Saturday, December 6, 2025
Google search engine
Home Blog Page 12

ದಬ್ಬೇಘಟ್ಟದಲ್ಲಿ ಅಕ್ಷರ ಹಬ್ಬಕ್ಕೆ ಸಿದ್ಧತೆ

ಅ.29ಕ್ಕೆ ದಬ್ಬೇಘಟ್ಟ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳ ಆಯೋಜನೆ

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಕಸಾಪ ಘಟಕದ ವತಿಯಿಂದ ಅ.29ರಂದು ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಮಣಿ ಶ್ರೀಕಂಠೇಗೌಡ ತಿಳಿಸಿದರು.
ಪಟ್ಟಣದ ಕನ್ನಡಭವನದಲ್ಲಿ ಸೋಮವಾರ ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷರ ಆಯ್ಕೆ ಹಾಗೂ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು
ತಾಲ್ಲೂಕು ಕಸಾಪ ಸಹಕಾರದೊಂದಿಗೆ ಈ ಬಾರಿ ದಬ್ಬೇಘಟ್ಟದಲ್ಲಿ ಹೋಬಳಿ ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. ಈ ಹಿಂದೆ ಹೊಡಿಕೇಘಟ್ಟದಲ್ಲಿ ಮೊದಲ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು. ತದ ನಂತರ ಯಾವುದೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಆದ್ದರಿಂದ ಈ ಬಾರಿ ಹೋಬಳಿಯ ಎಲ್ಲ ಜನರ ಸಹಕಾರ ಮತ್ತು ಕನ್ನಡ ಪರ ಸಂಘಟನೆ, ಕನ್ನಡ ಅಭಿಮಾನಿಗಳು, ಕಸಾಪ ಸದಸ್ಯರು ಸೇರಿ ನುಡಿಯ ಹಬ್ಬದ ರೀತಿಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ, ತಾಲ್ಲೂಕು ಸಾಹಿತ್ಯ ಸಮ್ಮೇಳನ ಮಾಡುವ ಮುನ್ನಾ ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡಲಾಗುತ್ತಿದೆ. ಮೊದಲು ದಬ್ಬೇಘಟ್ಟ ಹೋಬಳಿಯಿಂದ ಪ್ರಾರಂಭ ಮಾಡಲಾಗಿದೆ. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮುಖಂಡ ಸುಬ್ರಮಣಿಶ್ರೀಕಂಠೇಗೌಡ ಆಯ್ಕೆ ಮಾಡಲಾಗಿದೆ. ಸಮ್ಮೇಳನ ಸಂಚಾಲಕರನ್ನಾಗಿ ಮಾಜಿ ಶಾಸಕ ಎಚ್.ಬಿ.ನಂಜೇಗೌಡರು, ಸಹ ಸಂಚಾಲಕರಾಗಿ ಜಿ.ಪಂ.ಮಾಜಿ ಸದಸ್ಯ ಎ.ಬಿ.ಜಗದೀಶ್, ಅರೇಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಚಂದ್ರು, ಆಹಾರ ಸಮಿತಿ ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಗೌಡರನ್ನು ಆಯ್ಕೆ ಮಾಡಿದ್ದು ಸಮ್ಮೇಳನದ ಸಂಪೂರ್ಣ ದಾಸೋಹದ ವ್ಯವಸ್ಥೆಯನ್ನು ಅವರೇ ನಿರ್ವಹಿಸಲು ಒಪ್ಪಿದ್ದಾರೆ.
ಮೆರವಣಿಗೆಯ ಅಧ್ಯಕ್ಷರಾಗಿ ದಬ್ಬೇಘಟ್ಟ ರಮೇಶ್, ವೇದಿಕೆ ಸಮಿತಿ ಅಧ್ಯಕ್ಷರಾಗಿ ಭೈರವೇಗೌಡರು, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ತ್ಯಾಗರಾಜು, ಸಾಂಸೃತಿಕ ಸಮಿತಿ ಅಧ್ಯಕ್ಷರಾಗಿ ಒಕ್ಕಲಿಗರ ಸಂಘದ ನಿರ್ದೇಶಕಿ ಚೂಡಾಮಣಿ, ಸ್ಮರಣ ಸಂಚಿಕೆ ಅಧ್ಯಕ್ಷರಾಗಿ ಮಾವಿನಕೆರೆ ಚಂದ್ರಶೇಖರ್ ಆಯ್ಕೆ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಸಮ್ಮೇಳನ ಅಧ್ಯಕ್ಷ ಆಯ್ಕೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಕೆ.ಟಿ.ಸಂಪತ್, ಕೋಶಾಧ್ಯಕ್ಷ ರಾಮಕೃಷ್ಣೇಗೌಡ, ಹಿರಿಯ ಮುಖಂಡರಾದ ಟಿ.ಎಸ್.ಬೋರೇಗೌಡ, ಮಂಜಯ್ಯಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಚಂದ್ರು, ಮಾಜಿ ಅಧ್ಯಕ್ಷ ತ್ಯಾಗರಾಜು ಇತರರು ಇದ್ದರು.

ರಾಜ್ಯಪಾಲರ ನಡೆ: ತುರುವೇಕೆರೆಯಲ್ಲೂ ಕಿಡಿ

ತುರುವೇಕೆರೆ: ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ತಾಲ್ಲೂಕು ಬ್ಲಾಕ್ ಕಾಂಗ್ರೆಸ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ದ ಪ್ರಾಸಿಕ್ಯೂಷನ್ ಹೊರಡಿಸಿರುವುದನ್ನು ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದರು.


ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ, ಮೈಸೂರಿನ ಮೂಡ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರ ಏನೂ ಇರದಿದ್ದರೂ ಕೂಡ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರು ನಡೆ ಖಂಡನೀಯ ಮತ್ತು ಅವರು ಬಿಜೆಪಿಯ ಕೈಗೊಂಬೆಯಾಗಿ ವರ್ತಿಸುತ್ತಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ. ಕೂಡಲೇ ರಾಜ್ಯಪಾಲರ ಪ್ರಾಸಿಕ್ಯೂಷನ್ಅನ್ನು ವಜಾಗೊಳಿಸಬೇಕು ಎಂದರು.

ರಾಜ್ಯದ ರಾಜ್ಯಪಾಲರ ಈ ನೆಡೆಯಿಂದ ದೇಶದ ಇತಿಹಾಸದಲ್ಲಿಯೇ ರಾಜಭವನಕ್ಕೆ ಕಪ್ಪು ಚುಕ್ಕಿ ತರಲಾಗಿದೆ.


ಯಾರೋ ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡಿ ಪ್ರಾಸಿಕೂಷನ್ಗೆ ಅನುಮತಿ ನೀಡಿ ಎಂದು ಅರ್ಜಿ ಹಾಕಿದರೆ. ಕೂಡಲೇ ರಾಜ್ಯಪಾಲರು ನೀಡುವುದು ಎಷ್ಟು ಸರಿ. ಸಾಂವಿಧಾನಿಕ ಹುದ್ದೆಯಲ್ಲಿರುವರು ಸಂವಿಧಾನಬದ್ದವಾಗಿ ಕಾರ್ಯ ನಿರ್ವಹಿಸಬೇಕು.

ರಾಜ್ಯಪಾಲರು ಸಂವಿಧಾನದ ಕಗ್ಗೋಲೆ ಮಾಡಿದ್ದಾರೆ. ಬಿಜೆಪಿಯವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ರಾಜಭವನವನ್ನು ತಮ್ಮ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ.
ಬೆಜೆಪಿ, ಜೆಡಿಎಸ್ ಪಕ್ಷದ ಮುಖಂಡರ ಮೇಲೆ ಮತ್ತು ಮಾಜಿ ಮುಖ್ಯಮಂತ್ರಿಗಳ ಮೇಲೆ ಹಲವು ಭ್ರಷ್ಟಾಚಾರಗಳ ಕೇಸ್ಗಳಿದ್ದು ಲೋಕಾಯುಕ್ತರು ಪ್ರಾಸಿಕೂಷನ್ಗೆ ಅನುಮತಿ ನೀಡಿ ಎಂದು ಕೇಳಿದರೂ ರಾಜ್ಯಪಾಲರು ನೀಡುತ್ತಿಲ್ಲ. ಮುಖ್ಯ ಮಂತ್ರಿಗಳು ಯಾವುದೇ ತಪ್ಪು ಮಾಡದಿದ್ದರೂ ಈ ಪ್ರಕರಣದಲ್ಲಿ ಸಿಕ್ಕಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯಪಾಲರು ಸರಿಯಾಗಿ ಪರಿಶೀಲಿಸಿ ಅನುಮತಿ ಕೊಡಬೇಕಿತ್ತು. ಇಂದು ಸಾಂಕೇತಿಕವಾಗಿ ಪ್ರತಿಭಟನೆ ನೆಡೆಸಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಗೃಹ ಸಚಿವ ಪರಮೇಶ್ವರ್, ಕೆ.ಎನ್.ರಾಜಣ್ಣರ ನೇತೃತ್ವದಲ್ಲಿ ಬೃಹತ್ ಹೋರಾಟ ಮಾಡುತ್ತೇವೆ ಎಂದರು.
ಇದೇ ವೇಳೆ ತಹಶೀಲ್ದಾರ್ ಎನ್.ಎ.ಕುಂಇ ಅಹಮ್ಮದ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.


ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಳಾಲನಾಗರಾಜು, ಪ್ರಸನ್ನಕುಮಾರ್ ಮುಖಂಡರಾದ ಸುಬ್ರಮಣಿಶ್ರೀಕಂಠೇಗೌಡ, ನಂಜುಂಡಪ್ಪ, ಹನುಮಂತಯ್ಯ, ಗೋಣಿತುಮಕೂರು ಲಕ್ಷ್ಮೀಕಾಂತ್, ಗುರುದತ್, ಕೊಂಡಜ್ಜಿಕುಮಾರ್, ಕೆಂಪರಾಜು, ಉದಯಕುಮಾರ್, ತ್ರೈಲೋಕಿನಾಥ್, ದೇವರಾಜು, ಕಲ್ಕರೆರಾಘು, ಶಿವರಾಜು, ರೇವಣ್ಣ ಸೇರಿದಂತೆ ಕಾರ್ಯಕರ್ತರು ಇದ್ದರು.

ಮೌಲ್ಯಯುತ ಶಿಕ್ಷಣ  ನಮ್ಮ ಶಿಕ್ಷಣ ಸಂಸ್ಥೆಯ ಗುರಿ:ನಾಡೋಜ ಡಾ.ವೂಡೇ ಪಿ ಕೃಷ್ಣ 

ತುಮಕೂರು: ಧರ್ಮಸ್ಥಳದಡಾ ವಿರೇಂದ್ರ ಹೆಗಡೆ, ಪ್ರಕಾಶ್ ಪಡುಕೋಣೆ, ಗೌತಮಾನಂದ ಜೀ, ಇಂತಹ ಮಹನೀಯರೆಲ್ಲ ನಮ್ಮ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಮೌಲ್ಯಯುತ ಶಿಕ್ಷಣ ನೀಡುವುದೇ ಶೇಷಾದ್ರಿ ಪುರಂ ಶಿಕ್ಷಣ ಸಂಸ್ಥೆಗಳ ಗುರಿ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಹೇಳಿದರು.

ಇಲ್ಲಿನ ಶೇಷಾದ್ರಿಪುರಂ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಎಸ್ ಎಸ್ ಎಲ್ ಸಿ ಯಲ್ಲಿ ಶೇ 9೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಪಿಯುಸಿಗೆ ದಾಖಲಾಗಿದ್ದ ಕಾಲೇಜಿನ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

ನಮ್ಮ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ವಿಶ್ವದ ಅನೇಕ ದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆ ಉತ್ತಮ ಶಿಕ್ಷಣ, ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬಂದಿದೆ ಎಂದರು.

ಜ್ಞಾನಾರ್ಜನೆ ನಿಮ್ಮ ಗುರಿಯಾಗಬೇಕು.
ಸಮಯದ ಮಹತ್ವವನ್ನು ಅರಿಯಬೇಕು.
ನಮ್ಮ ಶಿಸ್ತು ಬದ್ದ ಜೀವನ ನಮ್ಮ ಜೀವನವನ್ನು ಶಿಸ್ತಾಗಿ ರೂಪಿಸುತ್ತದೆ. ತಂದೆ,ತಾಯಿ, ಶಿಕ್ಷಕರನ್ನು ಗೌರವಿಸಿ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ.ಗೀತಾ ರಾಮಾನುಜಮ್ ಅವರು ಮಾತನಾಡಿ,

“ನಾನಿಲ್ಲಿ ಬಂದಿರುವುದು ಯುವ ಮನಸ್ಸುಗಳ ಭೇಟಿಯಾಗಲು” ಎಂದರು.


ಶೇಷಾದ್ರಿಪುರಂ ಶಿಕ್ಷಣ ದತ್ತಿಯಿಂದ ವೈದ್ಯಕೀಯ ಕಾಲೇಜನ್ನು ತೆರೆಯಯುವಂತೆ ಸಲಹೆ ನೀಡಿದರು.

ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು ವೈಯಕ್ತಿಕ ನಿರ್ವಹಣೆ, ಸಮಯ ನಿರ್ವಹಣೆ, ಸ್ನೇಹಿತರು, ನಿಮ್ಮ ವರ್ತನೆ. ನಿಮ್ಮನ್ನು ನೀವು ಅರಿಯುವುದು ಮುಖ್ಯ ಎಂದರು.

ಯಾವುದರಲ್ಲಿ ನಮಗೆ ಶಕ್ತಿ ಇದೆಯೊ ಆಸಕ್ತಿ ಇದೆಯೊ ಆ ದಿಕ್ಕಿನಲ್ಲಿ ನಮ್ಮನ್ನು ನಾವು ನಿರಂತರವಾಗಿ ತೊಡಗಿಸಿಕೊಳ್ಳಬೇಕು. ನೀವು ನೀವಾಗೆ ಇರಿ. ಬೇರೆಯವರನ್ನು ಅನುಸರಿಸಬೇಡಿ. ಸದಾ ನಿಮ್ಮ ಗುರಿಯಕಡೆಗೆ ಸಾಗಿರಿ ಎಂದು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರು.

ಸಮಯ ನಿರ್ವಹಣೆಯ ಕಲೆ ಯಶಸ್ಸಿನ ಮೂಲ ಮೆಟ್ಟಿಲು ,ನಿಮ್ಮೊಳಗೆ ಅಡಗಿರುವ ಜ್ಞಾನ, ಶಕ್ತಿಯನ್ನು ನೀವೇ ಹೊರತೆಗೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  ಶಿಕ್ಚಣದತ್ತಿಯ ಉಪಾಧ್ಯಕ್ಷರಾದ  ಹೆಂಜಾರಪ್ಪ .ಟಿ .ಎಸ್,  ಗೌರವ ಸಹಾಯಕ ಕಾರ್ಯದರ್ಶಿಗಳಾದ  ಎಂ ಎಸ್ ನಟರಾಜು, ಟ್ರಸ್ಟಿಗಳಾದ ಕೆ. ಕೃಷ್ಣಸ್ವಾಮಿ, ಶೇಷಾದ್ರಿಪುರಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ಜಿ ಟಿ, ಪ್ರಾಂಶುಪಾಲರಾದ ಬಸವರಾಜು ಬಿ ವಿ ಅವರು ಉಪಸ್ಥಿತರಿದ್ದರು.

ಅಯ್ಯೋ; ಮತ್ತೊಬ್ಬ ತುಂಬುಗರ್ಭಿಣಿ ಸಾವು

ಸಕಾಲಕ್ಕೆ ಸ್ಪಂದಿಸದ 108 ; ಆರೋಪ- ಪ್ರತ್ಯಾರೋಪ

ಚಿಕ್ಕನಾಯಕನಹಳ್ಳಿ : ಜಿಲ್ಲೆಯಲ್ಲಿ ಗರ್ಭಿಣಿಯರ ಸಾವು ನಿಂತಂತೆ ಕಾಣುತ್ತಿಲ್ಲ.

ಚಿಕ್ಕನಾಯಕನಹಳ್ಳಿ-ಗುಬ್ಬಿ ತಾಲ್ಲೂಕುಗಳ ಗಡಿ ಪ್ರದೇಶವಾದ ಗುಡ್ಡದ’ಓಬಳಾಪುರ-ಗುಡ್ಡದಟ್ಟಿಯಲ್ಲಿ ಸುಮಾರು 30 ವರ್ಷ ವಯಸ್ಸಿನ ತುಂಬುಗರ್ಭಿಣಿ ಶಾರದಮ್ಮ ಎಂಬುವವರು ಶುಕ್ರವಾರ ಅಚಾನಕ್ಕಾಗಿ ತಲೆಸುತ್ತು ಬಂದು ಮನೆಯಲ್ಲೇ ಕುಸಿದುಬಿದ್ದಿದ್ದಾರೆ. ತಕ್ಷಣವೇ ಕುಟುಂಬಸ್ಥರು 108 ಆ್ಯಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ.

ಸಕಾಲಕ್ಕೆ ಸ್ಪಂದಿಸದೆ ಕಾಲ ವಿಳಂಬ ಮಾಡಿದ 108 ಆ್ಯಂಬ್ಯುಲೆನ್ಸ್ ಸೇವೆಯಿಂದ ಬೇಸತ್ತು, ಕುಟುಂಬದವರೇ ಹುಳಿಯಾರಿನಿಂದ ಖಾಸಗಿ ಆ್ಯಂಬ್ಯುಲೆನ್ಸ್’ನ್ನು ಕರೆಸಿಕೊಂಡು, ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಗರ್ಭಿಣಿ ಶಾರದಮ್ಮನವರ ಪರೀಕ್ಷೆ ನಡೆಸಿ ಶಾರದಮ್ಮ ಹಾಗೂ ಆಕೆಯ ಗರ್ಭದಲ್ಲಿದ್ದ ಶಿಶು ಮರಣ ಹೊಂದಿರುವ ಬಗ್ಗೆ ದೃಢಪಡಿಸಲಾಗಿದೆ.

ಶಾರದಮ್ಮನವರಿಗೆ ಈಗಾಗಲೇ ಎರಡೂವರೆ ವರ್ಷದ ಎಳೆಯ ಹೆಣ್ಣು ಮಗುವಿದೆ. ಎರಡನೆಯ ಮಗುವಿಗೆ ಅವರು ಜನ್ಮ ನೀಡುವವರಿದ್ದರು. ಅವರು ಎರಡೂವರೆ ವರ್ಷದ ತಮ್ಮ ಮಗು ಮತ್ತು ಪತಿಯನ್ನು ಅಗಲಿದ್ದಾರೆ.

ಶಾರದಮ್ಮನ ತವರುಮನೆ ಗುಬ್ಬಿ ತಾಲ್ಲೂಕಿನ ಗುಡ್ಡದ ಓಬಳಾಪುರದ ಗುಡ್ಡದಟ್ಟಿ ಆಗಿತ್ತು. ಅವರು ಕಳೆದ ಎರಡು ತಿಂಗಳಿನಿಂದ ಅಲ್ಲಿ ತಂಗಿದ್ದರು. ಅದು ಚಿಕ್ಕನಾಯಕನಹಳ್ಳಿ-ಗುಬ್ಬಿ ತಾಲ್ಲೂಕಿನ ನಡುವಿನ ಸರಹದ್ದಿನಲ್ಲಿರುವ ಗಡಿ ಗ್ರಾಮ.

ಚಿಕ್ಕನಾಯಕನಹಳ್ಳಿ ಗಡಿ ಪ್ರದೇಶದ ಗುಬ್ಬಿ ತಾಲ್ಲೂಕಿನಲ್ಲಿ ತವರು ಮನೆ ಹೊಂದಿದ್ದ ಶಾರದಮ್ಮನವರ ಗಂಡನ ಮನೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ‌ಆಶ್ರಿಹಾಲ್ ಬಳಿಯ ಹೊಸಟ್ಟಿ-ದೊಡ್ಡೀಹಟ್ಟಿ. ಗರ್ಭಿಣಿಯಾಗಿದ್ದ ಆಕೆ ಚಿಕ್ಕನಾಯಕನಹಳ್ಳಿಯ ಆಸ್ಪತ್ರೆ ಹಾಗೂ ಕೆಲವೊಮ್ಮೆ ಗುಬ್ಬಿಯ ಆಸ್ಪತ್ರೆ ಎರಡೂ ಕಡೆ ನಿಯಮಿತವಾದ ಚಿಕಿತ್ಸೆ ಮತ್ತು ಶುಶ್ರೂಷೆ ಪಡೆಯುತ್ತಿದ್ದರಂತೆ. ಮೂರು ದಿನಗಳ ಹಿಂದಷ್ಟೇ ಗುಬ್ಬಿಯ ಖಾಸಗಿ ಆಸ್ಪತ್ರೆಗೂ ಹೋಗಿ ಪರೀಕ್ಷೆ ಮಾಡಿಸಿ, ಹೆರಿಗೆಗಾಗಿ ಎರಡು ದಿನಗಳ ನಂತರದ ದಿನ ಗುರುತು ಮಾಡಿಸಿಕೊಂಡು ಬಂದಿದ್ದರಂತೆ. ಶಾರದಮ್ಮ ಬದುಕಿದ್ದಿದ್ದರೆ ಇಷ್ಟೊತ್ತಿಗೆ ಅವರ ಹೆರಿಗೆಯಾಗಿರುತ್ತಿತ್ತು. ನವಜಾತವೊಂದು ಜೀವ ಜಗತ್ತಿಗೆ ಬಂದಿರುತ್ತಿತ್ತು.

ಶುಕ್ರವಾರ ತೀರಿಹೋದ ಶಾರದಮ್ಮನವರ ಅಂತ್ಯಕ್ರಿಯೆಯನ್ನು ಶನಿವಾರ ನಡೆಸಲಾಯ್ತು.

ಪಬ್ಲಿಕ್ ಸ್ಟೋರಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕೇಂದ್ರದಿಂದ ಹಿಡಿದು ತಹಸೀಲ್ದಾರ್’ರವರುಗಳವರೆಗೂ ಶಾರದಮ್ಮನವರ ಸಾವಿನ ಕಾರಣಗಳನ್ನು ವಿಚಾರಿಸಿದ ನಂತರ, ಎರಡೂ ತಾಲ್ಲೂಕಿನ ಸಿಡಿಪಿಒಗಳು, ಡಿಸಿಪಿಒ ಹಾಗೂ ತಾಲ್ಲೂಕು ಮಟ್ಟದ ಇನ್ನಿತರೆ ಅಧಿಕಾರಿಗಳು ಶಾರದಮ್ಮನವರ ಮನೆಗೆ ಭೇಟಿ ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇಲ್ಲವಾದಲ್ಲಿ ಈ ಪ್ರಕರಣ ಹಾಗೇ ಮುಚ್ಚಿಹೋಗುತ್ತಿತ್ತೋ ಏನೋ….


ವಿಳಾಸ ಹಾಗೂ ಮಾಹಿತಿ ಗೊಂದಲ

ಪ್ರಕರಣ ಕುರಿತು ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಯಶ್ವಂತ್,
ಶಾರದಮ್ಮನವರು ಗುಡ್ಡದಟ್ಟಿಯ ತಮ್ಮ ತವರು ಮನೆಯಲ್ಲಿ ಸುಮಾರು 12.30ರ ವೇಳೆಗೆ ತಲೆಸುತ್ತು ಎಂದು ಅಸ್ವಸ್ಥಗೊಂಡು ಕುಸಿದುಬಿದ್ದರು. ತಕ್ಷಣವೇ ಕುಟುಂಬದವರು 108 ಆ್ಯಂಬ್ಯುಲೆನ್ಸ್’ಗೆ ಕರೆ ಮಾಡಿದ್ದಾರೆ. ಗಾಬರಿ ಮತ್ತು ಅವಸರದಲ್ಲಿ ಊರು, ಹೋಬಳಿ, ತಾಲ್ಲೂಕು ಮತ್ತು ಮನೆಯ ವಿಳಾಸವನ್ನು ಕುಟುಂಬದವರು ಸರಿಯಾಗಿ ನೀಡಿರಲಿಲ್ಲ. ಹಾಗಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಬಳಿಯಿರುವ ಗುಡ್ಡದಟ್ಟಿ ಎಂಬ ಊರಿರಬಹುದು ಎಂದು ಊಹಿಸಿದ 108 ಆ್ಯಂಬ್ಯುಲೆನ್ಸ್’ನವರು ನೇರ ಅಲ್ಲಿಗೆ ಹೋಗಿದ್ದಾರೆ. ಹೋಗುವಾಗ ಶಾರದಮ್ಮನ ಕುಟುಂಬಸ್ಥರ ಮೊಬೈಲ್ ಸಂಖ್ಯೆಗೆ ಆ್ಯಂಬ್ಯುಲೆನ್ಸ್ ನವರು ಹಲವು ಬಾರಿ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ ಆ ಸಂಖ್ಯೆ ನೆಟವರ್ಕ್ ಸಮಸ್ಯೆಯಿಂದ ಕನೆಕ್ಟ್ ಆಗಲಿಲ್ಲ.

ವಿಳಾಸ ಮತ್ತು ಮಾಹಿತಿ ಗೊಂದಲದಿಂದಾಗಿ ಕುಪ್ಪೂರಿಗೆ ತೆರಳಿದ್ದ ಆ್ಯಂಬ್ಯುಲೆನ್ಸ್ ಮತ್ತೆ ಮರಳಿ ಬಂದು ಗುಬ್ಬಿ ತಾಲ್ಲೂಕಿನ ಗುಡ್ಡದಟ್ಟಿಗೆ ಹೋಗುವಷ್ಟರಲ್ಲಿ ತೀರಾ ತಡವಾಗಿದೆ. ತದ್ವಿರುದ್ಧ ದಿಕ್ಕುಗಳಲ್ಲಿರುವ ಇಪ್ಪತ್ತು ಇಪ್ಪತ್ತು ಕಿ.ಮೀ.ಗಳ ಅಂತರದಲ್ಲಿರುವ ಎರಡು ಊರುಗಳಿಗೆ ಆಗಮನ ಮತ್ತು ನಿರ್ಗಮನದ ಪ್ರಯಾಣ ಮಾಡುವಷ್ಟರಲ್ಲಿ ಗಂಟೆಗಳ ಕಾಲ ಸಮಯ ದುಂದು ವ್ಯಯವಾಗಿದೆ. ಗಾಬರಿಯಲ್ಲಿದ್ದ ಕುಟುಂಬಸ್ಥರು ಸರಿಯಾದ ಮಾಹಿತಿ ಮತ್ತು ವಿಳಾಸ ನೀಡದಿದ್ದುದೇ ಇದಕ್ಕೆ ಪ್ರಮುಖ ಕಾರಣ ಎಂದು ಅವರು ತಿಳಿಸಿದರು.

ಬಾಕ್ಸ್ ಐಟಮ್ ::
ಸರಹದ್ದಿನಲ್ಲಿರುವ ಗಡಿ ಗ್ರಾಮಗಳ ಜನರ ಆರೋಗ್ಯ ಸುರಕ್ಷೆಯ ಕತೆ…!?

ಸರ್ಕಾರಿ ಸೇವೆ ಒದಗಿಸುವಾಗ ಅದು ಯಾರ ವ್ಯಾಪ್ತಿಗೆ ಸೇರಿದ್ದು ಎಂಬುದರ ಬಗ್ಗೆ ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ತಾಲ್ಲೂಕಿನ ಸರ್ಕಾರಿ ಅಧಿಕಾರಿಗಳ ನಡುವೆ ಒಂದು ರೀತಿಯ ಹಗ್ಗ-ಜಗ್ಗಾಟ ನಡೆಯುತ್ತಿರುತ್ತದೆ ಎಂಬುದು ಮೇಲ್ನೋಟಕ್ಕೇ ಕಂಡುಬಂತು.

ಈ ಪ್ರಕರಣದಲ್ಲೂ ಬಹುತೇಕ ಅದೇ ಆಗಿದೆ. 108 ಆ್ಯಂಬ್ಯುಲೆನ್ಸ್ ಸೇವೆಯ ಕುರಿತಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ ಅದು ನಮ್ಮ ವ್ಯಾಪ್ತಿಗೆ ಸೇರುವುದಿಲ್ಲ ಎಂಬ ಸಿದ್ಧ ಉತ್ತರ ಬರುತ್ತದೆ.

ಮತ್ತು 108 ಆ್ಯಂಬ್ಯುಲೆನ್ಸ್ ಸೇವೆಯ ಕುರಿತಾದ ಯಾವ ಅಧಿಕಾರವೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಕೈಯ್ಯಲ್ಲಿಲ್ಲ. ಅದು ಜಿಲ್ಲಾಮಟ್ಟದ ಅಥವಾ ರಾಜ್ಯಮಟ್ಟದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಿ ಅಧಿಕಾರಿಗಳು ಜಾರಿಕೊಳ್ಳುತ್ತಾರೆ. ಮತ್ತೆ, ತಾಲ್ಲೂಕು ‌ಗುಬ್ಬಿ ಆಗಿರುವುದರಿಂದ ಅಲ್ಲಿನ 108 ಆ್ಯಂಬ್ಯುಲೆನ್ಸ್ ಸ್ಪಂದಿಸಬೇಕು ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಧಿಕಾರಿಗಳು ಬಯಸಿದರೆ, ಹತ್ತಿರದ ತಾಲ್ಲೂಕು ಪಟ್ಟಣ ಚಿಕ್ಕನಾಯಕನಹಳ್ಳಿಯೇ ಆಗಿರುವುದರಿಂದ ಅಲ್ಲಿನ 108 ಆ್ಯಂಬ್ಯುಲೆನ್ಸ್ ಬಂದು ಸೇವೆ ಒದಗಿಸಲಿ ಎಂದು ಗುಬ್ಬಿ ತಾಲ್ಲೂಕಿನ ಅಧಿಕಾರಿಗಳು ಬಯಸಿದಂತಿದೆ. ಇಡೀ ರಾಜ್ಯದಲ್ಲಿರುವ ತಾಲ್ಲೂಕು ತಾಲ್ಲೂಕುಗಳ ಸರಹದ್ದಿನ ಗಡಿ ಗ್ರಾಮಗಳ ಜನರ ಆರೋಗ್ಯ ಸುರಕ್ಷೆಯ ಬಗ್ಗೆ ಅಧಿಕಾರಿಗಳು ಹೀಗೆ ಹಗ್ಗ-ಜಗ್ಗಾಟದ ಆಟ ಆಡುತ್ತಿದ್ದರೆ, ಆ ಜನರ ಪ್ರಾಣದ ಹೊಣೆ ಯಾರದು….!?

ಇಂತಹ ಹಗ್ಗ-ಜಗ್ಗಾಟಗಳ ನಡುವೆ ಎಲ್ಲರ ಎದುರೇ ಒಬ್ಬ ತುಂಬುಗರ್ಭಿಣಿ, ಜಗತ್ತಿಗೇ ಬಾರದ ತನ್ನ ಶಿಶುವಿನೊಂದಿಗೆ ಇಹಲೋಕ ತ್ಯಜಿಸಿ ತೀರಿಹೋಗಿದ್ದಾರೆ. ಇದು ನಾಗರಿಕ ಲೋಕಕ್ಕೆ ನಾಚಿಕೆಯಾಗಬೇಕಾದ ಘಟನೆ ಅಲ್ಲವೇ?.


_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಚಿ.ನಾ‌.ಹಳ್ಳಿ: ಭೀಕರ ಮಳೆ ; ಉರುಳಿಬಿದ್ದ ವಿದ್ಯುತ್ ಕಂಬಗಳು

0

ಚಿಕ್ಕನಾಯಕನಹಳ್ಳಿ : ಶನಿವಾರ ರಾತ್ರಿ ಸುರಿದ ಭೀಕರ ಮಳೆಗೆ ತಾಲ್ಲೂಕಿನ ಹಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಲವು ಕಡೆ ಮರಗಳು ಉರುಳಿ ವಿದ್ಯುತ್ ಲೈನ್’ನ ಮೇಲೆ ಬಿದ್ದಿರುವ ಕಾರಣ ಕಂಬಗಳು ಮುರಿದು ಬಿದ್ದಿವೆ. ಹಲವೆಡೆ ವಿದ್ಯುತ್ ಪರಿವರ್ತಕಗಳಿಗೂ ಹಾನಿಯಾಗಿದೆ ಎಂದು ಬೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಇಂಜಿನಿಯರ್ ಎನ್ ಬಿ ಗವಿರಂಗಯ್ಯ ತಿಳಿಸಿದ್ದಾರೆ.

ಶನಿವಾರ ರಾತ್ರಿ 8.00 ಗಂಟೆ ಸುಮಾರಿಗೆ ತಾಲ್ಲೂಕಿನ ಹಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗತೊಡಗಿತು. ಕಡೆಗೆ ರಾತ್ರಿಯಿಂದಲೇ ವ್ಯತ್ಯಯವನ್ನು ಸರಿಪಡಿಸುವ ಕೆಲಸ ಪ್ರಾರಂಭಿಸಲಾಯಿತಾದರೂ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಿಂದ ಕೆಲಸಕ್ಕೆ ತೊಡಕಾಯಿತು. ಭಾನುವಾರ ಬೆಳಗ್ಗಿನಿಂದ ಮುರಿದು ಬಿದ್ದಿರುವ ಕಂಬಗಳನ್ನು ಹುಡುಕಿ ಅವನ್ನು ಬದಲಿಸಿ ಮತ್ತೆ ವಿದ್ಯುತ್ ಪ್ರಸರಣ ಸಂಪರ್ಕಕ್ಕೆ ಅವನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಬಹುತೇಕ ಭಾನುವಾರ ಸಂಜೆಯ ಹೊತ್ತಿಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ವಿದ್ಯುತ್ ಸೌಕರ್ಯ ಎಂದಿನಂತೆ ಸುಸ್ಥಿತಿಗೆ ಮರಳಲಿದೆ ಎಂದರು.

ಗವಿರಂಗಯ್ಯ

ತಾಲ್ಲೂಕಿನ ತಿಮ್ಮನಹಳ್ಳಿ, ಶೆಟ್ಟಿಕೆರೆ, ಹುಳಿಯಾರು, ಚಿ ನಾ ಹಳ್ಳಿ ಹಾಗೂ ಇತರೆಡೆಗಳಲ್ಲಿ ಬಿದ್ದಿರುವ ಕಂಬಗಳನ್ನು ಅಂದಾಜು ಲೆಕ್ಕ ಹಾಕಿದರೆ 70 ರಿಂದ 80 ಕಂಬಗಳು ಎಂಬ ಮಾಹಿತಿಯಿದೆ. ಮಳೆ ಹಾನಿಯಿಂದ ಆಗಿರುವ ವಿದ್ಯುತ್ ಕಂಬಗಳ ನಷ್ಟ ಪ್ರಮಾಣದ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಸದ್ಯಕ್ಕೆ ಇಲಾಖೆಯ ಮೊದಲ ಆದ್ಯತೆ ಸಾರ್ವಜನಿಕರಿಗೆ ಅನಿರ್ಬಂಧಿತ ವಿದ್ಯುತ್ ಪ್ರಸರಣಕ್ಕೆ ಅನುವು ಮಾಡಿಕೊಡುವ ಕೆಲಸವಾಗಿದೆ ಎಂದರು.

ಬಿದ್ದಿರುವ, ಹಾನಿಯಾಗಿರುವ ಪ್ರತಿಯೊಂದು ಕಂಬದ ಬಳಿ ಇಲಾಖೆಯ ಪ್ರತಿನಿಧಿ ಕಡೆಯಿಂದ ತೆಗೆಯಲಾಗಿರುವ ಜಿಪಿಎಸ್ ಫೋಟೋ ಮಾಹಿತಿಯನ್ನು ಪಬ್ಲಿಕ್ ಸ್ಟೋರಿ ಎಇಇ ಗವಿರಂಗಯ್ಯನವರಲ್ಲಿ ಕೇಳಿತು. ಅವರ ಬಳಿ ಆ ತರಹದ ಮಾಹಿತಿ ಲಭ್ಯವಿರಲಿಲ್ಲ. ಬಹುಶಃ ಸೋಮವಾರದವರೆಗೆ ಅದರ ಸವಿವರ ನೀಡಲಾಗುವುದು ಎಂದರು.


_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ಗಡಿ ಕಾಯುವ ವೀರಯೋಧರಿಗೆ ಸ್ವಾತಂತ್ರ್ಯ ದಿನ ಅರ್ಪಣೆ : ಶಾಸಕ ಸಿ ಬಿ ಎಸ್

0

ಚಿಕ್ಕನಾಯಕನಹಳ್ಳಿ : ಗುರುವಾರ (ಆಗಸ್ಟ್ 15) ಬೆಳಗ್ಗೆ ತಾಲ್ಲೂಕು ಕ್ರೀಡಾಂಗಣದಲ್ಲಿ ಜರುಗಿದ 78’ನೇ ಸ್ವಾತಂತ್ರ್ಯ ‌ದಿನಾಚರಣೆಯ ಅಂಗವಾಗಿ ತಹಸೀಲ್ದಾರ್ ಕೆ ಪುರಂದರ್ ಧ್ವಜಾರೋಹಣ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ ಬಿ ಸುರೇಶ್ ಬಾಬು’ರವರು ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ, ತಾವು ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ಗಡಿ ಕಾಯುವ ವೀರಯೋಧರನ್ನು ಸ್ಮರಿಸುತ್ತಾ ಆಚರಿಸಿಕೊಳ್ಳಬೇಕಾಗಿ ನಾಡಿಗೆ ಕರೆ ಕೊಟ್ಟರು. ಛಳಿ ಮಳೆ ಗಾಳಿ ಬಿಸಿಲು ಬೇಗೆ ಎಲ್ಲವನ್ನೂ ಸಹಿಸಿಕೊಂಡು, ತಮ್ಮ ಕುಟುಂಬಗಳಿಂದ ಬಹುದೂರವಿದ್ದು, ದೇಶದ ಹಿತ ಮತ್ತು ಭದ್ರತೆಗಾಗಿ ಗಡಿ ಕಾಯುತ್ತಿರುವ ಯೋಧರೇ ನಮ್ಮ ನಿಜವಾದ ನಾಯಕರಾಗಬೇಕು. ಅರೆಕ್ಷಣವೂ ಹಿಂದೆಮುಂದೆ ಯೋಚಿಸದೆ ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ನೀಡುವ ನಮ್ಮ ಯೋಧರ ಋಣ ನಮ್ಮ ಮೇಲಿದೆ ಎಂದು ಅವರು ನುಡಿದರು.

ಅದೇ ರೀತಿ ಪುರುಷನ ಹೆಗಲಿಗೆ ಹೆಗಲು ಕೊಟ್ಟು ಸರಿಸಮನಾಗಿ ದೇಶದ ಅಭಿವೃದ್ಧಿಯಲ್ಲಿ ದುಡಿಯುತ್ತಿರುವ ಮಹಿಳೆಯೂ ನಮಗೆ ಮುಖ್ಯ ಆದರ್ಶವಾಗಬೇಕು. ಈ ಆಧುನಿಕ ಭಾರತದಲ್ಲಿ ನಮ್ಮ ಮಹಿಳೆಯರು ಪುರುಷರ ಸರಿಸಾಟಿಯಾಗಿ ಎಲ್ಲ ರಂಗಗಳಲ್ಲೂ ಯಶಸ್ಸು ಸಾಧಿಸುತ್ತಿರುವುದು ಗಮನಾರ್ಹವಾದ ವಿಷಯ. ಇದು ನಾವು ಕಳೆದ 78 ವರ್ಷಗಳಲ್ಲಿ ಸಾಧಿಸಿರುವ ಬಹಳ ದೊಡ್ಡ ಯಶಸ್ಸೂ ಹೌದು ಎನ್ನುತ್ತಾ ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಬಾಕ್ಸ್ ಐಟಮ್ :
ನಾಡು ನುಡಿ ನೆಲ ಜಲದ ಬಗ್ಗೆ ಅಭಿಮಾನ ಮೂಡಲಿ : ತಹಸೀಲ್ದಾರ್ ಪುರಂದರ್

ಶರಣ ತತ್ವ, ಸೂಫಿ ಪಥ, ತತ್ವಪದ, ಕೀರ್ತನಕಾರ, ಭಕ್ತಿ, ದಾಸ, ಪರಂಪರೆ, ಗುರುಕಾರ್ಯ, ಗುರದೀಕ್ಷೆಗಳ ಸಂಪ್ರದಾಯ-ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ನಾಡು ನಮ್ಮದು. ಎಲ್ಲರೊಳಗೂ ತಾತಯ್ಯ ಎಂದೆನ್ನುವ ಬಹುತ್ವದ ನಾಡು ಇದು. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ಸಮಾನತೆ, ಸಾಮಾಜಿಕ ನ್ಯಾಯದ ಸ್ವಾವಲಂಬಿ ಭಾರತ ನಮ್ಮದು. ಇಂತಹ ನಮ್ಮ ಭಾರತ ಇಂದು ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ, ವೈಚಾರಿಕವಾಗಿ, ಔದ್ಯೋಗಿಕವಾಗಿ, ತಂತ್ರಜ್ಞಾನ ಸುಧಾರಿತ ಕ್ಷೇತ್ರವಾಗಿ ಕ್ಷಣಕ್ಷಣಕ್ಕೂ ಬೆಳೆಯುತ್ತಿದೆ, ಬದಲಾಗುತ್ತಿದೆ. ಈ ಹಿಂದೆ ನಮ್ಮ ದೇಶ ದಾಸ್ಯದಲ್ಲಿತ್ತು. ಪರಕೀಯರ ಆ ದಾಸ್ಯದಿಂದ ಬಿಡುಗಡೆಯಾಗಿ 78 ವರ್ಷಗಳೇ ಕಳೆದಿವೆ. ನಮ್ಮ ಅಭಿಮಾನ, ಸ್ವಾಭಿಮಾನ ಎಂದೆಂದೂ ಕುಂದದು. ಹೊಸ ತಲೆಮಾರಿನ ನಮ್ಮೀ ಯುವ ಪೀಳಿಗೆಯಲ್ಲೂ ನಾಡು ನುಡಿ ನೆಲ ಜಲದ ಬಗ್ಗೆ ಆ ಅಭಿಮಾನ-ಸ್ವಾಭಿಮಾನ ಎಂದೆಂದೂ ಚಿರಾಯುವಾಗಿರಲಿ ಎಂದು ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದ ಮೂಲಕ ತಹಸೀಲ್ದಾರ್ ಕೆ ಪುರಂದರ್ ಜನತೆಗೆ ಸಂದೇಶ ನೀಡಿದರು.

ವಿಐಎಸ್ ಶಾಲೆಯ ಮಕ್ಕಳು ವಂದೇ ಮಾತರಂ, ಸಾರೇ ಜಹಾಂ ಸೆ ಅಚ್ಛಾ, ಝಂಡಾ ಊಂಚಾ ರಹೇ ಹಮಾರಾ ತರಹದ ರಾಷ್ಟ್ರಪ್ರೇಮದ ಗೀತೆಗಳನ್ನು ಹಾಡಿದರು.

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ, ತಾಲ್ಲೂಕಿನ ವಿವಿಧ ಇಲಾಖೆಗಳ ಎಲ್ಲ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಶಾಲಾ-ಕಾಲೇಜು ಮಕ್ಕಳು, ಶಿಕ್ಷಕರು, ಉಪನ್ಯಾಸಕರು, ಹಿರಿಯರು, ಪುರಪ್ರಮುಖರು, ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ಮಾಧ್ಯಮದವರು ಪಾಲ್ಗೊಂಡಿದ್ದರು.

__ಸಂಚಲನ
ಚಿಕ್ಕನಾಯಕನ ಸೀಮೆಯಿಂದ

ನೆನೆ ನೆನೆ ಸ್ವಾತಂತ್ರ್ಯ: ಡಾ. ರಮೇಶ್

ತುಮಕೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು ಎಂಬುದನ್ನು ಯಾರೂ ಮರೆಯಬಾರದು ಎಂದು ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ರಮೇಶ್ ಹೇಳಿದರು.

ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಅವರು ಮಾತನಾಡಿದರು. ಕಾಲೇಜಿನ ಎನ್ ಎಸ್ ಎಸ್ ಘಟಕ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ತ್ಯಾಗ, ಬಲಿದಾನಗಳಿಂದ ಬಂದಿರುವ ಸ್ವಾತಂತ್ರ್ಯ ದ ಮಹತ್ವವನ್ನು ಎಲ್ಲರೂ ಅರಿಯಬೇಕು. ದೇಶದ ಅಭಿವೃದ್ಧಿ, ವ್ಯಕ್ಯಿ ಸ್ವಾತಂತ್ರ್ಯ ದ ಬಗ್ಗೆ ಕಿಂಚಿತ್ತು ರಾಜೀಯಾಗಬಾರದು ಎಂದು ತಿಳಿಸಿದರು.

ಸ್ವಾತಂತ್ರ್ಯ ಕ್ಕಾಗಿ ನಡೆದ ಹೋರಾಟದಲ್ಲಿ ತುಮಕೂರಿನ ಕೊಡುಗೆಯ ಗುಣಗಾನ ಮಾಡಿದರು.

ಎನ್ ಎಸ್ ಎಸ್ ಸಂಯೋಜನಾಧಿಕಾರಿ, ಪ್ರೊ.ಮಮತಾ, ಪ್ರೊ. ಸಿ.ಕೆ.ಮಹೇಂದ್ರ, ಪ್ರೊ. ಗೌರಿಶಂಕರ್, ಪ್ರೊ. ತಬಸ್ಸಮ್, ಪ್ರೊ. ಶ್ವೇತಾ, ಪ್ರೊ.‌ಕಾಶಿಫ್, ಕಾಲೇಜಿನ ಅಧೀಕ್ಷಕರಾದ ಜಗದೀಶ್ ಇತರರು ಇದ್ದರು.

ಚಿ.ನಾ.ಹಳ್ಳಿ: ಇಲ್ಲಿ ಸಿಗಲಿವೆ ಅಗ್ಗದ ಬೆಲೆಗೆ ಔಷಧಿ, ಮಾತ್ರೆ

0

ಚಿಕ್ಕನಾಯಕನಹಳ್ಳಿ : ಸೋಮವಾರದಂದು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹತ್ತಿರ ಪ್ರಾರಂಭಿಸಲಾಗಿರುವ ಜನೌಷಧಿ ಕೇಂದ್ರದ ಉದ್ಘಾಟನೆಯನ್ನು ದೊಡ್ಡಗುಣಿ ಹಿರೇಮಠದ ಶ್ರೀಶ್ರೀಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಮತ್ತು ಮಾಜಿ ಸಚಿವರೂ ಆದ ಜೆ ಸಿ ಮಾಧುಸ್ವಾಮಿಯವರು ಉಪಸ್ಥಿತರಿದ್ದರು.

ಉದ್ಘಾಟನೆಯ ನಂತರ, ಜನೌಷಧಿ ಕೇಂದ್ರ ಪ್ರಾರಂಭಿಸಿರುವ ಯುವ ವರ್ತಕ ಚಂದನ್ ದೊಡ್ಡಗುಣಿ’ಯವರನ್ನು ದೊಡ್ಡಗುಣಿ ಹಿರೇಮಠದ ಶಿವಾಚಾರ್ಯ ಸ್ವಾಮಿಗಳು ಆಶೀರ್ವದಿಸಿದರು. ಮುಂದಿನ ಬೆಳವಣಿಗೆಗೆ ಸಕಲವೂ ಒಳ್ಳೆಯದಾಗಲಿ ಎಂದು ಜೆ ಸಿ ಮಾಧುಸ್ವಾಮಿಯವರು ಹಾರೈಸಿದರು.

ಜನೌಷಧಿ ಕೇಂದ್ರ ವಿಶೇಷ ::
ಭಾರತ ಸರ್ಕಾರದ ರಾದಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ, ಫಾರ್ಮಾಸ್ಯುಟಿಕಲ್ಸ್ ಇಲಾಖೆ ಮತ್ತು ಫಾರ್ಮಾಸ್ಯುಟಿಕಲ್ಸ್ ಅಂಡ್ ಮೆಡಿಕಲ್ ಡಿವೈಸಸ್ ಬ್ಯೂರೊ ಆಫ್ ಇಂಡಿಯಾ(Pmbi) ಮಾನ್ಯತೆ ಪಡೆದಿರುವ ಈ ಜನೌಷಧಿ ಕೇಂದ್ರದಲ್ಲಿ 1759 ಬಗೆಯ ಉತ್ತಮ ಗುಣಮಟ್ಟದ ಔಷಧಗಳು ಹಾಗೂ 280 ರೀತಿಯ ಶಸ್ತ್ರಚಿಕಿತ್ಸಾ ಸಲಕರಣೆಗಳು ಶೇಕಡಾ 50% ರಿಂದ 90% ಪ್ರತಿಶತದವರೆಗಿನ ಕಡಿಮೆ ಬೆಲೆಯಲ್ಲಿ ದೊರೆಯಲಿವೆ.

ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ’ದ ಈಯೆಲ್ಲ ಲಾಭಗಳನ್ನು ತಾಲ್ಲೂಕಿನ ಎಲ್ಲರೂ ಹೆಚ್ಚುಹೆಚ್ಚಾಗಿ ಪಡೆದುಕೊಳ್ಳಬೇಕು ಎಂದು ಜನೌಷಧಿ ಕೇಂದ್ರ ನಡೆಸುತ್ತಿರುವ ಚಂದನ್ ದೊಡ್ಡಗುಣಿ ಅವರು ಪತ್ರಿಕೆಯ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ದಬ್ಬೇಘಟ್ಟ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಸುವ ಆಶಯದಿಂದ ಹೋಬಳಿ ಮಟ್ಟ ಗ್ರಾಮ ಪಂಚಾಯಿತಿಗಳ ಪ್ರಮುಖರು, ಸಂಘಸಂಸ್ಥೆಗಳು, ಸಾಹಿತ್ಯಾಸಕ್ತರು, ಸಾರ್ವಜನಿಕರನ್ನೊಳಗೊಂಡ ಮಹಾಸಭೆಯನ್ನು ದಬ್ಬೇಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆ.13ರಂದು ನಡೆಸಲು ಆಯೋಜಿಸಲಾಗಿದೆ ಎಂದು ಕ.ಸಾ.ಪ ದಬ್ಬೇಘಟ್ಟ ಹೋಬಳಿ ಘಟಕದ ಅಧ್ಯಕ್ಷ ಕೆ.ಟಿ ಸಂಪತ್ತು ತಿಳಿಸಿದ್ದಾರೆ.

ಈ ಬಾರಿ ದಬ್ಬೇಘಟ್ಟ ಹೋಬಳಿಯಲ್ಲಿ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಕನ್ನಡದ ಥೇರು ಎಳೆಯಲು ಪ್ರತಿಯೊಬ್ಬ ಕನ್ನಡಿಗರೂ ಉತ್ಸುಕರಾಗಿದ್ದು ಕಾರ್ಯಕ್ರಮದ ಒಟ್ಟಾರೆ ರೂಪುರೇಷೆಗಳ ಸಿದ್ದತೆಗೆ ಸರ್ವರಿಂದಲೂ ಸಲಹೆ ಮಾರ್ಗದರ್ಶನ ಪಡೆಯಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಬೆಳಗ್ಗೆ 10ಗಂಟೆಗೆ ಸಭೆ ಕರೆಯಲಾಗಿದೆ.

ಪ್ರಮುಖ ಸಭೆಗೆ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನಪ್ರತಿನಿಧಿಗಳು, ಹಿರಿಯರು, ಕೃಷಿ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು, ಸಿಬ್ಬಂದಿಗಳು, ಹಾಲು ಉತ್ಪಾದಕ ಸಹಕಾರ ಸಂಘದ ಪದಾಧಿಕಾರಿಗಳು, ಸಿಬ್ಬಂದಿ, ಶಾಲಾ ಮತ್ತು ಕಾಲೇಜುಗಳ ಶಿಕ್ಷಕವೃಂದ, ಯುವ ಕನ್ನಡ ಪ್ರೇಮಿಗಳು, ಸಮಸ್ತ ಸಾರ್ವಜನಿಕರು ತಮ್ಮ ತಮ್ಮ ಸಂಗಡಿಗರೊಡನೆ ಪ್ರತಿ ಗ್ರಾಮದಿಂದ ಕನಿಷ್ಠ ಐದಾರು ಮಂದಿ ಕ್ರಿಯಾಶೀಲ ವ್ಯಕ್ತಿಗಳೊಡನೆ ಸಕಾಲಕ್ಕೆ ಆಗಮಿಸಿ, ಸಮಿತಿರಚನೆ, ಸ್ಥಳ, ದಿನಾಂಕ ನಿಗಧಿ, ಸಂಪನ್ಮೂಲ ಕ್ರೋಢೀಕರಣ, ಸಮಗ್ರ ನಿರ್ವಹಣೆ ಮುಂತಾದ ಪ್ರಧಾನ ಅಂಶಗಳ ಬಗ್ಗೆ ಚರ್ಚೆ ಮಾಡಬೇಕಿದ್ದು ನಿಮ್ಮೆಲ್ಲರ ಆಗಮನ ಅಗತ್ಯ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕದಸಂಸ (ಅಂಬೇಡ್ಕರ್ ವಾದ) ಕ್ಕೆ ಮಹಿಳಾ ಪದಾಧಿಕಾರಿಗಳ ಆಯ್ಕೆ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಮಟ್ಟದ ಕದಸಂಸ ಮಹಿಳಾ ಒಕ್ಕೂಟದ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಲುವಾಗಿ ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕದಸಂಸ(ಅಂಬೇಡ್ಕರ್ ವಾದ) ಸಂಘಟನೆಯ ಮುಖಂಡರು ಸಭೆ ಸೇರಿದ್ದರು. ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯನವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ, ಚರ್ಚೆ ಪರಾಮರ್ಶೆ ನಡೆಸಿದ ನಂತರ ವಿವಿಧ ಸಂಚಾಲಕ ಸ್ಥಾನಗಳಿಗೆ ಐವರು ಮಹಿಳೆಯರನ್ನು ಆಯ್ಕೆ ಮಾಡಿ ಸಭೆಯಲ್ಲಿ ಘೋಷಿಸಲಾಯಿತು.

ತಾಲ್ಲೂಕು ಮಟ್ಟದ ಕದಸಂಸ(ಅಂಬೇಡ್ಕರ್ ವಾದ) ಮಹಿಳಾ ಒಕ್ಕೂಟದ ತಾಲ್ಲೂಕು ಸಂಚಾಲಕಿಯಾಗಿ ಕೆ ಎಮ್ ಜಮೀಲಾ’ರನ್ನು ಆಯ್ಕೆ ಮಾಡಲಾಗಿದೆ. ಅದೇರೀತಿ ತಾಲ್ಲೂಕು ಸಂಘಟನಾ ಸಂಚಾಲಕರನ್ನಾಗಿ ಚೈತ್ರ ಹೆಚ್ ಮಾರವಳ್ಳಿ, ಮಂಜುಳಾ ಹುಳಿಯಾರು, ಆಶಾರಾಣಿ ಲಕ್ಮಗೊಂಡನಹಳ್ಳಿ, ಸುಶೀಲಾ ನಡುವನಹಳ್ಳಿ’ರವರನ್ನು ಆಯ್ಕೆ ಮಾಡಲಾಗಿದೆ‌.

ಕದಸಂಸ(ಅಂಬೇಡ್ಕರ್ ವಾದ) ಯಾವುದೇ ಒಂದು ನಿರ್ದಿಷ್ಟ ಜಾತಿ ಸಮುದಾಯಕ್ಕೆ ಸೀಮಿತವಾದುದಲ್ಲ. ಇದು ಎಲ್ಲ ಜಾತಿ, ಧರ್ಮದ ಶೋಷಿತ-ದಮನಿತರ ಸಂಘರ್ಷಕ್ಕೆ ರೂಪುಗೊಂಡಿರುವ ಸಂಘಟನೆ ಎಂದು ಹಿರಿಯ ದಲಿತಪರ ಹೋರಾಟಗಾರ ಕುಂದೂರು ತಿಮ್ಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಅವರು ಕುಂಬಾರರ ಅನಸೂಯಮ್ಮನ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ದೌರ್ಜನ್ಯದ ಪ್ರಕರಣ ನೆನಪಿಸಿದರು. ಆಕೆಯ ತಂದೆಯನ್ನು ಕೊಂದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಪಟ್ಟಭದ್ರರನ್ನು ಕಾನೂನಿನ ಕುಣಿಕೆಗೆ ಸಿಗಿಸುವಲ್ಲಿ ಕದಸಂಸದ ಮಹತ್ತರ ಪಾತ್ರವನ್ನು ವಿವರಿಸಿದರು.

ಆಗ ಪ್ರೊ. ಬಿ ಕೃಷ್ಣಪ್ಪನವರ ನೇತೃತ್ವದಲ್ಲಿ ಇಡೀ ನಾಡಿನಾದ್ಯಂತ ದಸಂಸ ಕಾಲ್ನಡಿಗೆ ಜಾಥಾ ನಡೆಸಿ ವಿಧಾನಸೌಧಕ್ಕೇ ಮುತ್ತಿಗೆ ಹಾಕುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಅನಸೂಯಮ್ಮ ಹಾಗೂ ಕೊಲೆಯಾದ ಆಕೆಯ ತಂದೆ ಶೇಷಗಿರಿಯಪ್ಪಗೆ ನ್ಯಾಯ ದೊರಕಿಸಿಕೊಟ್ಟದ್ದನ್ನು ಅವರು ನೆನಪಿಸಿಕೊಟ್ಟರು.

ಹಾಗಾಗಿ ಕದಸಂಸ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಮಾತ್ರ ಮೀಸಲಾದದ್ದು ಎಂಬುದು ಸತ್ಯಕ್ಕೆ ದೂರವಾದ ಮಾತು. ಈಗ ಹೊಸದಾಗಿ ರಚನೆಯಾಗಿರುವ ಈ ಮಹಿಳಾ ಒಕ್ಕೂಟದಲ್ಲಿ ಎಲ್ಲ ಜಾತಿ-ಧರ್ಮದ ಮಹಿಳೆಯರು ಇದ್ದಾರೆ. ಇವರೆಲ್ಲರೂ ಎಲ್ಲ ಜಾತಿ-ಧರ್ಮಗಳ ಮಹಿಳೆಯರ ಪರವಾಗಿ ದನಿಯೆತ್ತಲಿದ್ದಾರೆ ಎಂದರು.

ನೂತನವಾಗಿ ಆಯ್ಕೆಯಾದ ತಾಲ್ಲೂಕು ಸಂಚಾಲಕಿ ಕೆ ಎಮ್ ಜಮೀಲಾ ಮಾತನಾಡಿ, ಸಾಲ-ಸೌಲಭ್ಯ ಕಂಪನಿಗಳಿಂದ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿದರು.

ಇಂಥ ಶೋಷಕ ಕಂಪನಿಗಳ ವಿರುದ್ಧ ತಾಲ್ಲೂಕಿನಾದ್ಯಂತ ಮಹಿಳೆಯರನ್ನು ಸಂಘಟಿಸಿ, ಹೋರಾಟ ನಡೆಸುವುದಾಗಿ ತಿಳಿಸಿದರು.


__ಸಂಚಲನ
ಚಿಕ್ಕನಾಯಕನ ಸೀಮೆಯಿಂದ