Saturday, May 9, 2026
Google search engine
Home Blog Page 146

ಕೊರೊನಾ: ಆರೋಗ್ಯ ಮಿತ್ರ ಎಂಬ ಶತ್ರು

0

ಸತೀಶ್


ಬೆಂಗಳೂರು: ಅರ್ಹ ರೋಗಿಗಳು ಬೆಡ್ ಸಿಗದೇ ರಸ್ತೆಯಲ್ಲಿ, ಮನೆಯಲ್ಲಿ ಉಸಿರು ಚೆಲ್ಲಿದ್ದಾರೆ.
ಬರೇ APP ಗಳ ಮೊರೆ ಹೋಗಿರುವ ಕರ್ನಾಟಕ Zoom ಸಭೆ ಮಾಡಿದ್ದೇ ಬಂತು.
ಎಲ್ಲದಕ್ಕೂ IAS ಅಧಿಕಾರಿ ಎನ್ನುವ ಸರಕಾರಕ್ಕೆ Bed Blocking ದಂಧೆ ಗೊತ್ತಿಲ್ಲ ಎಂದರೆ ನಂಬಲು ಅಸಾಧ್ಯವಾಗಿದೆ.

WAR Room ಮೆಲ್ವಿ ಚಾರಣಿ ಮಾಡುವ IAS ಅಧಿಕಾರಿಗೆ ಸಂಸದ ತೇಜಸ್ವಿ ಸೂರ್ಯ ಅವರ ರೀತಿಯಲ್ಲಿ ಪರಿಶೀಲಿಸಲು ಬರಲ್ಲ ಎಂದರೆ ಅದು ಸುಳ್ಳು. ಒಬ್ಬ IAS ಅಧಿಕಾರಿಗೆ ಅಷ್ಟು ಗೊತ್ತಾಗುವುದಿಲ್ಲವೇ?

ಈ ಆರೋಗ್ಯ ಮಿತ್ರರು ಎಲ್ಲ ಕಡೆಯು ಗುತ್ತಿಗೆ ಆಧಾರದ ನೌಕರರು. ಇವರ ಮೇಲೆ ಆಯಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗಳಿಗೆ ನಿಯಂತ್ರಣ ಇರುತ್ತದೆ. ಹಾಗಾದರೆ ಇವರ ಸಂಬಳ ನೀಡುವ ಅಧಿಕಾರಿಗಳು ಅಮೇಧ್ಯ ತಿನ್ನುತ್ತಿದ್ದಾರಾ?

ಮೆಡಿಕಲ್ ಸೀಟ್ ಬ್ಲಾಕ್ ಮಾಡುವ ರೀತಿಯಲ್ಲೇ ಈ Bed Blocking ದಂಧೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಮಿತ್ರರು ಈ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಕೇಳಿ ಬರತೊಡಗಿವೆ.

SAST ಎನ್ನುವುದೇ BDA ಥರದ ಕರ್ಮಕಾಂಡ. SAS Tಅಧಿಕಾರಿಗಳನ್ನು ACB ride ಮಾಡಿದರೆ ಇವರ ಆಸ್ತಿ ಗೋಚರ ಆಗುತ್ತದೆ. ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಲು ಇವರಿಗೆ ಮಾಮೂಲಿ ನೀಡಬೇಕೆಂಬ ಮಾತು ಖಾಸಗಿ ಆಸ್ಪತ್ರೆಗಳ ವಲಯದಲ್ಲಿದೆ.

ಕೊರೋನಾ ಅಲ್ಲದೆ ಇಥರೆ ಕ್ಯಾನ್ಸರ್, ಹೃದಯ ರೋಗಿಗಳನ್ನು ನೋಂದಾಯಿತ ಆಸ್ಪತ್ರೆಗೆ ಆರೋಗ್ಯ ಮಿತ್ರರು ರೆಫರ್ ಮಾಡಲು ಸಹ ಲಂಚ ನೀಡಬೇಕು. ಇದನ್ನು ಹೇಗೆ ಬೆಳೆಯಲು ಬಿಡಲಾಗಿದೆ‌.

ಯಾಕೆ ಕೆಲವೇ ನೊಂದಾಯಿತ ಆಸ್ಪತ್ರೆಗೆ ಹೆಚ್ಚು SAST ಪ್ರಕರಣಗಳು ರೆಫರ್ ಆಗುತ್ತವೆ ಎಂಬ ಬಗ್ಗೆ ತನಿಖೆ ಮಾಡುವ ಅಗತ್ಯವಿದೆ. ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಡೇಟಾ ನೋಡಿ.

ಖಾಸಗಿ ಆಸ್ಪತ್ರೆಗಳು ghost ರೋಗಿಗಳನ್ನು ತೋರಿಸಿ Bed Block ಮಾಡಿದ್ದರೆ ರೋಗಿಯ ಹೇಳಿಕೆ ತಗೊಳ್ಳಿ case sheet ನೋಡಿ. ವಾರಸುದಾರರ ಸಹಿ ನೋಡಿ ಅವರೂ ಶಾಮೀಲು -ಆಗಿದ್ದರೆ ಕ್ರಿಮಿನಲ್ ಮೊಕದ್ದಮೆ ಹಾಕಿ.

ಈ ದಂಧೆಯಲ್ಲಿ ತೊಡಗಿದ್ದ ಖಾಸಗಿ ಆಸ್ಪತ್ರೆಗಳ CEO ಅವರನ್ನು ಕೂಡಲೇ ಅರೆಸ್ಟ್ ಮಾಡಿ . ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಒಂದೇ ರೋಗಿಯ ಹೆಸರಲ್ಲಿ 5 Bed Block ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅಲ್ಲಿಯ CEO ಅವರನ್ನು ವಿಚಾರಣೆ ನಡೆಸಿ ಸುದ್ದಿ ನಿಜವಾಗಿದ್ದರೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಇದು ಜನರಲ್ಲಿ ಸರ್ಕಾರದ ಮೇಲೆ ವಿಶ್ವಾಸ ಹೆಚ್ಚಿಸಲು ಕಾರಣವಾಗಲಿದೆ.

ಸಣ್ಣ ಜಿಲ್ಲೆಗಳಲ್ಲಿ ಕೂಡ ಆರೋಗ್ಯ ಮಿತ್ರರನ್ನು ಪರಿಶೀಲಿಸುವ ಕೆಲಸ ಯುದ್ಧೋಪಾದಿಯಲ್ಲಿ ಈಗ ನಡೆಯಬೇಕಾಗಿದೆ.

ರೋಗಿ ಆಸ್ಪತ್ರೆಗೆ ಬಂದಾಗ ಸಿಗುವ ಕಂಪ್ಯೂಟರೈಸ್ಡ್ ಚೀಟಿಯಲ್ಲಿ ರೋಗಿ ಬಂದ ಸಮಯ ದೊರೆಯುತ್ತದೆ.
Bed allot ಮಾಡದೆ ಮುಂದೆ ಬಂದ ಬೇರೆ ರೋಗಿಗೆ ಬೆಡ್ ನೀಡಿದ್ದರೆ ಕಂಡು ಹಿಡಿಯಿರಿ. ಇದುವೇ ಬ್ಲಾಕಿಂಗ್ ದಂಧೆ. ಹೀಗಾಗಿ ದಂಧೆಯನ್ನು ಸುಲಭವಾಗಿ ಕಂಡು ಹಿಡಿಯಬಹುದಾಗಿದೆ.

ಮೊದಲ ದಿನ ಬಂದ ರೋಗಿಯು ಎರಡನೇ ಅಥವಾ ಮೂರನೇ ದಿನ ಬಂದಾಗ ಅಂತ ರೋಗಿಯನ್ನು ಬೆಡ್ ಇಲ್ಲ ಎಂದು ವಾಪಸ್ ಕಳುಹಿಸಲಾಗುತ್ತದೆ ಹೊರತು ಒಪಿಡಿ ಚೀಟಿಯಲ್ಲಿ ಬೆಡ್ ಇಲ್ಲ ಎಂದು ಬರೆಯುತ್ತಿಲ್ಲ, ದಿನಾಂಕ,‌ಸಮಯವನ್ನು ನಮೂದು ಮಾಡುವುದಿಲ್ಲ. ಇಂತ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸಾಯುತ್ತಿದ್ದಾರೆ.

ಸೋಂಕಿತ ಯಾವಾಗಲೇ, ಎಷ್ಟೇ ದಿನ ಅಸ್ಪತ್ರೆಗೆ ಬರಲೀ ಆತನ ಹೊರ ರೋಗಿಗಳ ದಾಖಲು ಚೀಟಿಯಲ್ಲಿ ಪ್ರತಿ ಸಾರಿಯೂ ದಿನಾಂಕ, ಸಮಯ ಬರೆಯಬೇಕು. ಬೆಡ್ ಇಲ್ಲದಿದ್ದರೆ ಬೆಡ್ ಇಲ್ಲ ಎಂದು ನಮೂದಿಸಬೇಕು. ಅಗ ಆರೋಗ್ಯ ಮಿತ್ರರೂ ಇಂತ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಬೇಕು. ಆರೋಗ್ಯ ಮಿತ್ರರು ಇಂತ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನು ಕೇಳುವ ಕೆಲಸವನ್ನು ಆರೋಗ್ಯ ಸಚಿವರು ಒಂದು ದಿನವಾದರೂ ಮಾಡಲಿ.

ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಆಸ್ಪತ್ರೆ ಮುಂಭಾಗ ಆರೋಗ್ಯ ಸಚಿವರು ಅರ್ಧ ಗಂಟೆ ನಿಂತು ಬೆಡ್ ಇಲ್ಲ ಎಂದು ವಾಪಸ್ ಆಗುತ್ತಿರು ವ ಸೋಂಕಿತರ ಹೊರ ರೋಗಿ ದಾಖಲು ಚೀಟಿಯನ್ನು ನೋಡಿದರೆ ಏನಾಗುತ್ತಿದೆ ಎಂಬುದು ಅವರ ಅರಿವಿಗೇನೆ ಬರಲಿದೆ.

ಒಂದೇ ಸಂಜೆಗೆ 1500 Bed Unblock ಆಯ್ತು ಅಂದರೆ ಇನ್ನು ಯಾವ ಮಟ್ಟಕ್ಕೆ ದಂಧೆ ನಡೆದಿದೆ ಊಹಿಸಿ. ಸಚಿವರು, ಸರ್ಕಾರ ಈಗಲಾದರೂ ವಾಸ್ತವದ ಕಡೆ ಕಣ್ಣಾಯಿಸಲಿ. ಮೂಲದಲ್ಲಿ ಆಗುತ್ತಿರುವ ತಪ್ಪನ್ನು ಗಮನಿಸಲಿ.

ಕೊರೊನಾ: ಹೋಂ ಐಸೋಲೇಷನ್ ಎಂಬ ಮರೀಚಿಕೆ?

0

ಮಹೇಂದ್ರಕೃಷ್ಣಮೂರ್ತಿ,ಸತೀಶ್


ತುಮಕೂರು/ಬೆಂಗಳೂರು: ಕೊರೊನಾ ಸೋಂಕಿತರು ಸ್ಥಿರವಾಗಿದ್ದಲ್ಲಿ ಹೋಂ ಐಸೋಲೇಷನ್ (ಮನೆಯಲ್ಲೇ ಪ್ರತ್ಯೇಕ ವಾಸ) ಇರಬೇಕೆಂದು ಸರ್ಕಾರ ಹೇಳುತ್ತಿದೆ. ಹೋಂ ಐಸೋಲೇಷನ್ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಆದರೆ ಹೋಂ ಐಸೋಲೇಷನ್ ಎಂಬುದು ಬಡವರ ಪಾಲಿಗೆ ಮರೀಚಿಕೆಯಾಗುತ್ತಿದೆ  ಮಾತ್ರವಲ್ಲ ಪ್ರಾಣ ಕಳೆದುಕೊಳ್ಳುವ ರಹದಾರಿಯೂ ಆಗುತ್ತಿದೆ.

  • ಹೋಂ ಐಸೋಲೇಷನ್. ಕೋವಿಡ್ ಕೇರ್ ಸೆಂಟರ್ ನಲ್ಲಿ ನಲ್ಲಿ ತೀವ್ರವಾಗಿ ಅಸ್ವಸ್ಥರಾದವರು, ಉಸಿರಾಟಕ್ಕೆ ತೊಂದರೆಯಾದವರಿಗೆ ತಕ್ಷಣಕ್ಕೆ ಆಸ್ಪತ್ರೆಗಳಲ್ಲಿ ವೆಡ್, ಆಕ್ಸಿಜನ್ ಸಿಗದೇ ಹೋಗುತ್ತಿರುವ ಕಾರಣದಿಂದಾಗಿ ಜನರು ಹೋಂ ಐಸೋಲೇಷನ್,ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗಲು ಹೆದರುವಂತಾಗಿದೆ.

ಹೀಗಾಗಿಯೇ ಬಲಾಢ್ಯರು, ಶ್ರೀಮಂತರು, ರಾಜಕೀಯ, ಅಧಿಕಾರಶಾಹಿಯ ಸಂಪರ್ಕ ಇರುವವರು ಅಗತ್ಯ ಇಲ್ಲದಿದ್ದರೂ ಆಸ್ಪತ್ರೆಗಳಿಗೆ ಮುಂಜಾಗ್ರತಾ ಕ್ರಮವಾಗಿ ದಾಖಲಾಗುತ್ತಿದ್ದಾರೆ. ಇವರಿಗೆ ಬೆಡ್ ನೀಡುತ್ತಿರುವ ಕಾರಣ ಹೋಂ ಐಸೋಲೇಷನ್  ನಿಂದ ಬಂದ ತೀವ್ರ ಸಮಸ್ಯೆಯಲ್ಲಿರುವರಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ ಎಂದು ಹಲವು ವೈದ್ಯರು ಹೇಳುತ್ತಿದ್ದಾರೆ.

  • ತುಮಕೂರಿನ ಬನಶಂಕರಿಯ ಶ್ರೀನಿವಾಸ್ ಹೋಂ ಐಸೋಲೇಷನ್ ನಲ್ಲಿ ಇದ್ದವರು. ಉಸಿರಾಟದ ಸಮಸ್ಯೆ ಕಾರಣ ಅವರು ತುಮಕೂರು ಜಿಲ್ಲಾಸ್ಪತ್ರೆಗೆ ಬಂದರೂ ಅವರಿಗೆ ಬೆಡ್ ಸಿಗಲಿಲ್ಲ. ಸಿದ್ಧಾರ್ಥ ಆಸ್ಪತ್ರೆಗೆ ಹೋದರೂ ಅಲ್ಲೂ ಬೆಡ್ ಸಿಗದೇ ಕೊನೆಗೆ ಪ್ರಾಣವನ್ನೇ ಕಳೆದುಕೊಂಡರು. ಇಂಥ ಘಟನೆಗಳಿಂದಾಗಿ ಜನರು ಕೂಡಲೇ ಆಸ್ಪತ್ರೆಗೆ ದಾಖಲಾಗಲು ದುಂಬಾಲು ಬೀಳುತ್ತಿದ್ದಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ.

ಆಕ್ಸಿಜನ್ ಎಲ್ಲರಿಗೂ ಸಿಗಲಿದೆ ಎಂಬ ವಿಶ್ವಾಸ ಮೂಡಿಸುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ. ಕೀಲಾರದ ಧನಂಜಯ ಅವರು ಇದೇ ಕಥೆ. ಐಸೋಲೇಷನ್ ನಲ್ಲಿ ಇದ್ದವರು. ಉಸಿರಾಟದ ಸಮಸ್ಯೆಯಾದ ಕೂಡಲೇ ಅವರಿಗೂ  ಬೆಡ್ ಸಿಗಲಿಲ್ಲ. ಎರಡು-ಮೂರು ಆಸ್ಪತ್ರೆ ಅಲೆದು ಕೊನೆಗೆ ನೆಲಮಂಗಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಒಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕರೂ ಆಕ್ಸಿಜನ್ ಸಿಗದೇ ಸಾಯುತ್ತಿದ್ದಾರೆ. ಇನ್ನೊಂದು ಹೋಂ ಐಸೋಲೇಷನ್ ನಲ್ಲಿ ಇದ್ದವರಿಗೂ ಬೆಡ್ ಲಭ್ಯವಾಗದೇ ಕೊನೆಯುಸಿರು ಎಳೆಯುತ್ತಿದ್ದಾರೆ.

ಹೋಂ ಐಸೋಲೇಷನ್ ನಲ್ಲಿ ಇದ್ದವರು ಕಡ್ಡಾಯವಾಗಿ ಆಕ್ಸಿಜನ್ ಅಳೆಯುವ ಆಕ್ಸಿಜನ್ ಮೀಟರ್ ಇಟ್ಟುಕೊಂಡಿರಬೇಕು. ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಇದರ ಬೆಲೆ ಮೂರುವರೆ ಸಾವಿರದವರೆಗೂ ಇದೆ.

ಹೋಂ ಐಸೋಲೇಷನ್ ನಲ್ಲಿ ಇರುವ ಎಷ್ಟು ಸೋಂಕಿತರ ಬಳಿ ಆಕ್ಸಿಜನ್ ಅಳೆಯುವ ಸಾಧನ ಇದೆಯೇ ಎಂಬುದನ್ನು ಯಾವುದೇ ಜಿಲ್ಲಾಡಳಿತವೂ ಈವರೆಗೂ ನೋಡುವ ಗೋಜಿಗೆ ಹೋಗಿಲ್ಲ. ಎಷ್ಟು ಜನರ ಬಳಿ ಇದೆ? ಎಷ್ಟು ಜನರಿಗೆ ಸರ್ಕಾರವೇ ನೀಡಬೇಕು ಎಂಬ ಬಗ್ಗೆ ಯಾರಿಗೂ ಗೊತ್ತೇ ಇಲ್ಲ. ಇಂಥ ಸಣ್ಣಮಟ್ಟದ ಕೆಲಸಕ್ಕೂ ಹೈ ಹಾಕಿಲ್ಲ. ಹೋಂ ಐಸೋಲೇಷನ್ ಒಳಪಡುವವರು ಆಕ್ಸಿಜನ್ ಅಳೆಯುವ ಯಂತ್ರ ಇಟ್ಟುಕೊಂಡಿರಬೇಕು ಎಂದು ಸರ್ಕಾರ ಆದೇಶ ಹೊರಡಿಸದೆ. ಇಷ್ಟು ಮಾತ್ರ ಸಾಕೇ? ಹೋಗಲಿ ಆ ಸಾಧನವಾದರೂ ಸುಲಭವಾಗಿ ಸಿಗುತ್ತಿದೆಯೇ?  ಅದನ್ನು ಕೊಳ್ಳುವ ಶಕ್ತಿ ಎಲ್ಲರಲ್ಲೂ ಇದೆಯೇ?

ಹೋಂ ಐಸೋಲೇಷನ್ ನಲ್ಲಿ ಇರುವವನ್ನು ಹೇಗೆ ನೋಡಿಕೊಳ್ಳಬೇಕು ಎಂದು ಗೊತ್ತಿಲ್ಲದಿದ್ದರೆ ತಮಿಳುನಾಡು, ಆಂದ್ರಪ್ರದೇಶಕ್ಕೆ ಕಳುಹಿಸಿ ಅಲ್ಲಿ ಪಾಠ ಹೇಳಿಸಿಕೊಂಡು ಬರಬಹುದು.  ಅವರಿಗೆ ತಿಳಿಯುತ್ತಿರುವುದು ನಮಗೆ ಏಕೆ ತಿಳಿಯುತ್ತಿಲ್ಲ.

ಹೋಂ ಐಸೋಲೇಷನ್ ನಲ್ಲಿ ಸಮಸ್ಯೆ ಬಿಗಡಾಯಿಸಿ ಜಿಲ್ಲಾಸ್ಪತ್ರೆಗೆ ಬರುವ ಎಷ್ಟು ರೋಗಿಗಳಿಗೆ ಕರ್ನಾಟಕ ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂಬುದನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರು ನೋಡಬೇಕಾಗಿದೆ.

  • ಕರ್ನಾಟಕ ಆಯುಷ್ಮಾನ್ ಆರೋಗ್ಯ ಭಾಗ್ಯ ಯೋಜನೆಯಡಿ ಹೋಂ ಐಸೋಲೇಷನ್ನಿಂದ ಹೋದ ಎಷ್ಟು ರೋಗಿಗಳಿಗೆ ಖಾಸಗಿ ಆಸ್ಪತ್ತೆಗಳಲ್ಲಿ ಆಕ್ಸಿಜನ್ ನೀಡಲಾಗಿದೆ ಎಂಬ ಅಂಕಿ-ಅಂಶದ ಕಡೆಗಾದರೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಗಮನ ಹರಿಸಿದರೆ ಲೋಪದೋಷಗಳು ಕಂಡಬಂದಾವು.

ಹೋಂ ಐಸೋಲೇಷನ್ ನಲ್ಲಿ ಇರುವ ರೋಗಿಗಳ ಮನೆಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಪ್ರತಿ ದಿನ ಎರಡು ಸಲ ಆಕ್ಸಿಜನ್ ಮಟ್ಟ ನೋಡಬೇಕೆಂಬ ಆದೇಶವಿದೆ. ಒಬ್ಬೊಬ್ಬ ಆಶಾ ಕಾರ್ಯಕರ್ತೆ  100-200 ರೋಗಿಗಳನ್ನು ನೋಡಬೇಕಾದ ಪರಿಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ಅವರು ಎರಡು ಸಲ ಆಕ್ಸಿಜನ್ ಮಟ್ಟ ಪರೀಕ್ಷಿಸಬೇಕು ಎಂದು ಯಾರಾದರೂ  ನಿರೀಕ್ಷಿಸಲು ಸಾಧ್ಯವಾ?

ಕೊರೊನಾ: ಮೊದಲು ಯಾರು ಬರಬೇಕು ಸಚಿವರೇ?

0

ಸತೀಶ್


ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ನಡೆದ ಮಾರಣ ಹೋಮದ ಘಟನೆಗೆ ಪ್ರತಿಕ್ರಿಯಿಸುತ್ತಾ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ‌ ಸುರೇಶಕುಮಾರ ಅವರು ಜನರು ಆಸ್ಪತ್ರೆಗೆ ಲೇಟಾಗಿ ಬಂದಿರುವುದೇ ಸಾವಿಗೆ ಕಾರಣ ಎಂದಿದ್ದಾರೆ.

ಇನ್ನೂ ಆರೋಗ್ಯ ಸಚಿವರಾದ ಸನ್ಮಾನ್ಯ ಡಾಕ್ಟರ್ ಸಚಿವ ಡಾ. ಸುಧಾಕರ್ ಅವರು ಇಲ್ಲ, ಇಲ್ಲ, ಆಕ್ಸಿಜನ್ ಕೊರತೆಯಿಂದ ಸತ್ತವರು ಮೂವರು ಎಂದರು. ಅಂದರೆ ಉಳಿದವರು ಆಕ್ಸಿಜನ್ ಇದ್ದರೂ ಏಕೆ ಸತ್ತರು? ಹಾಗಾದರೆ ಆಕ್ಸಿಜನ್ ಇದ್ದರೂ ಆ ದಿನ 21 ಜನ ಸಾಯುತ್ತಿದ್ದರು ಅಂತ ಅರ್ಥವಾ?

ಸಚಿವರೇ, ಕರೋನ ವೈರಸ್ ಸೋಂಕಿತರನ್ನು ನೇಣು ಹಾಕಲ್ಲ ಅವರು ಸಾಯೋದು ಆಕ್ಸಿಜನ್ ಗೋಸ್ಕರ ನರಳಿ ನರಳಿ ಸ್ವಾಮಿ .ಕೊನೆ ಹಂತ ಅದೇ ಅಂತ ನಿಮಗೆ ಇನ್ನೂ ಗೊತ್ತಾಗಿಲ್ವ? .ಹಾಗಿದ್ರೆ ಯಾಕೆ ಆಕ್ಸಿಜನ್ ಬೇಕು ಅಂತ ಹೇಳಿ ನೋಡೋಣ?

ಬೇಗ ಬಂದರೆ ನೀನು ಹೋಮ್ ಐಸೊಲೇಷನ್ ಆಗಿ ಅಂತಾರೆ .ಸೀರಿಯಸ್ ಆಗಿ ಬಂದ್ರೆ ಬೆಡ್ ಇಲ್ಲ ಅಂತಾರೆ. ಪಬ್ಲಿಕ್ ಸ್ಟೋರಿಗೆ ಸಿಕ್ಕ ಮಾಹಿತಿಯಂತೆ ಧನಂಜಯ ಅನ್ನೊ ರೋಗಿ ಹೋಮ್ ಐಸೊಲೇಷನ್ ನಿಂದ ಸೀರಿಯಸ್ ಆಗಿ ನೆಲಮಂಗಲ ಆಸ್ಪತ್ರೆಗೆ ಬಂದು ಅಲ್ಲಿ ಸರಿಯಾದ ಸಮಯದಲ್ಲಿ ಚಿಕಿತ್ಸೆ, ವೆಂಟಿಲೇಟರ್ ಸಿಗದೇ ಸತ್ತರು.

ಡಾಕ್ಟರ್ ಗಳು ಜಿಂಕ್, ವಿಟಮಿನ್ ಸಿ ಕೊಟ್ಟು ಹೋಮ್ ಐಸೊಲೇಷನ್ ಗೆ ಹಾಕ್ತಾರೆ ಅಥವಾ ಕೋವಿಡ್ -ಸೆಂಟರ್ ಗೆ ಹಾಕ್ತಾರೆ. ಆದರೆ ಅಲ್ಲಿ ಸೀರಿಯಸ್ ಆದವರಿಗೆ ಕೂಡಲೇ ಚಿಕಿತ್ಸೆ ಸಿಗುತ್ತದೆಯೇ ?

ಡಾಕ್ಟರ್ ಗಳು ಹೇಳ್ತಾರೆ 4 ಅಥವಾ 5 ನೇ ದಿನಕ್ಕೆ CT ಬೇಕು ಅಂತಾ.ಕೆಲವು ರಕ್ತ ಪರೀಕ್ಷೆ ಡೈಮರ್ ,ಸಿಆರ್ಪಿ ,ಸಿಬಿಸಿ ಪ್ರೋ ಕಾಲ್ಪಿ ಟಿನೇನ್ ಇನ್ನೂ ಕೆಲವು ಟೆಸ್ಟ್ ಮಾಡಿದರೆ ಕೋರೋನಾ ರೋಗಿ ಸಿರಿಯ ಸ್ ಆಗ್ತರೋ ಇಲ್ಲವೇ ಅಂತಾ ಕಂಡು ಹಿಡಿ ಬಹುದು ಅಂತಾ ಹೇಳಬಹುದು ಅಂತಾರೆ.

ಹೋಮ್ ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್ ಅಲ್ಲಿ ಇರುವವರಿಗೆ ಯಾವುದೂ ಮಾಡಿಸದೆ ಉಸಿರಾಟಕ್ಕೆ ತೊಂದರೆ ಆದಾಗ ಆಸ್ಪತ್ರೆಗಳಿಗೆ ಅಲೆದಾಡಿಸುತ್ತಾರೆ. ಆ ಅಲೆ ದಾಟದಲ್ಲೇ ರೋಗಿಗಳು ಸಾಯುತ್ತಿದ್ದಾರೆ.

89% ಆಕ್ಸಿಜನ್ ಇದ್ದಾಗ ಬೆಡ್ ಇಲ್ಲ ಅಂತ ಕಳುಸ್ತಾರೆ. ರೋಗಿ ಬೇಗ ಬಂದ್ರೂ ಬೆಡ್ ಇಲ್ಲ ಅಂತ ಕಳುಹಿಸುತ್ತಾರೆ. ತುಮಕೂರು ಬನಶಂಕರಿಯ ಶ್ರೀನಿವಾಸ್ ಗಟ್ಟಿಮುಟ್ಟಾದ ಹುಡುಗ. ಹೋಂ ಐಸೋಲೇಷನ್ ನಲ್ಲಿ ಇದ್ದ ಆತ ಆಕ್ಸಿಜನ್ 89% ಕ್ಕೆ ಬಂದಾಗ ಜಿಲ್ಲಾಸ್ಪತ್ರೆಗೂ ಬಂದರೂ ಬೆಡ್ ಕೊಡಲಿಲ್ಲ. ಕೊನೆಗೆ ಅವರು ಪ್ರಾಣ ತೆತ್ತರು.
ಬೇಗ ಬಂದ್ರೆ, ಈ ಥರ.. ಕೊನೆಯಲ್ಲಿ ಬಂದರೆ ಆ ಥರಾ, ಹೇಳಿ ಸಚಿವರೇ ಈಗ!

ಇನ್ನು ಹೋಮ್ ಐಸೋಲೇಷನ್ನಲ್ಲಿ ಇರುವವರನ್ನು ಕೋವಿಡ್ ಸೆಂಟರ ಅಲ್ಲಿ ಇರುವವರನ್ನು ತಜ್ಞರ ಶಿಫಾರಸ್ಸಿನಂತೆ ರಕ್ತ ಪರೀಕ್ಷೆ CT ಮಾಡಿಸಿ ಯಾರು ಸೀರಿಯಸ್ ಆಗ್ತಾರೆ ಅಂತ ಕಂಡುಹಿಡಿಯುವ ವ್ಯವಸ್ಥೆ ಮಾಡಿ. ಅದು ಆಗಿದೆಯೇ?

ನಿಮ್ಮ ತಜ್ಞರು ಸಲಹೆ ಏನು ಕೊಡುತ್ತಾರೆ ಕೇಳಿ. ಆಮೇಲೆ ಜನರ ಮೇಲೆ ತಪ್ಪು ಹೊರಿಸಿ ಮಾನ್ಯ ಸಚಿವರೇ.

ಯಾವ ಜನಕ್ಕೂ ಸಾಯಲು ಆಸೆ ಇಲ್ಲ ಎಂದು ಮೊದಲು ಅರ್ಥ ಮಾಡಿಕೊಂಡು ಹೇಳಿಕೆ ನೀಡಿದರೆ ಒಳ್ಳೆಯದೇನೋ?

ದಯಮಾಡಿ ಸತ್ತಿರುವವರಿಗೆ ಅವಮಾನ ಮಾಡಬೇಡಿ. ಅವರು ಯಾರೂ ಸಾಯಲೆಂದು ಬಯಸಿದವರಲ್ಲ ಎಂಬುದು ಮನಸ್ಸಿನಲ್ಲಿ ಹಾದು ಹೋಗಿದ್ದರೆ ಇಂಥ ಮಾತುಗಳು ಬರುತ್ತಿರಲಿಲ್ಲವೇನೋ? ಅಲ್ಲವೇ?

ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡರಿಗೆ ಪ್ರತಿಷ್ಠಿತ ಎನ್ ಐ ಪಿಎಂ ಫೆಲೋಷಿಪ್

Publicstory


ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಅವರು ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ (ಎನ್‌ಐಪಿಎಂ)ಯ ಪ್ರತಿಷ್ಠಿತ ಫೆಲೋಷಿಪ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಎನ್‌ಐಪಿಎಂಗೆ ಎರಡು ಬಾರಿ ಅಧ್ಯಕ್ಷರಾಗಿದ್ದ ಪ್ರೊ. ಸಿದ್ದೇಗೌಡ ಅವರು ಸಂಸ್ಥೆಯ ಪ್ರಗತಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರಕ್ಕೆ ನೀಡಿರುವ ಒಟ್ಟಾರೆ ಕೊಡುಗೆಯನ್ನು ಪರಿಗಣಿಸಿ ಈ ಫೆಲೋಷಿಪ್‌ಗೆ ಆಯ್ಕೆ ಮಾಡಲಾಗಿದೆ.
ತಮ್ಮ ೩೭ ವರ್ಷಗಳ ಶೈಕ್ಷಣಿಕ ಕ್ಷೇತ್ರದ ಸೇವೆಯ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ವಿವಿಧ ಹಂತಗಳ ಮಾನವ ಸಂಪನ್ಮೂಲ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡು ಸಾವಿರಾರು ಯುವಕರು ಉತ್ತಮ ಹುದ್ದೆಗಳನ್ನು ಪಡೆಯುವಲ್ಲಿ ಪ್ರೊ. ಸಿದ್ದೇಗೌಡ ಅವರು ಮಾರ್ಗದರ್ಶನ ನೀಡಿದ್ದಾರೆ.

ಸಮಾಜ ಕಾರ್ಯ ಕ್ಷೇತ್ರದ ವಿದ್ಯಾರ್ಥಿಗಳಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಅಧ್ಯಯನ ವಿಭಾಗಗಳಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮರ್ಥ ವೃತ್ತಿಜೀವನವನ್ನು ಕಟ್ಟಿಕೊಳ್ಳುವಲ್ಲಿ ಅವರು ನೆರವಾಗಿದ್ದಾರೆ.

ಮೂರು ವಿಶ್ವವಿದ್ಯಾನಿಲಯಗಳಲ್ಲಿ ನಾಲ್ಕು ಬಾರಿ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದ ಪ್ರೊ. ಸಿದ್ದೇಗೌಡ ಅವರು ತಾವು ಸೇವೆ ಸಲ್ಲಿಸಿದ ಸಂಸ್ಥೆಗಳಲ್ಲಿ ಹಾಗೂ ಪ್ರಸ್ತುತ ಕುಲಪತಿಗಳಾಗಿರುವ ತುಮಕೂರು ವಿವಿಯಲ್ಲೂ ವಿದ್ಯಾರ್ಥಿಗಳ ಔದ್ಯೋಗಿಕ ಭವಿಷ್ಯಕ್ಕೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಕಳೆದ ಒಂದೇ ವರ್ಷದಲ್ಲಿ ಪ್ರೊ. ವೈ. ಎಸ್. ಸಿದ್ದೇಗೌಡರು ಪಡೆದಿರುವ ಪ್ರತಿಷ್ಠಿತ ಐದನೇ ಪುರಸ್ಕಾರ ಇದಾಗಿದೆ. ಪ್ರಸ್ತುತ ಸಾಧನೆಗಾಗಿ ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ ಹಾಗೂ ತುಮಕೂರು ವಿವಿಯ ಸಹೋದ್ಯೋಗಿಗಳು ಅವರನ್ನು ಅಭಿನಂದಿಸಿದ್ದಾರೆ.

ಕೋವಿಡ್ ರೋಗಿಗಳ ಆರೋಗ್ಯ ವಿಚಾರಿಸಿದ ಸುರೇಶಗೌಡ

Publicstory


Tumkuru: ತುಮಕೂರು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಮಾಜಿ ಶಾಸಕ‌ ಬಿ.ಸುರೇಶಗೌಡ ಅವರು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಯೋಗಕ್ಷೇಮ ವಿಚಾರಿಸಿ ಆತ್ಮವಿಶ್ವಾಸ ತುಂಬಿದರು.

ಹಲವಾರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಸುರೇಶ್ ಬಾಬು, ವೈದ್ಯಾಧಿಕಾರಿಗಳಾದ ಡಾಕ್ಟರ್ ಶ್ರೀಮತಿ ವೀಣಾ. ಎಚ್, DEO ಲಕ್ಷ್ಮೀಶ್, ಬಳ್ಳಗೆರೆ ವೆಂಕಟೇಶ್ ಮತ್ತು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಸುಟ್ಟ ಹೆಣಗಳ ಕಪ್ಪು ಹೊಗೆ

0

ತಿಪಟೂರುಕೃಷ್ಣ.

ಭುವಿಯಿಂದ ಮುಗಿಲೆತ್ತರಕ್ಕೆ
ನರಳಿ ನರಳಿ ಹಾರುತ್ತಿದೆ
ಸುಟ್ಟ ಹೆಣಗಳ ಕಪ್ಪು ಹೊಗೆ

ಗಗನದುದ್ದಕ್ಕೂ ಹರಡುತ್ತಿದೆ
ಬಂಧನಗಳ ಕಳೆದುಕೊಂಡ
ಸತ್ತಾತ್ಮಗಳ ಕರಿ ನೆರಳು
ಕೊಂದವರ ನಿಂದಿಸುತಾ

ಅಮಾಯಕ ಜೀವಗಳ ಬಲಿಗೈದು
ಮುಟ್ಟಿ ಮುಟ್ಟಿ ನೋಡುತ್ತಿದೆ
ದುಷ್ಟತನದ ಕೆನ್ನಾಲಿಗೆ

ಅಮ್ಮನೋ, ಅಕ್ಕನೋ, ಅಣ್ಣನೋ
ತಮ್ಮನೋ, ಗಂಡನೋ
ಉಸಿರು ನಿಂತ ಮುಗಿದ ಜೀವ
ಕಮರುತ್ತಿದೆ ಬೆಂಕಿಯೊಳಗೆ

ಬತ್ತಿದ ಕಣ್ಣೊಳಗೆ ಬಿಟ್ಟನಿಟ್ಟುಸಿರು
ಗೊಗರೆಯುತ್ತಿದೆ ಅಂಗಲಾಚಿ
ಬಯಲಾದವರ ನೆನೆನೆನೆದು
ನೀಲಿ ಕಣ್ಣೊಳಗೆ ಕೆಂಪು

ಒಂದಲ್ಲ, ಎರಡಲ್ಲ, ನೂರಲ್ಲ
ಸಾವಿರ, ಲಕ್ಷ ಉಸಿರುಗಳ ಚೀರಾಟ
ಕಣ್ಣುಕಾಣದ ಎದೆಯೊಳಗೆ
ಕಿತ್ತಳೆ ಬಣ್ಣದ ಕೊರೋನಾ

ಅತ್ತು ಕರೆದರೂ ಸಿಗದ ಮುಖ
ಗೊತ್ತಿಲ್ಲದೇ ಹೊತ್ತೊಯ್ದ ಕಟುಕ
ನಾನು ಅನ್ನುವರಿಲ್ಲದ ಈ ಲೋಕ
ಬರಸಿಡಿಲಿನಂತೆ ಬಂದ ಆಗಂತುಕ

ತುಮಕೂರು ಗ್ರಾಮಾಂತರಕ್ಕಾಗಿಯೇ ಕೋವಿಡ್ ಆಸ್ಪತ್ರೆ ತೆರೆದ ಶಾಸಕ ಗೌರಿಶಂಕರ್

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ ತೆರೆದಿರುವ ಶಾಸಕ ಡಿ.ಸಿ ಗೌರಿಶಂಕರ್ ಅವರು ಮಂಗಳವಾರ ಅಸ್ಪತ್ರೆ ಲೋಕಾರ್ಪಣೆಗೊಳಿಸುವುದಾಗಿ ತಿಳಿಸಿದರು.

ಒಂದಿಲ್ಲೊಂದು ನಿರಂತರ ವೈಯಕ್ತಿಕ ಸೇವಾಕಾರ್ಯದಿಂದ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವ ಶಾಸಕರಾದ ಡಿ.ಸಿ ಗೌರಿಶಂಕರ್ ಅವರ ಈ ನಿರ್ಧಾರ ಕೊರೋನಾದಿಂದ ತತ್ತರಿಸಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸಂಜೀವಿನಿಯಾಗಲಿದೆ ಎಂದು ಹಿರಿಯ ವೈದ್ಯರುಗಳು, ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಕೋಡಿಮುದ್ದನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆ ಆಗಿ ಪ್ರಾರಂಭಿಸಲು ತಾಲ್ಲೂಕು ಅಧಿಕಾರಿಗಳ ಸಮಕ್ಷಮದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು 180 ಹಾಸಿಗೆಗಳ ಆಸ್ಪತ್ರೆಯನ್ನು ಮಂಗಳವಾರ (04-05-2021) ಪ್ರಾರಂಭ ಮಾಡಲು ತಿಳಿಸಿದರು.

ಉಳಿದಂತೆ ಮುಂದಿನ ಹಂತದಲ್ಲಿ ತಮ್ಮ ಸ್ವಂತ ಹಣದಲ್ಲಿ ಆಕ್ಸಿಜನ್ ವ್ಯವಸ್ಥೆ ಮುಂದುವರಿಸುವುದಾಗಿ ಶಾಸಕರು ಘೋಷಿಸಿದರು.

ಸುಮಾರು 50 ಲಕ್ಷ ವೆಚ್ಚದಲ್ಲಿ 80 ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು. ಇದರಿಂದ ಗ್ರಾಮಾಂತರ ಕ್ಷೇತ್ರದ ಯಾವೊಬ್ಬ ರೋಗಿಗೂ ಆಕ್ಸಿಜನ್ ಕೊರತೆ ತಟ್ಟುವುದಿಲ್ಲ. ಕೋವಿಡ್ ಪೀಡಿತ ಪ್ರತಿ ರೋಗಿಯನ್ನು ಉಳಿಸಿಕೊಳ್ಳುವುದೇ ನನ್ನ ಪ್ರಮುಖ ಕೆಲಸವಾಗಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ತಹಶೀಲ್ದಾರ್ ಮೋಹನ್, ತಾಲ್ಲೂಕು ಆರೋಗ್ಯಾಧಿಕಾರಿ ಮೋಹನ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಯ್ಯ, ಪಾಲನೇತ್ರಯ್ಯ ಉಪಸ್ಥಿತರಿದ್ದರು.

-:ಇಲ್ಲಿಯವರೆಗಿನ ಕೊರೋನಾ ಸಮಯದಲ್ಲಿ ಶಾಸಕರ ಸೇವೆಗಳು:-


ಮೊದಲನೇ ಅಲೆಯಲ್ಲಿ
> ಕ್ಷೇತ್ರದ ಮನೆಮನೆಗೂ 2 ಬಾರಿ ಆಹಾರದ ಕಿಟ್
> ಔಷದಿ ಅಗತ್ಯವಿರುವ ಮನೆಗೆ ಉಚಿತ ಔಷದಿ
> ತರಕಾರಿ ಹಣ್ಣುಗಳ ವಿತರಣೆ
> ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಹಣ ಸಹಾಯ

ಎರಡನೇ ಕೊರೋನಾ ಅಲೆಯಲ್ಲಿ


> 4 ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿದ್ದಾರೆ.
> 35 ಜನರ ಕೊರೋನಾ ವಾರಿಯರ್ಸ್ ತಂಡ ಕಟ್ಟಿ ಯುವಸೈನ್ಯವನ್ನೆ ಕೊರೋನಾ ನಿಯಂತ್ರಿಸಲು ಸೃಷ್ಟಿಸಿದ್ದಾರೆ.
> ಅಂತ್ಯ ಸಂಸ್ಕಾರ ಮಾಡಲು ಉಚಿತ JCB ಗಳ ವ್ಯವಸ್ಥೆಯನ್ನು ಮಾಡಿದ್ದಾರೆ.
> ಸಹಾಯವಾಣಿ ಮೂಲಕ ಸಂಪರ್ಕಿಸುವ ಕುಟುಂಬಗಳಿಗೆ ಪಡಿತರ, ಮೆಡಿಸಿನ್ ಸೌಲಭ್ಯವನ್ನು ಮನೆ ಬಾಗಿಲಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ..

ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ಹೊರತು ಪಡಿಸಿ ತಾವೇ ಮುತುವರ್ಜಿ ವಹಿಸಿ ಶಾಸಕರ ಪ್ರತಿಯೊಂದು ಸೇವಾ ಹೆಜ್ಜೆ ನಿಜಕ್ಕೂ ಇಡೀ ರಾಜ್ಯ ಎದೆ ಹುಬ್ಬಿಸುವಂತೆ ಮಾಡಿದೆ. ಬೇರೆ ಕ್ಷೇತ್ರದ ಜನರು ನಮಗೂ ಇಂತಹ ಶಾಸಕರು ಯಾಕಿಲ್ಲ ಎಂಬ ಪ್ರಶ್ನೆ ಮಾಡತೊಡಗಿದ್ದಾರೆ.

ಈಗ ಯೂಟ್ಯೂಬ್ ನಲ್ಲಿ: ಲಂಕೇಶರ “ಗುಣಮುಖ” ಸಾರ್ವಕಾಲಿಕ

ಲಾಕ್ ಡೌನ್ ಸಮಯವನ್ನು ಮನೆಯಲ್ಲಿ ಕಳೆಯುವುದು ಕೆಲವರಿಗೆ ತಲೆನೋವು, ಇನ್ನೂ ಕೆಲವರಿಗೆ ಹಿಂಸೆ, ಜುಗುಪ್ಸೆ. ಆದರೆ ಅದೊಂದು ಸುಸಮಯ ಹಳೆಯ ಸಿನಿಮಾ ನೋಡುತ್ತಾ ಮತ್ತು ಕೃತಿಗಳನ್ನು ಓದುತ್ತಾ ಕಾಲವನ್ನು ಸುಗಮವಾಗಿ ದೂಡಬಹುದು… ಬಿಡುವಾದಾಗ ಓದೋಣ, ನೋಡೋಣ, ಮಾಡೋಣವೆಂದ ಕೆಲಸಗಳನ್ನು ಮಾಡಲು ಇದು ಒಳ್ಳೆಯ ಸಮಯ..

ಬನ್ನಿ ಇನ್ನೇಕೆ ತಡ.
ನೀವು ಓದಿದ ಕೃತಿ, ನೋಡಿದ ಸಿನಿಮಾಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಬರೆದು ಪಬ್ಲಿಕ್ ಸ್ಟೋರಿಗೆ ಕಳುಹಿಸಿಕೊಡಿ.

ಹೀಗೆ ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಪ್ರಜ್ವಲ್ ರಾಯ್ ಗುಣಮುಖ ನಾಟಕವನ್ನು ವಿಶ್ಲೇಷಿಸಿದ್ದಾರೆ.

1993ರಲ್ಲಿ ಪಿ ಲಂಕೇಶ್ ಅವರು ರಚಿಸಿದ ನಾಟಕ ಗುಣಮುಖ 1740ರಲ್ಲಿ ನಾದಿರ್ ಷಾ ಭಾರತದ ಮೇಲೆ ದಂಡೆತ್ತಿ ಬಂದ ಐತಿಹಾಸಿಕ ಘಟನೆಯನ್ನು ವಾಸ್ತವದ ನೆಲೆಯಲ್ಲಿ ನಿರೂಪಿಸಿದ್ದಾರೆ. ಇದನ್ನು ನಿನಾಸಂ ಪ್ರದರ್ಶಿಸಿದ ದೃಶ್ಯರೂಪಕ ಯೂಟ್ಯೂಬ್ ನಲ್ಲಿ ನೋಡಲು ಲಭ್ಯವಿದೆ. ನಿನಾಸಂ ತಿರುಗಾಟ ೨೦೧೫ರಲ್ಲಿ ಮಂಜುಕೊಡಗು ಅವರು ಇದನ್ನು ನಿರ್ದೇಶಿಸಿದ್ದಾರೆ.

ಪ್ರಮುಖ ಪಾತ್ರಧಾರಿಗಳಾಗಿ

ಅವಿನಾಶ್ ರೈ ಎಮ್ ಕೆ: ನಾದಿರ್ ಷಾ

ಬಿಂದು ರಕ್ಷದಿ : ಹಕೀಮ ಅಲಾವಿಖಾ‌ನ್

ಚಂದನ್ ಎಂ : ನಜೀರಿದ್ದೀನ್

ನಾಗರಾಜ ಶಿರಸಿ : ನಜೀರ್

ಮನೋಜ್ : ತನ್ವಿರ್

ಮೋಹನ್ ಶೇಣಿ : ರಜ್ವಿ

ಶರತ್ : ಸಾದತ್ ಖಾನ್

ಶೃತಿ ವಿ ತಿಪಟೂರು : ಇಕ್ಬಾಲ್ ನಟಿಸಿದ್ದಾರೆ.

ಲಂಕೇಶರು ಆಧುನಿಕ ಬರಹಗಾರರು ಅವರು ಆಧುನಿಕ ನೆಲೆಯಲ್ಲಿ ನಾಟಕದ ಕೇಂದ್ರ ಪಾತ್ರವನ್ನು ಪೋಷಿಸುವಾಗ ಮನುಷ್ಯನಲ್ಲಿರುವ ಕಾಮ, ಅಸೂಯೆ, ಸೊಗಲಾಡಿತನ, ಉದ್ದಟತನಗಳ ಅನಾವರಣವಿಲ್ಲಿದೆ.

ಸಿನಿಮಾಗಿಂತ ರಂಗ ಪ್ರಸ್ತುತಿ ವಿಶೇಷವೆನಿಸಿಕೊಳ್ಳುತ್ತದೆ. ರಂಗ ಪ್ರಸ್ತುತಿ ಇದ್ದದ್ದು ಇದ್ದ ಹಾಗೆ ತೋರಿಸುತ್ತದೆ. ಕಿರುತೆರೆ ಇಲ್ಲದೆ ಇರುವುದನ್ನು ಇದ್ದ ಹಾಗೆ ತೋರಿಸುತ್ತೆ ನಾಟಕದ ಪ್ರಸ್ತುತಿ ಹೊನಲು ಬೆಳಕಿನ ನಡುವೆ ನಡೆಯುವುದರಿಂದ ಹಲವಾರು ರೀತಿಗಳಲ್ಲಿ ಗಮನಸೆಳೆಯುತ್ತದೆ.

ನಾಟಕ ಆರಂಭದಲ್ಲಿ ಹಮ್ಮು ಬಿಮ್ಮುನಲ್ಲಿ ಆರಂಭವಾಗುವ ನಾಟಕ ಕೊನೆಗೆ ಜೀವನದ ಸರಳ ಸತ್ಯಗಳನ್ನು ಅನಾವರಣಗೊಳೊಸುತ್ತದೆ.
ನಾಟಕದ ಕೇಂದ್ರ ಪಾತ್ರ ನಾದಿರ್ ಷಾ ಭಾವಾಭಿವ್ಯಕ್ತಿಯ ಕಾರಣದಿಂದ ಕಾಡುವ ಪಾತ್ರ. ಹಕೀಮನ ಪಾತ್ರ ಬಹುವ್ಯಾಖ್ಯನಗಳ ನೆಲೆಯಲ್ಲಿ ನಿಲ್ಲುವ ಪಾತ್ರ.
ಮನೋದೈಹಿಕ ಬೇನೆಯಿಂದ ಬಳಲುವ ಚಕ್ರವರ್ತಿ ಆತ್ಮನಿರೀಕ್ಷೆಯ ಮೇಲಾಗುವ ಆಕ್ರಮಣ, ಆಧುನಿಕ ಅನಾರೋಗ್ಯಕರ ಸಮಾಜದ ಪ್ರತಿನಿಧಿಯಾಗಿದ್ದಾನೆ.

ಅವಸಾನ ಮತ್ತು ಮರುಹುಟ್ಟುಗಳ ನಡುವೆ ಸಾಗುವ ಕ್ರಿಯೆಯಲ್ಲಿ ಪ್ರಜ್ಞಾಪೂರ್ವಕವಾಗಿ ಇತಿಹಾಸದ ವಿಚಾರವನ್ನು ನಿರೂಪಣಾ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. ಏನನ್ನಾದರೂ ಹೇಳಬೇಕು ಅನಿಸಿದರೆ ಅದಕ್ಕೆ ಆಯ್ಕೆ ಮಾಡಿಕೊಂಡಿರುವ ಮಾಧ್ಯಮ ಕೂಡ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಈ ನಾಟಕ ಪ್ರೇಕ್ಷಕನ ಮನಸ್ಸು ಗೆದ್ದಿದೆ.

ಇವತ್ತಿನ ಸಮಕಾಲೀನ ಸ್ಥಿತಿಗೆ ಮನುಷ್ಯನ ಆಳದಲ್ಲಿರುವ ಅಹಂಕಾರ ನಿಧಾನಕ್ಕೆ ಅನಾವರಣ ಗೊಳ್ಳುತ್ತದೆ. “ಆಯಕಟ್ಟಿನಲ್ಲಿ ಅವಿವೇಕಿಗಳು ಕುಳಿತಿರುವುದು ಖೇದಕರ ಸಂಗತಿ. ಅರಾಜಕತೆ, ಲೋಲುಪತೆಯಲ್ಲಿ ಮುಳುಗೇಳುವ ನಾಯಕರು. ಅವರ ಖಾಸಗಿ ಬದುಕಿನ ರೋಗ, ಪಿತೂರಿ, ಆತ್ಮಾಭಿಮಾನ, ಪಟ್ಟಂಗಿತನದ ನಡುವೆ ಸದಾಕಾಲ ಸತ್ಯವನ್ನು ಹುಡುಕುವ ಪಾತ್ರವಾಗಿ ಹಕೀಮ ನಾದಿರ್ ಷಾನ ತಪ್ಪುಗಳನ್ನು ಮನವರಿಕೆ ಮಾಡಿಸುತ್ತಾನೆ. ಮನೋದೈಹಿಕ ಬೇನೆಯಿಂದ ಬಳಲುವ ” ಚಕ್ರವರ್ತಿ ” ಪ್ರೇಕ್ಷಕರ ಮಧ್ಯೆ ಬೆತ್ತಲಾಗುತ್ತಾನೆ.

ಹಿಂಸಾರಸಿಕನಾದ ನಾದಿರ್ ಷಾ ಇಂದಿನ ನಾಯಕರನ್ನು ಪ್ರತಿನಿಧಿಸುತ್ತಾನೆ. ಭ್ರಮೆಯಲ್ಲಿ ಬದುಕುವ ನಾದಿರ್ ಷಾ ರಾಜನ ಕೆಲಸ ಪ್ರಜೆಗಳಿಗೆ ಒಳಿತು ಮಾಡುವುದು ಎನ್ನುವುದನ್ನು ಮರೆಯುತ್ತಾನೆ. ಸದಾಕಾಲ ಕತ್ತಿಯ ತುದಿ ರಕ್ತಸಿಕ್ತವಾಗಿರುವಂತೆ ನೋಡಿಕೊಂಡವ. ಅಂತಹವನು ಹಕೀಮನ ತಾಳ್ಮೆ, ಸತ್ಯ ಹೇಳುವ ಗಟ್ಟಿತನ, ಸರಳತೆಯ ಮುಂದೆ ಶರಣಾಗುತ್ತಾನೆ.
ಹಕೀಮನು ಗಂಭೀರ ಕಾಯಿಲೆಯನ್ನು ಗೆಲ್ಲಲು ಮೊದಲು ಮನಸ್ಸಿನಲ್ಲಿರುವ ಅಹಂಕಾರದ ಕುರುಡನ್ನು ಇಲ್ಲವಾಗಿಸಬೇಕು ಅದೊಂದು ಆತ್ಮಹತ್ಯೆಯ ಪ್ರಕ್ರಿಯೆ ಎನ್ನುತ್ತಾನೆ.

ಹಕೀಮ ಮತ್ತು ಅಲ್ಲಿ ಬರುವ ನೃತ್ಯಗಾರ್ತಿ ಹೇಳುವ ಜೀವನದ ಸತ್ಯಗಳು ಅವನನ್ನು ಅಣುಕಿಸಿದಂತೆ ಭಾವಿಸುತ್ತಾನೆ. ಮನುಷ್ಯನಿಗೆ ಕಷ್ಟದ ಸಂದರ್ಭದಲ್ಲಿ ಯಾರು ಜೊತೆಯಲ್ಲಿ ನಿಲ್ಲುವುದಿಲ್ಲ ಎಂಬ ವಾಸ್ತವ ಸತ್ಯದ ಅರಿವುಂಟಗುತ್ತದೆ.
ರಾಜನಾದವನಿಗೆ ಕಣ್ಣು ಮತ್ತು ಕಿವಿ ಇರಬೇಕು. ಕಣ್ಣುಮುಚ್ಚಿ ಯೋಚಿಸಿ ಬುದ್ದಿ ಕುರುಡನ್ನು ಹೊಗಲಾಡಿಸಿಕೊಳ್ಳಬೇಕೆಂದು ತಿಳಿಯುತ್ತಾನೆ.

ಹಕೀಮ ಪ್ರಶ್ನಿಸಿದಾಗ ನಾದಿರ್ ಷಾ ನಿಗೆ ಅವನ ಭೋಗಾಸಕ್ತ ಗುಣ, ಹೆಣ್ಣನ್ನು ಮನುಷ್ಯರನ್ನು ವಸ್ತುವಿನಂತೆ ಕಾಣುವ ರೀತಿ, ನೆನಪಿನ ಕಾರಾಗೃಹದಲ್ಲಿ ಬಂದಿಯಾಗಿರುವ ಇಬ್ಬಂದಿತನದ ಬೇಗುದಿಯಲ್ಲಿ ಸಿಲುಕಿ ಹೇಗೆ ದೇಹ ಮತ್ತು ಪಂಚೇಂದ್ರಿಯಗಳು ಅಹಂನ ವಿಷವರ್ತುಲದಲ್ಲಿ ಸಿಲುಕಿವೆ ಎಂಬುದನ್ನು ಮನವರಿಕೆ ಮಾಡಿಸುತ್ತಾನೆ. ಜೀವನದಲ್ಲಿ ಕಟ್ಟಕಡೆಯಲ್ಲಿ ಪ್ರೇಮವಷ್ಟೇ ಮುಖ್ಯವಾಗುತ್ತದೆ ಎಂಬುದನ್ನು ಈ ನಾಟಕ ಸಾಭೀತುಪಡಿಸುತ್ತದೆ.

ಪುಸ್ತಕ ಪರಿಚಯ :ನೋವು ಇಲ್ಲಿ ವೇದ್ಯ

ನೋವು ಅಪಾತ್ರಕ್ಕೊಳಗಾಗುವ ಭಾವನೆ ಆದರೆ ರಂಗಮ್ಮಹೋದೆಕಲ್ ಅವರು ನೋವನ್ನು ಹೃದ್ಯವಾಗಿಸಬಹುದು ಎಂದಿದ್ದಾರೆ. ನೋವು ಇಲ್ಲಿ ವೇದ್ಯ ಎನ್ನುತ್ತಾರೆ. ಶ್ವೇತಾರಾಣಿ ಹೆಚ್

ರಂಗಮ್ಮ ಹೊದೇಕಲ್ ಅವರ ನೋವು ಒಂದು ಹೃದ್ಯಕಾವ್ಯ ಹನಿಗವನಗಳ ಸಂಕಲನ. ಅದರ ಅಂದವಾದ ಮುಖಪುಟ ಹಾಗೂ ಕೈಬರಹದಿಂದ ಮನಾ್ಸೆಳೆಯುತ್ತದೆ. ಮುದ್ರಣವಾದ ತಿಂಗಳಲ್ಲೇ ಮರುಮುದ್ರಣಗೊಂಡ ಕೃತಿ.ಈ ಸಂಕಲನದ ತುಂಬೆಲ್ಲಾ ಹೂವು ಮತ್ತು ನೋವು ಬದುಕಿನ ಗಂಭೀರ ಪಾಠಗಳನ್ನು ಸರಳವಾಗಿ ಹೇಳುತ್ತಾ ಹೋಗುತ್ತವೆ.
ಬದುಕು ಹಲವು ವಿಪರ್ಯಾಸಗಳ ಆಗರ. ಕಟುವಾಸ್ತವವನ್ನು ಹೂ ನಗೆ ಯೊಂದಿಗೆ ಹೇಳುವುದು ಕಷ್ಟ. ಆ ಕಷ್ಟವನ್ನು ಕವಯತ್ರಿ ಇಲ್ಲಿ ಸಾಧ್ಯವಾಗಿಸಿದ್ದಾರೆ.ನೋವು ಅಪಾತ್ರಕ್ಕೊಳಗಾಗುವ ವೇದನೆ. ಅದನ್ನು ಹಿತವಾಗಿಸುವ ಬಗೆ ಇಲ್ಲಿದೆ.ಮಾತು ಬೆಳ್ಳಿ ಮೌನ ಬಂಗಾರ ಎನ್ನುವ ಗಾದೆ ಮಾತಿದೆ. ಮೌನ ಸುಲಭಕ್ಕೆ ದಕ್ಕುವುದಿಲ್ಲ
ಆದರೆ
” ಮಾತುಗಳಾಚೆಗಿನ
ಮೌನ ದಕ್ಕಿದ ದಿನ
ಕವಿತೆ ಹೂವಾಗುತ್ತದೆ!”

ಹೌದು ಮೌನದ ಭಾಷೆ ತಿಳಿಯದೆ, ಅರಿಯದೆ ಕಾವ್ಯ ಕಟ್ಟಲು ಸಾಧ್ಯವಿಲ್ಲ. ಮೌನದಾಚೆಗಿನ ವೇದನೆ ತಿಳಿಯದೆ ಕಾವ್ಯ ಆಸ್ವಾದಿಸಲು ಸಾಧ್ಯವಿಲ್ಲ.

ಕ್ರೌರ್ಯ ಮತ್ತು ಕರುಣೆ ಎರಡೂ ಒಂದೇ (ಮನಸ್ಸಿನಲ್ಲಿರುತ್ತವೆ) ಹೃದಯದಲ್ಲಿರುತ್ತವೆ. ಅದನ್ನು ಕವಿತೆಯಲ್ಲಿ ಪ್ರಕಟಗೊಳಿಸುವಾಗ ಕವಯತ್ರಿ ಬಳಸಿರುವ ರೂಪಕ ಸೊಗಸಾಗಿದೆ.” ಕಲ್ಲಿನ ಮಗ್ಗುಲಲ್ಲೇ
ಹೂವರಳುತ್ತದೆ.
ಕ್ರೌರ್ಯ, ಕಾರುಣ್ಯ ಒಂದೇ ದಾರಿಯಲ್ಲಿ ನಡೆದ ಹಾಗೆ! ”

ಎಷ್ಟೋಂದು ಭಿನ್ನತೆ, ಭಿನ್ನತೆಗಳ ಅಂತರ ದೂರ ಇರಬಹುದು ಆದರೇ ಅವಿರುವುದು ಒಂದೇ ಮನುಷ್ಯನಲ್ಲಿ ಅಲ್ಲವೇ.

“ಮೌನದ ಬಯಲನ್ನು
ಹಾದು ಬರುವುದೆಂದರೆ
ಹೂ ಗಂಧವನ್ನು
ಎದೆಗೆ ತುಂಬಿಕೊಂಡ ಹಾಗೆ !

ಹೌದು ಮೌನದ ಬಯಲನ್ನು ಹಾದು ಬರುವುದು ಸುಲಭವಲ್ಲ
ಮೌನದ ಬಯಲನ್ನು ಹಾದು ಬರುವುದರೊಳಗೆ ಹೂವಿನ ಪರಿಮಳವನ್ನು ಎದೆಗೆ ಇಳಿಸಿಬಿಡುವಷ್ಚು ಕಸುವು ದಕ್ಕಿರುತ್ತದೆ.

ಕಾವ್ಯ ಹುಟ್ಟುವುದೇ ನೋವಿನಲ್ಲಿ… ನೋವಿನಲ್ಲಿ ಕಾವ್ಯ ನರಳುವುದಿಲ್ಲ ಅರಳುತ್ತದೆ.

” ಸಾಲು ಸೋಲುಗಳ
ಹತಾಶೆಯಲ್ಲಿಯೇ
ಸಾಲು ದೀಪಗಳ ಬೆಳಗಿಕೋ!
ಸೋತಾಗ ಹತಾಶೆಗೆ ಒಳಗಾಗದೆ
ಸೋಲಿನಿಂದ ಅನುಭವ ವೇದ್ಯವಾಗಿ ಬದುಕಿನ ಬೆಳಕು ಮೂಡಿಸಿಕೊಳ್ಳಬೇಕು ಎಂದಿದ್ದಾರೆ.

” ಕಡಲು ಥೇಟು
ತಾಯಂದಿರ
ಒಡಲು”

ಕಡಲು ತನ್ನ ಒಡಲೊಳಗೆ ಎಲ್ಲವನ್ನೂ ತುಂಬಿಕೊಳ್ಳುತ್ತದೆ.
ಜೀವ ನಿರ್ಜೀವ, ರಕ್ಷಕ ಭಕ್ಷಕ ಎಲ್ಲವೂ ತುಂಬಿರುತ್ತದೆ.
ತಾಯಿಯೂ ಹಾಗೆ ಮಕ್ಕಳ ಎಲ್ಲಾ ತಪ್ಪುಗಳನ್ನು ತನ್ನೊಡಲೊಳಗೆ ಸೇರಿಸಿಕೊಂಡು ಕ್ಷಮಿಸಿಬಿಡುತ್ತಾಳೆ.ಕೆಲವೊಮ್ಮೆ ನೋವು ಕೂಡ ಹಿತವೆನಿಸುತ್ತವೆ.

“ಹೊತ್ತು ಮಾರಲು
ನೋವು ಅಮೂರ್ತ!
ಸುಮ್ಮನೆ ಬಿಕ್ಕಲು
ಲೋಕದ ಕಣ್ಣಲ್ಲಿ ಅನರ್ಥ”
” ಗಾಯಗಳಿರಲಿ ಬಿಡು
ನೆಲವು ನೋಯುತ್ತದಲ್ಲ”

ಪ್ರಕೃತಿ ಹೇಗೆ ವಿಶಾಲ ಮನೋಭಾವನೆ ಯಿಂದ
ಮನುಷ್ಯ ಸಂತತಿಯನ್ನು ಸಲಹುತ್ತಿದೆ ಆದರೆ ಮನುಷ್ಯ ಮಾತ್ರ ಪ್ರಕೃತಿಯ ವಿಶಾಲ ಗುಣಗಳಿಂದ ತಾಳ್ಮೆ, ಸಹನೆ ಯಾವುದನ್ನು ಕಲಿಯದೇ ಇನ್ನಷ್ಟು ಸಣ್ಣವನಾಗುತ್ತಿರುವ.

“ಇರಿಯದಿದ್ದರೆ ಮಾತೂ ಬಂಗಾರವೇ
ಕೆಡುಕಿರದ ಮೌನವೂ ಧ್ಯಾನವೇ”
” ಗಾಯಗಳನ್ನು
ತೊರಬಾರದು
ಉಪ್ಪು ಸವರುಮ
ಲೋಕವಿದು”

ಲೋಕದ ನಡೆಗೆ ಇಲ್ಲಿ ವಿಡಂಬನೆಯನ್ನು ಕಾಣಬಹುದು. ಸಂಬಂಧಗಳು ಹೇಗೆ ನೀರಸವಾಗುತ್ತವೆ ಎಂಬುದು ಇಲ್ಲಿನ ಕವಿತೆಗಳಲ್ಲಿ ವೇದ್ಯವಾಗಿವೆ. ರಂಗಮ್ಮನವರ ನೋಟ ಅಂತರಂಗದ ನೋಟ.
ಮನುಷ್ಯನಿಗೆ ಇರಬೇಕಾದ ಅಂತರಗದ ಅನಾವರಣವಿಲ್ಲಿ ಕಾಣಬಹುದು. ನೋವಿತ್ತು ನೇವರಿಸಿದೆ ಎನ್ನುವ ಅವರ ಮಾತುಗಳಲ್ಲಿ ನೋವು ಕೂಡ ಸ್ವೀಕಾರಾರ್ಹ ಎಂಬುದನ್ನು ಮನಗಾಣಬಹುದು.

ಭಾನುವಾರದ ಕವಿತೆ :ಕೋವಿಡ್ ಇಲ್ಲದ ಮನೆಯ ಸಾಸಿವೆ

ಡಾಕ್ಟರ್ ರಜನಿ

ಕಿಸಾ ಗೌತಮಿಗೆ
ಸಿಗಲಿಲ್ಲ ಸಾವಿಲ್ಲದ
ಮನೆಯ ಸಾಸಿವೆ….

ಕೋವಿಡ್ ಇಲ್ಲದ ಮನೆ
ಎಲ್ಲರ ಆಸೆ….

ಕೋವಿಡ್ ಇಲ್ಲದ ರಸ್ತೆ. …
ಊರು?

ಊರು ನಿಂದಾದ ಮೇಲೆ
ಸಾಸಿವೆ ಎಲ್ಲಿಂದ?

ನರಳುತ ಜನ
ಗಾಳಿಗಾಗಿ ಹಪಹಪಿಸುತ

ಸಾವಿಲ್ಲದೆ ನೂರು ವರುಷ?
ಕನಸು…

ಸಾವಿಲ್ಲದ ಆಸ್ಪತ್ರೆ
ಸಾವಿಲ್ಲದ ದಿನ ಕಾಯ್ದು

ಅವರ ಸಾವು…
ನೋವು
ನನ್ನದೇ…

ಯಾರಿಗಿಲ್ಲ
ಹತಾಷೆ

ಸಾವೇ ಬಿಡುಗಡೆಯೆ?
ಅಂತಿಮವೆ?

ಆದರೂ ಸಿಗಲಿ

ಕೋವಿಡ್ ಇಲ್ಲದ
ಮನೆಯ ಸಾಸಿವೆ

ಏಳಿಸಲಿ ಸತ್ತ
ಮಗನನ್ನ

ನೀನಾದರೋ…
ಬುದ್ಧ

ನಾನು … ಬರೀ
ಅಮ್ಮ, ಅಣ್ಣ, ಅಪ್ಪ ಮಗಳು …..

ಕೋವಿಡ್ ಎದುರು ಬುದ್ಧನಾಗಲೀ
ಹೇಗೇ?….