Thursday, October 16, 2025
Google search engine
Home Blog Page 328

ಎಂಟು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಯ ಎಂಟು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗಿಂತ ಮೊದಲೇ ಪಟ್ಟಿ ಬಿಡುಗಡೆಗೊಳಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣೆಯ ಉಸ್ತುವಾರಿ ಮುಕುಲ್ ವಾಸ್ನಿಕ್ ಎಂಟು ಹೆಸರುಗಳಿರುವ ಪಟ್ಟಿಗೆ ಸಹಿ ಹಾಕಿ ಬಿಡುಗಡೆ ಮಾಡಿದ್ದಾರೆ.

ಯಲ್ಲಾಪುರ – ಭೀಮಣ್ಣ ನಾಯ್ಕ್
ಹಿರೇಕೆರೂರು – ಬಿ.ಎಚ್.ಬನ್ನಿಕೋಡ್
ರಾಣೆಬೆನ್ನೂರು – ಕೆ.ಬಿ.ಕೋಳಿವಾಡ
ಚಿಕ್ಕಬಳ್ಳಾಪುರ – ಎಂ.ಅಂಜಿನಪ್ಪ
ಕೆ.ಆರ್.ಪುರಂ – ಎಂ.ನಾರಾಯಸ್ವಾಮಿ
ಮಹಾಲಕ್ಷ್ಮಿಲೇಔಟ್ – ಎಂ. ಶಿವರಾಜ್
ಹೊಸಕೋಟೆ – ಪದ್ಮಾವತಿ ಸುರೇಶ್
ಹುಣಸೂರು – ಎಚ್.ಪಿ.ಮಂಜುನಾಥ್

ಮೈಸೂರು, ಕರ್ನಾಟಕವಾಗಿದ್ದೇಗೆ?; ಇಲ್ಲಿದೆ ಸವಿಸ್ತಾರ ಮಾಹಿತಿ

ಪ್ರಪಂಚದಾದ್ಯಂತ ಕನ್ನಡ ನುಡಿ, ಜನ, ಸಂಸ್ಕೃತಿಗೆ ವಿಶೇಷ ಸ್ಥಾನ ಮಾನವಿದೆ. ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಕನ್ನಡಿಗರು. ಸುಸಂಸ್ಕೃತ ನಡೆ, ನುಡಿಯ ಜನರಿರುವ ರಾಜ್ಯ  ಎಂಬ ಹೆಸರು ರಾಜ್ಯಕ್ಕಿದೆ.

ಈ ಹಿಂದೆ ಮೈಸೂರು ಎಂದು ಈ ಪ್ರಾಂತ್ಯವನ್ನು ಕರೆಯಲಾಗುತ್ತಿತ್ತು. ಕರ್ನಾಟಕ ಏಕೀಕರಣ ಚಳುವಳಿಯನ್ನು ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್ 1905 ರಲ್ಲಿ ಪ್ರಾರಂಭಿಸಿದರು. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.

ಮೈಸೂರು ರಾಜ್ಯದ ಉದಯ

1956 ರ ನವೆಂಬರ್ 1 ರಂದು, ಮದ್ರಾಸ್ಮುಂಬಯಿಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಮೊದಲಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ 1, 1973 ರಂದು “ಕರ್ನಾಟಕ” ಎಂದು ಬದಲಾಯಿತು. ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ರಾಜ್ಯೋತ್ಸವ ಆಚರಣೆ

1956ರ ನವೆಂಬರ್ 1 ರಂದು ಮೈಸೂರು ರಾಜ್ಯವು ಉದಯವಾದ ಸಂಕೇತವಾಗಿ ಕನ್ನಡ ರಾಜ್ಯೋತ್ಸವವನ್ನು ಪ್ರತಿ ವರ್ಷದ ನವೆಂಬರ್ 1 ರಂದು ಸಂತಸ, ಸಂಭ್ರಮದಿಂದ ಆಚರಿಸಲಾಗುತ್ತದೆ.    ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡುವ ಪದ್ದತಿ ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ.

ರಾಜ್ಯೋತ್ಸವದಂದು  ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” ಯನ್ನು ಹಾಡಲಾಗುತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.

ಭಾರತದ ಇನ್ನಿತರ ಪ್ರದೇಶಗಳಾದ ಮುಂಬಯಿದೆಹಲಿ ಇತರೆಡೆಯೂ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾದ, ಸಿಂಗಾಪುರ್ದುಬೈ , ಮಸ್ಕಟ್ದಕ್ಷಿಣಕೊರಿಯಾಆಸ್ಟ್ರೇಲಿಯಾನ್ಯೂಜಿಲ್ಯಾಂಡ್ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

ಪ್ರಧಾನಿಗೆ ಪತ್ರ ಬರೆದ ತಿಪಟೂರು ‌ರೈತರು

ಎಲ್ಲರ ಪತ್ರಗಳಿಗೆ ಉತ್ತರಿಸಿ ಗಮನ ಸೆಳೆಯುವ ಪ್ರಧಾನಿ ನರೇಂದ್ರ ಮೋದಿಯವರು ತಿಪಟೂರು ತಾಲ್ಲೂಕಿನ ರೈತರು ಬರೆದಿರುವ ಪತ್ರಕ್ಕೆ ಏನು ಉತ್ತರ ಕೊಡುತ್ತಾರೆ ಎಂಬ ಕುತೂಹಲ ಮೂಡಿದೆ.

ಗುರುವಾರ ತಿಪಟೂರು ನಗರದಲ್ಲಿ ಎಲ್ಲಿ ನೋಡಿದರಲ್ಲಿ ರೈತರು,

ವಿಡಿಯೋಗೆ ಇಲ್ಲಿ ಕ್ಲಿಕ್ ಮಾಡಿ

#RCEPಬೇಡ #NoRCEP

ಕೃಷಿ, ಹೈನುಗಾರಿಕೆ ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳು `ಆರ್.ಸಿ.ಇ.ಪಿ’ ಒಪ್ಪಂದ ಕುರಿತಾಗಿನ ಆತಂಕದಿಂದ ಮತ್ತು ಬಹುಕಾಳಜಿಯಿಂದ ಈ ಪತ್ರ ಬರೆಯುತ್ತಿದ್ದು, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದಲ್ಲಿ ಭಾರತ ಅಥವಾ ಇತರೆ ಯಾವುದೇ ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಅತೀ ಸೂಕ್ಷ್ಮ ಉತ್ಪನಗಳಾದ ಹಾಲು, ಅಡುಗೆ ಎಣ್ಣೆ, ರೇಷ್ಮೆ ಮತ್ತು ಕೃಷಿ ಬೀಜಗಳ ಮೇಲಿನ ಯಾವುದೇ ಬೌದ್ದಿಕ ಆಸ್ತಿ ಹಕ್ಕು (IPR) ಸೇರಿದಂತೆ ಯಾವುದೇ ರೀತಿಯ ಹಕ್ಕು ಭಾಧ್ಯತೆಗಳನ್ನು ಮತ್ತು ಮುಕ್ತ ವ್ಯಾಪರವನ್ನು ಹೇರಬಾರದು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್. ದೇವರಾಜು ಆಗ್ರಹಿಸಿದರು.
ತಿಪಟೂರಿನಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಇಂದು ನಡೆದ ರೈತ ವಿರೋಧಿ `ಆರ್ ಸಿಇಪಿ’ (RCEP) ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಮಾಡಬಾರದೆಂದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಗ್ರಾಮದೇವತೆ ಕೆಂಪಮ್ಮದೇವಿ ದೇವಸ್ಥಾನದ ಬಳಿ ಉದ್ಘಾಟಿಸಿ ಮಾತನಾಡಿದರು.

ವಿಡಿಯೋಗೆ ಇಲ್ಲೊ ಕ್ಲಿಕ್ ಮಾಡಿ

ಆರ್.ಸಿ.ಇ.ಪಿ(RCEP) ಪ್ರಸ್ತುತ ವಿಶ್ವವ್ಯಾಪಾರ ಸಂಸ್ಥೆಯ (WTO) ಒಪ್ಪಂದಗಳ ನಿಯಮಗಳನ್ನು ಮೀರಿಸುವಂತಹ ಅಸಮಂಜಸ ಕಟ್ಟುಪಾಡುಗಳನ್ನು ಮತ್ತು ನಿಯಮಗಳನ್ನು ಭಾರತ ಸೇರಿದಂತೆ ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಹೇರಲು ಒತ್ತಾಯಿಸುತ್ತಿದ್ದು, ಇದು ಅಂತರರಾಷ್ಟ್ರೀಯ ಬೀಜ ಕಂಪನಿಗಳು UPOV 91 ನಿಯಮಗಳಡಿ ನಮ್ಮ ದೇಸಿ ತಳಿ ಬೀಜಗಳನ್ನು ಕಸಿಯುವ ತಂತ್ರವಾಗಿರುತ್ತದೆ. ಆದುದರಿಂದ ಅಂತರರಾಷ್ಟ್ರೀಯ ಸಸ್ಯಪ್ರಭೇದಗಳ ಸಂರಕ್ಷಣೆ ಒಕ್ಕೂಟದ (UPOV 91) ಯಾವುದೇ ಕಟ್ಟುಪಾಡುಗಳು/ನಿಯಮಗಳನ್ನು ಆರ್.ಸಿ.ಇ.ಪಿ (RCEP) ಒಪ್ಪಂದದಲ್ಲಿ ಭಾರತ ನಿರಾಕರಿಸಬೇಕು ಎಂದು RKS ನ ಸ್ವಾಮಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಈಗಾಗಲೇ ಭಾರತ-ಆಸಿಯಾನ್ ದೇಶಗಳ ಮುಕ್ತ ವ್ಯಾಪಾರ ಒಪ್ಪಂದದ ನಂತರ, ಆಗ್ನೇಯ ರಾಷ್ಟ್ರಗಳಿಂದ ಅದರಲ್ಲಿಯೂ ಫಿಲಿಫೈನ್ಸ್, ಮಲೇಶಿಯಾ, ಇಂಡೋನೇಷಿಯಾದಂತಹ ದೇಶಗಳಿಂದ ಅತೀ ಕಡಿಮೆ ಬೆಲೆಯಲ್ಲಿ ತೆಂಗಿನ ಎಣ್ಣೆ ಮತ್ತು ತೆಂಗು ಉತ್ಪನ್ನಗಳ ಆಮದಿನ ಕಾರಣ ಕರ್ನಾಟಕದ ವಿಶಿಷ್ಟವಾದ ತಿಪಟೂರು ತೆಂಗಿನಕಾಯಿ, ಸೇರಿದಂತೆ ದಕ್ಷಿಣ ಭಾರತದ ತೆಂಗು ಬೆಳೆಯುವ ರೈತರು ತಮ್ಮ ತೆಂಗು ಉತ್ಪನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡು ಕಂಗಾಲಗಿದ್ದು ಆರ್.ಸಿ.ಇ.ಪಿ ಒಪ್ಪಂದವು ತೆಂಗು ಬೆಳೆಗಾರರನ್ನು ಮತ್ತಷ್ಟು ಆತಂಕ್ಕೆ ದೂಡುತ್ತಿದೆ. ಇದೇ ಪರಿಸ್ಥಿತಿಯು ಕರ್ನಾಟಕ ರೇಷ್ಮೆ ಬೆಳೆಯುವ ರೈತರಿಗೂ ಕೂಡ ಉಂಟಾಗಿದ್ದು ಈ ಒಪ್ಪಂದವು ಭಾರತದ ರೈತರ ಜೀವನೋಪಾಯವನ್ನು ಅಪಾಯದಲ್ಲಿ ಸಿಲುಕಿಸುವುದರಲ್ಲಿ ಅನುಮಾನವೇ ಇಲ್ಲ, ಹಾಗಾಗಿ RCEPಯನ್ನು ದುಡಿಯು ರೈತರು ವಿರೋಧಿಸಬೇಕು ಎಂದು ಸೌಹಾರ್ದ ವೇದಿಕೆಯ ಅಲ್ಲಾಬಕಾಶ್ ಹೇಳಿದರು.

ಕೃಷಿಯ ಜೊತೆಜೊತೆಯಾಗಿ ಹೈನುಗಾರಿಕೆ ಕಟ್ಟಿಕೊಂಡ ಭಾರತದ 10 ಕೋಟಿ ರೈತರ ಜೀವನ ಭದ್ರತೆಗೆ ಆಪಾಯ ಬಂದಿದ್ದು ಆರ್.ಸಿ.ಇ.ಪಿ ಕಾರಣದಿಂದ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯ ದೇಶಗಳ ಹಾಲು ಉತ್ಪಾದಿಸುವ ದೈತ್ಯ ಕಂಪನಿಗಳು ಹಾಲು ಮತ್ತು ಅದರ ಉತ್ಪನ್ನಗಳನ್ನು ನಮ್ಮ ದೇಶಕ್ಕೆ ತಂದು ಸುರಿದು ಇಲ್ಲಿನ ಸ್ಥಳೀಯ ಹೈನು ಉದ್ಯಮವನ್ನು ಹಾಗು 30 ವರ್ಷಗಳಿಂದ ಹಳ್ಳಿ ಹಳ್ಳಿಗಳಲ್ಲಿ ರೈತರೇ ಕಟ್ಟಿ ಬೆಳೆಸಿದ ಹಾಲು ಉತ್ಪಾದಕ ಸಂಘಗಳನ್ನು ನಾಶಪಡಿಸಿ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಈ ಒಪ್ಪಂದದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೈಬಿಡದಿದ್ದರೆ ಹೋರಾಟ ಇನ್ನೂ ತೀವ್ರ ರೂಪ ತಾಳಲಿದೆ ಎಂದು ಬೆಂಗಳೂರು ಹಾಲು ಮಹಾ ಮಂಡಳಿಯ ತುಮಕೂರು ಜಿಲ್ಲಾ ನಿರ್ದೇಶಕ ಮಾದೀಹಳ್ಳಿ ಪ್ರಕಾಶ ಸರ್ಕಾರಕ್ಕೆ ಎಚ್ಚರಿಸಿದರು.

ಭಾರತ ಸರ್ಕಾರವು ಈ ಒಪ್ಪಂದಕ್ಕೆ ಬದ್ದರಾಗುವ ಮುನ್ನ ಭಾರತದ ತೆಂಗು ಮತ್ತು ಇತರ ಎಣ್ಣೆ ಬೀಜಗಳ ಉತ್ಪಾದಕ ರೈತರು, ಹಾಲು ಉತ್ಪಾದಕ ರೈತರು, ರೇಷ್ಮೆ ಬೆಳೆಗಾರ ರೈತರು ಹಾಗು ಇತರೆ ಕೃಷಿ ಬೀಜಗಳನ್ನು ಉಳಿಸಿಕೊಳ್ಳುವ, ಬೀಜಗಳನ್ನು ವಿನಿಮಯ ಮಾಡಿಕೊಳ್ಳುವ, ಬೀಜಗಳನ್ನು ಮಾರುವ ಅಥವ ಪ್ರಸರಣ ಮಾಡುವ ಸ್ವಾತಂತ್ರ್ಯಕ್ಕೆ ಚ್ಯುತಿ ಬಾರದಂತೆ ಮತ್ತು UPOV 91 ಅಂಶಗಳನ್ನು ಸೇರಿದಂತ ನಕಾರಾತ್ಮಕ ಅಂಶಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಉಜ್ಜಜ್ಜಿ ರಾಜಣ್ಣ ಅಭಿಪ್ರಾಯಪಟ್ಟರು.

ಈ ಒಪ್ಪಂದಕ್ಕೆ ಒಮ್ಮೆ ಭಾರತ ಬದ್ದವಾದಲ್ಲಿ ಭಾರತದ ಹಾಲು ಉತ್ಪಾದನೆಯ ವ್ಯವಸ್ಥೆ, ತೆಂಗು ಮತ್ತು ಇತರೆ ಎಣ್ಣೆ ಬೀಜಗಳ ಉತ್ಪಾದನೆ ವ್ಯವಸ್ಥೆ, ಕೃಷಿ ಬೀಜ ವ್ಯವಸ್ಥೆ, ಅಂತರರಾಷ್ಟ್ರೀಯ ಹಕ್ಕುಗಳು ಮತ್ತು ಅವುಗಳ ಕಟ್ಟುಪಾಡುಗಳ ಮೇಲೆ ಅಸಮಂಜಸ ಮತ್ತು ದುಷ್ಪರಿಣಾಮ ಬೀರಲಿದೆ. ಆದುದರಿಂದ ಭಾರಿ ವೈವಿಧ್ಯಮಯ ಬದುಕು ಮತ್ತು ಕೃಷಿ ಜ್ಞಾನದ ದೇಶವಾಗಿರುವಂತಹ ಭಾರತದ, ವೈವಿಧ್ಯ ಬೀಜ ಸಂರಕ್ಷಣೆ, ವಿನಿಮಯ ಮತ್ತು ಪ್ರಸರಣ ಸಂಸ್ಕೃತಿಯ ಸ್ವಾತಂತ್ರ್ಯದ ಮೇಲೆ ಹಾಗೂ ರೈತರ ಜೀವನೋಪಾಯ ರಕ್ಷಣೆಯ ವ್ಯವಸ್ಥೆಯ ಮೇಲೆ ಅಪಾಯ ಬೀರುವ ಆರ್.ಸಿ.ಇ.ಪಿ ಅಂತಹ ಭಾರಿ ಮುಕ್ತ ವ್ಯಾಪಾರ ನಮಗೆ ಸ್ವೀಕಾರಾರ್ಹವಲ್ಲ ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆರ್.ಸಿ.ಇ.ಪಿ ಒಪ್ಪಂದವನ್ನು ಧಿಕ್ಕರಿಸಿದರು.

ಕಾಲ್ನಡಿಗೆ ಮೂಲಕ ಸಾವಿರಾರು ರೈತರು ಉಪವಿಭಾಗಾಧಿಕಾರಿಗಳ ಕಛೇರಿ ಮುಂದೆ ಜಮಾಯಿಸಿದರು. ಪ್ರಾಂತ್ಯ ರೈತ ಸಂಘದ ಚನ್ನಬಸವಣ್ಣ ಮಾತನಾಡಿದರು. ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದ ಸಾರಾಂಶವನ್ನು ಓದಿ ನಂತರ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಸಿರು ಸೇನೆಯ ತಿಮ್ಲಾಪುರ ದೇವರಾಜು, ಬಸ್ತೀಹಳ್ಳಿ ರಾಜಣ್ಣ, ಮನೋಹರ್ ಪಟೇಲ್, ಸಿ.ಬಿ.ಶಶಿಧರ್, ಎಂ.ಆರ್. ಸಂಗಮೇಶ್, ನ್ಯಾಕೇನಹಳ್ಳಿ ಸುರೇಶ್ ಹಾಜರಿದ್ದರು. ಸಾವಿರಾರು ರೈತರು ಭಾಗವಹಿಸಿದ್ದರು. ನೂರಾರು ಮಹಿಳಾ ಹಾಲು ಉತ್ಪಾದಕರು ಪ್ರತಿಭಟನೆಯಲ್ಲಿ ಭಾಗವಹಿಸಿ RCEP ಒಪ್ಪಂದದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾಸ್ ಸ್ಟೌ ಸ್ಪೋಟ; ರೈಲಿನಲ್ಲಿದ್ದ 65 ಕ್ಕೂ ಹೆಚ್ಚಿನ ಪ್ರಯಾಣಿಕರು ಸಾವು

ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿ–ರಾವಲ್ಪಿಂಡಿ ತೇಜ್‌ಗಂ ಎಕ್ಸ್‌ಪ್ರೆಸ್‌ರೈಲಿನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಆವರಿಸಿದ ಪರಿಣಾಮ 65 ಕ್ಕೂ ಹೆಚ್ಚಿನ ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಸಾಕಷ್ಟು ಮಂದಿ ಪ್ರಯಾಣಿಕರು ಚಲಿಸುವ ರೈಲಿನಿಂದ ಹೊರಗೆ ಜಿಗಿದಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ತೇಜ್‌ಗಂ ರೈಲಿನ ಮೂರು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ಬೋಗಿಗಳಲ್ಲಿದ್ದವರು ಸಂಪೂರ್ಣವಾಗಿ ಸುಟ್ಟು ಹೋಗಿದ್ದಾರೆ. ಬೆಳಗಿನ ತಿಂಡಿ ತಯಾರಿಸಲು ಬಳಸುತ್ತಿದ್ದ ಎರಡು ಪುಟ್ಟ ಗ್ಯಾಸ್‌ ಸ್ಟೌಗಳು ಸ್ಫೋಟಗೊಂಡಿವೆ. ಬೆಂಕಿ ವೇಗವಾಗಿ ರೈಲು ಬೋಗಿಗಳನ್ನು ಆವರಿಸಿದೆ. ಪಂಜಾಬ್‌ ಪ್ರಾಂತ್ಯದ ರಹಿಮ್‌ ಯಾರ್‌ ಖಾನ್‌ ಪಟ್ಟಣ ಸಮೀಪ ಅವಘಡ ಸಂಭವಿಸಿದೆ.

ಅಡುಗೆಗೆ ಬಳಸಲು ಇಟ್ಟಿದ್ದ ಎಣ್ಣೆ ಬೆಂಕಿಯ ತೀವ್ರತೆ ಹೆಚ್ಚಲು ಕಾರಣವಾಗಿದೆ. 65 ಕ್ಕೂ ಹೆಚ್ಚಿನ ಪ್ರಯಾಣಿಕರು ಮೃತಪಟ್ಟಿದ್ದು, 15ಕ್ಕೂ ಹೆಚ್ಚಿನವರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

 

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕಾರ್ಮಿಕರ ಸಾವು

ತುಮಕೂರು: ಕೆ. ಬೊಮ್ಮನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಪ್ರವೀಣ್ ಮತ್ತು ರಮೇಶ(21)  ಮೃತಪಟ್ಟಿದ್ದಾರೆ.

ತುಮಕೂರು ಸಮೀಪವಿರುವ ಕೆ.ಪಾಲಸಂದ್ರ ಪಾಳ್ಯದ ನಿವಾಸಿಗಳಾದ ಪ್ರವೀಣ್ ಹಾಗೂ ರಮೇಶ್  ವಸಂತ ನರಸಪುರದ ಕೈಗಾರಿಕಾ ಪ್ರದೇಶದಲ್ಲಿ  ಕೆಲಸಕ್ಕೆ ಹೋಗಿದ್ದರು. ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಹಿಂತಿರುಗುವಾಗ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ  ಇಬ್ಬರೂ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಪಬ್ಲಿಕ್ ಸ್ಟೋರಿಗೆ ಮಾಹಿತಿ ನೀಡಿದರು.

ಡಿಕ್ಕಿ ಹೊಡೆತಕ್ಕೆ  ರಮೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮತ್ತೊಬ್ಬ ಗಾಯಾಳು ಪ್ರವೀಣ್  ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ  ಮೃತಪಟ್ಟರು.

ಮತ್ತೊಬ್ಬ ಗಾಯಾಳು ದೊಡ್ಡಬಳ್ಳಾಪುರಸ ಮಧುಸೂಧನ್ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೇಟಿಯಂ, ಫೋನ್ ಪೇ ಒಂದು ದಿನದ ನಷ್ಟ ಎಷ್ಟು ಗೊತ್ತೇ?

ಇ- ಪೇಮೆಂಟ್ ದೈತ್ಯ ಸಂಸ್ಥೆ ಗಳು ನಷ್ಟ ದಲ್ಲಿದ್ದು, ಪೇಟಿಯಂ, ಅಮೆಜಾನ್ ಪೆ, ಪೋನ್ ಪೆ ದಿನಕ್ಕೆ 20ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ ಎಂದು ಟಾಪ್ಲರ್ ಎನ್ ಟ್ಯ್ತಾಕರ್ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷದ ಹಣಹಾಸು ವರ್ಷ ದಲ್ಲಿ ನಷ್ಟ ಇನ್ನೂ ಹೆಚ್ಚಾಗಿದೆ ಎಂದು ಹೇಳಿದೆ.
ಕಳೆದ ವರ್ಷ ಮಾರ್ಚ್ ತಿಂಗಳ ಕೊನೆಯಲ್ಲಿ ಈ ಮೂರು ಸಂಸ್ಥೆ ಗಳ ಒಟ್ಟು ನಷ್ಟ 2729 ಕೋಟಿ ರೂಪಾಯಿ ಆಗಿತ್ತು ಎಂದು ಹೇಳಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ದಿನ ಈ ಸಂಸ್ಥೆಗಳು ಪ್ರತಿ ದಿನ 7.5 ಕೋಟಿ ನಷ್ಟ ಅನುಭವಿಸುತ್ತಿದ್ದವು. ಈ ವರ್ಷ ಇದು ಪ್ರತಿ ದಿನ 20 ಕೋಟಿ ರೂಪಾಯಿಗೆ ಹೆಚ್ಚಿದೆ ಎಂದು ವರದಿ ಹೇಳಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವಿಸ್ತಾರವಾದ ವರದಿ ಪ್ರಕಟಿಸಿದೆ.

ಇಷ್ಟು ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಲು ಈ ಸಂಸ್ಥೆಗಳನಡುವೆ ಇರುವ ಪೈಪೋಟಿ, ಮಾರುಕಟ್ಟೆ ಯನ್ನು ಹಿಡಿತದಲ್ಲಿ ಹಿಡಿದುಕೊಳ್ಳಲು ಮಾಡುತ್ತಿರುವ ಜಾಹೀರಾತು ಖರ್ಚು, ಗ್ರಾಹಕರಿಗೆ ನೀಡುತ್ತಿರುವ ಪೇ ಬ್ಯಾಕ್, ಡಿಸ್ಕೌಂಟ್ ಕೊಡುಗೆಗಳು ಕಾರಣ ಎಂದು ವಿಶ್ಲೇಷಿಸಲಾಗಿದೆ.

ದಲಿತರ ಪ್ರತಿಭಟನೆ

ಸಭೆಗೆ ಹಾಜರಾಗದ ಅಧಿಕಾರಿಗಳು ದಲಿತ ಮುಖಂಡರ ಪ್ರತಿಭಟನೆ, ಧರಣಿ
ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾರ್ವಜನಿಕ ಕುಂದು ಕೊರತೆ ಸಭೆಗೆ ಬಹುತೇಕ ಅಧಿಕಾರಿಗಳು ಗೈರುಹಾಜರಾಗಿರುವುದನ್ನು ಖಂಡಿಸಿ ದಲಿತ ಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ\nರು. ಸಭಾಂಗಣದ ಬಳಿಕ ಜಿಲ್ಲಾ ಪಂಚಾಯಿತಿ ಬಾಗಿಲಲ್ಲಿ ಧರಣಿ ಕೂತು ಸಭೆಗೆ ಬಾರದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ತಹಶೀಲ್ದಾರ್ ಗಳು, ಎಸಿಗಳನ್ನು ಬಿಟ್ಟರೆ ಸುಮಾರು 26ಕ್ಕೂ ಇಲಾಖೆಗಳ ಅಧಿಕಾರಿಗಳು ತಮ್ಮ ಅಧೀನಾಧಿಕಾರಿಗಳನ್ನು ಕಳಿಸಿ ತಾವು ಸಭೆಯಿಂದ ದೂರ ಉಳಿದಿದ್ದರು. ಇದನ್ನು ಗಮನಿಸಿದ ದಲಿತ ಮುಖಂಡರು ಅಧಿಕಾರಿಗಳಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಸಭೆಗೆ ಬಾರದೆ ನಮಗೆ ಅವಮಾನ ಮಾಡಿದ್ದಾರೆ. ಯಾರೆಲ್ಲಾ ಸಭೆಗೆ ಬಂದಿಲ್ಲವೋ ಅಂಥವರನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದು ಕುಳಿತರು.

ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣಿ ದಲಿತ ಮುಖಂಡರನ್ನು ಸಮಾಧಾನಪಡಿಸಲು ಮಾಡಿದ ಯತ್ನ ವಿಫಲವಾಯಿತು. ಬಳಿಕ ಧರಣಿರ ಬಳಿಗೆ ಬಂದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠ ಡಾ.ವಂಶಿಕೃಷ್ಣ ನಾವು ಅಪಘಾತ ನಡೆದ ಸ್ಥಳಕ್ಕೆ ಹೋಗಿದ್ದೆವು. ಬೆಳಗ್ಗೆಯೇ ದುರಂತ ನಡೆದಿದ್ದರಿಂದ ಸಭೆಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ಮುಂದೆ ಸಭೆ ನಡೆಸೋಣ ಎಂದು ಧರಣಿನಿರತ ದಲಿತ ಮುಖಂಡರನ್ನು ಸಮಾಧಾನಪಡಿಸಿದರು.
ಬಳಿಕ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ನ್ಯಾಯಾಲಯದಲ್ಲಿ ಬಾಕಿಯಿರುವ ದಲಿತ ಸಮುದಾಯದವರ ದೂರು ಪ್ರಕರಣಗಳ ನಿಖರ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಗೆ ಸಮರ್ಪಕ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಮುಂದಿನ ಸಭೆಯೊಳಗಾಗಿ ನಿಖರ ಮಾಹಿಯೊಂದಿಗೆ ಬರಬೇಕು ಎಂದು ನಿರ್ದೇಶಿಸಿದರು.

ಕೋರಾ ಹೋಬಳಿ ಬಿಟ್ಟನಕುರಿಕೆ ಗ್ರಾಮದಲ್ಲಿ ಅಲ್ಪ-ಸ್ಪಲ್ಪ ಜಮೀನು ಹೊಂದಿರುವ 30 ರಿಂದ 40 ದಲಿತರ ಕುಟುಂಬಗಳಿದ್ದು, ಇವರ ಜಮೀನಿಗೆ ಗೊಬ್ಬರ ಗಾಡಿಗಳು ಹೋಗಲು ರಸ್ತೆ ಸಂಪರ್ಕ ಇರುವುದಿಲ್ಲ. ಈ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ದಲಿತರ ಸ್ಮಶಾನದ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಮುಖಂಡರೊಬ್ಬರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಸಂಪರ್ಕ ಕಲ್ಪಿಸಬೇಕು. ಸ್ಮಶಾನದ ಜಾಗ ಒತ್ತುವರಿ ಮಾಹಿತಿ ನೀಡಬೇಕೆಂದು ತಹಶೀಲ್ದಾರ್ಗೆ ಸೂಚಿಸಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 16 ದಲಿತ ಕಾಲೋನಿಗಳಿವೆ. ಅಲ್ಲಿ ವಾಸವಿರುವ ದಲಿತ ನಿವಾಸಿಗಳಿಗೆ ಪಾಲಿಕೆಯಿಂದ ನಿವೇಶನ ಖಾತೆ ನೀಡುವಾಗ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಕೊಳಗೇರಿ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ ದೂರಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭೀಕರ ಅಪಘಾತ: 5 ಮಂದಿ ಸ್ಥಳದಲ್ಲೆ ಸಾವು

ತುಮಕೂರು:
ಖಾಸಗಿ ಬಸ್ ಪಲ್ಟಿ ಹೊಡೆದು 5 ಜನ ಸ್ಥಳದಲ್ಲೆ ಮೃತಪಟ್ಟು, 22 ಜನರಿಗೆ ತೀವ್ರ ತರಹದ ಪೆಟ್ಟಾಗಿರುವ ಘಟನೆ ಪಾವಗಡ-ತುಮಕೂರು ರಾಜ್ಯ ಹೆದ್ದಾರಿ ರಸ್ತೆಯ ಜಟ್ಟಿಅಗ್ರಹಾರ ಗ್ರಾಮದ ಬಳಿ ನಡೆದಿದೆ.
ಕೊರಟಗೆರೆ ಪಟ್ಟಣದ ಕೋಟೆ ಬೀದಿ ವಾಸಿ ಶ್ರೀನಿವಾಸ(40) ಚಿಕ್ಕ ಮಸೀದಿ ಬಳಿ ವಾಸಿ ಸಾದತ್ ಪಾಷಾ(18), ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಗ್ರಾಮದ ಅಕ್ರಮ್ ಪಾಷಾ, ಮಧುಗಿರಿ ತಾಲ್ಲೂಕಿನ ಪುಲಮಾಚಿ ಗ್ರಾಮದ ಶಿವಕುಮಾರ(27), ತುಮಕೂರು ತಾಲ್ಲೂಕು ಕೋರಾ ಹೋಬಳಿ ಗೇರಹಳ್ಳಿಯ ಇಮ್ರಾನ್ ಸ್ಥಳದಲ್ಲೆ ಮೃತಪಟ್ಟವರು. ಬುಧವಾರ ಬೆಳಿಗ್ಗೆ 8.50 ಸುಮಾರಿನಲ್ಲಿ ಪಾವಗಡದಿಂದ ತುಮಕೂರಿಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. 22 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆ ಹಾಗೂ ಕೊರಟಗೆರೆ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಕರ ಅಪಘಾತಕ್ಕೆ ಚಾಲಕನ ನಿರ್ಲಕ್ಷ ಹಾಗೂ ಅಜಾಗರೂಕತೆಯೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ವಾಸಿ ಇಮಾಮ್ ಬೇಗ್ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಅತಿವೇಗ ಹಾಗೂ ಅಜಾಗರೂಕ ಚಾಲನೆ, ಇತರರಿಗೆ ಗಾಯ, ಹಾಗೂ ನಿರ್ಲಕ್ಷತೆಯಿಂದ ಸಾವು ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತಿವಾರಿ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಮೃತರ ಕುಟುಂಭಕ್ಕೆ ಸರ್ಕಾರದಿಂದ ಸಿಗಬಹುದಾದ ಪರಿಹಾರದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದರು. ಈ ವೇಳೆ ಸ್ಥಳೀಯರು ಖಾಸಗಿ ಬಸ್ ಗಳ ಅತಿ ವೇಗ ಹಾಗೂ ಅಜಾಗರೂಕ ಚಾಲನೆ ವಿರುದ್ಧ ಸಚಿವರ ಎದುರು ಆಕ್ರೋಶ ವ್ಯಕ್ತ ಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಖಾಸಗಿ ಬಸ್ ಮಾಲೀಕರ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಆನಂತರ ಸರ್ಕಾರಿ ಆಸ್ಪತ್ರಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ ಘಟನಾ ಸ್ಥಳ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಾತಿಸುವುದಾಗಿ ತಿಳಿಸಿದರು. ಆರ್ಟಿಓ ಅಧಿಕಾಋಇಗಳು ಖಾಸಗಿ ಬಸ್ ಮಾಲೀಕರ ಶಾಮೀಲಾಗಿ ಅವೈಜ್ಞಾನಿಕ ವೇಳೆಯನ್ನು ನಿಗದಿ ಪಡಿಸಿ 2 ನಿಮಿಷಕ್ಕೊಂದು ಬಸ್ ಎಂಬಂತೆ ಟೈಂ ನೀಡಲಾಗಿದೆ. ಇದರಿಂದಾಗಿ ಬಸ್ ಚಾಲಕರು ವಿದಿಯಿಲ್ಲದೇ ಅತಿ ವೇಗದ ಚಾಲನೆ ಮಾಡುತ್ತಿದ್ದಾರೆ. ಈ ವೇಳೆ ಅಪಘಾತ ಸಂಭವಿಸುತ್ತಲಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. ಸಾರಿಗೆ ಸಚಿವರೊಂದಿಗೆ ಮಾತನಾಡಿ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.

ಕುಣಿಗಲ್ ಮೊರಾರ್ಜಿ ವಸತಿ ಶಾಲೆಗೆ ಹೋಗಲು ಪಾವಗಡದಿಂದ ನಾನು ನನ್ನ ಅಮ್ಮ ಬಸ್ಸ್ ಹತ್ತಿದ್ದೆವು. ಅಲ್ಲಿಂದಲೂ ಬಸ್ ಅತಿ ವೇಗವಾಗಿಯೇ ಬಂತು. ಮುಂಜಾನೆ ಬೇಗ ಎದ್ದಿದ್ದರಿಂದ ಬಸ್ಸಿನ ಬಲಭಾಗದ ಸೀಟಿನಲ್ಲಿ ಕುಳಿತ್ತಿದ್ದ ನಮಗೆ ನಿದ್ದೆ ಹತ್ತಿತ್ತು. ಇದ್ದಕ್ಕಿದ್ದಹಾಗೆ ಬಸ್ ಜೋರಾಗಿ ವಾಲಾಡತೊಡಗಿತು. ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಬಸ್ಸು ನೆಲಕ್ಕೆ ಏಕಾಏಕಿ ಅಪ್ಪಳಿಸಿತು. ಏನಾಯಿತು ಎನ್ನುವಷ್ಟರಲ್ಲಿ ನಾವು ಬಸ್ಸಿನಲ್ಲಿ ಒಬ್ಬರ ಮೇಲೊಬ್ಬರು ಬೀಳತೊಡಗಿದೆವು. ಜನರು ಕಿರುಚಾಟ ಅಷ್ಟೇ ಕೀಳುತ್ತಿತ್ತು. ಯಾರೋ ಬಂದು ಬಸ್ಸಿನ ಗಾಜು ಹೊಡೆದು ನಮನ್ನು ಆಚೆ ಕರೆದುಕೊಂಡರು. ನನಗೆ ಯಾವುದೇ ಗಾಯ ಆಗಿರಲಿಲ್ಲ. ನನ್ನ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಘಟನೆಯಿಂದ ಆನಂಕಕ್ಕೀಡಾಗಿದ್ದ ಕುಣಿಗಲ್ ಮುರಾರ್ಜಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಪಾವಗಡ ತಾಲ್ಲೂಕಿನ ಶ್ರೀರಾಂಪರದ ವಿದ್ಯಾರ್ಥಿ ಚಂದ್ರಶೇಖರ್ ವಿವರಿಸಿದರು.

ಅಗ್ರಹಾರದ ಬಳಿ ಸಾಕಷ್ಟು ಅಪಘಾತಗಳಾಗಿವೆ. ಎಲ್ಲಾ ಅಪಘಾತಗಳು ಅತಿವೇಗ ಹಾಗೂ ಅಜಾಗರೂಕತೆಯಿಂದಲೇ ಆಗಿವೆ. ಈ ರಸ್ತೆಯಲ್ಲಿ ಖಾಸಗಿ ಬಸ್ಸುಗಳು ಯಾವಗಲೂ ಅತಿ ವೇಗವಾಗಿಯೇ ಚಲಿಸುತ್ತಿರುತ್ತವೆ. ರಸ್ತೆ ಪಕ್ಕದಲ್ಲೆ ಸರ್ಕಾರಿ ಶಾಲೆ ಇದೆ. ಆದರೂ ಯಾವುದೇ ಅಡೆ ತಡೆಯಿಲ್ಲದೆ ಜೋರಾಗಿ ಬಸ್ ಚಲಿಸುತ್ತವೆ. ಖಾಸಗಿ ಬಸ್ ಗಳಿಗೆ ಕಡಿಮೆ ಟೈಮ್ ಅವಧಿ ನೀಡಿರುವುದೇ ಇದಕ್ಕೆ ಕಾರಣ. ಆರ್ಟಿಓ ಅವರು ಖಾಸಗಿ ಬಸ್ಸುಗಳಿಗೆ ಸರಿಯಾದ ವೇಳೆ ನಿಗಧಿ ಮಾಡದೇ ಇರುವುದೇ ಇಂತಹ ಘಟನೆ ಸಂಭವಿಸಿರುವುದು ಪ್ರಮುಖ ಕಾರಣವಾಗಿದೆ. ಪ್ರತಿ ಎರಡು ನಿಮಿಷಕ್ಕೊಂದು ಪರ್ಮಿಟ್ ನೀಡಿದ್ದಾರೆ. ಇದರಿಂದ ಖಾಸಗಿ ಬಸ್ ಚಾಲಕರು ಪೈಪೋಟಿ ಮೇಲೆ ವಾಹನ ಚಲಾಯಿಸುತ್ತಾರೆ. ಇದರ ಹೊಣೆಯನ್ನು ಆರ್ಟಿಓ ಅಧಿಕಾರಿಗಳೇ ಹೊರಬೇಕು. ಈ ಜಾಗದಲ್ಲಿ ರಸ್ತೆ ಉಬ್ಬುಗಳನ್ನು ಹಾಕುವ ಮೂಲಕ ವಾಹನ ವೇಗ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕಿದೆ. ಬಹಳಷ್ಟು ಸಾರಿ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗುತ್ತಿಲ್ಲ ಎಂದು ಅಗ್ರಹಾರ ಗ್ರಾಮಸ್ಥ ಸಿದ್ದಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಊರಿನ ಮುಂಭಾಗ ರಸ್ತೆ ಪಕ್ಕದಲ್ಲಿ ನಾವು ನಿಂತು ಮಾತಾಡ್ತಾ ಇದ್ವಿ. ಕೊರಟಗೆರೆ ಕಡೆಯಿಂದ ಬಸ್ಸು ಜೋರಾಗಿ ಬರ್ತಾಯಿತ್ತು. ನೋಡ್ತಾ, ನೋಡ್ತಾ ಬಸ್ಸು ಅತ್ತಿಂದಿತ್ತ ಜೋರಾಗಿ ವಾಲಾಡಿಕೊಂಡು ಬರೋಕೆ ಸ್ಟಾರ್ಟ್ ಮಾಡ್ತು. ಬರೋ ಸ್ಪೀಡಲ್ಲೆ ನೋಡ್ತಿದಂಗೆ ಬಂದು ದೊಪ್ಪ ಅಂತ ಬಿತ್ತು. ಬಸ್ಸಲ್ಲಿದ್ದ ಜನ ಕಿಟಾರನೇ ಜೋರಾಗಿ ಕಿರುಚತೊಡಗಿದರು. ಹತ್ರಕ್ಕೆ ಹೋಗಿ ನೋಡ್ದಾಗ ಕೆಲವರಿಗೆ ತುಂಬಾ ಗಾಯಗಳಾಗಿ ನರಳಾಡ್ತಿದ್ರು. ಕೆಲವ್ರು ಬಸ್ ಬಿದ್ದ ತಕ್ಷಣನೇ ಸತ್ತಿದ್ರು ಎಂದು ಘಟನೆ ಬಗ್ಗೆ ಭಯದಿಂದಲೇ ವಿವರಿಸಿದರು ಪ್ರತ್ಯಕ್ಷದರ್ಶಿ ಅಗ್ರಾಹಾರದ ಜಯಮ್ಮ.

 

ಹೋದ್ ಜೀವ ಬಂದಂಗಾತೋ ಯಪ್ಪಾ…
ಮಕ್ಕಳನ್ನು ಹಾಸ್ಟಲ್ ಗೆ ಬಿಡಲೆಂದು ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯಿಂದ ಬಸ್ಸು ಹತ್ತಿದೆವು ಬಸ್ನ ಬಲಭಾಗದಲ್ಲಿ ಕುಳಿತ್ತಿದ್ದ ನಾನು ನಿದ್ದೆಗೆ ಜಾರಿದ್ದೆವು. ಬಸ್ ಕೆಳಗೆ ಬಿದ್ದಾಗ ಜೊತೆಯಲ್ಲೆ ಕುಳಿತ್ತಿದ್ದ ನಾನು ನನ್ನ ಮಕ್ಕಳಿಬ್ಬರು ಚಿಲ್ಲಾಪಿಲ್ಲಿಯಾಗಿ ಬಿದ್ದೆವು. ಬಸ್ಸಿನಲ್ಲಿದ್ದವರು ಬಿದ್ದ ರಭಸಕ್ಕೆ ಗಾಯಗೊಂಡು ಚೀರಾಡ ತೊಡಗಿದರು. ನಾವು ಬಸ್ ಕಿಟಕಿಯಿಂದ ಹೊರ ಬಂದೆವು. ಬಸ್ ಬಿದ್ದಾಗ ಎಡಭಾಗದಲ್ಲಿ ಕುಳಿತ್ತಿದ್ದವರ ಮೇಲೆ ಬಿದ್ದಿದ್ದರಿಂದ ನನಗೂ ನನ್ನ ಮಕ್ಕಳಿಗೂ ಯಾವುದೇ ತರಹ ಪೆಟ್ಟಾಗಲಿಲ್ಲ. ಹೋದ್ ಜೀವ ಬಂದಂಗಾತೋ ಯಪ್ಪಾ. ಬಸ್ ಹತ್ತಿದಾಗಿನಿಂದ ಬಹಳ ಜೋರಾಗೇ ಬರುತ್ತಿತ್ತು. ಬಸ್ಸಿನ ತುಂಬಾ ಜನರಿದ್ದರು ಎಂದು ಬಸ್ಸಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ತುಮಕೂರಿಗೆ ಪ್ರಯಾಣ ಬೆಳೆಸಿದ್ದ ಮಧುಗಿರಿ ತಾಲ್ಲೂಕಿನ ಸತ್ಗೇನಹಳ್ಳಿ ವಾಸಿ ರಮೇಶ ವಿವರಿಸಿದರು.

9

ತುಮಕೂರು ವಿವಿ ವೈ.ಎಸ್.ಸಿದ್ದೇಗೌಡರಿಗೆ ಮೈಸೂರಿನಲ್ಲಿ ಸನ್ಮಾನ

ಮೈಸೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ, ಎಂಎಸ್.ಡಬ್ಲ್ಯೂ ಸೋಸಿಯಲೈಟ್ಸ್ ಹಾಗೂ ಸಮಾಜ ಕಾರ್ಯ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಸಭಾಂಗಣ ದಲ್ಲಿ ಅಕ್ಟೋಬರ್ 31ರಂದು ಬೆಳಗ್ಗೆ 10 ರಿಂದ 11ಗಂಟೆಯವರೆಗೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿದೆ.
ನವದೆಹಲಿಯ ಭಾರತೀ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್ ಕನಿಟ್ಕರ್ ವಿಚಾರಸಂಕಿರಣ ಉದ್ಘಾಟಿಸಿ ಮುಖ್ಯಭಾಷಣ ಮಾಡಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಎಂ.ಕೆ.ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ವೈ.ಎಸ್.ಸಿದ್ದೇಗೌಡ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಚಂದ್ರಮೌಳಿ ಭಾಗವಹಿಸುವರು. ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿದ್ದೇಗೌಡ ಅವರನ್ನು ಇದೇ ವೇಳೆ ಸನ್ಮಾನಿಸುವರು.

ಕುಲಪತಿಗಳಾಗಿರುವ ಸಿದ್ಧೇಗೌಡರ ಅಭಿನಂದನವು ಅ.31ರಂದು ಬೆಳಗ್ಗೆ 7 ಗಂಟೆಗೆ ಗಂಗೋತ್ರಿ ಆವರಣದಲ್ಲಿ 37 ಸಸಿಗಳನ್ನು ನಡೆಸಲಾಗುವುದು, ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಭಾಷ್ಯಂ ಸ್ವಾಮೀ ಸಾನಿಧ್ಯ ವಹಿಸುವರು, . ವಿಶ್ರಾಂತ ಕುಲಪತಿ ಡಾ.ಎನ್.ಎಸ್.ರಾಮೇಗೌಡ, ಕನ್ನಡ ಹೋರಾಟಗಾರ ಪ.ಮಲ್ಲೇಶ್, ಡಾ.ಬಿಷ್ಣು ಮೋಹನ್ ದಾಸ್ ಇನ್ನಿತರರು ಹಾಜರಿರಲಿದ್ದಾರೆ.
ಸಂಜೆ 4ಕ್ಕೆ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಾ.ನಿರ್ಮಲನಾಥ ಸ್ವಾಮೀಜಿ, ಸಚಿವರಾದ ಡಾ.ಸಿ.ಅಶ್ವಥ್ ನಾರಾಯಣ ಹಾಗೂ ಇತರರು ಇರಲಿದ್ದಾರೆ. ಡಾ.ವೈ.ಎಸ್.ಎಸ್. ಕುರಿತ ಅಭಿನಂದನಾ ಗ್ರಂಥ ‘ಸವ್ಯಸಾಚಿ’ ಬಿಡುಗಡೆಗೊಳಿಸಲಾಗುವುದು..

ನನ್ನ ಮೊದಲ‌ ವಿಮಾನಯಾನ

0

ವಿಮಾನ ಹಾರಾಟವನ್ನು ಬಾಲ್ಯದಿಂದ ಆಗಸದಲ್ಲಿ ನೋಡಿದ್ದೆ ಹೊರತು ಅದನ್ನು ಹತ್ತುವದಿರಲಿ‌ ಅದನ್ನು ಹತ್ತಿರದಿಂದ ಸಹ ನೋಡಿರಲಿಲ್ಲ. ಹೀಗೆ ಯಾವುದೋ ಒಂದು ಕಾರಣಕ್ಕೆ ವಿಮಾನ ಪ್ರಯಾಣ ಮಾಡಲೇಬೇಕೆಂಬ ಆಸೆ ನನ್ನಲ್ಲಿ ಚಿಗುರು ಒಡೆಯಿತು. ವಿಮಾನ ಪ್ರಯಾಣವನ್ನ ಮಾಡುವ‌ ಓಕೆ. ಸರಿ. ಹೋಗುವದಾದರು ಎಲ್ಲಿಗೆ? ಏಕೆಂದರೆ,‌ ನನ್ನದು ವಿಮಾನ‌ ಹತ್ತುವ ಉದ್ದೇಶವೇ ಹೊರತು ಕೆಲಸ ನಿಮಿತ್ತ ಅಥವಾ ಪ್ರವಾಸ ಕೈಗೊಳ್ಳುವ ಉದ್ದೇಶವೇ ಇರಲಿಲ್ಲ.

ಹೀಗೆ ಗುರಿ ಇಲ್ಲದ ಪ್ರಯಾಣವನ್ನು ಮಾಡಲೇಬೇಕೆಂಬ ಛಲದಲ್ಲಿ ಸರಿ,ಎಲ್ಲಿಗಾದರು ಹೋಗಬೇಕಲ್ಲವೆ? ಹತ್ತಿರದ ಊರುಗಳನ್ನು ಪಟ್ಟಿ ಮಾಡ ತೊಡಗಿ ತೀರಾ ಹತ್ತಿರವೂ ಅಲ್ಲದ ದೂರವೂ ಅಲ್ಲದ ನೆರೆಯ ಕೇರಳದ ರಾಜಧಾನಿ ತಿರುವನಂತಪುರವನ್ನು ಆಯ್ಕೆ ಮಾಡಿಕೊಂಡು ತುಮಕೂರಿನ‌ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಟಿಕೇಟನ್ನು ಕಳೆದ ಏಪ್ರಿಲ್ 18 ದಿನಾಂಕಕ್ಕೆ ಬುಕ್ ಮಾಡಿದ್ದಾಯ್ತು.

ಪೋರ್ಟ್ ನ್ನು ನಾನು ನೋಡಿರದ ಕಾರಣ , ಅಲ್ಲಿ ವಿಮಾನ ಹತ್ತುವ ಪ್ರಕ್ರಿಯೆಗಳನ್ನು ಟ್ರಾವೆಲ್ ಏಜೆನ್ಸಿಯರಲ್ಲಿ ತಿಳಿದುಕೊಂಡು ಸಿದ್ದನಾಗಿದ್ದೆ.‌ ಪ್ರಯಾಣದ ದಿನ ಬಂತು. ನಾನು ಬುಕ್ ಮಾಡಿದ್ದ ಏರ್ ಇಂಡಿಯಾ ವಿಮಾನವು ಬೆಳಗ್ಗೆ ಎಂಟು ಗಂಟೆಗೆ ಹೊರಡುವುದಿತ್ತು. ನಮ್ಮೂರಿನಿಂದ ಬೆಳಗ್ಗೆ ಎಂಟು ಗಂಟೆಗೆ ಅಲ್ಲಿಗೆ ತಲುಪಲು ಸಾಧ್ಯವಾಗದ ಕಾರಣ ,ಹಿಂದಿನ ರಾತ್ರಿಯ ಎರಡು ಗಂಟೆಗೆ ವಿಮಾನ ನಿಲ್ದಾಣ ತಲುಪಿ ಬೆಳಗಿನ ವಿಮಾನಕ್ಕೆ ಕಾದು ಕಾದು ಸುಸ್ತಾಯ್ತು.

ಅಂತು ಸಮಯವಾಯ್ತು. ಏರ್ ಇಂಡಿಯಾ ಸಿಬ್ಬಂದಿ ನಮ್ಮನ್ನ ವಿಮಾನಕ್ಕೆ ಹತ್ತಿಸಿದ್ದಾಯ್ತು. ಹತ್ತುವ ಮುನ್ನ ವಿಮಾನದ ಮುಂದೆ ನಿಂತು ಒಂದು ಸೆಲ್ಫಿ ತಗೆದುಕೊಂಡು ಆಕ್ಷಣವೇ ಫೇಸದ ಬುಕ್ಕಲ್ಲಿ ಆ ಫೋಟೋಕ್ಕೆ ನನ್ನ ಮೊದಲ ವಿಮಾನಯಾನ ಎಂಬ ಒಕ್ಕಣೆಯೊಂದಿಗೆ ಅಪ್ಲೋಡ್ ಮಾಡುವುದನ್ನ ಮರೆಯಲಿಲ್ಲ.

ವಿಮಾನ ಟೇಕ್ ಆಫ್ ಆಗಲು ಅಣಿಯಾಗುತ್ತಿತ್ತು.‌ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರುವುದಕ್ಕೂ ಕ್ಯೂ ನಿಂತು ಒಂದಾಂದ ಮೇಲೆ ಒಂದರಂತೆ ಹಾರಬೇಕು ಎಂಬುದು ಆಗಲೇ ಗೊತ್ತಾಗಿದ್ದು.‌ ಅಂಥೂ ಇಂತೂ ವಿಮಾನ ರನ್ ವೇ ಗೆ ಬಂದು ರನ್ ವೇ ಯಲ್ಲಿ ಹಾರಲು ವೇಗ ಹೆಚ್ಚಿಸಿಕೊಂಡಂತೆ ನನ್ನ ಹೃಯದ ಬಡಿತದ ವೇಗವೂ ಹೆಚ್ಚಾಗ ತೊಡಗಿತು. ವೇಗವಾಗಿ ಓಡಿದ ವಿಮಾನ ಮೇಲಕ್ಕೆ ಹಾರುವುದಕ್ಕೆ‌ ತೊಡಗಿದಾಗ ಸಣ್ಣಗೆ ಹೆದರಿಕೆ ಆಗ ತೊಡಗಿತ್ತು. ವಿಮಾನವು ಗರಿಷ್ಠ ಎತ್ತರಕ್ಕೆ ಹಾರಿ ಸಮಾನಂತರವಾಗಿ ಚಲಿಸುತ್ತಿರುವಾಗ ಸ್ಪಲ್ಪ ಸಮಾಧಾನವಾಗಿ..ಓ ವಿಮಾನ ಪ್ರಯಾಣ ಇಷ್ಟೆ ಎನಿಸತೊಡಗಿತ್ತು.

ಏರ್ ಇಂಡಿಯಾದವರು ಅಂದೆಂಥಹುದೋ ಒಂದು‌ ಕೇಕು ಒಂದರ್ಧ ಲೀಟರ್ ನೀರನ್ನು ಕೊಟ್ಟು ಇದೇ ತಿಂಡಿ ಎಂದರು. ಅದನ್ನು ತಿನ್ನುತ್ತಾ ವಿಂಡೋ ಪಕ್ಕದಲ್ಲಿದ್ದ ನಾನು ಭೂಮಿಯತ್ತ ನೋಡಿ ಎಂಜಾಯ್ ಮಾಡುವಷ್ಟರಲ್ಲಿ ವಿಮಾನ‌ಸಿಬ್ಬಂದಿ ಬೆಲ್ಟ್ ಹಾಕಿಕೊಳ್ಳಿ.‌ಇನ್ನೇನು ವಿಮಾನ ಲ್ಯಾಂಡ್ ಆಗುತ್ತೆ ಎಂದರು.‌

ಬೆಂಗಳೂರಿನಿಂದ ಸರಿ ಸುಮಾರು 680 ಕಿಮೀ ಇರುವ ತ್ರಿವೇಂಡ್ರಮ್ ಗೆ ಕೇವಲ ನಲವತ್ತು ನಿಮಿಷದಲ್ಲಿ‌ ತಂದಿಳಿಸಿಯೇ ಬಿಟ್ಟರು. ಕಡಿಮೆ ದೂರದ ಪ್ರಯಾಣ ನನ್ನದಾಗಿದ್ದರಿಂದ ವಿಮಾನವನ್ನು ಹೆಚ್ಚು ಹೊತ್ತು ಎಂಜಾಯ್ ಮಾಡಲು ಆಗಲಿಲ್ಲ. ವಿಮಾನದ ಇ ವೇಗ ನೋಡಿದಾಗ ಪ್ರಧಾನಿ ಮೋದಿಯವರು ನಮ್ಮ ತುಮಕೂರು-ಬೆಂಗಳೂರು ನಡುವಿನ‌ ಪ್ರಯಾಣದಷ್ಟೆ ವಿದೇಶಗಳನ್ನು ಸುತ್ತುತ್ತಾರಲ್ಲ.

ಅದರ ರಹಸ್ಯ ಈ ವಿಮಾನ ವೇಗ ನೋಡಿದಾಗ ತಿಳಿಯಿತು. ಆಶ್ಚರ್ಯ ಎಂದರೆ, ವಿಮಾನ ಮಾರ್ಗ ಮಧ್ಯೆ ಬಸ್ಸಿನವರ ಥರಹ ಯಾವ ಡಾಬಾಗೂ ಊಟಕ್ಕೆ ನಿಲ್ಲಿಸಲಿಲ್ಲ..ಹ…ಹ..ಹ..
ಅಂತೂ ನನ್ನ ವಿಮಾನ ಆಸೆ ಪೂರೈಸಿಕೊಂಡು ಹೆಂಗೂ ಬಂದಿರುವೆ ಎಂದೇಳಿ ತ್ರಿವೇಂಡ್ರಮ್ ಮತ್ತು ಸುತ್ತ ಮುತ್ತಲಿನ‌ ಪ್ರವಾಸ ಸ್ಥಳ ವೀಕ್ಷೀಸಿ ಅದೇ ದಿ‌ನ ರಾತ್ರಿ ಅಲ್ಲಿಂದ ವೋಲ್ವೋ ಬಸ್ಸು ಹಿಡಿದು ಸುದೀರ್ಘ 13 ಗಂಟೆಗಳ ಪ್ರಯಾಣದೊಂದಿಗೆ ಮೈಸೂರು ತಲುಪಿ ಅಲ್ಲಿಂ ನಮ್ಮೂರು ಗುಬ್ಬಿ ತಾಲ್ಲೂಕಿನ‌ ಮಠಗ್ರಾಮಕ್ಕೆ ಸೇರುವಷ್ಟರಲ್ಲಿ‌ ಆಯಾಸವಾಗಿ ವಿಮಾನ‌ ಪ್ರಯಾಣ ಎಷ್ಟು ವೇಗ ಮತ್ತು ಸಲೀಸು ಎನಿಸಿತ್ತು. ನನ್ನ ಮೊದಲ‌ ವಿಮಾನಯಾನವು ಒಂದು ರೋಮಾಂಚನವೇ ಸರಿ‌.

ಲೇಖಕರು
ಲಕ್ಷ್ಮೀಕಾಂತರಾಜು ಎಂಜಿ
ಮಠಗ್ರಾಮ.
ತಾಳೆಕೊಪ್ಪ ಅಂಚೆ ಗುಬ್ಬಿ‌ ತಾಲ್ಲೂಕು
9844777110