Monday, May 11, 2026
Google search engine
Home Blog Page 168

ಡಿಜಿಟಲ್ ಮಾಧ್ಯಮ: ಗಂಭೀರ ಪ್ರಶ್ನೆಗಳನ್ನು ಎತ್ತಿದ ವಿಜಯಕರ್ನಾಟಕ ವೆಬ್ನಾರ್

ಬಿ.ಟಿ.ಮುದ್ದೇಶ್

Publicstory.in


ತುಮಕೂರು: ವಿಜಯಕರ್ನಾಟಕದ ಮಧುಗಿರಿ ತಂಡ ಸೋಮವಾರ ಸಂಜೆ ಆಯೋಜಿಸಿದ್ದ ಮಾಧ್ಯಮ ಕ್ಷೇತ್ರದಲ್ಲಿ ಕನ್ನಡ ಸ್ಥಿತಿಗತಿ ಕುರಿತ ವೆಬ್ ನಾರ್ ನಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿತು.

ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಪರುಶರಾಮ್ ಮಾತನಾಡಿ, ಜನರ ಕೈಗೆ ಮೊಬೈಲ್ ಕೊಟ್ಟರೆ ಸಾಲದು ಡಿಜಿಟಲ್ ಡಿವೈಡ್ ಸರಿಪಡಿಸುವ ಕೆಲಸಕ್ಕೆ ಕೈಹಾಕಬೇಕು ಎಂದರು.

ಮುಂದಿನ ಕೆಲವೇ ವರ್ಷಗಳಲ್ಲಿ ಡಿಜಿಟಲ್ ಬಳಕೆ ಇನ್ನೂ ಹೆಚ್ಚಲಿದೆ. ವಿಜ್ಞಾನ, ಗಣಿತದ ಸಂಶೋಧನೆಗಳು, ದೇಶ ವಿದೇಶಗಳ ಸುದ್ದಿಗಳು, ವಿಶ್ಲೇಷಣೆ ಡಿಜಿಟಲ್ ಮಾಧ್ಯಮಗಳಲ್ಲಿ ಕನ್ನಡದಲ್ಲಿ ಬರಬೇಕಾಗಿದೆ ಎಂದರು.

ಭಾಷೆಯ ಅಂತರರಾಷ್ಟ್ರೀಯ ರಾಜಕಾರಣಕ್ಕೆ ಸವಾಲು ಒಡ್ಡುವ, ತಮ್ಮ ಭಾಷೆಯನ್ನು ಅಂತರರಾಷ್ಟ್ರೀಯಕರಣಗೊಳಿಸುವ ಸಶಕ್ತಿಯನ್ನು ತಮಿಳಿನವರು ಬಳಸಿಕೊಂಡಿದ್ದಾರೆ. ಈ ಕೆಲಸವನ್ನು ವಿದೇಶದಲ್ಲಿರುವ ಕನ್ನಡಿಗರು, ಸರ್ಕಾರಗಳು ಮಾಡಬೇಕಾಗಿದೆ ಎಂದರು.

ಎಸ್ ಎಸ್ ಐಟಿ ನಿರ್ದೇಶಕರಾದ ಡಾ

ಮುದ್ದೇಶ್ ಮಾತನಾಡಿ, ಕನ್ನಡದ ಮಾಧ್ಯಮ ಡಿಜಿಟಲ್ ಸೌಲಭ್ಯವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದೆ. ಆದರೆ ಟಿ.ವಿ ಮಾಧ್ಯಮ ಕನ್ನಡಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಬೇಸರಪಡಿಸಿಕೊಂಡರು.

ಅಶ್ಲೀಷ, ಕ್ಲೀಷ, ಕಂಗ್ಲಿಷ್ ಭಾಷೆಯ ಬಳಕೆ ಕನ್ನಡಕ್ಕೆ ಮಾತ್ರ ಕುಂದು ತರುತ್ತಿಲ್ಲ. ಮಾಧ್ಯಮ ಕ್ಷೇತ್ರಕ್ಕೂ ಅನಾಹುತಕಾರಿಯಾಗಿದೆ. ಟಿವಿ ಮಾಧ್ಯದಮವರೂ ಕನ್ನಡ ಕಲಿಯುವ ಕೆಲಸ, ಕನ್ನಡ ಹದಗೆಡದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದರು.

ವಕೀಲ ಸಿ.ಕೆ.ಮಹೇಂದ್ರ ಮಾತನಾಡಿ, ಡಿಜಿಟಲ್ ಮಾಧ್ಯಮ ಸಹ ಅಭಿವ್ಯಕ್ತಿ, ವಾಕ್ ಸ್ವಾತಂತ್ರ್ಯದ ಕೆಳಗೆಯೇ ಬರಲಿದೆ. ಡಿಜಿಟಲ್ ಮಾಧ್ಯಮವನ್ನು ನಿಯಂತ್ರಕ್ಕೆ ತರುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ವೆಬ್ ಪೋರ್ಟಲ್ ಗಳನ್ನು ವಾರ್ತಾ ಸಚಿವಾಲಯದ ಕೆಳಗೆ ತರಲು ಅಧಿಸೂಚನೆ ಹೊರಡಿಸಿದೆ. ಇನ್ನೂ ಮಸೂದೆಯ ಬಗ್ಗೆ ಏನನ್ನು ಹೇಳಿಲ್ಲ. ಮಸೂದೆ ಜಾರಿಗೆ ಬಂದ ಮೇಲೆಯೇ ಇದು ಡಿಜಿಟಲ್ ಮಾಧ್ಯಮದ ಸ್ವಾತಂತ್ರದ ಕುರಿತು ಗೊತ್ತಾಗಲಿದೆ ಎಂದರು.

ಡಿಜಿಟಲ್ ಮಾಧ್ಯಮದಲ್ಲಿ ಸ್ಥಳೀಯ ಭಾಷೆಗಳ ಮೂಲಕ ಮಾರುಕಟ್ಟೆ ಹಿಡಿಯುವ ಕೆಲಸಕ್ಕೆ ಗೂಗಲ್ ಮುಂದಾಗಿದೆ. ಕನ್ನಡದ ಡಿಜಿಟಲ್ ಮಾಧ್ಯಮಕ್ಕೆ ದೊಡ್ಡ ಅವಕಾಶ ಸಿಗಲಿದೆ ಎಂದರು.

ಕನ್ನಡದ ಹೋರಾಟಗಾರರಾದ ನರಸಿಂಹಮೂರ್ತಿ ಕಾರ್ಯಕ್ರಮ ನಡೆಸಿಕೊಟ್ಟರು.

ರಾಮ್ ಪ್ರಸಾದ್- ಅವರು ಐಟಿ ಕ್ಷೇತ್ರದಲ್ಲಿ ಕನ್ನಡ ಮಾಧ್ಯಮದ ಬಳಕೆ: ಸವಾಲುಗಳು ಮತ್ತು ಸಲಹೆಗಳು
ಅಲ್ಲಾಗಿರಿರಾಜ್- ಅವರು ದೃಶ್ಯಮಾಧ್ಯಮ ಮತ್ತು ಮುದ್ರಣ ಮಾಧ್ಯಮದಲ್ಲಿ ಕನ್ನಡದ ಬಳಕೆ- ಸಾಧಕ ಭಾಧಕಗಳು

ಲಕ್ಷ್ಮೀಕಾಂತ್ ಎಲ್ ವಿ- ಅವರು ಸಾಹಿತ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಕನ್ನಡದ ಬಳಕೆ

ಪ್ರೊ.ಟಿ.ಎನ್ ನರಸಿಂಹಮೂರ್ತಿ ಅವರು- ಗಡಿನಾಡು ಭಾಗದ ಜನರಲ್ಲಿ ಮಾಧ್ಯಮ ತಂತ್ರಜ್ಞಾನದ ಅರಿವು ಮತ್ತು ಕನ್ನಡದ ಬಳಕೆ

.ನವೀನ್ ಭೂಮಿ- ವಿದ್ಯಾರ್ಥಿಗಳಿಗೆ ಮಾಧ್ಯಮ ತಂತ್ರಜ್ಞಾನದ ಅರಿವು: ಕನ್ನಡದ ಬಳಕೆ ಕುರಿತು ಮಾತನಾಡಿದರು.

ವೆಬ್ ನಾರ್ ಎಲ್ಲರ ವಿಷಯ ಮಂಡನೆಗೆ ವಿಜಯ ಕರ್ನಾಟಕ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದರು.


ದೊಂಬರನಹಳ್ಳಿ:ಚಿರತೆ ದಾಳಿಗೆ 4 ಮೇಕೆಗಳು ಬಲಿ

Publicstory.in


ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಯ ದೊಂಬರನಹಳ್ಳಿ ಗ್ರಾಮದ ಕೆಂಪಯ್ಯ ಅವರ ಕೊಟ್ಟಿಗೆಯಲ್ಲಿದ್ದ 4 ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದಿದೆ.

ಗ್ರಾಮದೊಳೊಗಿನ ಕೆಂಪಯ್ಯ ಎಂಬುವರು ತಮ್ಮ ಮನೆಗೆ ಹೊಂದಿಕೊಂಡಂತಿರುವ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕೂಡಿದ್ದರು. ಭಾನುವಾರ ತಡ ರಾತ್ರಿ ಕೊಟ್ಟಿಗೆಗೆ ನುಗ್ಗಿದ ಚಿರತೆ 4 ಮೇಕೆಗಳ ಮೇಲೆ ದಾಳಿ ನೆಡೆಸಿ ಅವುಗಳ ಕುತ್ತಿಗೆಯಿಂದ ರಕ್ತ ಹೀರಿ ಕೊಂದಿದೆ.
ಕೆಂಪಯ್ಯ ಬೆಳಗ್ಗೆ ಕೊಟ್ಟಿಗೆಯ ಮೇಕೆಗಳನ್ನು ಹೊರಗಡೆ ಬಿಡಲು ಹೋದಾಗ ಚಿರತೆ ದಾಳಿ ನಡೆಸಿರುವುದು ಕಂಡು ಮರುಗಿದ್ದಾನೆ.

ಪಶುವೈದ್ಯಾಧಿಕಾರಿ ಡಾ.ನೀಲಕಂಠಸ್ವಾಮಿ ಮೇಕೆಗಳ ಮರಣೋತ್ತರ ಪರೀಕ್ಷೆ ನೆಡೆಸಿದ್ದು ಸ್ಥಳಕ್ಕೆ ಅರಣ್ಯಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನೆಡೆಸಿ ಸೋಮವಾರ ಮಧ್ಯಾಹ್ನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು ಗ್ರಾಮದ ಹೊರಗೆ ಬೋನನ್ನು ಇಟ್ಟಿದ್ದಾರೆಂದು ಗ್ರಾಮಸ್ಥರು ತಿಳಿಸಿದರು.

ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ; ಅರ್ಜಿ ಆಹ್ವಾನ

Publicstory. in


ತುರುವೇಕೆರೆ: ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ತಾಲ್ಲೂಕಿನ ಒಕ್ಕಲಿಗ ಸಮುದಾಯದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡುತ್ತಿದ್ದು ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ಡಿ.10ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಒಕ್ಕಲಿಗ ಸಮುದಾಯದ ತಾಲ್ಲೂಕು ಅಧ್ಯಕ್ಷ ಪಿ.ಎಚ್.ಧನಪಾಲ್ ತಿಳಿಸಿದರು.

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆದ ಪ್ರತಿಭಾಪುರಸ್ಕಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿರುವ ಒಕ್ಕಲಿಗ ಸಮುದಾಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶೇ.90 ಅಂಕಗಳಿಗಿಂತ ಮೇಲ್ಪಟ್ಟ ಹಾಗು ಪಿಯುಸಿಯಲ್ಲಿ ಶೇ.85ಕ್ಕಿಂತ ಮೇಲ್ಪಟ್ಟ ಅಂಕಗಳನ್ನು ಪಡೆದ ತಾಲ್ಲೂಕಿನ ಎಲ್ಲ ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಹಾಗು ಅಗತ್ಯ ದಾಖಲೆಗಳೊಂದಿಗೆ ತಾಲ್ಲೂಕು ಒಕ್ಕಲಿಗ ಸಮುದಾಯದ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿದ್ಯಾನಿಧಿಯಿಂದ ಹಾಗು ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಒಕ್ಕಲಿಗ ಸಮುದಾಯದ ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಯೋಜನೆಯನ್ನು ನಮ್ಮ ಸಂಘವು ಸಹ ಹೊಂದಿದೆ.

ರಾಜ್ಯದಲ್ಲಿ ಸಾವಿರಾರು ವರ್ಷಗಳ ಚಾರಿತ್ರಿಕ ಇತಿಹಾಸವಿರುವ ಒಕ್ಕಲಿಗರು. ಆ ಸಮುದಾಯದ ಏಳಿಗೆಗೆ ನಿಗಮ ಮಂಡಳಿಯೊಂದನ್ನು ಸ್ಥಾಪಿಸಿ, ಈಗಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸ ಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗ ಸಮುದಾಯದ ಉಪಾಧ್ಯಕ್ಷ ಚಂದ್ರೇಗೌಡ, ಖಜಾಂಚಿ ಉಗ್ರೇಗೌಡ, ನಿರ್ದೇಶಕರುಗಳಾದ ಶ್ರೀನಿವಾಸ್, ರಾಜಣ್ಣ, ವ್ಯವಸ್ಥಾಪಕ ಶಂಕರಪ್ಪ ಇದ್ದರು.

ಇನ್ನೇನೇನೋ, ಗೊತ್ತಾಗಲೇ ಇಲ್ಲ…

0


ಗಮಣಿಕ


ಅಲ್ಲಿ ಅದೇನೋ ಹೀಗಿತ್ತು… ಆಗಿತ್ತು…

ಎಲ್ಲೆಲ್ಲಿ ನೋಡಿದರೂ ಸುತ್ತಸುತ್ತ ಗುಂಪುಗೂಡುತ್ತಾ

ಎದೆಯೊಳಗೆ ಅವುಚಿಕೊಂಡಿದ್ದ ನನ್ನ ತಂಗಿಗಂತೂ

ಏನೇನು ಗೊತ್ತಿಲ್ಲ,…ಅವರೋ ಎಲ್ಲಿಲ್ಲಿ ನೋಡಿದರೂ ಅವರೇ

ಕಣ್ಣು ತಪ್ಪಿಸಿ ಓಡುತ್ತಾ-ಗೀಡುತ್ತಾ

ಗಿಜಿಗುಡುವ ಬಸ್ಸಿನಲ್ಲಿ ಅತ್ತಿತ್ತ ನೋಡದೇ ಬಿಗಿಯಾಗಿ ನಿಂತು

ಮತ್ತೂ ಅಲ್ಲಿಂದ ಓಡಿ ರೈಲು ಹತ್ತಿ

ಅಲ್ಲಿ ಅದೇನೋ….. ಮತ್ತೇ ಗುಂಪೇ ಗುಂಪು

ಅದೇಕೋ ಅದೇನೋ ಅವೇನೋ ಕಣ್ಣುಗಳೋ

ಬಟ್ಟೆಯನ್ನು ನಾನು ಹಾಕಿಯೇ ಇಲ್ಲದಂತೆ…

ಚೋಟು ಚೋಟು ಬೆರಳುಗಳಿಂದ ಮುಟ್ಟಿಮುಟ್ಟಿ

ಮತ್ತೇ ಫೇಜಾಮವನ್ನು ಮತ್ತಷ್ಟು ಕೆಳಕೆಳಗಿಕೊಂಡು

ಮೇಲ್ ಮೇಲೆ ಸರಿಪಡಿಸಿಕೊಂಡು

ಓಡುತ್ತಾ ನಿಟ್ಟುಸಿರು ಬಿಡುತ್ತಾ…

ಧಗ… ಧಗ ಬೆಂಕಿ ಮತ್ತೇ ಅದೇ ಗುಂಪು

ಅವೇ ಕಣ್ಣುಗಳು….ಇಂಚಿಂಚು ಬಿಡದೇ

ಗಂಟಲಲ್ಲೇ ನೋವು

ಮಾತೇ ಬರುತ್ತಿಲ್ಲ… ಸ್ವರವೇ ಸಿಗುತ್ತಿಲ್ಲ

ಅಮ್ಮನ ಮಡಿಲಲ್ಲಿದ್ದ ತಂಗಿ…

ಯಾಕೋ ಅಳುತ್ತಿಲ್ಲ… ಏನೇನೂ ಕಾಣುತ್ತಿಲ್ಲ

ಆ ಗುಂಪು ಕರಗಿದಂತಾಯಿತು… ನಿಧಾನವಾಗಿ…

ಇನ್ನೇನೇನೋ ನನಗೇನೋ ಗೊತ್ತಾಗಲೇ ಇಲ್ಲ…..

ಕಪ್ಪೆಚಿಪ್ಪಿನೊಳಗಣ ಬದುಕು ಕಂಡು…ಕ‌ನವರಿಸುತ್ತಾ…

0

ಧನಂಜಯ್ ಕುಚ್ಚಂಗಿಪಾಳ್ಯ


ಅಪ್ಪನ ಹುಟ್ಟು ಊರು ದೊಡ್ಡಬಳ್ಳಾಪುರ ತಾಲ್ಲೂಕಿನ ತಪಸ್ಸಿಹಳ್ಳಿ. ಅಪ್ಪನಿಗೆ ಗಂಡು ಮಕ್ಕಳಿಲ್ಲವೆಂಬುದೇ ಒಂದು ಕೊರಗು.

ಕುಲದ ಒಡೆಯರಾದ ಸಿರಿಯಪ್ಪ ಒಡೆಯರ್ ಹುಟ್ಟಿದ ಊರು ಬಿಟ್ಟರೆ ನಿನಗೆ ಗಂಡು ಮಕ್ಕಳ ಭಾಗ್ಯವೆಂದರಂತೆ, ಅಪ್ಪನಿಗೆ ಅದೇನೊ ಭರವಸೆ ಹುಟ್ಟಿತೋ ತಿಳಿಯದು ಅಪ್ಪ ಊರೇ ತೊರೆದು ತುಮಕೂರಿಗೆ ಸಮೀಪದ ಕುಚ್ಚಂಗಿಪಾಳ್ಯದಲ್ಲಿ ನೆಲೆಯೂರಿ, ಬೇರು ಬಿಟ್ಟ ಅಪ್ಪನಿಗೆ ಒಬ್ಬರಿಂದೊಬ್ಬರಂತೆ ನಾಲ್ಕು ಜನ ಗಂಡು ಮಕ್ಕಳು.ಅಪ್ಪನ ಸ್ವಾಭಿಮಾನಕ್ಕೆ ಪೂರಕವೆಂಬಂತೆ ಈ ನಾಲ್ಕು ಮಕ್ಕಳು ಕುಟುಂಬಕ್ಕೆ ನಾಲ್ಕು ಆಧಾರಸ್ತಂಭಗಳೆನಿಸಿದ್ದವು.

ಅಪ್ಪನಿಗೆ ಸಂಬಂಧಿಗಳಿಂದ ಸ್ವಾಭಿಮಾನಕ್ಕೆ ಧಕ್ಕೆಯಾದಾಗಗಲೆಲ್ಲಾ ನಾಲ್ಕು ಮಕ್ಕಳ ಕರೆದು ಹೇಳುತ್ತಿದ್ದ ಮಾತು ‘ನಾನು ಸತ್ತಾಗ ನನ್ನ ಹೆಣ ಹೊರುವುದಕ್ಕೂ ಯಾರನ್ನು ಅವಲಂಬಿಸಬೇಡಿ. ನೀವೇ ನಾಲ್ಕು ಜನ ಹೊತ್ತು ಸಾಗಿಸಿರೆಂದು’ ನಿರ್ಧಾಕ್ಷಣ್ಯವಾಗಿ ಹೇಳುತ್ತಿದ್ದ ಅಪ್ಪ ತನ್ನ ಕೊನೆಯ ಆಸೆಯನ್ನ ಈ ನಾಲ್ಕೇ ಮಕ್ಕಳು ಹೊರುವ ಮೂಲಕ ಈಡೇರಿಸಿಕೊಂಡು ಮಣ್ಣಲ್ಲಿ ಮಣ್ಣಾದ.

ಈ ನಾಲ್ಕು ಆಧಾರ ಸ್ತಂಭಗಳಲ್ಲಿ ಒಂದು ಸ್ತಂಭ ಮಳೆ-ಗಾಳಿ,ಮಿಂಚು-ಸಿಡಿಲಿನ ದಿಕ್ಕಿನೆಡೆಯಲ್ಲೇ ಸಾಗುತ್ತಾ ದಿನೇ ದಿನೇ ಶಿಥಿಲಗೊಳ್ಳುತ್ತಾ 8- 9-2020 ರಂದು ಧರೆಗುರುಳಿತು. ಈ ಆಧಾರಸ್ತಂಭ ಮತ್ಯಾರೂ ಅಲ್ಲ ನನ್ನ ಎರಡನೇಯ ಅಣ್ಣ ‘ಹೇಮರಾಜ’.

ಗಂಡು ಮಕ್ಕಳಲ್ಲಿ ಎರಡನೇಯವನಾದ ನನ್ನಣ್ಣನಿಗೆ ಹೇಮ’ರಾಜ’ ನೆಂದು ಹೆಸರಿಟ್ಟ ಹಿನ್ನೆಲೆಯನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕಿದೆ.ಅವತ್ತಿನ ಕಾಲಕ್ಕೆ ಅಪ್ಪನ ಹುಟ್ಟೂರಾದ ದೊಡ್ಡಬಳ್ಳಾಪುರ ಸೀಮೆಗೆ ಅತಿ ಶ್ರೀಮಂತ ‘ಹೇಮಣ್ಣ’ನೆಂಬ ವ್ಯಕ್ತಿ ಇದ್ದನಂತೆ. ಆಗಿನ ಕಾಲಕ್ಕೆ ಮೈಸೂರು ಮಹಾರಾಜರನ್ನ ಖುದ್ದಾಗಿ ಭೇಟಿ ಮಾಡಿ ಮೊದಲ ಬಾರಿಗೆ ಆ ಸೀಮೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ವ್ಯಕ್ತಿ.

ಅಂತಹ ವ್ಯಕ್ತಿ ಮೋಜಿಗಾಗಿ ಕುದುರೆಯೇರಿ ಹಳ್ಳಿಗಳ ಮಧ್ಯೆ ಹಾದು ಹೋಗುವಾಗ, ದುರದೃಷ್ಟವಶಾತ್ ಅಪ್ಪನಿದ್ದ ಊರಿನ ದಾರಿಯೇ ಅಂದು ಅವನ ಮೋಜಿನ ಆಡೊಂಬಲವಾಗಿತ್ತು.ಅಂದೇ ಅಪ್ಪನ ತಂದೆ ಅರ್ಥಾತ್ ನನ್ನ ತಾತ ದನದ ಸಗಣಿಯನ್ನ ತಿಪ್ಪೆಗೆ ಸುರಿಯಲೆಂದು, ಭಾರದ ಮಂಕರಿಯನ್ನ ತಲೆ ಮೇಲೆ ಹೊತ್ತು ಅದೇ ದಾರಿಯಲ್ಲಿ ಸಾಗುತ್ತಿದ್ದನಂತೆ.ಕುದುರೆಯೇರಿದ ಮತ್ತಿನಲ್ಲಿದ್ದ ಆತ ವಯೋವೃದ್ಧನಾದ ನನ್ನ ತಾತ ದಾರಿಯಿಂದ ಬದಿಗೆ ಸರಿಯಲಿಲ್ಲವೆಂದು, ವಯಸ್ಸನ್ನು ಲೆಕ್ಕಿಸದೇ ಕುದುರೆಗೆ ಹೊಡೆಯುವ ಚಾಟಿಯಿಂದ ನನ್ನ ತಾತನಿಗೆ ಹೊಡೆದು ನೆಲಕ್ಕುರುಳಿಸಿ ಹೋಗಿಯೇ ಬಿಟ್ಟನಂತೆ.

ಅಪ್ಪನಿಗೆ ಆ ಗಳಿಗೆಯೇ ವಿಷಯ ತಿಳಿದು, ಆತ ಹಿಂದಿರುಗಿ ಬರುವ ಅದೇ ದಾರಿಯಲ್ಲಿ ಕಾದು ಕುಳಿತು, ಕುದುರೆಯೇರಿ ಬರುತ್ತಿದ್ದ ಅವನನ್ನು ಒಂದೇ ಪಟ್ಟಿಗೆ ಕೆಡವಿಕೊಂಡು, ಅವನದೇ ಚಪ್ಪಲಿಯಿಂದ ಅವನ ಹಲ್ಲನ್ನೇ ಮುರಿದೇ ಬಿಟ್ಟನಂತೆ.ಅದರಿಂದ ಅಪ್ಪ ಹತ್ತಾರು ಕಷ್ಟಗಳಿಗೆ ತುತ್ತಾದಾರೂ ಅಂತಹ ಅಮಾನವೀಯತೆ ತೋರಿದವನ ಸೊಕ್ಕು ಮುರಿದಿದ್ದದ್ದಕ್ಕೆ ಸುತ್ತ ಮುತ್ತಲಿನ ಜನರ ಪ್ರಶಂಸೆಗೆ ಪಾತ್ರರಾದರಂತೆ.

ಆ ನೆನಪಿಗಾಗಿ ನನ್ನ ಮಗನೊಬ್ಬನಿಗೆ ಆತನ ಹೆಸರಿಡಬೇಕೆಂದು ತೀರ್ಮಾನಿಸಿ ರಾಜನ ಠೀವಿಯಲ್ಲಿ ಕುದುರೆಯೇರಿ ಬರುತ್ತಿದ್ದ ಆ ಹೇಮಣ್ಣನ ನೆನಪಿಗಾಗಿ ನನ್ನ ಎರಡನೇಯ ಅಣ್ಣನಿಗೆ ಹೇಮ’ರಾಜ’ ನೆಂದು ಹೆಸರಿಟ್ಟರಂತೆ.

ಅವನ ಬೆನ್ನಿಗೆ ಅಂಟಿಕೊಂಡಂತೆ ತದನಂತರ ತಮ್ಮನಾಗಿ ಹುಟ್ಟಿದವನು ನಾನು. ನಾನು ಕಂಡಂತೆ ಈ ಅಣ್ಣನದು ವರ್ಣರಂಜಿತ ವ್ಯಕ್ತಿತ್ವ.ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ವಿಶೇಷ ಆಸಕ್ತಿ.ಕ್ಷಣಾರ್ಧದಲ್ಲಿ ರೇಡಿಯೋ, ಟೆಪ್ ರೆಕಾರ್ಡರ್ ಸೈಕಲ್ ಡೈನೋಮೊ ಗಳನ್ನು ಬಿಚ್ಚಿ ಹೊಸದಾಗಿ ಏನೇನನ್ನೋ ಜೋಡಿಸುತ್ತಿದ್ದ. ಈ ಕಾರಣದಿಂದ ಇವನು ಮನೆಯಲ್ಲಿ ಮ್ಯಾಕ್ಯಾನಿಕ್ ಮುದ್ದನೆಂದೇ ಹೆಸರು ಪಡೆದಿದ್ದ. ಮಾತು ಮಾತಿಗೂ ನಗಿಸುವ ಹಾಸ್ಯ ಪ್ರವೃತ್ತಿಯುಳ್ಳವನು ಆಗಿದ್ದ.

ಯಾವುದೇ ವಸ್ತುವು ತನ್ನದೆಂದು ಗೊತ್ತಾದರೆ ಮುಗಿಯಿತು ಅದನ್ನು ಜತನದಿಂದ ಕಾಪಿಟ್ಟು ಕೊಳ್ಳುವುದಕ್ಕೆ ಇವನದು ಮೊದಲ ಆದ್ಯತೆ.

ದುರದೃಷ್ಟವಶಾತ್ ಇದೇ ಅವನ ಆರೋಗ್ಯ ಹದಗೆಡುವುದಕ್ಕೆ ಮೂಲವು ಆಯಿತು. ಒಂದೊಮ್ಮೆ ತೋಟದಲ್ಲಿ ಅಪ್ಪ ಬೆಳೆದ ಜೋಳದ ತೆನೆಯನ್ನು ಬೆಂಕಿಯಲ್ಲಿ ಸುಡುತ್ತಿದ್ದಾಗಲೇ ತೆನೆಗೆ ಅಂಟಿಕೊಂಡಿದ್ದ ಕೆಂಡವನ್ನು ಲೆಕ್ಕಿಸದೇ ತಾನು ಧರಿಸಿದ್ದ ಪಾಲಿಸ್ಟರ್ ಅಂಗಿಯೊಳಗೆ ಹಾಕಿಕೊಂಡು ಎದೆಯ ಭಾಗಕ್ಕೆ ಒತ್ತಿ ಹಿಡಿದು ಅವುಚಿಟ್ಟುಕೊಳ್ಳುವ ಆಸೆಯಲ್ಲಿ ಎಳೆಯ ಚರ್ಮಕ್ಕೆ ತಾಗಿ ಒಳಗಿನ ಶ್ವಾಸಕೋಶವೇ ಶಾಖಕ್ಕೆ ತುತ್ತಾಗಿ ಒಂದು ಶ್ವಾಸಕೋಶವೇ ಊನಾಯಿತು.

ಐದಾರು ವರ್ಷದವನಿದ್ದಾಗಲೇ ಈ ರೀತಿಯಿಂದ ಹದಗೆಟ್ಟ ಅನಾರೋಗ್ಯದಿಂದ ಅವನ ಬಹುಪಾಲು ಅರ್ಧ ಜೀವನ ಆಸ್ಪತ್ರೆಯಲ್ಲೇ ಕಳೆಯುವಂತಾಯಿತು.ನನಗೆ ತಿಳಿದ ಮಟ್ಟಿಗೆ ಅಪ್ಪ ಬೆಂಗಳೂರಿನ ಬಹುತೇಕ ಈ ಕಾಯಿಲೆಗೆ ಸಂಬಂಧಪಟ್ಟ ಎಲ್ಲ ಆಸ್ಪತ್ರೆಗಳನ್ನ ಸುತ್ತಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿದ್ದರಿಂದ ಸುಮಾರು ಸಾರಿ ಸಾವನ್ನ ಗೆದ್ದು ಬಂದಿದ್ದ.

ಪದವಿ ಮುಗಿಸುವ ಹೊತ್ತಿಗೆ ದೊಡ್ಡ ಯಶಸ್ವಿ ಶಸ್ತ್ರಚಿಕಿತ್ಸೆಯ ಫಲವಾಗಿ ನಂಜೇರಿ ಕಫ ತುಂಬಿದ್ದ ಆ ಒಂದು ಶ್ವಾಸಕೋಶವನ್ನ ದೇಹದಿಂದ ಹೊರತೆಗೆದು ಇನ್ನೂಳಿದ ಒಂದೇ ಶ್ವಾಸಕೋಶದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಆರೋಗ್ಯಪೂರ್ಣವಾಗಿ ಬದುಕುವಂತಾಗಿದ್ದ.

ಯಶಸ್ವಿ ಸಾಂಸಾರಿಕ ವ್ಯಕ್ತಿಯಾಗಿ, ಎರಡು ಆರೋಗ್ಯಪೂರ್ಣ ಗಂಡು ಮಕ್ಕಳ ತಂದೆಯೂ ಆದ.ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು, ಕೆಲ ವರ್ಷ ನಮ್ಮ ಕೂಡು ಕುಟುಂಬವನ್ನ ಮುನ್ನಡೆಸಿದ್ದ.

ನೇಮಕಾತಿ ಪ್ರಕ್ರಿಯೆಯಲ್ಲಿನ ದೋಷದಿಂದ ದುರದೃಷ್ಟವಶಾತ್ ಕೆಲಸವನ್ನು ಕಳೆದುಕೊಂಡ.ಆದರೂ ಎದೆಗುಂದದೇ ಬೇಸಾಯದಲ್ಲೂ ವಿಭಿನ್ನ ಪ್ರಯೋಗಗಳನ್ನ ಮಾಡಿ ಕೈ ಚಲ್ಲಿ ಕೂತ. ಅಣ್ಣ- ತಮ್ಮಂದಿರ ವಿಚಾರದಲ್ಲಿ ಊರೇ ಎದುರಾದರೂ ಬೆನ್ನಲುಬಾಗಿ ಸಹಾಯಕ್ಕೆ ನಿಲ್ಲುತ್ತಿದ್ದ.

ಪ್ರಾಣಿ ಪ್ರಿಯನಾಗಿದ್ದ ಈತನಿಗೆ ನಾಯಿ ಮತ್ತು ಬೆಕ್ಕುಗಳೆಂದರೆ ಎಲ್ಲಿಲ್ಲದ ಪ್ರೀತಿ.ನಮ್ಮ ಮನೆಯ ಬೆಕ್ಕೊಂದು ನಾವೆಲ್ಲರೂ ಐದಾರು ಹಾಸಿಗೆಗಳನ್ನ ಹಾಸಿ ಸಾಲಾಗಿ ಮಲಗಿದ್ದರೂ, ಇವನ ಹಾಸಿಗೆಯನ್ನೇ ಹುಡುಕಿ ಮರಿಗೆ ಜನ್ಮ ನೀಡುತ್ತಿದ್ದದ್ದು ನಿಜವಾಗಿಯೂ ಅಚ್ಚರಿ.

ಇನ್ನೊ ಅಚ್ಚರಿಯೆಂದರೆ ಅವನ ವಿಧಿವಶನಾದ ಮೂರನೇ ದಿನದ ಕೂಳು ಹಾಕುವ ಕಾರ್ಯದಲ್ಲಿ ಸಂಪ್ರದಾಯದಂತೆ ಕಾಗೆಗಿಂತ ಮೊದಲು ಅಚಾನಕ್ ಆಗಿ ಪ್ರತ್ಯಕ್ಷವಾದ ಬೆಕ್ಕು ಮೊದಲು,ನಂತರ ನಾಯಿ ಮುಟ್ಟಿದ್ದು. ನಮ್ಮೂರಲ್ಲಿ ಏನೇ ವಸ್ತು ತಂದರೂ ನಾವೇ ಮೊದಲು ತರಬೇಕೆಂದು ಹಠಕ್ಕೆ ಕೂರುವ ಕ್ರೇಜಿ ಮನುಷ್ಯ. ಪಿ ಯು ಸಿ ಓದುವಾಗಲೇ ಈತ ‘ಜೀವನ-ಸಂಜೀವನ’ ಕಿರು ನಾಟಕವನ್ನು ಬರೆದು ಸಾವಿರ ಪ್ರತಿಗಳನ್ನ ಮುದ್ರಣಗೊಳಿಸಿ ಸಾಹಿತ್ಯ ಪ್ರೀತಿಯನ್ನು ಮೆರೆದಿದ್ದ.

ನಾನು ಪಿ ಯು ಸಿ ಯಲ್ಲಿದ್ದಾಗ, ಉಪನ್ಯಾಸಕರು ಬರುವುದು ಮುಕ್ಕಾಲು ಗಂಟೆ ತಡವಾಗಿದ್ದಕ್ಕೆ,ಮನೆಗೆ ಹಿಂತಿರುಗಿ ಇವನಿಗೆ ರೇಷ್ಮೆ ಸಾಕಾಣಿಕೆಯ ಕೆಲಸಕ್ಕೆ ಸಾತ್ ನೀಡಿದ್ದೆ.ಮರುದಿನ ಕಾಲೇಜಿಗೆಂದು ಹೋದಾಗ ಆ ಉಪನ್ಯಾಸಕರೊಬ್ಬರು ನನಗೆ ಬೆಂಚ್ ಮೇಲೆ ನಿಲ್ಲುವ ಶಿಕ್ಷೆ ನೀಡಿದ್ದರು.ವಿಷಯ ತಿಳಿದ ಈತ ಧೈರ್ಯವಾಗಿ,ನೇರವಾಗಿ ಪ್ರಿನ್ಸಿಪಾಲರ ಛೇಂಬರ್ ಗೆ ಬಂದು, ನನ್ನ ತಮ್ಮ ಓದಿನೊಂದಿಗೆ ಬೇಸಾಯವನ್ನು ಕಲಿಯಲೆಂದೇ ಪಕ್ಕದೂರಿನ ಸರ್ಕಾರಿ ಕಾಲೇಜಿಗೆ ಸೇರಿಸಿದ್ದು, ಇಲ್ಲವಾಗಿದ್ದರೆ ಕರ್ನಾಟಕದ ಪ್ರತಿಷ್ಠಿತ ಖಾಸಗಿ ಕಾಲೇಜಿಗೆ ಸೇರಿಸುತ್ತಿದ್ದೆ.

ಮುಂದುವರಿದು ವಯಸ್ಸಿಗೆ ಬಂದ ಹುಡುಗನನ್ನ ಸಕಾರಣವಿಲ್ಲದೇ ಕ್ಷಮೆ ಕೋರಿದರೂ ಬೆಂಚಿನ ಮೇಲೆ ನಿಲ್ಲಿಸುವ ಅಗತ್ಯವಿತ್ತೆ? ಕ್ಷಮೆ ಕೇಳುವುದಕ್ಕಿಂತ ದೊಡ್ಡ ಶಬ್ದ ಮತ್ತೊಂದಿಯೇ? ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿ ಇಡೀ ಕಾಲೇಜಿನ ಸಿಬ್ಬಂದಿಗೆ ಬೆವರಿಳಿಯುವಂತ ವಿವೇಕದ ಮಾತಿನಿಂದ ಪ್ರಬುದ್ಧತೆಯನ್ನ ತೋರಿದ್ದ.

ಆತ ಕೆಲಸ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾಗ, ನನ್ನ ಮದುವೆಯ ವಿಚಾರವಾಗಿ ಇಡೀ ಕುಟುಂಬವೇ ಮುನ್ನುಗ್ಗಲು ಹಿಂಜರಿದಾಗ, ನಾನೇ ಸ್ವತಃ ಅವನನ್ನು ‘ನೀನು ಈ ವಿಚಾರದಲ್ಲಿ ನನ್ನ ಜೊತೆ ಕೈ ಜೋಡಿಸಿದರೆ ನಿನ್ನ ಭವಿಷ್ಯಕ್ಕೆ ಯಾರು ನಿಲ್ಲುವುದಿಲ್ಲ’ ನೀನು ಮತ್ತೊಂದು ತೊಂದರೆಗೆ ಸಿಲುಕುವೆ ಬೇಡವೆಂದರೂ,ನಾನು ಈಗಿರುವ ಸ್ಥಿತಿಗಿಂತ ಇನ್ನೂ ನನ್ನ ಕೆಳಗೆ ತುಳಿಯುವುದಕ್ಕೆ ಯಾರಿಂದಲಾದರೂ ಸಾಧ್ಯವಾ? ನೀನು ಸುಮ್ಮನೆ ಗಂಡಾಗಿ ರೆಡಿ ಆಗೋ ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೆನೆಂದು ಅಂದದ್ದು ಅಲ್ಲದೇ ನನ್ನಿಷ್ಟದಂತೆ ಕುಟುಂಬದ ಯಾವ ಆಮಿಷಕ್ಕೂ ಒಳಗಾಗದೇ ಮದುವೆ ಮಾಡಿಸಿಯೇ ಬಿಟ್ಟ.

ನನ್ನ ಮತ್ತು ಅವನ ಸಾಕಿ ಸಲುಹಿ, ಓದಿ ಬೆಳೆಸಿದ ಸೋದರಮಾವನಿಗೆ ಕಿಡ್ನಿ ವೈಫಲ್ಯವಾದಾಗ,ಅವರ ಅನ್ನದ ಋಣ ತೀರಿಸಲು ಇದೇ ಸರಿಯಾದ ಸಮಯವೆಂದು ತಿಳಿದು, ನಮ್ಮ ಮನೆಯಲ್ಲಿ ಯಾರಿಗೂ ತಿಳಿಯದಂತೆ ನಾನು ಕಿಡ್ನಿ ಕೊಡುವೆನೆಂದು ಮಾತು ಕೊಟ್ಟಿದ್ದೆ.

ಈ ವಿಚಾರವಾಗಿ ನಾನು ಚಕಪ್ ಗೆಂದು ಆಸ್ಪತ್ರೆಗೆ ತೆರಳಿದ್ದ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ನನಗೆ ಕರೆ ಮಾಡಿ, ನಮಗೇಕೆ ತಿಳಿಸದ ಹಾಗೆ ಮಾತು ಕೊಟ್ಟೆ? ಮಾಮ ಮತ್ತು ನೀನು ಇಬ್ಬರೇ ನಮ್ಮ ಕುಟುಂಬಕ್ಕೆ ಆಧಾರ, ಆಶ್ರಯ. ನಿಮ್ಮಿಬ್ಬರಿಗೂ ಕಿಡ್ನಿಯನ್ನು ಕೊಡು-ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಮುಂದೊಂದು ದಿನ ಇಬ್ಬರಿಗೂ ತೊಂದರೆಯಾದರೆ ನಮ್ಮಗಳ ಗತಿ ಏನು?

ಈಗಾಗಲೇ ದಾರಿ ಬಿಟ್ಟ ಬೇಜವಾಬ್ದಾರಿಯ ಅಣ್ಣ, ಒಂದೇ ಶ್ವಾಸಕೋಶದಲ್ಲಿ ಉಸಿರು ಬಿಗಿ ಹಿಡಿದು ಬದುಕುತ್ತಿರುವ ನಾನು, ಅಷ್ಟೊಂದು ತಿಳಿವಳಿಕಸ್ಥನಲ್ಲದ ,ಚಿಕ್ಕ ವಯಸ್ಸಿಗೆ ಶುಗರ್ ಅಂಟಿಸಿಕೊಂಡ ತಮ್ಮ, ನಿನಗಿರುವ ಇನ್ನೊ ಐದಾರು ವರ್ಷ ತುಂಬದ ಮಕ್ಕಳು,ಎಳೆಯ ವಯಸ್ಸಿನ ನಿನ್ನ ಮಡದಿ ಹೀಗೆ ಇನ್ನೊ ಕೆಲ ಸತ್ಯಗಳನ್ನ ಬಿಚ್ಚಿಡುತ್ತಾ, ದುಃಖಿಸಿಕೊಂಡು ತನ್ನ ಅಳಲನ್ನ ತೋಡಿಕೊಂಡು ನನ್ನ ಮೇಲೆ ಎಷ್ಟು ಜನ ಅವಲಂಬಿತರಾಗಿದ್ದರೆಂಬುದನ್ನ ಪರೋಕ್ಷವಾಗಿ ಮೊಟ್ಟ ಮೊದಲ ಬಾರಿ ಅರಿವಿಗೆ ತಂದುಕೊಟ್ಟ.

ಇವೆಲ್ಲವನ್ನು ಮೀರಿಯೂ ನೀನು ಮಾತು ಕೊಟ್ಟ ಮೇಲೆ ಕೊಟ್ಟೆ ಕೊಡುವೆ, ಅದು ನನಗೆ ಚೆನ್ನಾಗಿ ಗೊತ್ತು,ಆದರೆ ನನ್ನದೊಂದು ಸಲಹೆಯಿದೆ ಕೇಳು, ಅದು ಯಶಸ್ವಿಯಾಗದಿದ್ದರೆ ನಿನ್ನಿಷ್ಟದಂತೆ ಕೊಡುವಿಯಂತೆ, ಆಗ ನಾವ್ಯಾರು ಅಡ್ಡಿಪಡಿಸೋಲ್ಲ, ಕೊಡುವುದು ಬೇಡವೇ ಬೇಡ ಅನ್ನಲು ಅವರು ಬರೀ ಸೋದರಮಾವ ಅಲ್ಲ ಸ್ವತಃ ನಿನ್ನ ಹಾಗೆ ನನ್ನ ಒಡಹುಟ್ಟಿದ ಅಕ್ಕನ ಗಂಡ ಆ ಅರಿವು ನಮಗೂ ಇದೆ.

ಈಗ ಸ್ವಲ್ಪ ಸಮಾಧಾನ ತಂದುಕೋ,ಎಂದು ತಾತ್ಕಾಲಿಕ ತಡೆಯೊಡ್ಡುವ ಮೂಲಕ ನನ್ನ ಅರ್ಧ ಜೀವದ ಭಾಗದ ಬಗ್ಗೆ ಕಾಳಜಿ ವಹಿಸಿದ್ದ. ಮುಂದೆ ಆದದ್ದೆಲ್ಲವೂ ಅವನ ಮನಸ್ಸಿನಲ್ಲಿದ್ದಂತೆಯೇ ಆಗಿ ಹೋಗಿತ್ತು. ದೇವರಾಣೇ ಅವನ ಮಾತು ಘಟನೆ ನೆಡದ ಒಂದು ವರ್ಷದ ತರುವಾಯ ಅಕ್ಷರಶಃ ಸತ್ಯವಾಯಿತು.

ಈಗ ಅದು ನನ್ನ ಕುಟುಂಬಕ್ಕೆ ಅನಿವಾರ್ಯವೂ ಆಗಿದೆ . ಅದೆಂತಹ ಮುಂದಾಲೋಚನೆಯಿತ್ತೋ ಅವನಿಗೆ ಆ ದೇವರೆ ಬಲ್ಲ.

ಹೀಗೆ ಪ್ರಮುಖ ಘಟ್ಟಗಳಲ್ಲಿ ವಿವೇಚನಾ ಸಹಿತವಾದ ಗಟ್ಟಿ ನಿರ್ಧಾರಗಳನ್ನ, ಸಲಹೆಗಳನ್ನ ನೀಡುತ್ತಿದ್ದ ಅಣ್ಣ,ಕಳೆದ ಡಿಸೆಂಬರನಲ್ಲಿ ಇನ್ನೇನೂ ಹೋಗಿಯೆ ಬಿಟ್ಟನೆಂದು ನಿರ್ಧರಿ ಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ಸಾವನ್ನ ಗೆದ್ದು ಬಂದಿದ್ದ. ಸ್ವಾಭಿಮಾನದಿ ದುಡಿಯುವ ಛಲ ತೊಟ್ಟು ಮೋದಿ ಕೇರ್ ನಲ್ಲಿ ಡೈರೆಕ್ಟರ್ ಸ್ಥಾನದ ಹಂತಕ್ಕೆ ಬೆಳೆದಿದ್ದ.

ಧಿಡೀರನೆ ಉಸಿರಾಟದ ಕಷ್ಟಕ್ಕೆ ಸಿಲುಕಿ, ಕೊರೊನಾದಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮನೆಯಲ್ಲೇ ಸೆಪ್ಟೆಂಬರ 8 ರ ನಸು ಬೆಳಗಿನ ಜಾವದ ಸಮಯದಲ್ಲಿ ಇಹಲೋಕ ತ್ಯಜಿಸಿದ್ದು ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿತ್ತು.

ಒಬ್ಬ ಇಲ್ಲವಾದರೆ ಇನ್ನೊಬ್ಬ ಗೆಳೆಯ ಸಿಗಬಹುದು, ಆದರೆ ಅದೇ ಅಪ್ಪನ ರಕ್ತ ಹಂಚಿಕೊಂಡು ಅದೇ ತಾಯ ಗರ್ಭದಲ್ಲಿ ಮತ್ತೊಮ್ಮೆ ಎಂದೆಂದಿಗೂ ಜನಿಸಲಾರೆವು. ಯಾವ ಜನ್ಮದ ಪುಣ್ಯದ ಫಲವೋ ಈ ಜನ್ಮದಲ್ಲಿ ಅಣ್ಣ- ತಮ್ಮಂದಿರಾಗಿ ಹುಟ್ಟಿದ್ದೆವು.

ಹಾಗೆಯೇ ಇರುವವರೆಗೂ ಬಾಳಿದೆವು. ಆದರೆ ದಾಯಾದಿಗಳಂತೆ ಕಚ್ಚಾಡಲು ನಮಗೆ ನಾವು ಎಂದು ಅಂಥ ಅವಕಾಶಕ್ಕೆ ಎಡೆ ಮಾಡಿಕೊಡಲೇ ಇಲ್ಲ. ಸಣ್ಣಪುಟ್ಟ ಕೋಳಿ ಜಗಳದಂತ ಜಗಳವೇ ಹೊರತು ಕೊಡಲಿಯಿಡಿದು ಕೊರ್ಟು ಮೆಟ್ಟಿಲೆರುವ ಮಟ್ಟಕ್ಕೆ ಇಳಿಯಲಿಲ್ಲ.ನನ್ನದೇ ನೆಡೆಯಬೇಕೆಂಬ ಕೆಟ್ಟ ಹಠಕ್ಕೆ ಬೀಳಲಿಲ್ಲ. ಸ್ವಾರ್ಥಕ್ಕಾಗಿ ಒಬ್ಬರು ಮತ್ತೊಬ್ಬರ ಸಾವನ್ನ ಕನಸಿನಲ್ಲಿಯೂ ಬಯಸಿಲಿಲ್ಲ.

ಅವಿದ್ಯಾವಂತ ಬೇಸಾಯಗಾರನ ಮಕ್ಕಳಾದ ನಾವು ಬುದ್ದಿವಂತರಾಗದೇ ಇರಬಹುದು ಆದರೆ ಮೋಸಗಾರರಾಗಿ ಬದುಕು ನೆಡೆಸಲಿಲ್ಲ. ಬದುಕಿರುವವರೆಗೂ ದಾಯಾದಿಗಳಂತೆ ದ್ವೇಷಕಾರಿ, ಸತ್ತಾಗ ಹೊರಗಿನವರ ಮೆಚ್ಚಿಸಲು ನಿನ್ನ ಮಣ್ಣಿಗೆ ಬರಲಿಲ್ಲ. ಮಣ್ಣಿನ ಮಕ್ಕಳಾದ ನಾವು ಮಣ್ಣಿನಲಿ ಆಟವಾಡುವಾಗಿನಿಂದ, ಭಾರ ಹೃದಯದಿಂದ ನಿನ್ನ ಹೂಳಲು ತೆಗೆದ ಗುಂಡಿಗೆ ಒಂದಿಡಿ ಮಣ್ಣು ಹಾಕುವವರೆಗೂ ಸಹೋದರತ್ವದಿ ಇದ್ದೆವು.

ಮಕ್ಕಳ ವಿಷಯವಲ್ಲೂ ಅಣ್ಣನ ಮಕ್ಕಳೇ ಬೇರೆ ನಮ್ಮ ಮಕ್ಕಳೇ ಬೇರೆ ಎಂಬುದನ್ನ ನಾಟಕೀಯವಾಗಿಯೂ ತೊರ್ಪಡಿಸಿಕೊಳ್ಳಲಿಲ್ಲ.ಭವಿಷ್ಯದ ದೃಷ್ಟಿಯಿಂದ ವಿಭಾಗವಾಗಿ ಬೇರೆ ಬೇರೆ ಇದ್ದರೂ ತೊಂಬತ್ತೊಂಬತ್ತು ಭಾಗ ಒಬ್ಬರನ್ನೊಬ್ಬರು ಬಿಟ್ಟು ಕೊಟ್ಟಿರಲಿಲ್ಲ.

ನಿನ್ನ ಬಗ್ಗೆ ಒಂದು ಬೇಸರದ ಸಂಗತಿಯೆಂದರೆ ಅದೆಕೋ ಸ್ನೇಹಿತರ ಆಯ್ಕೆಯ ವಿಚಾರದಲ್ಲಿ ವಿವೇಚನೆ ಬಳಸಿ ಆರಿಸಿಕೊಳ್ಳಲಿಲ್ಲ. ನಿನಗೆ ಒಳ್ಳೆಯದನ್ನ ಬಯಸಿದ್ದ ಸ್ನೇಹಿತರನ್ನ ದೂರವಿರಿಸಿ, ಗೊತ್ತಿದ್ದು ನಿನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸದ, ನಿನ್ನ ಎಳೆಯ ಕುಟುಂಬದ ಭವಿಷ್ಯದ ಬಗ್ಗೆ ಕಿಂಚಿತ್ತೂ ಯೋಚಿಸದವರ ಮಾತನ್ನ ನಮ್ಮೆಲ್ಲರ ಮರೆಮಾಚಿ ಸಾಯುವ ನಾಲ್ಕು ದಿನ ಮುಂಚಿನವರೆಗೂ ಆರೋಗ್ಯವನ್ನ ನಿರ್ಲಕ್ಷ್ಯಿಸಿ ಅವರ ಮಾತನ್ನೇ ವೇದವಾಕ್ಯದಂತೆ ಅನುಸರಿಸಿದೆ.

ಸ್ವಯಂಕೃತ ಅಪರಾಧಕ್ಕೆ ಮುನ್ನುಡಿಯ ಪಂಕ್ತಿ ಹಾಕಿಕೊಳ್ಳುತ್ತಾ ಸಾಗಿದೆ. ಯಾರೇ ಸ್ನೇಹಿತರಾಗಲಿ ನಂಬಿದ ಸ್ನೇಹಿತನ ಆರೋಗ್ಯ, ಅವನ ಕುಟುಂಬದ ಬಗ್ಗೆ ಗಮನಹರಿಸುವುದು ಕೇವಲ ಸ್ನೇಹಿತನಾದವನ ಕರ್ತವ್ಯವಲ್ಲದೆ ಸಾಮಾಜಿಕ ಜವಾಬ್ದಾರಿ ಕೂಡ.ದಿರ್ಘಾಯು ಆಗಬೇಕಿದ್ದ ನೀನು ಅಲ್ಪಾಯು ಆದದ್ದು ಮಾತ್ರ ನಿನ್ನ ಸ್ನೇಹಿತರಿಂದಲೇ ಎಂಬುದ ಸಾರಿ ಸಾರಿ ಹೇಳಬಲ್ಲೆ.

ಇಷ್ಟಿದ್ದರೂ ನನ್ನಣ್ಣನ ಕುಟುಂಬದಂತೆ ಅವರ ಕುಟುಂಬಗಳು ಬೀದಿಗೆ ಬರದಂತೆ ಆಗದಿರಲು ಆ ಮಹಾನ್ ಸ್ನೇಹಿತರಿಗೆ ದೇವರು ಬುದ್ದಿ ಕರುಣಿಸಲಿ.ನನ್ನ ಕಣ್ಣ ಮುಂದೆ ಹಾಯುವ ಬೇರಾವ ಸ್ನೇಹಿತನ ಕುಟುಂಬವನ್ನ ಅರ್ಧ ವಯಸ್ಸಿಗೆ ಬಿಟ್ಟು ಹೋಗದಿರುವಂತ ಪಾಠ ನನ್ನಣ್ಣನ ಸಾವಿನ ಮೂಲಕವೇ ಆಗಲಿ.

ಸ್ನೇಹ ಸಂಬಂಧವನ್ನ ಮೀರಿದ್ದು ಸೋದರ ಸಂಬಂಧ. ನನಗಿಂತ ಮೂರುವರೆ ವರ್ಷ ಮುಂಚೆ ಹುಟ್ಟಿದ ನೀನು, ಚಿಕ್ಕವನಾಗಿದ್ದ ನನ್ನನ್ನು ಎಷ್ಟು ಸಾರಿ ಎತ್ತಿ ಮುದ್ದಾಡಿರಬಹುದು, ಅಳುವಾಗ ಸಂತೈಸಿರಬಹುದು, ನೀನು ಧರಿಸಿದ್ದ ಎಷ್ಟೊ ಷರ್ಟುಗಳನ್ನು ನಾನು ಧರಿಸಿರುತ್ತೇನೆ.ಆದರೆ ತಮ್ಮನಾಗಿ ಹುಟ್ಟಿದ ನನಗೆ ಇವೆಲ್ಲವೂ ನಿನಗೆ ನೀಡಲು ಅಸಾಧ್ಯ.

ಯಾರೇ ಸ್ನೇಹಿತರು ಬಂದರೂ ಇದು ನನ್ನ ಅಣ್ಣಂದಿರ,ತಮ್ಮನ ಮನೆಯೆಂದು ನಿಮ್ಮ ಸಮ್ಮುಖದಲ್ಲಿ ಪರಿಚಯ ಮಾಡಿಕೊಟ್ಟು ನಾವೆಲ್ಲ ಇನ್ನೂ ಒಗ್ಗಟ್ಟಿನಿಂದ ಇದ್ದೇವೆಂದು ಸಮಾಧಾನ ತಂದು ಕೊಳ್ಳುತ್ತಿದ್ದೆ. ಆದರೆ ಇನ್ನೂ ಮುಂದೆ ನಿನ್ನ ಗೈರು ಹಾಜರಿಯಲ್ಲಿ ನಿನ್ನ ಮನೆ ಬಳಿ ಬಂದಾಗ ಇದು ನನ್ನ ಅಣ್ಣನ ಮನೆಯಂದಷ್ಟೇ ಪರಿಚಯ ಮಾಡಿಕೊಡಬೇಕಿದೆ.

ಆದರೂ ನಿನ್ನ ಜೇಷ್ಠ ಪುತ್ರ ಇಷ್ಟಾರ್ಥ ಯಥಾವತ್ ನಿನ್ನ ಹೋಲಿಕಯನ್ನೇ ಹೊಂದಿದ್ದಾನೆ. ಜೊತೆಗೆ ರಕ್ತಗತವಾಗಿ ಬಹುತೇಕ ನಿನ್ನ ಅಭಿರುಚಿಗಳೇ ಇರುವುದನ್ನ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ.ಇನ್ನೊ ಮೇಲೆ ಅವನಲ್ಲಿ ನಿನ್ನ ಕಾಣಬೇಕು. ಅದೇನೇ ಇದ್ದರೂ ನಿನ್ನ ಕುಟುಂಬದ ಭವಿಷ್ಯದ ಜವಾಬ್ದಾರಿ ನಮ್ಮಗಳ ಮೇಲಿದೆ.

ನನ್ನ ಮಕ್ಕಳಂತೆ ನಿನ್ನ ಮಕ್ಕಳ ಶಿಕ್ಷಣಕ್ಕೂ ಮೊದಲ ಆದ್ಯತೆಯಾಗಬೇಕಿದೆ.ನಿನ್ನ ಕನಸುಗಳನ್ನ ನನಸಾಗಿಸುವ ಜರೂರತ್ತು ಇದೆ. ಎಷ್ಟೇ ಕಷ್ಟ ಬಂದರೂ ನಿನ್ನ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನಿನ್ನ ಸ್ಥಾನದಲ್ಲಿ ನಿಂತು ಸಹಕರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಯೊಳಗೆ ತರಲು ಪರಿಶ್ರಮ ಪಡುತ್ತೇನೆ.

ಮನುಷ್ಯ ಜನ್ಮದಲ್ಲೇ ನಿನ್ನ ಮುಂದಿನ ಜನ್ಮವನ್ನ ನಿನಗೆ ಆ ಭಗವಂತ ದಯಪಾಲಿಸಿದರೆ ನಮ್ಮ ವಂಶದ ರಕ್ತ ಹರಿಯುವ ಹೊಟ್ಟೆಯಲ್ಲಿ ಮತ್ತೇ ಹುಟ್ಟಿ ಬಾ ಅಣ್ಣಾ.ಇವತ್ತು ನಿನ್ನ ಹೆಸರಿನಲ್ಲಿ ಕರ್ಮದ ಕಾರ್ಯಗಳನ್ನ ಪೂರೈಸುವ ತಿಥಿ ಕಾರ್ಯ. ಇದೇ ಬಂಧು ಬಾಂಧವರು,ನೆರೆ- ಹೊರೆಯವರು ಸ್ನೇಹಿತರು ಸೇರಿ ಮಾಡುವ ಕೊನೆ ಕಾರ್ಯ.

ಇನ್ನೇನಿದ್ದರೂ ಇಂಥ ಕಾರ್ಯಗಳು ತಿಂಗಳಿಂದ ವರ್ಷಕ್ಕೆ ಸೀಮಿತಗೊಳ್ಳುತ್ತದೆ. ನಿನ್ನ ಜೊತೆ ಹಂಚಿಕೊಂಡ ಸಹೋದರತ್ವ, ಒಡನಾಡಿದ ಬದುಕಿನ ನೆನಪುಗಳು ಮಾತ್ರ ಅಮರ.. ಅಮರ.. ಅಮರ… ಮತ್ತೆ ಹುಟ್ಟಿ ಬರಲಾರೆವು ಅದೇ ತಂದೆಯ ರಕ್ತ ಹಂಚಿಕೊಂಡು ಅದೇ ತಾಯ ಗರ್ಭದಲ್ಲಿ.ನಾನೇನಾದರೂ ದುಡುಕಿ ಒಂದು ಬೈಗುಳದ ಮಾತಾಡಿದ್ದರೆ ಅದು ನಿನ್ನ ಆರೋಗ್ಯದ ಹಿತದೃಷ್ಟಿಯಿಂದ ಅಷ್ಟೇ ಅಣ್ಣ..ಆದರೂ ಕ್ಷಮೆಯಿರಲಿ.. ಹೋಗಿ ಬಾ ಅಣ್ಣಾ…. ಇಂತಿ ನಿನ್ನ ಪ್ರೀತಿಯ ತಮ್ಮ ಧನಂಜಯ

ಮಾಯಸಂದ್ರ ಪಿಎಸಿಬಿ ಅಧ್ಯಕ್ಷರಾಗಿ ಜಡೆಯಾನಂದೀಶ್ ಆಯ್ಕೆ

Publicstory

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಡೆಯಜೆ.ಬಿ.ನಂದೀಶ್ ಹಾಗೂ ಉಪಾಧ್ಯಕ್ಷರಾಗಿ ಸಿ.ಆರ್.ಗಿರಿಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಾಯಸಂದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 12 ಸದಸ್ಯರ ಬಲ ಹೊಂದಿದ್ದು ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಡೆಯ ಗ್ರಾಮದ ಬುಡಗಜ್ಯೋಗಿ ಭೈರಪ್ಪ ಅವರ ಮನೆತನದ ಜೆ.ಬಿ.ನಂದೀಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಿರಿಧರ್ ಇಬ್ಬರೇ ನಾಮ ಪತ್ರ ಸಲ್ಲಿಸಿದರು.

ಬೇರಾವ ನಿರ್ದೇಶಕರು ನಾಮಪತ್ರ ಸಲ್ಲಿಸಲಿಲ್ಲ. ಅಂತಿಮವಾಗಿ ಚುನಾವಣಾಧಿಕಾರಿ ಬಬಿತಾ ಅವರು ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಯನ್ನು ಅವಿರೋಧವೆಂದು ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಜಡೆಯಜೆ.ಬಿ.ನಂದೀಶ್ ಮಾತನಾಡಿ, ನಾನು ಅವಿರೋಧವಾಗಿ ಅಧ್ಯಕ್ಷನಾಗಲು ಕಾರಣೀಭೂತರಾದ ಎಂ.ಪುಟ್ಟೇಗೌಡ, ಜಿಲ್ಲಾ ನಿರ್ದೇಶಕ ಸಿದ್ದಲಿಂಗಪ್ಪ, ಜಿಲ್ಲಾಧ್ಯಕ್ಷರಾದ ಕೆ.ಎನ್.ರಾಜಣ್ಣ ಹಾಗೂ ಶಾಸಕ ಮಸಾಲಜಯರಾಂ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಸದೃಢಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ನೂತನ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಜಡೆಯಾ ಗ್ರಾಮಸ್ಥರು ಹಾಗೂ ಹಿತೈಷಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರಿಗೆ ಮೈಸೂರುಪೇಟ ಅಭಿನಂದಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಪುಟ್ಟೇಗೌಡ, ಜವರೇಗೌಡ, ಗಂಗಯ್ಯ, ಪಂಚಾಕ್ಷರಿ, ನಟರಾಜ್, ಲೋಕೇಶ್, ಅಶೋಕ್, ಜಯಮ್ಮ, ಶ್ಯಾಮಲ, ವಾಸು ಯುವ ಮುಖಂಡರುಗಳಾದ ಸುನಿಲ್ ಶಿವರಾಮಯ್ಯ, ಕೃಷ್ಣಮೂರ್ತಿ, ನಾಗರಾಜ್, ರಂಗರಾಜ್, ಯೋಗೀಶ್, ನಿವೃತ್ತ ಅಧ್ಯಾಪಕ ಶಿವರಾಮಯ್ಯ, ಸಿ.ಇ. ಓ ಗಿಡ್ಡಯ್ಯ, ಮಹೇಶ್ ಮತ್ತಿತರರು ಹಾಜರಿದ್ದರು.

ಮದುವೆಗೆ ವಿರೋಧ: ತಬ್ಬಿಕೊಂಡು ನಾಲೆಗೆ ಹಾರಿದ ಪ್ರೇಮಿಗಳು

ತಿಪಟೂರು:‌ಮದುವೆ ಮಾಡಿಕೊಳ್ಳಲು ಮನೆಯವರು ನಿರಾಕರಿಸುತ್ತಾರೆ ಎಂದು ಹೆದರಿ ಪ್ರೇಮಿಗಳು ಒಬ್ಬರಿಗೊಬ್ಬರು ತಬ್ಬಿಕೊಂಡು ಹೇಮಾವತಿ ನಾಲೆಗೆ ಹಾರಿದ್ದು, ಶವಗಳು ನೊಣವಿನಕೆರೆ ಬಳಿ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿವೆ.

ಪತ್ರ ಬರೆದಿಟ್ಟು ಇಬ್ಬರು ನಾಲೆಗೆ ಹಾರಿದ್ದು ಸಾವಿಗೀಡಾದರೂ ಸಹ ಇಬ್ಬರ ಶವಗಳು ಪರಸ್ಪರ ತಬ್ಬಿಕೊಂಡಂತೆಯೇ ಇದ್ದದ್ದು ನೋಡುಗರ ಕಣ್ಣಾಲಿಗಳನ್ನು ತುಂಬಿಸಿತು.

ರಮೇಶ್ ಹಾಗೂ ಸುಶ್ಮಿತಾ ಸಾವಿಗೀಡಾದವರು. ಚೆನ್ನಪಟ್ಟಣ ತಾಲ್ಲೂಕಿನ ಮತ್ತಿಘಟ್ಟ, ಹಿರೀಸಾವೆಯವರಾದ ಇವರು ಬೇರೆ ಬೇರೆ ಜಾತಿಯ ಕಾರಣ ಮನೆಯವರು ಮದುವೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇಬ್ಬರೂ ಸಹ ಕಾಲೇಜು ವಿದ್ಯಾರ್ಥಿಗಳು.

ಜಮೀನು ಬಿಡಿಸಿಕೊಡುವಂತೆ ಎಸಿ ಕಾಲಿಗೆ ಬಿದ್ದು ಕಣ್ಣೀರಿಟ್ಟ ರೈತ

ಕೊರಟಗೆರೆ:

ತಾಲ್ಲೂಕಿನ ಅಕ್ಕಾಜಿಹಳ್ಳಿ ಸರ್ವೆ ನಂಬರ್ 33 ರಲ್ಲಿ ಸ್ಥಳೀಯ ರೈತರ ಜಮೀನನ್ನು ಬೇರೆಡೆಯಿಂದ ಬಂದವರಿಗೆ ಅಕ್ರಮವಾಗಿ ಸಾಗುವಳಿ ಚೀಟಿ ನೀಡಿರುವುದನ್ನು ಖಂಡಿಸಿ ತಾಲ್ಲೂಕು ಕಚೇರಿ ಎದುರು ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷ ಆನಂದ ಪಾಟೀಲ್ ಹುಲಿಕಟ್ಟೆ ಮಾತನಾಡಿ, ಅಕ್ಕಾಜಿಹಳ್ಳಿ ಸರ್ವೆ ನಂಬರ್ ನಲ್ಲಿ ಸುಮಾರು 30 ವರ್ಷಗಳಿಂದ ಉಳುಮೆ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದ ಸ್ಥಳೀಯ ರೈತರಾದ ಕಾಮಣ್ಣ ಹಾಗೂ ದಾಳಿನರಸಪ್ಪ ಎಂಬರ ಜಮೀನನ್ನು ಬೇರೆಡೆಯಿಂದ ಬಂದವರಿಗೆ ಏಕಾಏಕಿ ದಾಖಲಾತಿ ಸೃಷ್ಟಿಸಿ ಸಾಗುವಳಿ ಹಕ್ಕು ಪತ್ರ ನೀಡಲಾಗಿದೆ.

30 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದ ರೈತರನ್ನು ಒಕ್ಕಲೆಬ್ಬಿಸಿ ಭೂಮಿ ಕಸಿದುಕೊಂಡು ರೈತರು ಇಟ್ಟಿದ್ದ ಬೆಳೆಯನ್ನು ಯಂತ್ರಗಳ ಮೂಲಕ ಹಾಳು ಮಾಡಿ ರಾತ್ರೋರಾತ್ರಿ ತಂತಿ ಬೇಲೆ ಹಾಕುವುದರೊಂದಿಗೆ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೂಡಲೇ ತನಿಖೆಯಾಗಬೇಕು. ನಕಲೀ ದಾಖಲೆ ಸೃಷ್ಟಿಸಿ ಏಕಾಏಕಿ ನೀಡಿರುವ ಸಾಗುವಳಿ ಹಕ್ಕುಪತ್ರವನ್ನು ವಜಾಮಾಡಿ 30 ವರ್ಷಗಳಿಂದ ಅನುಭವದಲ್ಲಿರುವ ಕಾಮಣ್ಣ, ದಾಳಿನರಸಪ್ಪ ಅವರಿಗೆ ಜಮೀನು ಬಿಡಿಸಿಕೊಡಬೇಕು ಹಾಗೂ ಈ ಸಂಬಂಧ ಅವರಿಗೆ ಹಕ್ಕು ಪತ್ರ ನೀಡಬೇಕು. ಏಕಾಏಕಿ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಮನೆಯನ್ನು ತೆರವುಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ಇದರೊಂದಿಗೆ ಅಕ್ಕಾಜಿಹಳ್ಳಿ ಸರ್ವೆ ನಂಬರ್ 33 ರಲ್ಲಿ ಸಾಗುವಳಿ ಮಾಡುತ್ತಿರುವ ನಿಜವಾದ ರೈತರಿಗೆ ಭೂಮಿ ಮುಂಜೂರು ಮಾಡಿ ಕೂಡಲೇ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಸುಮಾರು 30 ವರ್ಷದಿಂದ ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿರುವ ಜಮೀನಿಗೆ ಬೇರೆಯವರು ಏಕಾಏಕಿ ಬಂದು ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ. ನಮ್ಮ ಜಮೀನು ನಮಗೆ ಬಿಡಿಸಿಕೊಡಿ ಎಂದು ರೈತ ಕಾಮಣ್ಣ ಉಪವಿಭಾಗಧಿಕಾರಿ ಕಾಲಿಗೆ ಬಿದ್ದು ಕಣ್ಣೀರಿಟ್ಟರು.

ರೈತರನ್ನು ಉದ್ದೇಶಿಸಿ ಮಾತನಾಡಿದ ಮಧುಗಿರಿ ಉಪವಿಭಾಗಾಧಿಕಾರಿ ಡಾ. ಕೆ. ನಂದಿನಿದೇವಿ, ಈಗಾಗಲೇ ಕಾಮಣ್ಣ ಹಾಗೂ ದಾಳಿ ನರಸಪ್ಪ ಅವರ ಸಾಗುವಳಿ ಜಮೀನು ಬೇರೆಯವರಿಗೆ ಹಕ್ಕು ಪತ್ರ ನೀಡಿರುವುದಕ್ಕೆ ಖಾತೆ ಮಾಡದಂತೆ ತಕಾರರು ಅರ್ಜಿ ಬಂಧಿದ್ದು, ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಈ ಬಗ್ಗೆ ತನಿಖೆ ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸಲಾಗುವುದು.

ಒಂದು ವೇಳೆ ಆ ಜಮೀನನ್ನು ಅಕ್ರಮವಾಗಿ ಮುಂಜೂರು ಮಾಡಿದ್ದರೆ ಅದನ್ನು ವಜಾ ಮಾಡಲು ಕ್ರಮವಹಿಸಲಾಗುವುದು. ಜಮೀನು ಆಕ್ರಮಿಸಿ ನಿರ್ಮಿಸಿರುವ ಮನೆಯನ್ನು ತೆರವು ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇದರೊಂದಿಗೆ ಅಕ್ಕಾಜಿಹಳ್ಳಿ ಸರ್ವೆ ನಂಬರ್ 33 ಕ್ಕೆ ಬಂದಿರುವ ಸಾಗುವಳಿ ಅರ್ಜಿಗಳನ್ನು ಪರಿಶೀಲನೆ ನಡೆಸಿ ಸಾಗುವಳಿ ಹಕ್ಕು ಪತ್ರ ನೀಡಲು ಹಾಗೂ ಈಗಾಗಲೇ ನೀಡಿರುವ ಹಕ್ಕು ಪತ್ರಗಳನ್ನು ಖಾತೆ ಮಾಡಲು ಒಂದು ತಿಂಗಳ ಒಳಗಾಗಿ ಕ್ರಮ ವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗೋವಿಂದರಾಜು, ಪಿಎಸ್ಐ ಎಚ್.ಮುತ್ತುರಾಜು, ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ಗೌಡ, ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಕಾರ್ಯದರ್ಶಿ ಪ್ರಸನ್ನಕುಮಾರ್, ರೈತ ಮುಖಂಡರಾದ ಚಿಕ್ಕರಂಗಯ್ಯ, ಮಂಜುನಾಥ, ಲೋಕಣ್ಣ, ನಾಗರಾಜು, ಮಲ್ಲೇಶ್, ಬಸವರಾಜು, ರಾಘವೇಂದ್ರ, ಸಂಜೀವಯ್ಯ, ನರಸಿಂಹರಾಜು, ಗೋಪಾಲ್ ಇತರರು ಇದ್ದರು.

ರೈತರ ಪ್ರತಿಭಟನೆ ವೇಳೆ ಜಮೀನು ಕಳೆದುಕೊಂಡ ರೈತ ಕಾಮಣ್ಣ ಉಪವಿಭಾಗಾಧಿಕಾರಿ ನಂದಿನಿದೇವಿ ಅವರ ಕಾಲಿಗೆ ಬಿದ್ದು ಜಮೀನು ಬಿಡಿಸಿಕೊಡುವಂತೆ ಕಣ್ಣೀರಿಟ್ಟರು

ನಿಗಮಗಳ ರಚನೆಯ ಹಿಂದೆ ರಾಜಕೀಯದ ವಾಸನೆ: ಪ್ರೊ ಕೆ ಮರುಳಸಿದ್ಧಪ್ಪ ವಿಷಾದ

ಜಿ ಎನ್ ನಾಗರಾಜ್ ಅವರ ‘ಜಾತಿ ಬಂತು ಹೇಗೆ’ ಕೃತಿ ಬಿಡುಗಡೆ


Bengaluru: ರಾಜ್ಯದಲ್ಲಿ ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಸ್ಪಷ್ಟವಾಗಿ ರಾಜಕೀಯ ಉದ್ಧೇಶದಿಂದ ಕೂಡಿದೆ ಎಂದು ಹಿರಿಯ ವಿದ್ವಾಂಸ ಪ್ರೊ ಕೆ ಮರುಳಸಿದ್ಧಪ್ಪ ಅವರು ಟೀಕಿಸಿದರು.

‘ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಜಿ ಎನ್ ನಾಗರಾಜ್ ಅವರ ಹೊಸ ಕೃತಿ ‘ಜಾತಿ ಬಂತು ಹೇಗೆ?’ ಕುರಿತು ಮಾತನಾಡಿದರು.

ಉತ್ತರ ಕರ್ನಾಟಕದ ಜಾತಿ ಸಮುದಾಯಗಳ ಮತಗಳ ಮೇಲೆ ಕಣ್ಣಿಟ್ಟು ನಡೆಸಿರುವ ಈ ರಾಜಕೀಯಕ್ಕೆ ಅಂತಃಕರಣವೇ ಇಲ್ಲ ಎಂದು ಅವರು ವಿಷಾದಿಸಿದರು. ಇವತ್ತಿನ ರಾಜಕಾರಣ ಜಾತಿಯನ್ನು ಅಸ್ತ್ರವನ್ನಾಗಿ ಬಳಸುತ್ತಿದೆ. ರಾಜ್ಯದಲ್ಲಿ ಎಲ್ಲಾ ಜಾತಿಗಳಿಗೂ ಒಂದು ಪ್ರಾಧಿಕಾರ ಮಾಡಲು ಹೊರಟಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿರ್ಧಾರವೇ ಇದಕ್ಕೆ ಸಾಕ್ಷಿ ಒದಗಿಸುವಂತಿದೆ. ಇದು ಜಾತಿ ಉದ್ಧಾರ ಮಾಡುವ ಉದ್ಧೇಶವನ್ನು ಖಂಡಿತಾ ಹೊಂದಿಲ್ಲ ಬದಲಿಗೆ ಆ ಜಾತಿಯ ಮತಗಳನ್ನು ಮಾತ್ರ ಬಾಚಿಕೊಳ್ಳುವ ಉತ್ಸಾಹ ತೋರಿಸುತ್ತಿದೆ

ಸಂವಿಧಾನ ಜಾತ್ಯತೀತ ಆಶಯವನ್ನು ಹೊಂದಿದೆ. ಹಾಗಾಗಿ ಸ್ವಾತಂತ್ರ್ಯಾನಂತರ ಜಾತಿ ಎನ್ನುವುದು ನಾಶವಾಗಿ ಹೋಗುತ್ತದೆ ಎನ್ನುವ ಕನಸು ಇತ್ತು. ಆದರೆ ಈಗ ಜಾತಿ ಮತ್ತು ಧರ್ಮಗಳೆರಡೂ ಸ್ವಾತಂತ್ರ್ಯಪೂರ್ವಕ್ಕಿಂತ ಬಲವಾಗಿ ಬೆಳೆದು ನಿಂತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಮಹಿಳಾ ಹೋರಾಟಗಾರರಾದ ಕೆ ನೀಲಾ ಅವರು ಮಾತನಾಡಿ ವಚನ ಚಳವಳಿಯ ಆಶಯವನ್ನೇ ಇಲ್ಲವಾಗಿಸುವ ಹುನ್ನಾರ ಈ ಪ್ರಾಧಿಕಾರಗಳ ರಚನೆಯ ಹಿಂದಿದೆ. ವಚನ ಚಳವಳಿಯ ಜಾತ್ಯಾತೀತ ಆಶಯವನ್ನು ಹರಡದಂತೆ ವ್ಯವಸ್ಥಿತ ಕೋಟೆ ರೂಪಿಸಲಾಯಿತು. ನಂತರ ಅದನ್ನು ಜಾತಿಯಾಗಿಸಿ ಅದರಿಂದ ಲಾಭ ಪಡೆಯುವ ಹುನ್ನಾರ ಈಗ ನಡೆದಿದೆ ಎಂದು ಟೀಕಿಸಿದರು.

ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕೃತಿಯನ್ನು ವಿಮರ್ಶಿಸುತ್ತಾ ಅಸ್ಪೃಶ್ಯತೆಯ ಅಗ್ನಿಕುಂಡ ಇನ್ನೂ ಜೀವಂತವಾಗಿದೆ. ಜಾತಿ ಎನ್ನುವುದು ವಿನಾಶವಾಗುವವರೆಗೆ ಅಸ್ಪೃಶ್ಯತೆಯ ಗಾಯಗಳು ಮರೆಯಾಗುವುದಿಲ್ಲ ಎಂದರು.

ಕೃತಿಕಾರ ಜಿ ಎನ್ ನಾಗರಾಜ್ ಅವರು ಮಾತನಾಡಿ ನನ್ನ ‘ಜಾತಿ ಬಂತು ಹೇಗೆ?’ ಕೃತಿ ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯ ಉಗಮವನ್ನು ಶೋಧಿಸುತ್ತದೆ. ಜಾತಿಯ ವಿರುದ್ಧ ಪ್ರಬಲ ಹೋರಾಟ ಕಟ್ಟಿದ ಡಾ ಅಂಬೇಡ್ಕರ್, ಇ ಎಂ ಎಸ್ ನಂಬೂದರಿಪಾಡ್, ಇ ಕೆ ನಾಯನಾರ್, ಬಿ ಟಿ ರಣದಿವೆ ಅವರ ಹೋರಾಟ ಅಮೂಲ್ಯವಾದದ್ದು ಅದನ್ನು ರಕ್ಷಿಸಿಕೊಳ್ಳಬೇಕು ಎಂದರು.

ಬಿಡುಗಡೆಯಾದ ಕೃತಿ ವಿವರ:

ಜಾತಿ ಬಂತು ಹೇಗೆ?
ಬಹುರೂಪಿ ಪ್ರಕಾಶನ
ಪುಟ ೨೫೬
ಬೆಲೆ: ರೂ ೩೦೦

ಪತಿಯಿಂದಲೇ ಪತ್ನಿ ಕೊಲೆ

ಕೊರಟಗೆರೆ(ತುಮಕೂರು ಜಿಲ್ಲೆ)

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೆ ತನ್ನ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಕೊರಟಗೆರೆ ಪಟ್ಟಣದ ರೇಣುಕಾ ಆಸ್ಪತ್ರೆ ಹಿಂಭಾಗದಲ್ಲಿ ವಾಸ ಇರುವ ಚಾಂದುಪಾಷ ತನ್ನ ಪತ್ನಿ ಜಬಿನ(40) ಕೊಲೆ ಮಾಡಿದ್ದಾನೆ.

ಚಾಂದ್ ಪಾಷ ಮುಂಜಾನೆ ಪತ್ನಿ ಜಬೀನ ಮತ್ತು ಮಗ ಮಹಮ್ಮದ್ ಅಲಿ(12) ಮನೆಯಲ್ಲಿ ಗಾಡ ನಿದ್ರೆಯಲ್ಲಿ ಮಲಗಿದ್ದ ವೇಳೆ ದೊಣ್ಣೆಯಿಂದ ಇಬ್ಬರ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಹೊಡೆತದ ರಭಸಕ್ಕೆ ಹೆಂಡತಿ ಸ್ಥಳದಲ್ಲಿಯೇ ರಕ್ತಸ್ರಾವವಾಗಿ ಮೃತಪಟ್ಟ್ಇದ್ದಾರೆ. ಮಗ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ‌.

ಮೃತ ಮಹಿಳೆಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆರೋಪಿ ಚಾಂದುಪಾಷ ಕೊರಟಗೆರೆ ಪೊಲೀಸರ ವಶದಲ್ಲಿ ಇದ್ದಾನೆ.

ಸ್ಥಳಕ್ಕೆ ಸಿಪಿಐ ಎಫ್.ಕೆ.ನಧಾಪ್ ಮತ್ತು ಪಿಎಸೈ ಎಚ್.ಮುತ್ತುರಾಜು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.