Thursday, May 7, 2026
Google search engine
Home Blog Page 145

ಮಸಾಲಜಯರಾಂ ಸ್ವಂತ ಖರ್ಚಿನಿಂದ 11 ಲಕ್ಷ ರೂ ಕೋವಿಡ್ ಜೀವರಕ್ಷಕ ಔಷಧಿಗಳ ವಿತರಣೆ ಮಾಡಿದರು.

ತುರುವೇಕೆರೆ: ತಾಲ್ಲೂಕಿನ ಜನಸಾಮಾನ್ಯರ, ಬಡವರ, ಅಸಹಾಯಕರ ಹಿತ ದೃಷ್ಟಿಯಿಂದ 11 ಲಕ್ಷ ರೂಪಾಯಿಗಳ ವೆಚ್ಚದ ಕೋವಿಡ್ ಜೀವರಕ್ಷಕ ಔಷಧಿಗಳನ್ನು ಸ್ವಂತ ಹಣದಲ್ಲಿ ಔಷಧಿ ಕಂಪನಿಗಳಿಂದ ಖರೀದಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೀಡಲಾಗುತ್ತಿದೆ ಎಂದು ಶಾಸಕ ಮಸಾಲ ಜಯರಾಂ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೋವಿಡ್ ಜೀವರಕ್ಷಕ ಔಷಧಿಗಳ ಉಚಿತ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎರಡು ಸಾವಿರ ಪಿಪಿಇಕಿಟ್ ಕವರ್ಗಳು, 5 ಸಾವಿರ ಜಿನ್ ಮಾತ್ರೆ, ಐದು ಸಾವಿರ ಮಿಟಮಿನ್ ಮಾತ್ರೆ, 4 ಸಾವಿರ ಮಾಸ್, ಸ್ಯಾನಿಟೈಸರ್, ಬೆಡಶೀಟ್, ಎರಡುವರೆ ಸಾವಿರ ಕೈಗವಸ, ಶೂಕವರ್, 2 ಸಾವಿರ ಹೆಡ್ ಕ್ಯಾಪ್, ಇಜೆಕ್ಷನ್, ಮೂರು ವಿದಧ ಮಾತ್ರೆಗಳು ಹಾಗು ಇನ್ನಿತರ ವಸ್ತುಗಳನ್ನು ನೀಡಲಾಯಿತು.
ತಾಲ್ಲೂಕಿನ ಕೋವಿಡ್ ರೋಗಿಗಳಿಗೆ ಔಷಧಿ, ಇಂಜೆಕ್ಷನ್ ಹಾಗು ಇತರೆ ಸೌಲಭ್ಯಗಳಿಲ್ಲವೆಂಬ ಕೊರಗು ಇರಬಾರದು. ಇಲ್ಲಿನ ಆಸ್ಪತ್ರೆಯ ವೈದ್ಯಾಧಿಕಾರಿಗಳು ಇನ್ನು ಏನೇನು ಜೀವರಕ್ಷಕ ಸೌಕರ್ಯಗಳು ಬೇಕು ಎಂಬುದರ ಬಗ್ಗೆ ನನ್ನ ಗಮನಕ್ಕೆ ತನ್ನಿ ಮತ್ತಷ್ಟು ಕೊಡಿಸುವುದಾಗಿ ಭರವಸೆ ನೀಡಿದರು.
ಕೋವಿಡ್ ರೋಗ ಲಕ್ಷಣ ಬಂದ ತಕ್ಷಣ ಕೂಡಲೇ ಮನೆಯಲ್ಲಿಯೇ ಉಳಿಯದೇ ಆಸ್ಪತ್ರೆಗೆ ದಾಖಲಾಗಿ. ಅನಾವಶ್ಯಕವಾಗಿ ಓಡಾಡಬೇಡಿ ನಿಮ್ಮೊಂದಿಗೆ ನಾನಿದ್ದೇನೆ. ಔಷಧಿಗಳಿಗೆ ಎಷ್ಟೇ ಖಚರ್ಾದರೂ ಪರವಾಗಿಲ್ಲ ನಾನು ನನ್ನ ಸ್ವಂತ ಹಣದಿಂದ ಕೊಡಲು ಸಿದ್ದನಿದ್ದನೆ. ನನಗೆ ತಾಲ್ಲೂಕಿನ ಜನತೆಯ ಆರೋಗ್ಯ, ಜೀವ ಮುಖ್ಯವೆಂದು ಕಳಕಳಿಯ ಮನವಿ ಮಾಡಿದರು.
ಹೀಗಾಗಲೇ ತಾಲ್ಲೂಕಿನ ನೂರಾರು ಜನರಿಗೆ ಬೆಂಗಳೂರು, ತುಮಕೂರು, ಮೈಸೂರು ಇನ್ನಿತರ ಕಡೆಗಳಲ್ಲಿ ಬೇಡ್ ಮತ್ತು ಆಮ್ಲಜನಕದ ವ್ಯವಸ್ಥೆ ಮಾಡಿಸಿದ್ದೇನೆ. ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಕೋವಿಡ್ ನಿಯಂತ್ರಣಕ್ಕೆ ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ. ಅವರೊಂದಿಗೆ ರೋಗಿಗಳು ಸೌಜನ್ಯತೆಯಿಂದ ನಡೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಿ.
ತಾಲ್ಲೂಕಿನ ಮುಸ್ಲಿಂಭಾಂದವರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರನ್ನು ಯಾವುದೇ ಜಾತಿ, ಮತ, ಧರ್ಮಗಳ ಬೇಧವೆಣಿಸದೆ ನಿಸ್ವಾರ್ಥ ಸೇವಾ ಮನೋಭಾವನೆಯಿಂದ, ತಮ್ಮ ಪ್ರಾಣದ ಹಂಗು ತೊರೆದು ಶವ ಸಂಸ್ಕಾರ ಮಾಡುತ್ತಿದ್ದಾರೆ ಅವರಿಗೆ ನಾನು ತಾಲ್ಲೂಕಿನ ಪರವಾಗಿ ಕೃತಜ್ಞತೆ ಸಲ್ಲಿಸುವೆ ಹಾಗು ಇವರಿಗೆ ನೆರವು ನೀಡಲು ಸಿದ್ದನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್ಕುಮಾರ್, ಸದಸ್ಯ ಚಿದಾನಂದ್ ವೈದ್ಯಾಧಿಕಾರಿ ಡಾ.ಶ್ರೀಧರ್, ಟಿಎಚ್ಒ ಡಾ.ಸುಪ್ರಿಯಾ, ಮುಖಂಡರುಗಳಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಮ್, ವಿ.ಬಿ.ಸುರೇಶ್, ಸೋಮಣ್ಣ, ಮುದ್ದೇಗೌಡ, ವೈದ್ಯರುಗಳಾದ ಡಾ.ನವೀನ್, ಡಾ.ಪವನ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

ಕರ್ಪ್ಯೂ / ಲಾಕ್ ಡೌನ್ ಮಾರ್ಗಸೂಚಿ: ಏನು ಹೇಳುತ್ತೆ

ಕೋವಿಡ್_19 ರೋಗಾಣುವಿನ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರಕಾರ ಜಾರಿಗೆ ತಂದಿರುವ ಕರ್ಫ್ಯೂ/ಲಾಕ್ ಡೌನ್ ಮೇ 10, ಬೆಳಿಗ್ಗೆ 6:00 ರಿಂದ ಪ್ರಾರಂಭವಾಗಲಿದ್ದು ಮೇ 24,ಸಂಜೆ 6:00 ಗಂಟೆಯವರೆಗೆ ಮುಂದುವರಿಯಲಿದ್ದು ಅದರಂತೆ

1) ಬೈಕು, ಕಾರು, ಬಸ್ಸು, ಆಟೋಗಳು ರಸ್ತೆಯಲ್ಲಿ ಓಡಾಡುವಂತಿಲ್ಲ ಮೆಡಿಕಲ್ ಎಮರ್ಜೆನ್ಸಿ ,ರೈಲ್ವೆ ನಿಲ್ದಾಣಕ್ಕೆ ಹೋಗಲು ಟಿಕೆಟ್ಟನ್ನು ಹೊಂದಿದ್ದಲ್ಲಿ ,ಏರ್ಪೋರ್ಟ ಹೋಗಲು ಟಿಕೆಟ್ ಹೊಂದಿದ್ದಲ್ಲಿ ಮಾತ್ರ ಅವಕಾಶ

2) ಹಣ್ಣು, ತರಕಾರಿ, ದಿನಸಿ, ಹಾಲು,ಮಾಂಸ, 10:00 ಗಂಟೆ ಯವರೆಗೆ ಕೊಳ್ಳಲು ಅವಕಾಶವಿದ್ದು, ನಡೆದುಕೊಂಡೆ ತಮ್ಮ ಹತ್ತಿರದ ಅಂಗಡಿಗೆ ಹೋಗಿ ಖರೀದಿಸ ತಕ್ಕದ್ದು. ಮನೆಗೆ ಬೇಕಾಗಿರುವ ದಿನಸಿಯನ್ನು ಹತ್ತಿರದ ಅಂಗಂಡಿಗಳಿಂದ ಖರೀದಿಸಬೇಕು. ತಾನು ಸಾಕಿರುವ ಪ್ರಾಣಿಗಳಿಗೂ ಕೂಡ ಹತ್ತಿರದಲ್ಲಿ ಸಿಕ್ಕರೆ ಖರೀದಿಸಬಹುದು ಇಲ್ಲವೇ ಆನ್ಲೈನ್ ಮೂಲಕ ಖರೀದಿಸಿ ಎಂದು ಸಲಹೆ ಮಾಡಿದೆ. ಔಷದಿ ಖರೀದಿಸಲು ಕೂಡ ಹತ್ತಿರದಲ್ಲಿ ಲಭ್ಯವಿರುವ ಕಡೆ ಖರೀದಿಬಹುದು.

3) ಹಣ್ಣು-ತರಕಾರಿ ಹೂಗಳನ್ನು ತಳ್ಳುವ ಗಾಡಿಗಳ ಮೇಲೆ ಮನೆಮನೆಗಳ ಬೀದಿಗಳಲ್ಲಿ ಹೋಗಿ ಮಾರಾಟ ಮಾಡತಕ್ಕದ್ದು. ಯಾವುದೇ ಕಾರಣಕ್ಕೂ ರಸ್ತೆಯ ಬದಿಗಳಲ್ಲಿ ಅಂಗಡಿಗಳನ್ನು ಇಡುವಂತಿಲ್ಲ

4) ನಿಯಮಗಳನ್ನು ಮೀರಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ವಶಕ್ಕೆ ಪಡೆದು ಸದರಿ ವಾಹನಗಳನ್ನು ಕರ್ಫ್ಯೂ/ಲಾಕ್ ಡೌನ್ ಅವಧಿ ಮುಗಿದ ನಂತರ ಸುರಕ್ಷಿತವಾಗಿ ಹಿಂತಿರುಗಿಸಲಾಗುವುದು. ಅಲ್ಲಿಯವರೆಗೆ ಯಾವುದೇ ನಾಗರಿಕರು ವಾಹನಗಳನ್ನು ಬಿಡಿಸಿಕೊಳ್ಳಲು ಪೊಲೀಸ್ ಠಾಣೆ ಗಳಿಗೆ ಬರಬಾರದೆಂದು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳಲಾಗಿದೆ.

5) ಒಂಟಿಯಾಗಿರುವ ಹಿರಿಯರನ್ನು ನೋಡಲು ಹೋಗಬಹುದೇ ?

ಇಲ್ಲವೆನ್ನುತ್ತದೆ. ಅವರಿಗೆ ಅಗತ್ಯವಿರುವ ವಸ್ತುಗಳನ್ನು ಆನ್ಲೈನ್ ಮೂಲಕ ಬುಕ್ ಮಾಡುವ ಮೂಲಕ ಸಹಕರಿಸಿ ಎನ್ನುತ್ತದೆ. ಬೆಂಗಳೂರಿನ ಹಿರಿಯ ನಾಗರೀಕರಿಗಾಗಿ ಸಹಾಯ ವಾಣಿ ತೆರೆಯಲಾಗಿದೆ

1090, 08022943226,

974477226,9243737230 ಈ ಸಂಖ್ಯೆ ಗಳಿಗೆ ಕರೆಮಾಡಿದರೆ ಅಗತ್ಯ ಸೇವೆಯನ್ನು ಅಲ್ಲಿ ಪ್ರಾದೇಶಿಕ ಸಂಸ್ಥೆಗಳ ಮೂಲಕ ಒದಗಿಸಲಾಗುವುದು.

6) ಕೋವಿಡ್ ನಿಯಂತ್ರಣಕ್ಕೆ ಸಹಕಸಿರುವ ಕೆಲಸಗಾರರು, ಅಗತ್ಯ ವಸ್ತುಗಳ ಡಿಲೆವರಿ ಕೊಡುವ ಈ ವಾಣಿಜ್ಯ ಮಳಿಗೆಯವರಿಗೆ ಅವಕಾಶ ನೀಡಲಾಗಿದೆ. ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿರುವ ಅಗತ್ಯ ನೌಕರರು ಮಾತ್ರ ಓಡಾಡುವ ಅವಕಾಶವಿದೆ. ಅವರು ಅವರ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು. ಉಳಿದಂತೆ ಆರೋಗ್ಯ ತುರ್ತು‌ ಇರುವವರು ಪೋಲಿಸ್ ಠಾಣೆಯಲ್ಲಿ ೧೨ ತಾಸಿನ ಪಾಸ್ ಪಡೆಯಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆಯತಕ್ಕದ್ದು

7) ನಾವು ಬೇರೆ ಜಿಲ್ಲೆಗೆ ಪ್ರಯಾಣಿಸಬಹುದೇ ?

ಇಲ್ಲವೆನ್ನುತ್ತದೆ ಮಾರ್ಗಸೂಚಿ.ಆರೋಗ್ಯ ತುರ್ತು ಇದ್ದರೆ ಲಿಖಿತ ಅರ್ಜಿಯನ್ನು ಡಿಸಿಪಿ ಅವರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ಡಿ ಸಿ ಪಿ ಯವರಿಂದ ಅನುಮತಿ ಪಡೆದು. ಪ್ರಯಾಣಿಸಬಹುದು.

ಸಾರ್ವಜನಿಕರಿಂದ ಕೇಳಿಬಂದ ಅಹವಾಲು ಏನೆಂದರೆ ?

ಮನೆಗೆಲಸ ಮಾಡಲು ಸಾಧ್ಯವಾಗದಂತಹ ಹಿರಿಯ ನಾಗರಿಕರಿಗೆ ಮನೆಕೆಲಸದವರ ಅಗತ್ಯ ವಿರುತ್ತದೆ ಅವರಿಗೆ ಅವಕಾಶ ಮಾಡಿಕೊಡಬೇಕಿತ್ತು ಎಂಬ ಮಾತು ಕೇಳಿಬರುತ್ತಿದೆ.

ಸಾರ್ವಜನಿಕರು ತಮ್ಮ ಸಮಸ್ಯೆಗೆ ಸಹಾಯವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಬೆಂಗಳೂರು.080 22942200

08022942325

08022942330

ಪುಸ್ತಕ ಪರಿಚಯ: ಮಾಧವಿ

ಡಾ. ಶ್ವೇತಾರಾಣಿ ಹೆಚ್

1973ರಲ್ಲಿ ಡಾ. ಅನುಪಮಾ ನಿರಂಜನ ರಚಿಸಿರುವ ಕಾದಂಬರಿಗೆ ಪುರಾಣದ ವಸ್ತುವನ್ನು ಆಯ್ಕೆಮಾಡಿಕೊಳಡಿದ್ದಾರೆ.‌ ಮಹಾಭಾರತದ 114,117,118,119,120ನೇ ಶ್ಲೋಕಗಳಲ್ಲಿ ಮಾಧವಿಯ ಉಲ್ಲೇಖವಿದೆ ಎಂಬುದನ್ನು ಲೇಖಕಿ ಮೊದಲಮಾತಿನಲ್ಲಿ ಕಾದಂಬರಿಗೆ ವಸ್ತುವನ್ನು ಆಯ್ಕೆಮಾಡಿಕೊಂಡ ಬಗೆಯನ್ನು ಇಲ್ಲಿ ತಿಳಿಸಿದ್ದಾರೆ.

ಅನಾದಿಕಾಲದಿಂದಲೂ ಸ್ತ್ರೀ ಅಬಲೆ. ಅವಳು ವಸ್ತುವಿನಂತೆ ವಿಕ್ರಯಕ್ಕೆ ಒಳಗಾಗುತ್ತಿದ್ದಳು. ಅಲ್ಲಿ ಪುರುಷನ ಕಾಮ ಪೂರೈಕೆಗೆ ಸ್ತ್ರೀ ಒಂದು ವಸ್ತುವಾಗಿದ್ದಳು. ಅವಳ ಮನೋಇಂಗಿತಕ್ಕೆ ಇಲ್ಲಿ ಬೆಲೆಯಿಲ್ಲ. ಅವಳ ಅಲಂಕಾರ ಗಂಡಿನ ಕಣ್ಣಿಗೆ ಕಾಮೋತ್ತೇಜಕವಾಗಿ ಕಾಣಬೇಕು ಎಂಬ ಉದ್ದೇಶದಿಂದಲೇ ಇರುತ್ತಿತ್ತು. ಗಂಡ ಹೆಂಡತಿಯನ್ನು ವಸ್ತುವಿನಂತೆ ಮಾರಬಹುದಿತ್ತು. ದಾನ ಕೊಡಬಹುದಾಗಿತ್ತು. ಅದು ಮಗಳಿಗೂ ಅನ್ವಯವಾಗುತ್ತಿದ್ದ ನೀತಿ. ಆದುದರಿಂದಲೇ ಯಯಾತಿ ಗಾಲವ ಮುನಿ ಕೇಳಿದಾಗ ತನ್ನ ಮಗಳನ್ನು ಅಷ್ಟು ಸುಲಭವಾಗಿ ದಾನ ಕೊಡುತ್ತಾನೆ. ಇಲ್ಲಿ ದಾನವಾಗಿ ಹೋಗುವ ವ್ಯಕ್ತಿಯ ಭಾವನೆಗಳನ್ನು ಕೇಳುವುದೂ ಇಲ್ಲ.
ಮಹಾಭಾರತದ ಕಾಲದಲ್ಲಿ ಜಾರಿಯಲ್ಲಿದ್ದ ಮತ್ತೊಂದು ಪದ್ದತಿ ‘ನಿಯೋಗ’. ಬೇರೊಬ್ಬ ಪುರುಷನಿಂದ ಮಕ್ಕಳನ್ನು ಪಡೆಯುವ ಪದ್ದತಿ ಇದಾಗಿತ್ತು. ಕುಂತಿಗೆ ಮಕ್ಕಳಾಗುವುದು ಇದೇ ಪದ್ದತಿಯಿಂದ. ಹೆಣ್ಣಿನ ಕರ್ತವ್ಯ ಏನಿದ್ದರೂ ಮಕ್ಕಳನ್ನು ಹಡೆಯುವುದಾಗಿತ್ತು. ಹಾಗೇ ಅವಳು ಹೆತ್ತಮಕ್ಕಳನ್ನು ತನ್ನೊಂದಿಗೆ ಇಟ್ಟುಕೊಳ್ಳುವ ಹಕ್ಕು ಅವಳಿಗೆ ಇರಲಿಲ್ಲ.

ವಿಶ್ವಾಮಿತ್ರ ಮಹರ್ಷಿಯ ಅಹಂಗೆ ಬಲಿಯಾಗುವುದು ಮಾತ್ರ ಅದಕ್ಕೆ ಏನು ಸಂಬಂಧವಿಲ್ಲದ ಮಾಧವಿ.
ವಿಶ್ವಾಮಿತ್ರನ ವಿಚಿತ್ರ ಗುರುಕಾಣಿಕೆ ನೀಡಲು ಗಾಲವ ಯಯಾತಿಯ ಬಳಿಗೆ ಹೋಗಿ ಬೇಡುತ್ತಾನೆ. ಬೇಡಿ ಬಂದಿರುವ ಮುನಿಗೆ ಇಲ್ಲವೆನ್ನಲಾಗದೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಮದುವೆಮಾಡಬೇಕಿದ್ದ ಮಗಳನ್ನೆ ದಾನವಾಗಿ ಕೊಡುತ್ತಾನೆ.

ತುಂಬು ಯೌವನದಲ್ಲೊ ಸಾಕಷ್ಟು ಕನಸು ಹೊತ್ತಿದ್ದ ಅಪ್ರತಿಮ ಸುಂದರಿ ಮಾಧವಿ ಪಶುವಂತೆ ಗಾಲವನನ್ನು ಹಿಂಬಾಲಿಸುತ್ತಾಳೆ.

ತಾನು ಋಷಿಯಾದರೂ ಗಾಲವ ಅವಳನ್ನು ಸಂಭೋಗಿಸಲು ಬಯಸುತ್ತಾನೆ ” ಆದರೆ ಇದೊಂದು ರಾತ್ರಿ ಮಾಧವಿ ತನ್ನವಳಾದರೆ ಯಾರಿಗೆ ಗೊತ್ತಾಗುತ್ತದೆ ? ಅವಳು ಪ್ರತಿಭಟಿಸಿದರೂ ಈ ನಿರ್ಜನ ಪ್ರದೇಶದಲ್ಲಿ ಅವಳ ನೆರವಿಗೆ ಬರುವವರು ಯಾರು ? ”
ಎಂದು ಯೋಚಿಸುತ್ತಾನೆ.

ತಾನು ಬಯಸಿದ ಕನ್ಯಾ ಶುಲ್ಕ ಒಬ್ಬರಾಜನಲ್ಲಿ ಸಿಗದ ಕಾರಣ ಮಾಧವಿಯನ್ನು ಮೂರು ಜನ ರಾಜರಿಗೆ ಒಂದು ವರ್ಷಕ್ಕೆ ಒಂದು ಮಗುವನ್ನು ಹೆತ್ತುಕೊಡಲು ಬಾಡಿಗೆಗೆ ನೀಡುತ್ತಾನೆ. ಕೊನೆಗೆ ವಿಶ್ವಾಮಿತ್ರನ ಬಳಿಗೆ ಬಂದಾಗ ಮೂರು ಮಕ್ಕಳನ್ನು ಹೆತ್ತ ಮಾಧವಿಯನ್ನು ಅವನು ಕೂಡ ಬಯಸುತ್ತಾನೆ. ಆಗ ವಿಶ್ವಾಮಿತ್ರ‌ಈ ರೀತಿಯಾಗಿ ಯೋಚಿಸುತ್ತಾನೆ.

“ಎಂಟು ನೂರು ಅಶ್ವ ಗಳಿಗೆ ಬದಲಾಗಿ ಈ ಮಾಧವಿಯನ್ನೆ ಸ್ವೀಕರಿಸಿ ಅಂತ ಹೇಳಿ ಇವಳನ್ನು ನನ್ನಲ್ಲಿ ತಂದು ಬಿಟ್ಟಿದ್ದರೆ ಎಷ್ಟು ಚೆನ್ನಾಗಿತ್ತು! ನಾನೇ ಇವಳನ್ನು ಜೀವಮಾನ ಪರ್ಯಂತ ಭೋಗಿಸಿ ಜಗತ್ತಿಗೆ ಶ್ರೇಷ್ಠವಾದ ನಾಲ್ವರು ಪುತ್ರರನ್ನಿ ಪಡೀತಿದ್ದೆ. ಇರಲಿ ಆದದ್ದಾಗಿ ಹೋಯ್ತು. ಇವಳಲ್ಲಿ ಒಬ್ಬನೇ ಮಗನನ್ನು ಪಡೆದು ಅನಂತರ ಮಾಧವಿಯನ್ನು ನಿನಗೆ ಇಪ್ಪಿಸಿಬಿಡ್ತೀನಿ. ಎನ್ನುತ್ತಾನೆ.

ಮಾಧವಿ ಬಾಳಲ್ಲಿ ಬಂದ ಹರ್ಯಶ್ವ, ದಿವೋದಾಸ,ಉಶೀನರ, ವಿಶ್ವಾಮಿತ್ರರು. ಅವಳನ್ನು ವಸ್ತುವಿನಂತೆ ಅವಳನ್ನು ಭೋಗಿಸಿ ಮಕ್ಕಳನ್ನು ಪಡೆದು ಕೊಳ್ಳುತ್ತಾರೆ. ಆದರೆ ಮಕ್ಕಳೊಂದಿಗೆ ತಾಯಿಯಾಗಿ ಇರುವ ಹಕ್ಕು ಅವಳಿಗೆ ಇಲ್ಲ.
ಕೊನೆಯದಾಗಿ ತಂದೆಯ ಮನೆ ಸೇರಿದ ಮಾಧವಿಯನ್ನು ಸ್ವಯಂವರದ ಮೂಲಕ ಸಾಗಿ ಹಾಕುವ ಯತ್ನ ನಡೆಯುತ್ತದೆ. ಇಲ್ಲಿ ಮಾಧವಿ ತನ್ನ ಇಚ್ಚೆಯಂತೆ ಆ ಸ್ವಯಂವರವನ್ನು ತಿರಸ್ಕರಿಸಿ ಕಾಡಿಗೆ ಹೋಗುತ್ತಾಳೆ. ಅವಳ ಈ ನಡೆ ಆ ಸಮುದಾಯವನ್ನು ತಿರಸ್ಕರಿಸುದೇ ಆಗಿರುತ್ತದೆ.

ಇಲ್ಲಿ ಅವಳ ಸೌಂದರ್ಯವೇ ಅವಳಿಗೆ ಮುಳುವಾಗುತ್ತದೆ. ಯೌವನದಲ್ಲಿ ಅನೇಕ ಬಯಕೆಗಳನ್ನೊತ್ತ ಅವಳು ತಂದೆಯ ವಯಸ್ಸಿನವರನ್ನು ಕೂಡಬೇಕಾಗುತ್ತದೆ. ಅವಳ ಮನಸ್ಸು ತನಗೆ ಅನುರೂಪರಾದವರನ್ನು ಬಯಸುತ್ತದೆ. ಇಚ್ಚೆಯಂತೆ ಪತಿಯನ್ನು ಪಡೆಯಲಾಗದಿದ್ದರೂ. ಮಗುವಿನ ತಾಯಿಯಾಗಲೂ ಸಾಧ್ಯವಾಗದೆ ನರಳುತ್ತಾಳೆ.

ಇಲ್ಲಿ ಮಾಧವಿ ಪಾತ್ರ ಬದುಕಿನ ದುರಂತ ಮಾದರಿಯಾಗಿ ನಿಲ್ಲುತ್ತದೆ.

ಭಾನುವಾರದ ಕವಿತೆ : ತಾಯಂದಿರ ದಿನ

ಇಂದು‌ ವಿಶ್ವತಾಯಂದಿರ ದಿನದ‌ ಪ್ರಯುಕ್ತ ಭಾನುವಾರದ ಕವಿತೆ ವಿಭಾಗದಲ್ಲಿ ತಾಯಿಯಂದಿರ ಮನೋತಳಮಳ, ಕರೋನಾ ಸಂಕಷ್ಟದ ಸಮಯದಲ್ಲಿ ಅವಳ ಮನದಾಳವನ್ನು ತೆರೆದಿಟ್ಟಿರುವ ಕವಿತೆ ನಿಮಗಾಗಿ.

ವಿಶ್ವತಾಯಂದಿರ ದಿನದ ಪ್ರಯುಕ್ತ ತಾಯಿಯನ್ನು ಕುರಿತು ನೀವು ಪಬ್ಲಿಕ್ ಸ್ಟೋರಿಗೆ ಲೇಖನ ಅಥವಾ ಕವನವನ್ನು ಬರೆದು ವಾಟ್ಸಪ್ ನಂಬರ್ ಗೆ ಕಳುಹಿಸಿ.

ಎಲ್ಲರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.

ಡಾಕ್ಟರ್ ರಜನಿ ಎಂ

ನಾನು ಗರ್ಭಿಣಿ
ಕೋವಿಡ್ ವ್ಯಾಕ್ಸಿನ್ ತಗೋಬಹುದಾ?

ನಾನು ಕೋವಿಡ್ ಪಾಸಿಟಿವ್
ಹಾಲು ಕುಡಿಸಬಹುದಾ?

ಅಪ್ಪಾ ತಗೋ ಶುಂಠಿ ಕಷಾಯ
ಪಾಪೂ ಸರಿಯಾಗಿ ಕೈ ತೊಳಿ..

ಸತ್ತ ಮಗುವ ಬಿಡದ ತಾಯಿ
ತಾಯಿಯ ಚಿತೆಗೆ ಬೆಂಕಿ ಹಚ್ಚುವ ಮಗ

ತಾಯಿಯ ಹೆಣ ಬಿಟ್ಟು ಹೋದ ಮಗ
ಅಪ್ಪನಿಗೆ ಕೊನೆಗಾಲದಲ್ಲಿ ನೀರು ಕುಡಿಸುವ ಮಗಳು

ಹೆಗಲ ಮೇಲೆ, ಸೂಟ್ ಕೇಸ್ ಮೇಲೆ
ಸೊಂಟದ ಮೇಲೆ ,ಮಗುವ ಎತ್ತಿಕೊಂಡು ಊರು ಬಿಡುವ ಜನ

ಏದುಸಿರ ಮಗುವ ಎತ್ತಿ ಓಡೋಡಿ ಬಂದು
ಆಸ್ಪತ್ರೆ ಬಾಗಿಲಲಿ ಕುಸಿದ ತಾಯಿ

ವ್ಯಾನಿಟಿ ಬ್ಯಾಗಲ್ಲಿ ಸ್ಯಾನಿ ಟೈಸರ್
ಮಿಕಿ ಮೌಸ್ ಮಾಸ್ಕ್
ಮಂಕಿ ಟೋಪಿಯೇ ಮಾಸ್ಕ್

ನಾನು ಪಾಸಿಟಿವ್
ಮಕ್ಕಳಿಗೆ ಅಡುಗೆ ಮಾಡಬಹುದಾ?

ಸತ್ತ ತಾಯಿಯ ಏಳಿಸುವ ಮಗು
ನಮ್ಮಪ್ಪ ಹುಲಿ ಇದ್ದ ಹಾಗೆ ಇದ್ದ….

ನನ್ನಣ್ಣ ನನಗೆ ಅಪ್ಪ ಇದ್ದಾಗೆ ಇದ್ದ…
ನನ್ನ ಚಿನ್ನು ಬೇಕು…..
ಅಮ್ಮಣ್ಣಿ ಎಲ್ಲಿದ್ದಿ? ಎಂದು ಕರೆದ

ಜಿಪ್ ಒಳಗೆ ಮುಖ ಕಾಣಲಿಲ್ಲ
ಯಾರ ಹೆಣ ಯಾರಿಗೋ‌‌..
ಯಾರ ಮಣ್ಣು ಯಾರೋ ಮಾಡಿ

ಸಾವಿಗೆಂತ ಜಾತಿ?
ಅಂತಸ್ತು ?

ನಿರಾಶೆಯಾಗಬೇಡಿ
————————😘

ಬಂದೇ ಬರುವುದು
ಮಗುವ ಮುದ್ದಾಡುವ ದಿನ

ಮುಟ್ಟಿ ಮಾತಾಡುವ ದಿನ
ಬಗ್ಗಿ ಪಿಸುಗುಡುವ ದಿನ

ಮುಖವಾಡ ಕಳಚಿ
ಬೆತ್ತಲಾಗುವ ದಿನ

ಸಾಕ್ಷಿ ?😃

ಆನ್ ಲೈನ್ ನಲ್ಲಿ ಪಾಠ ಕಲಿಯುವ ಮಕ್ಕಳು!
ಲಾಕ್ ಡೌನ್ ವರ್ಚುವಲ್ ಮದುವೆ
ಭರಣಿ ಮಳೆಗೆ ಬಲಿತ ಮಾವು
ಮಾಸ್ಕ್ ತೆಗೆದು ಕದ್ದ ಪ್ರೇಮಿಯ ಮುತ್ತು…
ಸ್ಯಾನಿಟೈಸರ್ ಹಾಕಿದ ನಂತರ ಹಿಡಿದ ಆಕೆಯ ಅಂಗೈ
ಅಜ್ಜಿಯ ತಿಂಗಳ ಬಿಪಿ ಮಾತ್ರೆ ದಾಸ್ತಾನು
ಲಾಟಿ ನೋಡಿ ಓಡುವ ಕೈನೆಟಿಕ್
ಲಿಪ್ ಸ್ಟಿಕ್ ವಿತರಕ

ಎಲ್ಲದಕಿಂತ ….

ಅಕ್ಟೋಬರ್ ಕಳೆಯಲ ಡಾಕ್ಟರ್?
ಆಮೇಲೆ ಗರ್ಭಿಣಿ ಆಗಬಹುದಾ ?

ಎನ್ನುವ ಮುದ್ದು ಕರಿ ಬಳೆ ಹುಡುಗಿ.

ಕೊರೊನಾ-ಮೈಸೂರು, ತುಮಕೂರು ಒಂದಾ, ಬೆಳಗಾವಿ ಬೇರೇನಾ?

Publicstory


ಬೆಂಗಳೂರು: ಕೊರೊನಾ ಪಾಸಿಟಿವ್ ಸಂಖ್ಯೆಯಲ್ಲಿ ತುಮಕೂರು, ಹಾಸನ, ಮೈಸೂರು ಜಿಲ್ಲೆ ಒಂದಾದರೆ ಬೆಳಗಾವಿ ಜಿಲ್ಲೆ ಬೇರೇನಾ ಎಂಬ ಅನುಮಾನ ಮೂಡತೊಡಗಿದೆ.

ಭೌಗೋಳಿಕವಾಗಿ ಬೆಳಗಾವಿ, ತುಮಕೂರಿಗಿಂತ ದುಪಟ್ಟು ಇದೆ. ಜನಸಂಖ್ಯೆಯಲ್ಲೂ ಅಷ್ಟೇ. ತುಮಕೂರು ಜಿಲ್ಲೆಯಲ್ಲಿ 27. ಲಕ್ಷ ಜನರಿದ್ದರೆ, ಬೆಳಗಾವಿಯಲ್ಲಿ 46 ಲಕ್ಷ ಜನರಿದ್ದಾರೆ. ಇಂಥ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಪ್ರತಿ ದಿನ 900 ಆಸು ಪಾಸಿನಲ್ಲಿರುವುದನ್ನು ಸರ್ಕಾರ ಗಮನಿಸಬೇಕಾಗಿದೆ.

ತುಮಕೂರಿನಲ್ಲಿ‌ ನಿನ್ನೆ 3040 ಸೋಂಕಿತರಿದ್ದರು. ಹಾಸನ 2040, ಮೈಸೂರು 2047 ಇತ್ತು.
ಜನಸಂಖ್ಯೆಯಲ್ಲಿ ಈ ಮೂರು ಜಿಲ್ಲೆಗಳಿಗಿಂತ ಹೆಚ್ಚಿರುವ ಬೆಳಗಾವಿಯಲ್ಲಿ ಮಾತ್ರ ಸೋಂಕಿತರು ಕಡಿಮೆಯಾಗಲು ಅಲ್ಲಿನ ಡಿಎಚ್ ಒ ಏನು ಕ್ರಮಗೊಂಡಿರಬಹುದು?

ತುಮಕೂರು, ಮೈಸೂರು, ಹಾಸನದಲ್ಲಿ ಯಾಕೆ ಇದು ಆಗುತ್ತಿಲ್ಲ. ಸೋಂಕು ನಿಯಂತ್ರಣದಲ್ಲಿ ಬೆಳಗಾವಿ ಡಿಎಚ್ ಒ ಸರಿಯಾಗಿ ಟೆಸ್ಟಿಂಗ್ ಮಾಡ್ತಾ ಇದ್ದಾರಾ, ಮಾಡಿಯೂ ಸೋಂಕು ನಿಯಂತ್ರಣದಲ್ಲಿದೆಯೇ? ಇಲ್ಲವೇ ತುಮಕೂರಿನವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರಾ, ಹೆಚ್ಚೆಚ್ಚು ಟೆಸ್ಟಿಂಗ್ ಮಾಡ್ತಾ ಇದ್ದಾರ ಎಂಬುದನ್ನು ಸರ್ಕಾರ ನೋಡಬೇಕಾಗಿದೆ.

ಬೆಳಗಾವಿ ಜಿಲ್ಲೆ ಮಹಾರಾಷ್ಟ್ರಕ್ಕೆ ಹತ್ತಿರವಿದೆ. ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚು. ಜನಸಂಖ್ಯೆಯೂ ಹೆಚ್ಚು. ಆದರೆ ಸೋಂಕು ಮಾತ್ರ ಕಡಿಮೆ.‌ಈ ಬಗ್ಗೆ ಗಮನ ಹರಿಸುವುದು ಒಳಿತು. ಒಂದು ವೇಳೆ, ಅಲ್ಲಿ ಸೋಂಕು ನಿಯಂತ್ರಿಸುವಲ್ಲಿ ಅಲ್ಲಿನ ಡಿಎಚ್ ಒ ಯಶಸ್ವಿಯಾಗಿದ್ದರೆ ಅದೇ ಮಾದರಿ ಈ ಜಿಲ್ಲೆಗಳಿಗೂ ಅಳವಡಿಸಿಕೊಳ್ಳಬಹುದಾಗಿದೆ.

ಮಹಾರಾಷ್ಟ್ರ ದ ಮುಂಬೈ ಮಹಾ‌ನಗರ ಪಾಲಿಕೆ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲಿನ ಮಾದರಿಯನ್ನೇ ಬೆಳಗಾವಿ ಜಿಲ್ಲೆಯಲ್ಲೂ ಅಲ್ಲಿನ ಆಡಳಿತ ಅನುಸರಿಸುತ್ತಿದೆಯೇ?

ತುಮಕೂರು, ಹಾಸನ, ಮೈಸೂರು ಡಿ ಎಚ್ ಒ ಅವರುಗಳು ಚೆನ್ನಾಗಿ ಕೆಲಸ ಮಾಡುತ್ತಾ ಸೋಂಕು ಪತ್ತೆ ಹಚ್ಚುವಲ್ಲಿ ಮುಂದಿದ್ದಾರಾ? ಇಲ್ಲವೇ ಬೆಳಗಾವಿಯವರು ಚೆನ್ನಾಗಿ ಕೆಲಸ ಮಾಡುತ್ತಾ ಸೋಂಕು ನಿಯಂತ್ರಣ ಮಾಡಿದ್ದಾರ ನೋಡಿಕೊಂಡು ಗೆಲುವಿನ ಕಿರೀಟ ಕೊಡಬೇಕಾಗಿದೆ.

ಟೆಸ್ಟಿಂಗ್ ಮಾರ್ಗದರ್ಶಿ ಸೂತ್ರ ಬದಲು: ಈ ಹಿಂದೆ ಇದ್ದ ರ್ಯಾಂಡಮ್ ಪರೀಕ್ಷೆಯನ್ನು ಸರ್ಕಾರ ಕೈ ಬಿಟ್ಟು ಹೊಸ ಆದೇಶ ಹೊರಡಿಸಿದೆ. ಕೊರೊನಾ ಲಕ್ಷಣ ರಹಿತರನ್ನು (A Symatamatic) ಕೊರೊನಾ ಪರೀಕ್ಷೆ ಮಾಡುವಂತಿಲ್ಲ.

ಈ ರೀತಿಯ asymptomatic testing ನಿಲ್ಲಿಸಿದಾಗ ಪಾಸಿಟಿವ್ ಬರುವ ಸಂಖ್ಯೆ ಕಡಿಮೆ ಆಗುತ್ತದೆ. ಆಗ ಪಾಸಿಟಿವ್ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಜನರು ಅಸಡ್ಡೆ ಮಾಡಬಾರದು.ಇದು ನಮ್ಮ ಕಳಕಳಿ.ಆರೋಗ್ಯ ಇಲಾಖೆ ಕೂಡ ಈ ವಿಷಯವನ್ನು ಕೂಲಂಕುಷ ವಾಗಿ ಪರಿಶೀಲಿಸಬೇಕು.ಹಿಂದೆ ಜನರು ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸುತ್ತಾ ಇದ್ದರು.ಈಗ ಅವರೇ ಮುಂದೆ ಬಂದು ಕ್ಯೂ ನಿಲ್ಲುತ್ತಾರೆ.

ಕೋವಿಡ್:  ಜಿಲ್ಲಾಡಳಿತ ವಿಫಲ: ದೊಡ್ಡಾಘಟ್ಟಚಂದ್ರೇಶ್ ಆರೋಪ

Publicstory


ತುರುವೇಕೆರೆ: ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರಿಗೆ ಸಕಾಲಕ್ಕೆ ಕೋವಿಡ್ ಜೀವರಕ್ಷಕ ಔಷಧಿಗಳು ಸಿಗದೆ ಸಾಕಷ್ಟು ಬಡವರು, ಸಾರ್ವಜನಿಕರು ಸಾವನ್ನಪ್ಪುತ್ತಿದ್ದು ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ರಾಜ್ಯ ಯುವ ಜೆ.ಡಿ.ಎಸ್ ಪ್ರಧಾನ ಕಾರ್ಯದರ್ಶಿ ತುರುವೇಕೆರೆ ದೊಡ್ಡಾಘಟ್ಟಚಂದ್ರೇಶ್ ಗಂಭೀರ ಆರೋಪ ಮಾಡಿದರು.

ತುಮಕೂರು ಜಿಲ್ಲೆಯಾದ್ಯಂತ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಏರುತ್ತಿದೆ. ಸಾರ್ವಜನಿಕ ಆಸ್ಪತ್ರೆ ಹಾಗು ಕೋವಿಡ್ ಕೇಂದ್ರಗಲ್ಲಿ ಸೂಕ್ತವಾದ ಕೋವಿಡ್ ಔಷಧಿಗಳು, ಆಮ್ಲಜನಕ ಹಾಗು ಇನ್ನಿತರ ಸೌಕರ್ಯಗಳ ಕೊರತೆ ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಗಳು ಸಾರ್ವಜನಿಕವಾಗಿ ಹೇಳದ ಸ್ಥಿತಿಲ್ಲಿದ್ದಾರೆ. ಕನಿಷ್ಟ ಸೋಂಕಿತರಿಗೆ ನೀಡಬೇಕಾದ ಮಾತ್ರೆಗಳನ್ನು ಸರಬರಾಜು ಮಾಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ ವಹಿಸಿದ್ದು ಆಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಡಳಿತ ಬಡವರ ಜೀವದೊಡನೆ ಚೆಲ್ಲಾಟವಾಡುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಜಿಲ್ಲೆಯ 10 ತಾಲ್ಲೂಕಿನ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ಗೆ ಸಂಬಂಧಿಸಿದ ಔಷಧಿಗಳು ಎಷ್ಟಿದೆ, ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೇ ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಇದ್ದಂತಿಲ್ಲ. ಇನ್ನು ಕೋವಿಡ್ ಪರೀಕ್ಷೆಗಳ ಫಲಿತಾಂಶ ಬರಲು ವಾರಗಟ್ಟಲೆ ವಿಳಂಭವಾಗುತ್ತಿರುವುದರಿಂದ ಸೋಂಕು ತೀವ್ರ ಪ್ರಮಾಣದಲ್ಲಿ ಹಬ್ಬುತ್ತಿದ್ದೆ. ಹಾಗಾಗಿ ಸೋಂಕು ಹೆಚ್ಚಿರುವ ರೋಗಿಗಳಿಗೆ ರಾಪಿಡ್ ಆಂಟೆಜೆನ್ ಪರೀಕ್ಷೆ ಮಾಡಿಸಲು ಅನುವು ಮಾಡಿಕೊಡಿ ಎಂದಿದ್ದಾರೆ.

ಜಿಲ್ಲೆಯಾದ್ಯಂತ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಕೋವಿಡ್ ನಿಯಂತ್ರಣ ಕುರಿತಂತೆ ಸಭೆ ನಡೆಸುತ್ತಿರುವುದು ಸಂತಸದ ವಿಚಾರ. ಅದೇ ರೀತಿ ಆಸ್ಪತ್ರೆ ಹಾಗು ಕೋವಿಡ್ ಕೇಂದ್ರಗಳಲ್ಲಿ ಔಷಧಿ ಹಾಗು ಇನ್ನಿತರ ಸೌಕರ್ಯಗಳು ರೋಗಿಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಸಾರ್ವಜನಿಕರ ಪರವಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಕೊರೊನಾ ಚಿಕಿತ್ಸೆ: ಕಾನೂನು ಪ್ರಾಧಿಕಾರಕ್ಕೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ

ತುಮಕೂರು:’, ಹೈ ಕೊರ್ಟ್ ಆದೇಶದಂತೆ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಕೊರೊನಾ ಚಿಕಿತ್ಸೆ ಸಮಸ್ಯೆ ಬಗೆಹರಿಸಲು ಜಿಲ್ಲಾ ಕಾನೂನು ಪ್ರಾಧಿಕಾರವು ಸಲಹಾ ತಂಡವನ್ನು ರಚಿಸಿದೆ.

ಆಸ್ಪತ್ರೆ ಸಿಗದವರು, ಆಕ್ಸಿಜನ್ ಸಿಗದವರು, ವೈದ್ಯಕೀಯ ಸೇವೆ ಬೇಕಾದವರು ಕಾನೂನು ಸೇವಾ ಪ್ರಾಧಿಕಾರದ ಈ ಕೆಳಕಂಡವರಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ತಿಳಿಸಿದ್ದಾರೆ.

ಇದಕ್ಕಾಗಿ ಕಾನೂನು ಸೇವಾ ಪ್ರಾಧಿಕಾರವು ಸಹಾಯವಾಣಿ ತೆರೆದಿದ್ದು, ಪ್ಯಾನಲ್ ವಕೀಲರಾದ ಮಂಜುನಾಥ್-9822448971, ಓಬಯ್ಯ 6362129467, ಆಶಾ 9916531546 ಹಾಗೂ ಆಡಳಿತಾಧಿಕಾರಿ ನರಸಿಂಹಪ್ಪ 94483899509 ಇವರಿಗೆ ಕರೆ ಮಾಡಬಹುದು.

ಎದೆಯ ಮೇಲೆ ನೋವಿನ ಶಿಲುಬೆ

0

ಟಿ. ಸತೀಶ್ ಜವರೇಗೌಡ ಮಂಡ್ಯ

ಅಕಾಲ ಮರಣದ ರಣಭೇರಿ
ಹುಟ್ಟಿಸಿದೆ ಭಯಾನಕ ಕಂಪನ
ವಿಷಮ ಪರಿಸ್ಥಿತಿಯ ತಂದಿಕ್ಕಿದೆ
ಕಂಡುದ್ದೆಲ್ಲವ ಭೋಗಿಸುವ ಜೀವನ
ಬರುಡಾಯಿತು ಹೊಳೆ ಗಿರಿ ಕಾನನ
ಜೀವ ಸರಪಳಿಯ ಅಸಮತೋಲನ
ಹೆಜ್ಜೆಹೆಜ್ಜೆಗೂ ದಹಿಸುವ ಬೆಂಕಿಯ ಬಿತ್ತಿದೆ
ಮಾರಕ ಮಹಾಮಾರಿ ಕೊರೋನ
ಅನುದಿನವೂ ಸಾಗಿದೆ ಸರಣಿ ಶವಯಾನ

ಊರೂರಿಗೂ ಬೀಗಮುದ್ರೆ
ದೂರಾಗಿಸಿದೆ ನಿದ್ರೆ
ದಿಗಿಲಾವರಿಸಿದ ಬದುಕು
ಸೂತಕ ಧರಿಸಿದ ಬೆಳಕು
ಮುಗಿಲು ಸೀಳುವ ಆಕ್ರಂದನ
ರಂಗೇರಿದ್ದ ಚುನಾವಣೆಗಳ ಕದನ
ಗಬ್ಬೆದ್ದ ನದಿತೀರದಲ್ಲಿ
ಧರ್ಮಾಂಧತೆಯ ನಶೆಯೇರಿದ
ಕುಂಭಾಮೇಳಿಗರ ವೀರೋನ್ಮತ್ತ ಸ್ಖಲನ
ಪ್ರಚಾರ ರ್ಯಾಲಿ ಬಾಡೂಟದ ಭೋಜನ
ಇದಕ್ಕಿಲ್ಲ ಬಿಗಿ ಕಾನೂನು ಕಟ್ಟಳೆಯ ಬಂಧನ

ಹೊರಳದ ಇರುಳು
ಕಾಡುವ ದೈತ್ಯ ನೆರಳು
ಕತ್ತರಿಸಲಾಗಿದೆ ಹೊಂಗನಸಿನ ಬೆರಳು
ತತ್ತರಿಸಿದೆ ಸಹಾಯಕ ಬೆಳದಿಂಗಳು
ಹಾಡುತ್ತಿಲ್ಲ ಯಾವ ಹಕ್ಕಿಯ ಕೊರಳು‌‌‌
ಹಸಿದೊಡಲ ಕೈ ಜಾರಿದೆ ತುತ್ತು ಕೂಳು
ಪ್ರಶ್ನಿಸಿದರೆ ದೇಶದ್ರೋಹದ ಪಟ್ಟದುರುಳು

ಕಸಿದಿದೆ ಜೀವದುಸಿರ
ಕಣ್ಣಿಗೆ ಕಾಣದ ವೈರಾಣುವಿನ ದಾಳಿ
ವಿಷವಾಗಿದೆ ಬೀಸುವ ಬಿಸಿಗಾಳಿ
ಬೆವರಿನ ಬಾಳಾಗಿದೆ ದಿವಾಳಿ
ಭೀತಿಯ ಬಲೆಗೆ ಸಿಲುಕಿ
ಕ್ಷಣಕ್ಷಣವೂ ಸಾಯಬೇಕಿದೆ ನರನರಳಿ
ಕತ್ತಲಲ್ಲಿ ದಿಕ್ಕು ತಪ್ಪಿದೆ ಮಹಾವಲಸೆ
ಬತ್ತಿಹೋಗಿದೆ ನಂಬಿಕೆಯ ಕಿರುಪಸೆ

ಆಸ್ಪತ್ರೆಗಳ ಅಲೆದಲೆದು ಸೋತಿವೆ
ಬಸವಳಿದ ಬಡವರ
ಒಡಕು ಪಾದದ ಕಾಲುಗಳು
ಮೃತ್ಯುವಿನ ಚೂಪು ಸರಳು ಇರಿದಿದೆ ಕರುಳು
ಸರತಿ ಸಾಲಿನಲ್ಲಿ ಮಲಗಿವೆ ಶವಗಳು
ಅಂತಿಮ ಯಾತ್ರೆಯಲ್ಲೂ
ಕಾಯಬೇಕಾದ ಗೋಳು
ರಾಜಕೀಯ ದಾಳಕ್ಕೆ ಎಲ್ಲರೂ ಒತ್ತೆಯಾಳು

ಅತ್ತ ಭ್ರಷ್ಟ ವ್ಯವಸ್ಥೆಯ ಚೆಲ್ಲಾಟ
ಇತ್ತ ಸಾವಿನೊಂದಿಗೆ ಮಂದಿಯ ಸೆಣಸಾಟ
ಉಲ್ಬಣಿಸಿದೆ ಕಡುಸಂಕಷ್ಟದ ಸ್ಫೋಟ
ಪ್ರಕ್ಷುಬ್ಧ ಭಾರವಾದ ಹೃದಯ
ಕಣ್ಣಲ್ಲಿ ಆರದ ಭೀಕರ ಗಾಯ
ತುಕ್ಕು ಹಿಡಿಯುತ್ತಿದೆ ನಿಂತಲ್ಲೇ ತೇರು
ಸ್ಮಶಾನದಲ್ಲೂ ವ್ಯಾಪಾರ ಜೋರು
ಸಮಯ ಸಾಧಕರು ದಂಧಾಕೋರರು
ಗದ್ದುಗೆಯಲ್ಲೇ ಠಿಕಾಣಿ ಹೂಡಿದವರು
ಆಮಿಷಗಳೊಡ್ಡಿ ಚುಕ್ಕಾಣಿ ಹಿಡಿದವರು
ಎಲ್ಲ ಮರೆತು ಪರಸ್ಪರ ಒಂದಾಗಿದ್ದಾರೆ
ಖಜಾನೆಯ ಲೂಟಿಗೆ ಮುಂದಾಗಿದ್ದಾರೆ

ಕಾರ್ಮೋಡ ದಟ್ಟೈಸಿ ದಿಗ್ಭ್ರಮೆಯ ಹುಟ್ಟಿಸಿ
ಹಗಲಿರುಳು ಮಗ್ಗಲಲ್ಲೇ ಉರಿಯುವ ಚಿತೆಗಳು
ಆರುತ್ತಿವೆ ದುಡಿಯುವ ಹಣತೆಗಳು
ಕಳೆಗುಂದಿವೆ ಮಿಡಿಯುವ ಕವಿತೆಗಳು
ಮೇರೆ ಮೀರಿದೆ
ಉಕ್ಕುವ ದುಃಖ ಮುಕ್ಕುವ ಶೋಕ
ಜೀವ ಹಿಂಡುವ ಅಕ್ಷರಸ್ಥರ ಪಾತಕ
ಅನಾಥವಾದ ಮನೆಗಳು
ಖದೀಮರ ಪಾಲಾದ ಗೊನೆಗಳು
ಹೊರಗೆ ರಾಜಕೀಯ ಗಲಭೆ
ಒಳಗೆ ಎದೆಯ ಮೇಲೆ ನೋವಿನ ಶಿಲುಬೆ

ಕೊರೊನಾ: ಇಂದು 13 ಮಂದಿ ಸಾವು, ತುಮಕೂರು, ತಿಪಟೂರಿನಲ್ಲಿ ಹೆಚ್ಚಿದ ಸೋಂಕು

1

Publicstory


ತುಮಕೂರು: ಜಿಲ್ಲೆಯಲ್ಲಿ ಬುಧವಾರ (ಇಂದು) 2221 ಮಂದಿ ಹೊಸದಾಗಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಒಂದೇ ದಿನ 13 ಮಂದಿ ಸಾವಿಗೀಡಾಗಿದ್ದಾರೆ.

ಸೋಂಕಿತರಲ್ಲಿ ಚಿ.ನಾ.ಹಳ್ಳಿ ,163, ಗುಬ್ಬಿ 416, ಕುಣಿಗಲ್ 160, ಪಾವಗಡ 140, ಶಿರಾ 226, ಮಧುಗಿರಿ 231, ತುರುವೇಕೆರೆ 121, ತುಮಕೂರು 461 ಹಾಗೂ ತಿಪಟೂರಿನಲ್ಲಿ 314 _ ಸೇರಿದ್ದಾರೆ.

133 ಸೋಂಕಿತರು ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 1490 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 54479 ಕ್ಕೇರಿದೆ.

ಮಾನವೀಯತೆ ಎನ್ನುವುದು ರಕ್ತದಲ್ಲೇ ಬರಬೇಕೇನೋ…

ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 24 ಕೋವಿಡ್ ಸೋಂಕಿತರ ಸಾವಿನ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳ ಜಂಗ್ಲಿ ಕುಸ್ತಿಯ ನಡುವೆ ಈ ಘಟನೆ ನೆನಪಿಗೆ ಬಂದಿತು.

ಆವೊತ್ತು, ಮಧ್ಯ ರಾತ್ರಿ ಮೀರಿತ್ತು. ಸಮಯ ರಾತ್ರಿ 1.30. ಆಗಷ್ಟೇ ಪ್ರಜಾವಾಣಿಯ ತುಮಕೂರು ಮುದ್ರಣವನ್ನು ಪ್ರಿಂಟ್ ಗೆ ಕಳುಹಿಸಿ ನಾನು, ಡಿ.ಎಂ. ಘನಶ್ಯಾಮ, ಡಿ.ಬಿ.ನಾಗರಾಜ ನಡೆದುಕೊಂಡು ಬಟವಾಡಿಯ ಮನೆಗೆ ಹೋಗುತ್ತಿದ್ದವು. ಪ್ರತಿ ದಿನದ ರಾತ್ರಿಯಂತೆ!

ಘನಶ್ಯಾಮ

ತುಮಕೂರಿನ ಬಿ.ಎಚ್. ರಸ್ತೆಯ ಒಂದು ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಆಂಜನೇಯ ದೇವಸ್ಥಾನದ ಸಮೀಪ ಕುದುರೆಯೊಂದು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿತ್ತು.

ಮೂರು ಜನ ಅತ್ತ ದೌಡಾಯಿಸಿದೆವು. ಯಾವುದೋ ವಾಹನ ಗುದ್ದಿ ಅದರ ಹಿಂದಿನ ಕಾಲು, ತೊಡೆ ಮುರಿದು ಹೋಗಿತ್ತು. ನಾವೆಲ್ಲ ಸೇರಿ ಹರ ಸಾಹಸ ಪಟ್ಟರೂ ಅದನ್ನು ಎತ್ತಿ ನಿಲ್ಲಿಸಲಾಗಲಿಲ್ಲ.

ಒಂದಿಬ್ಬರು ಆಟೊ ಚಾಲಕರು ನಮ್ಮ ನೆರವಿಗೆ ಬಂದರು. ಆದರೂ ಏನೇನೂ ಪ್ರಯೋಜನವಾಗಲಿಲ್ಲ.

ಅಷ್ಟರಲ್ಲಿ ರಾತ್ರಿ 2.30 ಮೀರಿತ್ತು. ಮನೆಗೆ ಹೋಗುವ ಮನಸ್ಸು, ಕುದುರೆಯನ್ನು ಹಾಗೇ ಬಿಟ್ಟುಹೋಗುವ ಬಿಡುವ ಮನಸ್ಸು ಇಲ್ಲ. ಅದಕ್ಕೆ ಚಿಕಿತ್ಸೆ ಆಗದಿದ್ದರೆ ಅದು ಸತ್ತು ಹೋಗಲಿದೆ ಎಂಬ ನೋವು.

ಅಗ, ಡಿ.ಸಿಗೆ ಫೋನ್ ಮಾಡೋ ಮಹೇಂದ್ರ ಎಂದವ ಶ್ಯಾಮ. ಅದಕ್ಕೆ ನಾಗರಾಜ್ ಕೂಡ ದನಿ ಸೇರಿಸಿದ.

ಡಿ.ಬಿ.ನಾಗರಾಜ

ನನಗೂ ಡಿಸಿ ಪರಿಚಯವೂ ಇರಲಿಲ್ಲ. ವರದಿಗಾರಿಕೆ ಕಾರಣದಿಂದ ಒಮ್ಮೆ ಮಾತ್ರ ಮಾತನಾಡಿದ್ದು ಬಿಟ್ಟರೆ ಉಳಿದಂತೆ ನನಗೂ ಅವರಿಗೂ ದೂರ, ದೂರ!

ಈ ನಡು ರಾತ್ರಿಯಲ್ಲಿ, ಅದು ಇಂಥ ವಿಚಾರಕ್ಕೆ ಜಿಲ್ಲಾಧಿಕಾರಿ ಅವರಿಗೆ ಫೋನ್ ಮಾಡುವುದೆಂದರೆ, ನಾನು, ಹಿಂದೆ-ಮುಂದೆ ನೋಡಿದೆ. ಶ್ಯಾಮನ ವರಾತೆ ಶುರುವಾಯಿತು. ನಿನಗ್ಯಾದಲ ಇದು ದೊಡ್ಡ ವಿಷಯ. ಏನ್ನೆಲ್ಲ ಮಾಡಿರುವನಿಗೆ ಒಂದು ಫೋನ್ ಮಾಡೋದ್ ಕಷ್ಟನಾ ಎಂಬ ಬೈಗುಳ ಬೇರೆ. ಇನ್ನೊಂದು ಕಡೆ ಕುದುರೆ ನೋವಿನ ನರಳಾಟ.

ಮೊಬೈಲ್ ತೆಗೆದುಕೊಂಡವನು ಜಿಲ್ಲಾಧಿಕಾರಿಗೆ ಫೋನಾಯಿಸಿದೆ. ಮೂರು- ನಾಲ್ಕು ರಿಂಗಾಗುತ್ತಿದ್ದಂತೆ ಫೋನ್ ತೆಗೆದರು. ವಿಷಯವನ್ನು ಕ್ಲುಪ್ತವಾಗಿ ಹೇಳಿದೆ. ಅರ್ಧ ಗಂಟೆಯಲ್ಲಿ ವ್ಯವಸ್ಥೆ ಮಾಡುತ್ತೇನೆ ಎಂದು ಕಾಳಜಿ ತೋರಿದರು.

ಹಾಗೇ ಕಾಳಜಿ ತೋರಿದವರು ಆಗ ಜಿಲ್ಲಾಧಿಕಾರಿಯಾಗಿದ್ದ ಡಾ. ಸೋಮಶೇಖರ್ ಅವರು. ಈಗ ಗಡಿನಾಡ ಅಭಿವೃದ್ಧಿ ಅಧ್ಯಕ್ಷರು.

ಅರ್ಧ ಗಂಟೆಯಲ್ಲಿ ಒಂದು ಗೂಡ್ಸ್ ಗಾಡಿ ಬಂತು. ಮಹಾನಗರ ಪಾಲಿಕೆಯದು ಇರಬೇಕು. ಕುದುರೆಯನ್ನು ಎತ್ತಿ ತುಮಕೂರಿನ ಪಶುವೈದ್ಯಕೀಯ ಇಲಾಖೆಯ ಹಿರಿಯ ಉಪ ನಿರ್ದೇಶಕರ ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಯಿತು. ಆ ಕೂಡಲೇ ಅದಕ್ಕೆ ಚಿಕಿತ್ಸೆ ಆರಂಭಿಸಲಾಯಿತು.

ತುಂಬಾ ಮುತುವರ್ಜಿಯಿಂದ ನೋಡಿಕೊಂಡರೂ ಅದು ಬದುಕಿ ಉಳಿಯಲಿಲ್ಲ. ವಾರದ ಬಳಿಕ ಸಾವಿಗೀಡಾಯಿತು.

ಮಾನವೀಯತೆ ಎಂಬುದು ರಕ್ತದಲ್ಲೇ ಬರಬೇಕೇನೋ. ಒಂದು ಆಸ್ಪತ್ರೆಯಲ್ಲಿ ಆಕ್ಸಿಜನ್ ಯಾವಾಗ ಖಾಲಿಯಾಗಲಿದೆ ಎಂದು ಅಳೆಯಲು ವಿಜ್ಞಾನಿಗಳ ತಂಡವೇ ಬರಬೇಕೇನು. ಮಾನವೀಯತೆಯ ಸಣ್ಣ ಕಾಳಜಿ, ಬದ್ಧತೆ ಇದ್ದರೆ ಸಾಕಿತ್ತೇನೋ.

ನನ್ನಿಂದಾಗಿ ನಾಲ್ಕು ಜೀವ ಉಳಿದವು ಎಂಬ ಬಿರುದಿಗಿಂತ ರಾಜಕಾರಣಿಗಳನ್ನು ಮೆಚ್ಚಿಸಿ ಯಾವ ಬಿರುದು ಪಡೆಯಲು ಸಾಧ್ಯವಾಯಿತು ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು.

ಮೂರು ಜನರು ಆಕ್ಸಿಜನ್ ಇಲ್ಲದೇ ಸತ್ತರು ಎಂಬ ವರದಿಯೇ ಸಾಕು ಅಲ್ಲವೇ ಮಾನವೀಯತೆ ಅಳೆಯಲು!