ಕುಣಿಗಲ್: ತಾಲೂಕಿನ ಹುಲಿಯೂರುದುರ್ಗದ ದೀಪಾಂಬುದಿ ಕಾಳಿಕಾಂಬ ದೇವಾಲಯದಲ್ಲಿ ಯಜುರುಪಾಕರ್ಮ ಮಹೋತ್ಸವ, ಶ್ರೀ ಕಾಳಿಕಾಂಬ ರಥೋತ್ಸವ ಹಾಗೂ ಅಮರಶಿಲ್ಪಿ ಜಕಣಾಚಾರ್ಯ ಸ್ಮರಣೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ನಡೆಯಿತು.
ಮಧ್ಯಾಹ್ನ 12.30ಕ್ಕೆ ವಿವಿಧ ಮಠಾಧೀಶರುಗಳಾದ ನಿಟ್ಟರಹಳ್ಳಿಯ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ, ಫಿರಂಗಿ ಮಠದ ಫಿರಂಗಿ ಸ್ವಾಮೀಜಿ, ಗುರುಶನೇಶ್ವರಸ್ವಾಮಿ ಪೀಠಾಧ್ಯಕ್ಷರಾದ ಶ್ರೀ ಸುಬ್ಬರಾಯಚಾರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಜಿ ಸಚಿವಆಶೀರ್ವಾದ ನಿಂದಣ್ಣ, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮಹಬಲೇಶ್ವರ್ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಕಾಳಿಕಾಂಬ ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ದೀಪಾಂಬುಧಿ ಕಾಳಿಕಾಂಬ ದೇವರ ಉತ್ಸವ ಅದ್ದೂರಿಯಾಗಿ ನಡೆದಿದೆ. ರಾಜ್ಯದ ವಿವಿಧೆಡೆಗಳಿಂದ ವಿಶ್ವಕರ್ಮ ಸಮುದಾಯದವರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಹಾಗೆಯೇ ನಾನು ಸಹ ಮೊದಲಿನಿಂದಲೂ ಶ್ರೀಕ್ಷೇತ್ರ ಉತ್ಸವಕ್ಕೆ ಬರುತ್ತಿದ್ದೇನೆ. ದೇವರ ಆಶೀರ್ವಾದಿಂದ ನಾಡು ಸುಭಿಕ್ಷವಾಗಿರಲಿ ಎಂದು ಆಶಿಸಿದರು.
ಉಪವಿಭಾಗಾಧಿಕಾರಿ ಅಜಯ್ ಮಾತನಾಡಿ, ಅರಣ್ಯ ಪ್ರದೇಶದಲ್ಲಿರುವ ಈ ಕಾಳಿಕಾಂಬ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದೆ. ಇಂತಹ ಐತಿಹಾಸಿಕ ದೇವರ ಉತ್ಸವದಲ್ಲಿ ನಾನು ಪಾಲ್ಗೊಂಡಿರುವುದು ಬಹಳ ಸಂತಸ ತಂದಿದೆ. ವಾರವಿಡೀ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಭಕ್ತಾದಿಗಳು ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದರು.
ಯಜುರುಪಾಕರ್ಮದಲ್ಲಿ ಯಜ್ಞೋಪವೀಟವನ್ನು ಧಾರಣೆ ಮಾಡಿಕೊಳ್ಳುವಂತಹ ಪವಿತ್ರ ದಿನವಾಗಿದೆ. ಸುಮಾರು 10 ಸಾವಿರ ವಿಶ್ವಕರ್ಮ ಬಾಂಧವರು ಈ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಸಾಮೂಹಿಕ ಉಪಕರ್ಮದಲ್ಲಿ 30 ವಟುಗಳಿಗೆ ಸಾಮೂಹಿಕ ಉಪನಯನ ನಡೆಸಿ ಬ್ರಹ್ಮೋಪದೇಶ ಮಾಡಲಾಗಿದೆ ಎಂದು ಹೇಳಿದರು. ಶ್ರೀಕ್ಷೇತ್ರದ ರಥೋತ್ಸವದಲ್ಲಿ ಸಂಸದ ಡಿ.ಕೆ. ಸುರೇಶ್, ಶಾಸಕ ಡಾ. ಹೆಚ್.ಡಿ. ರಂಗನಾಥ್ ಅವರು ಪಾಲ್ಗೊಂಡು ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಾದ ಎನ್. ಸತ್ಯಪ್ಪ, ಕಾಳಹಸ್ತಾಚಾರ್, ಪುಟ್ಟಚಾರ್, ಬಿ. ರುದ್ರಾಚಾರ್, ಹೆಚ್.ಸಿ. ನಾಗರಾಜ್, ಎಂ.ಎನ್. ಕುಮಾರಸ್ವಾಮಿ, ಪ್ರಕಾಶ್‌ಕುಮಾರ್, ಹೆಚ್.ಆರ್. ಸೋಮಶೇಖರಾಚಾರ್ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಗುಬ್ಬಿ: ನೆರೆ ಹಾವಳಿಗೆ ತುತ್ತಾದ ತಾಲೂಕಿನ ಅಡಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊರೆ ತೋಟ ಗ್ರಾಮದ 33 ರೈತ ಕುಟುಂಬಸ್ಥರ ಮನೆ ಸಂಪೂರ್ಣ ಜಲಾವೃತಗೊಂಡು ದವಸ ಧಾನ್ಯ ಎಲ್ಲವೂ ಕೊಚ್ಚಿ ಹೋದ ಹಿನ್ನಲೆ ಅಡಗೂರು ಗ್ರಾಪಂ ವತಿಯಿಂದ ಸಂತ್ರಸ್ತ ಕುಟುಂಬಕ್ಕೆ ದಿನಸಿ ಕಿಟ್ ನೀಡಲಾಯಿತು.
ಗುಬ್ಬಿ ಅಮಾನಿಕೆರೆ ತುಂಬಿ ಹರಿದ ಪರಿಣಾಮ ಕೋಡಿಗೆ ಹೊಂದಿಕೊಂಡ ಈ ತೊರೆ ತೋಟ ಗ್ರಾಮ ಮುಳುಗಡೆಯಾಗಿದೆ. ಕೃಷಿಯನ್ನೇ ಅವಲಂಬಿಸಿದ್ದ 33 ಕುಟುಂಬದ ಸಣ್ಣ ಗ್ರಾಮ ಈಗ ಕೆರೆಯಂತಾಗಿದೆ. ಮನೆಗೆ ನೀರು ನುಗ್ಗಿದ ಹಿನ್ನಲೆ ಅಲ್ಲಿನ ಕುಟುಂಬಗಳು ಯಾವ ವಸ್ತುಗಳನ್ನು ಬಳಸಲಾಗಿಲ್ಲ. ಮನೆಯಲ್ಲಿದ್ದ ದವಸ ಧಾನ್ಯ ಕೂಡಾ ನೀರಿನಲ್ಲಿ ತೇಲಿ ಹೋಗಿದೆ. ಹೀಗೆ ಕಳೆದ ಒಂದು ವಾರದಿಂದ ಪರದಾಡಿದ ಸಂತ್ರಸ್ತ ಕುಟುಂಬಗಳಿಗೆ ತುರ್ತು ಶೆಡ್ ವ್ಯವಸ್ಥೆ ಮಾಡಿಕೊಟ್ಟು ಅತ್ಯಗತ್ಯ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡಿದರು.
ಪಿಡಿಒ ಶಿವಾನಂದ್ ಮಾತನಾಡಿ, ಪ್ರತಿ ಬಾರಿ ಕೆರೆ ಕೋಡಿ ಆದ ಸಮಯದಲ್ಲಿ ಸಮಸ್ಯೆ ಎದುರಿಸುತ್ತಿದ್ದ ಈ ಕುಟುಂಬಗಳು ಹೇಗೋ ನಿಬಾಯಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ನಿರಂತರ ಮಳೆ ಹಿನ್ನಲೆ ಕೆರೆ ಕೋಡಿ ನೀರು ಅತ್ಯಧಿಕ ಬಂದು ಇಡೀ ಗ್ರಾಮವೇ ಮುಳುಗಡೆಯಾಗಿದೆ. ಅವರಿಗೆ ಮೂಲ ಸವಲತ್ತು ಒದಗಿಸುವ ಕೆಲಸ ಅಡಗೂರು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಒಗ್ಗೂಡಿ ಫುಡ್ ಕಿಟ್ ವಿತರಣೆ ಮಾಡಲು ಮುಂದಾಗಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಕಂದಾಯ ಇಲಾಖೆ ಕೂಡ ಪರಿಹಾರ ಒದಗಿಸುವ ಕೆಲಸ ಮಾಡಿದೆ ಎಂದರು.
ಈ ವೇಳೆ ಅಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಆರ್.ಭಾಗ್ಯಮ್ಮ, ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ಶ್ವೇತಾ ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಬಲರಾಮಣ್ಣ, ತೊರೆ ತೋಟ ಗ್ರಾಮಸ್ಥರಾದ ಪ್ರಕಾಶ್, ಕಾಂತಾಜು ಇನ್ನಿತರರು ಹಾಜರಿದ್ದರು.
ಗುಬ್ಬಿ: ಮೂರು ದಿನಗಳ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ನಾಗರಿಕರು ಪ್ರತಿ ಮನೆ ಮೇಲೆ ರಾಷ್ಟ್ರ ಧ್ವಜ ಹಾರಿಸಿ ದೇಶ ಭಕ್ತಿ ಪ್ರದರ್ಶಿಸಿ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಯಶಸ್ಸಿಗೆ ಸಹಕರಿಸುವಂತೆ ಪ.ಪಂ ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ ಕರೆ ನೀಡಿದರು.
ಪಟ್ಟಣದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ರಾಷ್ಟ್ರ ಧ್ವಜ ವಿತರಿಸಿ ಮಾತನಾಡಿದ ಅವರು, ಆಗಸ್ಟ್ 13 ರಿಂದ 15 ರವರೆಗೆ ನಡೆಯುವ 75 ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆಯ ಸವಿ ನೆನಪಿನ ಅಮೃತ ಮಹೋತ್ಸವ ಅದ್ದೂರಿಯಾಗಿ ಆಚರಿಸಲು ಸರ್ಕಾರ ಕರೆ ನೀಡಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಕೂಡಾ ಈ ಕಾರ್ಯಕ್ರಮವನ್ನು ವಿಶೇಷಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದರು.
ಪಟ್ಟಣ ಪಂಚಾಯಿತಿ ವತಿಯಿಂದ 2500 ರಾಷ್ಟ್ರ ಧ್ವಜ ಖರೀದಿಸಿ ನಾಗರಿಕರಿಗೆ ಹಂಚಲಾಗುತ್ತಿದೆ. ಈಗಾಗಲೇ ಸರ್ಕಾರಿ ಕಚೇರಿಗಳಿಗೆ ಧ್ವಜ ಹಂಚಿಕೆ ಮಾಡಿದ್ದು, ಅದರ ಸಂಹಿತೆಯ ಬಗ್ಗೆ ಕೂಡಾ ತಿಳಿ ಹೇಳಲಾಗುತ್ತಿದೆ. ಧ್ವಜಕ್ಕೆ ಯಾವುದೇ ರೀತಿ ಅಗೌರವ ಸೂಚಿಸಿದಂತೆ ಮೂರು ದಿನ ಹಾರಾಡಿಸಲು ವಿಶೇಷ ಸೂಚನೆ ನೀಡಲಾಗುತ್ತಿದೆ. ಈ ಜೊತೆಗೆ ಆಗಸ್ಟ್ 13 ರಂದು ಭಾರತ ಮಾತಾ ಭಾವಚಿತ್ರ ಭವ್ಯ ಮೆರವಣಿಗೆ ಸಾವಿರಾರು ಮಂದಿ ಮಕ್ಕಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದೆ. ನಂತರ 14 ರ ಸಂಜೆ ಪಪಂ ವತಿಯಿಂದ ಪಂಜಿನ ಮೆರವಣಿಗೆ ನಡೆಯಲಿದೆ. ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಗುಬ್ಬಿಯ ರೈಲ್ವೆ ಸ್ಟೇಷನ್ ವರೆಗೆ ನಡೆಯುವ ಈ ಮೆರವಣಿಗೆಗೆ ನಾಗರೀಕರು ಭಾಗಹಿಸುವಂತೆ ಮನವಿ ಮಾಡಿದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ, ಕಳೆದ ಮೂರು ದಿನದಿಂದ ರಾಷ್ಟ್ರ ಧ್ವಜ ಹಂಚಿಕೆ ನಡೆದಿದ್ದು, ಎಲ್ಲಾ ಪ್ರಮುಖ ಸಾರ್ವಜನಿಕ ವಲಯಗಳಿಗೆ ಮೊದಲು ಹಂಚಲಾಗಿದೆ. ನಂತರ ಸಾರ್ವಜನಿಕರಿಗೂ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಎಲ್ಲಾ ಪಪಂ ಸದಸ್ಯರ ಸಹಕಾರ ಸಿಕ್ಕಿದೆ. ಜೊತೆಯಲ್ಲಿ ಸಾಮಾಜಿಕ ಸಂಘ ಸಂಸ್ಥೆಗಳು ಸಹ ಸಾಥ್ ನೀಡಿದೆ ಎಂದರು.
ಸಿಪಿಐ ನದಾಫ್, ಪಿಎಸೈ ಮುತ್ತುರಾಜ್, ಮುಖಂಡರಾದ ನಾಗಸಂದ್ರ ವಿಜಯಕುಮಾರ್, ಜುಂಜೇಗೌಡ, ಪಪಂ ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ ಇತರರು ಇದ್ದರು.
ತುರುವೇಕೆರೆ : ರಾಜಕೀಯವಾಗಿ ನನ್ನ ಏಳಿಗೆ ಸಹಿಸದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುವ ಮೂಲಕ ಕುತಂತ್ರ ಮಾಡುತ್ತಿದ್ದಾರೆ ಎಂದು ಶಾಸಕ ಮಸಾಲಜಯರಾಮ್ ದೂರಿದರು.
ಪಟ್ಟಣದ ತಮ್ಮ ಸ್ವಗೃಹದಲ್ಲಿ ಕರೆದಿದ್ದ ಬಿಜೆಪಿ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ದಬ್ಬೇಘಟ್ಟ ರಸ್ತೆ , ದಿಡಗ –ಆಲ್ಬೂರು ರಸ್ತೆ ಕಾಮಗಾರಿ ನಡೆಯದಂತೆ ಸರಕಾರಕ್ಕೆ ಕೃಷ್ಣಪ್ಪ ಪತ್ರ ಬರೆದಿದ್ದರು, ಇದೀಗ ಕ್ಷೇತ್ರ ವ್ಯಾಪ್ತಿಯಲ್ಲಿ ೨೧ ಕೋಟಿ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿ ನಡೆಯದಂತೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ನಮ್ಮದೇ ಸರಕಾರವಿದ್ದು ಕೃಷ್ಣಪ್ಪನವರು ಬರೆದಿರುವ ಅಭಿವೃದ್ಧಿಗೆ ಅಡ್ಡಿಪಡಿಸುವ ಅರ್ಜಿಗಳು ಕಸದ ಬುಟ್ಟಿ ಸೇರುತ್ತವೆ. ಎಂ.ಟಿ.ಕೃಷ್ಣಪ್ಪ ಸರಕಾರಕ್ಕೆ ನೂರು ಅರ್ಜಿ ಬರೆದರೂ ಐ ಡೋಂಟ್ ಕೇರ್ ಎಂದು ಸವಾಲು ಹಾಕಿದರು.
ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅಡ್ಡಿಪಡಿಸುತ್ತಿರುವುದನ್ನು ಎಲ್ಲರಿಗೂ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಿ, ಎಂ.ಟಿ.ಕೃಷ್ಣಪ್ಪ ಅಭಿವೃದ್ಧಿಗೆ ಅಡ್ಡಿಪಡಿಸಿ ಸರಕಾರಕ್ಕೆ ಬರೆದಿರುವ ಎಲ್ಲ ಮಾಹಿತಿಯನ್ನು ನೀಡುತ್ತೇನೆ. ವಾಟ್ಸಾಪ್, ಪೇಸ್‌ಬುಕ್ ಗಳಿಗೆ ಅಪ್ ಲೋಡ್ ಮಾಡಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಅಸಲಿ ಮುಖವನ್ನು ಕ್ಷೇತ್ರದ ಜನತೆಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು..
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಗುತ್ತಿಗೆದಾರರಿಗೆ ಕೆಲಸ ಮಾಡಿಬೇಡಿ, ಬೇಕಿದ್ರೆ ಎಲೆಕ್ಷನ್ ತನಕ ನಿಲ್ಲಿಸಿಬಿಡಿ. ನಾನು ಬಂದು ಅಡ್ಡ ಹಾಕ್ತೀನಿ ಎಂದು ಹೇಳಿ ಬೆದರಿಸುತ್ತಿದ್ದಾರೆ. ಕಪ್ಪ ಕಾಣಿಕೆ ವಿಚಾರಕ್ಕೆ ನನ್ನ ಹತ್ತಿರಕ್ಕೆ ಬರುತ್ತಿಲ್ಲವಲ್ಲ ಅನ್ನೋ ಚಿಂತೆಗೆ ಕೃಷ್ಣಪ್ಪನವರನ್ನು ಕಾಡುತ್ತಿದೆ ಎಂದು ಲೇವಡಿ ಮಾಡಿದರು.
ಜಿಲ್ಲಾ ಉಪಾದ್ಯಕ್ಷ ವೈ.ಎಚ್. ಹುಚ್ಚಯ್ಯ, ತಾಲೂಕು ಉಪಾದ್ಯಕ್ಷ ನಾಗೇಶ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮ್, ಕಾಳಂಜೀಹಳ್ಳಿ ಸೋಮಣ್ಣ , ವಿ.ಬಿಸುರೇಶ್,ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
ತುಮಕೂರು: ನಗರದ ಶೆಟ್ಟಿಹಳ್ಳಿ ಸಿಗ್ನಲ್‌ನ ತಿರುವಿನಲ್ಲಿ ಕ್ಯಾತ್ಸಂದ್ರ ಕಡೆಯಿಂದ ಬಂದ ಟಾಟಾ ಗೂಡ್ಸ್ ವಾಹನಕ್ಕೆ ಟಿವಿಎಸ್ ಸ್ಕೂಟರ್ ತಗುಲಿ ಸ್ಥಳದಲ್ಲಿಯೇ ವಾಹನ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.
ಮೂರ್ತಪ್ಪ ( 55) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಗಾರೆ ಕೆಲಸ ಮಾಡುತ್ತಿದ್ದ ಮೂರ್ತಪ್ಪ ಗೂಳರಿವೆ ನಿವಾಸಿಯಾಗಿದ್ದು, ಬೆಳಗ್ಗೆ ಕೆಲಸಕ್ಕೆಂದು ತೆರಳುವಾಗ ಈ ಅವಘಢ ಸಂಭವಿಸಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಿಗೇನಹಳ್ಳಿ: ತೆಲುಗಿನ ಚಿತ್ರವೊಂದನ್ನು ನೋಡಿ ಪ್ರಭಾವಿತನಾದ ದ್ವಿತೀಯ ಪಿಯುಸಿ ಯುವಕನೋರ್ವ ನನಗೆ ಮುಕ್ತಿ ಬೇಕೆಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ ವಿಕ್ಟೊರಿಯಾ ಆಸ್ಪತೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ.
ತಾಲೂಕಿನ ಪುರವರ ಹೋಬಳಿಯ ಗಿಡ್ಡಯ್ಯನಪಾಳ್ಯ ರೇಣುಕಾ ಬಿನ್ ಸಿದ್ದಪ್ಪ (೨೨) ಯುವಕ ಪುರವರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ರೇಣುಕಾ ಎಸ್ಸೆಸ್ಸಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಕಾರಣ ಪೋಷಕರು ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ತುಮಕೂರಿನ ಖಾಸಗಿ ಕಾಲೇಜಿಗೆ ಸೇರಿಸಿದ್ದರು. ಹುಡುಗರ ಜತೆ ಸೇರಿ ಮೂವಿ ಹುಚ್ಚು ಹಾಗೂ ಕಳೆದ ಎರಡೂವರೆ ವರ್ಷದಿಂದ ತುಮಕೂರಿನ ಖಾಸಗಿ ಕಾಲೇಜಿನ ವಿದ್ಯಾಭ್ಯಾಸ ಮಾಡಿತಿದ್ದ. ಮೊಬೈಲ್ ಹುಚ್ಚು ಹಾಗೂ ಸಿನಿಮಾ ಚಟ ಹತ್ತಿಸಿಕೊಂಡಿದ್ದ. ಬದುಕಿಗೆ ಮುಕ್ತಿ ಬೇಕೆಂದು, ಮನಸ್ಸಿನ ಸ್ಥಿಮಿತ ಕಳೆದುಕೊಂಡು ಆತ್ಮ ಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ಅವರ ತಂದೆ ಸಿದ್ದಪ್ಪ ಗೋಳಾಡಿದ್ದಾರೆ.
ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಅದೇ ದಾರಿಯಲ್ಲಿ ಸಂಚರಿಸುತಿದ್ದ ಕರವೇ ಶಿವಕುಮಾರ್ ಕಂಡು ತಕ್ಷಣ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿದ್ದಾರೆ. ಹೆಚ್ಚಿನ ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದ ರೇಣುಕಾ ಮೃತಪಟ್ಟಿದ್ದಾನೆ ಎಂದು ತಳಿದು ಬಂದಿದೆ.
ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ “ತಿರಂಗ ಡಿಪಿ” ಯ ಕರೆಯನ್ನು ನೀಡಿದ್ದಾರೆ. ಪ್ರಧಾನಮಂತ್ರಿ ಅವರೇ ಬದಲಾಗಬೇಕಿರುವುದು ಡಿಪಿ ಅಲ್ಲ. ಬದಲಾಗಬೇಕಿರುವುದು ಜಿಡಿಪಿ, ಬದಲಾಗಬೇಕಿರುವುದು ನಿರುದ್ಯೋಗ, ಬದಲಾಗಬೇಕಿರುವುದು ಬಡತನ, ಬದಲಾಗಬೇಕಿರುವುದು ಜನರ ಸಂಕಷ್ಟ, ವಾಟ್ಸಪ್ ಡಿಪಿ, ಫೇಸ್ಬುಕ್, ಟ್ವಿಟರ್, ಮತ್ತು ಇನ್ಸ್ಟಾಗ್ರಾಮ್ ಡಿಪಿ ಬದಲಾವಣೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.
ಹಿಂದಿನಿಂದಲೂ ಕನ್ನಡದ ಮೇಲೆ ಹಿಂದಿ ಹೇರಿಕೆ ನಡೆಯುತ್ತಲೇ ಬಂದಿದೆ. ಇತ್ತೀಚಿಗೆ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಹೆಚ್ಚಾಗಿದೆ. 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವಕ್ಕೆ “ಹರ್ ಘರ್ ತಿರಂಗಾ” ಬದಲಾಗಿ ಕರ್ನಾಟಕದಲ್ಲಿ ಕನ್ನಡದಲ್ಲಿ “ಪ್ರತಿ ಮನೆ ಮನೆಯಲ್ಲೂ ತ್ರಿವರ್ಣ” ಎಂಬುದಾಗಿ ಕರೆಯಬಹುದಿತ್ತು. ಕರ್ನಾಟಕದಲ್ಲಿ ಹಿಂದಿ ಹೇರಿಕೆ ಯಾಕೆ..? ಹಿಂದಿ ಭಾಷೆ ರಾಷ್ಟ್ರೀಯ ಭಾಷೆಯೇ…? ಹಿಂದಿ ಭಾಷೆಗಿಂತ ಮೊದಲು ಜನ್ಮತಾಳಿದ್ದು ದ್ರಾವಿಡ ಭಾಷೆಗಳು. ಇಲ್ಲಿ ದ್ರಾವಿಡ ಭಾಷೆಗಳೆ ಸಾರ್ವಭೌಮ… ಭಾರತದ ಧ್ವಜ ಸಂಹಿತೆ 2002ರ ಪ್ರಕಾರ ತ್ರಿವರ್ಣ ಧ್ವಜವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಆದರೆ ಇಲ್ಲಿ ಪ್ರಸ್ತುತ ಬೀದಿಬೀದಿಯಲ್ಲಿ ಪಾಲಿಯಸ್ಟರ್, ಪ್ಲಾಸ್ಟಿಕ್ ನಂತಹ ವಸ್ತುಗಳ ಮೂಲಕ ತಯಾರಿಸಿ ಮಾರಾಟ ಮಾಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದಂತೆ ಕಾಣುತ್ತಿದೆ. ಅದಲ್ಲದೆ ರಾಷ್ಟ್ರಧ್ವಜವನ್ನು ಉತ್ಸವಕ್ಕಾಗಿ ಅಥವಾ ಯಾವುದೇ ರೀತಿಯ ಅಲಂಕಾರದ ಉದ್ದೇಶಗಳಿಗಾಗಿ ಬಳಸಬಾರದು. ಇಲ್ಲಿ ನೋಡಿದರೆ ಉತ್ಸವ ನಡೆಸಲು ತಯಾರಾಗುತ್ತಿದೆ ಎಂದು ಭಾಸವಾಗುತ್ತಿದೆ.
ಡಾಂಭಿಕ ದೇಶಭಕ್ತಿ ಮಾರಕ
ರಾಷ್ಟ್ರಧ್ವಜದ ಅಧಿಕೃತ ಪ್ರದರ್ಶನಕ್ಕಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಗದಿಪಡಿಸುವ ವಿಶೇಷಣಗಳಿಗೆ ಅನುಗುಣವಾಗಿ ಮತ್ತು ಅವುಗಳ ಗುರುತು ಹೊಂದಿರುವ ಧ್ವಜವನ್ನು ಮಾತ್ರ ಬಳಸಬೇಕು. ತ್ರಿವರ್ಣ ಧ್ವಜವನ್ನು ಇಂದು ಸರ್ಕಾರ ಕೈಗೊಂಡಿರುವ ಹರ್ ಘರ್ ತಿರಂಗಾವು ಟವಲ್ ನಂತೆ ಬಳಸಿ ಅವಮಾನಿಸಲಾಗುತ್ತಿದೆ.
ಕೆಲವು ಸಂಘಟನೆಗಳು ತ್ರಿವರ್ಣ ಧ್ವಜವನ್ನು ಕನಿಷ್ಟದ ಸಂಕೇತ ಎಂದು ತಿಳಿದುಕೊಂಡೆವೆ ಅನಿಸುತ್ತಿದೆ. 53 ವರ್ಷಗಳ ಕಾಲ ತ್ರಿವರ್ಣ ಧ್ವಜವನ್ನು ತಿರಸ್ಕರಿಸುತ್ತಲೇ ಬಂದಿದೆ. ಈಗಲೂ ಸಹ ತಿರಸ್ಕರಿಸುತ್ತಲೇ ಇದೆ. ಕೆಲ ಸಂಘಟನೆಗಳು ಭಾರತದ ಸ್ವತಂತ್ರವನ್ನು ಸಂಭ್ರಮಿಸಲೇ ಇಲ್ಲ. ಭಾರತ ಸಾರ್ವಭೌಮತೆಯನ್ನು ಒಪ್ಪಲೇ ಇಲ್ಲ. ಏಕೆಂದರೆ ಅವರಿಗೆ ಬೇಕಿದ್ದು ಸಂವಿಧಾನಾತ್ಮಕ ಭಾರತವಲ್ಲ, ಮನುಸ್ಮೃತಿಯ ಭಾರತ.
ಸರ್ಕಾರದಿಂದ ಪೋಸ್ಟ್ ಆಫೀಸ್‌ಗಳಲ್ಲಿ ನೀಡಲಾಗುತ್ತಿರುವ ಅಸಮರ್ಪಕ ಪಾಲಿಯಸ್ಟರ್ ಧ್ವಜ
ಪ್ರಸ್ತುತವಾಗಿ ನಮ್ಮ ದೇಶದಲ್ಲಿ 2014ರಿಂದ ಬಂದಂತಹ ದೇಶಭಕ್ತರ ಸಂಖ್ಯೆಯೇ ಹೆಚ್ಚಾಗಿದೆ. ಇಂತಹ ಸಾಂದರ್ಭಿಕ ಡಾಂಭಿಕತನದ ದೇಶಭಕ್ತಿ ಮತ್ತು ಮುಖವಾಡ ಧರಿಸಿದ ದೇಶಭಕ್ತರಿಂದ ದೇಶಕ್ಕೆ ಎಂದೆಂದಿಗೂ ಮಾರಕ ಮತ್ತು ಇಂಥವರಿಂದ ದೇಶಕ್ಕೆ ಉತ್ತಮವಾದ ಕೆಲಸ ಕಾರ್ಯ ನೀಡಲು ಸಾಧ್ಯವಾಗುವುದಿಲ್ಲ.
ಭಾರತ ದೇಶದಲ್ಲಿ ಎಷ್ಟೋ ಬಡಕುಟುಂಬಗಳಿಗೆ ಮನೆಗಳಿಲ್ಲ. ಇಂದು ಪ್ರಧಾನಿಯವರು “ಹರ್ ಘರ್ ತಿರಂಗಾ” ಕ್ಕೆ ಕರೆ ಕೊಟ್ಟಿರುವುದು ಹಾಸ್ಯಾಸ್ಪದವಾಗಿದೆ. ಮೊದಲು ಮನೆ ಕೊಡಿ ನಂತರ ಮನೆಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಕರೆ ಕೊಡಿ. ಅದನ್ನು ಬಿಟ್ಟು ಕೈಗೆ ಬಾವುಟ ಕೊಟ್ಟು 25 ರೂ ತೆಗೆದುಕೊಂಡು ಮನೆಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಅಂತದರೆ ಹೇಗೆ? 75ನೇ ಸ್ವಾತಂತ್ರ ಮಹೋತ್ಸವದ ಅಂಗವಾಗಿ ಅಮೃತ ಮಹೋತ್ಸವದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಬಿದ್ದಂತೆ ಎದ್ದುಕಾಣುತ್ತಿದೆ.
ಒಣ ಭಾಷಣಗಳು ಸಮಸ್ಯೆಗಳಿಗೆ ಪರಿಹಾರವಲ್ಲ
ದೇಶದ ಜನರು ಬಡತನ, ನಿರುದ್ಯೋಗ, ಬೆಲೆ ಏರಿಕೆಯ, ನಡುವೆ ಸಿಲುಕಿ ನರಳುತ್ತಿದ್ದಾರೆ. ಇವರಿಗೆ ಉತ್ತಮ ಸೌಲಭ್ಯ ಕೊಡುವಲ್ಲಿ ಸರ್ಕಾರ ಫಲವಾಗಿ, ಇಂದು 75ನೇ ಸ್ವಾತಂತ್ರೋತ್ಸವದ ಕಡೆ ಜನರ ಗಮನ ಸೆಳೆದು ದಿಕ್ಕು ತಪ್ಪಿಸುತ್ತಿದ್ದಾರೆ. ದೇಶದ ಯುವಜನತೆಗೆ ಒಣ ಭಾಷಣಗಳಿಂದ ಮತ್ತು ಸುಳ್ಳು ಭಾಷಣಗಳಿಂದ ಯಾವುದೇ ರೀತಿಯ ಅನುಕೂಲ ಅಥವಾ ದೇಶದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಇಂತಹದ್ದನ್ನು ಯುವ ಜನತೆ ಅರಿತುಕೊಳ್ಳಬೇಕಾಗಿದೆ.
ಇಂದು ಚೀನಾ ದೇಶದಿಂದ ಪಾಲಿಯಸ್ಟರ್ ಧ್ವಜವನ್ನು ತಯಾರಿಸಿ ಆಮದು ಮಾಡಿಕೊಳ್ಳುತ್ತಿರುವುದು ಖಂಡನೀಯ. ಕೆಲವು ದಿನಗಳ ಹಿಂದೆ ಚೀನಾ ದೇಶದ ಕೆಲವು ಮೊಬೈಲ್ ಆಪ್ ಗಳನ್ನು ನಿರ್ಬಂಧಿಸಿದ್ದರು ಸ್ವಾಗತರ್ಹ. ಆದರೆ ಇಂದು ಚೀನಾ ದೇಶದಿಂದ ಪಾಲಿಯಸ್ಟರ್ ಧ್ವಜವನ್ನು ತೋರಿಸಿ ಕೊಳ್ಳುತ್ತಿರುವುದು ಏಕೆ? ರಾಷ್ಟ್ರಧ್ವಜವನ್ನು ಖಾದಿ ಬಟ್ಟೆಯಿಂದ ತಯಾರಿಸಬೇಕು. ಪಾಲಿಯಸ್ಟರ್, ಪ್ಲಾಸ್ಟಿಕ್ ಬಳಸಬಾರದು. ಖಾದಿ ಬಟ್ಟೆಗಳ ಕೈಮಗ್ಗಗಳಲ್ಲಿ ಧ್ವಜ ತಯಾರಿಸಬೇಕು. ಆದ್ದರಿಂದ ಚರಕದಿಂದ ನೂಲು ತೆಗೆಯುವ ಕರಕುಶಲಕರ್ಮಿಗಳಿಗೆ ಉದ್ಯೋಗ ಸಿಗುತ್ತದೆ. ಈ ಉದ್ಯೋಗಸ್ಥರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ಭಾರತದ ರಾಷ್ಟ್ರಧ್ವಜದ ಮೂರು ಬಣ್ಣಗಳು ಎಲ್ಲಾ ಧರ್ಮೀಯರನ್ನು ಒಳಗೊಂಡಂತೆ ಸೂಚಿಸುತ್ತದೆ. ವರ್ಷವಿಡಿ ಪ್ರತಿಯೊಬ್ಬರೂ ತ್ಯಾಗ ಮನೋಭಾವನೆ, ಪರಸ್ಪರ ಶಾಂತಿ ಮತ್ತು ದೇಶದ ಸಮೃದ್ಧಿಗೆ ಕೈಜೋಡಿಸುವುದು ಆಗಿದೆ. ಆದರೆ ಇಂದು ಪ್ರಸ್ತುತ ವ್ಯವಸ್ಥೆ ಗಮನಿಸಿದಾಗ ಧರ್ಮಕ್ಕೊಂದು ಬಣ್ಣವನ್ನು ಕಲ್ಪಿಸಿ ಅಸಹಿಷ್ಣುತೆಗೆ ದಾರಿ ಮಾಡಿಕೊಟ್ಟಂತೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ರಾಷ್ಟ್ರಧ್ವಜ ವನ್ನು ಸಾಂವಿಧಾನಿಕ ಹುದ್ದೆಗೇರಿದವರ ಕಾರುಗಳು ಮತ್ತು ಜೀಪುಗಳ ಮೇಲೆ ರಾಷ್ಟ್ರಧ್ವಜವನ್ನು ಬಳಸಬಹುದು. ಆದರೆ ಇಂದು ಎಲ್ಲಾ ಖಾಸಗಿ ವ್ಯಕ್ತಿಗಳು ಕಾರು, ಜೀಪುಗಳ ಮೇಲೆ ರಾಷ್ಟ್ರಧ್ವಜವನ್ನು ಬಳಸುತ್ತಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅಪಮಾನ. ರಾಷ್ಟ್ರಧ್ವಜದ ರಕ್ಷಣೆ ಮತ್ತು ಗೌರವ ಕೊಡುವುದು ನಮ್ಮೆಲ್ಲರ ಹೊಣೆ, ರಾಷ್ಟ್ರಧ್ವಜ ನಮ್ಮ ಸ್ವಾಭಿಮಾನದ ಸಂಕೇತ. ನಮ್ಮ ರಾಷ್ಟ್ರಧ್ವಜ ನಮ್ಮ ಹೆಮ್ಮೆ.
ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ತ್ಯಾಗಟೂರು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅದಲಗೆರೆ ಸದಸ್ಯೆ ಭೈರಮ್ಮ ಅವಿರೋಧವಾಗಿ ಆಯ್ಕೆಯಾದರು.
ತ್ಯಾಗಟೂರು ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಶಿರಸ್ತೇದಾರ್ ಶ್ರೀನಿವಾಸ್ ನಡೆಸಿಕೊಟ್ಟರು. ಎಸ್ಸಿ ಮಹಿಳಾ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ತ್ಯಾಗಟೂರು ವಿಜಯಲಕ್ಷ್ಮೀ ರಾಜೀನಾಮೆ ಸಲ್ಲಿಸಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅದಲಗೆರೆ ಭೈರಮ್ಮ ಈಶ್ವರಯ್ಯ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಸದಸ್ಯರ ಒಮ್ಮತದಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನಂತರ ಸುದ್ದಿಗಾರರ ಜತೆ ಮಾತನಾಡಿದ ನೂತನ ಅಧ್ಯಕ್ಷೆ ಭೈರಮ್ಮ, ನಿಟ್ಟೂರಿಗೆ ಹೊಂದಿಕೊಂಡ ತ್ಯಾಗಟೂರು ಗ್ರಾಪಂ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಸರ್ಕಾರದ ಅನುದಾನ ಬಳಸಿ ಅಭಿವೃದ್ಧಿ ಕೆಲಸ ಮಾಡಿ ಮಾದರಿ ಗ್ರಾಪಂ ಎನಿಸಿಕೊಳ್ಳಲು ಶ್ರಮಿಸುತ್ತೇನೆ ಎಂದರು.
ಗ್ರಾಪಂ ಸದಸ್ಯ ಕುಮಾರಸ್ವಾಮಿ ಮಾತನಾಡಿ, ಎಲ್ಲಾ ಸದಸ್ಯರು ಒಗ್ಗೂಡಿ ಪಂಚಾಯಿತಿ ಅಭಿವೃದ್ಧಿ ಮಾಡುತ್ತಿದ್ದೇವೆ. ಪಕ್ಷಾತೀತ ನಿಲುವು ಜೊತೆಗೆ ಶಾಸಕರು, ಸಂಸದರಿಂದ ಅನುದಾನ ತರುವಲ್ಲಿ ಶ್ರಮಿಸಿದ್ದೇವೆ. ಹೆದ್ದಾರಿಗೆ ಹೊಂದಿಕೊಂಡ ಈ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಕ್ಕೂ ಕುಡಿಯುವ ನೀರು, ರಸ್ತೆ, ಬೀದಿ ದೀಪ ಒದಗಿಸಿದ್ದೇವೆ. ವಿಶೇಷ ಅನುದಾನ ತರುವ ಜೊತೆಗೆ ತೆರಿಗೆ ಸಂಗ್ರಹ ಮಾಡುವ ಮೂಲಕ ಆದಾಯದ ಮೂಲ ಹೆಚ್ಚಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು. ಉಪಾಧ್ಯಕ್ಷ ವಿದ್ಯಾಧರ, ಸದಸ್ಯರಾದ ಲಕ್ಷ್ಮೀಪತಿ, ಮಂಜುನಾಥ್, ಜಗದೀಶ್, ಸುಮಾ ಶ್ರೀನಿವಾಸ್, ಭವ್ಯ ಪರಮೇಶ್, ಜಯಮಾಲಾ ಸದಾಶಿವಯ್ಯ, ಶಿವನಂಜಯ್ಯ, ಕಲ್ಲೂರು ಗ್ರಾಪಂ ಮಾಜಿ ಅಧ್ಯಕ್ಷ ರವಿಕುಮಾರ್, ಭಾಗ್ಯಮ್ಮ ಪಿಡಿಒ ರಾಮಾಂಜನಪ್ಪ ಇತರರು ಇದ್ದರು.
ಶಿರಾ: ಪತ್ರಕರ್ತರು ಪ್ರಜಾಪ್ರಭುತ್ವ ಅವಿಭಾಜ್ಯ ಅಂಗವಾಗಿದ್ದು, ಮೌಲ್ಯಾಧಾರಿತ ವಿಷಯಗಳನ್ನು ಸಮಾಜಕ್ಕೆ ನೇರವಾಗಿ ತಿಳಿಸಿಕೊಡುವ ಪ್ರಯತ್ನ ಮಾಡುವುದರ ಜೊತೆಗೆ ಪತ್ರಕರ್ತರು, ಸಾಹಿತಿಗಳು, ವಿಮರ್ಶಕರು, ಆರ್ಥಿಕ ತಜ್ಞರು ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಪರಿಣಿತಿ ಹೊಂದಿರಬೇಕಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿರಾ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಿಕಾರಂಗ ಎನ್ನುವುದು ದೇಶದ ವ್ಯವಸ್ಥೆಯನ್ನೇ ಬದಲಾಯಿಸುವ ಶಕ್ತಿ ಇರುವಂತಹದ್ದು. ದೇಶದ ಅಭಿವೃದ್ಧಿಗೆ, ಪ್ರಜಾಪ್ರಭುತ್ವ ಅಸ್ತಿತ್ವದ ಉಳಿವಿಗೆ, ಪತ್ರಿಕಾರಂಗ ಭದ್ರ ಬುನಾದಿಯಾಗಿದೆ. ಪತ್ರಿಕೋದ್ಯಮ ಒಂದೇ ನಾಣ್ಯದ ಎರಡು ಮುಖಗಳು. ಉಪಯೋಗ ಮತ್ತು ಉಪಯೋಗ ಆಗದಿರುವ ವಿಷಯಗಳು ಸಮಾಜದಲ್ಲಿರುತ್ತವೆ. ಎರಡೂ ವಿಷಯಗಳನ್ನು ತಿಳಿಸಿಕೊಡುವ ಪ್ರಯತ್ನ ಪತ್ರಕರ್ತ ಮಾಡಬೇಕಾಗುತ್ತದೆ. ಅಂತಹ ಕೆಲಸವನ್ನು ಪತ್ರಕರ್ತರು ಮಾಡಬೇಕು. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಘೋಷಿತ ಪತ್ರಕರ್ತರಿದ್ದಾರೆ. ಸಾಮಾಜಿಕ ಜಾಲತಾಣಗಳ ಮಧ್ಯೆ ಸವಾಲನ್ನು ಎದುರಿಸುತ್ತಿವೆ. ಆದರೂ ಸಹ ದಿನ ನಿತ್ಯ ವಿಶೇಷ ವಿಷಯಗಳನ್ನು ವರದಿಗಳನ್ನು ನೀಡುವ ಮೂಲಕ ಜನರ ಮನಸಿನಲ್ಲಿ ಉಳಿಯತ್ತಿವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಬಹಳ ಕಷ್ಟಗಳನ್ನು ಅನುಭವಿಸಿದರು. ಅವರಿಗೆ ಬೆಂಬಲವಾಗಿ ಜನಪ್ರತಿನಿಧಿಗಳು, ಆಡಳಿತ ವರ್ಗ ಇರುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ಶಿರಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಪ್ರಪ್ರಥಮವಾಗಿ ಆಶ್ರಯ ಸಮಿತಿ ಸಭೆಯಲ್ಲಿಯೇ ಮೊದಲ ಹಂತದಲ್ಲಿ ನಿವೇಶನ ಕೊಡಬೇಕು ಎಂದು ಚರ್ಚೆ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಎರಡನೇ ಹಂತದ ಆಶ್ರಯ ಸಮಿತಿ ಸಭೆಯಲಿದ್ದು, ಸೂಕ್ತ ಸ್ಥಳವನ್ನು ಗುರುತಿಸಿ ನಿವೇಶನ ನೀಡಲು ಬದ್ಧರಾಗಿದ್ದೇವೆ. ನಾವು ಆಶ್ವಾಸನೆ ನೀಡುವುದಿಲ್ಲ ಕೊಟ್ಟೇ ತೀರುತ್ತೇವೆ. ಸಂಘದ ಭವನಕ್ಕೆ ನಗರಸಭೆ ವತಿಯಿಂದ ಸಿಎ ನಿವೇಶನ ಕೊಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ನಗರದ ಪ್ರವಾಸಿ ಮಂದಿರದಲ್ಲಿ ತಾತ್ಕಾಲಿಕ ಕಚೇರಿಗೆ ಒಂದು ಕೊಠಡಿಯನ್ನು ನೀಡಲಾಗುವುದು. ಮುಂದಿನ ದಿನಗಳಲ್ಲೂ ಪತ್ರಕರ್ತರಿಗೆ ಬೆಂಬಲವಾಗಿ ನಿಂತು ಅವರ ಕಷ್ಟಸುಖಗಳಿಗೆ ಭಾಗಿಯಾಗುತ್ತೇವೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ತಹಶಿಲ್ದಾರ್ ಮಮತ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಪತ್ರಿಕೆಗಳು ಬಹಳ ಮುಖ್ಯ. ಪತ್ರಿಕೆಯಲ್ಲಿ ಬರುವ ವಿಷಯಗಳಿಂದ ಜ್ಞಾನ ಹೆಚ್ಚುತ್ತದೆ. ಬರವಣಿಗೆಯ ಕೌಶಲ್ಯ ಹೆಚ್ಚುತ್ತದೆ. ಶಬ್ದಭಂಡಾರ ಹೆಚ್ಚಾಗುತ್ತದೆ. ಪಠ್ಯದಲ್ಲಿರದ ಕೆಲವು ವಿಷಯಗಳು ಪತ್ರಿಕೆಗಳಲ್ಲಿ ಸಿಗುತ್ತದೆ. ಆದ್ದರಿಂದ ಎಲ್ಲರೂ ಪತ್ರಿಕೆಗಳನ್ನು ದಿನ ನಿತ್ಯ ಓದಬೇಕು. ಮನೆಗಳಲ್ಲೂ ದಿನ ಪತ್ರಿಕೆಗಳನ್ನು ಹಾಕಿಸಿಕೊಂಡು ಪತ್ರಿಕೆಯನ್ನು ಓದಿ. ವಿಶೇಷ ವರದಿಗಳನ್ನು ಸಂಗ್ರಹಿಸಿ ಯಶಸ್ಸು ಗಳಿಸಿ ಎಂದರು.
ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಮಾತನಾಡಿ, ಪತ್ರಕರ್ತರ ಆರೋಗ್ಯ ಕ್ಷೇಮಕ್ಕಾಗಿ ಆರೋಗ್ಯ ವಿಮೆ 5 ಲಕ್ಷ ರೂ.ಗಳನ್ನು ನಗರಸಭೆಯ ಬಜೆಟ್ನಲ್ಲಿ ಮೀಸಲಿರಿಸಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಗೆ ಸನ್ಮಾನಿಸಲಾಯಿತು. ಡಾ.ಪಿ.ಎಚ್.ಮಹೇಂದ್ರಪ್ಪ ವಿಶೇಷ ಭಾಷಣ ಮಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎನ್.ಜಯಪಾಲ್, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಿನ ಪ್ರಾಂಶುಪಾಲ ಚಂದ್ರಯ್ಯ, ಕಾಲೇಜು ಅಬಿವೃದ್ಧಿ ಸಮಿತಿಯ ಅನಂತರಾಮು ಸಿಂಗ್ ಸೇರಿದಂತೆ ಹಲವರು ಹಾಜರಿದ್ದರು.
ತುಮಕೂರು: ಕೇಂದ್ರ ಸರ್ಕಾರ ಖಾದಿ ಧ್ವಜಗಳನ್ನು ಬದಿಗೆ ಸರಿಸಿ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ಧ್ವಜಗಳನ್ನು ಬಳಸುವಂತೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಹಾಗೂ ಖಾದಿ ಬಾವುಟ ಬಳಸಲು ಒತ್ತಾಯಿಸಿ ಇದೇ ಆ.12 ರಂದು (ಶುಕ್ರವಾರ) ಧ್ವಜ ಸತ್ಯಾಗ್ರಹ ನಡೆಯಲಿದೆ.
ಗ್ರಾಮ ಸೇವಾ ಸಂಘ, ಜನ ಸಂಗ್ರಾಮ ಪರಿಷತ್, ಸರ್ವೋದಯ ಮಂಡಳಿ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ವಿವಿಧ ಸಂಘಟನೆಗಳೊಂದಿಗೆ ಈ ನೀತಿಯ ವಿರುದ್ಧ ಪ್ರತಿಭಟಿಸಲು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ತುಮಕೂರಿನ ಮಂಡಿಪೇಟೆ ಸಮೀಪದ ಸ್ವಾತಂತ್ರ್ಯ ಚೌಕದಲ್ಲಿ ಧ್ವಜ ಸತ್ಯಾಗ್ರಹವನ್ನು ಆಯೋಜಿಸಲಾಗಿದೆ.
ಸ್ವತಂತ್ರ ಚೌಕದಿಂದ ಸತ್ಯಾಗ್ರಹಿಗಳು ಕೋತಿ ತೋಪಿನಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನದವರೆಗೆ ಪಾದಯಾತ್ರೆ ನಡೆಸಿ ಅಲ್ಲಿ ಸತ್ಯಾಗ್ರವನ್ನ ಅಂತಿಮಗೊಳಿಸಲಿದ್ದಾರೆ.
ಸತ್ಯಾಗ್ರಹದಲ್ಲಿ ಹಿರಿಯ ರಂಗಕರ್ಮಿ ಚರಕ ಖ್ಯಾತಿಯ ಪ್ರಸನ್ನ ಹೆಗ್ಗೋಡು ಮತ್ತು ಅನೇಕ ಗಾಂಧಿವಾದಿಗಳು, ಸಹಜ ಬೇಸಾಯಗಾರರು, ಪ್ರಗತಿಪರರು, ಪರಿಸರ ಪ್ರೇಮಿಗಳು ಹಾಗೂ ಅನೇಕ ಆಸಕ್ತ ಸಂಸ್ಥೆಗಳ ಮುಖಂಡರು ಈ ಸತ್ಯಾಗ್ರದಲ್ಲಿ ಪೂರ್ಣವಾಗಿ ಭಾಗವಹಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಬಾವುಟ ಸಂಹಿತೆಗೆ ತಿದ್ದುಪಡಿ ತಂದು ರಾಷ್ಟ್ರೀಯ ಧ್ವಜದ ಘನತೆಗೆ ಮತ್ತು ಮಹತ್ವಕ್ಕೆ ಧಕ್ಕೆ ತಂದಿದೆ. ಎಲ್ಲರ ಮನೆಗಳ ಮೇಲೆ ತಿರಂಗ ಧ್ವಜ ಹಾರಿಸುವ ನೆಪದಲ್ಲಿ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ನಿಂದ ಯಂತ್ರ ತಯಾರಿಸಿದ ಬಾವುಟಗಳನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಇಲ್ಲಿಯವರೆಗೆ ಬಡ ನೇಕಾರರಿಂದ ತಯಾರಾಗುತ್ತಿದ್ದ ಖಾದಿ ಬಾವುಟಗಳನ್ನು ಕೇಳುವವರಿಲ್ಲದಂತಾಗಿದೆ. ಪ್ರದರ್ಶಕ ರಾಷ್ಟ್ರೀಯತೆಯ ನೆಪದಲ್ಲಿ ಪರಿಸರ ಮಾಲಿನ್ಯ ಮಾಡುವ ಯಂತ್ರ ತಯಾರಿತ ಪ್ಲಾಸ್ಟಿಕ್ ಮತ್ತು ಪಾಲಿಯಸ್ಟರ್ ತಯಾರಿತ ಬಾವುಟಗಳನ್ನು ಬಳಸಿ ಖಾದಿ ಧ್ವಜಗಳನ್ನು ಬದಿಗೆ ಸರಿಸಲಾಗಿದೆ. ಇದನ್ನು ವಿರೋಧಿಸಿ ನಡೆಯುವ ಸತ್ಯಾಗ್ರಹದಲ್ಲಿ ಸಹಮತ ಉಳ್ಳ ಆಸಕ್ತರು , ಸಾಹಿತಿ ಕಲಾವಿದರು, ಸಂಗೀತಗಾರರು, ಹಾಡುಗಾರರು, ರೈತರು, ವಿದ್ಯಾರ್ಥಿ ಯುವ ಜನ ಗುಂಪುಗಳು, ನಗರದ ನಾಗರಿಕ ಬಂಧುಗಳು ಭಾಗವಹಿಸಬೇಕು. ಈ ಮೂಲಕ ರಾಷ್ಟ್ರೀಯ ಧ್ವಜದ ಪರಂಪರೆ ಪ್ರಾಮುಖ್ಯತೆ ಮತ್ತು ಮಹತ್ವವನ್ನ ಎತ್ತಿ ಹಿಡಿಯೋಣ ಎಂದು ಚಿಂತಕರಾದ ಸಿ.ಯತಿರಾಜು, ಎನ್ ಎಸ್ ಪಂಡಿತ್ ಜವಾಹರ್, ಆರ್ ವಿ ಪುಟ್ಟ ಕಾಮಣ್ಣ ತಿಳಿಸಿದ್ದಾರೆ.