ಬೆಂಗಳೂರು: ಮಹಿಳಾ ಕಾನ್ಸ್ಟೇಬಲ್‌ಗೆ ರೌಡಿಶೀಟರ್ ಒಬ್ಬ ಚಾಕು ಇರಿದು ಪರಾರಿಯಾಗಲು ಯತ್ನಿಸಿರುವ ಘಟನೆ ಬೆಂಗಳೂರಿನ ಎಚ್ಎಎಲ್ ಠಾಣಾ ವ್ಯಪ್ತಿಯ ಜ್ಯೋತಿ ನಗರದಲ್ಲಿ ನಡೆದಿದೆ.
ಚಾಕು ಇರಿತಕ್ಕೊಳಗಾದ ಮಹಿಳಾ ಹೆಡ್ ಕಾನ್ಸ್ಟೇಬಲ್ ವಿನುತಾ ಎಂದು ತಿಳಿದು ಬಂದಿದೆ.
ಆರೋಪಿ ರೌಡಿಶೀಟರ್ ಶೇಖ್ ಷರೀಫ್ನನ್ನು ಬಂಧಿಸಲು ಆಗಸ್ಟ್ 5 ರಂದು ವಿನುತಾ ಹೋಗಿದ್ದರು. ಈ ವೇಳೆ ಚಾಕು ಇರಿದು ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾನೆ.
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಷರೀಫ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ಮತ್ತೊಂದು ಕೊಲೆಗೆ ಸಂಚು ರೂಪಿಸಿದ್ದನು ಎಂಬ ಮಾಹಿತಿ ಆಧರಿಸಿ ಆತನನ್ನು ಠಾಣೆಗೆ ಕರೆತರಲು ವಿನುತಾ ಹಾಗೂ ತಂಡ ಹೋಗಿತ್ತು.
ರಾತ್ರಿ 9.30ಕ್ಕೆ ಆತನನ್ನು ಕರೆದುಕೊಂಡು ಹೋಗಲು ತಂಡ ಮುಂದಾಗಿತ್ತು. ಈ ಸಂದರ್ಭ ಈ ಘಟನೆ ನಡೆದಿದೆ. ಆದರೆ ಸ್ಥಳೀಯರ ಸಹಾಯದಿಂದ ಆತನನ್ನು ಬಂಧಿಸಲಾಗಿದೆ.
ಹೆಡ್ ಕಾನ್ಸ್ಟೇಬಲ್ ವಿನುತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಐಪಿಸಿ 307, 353, 354 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ತುಮಕೂರು; ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೋರ ಕ್ಲಸ್ಟರ್ ವ್ಯಾಪ್ತಿಯ ಜಿ.ಎಚ್.ಪಿ.ಎಸ್ ಕೆಂಪನ ದೊಡ್ಡೇರಿ ಹಾಗೂ ಜಿ. ಎಚ್.ಪಿ.ಎಸ್ ಕೆಸ್ತೂರು ಶಾಲೆಗಳಲ್ಲಿ ನಡೆದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ತುಮಕೂರಿನ ಸಹಕಾರ ಫೌಂಡೇಶನ್’ನಿಂದ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ, ನೋಟ್ ಬುಕ್ ಹಾಗೂ ಶಾಲಾ ಬ್ಯಾಗ್’ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು ಹಾಗೂ ಜಿ. ಎಚ್.ಪಿ.ಎಸ್ ಬ್ರಹ್ಮಸಂದ್ರ ಶಾಲೆಯಲ್ಲಿ ಸಹಕಾರ ಫೌಂಡೇಶನ್’ವತಿಯಿಂದ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಸೈನಿಕರ ಬಗ್ಗೆ ಮಾತನಾಡುವಾಗ ಮತ್ತು ಸಾರೆ ಜಹಾನ್ ಸೆ ಅಚ್ಚ ಹಾಡು ಮೈ ಕೂದಲೆಗಳೆಲ್ಲ ನೆಟ್ಟಗಾಗುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗೆ ನಾವೆಲ್ಲ ಸೈನಿಕರನ್ನ ಗೌರವಿಸುತ್ತೇವೆ ಮತ್ತು ಪ್ರೀತಿಸುತ್ತೇವೆ.
ಹಿಂದೆ ದಿವಂಗತ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಹೇಳುತ್ತಾರೆ. ” ಜೈ ಜವಾನ್ ಜೈ ಕಿಸಾನ್ ” ಎಂದು. ರೈತ ಮತ್ತು ಸೈನಿಕ ಈ ಎರಡು ಶಕ್ತಿಗಳು ಈ ದೇಶದ ಬೆನ್ನೆಲುಬು. ಸೈನ್ಯ ಸೇರ್ಪಡೆ ಒಂದು ಪ್ರಕ್ರಿಯೆ. ಯಾವುದೇ ಲಂಚ, ಆಮಿಷ, ಶಿಫಾರಸ್ ನಿಂದ ಕೂಡಿದ್ದಲ್ಲ. ಅದೊಂದು ಅರ್ಹತೆ ಎಂಬುದೇ ಹೆಮ್ಮೆಯ ವಿಚಾರ. ಒಂದು ಸಲ ಸೈನ್ಯ ಕ್ಕೆ ಸೇರಿದರೆ ಮತ್ತೆರಳಿ ಮನೆಗೆ ಬರುತ್ತೇವೆ ಎಂಬ ಯಾವ ಖಾತರಿಯೂ ಇರುವುದಿಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ದೇಶ ಪ್ರೇಮಿಗಳು ಸೈನ್ಯ ಸೇರಲು ತುದಿಗಾಲಲ್ಲಿ ನಿಂತಿರುತ್ತಾರೆ. ಹಗಲು ರಾತ್ರಿ ಎನ್ನದೆ ದುರ್ಗಮ ಪ್ರದೇಶಗಳಲ್ಲಿ ನುಸುಳುಕೊರರ ಗುಂಡಿಗೆ ಎದೆಯೊಡ್ಡಿ ಪ್ರತಿದಾಳಿ ಮಾಡುವ ನಮ್ಮ ಸೈನಿಕರನ್ನು ಈ ಸಂದರ್ಭದಲ್ಲಿ ನೆನೆಯಲೇ ಬೇಕು. ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬಿಟ್ಟು ದೇಶದ ರಕ್ಷಣೆ ಗುರಿಯಾಗಿಸಿಕೊಂಡು ಅವರು ನಿದ್ರಿಸದೆ ದೇಶದ ಪ್ರಜೆಗಳನ್ನ ನಿಶ್ಚಿಂತೆಯಿಂದ ನಿದ್ದೆ ಮಾಡುಲು ಹಬ್ಬ ಹರಿದಿನಗಳೆನ್ನದೆ ಗಡಿಯಲ್ಲಿ ಕಾವಲು ಕಾಯುತ್ತಾರೆ.
ಭಾರತದ ಸೇನಾ ಕಾರ್ಯದಕ್ಷತೆಯನ್ನು ಮೆಲುಕು ಹಾಕಿದಾಗ ಜನರಲ್ ಕಾರ್ಯಪ್ಪ,ನವರು ನೆನಪಾಗುತ್ತಾರೆ. 1965 ರ ಅವಧಿಯ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ಅವರ ಮಗ ಪಾಕಿಸ್ತಾನ ಸೈನ್ಯಕ್ಕೆ ಸೆರೆಸಿಕ್ಕಾಗ ಅಲ್ಲಿದ್ದ ಪಾಕಿಸ್ತಾನದ ಅಧಿಕಾರಿಯೊಬ್ಬರು ಜನರಲ್ ಕಾರ್ಯಪ್ಪ ಅವರಿಗೆ ಮಾಹಿತಿ ಕೊಡುತ್ತಾರೆ. ನಿಮ್ಮ ಮಗ ಪಾಕ್ ಸೈನ್ಯಕ್ಕೆ ಸೆರೆಸಿಕ್ಕಿದ್ದಾನೆ. ನೀವು ಪಾಕಿಸ್ತಾನದ ಸೇನಾ ಜನರಲ್ ಜೊತೆ ಒಮ್ಮೆ ಮಾತನಾಡಿ ನಿಮ್ಮ ಮಗನನ್ನು ಬಿಡಬಹುದು ಎನ್ನುತ್ತಾರೆ. ಅವರು ಪ್ರಭಾವ ಬೀರಿ ತಮ್ಮ ಮಗನ್ನು ಬಿಡಿಸಿಕೊಳ್ಳವ ಗೋಜಿಗೆ ಹೋಗದೆ ಅವಕಾಶವನ್ನು ತಿರಸ್ಕರಿಸುತ್ತಾರೆ. ಎಲ್ಲಾ ಯುದ್ಧ ಕೈದಿಗಳಂತೆ ನನ್ನ ಮಗನನ್ನು ನೋಡಿಕೊಳ್ಳಿ. ಅಲ್ಲಿರುವವರೆಲ್ಲಾ ನನ್ನ ಮಕ್ಕಳೆ ಎಂಬ ಸಂದೇಶ ರವಾನೆ ಮಾಡಿದ್ದು ಅಭೂತಪೂರ್ವ ಇತಿಹಾಸ. ಇದಲ್ಲವೇ ಭಾರತೀಯ ಸೈನ್ಯದ ಹಂಸಕ್ಷೀರ ನ್ಯಾಯ.
1999 ರ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನದ ಸೈನ್ಯ ಲೈನ್ ಆಪ್ ಕಂಟ್ರೋಲ್ ದಾಟಿ ನುಸುಳಿತ್ತು. ಅಲ್ಲಿನ ಹವಾಮಾನ ಚಳಿಗಾಲದಲ್ಲಿ ಮೈನಸ್ಸ್ – 48°c ವರೆಗೂ ಇಳಿಯುತ್ತದೆ ಇದರಿಂದ ಗಡಿಕಾಯುವ ಸೈನಿಕರಿಗೆ ಅಲ್ಲಿ ಒಂದು ಸವಾಲಿನ ಕೆಲಸವೇ ಸರಿ. ಇಂತಹದೊಂದು ಸಂದರ್ಭ ಬಳಸಿಕೊಂಡು ಕುತಂತ್ರಿ ಪಾಕಿಸ್ತಾನವು ಕಾಶ್ಮೀರ ಹೋರಾಟಗಾರರ ಹೆಸರಿನಲ್ಲಿ ತನ್ನದೇ ಆದ ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟು ಗಡಿರೇಖೆಯನ್ನು ಉಲಂಘಿಸಿ ಭಾತರದ ಮುಖ್ಯ ಭೂ ಪ್ರದೇಶಗಳನ್ನು ಅಕ್ರಮಿಸಿತು. ಗುಡ್ಡಾಗಾಡು ಪ್ರದೇಶದಲ್ಲಿ ಅಡಗಿ ಕುಳಿತ್ತಿದ್ದ ಭಯೋತ್ಪಾದಕರ ಚಲನವಲನ ಗಮನಿಸಿದ ಕುರಿಗಾಹಿಯೊಬ್ಬ ಸೈನ್ಯಕ್ಕೆ ಸುಳಿವುಕೊಟ್ಟ. ತಕ್ಷಣ ಎಚ್ಚೆತ್ತ ಸೈನ್ಯ ಅಂದಿನ ಪ್ರಧಾನಿ ವಾಜಪೇಯಿ ಅವರ ಸರ್ಕಾರದ ಅನುಮೋದನೆ ಪಡೆದು, ಯುದ್ದಕ್ಕೆ ಸನ್ನದ್ಧವಾಯಿತು. ಇತ್ತ ನಮ್ಮ ಸೈನ್ಯ ಆಪರೇಶನ್ ‘ವಿಜಯ್’ ಎಂಬ ಹೆಸರಿನ ಯುದ್ದಕ್ಕೆ ಇಳಿಯಿತು. ಕಾರ್ಗಿಲ್ ದುರ್ಗಮ ಪ್ರದೇಶದ ಬೆಟ್ಟದ ಮೇಲೆ ಕುಳಿತಿರುವ ಭಯೋತ್ಪಾದಕರಿಗೆ ಹೆಚ್ಚು ಅನುಕೂಲ ಹಾಗೂ ತಳಭಾಗದ ಸೈನ್ಯಕ್ಕೆ ಅತ್ಯಂತ ಸವಾಲಾಗಿತ್ತು. ದಿಟ್ಟ ಹೋರಾಟ ಮಾಡಿ ಪಾಪಿಗಳ ಎಡೆಮುರಿ ಕಟ್ಟಿ ಪ್ರಪಂಚ ಯುದ್ಧದ ಇತಿಹಾಸದ ಪಟ್ಟಿಗೆ ಸೇರಿಸಿದ್ದು ಒಂದು ಮೈಲುಗಲ್ಲು. ಇಂತಹ ಕೀರ್ತಿ ನಮ್ಮ ಸೈನ್ಯಕ್ಕೆ ಸಲ್ಲುತ್ತದೆ.
ಇತ್ತಿಚೆಗೆ ನಡೆದ ಸರ್ಜಿಕಲ್ ಸ್ಟ್ರೈಕ್ ನಂತಹ ದಾಳಿಯಲ್ಲಿ ವಿಂಗ್ ಕಮಾಂಡರ್ ಆಭಿನಂದನ್ ಎಂಬ ವೀರಪರಾಕ್ರಮಿ ವಾಯುಸೇನೆಯ ಫೈಟರ್ ಜಟ್ ಮಿಗ್ ಬಳಸಿ ಪಾಕ್ ಯುದ್ಧ ವಿಮಾನವನ್ನ ಅಟ್ಟಿಸಿಕೊಂಡು ಹೋಗಿ ಪಾಕ್ ನೆಲದಲ್ಲಿ ಅಮೇರಿಕಾ ನಿರ್ಮಿತ ಅತ್ಯಾಧುನಿಕ ಫೈಟರ್ ಜಟ್ ಮಿಮಾನವನ್ನ ಪುಡಿ ಪುಡಿ ಗೈದು ಸಾಹಸ ಮೆರೆದ ವೀರ ಸೇನಾನಿ. ಭಾರತೀಯ ಪ್ರತಿ ಮನೆ ಮನೆಗಳಲ್ಲಿ ಯೋಧರನ್ನು ತಯಾರು ಮಾಡಬೇಕು. ದೇಶ ಸೇವೆ ಕಡ್ಡಾಯದ ನಂತರ ರಾಜಕೀಯ ಇನ್ನಿತರ ಕ್ಷೇತ್ರಗಳ ಸೇವೆ ಎಂಬ ಕಾನೂನು ದೇಶದಲ್ಲಿ ತರಬೇಕು. ಇತ್ತೀಚೆಗೆ ಸೇನಾಮುಖ್ಯಸ್ಥ ರಾವತ್ ಹಾಗೂ ಸಹೋದ್ಯೋಗಿ ಸೈನಿಕರು ಹೆಲಿಕಾಪ್ಟರ್ ದುರಂತದಲ್ಲಿ ಮಡಿದದ್ದು, ಅತೀವ ನೋವುಂಟು ಮಾಡಿತು.
ಮಡಿದ ಸೈನಿಕರೆಲ್ಲಾ ವೀರ ಸ್ವರ್ಗ ಸೇರಿ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಮತ್ತು ಸೈನಿಕರ ಶೌರ್ಯ ಸಾಹಸಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿ ಮಕ್ಕಳನ್ನ ಮನಸ್ಸಿನಲ್ಲಿ ಕೆಚ್ಚೆದೆಯ ಸೈನಿಕನ ಕನಸ್ಸನ್ನು ತುಂಬುವಂತಾಗಲಿ.
ತುಮಕೂರು: ಜಿಲ್ಲೆಯಲ್ಲಿ ಸಾರ್ವರ್ಕರ್ ಫ್ಲೆಕ್ಸ್ ಹರಿದವರನ್ನು ಕಂಡಲ್ಲಿ ಗುಂಡಿಡಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಕೆಜೆ ಹಳ್ಳಿ ಡಿಜೆಹಳ್ಳಿ ಹಾಗೂ ಶಿವಮೊಗ್ಗದಂತಾಗುವುದು ಬೇಡ. ಸರ್ವರ್ಕರ್ ಫೋಟೋ ಹರಿದವರು ಪಾಪಿಗಳು. ಅವರನ್ನು ಕೋಡಲೇ ಬಂಧಿಸಬೇಕು. ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು. ಪಾಲಿಕೆಯವರು ಫ್ಲೆಕ್ಸ್ ತೆಗೆದುಹಾಕಿರುವುದು ತಪ್ಪು, ಆಯುಕ್ತರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಕ್ರೋಶ ಹೊರ ಹಾಕಿದರು.
ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ನಗರದ ಅಲ್ಲಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ ಗಳನ್ನು ಹಾಕಲಾಗಿತ್ತು. ಅದರಲ್ಲಿ ಸರ್ವರ್ಕರ್ ಭಾವಚಿತ್ರವೂ ಇತ್ತು. ಅಶೋಕ ರಸ್ತೆಯ ಎಂಪ್ರೆಸ್ ಕಾಲೇಜಿನ ಮುಂಭಾಗ ಸಾರ್ವರ್ಕರ್ ಫೋಟೋ ಇದ್ದ ಫ್ಲೆಕ್ಸ್ ಅನ್ನು ಕಿಡಿಗೇಡಿಗಳು ಸೋಮವಾರ ರಾತ್ರಿ ಹರಿದು ಹಾಕಿರುವ ಸಂಗತಿ ಬೆಳಕಿಗೆ ಬಂದಿತ್ತು.
ಎಸ್ಪಿ ಪ್ರತಿಕ್ರಿಯೆ
ತುಮಕೂರು ಶಾಂತವಗಿರುವ ಟೌನ್. ಅದನ್ನು ಹಾಗೆಯೇ ಕಾಪಾಡಿಕೊಂಡು ಹೋಗೋಣ. ಸೋಮವಾರ ರಾತ್ರಿ ಈ ಘಟನೆ ನಡೆದಿರುವುದು ಬೆಳಿಗ್ಗೆ ಗಮಕ್ಕೆ ಬಂದಿದೆ. ಉಳಿದ ಎಲ್ಲಾ ಫ್ಲೆಕ್ಸ್ ಗಳನ್ನು ಕಾರ್ಪೊರೇಶನ್ ನವರು ಕ್ಲಿಯರ್ ಮಾಡಿದ್ದರೆ. ಜನರನ್ನು ಪ್ರಚೋದಿಸುವ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಅದಕ್ಕೆ ಪ್ರವೋಕ್ ಆಗಬಾರದು. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ತುಮಕೂರು: ವಿಶ್ವವಿದ್ಯಾಲಯ ಆವರಣ ಜಗದಾಂಬ ಚಿವುಕುಲ ಬ್ಲಾಕ್ ನಲ್ಲಿ ನಾಳೆ (ಆ.16. ಮಂಗಳವಾರ) ಬೆಳಿಗ್ಗೆ 9.30ರಿಂದ 4.30ರವರೆಗೆ ರಕ್ತದಾನ ಶಿಬಿರ ನಡೆಯಲಿದೆ.
ಯುವ ರೆಡ್ ಕ್ರಾಸ್ ಘಟಕ, ಎನ್‌ಎಸ್‌ಎಸ್, ಎನ್‌ಸಿಸಿ, ಯೂತ್ ಫಾರ್ ಸೇವಾ ಹಾಗೂ ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದೆ.
ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಶಿಬಿರದ ಉದ್ಘಾಟನೆ ಮಾಡಲಿದ್ದು, ಕುಲಸಚಿವ ಪ್ರೊ.ಕೆ.ಶಿವಚಿತ್ತಪ್ಪ, ಜಿಲ್ಲಾಸ್ಪತ್ರೆ ರಕ್ತ ನಿಧಿ ವಿಭಾಗದ ಡಾ.ವೀಣಾ ಉಮೇಶ್, ವಿಶ್ವವಿದ್ಯಾಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಕರಿಯಣ್ಣ ಗೌರವ ಉಪಸ್ಥಿತಿ ಇರಲಿದ್ದಾರೆ ಎಂದು ಆಹ್ವಾನ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ಪಾವಗಡ: ಸ್ವಾತಂತ್ರ್ಯದ ವೇಳೆ ತ್ಯಾಗ ಬಲಿದಾನಗೈದ ಯೋಧರನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಸ್ವತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವಾರು ಹೋರಾಟಗಾರರು ಸ್ವಾತಂತ್ರ್ಯ ತರುವಲ್ಲಿ ತಮ್ಮ ಜೀವನವನ್ನೇ ಮುಡುಪಿಟ್ಟಿದ್ದಾರೆ. ಅವರ ತ್ಯಾಗ ಬಲಿದಾನಗಳಿಂದ ನಮಗೆ ಸ್ವತಂತ್ರ್ಯ ಸಿಕ್ಕಿದೆ. ದೇಶದ ಅಭಿವೃದ್ಧಿಗಾಗಿ ಭಾರತೀಯರಾದ ನಾವು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಬೇಕು . ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ತಹಶಿಲ್ದಾರ್ ವರದರಾಜು ಮಾತನಾಡಿ, ತಾಲೂಕಿನಲ್ಲಿ ಹಲವು ಸ್ವಾತಂತ್ರ್ಯ ಯೋಧರು ತಮ್ಮದೇ ಆದ ಪಾತ್ರವಹಿಸಿದ್ದಾರೆ,. ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಭಾರತಕ್ಕೆ ವ್ಯಾಪಾರ ಮಾಡಲು ಬಂದು, ನಂತರ ದೇಶವನ್ನು ಆಕ್ರಮಿಸಿಕೊಂಡರು. ನಂತರ ಬ್ರಿಟೀಷರು ದೇಶವನ್ನು ಕೊಳ್ಳೆ ಹೊಡೆದರು ಎಂದರು.
ಈ ವೇಳೆ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಶಿವರಾಜಯ್ಯ, ಪುರಸಭೆ ಅಧ್ಯಕ್ಷ ವೇಲುರಾಜು, ಬಿಇಒ ಅಶ್ವಥನಾರಾಯಣ, ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಜಿ.ವೆಂಕಟೇಶ್, ಪುರಸಭೆ ಉಪಾಧ್ಯಕ್ಷೆ ಜಾಹ್ನವಿ, ಸದಸ್ಯ ಎಂ ಎಜಿ ಇಮ್ರಾನ್, ಗೊರ್ತಿ ನಾಗರಾಜು, ನಾಗಭೂಷಣರೆಡ್ಡಿ, ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ, ವೈದ್ಯಾಧಿಕಾರಿ ಕಿರಣ್, ಪೊಲೀಸ್ ಇನ್ಸ್ ಪೆಕ್ಟರ್ ಅಜಯಸಾರಥಿ, ಕಾಂತರೆಡ್ಡಿ ಉಪಸ್ಥಿತರಿದ್ದರು.
ತುರುವೇಕೆರೆ: ತಾಲೂಕಿನ ಮಾದಿಹಳ್ಳಿ ಗ್ರಾಪಂ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಗ್ರಾಪಂ ಪಿಡಿಓ ಲಿಂಗರಾಜೇಗೌಡ ಗೈರಾಗಿದ್ದರು.
ಪಿಡಿಓ ಅನುಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಗಿರೀಶ್, ಪಿ.ಡಿ.ಓ. ನಿರ್ಲಕ್ಷ್ಯವನ್ನು ಖಂಡಿಸಿದರು. ರಾಷ್ಟ್ರೀಯ ಹಬ್ಬ ಅಚರಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಪಿಡಿಓ ವಿರುದ್ಧ ಗ್ರಾಪಂ ಸದಸ್ಯ ಆನೆಮೆಳೆ ನಂಜುಂಡಿ ಇಓ ಗೆ ಮೌಖಿಕ ದೂರು ನೀಡಿದ್ದಾರೆ.
ಈ ಬಗ್ಗೆ ಇಓ ಸತೀಶ್ ಕುಮಾರ್ ಪ್ರತಿಕ್ರಿಯಿಸಿ, ಮಾದಿಹಳ್ಳಿ ಗ್ರಾಪಂ ಪಿಡಿಓ ಲಿಂಗರಾಜೇಗೌಡ ಧ್ವಜಾರೋಹಣಕ್ಕೆ ಗೈರಾಗಿರುವ ವಿಚಾರ ತಿಳಿದಿದೆ. ಈ ಕುರಿತು ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ವಹಿಸುತ್ತೇನೆ ಎಂದರು.
ತುಮಕೂರು: ಕ್ಯಾಂಪಸ್ ಕಹಾನಿ ಲೇಖಕ ಯೋಗೇಶ್ ಮಲ್ಲೂರು ಅವರ ಮೊದಲ ಪುಸ್ತಕವಾಗಿದ್ದು, ನವಿರಾದ ಅಭಿವ್ಯಕ್ತಿಯಿಂದ ಕೂಡಿದೆ. ಮತ್ತು ಅಷ್ಟೂ ಬರಹಗಳು ಓದುಗರನ್ನು ಸೆಳೆಯುತ್ತವೆ ಎಂದು ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಸಹಾಯಕ ಪ್ರಾಧ್ಯಾಪಕ ಹಾಗೂ ಲೇಖಕರಾದ ಡಾ.ಸಿಬಂತಿ ಪದ್ಮನಾಭ ಕೆ.ವಿ ತಿಳಿಸಿದರು.
ನಗರದ ತುಮಕೂರು ವಿಶ್ವವಿದ್ಯಾನಿಲಯದ ಸದಾನಂದಮಯ ಕಟ್ಟಡದಲ್ಲಿರುವ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ನಡೆದ ಯೋಗೇಶ್ ಮಲ್ಲೂರು ಅವರ ಕ್ಯಾಂಪಸ್ ಕಹಾನಿ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗೇಶ್ ನನ್ನ ಹಳೆಯ ವಿದ್ಯಾರ್ಥಿ, ಅವರ ಬರವಣಿಗೆಯ ಆಸಕ್ತಿಯನ್ನು ಪದವಿ ಹಂತದಿಂದಲೇ ನೋಡಿಕೊಂಡು ಬಂದಿದ್ದೆ. ಉತ್ತಮವಾದ ಬರಹಗಳನ್ನು ಬರೆಯಿತ್ತಿದ್ದರು ಎಂದರು.
ಹದಿಹರೆಯದ ಮನಸ್ಸಿನ ತುಡಿತಗಳು, ಭಾವನೆಗಳನ್ನು ಪುಸ್ತಕದಲ್ಲಿ ಕಾಣುತ್ತೇವೆ. ಯುವ ವಯಸ್ಸಿಗೆ ಈ ತರಹದ ಭಾವನೆಗಳು ಸಹಜವಾದರೂ ಅದನ್ನು ಅಭಿವ್ಯಕ್ತಿ ಪಡಿಸುವುದು ಮುಖ್ಯ. ಪುಸ್ತಕದಲ್ಲಿ ಸುಮಾರು 40 ರಷ್ಟು ಬರಹಗಳಿದ್ದು, ನವಿರಾದ ನಿರೂಪಣೆ ಹಾಗೂ ಉತ್ತಮ ಶೈಲಿಯಿಂದ ಕೂಡಿದೆ. ವಿದ್ಯಾರ್ಥಿ ದಿಸೆಯಿಂದಲೇ ಒಳ್ಳೆಯ ರೀತಿಯ ಬರವಣಿಗೆಯನ್ನು ರೂಢಿಸಿಕೊಂಡಂತಹ ವಿದ್ಯಾರ್ಥಿ ಯೋಗೇಶ್, ಅದರ ಜೊತೆಗೆ ಸಾಮಾಜಿಕ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇದೆಲ್ಲವೂ ಒಬ್ಬ ವಿದ್ಯಾರ್ಥಿಗೆ, ಪತ್ರಕರ್ತನಿಗೆ ಇರಬೇಕಾದ ಸಾಮಾಜಿಕ ತುಡಿತಗಳು. ಸಮಾಜದ ಜೊತೆಗೆ ಸಮಸ್ಯೆಗಳಿಗೆ ಸ್ಪಂದಿಸುವುದು, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಅದರೊಂದಿಗೆ ಬರವಣಿಗೆಯ ಅಭಿವ್ಯಕ್ತಿ ಕೆಲಸಗಳನ್ನು ಮಾಡುತ್ತಿರುವುದು ಸಂತೋಷದ ವಿಷಯ. ಕಥೆಗಳನ್ನು ಬರೆಯುವ ಹವ್ಯಾಸವು ಕೂಡ ಯೋಗೇಶ್ ಅವರಿಗಿದೆ. ಈಗಾಗಲೇ ಸಾಕಷ್ಟು ಕಥೆ, ಚುಟುಕು, ಲೇಖನಗಳನ್ನು ಬರೆದಿದ್ದಾರೆ. ಇನ್ನೂ ಕೂಡ ಅವರು ಈ ತರಹದ ಬರಹಗಳನ್ನು ಹೆಚ್ಚು ಹೆಚ್ಚಾಗಿ ಬರೆಯಲಿ. ಅವರಿಂದ ಒಳ್ಳೆಯ ಕೃತಿಗಳು ಪ್ರಕಟವಾಗಲಿ, ಅವುಗಳನ್ನು ನಾವು ಓದುವಂತಾಗಲಿ ಎಂದು ಹಾರೈಸಿದರು.
ಯುವಕರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದು ಮಾತ್ರವಲ್ಲದೆ, ಅವುಗಳನ್ನು ಪ್ರಕಟಿಸುವುದು ಮುಖ್ಯ ಜೊತೆಗೆ ಅದನ್ನು ತೆಗೆದುಕೊಂಡು ಓದಿ ಸೂಕ್ತ ಪ್ರತಿಕ್ರಿಯೆ ಕೊಡುವುದು ಒಬ್ಬ ಲೇಖಕ, ಬರಹಗಾರ, ಪತ್ರಕರ್ತರ ಬರವಣಿಗೆಗಳ ಸಾರ್ಥಕತೆ ಎಂದರು.
ಪುಸ್ತಕಕ್ಕೆ ಚಿತ್ರ ಸಾಹಿತಿ ಕವಿರಾಜ್ ಮುನ್ನುಡಿ ಬರೆದಿದ್ದಾರೆ. ಪ್ರೀತಿಯಿಂದ ಗುಬ್ಬಚ್ಚಿ ಸತೀಶ್ ಪ್ರಕಟಿಸಿದ್ದಾರೆ. ಬಹಳ ಸಂತೋಷದಿಂದ ಪುಸ್ತಕವನ್ನು ಕೈಗೆತ್ತಿಕೊಂಡಿದ್ದೇನೆ. ಪ್ರಕಾಶಕರು ಹಾಗೂ ಲೇಖಕರಿಗೆ ಶುಭಾಶಯ ಕೋರುತ್ತಾ, ಲೇಖಕ ಮತ್ತಷ್ಟು ಸಾಹಿತ್ಯ ಕೃಷಿ ಮಾಡುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕೃತಿಗಳು ರಚಿಸಲಿ ಎಂದರು.
ಈ ಸಂದರ್ಭದಲ್ಲಿ ಲೇಖಕ ಯೋಗೇಶ್ ಮಲ್ಲೂರು, ಪತ್ರಕರ್ತ ಉಮೇಶ್ ಸೇರಿದಂತೆ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿರಾ ನಂದಿನಿ ಕ್ಷೀರಭವನದ ಆವರಣದಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ
ಶಿರಾ: ದೇಶಕ್ಕೆ ಸ್ವಾತಂತ್ರ್ಯ ದೊರಕಲು ಸಾವಿರಾರು ದೇಶಪ್ರೇಮಿಗಳು ನಿಸ್ವಾರ್ಥವಾಗಿ ಹೋರಾಟ ಮಾಡಿದ ಫಲವಾಗಿ ಇಂದು ನಾವು ಸ್ವತಂತ್ರವಾಗಿದ್ದೇವೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ತ್ಯಾಗ ಬಲಿದಾನ ಮಾಡಿರುವ ಮಹನೀಯರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ನಮ್ಮ ಕೈಲಾದಷ್ಟು ದೇಶಕ್ಕೆ ಸೇವೆ ಮಾಡೋಣ ಎಂದು ರೇಷ್ಮೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಆರ್.ಗೌಡ ಹೇಳಿದರು.
ನಗರದ ನಂದಿನಿ ಕ್ಷೀರ ಭವನದ ಆವರಣದಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಏರ್ಪಡಿಸಿದ್ದ 76 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತ ದೇಶವನ್ನು ಮುಂದಿನ ದಿನಗಳಲ್ಲಿ ಶಕ್ತಿಯುತ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಎಲ್ಲರೂ ರಾಷ್ಟ್ರಾಭಿಮಾನ ಮೈಗೂಡಿಸಿಕೊಂಡು ಈ ದೇಶಕ್ಕೆ ಕಿಂಚಿತಾದರೂ ಸೇವೆ ಮಾಡುವ ಮನೋಭಾವ ಬೆಳೆಸಿಕೊಂಡಾಗ. ಭಾರತ ದೇಶ ಶಕ್ತಿಯುತವಾದ ದೇಶವಾಗಲಿದೆ.
ಸನ್ಮಾನ: 76ನೇ ಸ್ವಾತಂತ್ರö್ಯ ದಿನಾಚರಣೆಯ ಪ್ರಯುಕ್ತ ಶಿರಾ ನಗರದಲ್ಲಿ ಸುಮಾರು 50 ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿರುವ ಕೊವಿಡ್ ಸಂದರ್ಭದಲ್ಲೂ ಜನತೆಗೆ ಚಿಕಿತ್ಸೆ ನೀಡಿರುವ ಹಿರಿಯ ವೈದ್ಯರುಗಳಾದ ಡಾ.ಬಿ.ಮಹದೇವಯ್ಯ ಹಾಗೂ ಡಾ.ಶಿವಣ್ಣ ಅವರನ್ನು ಹಾಗೂ ಹೋರಾಟಗಾರರಾದ ದೋ ರಂಗನಾಥ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಮಧುಸೂಧನ್, ವಿಸ್ತರಣಾಧಿಕಾರಿ ದಿವಾಕರ್, ಸಮಾಲೊಚಕ ಪ್ರವೀಣ್, ಕೇಂದ್ರ ರೈಲ್ವೆ ಅಭಿವೃದ್ಧಿ ಮಂಡಳಿ ಸದಸ್ಯರಾದ ವೀರೇಶ್, ನಗರಸಭಾ ನಾಮ ನಿರ್ದೇಶನ ಸದಸ್ಯ ನರೇಂದ್ರ, ಮಾಜಿ ನಗರಸಭಾ ಸದಸ್ಯ ನಟರಾಜ್ ಇದ್ದರು.