ಮಧುಗಿರಿ: ತಾಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುದ ಕೋಡಿಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಗ್ರಾಮದ ದ್ವಾರಪ್ಪ ಅವರ ಮನೆಗೆ ವಿಧಾನಪರಿಷತ್ ಸದಸ್ಯ ಆರ್ ರಾಜೇಂದ್ರ ಭೇಟಿ ನೀಡಿ ಆರ್ಥಿಕ ನೆರವು ನೀಡಿದರು.
ಮೃತರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು. ವ್ಯಕ್ತಿ ಕೊಚ್ಚಿ ಹೋದ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಒತ್ತುವರಿಯಾಗಿರುವ ಕಾಲುವೆಯನ್ನು ತೆರವುಗೊಳಿಸಬೇಕು. ನೀರು ಸರಾಗವಾಗಿ ಹರಿಯುವಂತೆ ಕಾಲುವೆ ದುರಸ್ತಿಗೊಳಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತುಮಕೂರು: ಕೆಲಸದಲ್ಲಿ ಯಾವುದು ಹೆಚ್ಚಿಲ್ಲ, ಕಡಿಮೆಯೂ ಇಲ್ಲ. ಯಾವುದೇ ಕೆಲಸ, ಹುದ್ದೆಯಾದರೂ ಶಿಸ್ತಿನಿಂದ ನಿಭಾಯಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸಲಹೆ ನೀಡಿದರು.
ಕರ್ನಾಟಕ ಸರ್ಕಾರ ವಾಹನ ಚಾಲಕರ ಸಂಘದ ನೂತನ ಅತಿಥಿಗೃಹ ಮತ್ತು ನವೀಕೃತ ಸಭಾಂಗಣ ಉದ್ಘಾಟನೆ ಹಾಗೂ ನಿವೃತ್ತ ಚಾಲಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಚಾಲಕರು ಅಧಿಕಾರಿಗಳ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ವೈಯಕ್ತಿಕವಾಗಿ ಇರುವ ಬಾಂಧವ್ಯ ವೃದ್ಧಿಯಾಗಬೇಕು ಎಂದರು.
ಹುದ್ದೆಯಾವುದಾದರೂ ಅವರಿಗೆ ಗೌರವ ಸಲ್ಲಿಸಬೇಕು ಎನ್ನುವುದು ಬಸವಣ್ಣ ನವರ ಕಾಯಕತತ್ವದ ಕಲ್ಪನೆ. ಸಂಘ,ಸಂಘಟನೆಗಳು ತಮ್ಮ ಧ್ಯೇಯೋದ್ದೇಶವನ್ನು ಈಡೇರಿಸಿಕೊಳ್ಳಬೇಕು. ಕಟ್ಟ ಕಡೆಯ ಚಾಲಕನಿಗೂ ಸೌಲಭ್ಯ ದೊರೆಯು ವಂತಾಗಬೇಕು ಎಂದರು. ಮಹಾಭಾರತದಲ್ಲಿ ಶ್ರೀಕೃಷ್ಣರು ಸಾರಥಿಯಾಗಿದ್ದರು. ಇದು ಅಧಿಕಾರಿಗಳಿಗೆ ಚಾಲಕರು ಸಾರಥಿ ಯಾಗಿದ್ದಾರೆ. ಅಂತಹ ಮಹತ್ವದ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಬೇಕು. ಚಾಲಕರು ಅಡ್ಡದಾರಿ ಹಿಡಿಯದಂತೆ ಜೀವನ ನಡೆಸಬೇಕು. ಅದಕ್ಕೆ ಪೂರಕವಾಗಿ ಸಂಘಟನೆ ಕೆಲಸ ಮಾಡಬೇಕು. ಸಂಘಟನೆಯ ಮೂಲಕ ಒಳಿತನ್ನು ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಅಧಿಕಾರಿಗಳು ಮತ್ತು ಚಾಲಕರು ಒಂದೇ ಕುಟುಂಬದವರು ಎನ್ನುವ ಭಾವನೆ ಇರಬೇಕು. ಕುಟುಂಬದ ರಹಸ್ಯವನ್ನು ಹೊರಗೆ ಹೇಳಬಾರದು. ಚಾಲಕರಿಗೆ ಮಾತಿಗಿಂತ ಕಿವಿ ಚುರುಕಾಗಿರಬೇಕು. ಶಿಸ್ತು ಮತ್ತು ಜಾಗರೂಕತೆ ಚಾಲಕರಿಗೆ ಅವಶ್ಯಕವಿದೆ. ನಡೆದಾಡುವ ದೇವರಾದ ಡಾ.ಶಿವಕುಮಾರ ಸ್ವಾಮೀಜಿಗಳನ್ನು ನೋಡಿರುವ ನಾವೆಲ್ಲರೂ ಅವರ ಮಾದರಿಗಳನ್ನು ಅನುಸರಿಸುವ ಮೂಲಕ ಜಿಲ್ಲೆಯ ಹೆಸರನ್ನು ಉಳಿಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಮಾತನಾಡಿ, ಚಾಲಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ನಿವೃತ್ತರಾದ ನಂತರ ಸಾಕಷ್ಟು ಚಾಲಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆರೋಗ್ಯಯುತವಾಗಿರಲು ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತಿ ಸಿಇಒ ಡಾ.ವಿದ್ಯಾಕುಮಾರಿ ಮಾತನಾಡಿ, ಸಾಹಸಿ ಪ್ರವೃತ್ತಿಯಿಂದ ಸಾಧನೆ ಮಾಡಬಹುದು. ಅದಕ್ಕಿಂತ ಹೆಚ್ಚಿನ ಸಾಹಸ ಚಾಲಕರದ್ದು, ಶಿಸ್ತಿನಿಂದ ಅಧಿಕಾರಿಗಳ ರಕ್ಷಣೆ ಮಾಡುವ ಚಾಲಕವೃಂದದವರು ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ಕೊಡಿಸಬೇಕು. ಸಾರ್ವಜನಿಕ ಜೀವನದಲ್ಲಿರುವವರಿಗೆ ಖಾಸಗಿ ಜೀವನವೂ ಮುಖ್ಯ. ಸಾರ್ವಜನಿಕ ಜೀವನಕ್ಕೆ ಒತ್ತು ನೀಡಿ. ಕುಟುಂಬಕ್ಕೆ ಸಮಯ ನೀಡದೇ ಇರುವುದು ಸರಿಯಲ್ಲ. ಅವರಿಗೆ ಸಮಯವನ್ನು ನೀಡುವ ಮೂಲಕ ಕುಟುಂಬವನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶ್ರಮಕ್ಕೆ ಗೌರವವಿದೆ, ನಿಷ್ಠೆಯಿಂದ ಕೆಲಸ ಮಾಡುವವರಿಗೆ ಗೌರವ ಸಲ್ಲುತ್ತದೆ. ಚಾಲಕರು ಕೇವಲ ವಾಹನ ಚಲಾಯಿಸುವುದಿಲ್ಲ. ವಾಹನದಲ್ಲಿ ಕುಳಿತವರ ಜೀವ, ಜೀವನವನ್ನು ಚಲಾಯಿಸುತ್ತಾರೆ, ರಕ್ಷಿಸುತ್ತಾರೆ. ಇಂತಹವರಿಗೆ ಗೌರವ ಸಲ್ಲಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಒಟ್ಟಾಗಿ ಬಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಜಯರಾಮ್, ಸರಕಾರದ ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ಹಾಲೇಶ್, ಸಂಘದ ಜಿಲ್ಲಾಘಟಕದ ಅಧ್ಯಕ್ಷ ಜಯರಾಮಯ್ಯ,ಕಾರ್ಯದರ್ಶಿ ಬಿ.ಜಿ.ಪುಟ್ಟರಾಜು,ಎನ್.ರಂಗಪ್ಪ, ಪ್ರಚಾರ ಸಮಿತಿಯ ಶ್ರೀಧರ್, ಕಾರ್ಯಾಧ್ಯಕ್ಷ ಯೋಗೀಶ್, ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ, ಜಂಟಿ ಕಾರ್ಯದರ್ಶಿ ಕೆಂಪೇಗೌಡ, ಮಲ್ಲೇಶ್ ಕುಮಾರ್, ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಚಾಲಕರಾದ ಬಸವರಾಜು, ಜ್ಞಾನೇಶ್, ಆವಲಪ್ಪ, ಆಜೀಜ್, ಮಲ್ಲಪ್ಪ, ನಾಗರಾಜು, ಈರಣ್ಣ, ಶ್ರೀನಿವಾಸ್, ಪರಮೇಶ್ವರಪ್ಪ ಸೇರಿದಂತೆ ನಿವೃತ್ತರಾದವರನ್ನು ಸನ್ಮಾನಿಸಲಾಯಿತು.
ತುಮಕೂರು: ಜಿಲ್ಲೆಯಲ್ಲಿ ನಮ್ಮ ಸಮುದಾಯಕ್ಕೆ ರಾಜಕೀಯವಾಗಿ ಒಳ್ಳೆಯ ಸ್ಥಾನಮಾನಗಳು ದೊರೆತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿ ರಾಜಕೀಯ ಜಾಗೃತಿ ಇಲ್ಲದಿರುವುದು ಎಂದು ಮಾಜಿ ಶಾಸಕ ಹಾಗು ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರಬಾಬು ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತಿಗಳರ ವಿದ್ಯಾಭಿವೃದ್ಧಿ ಸಂಘ, ತಿಗಳರ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಿಗಳ ಸಮುದಾಯದ ವಿವಿಧ ಸಂಘಟನೆಗಳು ಸೇರಿ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತುಮಕೂರಿನ ಅಮಾನಿಕೆರೆಯ ಗಾಜಿನ ಮನೆಯಲ್ಲಿ ರಾಜ್ಯಮಟ್ಟದ ತಿಗಳ ಕ್ಷತ್ರಿಯ ಜನಜಾಗೃತಿ ಸಮಾವೇಶವನ್ನು ಆಗಸ್ಟ್ 26 ರ ಶುಕ್ರವಾರ ಬೆಳಗ್ಗೆ 10ಗಂಟೆಗೆ ಆಯೋಜಿಸಲಾಗಿದೆ ಎಂದರು.
ಅರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ತಿಗಳ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆಯ ಜೊತೆಗೆ, ಜನ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಆಗಸ್ಟ್ 26 ರಂದು ಶ್ರೀಮಹಾಲಕ್ಷ್ಮೀ ತಿಗಳ ಮಹಾಸಂಸ್ಥಾನ ಟ್ರಸ್ಟ್(ರಿ)ನ ಪೀಠಾಧ್ಯಕ್ಷ ಜ್ಞಾನಾನಂದಪುರಿ ಸ್ವಾಮೀಜಿಗಳ ಗುರುವಂದನೆ ಹಾಗು ತಿಗಳ ಕ್ಷತ್ರಿಯ ಜಾಗೃತಿ ಕಾರ್ಯಕ್ರಮವನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಮಾರು 30 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿ ತಿಗಳ ಸಮುದಾಯವಿದ್ದರೂ ಕೊರಟಗೆರೆ ಕ್ಷೇತ್ರದಿಂದ ಮುದ್ದರಾಮಯ್ಯ ಮೂರು ಬಾರಿ ಶಾಸಕರಾಗಿದ್ದರು. ನಂತರ ನಾನು ಒಂದು ಬಾರಿ ಬೆಂಗಳೂರಿನ ಬಸವನಗುಡಿ ಕ್ಷೇತ್ರದಿಂದ ಶಾಸಕನಾಗಿದ್ದನ್ನು ಹೊರತು ಪಡಿಸಿದರೆ, ಉಳಿದಂತೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲು ಸಾಧ್ಯವಾಗಿಲ್ಲ. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ 9 ರಲ್ಲಿ ನಮ್ಮವರೇ ನಿರ್ಣಾಯಕ ಮತದಾರರು. ಹೀಗಿದ್ದರೂ ಹಾಗಾಗಿ ತಿಗಳ ಸಮುದಾಯದಲ್ಲಿ ಜನಜಾಗೃತಿ ಉಂಟು ಮಾಡುವ ಉದ್ದೇಶದಿಂದಲೇ ಸ್ವಾಮೀಜಿಗಳ ಗುರುವಂದನೆಯನ್ನು ನೆಪವಾಗಿಟ್ಟುಕೊಂಡು ಈ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶುಕ್ರವಾರ ನಡೆಯುವ ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲು ಒಪ್ಪಿದ್ದಾರೆ. ಇವರೊಂದಿಗೆ ಪಾಂಡಿಚೇರಿ ರಾಜ್ಯದ ಮುಖ್ಯಮಂತ್ರಿ ಎನ್.ರಂಗಸ್ವಾಮಿ, ಪಾಂಡುಚೇರಿ ಸರ್ಕಾರದ ಸಭಾಪತಿ ಆರ್.ಸೆಲ್ವಂ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮಂತ್ರಿಗಳು, ಶಾಸಕರುಗಳು, ಸಂಸದರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ತಿಗಳ ಜನಾಂಗದ ಮುಖಂಡ ರೇವಣ್ಣ ಸಿದ್ದಯ್ಯ ಮಾತನಾಡಿ, ತಿಗಳರ ಜನಜಾಗೃತಿ ಸಮಾವೇಶ ಪಕ್ಷಾತೀತ ಕಾರ್ಯಕ್ರಮವಾಗಿದೆ. ಹಾಗಾಗಿ ಸಮಾವೇಶಕ್ಕೆ ವಿರೋಧಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗುವುದು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ತಿಗಳ ಸಮುದಾಯದ ಅಭಿವೃದ್ದಿಗಾಗಿ ಸುಮಾರು 25 ಕೋಟಿ ರೂಗಳನ್ನು ನೀಡಿದ್ದರು. ಎಚ್.ಡಿ.ಕುಮಾರಸ್ವಾಮಿ ಸಹ ಸಮುದಾಯದ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಆದರೆ, ಬಿಜೆಪಿ ಸರ್ಕಾರದಲ್ಲಿ ಸಮುದಾಯದ ಬೆಳವಣಿಗೆಗೆ ವಿಶೇಷ ಅನುದಾನವಿಲ್ಲ. ಅಲ್ಲದೆ ನಮ್ಮ ಹಲವು ದಿನಗಳ ಬೇಡಿಕೆಯಾದ ತಿಗಳರ ಅಭಿವೃದ್ಧಿ ನಿಗಮ ಸ್ಥಾಪನೆಗೂ ಕ್ರಮ ಕೈಗೊಂಡಿಲ್ಲ. ಅಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮುಂದೆ ಈ ಎಲ್ಲಾ ಬೇಡಿಕೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಹಿಂದುಳಿದ ವರ್ಗದ ಮುಖಂಡ ಎಸ್.ಪಿ.ಚಿದಾನಂದ ಮಾತನಾಡಿ, ಅತ್ಯಂತ ಹಿಂದುಳಿದಿರುವ, ಕೃಷಿಯನ್ನೇ ನಂಬಿ ಬದುಕುತ್ತಿರುವ ಸಮುದಾಯ ರಾಜಕೀಯವಾಗಿ ಜಾಗೃತಿ ಹೊಂದಲು ಹೊರಟಿರುವುದು ಸಂತೋಷದ ವಿಷಯ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ8 ರಷ್ಟಿರುವ ಸಮುದಾಯ ಎಲ್ಲಾ ಸೌಲಭ್ಯಗಳಿಂದಲೂ ವಂಚಿತವಾಗಿದೆ. ಈ ಬಗ್ಗೆ ಸರ್ಕಾರಗಳು ಗಮನಹರಿಸಬೇಕಿದೆ ಎಂದರು.
ಮಹಾಲಕ್ಷ್ಮೀ ಮಹಾಸಂಸ್ಥಾನ ಟ್ರಸ್ಟ್ ನ ಅಧ್ಯಕ್ಷ ಹಾಗೂ ತಿಗಳ ಸಮುದಾಯದ ಜಗದ್ಗುರು ಜ್ಞಾನಾನಂದಪುರಿ ಸ್ವಾಮೀಜಿ ಮಾತನಾಡಿ, ಭವಿಷ್ಯದಲ್ಲಿ ಸಮುದಾಯವನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸಿನತ್ತ ತೆಗೆದು ಕೊಂಡು ಹೋಗುವ ನಿಟ್ಟಿನಲ್ಲಿ ಗುರುವಂದನೆ ಮತ್ತು ಜನ ಜಾಗೃತಿ ಸಮಾವೇಶ ಬಹಳ ಮಹತ್ವ ಪಡೆದುಕೊಂಡಿದೆ. ಗುರುವಂದನೆ ಎಂಬುದು ನಿಮಿತ್ತ ಮಾತ್ರ. ಜನಾಂಗದ ಅಭಿವೃದ್ಧಿಯೇ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ಹಿಂದುಳಿದ ಮತ್ತು ದಲಿತ ಮಠಾಧೀಶರ ಒಕ್ಕೂಟದ ಗೌರವಾಧ್ಯಕ್ಷನಾಗಿ ಎಲ್ಲಾ ಮಠಾಧೀಶರು ಗುರುವಂದನೆ ಯಂತಹ ಕಾರ್ಯಕ್ರಮದ ಮೂಲಕ ಸಮುದಾಯ ಸಂಘಟನೆಯಲ್ಲಿ ತೊಡಗಬೇಕೆಂಬುದು ನಮ್ಮ ಆಶಯ. ತುಮಕೂರು ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಿಗಳರ ಸಂಖ್ಯೆ ಹೆಚ್ಚಿದೆ.ಇವರೆಲ್ಲರನ್ನು ಒಗ್ಗೂಡಿಸಿ, ಅವರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಮೂಲಕ ನಮ್ಮ ಸಮುದಾಯವೂ ಸಂವಿಧಾನದ ಮೂಲ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗು ಸಮಬಾಳು ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪಾಲು ಪಡೆಯಲು ಸಜ್ಜುಗೊಳಿಸುವ ಕೆಲಸ ಇದಾಗಿದೆ ಎಂದರು.
ಪಾವಗಡ: ಅಗ್ನಿಶಾಮಕ ದಳ ನಿರಂತರ ಕಾರ್ಯಾಚರಣೆಯಿಂದ ಬೆಳಿಗ್ಗೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬ್ಯಾಡನೂರು ಗ್ರಾಮದ ಮಹಿಳೆಯ ದೇವೀರಮ್ಮನ ಮೃತ ದೇಹವನ್ನು ಪತ್ತೆ ಹಚ್ಚಲಾಗಿದೆ.
ಮೃತ ದೇಹವನ್ನು ಹೊರ ತೆಗೆದ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ದುರ್ದೈವಿ ದೇವೀರಮ್ಮ (35) ಇಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ಮಹಿಳೆಯರು ಹಳ್ಳದ ಬಳಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕೊಚ್ಚಿಹೋದ ಮಹಿಳೆಯ ಶೋಧ ಕಾರ್ಯಕ್ಕೆ ಅಗತ್ಯ ನೆರವು ನೀಡುವ ಪ್ರಯತ್ನ ಮಾಡಿದ್ದರು. ತುಮಕೂರಿನಿಂದ ಬಂದ ಅಗ್ನಿಶಾಮಕ ದಳ ಶೋಧನಾ ತಂಡದ ನಿರಂತರ ಹುಡುಕಾಟದ ಫಲವಾಗಿ ಮೃತ ದೇಹ ಪತ್ತೆಯಾಗಿದೆ.
ಗುಬ್ಬಿ: ಪಟ್ಟಣದ ಜ್ಯೋತಿನಗರ ಬಡಾವಣೆಯ ಮನೆಯೊಂದರ ಎರಡು ಹೂವಿನ ಕುಂಡಗಳಲ್ಲಿ ಗಾಂಜಾ ಬೆಳದಿದ್ದ ಆರೋಪಿಯನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.
ಜ್ಯೋತಿ ನಗರ ನಿವಾಸಿ ಆಟೋ ಚಾಲಕ ಗಫರ್ ಅಲಿಖಾನ್ (42) ಬಂಧಿತ ಆರೋಪಿ. ಈತ ತನ್ನ ಮನೆಯ ಹೂವಿನ ಕುಂಡಗಳ ಮಧ್ಯೆ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮನೆಯನ್ನು ಪರಿಶೀಲನೆ ನಡೆಸಿದಾಗ ಎರಡು ಹೂವಿನ ಕುಂಡಗಳಲ್ಲಿ ಗಾಂಜಾ ಬೆಳೆದಿರುವುದು ಬೆಳಕಿಗೆ ಬಂದಿದ್ದು, ಗುಬ್ಬಿ ಮತ್ತು ಚೇಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಾಲು ವಶಪಡಿಸಿದ್ದಾರೆ.
ಸ್ಥಳಕ್ಕೆ ಗುಬ್ಬಿ ತಹಶೀಲ್ದಾರ್ ಬಿ.ಆರತಿ ಆಗಮಿಸಿ ಮಹಜರ್ ನಡೆಸಿದರು.
ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವ ಗುಬ್ಬಿ ಪೊಲೀಸರು, ಪಿಎಸ್ಐ ಮುತ್ತುರಾಜ್ ಮತ್ತು ಚೇಳೂರು ಪಿಎಸ್ಐ ನವೀನ್ ಕುಮಾರ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣ ಬೇಧಿಸುವಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಹದೇವಯ್ಯ, ನವೀನ್, ರಂಗನಾಥ್, ಮಧುಸೂದನ್ ಮತ್ತು ದೇವರಾಜ್ ಕಾರ್ಯನಿರ್ವಹಿಸಿದ್ದಾರೆ.
ಪಾವಗಡ: ತಾಲೂಕಿನ ಬ್ಯಾಡನೂರಿನ ಗ್ರಾಮದ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಮೃತ ದುರ್ದೈವಿ ದೇವೀರಮ್ಮ (35) ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ಮಹಿಳೆಯರು ಹಳ್ಳದ ಬಳಿ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಬ್ಯಾಡನೂರು ಗ್ರಾಮದ ಗೋವಿಂದಪ್ಪ ಅವರ ಪತ್ನಿ ದೇವಿರಮ್ಮ ನೀರಿನಲ್ಲಿ ಕೊಚ್ಚಿ ಹೋದರು ಎಂದು ಆಕೆ ಜೊತೆ ಬಟ್ಟೆ ತೊಳೆಯಲು ತೆರಳಿದ್ದ (ಸಂಬಂಧಿ) ರಕ್ಷಿತಾ ತಿಳಿಸಿದ್ದಾರೆ.
ತಾವು ಬಟ್ಟೆ ಒಗೆಯಲು ಬೆಳಿಗ್ಗೆ ಹಳ್ಳಕ್ಕೆ ಹೋಗಿದ್ದೆವು. ಈ ಸಂದರ್ಭದಲ್ಲಿ ದೇವಿರಮ್ಮ ಕಾಲು ಜಾರಿ ಹಳ್ಳಕ್ಕೆ ಬಿದ್ದರು. ಅವರನ್ನು ಕಾಪಾಡುವ ಪ್ರಯತ್ನದಲ್ಲಿ ತಾನೂ ನೀರಿನಲ್ಲಿ ಮುಳುಗಿದೆ. ತನ್ನ ಸಹೋದರ ತಕ್ಷಣ ಬಂದು ತನ್ನನ್ನು ಕಾಪಾಡಿದ. ಅಷ್ಟರಲ್ಲಿ ದೇವಿರಮ್ಮ ನೀರಿನಲ್ಲಿ ಕೊಚ್ಚಿ ಹೋಗಿದರು ಎಂದು ರಕ್ಷಿತಾ ಅವರು ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ವೆಂಕಟರಮಣಪ್ಪ, ಬೇಗ ಕಾರ್ಯಚರಣೆ ಮುಂದುವರಿಸುವಂತೆ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದರು.
ಹಳ್ಳದಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಅಲ್ಲದೆ, ಹಳ್ಳದಲ್ಲಿ ಸೀಮೆ ಜಾಲಿ ಗಿಡಗಳು ಯಥೇಚ್ಛವಾಗಿ ಇರುವುದರಿಂದ ಕಾರ್ಯಾಚರಣೆ ವಿಳಂಬವಾಗಿದೆ ಎಂದು ತಾಲೂಕು ಅಗ್ನಿ ಶಾಮಕದಳದ ಅಧಿಕಾರಿ ತಿಳಿಸಿದ್ದು, ಮುಂದಿನ ಕಾರ್ಯಾಚರಣೆಗಾಗಿ ತುಮಕೂರಿನಿಂದ ಎನ್ ಡಿ ಆರ್ ಎಫ್ ಶೋಧನಾ ಕಾರ್ಯಕ್ಕೆ ಬರುವುದಾಗಿ ತಿಳಿಸಿದರು.
ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕೊಚ್ಚಿಹೋದ ಮಹಿಳೆಯ ಶೋಧ ಕಾರ್ಯಕ್ಕೆ ಅಗತ್ಯ ನೆರವು ನೀಡುವ ಪ್ರಯತ್ನ ಮಾಡಿದರು. ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಹಳ್ಳದ ಹತ್ತಿರ ಆಗಮಿಸಿದ್ದರು. ಸ್ಥಳಕ್ಕೆ ತಹಶೀಲ್ದಾರ್ ವರದರಾಜು, ಕಂದಾಯ ಅಧಿಕಾರಿ ರಾಜಗೋಪಾಲ್, ಅಗ್ನಿಶಾಮಕ ದಳದ ಠಾಣಾಧಿಕಾರಿ, ಎಸ್ಆರ್ ಪಾಟೀಲ್, ಮುಂತಾದವರು ಆಗಮಿಸಿದ್ದರು.
ಪಾವಗಡ: ತಾಲೂಕಿನ ಬೊಮ್ಮತನಹಳ್ಳಿ ಗ್ರಾಮದ ತೋಟದಲ್ಲಿ ಹೈ ಟೆನ್ಶನ್ ವೈರ್ (ವಿದ್ಯುತ್ ತಂತಿ) ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ರಮೇಶ್ ಬೆಳಿಗ್ಗೆ ತೋಟದಲ್ಲಿ ಸೀತಾಫಲ ಹಣ್ಣನ್ನು ಕೀಳಲು ಹೋಗಿದ್ದು, ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೆಂಕಟರಮಣಪ್ಪ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ, ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಮಾಜಿ ಶಾಸಕ ತಿಮ್ಮರಾಯಪ್ಪ ಅವರೂ ಭೇಟಿ ನೀಡಿದರು. ಈವೇಳೆ ಪರಿಹಾರ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದರು. ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ತುಮಕೂರು : ಗ್ರಾಮಾಂತರದ ಹೆತ್ತೇನಹಳ್ಳಿ ಗ್ರಾಮದಲ್ಲಿ ಸುಮಾರು ಏಳು ಮನೆಗಳು ನೆಲಕ್ಕುರುಳಿದ್ದು, ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಶನಿವಾರ ಪಾಲನೇತ್ರಯ್ಯ ಸಾಂತ್ವಾನ ಹೇಳಿ ಪ್ರತಿ ಕುಟುಂಬಕ್ಕೆ ತಲಾ 60,000 ರೂಪಾಯಿ ಹಣ ಸಹಾಯ ಮಾಡಿದರು.
ಶಾಸಕ ಡಿ.ಸಿ ಗೌರಿಶಂಕರ್ ಅವರು ತಕ್ಷಣವೇ ಜನರ ನೆರವಿಗೆ ಬರುವಂತೆ ಗೂಳೂರು ಜಿಲ್ಲಾ ಪಂಚಾಯತಿ ಜೆಡಿಎಸ್ ಉಸ್ತುವಾರಿ ಪಾಲನೇತ್ರಯ್ಯ ಅವರಿಗೆ ಸೂಚಿಸಿದ ಹಿನ್ನಲೆಯಲ್ಲಿ ಪಾಲನೇತ್ರಯ್ಯ ಮುತುವರ್ಜಿ ವಹಿಸಿಕೊಂಡರು.
ಮನೆ ಕಳೆದುಕೊಂಡವರಿಗೆ ವೈಯಕ್ತಿಕ ಹಣದಲ್ಲಿ ಮನೆಗೆ ಮೇಲ್ಛಾವಣಿ ನೀಡುವುದಾಗಿ ಸಂತ್ರಸ್ತರಿಗೆ ಧೈರ್ಯ ನೀಡಿದ್ದಾರೆ.
ಈ ವೇಳೆ ಮುಖಂಡ ರಾಜಣ್ಣ, ರವೀಶ್, ಮಂಜುನಾಥ್, ಮೋಹನ್, ಮಾಯಣ್ಣ, ಹನುಮಂತರಾಯಪ್ಪ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ತುಮಕೂರು: ನಗರದ ಸದಾಶಿವ ನಗರದಲ್ಲಿರುವ ಟಿಪ್ಪು ತಾಜ್ ಟೀ ಸ್ಟಾಲ್ ಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಚಹ ಸೇವಿಸಿ ಸರಳತೆ ಮೆರೆದಿದ್ದಾರೆ.
ಇಂದು ಪರಮೇಶ್ವರ್ ಜನ್ಮ ದಿನವಾದ್ದರಿಂದ ಅಭಿಮಾನಿಯೊಬ್ಬರ ಆಹ್ವಾನದ ಮೇರೆಗೆ ಸದಾಶಿವನಗರದಲ್ಲಿರುವ ಟಿಪ್ಪು ತಾಜ್ ಟೀ ಸ್ಟಾಲ್ಗೆ ಭೇಟಿ ನೀಡಿ ಟೀ ಸೇವಿಸಿದ್ದು, ಗಮನ ಸೆಳೆಯಿತು.
ಈ ವೇಳೆ ಅವರಿಗೆ ಟೀ ಸ್ಟಾಲ್‌ನ ಶಬ್ಬೀರ್ ಅಹಮದ್ ಮತ್ತು ಅವರ ಸ್ನೇಹಿತರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನ ಮಾಡಿದರು. ರಿಜ್ವಾನ್ ಪಾಷಾ, ಫೈಝಲ್, ರಫೀಕ್ ಪಾಷಾ, ಮುಕ್ತಿಯಾರ್ ಮತ್ತಿತರರು ಇದ್ದರು.
ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಹೇರೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊದಲೂರು ಸದಸ್ಯೆ ಗೌರಮ್ಮ ಅವಿರೋಧವಾಗಿ ಶನಿವಾರ ಆಯ್ಕೆಯಾದರು.
ಹೇರೂರು ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಶಿರಸ್ತೇದಾರ್ ಶ್ರೀನಿವಾಸ್ ನಡೆಸಿಕೊಟ್ಟರು. ಎಸ್ಸಿ ಮಹಿಳಾ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಕಿಟ್ಟದಕುಪ್ಪೆ ಗಂಗಮ್ಮ ರಾಜೀನಾಮೆ ಸಲ್ಲಿಸಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೊದಲೂರು ಗೌರಮ್ಮ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಸದಸ್ಯರ ಒಮ್ಮತದಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನಂತರ ಸುದ್ದಿಗಾರರ ಜತೆ ಮಾತನಾಡಿದ ನೂತನ ಉಪಾಧ್ಯಕ್ಷೆ ಗೌರಮ್ಮ, ಗುಬ್ಬಿ ಪಟ್ಟಣಕ್ಕೆ ಹೊಂದಿಕೊಂಡ ಹೇರೂರು ಗ್ರಾಪಂ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಸರ್ಕಾರದ ಅನುದಾನ ಬಳಸಿ ಅಭಿವೃದ್ದಿ ಕೆಲಸ ಮಾಡಿ ಮಾದರಿ ಗ್ರಾಪಂ ಎನಿಸಿಕೊಳ್ಳಲು ಶ್ರಮಿಸುತ್ತೇನೆ ಎಂದರು.
ಗ್ರಾಪಂ ಅಧ್ಯಕ್ಷ ಸೋಮಶೇಖರ್ ಮಾತನಾಡಿ ಎಲ್ಲಾ ಸದಸ್ಯರು ಒಗ್ಗೂಡಿ ಪಂಚಾಯಿತಿ ಅಭಿವೃದ್ಧಿ ಮಾಡುತ್ತಿದ್ದೇವೆ. ಪಕ್ಷಾತೀತ ನಿಲುವು ಜೊತೆಗೆ ಶಾಸಕರು, ಸಂಸದರಿಂದ ಅನುದಾನ ತರುವಲ್ಲಿ ಶ್ರಮಿಸಿದ್ದೇವೆ. ಹೆದ್ದಾರಿಗೆ ಹೊಂದಿಕೊಂಡ ಈ ಹೇರೂರು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಕ್ಕೂ ಕುಡಿಯುವ ನೀರು, ರಸ್ತೆ, ಬೀದಿ ದೀಪ ಒದಗಿಸಿದ್ದೇವೆ. ವಿಶೇಷ ಅನುದಾನ ತರುವ ಜೊತೆಗೆ ತೆರಿಗೆ ಸಂಗ್ರಹ ಮಾಡುವ ಮೂಲಕ ಆದಾಯದ ಮೂಲ ಹೆಚ್ಚಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸದಸ್ಯರಾದ ಶಿವಪ್ಪ, ಶ್ರೀನಿವಾಸ್, ರಾಧಾಮಣಿ, ಬಿಲ್ಕ್ಸ್ ಬಾನು, ರಮೇಶ್, ರವೀಶ್, ರೇಣುಕಪ್ಪ, ಜಯಣ್ಣ, ಶೋಭಾ, ಪವನ್, ವೆಂಕಟೇಶ್, ಮುಖಂಡರಾದ ರಂಗಸ್ವಾಮಯ್ಯ, ಸಂತೋಷ್, ಪುಟ್ಟಸ್ವಾಮಯ್ಯ, ಮೂರ್ತಿ, ವಿಜಯ್, ಪಿಡಿಒ ಪ್ರಶಾಂತಕುಮಾರ್ ಇತರರು ಇದ್ದರು.