ಅ.29ಕ್ಕೆ ದಬ್ಬೇಘಟ್ಟ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳ ಆಯೋಜನೆ
ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಕಸಾಪ ಘಟಕದ ವತಿಯಿಂದ ಅ.29ರಂದು ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಮಣಿ ಶ್ರೀಕಂಠೇಗೌಡ ತಿಳಿಸಿದರು.
ಪಟ್ಟಣದ ಕನ್ನಡಭವನದಲ್ಲಿ ಸೋಮವಾರ ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷರ ಆಯ್ಕೆ ಹಾಗೂ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು
ತಾಲ್ಲೂಕು ಕಸಾಪ ಸಹಕಾರದೊಂದಿಗೆ ಈ ಬಾರಿ ದಬ್ಬೇಘಟ್ಟದಲ್ಲಿ ಹೋಬಳಿ ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. ಈ ಹಿಂದೆ ಹೊಡಿಕೇಘಟ್ಟದಲ್ಲಿ ಮೊದಲ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು. ತದ ನಂತರ ಯಾವುದೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಆದ್ದರಿಂದ ಈ ಬಾರಿ ಹೋಬಳಿಯ ಎಲ್ಲ ಜನರ ಸಹಕಾರ ಮತ್ತು ಕನ್ನಡ ಪರ ಸಂಘಟನೆ, ಕನ್ನಡ ಅಭಿಮಾನಿಗಳು, ಕಸಾಪ ಸದಸ್ಯರು ಸೇರಿ ನುಡಿಯ ಹಬ್ಬದ ರೀತಿಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ, ತಾಲ್ಲೂಕು ಸಾಹಿತ್ಯ ಸಮ್ಮೇಳನ ಮಾಡುವ ಮುನ್ನಾ ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡಲಾಗುತ್ತಿದೆ. ಮೊದಲು ದಬ್ಬೇಘಟ್ಟ ಹೋಬಳಿಯಿಂದ ಪ್ರಾರಂಭ ಮಾಡಲಾಗಿದೆ. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮುಖಂಡ ಸುಬ್ರಮಣಿಶ್ರೀಕಂಠೇಗೌಡ ಆಯ್ಕೆ ಮಾಡಲಾಗಿದೆ. ಸಮ್ಮೇಳನ ಸಂಚಾಲಕರನ್ನಾಗಿ ಮಾಜಿ ಶಾಸಕ ಎಚ್.ಬಿ.ನಂಜೇಗೌಡರು, ಸಹ ಸಂಚಾಲಕರಾಗಿ ಜಿ.ಪಂ.ಮಾಜಿ ಸದಸ್ಯ ಎ.ಬಿ.ಜಗದೀಶ್, ಅರೇಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಚಂದ್ರು, ಆಹಾರ ಸಮಿತಿ ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಗೌಡರನ್ನು ಆಯ್ಕೆ ಮಾಡಿದ್ದು ಸಮ್ಮೇಳನದ ಸಂಪೂರ್ಣ ದಾಸೋಹದ ವ್ಯವಸ್ಥೆಯನ್ನು ಅವರೇ ನಿರ್ವಹಿಸಲು ಒಪ್ಪಿದ್ದಾರೆ.
ಮೆರವಣಿಗೆಯ ಅಧ್ಯಕ್ಷರಾಗಿ ದಬ್ಬೇಘಟ್ಟ ರಮೇಶ್, ವೇದಿಕೆ ಸಮಿತಿ ಅಧ್ಯಕ್ಷರಾಗಿ ಭೈರವೇಗೌಡರು, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ತ್ಯಾಗರಾಜು, ಸಾಂಸೃತಿಕ ಸಮಿತಿ ಅಧ್ಯಕ್ಷರಾಗಿ ಒಕ್ಕಲಿಗರ ಸಂಘದ ನಿರ್ದೇಶಕಿ ಚೂಡಾಮಣಿ, ಸ್ಮರಣ ಸಂಚಿಕೆ ಅಧ್ಯಕ್ಷರಾಗಿ ಮಾವಿನಕೆರೆ ಚಂದ್ರಶೇಖರ್ ಆಯ್ಕೆ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಸಮ್ಮೇಳನ ಅಧ್ಯಕ್ಷ ಆಯ್ಕೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಕೆ.ಟಿ.ಸಂಪತ್, ಕೋಶಾಧ್ಯಕ್ಷ ರಾಮಕೃಷ್ಣೇಗೌಡ, ಹಿರಿಯ ಮುಖಂಡರಾದ ಟಿ.ಎಸ್.ಬೋರೇಗೌಡ, ಮಂಜಯ್ಯಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಚಂದ್ರು, ಮಾಜಿ ಅಧ್ಯಕ್ಷ ತ್ಯಾಗರಾಜು ಇತರರು ಇದ್ದರು.