕೆಲವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಬಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನೋಡ ನೋಡುತ್ತಿದ್ದಂತೆಯೇ ಎಲ್ಲಾ ನಾಲ್ಕು ಲೋಡು ಪೈಪ್ ಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ. ಇಲ್ಲಿಯೇ ಸ್ಮಾರ್ಟ್ ಸಿಟಿ ಕಚೇರಿಯೂ ಇದೆ.

ಆರಂಭಿಕ ಬಂಡವಾಳವಿಲ್ಲದೆ ಬೆಳೆಯುವ ಬೆಳೆ- ಮಿಡಿ ಸೌತೆ

1

ಲಕ್ಷ್ಮೀಕಾಂತರಾಜು ಎಂಜಿ- 9844777110
ಪಬ್ಲಿಕ್ ಸ್ಟೋರಿ

ರೈತನೋರ್ವ ಇಂದು ಬೇಸಾಯ ಮಾಡಿ ಯಾವುದೇ ಬೆಳೆ ಬೆಳೆಯಲು ಸಾವಿರಾರು ರೂಗಳ ಆರಂಭಿಕ ಬಂಡವಾಳ ಬೇಕೆ ಬೇಕು. ಆದರೆ, ರೈತನು ಯಾವುದೇ ಆರಂಭಿಕ ಬಂಡವಾಳ ಹೂಡದೇ ಬೆಳೆ ಬೆಳೆಯುವ ಬೆಳೆಯೊಂದಿದೆ ಅದುವೆ ‘ಮಿಡಿ ಸೌತೆ’ ಬೆಳೆ

ಹೌದು. ರೈತನೋರ್ವ ಮಿಡಿ ಸೌತೆಯನ್ನ ಯಾವುದೇ ತನ್ನ ಸ್ವಂತ ಖರ್ಚಿಲ್ಲದೇ ಮಿಡಿಸೌತೆ ಬೆಳೆ ಬೆಳೆದು ಕೈತುಂಬಾ ಕಾಸುಗಳಿಸುತ್ತಿದ್ದಾನೆ. ಇದೇನು, ಬಂಡವಾಳ ಇಲ್ಲದೇ ಯಾವ ಬೆಳೆಯಲು ಸಾಧ್ಯವೆಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಎಲ್ಲ ಬೆಳೆಗಳಿಗೂ ಆರಂಭಿಕ ಬಂಡವಾಳ ಬೇಕೆಬೇಕು. ಆದರೆ,ಮಿಡಿ ಸೌತೆ ಬೆಳೆಗೆ ಮಿಡಿಸೌತೆ ಬೆಳೆಸುವ ಕಂಪನಿಗಳೂ ರೈತರಿಗೆ ಬೆಳೆಗೆ ಬೇಕಾಗುವ ಸಕಲ ಪರಿಕರಗಳನ್ನೂ ಪೂರೈಸಿ ಮಿಡಿಸೌತೆ ಕಾಯಿ ರೈತರಿಂದ ಖರೀದಿಸುತ್ತವೆ.

http://https://youtu.be/AzcKkStW3uw

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ‌ ಚೇಳೂರು ಹಾಗೂ ಹಾಗಲವಾಡಿ ಭಾಗದಲ್ಲಿ ಅತಿ ಹೆಚ್ಚಾಗಿ ರೈತರು ಮಿಡಿಸೌತೆಯನ್ನ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.ಮೊದ ಮೊದಲು ಈ ಭಾಗದಲ್ಲಿ ಮಿಡಿ‌ಸೌತೆ ಬೆಳೆಸಿ ಕಾಯಿ‌ ಖರೀದಿಸಲು ಹಲವು ಕಂಪನಿಗಳಿದ್ದವು. ಕ್ರಮೇಣ ಈ ಬೆಳೆಯ ಲಾಭಾಂಶವನ್ನು ತಿಳಿದ ಹಾಗಲವಾಡಿ ಹೋಬಳಿಯ ಮಠ ಗಂಗಯ್ಯನಪಾಳ್ಯದ ಯುವಕರುಗಳು ಕಂಪನಿಗಳ ರೀತಿಯಲ್ಲಿ‌ ಮೊದಲಿಗೆ ಸಣ್ಣ ಪ್ರಮಾಣದಲ್ಲಿ ರೈತರಿಂದ ಸೌತೆಕಾಯಿ ಬೆಳೆಸಲು ಆರಂಭಿಸಿ ಇಂದು ಈ ಗ್ರಾಮಗಳ ಹತ್ತಾರು ಯುವಕರುಗಳು ಈ ಭಾಗದ ರೈತರಿಂದ ಸೌತೆ ಬೆಳೆಸಿ ಕಾಯಿ ಖರೀದಿಸಿ ತಮಿಳುನಾಡಿನ‌ ಸಂಸ್ಕರಣಾ ಪ್ಯಾಕ್ಟರಿಗಳಿಗೆ ನೇರವಾಗಿ ಮಾರಾಟ ಮಾಡುತ್ತಾರೆ.

ಆರಂಭದಲ್ಲಿ ಸೌತೆ ಬೆಳೆಗಾರರಿಗೆ ಬೆಳೆಗೆ ಪೂರಕ ಗೊಬ್ಬರ ಬೀಜ,ಕ್ರಿಮಿನಾಶಕಗಳಷ್ಟೆ ವಿತರಿಸಿದರೆ ಸಾಕಿತ್ತು. ಆದರೀಗ ಕಾಲ ಬದಲಾಗಿದ್ದು‌ ರೈತರ ಖರ್ಚುಗಳಿಗೆ ಮುಂಗಡ ಹಣವನ್ನ ಖರೀದಾರರು ನೀಡಿ ಬೆಳೆಯ ಮೊತ್ತದಲ್ಲಿಯೇ ಮುರಿದುಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಇದಕ್ಕೆಲ್ಲಾ ಕಾರಣ ಸೌತೆಕಾಯಿ ಬೆಳೆಸಿ ವ್ಯವಹಾರ ಮಾಡುತ್ತಿರುವವರ ಸಂಖ್ಯೆ ಹೆಚ್ಚಾದ ಕಾರಣವೇ ಮೂಲವಾಗಿದೆ.

ಈ‌ ಸೌತೆ ಬೆಳೆಯು ಮೂರು ತಿಂಗಳ ಅಲ್ಪಾವಧಿಯ ಬೆಳೆಯಾಗಿದ್ದು ಕಡಿಮೆ ಅಂತರದಲ್ಲಿ ರೈತರು‌‌ ಹಣವನ್ನ ನೋಡುತ್ತಾರೆ. ಮಿಡಿ ಸೌತೆಯು ಈ ಭಾಗದಲ್ಲಿ ರೈತರ ದಿಕ್ಕನ್ನೇ ಬದಲಿಸಿ ಪ್ರಮುಖ ಬೆಳೆಯಾಗಿ‌ ಮಾರ್ಪಾಟಾಗಿ ವರ್ಷದಲ್ಲಿ ರೈತನೋರ್ವ ಮೂರು ಬೆಳೆ ಬೆಳೆಯುತ್ತಾನೆ.

ಮಿಡಿಸೌತೆಯ ಪ್ರಭಾವದಿಂದ ಸ್ಥಳೀಯ ಯುವಕರಿಗೆ ಉದ್ಯೋಗವೂ ದೊರೆತಿದೆ. ರೈತರ ಹೊಲಗಳಿಂದ ಕಾಯಿ ಖರೀದಿಸಲು ,ಲೋಡ್ ಮಾಡಲು,ಕಾರ್ಮಿಕರು ,ಚಾಲಕರು ,ರೈಟರ್ ಗಳ ಅವಶ್ಯಕತೆ ಇದ್ದು ಈ ಉದ್ಯೋಗಗಳು ಸ್ಥಳೀಯ ಯುವಕರುಗಳಿಗೆ ಸಿಗುವ ಕಾರಣ ಅದೆಷ್ಟೋ ಯುವಕರು ಉದ್ಯೋಗ ಅರಸಿ ಬೇರೆಲ್ಲೂ ಹೋಗದೆ ಇಲ್ಲಿಯೇ ಕೆಲಸ ಮಾಡುವುದು ಸ್ಥಳೀಯವಾಗಿಯೇ ಉದ್ಯೋಗವನ್ನ ಸೌತೆಕಾಯಿ ವ್ಯವಹಾರ ದೊರಕಿಸಿಕೊಟ್ಟಿದೆ ಎನ್ನಬಹುದು.ಇದೆಲ್ಲದರ ಜೊತೆಗೆ ಇಲ್ಲಿನ ಹತ್ತಾರು ಯುವಕರುಗಳು ಸೌತೆಕಾಯಿ ವ್ಯವಹಾರದಲ್ಲಿ ತೊಡಗಿ ಸ್ವಯಂ ಉದ್ಯೋಗವನ್ನ ಈ ಕೃಷಿ ಉತ್ಪನ್ನದಲ್ಲಿಯೇ ಮಾಡಿಕೊಂಡು ಲಾಭಾಂಶದತ್ತ ಸಾಗುತ್ತಿದ್ದಾರೆ

ಚೇಳೂರು ಹಾಗೂ ಹಾಗಲವಾಡಿಯ ಹೋಬಳಿಯ ಅದೆಷ್ಟೋ ರೈತರುಗಳು ಆಧುನಿಕ‌ ಬೆಳೆಯಾದ ಮಿಡಿಸೌತೆಯಿಂದ ಬದುಕುಕಟ್ಟಿಕೊಂಡು ಬೇರೆ ಬೆಳೆಗಳಿಗಿಂತ ಯಾವುದೇ ತನ್ನ ಸ್ವಂತ ಬಂಡವಾಳ ವಿನಿಯೋಗಿಸದೇ ಒಂದಷ್ಟು ಕಾಸು ಕಂಡಿರುವದಂತೂ ಸತ್ಯ.

ನಾನು ಮೊದಲಿಗೆ ಮಿಡಿಸೌತೆಯನ್ನ ಹೊರಗಿನ ಕಂಪನಿಗಳ ಮೂಲಕ ಸೌತೆ ಬೆಳೆಯುವ ರೈತನಾಗಿದ್ದು ತದನಂತರ ಈ ಬೆಳೆಯ ಬಗ್ಗೆ ತಿಳಿದ ನಂತರ ನಾನೇ ಖುದ್ದು ಸೌತೆ ಬೆಳೆಯನ್ನ ರೈತರಿಂದ ಬೆಳೆಸಿ ಸೌತಕಾಯಿ ಖರೀದಿಸಿ ತಮಿಳುನಾಡಿನ ಪ್ಯಾಕ್ಟರಿಗಳಿಗೆ ಮಾರಾಟ ಮಾಡುತ್ತೇನೆ. ಇದರಿಂದ ಈ ಮಿಡಿ ಸೌತೆಯಲ್ಲಿ‌ ರೈತನ ಪಾತ್ರದ ಜೊತೆಗೆ ಸ್ವಯಂ ಉದ್ಯೋಗವನ್ನು ಮಾಡುತ್ತಿದ್ದೇನೆ.

ಮಂಜುನಾಥ ಜಿಎಸ್,ಗಂಗಯ್ಯನಪಾಳ್ಯ

ನಮ್ಮ ಭಾಗದಲ್ಲಿ ವರ್ಷ ಪೂರ್ತಿ ಸೌತೆ ಬೆಳೆಯಲಿದ್ದು ನಾನು ಖರೀದಿದಾರರ ಬಳಿ ಬೈಯರ್ ಆಗಿ ಕೆಲಸ ಮಾಡಲಿದ್ದು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವುದು ತಪ್ಪಿದಂತಾಗಿದೆ.

ಹರೀಶ,ಮಠ

ನಮ್ಮೂರಲ್ಲಿ‌ ಮೊದ ಮೊದಲು ವಾಣಿಜ್ಯ ಬೆಳೆಯಾಗಿ ಶೇಂಗಾ ಬೆಳೆಯತ್ತಿದ್ವಿ. ಹದಿನೈದು ಇಪ್ಪತ್ತು ವರ್ಷಗಳಿಂದ ಈ ಮಿಡಿ ಸೌತೆಯನ್ನ ನಮ್ಮ ಭಾಗದಲ್ಲಿ ಪ್ರಮುಖ‌ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದು ಇತರೆ ಬೆಳೆಗಿಂತ ಇದರಲ್ಲಿ ಲಾಭವನ್ನ ಕಾಣಬಹುದಾಗಿದೆ.

ಬಸವರಾಜು ಜಿಪಿ , ರೈತ ಗಂಗಯ್ಯನಪಾಳ್ಯ