Friday, October 17, 2025
Google search engine
Home Blog Page 325

ಹಾಡಿ ಹಾಡಿ ಇಲ್ಲಿಗೆ ಬಂದಿದ್ದೇನೆ! ಕ್ರಾಂತಿಕಾರಿ ಕವಿ ಗದ್ದರ್

 ತುಮಕೂರು ಜಿಲ್ಲೆ: ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡದ 11ನೇ ಆರೋಪಿ ತೆಲುಗು ಗಾಯಕ ಗದ್ದರ್ ಅವರು ಜೆಎಂಎಫ್‌ಸಿ ನ್ಯಾಯಾಲಕ್ಕೆ ಬುಧವಾರ ಹಾಜರಾಗಿ ನ್ಯಾಯಾಲಯದ ಪ್ರಕ್ರಿಯೆಯನ್ನು ಮುಗಿಸಿದರು.

ಪ್ರಕರಣದಲ್ಲಿ ಗದ್ದರ್ 11ನೇ ಮತ್ತು ತೆಲುಗು ಕವಿ ವರವರರಾವ್ 12ನೇ ಆರೋಪಿ ಆಗಿದ್ದರು. 2018ರಲ್ಲಿ ಸಲ್ಲಿಸಲಾದ ಹೊಸ ಆರೋಪಪಟ್ಟಿಯ ಪ್ರಕಾರ ಗದ್ದರ್ 4ನೇ ಆರೋಪಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಹೈಕೋರ್ಟ್ ಗದ್ದರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಪ್ರಕರಣವು ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ನಿಯಮದಂತೆ ಗದ್ದರ್ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿದರು.

ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎರವಾಡ ಜೈಲಿನಲ್ಲಿದ್ದ  ವರವರರಾವ್‌ ಅವರನ್ನು ತಿರುಮಣಿ ಪೊಲೀಸರು ಬಾಡಿ ವಾರಂಟ್ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಗದ್ದರ್ ತಾವೇ ಹಾಜರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಮಧುಗಿರಿ ಡಿವೈಎಸ್‌ಪಿ ಕಚೇರಿಯಲ್ಲಿ ಗದ್ದರ್ ಅವರ ವಿಚಾರಣೆಗೆ ಹಾಜರಾಗಿದ್ದರು.

ಪಟ್ಟಣದ ಕೆಲ ಸಂಘಟನೆಗಳ ಮುಖಂಡರು ಗದ್ದರ್ ಅವರನ್ನು ಭೇಟಿಯಾಗಿ ಮಾತನಾಡಿದರು. ಗದ್ದರ್ ಅವರ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ವಕೀಲರ ಭವನದಲ್ಲಿಯೇ ಮಾಡಲಾಗಿತ್ತು. ಪಟ್ಟಣದ ಪೊಲೀಸರು ನ್ಯಾಯಾಲಯ ಸಂಕೀರ್ಣಕ್ಕೆ ಬಂದೋಬಸ್ತ್ ಒದಗಿಸಿದ್ದಾರೆ. ತೆಲಂಗಾಣ ಸರ್ಕಾರ ಗದ್ದರ್ ಅವರ ರಕ್ಷಣೆಗೆ ಇಬ್ಬರು ಗನ್‌ ಮನ್‌ಗಳನ್ನು ನಿಯೋಜಿಸಿದೆ.

ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.

ವಕೀಲರೊಂದಿಗೆ ಗದ್ದರ್ ಮಾತನಾಡುತ್ತಿದ್ದ ವೇಳೆ ವಕೀಲರೊಬ್ಬರು ಒಂದು ಹಾಡು ಹೇಳಿ ಎಂದರು. ಅದಕ್ಕೆ ಗದ್ದರು ಅವರು ಹಾಡಿ ಹಾಡಿ ಇದೀಗ ಇಲ್ಲಿಗೆ ಬಂದಿದ್ದೇನೆ ಎಂದು ಮಂದಹಾಸ ಬೀರಿದರು.

 

 

 

 

 

ಮೂರು ದಿನ ಸಿಐಟಿಯು ಸಮ್ಮೇಳನ

ಕಾರ್ಮಿಕರು, ರೈತರು, ಮಹಿಳೆಯರ ಕುರಿತು ಚರ್ಚೆ
ಸಮಗ್ರ, ಸಮೃದ್ದ ಹಾಗೂ ಸೌಹಾರ್ದ ಕರ್ನಾಟಕ ಘೋಷಣೆಯಡಿ ಸಿಐಟಿಯುನ ೧೪ನೇ ಸಮ್ಮೇಳನವು ನವೆಂಬರ್ 8,9 ಮತ್ತು 10 ರಂದು ಮೂರು ದಿನಗಳ ಕಾಲ ನಡೆಯಲಿದೆ.

ಬಹಿರಂಗ ಸಭೆಗೆ ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಚಾಲನೆ ನೀಡುವರು.
ಡಾ.. ಹೇಮಲತ, ಎ.ಕೆ. ಪದ್ಮನಾಭನ್, ಕೆ.ದೊರೈರಾಜ್, ಸೈಯದ್ ಮುಜೀಬ್ ಭಾಗವಹಿಸುವರು.

ಸಮ್ಮೇಳನದಲ್ಲಿ ರಾಜ್ಯದ ವಿವಿಧ ಕೈಗಾರಿಕೆಗಳ, ಸಾರ್ವಜನಿಕ ವಲಯದ ಕೈಗಾರಿಕೆಗಳ, ಸ್ಕೀಂ ನೌಕರರು, ಪಂಚಾಯತ್ ನೌಕರರು, ಕಟ್ಟಡ ಕಾರ್ಮಿಕರು, ಸಾರಿಗೆ ವಲಯವಾದ ಆಟೋ, ರಸ್ತೆ ಸಾರಿಗೆ, ಖಾಸಗಿ ಬಸ್ ಚಾಲಕರು, ಹಮಾಲಿ, ಬೀಡಿ, ಪೌರಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಮನೆಗೆಲಸಗಾರರು, ಟೈಲರ್ಗಳು, ಸ್ಕೀಂ ನೌಕರರಾದ ಅಂಗನವಾಡಿ, ಅಕ್ಷರದಾಸೋಹ, ಆಶಾ ಹಾಗು ಘನಕೈಗಾರಿಕೆಗಳು ಮತ್ತು ವಿವಿಧ ವಲಯದ ಕೈಗಾರಿಕೆಗಳ ಆಯ್ದ ೫೦೦ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನವು ಕನಿಷ್ಠ ಕೂಲಿ, ಗುತ್ತಿಗೆ ಕಾರ್ಮಿಕ ಪದ್ದತಿ, ಗುತ್ತಿಗೆ ಕಾರ್ಮಿಕರ ಕಾಯಂಮಾತಿ, ಸ್ಕೀಂ ನೌಕರರನ್ನು ಕನಿಷ್ಠ ಕೂಲಿ ವ್ಯಾಪ್ತಿಗೆ ತರುವುದಲ್ಲದೆ ಅವರ ಸೇವೆ ಕಾಯಂಗೊಳಿಸುವ ಸಂಘಟಿತ ಕಾರ್ಮಿಕರಿಗೆ ಸೇವಾ ಭಧ್ರತೆ ಹಾಗೂ ಸಾಮಾಜಿಕ ಭದ್ರತೆ ಪ್ರಶ್ನೆಗಳು ಕೇಂದ್ರ ಸರ್ಕಾರದ ಕಾರ್ಮಿಕರ ಕಾನೂನುಗಳ ಬದಲಾವಣೆ ಮತ್ತು ಸಂಹಿತೆಗಳಾಗಿ ಮಾಡುತ್ತಿರುವುದು, ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣ, ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆ, ಐಕ್ಯತೆ ಮುರಿಯುವ ಕೋಮುವಾದ ಇವೇ ಮೊದಲಾದ ಪ್ರಶ್ನೆಗಳ ಆಧಾರದಲ್ಲಿ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ.

ಪ್ರಸಕ್ತ ಸನ್ನಿವೇಶದಲ್ಲಿ ಬಡವರಿಗೆ ಕೊಳ್ಳುವ ಶಕ್ತಿಯನ್ನು ಹೆಚ್ಚಳ ಮಾಡುವ ಯಾವುದೇ ಕ್ರಮಗಳನ್ನು ಸರ್ಕಾರ ಮಾಡುತ್ತಿಲ್ಲ. ಕೃಷಿ ಉತ್ಪಾನಾ ವಲಯ ಕುಂಠಿತಗೊಂಡಿದೆ. ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಸ್ವಾಮಿನಾಥನ್ ಶಿಫಾರಸು ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಸಂಘಟನಾ ಕ್ರಮದ ಭಾಗವಾಗಿ ತ್ರೆöÊವಾರ್ಷಿಕ ಸಮ್ಮೇಳನ ಸಂಘಟಿಸಲಾಗುತ್ತಿದ್ದು ರಾಜ್ಯದ 30 ಜಿಲ್ಲೆಗಳಿಂದ 400 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದ ಯಶಸ್ವಿಗೆ ಸ್ವಾಗತ ಸಮಿತಿ ರಚಿಸಲಾಗಿದ್ದು ಕಾರ್ಮಿಕರು ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಿದ್ದಾಎ. ರೈತರು ಸಾರ್ವಜನಿಕರಿಂದ ಉತ್ಸಾಹದಾಯಕ ಪ್ರತಿಕ್ರಿಯೆ ದೊರೆತಿದೆ ಎಂದರು.

ನ.9ರಂದು ತುಮಕೂರಿನಲ್ಲಿ ಕುರುಕ್ಷೇತ್ರ ನಾಟಕ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಲಾ ಬಳಗ, ಕಾಳಿದಾಸ ವಿದ್ಯಾ ವರ್ಧಕ ಸಂಘ ಮತ್ತು ಕನಕ ಯುವ ಸೇನೆ ವತಿಯಿಂದ ಸಂತಶ್ರೇಷ್ಟ ಭಕ್ತ ಕನಕದಾಸ ಜಯಂತೋತ್ಸವದ ಅಂಗವಾಗಿ ನವೆಂಬರ್ 9ರಂದು ಬೆಳಗ್ಗೆ 10 ಗಂಟೆಯಿಂದ ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಸಮಾರಂಭದಲ್ಲಿ ರೇವಣ್ಣ ಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ್ ಸಾನಿಧ್ಯ ವಹಿಸುವರು.

ಶ್ರೀಕೃಷ್ಣ – ಆರ್.ತಿಪ್ಪೇಸ್ವಾಮಿ
ಧರ್ಮರಾಯ – ಕೆ.ಎನ್. ಗಂಗಾಧರ್
1ನೇ ಭೀಮ – ಟಿ.ಕೆ.ಕೃಷ್ಣಮೂರ್ತಿ
2ನೇ ಭೀಮ – ಸಿ.ಎಸ್.ಮಂಜುನಾಥ್
ಸುಯೋಧನ – ಧನಂಜಯ
ಕರ್ಣ – ಪಿ.ಸುರೇಶ್
ಶಕುನಿ – ಜೆ.ಎಸ್. ಧನಂಜಯಕುಮಾರ್
ಸೈಂಧವ – ರಂಗರಾಜು
ಅರ್ಜುನ – ಎಸ್.ಗರುಡಪ್ಪ
ಅಭಿಮನ್ಯು – ವೈ. ಬಸವರಾಜು
ದ್ರೋಣ – ಕಟ್ಟಿಗೇನಹಳ್ಳಿ ರೇವಣ್ಣ
ಭೀಷ್ಮ – ಚೌಡಪ್ಪ
ವಿದುರ – ಸತೀಶ್ ಕೆ
ಸಂಗೀತ ನಿರ್ದೇಶನ – ಎಸ್.ಪ್ರವೀಣ್ ಮಾಡುವರು.

video

0

ತುಮಕೂರಿನ ಹಾವುಕೊಂಡ ಗೊತ್ತಾ?

3

ವಿಶೇಷ ವರದಿ; ಕೆ.ಈ.ಸಿದ್ದಯ್ಯ

ಹಾವುಕೊಂಡ, ಜೇನುಗಿರಿ, ಕತ್ತು, ಕರಟಗಿರಿ, ಟುಮುಕಿವಾದ್ಯ, ಗುಬ್ಬಚ್ಚಿ, ಕುಣಿಕಲ್ಲು, ತುರು, ವ್ಯಕ್ತಿ, ತ್ರಿಪಟ್ಟದಕಲ್ಲೂರು ಇಂಥ ಹೆಸರುಗಳನ್ನೇ ಹೊಂದಿರುವ ತುಮಕೂರು ಜಿಲ್ಲೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.ಉತ್ತರ ಭಾಗದಿಂದ ಒಂದೊಂದೇ ತಾಲೂಕುಗಳ ಹೆಸರು ಪರಿಶೀಲಿಸಿಕೊಂಡು ಬಂದರೆ ಹಾವು, ಜೇನು, ತೆಂಗಿನಚಿಪ್ಪು, ವಾದ್ಯ, ಪಕ್ಷಿ, ದನ, ವ್ಯಕ್ತಿ ಹೀಗೆ ಎಲ್ಲವು ಪ್ರಕೃತಿಯೊಂದಿಗೆ ಒಂದಿಲ್ಲ ಒಂದು ಬಗೆಯಲ್ಲಿ ಸಂಬಂಧ ಬೆಸೆದುಕೊಂಡಿವೆ.
ಅಂದರೆ ಬೆಟ್ಟಗುಡ್ಡಗಳಿಂದಲೂ, ಗಿರಿದುರ್ಗಗಳಿಂದಲೂ, ಹಕ್ಕಿಪಕ್ಷಿಗಳಿಂದಲೂ, ತೆಂಗು-ಕಂಗು ಬೆಳೆಯುತ್ತಿದ್ದ ಮತ್ತು ವಿಶೇಷ ವ್ಯಾದ್ಯಗಳಿಗೆ ಹೆಸರುವಾಸಿಯಾಗಿತ್ತೆಂದು ಹೇಳಬಹುದು.170 ಕಿಲೋ ಮೀಟರ್ ಮತ್ತು ಪೂರ್ವ-ಪಶ್ಚಿಮಕ್ಕೆ 130 ಕಿಲೋ ಮೀಟರ್ ವ್ಯಾಪ್ತಿಯ ಜಿಲ್ಲೆ ಇದಾಗಿದೆ. ಅಂಧ್ರಪ್ರದೇಶದ ಅನಂತಪುರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ರಾಮನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ನಡುವೆ ಇರುವುದೇ ತುಮಕೂರು.ನಿಡುಗಲ್ಲು ದುರ್ಗ, ಕಾಮನದುರ್ಗ, ಪಾವಗಡ ಬೆಟ್ಟ, ಮಿಡಿಗೇಶಿಬೆಟ್ಟ, ಮಧುಗಿರಿ ಏಕಶಿಲಾ ಬೆಟ್ಟ, ಸಿದ್ದರಬೆಟ್ಟ, ಚನ್ನಗಿರಿದುರ್ಗ, ದೇವರಾಯನ ದುರ್ಗ, ಹುಲಿಯೂರು ದುರ್ಗ ಹೀಗೆ ಬೆಟ್ಟಗುಡ್ಡಗಳಿಂದಲೂ, ಸಿರಾ, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲೂಕುಗಳು ಬಯಲುಸೀಮೆಯೆಂದು ಪ್ರಸಿದ್ದಿ ಪಡೆದಿವೆ.ತುಮಕೂರು ಜಿಲ್ಲೆಯ ಆರು ತಾಲೂಕುಗಳು ತೆಂಗು, ಅಡಿಕೆ, ಮಾವು ರಾಗಿ, ಜೋಳಕ್ಕೂ, ಇನ್ನುಳಿದ ಉತ್ತರದ ನಾಲ್ಕು ತಾಲೂಕುಗಳು ಕಡಲೆಕಾಯಿ, ಹಿಪ್ಪನೇರಳೆ, ಅಡವಳಸಿನಕಾಯಿ, ಹುಣಸೆ, ಜಾಲಿ, ಬೇವು ಮಾವು ಬೆಳೆಗೂ ಪ್ರಸಿದ್ದವಾಗಿವೆ. ಜಿಲ್ಲೆಯ ಜನರ ಆದಾಯದ ಮೂಲವೇ ಈ ಬೆಳೆಗಳು.
ಜಿಲ್ಲೆಯಲ್ಲಿ ದಲಿತರು ಮೊದಲ ಸ್ಥಾನದಲ್ಲಿದ್ದರೆ(ಪರಿಶಿಷ್ಟ ಪಟ್ಟಿಯಲ್ಲಿ ಬರುವ ಎಲ್ಲಾ ಜಾತಿಗಳು), ಒಕ್ಕಲಿಗರು ಎರಡು ಮತ್ತು ಲಿಂಗಾಯತರು ಮೂರನೇ ಸ್ಥಾನದಲ್ಲಿದ್ದಾರೆ.ಇನ್ನುಳಿದಂತೆ ಮುಸ್ಲೀಮರು, ಕ್ರಿಶ್ಚಿಯನ್ನರು, ಕುರುಬರು, ಕಾಡುಗೊಲ್ಲರು, ಈಡಿಗರು, ಗೊಲ್ಲರು, ತಿಗಳರು, ಉಪ್ಪಾರ, ಜೈನರು, ಬ್ರಾಹ್ಮಣರು, ಶೆಟ್ಟರು, ವಿಶ್ವಕರ್ಮರು, ಕ್ಷೌರಿಕರು, ಮಡಿವಾಳರು, ಬಲಜಿಗರು, ರೆಡ್ಡಿಗಳು, ಬೆಸ್ತರು, ಕುಂಬಾರ, ಕಂಬಾರ ಸಿಖ್, ಮಾರ್ವಾಡಿಗಳು, ಸೇಠ್, ದರ್ಜಿಗರು, ಅಲೆಮಾರಿಗಳು, ಅರೆಅಲೆಮಾರಿಗಳು ಹೀಗೆ ಹತ್ತು ಹಲವೆಂಟು ಜಾತಿಗಳ ಜನರು ಇಲ್ಲಿ ನೆಲೆಸಿರುವುದು ಕಂಡುಬರುತ್ತದೆ.ಈ ಸೀಮೆಯಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರೇ ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವುದು. ಅದರಲ್ಲೂ ಒಕ್ಕಲಿಗ ಶಾಸಕರೇ ಹೆಚ್ಚಾಗಿ ಆಯ್ಕೆಯಾಗಿರುವುದು ಇದುವರೆಗಿನ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ. ಲಿಂಗಾಯತರು ಎರಡು ಕಡೆ ಆಯ್ಕೆಯಾಗಿದ್ದಾರೆ. ಮೀಸಲಾತಿ ಕಾರಣಕ್ಕೆ ಜಿಲ್ಲೆಯ ಎರಡು ಕಡೆ ದಲಿತರು ರಾಜಕೀಯ ಪ್ರವೇಶ ಮಾಡಲು ಸಾಧ್ಯವಾಗಿದೆ. ಹಿಂದುಳಿದ ಮತ್ತು ಮುಷ್ಲೀಂ ಸಮುದಾಯಕ್ಕೆ ಸೇರಿದ ತಲಾ ಒಬ್ಬೊಬ್ಬರು, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೊಬ್ಬರು ಶಾಸಕರಾಗಿ ಅಧಿಕಾರ ನಡೆಸಿರುವುದನ್ನು ಚುನಾವಣೆ ಅಂಕಿಅಂಶ ತಿಳಿಸುತ್ತವೆ. ನಾಯಕ ಸಮುದಾಯಕ್ಕೂ ಎರಡು ಅವಕಾಶ ದೊರೆತಿದೆ.ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ, ಟಿ.ಬಿ.ಜಯಚಂದ್ರ, ಸಿ.ಚನ್ನಿಗಪ್ಪ, ಎಸ್.ಆರ್.ಶ್ರೀನಿವಾಸ್, ಸಾಗರನಹಳ್ಳಿ ರೇವಣ್ಣ, ಸೊಗಡು ಶಿವಣ್ಣ, ಮಾಧುಸ್ವಾಮಿ, ಡಾ.ಜಿ.ಪರಮೇಶ್ವರ್, ವೆಂಕಟರಮಣಪ್ಪ ಸಚಿವರಾಗಿ ತಕ್ಕ ಮಟ್ಟಿಗೆ ಕೆಲಸ ಮಾಡಿದ್ದಾರೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಯಾರೊಬ್ಬರೂ ಇದುವರೆಗೆ ಸಚಿವರಾಗಿಲ್ಲ. ಅಂತಹ ಅವಕಾಶಗಳೂ ದೊರೆತಿಲ್ಲ.ತುಮಕೂರು ಕೇಂದ್ರವೂ ಸೇರಿದಂತೆ ದಕ್ಷಿಣ, ಪಶ್ಚಿಮ ತಾಲೂಕುಗಳು ನೀರಾವರಿ ಸೌಲಭ್ಯ ಹೊಂದಿದ್ದು, ತೋಟ-ತುಡಿಕೆ, ಭತ್ತ, ರಾಗಿ ಬೆಳೆಗಳು ಸಮೃದ್ಧವಾಗಿ ಕಂಡುಬರುತ್ತವೆ. ಉತ್ತರದ ನಾಲ್ಕು ತಾಲೂಕುಗಳು ಬರದ ದವಡೆಗೆ ಸಿಲುಕುತ್ತಲೇ ಬರುತ್ತಿವೆ. ಅಲ್ಲಿನ ಜನ ಬರದ ದವಡೆಯಿಂದ ಬಿಡಿಸಿಕೊಳ್ಳಲು ಬಹುತೇಕ ಸಾಧ್ಯವಾಗಿಲ್ಲ. ಆದರೂ ಕೂಡ ಇಡೀ ಜಿಲ್ಲೆಯಲ್ಲಿ ಮಳೆಯಾಧಾರಿತ ಕೃಷಿಯೇ ಹೆಚ್ಚಾಗಿದೆ.ಸುವರ್ಣಮುಖಿ,ಶಿಂಷಾ, ಉತ್ತರಪಿನಾಕಿನಿ, ಗರುಡಾಚಲ, ಜಯಮಂಗಲಿ ಹೀಗೆ ಪಂಚ ನದಿಗಳು ಹರಿಯುತ್ತವೆ. ಇವು ಜೀವಂತ ನದಿಗಳಲ್ಲ ಅತಿಹೆಚ್ಚು ಮಳೆ ಬಂದಾಗ ಮಾತ್ರ ತುಂಬಿ ಹರಿಯುವ ನದಿಗಳು. ಐದು ನದಿಗಳಿದ್ದರೂ ಇವುಗಳಿಗೆ ಜಲಾಶಯಗಳನ್ನು ನಿರ್ಮಿಸಿಲ್ಲ. ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಮತ್ತು ಕೊರಟಗೆರೆ ತೀತಾ ಜಲಾಶಯಗಳು, ಚಿ.ನಾ.ಹಳ್ಳಿಯ ಬೋರನಕಣಿವೆ ಜಲಾಶಯ ಪ್ರಸಿದ್ದಿ ಹೊಂದಿದ್ದರೂ ಅವು ಸಂಪೂರ್ಣ ಭರ್ತಿ ಆಗಿದ್ದು ತುಂಬಾ ಕಡಿಮೆ. ಸಿದ್ದರ ಬೆಟ್ಟ ಮತ್ತು ದೇವರಾಯನದುರ್ಗದಲ್ಲಿ ಹುಟ್ಟುವ ನದಿಗಳು ಇವು. ಪಾವಗಡದ ಪಳವಳ್ಳಿ ಕೆರೆ, ಮಧುಗಿರಿ ಪುರವರ ಕೆರೆ, ಸಿರಾ ಹೇರೂರು ಕೆರೆ, ತುಮಕೂರಿನ ಮೈದಾಳ, ಕುಣಿಗಲ್ ದೊಡ್ಡಕೆರೆ, ತುರುವೇಕೆರೆ ಮಲ್ಲಾಘಟ್ಟ ಕೆರೆ, ತಿಪಟೂರಿನ ಈಚನೂರು ಕೆರೆ, ಚಿಕ್ಕನಾಯಕನಹಳ್ಳಿ ಬೋರನಕಣಿವೆ ಗುಬ್ಬಿ ಗುಬ್ಬಿಯ ಕಡಬಾ ಅತ್ಯಂತ ದೊಡ್ಡಕೆರೆಗಳು.ಪಾವಗಡದ ಶನೈಶ್ಚರ, ಮಧುಗಿರಿ ದಂಡಿನ ಮಾರಮ್ಮ, ಸಿರಾದ ಮಾಗೋಡು ರಂಗನಾಧ, ಕೊರಟಗೆರೆಯ ಗೊರವನಹಳ್ಳಿ ಲಕ್ಷ್ಮಿ, ತುಮಕೂರಿನ ಸಿದ್ದಗಂಗಾ ಮಠ, ಕೈದಾಳ, ಕುಣಿಗಲ್‍ನ ಎಡೆಯೂರು, ಚಿಕ್ಕನಾಯಕನಹಳ್ಳಿ ದರ್ಗಾ, ಸಿರಾದ ಕೋಟೆ, ಗುಬ್ಬಿಯ ಚನ್ನಬಸವೇಶ್ವರ ದೇವಾಲಯಗಳಿಗೆ ಅತಿ ಹೆಚ್ಚು ಮಂದಿ ಭಕ್ತರು ಭೇಟಿ ನೀಡುವ ಸ್ಥಳಗಳು. ಹೀಗೆ ತುಮಕೂರು ಪ್ರವಾಸಿ ತಾಣಗಳು, ದೇವಾಲಯಗಳು, ಸೌಹಾರ್ದ ನೆಲೆಯ ಕೇಂದ್ರಗಳಿಗೂ ಹೆಸರಾಗಿದೆ.

ಖಾಸಗಿ ಬಸ್ ಗಳ ಸಂಚಾರಕ್ಕೆ ಕಡಿವಾಣ ಹಾಕಿ; ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥ

ತುಮಕೂರು:ತುಮಕೂರು –ಪಾವಗಡ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಬೇಕು. ಅಪಘಾತಗಳನ್ನು ತಪ್ಪಿಸಬೇಕು. ಖಾಸಗಿ ಬಸ್ ಗಳ ಬದಲಿಗೆ ಸರ್ಕಾರಿ ಬಸ್ ಗಳ ಸಂಚಾರವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೊರಟಗೆರೆಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಈ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಗಳ ಸಂಖ್ಯೆ ಹೆಚ್ಚಾಗಿದೆ. ಅತಿ ವೇಗವಾಗಿ ಸಂಚರಿಸುತ್ತವೆ. ಖಾಸಗಿ ಬಸ್ ಗಳ ನಡುವೆ ತೀವ್ರ ಪೈಪೋಟಿ ಇದೆ. ಇದರಿಂದ ಅಪಘಾತಗಳಾಗಿ ಸಾವು ಸಂಖ್ಯೆ ಹೆಚ್ಚುತ್ತಿದೆ. ಇದುವರೆಗೂ ಖಾಸಗಿ ಬಸ್ ಗಳೇ ಹೆಚ್ಚು ಅಪಘಾತಕ್ಕೆ ಒಳಗಾಗಿವೆ.

ಕಳೆದ ಕೆಲ ದಿನಗಳ ಹಿಮದೆ ಜಟ್ಟಿ ಅಗ್ರಹಾರ ಬಳಿ ಬಸ್ ದುರಂತ ನಡೆದಿದೆ. ಊರುಕೆರೆ ಗೇಟ್ ನಲ್ಲಿ ಆದ ದುರಂತದಿಂದ ಸಾಕಷ್ಟು ಜನರ ಜೀವನ ಅಸ್ತವ್ಯಸ್ಥವಾಗಿದೆ. ಈ ರಸ್ತೆಯಲ್ಲಿ ಸಾಕಷ್ಟು ದುರಂತಗಳು ಸಂಭವಿಸಿವೆ. ಆದ್ದರಿಂದ ಖಾಸಗಿ ಬಸ್ ಗಳಿಗೆ ಬ್ರೇಕ್ ಹಾಕಬೇಕು ಎಂದು ಜಾಥಾ ನಿರತರು ಆಗ್ರಹಿಸಿದರು.
ತುಮಕೂರು-ಪಾವಗಡ ರಸ್ತೆಯಲ್ಲಿ ಸಂಚರಿಸುವ ಬಹುತೇಕ ಖಾಸಗಿ ಬಸ್ ಗಳಿಗೆ ಪರವಾನಿಗೆ ಇಲ್ಲ. ಪರವಾನಿಗೆ ಇರುವ ಬಸ್ ಗಳ ಸಂಖ್ಯೆ ಕಡಿಮೆ ಇದೆ. ಅಧಿಕಾರಿಗಳು ಮತ್ತು ಬಸ್ ಮಾಲಿಕರು ಶಾಮೀಲಾಗಿ ಜನರ ಪ್ರಾಣಕ್ಕೆ ಕುತ್ತು ತಂದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ ಪರಿಗಣಿಸಿಲ್ಲ.

ರಸ್ತೆಯಲ್ಲಿ ಯಾವ ಕಡೆಯೂ ಹುಬ್ಬುಗಳನ್ನು ನಿರ್ಮಿಸಿಲ್ಲ. ಇದರಿಂದ ಗ್ರಾಮಗಳ ಬಳಿಯೂ ವೇಗವಾಗಿ ಬಸ್ ಗಳು ಸಂಚರಿಸುತ್ತವೆ. ಇವುಗಳಿಗೆ ಕಡಿವಾಣ ಹಾಕಲು ಪ್ರತಿ ಗ್ರಾಮದ ಸಮೀಪವು ಹಂಪ್ಸ್ ಗಳನ್ನು ನಿರ್ಮಿಸಬೇಕು. ಕೆಲ ಬಸ್ ಗಳು ಕೆಲ ಗ್ರಾಮಗಳಲ್ಲಿ ನಿಲ್ಲಿಸುವುದಿಲ್ಲ. ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಮತ್ತು ಮಕ್ಕಳನ್ನು ಹತ್ತಿಸಿಕೊಳ್ಳುವುದಿಲ್ಲ. ಇದರಿಂದ ಬಸ್ ಸಂಚರಿಸುತ್ತಿದ್ದರೂ ಓಡಾಟಕ್ಕೆ ಕಷ್ಟವಾಗಿದೆ ಎಂದು ದೂರಿದರು.
ಖಾಸಗಿ ಬಸ್ ಗಳನ್ನು ನಿಷೇಧಿಸಿ ಸರ್ಕಾರಿ ಬಸ್ ಗಳನ್ನು ಓಡಿಸಬೇಕು ಎಂದು ಜಾಥಾನಿರತರು ಒತ್ತಾಯಿಸಿದರು. ಜಾಥಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಜಯಕರ್ನಾಟಕ, ದಲಿತ ಸಂರಕ್ಷಣ ಸಮಿತಿ, ಅಖಂಡ ಕರ್ನಾಟಕ ರಕ್ಷಣಾ ಸೇವಾದಳ, ಕರುನಾಡ ಕೇಸರಿ ಯುವ ವೇದಿಕೆ, ಮಾದಿಗ ದಂಡೋರ ಸಮಿತಿ, ವಿಷ್ಣು ಯುವ ಸಮಿತಿ ಜಗ್ಗೇಶ್ ಅಭಿಮಾನಿ ಬಳಗ ಹೀಗೆ ಹಲವು ಸಂಘಟನೆಗಳು ಜಾಥಾದಲ್ಲಿ ಭಾಗವಹಿಸಿದ್ದವು.

ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ರಾಷ್ಟ್ರಪತಿಗಳು ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾಧರಣಿ ನಡೆಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಶಾಸಕ ರಫೀಕ್ ಅಹಮದ್ ಮಾತನಾಡಿ, ಇತ್ತೀಚೆಗೆ ಬಿಡುಗಡೆಯಾಗಿರುವ ಆಡಿಯೋದಲ್ಲಿರುವ ಧ್ವನಿ ತನ್ನದೇ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಹಾಗಾಗಿ ಕೂಡಲೇ ರಾಷ್ಟ್ರಪತಿಗಳು ಯಡಿಯೂರಪ್ಪ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಪಿತೂರಿ ನಡೆಸಿರುವುದು ಆಡಿಯೋ ಬಹಿರಂಗದಿಂದ ಬಯಲಾಗಿದೆ. ಯಡಿಯೂರಪ್ಪ ಹೇಳಿರುವಂತೆ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲೇ ಶಾಸಕರ ರಾಜಿನಾಮೆ ಕೊಡಿಸಿ ಮುಂಬೈನಲ್ಲಿ ಇಳಿದುಕೊಳ್ಳಲು ಕಾರಣ ಎಂದು ಹೇಳಿದ್ದಾರೆ. ಇದು ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವುದಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಷಫಿ ಅಹಮದ್, ಮಾಜಿ ಶಾಸಕ ಆರ್. ನಾರಾಯಣ, ಹಾಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ಮುಖಂಡರಾದ ನಿರಂಜನ್, ತುಮಕೂರು ನಗರ ಪಾಲಿಕೆಯ ಉಪಮೇಯರ್ ಇತರರು ಉಪಸ್ಥಿತರಿದ್ದರು.

ಹಳೆಗನ್ನಡ ಓದು ಬೆಳೆಯಲಿ

ಆಧುನಿಕ ಯುಗದಲ್ಲಿ ಹಳೆಗನ್ನಡದ ಓದು ಕಡಿಮೆಯಾಗಿದ್ದರೂ ಅದು ಇನ್ನೂ ನಿಂತಿಲ್ಲ. ಮನೆಮನೆಗಳಲ್ಲಿ ಹಳಗನ್ನಡ ಓದುವ ಸಂಸ್ಕೃತಿ ಬೆಳೆಯಬೇಕಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಭೀಮಸೇನ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಮಾರವ್ಯಾಸ ಅಧ್ಯಯನ ಪೀಠ ಹಾಗೂ ಮಂಗಳೂರು ವಿವಿಯ ರತ್ನಾಕರವರ್ಣಿ ಅಧ್ಯಯನ ಪೀಠ ಸಹಯೋಗದಲ್ಲಿ ಏರ್ಪಡಿಸಿದ್ದ ಹಳೆಗನ್ನಡ ಕಾವ್ಯಗಳ ಓದು ಮತ್ತು ವ್ಯಾಖ್ಯಾನ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಗೂಗಲ್ ಓದುವಿನೊಂದಿಗೆ ಗ್ರಂಥಾಲಯ ಓದು ಕೂಡ ಆರಂಭವಾಗಿದೆ.ಹಳಗನ್ನಡ ಓದು ಪ್ರತೀ ಮನೆಯಲ್ಲೂ ಬೆಳೆಯಬೇಕಿದೆ. ತುಮಕೂರು ನಾಟಕ ಕಲೆಗೆ ಹೆಸರಾಗಿದ್ದು, ನಾಟಕ ರಂಗದಲ್ಲಿ ಆಗುವ ತಪ್ಪುಗಳನ್ನು ಗುರುತಿಸುವ ಜ್ಞಾನ ಇಲ್ಲಿನ ಸಾಮಾನ್ಯ ಪ್ರೇಕ್ಷಕನಲ್ಲಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ವೈ.ಎಸ್ ಸಿದ್ದೇಗೌಡ ಮಾತನಾಡಿ, ಹಳೆಗನ್ನಡ ಬೇರಿನಲ್ಲಿ ಹೊಸಗನ್ನಡದ ಚಿಗುರು ಇದೆ.

ಯಾವುದೇ ಭಾಷೆ ಅಲ್ಲಿನ ಭೌಗೋಳಿಕ ಪ್ರದೇಶ, ಜನಜೀವನ ಹಾಗೂ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಪ್ರತಿಬಿಂಬವಾಗಿರುತ್ತದೆ ಎಂದು ಹೇಳಿದರು.
ಪ್ರೌಢರಾದಂತೆ ಓದುವ ಕೌಶಲ್ಯ, ಜ್ಞಾನ, ವಿವೇಕ ಬೆಳೆಯಬೇಕು. ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದರ ಕುರಿತ ತಿಳುವಳಿಕೆ ಓದಿಗೆ ಮಾತ್ರ ಸೀಮಿತವಾಗದೆ, ಅವರ ಜೀವನ ಕ್ರಮ ಅನುಸರಿಸಬೇಕು, ನಮಲ್ಲಿ ಸಂಪದ್ಭರಿತ ಇತಿಹಾಸವಿದೆ. ನಾವು ಐತಿಹಾಸಿಕ ವ್ಯಕ್ತಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳವುದರ ಮೂಲಕ ಜೀವನದಲ್ಲಿ ಮುಂದುವರಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಮೈಸೂರು ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ. ಮಳಲಿ ವಸಂತ್ ಕುಮಾರ್, ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಡಿ.ವಿ. ಪರಮಶಿವಮೂರ್ತಿ, ಕುಮಾರವ್ಯಾಸಪೀಠದ ಸಂಯೋಜಕ ಡಾ. ಪಿ. ಎಂ. ಗಂಗಾಧರಯ್ಯ, ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ ಉಪಸ್ಥಿತರಿದ್ದರು.

ನವೆಂಬರ್ -21 ರಂದು ಪಾವಗಡ ತಾಲ್ಲೂಕು ಬಂದ್ ಗೆ ಕರೆ

ಪಾವಗಡ: ತಾಲ್ಲೂಕಿನಾದ್ಯಂತ ಸಾಕಷ್ಟು ಸಮಸ್ಯೆಗಳಿದ್ದರೂ ಅಧಿಕಾರಿಗಳು ಬೇಜವಬ್ಧಾರಿತನ ಪ್ರದರ್ಶಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವತ್ತ ಗಮನಹರಿಸದಿದ್ದರೆ ನವೆಂಬರ್-21 ರಂದು ತಾಲ್ಲೂಕು ಬಂದ್ ನಡೆಸಲಾಗುವುದು ಎಂದು ಹಸಿರು ಸೇನೆ ಅಧ್ಯಕ್ಷ ಪುಜಾರಪ್ಪ ಎಚ್ಚರಿಸಿದರು.

6 ತಿಂಗಳಿಂದ ಸರ್ಕಾರ ನೀಡುವ ವೃದ್ಧಾಪ್ಯ ವೇತನ, ಅಂಗ ವಿಕಲ ವೇತನವಿಲ್ಲದೆ ಬಡ ಜನತೆ ಅಂಚೆ ಕಚೇರಿ ತಹಶೀಲ್ದಾರ್ ಕಚೇರಿ ಅಲೆಯುತ್ತಿದ್ದಾರೆ. ಆಧಾರ್ ಮಾಡಿಸಿಕೊಳ್ಳಲು ಆಂಧ್ರ ಸೇರಿದಂತೆ ಬೇರೆಡೆ ಹೋಗಬೇಕಿದೆ. ರೈತರ ಸಾಲ ಮನ್ನಾ ಕೇವಲ ಕಡತಗಳಿಗೆ ಸೀಮಿತವಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮನೆ ಇರುವರಿಗೆ, ಹಣ ಕೊಡುವರಿಗೆ ಮನೆ ಹಾಕಿ ಕೊಡುತ್ತಿದ್ದಾರೆ. ಸರ್ಕಾರ ಕೊಡುವ 1.5 ಲಕ್ಷ ರೂಪಾಯಿ ಪಾಯ ಹಾಕಿಸಲೂ ಸಾಲುತ್ತಿಲ್ಲ  ಎಂದು ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆರೋಪಿಸಿದರು.

ಜೆಡಿಎಸ್ ಪಕ್ಷದ ವಕ್ತಾರ ಅಕ್ಕಲಪ್ಪ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾಗೆ ಅಗತ್ಯವಿರುವ ಅನುದಾನ ಮೀಸಲಿಟ್ಟಿದ್ದರು. ಈಗಿನ ಸರ್ಕಾರ ಕೂಡಲೇ ಸಾಲ ಮನ್ನಾ ಅನುದಾನವನ್ನು ರೈತರ ಖಾತೆಗೆ ವರ್ಗಾಯಿಸಬೇಕು. ರೈತರ ಬಗ್ಗೆ ಬಿಜೆಪಿ ಸರ್ಕಾರ ತಾತ್ಸಾರ ಮನೋಭಾವ ಪ್ರದರ್ಶಿಸಬಾರದು. ಜೆಡಿಎಸ್ ತಾಲ್ಲೂಕು ಘಟಕ ರೈತರು ನಡೆಸಲಿರುವ ಬಂದ್ ಗೆ ಬೆಂಬಲ ನೀಡಲಿದೆ ಎಂದರು.

ರೈತ ಮುಖಂಡ ಗಂಗಾಧರ್ ಮಾತನಾಡಿ,  ಸರ್ಕಾರ, ಜನಪ್ರತಿನಿಧಿಗಳ ಅಸಮರ್ಥತೆಯಿಂದ ಬಡ ಜನತೆಗೆ ಅನ್ಯಾಯವಾಗುತ್ತಿದೆ. ಸಾಕಷ್ಟು ಮಂದಿ ರೈತರ ಖಾತೆಗೆ ಸಾಲ ಮನ್ನಾ ಹಣ ಬಂದಿಲ್ಲ  ಎಂದು ದೂರಿದರು.

ಮುಖಂಡ ಅಶ್ವಥಪ್ಪ, ಪಾತಣ್ಣ, ಹನುಮಂತರಾಯಪ್ಪ, ಶಿವಕುಮಾರ್, ಸಿದ್ದಪ್ಪ, ನರಸಪ್ಪ, ಈರಣ್ಣ, ಗಿರಿಯಪ್ಪ, ಮೂಡಲಪ್ಪ, ತಿಮ್ಮಣ್ಣ, ಚನ್ನಗಿರಪ್ಪ  ಉಪಸ್ಥಿತರಿದ್ದರು.

ಕಚೇರಿ ಅಲೆದು ಬೇಸತ್ತು, ತಹಶೀಲ್ದಾರ್ ಗೆ ಬೆಂಕಿ ಇಟ್ಟ ಘಾತುಕ! ಮುಂದೇನಾಯಿತು?

ತೆಲಾಂಗಣ: ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್​​ ನಲ್ಲಿ ಸೋಮವಾರ (ನ.4)ದಂದು ನಡೆದಿದೆ.

ಅಬ್ದುಲ್ಲಾಪುರಮೆಟ್​​ ಈಚೆಗೆ ಮಂಡಲ್ ಆಗಿ ಪರಿವರ್ತೆನೆಯಾದ ನಂತರ ವಿಜಯಾರೆಡ್ಡಿ ಮೊದಲ ತಹಶೀಲ್ದಾರ್ ಆಗಿ ಅಧಿಕಾರಿ ಸ್ವೀಕರಿಸಿದ್ದರು. ವ್ಯಕ್ತಿಯೋರ್ವ ಬ್ಯಾಗ್ ಹಿಡಿದು ಕಚೇರಿ ಒಳಗೆ ಪ್ರವೇಶಿಸಿದ್ದ. ನಂತರ ತಹಶೀಲ್ದಾರ್ ಕೋಣೆಗೆ ಏಕಾ ಏಕಿ ಪ್ರವೇಶಿಸಿ ಪೆಟ್ರೋಲ್ ಎಣ್ಣೆ ಸುರಿದು ಬೆಂಕಿ ಹೊತ್ತಿಸಿ, ತಾನೂ ಬೆಂಕಿ ಇಟ್ಟುಕೊಂಡಿದ್ದ.  ತಹಶೀಲ್ದಾರ್ ವಿಜಯರೆಡ್ಡಿ ಸ್ಥಳದಲ್ಲಿಯೇ ಮತಪಟ್ಟಿದ್ದಾರೆ.

https://youtu.be/SrRs5A3w14A

ತಹಶೀಲ್ದಾರ್ ವಿಜಯರೆಡ್ಡಿ ಅವರನ್ನು ಕಾಪಾಡಲು ಹೋದ ಇಬ್ಬರು ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ.  ಬೆಂಕಿ ಹೊತ್ತಿಸಿಕೊಂಡ ಆರೋಪಿ ಕಚೇರಿಯಿಂದ ಚೀರಾಡಿಕೊಂಡು ಹೊರಹೋದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ವಿಜಯ ರೆಡ್ಡಿ ಅವರ ಶವವನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ನಂತರ ಆರೋಪಿ ಸುರೇಶ್‌ ಅವರನ್ನು ಬಂಧಿಸಲಾಗಿದೆ.

ಸುರೇಶ್ ಭೂ ವಿವಾದ ಬಗೆಹರಿಸುವಂತೆ ಹಲ ದಿನಗಳಿಂದ ತಹಶೀಲ್ದಾರ್ ಕಚೇರಿ ಅಲೆಯುತ್ತಿದ್ದ. ಿದೇ ವಿಚಾರಕ್ಕೆ ತಹಶೀಲ್ದಾರ್ ಬಳಿ ಮಾತನಾಡಬೇಕು ಎಂದು ಅನುಮತಿ ಪಡೆದು ತಹಶೀಲ್ದಾರ್ ಕೊಠಡಿ ಒಳ ಹೋಗಿದ್ದ. ಊಟಕ್ಕೆ ಹೊರಟಿದ್ದ ತಹಶೀಲ್ದಾರ್ ಈತನ ಜೊತೆ ಸುಮಾರು ಅರ್ಧ ಗಂಟೆ ಕಾಲ ಚರ್ಚಿಸಿದ್ದರು. ನಂತರ ಆರೋಪಿ ಸುರೇಶ್ ಕೊಠಡಿ ಬಾಗಿಲು ಮುಚ್ಚಿ ಹಲ್ಲೆ ನಡೆಸಿದ್ದಾನೆ. ತಹಶೀಲ್ದಾರ್ ಚಾಲಕ ಬಾಗಿಲು ತೆಗೆಯಲು ಯತ್ನಿಸಿ ವಿಫಲರಾಗಿದ್ದಾರೆ.

ಕಡೆಗೆ ಸುರೇಶ್ ತಹಶೀಲ್ದಾರ್ ಕೊಠಡಿ ಬಾಗಿಲು ತೆಗೆದು ಬೆಂಕಿ ಹೊತ್ತಿದ್ದ ಷರ್ಟ್ ಬಿಸಾಕಿ ಷಾರ್ಟ್ ಸರ್ಕ್ಯುಟ್ ನಿಂದ ಕೊಠಡಿಗೆ ಬೆಂಕಿ ವ್ಯಾಪಿಸಿದೆ ಎಂದು ಚೀರುತ್ತಾ ಓಡಿ ಹೋಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ನಂತರ ಸಂಪೂರ್ಣ ತಹಶೀಲ್ದಾರ್ ಕಚೇರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಂದಾಯ ಇಲಾಖೆಯ ಸಿಬ್ಬಂದಿ, ನೌಕರರು ತಹಶೀಲ್ದಾರ್ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.