ತುಮಕೂರು: ಉನ್ನತ ಸಂಶೋಧನೆಗಳ ಕುರಿತು ಅಂತರರಾಷ್ಟ್ರೀಯ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾದ ಸ್ಟೆಲೆನ್ಬಾಷ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಪ್ರೊ. ಬೆನ್ ಲೂಸ್ ಸಲಹೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಉದ್ಘಾಟನೆ ಹಾಗೂ ಮೆಥಡ್ಸ್ ಅಂಡ್ ಅನಾಲಿಸಿಸ್ ಟೂಲ್ಸ್ ಇನ್ ಮೈಕ್ರೋಬಯಲ್ ಬಯೋಟೆಕ್ನಾಲಜಿ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ವಿವಿಧ ಬಗೆಯ ಸಂಶೋಧನೆ ನಡೆಸುವ ಸಂಬಂಧ ತುಮಕೂರು ವಿಶ್ವವಿದ್ಯಾನಿಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಮಾತನಾಡಿ ಮೂಲವಿಜ್ಞಾನದ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಸೂಕ್ಷ್ಮಜೀವಶಾಸ್ತ್ರ ವಿಭಾಗ ಆರಂಭಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಆವಿಷ್ಕಾರ ಹಾಗೂ ಉದ್ಯಮಶೀಲತೆಯಲ್ಲಿ ಹೆಚ್ಚುಹೆಚ್ಚು ಸಾಧನೆ ಮಾಡಬೇಕು. ಮಾನವ ಸಂಪನ್ಮೂಲಗಳ ವಿಷಯದಲ್ಲಿ ಉನ್ನತ ಸಂಶೋಧನೆ ನಡೆಯಬೇಕು. ಸೂಕ್ಷ್ಮಜೀವಶಾಸ್ತ್ರ ಅಧ್ಯಯನ ಮಾಡಿದರೆ ವಿಫುಲ ಉದ್ಯೋಗಾವಕಾಶಗಳು ಲಭಿಸಲಿವೆ ಎಂದು ತಿಳಿಸಿದರು.
ಸ್ನಾತಕೋತ್ತರ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಸಂಯೋಜಕ ಡಾ. ಆರ್. ಜಿ. ಶರತ್ಚಂದ್ರ, ತುಮಕೂರು ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ. ಕೆ. ಜಿ. ಪರಶುರಾಮ ಉಪಸ್ಥಿತರಿದ್ದರು.