Saturday, May 9, 2026
Google search engine
Home Blog Page 119

ಸಂಕ್ರಾಂತಿ ಸರಣಿ: ಕವಿತೆ ಓದಿ-ಎಳ್ಳು ಬೆಲ್ಲ

0

ಎಳ್ಳು ಬೆಲ್ಲದಲಿ ಬೇರು ಯಾವುದು?
ಹಣ್ಣು ಯಾವುದು? ಯಾವುದನ್ನು ಹೇಗೆ

ಮೆಲ್ಲಬೇಕು.
ಒಂದನ್ನು ಕಡೆಗಣಿಸಿ., ಒಂದನ್ನು ಬಿಡಲಾಗದು.
ಎಲ್ಲವನ್ನು ಉಂಡು ಜೀರ್ಣಿಸಬೇಕು. ಅದುವೇ ಜೀವನದ ಸಾರ. ಅದನ್ನು ಎಳ್ಳುಬೆಲ್ಲಕ್ಕೆ ಸಮೀಕರಿಸಿದ್ದಾರೆ ಡಾII ರಜನಿ.



ಎಳ್ಳು ಬೆಲ್ಲ
————-

ಎತ್ತಣ ಮಾಮರ
ಎತ್ತಣ
ಕೋಗಿಲೆ…

ಗಿಡದ ಎಳ್ಳು
ಮರದ
ಕೊಬ್ಬರಿ …

ಭೂಮಿಯೊಳಗಣ
ನೆಲಗಡಲೆ
ಹುರಿದು…

ಪೊದೆಯ ಕಾಳು
ಹುರಿದು ಬಿರಿದ
ಪುಟಾಣಿ…

ದೊಡ್ಡ ಹುಲ್ಲೆಂಬ
ಕಬ್ಬು ಅರೆದು
ಬೆಂದು ಬೆಲ್ಲ…

ಒಂದು ಹುಲ್ಲು
ಒಂದು
ಬೇರು…

ಒಂದು ಹಣ್ಣು
ಒಂದು
ಬೀಜ …

ಒಂದು ಜಗಿದು
ಒಂದು
ಸಿಗಿದು …

ಒಂದು
ಕಟುಂ
ಕಟುಂ …

ಒಂದು
ಮೆಲ್ಲಗೆ
ಸವಿದು …

ಹಿರಿಯರ
ಅನುಭವ
ಸಮ್ಮಿಶ್ರಣದಿಂದ..

ಆದುದೇ
ಎಳ್ಳು
ಬೆಲ್ಲ…

ಅದುವೆ
ಜೀವನ…

ಕಹಿ ಉಂಡು
ಸಿಹಿ ಹಂಚಿ…


ಡಾII ರಜನಿ

ಕವಿತೆ ಓದಿ: ಕಾಯುವುದು

0
ಕಾಯುವುದು ಎಂದರೆ ಸುಮ್ಮನಲ್ಲ. ಕಾದಿದ್ದು ಏಕೆ? ಕಾದ ನಂತರ ಬಂದದ್ದು ಏನು? ಕಾಯುವುದು ಜಡತ್ವ ವಲ್ಲ. ಎಲ್ಲ ಚೇತನಗಳೂ ಒಟ್ಟಾಗಿ ಬಯಸಿದ ಫಲಿತಾಂಶವನ್ನು ಉಂಟು ಮಾಡಲು ಯೋಜಿಸುವ ಹುನ್ನಾರ ಕಾಯುವುದು. ಕಾಯುವುದು ಎಂದರೆ ತಪಸ್ಸು. ಕಾಯುವುದಕ್ಕೂ ಸಂಕ್ರಾಂತಿಗೂ ಏನೊ ನಂಟು. ಕಾದುವುದು ಎಂದರೆ ಯುದ್ಧ. ಒಬ್ಬೊಬ್ಬರೂ ಒಂದೊಂದಕ್ಕೆ ಕಾಯತ್ತಾರೆ. ಕಾಯುವುದು ಎಂದರೆ ಕಾದು ಪಡೆಯುವುದು ಎಂಬ ಅರ್ಥವನ್ನು ಡಾ. ರಜನಿ ಅವರ ಈ ಕವನ ನೀಡುತ್ತದೆ.

ಕಾಯುವುದು
**********

ಶರಶಯ್ಯೆಯಲಿ
ಉತ್ತರಾಯಣಕ್ಕೆ ಕಾದ
ಇಚ್ಛಾ ಮರಣಿ….

ಭೀಷ್ಮನಿಗೆ ಸಾವು
ತರಲು ಕಾದ
ಅಂಬಾ…

ಉತ್ತರಕ್ಕೆ ಪಯಣಿಸಲು
ಆರು ತಿಂಗಳು ಕಾದ
ಆದಿತ್ಯ …

ನೆಟ್ಟು ಫಸಲು
ಕಣ ಮಾಡಲು ಅರ್ಧ ವರ್ಷ
ಕಾದ ರೈತ …

ಹೊಸ ಮನೆಯಲಿ
ಹಾಲು
ಉಕ್ಕುವುದನ್ನೇ ಕಾದ ಒಡತಿ …

ಗಟ್ಟಿ ಮೊಸರಿಗಾಗಿ ಹಾಲು
ಕೆನೆ ಗಟ್ಟಿಸಲು
ಕಾದ ಸೊಸೆ …

ಪಟಕ್ಕೆ ಸೂತ್ರ
ಅಪ್ಪ ಹಾಕಿ ಕೊಡಲಿ
ಎಂದು ಕಾದ ಮಗ…

ಗಾಳಿ ಬಂದು
ಗೋತ ಹೊಡೆದ ಪಟ
ನೆಟ್ಟಗಾಗಲಿ ಎಂದು ಕಾದ
ಗೆಳೆಯರು…

ರಂಗೋಲಿ ಬಿಡಲು
ಸಗಣಿ ಸಾರಿಸಿದ
ನೆಲ ಹದವಾಗಿ ಒಣಗಲು
ಕಾದು …

ಸಾವಿರ ಕಾಲಿನ ಜಡೆ
ಹಾಕಲಿ ಎಂದು
ಕಾದ ಮಗಳು…

ಪಕ್ಕದ ಮನೆಯವರು
ಅವರೇ ಬರುತ್ತಾರ
ಎಳ್ಳು ಕೂಡಲು ಎಂದು ಕಾದು ..

ಪಾಕ ಸರಿ ಬಂತಾ
ಎಂದು ಕಾದು
ಸಕ್ಕರೆ ಅಚ್ಚಿಗೆ….

ಕಬ್ಬು ಸೀಳಿ
ಯಾವಾಗ ಕೊಡುತ್ತದೆ
ತಾತ ಎಂದು ಕಾದ
ಮೊಮ್ಮಗ …

ಕಾದರೆ ಬಾರದು
ಕಾದಬೇಕು…

ಒಳಗಿನ ತುಡಿತ
ಬೇಕಾದ್ದನ್ನು
ಪಡೆಯಲು…

ಕಾಯುವುದು
ಎಂದರೆ
ಸುಮ್ಮನಲ್ಲ…..


ಡಾII ರಜನಿ

ಕವಿತೆ; ಸಂಕ್ರಾಂತಿ

0
ಸಂಕ್ರಾಂತಿಯ ಸಂಭ್ರಮಕ್ಕೂ ಆಧುನಿಕತೆಯ ಸಂಕ್ರಮಣ. ಎಳ್ಳು ಸವಿಯುವವರು ಇಲ್ಲ. ಹದವಾಗಿ ಉರಿದ ಎಳ್ಳಿನ ಗಮ್ಮತ್ತೇ ಬೇರೆ. ಎಂಬ ಅರ್ಥದ ಕವನ ಸಂಕ್ರಾಂತಿಗಾಗಿ ಡಾII ರಜನಿ ಅವರಿಂದ.

ಸಂಕ್ರಾಂತಿ


ಶಂಖಿನಗಾತ್ರ ಚಳಿ ಹೋಗಿ
ಸಾಸಿವೆ ಕಾಳು ಗಾತ್ರ ಸೆಖೆ
ಹುಟ್ಟಿ …

ಒಣಗಿದ ಮೈಗೆ
ತಿಂದ ಎಳ್ಳಿನ
ಎಣ್ಣೆ …

ಕಬ್ಬು ಸೀಳಿ ಹಲ್ಲಿನ
ಸಂದು ಸಂದಿಗೂ
ರಸ…

ಸುಗ್ಗಿ ಮುಗಿದು
ಹುಗ್ಗಿ ತಿಂದ
ಮಗ…

ಕಣದ
ರಾಶಿಗೆ
ಕಾದು …

ಉತ್ತರಕ್ಕೆ
ಸೂರ್ಯನ
ಪಯಣ …

ಉತ್ತರಾಯಣಕ್ಕೆ
ಕಾದ
ಭೀಷ್ಮ…

ಬೆಲ್ಲ ಹಂಚಿ
ಹಾರಿಸಿದ
ಗಾಳಿಪಟ…

ಹಗಲು ಹೆಚ್ಚಾಗಿ
ರಾತ್ರಿ
ಚಿಕ್ಕದಾಗಿ…

ನೆರಿಗೆ ಚಿಮ್ಮಿ
ಹಂಚುತ್ತಿದ್ದ
ಎಳ್ಳು…

ವಾಟ್ಸ್ ಅಪ್ ನಲ್ಲಿ
ಹರಿದಾಡಿದ
ಎಳ್ಳು ಕಬ್ಬು …

ರೆಡಿಮೇಡ್ ಎಳ್ಳಿನಲ್ಲಿ
ಉರಿಯದ
ಕಡ್ಲೆ ಬೀಜ …

ಕೊಬ್ಬರಿಗೆ ಮುಗ್ಗಲು
ಬೆಲ್ಲಕ್ಕೆ
ಸಕ್ಕರೆ ಕಾಯಿಲೆ…


ಡಾII ರಜನಿ.

ತುಮಕೂರಿನಲ್ಲಿ ಕೊರೊನಾ ಮಹಾಸ್ಫೋಟ

ತುಮಕೂರು: ಬುಧವಾರ ತುಮಕೂರಿನಲ್ಲಿ ಕೊರೊನಾ ಮಹಾ ಸ್ಪೋಟ ಆಗಿದೆ.

ಒಟ್ಟಾರೆ 594 ಮಂದಿಗೆ ಒಂದೇ ದಿನ ಸೋಂಕು ತಗುಲಿ ಜನರಿಗೆ ಆತಂಕ ತರಿಸಿದೆ.

ತುಮಕೂರು ನಗರದಲ್ಲಿ 288 ಜನರಿಗೆ ಸೋಂಕು ತಗುಲಿದ್ದು, ಅತಿ ಹೆಚ್ಚು ಜನರು ಒಂದೇ ದಿನ ಸೋಂಕು ತಗುಲಿಸಿಕೊಂಡಿದ್ದಾರೆ.

ತುಮಕೂರು ನಗರ ಹೊರತುಪಡಿಸಿ ತಿಪಟೂರು ನಗರ, ಕೊರಟಗೆರೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ.

ಯುವ ಜನತೆ ದಿನ: ಕವಿತೆ ಓದಿ- ಯೌವನ

1
ಯುವ ಜನತೆಯ ದಿನವನ್ನು ಆಚರಿಸುತ್ತಿರುವ
ಸಂಧರ್ಭದಲ್ಲಿ ಕ್ಷಣಿಕ ವಾದ ಯೌವ್ವನ ವಯಸ್ಸಾದ ಮೇಲೆ ಮಧುರ ನೆನಪು ಬರಬೇಕೆ ವಿನಹ ಪಶ್ಚಾತ್ತಾಪವಲ್ಲ ಎಂಬ ಅರ್ಥದಲ್ಲಿ ಶ್ರೀ ಸರೋಜಿನಿ ನಾಯ್ದು ಅವರ The youth ಕವನವನ್ನು ಅನುವಾದಿ ಸಿದ್ದಾರೆ ಡಾII ರಜನಿ.

ಯೌವನ
********
ಓ ಯೌವನವೇ ಅದೆಷ್ಟು ಬೇಗ
ನೀ ಜಾರಿ ಹೋದೆ..

ನೀನು ನಾನು ಜೊತೆಗಿದ್ದ
ದಿನಗಳಾದರೂ ಎಷ್ಟು ?

ಕಾಣದ ದಿನಗಳ ಕನಸು
ಕಂಡಿದ್ದು ಎಷ್ಟು ?

ಕಂಡಿರದ ಫಲಗಳ
ಕಿತ್ತು ತಿಂದೆವೆ?

ಓ ಚಂಚಲ ಮನಸೇ
ಭಾವ ಪರವಶತೆಯು…
ತುಂಬಾ ದಿನ ಉಳಿಯುವುದು
ಎಂದು ಕೊಂಡಿದ್ದೆವಲ್ಲ …

ಕನಸುಗಳು ಕಮರುತ್ತವೆ.

ಕ್ಷಣಿಕ ಖುಷಿಗಳ ಮತ್ತಿನಲ್ಲಿ ….

ನಾನು ಹೊಗಳಿದ್ದ …
ಕ್ಷೀಣವಾಗಿ ಸಾಯುವ
ಸುಳ್ಳೇ ಜವ್ವನವ

ವಾಪಸ್ಸು ನೀಡುವೆ…

ಓ ನನ್ನ ಸ್ನೇಹಿತ ಜವ್ವನವೇ ….

ನಾನು ನೀನು
ಬೇರೆಯಾಗುವ ಮೊದಲು

ನನ್ನ ಜವ್ವನವೇ ….

ಸಾಯಲಿರುವ
ಕಣ್ಣ ರೆಪ್ಪೆಗಳ ಮೇಲೆ
ಒಂದು ಮುತ್ತನಿಡು

ಕಮರಿ ಸಾಯುವಾಗಲೂ
ಮಧುರ
ನೆನಪ ನೀಡುವಂತೆ.


ಡಾII ರಜನಿ

ಮೂಲ ಕವನ

ಕನ್ನಡ ಸಾಹಿತ್ಯದಲ್ಲಿ ಸುಗ್ಗಿ ಮಾಡಿದ ಚಂಪಾ ; ಪ್ರೊ. ಅಣ್ಣಮ್ಮ

0

Publicstory


ತುಮಕೂರು: ಮನೆ ಮನೆಗಳಿಗೆ ಕನ್ನಡ ಪುಸ್ತಕದ ಸುಗ್ಗಿ ಮಾಡಿದ ಚಂಪಾ ಅವರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದದ್ದು ಎಂದು ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ. ಅಣ್ಣಮ್ಮ ಅಭಿಪ್ರಾಯ ಪಟ್ಟರು.

ನಗರದ ತುಮಕೂರು ವಿವಿಯ ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೋಮವಾರ ನಡೆದ ಚಂಪಾ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಂಡಾಯ ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಚಂಪಾ ಅವರು ಸಂಕ್ರಮಣ ಪತ್ರಿಕೆಯ ಮೂಲಕ ಕನ್ನಡ ಸಾಹಿತ್ಯದಲ್ಲಿ‌ ಹೊಸ ಸಂಚಲನ ಸೃಷ್ಟಿಸಿದವರು. ಗೋಗಾಕ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಚಂಪಾ ಅವರು ಹಿರಿಕಿರಿ ಬರಹಗಾರರನ್ನು ಬೆಳೆಸಿ ಪೋಷಿಸಿದ ಧೀಮಂತ.ಕಸಾಪ ಅಧ್ಯಕ್ಷರಾಗಿ ಪುಸ್ತಕ ಸಂತೆ ಸೇರಿದಂತೆ ಹಲವು ಕನ್ನಡ ಕಟ್ಟುವ ಕೆಲಸ ಮಾಡಿದ ಚಂಪಾ ಅವರು ನಮ್ಮನ್ನಗಲಿರುವುದು ಕನ್ನಡ ಸಾಹಿತ್ಯಕ್ಕೆ ತುಂಬಲಾರದ‌ ನಷ್ಟ ಎಂದರು

ಪ್ರಾಧ್ಯಾಪಕ ಡಾ. ಡಿ.ವಿ ಪರಮಶಿವ ಮೂರ್ತಿ ಮಾತನಾಡಿ ನಿರ್ಭೀತ ಮಾತುಗಳು ಹಾಗೂ ಹಲವು ಪ್ರಕಾರದ ಸಾಹಿತ್ಯ ರಚನೆಯ ಮೂಲಕ ಕನ್ನಡ ಸಾಹಿತ್ಯದಲ್ಲಿ ಮುಂಚೂಣಿಯಲ್ಲಿದ್ದ ಚಂಪಾ ಅವರು ಅನಂತ ನಾಟಕಗಳನ್ನು ಜನಪ್ರಿಯಗೊಳಿಸಿದವರು. ಹರಿತ ಮನೋಚ್ಛ ಮಾತುಗಳಿಂದ ಹೆಸರಾದ ಚಂಪಾ ಅವರು ಟೀಕಿಸಿದವರನ್ನೂ ತೀಕ್ಷ್ಣವಾಗಿ ಪ್ರೀತಿಸಿದವರು ಎಂದು ತಿಳಿಸಿದರು.

ಪ್ರಾಧ್ಯಾಪಕ ಡಾ. ನಿತ್ಯಾನಂದ ಬಿ ಶೆಟ್ಟಿ ಮಾತನಾಡಿ ಚೇತೋಹಾರಿ ಹಾಗೂ ಗಂಭೀರವಾದ ಅವರ ಬರವಣಿಗೆ ಮತ್ತು ಸಂಕ್ರಮಣ ಪತ್ರಿಕೆಯ ಬಗ್ಗೆ ಕನ್ನಡದಲ್ಲಿ ಒಳ್ಳೆಯ ಸಂಶೋಧನೆ ನಡೆಯಬೇಕಿತ್ತು. ಸಾಹಿತ್ಯ ,ನೆಲ, ನೀರು, ಧರ್ಮ, ರಾಜಕೀಯ, ಸಾಹಿತ್ಯ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದ ಚಂಪಾ‌ ಅವರು ಕನ್ನಡ ಸಾಹಿತ್ಯದಲ್ಲಿ ಅಚ್ಚಳಿಯದೆ ನೆನಪಿಟ್ಟುಕೊಳ್ಳುವಂತಹ ಮೇರು ವ್ಯಕ್ತಿತ್ವ ಹೊಂದಿದ್ದರು ಎಂದರು.

ಅಗಲಿದ ಚಂಪಾ ಅವರಿಗೆ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕವಿತೆ ಓದಿ: ದೃಢ ಸಂಕಲ್ಪ

0

ವೆನ್ನಲ ಕೃಷ್ಣ


ಎಲ್ಲಾ ಶಕ್ತಿ ನನ್ನಲ್ಲಿಯೇ ಇದೆ
ಏನೂ ಬೇಕಾದರೂ ಮಾಡುವೆ
ಎಲ್ಲವನ್ನೂ ನಾನೇ ಮಾಡಬಲ್ಲೆ
ನಿಸ್ವಾರ್ಥದ ಸಂಕಲ್ಪ ತೊಟ್ಟು ನಡೆ
ದಾರಿ ತಾನೇ ತೆರೆದುಕೊಳ್ಳುವುದು

ತಾಮಸಿಕ ಗೊಡೆಯನ್ನು ಕೆಡವಿ
ರಾಜಸಿಕ ಬಯಲಿಂದ ಹೊರಬಂದು
ಸಾತ್ವಿಕ ಅರಮನೆಯನ್ನು ಕಟ್ಟಿಕೊ
ಸುರಾಜ್ಯ ಸ್ವರಾಜ್ಯ ನಿನ್ನದಾಗುವುದು

ಇಬ್ಬಗೆಯ ನಿರ್ಧಾರ ಬಿಡು
ಅತಂತ್ರನಾಗದೆ ಅಧೀರನಾಗದೆ
ಒಮ್ಮನದಿಂದ ಹೆಜ್ಜೆ ಹಾಕು ನಿನ್ನ
ದಾರಿ ನಿನಗೆ ಗೋಚರವಾಗುವುದು

ಗೆಲುವನ್ನು ತಲೆಗೇರಿಸಿಕೊಳ್ಳದೆ
ಸೋಲನ್ನು ಮನಸ್ಸಿಗೆ ಹಚ್ಚಿಕೊಳ್ಳದೆ
ಸಮರಸ ಭಾವದಿ ಗುರಿಯತ್ತ ಸಾಗು
ಸಾಧನೆ ನಿನ್ನ ಜೊತೆಗೆ ಬರುವುದು. ||

ಡಾ. ರಜನಿ‌ ಕಣ್ಣಲ್ಲಿ ಕಲೀಲ್ ಗಿಬ್ರಾನ್ ಕವಿತೆ

ಚಳಿಗಾಲದಲ್ಲಿ ಎಲೆ ಉದುರಿ ಮತ್ತೆ ಚಿಗುರುವ ಮರ ,ಸಾಯುವ ಅಜ್ಜಿ
ಬೆಳೆಯುವ ಮೊಮ್ಮಗ ,ಜೀವನ ಚಕ್ರ.. ಇದು ಕಲೀಲ್ ಗಿಬ್ರಾನ್ ಅವರ ಎಲೆಗೆ ಸಂಬಂಧಪಟ್ಟ ಒಂದು ಎಳೆಯಿಂದ ಪ್ರೇರಿತರಾಗಿ ಕವನವಾಗಿಸಿದ್ದಾರೆ
ಡಾII ರಜನಿ

ಎಲೆ
*************

ಚಳಿಗೆ ಉದುರಿದ
ಎಲೆ..

ಒಣಗಿದ ತರಗೆಲೆ
ಸಾಯುವ ಸದ್ದು

ಬೋಳು ಮರ
ಕಡ್ಡಿ ಕೊಂಬೆಗಳು…

ಎಲೆಗಳೆಲ್ಲಾ ಸೇರಿ
ಮರಕ್ಕೆ ಉಣಿಸಿದ್ದು
ಸುಳ್ಳೆ?

ಎಲೆ ಉಣಿಸಿ
ಬೆಳೆಸಿದ ಕಾಂಡ ,
ಬೇರು ಅಲ್ಲವೇ?

ಒಣಗಿ ಉದುರಿದರೂ
ನಿನ್ನ
ಹಸಿರಾಗಿಟ್ಟಿಲ್ಲವೇ?

ಕೊಳೆತು ಗೊಬ್ಬರವಾಗಿ
ನಿನ್ನ ಬುಡಕ್ಕೆ
ಬಲವಾಗಿ…

ನೋವಿಲ್ಲದೆ ಕಳಚಿ
ನೀನು ನನ್ನ
ಕಳುಹಿಸಲಿಲ್ಲವೇ?

ಗಾಳಿಗೆ ತೂರಿ
ಹಾರಿ ಬೀಳುವಾಗ
ನೀನು …

ಅಳದೇ ನಿಂತು
ನನ್ನ ಮೆಲ್ಲಗೆ…
ಮಲಗಿಸಲಲ್ಲವೇ?

ನಿನ್ನಳೊಗೆ
ನಾ ನೀಡಿದ
ಕಸುವು ..

ಮರೆಯುವೆ
ಹೇಗೆ ನನ್ನ
ನೀನು..

ತಿಳಿ ಹಸಿರ
ಚಿಗುರೆಲೆ
ನನ್ನದೆ ಮರಿ …

ನನ್ನ
ಕುರುಹಲ್ಲವೇ?


ಡಾII ರಜನಿ.

(ಕಲೀಲ್ ಗಿಬ್ರಾನ್ ಅವರ ಕವನದಿಂದ
ಪ್ರೇರಿತ) .

ಕ್ವಿಂಟಲ್ ರಾಗಿಗೆ ₹ 3377: ಶಾಸಕ ಮಸಾಲ ಜಯರಾಮ್

0

Publicstory


ತುರುವೇಕೆರೆ: ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಕಿಸೆಗೆ ಹಾಕದಂತೆ ಮನವೊಲಿಸಿ ರೈತರೇ ನೇರವಾಗಿ ಎಪಿಎಂಸಿಗೆ ರಾಗಿ ಖರೀದಿ ಕೇಂದ್ರದಲ್ಲಿ ವ್ಯವಹರಿಸುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಶಾಸಕ ಮಸಾಲ ಜಯರಾಂ ತಾಕೀತು ಮಾಡಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಬುಧುವಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ವತಿಯಿಂದ ಸರ್ಕಾರಿ ಸಹಾಯ ಧನದೊಂದಿಗೆ 2021-22 ನೇ ಸಾಲಿಗೆ ಆರಂಭಗೊಂಡ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ರೈತರ ಹೆಸರಿನಲ್ಲಿ ದಳ್ಳಾಳಿಗಳು ರಾಗಿ ನೀಡಿ ಸರ್ಕಾರಕ್ಕೆ ಮೋಸ ಮಾಡುತ್ತಾರೆ. ದಳ್ಳಾಳಿಗಳ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸರ್ಕಾರ ಬೆಂಬಲ ಬೆಲೆ ನಿಗಧಿ ಮಾಡಲಾಗಿದೆ. ಮಾ.31ರವರೆಗೆ ಎಫ್ಎಕ್ಯೂ ಗುಣಮಟ್ಟದ ರಾಗಿ ಖರೀದಿಸಲಿದ್ದು ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಗೆ 3377 ರೂಪಾಯಿಗಳನ್ನು ನೀಡಲಿದೆ.

ಈ ದಿಸೆಯಲ್ಲಿ ರಾಗಿ ಬೆಳೆದ ರೈತರು ಪಹಣಿ, ಹೆಸರು, ವಿಳಾಸದೊಂದಿಗೆ ಬೆಳೆದ ರಾಗಿಯ ಸ್ಯಾಂಪಲ್ ನೀಡಿ ಒಂದು ಚೀಲಕ್ಕೆ 50 ಕೆ.ಜಿ. ಸಾಮರ್ಥ್ಯದ ಗೋಣಿ ಚೀಲದಲ್ಲಿ ಮಾತ್ರ ನೀಡಬೇಕು. ತಾಲ್ಲೂಕಿನ ರೈತರು ನಿಗಧಿತ ದಿನಾಂಕವನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಅಗತ್ಯ ದಾಖಲೆಗಳೊಂದಿಗೆ ಆ ದಿನ ರಾಗಿಯನ್ನು ನೀಡಬಹುದು.

ಕೋವಿಡ್ ಅಥವಾ ಲಾಕ್ಡೌನ್ ಎದುರಾದರೆ ರೈತರು ಆತಂಕಕ್ಕೆ ಒಳಗಾಗದೆ ರಾಗಿ ಕೊಳ್ಳುವ ಅವಧಿ ಮುಂದೂಡಲು ಸರ್ಕಾರಕ್ಕೆ ಒತ್ತಾಯಿಸುವೆ. ರೈತರ ಬೆಳೆ ಕಾಲಂ ಸಂಬಂದಿಸಿದಂತೆ ಶುಕ್ರವಾರ ತಹಶೀಲ್ದಾರ್ ಹಾಗೂ ಸಂಬಂದಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದರು.

ತಹಶೀಲ್ದಾರ್ ಆರ್.ನಯೀಂಉನ್ನಿಸಾ ಮಾತನಾಡಿ, ರೈತರ ಪಹಣಿಯಲ್ಲಿ ತೆಂಗು, ಅಡಿಕೆ, ಬಾಳೆ ಎಂದು ತಪ್ಪಾಗಿ ನೋಂದಣಿಯಾಗಿದ್ದಲ್ಲಿ ಅಂತಹ ರೈತರು ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಿ ಎಂದರು.

ರಾಗಿ ಖರೀದಿ ಕೇಂದ್ರದ ಅಧಿಕಾರಿ ರವಿಕುಮಾರ್ ಮಾತನಾಡಿ, ರಾಗಿ ಖರೀದಿಗೆ ಮಾ.31ರ ತನಕ ನೋಂದಣಿಗೆ ಅವಕಾಶವಿದೆ. ರೈತರು ನೊಂದಣಿ ಮಾಡಿಸಲು ಕೃಷಿ ಇಲಾಖೆಯಿಂದ ನೀಡಿರುವ ಗುರುತಿನ ಚೀಟಿ ಖಡ್ಡಾಯವಾಗಿರುತ್ತದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು ಎಂದರು.

ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ನರಸಿಂಹ, ಉಪಾಧ್ಯಕ್ಷ ಪ್ರಸನ್ನ, ಸದಸ್ಯರಾದ ವಿ.ಟಿ.ವೆಂಕಟರಾಮು, ಮಧು, ವಿಜಿಯೇಂದ್ರ, ಕಾಂತರಾಜು, ನರಸಿಂಹರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಪೂಜಾ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಎ.ಪಿಎಂ.ಸಿ ಕಾರ್ಯದರ್ಶಿ ವೆಂಕಟೇಶ್ ಬಿ.ಆರ್, ರೈತರು ಪಾಲ್ಗೊಂಡಿದ್ದರು.

ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು…

Publicstory


ಸಿರಾ: ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾದ ಸಾವಿತ್ರಿಬಾ ಫುಲೆ ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು. ಸಮಾಜದ ತಳ ವರ್ಗದ ಹೆಣ್ಣುಮಕ್ಕಳಿಗಾಗಿ ಶಾಲೆ, ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆ, ದಲಿತರಿಗಾಗಿ ಕುಡಿಯುವ ನೀರಿನ ಟ್ಯಾಂಕ್‌ ಸ್ಥಾಪನೆ ಹೀಗೆ ಸಮಾಜಮುಖಿಯಾದ ಹತ್ತಾರು ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ಸಾವಿತ್ರಿಬಾಯಿ ಎಂದು ಸ.ಹಿ.ಪ್ರಾ.ಶಾಲೆ, ಗಾಣದಹುಣಸೆ ಶಾಲೆಯ ಮುಖ್ಯ ಶಿಕ್ಷಕ‌ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಅವರು ತಾಲ್ಲೂಕಿನ ಗಾಣದಹುಣಸೆ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾ ಫುಲೆ ಜಯಂತಿಯ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು.
ಅವರಿದ್ದ ಕಾಲ, ಅವರು ಎದುರಿಸಿದ ಸವಾಲುಗಳು, ಅವರು ಮಾಡಿದ ಕಾರ್ಯ ಎಲ್ಲವನ್ನೂ ಒಮ್ಮೆ ನೆನಪಿಸಿಕೊಂಡರೆ ಅವರಿಗೆ ತಲೆಬಾಗಿ ನಮಸ್ಕರಿಸಬೇಕು ಎಂಬ ಭಾವನೆ ಮೂಡುವುದು ಅತ್ಯಂತ ಸಹಜ. ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ನಮಗೆಲ್ಲರಿಗೂ ಸ್ಫೂರ್ತಿ ತುಂಬಲಿ, ಆ ಮಹಾನ್‌ ಚೇತನವನ್ನು ನಾವೆಲ್ಲರೂ ಸದಾ ನೆನಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

1848ರಿಂದ 1852ರ ಅವಧಿಯಲ್ಲಿ 14 ಶಾಲೆಗಳನ್ನು ಫುಲೆ ದಂಪತಿಗಳು ತೆರೆದರು. ಆಡಳಿತದ ಸಂಪೂರ್ಣ ಜವಾಬ್ದಾರಿ ಸಾವಿತ್ರಿ ಅವರದಾಗಿತ್ತು. ಬ್ರಿಟಿಷ್‌ ಸರ್ಕಾರ ಅವರ ಕಾರ್ಯವನ್ನು ಮೆಚ್ಚಿ ಭಾರತದ ಮೊದಲ ಶಿಕ್ಷಕಿ ಎಂಬ ಮನ್ನಣೆ ನೀಡಿತು. ಸ್ತ್ರೀಯರು ಸಹ ಪುರುಷರಂತೆ ಶಿಕ್ಷಣ ಪಡೆಯಬೇಕು ಎಂಬುದು ಈ ದಂಪತಿಗಳ ಹಂಬಲವಾಗಿತ್ತು. ಸಮಾಜಕ್ಕೇ ಶಿಕ್ಷಕಿಯಾದವರು ಸಾವಿತ್ರಿಬಾಯಿ. ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟ ನಡೆಸಿದ ಅವರು, ಮಹಿಳೆಯರಿಗಾಗಿಯೇ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿದರು‌ ಎಂದು ಸಹಶಿಕ್ಷಕ ಆರ್‌.ತಿಪ್ಪೇಸ್ವಾಮಿ ಹೇಳಿದರು.

ಹಿರಿಯ ಸಹಶಿಕ್ಷಕ ಮಹಮ್ಮದ್ ಗೌಸ್ ಮಾತನಾಡಿ, ಈ ಮಹಾ ತಾಯಿಯ ಬದುಕಿನ ಪರಿಚಯ ನಮ್ಮೆಲ್ಲ ಮಕ್ಕಳಿಗೂ ತಿಳಿಯಬೇಕು. ಈ ಮಹಾನ್‌ ಹೋರಾಟಗಾರ್ತಿಯ ಸವಾಲುಗಳನ್ನು ಎದುರಿಸುವ ಛಲ ನಮ್ಮೆಲ್ಲಾ ಮಕ್ಕಳಲ್ಲೂ ಬರಬೇಕು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಕಾಳಜಿ ನಮ್ಮೆಲ್ಲ ಮಕ್ಕಳಲ್ಲಿ ಉಂಟಾಗಬೇಕು ಎಂಬುದೇ ಈ ಜನ್ಮದಿನದ ಆಚರಣೆಯ ಅರ್ಥ. ಜೊತೆಗೆ ನಮ್ಮ ಮಕ್ಕಳಿಗೆ ಇವರ ಧ್ಯೇಯದಿಂದ ಕೂಡಿದ ಬದುಕನ್ನು ತಿಳಿಸುವುದೇ ಈ ಮಹಾನ್‌ ಚೇತನಕ್ಕೆ ನಾವೆಲ್ಲರೂ ಸಲ್ಲಿಸಬಹುದಾದ ಅರ್ಥಪೂರ್ಣ ಗೌರವ ಎಂದು ತಿಳಿಸಿದರು.

ಅತಿಥಿ ಶಿಕ್ಷಕಿ ಧನಲಕ್ಷ್ಮೀ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.