Tuesday, July 1, 2025
Google search engine
Home Blog Page 333

ಸಿಐಟಿಯು ಸಂಭ್ರಮಕ್ಕೆ ತುಮಕೂರು ಸಜ್ಜು

ತುಮಕೂರು: ಸಿಐಟಿಯುನ ಐವತ್ತನೇ ವರ್ಷಾಚರಣೆ ಹಾಗೂ ಹದಿನಾಲ್ಕನೇ ರಾಜ್ಯ ಸಮ್ಮೇಳನ ತುಮಕೂರು ನಗರದಲ್ಲಿ ನಡೆಯಲಿದೆ. ನವೆಂಬರ್ 8, 9 ಮತ್ತು 10ರಂದು ಮೂರು ದಿನಗಳು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಸಕ್ತ ಆರ್ಥಿಕ, ಕಾರ್ಮಿಕರ ಸ್ಥಿತಿಗತಿ ಕಾರ್ಮಿಕ ಕಾನೂನು-ಕಾಯ್ದೆ, ದೇಶ ಎದುರಿಸುತ್ತಿರುವ ಬಿಕ್ಕಟ್ಟು ಪ್ರಸ್ತಾಪಗೊಳ್ಳುವ ನಿರೀಕ್ಷೆ ಇದೆ. ಸಮ್ಮೇಳನಕ್ಕೆ 600ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸಮ್ಮೇಳನಕ್ಕಾಗಿ ಪೂರ್ವ ತಯಾರಿಗಳು ಭರದಿಂದ ಸಾಗಿವೆ.

ಸಮ್ಮೇಳನದ ಮೊದಲ ದಿನ ಕೆಂಪಂಗಿ ದಳದ ಮೆರವಣಿಗೆ ಇದೆ. ನೂರಾರು ಕಾರ್ಮಿಕರು ಕೆಂಪು ಷರ್ಟ್ ಮತ್ತು ಕೆಂಪು ಪ್ಯಾಂಟ್ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದು ಮೆರವಣಿಗೆಗೆ ಮೆರಗು ನೀಡಲಿದೆ. ಸಾವಿರಾರು ಕಾರ್ಮಿಕರು ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಸಮ್ಮೇಳನಕ್ಕೆ ಅಖಿಲ ಭಾರತ ಸಿಐಟಿಯು ಅಧ್ಯಕ್ಷೆ ಡಾ.ಹೇಮಲತ, ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಉಪಾಧ್ಯಕ್ಷ ಡಾ.ಎ.ಕೆ.ಪದ್ಮನಾಭನ್ ಭಾಗವಹಿಸಿ ಮಾಹಿತಿ ನೀಡುವರು. ಜನಪರ ಚಿಂತಕ ಕೆ.ದೊರೈರಾಜ್ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ. ಸೈಯದ್ ಮುಜೀಬ್, ಬಿ.ಉಮೇಶ್, ಎನ್.ಕೆ. ಸುಬ್ರಮಣ್ಯ, ಜಿ.ಕಮಲ, ಷಣ್ಮುಖಪ್ಪ, ಲೋಕೇಶ್ ಹೀಗೆ ಎಲ್ಲಾ ವಿಭಾಗದ ಪ್ರಮುಖರನ್ನು ಒಳಗೊಂಡಂತೆ ಸಮಿತಿ ರಚಿಸಿದ್ದು ವಿಶೇಷವಾಗಿದೆ.

                                                                              ಮುಜೀಬ್

ಸಮ್ಮೇಳನದ ಭಾಗವಾಗಿ ರಚಿಸಿರುವ ಸ್ವಾಗತ ಸಮಿತಿ, ವಸತಿ, ಆಹಾರ, ವೇದಿಕೆ, ಪ್ರಚಾರ, ಸ್ಮರಣ ಸಂಚಿಕೆ ಸಮಿತಿಗಳ ಸಭೆಗಳು ನಡೆದಿದ್ದು ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಲಾಗಿದೆ. ಪ್ರತಿಯೊಂದು ಸಮಿತಿಗೂ ಅಧ್ಯಕ್ಷರು, ಸಂಚಾಲಕರನ್ನು ನೇಮಕ ಮಾಡಿದೆ. ಪ್ರತಿಯೊಂದು ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಈಗಾಗಲೇ ತುಮಕೂರು, ತಿಪಟೂರು, ಶಿರಾ ಮತ್ತು ಕುಣಿಗಲ್ ಕೇಂದ್ರ ಸ್ಥಾನಗಳಲ್ಲಿ ವಿಚಾರ ಸಂಕಿರಣಗಳು ನಡೆದಿವೆ.


ತುಮಕೂರಿನಲ್ಲಿ ಕಾರ್ಮಿಕರ ಕಾಯ್ದೆಗಳನ್ನು ಸಂಹಿತೆಗಳಾಗಿ ಬದಲಾವಣೆ, ದುಡಿವ ಜನರ ನಿಲುಮೆ, ತಿಪಟೂರಿನಲ್ಲಿ ಕೃಷಿ ಬಿಕ್ಕಟ್ಟು, ರೈತರ ಸಂಕಷ್ಟಗಳು ಮತ್ತು ಪರಿಹಾರ, ಶಿರಾದಲ್ಲಿ ಸೌಹಾರ್ದತೆ ಮತ್ತು ಬಹುತ್ವಕ್ಕೆ ಇರುವ ಸವಾಲುಗಳು, ಕುಣಿಗಲ್‍ನಲ್ಲಿ ಕುಣಿಗಲ್ ಸಮಗ್ರ ಅಭಿವೃದ್ಧಿಗಿರುವ ಸವಾಲುಗಳು ವಿಷಯಗಳ ಕುರಿತು ವಿವಿಧ ಗಣ್ಯರು ಚರ್ಚೆ ನಡೆಸಿದ್ದಾರೆ. ಕಾರ್ಮಿಕ ಮುಖಂಡರು, ರೈತ ಸಂಘ, ಪ್ರಾಂತ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಪತ್ರಕರ್ತರು, ಬರಹಗಾರರು ಚಿಂತಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ದೇಶದಲ್ಲಾಗುತ್ತಿರುವ ಬೆಳವಳಿಗೆಗಳ ಕುರಿತು ಗಮನ ಸೆಳೆದಿದ್ದಾರೆ.
ಜಿಲ್ಲೆಯ ಸಿಐಟಿಯು ನಾಯಕರು, ಅಂಗನವಾಡಿ, ಗ್ರಾಮ ಪಂಚಾಯಿತಿ, ಕಾರ್ಖಾನೆಗಳ ಸಂಘಗಳು ಹೀಗೆ ಎಲ್ಲರೂ ಅಹರ್ನಿಷಿ ಕಟ್ಟಾಳುಗಳಂತೆ ಕೆಲಸ ಮಾಡುತ್ತಿರುವುದು ಮುಂದುವರಿದಿದೆ. ಕಾರ್ಯಕ್ರಮ ಯಶಸ್ವಿಗೆ ಬೇಕಾದ ಎಲ್ಲ ಕೆಲಸಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ.

ಇನ್ನೊಂದೆಡೆ ಸ್ಮರಣ ಸಂಚಿಕೆ ಸಮಿತಿ ಮೂರು ಬಾರಿ ನಡೆಸಿದೆ. ಸ್ಮರಣ ಸಂಚಿಕೆಯು ಯಾವೆಲ್ಲಾ ವಿಷಯಗಳನ್ನು ಒಳಗೊಂಡಿರಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಜಿಲ್ಲೆಯ ಸೌಹಾರ್ದ ನೆಲೆ, ಚಳವಳಿ, ಇತಿಹಾಸ, ಸ್ಲಂ ಜನರ ಬದುಕು, ಜಿಲ್ಲೆ ಮತ್ತು ರಾಜ್ಯವನ್ನು ಬಾಧಿಸುತ್ತಿರುವ ಗಣಿಗಾರಿಕೆ, ದಲಿತ ಹೋರಾಟಗಳು ಹೀಗೆ ಹತ್ತು ಹಲವು ವೈವಿಧ್ಯಮಯ ವಿಷಯಗಳು ಇರಬೇಕು ಎಂಬುದನ್ನು ಸಮಿತಿ ಕಂಡುಕೊಂಡಿದೆ.

                                                                     ಬಿ ಉಮೇಶ್

ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯಲ್ಲಿ ಹಿರಿಯರಾದ ಕೆ.ದೊರೈರಾಜು, ವಕೀಲ ಸಿ.ಕೆ. ಮಹೇಂದ್ರ, ಪತ್ರಕರ್ತ ಕೆ.ಈ.ಸಿದ್ದಯ್ಯ, ಸಹಪ್ರಾಧ್ಯಾಪಕ ಡಾ.ಓ.ನಾಗರಾಜು, ಲೇಖಕಿಯರಾದ ಮಲ್ಲಿಕಾ ಬಸವರಾಜು, ಬಾ.ಹ.ರಮಾಕುಮಾರಿ ಇದ್ದು ಸಹಕಾರ ನೀಡುತ್ತಿದ್ದಾರೆ.

ಇದರ ಭಾಗವಾಗಿ ನಾಡೋಜ ಬರಗೂರು ರಾಮಚಂದ್ರಪ್ಪ, ಲೇಖಕಿ ಬಾ.ಹ.ರಮಾಕುಮಾರಿ, ಸಾಹಿತಿ ಎನ್.ನಾಗಪ್ಪ, ಕಥೆಗಾರ ಎಸ್.ಗಂಗಾಧರಯ್ಯ, ಪತ್ರಕರ್ತ ಉಗಮ ಶ್ರೀನಿವಾಸ್, ಬರಹಗಾರ ಉಜ್ಜಜ್ಜಿ ರಾಜಣ್ಣ ಮೊದಲಾದವರಿಗೆ ಒಂದೊಂದು ವಿಷಯ ಕುರಿತು ಲೇಖನ ಬರೆಯಬೇಕು. ಶೀಘ್ರವೇ ಲೇಖನಗಳನ್ನು ಕಳಿಸಿಕೊಡಬೇಕೆಂದು ಮನವಿಯನ್ನು ಮಾಡಲಾಗಿದೆ. ಈಗಾಗಲೇ ಕೆಲ ಲೇಖಕರು ಲೇಖನಗಳನ್ನು ಕಳಿಸಿಕೊಟ್ಟಿದ್ದರೆ, ಇನ್ನು ಉಳಿದವು ಬರಬೇಕಾಗಿದೆ.
ಕಾರ್ಮಿಕರು, ರೈತರು, ಮಹಿಳೆಯರು ಮತ್ತು ಮಕ್ಕಳು ಬಿಕ್ಕಟ್ಟು ಎದುರಿಸುತ್ತಿದ್ದು ಅವುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಇಂತಹ ಚರ್ಚೆ, ಸಂವಾದಗಳಿಂದ ಭಾರತ ಸರ್ಕಾರದ ಗಮನ ಸೆಳೆಯುವ ಯತ್ನ ಇದಾಗಿದೆ.

ತುಮಕೂರು ವಿಶ್ವವಿದ್ಯಾನಿಲಯದೊಂದಿಗೆ ಅಂತರರಾಷ್ಟ್ರೀಯ ಒಡಂಬಡಿಕೆ

ತುಮಕೂರು: ಉನ್ನತ ಸಂಶೋಧನೆಗಳ ಕುರಿತು ಅಂತರರಾಷ್ಟ್ರೀಯ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾದ ಸ್ಟೆಲೆನ್ಬಾಷ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಪ್ರೊ. ಬೆನ್ ಲೂಸ್ ಸಲಹೆ ನೀಡಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಉದ್ಘಾಟನೆ ಹಾಗೂ ಮೆಥಡ್ಸ್ ಅಂಡ್ ಅನಾಲಿಸಿಸ್ ಟೂಲ್ಸ್ ಇನ್ ಮೈಕ್ರೋಬಯಲ್ ಬಯೋಟೆಕ್ನಾಲಜಿ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವಿವಿಧ ಬಗೆಯ ಸಂಶೋಧನೆ ನಡೆಸುವ ಸಂಬಂಧ ತುಮಕೂರು ವಿಶ್ವವಿದ್ಯಾನಿಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಮಾತನಾಡಿ ಮೂಲವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಸೂಕ್ಷ್ಮಜೀವಶಾಸ್ತ್ರ ವಿಭಾಗ ಆರಂಭಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಆವಿಷ್ಕಾರ ಹಾಗೂ ಉದ್ಯಮಶೀಲತೆಯಲ್ಲಿ ಹೆಚ್ಚುಹೆಚ್ಚು ಸಾಧನೆ ಮಾಡಬೇಕು. ಮಾನವ ಸಂಪನ್ಮೂಲಗಳ ವಿಷಯದಲ್ಲಿ ಉನ್ನತ ಸಂಶೋಧನೆ ನಡೆಯಬೇಕು. ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ಮಾಡಿದರೆ ವಿಫುಲ ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ತಿಳಿಸಿದರು.

ಸ್ನಾತಕೋತ್ತರ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಂಯೋಜಕ ಡಾ. ಆರ್. ಜಿ. ಶರತ್ಚಂದ್ರ, ತುಮಕೂರು ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ. ಕೆ. ಜಿ. ಪರಶುರಾಮ ಉಪಸ್ಥಿತರಿದ್ದರು.

ಉತ್ತಮ ಫಲಿತಾಂಶಕ್ಕೆ ಹೀಗೆ ಮಾಡಿ

ಉತ್ತಮ ಫಲಿತಾಂಶಕ್ಕಾಗಿ ವಿಶೇಷ ತರಗತಿ
ತುಮಕೂರು:ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಉತ್ತಮಗೊಳಿಸುವ ಸಂಬಂಧ ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಸಂಜೆ ವೇಳೆ ವಿಶೇಷ ತರಗತಿ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಸೂಚಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶುಭ ಕಲ್ಯಾಣ್, ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಹೀಗಾಗಿ ಈಗಿನಿಂದಲೇ ಮಕ್ಕಳಿಗೆ ಪರೀಕ್ಷಾ ಸಿದ್ಧತೆ ನಡೆಸಬೇಕು ಎಂದು ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಕೈಗೆತ್ತಿಕೊಂಡಿರುವ 21 ಸರ್ಕಾರಿ ಶಾಲಾ ಕಟ್ಟಡಗಳ ಮರು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದನ್ನು ಪರಿಶೀಲಿಸಿ ಪೂರ್ಣಗೊಳಿಸಬೇಕು ಎಂದರು.
ತಾಲೂಕಿನಲ್ಲಿ ಉತ್ತಮ ಮಳೆ ಬರುತ್ತಿದ್ದು, ಈಗಾಗಲೇ ತುಂಬಿರುವ ಕೆರೆಗಳಿಗೆ ಮೀನಿನ ಮರಿಗಳನ್ನು ನಿಯಮಾನುಸಾರ ಬಿಡಲು ಅಗತ್ಯ ಕ್ರಮವಹಿಸುವಂತೆ ಮೀನುಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಶೇಕಡ 68ರಷ್ಟು ಪ್ರಗತಿ ಸಾಧಿಸಿದೆ. ಮಾರ್ಚ್ ಅಂತ್ಯದೊಳಗೆ ಶೇಕಡಾ 100ರಷ್ಟು ಭೌತಿಕ ಗುರಿ ಸಾಧಿಸಲು ಕ್ರಮವಹಿಸಬೇಕೆಂದು ಪಿಡಿಓಗಳಿಗೆ ತಿಳಿಸಿದರು.

ತುಂಬಿದ್ದ ಕೆರೆ ಹೇಗೆ ಖಾಲಿಯಾಯಿತು.

ಪಾವಗಡ: ತಾಲ್ಲೂಕಿನ ಕೆರೆ, ಗೋಕಟ್ಟೆಗಳನ್ನು  ದುರಸ್ಥಿಪಡಿಸದಿದ್ದಲ್ಲಿ  ಶೀಘ್ರ ತಹಶೀಲ್ದಾರ್ ಕಚೇರಿ ಮುಂಭಾಗ   ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ  ನಡೆಸಲಾಗುವುದು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ತಿಳಿಸಿದರು.

ಪಾವಗಡ ತಾಲ್ಲೂಕು ಪೆಂಡ್ಲಿಜೀವಿಯಲ್ಲಿ ಮಂಗಳವಾರ ನಡೆದ  ರೈತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

ಹಲ ದಶಕಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದಿತ್ತು. ಜಾನುವಾರುಗಳಿಗೆ ಮೇವು, ಕುಡಿಯಲು ನೀರಿಗೂ ಅಭಾವವಾಗಿತ್ತು. ಆದರೆ ಈಚೆಗೆ ಉತ್ತಮ ಮಳೆಯಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆರೆ ಏರಿ ಒಡೆದು, ಮಂಗೆ ಬಿದ್ದು ಕೆರೆಯ ನೀರು ಹರಿದು ಹೋಗಿದೆ ಎಂದು ಆರೋಪಿಸಿದರು.

ಉತ್ತಮ ಮಳೆಯಾದರೂ ಕೆರೆಗಳಲ್ಲಿ ನೀರು ನಿಲ್ಲದ ಕಾರಣ ಅಂತರ್ಜಲ ಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಸುಧಾರಣೆಯಾಗಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಮತ್ತೆ ನೀರಿನ ಸಮಸ್ಯೆ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಕೊಂಡನ್ನ, ರೈತರ ದಾಖಲಾತಿ ಸರಿಯಿಲ್ಲ ಎಂಬ ನೆಪ ಹೇಳಿ ಸಾಲ ಮನ್ನಾ ಮಾಡದೆ ಸತಾಯಿಸಲಾಗುತ್ತಿದೆ. ಅಧಿಕಾರಿಗಳು ಕೂಡಲೇ ತಾಂತ್ರಿಕ ದೋಶ ಸರಿಪಡಿಸಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಹನುಮಂತರೆಡ್ಡಿ, ಕೊಂಡಪ್ಪ, ವೇಣುಗೋಪಾಲ್, ಓಬಳೇಶಪ್ಪ, ನಾರಾಯಣಪ್ಪ, ಅಂಜಪ್ಪ, ಮುತ್ಯಾಲಪ್ಪ ಉಪಸ್ಥಿತರಿದ್ದರು.

ನಟ ಹನುಮಂತೇಗೌಡರಿಗೆ ಕೊನೆಗೂ ಸಂಜೆ ಕಂಡ ಮಹಿಳೆ!

ಅದು ತುಮಕೂರು ಹೊರವಲಯದ ರಿಂಗ್ ರಸ್ತೆ. ಸ್ನೇಹಿತರನ್ನು ನೋಡಲು ಹೋಗಿದ್ದ ನಟ ಹನುಮಂತೇಗೌಡರು ರಸ್ತೆಯ ಪಕ್ಕದಲ್ಲೇ ನಿಂತಿದ್ದರು. ಬೈಕ್ ಬೇರೆ ತಕ್ಕೊಂಡು ಹೋಗಿರಲಿಲ್ಲ. ಜೊತೆ ಇದ್ದ ಸ್ನೇಹಿತರೂ ಇರಲಿಲ್ಲ. ಆಟೋಗಳ ಓಡಾಟವೂ ಆ ಭಾಗದಲ್ಲಿ ಇರುವುದಿಲ್ಲ.ಹಾಗಾಗಿ ಸಿಟಿ ಬಸ್ ಬರಬಹುದೆಂದು ಕಾಯುತ್ತಿದ್ದರು. ಆಗಲೇ ಏಳು ಗಂಟೆ, ಒಬ್ಬರೇ ನಿಲ್ಲುವುದೆಂದರೆ ಕಷ್ಟದ ಸಂಗತಿ. ಜೊತೆಯಲ್ಲಿ ಯಾರಾದರೂ ಇದ್ದರೆ ಮಾತುಕತೆ ಆಡಬಹುದಿತ್ತು.ಆದರೆ ಅಂಥ ಅವಕಾಶಕ್ಕೆ ಎಡೆ ಇರಲಿಲ್ಲ.


ಏನು ಮಾಡುವುದೆಂದು ಅಲೋಚಿಸುತ್ತಿರುವಾಗಲೇ ವಾಹನವೊಂದು ಇವರತ್ತ ಬಂದಿದೆ. ಅದು ಬರಬೇಕಾಗಿದ್ದುದು ಅದೇ ಮಾರ್ಗದಲ್ಲಿ ರಾತ್ರಿ 7 ಗಂಟೆ ನಿತ್ಯವೂ ಸಂಚರಿಸುವ ವಾಹನ. ಅಂಥ ವಾಹನ ಬಂದುದನ್ನು ಹನುಮಂತೇಗೌಡರು ನೋಡಿದರು. ಬಸಲ್ಲಿ ಹೆಣ್ಣು ಮಕ್ಕಳೇ ತುಂಬಿದ್ದರು. ಯಾವುದೋ ವಾಹನವಿರಬಹುದು ಎಂದು ಸುಮ್ಮನಿದ್ದರು. ಆ ಬಸಲ್ಲಿದ್ದ ಮಹಿಳೆಯರು ಇವರನ್ನು ನೋಡಿದರು. ಆ ವಾಹನವೂ ನಿಂತಿತು. ಅಣ್ಣ ನಿಮ್ಮನ್ನು ನೋಡಿದ್ದೇವೆ. ನಿಮ್ಮ ಪರಿಚಯ ನಮಗೆ ಇದೆ. ನೀವು ಸೀರಿಯಲ್ ಮತ್ತು ಸಿನಿಮಾದಲ್ಲಿ ಆಕ್ಟ್ ಮಾಡುತ್ತೀರ ಅಲ್ಲವೇ? ಬನ್ನಿ ಅಣ್ಣ ಬಸ್ ಹತ್ತಿ, ನಾವು ಸಿಟಿಗೆ ಹೋಗುತ್ತಿದ್ದೇವೆ. ನಿಮ್ಮನ್ನು ಅಲ್ಲಿವರೆಗೂ ಬಿಡುತ್ತೇವೆ ಅಂದರು.

ಸರಿ, ಇವರಿಗೂ ಹೋಗಲು ಬೇರೆ ಮಾರ್ಗವಿಲ್ಲ. ಬಸ್ ಹತ್ತಿದರು. ಅವರ ನಟನೆ ಬಗ್ಗೆ ಚರ್ಚೆಯೂ ನಡೆಯಿತು. ಹನುಮಂತೇಗೌಡರಿಗೆ ಇವರೆಲ್ಲ ಗಾರ್ಮೆಂಟ್ಸ್ ಫ್ಯಾಕ್ಟರಿಯ ಹೆಣ್ಣು ಮಕ್ಕಳೆಂಬುದ ಖಚಿತವಾಯಿತು. ಕೂಡಲೇ ಗೌಡರು ಕೇಳಿದರು. ‘’ಹೇಗಿದೆ ಕೆಲಸ? ಸಂಬಳ ಸರಿಯಾಗಿ ಕೊಡ್ತಾರ?’ ಎಂದರು.

ಮಹಿಳೆಯರು ಒಬ್ಬೊಬ್ಬರೇ ಹೇಳುತ್ತಾ ಹೋದರು. ಅಣ್ಣಾ ಬೆಳಗ್ಗೆ ಹೋಗಿ ಸಂಜೆ ಬರುತ್ತೇವೆ. ದಿನಾನು ಇಷ್ಟೊತ್ತು ಆಗುತ್ತೆ ಬೆಳೆಗ್ಗೆ ಕೆಲಸಕ್ಕೆ ಹೋದೋರು ಮತ್ತೆ ಕೆಲಸಕ್ಕೆ ಹೋಗ್ತೀವೋ ಇಲ್ಲವೋ ಅನ್ನೋ ಸ್ಥಿತಿ ಐತೆ. ಇವರು ಕೊಡೋ ಏಳೆಂಟು ಸಾವಿರದಲ್ಲಿ ಜೀವನ ಸಾಗಿಸ್ಬೇಕು. ಮಕ್ಕಳನ್ನು ಓದಿಸ್ಬೇಕು. ಕಷ್ಟ ಐತೆ ಕಣಣ್ಣಾ, ನಮ್ ಕೆಲ್ಸ ಗ್ಯಾರೆಂಟಿನೇ ಇಲ್ಲ. ಯಾವಾಗ ಬೇಕಾದ್ರೂ ತಗೀಬೌದು. ನಮ್ ಕಷ್ಟ ಯಾರಿಗೆ ಹೇಳನಾ?

ಇಲ್ಲಿ ಕೆಲ್ಸ ಬಿಟ್ಟು ಊರಿಗೆ ಹೋಗಿ ಬದ್ಕೋದುಂಟಾ ಅಣ್ಣಾ. ಆಲ್ಲಿ ಏನ್ ಕೆಲ್ಸ ಐತೆ. ಅಲ್ಲೋದ್ರೆ ಆಡ್ಕಳ್ಳಲ್ವಾ? ಊರಿಗೆ ಹೋದ್ರ ಮಕ್ಕಳನ್ನು ಓದ್ಸೋದು ಹೆಂಗೆ, ಕಷ್ಟಾನೋ ಸುಖಾನೋ ಇಲ್ಲೇ ಇರ್ತೀವಣ್ಣ. ಹೆಂಗೋ ಬದ್ಕು ಸಾಗಿಸ್ತೇವೆ ಎಂದು ಗೋಳು ತೋಡಿಕೊಂಡರು.

ಕೊರಟಗೆರೆ : ಬೀದಿಗೆ ಏಕೆ ಬಂದರು ಹಾಲು ಉತ್ಪಾದಕರು

ವಿದೇಶದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರ ನಿರ್ಧಾರವನ್ನು ಖಂಡಿಸಿ ಕೊರಟಗೆರೆ ಹಾಲು ಉತ್ಪಾದಕರು ಬೃಹತ್ ಪ್ರತಿಭಟನೆ ನಡೆಸಿದರು. ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದರಿಂದ ಸ್ಥಳೀಯ ಹಾಲು ಉತ್ಪಾದಕರು ಬೀದಿಪಾಲಾಗಲಿದ್ದಾರೆ ಎಂದು ಆರೋಪಿಸಿದರು.
ನ್ಯೂಜಿಲ್ಯಾಂಡ್ ತನ್ನ ಉತ್ಪಾದನೆಯ ಶೇಕಡ 93ರಷ್ಟು ಹಾಲನ್ನು ರಫ್ತು ಮಾಡುತ್ತದೆ. ಈ ಹಾಲು ನಮ್ಮ ದೇಶದೊಳಗೆ ಬಂದರೆ ರೈತರು ಮತ್ತು ಕೃಷಿಕೂಲಿಕಾರರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದಕ್ಕೆ ಸಹಿ ಹಾಕುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.


ವಿದೇಶೀ ಹಾಲನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ನಮ್ಮ ರೈತರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬೇರೆ ದೇಶಗಳೂ ಕೂಡ ನಮ್ಮ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ದತೆ ನಡೆಸಿವೆ. ಇಂತಹ ಸನ್ನಿವೇಶದಲ್ಲಿ ಭಾರತ ಸರ್ಕಾರ ರೈತರ ವಿರೋಧಿ ನೀತಿ ಅನುಸರಿಸಲು ಮುಂದಾಗಿದೆ. ವಿದೇಶೀ ಹಾಲು ನಮ್ಮ ಮಾರುಕಟ್ಟೆ ಪ್ರವೇಶಿಸಿದರೆ ಲಕ್ಷಾಂತರ ಮಂದಿ ಹಾಲು ಉತ್ಪಾಧಕರು ಕೆಲಸ ನಿರುದ್ಯೋಗಿಗಳಾಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಲ್ಲದೆ ವಿದೇಶ ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಮಾರುಕಟ್ಟೆಯ ಮೇಲೆ ಸವಾರಿ ಮಾಡಲಿವೆ ಎಂದು ಎಚ್ಚರಿಸಿದರು.


ಈಗಾಗಲೇ ಹಾಲು ಉತ್ಪಾದನೆ ರೈತರಿಗೆ ನಷ್ಟವನ್ನು ಉಂಟು ಮಾಡುತ್ತಿದೆ. ಆದರೂ ಅನಿವಾರ್ಯವಾಗಿ ಹೈನುಗಾರಿಕೆಯಲ್ಲಿ ರೈತರು ತೊಡಗಿದ್ದಾರೆ. ಅದರ ಫಲವಾಗಿ ರಾಜ್ಯದ ಪ್ರತಿನಿತ್ಯದ 80-85 ಲಕ್ಷ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಜಿಲ್ಲೆಯ ಸುಮಾರು 70 ಸಾವಿರ ಕುಟುಂಬಗಳು ಹಾಲು ಉತ್ಪಾದನೆಯಲ್ಲಿ ತೊಡಗಿವೆ. ಕೇಂದ್ರ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ ಇಷ್ಟು ಕುಟುಂಬಗಳು ಬೀದಿಗೆ ಬರಲಿವೆ. ದೇಶೀಯ ಹಾಲು ಉತ್ಪಾದಕರು ವಿದೇಶಿ ಹಾಲಿನೊಂದಿಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಕೆಬಿಗೆ ರಾಜ್ಯಮಟ್ಟದ ನುಡಿನಮನ

ತುಮಕೂರು:ಸಾಹಿತಿ ಕೆ.ಬಿ.ಸಿದ್ದಯ್ಯ ನಿಧನದ ಹಿನ್ನೆಲೆಯಲ್ಲಿ ಮುಂದಿನ ಕಾರ್ಯಯೋಜನೆಗಳನ್ನು ಕೈಗೊಳ್ಳುವ ಸಂಬಂಧ ತುಮಕೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಾತ್ಯತೀತ ಯುವ ವೇದಿಕೆಯಿಂದ ಆಯೋಜಿಸಿದ್ದ ಸಭೆಯಲ್ಲಿ ತುಮಕೂರಿನಲ್ಲಿ ರಾಜ್ಯಮಟ್ಟದ ನುಡಿನಮನ ಕಾರ್ಯಕ್ರಮ ನಡೆಸುವುದು ಮತ್ತು ಕೆ.ಬಿ.ಸಿದಯ್ಯ ಪ್ರತಿಷ್ಠಾನ ಸ್ಥಾಪಿಸುವ ಕುರಿತು ಚರ್ಚಿಸಲಾಯಿತು.
ಒಂದು ತಿಂಗಳೊಳಗೆ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಯಿತು. ನುಡಿನಮನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವನೂರು ಮಹಾದೇವ, ಎಚ್.ಗೋವಿಂದಯ್ಯ, ಮಲ್ಲಿಕಾ ಘಂಟಿ, ಸಾಹಿತಿ ಸಿದ್ದಲಿಂಗಯ್ಯ ಮತ್ತು ರವಿವರ್ಮ ಕುಮಾರ್ ಸೇರಿದಂತೆ ಹಲವರನ್ನು ಕರೆಸುವ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಹಿರಿಯರಾದ ಕೆ.ದೊರೈರಾಜ್, ಕುಂದೂರು ತಿಮ್ಮಯ್ಯ, ಡಾ.ಬಸವರಾಜ್, ಜಿ.ಟಿ.ವೆಂಕಟೇಶ್, ವಿರೂಪಾಕ್ಷ ಡ್ಯಾಗೇರಹಳ್ಳಿ, ಕೊಟ್ಟಶಂಕರ್, ವಕೀಲ ಮಾರುತಿ ಪ್ರಸಾದ್ ಮೊದಲಾದವರು ಭಾಗವಹಿಸಿ ಅಭಿಪ್ರಾಯಗಳನ್ನು ಹಂಚಿಕೊಂಡರು.

ನಿದ್ದೆಗೆಡಿಸುವ ಆತಂಕಕಾರಿ ದಿನಗಳನ್ನು ಒದ್ದೋಡಿಸಬೇಕು – ಚಿಂತಕ ಕೆ.ದೊರೈರಾಜ್

ಪ್ರಸಕ್ತ ದೇಶದ ಸ್ಥಿತಿಯಲ್ಲಿ ಜನಸಾಮಾನ್ಯರ ನಿದ್ದೆಗೆಡಿಸುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿದ್ದು ಇದನ್ನು ಒದ್ದೋಡಿಸಲು ಜನಪರ, ಜೀವಪರ ಚಳವಳಿಗಳು ಒಂದುಗೂಡಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ತಿಳಿಸಿದರು.
ತುಮಕೂರಿನ ಗಾಂಧೀನಗರಲದಲಿರುವ ಜನಚಳವಳಿ ಕೇಂದ್ರದಲ್ಲಿ ಅಕ್ಟೋಬರ್ 20ರಂದು ಹಮ್ಮಿಕೊಂಡಿದ್ದ ಸಿಐಟಿಯುನ 14ನೇ ರಾಜ್ಯ ಸಮ್ಮೇಳನದ ಸಿದ್ಧತೆ ಭಾಗವಾಗಿ ಸ್ವಾಗತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಚಳವಳಿಗಳು ಜನಸಾಮಾನ್ಯರ ನಡುವೆ ತಾತ್ವಿಕ ಹಾಗೂ ಬೌದ್ಧಿಕ ವಿಚಾರಗಳನ್ನು ವ್ಯಾಪಕವಾಗಿ ಕೊಂಡು ಹೋಗುವ ಮೂಲಕ ಬಲಿಷ್ಟ ಚಳವಳಿಗಳನ್ನು ಕಟ್ಟಬೇಕಾದ ಅಗತ್ಯವಿದೆ ಎಂದರು.
ಇತ್ತೀಚೆಗೆ ಬಂಟಿಂಗ್ ತೆರವುಗೊಳಿಸಲು ಸಂದರ್ಭದಲ್ಲಿ ಸಾವನ್ನಪ್ಪಿದ ವಿಚಾರವನ್ನು ಪ್ರಸ್ತಾಪಿಸಿದ ಅವರು, ವ್ಯವಸ್ಥೆಯಿಂದಾದ ಸಾವಿಗೆ ಸತ್ತ ಪೌರಕಾರ್ಮಿಕನನ್ನೇ ಹೊಣೆಯಾಗಿಸುವ ಅಮಾನವೀಯ ವ್ಯವಸ್ಥೆ ಖಂಡನಾರ್ಹ ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್ ವಿಷಯ ಮಂಡಿಸಿದರು. ಸಿಐಟಿಯು ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ದುಡಿಯುವ ಜನರ ರಕ್ಷಣೆಗಾಗಿ ನಿರಂತರವಾಗಿ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವ ಸಿಐಟಿಯು ರಾಜ್ಯ ಸಮ್ಮೇಳನದಕ್ಕೆ ಜನರು ಬೆಂಬಲಿಸಿ, ಸಹಾಯ, ಸಹಕಾರ ನೀಡುವಂತೆ ಕೋರಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲ, ಜಿಲ್ಲಾ ಖಜಾಂಚಿ ಎ.ಲೋಕೇಶ್, ಸ್ವಾಗತ ಸಮಿತಿಯ ಖಜಾಂಚಿ ಷಣ್ಮುಗಪ್ಪ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾಂiÀರ್iದರ್ಶಿ ಗುಲ್ಜಾರ್ ಬಾನು, ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ್, ಬೀಡಿ ಕಾರ್ಮಿಕರ ಸಂಘದ ನಿಸಾರ್ ಅಹಮದ್ ಶಿರಾ, ಕಟ್ಟಡ ಕಾರ್ಮಿಕರ ಸಂಘಟನೆಯ ಟಿ.ಎಂ.ಗೋವಿಂದರಾಜು, ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿದರು.
ಇದೇ ವೇಳೆ ಇತ್ತೀಚೆಗೆ ನಿಧನರಾದ ಸಿಐಟಿಯು ಹಿರಿಯ ಮುಖಂಡ ಕೋದಂಡರಾಮ್ ಹಾಗೂ ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ಅವರಿಗೆ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಮಗನ ಗಾಳಿಪಟದ ಆಸೆಗಾಗಿ ಸುಟ್ಟು ಕರಕಲಾದ ತಂದೆ

ತುಮಕೂರು:ತಂತಿಗೆ ಸಿಲುಕಿದ್ದ ಗಾಳಿಪಟವನ್ನು ತೆಗೆಯಲು ಹೋದ ವ್ಯಕ್ತಿಯೊಬ್ಬರು ಹೈಟೆಂನ್ಷನ್ ವೈರ್ ತಗುಲಿ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಸದಾಶಿವನಗರದಲ್ಲಿ ಅಬ್ಸಲ್ ಮಗ ಮನೆಯ ಮುಂದೆ ನಿಂತು ಗಾಳಿಪಟ ಹಾರಿಸುತ್ತಿದ್ದು. ಗಾಳಿ ಜೋರಾಗಿ ಬೀಸಿದ್ದರಿಂದ ಆ ಗಾಳಿಪಟ ವಿದ್ಯುತ್ ತಂತಿಗೆ ಸಿಲುಕಿಕೊಂಡಿದೆ. ಆಗ ಅಬ್ಸಲ್ ಬಂದು ಗಾಳಿಪಟ ತೆಗೆದುಕೊಡಲು ಹೋಗಿದ್ದಾರೆ.

ಈ ಸಂದರ್ಭದಲ್ಲಿ ಗಾಳಿಪಟ ತೆಗೆಯುವಾಗ ಹೈಟೆಂನ್ಷನ್ ವೈಯರ್ ಅಬ್ಸಲ್ ಗೆ ತಗುಲಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಪೌರಕಾರ್ಮಿಕ ನರಸಿಂಹಮೂರ್ತಿ ಕೇಸರಿ ಬಾವುಟ ತೆರವುಗೊಳಿಸಲು ಹೋಗಿ ಮೃತಪಟ್ಟ ವಾರದಲ್ಲೇ 50 ವರ್ಷದ ಅಬ್ಸಲ್ ಕೂಡ ಅದೇ ರೀತಿ ಮೃತಪಟ್ಟಿದ್ದಾರೆ.

ಮೊದಲನೆಯದು ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಡೆದಿದ್ದರೆ, ಮತ್ತೊಂದು ಗಾಳಿಪಟ ತೆಗೆದುಕೊಡುವಾಗ ಸಂಭವಿಸಿದೆ.

ತುಮಕೂರು ಜಿಲ್ಲೆಗೆ ಬಯಲು ರಂಗಾಯಣ: ರಂಗಭೂಮಿ ಕಲಾವಿದರ ಒಕ್ಕೂಟಕ್ಕೆ ಪ್ರಗತಿಪರ ಸಂಘಟನೆಗಳ ಬೆಂಬಲ

0

ತುಮಕೂರು: ಜಿಲ್ಲೆಗೆ ಬಯಲು ರಂಗಾಯಣ ಬೇಕೆಂಬ ಬೇಡಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಂಗಭೂಮಿ ಕಲಾವಿದರ ಒಕ್ಕೂಟ ಹಲವು ಸುತ್ತಿನ ಸಭೆ ಸಂಘಟಿಸಿ ಚರ್ಚಿಸಿದ್ದು ಸಾಹಿತಿಗಳು, ಕಲಾವಿದರು, ಬರಹಗಾರರು, ಪತ್ರಕರ್ತರು, ಹೋರಾಟಗಾರರು ಕೂಡ ಒಕ್ಕೂಟದ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 20ರಂದು ತುಮಕೂರು ನಗರದ ಅಮಾನಿಕೆರೆ ಎದುರಿನ ಕನ್ನಡ ಭವನದಲ್ಲಿ ಒಕ್ಕೂಟದ ಸಂಚಾಲಕ ಹೊನ್ನವಳ್ಳಿ ನಟರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಐದು ವಿಷಯಗಳು ಚರ್ಚೆಗೆ ಬಂದವು.
ರಾಜ್ಯ ಮತ್ತು ರಾಷ್ಟ್ರಮಟ್ಟದ ರಂಗ ಪ್ರಯೋಗಗಳನ್ನು ನಡೆಸಲು ಒಂದು ವೇದಿಕೆ ಅಗತ್ಯವಿದೆ. ಡಾ.ಗುಬ್ಬಿ ವೀರಣ್ಣ ಕ್ಯಾಂಪಸ್ ಮಾಡಬೇಕು. ಸಂಶೋಧನ ಕೇಂದ್ರ ಆಗಬೇಕು. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಉಸ್ತುವಾರಿಯಲ್ಲಿ ಸಮಿತಿ ರಚನೆಯಾಗಬೇಕು. ಹತ್ತು ತಾಲೂಕುಗಳಿಗೂ ಒಂದೊಂದು ಪುಟ್ಟ ರಂಗಮಂದಿರ ಆಗಬೇಕು. ಪ್ರತಿ ವರ್ಷ ಬಯಲುಸೀಮೆ ನಾಟಕೋತ್ಸವ ಆಚರಿಸಬೇಕು ಎಂಬ ವಿಷಯಗಳನ್ನು ಚರ್ಚಿಸಲಾಯಿತು.
ಬಯಲುಸೀಮೆ ರಂಗಾಯಣದ ಅಗತ್ಯತೆ ಏನು? ಯಾವ ಕಾರಣಕ್ಕೆ ಜಿಲ್ಲೆಯಲ್ಲಿ ರಂಗಾಯಣ ಸ್ಥಾಪನೆ ಮಾಡಬೇಕು ಎಂಬ ಬಗ್ಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸಲ್ಲಿಸಲಾಗಿದೆ. ಈ ಸಭೆಯಲ್ಲೂ ಕೂಡ ಮುಂದುವರೆದ ಚರ್ಚೆಗಳು ನಡೆದು ಭಾಗವಹಿಸಿದವರೆಲ್ಲರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ತುಮಕೂರು ಜಿಲ್ಲಾ ರಂಗಭೂಮಿ ಒಕ್ಕೂಟದ ನಿಯೋಗ ಇನ್ನು ಒಂದು ವಾರದಲ್ಲಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲೆಯ ಮೂವರು ಸಂದರನ್ನೂ ಹಾಗೂ ಹತ್ತೂ ತಾಲ್ಲೂಕುಗಳ ಶಾಸಕರುಗಳಿಗೆ ೫ ಬೇಡಿಕೆಗಳ ವಿಸೃತವಾದ ವರದಿಯನ್ನು ಸಲ್ಲಿಸಿತು ತೀರ್ಮಾನಿಸಲಾಯಿತು.
ಸಭೆಯಲ್ಲಿ ವಿಮರ್ಶಕ ಡಾ.ನಟರಾಜ್ ಬೂದಾಳ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪತ್ರಕರ್ತ ಉಗಮಶ್ರೀನಿವಾಸ್, ಗೋಮಾರ್ದನಹಳ್ಳಿ ಪಿ.ಮಂಜುನಾಥ್, ನಾಟಕಮನೆ ಮಹಲಿಂಗು, ಅನಿಲ್ ಚಿಕ್ಕದಾಳವಟ್ಟ, ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.