Thursday, February 19, 2026
Google search engine
Home Blog Page 331

ಅಧಿಕಾರಿಗೆ ಬಕೇಟ್ ಹಿಡಿದವರೇ ಪಂಚಾಯಿತಿಯ ಬಾಸು

ತುಳಸೀತನಯ

ತುಮಕೂರು:
ಮೇಲಾಧಿಕಾರಿಗಳಿಗೆ ಹಿಂದೆ ಸುತ್ತಿಕೊಂಡು ಅವರು ಹೇಳಿದ್ದಕ್ಕೆಲ್ಲಾ ತಲೆಯಾಡಿಕೊಂಡು `ಜೀ ಉಝೂರ್..!’ ಎಂದರೆ ಸಾಕು ಕೆಳ ಮಟ್ಟದ ನೌಕರ ಕೂಡ ಅಧಿಕಾರ ಹಿಡಿಯಬಹುದು. ಅದೇ ಅಧಿಕಾರಿಗೆ ಸ್ಪಂದಿಸದಿದ್ದರೆ ಮೇಲ್ಮಟ್ಟದ ಅಧಿಕಾರಿಯೂ ಸಣ್ಣದೊಂದು ಕೆಲಸಕ್ಕೆ ಸೀಮಿತವಾಗವಹುದು. ಇಂತಹದಕ್ಕೊಂದು ತಕ್ಕ ಉದಾಹರಣೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳದ್ದು.
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಪಾಕಟಾಕ್ಷದಿಂದ ಗ್ರಾಮ ಪಂಚಾಯಿತಿ ಪಿಡಿಓಗಳಿಗೆ ಕಚೇರಿಯಲ್ಲಿ ಗುಮಾಸ್ತರ ಕೆಲಸ. ಗ್ರಾ.ಪಂ.ಕಾರ್ಯದರ್ಶಿಗಳಿಗೆ ಒಂದಲ್ಲಾ ಅಂತ ಎರಡೆರಡು ಗ್ರಾಮ ಪಂಚಾಯಿತಿಗಳ ಪಿಡಿಓ ಉಸ್ತುವಾರಿ. ಈ ಬಗ್ಗೆ ತಾಲ್ಲೂಕಿನಾದ್ಯಂತ ಈಗ ಬಿಸಿ ಚರ್ಚೆ ನಡೆಯುತ್ತಿದೆ. ತಾಲ್ಲೂ ಪಂಚಾಯಿತಿ . ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್ ಅವರ ವಿರುದ್ಧ ಸಾಕಷ್ಟು ಅಪಸ್ವರಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಂಗನರಸಯ್ಯ ಎಂಬುವರಿಗೆ ಚಿನ್ನಹಳ್ಳಿ ಮತ್ತು ತೋವಿನಕೆರೆ ಗ್ರಾಮ ಪಂಚಾಯಿತಿ ಸೇರಿ ಎರಡು ಕಡೆ ಪಿಡಿಓ ಹುದ್ದೆ ನೀಡಲಾಗಿದೆ. ಊರ್ಡಿಗೆರೆಯಿಂದ ಎರಡು ವರ್ಷದ ಹಿಂದೆ ಚಿನ್ನಹಳ್ಳಿ ಗ್ರಾಮಪಂಚಾಯಿತಿಗೆ ವರ್ಗವಾಗಿ ಬಂದ ಕುಮಾರಸ್ವಾಮಿ ಎಂಬುವರಿಗೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗುಮಾಸ್ತರ ಕೆಲಸ ನೀಡಲಾಗಿದೆ. ತೋವಿನಕೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರೇಡ್-1 ಕಾರ್ಯದರ್ಶಿಗೆ ಪ್ರಭಾರ ಪಿಡಿಓ ಹುದ್ದೆ ನೀಡದೇ ಸುಮಾರು 30 ಕಿ.ಮೀ.ಗೂ ಹೆಚ್ಚು ದೂರದಿಂದ ಓಡಾಡುವ ಗ್ರಾಮ ಪಂಚಾಯಿತಿ ಕಾರ್ಯದಶರ್ಿಗೆ ಪಿಡಿಓ ಹುದ್ದೆಗೆ ನೇಮಿಸಲಾಗಿದೆ.
ಮಧುಗಿರಿಯಿಂದ ಕುರಂಕೋಟೆ ಗ್ರಾಮ ಪಂಚಾಯಿತಿಗೆ ಕಾರ್ಯದರ್ಶಿಯಾಗಿ ವರ್ಗವಾಗಿ ಬಂದಿರುವ ಲಕ್ಷ್ಮಣ್ ಅವರನ್ನು ಪ್ರಭಾರ ಪಿಡಿಓ ಆಗಿ ನೇಮಿಸಲಾಗಿದೆ. ಆದರೆ ಈ ಸ್ಥಳಕ್ಕೆ ಕುಣಿಗಲ್ ನಿಂದ 90 ದಿನದ ಹಿಂದೆ ವರ್ಗವಾಗಿರುವ ಪಿಡಿಓ ನಾಗರಾಜು ಎಂಬುವರಿಗೆ ಇಲ್ಲಿಯವರೆಗೂ ಅಧಿಕಾರ ಅಸ್ತಾಂತರಿಸಿಲ್ಲ.
ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಓ ಹನುಮಂತರಾಜು ತನ್ನ ಮೂಲ ಮಾವತ್ತೂರು ಗ್ರಾಮ ಪಂಚಾಯಿತಿಗೆ ವಾಪಸ್ಸಾಗಲು ಕಳೆದ 6 ತಿಂಗಳ ಹಿಂದೆಯೇ ಸೂಚಿಸಲಾಗಿದೆ. ಆದರೇ ಹಾಲಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿ ಕದರಯ್ಯ, ಹನುಮಂತರಾಜು ಎಂಬುವರಿಗೆ ಅಧಿಕಾರ ಅಸ್ತಾಂತರಿಸದೆ ದಿನ ಮುಂದೂಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕಳೆದ ಎರಡು ವರ್ಷದ ಹಿಂದೆ ಊರ್ಡಿಗೆರೆಯಿಂದ ಚಿನ್ನಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಆಗಿದೆ. ಪಂಚಾಯಿತಿ ಕಾರ್ಯದರ್ಶಿ, ಪಿಡಿಓ ಆಗಿ ಕೆಲಸ ನಿರ್ವಹಿಸುತ್ತಿದ್ದು, ಈ ವರೆಗೆ ಅಧಿಕಾರ ಅಸ್ತಾಂತರಿಸಿಲ್ಲ. ತಾ.ಪಂ. ಇಓ ಸೂಚನೆಯಂತೆ ತಾಲ್ಲೂಕು ಪಂಚಾತಿ ಕಚೇರಿಯಲ್ಲೆ ಕೆಲಸ ಮಾಡುತ್ತಿದ್ದೇನೆ ಎಂದು ಚಿನ್ನಹಳ್ಳಿ ಗ್ರಾಮ ಪಂಚಾಯಿತಿಗೆ ಪಿಡಿಓ ವರ್ಗಾವಣೆಯಾಗಿ ಬಂದಿರುವ ಕುಮಾರಸ್ವಾಮಿ ತಿಳಿಸುತ್ತಾರೆ.
ಪಂಚಾಯಿತಿಗೆ ಬಿಡಿಓ ಆಗಿ ವರ್ಗಾವಣೆಯಾಗಿ ಬಂದು ಮೂರು ತಿಂಗಳಾಗಿದೆ. ಆದರೆ ಅಧಿಕಾರ ಮಾತ್ರ ಸಿಕ್ಕಿಲ್ಲ. ಕಾರ್ಯನಿರ್ವಹಣಾಧಿಕಾರಿಗಳು ಹೇಳಿದ ಕೆಲಸ ಮಾಡಿಕೊಂಡು ಪಂಚಾಯಿತಿಗೆ ಓಡಾಡುತ್ತಿದ್ದೇನೆ ಎನ್ನುತ್ತಾರೆ ಕುರಂಕೋಟೆ ಗ್ರಾಮ ಪಂಚಾಯಿತಿಗೆ ವರ್ಗವಾಗಿ ಬಂದಿರುವ ನಾಗರಾಜು.
ಆದರೆ ಈ ಬಗ್ಗೆ ಕೊರಟಗೆರೆ ತಾಲ್ಲೂ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ಶಿವಪ್ರಕಾಶ್ ಅವರನ್ನು ಪ್ರಶ್ನಿಸಿದರೆ `ಗ್ರಾಮ ಪಂಚಾಯಿತಿಗಳಿಗೆ ಪ್ರಭಾರ ಪಿಡಿಓ ನೇಮಿಸಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ಗಮನಕ್ಕೆ ತರಲಾಗಿದೆ. ಖಾಯಂ ಪಿಡಿಓಗಳಿಗೆ ಅಧಿಕಾರ ಅಸ್ತಾಂತರಿಸುವಂತೆ ಕಾರ್ಯದರ್ಶಿಗಳಿಗೆ ಹೇಳಿದ್ದೇನೆ ಎಂದಷ್ಟೆ ಉತ್ತರ ನೀಡುತ್ತಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ.
ಕೊರಟಗೆರೆ ತಾಲ್ಲೂಕಿನ 24 ಗ್ರಾಮ ಪಂಚಾಯಿತಿಯ ಪೈಕಿ 16 ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಖಾಯಂ ಪಿಡಿಓ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ತೋವಿನಕೆರೆ, ಬೂದಗವಿ, ಕುರಂಕೋಟೆ, ತುಂಬಾಡಿ, ವಡ್ಡಗೆರೆ, ಅರಸಾಪುರ, ಮಾವತ್ತೂರು, ಚಿನ್ನಹಳ್ಳಿ ಸೇರಿ 8 ಗ್ರಾಮ ಪಂಚಾಯಿತಿಗಳಲ್ಲಿ ಬೇರೆ ಪಂಚಾಯಿತಿಯ ಪಿಡಿಓ ಮತ್ತು ಕಾರ್ಯದರ್ಶಿಗಳನ್ನೆ ಪ್ರಭಾರ ಪಿಡಿಓಗಳಾಗಿ ನೇಮಕ ಮಾಡಲಾಗಿದೆ. ಆದರೆ ಖಾಯಂ ಪಿಡಿಓಗಳಾಗಿ ಸ್ಥಳ ನಿಯುಕ್ತಿಗೊಂಡು ಬಂದವರನ್ನು ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮಪಂಚಾಯಿತಿ ಕಚೇರಿ ಕೆಲಸಗಳಿಗೆ ಸೀಮಿತಗೊಳಿಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಸಿಬ್ಬಂಧಿಕೊರತೆ:
ತಾಲ್ಲೂಕಿನ ಕುರಂಕೋಟೆ, ಬುಕ್ಕಾಪಟ್ಟಣ, ಕ್ಯಾಮೇನಹಳ್ಳಿ, ಹುಲೀಕುಂಟೆ, ಹಂಚಿಹಳ್ಳಿ, ತೀತಾ, ದೊಡ್ಡಸಾಗ್ಗೆರೆ, ಮಾವತ್ತೂರು, ನೀಲಗೊಂಡನಹಳ್ಳಿ, ವಜ್ಜನಕುರಿಕೆ, ಚಿನ್ನಹಳ್ಳಿ, ಕೋಳಾಲ, ಪಾತಗಾನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಮತ್ತು ವಡ್ಡಗೆರೆ, ಅರಸಾಪುರ, ಕ್ಯಾಮೇನಹಳ್ಳಿ ಮತ್ತು ಪಾತಗಾನಹಳ್ಳಿ ಪಂಚಾಯಿತಿಗಳ ಕರ ವಸೂಲಿಗಾರರ ಹುದ್ದೆ ಬಹಳ ದಿನಗಳಿಂದ ಖಾಲಿ ಇವೆ.

ಪಾತಗಾನಹಳ್ಳಿ ಗ್ರಾಮ ಪಂಚಾಯಿಗೆ ಸ್ವಂತ ಕಟ್ಟಡ ಇಲ್ಲದೆ ಅಂಗನವಾಡಿ ಕಟ್ಟಡದಲ್ಲಿ ಕಚೇರಿ ನಡೆಸಲಾಗುತ್ತಿದೆ.

ಕಾಡುಸಿದ್ದೇಶ್ವರನ ಮೊರೆ ಹೊಕ್ಕ ಡಿ ಕೆ ಶಿ

ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಇಂದು ಪೂಜೆ ಸಲ್ಲಿಸಿದರು.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ದೆಹಲಿಯ ತಿಹಾರ್ ಜೈಲು ಸೇರಿದ್ದ ಶಿವಕುಮಾರ್ ಶನಿವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಮೆರವಣಿಗೆಯ ಮೂಲಕ ಅವರನ್ನು ಕೆಪಿಸಿಸಿ ಕಚೇರಿಗೆ ಕರೆತರಲಾಗಿತ್ತು.

ಸಂಕಷ್ಟ ಎದುರಾದಾಗ ಮತ್ತು ಸಂಕಷ್ಟು ನಿವಾರಣೆಯಾದಾಗ ಶಿವಕುಮಾರ್ ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠಕ್ಕೆ ಭೇಟಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಹಿಂದೆ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ಮೊದಲು ಕಾಡಸಿದ್ದೇಶ್ವರ ಮಠಕ್ಕೆ ಬಂದು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ನಿನ್ನೆ ತಡವಾಗಿದ್ದರಿಂದ ಇಂದು ಭೇಟಿ ನೀಡಿದ್ದೇನೆ. ಅಜ್ಜಯ್ಯನ ಆಶೀರ್ವಾದ ಪಡೆದಿದ್ದೇನೆ. ನಾನು ನ್ಯಾಯದ ಪರವಾಗಿ ನಡೆದುಕೊಳ್ಳುತ್ತಿದ್ದೇನೆ ಎಂದರು.

ತುಮಕೂರು ಎಸ್ಪಿ ಕೌರವನಾಗಿ ರಂಗಕ್ಕೆ ಬಂದಾಗ… ಹೀಗಿತ್ತು

2

ಪೊಲೀಸ್ ವರಿಷ್ಠರೊಬ್ಬರು ರಂಗದ ಮೇಲೆ ಅದೂ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಂದರೆ ಮೆಚ್ಚಲೇ ಬೇಕು. ಒಬ್ಬ ಅಧಿಕಾರಿ ಸಾಮಾನ್ಯರನ್ನು ತಲುಪುವುದು ಅಂದರೆ ಹೀಗೇನೆ. ಡಾ.ವಂಶಿಕೃಷ್ಣ ಆಯ್ಕೆ ಮಾಡಿಕೊಂಡಿದ್ದು ದುರ್ಯೋದನ ಪಾತ್ರವನ್ನು ಅದು ಒಂದು ಹಾಡು ಮಾತ್ರ. ಆ ಒಂದು ಹಾಡಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಸಾಹಿತ್ಯ, ಸಂಗೀತ ರಂಗಭೂಮಿ –ಹೀಗೆ ಕೆಲವು ಕಲೆಗಳು ಜನರಿಗೆ ಅನಂದ ಉಂಟು ಮಾಡುವ ಶಕ್ತಿ ಇರುತ್ತದೆ. ಅದೇ ರೀತಿ ರಂಗಭೂಮಿಗೂ ಅಂತಹ ಶಕ್ತಿ ಇದೆ. ಬಾಲರಿಂದ ವೃದ್ಧವರೆಗೂ, ಅನಕ್ಷರನಿಂದ ಅಧಿಕಾರಿವರೆಗೂ ಎಲ್ಲರೂ ರಂಗಭೂಮಿ ಕಲೆಗೆ ಸೋಲದವರಿಲ್ಲ. ನಾಟಕ ಪ್ರೇಕ್ಷಕರನ್ನು ತಲ್ಲೀನರನ್ನಾಗಿಸುವಂತೆ ಮಾಡುತ್ತದೆ. ಅದರಲ್ಲೂ ಪೌರಾಣಿಕ ನಾಟಕಗಳೆಂದರೆ ಜನರಿಗೆ ಇನ್ನಿಲ್ಲದ ಆಸಕ್ತಿ.

ಹೌದು, ನಾಟಕ ಎಲ್ಲರನ್ನು ವೇದಿಕೆ ಮೇಲೆ ಕುಣಿಯುವಂತೆ ಮಾಢುವ ವಿಶೇಷ ಶಕ್ತಿ ಇದೆ. ಹಳ್ಳಿಯ ಹೈದನೂ ರಂಗದ ಮೇಲೆ ನಿಂತು ಹಾಡುತ್ತಾನೆ. ಸರ್ಕಾರಿ ನೌಕರರು ನಟಿಸುತ್ತಾರೆ. ಹಾಗೆಯೇ ಪೊಲೀಸರು ಕೂಡ ನಾಟಕದಲ್ಲಿ ನಟಿಸುವುದು ಸಾಮಾನ್ಯ. ಆದರೆ ಒಬ್ಬ ಅಧಿಕಾರಿ ಅದೂ ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠರು ನಾಟದಲ್ಲಿ ಅಭಿನಯಿಸುತ್ತಾರೆಂದರೆ ವಿಶೇಷವೇ. ಅಂದಹಾಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟ ಡಾ.ವಂಶಿ ಕೃಷ್ಣ ಅವರು ಇಂದು ರಂಗದ ಮೇಲೆ ಕಾಣಿಸಿಕೊಂಡು ಗಮನ ಸೆಳೆದರು.

ವಂಶಿಕೃಷ್ಣ ಅವರು ಮೂಲತಃ ಆಂಧ್ರದವರು. ತೆಲುಗು ಮತ್ತು ಇಂಗ್ಲೀಷ್ ಚೆನ್ನಾಗಿ ಮಾತನಾಢಬಲ್ಲರು. ಆದರೆ ಕನ್ನಡ ಅಷ್ಟೊಂದು ಸರಾಗವಾಗಿ ಹೇಳಲು ಬರುವುದಿಲ್ಲ. ಅಂತಾಧ್ಧರಲ್ಲೂ ಅವರ ಯಾವುದೇ ಬಿಂಕವನ್ನು ಇಟ್ಟುಕೊಳ್ಳದೆ ರಂಗದ ಮೇಲೆ ದುರ್ಯೋಧನನ ಪೋಷಾಕಿನಲ್ಲಿ ಕಾಣಿಸಿಕೊಂಡು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿದರು.

ಕೇವಲ ಜನರ ರಕ್ಷಣೆ ಮಾತ್ರವಲ್ಲ. ದುಷ್ಟರನ್ನು ಮಟ್ಟಹಾಕುವುದಲ್ಲ. ಪ್ರೇಕ್ಷಕರ, ನಾಟಕ ಪ್ರೇಮಿಗಳ ಹೃದಯವನ್ನೂ ಗೆಲ್ಲಬಲ್ಲೆ ಎಂಬುದನ್ನು ತೋರಿಸಿಕೊಟ್ಟರು. ದುರ್ಯೋಧನನ ಗತ್ತು, ಅವರಲ್ಲಿತ್ತು. ಮೊದಲೇ ಪೊಲೀಸ್ ಕಟ್ಟುಮಸ್ತಾದ ದೇಹ. ದುರ್ಯೋಧನನ ಪಾತ್ರಕ್ಕೆ ಮಾಡಿ ಹೇಳಿಸಿದಂತೆ ಇತ್ತು. ಅಂತೂ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ರಂಗದ ಮೇಲಿದ್ದ ಕೆಲವೇ ಕ್ಷಣವಾದರೂ ಪ್ರೇಕ್ಷಕರ ಹೃದಯದಲ್ಲಿ ನೆಲೆಸಿದರು ಎಂದೇ ಹೇಳಬೇಕು.

ಬೆಳಕಿನ ಹಬ್ಬ ದೀಪಾವಳಿ ಪಟಾಕಿ ಹಬ್ಬವಾಗಿದ್ದು ಹೇಗೆ?

0

ಲೇಖಕರು

ಕೆ.ಜೆ.ಹರ್ಷಿತ

ನಾಡಿನ ಹಬ್ಬಗಳಲ್ಲಿ ದೀಪಾವಳಿ ಪ್ರಮುಖ ಹಬ್ಬ. ವ್ಯಾಪಾರಿಗಳು, ಉದ್ಯಮಿಗಳಿಗೆ ಹೊಸ ಲೆಕ್ಕದ ಪುಸ್ತಕ ಆರಂಭವಾಗುವ ದಿನ. ರೈತರ ಪಾಲಿನ ಕೊಯ್ಲು, ಜಾನುವಾರು ಹಬ್ಬ.

ಕತ್ತಲೆಯು ನಮ್ಮಲ್ಲಿ ಅಧೈರ್ಯವನ್ನು ತುಂಬುತ್ತದೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದ ಜನರು ಭರವಸೆಯ ಬೆಳಕನ್ನು ಹಣತೆಗಳನ್ನು ಹಚ್ಚಿ ಸ್ವಾಗತಿಸುತ್ತಾರೆ. ಕೆಟ್ಟ ಶಕ್ತಿಗಳನ್ನು ದೂರಮಾಡಲು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

ಹಿಂದೆ ದೀಪಾವಳಿ ಹಬ್ಬದಂದು ಮಣ್ಣಿನ ಹಣತೆಗಳನ್ನು ಹಚ್ಚಿ ಮನೆ, ದೇಗುಲಗಳನ್ನು ದೀಪಗಳಿಂದ ಅಲಂಕರಿಸಿ, ಬಾಳೆಕಂದು, ಮಾವಿನ ತೋರಣ ಕಟ್ಟಿ ಮನೆಮಂದಿಯೆಲ್ಲ ಉತ್ಸಾಹದಿಂದ ಆಚರಿಸುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಜಾನುವಾರುಗಳನ್ನು ಅಲಂಕರಿಸಿ ಬೆಂಕಿಯ ಸುತ್ತಲೂ ಸುತ್ತಿಸಿ ಈಡಿನ ಹಬ್ಬವಾಗಿ ಆಚರಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣಿನ ದೀಪಗಳು ಕಡಿಮೆಯಾಗಿ ತರಹೇವಾರಿ ಪಟಾಕಿಗಳು ದೀಪಾವಳಿ ಹಬ್ಬವನ್ನು ತೆಕ್ಕೆಗೆ ತೆಗೆದುಕೊಂಡಿವೆ.

ಬಲಿ ರಾಜನ ಕಥೆ

ದೀಪಾವಳಿಯ ಹಬ್ಬಕ್ಕೆ ಬಲಿರಾಜನ ಕತೆಯೂ ಸೇರಿಕೊಂಡಿದೆ. ವಾಮನ ಅವತಾರದಲ್ಲಿ ಬಂದ ವಿಷ್ಣುವು ಬಲಿರಾಜನನ್ನು ಮೂರು ಅಡಿ ಜಾಗ ಬೇಕೆಂದು ಕೇಳಿದನು. ಆಗ ಬಲಿರಾಜ ಅಹಂಕಾರ ಹಾಗೂ ಕ್ಷುಲಕ ಎನ್ನುವ ಭಾವದಿಂದ ಸಮ್ಮತಿ ವ್ಯಕ್ತ ಪಡಿಸಿದನು. ಆಗ ವಾಮನನು ಒಂದು ಹೆಜ್ಜೆಯನ್ನು ಭೂಮಿಯಲ್ಲಿ, ಇನ್ನೊಂದು ಹೆಜ್ಜೆಯನ್ನು ಸ್ವರ್ಗದಲ್ಲಿ ಇಟ್ಟನು. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಬಲಿ ರಾಜನನ್ನು ಕೇಳಿದನು. ಆಗ ಬಲಿ ರಾಜನು ತನ್ನ ತಲೆಯ ಮೇಲೆ ಇಡು ಎಂದು ಹೇಳಿದನು. ಆಗ  ವಾಮನ ರೂಪದಲ್ಲಿದ್ದ ವಿಷ್ಣು ಬಲಿರಾಜನ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತುಳಿಯುತ್ತಾನೆ.

ಹೀಗಾಗಿ ಮನೆಗಳಲ್ಲಿ ಬಲಿ ಪಾಡ್ಯಮಿಯಂದು  [2019, ಅಕ್ಟೋಬರ್ 29 ಮಂಗಳವಾರ]  ಹಸುವಿನ ಸಗಣಿಯಿಂದ ಬಲಿ ಕೋಟೆ ಹಾಕಿ ಅದನ್ನು ಜೋಳದ ತೆನೆ, ರಾಗಿ ತೆನೆ, ಸಜ್ಜೆ ತೆನೆ, ಉಚ್ಚೆಳ್ಳು ಹೂವು, ಕುಂಬಳ ಹೂವು ಇತ್ಯಾದಿಗಳಿಂದ ಅಲಂಕರಿಸಿ ಕೋಟೆಯ ಸುತ್ತಲೂ ದೀಪಗಳನ್ನಿಟ್ಟು ಕೋಟೆಯ ಮಧ್ಯಭಾಗಕ್ಕೆ ಹಾಲು ಎರೆದು ಪೂಜಿಸುವ ಪದ್ದತಿ ಇದೆ.

ಬಡಮಾರನಹಳ್ಳಿಯಲ್ಲಿ ಮಾಲ್ಮೀಕಿ ಜಯಂತಿ

0

ಶಿರಾ; ತಾಲ್ಲೂಕಿನ ಬಡಮಾರನಹಳ್ಳಿಯಲ್ಲಿ ಇದೇ 30 ರಂದು ಮಧ್ಯಾಹ್ನ ೧ ಗಂಟೆಗೆ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ.

ವೀರ ಮದಕರಿ ನಾಯಕ ಯುವಕರ ಸಂಘ ಆಯೋಜಿಸಿರುವ ಸಮಾರಂಭದಲ್ಲಿ ಪ್ರಸನ್ನಾನಂದ ಪುರಿ ಸ್ವಾಮೀ ಜಿ, ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ, ಬಿ.ಪಿ.ಲಿಂಗಯ್ಯ ಮತ್ತಿತರರು ಭಾಗವಹಿಸುವರು.

ಸ್ವಾಮೀಜಿಗಳ ಭವ್ಯ ಮೆರವಣಿಗೆ ‌ನಂತರ ಸಭಾ ಕಾರ್ಯಕ್ರಮ ಆರಂಭವಾಗಲಿದೆ. ಗ್ರಾಮಸ್ಥರು ಸಮಾರಂಭ ಆಯೋಜನೆಗಾಗಿ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ ಎಂದು ವಕೀಲ, ಸಮುದಾಯದ ಮುಖಂಡರಾದ ಮನೋಹರ್ ಅವರು ಪಬ್ಲಿಕ್ ಸ್ಟೋರಿಗೆ ತಿಳಿಸಿದ್ದಾರೆ.

ಈಜಲು ಹೋದ ಇಬ್ಬರು ಬಾಲಕರು ನೀರು ಪಾಲು

ಶಿರಾ: ಈಜಲು ಹೋದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಶಿರಾ ತಾಲೂಕು ಪಟ್ಟನಾಯಕನಹಳ್ಳಿಯಲ್ಲಿ ನಡೆದಿದೆ. ಮೃತರನ್ನು 9 ವರ್ಷದ ಮಾರುತಿ ಮತ್ತು 11 ವರ್ಷದ ಸಲ್ಮಾನ್ ಎಂದು ಗುರುತಿಸಲಾಗಿದೆ.

ಶನಿವಾರ ಸಂಜೆ ಪಟ್ಟನಾಯಕನಹಳ್ಳಿಯ ಸಿಡಿಯಜ್ಜನಪಾಳ್ಯದಲ್ಲಿ ಶಾಲೆ ಬಿಟ್ಟ ಕೂಡಲೇ ಆ ಮಕ್ಕಳು ಆಟವಾಡುತ್ತ ಗ್ರಾಮದ ಸಮೀಪವೇ ಇರುವ ಕಟ್ಟೆಗೆ ಹೋಗಿದ್ದಾರೆ. ನೀರಿನಲ್ಲಿ ಈಜಲು ಹೋದಾಗ ಈಜು ಬಾರದೆ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಎರಡು ಕುಟುಂಬಗಳ ಪೋಷಕರು ಶನಿವಾರ ಸಂಜೆಯವರೆಗೂ ಸುತ್ತಮುತ್ತಲ ಹೊಲಗದ್ದೆಗಳಲ್ಲಿ ಹುಡುಕಿದ್ದಾರೆ. ಎಲ್ಲಿಯೂ ಕಾಣದಿದ್ದಾಗ ಕಂಗಾಲಾಗಿದ್ದಾರೆ. ಕತ್ತಲು ಹೆಚ್ಚಿದಂತೆ ಏನೂ ಮಾಡಲು ತೋಚದೆ ಮನೆಗೆ ಮರಳಿದ್ದಾರೆ.
ಭಾನುವಾರ ಮುಂಜಾನೆ ಎದ್ದು ಕಟ್ಟೆಯ ಬಳಿ ನೋಡಿದಾಗ ಇಬ್ಬರು ಬಾಲಕರ ಶವಗಳು ತೇಲುತ್ತಿದ್ದುದು ಕಂಡು ಬಂದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮದ ನೂರಾರು ಮಂದಿ ಕಟ್ಟೆಯ ಬಳಿಗೆ ಬಂದು ಶವಗಳನ್ನು ವೀಕ್ಷಿಸಿದರು.

ಮಕ್ಕಳ ತಂದೆ-ತಾಯಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಮಹಿಳೆಯರು ಅವರನ್ನು ಸಾಂತ್ವನಗೊಳಿಸುತ್ತಾ ತಾವು ಕಣ್ಣೀರು ಹಾಕತೊಡಗಿದರು. ಎಲ್ಲರೂ ದುಃಖದ ಮಡುವಿನಲ್ಲಿ ಮುಳುಗಿದ್ದರು.

ಶ್ !! ಕೇಬಿ ವಾಕಿಂಗ್ ಹೋಗಿದ್ದಾರೆ

0

ಕ್ಷಮಿಸಿ
ಕೇಬಿ ವಾಕಿಂಗ್
ಹೋಗಿದ್ದಾರೆ
ಇನ್ನೇನು
ಬರುತ್ತಾರೆ

ಟೀಶರ್ಟ್ ಮೇಲೆ
ಕಾಕಾ
ಲುಂಗಿಗೆ ಇನ್ ಶರ್ಟ್
ಮಾಡಿ
ದಪ್ಪ ದಂಡ ಹಿಡಿದು
ಹೊಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆ
ಈದಿನ
ಸ್ವಲ್ಪ ಲೇಟಾಗಬಹುದು
ಅಷ್ಟೇ…

https://www.youtube.com/watch?v=OfeYZCpF4yk

ಉದ್ದಕೂ ಬಿದ್ದ
ಉಪ್ಪಾರಳ್ಳಿ
ರಸ್ತೆ
ಬಿಕೋ ಅನ್ನಿಸುತ್ತದೆ
ಕೇಬಿಯ
ಕಾಯುತ್ತಿದೆ
ವಾಪಸ್
ಬರುವವರೆಂದು
ಸರ್ಕಲ್‌ ಹೊಟೆಲಲ್ಲಿ
ಟೀ ಕುಡಿದು
‘ಬನ್ ತಿಂತಿಯೇನೋ’
ಎಂದು
ಕೇಳುವವರೆಂದು.

ವಾಕಿಂಗ್ ಹೋಗಿದ್ದಾರೆ
ಕೇಬಿ
ಇನ್ನೇನು ಬರುತ್ತಾರೆ

ಅಲ್ಲಮನ ಜೊತೆ ಹೋಗಿದ್ದರೆ
ಮಾತ್ರ
ತಡವಾಗುತ್ತದೆ
ಮುಂದಣ ಹೆಜ್ಜೆಗಳನ್ನು ಅರಿಯದೇ
ಅಲ್ಲಿಂದ ಬರಲಾರರು
ಬರುವಾಗ

[espro-slider id=1486]
ಬಕಾಲ ಮುನಿಯ
ಕಂಡು
ಮಾತಾಡಿಸಿ ದಕ್ಲರ ಜೊತೆ
ಹೋಗಿ
ಗಲ್ಲೇಬಾನಿಯ ಆಳಕ್ಕಿಣುಕಿ
ಅಲ್ಲೇ
ನಿಂತುಬಿಟ್ಟರೋ
ಏನೋ?
ಯಾರಾದರೂ ಎಚ್ಚರಿಸಿ
ಕಳಿಸುವವರೆಗೆ
ನಾವೂ ಕಾಯಬೇಕು

ಇಲ್ಲಾ….
ಇಲ್ಲೆ ಎಲ್ಲೋ ತಿರುವಿನಲ್ಲಿ
ಇದ್ದಾರೆ
ಇನ್ನೇನು ಬರುತ್ತಾರೆ
ವಾಕಿಂಗ್ನಿಂದ
ಕೇಬಿ.

ನಟರಾಜ್ ಹೊನ್ನವಳ್ಳಿ

ರಂಗಕರ್ಮಿ

ಪಟಾಕಿ ದುಡ್ಡು ನಟಿ ಶಿಲ್ಪಾಶೆಟ್ಟಿ ಏನ್ ಮಾಡ್ತಾರೆ?

ಬಾಲಿವುಡ್ ನಟಿ ಶಿಲ್ಪಾಶೆಟ್ಟಿ, ಆಕೆಯ ತಂಗಿ ಶಮಿತಾ ಇಬ್ಬರೂ ಪಟಾಕಿ ದುಡ್ಡುಏನ್ ಮಾಡ್ತಾರೆ.

ಇಬ್ಬರೂ ನಟಿ ಮಣಿಯರು ತಮ್ಮ ಹದಿಮೂರನೇ ವರ್ಷಕ್ಕೆ ಪಟಾಕಿ ಖರೀದಿ ಮಾಡುವುದನ್ನು ಬಿಟ್ಟರಂತೆ. ಆ ಹಣದಲ್ಲಿ ಸಮೋಸಾ, ವಡೆ ಖರೀದಿಸಿ ಬಡವರಿಗೆ ಕೊಡುತ್ತಿದ್ದರಂತೆ.
ಪಟಾಕಿ ಹೊಡೆಯುವುದರಿಂದ ಪರಿಸರಕ್ಕೆ ಹಾನಿ. ಅದರ ಶಬ್ದ ಕಿರಿಕಿರಿ ಉಂಟು ಮಾಡುತ್ತದೆ ಎಂದಿದ್ದಾರೆ ಶಿಲ್ಪಾ ಶೆಟ್ಟಿ.

ನಾಲ್ಕು ವರ್ಷದ ನನ್ನ ಮಗನಿಗೂ ಪಟಾಕಿ ಕಂಡರೆ ಇಷ್ಟ ಇಲ್ಲ ಎಂದಿರುವ ಅವರು, ಮನೆಯನ್ನು ವಿದ್ಯುತ್ ದೀಪಾಂಲಂಕಾರ ಮಾಡಿ ಸಿಹಿ ಅಡುಗೆ ಮಾಡುವ ಮೂಲಕ ದೀಪಾವಳಿ ಆಚರಿಸುವುದಾಗಿ ಹೇಳಿಕೊಂಡಿದ್ದಾರೆ.

ಎಲ್ಲರಿಗೂ ದಕ್ಕದ ಕೆಬಿಎಸ್

1

ಲೇಖಕರು

ಕೆ.ಈ.ಸಿದ್ದಯ್ಯ

ಪತ್ರಕರ್ತರು ಹಾಗೂ ಸಾಹಿತಿ

ಅದು ಕವಿ ದ್ವಾರನಕುಂಟೆ ಎಚ್. ಗೋವಿಂದಯ್ಯ ಅವರ ‘ಉರಿದು ಬಿದ್ದು ಮರ’ ಕವನ ಸಂಕಲನ ಬಿಡುಗಡೆ ಸಮಾರಂಭ. ನಡೆದದ್ದು ತುಮಕೂರಿನ ಕನ್ನಡ ಭವನದಲ್ಲಿ. ಹಿರಿಯ ಸಾಹಿತಿ ಡಾ.ಅಗ್ರಹಾರ ಕೃಷ್ಣಮೂರ್ತಿ ಉದ್ಘಾಟನೆ,ಕವಿ ಕೆ.ಬಿ.ಸಿದ್ದಯ್ಯ ಅತಿಥಿಗಳು. ನಾನೂ ವೇದಿಕೆಯ ಮೇಲಿದ್ದೆ. ಕೆ.ಬಿ. ಪಕ್ಕದಲ್ಲೇ ಕೂತಿದ್ದ ನನ್ನ ಕಿವಿಯಲ್ಲಿ ಈ ‘ದಲಿತ’ ತೆಗೆಯುತ್ತಾರಲ್ಲ ಯಾಕೆ ಗೊತ್ತೇ ಅಂದರು. ನಾನು ‘ಅದು ರಾಜಕೀಯ, ಆ ಪದವನ್ನೇ ಇಲ್ಲವಾಗಿಸಿದರೆ ದಲಿತರೇ ಇಲ್ಲವಾಗುತ್ತಾರಲ್ಲ ಅಂದೆ ಯು ಆರ್ ಕರೆಕ್ಟ್ ಅಂದರು. ನಂತರ ಕೆ.ಬಿ ಸಭೆಯಲ್ಲಿ ಮಾತನಾಡಿದರು. ‘ದಲಿತ ಪದ ತೆಗೆಯುವುದರ ಹಿಂದೆ ಸಾಂಸ್ಕøತಿಕ ರಾಜಕಾರಣವಿದೆ. ದಲಿತರ ಐಡೆಂಟಿಟಿಯನ್ನು ಇಲ್ಲವಾಗಿಸುವ ಪ್ರಯತ್ನ ಅದು’ ಎಂದು ಮಾತು ಮುಗಿಸಿ ಬಂದು ಮತ್ತೆ ಕುಳಿತರು. ‘ಸಿದ್ದಯ್ಯ ಕರೆಕ್ಟ್ ಅಲ್ವೇನೋ’ ಅಂದರು. ‘ಹೌದು’ ಎಂದಿದ್ದೆ. ಪ್ರತಿ ಭಾಷಣವೂ ಭಿನ್ನತೆಯಿಂದ ಕೂಡಿರುತ್ತಿತ್ತು.

ಹಿರಿಯರು ಮತ್ತು ಕಿರಿಯರು ಎನ್ನದೆ ಎಲ್ಲರೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದ, ಹೆಗಲ ಮೇಲೆ ಕೈಹಾಕಿ ಮಾತನಾಡಿಸುತ್ತಿದ್ದ ಅವರ ನಡವಳಿಕೆ ನನ್ನಂತಹವರು ಕುಗ್ಗುವಂತೆ ಮಾಡಿತ್ತಿತ್ತು. ಅಂಥ ಕೆಬಿ ಇಲ್ಲ, ಮುಂಜಾನೆಯೇ ತೀರಿಹೋದರೆಂಬ ಸುದ್ದಿ ನನ್ನನ್ನು ನಿದ್ರೆಯಿಂದ ಏಳುವಂತೆ ಮಾಡಿತ್ತು. ಅಪಘಾತದಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಅವರು ಉಳಿಯುವ ಲಕ್ಷಣಗಳು ಇಲ್ಲದಿದ್ದರೂ ಒಂದು ಆಸೆಯಂತೂ ಚಿಗುರೊಡೆತ್ತು. ಆ ಚಿಗುರು ಮಳೆಗಾಲದ ರಭಸಕ್ಕೆ ಸಿಕ್ಕಿ ನಲುಗಿ ಹೋಯಿತು.
ಆಪ್ತ ವಲಯದಲ್ಲಿ ಬಕಾಲ ಮುನಿ ಮತ್ತು ಕೆಬಿ ಆಗಿದ್ದರು. ಇಂಗ್ಲೀಷ್ ಸಾಹಿತ್ಯದ ವ್ಯಾಪಕ ಓದು ಅವರೊಬ್ಬ ಪ್ರಬುದ್ಧ ಭಾಷಣಕಾರರನ್ನಾಗಿ ಮಾಡಿತ್ತು. ನನಗೆ ತಿಳಿದ ಮಟ್ಟಿಗೆ ಅವರ ಬರಹಕ್ಕಿಂತ ಭಾಷಣವೇ ತೀಕ್ಷ್ಣವಾಗಿರುತ್ತಿತ್ತು. ಭಾಷಣದಲ್ಲಿದ್ದ ಒಳನೋಟಗಳು ಬರಹದಲ್ಲಿ ಕಂಡುಬರಲಿಲ್ಲ. ಖಂಡಕಾವ್ಯ ಪರಂಪರೆ ಮುಂದುವರಿಕೆಗೆ ಪ್ರಯತ್ನಿಸಿದರು. ದಕ್ಲಕಥಾದೇವಿ, ಬಕಾಲ, ಅನಾತ್ಮ, ಗಲ್ಲೇಬಾನೆ ಎಂಬ ನಾಲ್ಕು ಖಂಡಕಾವ್ಯಗಳನ್ನು ಕೊಟ್ಟ ಕೆಬಿ ಸಮಾಜೋ-ಆಧ್ಯಾತ್ಮಿಕ ದೃಷ್ಟಿಕೋನದಿಂದ ಬರೆದರು. ಅವರ ಕಾವ್ಯ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂಬ ಆರೋಪಗಳು ಇವೆ. ಕತ್ತಲೊಡನೆ ಮಾತುಕತೆ, ಬುದ್ದನ ನಾಲ್ಕು ಸತ್ಯಗಳು ಎಂಬ ಗದ್ಯಕೃತಿಗಳು ಹೊರಬಂದಿವೆ.

ಬರೆದಿದ್ದು ಕಡಿಮೆಯಾದರೂ ಎಲ್ಲವೂ ಮೌಲ್ವಿಕ ಕೃತಿಗಳೇ. ಕಿರಿದರೋಳ್ ಪಿರಿದರ್ಥವನ್ನು ಕಟ್ಟಿಕೊಡುವಂತಹವು. ವಿಮರ್ಶಕ ಕಿ.ರಂ. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ ಮೊದಲಾದವರು ಕೆಬಿ ಅವರ ಖಂಡಕಾವ್ಯಗಳನ್ನು ಬಿಡುಗಡೆ ಮಾಡಿ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಮೇಲ್ನೋಟಕ್ಕೆ ಕೃತಿಗಳ ಶೀರ್ಷಿಕೆಗಳೆಲ್ಲವೂ ಕುಲಮೂಲದಿಂದ ಬಂದಥವುಗಳು ಎಂಬಂತೆ ಕಂಡುಬಂದರೂ ಕಾವ್ಯದ ಆಳದೊಳಗೆ ವಿಶ್ವವ್ಯಾಪಿ ವಿಷಯಗಳನ್ನು ಮುಖಾಮುಖಿಯಾಗಿಸುತ್ತವೆ. ಜಾಗತಿಕರಣದ ಹುನ್ನಾರಗಳಿಂದ ದೇಶೀ ಸಂಸ್ಕøತಿಗೆ ಪೆಟ್ಟು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಅವರ ಬರಹ ಸಾಮಾನ್ಯ ಓದುಗನಿಗೆ ನಿಲುಕುವುದು ಕಷ್ಟ.
ತುಮಕೂರು ಮತ್ತು ರಾಜ್ಯದ ಸಾಹಿತ್ಯದ ವಲಯದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಕವಿ ಕೆ.ಬಿ.ಸಿದ್ದಯ್ಯ ಒಳಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಕೆಲವೊಮ್ಮೆ ಸಾಹಿತಿಯಂತೆ, ರಾಜಕಾರಣಿಯಂತೆ ಅವರ ನಡಿಗೆ ಇತ್ತು. ಯಾಕೆಂದರೆ ಹೋರಾಟಗಾರರಾಗಿದ್ದ ಕಾರಣ ಹಾಗೆ ಕಂಡಿದ್ದು ಸಹಜವೂ ಹೌದು. ಭಾಷಣದಲ್ಲಿ ಕೆಲವರಿಗೆ ಚಾಟಿ ಬೀಸಿ ಬಿಸಿ ಮುಟ್ಟಿಸಿದ್ದರು. ಆದರೆ ಅವರ ಬರಹಗಳಲ್ಲಿ ರಾಜಕೀಯ ಪ್ರವೇಶವಾಗದಂತೆ ನೋಡಿಕೊಂಡರು.

ಕೆ.ಬಿ.ಸಿದ್ದಯ್ಯ ಮತ್ತು ಸ್ನೇಹ ಬಳಗ ಕುಡಿಯಲು ಕೂತರೆ ಗಂಟೆಗಳೇ ಕಳೆಯುತ್ತಿದ್ದವು. ಅಲ್ಲಿ ಚರ್ಚೆಯಾಗುತ್ತಿದ್ದ ವಿಷಯ ಹಲವು. ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ, ಸಾಹಿತ್ಯಕ, ವ್ಯಕ್ತಿಗತ ಹೀಗೆ ಎಲ್ಲ ಕೋನಗಳಿಂದ ಚರ್ಚೆ ನಡೆಯುತ್ತಿತ್ತು. ಇಂಗ್ಲೀಷ್ ಸಾಹಿತ್ಯ ಷೇಕ್ಸ್‍ಪಿಯರ್ ನಾಟಕಗಳ ಸಾಲುಗಳನ್ನು ಉದ್ದರಿಸಿ ವಿವರಿಸುತ್ತಿದ್ದರು. ಉಳಿದವರು ಇವರ ಮಾತುಗಳನ್ನು ಕೇಳುತ್ತಾ ಮದ್ಯ ಹೀರುತ್ತಾ ಕೇಳಿಕೊಳ್ಳಬೇಕಾಗಿತ್ತು. ಹಾಗಿತ್ತು ಅವರ ವಾಗ್ಜರಿ. ಕೇಳಲು ಆನಂದ.

ದರೈಸ್ತ್ರಿ ಪ್ರಶಸ್ತಿ ಸ್ಥಾಪಿಸಿ ಅಹಿಂದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರತಿವರ್ಷವು ಪ್ರಶಸ್ತಿ ಕೊಡಲು ಹಣಕಾಸಿನ ತೊಂದರೆಯಾಗುತ್ತದೆ ಎಂದು ಹೇಳಿದಾಗ ಹಾಗಾದರೆ ಏನು ಮಾಡಬೇಕು ಎಂದು ನನ್ನನ್ನೇ ಕೇಳಿದ್ದರು. ಮೂರು ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಿದರೆ ಒಳ್ಳೆಯದು. ಹಣ ಸಂಗ್ರಹಕ್ಕೂ ಕಷ್ಟವಾಗುವುದಿಲ್ಲ ಎಂದು ಹೇಳಿದಾಗ ಯೋಚನೆ ಮಾಡೋಣ ಎಂದಷ್ಟೇ ಹೇಳಿದ್ದರು. ಅಪಘಾತ ಆಗುವುದಕ್ಕೂ ಮೊದಲು ಸಿಕ್ಕಿದ್ದ ಕೆಬಿ ಪ್ರೀತಿಯಿಂದಲೇ ಮಾತಾಡಿ ಹೇಗಿದ್ದೀಯ ಎಂದು ಆರೋಗ್ಯ ವಿಚಾರಿಸಿ ಬೆನ್ನು ತಟ್ಟಿ ಹೋಗಿದ್ದರು. ಅದು ಇನ್ನೂ ನೆನಪಿದೆ ಆದರೆ ಅವರಿಲ್ಲ.

ಸುದೀರ್ಘ ಕಾಲ ಸಾಹಿತ್ಯ ಕ್ಷೇತ್ರದಲ್ಲಿದ್ದರೂ ಅವರು ಇನ್ನೂ ಬರೆಯಬೇಕಾಗಿತ್ತು. ಇಂಗ್ಲೀಷ್‍ನಿಂದ ಅನುವಾದ ಸಾಹಿತ್ಯ ಬರೇಕಿತ್ತು. ಆದರೆ ಅಂತಹ ಕೆಲಸಕ್ಕೆ ಕೈ ಹಾಕಲೇ ಇಲ್ಲವೆಂಬ ಬಗ್ಗೆ ಹಲವರಲ್ಲಿ ಸಿಟ್ಟು ಕೂಡ ಇದೆ. ಅದು ಪ್ರೀತಿ ಸಿಟ್ಟು. ದ್ವೇಷದ ಸಿಟ್ಟಲ್ಲ ಎಂಬುದನ್ನು ನಾವು ಮನಗಾಣಬೇಕಾಗಿದೆ.

ಗಾಂಧಿ ಅಸ್ಮಿತೆ ಪಡೆಯಿರಿ: ಶಾಸಕ ಜ್ಯೋತಿಗಣೇಶ್

ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗಾಂಧಿಯ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನ ಹಲವು ಅಪರೂಪದ ಚಿತ್ರಗಳು ಗಮನ ಸೆಳೆದವು. ಅಕ್ಟೋಬರ್ 28ರವರೆಗೆ ಪ್ರದರ್ಶನ ಇರಲಿದೆ.

ವಾರ್ತಾ ಮತ್ತು ಪ್ರಸಾರ ಇಲಾಖೆ ಆಯೋಜಿಸಿದ್ದ ಪ್ರದರ್ಶನದಲ್ಲಿ ನೂರಾರು ಮಂದಿ ಪಾಲ್ಗೊಂಡು ಗಾಂಧಿ ಸ್ಮರಣೆ ಮಾಡಿಕೊಂಡರು. ಗಾಂಧಿ ಹಲವು ವೈವಿಧ್ಯಮ ಫೋಟೋಗಳು ನೋಡುಗರ ಗಮನ ಸೆಳೆದವು.ಸಾವಿರಾರು ಅಕ್ಷರಗಳಲ್ಲಿ ಹೇಳಬೇಕಾದ ವಿಷಯವು ಒಂದೊಂದು ಪೋಟೋಗಳು ಪ್ರೇಕ್ಷಕರಿಗೆ ಹೇಳಿದವು.

ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಯುವತಿಯರು ಪ್ರದರ್ಶನಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದರು. ಸಂಜೆಯವರೆಗೂ ನಡೆಯುವ ಗಾಂಧಿ ಜೀವನಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಸಾವಿರಾರು ಮಂದಿ ಭೇಟಿ ನೀರಿಕ್ಷೆ ವಾರ್ತಾ ಮತ್ತು ಪ್ರಸಾರ ಇಲಾಖೆಯದ್ದು. ಯುವ ಪೀಳಿಗೆಗೆ ಗಾಂಧಿ ಮಾಹಿತಿಯನ್ನು ರವಾನಿಸಿ ಗಾಂಧಿ ಮೌಲ್ಯಗಳನ್ನು ಪ್ರಚುರಪಡಿಸುವುದು ಪ್ರದರ್ಶನದ ಉದ್ದೇಶವಾಗಿದೆ.

ಪ್ರದರ್ಶನಕ್ಕೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಗಾಂಧೀ ಜೀವನ ಮೌಲ್ಯಗಳು ಹಾಗೂ ಅವರ ಹೋರಾಟಗಳ ಅಪರೂಪದ ಛಾಯಾಚಿತ್ರ ವೀಕ್ಷಿಸಿ ಸ್ಮರಣೆ ಮಾಡಿಕೊಳ್ಳಬಹುದು ಎಂದರು.

ಜಿಲ್ಲಾಧಿಕಾರಿ ಡಾ.ರಾಕೇಶ್ಕುಮಾರ್ ಸತ್ಯ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಹೋರಾಟ ಹಾಗೂ ಅಪಾರ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತೋರಿಸಿದ ಮಹಾತ್ಮ ಗಾಂಧೀ ಸ್ಮರಣೆ ಸದಾಕಾಲವೂ ನಮಗೆಲ್ಲ ಪ್ರೇರಕ. ಗಾಂಧೀ ಕನಸನ್ನು ನನಸಾಗಿಸುವಲ್ಲಿ ಯುವಕರು ಕೈಜೋಡಿಸಬೇಕು ಎಂದು ತಿಳಿಸಿದರು.

ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ವಿಭಾಗೀಯ ಸಂಚಾಲಕ ಫಕ್ರುದ್ದೀನ್, ಬಸ್ ನಿಲ್ದಾಣಾಧಿಕಾರಿ ಶಿವಕುಮಾರ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಮಾತನಾಡಿದರು.

ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟಗಳಲ್ಲಿ ಮಹಾತ್ಮಾ ಗಾಂಧೀ ಕರ್ನಾಟಕಕ್ಕೆ ಭೇಟಿ ನೀಡಿದ ಪ್ರದೇಶಗಳು, ಅಸ್ಪøಶತೆ ನಿವಾರಣೆಗಾಗಿ ಗಾಂಧೀ ನಡೆಸಿದ ಆಂದೋಲನ, 1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸ್ ಅಧಿವೇಶನ ಸೇರಿದಂತೆ ಅವರ ಜೀವನ ಚರಿತ್ರೆಯ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.