Publicstory/prajayoga
ಶಿರಾ ನಂದಿನಿ ಕ್ಷೀರಭವನದ ಆವರಣದಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ
ಶಿರಾ: ದೇಶಕ್ಕೆ ಸ್ವಾತಂತ್ರ್ಯ ದೊರಕಲು ಸಾವಿರಾರು ದೇಶಪ್ರೇಮಿಗಳು ನಿಸ್ವಾರ್ಥವಾಗಿ ಹೋರಾಟ ಮಾಡಿದ ಫಲವಾಗಿ ಇಂದು ನಾವು ಸ್ವತಂತ್ರವಾಗಿದ್ದೇವೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ತ್ಯಾಗ ಬಲಿದಾನ ಮಾಡಿರುವ ಮಹನೀಯರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ನಮ್ಮ ಕೈಲಾದಷ್ಟು ದೇಶಕ್ಕೆ ಸೇವೆ ಮಾಡೋಣ ಎಂದು ರೇಷ್ಮೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಆರ್.ಗೌಡ ಹೇಳಿದರು.
ನಗರದ ನಂದಿನಿ ಕ್ಷೀರ ಭವನದ ಆವರಣದಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಏರ್ಪಡಿಸಿದ್ದ 76 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತ ದೇಶವನ್ನು ಮುಂದಿನ ದಿನಗಳಲ್ಲಿ ಶಕ್ತಿಯುತ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಎಲ್ಲರೂ ರಾಷ್ಟ್ರಾಭಿಮಾನ ಮೈಗೂಡಿಸಿಕೊಂಡು ಈ ದೇಶಕ್ಕೆ ಕಿಂಚಿತಾದರೂ ಸೇವೆ ಮಾಡುವ ಮನೋಭಾವ ಬೆಳೆಸಿಕೊಂಡಾಗ. ಭಾರತ ದೇಶ ಶಕ್ತಿಯುತವಾದ ದೇಶವಾಗಲಿದೆ.
ಸನ್ಮಾನ: 76ನೇ ಸ್ವಾತಂತ್ರö್ಯ ದಿನಾಚರಣೆಯ ಪ್ರಯುಕ್ತ ಶಿರಾ ನಗರದಲ್ಲಿ ಸುಮಾರು 50 ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿರುವ ಕೊವಿಡ್ ಸಂದರ್ಭದಲ್ಲೂ ಜನತೆಗೆ ಚಿಕಿತ್ಸೆ ನೀಡಿರುವ ಹಿರಿಯ ವೈದ್ಯರುಗಳಾದ ಡಾ.ಬಿ.ಮಹದೇವಯ್ಯ ಹಾಗೂ ಡಾ.ಶಿವಣ್ಣ ಅವರನ್ನು ಹಾಗೂ ಹೋರಾಟಗಾರರಾದ ದೋ ರಂಗನಾಥ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಮಧುಸೂಧನ್, ವಿಸ್ತರಣಾಧಿಕಾರಿ ದಿವಾಕರ್, ಸಮಾಲೊಚಕ ಪ್ರವೀಣ್, ಕೇಂದ್ರ ರೈಲ್ವೆ ಅಭಿವೃದ್ಧಿ ಮಂಡಳಿ ಸದಸ್ಯರಾದ ವೀರೇಶ್, ನಗರಸಭಾ ನಾಮ ನಿರ್ದೇಶನ ಸದಸ್ಯ ನರೇಂದ್ರ, ಮಾಜಿ ನಗರಸಭಾ ಸದಸ್ಯ ನಟರಾಜ್ ಇದ್ದರು.