Saturday, May 9, 2026
Google search engine
Home Blog Page 121

ಚಳಿಗಾಲದ ಚುಟುಕು

0
ಗುದು ಗುಡುವ ಚಳಿ ಒಬ್ಬೊಬ್ಬರಿಗೆ

ಒಂದೊಂದು ಥರಾ.
ಚಳಿಗಾಲಕ್ಕೆ ಉರಿಗಾಳಂತ
ಚುಟುಕು ನೀಡಿದ್ದಾರೆ ಡಾII ರಜನಿ


ಚಳಿಗಾಲದ ಚುಟುಕು
*****************

1.
ಸೌದೆ ಒಲೆಯ
ಕಾವು
ನಿನ್ನೆದೆ ಗೂಡು.

2.
ಚಳಿಯಲ್ಲಿ
ಹುದುಗಿ ಬರದ
ದೋಸೆ ಸಂಪಣ
ನಿನ್ನ ಮೌನ.

3.
ಹಾಸಿಗೆ ಮೇಲಿನ
ಚದುರಿದ
ಮಲ್ಲಿಗೆ…
ಮರ ಉದುರಿಸಿದ ಎಲೆ.

4.
ಗರಿಕೆ
ಮೇಲಿನ ಇಬ್ಬನಿ
ನಿನ್ನ ನಾಸಿಕದ
ಬೆವರು.

5.
ನಿನ್ನ
ಅಪ್ಪುಗೆ ಸಡಿಲಿಸಿದ
ಕೂಡಲೇ …
ಬೆಳಗ್ಗಿನ ಚಳಿ.

6.
ಪಿಸು ಮಾತು…
ಮುತ್ತು
ಮುಗಿಯುವ ಮುನ್ನವೆ
ಬೇಗನೆ ಕತ್ತಲ
ಕೊಡುಗೆ.

7.
ಸುರಿಯುವ
ಹಿಮದ ಬಿಳಿ
ರಗ್ಗೊಳಗಡೆ
ನಿನ್ನ ಕಣ್ಣು
ಹಲ್ಲು…

8.
ಕೊರೆಯುವ
ಕೈ
ಮುಟ್ಟಿಸಿ
ಕೆಣಕುವ
ನಿನ್ನ ಆಟ..

9.
ಬಾಟಲೊಳಗೆ
ಕೂತ
ಕೊಬ್ಬರಿ ಎಣ್ಣೆ..
ರೂಮಿಗೆ
ಬಾರದ ನೀನು…

10.
ಊಟಕ್ಕೆ
ಕೊಟ್ಟ ನೆಂಚಿಕೆ
ನಿನ್ನ
ಬಿಸಿ ಮುತ್ತು.


ಡಾII ರಜನಿ

ತುರುವೇಕೆರೆ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಡಿ.ಪಿ.ರಾಜು ಆಯ್ಕೆ

0

Publicstory


ತುರುವೇಕೆರೆ: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮುಂದಿನ ದಿನಗಳಲ್ಲಿ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ಮಾಡಬೇಕೆಂಬ ಚಿಂತನೆ ಇದೆ ಎಂದು ನೂತನ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಿ.ಪಿ.ರಾಜು ತಿಳಿಸಿದರು.

ತಾಲ್ಲೂಕಿನ ನೂತನ ಕಸಾಪ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಅವರಿಗೆ ಅಭಿನಂಧನೆ ಸಲ್ಲಿಸಿ ಸುದ್ದಿಗಾರರರೊಂದಿಗೆ ಮಾತನಾಡಿದರು.

ಪಟ್ಟಣದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಕನ್ನಡ ಭವನದ ಮೇಲ್ಭಾಗದ ಹಂತ ಅಪೂರ್ಣಗೊಂಡಿದ್ದುಅದನ್ನು ಪೂರ್ಣಗೊಳಿಸುವುದು, ಸಂಪಿಗೆ ಗ್ರಾಮದಲ್ಲಿನ ಬಿ.ಎಂ.ಶ್ರೀ ಭವನ ಶಿಥಿಲವಾಗಿದ್ದು ಅಧಿಕಾರಿಗಳು ಹಾಗು ಎಲ್ಲ ಸಹಕಾರ ಪಡೆದು ಕಾಯಕಲ್ಪ ರೂಪಿಸುವುದು, ತಾಲ್ಲೂಕಿನ ಶಾಲಾ ಕಾಲೇಜುಗಳಲ್ಲಿನ ಯುವ ಕವಿಗಳನ್ನು ಕಾವ್ಯದ ಮೂಲ ಪರಿಚಯಿಸುವುದು,
ಜನಪದ ಕಲೆಗಳಿಗೆ ಒತ್ತು ನೀಡಿ ಗ್ರಾಮೀಣ ಪ್ರದೇಶಗಳಲ್ಲಿ ಮುಂದಿನ ಪೀಳಿಗೆಯ ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲ್ಲೂಕಿನ ಪಂಚಾಯಿತಿಗೊಂದು ಜನಪದ ಮೇಳ ಏರ್ಪಡಿಸಿ ಅಲ್ಲಿನ ಕಲಾವಿದರನ್ನು ಪ್ರೋತ್ಸಾಹಿಸುವುದು, ಕನ್ನಡ ಭವನದಲ್ಲಿನ ಗ್ರಂಥಾಲಯವನ್ನು ಬಹುಪಯೋಗಿ ಆಗುವಂತೆ ಉನ್ನತೀಕರಿಸುವುದು, ಕಾವ್ಯ ಕಮ್ಮಟಗಳು, ದಾನಿಗಳ ಹೆಸರಿನಲ್ಲಿ ದತ್ತಿ ಉಪನ್ಯಾಸ ಏರ್ಪಡಿಸುವುದು.
ಜಿಲ್ಲಾಧ್ಯಕ್ಷರ ಸಲಹೆ ಮೇರೆಗೆ ತಾಲ್ಲೂಕು ಅಥವಾ ಜಿಲ್ಲಾ ಸಮ್ಮೇಳನ ಏರ್ಪಡಿಸುವುದು, ಕಸಾಪ ಆ ಜೀವಸದಸ್ಯರು, ಕಲಾವಿದರು, ಸಾಹಿತಿಗಳು, ಜನಪ್ರತಿನಿಧಿಗಳು, ಮುಖಂಡರುಗಳ ಹೀಗೆ ಅನೇಕರ ಸಲಹೆ, ಸಹಕಾರ ಪಡೆದು ತಾಲ್ಲೂಕಿನ ಸಾಹಿತ್ಯ ಚಟುವಟಿಕೆಗಳನ್ನ ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದರು.

ಸಾಹಿತ್ಯದ ಜೊತೆಗೆ ನಾನು ಪಟ್ಟಣದ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾಗಿಯೂ, ಹಾಲಿ ನಿರ್ದೇಶಕರೂ ಆಗಿದ್ದೇನೆ. ತಾಲ್ಲೂಕು ಒಕ್ಕಲಿಗರ ಸಂಘದ ಆಂತರಿಕ ಲೆಕ್ಕಪರಿಶೋಧಕರಾಗಿದ್ದು, ಡಿ.ಕಲ್ಕೆರೆ ವಿಎಸ್ಎಸ್ಎನ್ನ ಮಾಜಿ ಅಧ್ಯಕ್ಷ ಹಾಗು ಹಾಲಿ ನಿರ್ದೇಶಕರಾಗಿದ್ದೇನೆ, ಕೃಷಿಕ ಸಮಾಜ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ ಎಂದರು.

ನಾನು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡರೂ ನನ್ನ ಪಕ್ಷ ಕನ್ನಡ ನಾಡು, ನಾನು ಪಕ್ಷಾತೀತವಾಗಿ ಕನ್ನಡಕ್ಕಾಗಿ ದುಡಿಯುವೆ ಜೊತೆಗೆ ತಾಲ್ಲೂಕಿನ ಕಲೆ, ಸಾಹಿತ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಸಹಕಾರಿ ಸಂಘಕ್ಕೆ ಗ್ರಾಹಕರೇ ಶಕ್ತಿ: ಬೋರೇಗೌಡ

0

Publicstory


ತುಮಕೂರು: ಗ್ರಾಮೀಣ ಭಾಗದಲ್ಲಿ‌ ಸಹಕಾರಿ‌ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.ಹಾಗಾಗಿ ಸಹಕಾರಿ ಸಂಘಕ್ಕೆ ಗ್ರಾಹಕರೆ ಶಕ್ತಿ ಎಂದು ಸಂಪನ್ಮೂಲ ವ್ಯಕ್ತಿ ಬೋರೆಗೌಡ ತಿಳಿಸಿದರು.

ತಾಲೂಕಿನ ಬೆಳ್ಳಾವಿಯ ಸ್ವದೇಶಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಘದ ಮೊದಲನೇಯ ವರ್ಷದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿರುವ ಕೂಲಿ ಕಾರ್ಮಿಕರು,ವ್ಯಾಪಾರಿಗಳು,ಹೈನುಗಾರರು,ಮಹಿಳಾ ಸ್ವ ಸಹಾಯ ಸಂಘದ ಪದಾಧಿಕಾರಿಗಳು ಕಿರುಯೋಜನೆ ಹಾಗೂ ಕೈಗಾರಿಕೆ ಮತ್ತು ವ್ಯಾಪಾರವನ್ನು ನೆಡೆಸಲು ಸಹಕಾರಿ ಸಂಘ ಕಿರುಸಾಲ ನೀಡುತ್ತದೆ.ಇದರಿಂದಾಗಿ ಗ್ರಾಮೀಣ ಭಾಗದವರು ಸಹಕಾರಿ‌ ಸಂಘದಿಂದ ಸಾಲ ಪಡೆದು ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗಿದೆ ಎಂದರು.

ಸ್ವದೇಶಿ ಪತ್ತಿನ ಸಹಕಾರಿ ಸಂಘವು ಏಳುವರ್ಷದಲ್ಲಿ 27 ಲಕ್ಷದ ವ್ಯವಹಾರವನ್ನು ನೆಡೆಸಿದೆ. ಈ ಸಂಘವು ಗ್ರಾಮೀಣ ಭಾಗದ ಜನರಿಗೆ ಸಾಲ ಸೌಲಭ್ಯವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ.ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಿದೆ. ಸ್ವದೇಶಿ ಪತ್ತಿನ ಸಹಕಾರಿ ಸಂಘದಿಂದ ಗ್ರಾಹಕರಿಗೆ ಹೆಚ್ಚು ಸಾಲಸೌಲಭ್ಯ ನೀಡಬೇಕಾದರೆ ಸಂಘದ ನಿರ್ದೇಶಕರು ಶ್ರಮ ಪಟ್ಟು ಕೆಲಸ ಮಾಡಬೇಕಿದೆ. ಠೇವಣಿ,ಷೇರು, ಎಪ್ ಡಿ ಮಾಡಿಸಬೇಕಿದೆ ಎಂದು ಹೇಳಿದರು.

ಸ್ವದೇಶಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು,ಕಾನೂನು ಸಲಹೆಗಾರರಾದ ಸಿ.ಕೆ ಮಹೇಂದ್ರ ಅವರು ಮಾತನಾಡಿ, ಸಹಕಾರಿ ಕ್ಷೇತ್ರ ಸ್ವತಂತ್ರ ಪೂರ್ವದಲ್ಲಿಯೇ ಉದಯವಾಗಿದೆ.ಸಹಕಾರಿ ಕ್ಷೇತ್ರ ಎಂಬುದು ವ್ಯಾಪಕವಾಗಿ ಹರಡಿಕೊಂಡಿದೆ. ಸಹಕಾರಿ ಕ್ಷೇತ್ರದ ಅಡಿಯಲ್ಲಿ ಹಲವಾರು ಕಾರ್ಯರೂಪಗಳನ್ನು ಜಾರಿಗೆ ತರಬಹುದು ಎಂದರು.

ಸಹಕಾರಿ ಕ್ಷೇತ್ರಕ್ಕೆ ಸ್ಥಳೀಯವಾಗಿ ಹೆಚ್ಚು ಒತ್ತು ಕೊಡಬೇಕಿದೆ.,ಇದ್ದಲ್ಲಿಯೇ ಲಭ್ಯವಿರುವ ಸಂಪನ್ಮೂಲ,ಹಣಕಾಸು,ಸಾರ್ವಜನಿಕ ಸಹಕಾರ ಸೇರಿದಂತೆ ಸಂಪನ್ಮೂಲವನ್ನು ಬಳಸಿಕೊಂಡು ಒಂದು ಸಂಸ್ಥೆಯನ್ನು ಆರಂಭಿಸಿ ಆ ಸಂಸ್ಥೆಯ ಅಡಿಯಲ್ಲಿ ಹಲವಾರು ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದು ಹೇಳಿದರು.

ಸ್ಥಳೀಯರ ಸಹಕಾರವನ್ನು ಕ್ರೂಡಿಕರಿಸಿ ಆರಂಭಿಸಿರುವ ಸ್ವದೇಶಿ ಪತ್ತಿನ ಸಹಕಾರ ಸಂಘವು ಕೇವಲ ತಾಲೂಕಿಗೆ ಮಾತ್ರ‌ ಸಿಮೀತವಾಗದೆ ಜಿಲ್ಲೆ,ರಾಜ್ಯ‌ಮಟ್ಟದ ಸಂಸ್ಥೆಯನ್ನಾಗಿ ಬೆಳೆಸುವ ಜವಾಬ್ದಾರಿ ಸಂಘದ ಆಡಳಿತ ಮಂಡಳಿಯ ಹಾಗೂ ಗ್ರಾಹಕರ ಕೆಲಸವಾಗಿದೆ.ಮುಂದಿನ ದಿನದಲ್ಲಿ ಎಲ್ಲಾರು ಒಟ್ಟಾಗಿ ಸೇರಿ ಚರ್ಚಿಸುವ ಮೂಲಕ ಸ್ವದೇಶಿ ಪತ್ತಿನ ಸಹಕಾರ ಸಂಘವನ್ನು ಬಲಪಡಿಸುವ ಭವಸೆ ನೀಡಿದರು.

ಸಂಘದ ಅಧ್ಯಕ್ಷರಾದ ಡಿ.ಎನ್ ಮಹದೇವಯ್ಯ ವಾರ್ಷಿಕ ವರದಿಯನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.90 ರಷ್ಟು ಅಂಕ ಪಡೆದ ಸಂಘದ ನಿರ್ದೇಶಕರ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ವದೇಶಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಚಿಕ್ಕಣ್ಣ ಎಸ್.ಡಿ,ನಿರ್ದೇಶಕರಾದ ನರಸಿಂಹಮೂರ್ತಿ,ರಾಜಶೇಖರ್,ಮಂಜುಳಾ,ಗುಮಾಸ್ತ ಜಯರಾಮ್,ಹಾಗೂ ನಿರ್ದೇಶಕರು ಸೇರಿದಂತೆ ಹಲವರು ಭಾಗವಹಿಸಿದ್ದರು.

ಶ್ರೀ ಪದ್ಧತಿ: ಸಿ.ಎಸ್.ಪುರ ರೈತ ಉತ್ಪಾದಕಾ ಕಂಪನೆ ಸಾಧನೆ

Publicstory


ಗುಬ್ಬಿ : ಹೆಚ್ಚು ಇಳುವರಿಯನ್ನು ಪಡೆಯುವುದಕ್ಕೆ ರೈತರು ಲಘು ಪೋಷಕಾಂಶಗಳನ್ನು ತೋಟಗಾರಿಕೆ ಬೆಳೆಗಳಿಗೆ ಒದಗಿಸಬೇಕು ಎಂದು ಕ್ರಿಯಾಜನ್ ಸಂಸ್ಥೆ ತಾಂತ್ರಿಕ ಸಲಹೆಗಾರರ ಸುನಿಲ್‌ಕುಮಾರ್ ತಿಳಿಸಿದರು.

ತಾಲ್ಲೂಕಿನ ಸಿಎಸ್ ಪುರ ಹೋಬಳಿ ಬುಕ್ಕಸಾಗರ ಸೋಮಶೇಖರ್ ರವರು ಜಮೀನಿನಲ್ಲಿ ಇನಿಶಿಯೇಟಿವ್ ಫಾರ್ ಡೆವಲಪ್‌ಮೆಂಟ್ ಫೌಂಡೇಶನ್, ಸಿಎಸ್ ಪುರ ರೈತ ಉತ್ಪಾದಕರ ಕಂಪನಿಯ ಆಶ್ರಯದಲ್ಲಿ ಶ್ರೀಪದ್ದತಿಯಲ್ಲಿ ಬೆಳೆದ ಭತ್ತ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, ಮಣ್ಣಿನಲ್ಲಿ ಸೂಕ್ಷಾö್ಮಣುಗಳನ್ನು ಹೆಚ್ಚಿಸಿಕೊಳ್ಳಲು ಸಾವಯವ ಗೊಬ್ಬರವನ್ನು ಬಳಸಲು ರೈತರು ಮುಂದಾಗಬೇಕು. ತೋಟಗಾರಿಕೆ ಬೆಳೆಗಳಿಗೆ ಗೊಬ್ಬರಗಳನ್ನು ನೀಡುವಾಗ ಮಣ್ಣನ್ನು ಪರೀಕ್ಷೆ ಮಾಡಿಸಿ ಗೊಬ್ಬರ ನೀಡಬೇಕು ಎಂದು ತಿಳಿಸಿದರು.

ಪ್ರಗತಿಪರ ರೈತ ಸೋಮಶೇಖರ್ ಮಾತನಾಡಿ, ರೈತರು ಸುಸ್ಥಿರ ಕೃಷಿ ಮಾಡುವ ಮೂಲಕ ವ್ಯವಸಾಯದಲ್ಲಿ ಖರ್ಚನ್ನು ಕಡಿಮೆ ಮಾಡಿಕೊಂಡು ಹೆಚ್ಚು ಆದಾಯ ಪಡೆಯುವಲ್ಲಿ ಜಾಗೃತರಾಗಬೇಕು ಎಂದರು.
ಕ್ಷೇತ್ರೋತ್ಸವದಲ್ಲಿ ಸಿಎಸ್ ಪುರ ರೈತ ಉತ್ಪಾದಕರ ಕಂಪನಿಯ ಸಿಇಒ ಲೋಕೇಶ.ಡಿ, ಮಾರುಕಟ್ಟೆ ಅಧಿಕಾರಿ ವಿನೋಧಮ್ಮ, ಕ್ರಿಯಾಜನ್ ಕಂಪನಿಯ ಕಿರಣ್.ಎಸ್.ಇ, ಲೆಕ್ಕಾಧಿಕಾರಿ ಶ್ರೀಕಾಂತ್, ಬಿಸಿಎ ನಳಿನ, ಗಂಗಮ್ಮ, ರೈತರಾದ ನಂಜುAಡಯ್ಯ, ರೂಪ ಮತ್ತಿತರರು ಇದ್ದರು.

ಪಾವಗಡ: ಅತಿಥಿ ಉಪನ್ಯಾಸಕರ ಪ್ರತಿಭಟನೆ

Publicstory


ಪಾವಗಡ: ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಶ್ರೀಮತಿ ವೈ ಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಸರ್ಕಾರ ವರ್ಷದಲ್ಲಿ 7 ರಿಂದ 8 ತಿಂಗಳು ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು 11 ಸಾವಿರದಿಂದ 13 ಸಾವಿರ ರೂ ವೇತನ ನೀಡುತ್ತಿದೆ. ವೇತನವನ್ನು ಕಾಲ ಕಾಲಕ್ಕೆ ನೀಡದೆ ತಮಗೆ ತೋಚಿದಂತೆ ಯಾವಾಗಲೊ ನೀಡಲಾಗುತ್ತಿದೆ. ಇದರಿಂದ ಅತಿಥಿ ಉಪನ್ಯಾಸಕರಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಪರೀಕ್ಷೆ, ಮೌಲ್ಯಮಾಪನ, ಪಠ್ಯ, ಪಠ್ಯೇತರ ಚಟುವಟಕೆಗಳಿಗೂ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಕನಿಷ್ಠ ವೇತನ, ಸೇವಾ ಭದ್ರತೆ ಕಲ್ಪಿಸದೆ ಅನ್ಯಾಯವೆಸಗಲಾಗುತ್ತಿದೆ. ಸಕಾಲಕ್ಕೆ ವೇತನ ನೀಡದ ಕಾರಣ ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಸೇರಿದಂತೆ ಜೀವನ ನಡೆಸಲೂ ಕಷ್ಟ ಪಡುವ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅಳಲನ್ನು ತೋಡಿಕೊಂಡರು.

ಹಲ ಬಾರಿ ಸರ್ಕಾರಕ್ಕೆ ಕನಿಷ್ಠ ವೇತನ ನೀಡಿ ಸೇವಾ ಭದ್ರತೆ ಕಲ್ಪಿಸುವಂತೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ರಾಜ್ಯ ಸಮಿತಿಯ ಕರೆಯ ಮೇರೆಗೆ ರಾಜ್ಯಾದ್ಯಂತ ಅನಿರ್ದಿಷ್ಠಾವಧಿ ತರಗತಿ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ವರ್ಷವಿಡೀ ವೇತನ ನೀಡಬೇಕು, ವೇತನ ಪರಿಷ್ಕರಿಸಬೇಕು, ಸೇವಾ ಭದ್ರತೆ ಕಲ್ಪಿಸಬೇಕು. ಕಾಲ ಕಾಲಕ್ಕೆ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಂಶುಪಾಲ ಡಾ. ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.

ಅತಿಥಿ ಉಪನ್ಯಾಸಕರಾದ ಶ್ರೀನಿವಾಸ್, ಮಲ್ಲಯ್ಯ, ಓಬಳೇಶಪ್ಪ, ಶಂಕರನಾಯ್ಕ, ವಿಜಯಸಿಂಹ, ಅಂಜಿನಪ್ಪ, ಶಿವಕುಮಾರ್, ಪ್ರಿಯಾಂಕ, ಶೋಭ, ಪುಷ್ಪ ಉಪಸ್ಥಿತರಿದ್ದರು.

ಪಾವಗಡದ ಶ್ರೀಮತಿ ವೈ ಇ ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅತಿಥಿ ಉಪನ್ಯಾಸಕರು ಪ್ರಾಂಶುಪಾಲ ಡಾ. ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.

ಅತಿಥಿ ಉಪನ್ಯಾಸಕರಾದ ಶ್ರೀನಿವಾಸ್, ಮಲ್ಲಯ್ಯ, ಓಬಳೇಶಪ್ಪ, ಶಂಕರನಾಯ್ಕ, ವಿಜಯಸಿಂಹ, ಅಂಜಿನಪ್ಪ, ಶಿವಕುಮಾರ್, ಪ್ರಿಯಾಂಕ, ಶೋಭ, ಪುಷ್ಪ ಉಪಸ್ಥಿತರಿದ್ದರು.

ಕಾನೂನು ಪದವಿ ಪರೀಕ್ಷೆಗಳ ಮುಂದೂಡಿಕೆ ಇಲ್ಲ: ಬಸವರಾಜ್

ಸಮಾರಂಭದಲ್ಲಿ ಹಿರಿಯ ವಕೀಲರಾದ ಎನ್.ಬಸವರಾಜು ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಷಫಿ ಅಹಮದ್, ಹಿರಿಯ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್, ಪ್ರೊ. ಪರುಷರಾಮ್, ಡಾ.ಎಸ್. ರಮೇಶ್ ಇದ್ದಾರೆ.

Publicstory


ತುಮಕೂರು: ಕಾನೂನು ಪರೀಕ್ಷೆಗಳ ಮುಂದೂಡಿಕೆ ಇಲ್ಲ ಎಂದು ಕರ್ನಾಟಕ ರಾಜ್ಯ ಕಾನುನು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು, ಹಿರಿಯ ವಕೀಲರಾದ‌ ಎನ್. ಬಸವರಾಜು ತಿಳಿಸಿದರು.

ನಗರದ ಸುಫಿಯಾ ಕಾಲೇಜಿನಲ್ಲಿ ಶುಕ್ರವಾರ ಸುಫಿಯಾ ಕಾನೂನು ಮಹಾ ವಿದ್ಯಾಲಯ, ಎಚ್.ಎಂ.ಎಸ್ ಪಾಲಿಟೆಕ್ನಿಕ್ ಕಾಲೇಜು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ನಡೆದ “ಮಾನವ ಹಕ್ಕುಗಳ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.‌ಪರುಷರಾಮ್ ಅವರನ್ನು ಸನ್ಮಾನಿಸಲಾಯಿತು.

ಡಿಸೆಂಬರ್-15 ರಂದು ಕಾನೂನು ಪರೀಕ್ಷೆಗಳು ಆರಂಭವಾಗಲಿದ್ದು, ಯಾವುದೇ ಕಾರಣಕ್ಕೂ ಪರೀಕ್ಷೆಗಳನ್ನು ಮುಂದೂಡುವುದಿಲ್ಲ. ಪರೀಕ್ಷೆ ರದ್ದುಪಡಿಸುವುದಿಲ್ಲ ಎಂದು ಅವರು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾದೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಬೇರೆಯವರ ಹಕ್ಕನ್ನು ಸಂರಕ್ಷಿಸಿದರೆ ನಮ್ಮ ಹಕ್ಕನ್ನೂ ರಕ್ಷಿಸಿಕೊಳ್ಳಬಹುದು. ಬೇರೆಯವರ ಹಕ್ಕನ್ನು ಕಸಿದುಕೊಂಡಲ್ಲಿ ಅವರ ಹಕ್ಕು ಉಲ್ಲಂಘನೆಯಾಗುತ್ತದೆ. ನಂತರದಲ್ಲಿ ನಮ್ಮ ಹಕ್ಕು ಸಹ ಉಲ್ಲಂಘನೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇತರರಿಗೆ ಸಮಸ್ಯೆ ಮಾಡದೆ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದರು.

ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಕೆ.ಜಿ ಪರಶುರಾಮ್ ಮಾತನಾಡಿ, 74 ವರ್ಷಗಳ ಹಿಂದೆ ಶೇ19 ರಷ್ಟು ಸಾಕ್ಷರತೆ ಇತ್ತು ಆಗಲೂ ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗುತತಿತ್ತು. ಇದೀಗ ಸಾಕ್ಷರತೆ ಪ್ರಮಾಣ ಶೇ100 ರ ಸಮೀಪ ಇದೆ. ಸಾಕ್ಷರತೆ ಪ್ರಮಾನ ಹೆಚ್ಚುತ್ತಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದೆ. ಇದ್ಕೆ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಪ್ರಮುಖ ಕಾರಣ ಎಂದರು.

ಸ್ವತಂತ್ರದ ಬಗ್ಗೆ 162 ದೇಶಗಳ ನಡೆದ ಸಮೀಕ್ಷೆಯಲ್ಲಿ ನ್ಯೂಯಾರ್ಕ್ ದೇಶ ಪ್ರಥಮ ಸ್ಥಾನದಲ್ಲಿದ್ದರೆ ಭಾರತ 111 ನೇ ಸ್ಥಾನದಲ್ಲಿದೆ. ಉತ್ತರ ಕೊರಿಯ, ಇರಾನ್, ಚೀನಾದಂತಹ ದೇಶಗಳು ಹೊಂದಿರುವ ಶಸ್ತ್ರಸ್ತ್ರಾಗಳು, ಯುದ್ದಕ್ಕೆ ಸಿದ್ಧವಾಗಿರುವ ಪರಿಯನ್ನು ಅವಲೋಕಿಸಿದಾಗ, ಅಮೇರಿಕಾ, ಸುಮಾಲಿಯಾ ದೇಶಗಳ ನಡುವಿನ ಮಾನವ ಹಕ್ಕುಗಳ ಸ್ಥಿತಿಗತಿಗಳ ಬಗ್ಗೆ ಹೋಲಿಕೆ ಮಾಡಿದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ವಸ್ತುಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು ಎಂದರು.


ಸುಫಿಯಾ ಕಾಲೇಜು ಕಾನೂನು ಸೇವೆಗೆ ಅಗತ್ಯವಿರುವ ಮಾನವ ಸಂಪನ್ಮೂಲ ಪೂರೈಸುತ್ತಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಕೆ.ಜಿ ಪರಶುರಾಮ್ ಶ್ಲಾಘನೆ ವ್ಯಕ್ತಪಡಿಸಿದರು.

ಎಚ್.ಎಂ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಷಫೀ ಅಹಮದ್ ಮಾತನಾಡಿ, ಸ್ವಾರ್ಥಕ್ಕಾಗಿ ಬದುಕದೆ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಆಶಯ ಪ್ರತಿಯೊಬ್ಬರಲ್ಲಿಯೂ ಇರಬೇಕು. ಡಾ.ಬಿ.ಆರ್. ಅಮಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದ ಜನತೆಗೆ ಸಮಾನತೆ, ಜಾತ್ಯಾತೀತತೆ, ಜೊತೆಗೆ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ. ಅವುಗಳನ್ನು ಸಂರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಎಚ್.ಎಂ.ಎಸ್. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಟಿ.ಎ. ರಹಮತ್ ಉಲ್ಲಾ ಖಾನ್ ಮಾತನಾಡಿದರು.

ಸುಫಿಯಾ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್. ರಮೇಶ, ಉಪ ಪ್ರಾಂಶುಪಾಲ ಓಬಯ್ಯ, ಉಪನ್ಯಾಸಕರಾದ ಸಿ.ಕೆ.ಮಹೇಂದ್ರ, ಮಂಜುನಾಥ್, ಶ್ರೀನಿವಾಸ್ ಉಪಸ್ಥಿತರಿದ್ದರು.

28 ಮತಗಟ್ಟೆ ಕೇಂದ್ರಗಳಲ್ಲಿ ನಾಳೆ ಎಂಎಲ್ಸಿ ಚುನಾವಣೆ

0

ತುರುವೇಕೆರೆ: ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಡಿ.10ರಂದು ತಾಲ್ಲೂಕಿನಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ತಾಲ್ಲೂಕು ಆಡಳಿತ ಮಸ್ಟ್ರಿಂಗ್ ಕೇಂದ್ರದಲ್ಲಿ ಪೂರ್ವ ಸಿದ್ದತೆಗಳನ್ನು ನಡೆಸಿತು.

ತಾಲ್ಲೂಕಿನ 27 ಗ್ರಾಮ ಪಂಚಾಯಿತಿ ಮತ್ತು ಒಂದು ಪಟ್ಟಣ ಪಂಚಾಯಿತಿಗಳಲ್ಲಿ ಮತದಾನ ಕೇಂದ್ರಗಳನ್ನು ತೆರೆತಲಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಎಲ್ಲ ಗ್ರಾಮ ಪಂಚಾಯಿತಿ ಮತ್ತು ಒಂದು ಪಟ್ಟಣ ಪಂಚಾಯಿತಿ ಸದ್ಯರುಗಳು ಮತದಾನ ಮಾಡಲಿದ್ದಾರೆ. ತಾಲ್ಲೂಕಿನಲ್ಲಿ 193 ಪುರುಷರು ಮತ್ತು 220 ಮಹಿಳೆಯರು ಸೇರಿದಂತೆ ಒಟ್ಟು 413 ಮತದಾರರಿದ್ದಾರೆ.

ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿಗಳು ತಮ್ಮ ಮತಗಟ್ಟೆ ಕೇಂದ್ರಗಳಿಗೆ ಚುನಾವಣಾ ಪರಿಕರಗಳೊಂದಿಗೆ ತಮಗೆ ನಿಗದಿಪಡಿಸಿದ್ದ ಎರಡು ಕೆಎಸ್ಆರ್ಟಿಸಿ ಬಸ್, ಏಳು ಜೀಪುಗಳಲ್ಲಿ ತೆರಳಿದರು.
ಪ್ರತಿ ಮತದಾನ ಕೇಂದ್ರಗಳಲ್ಲಿ ಒಬ್ಬ ಪೊಲೀಸ್, ಆಶಾ ಕಾರ್ಯಕರ್ತೆಯರು, ಸೇರಿದಂತೆ ಮೂವರು ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. 28 ಮತದಾನ ಕೇಂದಗಳಲ್ಲಿ ಪಿಆರ್ಒ ಮತ್ತು ಎಪಿಆರ್ ತಲಾ 28, ಮೈಕ್ರೋ ವೀಕ್ಷಕರು 30 ಮಂದಿ ಚುನಾವಣಾ ಕಾರ್ಯದಲ್ಲಿ ಕೆಲಸ ಮಾಡಲಿದ್ದಾರೆ. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಮಸ್ಟ್ರಿಂಗ್ ಕೇಂದ್ರದಲ್ಲಿ ತಹಶೀಲ್ದಾರ್ ಆರ್.ನಯೀಂಉನ್ನೀಸಾ, ಚುನಾವಣಾಧಿಕಾರಿ ಪಿ.ಕಾಂತರಾಜು ಸೇರಿದಂತೆ ಹಲವು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹೆಣ್ಣು ನೋಡುವ ಭಾಗ್ಯವೂ ಕಲಾ ವಿಭಾಗದ ನೋವು….

0

 

ಹೆಣ್ಣು ನೋಡುವ ಭಾಗ್ಯವೂ ಕಲಾ ವಿಭಾಗದ ನೋವು….

ನಮ್ಮಗ ಆರ್ಟ್ಸ್ (ಕಲಾ ವಿಭಾಗ) ಓದಿರೋದು ನೋಡಿ ಮತ್ತೇ – ಈ ಮಾತನ್ನು ದೊಡ್ಡಮ್ಮ ಪದೇಪದೇ ಹೇಳುತ್ತಿದ್ದರೆ ಕುಡಿಯುತ್ತಿದ್ದ ಕಾಫಿ ಗಂಟಲಲ್ಲೇ ಸಿಗಾಕಿಕೊಳ್ಳುತ್ತಿತ್ತು.

 

ನೋಡಿ ಮತ್ತೇ ಆಮ್ಯಾಲೆ  ಇಲ್ಲ ಅನ್ ಬ್ಯಾಡ್ದು ಮೊದಲೇ ನಿಮ್ಮ ಹುಡುಗಿಗೆ ಹೇಳಿ ಬಿಡಿ ಎಂದು ದೊಡ್ಡಮ್ಮ ಹೇಳ್ತಲೇ ಇದ್ರು, ಹಾಗೇ ಹೇಳಕ್ಕೆ ಅವರಿಗೂ ಭಯವೂ ಇದೆ. ಕೊನೆಗೂ ಕಾಫಿ ಕುಡಿದು ಈಚೆ ಬಂದುದ್ದಾಯಿತು. ಈಗಾಗಲೇ ಈ ಹುಡುಗಿ ನೋಡುತ್ತಿರುವುದು ಇಪ್ಪತ್ತನೆಯದು ಇರಬೇಕು,

ನೋಡಲು ಸುಂದರವಾಗಿದ್ರು ಹುಡ್ಗ ಆರ್ಟ್ಸ್ ಓದಿರುವುದು ಹುಡ್ಗಿ  ಕೊಡೋದಿಲ್ಲ ಅಂದೋರೆ ಹೆಚ್ಚು, ಇಂಗ್ಲಿಷ್ ಎಂ ಎ ಮಾಡಿದ್ರೂ ಸಹ ಜನರಿಗೆ ಅದ್ಯೇಕೆ ಸೈನ್ಸ್ ಮೇಲೆ ಅಷ್ಟೊಂದು ಪ್ರೀತಿ. ಕಲಾ ವಿಭಾಗದಲ್ಲಿ ಇಂಗ್ಲಿಷ್ ಓದಿದ್ರೂ ಇಂಗ್ಲಿಷ್ ಬರೋಲ್ಲ ಅಥವಾ ದಡ್ಡ ಅನ್ನೋದ್ ಎಲ್ಲರ ತೀರ್ಮಾನವಾಗಿಬಿಟ್ಟಿದೆ. ಹೆಣ್ಣುನೋಡುವ ಶಾಸ್ರ್ತಕ್ಕೆ ಮೊದಲೇ ಎಷ್ಟೋ ಜನ ಅಯ್ಯೋ ಆಟ್ಸ್ ನಲ್ಲಿ ಇಂಗ್ಲಿಷ್ ಎಂ,ಎ.ನಾ ಬೇಡ ಎಂದವರೇ ಹೆಚ್ಚು.

ಹುಡ್ಗ ಬುದ್ದಿವಂತ ಆಗಿದ್ರೆ ಆಟ್ಸ್ ಓದಿದ ನಂತರ ಇಂಗ್ಲಿಷ್ ಎಂ,ಎ, ಏಕೆ ಮಾಡ್ತಿದ್ದ ಸೈನ್ಸ್ ತಗೊಂಡ್ ಓದುತ್ತಿದ್ದ ಎಂದವರೇ ಹೆಚ್ಚು.

ಮದುವೆ ಕನಸುಗಲೆಲ್ಲ ನುಚ್ಚು ನೂರಾಗಿವೆ,  ಪಾಪ! ಉಳಿದವರ ಗತಿ ಏನಾಗಬೇಡ.

ಒಮ್ಮೆ ಈಗಾಯ್ತು ನೋಡಿ. ಅಪ್ಪ ಹೇಳಿದ್ರು, ನೀನು ಬರೋದ್ ಬೇಡ, ಹೊರಗಡೆ ಶಾಂಪಿಂಗ್ ಮಾಲ್ ಗೆ ಹೋಗು, ನಾವು ಹುಡ್ಗಿ ನೋಡಿ ಬರ್ತೀತಿ. ಅವರು ಒಪ್ಪಿದ್ದರೆ ಬರುವೆಯಂತೆ ಅಂದ್ರು!

ನನಗೋ ಬೇಸರ, ಥೂ ಹೀಗೂ ಉಂಟೆ, ಯಾಕಾದ್ರು ಆರ್ಟ್ ಓದಿದನ್ನೋ ಅಂತ ನೋವು, ಸಮಾಜಶಾಸ್ತ್ರ ಎಂದರೆ ಪ್ರೀತಿ. ಹೀಗಾಗಿ ಸಮಾಜಶಾಸ್ರ್ರ ಓದಬೇಕು ಅಂತಾಲೆ ಕಲಾ ವಿಭಾಗ ಆಯ್ಕೆ ಮಾಡಿಕೊಂಡವನು, ಆದರೆ ಸಾಹಿತ್ಯದ ಗೀಳಿಗೆ ಬಿದ್ದು ಇಂಗ್ಲಿಷ್ ಕೈ ಹಿಡಿದವನು ನಾನು. ಜನರಿಗೆ ಕೆಲಸವೂ ಮುಖ್ಯವಾಗುತ್ತಿಲ್ಲ. ಸರ್ಕಾರಿ ಕೆಲಸದಲ್ಲಿ ಇದ್ದರೆ, ಭ್ರಷ್ಟ ನೌಕರನಾಗಿದ್ದರೆ, ದುಡ್ಡಿದ್ದರೆ ಈ ಎಲ್ಲಾ ಪ್ರಶ್ನೆಗಳು ಬರುತ್ತಿರಲಿಲ್ಲವೇ ಎಂದು ಕಾಡಿದುಂಟು. ಆದರೆ ಎಲ್ಲರಿಗೂ ಸರ್ಕಾರಿನೌಕರಿಯೇ ಸಿಗುತ್ತದೆಯೇ ? ಸಾಪ್ಟ್ ವೇರ್ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳ ಎಣಿಸುತ್ತಿದ್ದರೂ ಯಾಕೆ ಜನರು ಈ ರೀತಿ ಹೇಳುತ್ತಿದ್ದಾರೆ ? ಹೀಗೆ ನಾನಾ ಪ್ರಶ್ನೆಗಳು ತಲೆಯಲ್ಲಿ ಕೊರೆಯುತ್ತಿರಬೇಕಾದರೆ ಅಪ್ಪ ಫೋನ್ ಮಾಡಿದ್ರು, ಬೇಗ ಬಾ, ಹುಡುಗಿ ಮನೆಯೋರು ಒಪ್ಪಿದ್ದಾರೆ, ನನಗೂ ಖುಷಿ,

ಕೂಡಲೇ ಹುಡುಗಿಯ ಮನೆ ಹಿಂಬದಿಯ ಶಾಂಪಿಂಗ್ ಕಾಂಪ್ಲೆಕ್ಸ್ಸ ನಲ್ಲಿದ್ದ ನಾನು ಕಾರಿನಲ್ಲಿ ಹೊರಟೆ .  ಮೊದಲೇ ಫೋಟೊದಲ್ಲಿ ಹುಡುಗಿ ನೋಡಿದ್ದ ಕಾರಣ ಏನೇನೋ ಆಸೆಗಳಿದ್ದವು. ಕೊನೆಗೂ ಕಲಾ ವಿಭಾಗವೇ ಗೆದ್ದಿತ್ತು. ಇಂಥ ಚೆಂದನೆಯ ಹುಡುಗಿ ಡಾಕ್ಟರಿಗೂ ಸಿಗುತ್ತಿರಲಿಲ್ಲ ಎಂದು ಮನಸ್ಸು ಉಯ್ಯಾಲೆಯಾಡಿತು,

ಕೊನೆಗೂ ಹೆಣ್ಣಿನಮನೆ  ಕದ ತಟ್ಟಿದೆ. ಎಲ್ಲವೂ ಸರಿಯಾಯಿತು.  ಆದರೆ ಹುಡುಗಿ ಬೇರೆಯವಳೇ ಆಗಿದ್ದಳು. ನಮ್ಮ ದೊಡ್ಡ ಮಗಳಿಗೆ ಸೈನ್ಸ್ ಓದಿರೋರೋ ಹುಡುಗನೇ ಬೇಕಂತೆ, ಇವಳು ಚಿಕ್ಕ ಮಗಳು, ಅವಳಿಗಿಂತ ಒಂದು ವರ್ಷ ಚಿಕ್ಕವಳಷ್ಟೇ. ಇಬ್ಬರೂ ಒಮ್ಮೆಗೆ ಮದುವೆ ಮಾಡುವ ಮನಸ್ಸು ಇದೆ. ನೀವು ಒಪ್ಪಿಕೊಂಡರೆ ಆಗಬಹುದು ಎಂದರು, ಯಾಕೋ ನನಗೆ ಸರಿ ಬರಲಿಲ್ಲ. ತಲೆ ತಿರುಗಿದಂತಾಯಿತು, ಅಪ್ಪಾ ಏನ್ ಹೇಳಿದ್ರೋ ಗೊತ್ತಾಗಲಿಲ್ಲ. ಸುಮ್ಮನೇ ಕೂತೆ. ನಂತರ ಎಲ್ಲರೂ ಹುಡುಗಿ ನೋಡುವ ಶಾಸ್ತ್ರ ಮುಗಿಸಿ ಹೊರಬಂದೆವು. ಕಾರಿನಲ್ಲಿ ಅಪ್ಪ ನಗುತ್ತಿದ್ದರು. ಹುಡುಗಿ ಮತ್ತಷ್ಟು ಚಿಕ್ಕವಳು, ದೊಡ್ಡವಳಷ್ಟು ಚೆನ್ನಾಗಿಲ್ಲದಿರಬಹುದು. ಇನ್ನೊಂದು ವರ್ಷ ಕಳೆದರೆ ಇವಳೇ ಅವಳಿಗಿಂತ ಚೆನ್ನಾಗಿ ಕಾಣ್ತಳೆ, ಖಾಸಗಿ ಕೆಲಸ ಮಾಡೋನಿಗೆ, ಆಟ್ಸ್  ಓದಿರೋನಿಗೆ ಇದಕ್ಕಿಂತ ಹುಡುಗಿ ಸಿಗಲಾರಳು. ಮನೆಯ ಕಡೆಯೂ ಚೆನ್ನಾಗಿದ್ದಾರೆ. ಇಬ್ಬರೇ ಹೆಣ್ಣು ಮಕ್ಕಳು, ಮುಂದೆ ಅವನಿಷ್ಟ ಎಂದರು. ನಾನೇನು ಮಾತನಾಡಲಿಲ್ಲ.

ಬೆಳಿಗ್ಗೆ ಆಫೀಸಿನ ಕಚೇರಿಯಲ್ಲಿ ಮುಖ ನೋಡಿಕೊಂಡವನಿಗೆ ನಾನು ಅಷ್ಟೇನು ಚೆನ್ನಾಗಿಲ್ಲ ಎನಿಸಿತು. ಯಾಕೋ ಕಲಾ ವಿಭಾಗ ಕಣ್ಣ ಮುಂದೆ ಓಡಿದಂತಾಯಿತು.  ಅಪ್ಪನಿಗೆ ಫೋನ್ ಮಾಡಿ ಹೇಳಿದೆ, ಹುಡುಗಿ ಓಕೆ ಅಪ್ಪಾ ಅಂತಾ!

ಸಂವಿಧಾನ ದೇಶದ ಹೃದಯ

ತುಮಕೂರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಹಿರಿಯ ಪತ್ರಕರ್ತ ಹಾಗೂ ವಕೀಲ ಸಿ.ಕೆ. ಮಹೇಂದ್ರ ಚಾಲನೆ ನೀಡಿದರು .

Public story


ತುಮಕೂರು: ಸಂವಿಧಾನ ದೇಶದ ಹೃದಯವಿದ್ದಂತೆ, ಎಲ್ಲರಿಗೂ ಸಂವಿಧಾನದ ಸಾಮಾನ್ಯ ಜ್ಞಾನವಿರಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ವಕೀಲ ಸಿ.ಕೆ. ಮಹೇಂದ್ರ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮನ್ನಣೆ ನೀಡಲಾಗಿದೆ‌. ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವ ನಮ್ಮದಾಗಬೇಕೆಂಬುದು ಸಂವಿಧಾನದ ಆಶಯವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಕ್ತ ಅವಕಾಶ ಸಿಗಬೇಕು ಎಂದರು.

ವ್ಯಕ್ತಿಯ ಘನತೆ ಗೌರವ ಕಾಪಾಡುವ ಸಂವಿಧಾನದಡಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಹಾಗಾಗಿ ಸಂವಿಧಾನಕ್ಕೆ ಗೌರವ ನೀಡುವ ಜೊತೆಗೆ ವಿಧೇಯರಾಗಿರಬೇಕು.ಭಾರತದ ಸಂವಿಧಾನವೆಂದರೆ ಕೇವಲ ಕಾನೂನು ಕಟ್ಟಳೆಗಳ ಪುಸ್ತಕವಲ್ಲ. ಅದು ಈ ದೇಶದ ಸಂಸ್ಕೃತಿ ಪರಂಪರೆ ಮತ್ತು ಸಮಗ್ರ ಬೆಳವಣಿಗೆಗೆ ಪೂರಕ ಅಂಶ ಒಳಗೊಂಡ ಗ್ರಂಥ ಎಂದರು.

ಪ್ರಾಂಶುಪಾಲರಾದ ಟಿ.ಡಿ.ವಸಂತ ಮಾತನಾಡಿ ವಿಶ್ವದ ಎಲ್ಲಾ ಸಂವಿಧಾನವನ್ನು ಅಧ್ಯಯನಮಾಡಿ ಭಾರತ ಶ್ರೇಷ್ಟ ಸಂವಿಧಾನ ರಚಿಸಲಾಗಿದೆ. ಜನರಿಗೆ ಮೂಲ ಹಕ್ಕುಗಳ ಜೊತೆಗೆ ಕರ್ತವ್ಯವನ್ನು ನೀಡಲಾಗಿದೆ. ಭಾರತವನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತಷ್ಟು ಬಲಿಷ್ಟಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನಾರಾಯಣಪ್ಪ, ಮತದಾರರ ಸಾಕ್ಷರತಾ ಕ್ಲಬ್ ಸಂಚಾಲಕ ಡಾ.ಜಿ.ತಿಪ್ಪೇಸ್ವಾಮಿ, ಉಪನ್ಯಾಸಕ ಸಿದ್ದೇಗೌಡ, ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ.ಮುದ್ದಗಂಗಯ್ಯ, ಎನ್ ಎಸ್ ಎಸ್ ಅಧಿಕಾರಿ ಹನುಮಂತ ರಾಯುಡು ಇನ್ನಿತರರು ಹಾಜರಿದ್ದರು.

ಸಂವಿಧಾನದ ಕಾರಣದಿಂದಲೇ ಎಲ್ಲರಿಗೂ ಸ್ಥಾನಮಾನ: ಸಂಗ್ರೇಶಿ

ತುಮಕೂರಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅಭಿನಂದನಾ ಪತ್ರವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ರಮೇಶ್ ಅವರಿಗೆ ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ನೀಡಿದರು. ಎಚ್.ಎಂ.ಎಸ್, ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್, ಷಫಿ ಅಹ್ಮದ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಪತ್ರಕರ್ತ ಪಿ.ಡಿ.ಈರಣ್ಣ ಇದ್ದಾರೆ.

Publicstory


ತುಮಕೂರು: ಸಂವಿಧಾನದ ಕಾರಣದಿಂದಲೇ ಎಲ್ಲ ಜಾತಿ, ಜನಾಂಗ, ಧರ್ಮದ ಜನರಿಗೆ ಸ್ಥಾನಮಾನ ಸಿಗಲು ಕಾರಣವಾಗಿದೆ ಎಂದು ತುಮಕೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಅವರು ಹೇಳಿದರು.

ನಗರ ಸುಫಿಯಾ ಕಾನೂನು ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಚ್ಎಂಎಸ್ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್, ರಚನಾ ಸಮಿತಿಯ ಸದಸ್ಯರುಗಳೆಲ್ಲರೂ ದೊಡ್ಡ ಮಹನೀಯ, ಮೇಧಾವಿಗಳಾಗಿದ್ದರು. ಅವರುಗಳ ಅವಿರತಶ್ರಮದಿಂದ ಇಂಥ ಸಂವಿಧಾನ ಸಿಗಲು ಕಾರಣವಾಯಿತು. ಬಡವರು. ದಲಿತರು, ಹಿಂದುಳಿದವರು, ಎಲ್ಲ ಧರ್ಮೀಯರು ಇಂದು ಉನ್ನತ ಸ್ಥಾನಮಾನ ನೋಡಲು ಸಾಧ್ಯವಾಗಿದ್ದು ಸಂವಿಧಾನದ ಕಾರಣದಿಂದ ಎಂದು ಅವರು ಅಭಿಪ್ರಾಯಪಟ್ಟರು.

ಕಾನೂನು ಶಿಕ್ಷಣದಲ್ಲಿ ಸುಫಿಯಾ ಕಾಲೇಜಿನ ವಿಧಾರ್ಥಿಗಳ ಸಾಧನೆ ಅಚ್ಚರಿಯನ್ನುಂಟು ಮಾಡುತ್ತದೆ. ಇದಕ್ಕೆ ಕಾರಣ ಇಲ್ಲಿನ ಗುಣಮಟ್ಟದ ಶಿಕ್ಷಣವಾಗಿದೆ. ಕಾನೂನು ಕ್ಷೇತ್ರದಲ್ಲಿ ಇಂದು ಅಗಾಧ ಅವಕಾಶಗಳಿವೆ, ಕಠಿಣ ಪರಿಶ್ರಮದಿಂದ ದೊಡ್ಡ ಸಾಧಕರಾಗಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ತಾಂತ್ರಿಕ ಶಿಕ್ಷಣದ ಕಡೆ ವಿದ್ಯಾರ್ಥಿಗಳ ಒಲವು ಹೆಚ್ಚುತ್ತಿದೆ. ಕಲಾ ವಿಭಾಗದ ಕಡೆ ವಿದ್ಯಾರ್ಥಿಗಳ ಒಲವು ಹೆಚ್ಚಬೇಕು. ಕಾನೂನು ವಿದ್ಯಾರ್ಥಿಗಳು ಜನ ಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.


ಕಾಲೇಜಿನ ಸಾಧನೆಗೆ ಮೆಚ್ಚುಗೆ ಸೂಚಿಸಿದ ನ್ಯಾಯಾಧೀಶರು

ಅತಿ ಕಡಿಮೆ ಅವಧಿಯಲ್ಲೇ ಕಾಲೇಜು ಉತ್ತಮ ಸಾಧನೆ ಮಾಡಿದೆ. ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಪಡೆದಿರುವ ಅಂಕಗಳು ನೋಡಿದರೆ ಎದೆತುಂಬಿ ಬರುತ್ತದೆ. ಇದೊಂದು ಅಗಾಧ ಸಾಧನೆಯೇ ಸರಿ ಎಂದು ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಮೆಚ್ಚುಗೆ ಸೂಚಿಸಿದರು.
ಕಾನೂನು ಸೇವಾ ಪ್ರಾಧಿಕಾರ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುವಿಕೆ ಖುದ್ದು ನೋಡಿದ್ದೇನೆ. ಅವರಲ್ಲಿನ ಶಿಸ್ತು, ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾದ ಪತ್ರಕರ್ತ ಪಿ.ಡಿ.ಈರಣ್ಣ ಮಾತನಾಡಿ, “ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ನ್ಯಾಯ ಒದಗಿಸುವ ಶಕ್ತಿ ವಕೀಲರಿಗಿದೆ. ಕಾನೂನು ವಿದ್ಯಾರ್ಥಿಗಳು ಸಮಾಜಮುಖಿ ಗುಣವನ್ನು ಬೆಳೆಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಪರವಾಗಿ ಯಾವಾಗಲೂ ನಿಲ್ಲಬೇಕು ಎಂದು ಹೇಳಿದರು.

ಪ್ರಾಂಶುಪಾಲರಾದ ಡಾ.ಎಸ್.ರಮೇಶ್ ಮಾತನಾಡಿ, ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆದವೇ ಜಾತಿ ವ್ಯವಸ್ಥೆ ಬಲಪಡಿಸುವ ಕೆಲಸ ಮಾಡುತ್ತಿರುವುದು ದುರಂತ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಎಚ್ಎಂಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್. ಷಫಿ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ಓಬಣ್ಣ ಇದ್ದರು. ಕಾನೂನು ವಿದ್ಯಾರ್ಥಿ ಚಿದಂಬರ ಸ್ವಾಗತಿಸಿದರು. ಸುಮಿತ್ರಾ ಮಾಲಿಪಾಟೀಲ, ಪ್ರಶಾಂತ್ ದಸೂಡಿ ಕಾರ್ಯಕ್ರಮ ನಿರೂಪಿಸಿದರು. ಸುವರ್ಣ ವಂದಿಸಿದರು.