Saturday, May 9, 2026
Google search engine
Home Blog Page 122

ಕನ್ನಡ ಕಥಾ ಲೋಕದಲ್ಲಿ ಹೊಸ ದನಿಗಳಿವೆ: ಜಯಶ್ರೀ ಕಾಸರವಳ್ಳಿ

ಕನ್ನಡ ಕಥಾ ಲೋಕದಲ್ಲಿ ಹೊಸ ಭರವಸೆಯ ದನಿಗಳು ಕೇಳಿ ಬರುತ್ತಿವೆ. ಅದರಲ್ಲಿ ಮಧುಸೂದನ ವೈ ಎನ್ ಅವರ ‘ಫೀ ಫೋ’ ಸಹಾ ಒಂದು ಎಂದು ಸಾಹಿತಿ ಜಯಶ್ರೀ ಕಾಸರವಳ್ಳಿ ಅವರು ಅಭಿಪ್ರಾಯಪಟ್ಟರು.

‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಆನ್ ಲೈನ್ ಕಾರ್ಯಕ್ರಮದಲ್ಲಿ ಅವರು ‘ಬಹುರೂಪಿ’ ಪ್ರಕಾಶನದ ಮಧುಸೂದನ ವೈ ಎನ್ ಅವರ ‘ಫೀ ಫೋ’ ಕಥಾ ಸಂಕಲನ ಕುರಿತು ಮಾತನಾಡಿದರು. ಸತ್ಯ ಮತ್ತು ಮಿಥ್ಯೆಯ ನಡುವಿನ ಸಂಘರ್ಷದ ಚರ್ಚೆಯನ್ನು ಈ ಕಥಾ ಸಂಕಲನ ಕೈಗೆತ್ತಿಕೊಂಡಿದೆ. ಈ ಎರಡರ ನಡುವಣ ಭ್ರಾಂತಿಯಲ್ಲಿ ನಮ್ಮ ಬದುಕು ಸಾಗುತ್ತಿದೆ ಎಂದು ವಿವರಿಸಿದರು.

ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ, ಸಾಹಿತಿ ಜೋಗಿ ಅವರು ಮಧುಸೂದನ ಅವರ ಕಥೆಗಳು ಕಂಗೆಡಿಸುವ ಕಥೆಗಳು ಎಂದು ಬಣ್ಣಿಸಿದರು. ಇವತ್ತಿನ ಸೋಶಿಯಲ್ ಮೀಡಿಯಾ ಜಗತ್ತು ನಮ್ಮನ್ನು ಅಭಿಪ್ರಾಯ ರೂಪಿಸಿಕೊಳ್ಳಬೇಕಾದ ಪ್ರೋಗ್ರಾಮ್ ಗೆ ಒಳಪಡಿಸುತ್ತಿದೆ. ಇಂತಹ ಒತ್ತಡವನ್ನು ಹಿಡಿದಿಟ್ಟ ಹೊಸ ರೀತಿಯ ಕಥೆಗಳು ಇವು. ಹೊಸ ಅನುಭವ ಕಟ್ಟಿಕೊಡುತ್ತವೆ. ನಮ್ಮಲ್ಲಿ ಬಿತ್ತಿ ಮೊಳಕೆಯೊಡೆಯುವ ಕಥೆಗಳು ಎಂದು ಬಣ್ಣಿಸಿದರು.

ಕಥೆಗಾರ ಮಧುಸೂದನ ವೈ ಎನ್ , ಮಾತನಾಡಿ ಫೀ ಫೋ ಎನ್ನುವುದು ಕಂಪ್ಯೂಟರ್ ಲೋಕದ ಪದ. ಸರತಿಯಲ್ಲಿ ಮೊದಲು ನಿಂತದ್ದು ಮೊದಲು ಹೊರಗೆ ಬರುತ್ತದೆ ಎನ್ನುವ ಅರ್ಥ. ಮಾನವನ ನೆನಪುಗಳು, ಅನುಭವಗಳು ಗಣಿಯಲ್ಲಿನ ಖನಿಜದಂತೆ. ಈ ಖನಿಜವನ್ನು ಹೊರತೆಗೆಯುವ ಬಗೆ ಹೇಗೆ ಎಂದು ಯೋಚಿಸಿದಾಗ ಹುಟ್ಟಿಕೊಂಡ ಕಥೆಗಳು ಇವು ಎಂದರು. ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಮಾತನಾಡಿದರು.

ಭಾನುವಾರದ ಕವಿತೆ :ಬಿಸಿಲು

ಮಳೆಯಲ್ಲಿ ನೊಂದವರು ಬೆಂದವರು ಒಂದಡೆ. ಮತ್ತೊಂದೆಡೆ ಬೆಚ್ಚನೆ ಮನೆ ಒಬ್ಬರಿಗೆ, ಒಬ್ಬರಿಗೆ ಖುಷಿ ಒಬ್ಬರಿಗೆ ನೋವು, ನೆನೆಯದೆ ಒದ್ದೆಯಾಗಲಾರವು. ದೈವ ನಿಯಾಮಕ ಎಂಬ ಅರ್ಥದಲ್ಲಿ ಜಡಿ ಮಳೆಯ ನಂತರದ ಬಿಸಿಲು ಈ ಕವನದ ವಸ್ತುವನ್ನಾಗಿಸಿಕೊಂಡಿದ್ದಾರೆ ಕವಯತ್ರಿ ಡಾ. ರಜನಿ.


ಮುನಿಸಿನ ನಂತರದ
ನಿನ್ನ ನಗು ….
ಜಡಿ ಹಿಡಿದ ಮಳೆ
ನಂತರದ ಎಳೆ ಬಿಸಿಲು.

ಸ್ಟೆಟರ್, ಕೊಡೆ
ಆಗಿ ಬರುವುದಿಲ್ಲ…
ಬಯಲು ಸೀಮೆಯ ನಮಗೆ.

ನೀರು ಮುಟ್ಟಲು ಕೊರೆತ
ಕೈಗಳು ತಣ್ಣಗೆ….
ಮಜ್ಜಿಗೆ ಒಗ್ಗದು.

ಬಟ್ಟೆ ಒಣಗಲ್ಲ
ಮುಗ್ಗಲು…
ಕಾಲಿಡೆ ಕೆಸರು.

ಅಜ್ಜಿಗೆ ಕುಡಿಯಲು
ಬಿಸಿ ನೀರು….
ಸಂಜಿಗೆ ಬಿಸಿ
ಉದಕ.

ರೆಕ್ಕೆ ಬಿಚ್ಚಿ ಹಾರಿದ
ಚಿಟ್ಟೆ …
ಬೆನ್ನಿಗೆ
ಎಳೆ ಬಿಸಿ ಕಾವು.

ಬಿಸಿಲ ಸಿರಿ
ಮಳೆ ನಂತರ …
ಬೇಸಿಗೆ ಬೇಗೆಗೆ
ಮಳೆ ನೀರ ಹೊಳೆ.

ಅದಿದ್ದಾಗ
ಇದು …
ಇದಿದ್ದಾಗ
ಅದು.

ನೋಡಿ
ಕಲಿತರೆ ಏನು?
ಮಳೆಯಲ್ಲಿ
ಒದ್ದೆಯಾಗದೆ ?

ಗೇದು ಬಿಸಿಲಲ್ಲಿ
ಬೆವರಿ…
ಚೊಂಬೆತ್ತಿ
ತಣ್ಣೀರ ಕುಡಿಯದೆ .

ಇನಿತು ಬಿಸಿಲ
ರವಷ್ಟು ಚಳಿಯ …
ಕೊಂಚ
ಮಳೆಯ.

ಮೋಡದೊಳಗೆ
ಮಳೆಯನ್ನು..
ಮೋಡದಂಚಿನಲಿ
ಬಿಸಿಲನ್ನು.

ಸುರಿವ ಮಳೆಯಲ್ಲಿ
ಎಳೆ
ಬಿಸಿಲ…
ಕಾಗೆ ಮಳೆಯ.

ಮಾಡುವೆ ಹೇಗೋ
ಮನುಜ…
ಬಚ್ಚಲ ವಂದರಿಯ
ನೀರಿನಲ್ಲಿ?

ನಮಿಸಬಾರದೇ?
ಸುರಿವ ಮಳೆಯಲ್ಲಿ
ಸುಡುವ ಬಿಸಿಲಲ್ಲಿ

ಆ ಐಚೋಜಿಗಕ್ಕೆ…

ನೆಂದವರ
ಬೆಂದವರ
ಬೆವೆತು ಹಣ್ಣಾದವರ
ಕಾಯಿ ನೀನು ಎಂದು…

ಡಾII ರಜನಿ

ಮಳೆಗೆ ನಲುಗಿದ ತುರುವೇಕೆರೆ: ಲಕ್ಷಾಂತರ ರೂಪಾಯಿ ನಷ್ಟ, ಮನೆಗಳಿಗೆ ಹಾನಿ

ತುರುವೇಕೆರೆ: ತಾಲ್ಲೂಕಿನಾದ್ಯಂತ ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಮನೆಗಳ ಗೋಡೆ ಕುಸಿದು, ವಿದ್ಯುತ್ ಕಂಬಗಳು ಮುರಿದು, ರಾಗಿ ಬೆಳೆಗಳು ಹಾನಿಯಾಗಿ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿರುವ ದಂಡಿನಶಿವ ಹೋಬಳಿಯಲ್ಲಿ ಮಳೆಗಾಳಿಗೆ ತೆಂಗಿನ ಮರ ಬಿದ್ದು ವಿದ್ಯುತ್ ಕಂಬದ ಮೇಲೆ ಬಿದ್ದು ದ್ಯಾಮಸಂದ್ರದಲ್ಲಿ 2, ಅಪ್ಪಸಂದ್ರದಲ್ಲಿ 5 ವಿದ್ಯುತ್ ಕಂಬಗಳು ಮುರಿದಿವೆ.

ಪಟ್ಟಣದ ವ್ಯಾಪ್ತಿಯ ಕಾಳಪ್ಪನ ಪಾಳ್ಯ, ಹರಿದಾಸನಹಳ್ಳಿ, ಮಾರಸಂದ್ರ ಪೂರಕದಲ್ಲಿ 3 ವಿದ್ಯುತ್ ಕಂಬಗಳು ಮುರಿದಿವೆ. ತಂಡಗ ಶಾಖೆಯ
ಹಳ್ಳದಹೊಸಹಳ್ಳಿ, ದಬ್ಬೇಘಟ್ಟ, ಹಾಗು ಇನ್ನಿತರ ಭಾಗಗಳಲ್ಲಿ ವಿದ್ಯುತ್ ಪರಿವರ್ತಕ ಮತ್ತು ವಿದ್ಯುತ್ ಕಂಬಗಳ ಸೇರಿ ಒಟ್ಟು 20 ಕಂಬಗಳು ಮುರಿದು ಧರೆಗುರುಳಿವೆ.
ತಾಲ್ಲೂಕಿನ ಮಾಚೇನಹಳ್ಳಿ ಶಾಲಾ ಹತ್ತಿರದ ಹೇಮಾವತಿ ಉಪನಾಲೆಯು ಒಡೆದು ಅಪಾರ ಪ್ರಮಾಣದ ನೀರು ರೈತ ತೋಟ, ಹೊಲಗಳಿಗೆ ನುಗ್ಗಿ ಹಾನಿಯುಂಟು ಮಾಡಿದೆ.

ಪಟ್ಟಣದ ಸುಭ್ರಹ್ಮಣಂ ಹಾಗು ಮೀನಾಕ್ಷಿ ನಗರದ ತಗ್ಗಿನ ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಆಗೆಯೇ ಕಾಳಂಜಿಹಳ್ಳಿ-ಕುಣಿಕೇನಹಳ್ಳಿ ಬಳಿ ಕೋಳಿ ಫಾರಂ ಶೆಡ್ನ ಒಂದು ಭಾಗ ಧರೆಗುರುಳಿದೆ.

ಮನೆ ಗೋಡೆ ಕುಸಿತ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ದೊಂಬರಹಟ್ಟಿ 2, ವಿವೇಕಾನಂದ ನಗರ2, ತಾವರೆಕೆರೆ 1, ಹಿರೇಡೊಂಕಿಹಳ್ಳಿ 2, ಗೊಟ್ಟಿಕೆರೆ1, ದುಂಡಾಮಜರೆ ಕೋಡಿಹಳ್ಳಿ 1, ದುಂಡ 1, ದೊಡ್ಡೇನಹಳ್ಳಿ 2, ದಂಡಿನಶಿವರ ಹೋಬಳಿ ವ್ಯಾಪ್ತಿಯ ದಂಡಿನಶಿವರ, ಹಟ್ಟಿಹಳ್ಳಿಗೊಲ್ಲರಹಟ್ಟಿ, ಸಂಪಿಗೆ, ಸೊಪ್ಪನಹಳ್ಳಿಯಲ್ಲಿ ತಲಾ ಒಂದೊಂದು, ಡೊಂಕಿಹಳ್ಳಿ ಗೊಲ್ಲರಹಟ್ಟಿ 2, ಮಾಯಸಂದ್ರದ ಜಿ.ದೊಡ್ಡೇರಿ1, ದಬ್ಬೇಘಟ್ಟ ಹೋಬಳಿಯ ಕ್ಯಾಮಸಂದ್ರ, ಮಾರಪ್ಪನಹಳ್ಳಿ, ಚಂದ್ರಾಪುರ ಮತ್ತು ರಂಗನಹಳ್ಳಿಯಲ್ಲಿ ತಲಾ ಒಂದೊಂದು ಮನೆಗಳ ಗೋಡೆಯು ಕುಸಿದು ಮನೆಯಲ್ಲಿದ್ದ ಕೆಲ ವಸ್ತುಗಳು ಹಾನಿಗೊಳಗಾಗಿವೆ.

ರಾಗಿ ಹಾನಿ: ‘ತಾಲ್ಲೂಕಿನಲ್ಲಿ 16800 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ರಾಗಿ ಬೆಳೆ ಭಿತ್ತನೆಯಾಗಿದ್ದು ಆ ಪೈಕಿ 12800 ಹೆಕ್ಟೇರ್ ಪ್ರದೇಶ ವಿಪರೀತ ಮಳೆಗೆ ರಾಗಿ ಭಾಗಶಃ ಹಾನಿಯಾಗಿದೆ’ ಎನ್ನುತ್ತಾರೆ ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ಬಿಗಿನೇಹಳ್ಳಿ ಸೇರಿದಂತೆ ಕೆಲ ಭಾಗಗಳಲ್ಲಿ ರಾಗಿ ತೆನೆಗಳಲ್ಲೇ ಮೊಳಕೆಯೊಡೆದಿದೆ.

ರಸ್ತೆ ಮೇಲೆ ಹರಿದ ಹಳ್ಳ: ತಾಲ್ಲೂಕಿನ ತುರುವೇಕೆರೆ- ಕಲ್ಲೂರ್ ಕ್ರಾಸ್ ರಸ್ತೆಯ ಕೊಂಡಜ್ಜಿ ಹಳ್ಳ ರಸ್ತೆ ಮೇಲೆ ಹರಿದು ಬೆಳಗಿನ ಕೆಎಸ್ಆರ್ಟಿಸಿ ಬಸ್ ಹಳ್ಳ ದಾಟಲು ಹರಸಾಹಸಪಟ್ಟಿತು. ಅದೇ ರೀತಿ ಮಾದಿಹಳ್ಳಿ-ಅರಳೀಕೆರೆಹಳ್ಳ, ದೊಂಬರನಹಳ್ಳಿ- ಚುಮ್ಮನಹಳ್ಳಿ ಹಳ್ಳ, ಸಾರಿಗೆಕೆರೆ ತುಂಬಿ ರಭಸವಾಗಿ ರಸ್ತೆ ಮೇಲೆ ಹರಿಯುತ್ತಿದ್ದು ವಾಹನ ಸಂಚಾರ ಕಷ್ಟವಾಗಿದೆ. ಇನ್ನೂ ಶಿಂಷಾ ನದಿಯ ನೀರು ಪುರದ ಪಾಳ್ಳದಲ್ಲಿ ರಸ್ತೆಗೆ ನುಗ್ಗಿದೆ, ಮಲ್ಲಾಘಟ್ಟಕೆರೆ ಹರಿಯುತ್ತಿರುವುದರಿಂದ ಆನೇಕೆರೆ ಭಾಗಗಕ್ಕೆ ಹೋಗಲು ತೊಂದರೆಯಾಗುತ್ತಿದೆ.

ತುರುವೇಕೆರೆ ತುಂಬಿ ಶಿಂಷಾ ನದಿಗೆ ರಭಸವಾಗಿ ಹರಿಯುತ್ತಿದ್ದು ಮುನಿಯೂರು ಗದ್ದೆ ಬಯಲು ಸಂಪೂರ್ಣ ಜಲಾವೃತವಾಗಿದೆ. ಬಾಣಸಂದ್ರದಲ್ಲಿ ರೈಲ್ವೇ ಮೇಲ್ ಸೇತುವೆಯ ಕೆಳಗೆ ಮೂರು ಅಡಿ ನೀರು ನಿಂತು ವಾಹನ ಮತ್ತು ಜನ ಸಂಚಾರಕ್ಕೆ ತೊಂದರೆಯಾಗಿದೆ.
ತುರುವೇಕೆರೆ ಕಸಬ 100, ದಂಡಿನಶಿವರ 128, ಸಂಪಿಗೆ 54, ಮಾಯಸಂದ್ರ 39, ದಬ್ಬೇಘಟ್ಟ 29 ಮಿ.ಮೀಟರ್ ಮಳೆಯಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಆರ್.ನಯೀಂಉನ್ನಿಸಾ, ಬೆಸ್ಕಾಂ ಶಾಖಾಧಿಕಾರಿಗಳಾದ ಸೋಮಶೇಖರ್, ಉಮೇಶ್ವರಯ್ಯ, ಕಾಂತರಾಜು, ಗಿರೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ, ಗ್ರಾಮ ಲೆಕ್ಕಾಧಿಕಾರಿಗಳಾದ ರಮೇಶ್, ಅಣ್ಣಪ್ಪಸ್ವಾಮಿ, ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಸ್ಎಸಿ ಮಯೂರು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ

Punlicstory


ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿನ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಎಸ್ಎಸಿ ಮಯೂರು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೇ ಅಧ್ಯಕ್ಷರು, ಅತಿಥಿಗಳಾಗಿ ಭಾಗವಹಿಸಿ ಸಂಭ್ರಮದಿಂದ ಆಚರಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಜವಹರಲಾಲ್ ನೆಹರೂ ಅವರು ಮಕ್ಕಳಿಗೆ ತೋರುತ್ತಿದ್ದ ಪ್ರೀತಿ, ಕಾಳಜಿ, ಉದಾರತೆಗಳ ಕುರಿತು ಮಾತನಾಡಿದರು. ಕೆಲ ವಿದ್ಯಾರ್ಥಿಗಳು ನೆಹರೂ ಜೈಲಿನಲ್ಲಿದ್ದಾಗ ತನ್ನ ಮಗಳಾದ ಇಂದಿರಾ ಗಾಂಧಿಗೆ ಬರೆದ ಪತ್ರಗಳ ಬಗ್ಗೆ ಮಾಡುತ್ತಾ ದೊಡ್ಡವರನ್ನೂ ನಾಚುವಂತೆ ಭಾಷಾ ಮಾಡಿ ಕಾರ್ಯಕ್ರಮದಲ್ಲಿದ್ದವರಿಂದ ಚಪ್ಪಾಳೆ ಗಿಟ್ಟಿಸಿದರು.

ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಎಲ್ಲರನ್ನೂ ಹುಬ್ಬೇರುವಂತೆ ಮಾಡಿತು. ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಓಟದ ಸ್ಪರ್ಧೆ, ಕೆರೆ ದಡ, ಕಪ್ಪೆ ಓಟ, ಬಾಲನ್ನು ಬಕೀಟ್ನೊಳಗೆ ಹಾಕುವುದು, ಬಿಸ್ಕೇಟ್ ತಿನ್ನುವುದು, ಬಲೂನು ಊದುವ, ಮ್ಯೂಜಿಕಲ್ ಚೇರ್, ಭಾಷಣ ಮತ್ತು ಪ್ರಬಂಧ ಸ್ಪರ್ಧಿಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಕೊಟ್ಟು ಪ್ರೋತ್ಸಾಹಿಸಲಾಯಿತು. ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಜಯದೇವಮೂರ್ತಿ, ಶಿಕ್ಷಕರುಗಳಾದ ವಿಮಲ, ರೇಖಾ, ರಾಧಾ, ಶ್ರುತಿ, ಸೌಮ್ಯ, ನಾಗೇಶ್, ಗೌಡ, ಇಂದಿರಾ, ಕೋಮಲ, ಲತಾ, ಗೀತಾ, ಕವಿತ, ಸದಾಶಿವಯ್ಯ, ಮಮತಿ ಮತ್ತು ಸಿಬ್ಬಂದಿಗಳು ಉಪಸ್ಥಿತಿರಿದ್ದರು.

ಅಶಕ್ತರಿಗೆ ಶಿಕ್ಷಣದ ಕನಸು ಕೊಟ್ಟೆ: ತೇಜಸ್ವಿ ಕಟ್ಟೀಮನಿ

ವಿದ್ಯೆಯನ್ನು ಎಟುಕಿಸಿಕೊಳ್ಳಲಾಗದವರಿಗೆ ಶಿಕ್ಷಣದ ಕನಸನ್ನು ವಾಸ್ತವ ಮಾಡಿದ ಹೆಮ್ಮೆ ನನಗಿದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ ತೇಜಸ್ವಿ ಕಟ್ಟೀಮನಿ ಅವರು ಮನದುಂಬಿ ನುಡಿದರು.

‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಆನ್ಲೈನ್ ಕಾರ್ಯಕ್ರಮದಲ್ಲಿ ಪ್ರೊ ತೇಜಸ್ವಿ ಕಟ್ಟೀಮನಿ ಅವರ ಆತ್ಮಕಥನ ‘ಜಂಗ್ಲೀ ಕುಲಪತಿಯ ಜಂಗೀ ಕಥೆ’ಯನ್ನು ಬಿಡುಗಡೆ ಮಾಡಲಾಯಿತು. ಮಧ್ಯಪ್ರದೇಶದ ಅಮರಕಂಟಕದಲ್ಲಿ ಈ ಮೊದಲು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಎರಡನೆಯ ಕುಲಪತಿಯಾಗಿ ವಿಶ್ವವಿದ್ಯಾಲಯವನ್ನು ಕಟ್ಟಿದ ಕಥನ ಇದು.

ದೇಶದಲ್ಲಿರುವ ೧೦ ಕೋಟಿ ಆದಿವಾಸಿಗಳಿಗೆ ಈ ವಿಶ್ವವಿದ್ಯಾಲಯ ಬೆಳಕಿನ ಕಿಂಡಿಯಾಗುವಂತೆ ಮಾಡಿದೆ. ಇದಕ್ಕೆ ನಾನು ಬೆಳೆದು ಬಂದಿದ್ದ ದಾರಿಯೇ ಸ್ಫೂರ್ತಿಯಾಗಿತ್ತು. ಈ,ಎಮ್ಮೆ ಕಾಯುತ್ತಿದ್ದ, ಒಂದೇ ಶರ್ಟ್ ನಲ್ಲಿ ಕಾಲೇಜಿನ ವಿದ್ಯಾಭ್ಯಾಸ ಮಾಡಿದ ಈ ಹಳ್ಳಿಯ ಹುಡುಗನ ಮನಸ್ಸಿನ ತಲ್ಲಣವೇ ದೇಶದಲ್ಲಿ ಎಲ್ಲೆಡೆ ಹಂಚಿಹೋಗಿರುವ ಬುಡಕಟ್ಟು ಮಕ್ಕಳಿಗೆ ಈ ವಿಶ್ವವಿದ್ಯಾಲಯ ಆಸರೆಯಾಗುವಂತೆ ಮಾಡಲು ಕುಮ್ಮಕ್ಕು ಕೊಟ್ಟಿತು ಎಂದರು.

ಆದಿವಾಸಿಗಳು ಸಂಗ್ರಹ ಪ್ರವೃತ್ತಿಯನ್ನು ಹೊಂದಿಲ್ಲ. ಅವರು ಪ್ರಕೃತಿಯ ಆರಾಧಕರು ಅಂತಹ ಶುದ್ಧ ಮನಸ್ಸುಳ್ಳವರನ್ನು ಇಂದು ನಗರವಾಸಿಗಳನ್ನಾಗಿ ಮಾಡಿ ಸಮಸ್ಯೆಯ ಸಂಕಟಕ್ಕೆ ದೂಡುತ್ತಿದ್ದೇವೆ. ಇಂತಹ ಸಮಯದಲ್ಲಿ ಅವರ ಕುಶಲತೆಯನ್ನು ದೇಶ ವಿದೇಶಕ್ಕೆ ಪರಿಚಯಿಸುವ ಅವಕಾಶ ನನಗೆ ಒದಗಿತು ಎಂದು ಸಂತಸ ವ್ಯಕ್ತಪಡಿಸಿದರು.

ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜೋಗಿ ಮಾತನಾಡಿ ಒಂದು ವಿಶ್ವವಿದ್ಯಾಲಯಕ್ಕೂ ಆತ್ಮಕತೆ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟವರಿ ತೇಜಸ್ವಿ ಕಟ್ಟೀಮನಿಯವರು. ಇದು ಸ್ಫೂರ್ತಿ ಉಕ್ಕಿಸುವ ಕಥನ. ಇಂದಿನ ಜಗತ್ತಿಗೆ ಗೊತ್ತಿಲ್ಲದ, ಆದರೆ ಗೊತ್ತಿರಲೇಬೇಕಾದ ಅನೇಕ ಸಂಗತಿಗಳನ್ನು ಈ ಕಥನ ಬಿಚ್ಚಿಡುತ್ತದೆ. ಒಬ್ಬ ವ್ಯಕ್ತಿಯ ಬಾಲ್ಯ ಆತನನ್ನು ರೂಪಿಸುತ್ತದೆ. ಅವನು ನಂತರ ಸಮಾಜವನ್ನು ರೂಪಿಸುತ್ತಾನೆ. ತಾನು ಬಾಲ್ಯದಲ್ಲಿ ಅನುಭವಿಸಿದ್ದನ್ನು ಮರೆಯದೆ ನೆನಪಲ್ಲಿಟ್ಟುಕೊಂಡು ತೇಜಸ್ವಿಯವರು ಸಮಾಜಕ್ಕೆ ಒಂದು ಒಳ್ಳೆಯ ಶಿಕ್ಷಣ ಹಾದಿ ರೂಪಿಸಿದ್ದಾರೆ ಎಂದರು.

ಕೃತಿ ಕುರಿತು ಮಾತನಾಡಿದ ಹಿರಿಯ ಕವಯಿತ್ರಿ ಎಚ್ ಎಲ್ ಪುಷ್ಪ ಅವರು ಒಂದು ವಿಶ್ವವಿದ್ಯಾಲಯವನ್ನು ಒಂದು ಹೊಸ ಮನೆ ಕಟ್ಟಿದ ರೀತಿಯಲ್ಲಿಯೇ ಸವಾಲುಗಳನ್ನು ಎದುರಿಸಿ ಕಟ್ಟಿದ್ದಾರೆ. ಬುಡಕಟ್ಟು ಜನಾಂಗದವರನ್ನು ಒಳಗೊಂಡು ಕಟ್ಟಿದ ತೇಜಸ್ವಿ ಕಟ್ಟೀಮನಿ ಅವರಿಗೆ ದೂರದೃಷ್ಟಿ ಇದೆ. ನಾಳಿನ ಜನಾಂಗ ಕಟ್ಟುವ ಕೆಲಸದಲ್ಲಿ ತೊಡಗಿದರೆ ಹೇಗೆ ಉತ್ತಮವಾದುದನ್ನು ರೂಪಿಸಬಹುದು ಎನ್ನುವುದಕ್ಕೆ ಸಾಕ್ಷಿ ಎಂದರು.

‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಅವರು ಮಾತನಾಡಿ ಇದು ಸಾಮಾಜಿಕ ಸಂಕಥನ ಎಂದು ಬಣ್ಣಿಸಿದರು.

ವಾಯು ಭಾರ ಕುಸಿತ

ಈ ಮಳೆಗೂ ಪ್ರೀತಿಗೂ
ಎಂತಹುದೋ ನಂಟು.
ಒಮ್ಮೆ ಬಿರುಗಾಳಿ
ಒಮ್ಮೆ ಮುನಿಸು
ಈ ಚಳಿ ಮಳೆಗೆ ಪ್ರೀತಿಗೂ ಸಮೀಕರಿಸಿದ ಕವನ
ಡಾII ರಜನಿ ಅವರಿಂದ


ಚುಮು ಚುಮು ಚಳಿ
ಗುದು ಗುದು ನಡುಕ..
ಜಿಟಿ ಜಿಟಿ ಮಳೆ
ಪಚ ಪಚ ಕೆಸರು

ಎಲ್ಲೋ ಬಚ್ಚಿಟ್ಟಿದ್ದ
ರಗ್ಗು ಸ್ಟೆಟರ್ ಗಳು
ಹೊರಕ್ಕೆ…

ಬಯಲು ಸೀಮೆ
ಮಲೆನಾಡು
ಆದ ಹಾಗೆ…

ಅಲ್ಲಿ ಕುಸಿತಕ್ಕೆ
ಇಲ್ಲಿ ಮಳೆ…
ಸುಂಟರಗಾಳಿ…

ಒಮ್ಮೆ ಬಿರುಗಾಳಿ
ಒಮ್ಮೆ
ಮಂದಾನಿಲ …

ಬಿಟ್ಟೂ ಬಿಡದೆ
ಬಿಟ್ಟು….
ಬಾರದೆ

ಬೇಕೆಂದಾಗ
ಬಾರದೆ ….
ಬೇಡೆಂದಾಗ
ಬಂದು…

ಸುಂಟರಗಾಳಿ
ಹಾದಿಯಲ್ಲಿ
ಎಲ್ಲಾ ನಾಶ…

ಬರಬಾರದೆ
ತಂಗಾಳಿಯಾಗಿ
ಬಾ…
ಎಂದಾಗ

ಜೊತೆಗೆ
ತುಂತುರು
ತಂದು …

ಡಾ II ರಜನಿ

ನಿಮ್ಮ ಮಗು

0

ಮಕ್ಕಳ ಮೇಲೆ ತಮ್ಮ ಆಸೆ ಆಕಾಂಕ್ಷೆ ಗಳನ್ನು
ಹೇರುತ್ತಾ ಒತ್ತಡಕ್ಕೆ ತಳ್ಳುವ ಹೆತ್ತವರಿಗೆ

ಖಲೀಲ್ ಗಿಬ್ರಾನ್ ಅವರ “ಮಕ್ಕಳು”
ಕವನದ ಅನುವಾದ ಮಾಡಿರುವ ಡಾII ರಜನಿ
ಕವಿಯ ಆಶಯವನ್ನು ಸಮರ್ಪಕವಾಗಿ
ವ್ಯಕ್ತಪಡಿಸಿದ್ದಾರೆ. ಮಕ್ಕಳ ಡಾಕ್ಟರ್ ಆದ ಅವರು
ಮಕ್ಕಳ ದಿನಾಚರಣೆಗೆ ಈ ಕವನ ಅನುವಾದಿಸಿದ್ದಾರೆ


ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ…

ಅವು ಈ ಜೀವ ಜೀವದ ಸೆಲೆಯ ಕಾಯುವಿಕೆಯ
ಮಗ ,ಮಗಳು …..
ಅವು ನಿಮ್ಮ ಮೂಲಕ ಬಂದಿವೆ
ನೀವು ಅವರನ್ನು ತಂದಿಲ್ಲ …..

ನೀವು ಅವರಿಗೆ ಪ್ರೀತಿ ಕೊಡಬಲ್ಲಿರಿ ಆದರೆ
ನಿಮ್ಮ ಆಲೋಚನೆಗಳನ್ನಲ್ಲ….
ಏಕೆಂದರೆ ಅವರಿಗೆ ತಮ್ಮದೇ ಆಲೋಚನೆಗಳಿವೆ.

ಅವರು ನಿಮ್ಮ ಮನೆಯಲ್ಲಿರಬಹುದು …
ಆದರೆ ನೀವು ಅವರ ಆತ್ಮಗಳನ್ನು ಸಾಕಲಾರಿರಿ
ಏಕೆಂದರೆ ಅವರ ಆತ್ಮಗಳು ನಾಳೆಯ
ಹುಡುಕಾಟದಲ್ಲಿವೆ.

ಆ ನಾಳೆಗಳನ್ನು ನೀವು ಕನಸಿನಲ್ಲೂ ಕಾಣಲಾರಿರಿ.

ನೀವು ಅವರಂತೆ ಆಗಲು ಇಚ್ಛಿಸಬಹುದು
ಆದರೆ ಅವರನ್ನು ನಿಮ್ಮಂತೆ ಮಾಡಲು ಪ್ರಯತ್ನಿಸಬೇಡಿ…
ಏಕೆಂದರೆ ಜೀವನವು ಹಿಂದಕ್ಕೆ ಚಲಿಸುವುದಿಲ್ಲ…
ಮತ್ತು ನಿನ್ನೆಯಲ್ಲಿ ಇರಲಾಗುವುದಿಲ್ಲ.

ನೀವು ಜೀವಂತ ಬಾಣಗಳನ್ನು
ಚಿಮ್ಮಿಸಿರುವ ಬಿಲ್ಲುಗಳು.
ಬಿಲ್ಲುಗಾರ ಅನಂತ ಪಥದ ಗುರಿ ಇಟ್ಟು
ಅಮಿತ ಶಕ್ತಿಯಲಿ ಬಾಗಿಸಬೇಕು ಬಿಲ್ಲನ್ನು…

ಹೇಗೆಂದರೆ …ಬಾಣಗಳು ವೇಗವಾಗಿ ದೂರ
ಹಾರುವಂತೆ.
ಬಾಗಿದುದಕ್ಕೆ ಸಂತಸಪಡುವಂತೆ…

ಚಿಮ್ಮಿದ ಬಾಣವನ್ನು ಪ್ರೀತಿಸಿದಂತೆ
ಬಾಗಿ ನಿಂತ ಬಿಲ್ಲನ್ನೂ ಪ್ರೀತಿಸಿ.

ಡಾII ರಜನಿ

ಕಲೀಲ್ ಗಿಬ್ರಾನ್ ಅವರ”ಮಕ್ಕಳು”
ಕವನ ಅನುವಾದ

ಮಲ್ಲಿಕಾರ್ಜುನ ದುಂಡ ಗೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ

Publicstory


ತುರುವೇಕೆರೆ: ವಿವಿಧ ರಂಗಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರ್ತಿಸಿ ಬೆಂಗಳೂರಿನ ಜನತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೀಡುವ ಪದ್ಮಭೂಷಣ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಗೆ ತುರುವೇಕೆರೆಯ ಮಲ್ಲಿಕಾರ್ಜುನ ದುಂಡ ಆಯ್ಕೆಯಾಗಿದ್ದಾರೆ.

ಮಲ್ಲಿಕಾರ್ಜುನ ದುಂಡ ಅವರು 3 ಬಾರಿ ಛಾಯಾಗ್ರಾಹಕ ಸಂಘದ ತಾಲ್ಲೂಕು ಅಧ್ಯಕ್ಷರಾಗಿ, 2 ಬಾರಿ ಲಯನ್ಸ್ ಅಧ್ಯಕ್ಷರಾಗಿ, ಕಾಲಬೈರವೇಶ್ವರ ಕಲಾ ಸಂಘದ ಖಜಾಂಚಿ, ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಕಾರ್ಯದರ್ಶಿ, ವಚನ ಸಾಹಿತ್ಯ ಪರಿಷತ್ತು ಹಾಗೂ ಜಯಕರ್ನಾಟಕ ಜನಪರ ವೇದಿಕೆ ಗೌರವಾಧ್ಯಕ್ಷ, ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಕಾರ್ಯದರ್ಶಿ ಹಾಗೂ ಖಜಾಂಚಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯ ಹಾಗೂ ಹಾಲಿ ಗ್ರಾಮೀಣ ಕಾರ್ಯದರ್ಶಿ ಸೇರಿದಂತೆ ತಾಲ್ಲೂಕಿನ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಸೇವೆ ಗುರ್ತಿಸಿ ತಾಲ್ಲೂಕು ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ತಾಲ್ಲೂಕು ಬಸವ ಸದನ ವತಿಯಿಂದ ಬಸವಪ್ರಭ ಪ್ರಶಸ್ತಿ, ರೋಟರಿ ಸಂಸ್ಥೆಯಿಂದ ಡೈಮಂಡ್ ಹೀರೋ ಸೇರಿದಂತೆ ಅನೇಕ ಪ್ರಶಸ್ತಿಗಳು ಈಗಾಗಲೇ ಅವರಿಗೆ ಸಂದಿವೆ.
ಇಂತಹ ಹತ್ತು ಹಲವು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಹೊಂದಿರುವ ಮಲ್ಲಿಕಾರ್ಜುನ ದುಂಡ ಅವರ ಸಮಾಜ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಜನತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ 2021-22 ನೇ ಸಾಲಿನ ಸಾಧಕರಿಗೆ ನೀಡುವ ಪದ್ಮಭೂಷಣ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ನ.13 ರಂದು ಶನಿವಾರ ಬೆಂಗಳೂರಿನ ನಯನ ಸಭಾಂಗಣ (ಕನ್ನಡ ಭವನ) ದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಪ್ರಶಸ್ತಿಗೆ ಆಯ್ಕೆಗೊಂಡ ಮಲ್ಲಿಕಾರ್ಜುನ ದುಂಡ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತಾಲ್ಲೂಕಿನ ಲಯನ್ಸ್ ಕ್ಲಬ್, ಛಾರಿಟಬಲ್ ಟ್ರಸ್ಟ್, ರೋಟರಿ ಕ್ಲಬ್, ಚಿತ್ರಕಲಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು, ಜಯಕರ್ನಾಟಕ ಸಂಘಟನೆ, ತಾಲ್ಲೂಕುಕಲಾವಿದರ ಸಂಘ, ವಚನ ಸಾಹಿತ್ಯ ಪರಿಷತ್ತು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಅಭಿನಂದಿಸಿದ್ದಾರೆ.