Thursday, May 7, 2026
Google search engine
Home Blog Page 165

ಜಗದೀಶ್ ಗೆ ತುಮಕೂರು ವಿ.ವಿ ಪಿಎಚ್ ಡಿ‌ ಪ್ರದಾನ

Publicstory. in


Tumkuru: ಗುಬ್ಬಿ ತಾಲ್ಲೂಕು ಜಿ.ಹೊಸಹಳ್ಳಿಯ ಎಂ.ಜಗದೀಶ ಇವರು ತುಮಕೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ಮಂಡಿಸಿದ ‘ಲಿಂಗಾಯತರಲ್ಲಿ ಸಾಮಾಜಿಕ ಬದಲಾವಣೆ : ಒಂದು ಸಮಾಜಶಾಸ್ತ್ರೀಯ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಪಿಹೆಚ್ ಡಿ ಪದವಿ ನೀಡಿ ಗೌರವಿಸಿದೆ.

ಪ್ರಸ್ತುತ ತುಮಕೂರಿನ ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗರಾಜ ಎಸ್. ಇವರು ಮಾರ್ಗದರ್ಶಕರಾಗಿದ್ದರು.

ಹೆಚ್ಚಿದ ಅಕ್ರಮ: ಇಂದು ಶಿಕ್ಷಕರ ಸಂಘದ ಚುನಾವಣೆ: ಯಾರಿಗೆ ದಕ್ಕಲಿದೆ ಜಯ?

Publicstory.in


ಸಿರಾ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಇಂದು ಚುನಾವಣೆ ನಡೆಯಲಿದ್ದು, ಒಟ್ಟು 16 ಸಾಮಾನ್ಯ ಹಾಗೂ 8 ಮಹಿಳಾ ಮೀಸಲು ಸ್ಥಾನ ಸೇರಿ ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಖಾಡ ರಂಗೇರಿದೆ.

ಚುನಾವಣಾ ಕಣದಲ್ಲಿ ಒಟ್ಟು 48 ಅಭ್ಯರ್ಥಿಗಳು ತಮ್ಮ ಅದೃಷ್ಠ ಪರೀಕ್ಷೆಗೆ ಸಜ್ಜಾಗಿದ್ದು, ಕಳೆದ ಒಂದು ವರ್ಷದಿಂದ ನಡೆಸಿದ್ದ ಪೂರ್ವಸಿದ್ದತೆಗಳಿಗೆ ಸಂಜೆ ಫಲಿತಾಂಶದ ನಂತರ ತೆರೆಬೀಳಲಿದೆ.

24 ಸ್ಥಾನಗಳಿಗೆ 2 ಸಿಂಡಿಕೇಟ್‌ಗಳಿಂದ ಶಿಕ್ಷಕರು ಸ್ಪರ್ಧಿಸಿದ್ದು, ತಾಲ್ಲೂಕಿನಾದ್ಯಂತ ಸುಮಾರು ಒಂದು ತಿಂಗಳಿಂದಲೂ ಪ್ರಚಾರ ನಡೆಸಲಾಗಿದೆ. ಹಾಲಿ ಅಧ್ಯಕ್ಷ ಟಿ.ಎನ್.ಓಂಕಾರೇಶ್ವರ್‌, ಕಾರ್ಯದರ್ಶಿ ಸುರೇಶ್‌ ನೇತೃತ್ವದಲ್ಲಿ ಈ.ದೊಡ್ಡಣ್ಣ, ಆರ್.ದೇವರಾಜು ಮುಂದಾಳತ್ವದಲ್ಲಿ ಒಂದು ಸಿಂಟಿಕೇಟ್‌ ಹಾಗೂ ಹಾಲಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್‌, ತಾಲ್ಲೂಕು ಸಂಘದ ಮಾಜಿ ಅಧ್ಯಕ್ಷ ಹಿಮಂತರಾಜು ಹಾಗೂ ಹನುಮಂತರಾಜು ನೇತೃತ್ವದಲ್ಲಿ ಮತ್ತೊಂದು ತಂಡ ತನ್ನ ಪರ 24 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಈ ಬಾರಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.

ಕಳೆದ 2014ರಲ್ಲಿ ನಡೆದ ಈ ಚುನಾವಣೆಯ ಫಲಿತಾಂಶವನ್ನೊಮ್ಮೆ ಅಚಲೋಕಿಸುವುದಾದರೆ, ಅಂದು ಇದ್ದ 25 ಸ್ಥಾನಗಳಲ್ಲಿ 21 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಓಂಕಾರೇಶ್ವರ್‌ ಮತ್ತವರ ಟೀಂ ಅಧಿಕಾರದ ಗದ್ದುಗೆಗೆ ಏರಿತ್ತು.

ಅಂದು ಹಿಂದುಳಿದ ಎಲ್ಲಾ ಜಾತಿಗಳು ಒಟ್ಟಾಗಿ ಅಂದಿನ ಅಧಿಕಾರಿಯೊಬ್ಬರ ದುರಾಡಳಿತದ ವಿರುದ್ದ ತಿರುಗಿ ಬಿದ್ದು, ಮತಚಲಾವಣೆ ಸಂದರ್ಭದಲ್ಲಿ ಅಧಿಕಾರಿಯ ನೇತೃತ್ವದ ತಂಡ ಸಂಪೂರ್ಣವಾಗಿ ನೆಲಕಚ್ಚುವಂತೆ ಇಡೀ ತಾಲ್ಲೂಕಿನ ಶಿಕ್ಷಕರು ತೀರ್ಮಾನ ಮಾಡಿ, ಅದರಲ್ಲಿ ಯಶಸ್ವಿಯೂ ಆದರು. ಕಳೆದ ಬಾರಿ 3 ಸಿಂಡಿಕೇಟ್‌ ಇದ್ದು, ಮತಗಳ ವಿಭಜನೆಯಾಗಲು ಕಾರಣವಾಯಿತು. ಆದರೆ ಈ ಬಾರಿ ಕೇವಲ ಎರಡೇ ಸಿಂಡಿಕೇಟ್‌ ಇರುವುದರಿಂದ ಫಲಿತಾಂಶ ಎರಡೂ ಟೀಂನವರಿಗೂ ನಿರೀಕ್ಷೆಯಂತೆ ಗೆಲುವು ಸುಲಭವಾಗಿರಲು ಸಾಧ್ಯವಿಲ್ಲ ಎಂಬ ಲೆಕ್ಕಚಾರಗಳು ಕೇಳಿಬರುತ್ತಿವೆ.

ಪ್ರಸ್ತುತ ತಾಲ್ಲೂಕು ಸಂಘದ ಅಧ್ಯಕ್ಷರಾಗಿದ್ದುಕೊಂಡು ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ 6 ವರ್ಷಗಳ ಕಾಲ ಅಧಿಕಾರ ನಡೆಸಿ, ತಾಲ್ಲೂಕಿನ ಶಿಕ್ಷಕರ ನಾಡಿಮಿಡಿತ ಅರಿತಿರುವ ಓಂಕಾರೇಶ್ವರ್‌ ಮತ್ತವರ ತಂಡ ಯಾವುದೇ ಶಿಕ್ಷಕರಿಗೆ ಯಾವುದೇ ಸಂದರ್ಭದಲ್ಲಿ ಕಚೇರಿಯಿಂದ ಆಗಬೇಕಾದ ಕೆಲಸ ಹಾಗೂ ದೊರೆಯಬೇಕಾದ ಸೌಲಭ್ಯಗಳನ್ನು ಶಾಲೆಯ ಬಾಗಿಲಿಗೆ ತಲುಪಿಸಿ, ಜಾತ್ಯಾತೀತ ನಾಯಕರೆನಿಸಿಕೊಂಡಿರುವುದು ಅನುಕೂಲವಾಗಲಿದೆ ಎಂಬ ಮಾತುಗಳನ್ನು ಕೆಲವು ಶಿಕ್ಷಕ ವಲಯದಲ್ಲಿ ಕೇಳಿಬರುತ್ತಿವೆ.

ಅನಿಲ್‌ ಕುಮಾರ್‌ ನೇತೃತ್ವದ ಹಿಮಂತರಾಜು, ಹನುಮಂತರಾಜು, ನರಸಿಂಹರಾಜು ಸೇರಿದಂತೆ ಶಿಕ್ಷಕರು ಸೇರಿ ರಚಿಸಿರುವ ತಂಡ‌ ಸಹ ಜೋರು ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ.

ಇನ್ನೂ, ಶಿಕ್ಷಕ ಸಮುದಾಯದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಕೆಲವರು ಪ್ರಚಾರದ ವೇಳೆ ಶಿಕ್ಷಕರಿಗೆ ನೀಡುತ್ತಿರುವ ಆಸೆ-ಆಮಿಷ-ಗಿಫ್ಟ್-ಹಣ ಹಾಗೂ ಅತಿಯಾದ ಜಾತಿಯತೆ ಇತ್ಯಾದಿ ಅಂಶಗಳ ಬಗ್ಗೆಯೂ ಕೋಪದ ಮಾತುಗಳನ್ನು ಆಡುತ್ತಿದ್ದಾರೆ.

ಅಲ್ಲದೇ ಎನ್‌ ಪಿ ಎಸ್‌ ನಿಂದ ಗೆಲ್ಲುವ ಶಿಕ್ಷಕರೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದು ಈ ವಲಯದ ಶಿಕ್ಷಕರು ಯಾರ ಪರ ವಾಲುತ್ತಾರೆ ಎಂದು ಹೇಳಲು ಬರುವುದಿಲ್ಲ.

ನಾನು ಇಲಾಖೆಗೆ ಸೇರಿ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದೇನೆ. ಸಂಘದಲ್ಲಿ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೇನೆ. ಈಗ ನನ್ನ ಸೇವೆಯಷ್ಟೂ ವಯಸ್ಸಾಗಿರದ ವ್ಯಕ್ತಿಗಳು ಅಧ್ಯಕ್ಷರಾಗಿ ಆಯ್ಕೆಯಾಗುವುದು ಹೇಗೆ ಸರಿ. ಹುಡುಗಾಟಿಕೆಯವರು ತಾಲ್ಲೂಕಿನ ಅಧ್ಯಕ್ಷನಾದರೆ ಆಗುವ ಅನಾಹುತ, ನಡೆಸುವ ಆಡಳಿತ ವೈಖರಿ ತಾಲ್ಲೂಕಿನ ಶೈಕ್ಷಣಿಕ ವ್ಯವಸ್ಥೆಯ ಅಧೋಗತಿಗೆ ಕಾರಣವಾಗಲಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಶಿಕ್ಷಕರೊಬ್ಬರು ಪತ್ರಿಕೆಗೆ ತಿಳಿಸಿದರು.

ಓಂಕಾರೇಶ್ವರ್‌ ಹಾಗೂ ಸುರೇಶ್‌ ನೇತೃತ್ವದ ತಂಡವು ಹಿಂದಿನ ಚುನಾವಣೆಯ ಪೂರ್ವದ ಪ್ರಣಾಳಿಕೆ ಯಲ್ಲಿ ತಿಳಿಸಿದಂತೆ ನಿವೃತ್ತರಾದ ದಿನದಂದೇ ಸದರಿ ಶಿಕ್ಷಕರಿಗೆ ಸಂಘದ ವತಿಯಿಂದ ಸನ್ಮಾನ ಮಾಡಿ ಅವರ ಸೇವೆಯನ್ನು ಸ್ಮರಿಸಿದ್ದು, ಬಹುದಿನಗಳ ಶಿಕ್ಷಕರ ಬೇಡಿಕೆಯಾದ ಗುರುಭವನ ನಿರ್ಮಾಣ ಮಾಡಲು ರಾಜಕೀಯ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ಬೆಂಬಲದೊಂದಿಗೆ ಅಂತಿಮ ಹಂತಕ್ಕೆ ತಂದಿರುವುದು, ಶೈಕ್ಷಣಿಕವಾಗಿ ಶಾಲೆಗಳಿಗೆ ಬೇಕಾದ ಅಗತ್ಯ ದಾಖಲೆಗಳ ಪೂರೈಕೆ, ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಿ, ಶಿಕ್ಷಕರ ವೃತ್ತಿ ಸಾಮರ್ಥ್ಯ ಹೆಚ್ಚಿಸಿರುವುದು, ಶಿಕ್ಷಕರ ಮತ್ತು ಅವಲಂಬಿತರ ವೈದ್ಯಕೀಯ ವೆಚ್ಚದ ಬಿಲ್‌ಗಳನ್ನು ಸಿದ್ಧಪಡಿಸಿ, ವಿವಿಧ ಹಂತಗಳಿಂದ ಅನುದಾನ ಮಂಜೂರು ಮಾಡಿಸಿ, ಶಿಕ್ಷಕರ ಖಾತೆಗಳಿಗೆ ಜಮಾ ಮಾಡಿಸಿರುವುದು ಸೇರಿದಂತೆ ಹಲವು ಶಿಕ್ಷಕ-ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದನ್ನೇ ಮುಂದು ಮಾಡಿಕೊಂಡು ಶಿಕ್ಷಕ ಮತದಾರರ ಹತ್ತಿರವಾಗಲು ಪ್ರಯತ್ನಪಟ್ಟಿದೆ. ಪ್ರಚಾರದ ವೇಳೆಯಲ್ಲೂ ಇದನ್ನೇ ಮುಂದು ಮಾಡಿದೆ.

ಪ್ರತಿ ತಿಂಗಳು ಸಹ ಮೊದಲ ವಾರದಲ್ಲೇ ವೇತನ ಕೊಡಿಸಲು ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿ, ಅನುದಾನಗಳ ಮಂಜೂರು ಮಾಡಲು ಕೋರಿ ಮೇಲಾಧಿಕಾರಿಗಳಿಗೆ ಪತ್ರ ಬರೆದು, ಅನುಸರನೆ ಮಾಡಿ, ಅನುಕೂಲ ಮಾಡಿರುವುದು,
ಶಿಕ್ಷಕರ ವೇತನ ಖಾತೆಗಳಿಗೆ ಜಮಾ ಆದ ತಕ್ಷಣ ಅದರ ಸಂದೇಶ ಹಾಗೂ ಇಲಾಖೆಯ ಸಹಭಾಗಿತ್ವದಲ್ಲಿ ವೇತನದ ವಿವರಗಳನ್ನು ಸಂದೇಶದ ಮೂಲಕ ತಲುಪಿಸಲು ಕ್ರಮ ವಹಿಸಿ, ಯಶಸ್ವಿಯಾಗಿ ಜಾರಿ ಮಾಡಿದ್ದು,
ಆರ್ಥಿಕ ವರ್ಷದ ಕೊನೆಯಲ್ಲಿ ನೀಡಬೇಕಾದ ʻವಾರ್ಷಿಕ ವರಮಾನ ತೆರಿಗೆ ಲೆಕ್ಕಾಚಾರʼದ ವಿವರಗಳನ್ನು ತುಂಬಲು ಬೇಕಾದ ಪೂರಕ ಮಾಹಿತಿಯನ್ನು ಒದಗಿಸಿರುವುದು,
ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿ, ಪ್ರತಿಭೆಗಳನ್ನು ಪ್ರೋತ್ಸಾಹಿಸಿರುವುದು ಮುಂತಾದ ಕೆಲಸ ಕಾರ್ಯಗಳ ಬಗ್ಗೆಯೂ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

ಈ ಎಲ್ಲಾ ಕಾರ್ಯಕ್ರಮಗಳೊಂದಿಗೆ ತಾಲ್ಲೂಕಿನ ಪ್ರಾಥಮಿಕ ಶಿಕ್ಷಣದ ಪ್ರಗತಿಗೆ ಹಾಗೂ ಶಿಕ್ಷಕರಿಗೆ ಸಲ್ಲಬೇಕಾದ ಎಲ್ಲಾ ರೀತಿಯ ಸೇವಾ ಸೌಲಭ್ಯ ಹಾಗೂ ಅನುಕೂಲಗಳನ್ನು ಮಾಡಿ, ಮುಂದೆಯೂ ಇದಕ್ಕಿಂತ ಹೆಚ್ಚಿನ ಸೇವೆ ಮಾಡುವ ಇಚ್ಛಾಶಕ್ತಿ ಹೊಂದಿದ್ದೇವೆ ಎಂಬ ಪ್ರಚಾರದ ಮೂಲಕ ಓಂಕಾರೇಶ್‌, ಸುರೇಶ್‌, ದೊಡ್ಡಣ್ಣ ಹಾಗೂ ದೇವರಾಜು ಇರುವ ತಂಡ ಮತದಾರರ ಮನಮುಟ್ಟಲು ಪ್ರಯತ್ನ ಹಾಕಿದೆ.

ಎದುರುದಾರ ತಂಡವು ಪ್ರಚಾರದಲ್ಲಿ ಹಿಂದೆ‌ ಬಿದ್ದಿಲ್ಲ.‌ಹಲವು ಭರವಸೆಗಳನ್ನು ನೀಡಿ ಕುತೂಹಲ ಮೂಡಿಸಿದೆ.

ನಕಲಿ ಬೆಳ್ಳಿ ಬಟ್ಟಲು ನೀಡಿ ಯಾಮಾರಿಸಿದ ಅಭ್ಯರ್ಥಿಗಳು:

ಚುನಾವಣೆಯಲ್ಲಿ ಶತಾಯ-ಗತಾಯ ಗೆಲ್ಲಲೇ ಬೇಕೆಂದು ತೀರ್ಮಾನಿಸಿರುವ ತಂಡವೊಂದು ಶಿಕ್ಷಕರಿಗೆ ಹಣ ಮತ್ತು ಬೆಲೆಬಾಳುವ ಉಡುಗೊರೆಗಳ ಆಸೆ-ಆಮಿಷ ತೋರಿಸಿ ಮತ ಯಾಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಇದರಿಂದ ಕೋಪಗೊಂಡಿರುವ ತಾಲ್ಲೂಕಿನ ಪ್ರಜ್ಞಾವಂತ ಶಿಕ್ಷಕ ಸಮುದಾಯವು “ಇಡೀ ಇತಿಹಾಸದಲ್ಲೇ ಇಂತಹ ವಾಮಮಾರ್ಗದ ಹಾಗೂ ಭ್ರಷ್ಠಾಚಾರ ಪ್ರಚೋದಿಸುವ ಚುನಾವಣಾ ಪ್ರಚಾರ ಎಂದೂ ನಡೆದಿರಲಿಲ್ಲ” ಆದ್ದರಿಂದ ಹಣ ಹಾಗೂ ಇನ್ನಿತರೆ ವಸ್ತುಗಳನ್ನು ನೀಡಿರುವ ತಂಡವನ್ನು ಸಂಪೂರ್ಣವಾಗಿ ತಿರಸ್ಕರಿಸಲು ಸಿದ್ಧರಾಗಬೇಕು ಎಂದು ಕೆಲವು ಮತದಾರ ಶಿಕ್ಷಕರು ಪ್ರಚಾರ ನಡೆಸುತ್ತಿದ್ದಾರೆ.

ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮತದಾನ ಸಮಯದಲ್ಲಿ ಇಡೀ ಸಿಂಡಿಕೇಟ್‌ ಗೆ ಓಟ್‌ ಮಾಡಿ, ಮೊಬೈಲ್‌ ನಲ್ಲಿ ಚಿತ್ರೀಕರಿಸಕೊಂಡು ಬಂದು ತೋರಿಸಿದರೆ, ಸ್ಥಳದಲ್ಲೇ 2 ಸಾವಿರ ಹಣ ನೀಡಲಾಗುವುದು ಎಂದೂ ಪ್ರಚಾರ ಮಾಡಲಾಗಿದೆ.

ಬೆಳ್ಳಿ ಬಟ್ಟಲು ನೀಡಿ ಮತಯಾಚನೆ ಮಾಡುತ್ತಿದ್ದ ವೇಳೆ ಅದನ್ನು ಪಡೆದ ಶಿಕ್ಷಕಿಯೊಬ್ಬರು ಹತ್ತಿರವೇ ಇದ್ದ ಜ್ಯೂಯಲರಿ ಶಾಪ್‌ ಗೆ ತೆರಳಿ ಪರಿಶೀಲಿಸಿದಾಗ, ಅದು ನಕಲಿ ಎಂದು ಗೊತ್ತಾದಾಗ, ಸ್ಥಳದಲ್ಲೇ ಹೋಗುತ್ತಿದ್ದ ಶಿಕ್ಷಕ ಅಭ್ಯರ್ಥಿಗಳನ್ನು ವಾಪಾಸ್‌ ಕರೆದು ಮುಖಕ್ಕೆ ಮಂಗಳಾರತಿ ಮಾಡಿದ ಘಟನೆಯೂ ಭಾನುವಾರ ಸಂಜೆ ನಡೆದಿದೆ.

ಸೋಮವಾರ ತಾಲ್ಲೂಕಿನ ಎಲ್ಲಾ ಭಾಗಗಳಿಗೆ ಏಜೆಂಟರ ಮೂಲಕ ಪ್ರತಿ ಶಿಕ್ಷಕರಿಗೆ ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ಪ್ರಜಾಪ್ರಭುತ್ವ ಆಶಯವನ್ನೇ ಬುಡಮೇಲು ಮಾಡಲು ಹೊರಟಿರುವ ಶಿಕ್ಷಕರ ಒಂದು ತಂಡ ಸಾರ್ವತ್ರಿಕ ಚುನಾವಣೆಗೂ ಮಿಗಿಲಾಗಿ ಹಣದ ಹೊಳೆ ಹರಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕೆಲವು ಮನೆಗಳಲ್ಲಿ ಅಭ್ಯರ್ಥಿಗಳು ನೀಡಿದ ಗಿಫ್ಟ್‌ಗಳನ್ನು ಮುಖಕ್ಕೆ ಹೊಡೆದ ಹಾಗೆ ವಾಪಾಸ್‌ ನೀಡಿರುವುದು ಹಾಗೂ ಪತಿ ಮನೆಗೆ ಬಂದ ನಂತರ ಗಿಫ್ಟ್‌ ವಿಷಯ ಗೊತ್ತಾಗಿ, ಗಲಾಟೆಗಳೂ ನಡೆದಿರುವ ಉದಾಹರಣೆಗಳಿವೆ.

ತಾಲೂಕಿನ ಪ್ರಜ್ಞಾವಂತ ಹಾಗೂ ವಿಚಾರವಂತ ಶಿಕ್ಷಕರು ಯೋಚಿಸಿ ಮತ ನೀಡಬೇಕಾದ ಅನಿವಾರ್ಯತೆ ಇದ್ದು, ಎಲ್ಲದಕ್ಕೂ ಇಂದು ಸಂಜೆ ಉತ್ತರ ಸಿಗಲಿದೆ.


ಚುನಾವಣೆ ನಡೆಯುವ ಸ್ಥಳ: ಸರ್ಕಾರಿ ಪದವಿ ಪೂರ್ವ ಕಾಲೇಜು,
ಸಮಯ: ಬೆಳಿಗ್ಗೆ 7.30ರಿಂದ ಸಂಜೆ 4ರವರೆಗೆ
ಮತದಾನ ಮಾಡಲು ಕಡ್ಡಾಯವಾಗಿ ಭಾವಚಿತ್ರ ಇರುವ ಗುರುತಿನ ಚೀಟಿ ತರುವುದು ಕಡ್ಡಾಯ.

ಗ್ರಾ.ಪಂ. ಕಣ: ಇಲ್ಲೊಬ್ಬರಿದ್ದಾರೆ ವಿಶೇಷ ವ್ಯಕ್ತಿ…

0

Publicstory.in


ತುಮಕೂರು: ಜಿಲ್ಲೆಯ ವಿವಿಧೆಡೆ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ, ದುಡ್ಡಿಗೆ ಹರಾಜು, ಅಯ್ಯೋ ಮತದಾರರನ್ನು ಸಾಕಲು ಆಗುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿರುವ ಅಭ್ಯರ್ಥಿಗಳ ನಡುವೆ ಇಲ್ಲೊಬ್ಬ ವ್ಯಕ್ತಿ ಗಮನ ಸೆಳೆಯುತ್ತಿದ್ದಾರೆ.

ಹೌದು. ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದವರು ತಾನು ಮಾಡಿದ ಕೆಲಸಗಳ ಲೆಕ್ಕ ಹಿಡಿದು ಮತ‌ ಕೇಳುವುದನ್ನು ಎಲ್ಲಾದರೂ ನೋಡಿದ್ದೀರಾ?

, ಹೆಂಡ,‌ ನೆಂಟಸ್ತನ, ಜಾತಿ ಹೀಗೆ ನಾನಾ ಲೆಕ್ಕದಲ್ಲಿ ಚುನಾವಣೆ ನಡೆಸಿ , ಗೆದ್ದ ಬಳಿಕ ದುಂಡಗಾಗುವವರ ನಡುವೆ ಈ ವ್ಯಕ್ತಿ ತಾನು ಗೆದ್ದ ವಾರ್ಡ್ ಗಳಲ್ಲಿ ಮಾಡಿರುವ ಕೆಲಸಗಳನ್ನೆ ತನ್ನ ಪ್ರಚಾರಕ್ಕೆ ಬಳಸಿಕೊಂಡು ಮತ ಕೇಳುತ್ತಿದ್ದಾರೆ.

ಇವರು ಯಾರು ಹಾಗಾದರೆ; ತುಮಕೂರು ನಗರಕ್ಕೆ ಅಂಟಿಕೊಂಡಂತೆ ಇರುವ ಬೆಳಗುಂಬ ಗ್ರಾಮ ಪಂಚಾಯತಿ ಯಲ್ಲಿ ಈಗಾಗಲೇ ಎರಡು ಸಲ ಗೆಲವು ಸಾಧಿಸಿ ಮೂರನೇ ಸಲ ಹೊಸ ವಾರ್ಡ್ ನಿಂದ ಚುನಾವಣೆ ಬಯಸಿರುವ ಬೆಳಗುಂಬ ವೆಂಕಟೇಶ್ ಅವರೇ ಇವರು.

ಜೆಡಿಎಸ್ ತುಮಕೂರು ತಾಲ್ಲೂಕು ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರೂ ಆಗಿರುವ ವೆಂಕಟೇಶ್ ಅವರದು ತಾಲ್ಲೂಕಿನ ಎಲ್ಲ ಜನರು, ಅಧಿಕಾರಿಗಳ ನಡುವಿನ ಚಿರಪರಿಚಿತ ಹೆಸರು.

ಅಂದಹಾಗೆ, ಕಮ್ಯೂನಿಸ್ಟ್‌ ಹಿನ್ನೆಲೆಯ ವೆಂಕಟೇಶ್ ಜನಾನುರಾಗಿ. ಕಷ್ಟಕಾಲದಲ್ಲಿ ಎಲ್ಲರಿಗೂ ಮಿಡಿಯುವ ಗೆಳೆಯ. ಹೀಗಾಗಿಯೇ ಅವರು ಅಚ್ಚುಮೆಚ್ಚು.

ಎಲ್ಲರನ್ನು ಅಣ್ಣಾ ಎಂದೇ ಮಾತನಾಡಿಸುವ ವೆಂಕಟೇಶ್, ಶಾಸಕ‌ ಗೌರಿಶಂಕರ್ ಅವರ ಬಳಗದಲ್ಲಿದ್ದಾರೆ. ಕೆಲ್ಸ ನೋಡಿ ಓಟ್ ಕೊಡಬೇಕು ಅಂತಾರೆ ಅವರು.

ಕಳೆದ‌ ಎರಡು ಅವಧಿಯಲ್ಲಿ ಮಾಡಿರುವ ಕೆಲಸಗಳು, ಮೊದಲು ಬಡಾವಣೆ ಹೇಗಿತ್ತು, ಇವರು ಗೆದ್ದ ನಂತರ ಹೇಗಾಯಿತು ಎಂಬ ಚಿತ್ರಗಳ ಸಮೇತ ಕರಪತ್ರಗಳನ್ನು ಮುದ್ರಿಸಿ ಮತ ಕೇಳುತ್ತಿದ್ದಾರೆ.

ಸಾಹಿತಿಗಳು, ಚಿತ್ರನಟರು, ಪತ್ರಕರ್ತರು, ಹೋರಾಟಗಾರರ ನಡುವಿನ ಒಡನಾಟದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮನಸ್ಥಿತಿ, ಚಿಂತನೆಗಳನ್ನು ಮತದಾರರಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ವೆಂಕಟೇಶ್ ಗೆಲುವಿಗೆ ಶಾಸಕ ಗೌರಿಶಂಕರ್ ಪಣ ತೊಟ್ಟಿದ್ದಾರೆ. ಹುಡಗರ ಪ್ರಚಾರ ಸಹ ಎಲ್ಲೆ ಮೀರಿದೆ.

ಇಂತವರು ನಮ್ಮ ವಾರ್ಡ್ ನಲ್ಲಿ ಸ್ಪರ್ಧಿಸಿರುವುದೇ ಖುಷಿ ತಂದಿದೆ. ಅವರು ಹೇಗೆ ಎಂಬುದನ್ನು ಅವರು ಕೊಟ್ಟಿರುವ ಅಭಿವೃದ್ಧಿ ಲೆಕ್ಕವೇ ಹೇಳುತ್ತದೆ ಎನ್ನುತ್ತಾರೆ ಇಲ್ಲಿನ ಹಲವರು.

ನಾವು ಜನಸೇವೆ ಮಾಡಬೇಕೇ ಹೊರತು ಹಣವಲ್ಲ, ನಾನು ಈವರೆಗೂ ಏನ್ನೆಲ್ಲ ಮಾಡಿದ್ದೇನೋ ಅದೆಲ್ಲವನ್ನು ಜನರಿಗಾಗಿಯೇ ಮಾಡಿದ್ದೇನೆ. ಚುನಾವಣೆ ಫ್ಯಾಷನ್ ಆಗಬಾರದು, ಬದಲಾವಣೆಯ ಮೈಲು ಗಲ್ಲು ಆಗಬೇಕು. ನಮ್ಮ ಶಾಸಕರು ಸಹ ಇದನ್ನೇ ಹೇಳುತ್ತಿರುತ್ತಾರೆ ಎಂದು ಬೆಳಗುಂಬ ವೆಂಕಟೇಶ್ Publicstory.in ಗೆ ತಿಳಿಸಿದರು.

ವಾರ್ಡ್ ನ ಅಭಿವೃದ್ಧಿ ಗೆ ನನ್ನದೇ ಆದ ಗುರಿಗಳಿವೆ. ಈ ಹಿಂದಿನ ವಾರ್ಡ್ ಗಳಲ್ಲಿ ಮಾಡಿರುವ ಕೆಲಸ ನೋಡಿ ಜನರು ನನಗೆ ಮತಹಾಕಬೇಕು. ಹಳ್ಳಿಯಂತೆ ಇದ್ದ ನನ್ನ ಹಳೆಯ ವಾರ್ಡ್ ಈಗ ತುಮಕೂರು ನಗರದ ಬಡಾವಣೆಗಳನ್ನು ನಾಚಿಸುವಂತಿದೆ ಎಂದು ಹೇಳಿ ಮಾತುಮುಗಿಸಿದರು ವೆಂಕಟೇಶ್.


ನಿಮ್ಮೂರಿನ ಸುದ್ದಿಗಳನ್ನು ವಾಟ್ಸ್ ಆಪ್ ಮಾಡಿ:9844817737

ಬದಲಾವಣೆಯ ಸುಧಾರಕರು ಎಲ್ಲಿಂದಲೋ ಇಳಿದು ಬರುವುದಿಲ್ಲ, ಅವರು ನಮ್ಮ, ನಿಮ್ಮ ನಡುವೆಯೇ ಇರುತ್ತಾರೆ ಎಂಬ ಮಾತು ವೆಂಕಟೇಶ್ ಅವರ ಮಾತು ಕೇಳಿದ ಬಳಿಕ ಎಂಥವರಿಗಾದರೂ ಅನಿಸದೇ ಇರಲಾರದು.

ಸಾಲ ಬೇಕೆ, ಸಾಲ; ಮನೆಬಾಗಿಲಲ್ಲೆ ಕೊಡ್ತಾರೆ ‘ಮೋದಿ’ ತೆಂಗಿನ ಸಾಲ…

ತುಮಕೂರು: ಜಿಲ್ಲೆಯ ತೆಂಗು ಬೆಳೆಗಾರರಿಗೆ ಇಲ್ಲಿದೆ ಬಂಪರ್ ಸಾಲ ಯೋಜನೆ.

’ಒಂದು ಜಿಲ್ಲೆ- ಒಂದು ಉತ್ಪನ್ನ’ ಎಂಬ ಯೋಜನೆಯನ್ನು ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಜಾರಿಗೊಳಿಸಿದ್ದಾರೆ. ಶೇ 35 ಸಹಾಯಧನ, ಬಡ್ಡಿಯೂ ಕಡಿಮೆ.

‘ತುಮಕೂರು ಜಿಲ್ಲೆಗೆ ಯೋಜನೆಯಡಿಯಲ್ಲಿ ತೆಂಗುಉತ್ಪನ್ನಗಳನ್ನು ಆಯ್ಕೆ ಮಾಡಿಘೋಶಿಸಿದ್ದಾರೆ. ತೆಂಗು, ನಾರು, ಕಾಯಿ,ಎಳನೀರು, ಕೊಬ್ಬರಿ, ಮರ, ಬೇರು, ಗರಿ,ಗರಿಕಡ್ಡಿ, ಚುಪ್ಪು, ಕರುಂಬಳೆ ಹೀಗೆಹಲವಾರು ತೆಂಗಿನ ಸುಮಾರು 150 ಕ್ಕಿಂತಹೆಚ್ಚಿನ ಮೌಲ್ಯವರ್ಧಿತ ಉತ್ಪನ್ನಗಳನ್ನುತಯಾರಿಸ ಬಹುದು’

ಹಾಲಿ ಕೈಗಾರಿಕೆ ಇರುವವರು ಹಾಗೂ ಹೊಸದಾಗಿ ಮಾಡುವ ವ್ಯಕ್ತಿ ಮತ್ತು ಯಾವುದೇ ವಿಧವಾದ ಸಂಘಸಂಸ್ಥೆಗಳು, ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ಒಂದು ಅರ್ಜಿಯನ್ನು ಕೊಟ್ಟರೆ ಮನೆ ಬಾಗಿಲಿಗೆ ಸರ್ವಿಸ್ ನೀಡಲು ಜಿಲ್ಲಾಡಳಿತ ಸಜ್ಜಾಗಲಿದೆ.

ಮೋದಿಯವರೇ ಜಿಲ್ಲೆಗೆ ಇಬ್ಬರು ಸಲಹಾಗಾರರು, ಅಂದರೆ ಪಾಜೆಕ್ಟ್ ರಿಪೋರ್ಟ್ ಮಾಡುವವರನ್ನು ನೇಮಿಸಲು ಅವಕಾಶ ಕಲ್ಪಿಸಿದ್ದಾರೆ. ಅವರಿಂದಲೇ ಯೋಜನಾವರದಿ ಮಾಡಿಸಬೇಕು. ಅವರ ಆಯ್ಕೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಮಾಡಬೇಕು. ಜೊತೆಗೆ ಒಬ್ಬ ಪರಿಣಿತರನ್ನು ಸಮಿತಿಗೆ ನಾಮನಿರ್ದೇಶನ ಮಾಡಬಹುದು.

ಈ ಮೂವರು ಜನರ ಬಳಿಗೆ ಹೋಗಲು ಸಿದ್ಧರಿರಬೇಕು, ತೆಂಗಿನ ಉತ್ಪನ್ನಗಳ ಎಲ್ಲಾ ಯೋಜನೆಗಳ ಅರಿವು ಇರಬೇಕು. ಜಿಲ್ಲೆಯಲ್ಲಿ ಹಾಲಿ ಇರುವ ತೆಂಗಿನ ಉತ್ಪನ್ನಗಳ ಕೈಗಾರಿಕೆಗಳ ಸಂಪೂರ್ಣ ಮಾಹಿತಿ ಇರಬೇಕು. ತೆಂಗಿಗೆ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳ ಸಂಪರ್ಕ ಹೊಂದಬೇಕು.

ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಪಿಡಿಓ ಮತ್ತು ಚೀಫ್ ಆಫೀಸರ್, ಆಯುಕ್ತರು ಹೀಗೆ ಎಲ್ಲರ ಜೊತೆ ಚರ್ಚಿಸಿ, ನವ ಉದ್ಧಿಮೆದಾರರನ್ನು, ಸ್ಟಾರ್ಟ್ ಆಫ್ ಕನಸುಗಾರರನ್ನು, ಹಾಲಿ ಇರುವ ಕೈಗಾರಿಕೆಗಳ ಉದ್ಧಿಮೆದಾರರನ್ನು ಗುರುತಿಸಿ ತೆಂಗಿನಲ್ಲಿ ಸರ್ವಜ್ಞರಂತಾಗಲು ಸಿದ್ಧರಿರಬೇಕು. ಜಿಐಎಸ್ ಜ್ಞಾನ ಮತ್ತು ಸೋಶಿಯಲ್ ಮೀಡಿಯಾ ಜ್ಞಾನವಿರಬೇಕು.

ಉದ್ದಿಮೆದಾರರ, ರೈತರ, ಇಲಾಖೆಗಳ, ಮತ್ತು ಬ್ಯಾಂಕುಗಳ ಕೊಂಡಿಯಂತೆ ಕೆಲಸ ಮಾಡಲು ಸಿದ್ದರಿರುವವರನ್ನು ಜಿಲ್ಲಾಧಿಕಾರಿಯವರು ನೇಮಿಸಬೇಕು. ಈ ಮೂವರು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಅವರ ಕಲ್ಪನೆಯ ಪಿಪಿಟಿ ಪ್ರದರ್ಶನ ಮಾಡಬೇಕು. ಸಮಿತಿಯ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಸದಸ್ಯರು ಕೇಳುವ ಮಾಹಿತಿಗಳನ್ನು ನೀಡಲು ಸಿದ್ಧರಿರಬೇಕು.

‘ಸಾಲ ಪಡೆಯುವವರು ತರಬೇತಿಪಡೆಯಲೇಬೇಕು. ರಫ್ತು ಉದ್ದಿಮೆಆರಂಭಿಸುವವರು ವಿವಿದ ದೇಶಗಳ ಭಾಷೆಕಲಿಸುವ ತರಗತಿಗಳಿಗೆ ಹಾಜರಾಗಬೇಕು,ಉದ್ದಿಮೆಗಳನ್ನು ಕಡ್ಡಾಯವಾಗಿ ಸ್ಥಾಪನೆಮಾಡುವವರಿಗೆ ಸಾಲ ಗ್ಯಾರಂಟಿದೊರೆಯಲಿದೆ. ಎಲ್ಲಾ ವಿಧವಾದಉತ್ಪನ್ನಗಳ ತರಬೇತಿಗಳು ಮತ್ತು ವಿವಿಧದೇಶದ ಭಾಷೆ ಕಲಿಸಲು ಈಗಾಗಲೇಸಂಬಂಧಿಸಿದ ಇಲಾಖೆಯ ಅಧಿಕಾರಿಗಳುಸಿದ್ಧತೆ ಮಾಡುತ್ತಿದ್ದಾರೆ’

ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಈ ಯೋಜನೆಯನ್ನು ದೇಶಕ್ಕೆ ಮಾದರಿ ಮಾಡಲು ಚಿಂತನೆ ನಡೆಸಿದ್ದಾರೆ. ಎಂ.ಪಿ.ಸಿ.ಎಸ್ ಮಾದರಿಯಲ್ಲಿ ತೆಂಗಿನ ಉತ್ಪನ್ನಗಳ ಸಹಾಕಾರಿ ಸಂಸ್ಥೆಗಳನ್ನು ಸ್ಥಾಪಿಸಲು ಆಸಕ್ತಿ ಇರುವವರು ಮುಂದೆ ಬನ್ನಿ. ತೆಂಗಿನ ರೈತರ ಬದುಕು ಹಸನು ಮಾಡಿ.

‘ಸಾಲ ಬೇಕೆ ಸಾಲ – ಮೋದಿ ಸಾಲ – ತೆಂಗಿನ ಸಾಲ’ ಕೃಷಿ ಇಲಾಖೆಗೆ ಒಂದು ಅರ್ಜಿಹಾಕಿ ಸಾಕು, ಮುಂದೆ ನೋಡೋಣ. ಈ ಬಗ್ಗೆ ಡಿಜಿಟಲ್ ಆಂದೋಲನ ಆರಂಭವಾಬೇಕು. ಕೆಲವು ಸಂಸ್ಥೆಗಳು ಈ ಬಗ್ಗೆ ಚಿಂತನೆ ಆರಂಭಿಸಿವೆ, ’ಹಾಲಿನ ಕುರಿಯನ್ ಮಾದರಿಯಲ್ಲಿ ತೆಂಗಿನ ಕುರಿಯನ್ ಒಬ್ಬನ ಉದಯ ಆಗಲೇ ಬೇಕು’ ಆಸಕ್ತಿ ಇರುವ ಸಹಕಾರಿ ಧುರೀಣರಿಗೆ ಇದೊಂದು ಸುರ್ವರ್ಣ ಅವಕಾಶ.

ಕಲ್ಪನಾ ವರದಿಯೊಂದಿಗೆ ’ಕೊಕೊನೆಟ್ ಸ್ಪೆಷಲ್ ಎಕನಾಮಿಕ್ ಝೋನ್’ ಸ್ಥಾಪನೆಗೆ ಬೇಸ್ ಸಿದ್ಧವಾಗುತ್ತಿದೆ. ಹಳೆಯ ಕಡತಕ್ಕೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತೆ ಚಾಲನೆ ನೀಡಿದೆ. ಪರಿಣಿತರೇ ನೀವೂ ಕೈಜೋಡಿಸಿ.

‘ಸಿಪಿಓಗಳು ಮತ್ತು ಎಫ್‌ಫಿಓಗಳು ಸ್ವಲ್ಪಹೊರಗೆ ಬನ್ನಿ, ರಾಜಕೀಯ ಬಿಡಿ, ಮುನ್ನುಗ್ಗಿಟೀಕೆ ಮಾಡುವವರು, ತೊಂದರೆಕೊಡುವವರು, ಇರುವುದು ಸಹಜ,ಅದಕ್ಕೆಲ್ಲಾ ಎದೆಗುಂದದೆ ಮುಂದೆ ಬನ್ನಿ.ಇಲ್ಲವೇ ಸಂಸ್ಥೆಗಳನ್ನು ಮುಚ್ಚಿ ಬಿಡಿ,ಮೌನವಾಗಿ ಇರಬೇಡಿ ದಯವಿಟ್ಟುಕಳಕಳಿಯ ಮನವಿ. ನೀವುಗಳ ಯೋಜನೆಗೆ ಬೇಸ್ ಆಗಲೇ ಬೇಕು.


ಕೃಪೆ: ಇ ಪೇಪರ್ ಶಕ್ತಿಪೀಠ.ಇನ್. ಕುಂದರನಹಳ್ಳಿ ರಮೇಶ್

ನೀನು ನನ್ನವಳು

0

ಹರೀಶ್ ಕಮ್ಮನಕೋಟೆ


ಕ್ಷಣಕಾಲಕೂ ನಿನ್ನ ಬಿಟ್ಟಿರಲಾರೆನು. ನೀನಿರದೆ ನಾ ಹೇಗಿರಲಿ ಒಬ್ಬೊಂಟಿಯಾಗಿ. ಬಿಟ್ಟು ಹೋದರೆ ಮಾರ್ನಿಂಗ್ ವಿಶ್ ಮಾಡುವವರು ಯಾರು? ದಿನಕ್ಕೆ ಹತ್ತು ಬಾರಿಯಾದರೂ ನಿನ್ನ ಮುಖ ನೋಡಿದಾಗಲೇ ಸಮಾಧಾನ. ಪ್ರೇಯಸಿ ಇಲ್ಲದ ಕಾಲದಲ್ಲಿ ಕೈ ಹಿಡಿದವಳು ನೀನು. ಆ ಹತ್ತು ದಿನಗಳು ನೀನಿಲ್ಲದೆ ಕಳೆದವು.

ಅಂದು
ಸರ್ವಸ್ವವನ್ನೇ ಕಳೆದುಕೊಂಡಿದ್ದೇನೆ
ಎನಿಸಿಬಿಟ್ಟಿತ್ತು. ಒಮ್ಮೆ ನೀನು ನೆಟ್ ಪ್ಯಾಕ್ ಹಾಕಿಸು ಎಂದು ಜುಲ್ಮೆ
ಹಿಡಿದಿದ್ದೆ. ಮೇಲಿಂದ ಮೇಲೆ ಸಂದೇಶಗಳನ್ನೂ, ಕರೆಗಳನ್ನೂ ಕಳುಹಿಸಿ ಒತ್ತಾಯಿಸುತ್ತಿದ್ದೆ. ಜೇಬಿನಲ್ಲಿ ಮನಿ ಇಲ್ಲದ ಕಾರಣ
ಸಾಧ್ಯವಾಗಿರಲಿಲ್ಲ.

ಆ ಮುನಿಸನ್ನೂ ಮರೆತು ಸಂಗಾತಿಯಾಗ ಬಯಸಿದೆಯಲ್ಲ ಅದೇ ನನಗೆ
ಸಂತೋಷ. ನಿನ್ನ ತಲೆ ಹರಟೆಯಿಂದ ಬೇಸರ ಕಡಿಮೆಯಾಗಿದೆ.

ಇಲ್ಲ ಸಲ್ಲದ ಪೋಲಿ
ಜೋಕುಗಳನ್ನು ಹೇಳಿ ಕೀಟಲೆ ಮಾಡುವ ನಿನಗೆ ನಾಚಿಕೆ ತುಸು ಕಡಿಮೆಯೆ. ನಿನ್ನ ಸಂಗಡ ಬಿದ್ದು ಅತಿ ಮುಖ್ಯ ಕೆಲಸಗಳನ್ನು
ಮೂಲೆ ಸೇರಿಸಿದ್ದೇನೆ. ಜೀವನವನ್ನೇ ಹಾಳುಗೆಡವಿ ಖಿನ್ನತೆಗೆ ನೂಕಿಬಿಡುತ್ತಾಳೆ, ಅವಳ
ಜೊತೆಗಿನ ವ್ಯವಹಾರ ಕಡಿಮೆ ಮಾಡು ಎಂಬ ಅನ್ಯರ
ಚಾಡಿಯನ್ನು ಸ್ವೀಕರಿಸಿಲ್ಲ. ಕಾರಣ ಇಷ್ಟೆ, ಮಾರ್ಗದರ್ಶಿನಿಯಂತೆ ಸದಾ ನನ್ನ ಜೊತೆಗಿದ್ದೀಯಾ. ಅಲ್ಲದೆ ನೀನು ನನ್ನವಳು.

ನಾನು ಉಪವಾಸವಿದ್ದರೂ
ಪರವಾಗಿಲ್ಲ, ನಿನಗೆ ಏನನ್ನೂ ಕಡಿಮೆ ಮಾಡುವುದಿಲ್ಲ. ಜೀವನದುದ್ದಕ್ಕೂ
ಜೋಪಾನ ಮಾಡುತ್ತೇನೆ. ಕಸೆಯಲ್ಲಿ
ಭದ್ರಪಡಿಸುತ್ತೇನೆ. ನೀನು ಸುಂದರವಾಗಿ ಕಾಣಲು ಗೊರಿಲ್ಲಾ
ಸ್ಕ್ರೀನ್ ಗಾರ್ಡ್ ಮತ್ತು ಸ್ಟೀಲ್ ಕಂಪೋಸ್ ರಬ್ಬರ್ ಪೌಚ್ ಕೂಡ
ಹಾಕಿಸುತ್ತೇನೆ. ಏನಂತೀಯಾ? ಒಟ್ಟಿನಲ್ಲಿ ಗುಡ್
ನೈಟ್, ಗುಡ್ ಮಾರ್ನಿಂಗ್ ಹೇಳಲು ಪ್ರತಿದಿನ ನನ್ನ ಅಂಗೈಯಲ್ಲಿರಬೇಕು ಅಷ್ಟೆ.


ಹರೀಶ್ ಕಮ್ಮನಕೋಟೆ.
9591949304
ಪತ್ರಿಕೋದ್ಯಮ ಎಂ.ಎ
ಕುವೆಂಪು ವಿ.ವಿದ್ಯಾಲಯ
ಶಂಕರಘಟ್ಟ

ಕಸವನಹಳ್ಳಿ ರಮೇಶ್ ಈಗ ಕುಂಚಿಟಿಗರ ರತ್ನ

0

Publicstory. in


ತುಮಕೂರು: ವಿಶ್ವ ಕುಂಚಿಟಿಗರ ಪರಿಷತ್ ನೀಡುವ ಕುಂಚಿಟಿಗ ರತ್ನ ಪ್ರಶಸ್ತಿ ಈ ಸಲ ಹೋರಾಟಗಾರ ಕಸವನಹಳ್ಳಿ ರಮೇಶ್ ಮುಡಿಗೇರಿದೆ.

ಚಳವಳಿಯ ಹಿನ್ನೆಲೆಯುಳ್ಳವರಿಗರು ಕಸವನಹಳ್ಳಿ ರಮೇಶ್ ಹೆಸರು ಕೇಳದೇ ಇರಲಾರರು. ಅಷ್ಟೊಂದು ಪರಿಚಿತ ಅವರು. ಡಿ.12 ರಂದು ತುಮಕೂರಿನ ಕೋತಿತೋಪಿನಲ್ಲಿರುವ ಕುಂಚಿಟಿಗ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ರಮೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಅಷ್ಟಕ್ಕೂ ಇಂಥ ಅತಿ ದೊಡ್ಡ ಪ್ರಶಸ್ತಿಗೆ ರಮೇಶ್ ಅವರನ್ನು ಆಯ್ಕೆ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಮುಂದಿದೆ ಉತ್ತರ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಕಸವನಹಳ್ಳಿ ಗ್ರಾಮದಲ್ಲಿ ಶ್ರೀಯುತ ಕಸವನಹಳ್ಳಿ ರಮೇಶ್ ಎಂಬುವರು ಕೃಷಿ ಕುಟುಂಬದ ಕುಂಚಿಟಿಗ ಜನಾಂಗದ ಬೆಳ್ಳಿ ನವರು ಕುಲದ ಸಿದ್ದಪ್ಪ ಮತ್ತು ನಿಂಗಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕೊನೆಯ ಮಗನಾಗಿ 1968ನೇ ಇಸ್ವಿ ಜೂನ್ 20ರಂದು ಜನಿಸಿದರು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಸವನಹಳ್ಳಿಯಲ್ಲಿ ಮಾಡಿ ಮಾಧ್ಯಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ಹೊಸಯಳನಾಡು ಗ್ರಾಮದ ಇವರ ತಾತ (ತಾಯಿಯ ದೊಡ್ಡಪ್ಪ) ಗಾಂಧಿವಾದಿ ಸಿ .ತಿಮ್ಮಯ್ಯನವರ ಮನೆಯಲ್ಲಿದ್ದು ,ಮುಗಿಸಿದರು.

ತಂದೆ-ತಾಯಿ ವಿದ್ಯಾವಂತರಾಗಿದ್ದೂ ಅವರ ಸಂಸ್ಕಾರಗಳು ಅಲ್ಲದೆ ತಾತ ತಿಮ್ಮಯ್ಯನವರ ಆದರ್ಶ ಗುಣಗಳು ಇವರನ್ನು ಆಕರ್ಷಿಸಿ ತನ್ನೆಡೆಗೆ ಸೆಳೆದವು. ಮುಂದೆ ಪದವಿಪೂರ್ವ ಮತ್ತು ಪದವಿ ವಿದ್ಯಾಭ್ಯಾಸವನ್ನು ಸರ್ಕಾರಿ ವಿಜ್ಞಾನ ಕಾಲೇಜು ಚಿತ್ರದುರ್ಗ ದಲ್ಲಿ ಮುಗಿಸಿದರು. ಆ ವೇಳೆಯಲ್ಲಿ ಚಿತ್ರದುರ್ಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಸ್ಟೆಲ್ ಕೊರತೆ ಶಾಲಾ ಶುಲ್ಕ ಏರಿಕೆ ಸ್ಕಾಲರ್ಶಿಪ್ ಹಾಗೂ ಹಲವು ವಿಚಾರಗಳ ಬಗ್ಗೆ ಹೋರಾಟದಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮುಂದೆ ಸರ್ಕಾರಿ ಕೆಲಸಕ್ಕೆ ಪ್ರಯತ್ನಪಟ್ಟು ಕೆಲಸ ಸಿಗದೆ ಕೃಷಿಯತ್ತ ಮುಖ ಮಾಡಿದರು. ವ್ಯವಸಾಯ ಮಾಡುತ್ತಲೇ ರಾಜ್ಯದಲ್ಲಿ ರೈತರ ಚಳುವಳಿಗಳು ಸರ್ಕಾರದ ಘೋಷಣೆಗಳ ವಿರುದ್ಧ ಹೋರಾಡುತ್ತಿದ್ದರು.

ಅಗಲಿದ ರೈತ ನಾಯಕರಾದ ಶ್ರೀಯುತ ಸುಂದರೇಶ್ ಶ್ರೀಯುತ ರುದ್ರಪ್ಪ ಪ್ರೊಫೆಸರ್ ನಂಜುಂಡಸ್ವಾಮಿ ಪುಟ್ಟಣ್ಣಯ್ಯ ಇವರುಗಳ ಹೋರಾಟ ದಲ್ಲಿಪಾಲ್ಗೊಂಡು ಚಳುವಳಿಯ ಪವಿತ್ರತೆಗೆ ಗಾಂಧಿ ತತ್ವಗಳಾದ ಉಪವಾಸ, ಸತ್ಯಾಗ್ರಹ ,ಪಾದಯಾತ್ರೆ ,ಮಾಡುತ್ತಾ ಹೋರಾಟಕ್ಕೆ ಮುಂದಾದರು.

ರೈತರ ಸಮಸ್ಯೆಗಳನ್ನು ಆಲಿಸುತ್ತಾ ಅವುಗಳನ್ನು ಸರ್ಕಾರದ ಮುಂದೆ ವೈಜ್ಞಾನಿಕವಾಗಿ ಮಂಡಿಸುವುದರಲ್ಲಿ ಯಶಸ್ವಿಯಾಗಿ ಮುಂಚೂಣಿ ನಾಯಕರಾದರು ಅದೇ ಸಮಯದಲ್ಲಿ ನೀರಿನ ಕೊರತೆ ಕಬ್ಬಿನ ಕೊರತೆಯಿಂದ ವಾಣಿವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವುದನ್ನು ನಿಲ್ಲಿಸಿ ರೈತರಿಗೆ ಬಾಕಿ ಕೊಡದೆ ಸತಾಯಿಸುತ್ತಿತ್ತು.

ಹಲವು ಚಳುವಳಿಗಳನ್ನು ಮಾಡಿದರು ಫಲಪ್ರದವಾಗಲಿಲ್ಲ .ಅದಕ್ಕೆ ಪರಿಹಾರವಾಗಿ ರೈತರಿಗೆ ಬಾಕಿ ಕೊಡಿಸುವಂತೆ ಹೈಕೋರ್ಟ್ನಲ್ಲಿ ದಾವೆ ಹೂಡಲಾಯಿತು.

ಅದಕ್ಕೆ ಸಂಬಂಧಿಸಿದ ಕೋರ್ಟ್ ರೈತರ ಬಾಕಿ ಮತ್ತು ವಿಳಂಬವಾಗಿದ್ದಕ್ಕೆ ಶೇಕಡ 15 ಬಡ್ಡಿ ಸೇರಿಸಿಕೋಡಲು ಆದೇಶ ಮಾಡಿತು.
ಇದರಿಂದ ಕೋಟ್ಯಾಂತರ ರೂಪಾಯಿ ರೈತರಿಗೆ ಕಬ್ಬಿನ ಬಾಕಿ ಪಾವತಿ ಯಾಯಿತು. ಇದು ಶ್ರೀಯುತರ ರೈತರ ಹೋರಾಟಕ್ಕೆ ಸಂದ ಜಯ.

ಹಲವಾರು ವರ್ಷಗಳಿಂದ ಹೋರಾಡುತ್ತಿದ್ದರು ಸಹ ಬಯಲುಸೀಮೆ ಮತ್ತು ವಾಣಿವಿಲಾಸ ಸಾಗರಕ್ಕೆ ನೀರು ಕೊಡಲು ಭದ್ರಾಮೇಲ್ದಂಡೆ ಜಾರಿಗೊಳಿಸಲು ಸರ್ಕಾರ ಮೀನಾಮೇಷ ಎನಿಸುತ್ತಿತ್ತು.ಅದಕ್ಕೆ ಮುಂದಾದ ಶ್ರೀಯುತರು ರಾಜಧಾನಿ ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಸ್ವಾಮೀಜಿಗಳೊಂದಿಗೆ ಉಪವಾಸ ಸತ್ಯಾಗ್ರಹ ಮಾಡಿದರು. ಸರ್ಕಾರ ಬಗ್ಗಲಿಲ್ಲ ನಂತರ ವಿಧಾನಸೌಧ ಚಲೋ, ರಾಜಭವನ ಚಲೋ, ಮಾಡಿದರು.

ಅಲ್ಲದೆ 13 ಜನ ಸ್ವಾಮೀಜಿಗಳನ್ನು ಕರೆತಂದು ವಿಧಾನಸೌಧದ ಮುಂದೆ ಪಿಕೆಟಿಂಗ್ ನಡೆಸಿದರು. ಹಿರಿಯೂರು ತಾಲೂಕು ರೈತರು ಮತ್ತು ಮಹಿಳೆಯರನ್ನು ಕರೆತಂದು ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು ಸಚಿವರಾದ ಜಯಚಂದ್ರ ಮತ್ತು ಆಂಜನೇಯ ರನ್ನು ಕರೆಸಿ ಸೆನೆಟ್ ಹಾಲಿನಲ್ಲಿ ಚರ್ಚಾಗೋಷ್ಠಿ ನಡೆಸಿದರು ಇಲ್ಲಿಗೆ ಶ್ರೀಯುತ ಅಡ್ವಕೇಟ್ ಜನರಲ್ ರವಿವರ್ಮಾ ಕುಮಾರ್ ಭಾಗವಹಿಸಿದ್ದರು.

ಬೆಳಗಾವಿ ಸುವರ್ಣ ಸೌಧ ದ ವಿಧಾನಸೌಧದ ಎದುರು ಚಳುವಳಿ ನಡೆಸಿ ಬಂಧನಕ್ಕೆ ಒಳಗಾದರು. ಚಿತ್ರದುರ್ಗ ಮತ್ತು ಹಿರಿಯೂರಿನಲ್ಲಿ ನಡೆಸಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ. ವಾಣಿವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಯಲ್ಲಿ ನೀರು ಮೀಸಲಿಡಲು ಒತ್ತಾಯಿಸಿ ಹಾಗೂ ಭದ್ರ ಮೇಲ್ದಂಡೆ ಯ ತುರ್ತು ಕಾಮಗಾರಿ ಪ್ರಾರಂಭಿಸಲು ಇಷ್ಟೆಲ್ಲಾ ಹೋರಾಟ ಮಾಡಿದರು ಬಗ್ಗದಿದ್ದಾಗ ಶ್ರೀಯುತರು ಹಿರಿಯೂರು ತಾಲೂಕು ಕಚೇರಿ ಮುಂದೆ 11.6.2007ರಿಂದ ನಿರಂತರವಾಗಿ 10.12.2008 ರವರೆಗೆ *543* ದಿನಗಳ ಕಾಲ ಚಳುವಳಿ ನಡೆಸಿ, ಸರ್ಕಾರದ ನಾಲ್ಕು ಜನ ಸಚಿವರು ಶಾಸಕರು ಹಾಗೂ ಶ್ರೀಯುತ ನಂಜಾವದೂತ ಮಹಾಸ್ವಾಮಿಗಳು ಧರಣಿ ಸ್ಥಳಕ್ಕೆ *ವಾಣಿವಿಲಾಸ ಸಾಗರಕ್ಕೆ 5 ಟಿಎಂಸಿ* ನೀರನ್ನು ಆದೇಶ ಮಾಡಿಸಿ ತುರ್ತು ಕಾಮಗಾರಿ ಮಾಡುವುದಾಗಿ ಆದೇಶಿಸಿದರು.

ಇದು ಒಂದು *ಐತಿಹಾಸಿಕ ರೈತ ಚಳುವಳಿ. ಇದರ ಯಶಸ್ವಿ ಇವರಿಗೆ ಸಲ್ಲತಕ್ಕದ್ದು.

ಏಕೆಂದರೆ ಈ ಭಾಗದ ರೈತರಲ್ಲಿ ಶೇಕಡ 70 ಭಾಗ ನಮ್ಮ ಜನಾಂಗದವರೇ ಇದ್ದು ಅವರ ಶ್ರೇಯಸ್ ಗೋಸ್ಕರ ಹೋರಾಡಿದರು ಸಾಲ ಮನ್ನಾ, ಬೆಸ್ಕಾಂ, ಕಂದಾಯ ಇಲಾಖೆ, ಕೃಷಿ ತೋಟಗಾರಿಕೆ ಹಾಗೂ ಹಲವು ಇಲಾಖೆಗಳು ಜನರನ್ನು ವಂಚಿಸುವುದನ್ನು ಖಂಡಿಸಿ ಪಾದಯಾತ್ರೆ ಉಪವಾಸ ಸತ್ಯಾಗ್ರಹ ಅತ್ಯುಗ್ರ ಚಳುವಳಿಗಳನ್ನು ಮಾಡುತ್ತಿದ್ದರು.

ರೈತರು ಹಗಲು ಹೊತ್ತಿನಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿರುತ್ತಾರೆಂದು ರಾತ್ರಿ ವೇಳೆ ಚಳುವಳಿ ಮಾಡಿದರು. ಅದಕ್ಕೆ ಹಲವು ಮದ್ಯಪಾನಿಗಳು, ದುರುಳರು, ತೊಂದರೆ ಕೊಟ್ಟರೂ ಸಹ ಸಹಿಸಿಕೊಂಡು ಗಾಂಧಿವಾದದ ಮುಖಾಂತರ ಉತ್ತರಕೊಟ್ಟು ಪರಿಹಾರ ಕಂಡುಕೊಂಡರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಾರಂಭವಾದರೂ ವಿಳಂಬವಾದ ದ್ದನ್ನು ಕಂಡು ತುಂಗಾ ಭದ್ರಾ ನದಿಪಾತ್ರದಲ್ಲಿ ಸಭೆ ನಡೆಸಿದರು.

ಹಾಗೂ ಕಾಮಗಾರಿ ಪ್ರದೇಶದಲ್ಲಿ ನೂರಾರು ಜನರನ್ನು ಕರೆದುಕೊಂಡು ಪಾದಯಾತ್ರೆ ಮಾಡಿದರು. ಭದ್ರಾ ಮೇಲ್ದಂಡೆ ಯೋಜನೆಯ ಪಾಂಪೌಸ್ ಗಳಿಗೆ ಬೀಗ ಜಡಿದರು.

ಅಜ್ಜಂಪುರ ರೈಲ್ವೆ ಕಾಮಗಾರಿ ವಿಳಂಬವನ್ನು ಖಂಡಿಸಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಬೆಂಗಳೂರು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕಚೇರಿಯಲ್ಲಿ ಸಭೆಗಳನ್ನು ನಡೆಸಿದರು. ಇವರು ಕಾಟಕ್ಕೆ ಬೇಸತ್ತು ಮುಖ್ಯ ಇಂಜಿನಿಯರ್ ಗಳು ರಾತ್ರೋರಾತ್ರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದು ಕಾಮಗಾರಿಗಳಿಗೆ ಚುರುಕು ಮುಟ್ಟಿಸಿದರು.

ಆಗ ಸಚಿವರಾಗಿದ್ದ ವೆಂಕಟರಮಣಪ್ಪ ರವರು ಇನ್ನೊಂದು ತಿಂಗಳಲ್ಲಿ ನೀರು ಹರಿಸದಿದ್ದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು. ದುರದೃಷ್ಟವಶಾತ್ ಅವರ ಸರ್ಕಾರ ಹೋಯಿತು. ರಾಜ್ಯದಲ್ಲಿ *ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿ ನೂರಾರು ದಿನಗಳ ಕಾಲ ಪಾದಯಾತ್ರೆ ಮಾಡಿದರು.

2017, 2018, 2019 ರಲ್ಲಿ ಹಿರಿಯೂರು ತಾಲೂಕು ತೀವ್ರ ಬರಗಾಲಕ್ಕೆ ತುತ್ತಾಗಿ ನೀರು ಹರಿ ಸದಿದ್ದಾಗ ಶಾಸಕ ಸುಧಾಕರ್ ರವರಿಗೆ ಹಲವು ಮನವಿ ಮಾಡಿದರು. ನೀರು ಹರಿಸದೇ ನಿರಾಸಕ್ತಿಯಿಂದ ಹಿರಿಯೂರು ತಾಲೂಕಿನ 17000 ಎಕರೆಯ ಲಕ್ಷಾಂತರ ತೆಂಗು ಅಡಿಕೆ ತೋಟಗಳು ಒಣಗಿ ಹೋಗಲು ಕಾರಣೀಭೂತರಾಗಿದ್ದಾರೆ.

ಹಲವು ಚಳುವಳಿಯನ್ನು ಮಾಡಿದ್ದಕ್ಕೆ ಸಹಿಸದೆ, ಕೇಸುಗಳನ್ನು ಹಾಕಿ ಜೈಲಿಗಟ್ಟಿದರು.. ಗೃಹಬಂಧನದಲ್ಲಿರಿಸಿದರು ನೋಟಿಸ್ ನೀಡಿದರು .ಆದರೆ ಬಗ್ಗದೆ ಕುಗ್ಗದೆ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಇವರು ಲೇಖಕರಾಗಿ *ಭದ್ರಾ ಮೇಲ್ದಂಡೆ* ಯೋಜನೆ ವೈಜ್ಞಾನಿಕ ವರದಿ ಎಂಬ ಪುಸ್ತಕ ಬರೆದರು.

ವಾಣಿವಿಲಾಸ ಸಾಗರದ ಕೆಳಭಾಗದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಕಸವನಹಳ್ಳಿ ಮತ್ತು ಹಳೆ ಯಳನಡು ವಿನಲ್ಲಿ ದಾನಿಗಳಾದ ನಿವೃತ್ತ ಡಿವೈಎಸ್ಪಿ ರಾಮಚಂದ್ರಪ್ಪ ಮತ್ತು ನಿವೃತ್ತ ಇಂಜಿನಿಯರ್ ಜಗನ್ನಾಥ್ ಇವರ ಸಹಕಾರದ ನೆರವಿನೊಂದಿಗೆ ಶ್ರಮದಾನದ ಮೂಲಕ *ಮಣ್ಣಿನ ಬ್ಯಾರೇಜ್* ನಿರ್ಮಿಸಿದರು.

ಇದನ್ನು ಶಾಶ್ವತಗೊಳಿಸಲು *ಮಾಸ್ಟರ್ ಪ್ಲಾನ್* ರೂಪಿಸಿ ಆಗತಾನೆ ಸಣ್ಣ ನೀರಾವರಿ ಸಚಿವರಾಗಿ ಖಾತೆ ವಹಿಸಿಕೊಂಡ ಜೈಚಂದ್ರ ರವರನ್ನು ಹಿಡಿದು ಕುಂದಲಗುರ, ಸಮುದ್ರದಹಳ್ಳಿ, ಕೂಡ್ಲಹಳ್ಳಿ, ಕುನ್ನಿ ಕೆರೆ ಈ ಭಾಗದಲ್ಲಿ ದೊಡ್ಡ ದೊಡ್ಡ ಬ್ಯಾರೇಜ್ ನಿರ್ಮಿಸಲು ಹೋರಾಡಿ ಯಶಸ್ವಿಯಾದರು. ಅದೇ ರೀತಿ ಸಣ್ಣ ನೀರಾವರಿ ಮುಖ್ಯ ಇಂಜಿನಿಯರ್ ಆಗಿದ್ದ ಶ್ರೀಯುತ ರವೀಂದ್ರಪ್ಪ ನವರನ್ನ ಹಿಡಿದು ಮನವೊಲಿಸಿ ಕಸವನಹಳ್ಳಿ ಹಳೆ ಯಳನಾಡು ಬ್ಯಾರೇಜ್ ನಿರ್ಮಿಸಿದ್ದು ಅತ್ಯಂತ ಸಂತೋಷದ ವಿಚಾರವೇ ಸರಿ.

ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ಜೈಪ್ರಕಾಶ್ ಅವರನ್ನು ಮನವೊಲಿಸಿ *ಪಿಟ್ಲಾಲಿ ಆಲೂರು ಮಧ್ಯೆ ಬ್ರಿಡ್ಜ್ ಕಮ್ ಬ್ಯಾರೇಜ್ ಮುಂಜು ರಾಗಲು ಸ್ಥಳೀಯರಾದ ಗ್ರಾಮದ ಜೆ.ಹೋನ್ನಯ್ಯನವರ ಮಗನಾದ ಹೆಚ್. ಶಿವರಾಂ ಪ್ರಥಮ ದರ್ಜೆ ಗುತ್ತಿಗೆದಾರರು ಮತ್ತು ಶ್ರೀನಿವಾಸ್ ಇವರನ್ನು ಬಳಸಿಕೊಂಡು ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ರಾಮಚಂದ್ರಪ್ಪ ನಿವೃತ್ತ ಇಂಜಿನಿಯರ್ ಜಗನ್ನಾಥ್ ಮಾರ್ಗದರ್ಶನದಲ್ಲಿ ಈಗ ಕೆಲಸ ಮಾಡುತ್ತಿದ್ದಾರೆ.

ಶ್ರೀಯುತರು *ಅಜಾತಶತ್ರು*ವಾಗಿ ಭೂರಹಿತರಿಗೆ ಭೂಮಿ ಕೊಡಿಸಲು *ಭೂ ಹಕ್ಕುದಾರರ ವೇದಿಕೆ * ಕಟ್ಟಿಕೊಂಡು ಹಲವು ಚಳುವಳಿ ಮಾಡುತ್ತಿದ್ದಾರೆ. ಕನ್ನಡ ಸೇವೆ ಮಾಡಬೇಕು ಮತ್ತು ಜನರಿಗೆ ಶಿಕ್ಷಣ ಕೊಡಬೇಕು ಪುಸ್ತಕ ಪ್ರೀತಿ ಬೆಳೆಸಬೇಕೆಂದು ಮನೆಯಲ್ಲಿಯೇ *ನಮ್ಮ ಗ್ರಂಥಾಲಯ* ಸ್ಥಾಪಿಸಿದ್ದಾರೆ. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಬಯಲುಸೀಮೆ ಬದುಕು ಬವಣೆ ನೀರಾವರಿ ಹಲವು ವಿಚಾರಗಳಲ್ಲಿ *ಮಾರ್ಗದರ್ಶಕರಾಗಿ* ಇರುತ್ತಾರೆ.

ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮ ನೀಡಿರುತ್ತಾರೆ .(ನೀರಾವರಿ ಮತ್ತು ಕ್ರೀಡೆ) ಶ್ರೀಯುತರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಫೇಸ್ಬುಕ್ ಅಕೌಂಟ್ ಕಸವನಹಳ್ಳಿ ( Kasavanahalli Ramesh) ರಮೇಶ್ ಎಂದು ಆಂಗ್ಲ ಭಾಷೆಯಲ್ಲಿ ಟೈಪ್ ಮಾಡಿ ನೋಡ ತಕ್ಕದ್ದು ಶ್ರೀಯುತರು ಪ್ರಸ್ತುತ ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರು ಹಿತರಕ್ಷಣಾ ವೇದಿಕೆಯ *ಅಧ್ಯಕ್ಷರಾಗಿ* ನಿರಂತರವಾಗಿ ಹೋರಾಟ ಮಾಡುತ್ತಿರುತ್ತಾರೆ.

ಬಡವರ ತಾಯಿ ಇನ್ನಿಲ್ಲ

Publicstory. in


ಪಾವಗಡ: ತಾಲ್ಲೂಕಿನಲ್ಲಿ ಬಡ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಮೂಲಕ ಬಡವರ ತಾಯಿ ಎಂದೇ ಹೆಸರಾಗಿದ್ದ ಸತ್ಯಮ್ಮ (77 ವರ್ಷ) ಶುಕ್ರವಾರ ನಿಧನರಾದರು.

ನೂರಾರು ಗರ್ಭಿಣಿಯರು,‌ಮಕ್ಕಳ ಜೀವ ಉಳಿಸಿದ್ದಾರೆ. ಪಾರಂಪರಿಕ ವೈದ್ಯ ಸೇವೆಯಲ್ಲು ತೊಡಗಿಕೊಂಡಿದ್ದರು. ಬಡ ಬಗ್ಗರನ್ನು ಕಂಡರೆ ವಿಶೇಷ ಪ್ರೀತಿ, ಕಾಳಜಿ ತೋರುತ್ತಿದ್ದರು.

ಅಂತ್ಯಕ್ರಿಯೆಯನ್ನು. ಇಂದು ಸಂಜೆ ಒಳಗೆ ಪಾವಗಡ ವೆಂಕಟಾಪುರ ರಸ್ತೆ ಯ ಹೌಸಿಂಗ್ ಬೋರ್ಡ್ದ ಹಿಂಬಾಗದ ಜಮೀನಲ್ಲಿ ನಡೆಸಲಾಗುತ್ತದೆ.

ಮೃತರಿಗೆ ಪತ್ರಕರ್ತ ಸೊಗಡು ವೆಂಕಟೇಶ್ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಆಯುರ್ವೇದ ಔಷಧಿ ನೀಡುವುದು ಪ್ರಸೂತಿ ಕಾರ್ಯದಲ್ಲಿ ಹೆಸರು ಪಡೆದಿರುವ ಸತ್ಯಮ್ಮ ಸಾವಿರಾರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ ಮಾಡಿಸಿ ಸೇವಾಕಾರ್ಯ ಮೆರೆದಿದ್ದಾರೆ.

ಆಯುರ್ವೇದ ವೈದ್ಯ ಸೇವೆಗಾಗಿ ಇವರ ಪತಿ ಕೆ ವೆಂಕಟಪ್ಪ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು.

ಮಿಡಿದ ಹೃದಯಕ್ಕೆ ಭಾವಪೂರಾ ನಮನ

0

-ಹರೀಶ್ ಕಮ್ಮನಕೋಟೆ


ನಮ್ಮೂರಿನ ಪ್ರತಿಭಾವಂತೆ ವಿದ್ಯಾರ್ಥಿನಿಯೊಬ್ಬಳು ಪಿಯುಸಿ ಡಿಸ್ಟ್ರಿಂಕ್ಷನ್ ಪಡೆದರೂ ಉನ್ನತ ವಿದ್ಯಾಭ್ಯಾಸಕ್ಕೆ ಹಣಕಾಸಿನ ತೊಂದರೆ ಉಂಟಾಗಿತ್ತು.

ತಂದೆ ಆಟೋ ಚಾಲಕ. ಕೋರೋನ ಕಷ್ಟದಿಂದ ಆಟೋಗೆ ಬಾಡಿಗೆ ಇಲ್ಲ. ಹಾಗಾಗಿ ಅದಾಯವೂ ಹೊಟ್ಟೆ ಬಟ್ಟೆಯನ್ನೇ ಸರಿದೂಗಿಸುತ್ತಿರಲಿಲ್ಲ. ಮಗಳನ್ನು ಮುಂದಿನ ಕಲಿಕೆಗೆ ಉತ್ತಮ ಸೌಲಭ್ಯವುಳ್ಳ ಕಾಲೇಜಿಗೇ ಸೇರಿಸಬೇಕೆಂಬ ತಾಯಿಯ ಹಠ.

ದಿನಕ್ಕೆ ಎರಡು ಬಾರಿಯಾದರೂ.. ಮನೆ ಹತ್ತಿರ ಬಂದು ಸಹಾಯ ಕೇಳುತ್ತಿದ್ದರು ನನ್ನಕ್ಕನ ಬಳಿ. ಕಾಲೇಜಿನ ಪಾವತಿ ಶುಲ್ಕ ಕಡಿಮೆ ಮಾಡಿಸಿಕೊಡಿ ಎಂದು ಗೋಗರೆಯುತ್ತಿದ್ದರು.

ಈ ದೃಶ್ಯವನ್ನು ನೋಡಿದ ಮೇಲೂ ನನ್ನ ಮನಸ್ಸು ಸುಮ್ಮನಿರಲಿಲ್ಲ.

ಮದುವೆ ಎಂದು ಬಂದವರಿಗೆ ಒಂದತ್ತು ಸಾವಿರ, ಕಷ್ಟ ಅಂತ ಬಂದವರಿಗೆ ಒಂದೈದು ಸಾವಿರ ನೀಡುವ ಹಂತಕ್ಕೆ ಬೆಳೆದರೆ ಜೀವನ ಸಾರ್ಥಕ ಎನ್ನುವ ಮಾತನ್ನು ಸದಾ ಹೇಳುತ್ತಿದ್ದರು ಪತ್ರಕರ್ತ ಸ್ನೇಹಿತ ಚಂದನ್.

ಈ ಮಾತುಗಳು ಆ ಗಳಿಗೆಯಲ್ಲಿ ನೆನಪಾಗಿ ತಕ್ಷಣವೇ ಫೋನಾಯಿಸಿದೆ. ಪರಿಸ್ಥಿತಿಯನ್ನು ವಿವರಿಸಿ ಹೇಳಿದೆ. ಅವರಿಂದ ಬಂದ ಉತ್ತರ “ಅಣ ನೀವು ಯಾವಾಗಲಾದರೂ ಬನ್ನಿ ಚಕ್ ರೆಡಿ ಇರುತ್ತೆ”. ಎನ್ನುವ ಭರವಸೆ .

೧೨/೮/೨೦೨೦ ರಂದು ಚೆಕ್ ಪಡೆದು ಕೊಂಡು, ಅಂದೇ ವಿದ್ಯಾರ್ಥಿನಿಗೆ ಹಸ್ತಾಂತರಿಸಿದೆ.

ಸಮಯದ ಹಂಗಿಲ್ಲದೆ ಸಮಸ್ಯೆಗಳಿಗೆ ಸ್ಪಂದಿಸುವ ಸಮಾಜ ಕಾಳಜಿ ಪತ್ರಕರ್ತನಿಗೆ ಹೃದಯ ಪೂರಕ ಧನ್ಯವಾದಗಳು.

ಜೊತೆಗೆ ನನ್ನಕ್ಕನ ಸ್ನೇಹಿತರೂ.. ಪ್ರುಡೆನ್ಸ್ ಸ್ಕೂಲಿನ ನಿರ್ದೇಶಕರೂ ಮತ್ತು ಸಿದ್ಧಗಂಗಾ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ರೇಣುಕಪ್ಪ ಸರ್ ಅವರು ನಮ್ಮ ಮನವಿಗೆ ಮಿಡಿದು ಶುಲ್ಕವನ್ನು ಕಡಿಮೆ ಮಾಡಿಸಿ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೂ.. ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ.


-ಹರೀಶ್ ಕಮ್ಮನಕೋಟೆ
9591949304
ಪತ್ರಿಕೋದ್ಯಮ ಎಂ.ಎ
ಕುವೆಂಪು ವಿವಿ

ಗೋಹತ್ಯೆ ನಿಷೇಧ ಕಾಯ್ದೆ: ಸುರೇಶಗೌಡ ನೇತೃತ್ವದಲ್ಲಿ ಸಂಭ್ರಮಾಚರಣೆ

Publicstory. in


Tumkuru: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಮಂಡನೆ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಬಿ.ಸುರೇಶಗೌಡರ ನೇತೃತ್ವದಲ್ಲಿ ಸಿದ್ದಗಂಗಾ ಮಠದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.

ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿದ ಸುರೇಶಗೌಡರು ಮಸೂದೆಯ ಬಗ್ಗೆ ವಿವರ ನೀಡಿದರು.

ರಾಜ್ಯದ ಜನರ ಅಭೀಪ್ಸೆ ಈಡೇರಿದೆ. ಇದು ಜನರ ಆಸೆಯಾಗಿತ್ತು. ಗೋವು, ದೇವರ ಸಮಾನ ಎಂದರು.

ಇದೇ ವೇಳೆ ಅವರು ಗೋವಿಗೆ ಪೂಜೆ ಸಲ್ಲಿಸಿದರು.

ಸಿದ್ದಗಂಗಾ ಶ್ರೀಗಳು ಮಾತನಾಡಿ, ಗೋವುಗಳನ್ನು ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಹುಲಿನಾಯ್ಕರ್,ಜಿಲ್ಲಾ ಕಾರ್ಯದರ್ಶಿಗಳಾದ ಓಂಕಾರೇಶ್ವರ,‌ಸುಜಾತ ಚಂದ್ರಶೇಕರ್, ಲೋಹಿತ ಬಾಯಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರೇಮಾ ಹೆಗ್ಡೆ, ನಗರ ಪ್ರಧಾನ ಕಾರ್ಯದರ್ಶಿಗಳಾದ ರಾಜೀವ್, ಗಣೇಶ್,ಹಿರಿಯ ಮುಖಂಡರಾದ ಕೊಪ್ಪಳ ನಾಗರಾಜ್,ಬಿಜೆಪಿ ಯುವ ಮೋರ್ಚಾದ ರಕ್ಷಿತ್ ವಿ, ರುದ್ರೇಶ್ ಟಿ ಎನ್,ರೈತ ಮೋರ್ಚಾದ ತರಕಾರಿ ಮಹೇಶ್,ನಗರ ಆಶಯ ಸಮಿತಿ ಸದಸ್ಯರಾದ ವಿನಯ್ ಜೈನ್,ಶ್ರೀ ಸಿದ್ದಗಂಗಯ್ಯ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಲ್ ಮೇಲೆ ನಿನ್ನ ಹೆಸರು ಬರೆದಿಡುತ್ತೇನೆ!

1

ಹರೀಶ್ ಕಮ್ಮ‌ನಕೋಟೆ


ಅಂದು..

ಮೇಕಪ್ ಇಲ್ಲದ ಸಹಜ ಸುಂದರಿಯೊಬ್ಬಳು ಕ್ಯಾಂಪಸ್ ನಲ್ಲಿ ಪ್ರತ್ಯಕ್ಷವಾದಳು. ಅವಳನ್ನು ನೋಡಿದಕೂಡಲೇ ಮಂತ್ರ ಮುಗ್ದನಂತೆ ಹಿಂಬಾಲಿಸಿ ಬಿಟ್ಟೆ.
ಅಂದಿನಿಂದ ಈ ಪೋಲೀ ಹೃದಯಕ್ಕೆ ರೆಕ್ಕೆ ಬಂದುಬಿಟ್ಟಿವೆ.

ಕ್ಲಾಸ್ಗಳನ್ನ ಮಿಸ್ಮಾಡಿ ಆಲದ ಕಟ್ಟೆಯ ಮೇಲೆ ಕುಳಿತದ್ದು ಆಕೆಗಾಗಿ.
ಅವಳು ನನ್ನೆದುರು ನಡೆದುಹೋದಾಗ ತಂಗಾಳಿಯು ಮೈತಾಗಿದ ಅನುಭವ. ಹವಳದ ಬಂಡೆಯನ್ನು ತಿಕ್ಕಿ ತೀಡಿ ಸಿದ್ಧಪಡಿಸಿದ ಹರಳಂತೆ ಆಕೆಯ ಹಲ್ಲುಗಳು. ಅವಳ ನಗು ಮೈಮನಸ್ಸನ್ನು ನವಿರೇಳಿಸಿ ಕಣ್ಣಲ್ಲಿ ಕಣ್ಣಿಡುವ
ಆಸೆಯನ್ನು ಉಕ್ಕಿಸಿದೆ.

ಅವಳು ಭೌತಶಾಸ್ತ್ರದ ತರಗತಿಯಿಂದ
ಹೊರಬರುವ ಹೊತ್ತಿಗೆ, ಹಾಸ್ಟೆಲ್ ಕಡೆ
ಮುಖಮಾಡಿ, ಮಧ್ಯಾಹ್ನದ ಊಟ, ಸ್ನಾನ ಮುಗಿಸಿ ಮತ್ತೆ ಕಟ್ಟೆಯ ಹತ್ತಿರ, ಸ್ನೇಹಿತರ ಜೊತೆ ಹಾಜರ್. ಸಂಜೆಯ ಸಮಯಕ್ಕೆ.. ಗೋಬಿ ಸ್ಟಾಲ್, ಮಂಡಕ್ಕಿ ಅಂಗಡಿ, ಕೇಕ್ ಪ್ಯಾಲೆಸ್ ಹೀಗೆ ಎಲ್ಲಿ
ಹೋಗುತ್ತಾಳೋ ಅಲ್ಲಿಗೆ ಹಿಂದೆ ಹಿಂದೆ ಸುತ್ತುವುದೇ
ಕೆಲಸ.

ನಾನು ಹಿಂದೆ ತಿರುಗುವ ಸಂಗತಿ ಅವಳಿಗೂ ತಿಳಿದಿದೆ ಎಂದುಕೊಂಡಿದ್ದೇನೆ. ಹುಡುಗಿಯರ ಹಿಂದೆ ಅಲೆದ ಅನುಭವದ ಕೊರತೆ ನನ್ನಲ್ಲಿ ತುಸು ಹೆಚ್ಚೇ ಇದೆ.

ಹಿಂದೆ ಹೋಗಿ ಇಂಪ್ರೆಸ್ ಮಾಡು ಎಂದು ನನ್ನ ಆಪ್ತ ಸ್ನೇಹಿತರು ಎಳೆದೊಯ್ಯುತ್ತಾರೆ.
ಆದರೆ ಏನು ಮಾಡುವುದು ಏಳೆಂಟು ತಿಂಗಳಿನಿಂದ ಪ್ರೀತಿಯ ಇಂಗಿತವನ್ನು ಅವಳಲ್ಲಿ
ವ್ಯಕ್ತಪಡಿಸಲು ಸಾಧ್ಯವಾಗಿಲ್ಲ. ಹೃದಯವು ಕಂಪಿಸಿದಂತಾಗಿ ಹಿಂದೆ ಸರಿಯುತ್ತಿದ್ದೇನೆ. ಅವಳಿಗೆ ಪ್ರೀತಿಯ ವಿಷಯವನ್ನು ತಿಳಿಸು ಎಂದು ದೋಸ್ತುಗಳ ಒತ್ತಾಯವೂ ಮೊನ್ನೆ ಹೆಚ್ಚಾಗಿಬಿಟ್ಟಿತ್ತು.

ಪ್ರಪೋಸ್ ಮಾಡೇ ಬಿಡೋಣ.. ಮೊದಲು ಮಾತನಾಡುವ ಪ್ರಯತ್ನಕ್ಕೆ ಕೈಹಾಕುವುದು ಲೇಸು ಎಂದುಕೊಂಡು ಮಾತನಾಡಿಸಲು ಹೋದೆ!

ಲೇ.. ಹುಡುಗಿ ಒಂದಂತೂ ಸತ್ಯ.
ನೀನಿಲ್ಲದಿದ್ದರೆ ಸಾರಾಯಿ ಕುಡಿಯುವುದಿಲ್ಲ, ಸಿಗರೇಟ್ ದಾಸನಾಗುವುದಿಲ್ಲ, ಚಟದ ಗೀಳಿಗೆ ಜೋತುಬೀಳುವುದಿಲ್ಲ.
ಖಾಲಿಯಾದ ಫರ್ಫ್ಯೂಮ್ ಬಾಟೆಲ್ ಮತ್ತು ಸವೆದ ಸಾಬೂನು, ಟೂತ್ ಪೇಸ್ಟ್, ಬ್ರಷ್ಗಳ ಬಿಲ್ ಮೇಲೆ ನಿನ್ನ ಹೆಸರು ಬರೆದಿಡುತ್ತೇನೆ. ಈ ವ್ಯಯಗಳಿಗೆ ಹಣ ಸುರಿಯಲು ಕಾರಣ ನೀನಲ್ಲವೇ?

ಕ್ಷಮಿಸು ನನ್ನನು ತಪ್ಪೂ ನಿನ್ನದೆ

ನನ್ನ ಜೀವಮಾನದಲ್ಲೇ ಯಾವ ಹುಡುಗಿಯ ಹಿಂದೆಯೂ ಹೋದವನಲ್ಲ. ಅಂದು ಮಾತನಾಡಿಸುವ ಹಂಬಲ ಮತ್ತು ನಿನ್ನ ಸಕಾರಾತ್ಮಕ ಹಾವಭಾವಗಳು ನನ್ನನ್ನು ಎಳೆದು ತಂದು ಮುಂದೆ ನಿಲ್ಲಿಸಿತು.

ಹೇ ಹುಡುಗಿ ಆ ದಿನ ನೀನು ಮಾಡಿದ್ದೇನು?ನಿರ್ಲಕ್ಷ್ಯಿಸಿ ಮುಂದೆ ನಡೆದು ಬಿಟ್ಟೆ. ನನ್ನನ್ನು ಅಪರಾಧಿಯಂತೆ ನೋಡಿದೆ. ವಿತ್ ಪರ್ಮೀಷನ್…ನಿಮ್ಮ ಜೊತೆ ಮಾತನಾಡಬಹುದೇ ಎಂದು ಯಾವ ಹುಡುಗನೂ ನಿಮ್ಮಲ್ಲಿ ಕೇಳಿರಲಾರ, ನಾನು ಕೇಳಿದ್ದೆ. ಆದರೂ ನನ್ನ ಸದುದ್ದೇಶದ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ನಿನಗೆ ಕಷ್ಟವಾಗಿರಬಹುದು.

ಇಷ್ಟವಿರಲಿ ಇಲ್ಲದಿರಲಿ ಒಮ್ಮೆ ಪ್ರತಿಕ್ರಿಯೆ ನೀಡಬೇಕಿತ್ತು. ಇನ್ಮುಂದೆ
ನಿನ್ನನ್ನು ಕಣ್ಣೆತ್ತಿಯೂ ನೋಡುವುದಿಲ್ಲ, ನೋಡಿದರೂ ಅಪರಿಚಿತಳಷ್ಟೆ.
ನೀನು ನನ್ನ ಸ್ವಾಭಿಮಾನಕ್ಕೆ ತುಂಬಾ ಹರ್ಟ್ ಮಾಡಿಬಿಟ್ಟೆ.

ಇನ್ನೂ ಮುಂದೆ ಸಾಗುವ ದಾರಿ ಇದೆ, ಯಶಸ್ಸನ್ನು ತನ್ನದಾಗಿಸಿಕೊಳ್ಳುವ ಸುವರ್ಣಾವಕಾಶಗಳಿವೆ, ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದು ಪರಮ ಗುರಿಯಾಗಬೇಕೆಂದು ಪರೋಕ್ಷವಾಗಿ ತಿಳಿಸಿಕೊಟ್ಟಿದ್ದೀಯ ಎಂದು ಸಮಾಧಾನಿಸಿಕೊಳ್ಳಬೇಕಿದೆ ಅಷ್ಟೆ. ಒಂದು ಮಾತ್ರ ನೆನಪಿರಲಿ. ಈ ಜಗವೆಲ್ಲ ಹುಡುಕಿ ಬಂದರೂ.. ನನ್ನಂತ ಕಲೆಗಾರನೂ.. ಜೊತೆಗಾರನು ಸಿಗಲಾರ ನಿನಗೆ. ಗುಡ್ ಬೈ…


-ಹರೀಶ್ ಕಮ್ಮನಕೋಟೆ
9591949304
ಪತ್ರಿಕೋದ್ಯಮ ಎಂ.ಎ
ಕು.ವಿ.ವಿ ಶಂಕರಘಟ್ಟ