Friday, May 8, 2026
Google search engine
Home Blog Page 88

ನಕಲಿ ಸರ್ಟಿಫಿಕೇಟ್ ರಾಜ ಡಾ.ಸಿ.ಅಶ್ವತ್ಥ್ ನಾರಾಯಣ : ಎಚ್.ಡಿ ಕುಮಾರಸ್ವಾಮಿ ಹೀಗಂದಿದ್ಯಾಕೆ?

Publicstory/prajayoga

ಡಾ.ಅಶ್ವಥ್ ನಾರಾಯಣ ಒಬ್ಬ ನಕಲಿ ಸರ್ಟಿಫಿಕೇಟ್ ರಾಜ. ನಕಲಿ ಸರ್ಟಿಫಿಕೇಟ್ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸಾಮಾಜಿಕ ಜಾಲತಾಣವಾದ ತಮ್ಮ ಅಧಿಕೃತ ಫೇಸ್ಬುಕ್ ನಲ್ಲಿ  ದೀರ್ಘ ಬರಹದ ಮೂಲಕ ತಿವಿದಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ. ಅಶ್ವಥ್ ನಾರಾಯಣ್ ಅವರು, ಕುಮಾರಸ್ವಾಮಿ ಅವರನ್ನು ಎಲ್ಲಿದ್ಯಪ್ಪ ಕುಮಾರಸ್ವಾಮಿ? ಸದನದಲ್ಲೂ ಕಾಣಿಸಿಲ್ಲ, ರಾಮನಗರದಲ್ಲೂ ಕಂಡಿಲ್ಲ ಎಂದು ವ್ಯಂಗ್ಯವಾಡಿದ್ದರು.

ಡಾ.ಅಶ್ವತ್ಥ ನಾರಾಯಣ ಒಬ್ಬ ಸರ್ಟಿಫಿಕೇಟ್ ರಾಜʼ @ ನಕಲಿ ಸರ್ಟಿಫಿಕೇಟ್ ಶೂರʼ ನನ್ನನ್ನು ಹುಡುಕುತ್ತಿದ್ದಾರೆ! ಎಲ್ಲಿದ್ಯಪ್ಪ ಕುಮಾರಸ್ವಾಮಿ? ಎಂದು ಕೇಳಿದ್ದಾರೆ. ಸದನದಲ್ಲೂ ಕಾಣಿಸಿಲ್ಲವಂತೆ, ರಾಮನಗರದಲ್ಲೂ ಕಂಡಿಲ್ಲವಂತೆ!! ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣ ಕುರುಡಾದರೂ ಇರಬೇಕು.

ಕಣ್ಣಿಗೆ ಕಾಮಾಲೆಯಾದರೂ ಬಂದಿರಬೇಕು, ಜಾಣ ಕುರುಡಾದರೂ ಇರಬೇಕು.
ಕರಾವಳಿ ಕೊಲೆಗಳು, ಮಳೆ-ನೆರೆ ಚರ್ಚೆಗೆ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದ್ದೇನೆ, ನಿಜ. ಉನ್ನತ ಶಿಕ್ಷಣ ಸಚಿವರಿಗೇಕೆ ಉರಿ? ಉನ್ನತ ಶಿಕ್ಷಣದ ಹುಳುಕು ಹೊರ ಬಂದಾವೆಂಬ ಭಯವೇ? ನನ್ನಲ್ಲೂ ದಾದಾಖಲೆಗಳಿವೆ,ಿಚ್ಚಿದರೆ ಅವೇ ʼಸರ್ಟಿಫಿಕೇಟ್ ಕೋರ್ಸ್ʼಗಿಂತ ಬೃಹತ್ ಚಾಪ್ಟರ್ 1, ಚಾಪ್ಟರ್ 2, ಚಾಪ್ಟರ್ 3 ಆಗುತ್ತವೆ; ಬಿಚ್ಚಲೇ?

ಕಲಾಪವೆಂದರೆ ಮೈ ಬೆಚ್ಚಗಾಗುತ್ತಾ ಉನ್ನತ ಶಿಕ್ಷಣ ಸಚಿವರೇ? ನಿಮ್ಮ ಕೌಶಲ್ಯತೆ ಗೊತ್ತಿದೆ. ಅಕ್ರಮ ಮುಚ್ಚಿಕೊಳ್ಳಲು ಅಕ್ರಮದ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೇ ಬೆಂಕಿ ಹಾಕಿಸಿದ್ದಾ? ಆಪರೇಷನ್ ಕಮಲದಲ್ಲೂ ಕುಶಲತೆ? ಕೋಟಿ ಕೋಟಿ ಹಣ ತುಂಬಿಸಿಕೊಂಡು ಹೋಗಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದಾ? ಕೌಶಲ್ಯ ಮಂತ್ರಿಯಾಗಿದ್ದಕ್ಕೂ ಸಾರ್ಥಕ!!

ನಾನು ವಿರೋಧ ಪಕ್ಷದ ನಾಯಕ. ಅಧಿವೇಶನಕ್ಕೆ ಆಗ್ರಹಿಸುವುದು ನನ್ನ ಹಕ್ಕು. ಸದನದಲ್ಲಿ ಉತ್ತರಿಸುವ ಯೋಗ್ಯತೆ ಇದ್ದರೆ ಹಾರಿಕೆ ಉತ್ತರಗಳ ಮೂಲಕ ಜಾರಿಕೊಳ್ಳುವ ಯತ್ನವೇಕೆ? ಕಲಾಪದಲ್ಲಿ ನನ್ನ ಮೌಲಿಕ ಪಾಲ್ಗೊಳ್ಳುವಿಕೆ ಎಷ್ಟು? ನಿಮ್ಮದೆಷ್ಟು? ತುಲನೆ ಮಾಡಿಕೊಳ್ಳಿ. ಕಾಮಾಲೆ ಕಣ್ಣುಗಳ ಪೊರೆ ತೆಗೆದು ನೋಡಿ ಅಶ್ವತ್ಥನಾರಾಯಣ.

ನನ್ನ ಸರಸರಕಾರವನ್ನು ತೆಗೆಯಲು ಸಮಾಜಘಾತುಕ ಶಕ್ತಿಗಳ ಜತೆ ಕೈ ಮಿಲಾಯಿಸಿದ್ದು, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಜತೆ ಶಾಮೀಲಾಗಿದ್ದು, ಹಣದ ಹೊಳೆ ಹರಿಸಿದ್ದು ಎಲ್ಲವೂ ಗೊತ್ತಿದೆ. ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ, ಬಿಚ್ಚಿಡಬೇಕು ಎಂದರೆ ಎಲ್ಲವನ್ನೂ ಬಿಚ್ಚಿಡುತ್ತೇನೆ.

ಪಠ್ಯ ಪರಿಷ್ಕರಣೆ ಮಾಡಿದಿರಲ್ಲ. ದಾದಿಯರ ನಕಲಿ ಸರ್ಟಿಫಿಕೇಟ್ ಸೃಷ್ಟಿ ಹೇಗೆ? ಆಪರೇಷನ್ ಕಮಲ ಮಾಡುವುದು ಹೇಗೆ? ಕದ್ದುಮುಚ್ಚಿ ಹಣ ಸಾಗಿಸಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದು ಹೇಗೆ? ಇದೆಲ್ಲವನ್ನು ಪಠ್ಯದಲ್ಲಿ ಸೇರಿಸಿದ್ದಿದ್ದರೆ ಮುಂದಿನ ಯುವಜನರಿಗೂ ನಿಮ್ಮಂತೆಯೇ ಆಗುವ ಭಾಗ್ಯ ಸಿಗುತ್ತಿತ್ತು? ಅಲ್ಲವೇ ಆಪರೇಷನ್ ಅಶ್ವತ್ಥನಾರಾಯಣ?

ಕಾಲು ಸುಂಕದ ರಸ್ತೆ ಕುಸಿದು ಏಳು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಕನಿಷ್ಠ ಪಾಪಪ್ರಜ್ಞೆಯೂ ಇಲ್ಲವೇ ನಿಮಗೆ? ಆಕಾಶದಲ್ಲಿ ಹಾರಾಡುವ ನಿಮಗೆ ಕಾಲು ಸುಂಕದ ಕಷ್ಟ ಅರ್ಥವಾದೀತೆ ಅಶ್ವತ್ಥನಾರಾಯಣ? ಮಳೆ ನೆರೆಯಿಂದ ಕರ್ನಾಟಕ ಕಣ್ಣೀರ ಕಡಲಾಗಿರುವುದು ಕಾಣುತ್ತಿಲ್ಲವೇ?

ನಾನು ಎರಡನೇ ಸಲ ಸಿಎಂ ಆದಾಗ 800 ಕಾಲು ಸುಂಕ ಸೇತುವೆಗಳ ನಿರ್ಮಾಣಕ್ಕೆ ಆದೇಶಿಸಿದ್ದೆ. ಅವುಗಳಲ್ಲಿ ಎಷ್ಟು  ಪೂರ್ಣಗೊಳಿಸಿದ್ದೀರಿ? 3 ವರ್ಷಗಳ ನಿಮ್ಮ ಸರಕಾರದಲ್ಲಿ ಇಂಥಾ ಎಷ್ಟು ಸೇತುವೆ ನಿರ್ಮಿಸಿದ್ದೀರಿ? ಒಂದು ಮುಗ್ಧ ಸಾವು ನಿಮ್ಮ ಮನ ಕಲಕಲಿಲ್ಲವಲ್ಲಾ.. ನಾಚಿಕೆ ಆಗುವುದಿಲ್ಲವೇ ಉನ್ನತ ಶಿಕ್ಷಣ ಸಚಿವರೇ?

ಆಪರೇಷನ್ ಕಮಲ ಮಾಡಿದ್ದಕ್ಕೆ ದಕ್ಷಿಣಿಯಾಗಿ ಉಪ ಮಖ್ಯಮಂತ್ರಿ ಆದಿರಿ, ಅದೂ ಹೋಗಿ ಕೊನೆಗೆ ಉನ್ನತ ಶಿಕ್ಷಣ ಮಂತ್ರಿಗಿರಿಯಷ್ಟೇ ಉಳೀತು? ಬೊಮ್ಮಾಯಿ ಸಂಪುಟ ಸೇರ್ಪಡೆ ಆದ್ಯತಾ ಪಟ್ಟಿಯಲ್ಲಿ ತಾವೆಷ್ಟು ದೂರ ಇದ್ದೀರಿ ಎನ್ನುವುದು ಗೊತ್ತಿದೆ. ಆಗೇಕೆ ನೀವು ʼಠಮ ಠಮ ಠಮʼ ಸದ್ದು ಮಾಡಲಿಲ್ಲ? ಆಗ ಎಲ್ಲಿದ್ಯಪ್ಪ ಅಶ್ವತ್ಥನಾರಾಯಣ?

ಜೆಡಿಎಸ್ ಕಂಪನಿ ಎನ್ನುತ್ತೀರಿ! ನಿಮ್ಮ ಕಂಪನಿಗಳ ಕಥೆ ಬಿಚ್ಚಬೇಕೆ? ಹೊರಗೆ ಸಾಚಾತನ, ಒಳಗೆ ಸೋಗಲಾಡಿತನ. ಎರಡು ತಲೆಯ ಕುಶಲತೆಯನ್ನು ಎಲ್ಲಿಂದ ಕಲಿತಿರಿ? ಸಂಘದಿಂದ ಬಂದ ಸಂಸ್ಕಾರವೇ? ಅಥವಾ ತಮ್ಮ ಹಿನ್ನೆಲೆಯೇ ಇದಾ? ನಿಮ್ಮ ನೈಜ ಹಿನ್ನೆಲೆಯ ಪುರಾಣ ಗೊತ್ತಿದ್ದವರಿಗೆ ಇದೇನು ಅಚ್ಚರಿಯಲ್ಲ ಬಿಡಿ ಅಶ್ವತ್ಥನಾರಾಯಣ.

ಕುಮಾರಸ್ವಾಮಿ. ಜೆಡಿಎಸ್ ಕಂಪನಿ ಇರಲಿ, ನಿಮ್ಮ ಕಂಪನಿಗಳ ಬಗ್ಗೆಯೇ ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತು ಎಂಬುದನ್ನು ಮರೆಯಬೇಡಿ . ಚುನಾವಣೆ ಬರಲಿ, ಕಂಪನಿಗಳ ಕಲರವ ಮತ್ತು ʼಠಮ ಠಮ ಠಮʼ ಸದ್ದು ಏನೆಂಬುದನ್ನು ರಾಮನಗರದಲ್ಲಿ ಕೇಳುವಂತೆ ಮಾಡುತ್ತೇನೆ.

ಪಿಎಸ್ಐ ಅಕ್ರಮ, ಪ್ರಾಧ್ಯಾಪಕರ ಕರ್ಮಕಾಂಡ, ಕಟ್ಟಡಗಳ ಹೆಸರಿನಲ್ಲಿ ಕಮೀಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ಥನಾರಾಯಣ, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ? ಇದೇನಾ ಸಂಘ ಕಲಿಸಿದ ಶಿಕ್ಷಣ? ಹೇಳಿ ಡೀಲ್ ಅಶ್ವತ್ಥನಾರಾಯಣ? ಎನ್ನುವ ಜೊತೆಗೆ #ಡೀಲ್_ಅಶ್ವತ್ಥನಾರಾಯಣ #ನಕಲಿ_ಸರ್ಟಿಫಿಕೇಟ್_ರಾಜ ಎಂಬ ಹ್ಯಾಷ್ ಟ್ಯಾಗ್ ಮೂಲಕ ಪೋಸ್ಟ್ ಮಾಡಿದ್ದಾರೆ.

ಮೊಹರಂ ನಲ್ಲಿ ತಲ್ವಾರ್ ಹಿಡಿದು ಕುಣಿದರು ಶಾಸಕ ಡಿ.ಸಿ ಗೌರಿಶಂಕರ್

Publicstory/prajayoga

ತುಮಕೂರು ಗ್ರಾಮಂತರ: ಹೆಬ್ಬೂರಿನಲ್ಲಿ ನಡೆದ ಹಿಂದೂ ಮುಸ್ಲಿಮ್ ಹಬ್ಬ ಮೊಹರಂ ಆಚರಣೆ ವೇಳೆ ಗ್ರಾಮಾಂತರ ಶಾಸಕ ಡಿ.ಸಿ ಗೌರಿ ಶಂಕರ್ ತಲ್ವಾರ್ ಹಿಡಿದು ಕುಣಿತಕ್ಕೆ ಹೆಜ್ಜೆ ಹಾಕಿದ್ದು ಗನ ಸೆಳೆಯಿತು.

ತಲ್ವಾರ್/ಖತ್ತಿ ಹಿಡಿದು ಕುಣಿಯುವುದು ಮೊಹರಂ ಹಬ್ಬದ ಸಂಪ್ರದಾಯ. ಹೆಬ್ಬೂರಿನಲ್ಲಿ ಮುಸ್ಲಿಮ್ ಬಾಂಧವರು ಹಾಗೂ ಹಿಂದೂಗಳು ಸೇರಿ ಏರ್ಪಡಿಸಿದ್ದ ಮೊಹರಂ ಹಬ್ಬಕ್ಕೆ ಬಂದ ಶಾಸಕರು ಜನರ ಜೊತೆಗೆ ಕುಣಿದದ್ದು ಜನರ ಉಮೇದನ್ನು ಹೆಚ್ಚಿಸಿತು.

ಮನೆ ಮೇಲೆ ಮರ ಉರುಳಿ‌ ಇಬ್ಬರು ಮೃತ್ಯು

Publicstory/prajayoga

ಚಿಕ್ಕಮಗಳೂರು: ಮನೆಯ ಮೇಲೆ ಮರ ಉರುಳಿ ಇಬ್ಬರು ಮೃತಪಟ್ಟಿರುವ ಘಟನೆ ಕಳಸ ತಾಲೂಕಿನ ಕೆ.ತಗಲೂರಿನಲ್ಲಿ ನಡೆದಿದೆ.
ಚಂದ್ರಮ್ಮ ಹಾಗೂ ಸವಿತಾ ಮೃತ ದುರ್ದೈವಿಗಳು.

ಮಂಗಳವಾರ ತಡರಾತ್ರಿ 12 ಗಂಟೆಗೆ ಚಂದ್ರಮ್ಮ ಹಾಗೂ ಸಂಬಂಧಿ ಸರಿತಾ, ಕುಟುಂಬದವರೊಂದಿಗೆ ಮಲಗಿದ್ದ ವೇಳೆ ಮರ ಉರುಳಿ ಬಿದ್ದುದ್ದರಿಂದ ಸರಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಂದ್ರಮ್ಮ ಅವರಿಗೆ ತೀವ್ರ ಪೆಟ್ಟಾಗಿದ್ದರಿಂದ ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಾಬಯ್ಯನ ಪಾಳ್ಯ ಹಿಂದೂ ಮುಸ್ಲಿಮ್ ಭಾವೈಕ್ಯತೆಯ ಸೌಂದರ್ಯ

Publicstory/prajayoga

– ವೆಂಕಟೇಶ್ ನಾಗಲಾಪುರ

ಮೊಹರಂ ಎಂದರೆ ಮಹಮದಿಯರ ಮೊದಲ ತಿಂಗಳು. ಇಲ್ಲಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಈ ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ. ಇಸ್ಲಾಂ ಸಂಸ್ಥಾಪಕರಾದ ಮಹಮ್ಮದ್ ಪೈಗಂಬರ್ ಕೊನೆಯ ಪುತ್ರಿ ಫಾತಿಮಾ ಬೇಬಿ ಪತಿ ಹಜರತ್ ಆಲಿ ನಾಲ್ಕನೇ ಖಲೀಫರಾಗಿದ್ದರು.
ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಪ್ರಮುಖವಾದದ್ದು ಮೊಹರಂ. ಯಾವುದೇ ತಾರತಮ್ಯ ಇಲ್ಲದಂತೆ ಈ ಹಬ್ಬದಲ್ಲಿ ಹಿಂದೂಗಳು ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮೊಹರಂ ಹಬ್ಬವನ್ನು ಬಾಬಯ್ಯ ಹಬ್ಬ ಎಂದು ಕರೆಯುತ್ತಾರೆ.

ಮಹಮದಿಯರ ಮೊದಲ ತಿಂಗಳಿಂದ ಇಸ್ಲಾಂ ವರ್ಷ ಆರಂಭವಾಗುತ್ತದೆ. ಹಬ್ಬಕ್ಕೆ ಚಾರಿತ್ರಿಕ ಮತ್ತು ಧಾರ್ಮಿಕ ಹಿನ್ನೆಲೆಯೂ ಇದೆ.  ದಮಾಸ್ಕಸ್‌ನಲ್ಲಿ ಮುಅವಿಯ ಎಂಬ ಸರ್ದಾರನು ತಾನೇ ಖಲೀಫನೆಂದು ಸಾರಿಕೊಂಡು ಜನರ ಮೇಲೆ ಧರ್ಮ ಪ್ರಭುತ್ವ ಹೇರುತ್ತಾನೆ. ಆಗ ಹಜರತ್ ಅಲಿ ಬಳಿಕ ಅವರ ಮಗ ಪೈಗಂಬರರ ಎರಡನೇ ಮೊಮ್ಮಗ ಇಮಾಮ್ ಹುಸೇನ್ ಖಲೀಫ್ ಪಟ್ಟ ಅಲಂಕರಿಸಬೇಕಾಗಿತ್ತು. ಆದರೆ ಮುಅವಿಯಾನ್ ಮಗ ಯಜೀದನು ತಾನೇ ಖಲೀಫನೆಂದು ಘೋಷಿಸಿಕೊಂಡನು. ಈ ಅನ್ಯಾಯವನ್ನು ಇಮಾನ್ ಹುಸೇನರು ಪ್ರತಿಭಟಿಸಿದರು.
ಸತ್ಯ ನ್ಯಾಯವನ್ನು ಕಾಪಾಡಲು ಇಮಾಮ್ ಹುಸೇನರು 72 ಅನುಯಾಯಿಗಳೊಡನೆ ಯುದ್ಧ ಸಾರಿದರು. ಮೊಹರಂ ತಿಂಗಳ ಹತ್ತನೇ ದಿನ ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಇಮಾಮ್ ಹುಸೇನ್ ಹುತಾತ್ಮರಾದರು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೆ ಸಮರ್ಪಿಸಿಕೊಂಡು ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಈ ಹಬ್ಬ ನಡೆಯುತ್ತದೆ.

ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯಲ್ಲಿ ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಈ ಹಬ್ಬದಲ್ಲಿ ಬರುವ ಹೆಜ್ಜೆ ಕುಣಿತ, ಮುಳ್ತಾ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರದಲ್ಲಿ ಕುಣಿಯುತ್ತಾರೆ. ಇದನ್ನು ಜಾನಪದ ಕಲೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ.

ಅಲಾವಿ ಹೆಜ್ಜೆ ಕುಣಿತ

ಆವಾಲಾ ಎಂಬ ಅರಬ್ಬಿ ಶಬ್ದದಿಂದ ಅಲಾವಿ ಪದ ಹುಟ್ಟಿದೆ. ಆವಾಲಾ ಎಂದರೆ ತಗ್ಗು ಅಥವಾ ಗುಂಡಿ ಎಂದರ್ಥ. ಆವಾಲಾ ಅಲಾವಿಯಾಗಿದೆ. ಅಲಾವಿಗೂ ಮೂಲ ಮೊಹರಂ ಆಚರಣೆಗೂ ಸಂಬಂಧವಿದೆ. ಕ್ರಿ.ಶ. 680ರಲ್ಲಿ ಕರ್ಬಲಾ ಮರುಭೂಮಿಯಲ್ಲಿ ಹುಸೇನ ಮತ್ತು ಯಜೀದನ ಅನುಯಾಯಿಗಳ ಮಧ್ಯೆ ನಡೆದ ಯುದ್ಧದಲ್ಲಿ ಹುಸೇನರು ತಮ್ಮ ವೈರಿಗಳ ಆಕ್ರಮಣಕ್ಕೆ ಒಂದು ಬಗೆಯ ತಡೆಯುಂಟು ಮಾಡಲು ತಾವಿದ್ದ ಗುಡಿಸಲುಗಳ ಸುತ್ತ ತಗ್ಗು ತೋಡಿದ್ದರು. ಅದರ ಸಂಕೇತವಾಗಿ ಮೊಹರಂ ಆಚರಣೆಯ ಸಂದರ್ಭದಲ್ಲಿ ಅಶೋರ ಖಾನೆ ಎದುರು ಆಳವಾದ ತಗ್ಗು ತೋಡುತ್ತಾರೆ. ಇದೇ ಆಲಾವಿ. ಮೊಹರಂ ತಿಂಗಳ ಒಂಬತ್ತನೆಯ ರಾತ್ರಿಯೇ ಅಲಾವಿಯಲ್ಲಿ ಕಟ್ಟಿಗೆ ಹಾಕಿ ಅಗ್ನಿ ಹೊತ್ತಿಸುತ್ತಾರೆ. ಮೊಹರಂ ಘಟನೆಗೆ ಸಂಬಂಧಿಸಿದ ಪದಗಳನ್ನು ಹೇಳುತ್ತ ಅದರ ಸುತ್ತ ತಿರುಗುತ್ತಾರೆ. ಈ ಪದಗಳನ್ನು ಅಲಾವಿ ಪದಗಳೆಂದು ಕರೆಯುತ್ತಾರೆ. ಕೆಲ ಊರುಗಳಲ್ಲಿ ಹೆಜ್ಜೆ ಹಾಕುತ್ತ ಸುತ್ತುತ್ತಾರೆ. ಇದಕ್ಕೆ ಅಲಾವಿ ಹೆಜ್ಜೆ ಮತ್ತು  ಕುಣಿತವೆನ್ನುತ್ತಾರೆ.
ಮೊಹರಂನ್ನ ಶಿಯಾಗಳು ಹುತಾತ್ಮರಾದ ಹಜರತ್ ಅಲಿ ಯ ಬಲಿದಾನ ದಿನವಾಗಿ ಆಚರಿಸುತ್ತಾರೆ. ಇದನ್ನು ಸುನ್ನೀಗಳು ಪ್ರಬಲವಾಗಿ ವಿರೋಧಿಸುತ್ತಾರೆ. ಕಾರಣಿಕವನ್ನು ಪಾಜಿಯಾದ ಮೆರವಣಿಗೆಯ ದಿನದಂದು ನಡೆಸಲಾಗುವುದು. ಪಾಜಿಯಾಕ್ಕೆ ಹೆಚ್ಚಾಗಿ ಈ ಭಾಗದಲ್ಲಿನ ಹಿಂದುಗಳು ದೇವರ ಪೆಟ್ಟಿಗೆಯೆಂದು ಕರೆಯುತ್ತಾರೆ. ಈ ಮೆರವಣಿಗೆ ಎಲ್ಲಾ ಕಡೆಗೂ ಕಡ್ಡಾಯವಾಗಿ ನಡೆಯಬೇಕೆಂದಿಲ್ಲ. ಖತಲ್ ರಾತ್ರಿಯ ಮರುದಿನ ಅಲಾಯಿ ಕುಣಿ ಮುಚ್ಚುವುದರೊಂದಿಗೆ ಕೆಲವೆಡೆ ಹಬ್ಬ ಮುಕ್ತಾಯಗೊಳ್ಳುತ್ತದೆ. ಖತಲ್ ರಾತ್ರಿಯ ಮರುದಿನ ದೇವರು ಹೊಳೆಗೆ ಹೋಗಿ ಬಂದ ಮೇಲೆ ಪಂಜಾಗಳ ಮೇಲಿನ ವಸ್ತ್ರ, ಆಭರಣಗಳನ್ನು ಕಳಚಿ ಪೆಟ್ಟಿಗೆಯಲ್ಲಿಟ್ಟು ಮರುದಿನ ಮೆರವಣಿಗೆ ಮಾಡುವಂತಿದ್ದರೆ ಅದನ್ನು ಮುಗಿಸಿ ಮಸೀದಿಯಲ್ಲಿ ತೂಗು ಹಾಕುತ್ತಾರೆ. ಮುಂದಿನ ಹಬ್ಬದಲ್ಲಿ ಇದೇ ಪಾಜಿಯಾವನ್ನು ಬಳಸುತ್ತಾರೆ. ಕೆಲವೆಡೆ ಪಾಜಿಯಾದ ಬೆಲೆ ಬಾಳುವ ಭಾಗಗಳನ್ನು ಬೇರ್ಪಡಿಸಿ ನೆಲದಲ್ಲಿ ಹೂಳೂತ್ತಾರೆ.

ಸಾಕಷ್ಟು ಗ್ರಾಮಗಳಲ್ಲಿ ಮುಸಲ್ಮಾನರಿಲ್ಲದಿದ್ದರೂ ಮೊಹರಂ ಹಬ್ಬವನ್ನು ಆಚರಿಸಲಾಗುತ್ತದೆ. ಅವುಗಳಲ್ಲಿ  ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ‘ಬಾಬಯ್ಯನ ಪಾಳ್ಯ’ ಎಂದೇ ಪ್ರಸಿದ್ಧಿಯಾಗಿರುವ ಈಗಿನ ನಾಗಲಾಪುರ  ಗ್ರಾಮವೂ ಒಂದು.  ಗ್ರಾಮದಲ್ಲಿ ಹಬ್ಬದ ಸಲುವಾಗಿ ಮೊದಲ ದಿನ ಗುದ್ದಲಿ ಪೂಜೆ ಇರುತ್ತದೆ. ಇದಾದ ಮೂರನೆಯ ದಿನ ಶನಿವಾರ ರಾತ್ರಿ ಡೊಳ್ಳು ಕುಣಿತ, ಕರಡಿ ಕುಣಿತ ಇನ್ನೂ ಅನೇಕ ಕುಣಿತಗಳು ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಈ ಹಬ್ಬದ ಆಚರಣೆಯಲ್ಲಿ  ಹೆಚ್ಚಾಗಿ ಹಿಂದೂಗಳೇ ಭಾಗವಹಿಸುತ್ತಾರೆ. ಹರಕೆ ಹೊತ್ತು ಹಿಂದೂ- ಮುಸ್ಲಿಮರು ಹುಲಿ ವೇಷ, ಕುದುರೆ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ.  ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ ಅಲಂ ಒಂದಕ್ಕೊಂದು ಭೇಟಿಯಾದಾಗ ನೆರೆದ ಜನ ಸಾಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರ ಮಾಡಿ,  ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದೂ ಮುಸಲ್ಮಾನ್ ಸಂಭ್ರಮವನ್ನು ನೆನಪಿಸುವ ಬಾಬಯ್ಯನ ಪಾಳ್ಯ/ನಾಗಲಾಪುರ ಗ್ರಾಮ ಭಾವೈಕ್ಯತೆಗೆ ನಿದರ್ಶನವಾಗಿ ಉಳಿದುಕೊಂಡಿದೆ. ಸಂಪ್ರದಾಯಗಳು ಏನೇ ಇರಲಿ ಧರ್ಮಗಳ ಶ್ರೇಷ್ಠ ಕನಿಷ್ಠಗಳ ಗದ್ದಲದಲ್ಲಿ ಮೊಹರಂ ಹಬ್ಬದ ನೆಪವು ಅನ್ಯ ಕೋಮಿನವರನ್ನು ಪರಸ್ಪರ ಒಟ್ಟುಗೂಡಿಸುತ್ತದೆ ಎಂದರೆ ಅದಕ್ಕಿಂತಲೂ ಸೌಂದರ್ಯ ಮತ್ತೊಂದಿಲ್ಲ.

ನಾಡಿಗೆ ಅನ್ನ ನೀಡಿದ ಒಕ್ಕಲಿಗ ಸಮುದಾಯ : ನಿರ್ಮಲಾನಂದ ಶ್ರೀ

Publicstory/prajayoga

ತುರುವೇಕೆರೆ: ಎಷ್ಟೇ ಕಷ್ಟ ಬಂದರೂ ನಿಭಾಯಿಸುವ ಮೂಲಕ   ರೈತಾಪಿಗಳು ಜಮೀನನ್ನು ಮಾರಾಟ ಮಾಡದೆ ಉಳಿಸಿಕೊಳ್ಳಿ ಎಂದು ಶ್ರೀ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಕಿವಿಮಾತು ಹೇಳಿದರು.

ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ತಾಲೂಕು  ಒಕ್ಕಲಿಗ ನೌಕರರ  ಕ್ಷೇಮಾಭಿವೃದ್ದಿ ಸಂಘ  ಮತ್ತು ವಿಶ್ವಮಾನವ ಟ್ರಸ್ಟ್ ವತಿಯಿಂದ ಸಮುದಾಯ ಭವನದ ಭೂಮಿ ಪೂಜೆ ಹಾಗೂ ಪ್ರತಿಭಾಪುರಸ್ಕಾರ  ಹಾಗೂ  ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವೇದಿಕೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.

ನಾಡಿಗೆ ಅನ್ನ ನೀಡುವ ಸಮುದಾಯವಾದ ಒಕ್ಕಲಿಗರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕಿದೆ. ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸುವತ್ತ ಚಿತ್ತ ಹರಿಸಬೇಕಿದೆ. ಹಳ್ಳಿಗಾಡಿನಲ್ಲಿರುವ ನಮ್ಮವರನ್ನು  ಸಮಾಜದ ಮುಖ್ಯವಾಹಿನಿಗೆ ತರಬೇಕಾದ ಜವಾಬ್ದಾರಿ ಎಲ್ಲರದ್ದಾಗಿದೆ. ತಾಲೂಕು ಒಕ್ಕಲಿಗ ನೌಕರರ ಕ್ಷೇಮಾಭಿವೃದ್ದಿ ಸಂಘ  ನಿರ್ಮಿಸಲುದ್ದೇಶಿಸಿರುವ ಸಮುದಾಯ ಭವನವು  ಮುಂಬರುವ ವರ್ಷದಲ್ಲಿ ಸಮುದಾಯದ ಸೇವೆಗೆ ಸಮರ್ಪಣೆಯಾಗಲಿ ಎಂದು ಆಶಿಸಿದರು.

ಶಾಸಕ ಮಸಾಲಜಯರಾಮ್ ಮಾತನಾಡಿ, ಪಟ್ಟಣದಲ್ಲಿರುವ  ಮಾಜಿ ಪ್ರಧಾನಿ ದೇವೇಗೌಡರ ಪುತ್ಥಳಿಗೆ  ಗ್ರಾನೈಟ್ ಹಾಕಿಸುವ ಮೂಲಕ ಶೀಘ್ರ ಕಾಯಕಲ್ಪ ಒದಗಿಸಲಾಗುವುದು. ತಾಲೂಕಿನ ಮಾಜಿ ಶಾಸಕ ಬಿ.ಬೈರಪ್ಪಾಜಿಯವರ ಪುತ್ಥಳಿ ಅನಾವರಣಗೊಳಿಸುವ ಕಾರ್ಯಕ್ಕೆ ಕೈ ಜೋಡಿಸುತ್ತೇನೆ. ಒಕ್ಕಲಿಗ ನೌಕರರ ಸಂಘವು ಸಮುದಾಯ ಭವನ ನಿರ್ಮಿಸುತ್ತಿರುವ ಪ್ರದೇಶಕ್ಕೆ ಬಿಜಿಎಸ್  ಬಡಾವಣೆ ಎಂದು ನಾಮಕರಣ ಮಾಡಲಾಗುವುದು.  ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ನೀಡಿರುವ  ಸಲಹೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ,   ಆದಿಚುಂಚನಗಿರಿ ಮಠದ ಶಾಖೆಗಳು  ದೇಶ ವ್ಯಾಪಿ ಹಾಗೂ ಹೊರ ರಾಷ್ಟ್ರದಲ್ಲಿಯೂ ಇರುವುದು ಹೆಮ್ಮೆಯ ಸಂಗತಿ.  ಮಠವು  ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತಿರುವುದು ಅನನ್ಯವಾದುದು. ತಾಲೂಕು ಒಕ್ಕಲಿಗ ನೌಕರರ  ಸಂಘವು ಅಲ್ಪಾವಧಿಯಲ್ಲಿಯೇ  ಸಮುದಾಯ ಭವನ ನಿರ್ಮಿಸುವ ಸಂಕಲ್ಪ ತೊಟ್ಟು, ಶ್ರೀ ಗಳವರಿಂದ ಭೂಮಿ ಪೂಜೆ ನೆರವೇರಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.

ಈ ವೇಳೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ತಾಲೂಕಿನಲ್ಲಿರುವ  ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಧಿಕಾರಿಗಳನ್ನು ಅಭಿನಂದಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ನೌಕರರ ಸಂಘದ ಅಧ್ಯಕ್ಷ ಡಾ.ಸಿ.ಆರ್. ನವೀನ್ ವಹಿಸಿದ್ದರು.  ಮಠದ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ, ಮಂಗಳಾನಂದನಾಥ ಸ್ವಾಮೀಜಿ, ಮಾಜಿ ಶಾಸಕ ಎಸ್.ರುದ್ರಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಒಕ್ಕಲಿಗ ಸಂಘದ ಅಧ್ಯಕ್ಷ ಧನಪಾಲ್,  ಎನ್.ಆರ್.ಜಯರಾಮ್, ಕೊಂಡಜ್ಜಿವಿಶ್ವನಾಥ್, ವಿ.ಎನ್.ನಂಜೇಗೌಡ ಮತ್ತಿತರಿದ್ದರು.

ಬರ್ತಡೆ ದಿನವೇ ಡೆತ್ ನೋಟ್ ಬರೆದಿಟ್ಟು ಉಪನ್ಯಾಸಕಿ ಆತ್ಮಹತ್ಯೆ

0

Publicstory/prajayoga

ಚಾಮರಾಜನಗರ: ಉಪನ್ಯಸಕಿಯೊಬ್ಬರು ಬರ್ತಡೆ ದಿನವೇ ಡೆತ್ ನೋಟ್ ಬರೆದಿಟ್ಟು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಚಂದನಾ (26) ಎಂದು ತಿಳಿದು ಬಂದಿದೆ. ಯಳಂದೂರು ತಾಲೂಕು ಅಂಬಳೆ ಗ್ರಾಮದವರಾದ ಚಂದನಾ ಜೆಎಸ್‌ಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಅವರ ಜನ್ಮದಿನವಾಗಿದ್ದರೂ ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನದ ಅರಿವು ಮೂಡಿಸಲು ಸರ್ವೋದಯ ಚಿಂತಕರಿಂದ ಪಾದಯಾತ್ರೆ

Publicstory/prajayoga

ತುಮಕೂರು: ಭಾರತ ಸ್ವಾತಂತ್ರ‍್ಯ ಅಂಗವಾಗಿ 75 ಪಾದಯಾತ್ರಿಗಳ ತಂಡ ಆ.12ರ ಶುಕ್ರವಾರ ದೊಡ್ಡಬಳ್ಳಾಪುರ ಟಿ.ಬಿ.ಸರ್ಕಲ್ ನಿಂದ ಹೊರಟು 14 ರಂದು ಸಂಜೆ ವಿದುರಾಶ್ವತ್ಥ ತಲುಪಲಿದೆ. 59 ರೋವರ್ಸ್, 15 ಎನ್‌ಎಸ್‌ಎಸ್ ವಿದ್ಯಾರ್ಥಿಗಳು, 10 ಹಿರಿಯ ಸರ್ವೋದಯ ಚಿಂತಕರು ಹೆಜ್ಜೆ ಹಾಕಲಿದ್ದಾರೆ ಎಂದು ಸರ್ವೋದಯ ಮಂಡಲ ಜಿಲ್ಲಾಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ತಿಳಿಸಿದ್ದಾರೆ.

ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಹಿರಿಯರ ತ್ಯಾಗ, ಬಲಿದಾನದ ಅರಿವನ್ನು ಯುವಕರಲ್ಲಿ ಮೂಡಿಸುವ ಸಲುವಾಗಿ ಕರ್ನಾಟಕ ಸರ್ವೋದಯ ಮಂಡಲ-ಬೆಂಗಳೂರು ಈ ಪಾದಯಾತ್ರೆ ಆಯೋಜಿಸಿದೆ. ಜೊತೆಗೆ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ಗ್ರಾಮ, ಜನ ವಸತಿ ಪ್ರದೇಶದಲ್ಲಿ ಮಹಾತ್ಮ ಗಾಂಧೀಜಿ ಅವರ 100 ಭಿತ್ತಿ ಚಿತ್ರ ಪ್ರದರ್ಶನ, ಮಾರಾಟ ನಡೆಯಲಿದೆ.
ಆ.12 ರಂದು ದೊಡ್ಡಬಳ್ಳಾಪುರ ಟಿ.ಬಿ.ಸರ್ಕಲ್‌ನಲ್ಲಿ ಬೆಳಿಗ್ಗೆ 9.30 ಕ್ಕೆ ಪಾದಯಾತ್ರೆ ಆರಂಭವಾಗಿ ಆ.14 ರಂದು ಗೌರಿಬಿದನೂರು ತಲುಪಲಿದೆ.

ಆ.14 ರಂದು ಬೆಳಗ್ಗೆ 7.30ಕ್ಕೆ ತುಮಕೂರು ಸರ್ವೋದಯ ಕಾರ್ಯಕರ್ತರು ಗಾಂಧೀಜಿ ವಾಸ್ತವ್ಯಹೂಡಿದ್ದ ಶಾಲೆಯಿಂದ ತೆರಳಲಿದ್ದು, ಗಾಂಧಿ ಚಿಂತಕರಾದ ಎಂ.ಬಸವಯ್ಯ, ಟಿ.ಆರ್.ರೇವಣ್ಣ, ಜಿ.ವಿ.ವಿ.ಶಾಸ್ತ್ರಿ, ಎಲ್.ನರಸಿಂಹಯ್ಯ ತೊಂಡೋಟಿ, ಎಂ.ವಿ.ನಂಜಪ್ಪ, ಕೆ.ಸಿ.ಬಸಪ್ಪ, ಎಸ್.ನಾಗಣ್ಣ ಇತರರು ಭಾಗವಹಿಸಿ ಪಾದಯಾತ್ರಿಗಳಿಗೆ ಶುಭಕೋರಲಿದ್ದಾರೆ.

ತುಮಕೂರಿನ ಸರ್ವೋದಯ ಚಿಂತಕರು ವಾಹನದಲ್ಲಿ ತೆರಳಿ ಗೌರಿಬಿದನೂರಿನಿಂದ ಪಾದಯಾತ್ರೆ ಮೂಲಕ ವಿದುರಾಶ್ವತ್ಥ ತಲುಪಲಿದ್ದಾರೆ. ಅಂದು ಸಂಜೆ 6 ಗಂಟೆ ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟದ ವಿಶೇಷ ಚಿತ್ರ ಪ್ರದರ್ಶನ ನಡೆಯಲಿದ್ದು, ಸರ್ವ ಸದಸ್ಯರ ಸಭೆ ಆಯೋಜಿಸಲಾಗಿದೆ. ಸರ್ವೋದಯ ಸರ್ವ ಸೇವಾ ಸಂಘದ ಅಧ್ಯಕ್ಷ ಚಂದನ್‌ಪಾಲ್ ಉಪಸ್ಥಿತಿ ಇರುವರು.

ಆ.15 ರಂದು ಧ್ವಜಾರೋಹಣ, ಮೆರವಣಿಗೆ ನಂತರ ಸ್ವಾತಂತ್ರೋತ್ಸವದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಸ್ಮಾರಕ ಸಮಿತಿ ಹಮ್ಮಿಕೊಂಡಿದೆ. ಹಿರಿಯ ನಾಗರೀಕರು, ಸ್ವಾತಂತ್ರ‍್ಯ ಹೋರಾಟಗಾರರು, ಸಂಘ-ಸಂಸ್ಥೆಯವರು, ಸಾರ್ವಜನಿಕರು ಈ ಪಾದಯಾತ್ರೆಗೆ ಬೆಂಬಲ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸರ್ವೋದಯ ಮಂಡಲ ಜಿಲ್ಲಾಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ತಿಳಿಸಿದ್ದಾರೆ.

ಕಾಂಗ್ರೆಸ್ : ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣ ದಿನಾಚರಣೆ

Publicstory/prajayoga

ತುಮಕೂರು: ಕ್ವಿಂಟ್ ಇಂಡಿಯಾ ಚಳವಳಿಯ ಸವಿನೆನಪಿಗಾಗಿ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಸಿ.ಹನುಮಂತಯ್ಯ ಅವರ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಂಸ್ಮರಣ ದಿನವನ್ನು ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ ಚಳವಳಿಯ ನೇತಾರ ಮಹಾತ್ಮಗಾಂಧಿ ಅವರ ಭಾವಚಿತ್ರಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಪುಷ್ಪನಮನ ಸಲ್ಲಿಸುವ ಮೂಲಕ 1942ರ ಆಗಸ್ಟ್ 09 ರಂದು ಆರಂಭಗೊಂಡ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಮಾಡು, ಇಲ್ಲವೇ ಮಡಿ ಹೋರಾಟಕ್ಕೆ ಚಾಲನೆಯಾದ ದಿನವನ್ನು ಸ್ಮರಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಭಾರತದ ಸ್ವಾತಂತ್ರ ಇತಿಹಾಸದಲ್ಲಿಯೇ ಕ್ವಿಂಟ್ ಇಂಡಿಯಾ ಚಳವಳಿ ಒಂದು ಮಹತ್ತರ ಘಟ್ಟ. ಮಹಾತ್ಮಗಾಂಧಿ ನೇತೃತ್ವದ ಹಲವಾರು ಮಾದರಿ ಹೋರಾಟಗಳಿಗೆ ಬ್ರಿಟಿಷರು ಬಗ್ಗದೆ ಇದ್ದ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನೆಹರು, ಪಟೇಲ್ ಸರಿದಂತೆ ಹಲವರೊಂದಿಗೆ ಸೇರಿ, ಹೇಗಾದರೂ ಮಾಡಿ ಬ್ರಿಟಿಷರನ್ನು ಭಾರತದಿಂದ ಓಡಿಸಬೇಕೆಂಬ ಪಣತೊಟ್ಟರು. 1942ರ ಆಗಸ್ಟ್ 08 ರಂದು ಕ್ವಿಟ್ ಇಂಡಿಯಾ ಚಳವಳಿಯನ್ನು ಘೋಷಿಸಿದರು. ಈ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಮಾತ್ರ ಮಹತ್ತರವಾದುದ್ದು ಎಂದರು.

ನಮ್ಮ ನಾಯಕರಾಗಿರುವ ಸಿದ್ದರಾಮಯ್ಯ ಅವರು ಹೇಳಿರುವ ಬಿಜೆಪಿಯಾಗಲಿ, ಜೆಡಿಎಸ್ ಪಕ್ಷವಾಗಲಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಬಿಜೆಪಿ ಮನುಧರ್ಮದ ರಕ್ಷಣೆಗಾಗಿ, ಜಾರ್ತುವರ್ಣ ಪದ್ಧತಿಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ 1925ರಲ್ಲಿ ಜನಸಂಘದ ಹೆಸರಿನಲ್ಲಿ ಹುಟ್ಟಿಕೊಂಡಿದೆ. ಜೆಡಿಎಸ್ ಪಕ್ಷ ಹುಟ್ಟಿರುವುದೇ ಒಂದು ಜಾತಿಯ ಅಭಿವೃದ್ದಿಗಾಗಿ. ದೇಶದ ಸ್ವಾತಂತ್ರಕ್ಕಾಗಿಯೇ ಹುಟ್ಟಿದ ಯಾವುದಾದರೂ ಪಕ್ಷವಿದ್ದರೆ ಆದು ಕಾಂಗ್ರೆಸ್ ಪಕ್ಷ ಮಾತ್ರ. ನೆಹರು ಅವರ ತಂದೆ ಮೋತಿಲಾಲ್ ನೆಹರು, ಇಂದಿನ ತ್ರಿಮೂರ್ತಿ ಭವನ ಸೇರಿದಂತೆ ಸುಮಾರು ಮೂರು ಸಾವಿರ ಕೋಟಿ ರೂಗಳಿಗೆ ಬೆಲೆ ಬಾಳುವ ತಮ್ಮ ಸ್ವಂತ ಆಸ್ತಿಯನ್ನು ದೇಶಕ್ಕೆ ಆರ್ಪಿಸಿದರು.ಅಂತಹ ನೆಹರು ಮನೆತನವನ್ನು ಇಂದಿನ ಬಿಜೆಪಿ ಮುಖಂಡರು ಸುಳ್ಳು ಆರೋಪಗಳ ಮೂಲಕ ಕಳ್ಳರು ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ಕಾಂಗ್ರೆಸ್ ನೀಡಲೇಬೇಕಿದೆ ಎಂದು ಕೆಂಚಮಾರಯ್ಯ ನುಡಿದರು.

2006ರ ಚುನಾವಣೆಯ ವೇಳೆ 2022ರ ಹೊತ್ತಿಗೆ ದೇಶದ ಎಲ್ಲಾ ಪ್ರಜೆಗಳಿಗೂ ಸೂರು ನೀಡುವ ವಾಗ್ದಾನ ಮಾಡಿದ್ದ ನರೇಂದ್ರಮೋದಿ ಅವರು, ಹರ್ ಹರ್ ಘರ್‌ಮೇ ತಿರಂಗ ಎನ್ನುವ ಘೋಷಣೆ ಮಾಡಿ, ಬಾವುಟ ನೀಡಿ, ಜನರಿಗೆ ಕಿವಿಗೆ ಹೂವು ಮುಡಿಸಲು ಹೊರಟಿದ್ದಾರೆ. ರೈತರ, ಬಡವರ ಸಾಲಮನ್ನಾ ಮಾಡಲು ಹಿಂದೇಟು ಹಾಕುವ ಸರಕಾರ, ಉದ್ಯಮಿಗಳ 11 ಲಕ್ಷ ಕೋಟಿ ಸಾಲ ಮನ್ನಾ ಮಾಡಿ, ದೇಶವನ್ನು ಮತ್ತಷ್ಟು ಅಧೋಗತಿಗೆ ತರುತ್ತಿದೆ. ಎಲ್ಲಿಯವರೆಗೆ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಮತದಾರರು, ಅಭ್ಯರ್ಥಿಯ ಜಾತಿ, ಮತ, ಹಣ ನೋದಡೆ, ಪಕ್ಷದ ಸಾಧನೆ ನೋಡಿ ಮತ ನೀಡುತ್ತಾರೋ ಅಂದೇ ಈ ದೇಶ ಉನ್ನತಿಯತ್ತ ಸಾಗಲಿದೆ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ನಗರ ಮತ್ತು ಕೊರಟಗೆರೆ ವಿಧಾನ ಸಭಾ ಕ್ಷೇತ್ರಗಳ ಉಸ್ತುವಾರಿ ಕೇಶವಮೂರ್ತಿ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿಯನ್ನು ಬಹಿಷ್ಕರಿಸಿದ್ದ ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾ ಇಂದು ಅಧಿಕಾರದಲ್ಲಿದೆ. ಇದು ಈ ದೇಶದ ದುರಂತ. ಕ್ವಿಟ್ ಇಂಡಿಯಾ ಚಳವಳಿಯ ವೇಳೆ ಕರ್ನಾಟಕದ ಶಿವಮೊಗ್ಗ ಜಿಲ್ಲೆ ಈಸನೂರಿನಲ್ಲಿಯೂ ಒಂದು ಬೃಹತ್ ಹೋರಾಟ ನಡೆಯಿತು. ಅಂದೇ ಭಾರತದ ತ್ರಿವರ್ಣ ದ್ವಜವನ್ನು ಗ್ರಾಮದಲ್ಲಿ ಹಾರಿಸುವ ಮೂಲಕ ದೇಶದ ಮೊದಲು ಬ್ರಿಟಿಷ್ ಮುಕ್ತ ಗ್ರಾಮವನ್ನಾಗಿ ಘೋಷಿಸಲಾಯಿತು. ಇದರ ಇತಿಹಾಸವನ್ನು ಯುವಜನರು ತಿಳಿದು ಮತ ನೀಡಬೇಕಾಗಿದೆ ಎಂದರು.

ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಕ್ವಿಟ್ ಇಂಡಿಯಾ ಚಳುವಳಿಯ ಮೂಲಕ ಮಾಡು, ಇಲ್ಲವೇ ಮಡಿ ಎಂಬ ತತ್ವದ ಮೂಲಕ ಸ್ವಾತಂತ್ರ ಹೋರಾಟಕ್ಕೆ ಭದ್ರ ಬುನಾದಿ ಹಾಕಿದರು. ಆದರೆ, ಇಂದು ಯುವಜನರಲ್ಲಿ ಸ್ವಾತಂತ್ರ ಹೋರಾಟ, ಇದುವರೆಗಿನ ದೇಶದ ಅಭಿವೃದ್ಧಿ ಮೋದಿ ಅವರ ಕಾಲದಲ್ಲಿ ಎಂಬಂತೆ ಬಿಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದನ್ನು ಹೋಗಲಾಡಿಸಿ, ಜನರಿಗೆ ಸತ್ಯ ತಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 75 ಕಿ.ಮೀ ಗಳ ಪಾದಯಾತ್ರೆ ಹಮ್ಮಿಕೊಂಡಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಆಗಸ್ಟ್ 11ರ ಗುರುವಾರದ ನಗರದ ಬಿ.ಜಿ.ಪಾಳ್ಯ ಸರ್ಕಲ್‌ನಿಂದ ಕಾಂಗ್ರೆಸ್ ಪಕ್ಷದ ಫ್ರೀಡಂ ಪಾಥ್ ಆರಂಭವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೋ ರಾಜು, ಪಾಲಿಕೆ ಸದಸ್ಯ ಮಹೇಶ್, ಮುಖಂಡರಾದ ಶಟ್ಟಾಳಯ್ಯ, ಗ್ರಾಮಾಂತರ ಬ್ಲಾಕ್‌ನ ಕೆಂಪಣ್ಣ, ಸಂಜೀವಕುಮಾರ್, ಮಹಿಳಾ ಕಾಂಗ್ರೆಸ್‌ನ ಡಾ.ಆರುಂಧತಿ, ಕಮಲಮ್ಮ, ಜಿಲ್ಲಾ ವಕ್ತಾರರಾದ ಸುಜಾತ, ಕಾರ್ಮಿಕ ಘಟಕದ ಖಲೀಲ್, ಸೇವಾದಳದ ಶಿವಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.

ಆ.10ಕ್ಕೆ ಕೆಆರ್‌ಎಸ್ ಪಕ್ಷದ ಸಂಸ್ಥಾಪನಾ ದಿನ ಹಾಗೂ ಮಹಾಧಿವೇಶನ

Publicstory/prajayoga

ಬೆಂಗಳೂರು: ನಗರದ ಮಾಗಡೀ ರಸ್ತೆಯಲ್ಲಿರುವ ಧನಂಜಯ ಪ್ಯಾಲೆಸ್‌ನಲ್ಲಿ ಆ.10 ರಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮೂರನೇ ಸಂಸ್ಥಾಪನಾ ದಿನಾಚರಣೆ ಹಾಗೂ ಮಹಾಧಿವೇಶನ ನಡೆಯಲಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ದಿನಪೂರ್ತಿ ಕಾರ್ಯಕ್ರಮಗಳು ಜರುಗಲಿವೆ. ಈ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳಲ್ಲಿ ಪಕ್ಷ ಮಾಡಿರುವ ಸಾಧನೆ, ನೂತನ ರಾಜ್ಯ ಸಮಿತಿಯ ಘೋಷಣೆ, ವಿಧಾನಸಭೆ ಮತ್ತು ಬಿಬಿಎಂಪಿ ಯ ಸಂಭಾವ್ಯ  ಅಭ್ಯರ್ಥಿಗಳ ಪರಿಚಯ ಮತ್ತು ಘೋಷಣೆ ಸೇರಿದಂತೆ ವಿದ್ಯಾರ್ಥಿ/ಯುವ/ರೈತ/ಪರಿಸರ/ ಬಿಬಿಎಂಪಿ ಯ ಪ್ರಣಾಳಿಕೆಗಳ ಬಿಡುಗಡೆ ಮಾಡಲಾಗುವುದು. ಮಧ್ಯಾಹ್ನದ ನಂತರ ನಡೆಯುವ ಮಹಾಧಿವೇಶನದಲ್ಲಿ ನಾಡಿನ ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮತ್ತು ಖ್ಯಾತ ನ್ಯಾಯವಾದಿ ಕೆ.ವಿ.ಧನಂಜಯ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ರಾಜ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಹಾಗೂ ಶಿಸ್ತುಬದ್ಧವಾಗಿ ಹೋರಾಡುತ್ತಿರುವ ಪಕ್ಷ ಎಂದರೆ ಅದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಈ ಅಭೂತಪೂರ್ವ ರಾಜಕೀಯ ಕ್ರಾಂತಿಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕೆಂದು ಕೆಆರ್‌ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ರಘು‌ ಜಾಣಗೆರೆ ಕೋರಿದ್ದಾರೆ.

ಡಿವೈಡರ್‌ಗೆ ಬೈಕ್ ಡಿಕ್ಕಿ ; ಸವಾರ ಸಾವು

0

Publicstory/prajayoga

ತುಮಕೂರು: ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಶೆಟ್ಟಿಹಳ್ಳಿ ಬಳಿ ತಡರಾತ್ರಿ ಸಂಭವಿಸಿದೆ.

ಕೆಎ 02 ಎಚ್ ಆರ್ 5092 ಆ್ಯಕ್ಟಿವಾ ವಾಹನದಲ್ಲಿ ಸಾಗುತ್ತಿದ್ದ ವ್ಯಕ್ತಿ ಚಿಕ್ಕನಾಯಕನಹಳ್ಳಿ ತಾಲೂಕಿನ ಶಿಡ್ಲಕಟ್ಟೆಯ ರಂಗಸ್ವಾಮಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ರಂಗಸ್ವಾಮಿ ತುಮಕೂರಿನ ಪೆಟ್ರೋಲ್ ಬಂಕ್‌ನಲ್ಲಿ‌ ಕೆಲಸ ನಿರ್ವಹಿಸುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.