Thursday, May 7, 2026
Google search engine
Home Blog Page 167

ಕೊರೋನಾ ಬಗ್ಗೆ ಅನಗತ್ಯ ಭೀತಿ : ನಾಗೇಶ್ ಹೆಗಡೆ

Bengaluru: ಕೊರೋನಾ ಬಗ್ಗೆ ಅನಗತ್ಯ ಭೀತಿಯನ್ನು ಸೃಷ್ಟಿಸಲಾಗಿದೆ. ಕೊರೋನಾ ಅತಿ ದೊಡ್ಡ ಖಾಯಿಲೆ ಎನ್ನುವುದು ಶುದ್ಧ ಸುಳ್ಳು ಎಂದು ಹಿರಿಯ ಪತ್ರಕರ್ತ, ಅಂಕಣಕಾರ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು.

ʼಅವಧಿʼ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು ಕೊರೋನಾಗಿಂತ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳಬೇಕಾಗಿರುವುದು ಹೃದ್ರೋಗ ಹಾಗೂ ಕ್ಷಯದ ಬಗ್ಗೆ ಎಂದರು.

ಪ್ರತೀ ದಿನ ಭಾರತದಲ್ಲಿ ಹೃದ್ರೋಗಕ್ಕೆ 9500 ಜನ ಬಲಿಯಾಗುತ್ತಿದ್ದಾರೆ. ಶ್ವಾಸಕೋಶ ಸಂಬಂಧಿ ಖಾಯಿಲೆಗಳಿಗೆ ಪ್ರತೀ ದಿನ 7 ಸಾವಿರ ಜನ ಪ್ರಾಣ ತೆತ್ತುತ್ತಿದ್ದಾರೆ. ಆದರೆ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಒಂದು ಲಕ್ಷಕ್ಕೆ 8 ಜನ ಮಾತ್ರ. ಹೃದ್ರೋಗ ಹಾಗೂ ಕ್ಷಯದಿಂದ ಸಾವನ್ನಪ್ಪುತ್ತಿರುವವರ ಪೈಕಿ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಅದಾವ ಶಕ್ತಿಗಳು ಕೊರೋನಾ ಬಗ್ಗೆ ಇಷ್ಟು ಉತ್ಸಾಹ ತಾಳಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.

ಹಾಗಂದ ಮಾತ್ರಕ್ಕೆ ಕೊರೋನಾವನ್ನು ಲಘುವಾಗಿ ತೆಗೆದುಕೊಂಡು ಬೇಕಾದಂತೆ ಗುಂಪುಗೂಡಿ, ಅಲಕ್ಷ್ಯ ಮಾಡಿ ಎಂದು ಹೇಳುತ್ತಿಲ್ಲ. ಮುಖವಾಡ ಧರಿಸುವುದು ಮುಖ್ಯ ಎಂದು ಕಿವಿಮಾತು ಹೇಳಿದರು.

ಮಲೆನಾಡಿನ ಕಣಿವೆಯಲ್ಲಿದ್ದ ನಾನು ಕಣಿವೆಯ ಆಳಕ್ಕೂ, ಹಿಮಾಲಯದ ಪರ್ವತದ ಎತ್ತರಕ್ಕೂ, ವಿದೇಶದ ಗಗನಚುಂಬಿ ಕಟ್ಟಡಗಳಿಗೂ ಮುಟ್ಟುವಂತಾಗಿದ್ದು ನನ್ನ ಅದೃಷ್ಟ. ಇದರಿಂದ ನನಗೆ ಆಪಾರ ಸ್ನೇಹಿತ ವರ್ಗ ದಕ್ಕಿದೆ ಎಂದು ನೆನಪು ಮೆಲುಕು ಹಾಕಿದ ಅವರು ಪರಿಸರ ಚಳವಳಿಗಳು ನನ್ನನ್ನು ರೂಪಿಸಿವೆ ಹಾಗೆಯೇ ನಾನು ಬರೆದ ಲೇಖನಗಳ ಸುತ್ತಲೂ ಪರಿಸರ ಚಳವಳಿಗಳು ಹುಟ್ಟಿಕೊಂಡವು ಎಂದರು.

ಪತ್ರಕರ್ತನಾದವನು ಪ್ರಜಾಪ್ರಭುತ್ವದ ಪರ ವಾಲಿರಬೇಕು. ಪ್ರಜಾಪ್ರಭುತ್ವದ ಮೌಲ್ಯಗಳ ಪರ ವಾಲುವುದೂ ಸಹಾ ವೃತ್ತಿಪರ ಪತ್ರಿಕೋದ್ಯಮವೇ ಎಂದರು.

ಕಾರ್ಯಕ್ರಮವನ್ನು ‘ಅವಧಿʼಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ನಡೆಸಿಕೊಟ್ಟರು.

ಇಂದು ಚಾಕ್ ಸರ್ಕಲ್ ನೇರ ಪ್ರಸಾರ

0

Publicstory. in


ಬೆಂಗಳೂರು: ನಾಡಿನ ಹೆಸರಾಂತ ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್ ಅವರ ಚಾಕ್ ಸರ್ಕಲ್ ಇಂದು (ಗುರುವಾರ) ಅವಧಿಯ ಫೇಸ್ ಬುಕ್ ಪೇಜ್ ನಲ್ಲಿ ನೇರ ಪ್ರಸಾರವಾಗಲಿದೆ.

ಇಂದು ಬೆಳಿಗ್ಗೆ 11 ಕ್ಕೆ ನೇರ ಪ್ರಸಾರವಾಗಲಿದ್ದು, ಹಿರಿಯ ಪರಿಸರ ವಿಜ್ಞಾನಿ, ಪತ್ರಕರ್ತರಾದ ನಾಗೇಶ್ ಹೆಗಡೆ ಅವರು ಮುಖಾಮುಖಿಯಾಗಲಿದ್ದಾರೆ.

ಕೊರೊನಾ ವ್ಯಾಕ್ಸಿನ್, ಕೊರೊನಾ ಹಿನ್ನೆಲೆಯಲ್ಲಿ ನಾಗೇಶ್ ಹೆಗಡೆ ಮಾತುಗಳು ಮಹತ್ವ ಪಡೆದುಕೊಳ್ಳಲಿವೆ.

ಅವಧಿ ಮ್ಯಾಗ್ ಈಗಾಗಲೇ ಮನೆ ಮಾತಾಗಿದ್ದು, ನಾಡಿನ ಮೊಟ್ಟ ಮೊದಲ ಇ ಮ್ಯಾಗಜಿನ್ ಎಂಬ ಹೆಸರುಗಳಿಸಿದೆ.

ಜಿ.ಎನ್.ಮೋಹನ್ ಅವರು ನಾಗೇಶ್ ಹೆಗಡೆ ಅವರೊಂದಿಗಿನ ಮಾತುಕತೆಯ ಚಾಕ್ ಸರ್ಕಲ್ ವೀಕ್ಷಣೆಗೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಅವಧಿ ಪೇಸ್ ಬುಕ್ ಪೇಜ್ ನಲ್ಲಿ ಲಾಗ್ ಇನ್ ಆಗಿ ವೀಕ್ಷಿಸಬಹುದು.

ಹಣಕ್ಕಾಗಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ

ಕೋಲಾರ : ಕೆಲವು ನುರಿತ ಅಪಹರಣಕಾರರಿಂದ ಹಣಕ್ಕಾಗಿ ಕಳೆದ ತಿಂಗಳ 25 ರಂದು ನನ್ನ ಅಪಹರಣವಾಗಿದೆಯೇ ಹೊರತು ಈ ವಿಚಾರದಲ್ಲಿ ರಾಜಕಾರಣದ ವಿಷಯವಾಗಲಿ, ದ್ವೇಷವಾಗಲೀ ಇಲ್ಲ ಎಂದು ಮಾಜಿ ಸಚಿವ ವರ್ತೂರ್ ಆರ್.ಪ್ರಕಾಶ್ ಸ್ಪಷ್ಟಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು ಈಗಾಗಲೇ ಅಪಹರಣದ ಬಗ್ಗೆ ದೂರು ದಾಖಲಿಸಿದ್ದು, ನನಗೆ ರಾಜ್ಯ ಸರ್ಕಾರ ಹಾಗೂ ಪೋಲಿಸ್ ಇಲಾಖೆ ಮೇಲೆ ಸಂಪೂರ್ಣ ನಂಬಿಕೆಯಿದ್ದು, ಇನ್ನು ಒಂದು ವಾರದ ಒಳಗೆ ಅಪಹರಣಕಾರರ ಬಂಧನವಾಗ ಲಿದ್ದು, ಎಲ್ಲಾ ವಿಚಾರ ಸಂಪೂರ್ಣ ಬಹಿರಂಗವಾಗಲಿದೆ ಎಂದರು.

ಅಪಹರಣಾಕಾರದಿಂದ ನಾನು ಬಿಡುಗಡೆಯಾದ ದಿನವೇ ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಸಂಪೂರ್ಣವಾಗಿ ಘಟನೆ ಬಗ್ಗೆ ತಿಳಿಸಿದ್ದು, ಈ ಕೃತ್ಯದಿಂದ ಜರ್ಜರಿತನಾಗಿ ಸುಧಾರಿಸಿಕೊಂಡ ನಂತರ ಗೃಹ ಸಚಿವರ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ನೀಡಿದ ಧೈರ್ಯದ ಮೇರೆಗೆ ತಡವಾಗಿ ಮಂಗಳವಾರ ಸಂಜೆ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ಚುರುಕಾಗಿ ನಡೆಯುತ್ತಿದ್ದು, ಆದಷ್ಟು ಬೇಗ ಅಪರಾಧಿಗಳ ಬಂಧನವಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಅಪಹರಣಕಾರರು ಕನ್ನಡ ಭಾಷೆ ಮಾತನಾಡುತ್ತಿದ್ದು, ನನ್ನ ವಿವೇಚನೆ ಪ್ರಕಾರ ಅವರ್ಯಾರೂ ಹೊರರಾಜ್ಯದವರಲ್ಲ, ಅಪ್ಪಟ ಬೆಂಗಳೂರು ಕಡೆಯವರೆಂದು ಅವರ ವರ್ತನೆಯಿಂದ ತಿಳಿದುಬರುತ್ತದೆ, ಈ ರೀತಿ ಅಪಹರಣಕಾರರ ಹಲವಾರು ಗ್ಯಾಂಗ್ ಗಳು ಬೆಂಗಳೂರಿನಲ್ಲಿ ಈಗಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಸರ್ಕಾರ ಇಂತಹ ಗ್ಯಾಂಗ್ ಗಳನ್ನು ಪತ್ತೆ ಹಚ್ಚಿ ಮಟ್ಟ ಹಾಕಲು ಸರ್ಕಾರವನ್ನು ಆಗ್ರಹಿಸಿದರು.

ಈ ಒಂದು ಘಟನೆಯಿಂದ ನನ್ನ ಹಿಂಬಾಲಕರು ಹಾಗೂ ಅಭಿಮಾನಿಗಳು ಯಾರು ಆತಂಕ ಯಪಡುವ ಅಗತ್ಯವಿಲ್ಲ, ತಾಲ್ಲೂಕಿನ ಎಲ್ಲಾ 23 ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನನ್ನ ಬೆಂಬಲಿಗರು ಸ್ಪರ್ಧಿಸಲಿದ್ದು,ಚುನಾವಣಾ ಹಿನ್ನಲೆಯಲ್ಲಿ ಮುಂದಿನ ಶನಿವಾರ ಮತ್ತು ಭಾನುವಾರ ತಮ್ಮ ಫಾರಂ ಹೌಸ್ ನಲ್ಲಿ ಸಭೆ ಕರೆದಿದ್ದು,ಚುನಾವಣಾ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು,ಇಂದಿಗೂ ನನಗೆ ಎಲ್ಲಾ ಹಳ್ಳಿಗಳಲ್ಲೂ ಬೆಂಬಲ ಹಿಂದಿನಂತೆ ಇದ್ದು, ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನನ್ನ ಬೆಂಬಲಿಗರು ಗೆಲ್ಲಲಿದ್ದಾರೆಂದು ಅವರು ಹೇಳಿದರಲ್ಲದೆ, 2023ರ ಚುನಾವಣೆಯಲ್ಲಿ ಮತ್ತೆ ಶಾಸಕನಾಗಿ ಆರಿಸಿ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕುರುಬ ಜನಾಂಗದ ತಂಬಿಹಳ್ಳಿ ಮುನಿಯಪ್ಪ, ಮಧುಸೂದನ ಕುಮಾರ್, ಜಿ ಪಂ ಸದಸ್ಯ ಅರುಣ್ ಪ್ರಸಾದ್, ಸೋಮಶೇಖರ್, ಮುನಿಸ್ವಾಮಿ‌, ವರಲಕ್ಷ್ಮಿ, ಹಾಗೂ ಕುರುಬ ಸಮುದಾಯದ ಮುಖಂಡರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

ಟೂಡಾ ಮಾಜಿ ಅಧ್ಯಕ್ಷ ಇನ್ನಿಲ್ಲ

ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರು(ಟೂಡ ), ಲೆಕ್ಕಪರಿಶೋಧಕರು ಆಗಿದ್ದ ಹಿರೇಹಳ್ಳಿಯ ಆಡಿಟರ್ ಮೊಹಮ್ಮದ್ ಇಕ್ಬಾಲ್ ಸಾಹೇಬ್ ಸೋಮವಾರ ಮಧ್ಯಾಹ್ನ ನಿಧನರಾದರು.

ಜೆಡಿಎಸ್ ತುಮಕೂರು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಆಗಿದ್ದರು. ಇವರು ಪತ್ನಿ ಹಾಗೂ ಹಿರೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಆಡಿಟರ್ ತನ್ವೀರ್ ಸಾಹೇಬ್ ಹಾಗೂ ಮತ್ತೋರ್ವ ಮಗ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಒಕ್ಕಲಿಗರ ಮುಖಂಡ ರವಿಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಪರಿಶ್ರಮಕ್ಕೆ ಸರಿಸಮನಾದದ್ದು ಯಾವುದು ಇಲ್ಲ

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರದ ಮೂಲಕ ಪ್ರಥಮ‌ ಪಿ ಯು ಸಿ ವಿದ್ಯಾರ್ಥಿಗಳಿಗಾಗಿ ” ಯುವಜನತೆಯ ಮುಂದಿರುವ ಸವಾಲುಗಳು ಎಂಬ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕಾರರಾಗಿ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿದರು.

ಯುವಕರು ರಾಷ್ಟ್ರದ ಆಸ್ತಿ. ನಿಮ್ಮ ಪರಿಶ್ರಮಕ್ಕೆ ಸರಿಸಮನಾದದ್ದು ಯಾವುದು ಈ ಪ್ರಪಂಚದಲ್ಲಿಲ್ಲ. ಮಕ್ಕಳು ಆಯಾ ವಯಸ್ಸಿನ ಜವಾಬ್ದಾರಿಗಳನ್ನು ಅರಿತುಕೊಳ್ಳದೆ ಹೋದರೆ ನಮ್ಮ ಅಸ್ತಿತ್ವವು ಮನುಷ್ಯರೂಪದಲ್ಲಿರುವ ಒಂದು ಮೃಗದಂತಾಗುತ್ತದೆ. ಮಕ್ಕಳು ಏಕಾಗ್ರತೆ ಸಾಧಿಸಬೇಕು, ಸಮಯ ಪರಿಪಾಲನೆ ಮಾಡಬೇಕು ಮತ್ತು ಸ್ವಾವಲಂಬನೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು’ ಎಂದರು.

ದುಷ್ಚಟಗಳು ಪ್ರಾರಂಭದಲ್ಲಿ ಜೇಡರಬಲೆಯಂತೆ, ಕಾಲಕ್ರಮೇಣ ಅದು ಕಬ್ಬಿಣದ ಸರಪಳಿಯಂತಾಗುತ್ತದೆ. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳದೆ ಸದಾ ಬಾಹ್ಯಶಕ್ತಿಗಳೇ ನಿಮ್ಮನ್ನು ನಿಯಂತ್ರಿಸಬೇಕು ಎಂದು ಬಯಸಿದರೆ ಅದು ವ್ಯಕ್ತಿತ್ವದ ಅಪರಿಪೂರ್ಣ ವಿಕಸನವಾಗುತ್ತದೆ’ ಎಂದು ಹೇಳಿದರು.

ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಬಸವರಾಜು ಬಿ ವಿ.ರವರು ಜ್ಯೋತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಸಿದ್ದಲಿಂಗಯ್ಯ ಅವರು ಸ್ವಾಗತಿಸಿ ಪರಿಚಯಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಗಂಗಾಧರ್ ಕೆ ವಿ ಅವರು ವಂದಿಸಿದರು.

ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರು ಹಾಗೂ ಕನ್ನಡ ಉಪನ್ಯಾಸಕಿಯಾದ ಡಾ. ಶ್ವೇತಾರಾಣಿ ಹೆಚ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

  ತುಮಕೂರು: ಎರಡು ಹಂತದಲ್ಲಿ ಗ್ರಾ.ಪಂ. ಚುನಾವಣೆ

 ತುಮಕೂರು: ತುಮಕೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವನೆ ಎರಡೂ ಹಂತಗಳಲ್ಲೂ ನಡೆಯಲಿದೆ.

ಡಿಸೆಂಬರ್ 26 ಮತ್ತು 27ರಂದು ಚುನಾಚಣೆ ನಡೆಯಲಿದೆ. ಡಿಸೆಂಬರ್ 26ರಂದು ಐದೂ ತಾಲ್ಲೂಕುಗಳಲ್ಲಿ, ಡಿ.27ರಂದು ಉಳಿದ ಐದು ತಾಲ್ಲೂಕುಗಳಲ್ಲಿ ಚುನಾವನೆ ನಡೆಯಲಿದೆ.

 ಮೊದಲ ಹಂತದಲ್ಲಿ ಚುನಾವಣೆ ನಡೆಯುವ ತಾಲ್ಲೂಕುಗಳಲ್ಲಿ ಡಿಸೆಂಬರ್ 7ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಎರಡನೇ ಹಂತದ ಚುನಾವಣೆಗೆ ಡಿಸೆಂಬರ್ ಹನ್ನೊಂದರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ಪಕ್ಷಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದ್ದು. ಟಿಕೆಟ್ ಗಿಟ್ಟಿಸಲು ಸ್ಪಧಾ೵ ಂಕ್ಷಿಗಳು ಶಾಸಕರು, ಸಚಿವರ ಮನೆಯ ಹೊಸ್ತಿಲು ತುಣಿಯುತ್ತಿದ್ದಾರೆ. ಸ್ಥಳೀಯ ವಿಷಯಗಳನ್ನೇ ಆಧರಿಸಿ ಚುನಾವಣೆ ನಡೆಯುವುದರಿಂದ ಎಲ್ಲ ಶಾಸಕರಿಗೂ ಗೆಲ್ಲುವವರನ್ನೇ ಆಯ್ಕೆ ಮಾಡುವುದು ಕಷ್ಟವಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಚ್ಚರ ತಪ್ಪಿದರೆ ಅದು ವಿಧಾನಸಭೆ ಚುನಾವಣೆ ವೇಳೆ ನೇರ ಪರಿಣಾಮ ಬೀರುವುದರಿಂದ ಗ್ರಾಮ ಪಂಚಾಯತಿ ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಸವಾಲು ಈಗ ಎಲ್ಲ ಶಾಸಕರು, ಮಾಜಿ ಶಾಸಕರ ಮುಂದೆ ಇದೆ.

ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಣತಪಟ್ಟಿದೆ.  ಶಿರಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಬೀಗುತ್ತಿರುವ ಬಿಜೆಪಿಯನ್ನು ಕಟ್ಟಿ ಹಾಕಲು ಜೆಡಿಎಸ್, ಕಾಂಗ್ರೆಸ್ ಹೇಗೆ ಕೆಲಸ ಮಾಡಲಿವೆ ಎಂಬ ಕುತೂಹಲ ಗರಿಗದೆರಿದೆ.

ಒಂದು ಹಗ್ ಬೇಕಿತ್ತು..

0

ಜಿ.ಎನ್.ಮೋಹನ್


ಒಂದು ಹಗ್ ಬೇಕಿತ್ತು
-ಗೆಳೆಯ ಮಂಸೋರೆ ಇದನ್ನು ಹೇಳುವ ವೇಳೆಗಾಗಲೇ ಹನಿಗಣ್ಣಾಗಿದ್ದರು.

ನಾನು ಕೇಳಿದ್ದು ಇಷ್ಟೇ. ‘ಹರಿವು’ನಲ್ಲಿ ಇರುವುದು ಅಪ್ಪ ಮಗನ ಸಂಬಂಧ. ನಿಮ್ಮ ಮತ್ತು ಅಪ್ಪನ ಸಂಬಂಧ ಹೇಗಿತ್ತು? ಅಂತ.

ಮಂಸೋರೆಗೆ ಸುಧಾರಿಸಿಕೊಳ್ಳಲು ತುಂಬಾ ತುಂಬಾ ಸಮಯವೇ ಹಿಡಿಯಿತು. ನಾನೂ ಇದನ್ನು ನಿರೀಕ್ಷಿಸಿರಲಿಲ್ಲ.

ಅಪ್ಪ ತೆಲುಗು ಚಿತ್ರಗಳ ಹಿನ್ನೆಲೆಯುಳ್ಳವರು. ‘ಸೂರ್ಯವಂಶ’ ಸಿನೆಮಾವನ್ನು ೨೦೦ ಬಾರಿ ನೋಡಿದವರು. ಅವರಿಗೆ ‘ನೋಡಪ್ಪಾ ನಾನೂ ಸಿನೆಮಾ ಮಾಡ್ತೇನೆ. ಸಿನೆಮಾ ಅಂದ್ರೆ ಹೀಗಿರಬೇಕು ಅಂತ ತೋರಿಸ್ತೇನೆ ಅಂದಿದ್ದೆ. ಆದರೆ ಕಥೆ ಆರಿಸಿ ಸಿನೆಮಾ ಮಾಡಿ ಅಪ್ಪನ ಕೈಗಿಡುವ ವೇಳೆಗೆ ಅವರೇ ಇರಲಿಲ್ಲ’ ಎಂದು ಮಾತು ನಿಲ್ಲಿಸಿದರು.

‘ಒಂದು ವಿಷಯ ಗೊತ್ತಾ.. ನನಗೆ ಈಗಲೂ ಅಚ್ಚರಿ ಅಪ್ಪ ಪ್ರತೀ ಬಾರಿ ಸೂರ್ಯವಂಶ ನೋಡುವಾಗಲೂ ಅಪ್ಪ ಕಣ್ಣೀರಿಡುತ್ತಿದ್ದರು. ಒಂದು ಸಿನೆಮಾದಲ್ಲಿ ಏನಾಗುತ್ತೆ ಎನ್ನುವುದು ಎರಡನೇ ಬಾರಿ ಸಿನೆಮಾ ನೋಡುವ ವೇಳೆಗೆ ಗೊತ್ತಾಗಿ ಹೋಗಿರುತ್ತದೆ. ಆದರೆ ೨೦೦ ನೇ ಸಲ ಅದೇ ಸಿನೆಮಾ ನೋಡುವಾಗಲೂ ಅಪ್ಪ ಅದಕ್ಕೆ ಎಮೋಷನಲ್ ಆಗಿ ಕನೆಕ್ಟ್ ಆಗ್ತಾ ಇದ್ದರು. ಎಂತಹ ಮ್ಯಾಜಿಕ್ ಇದು. ಬಹುಷಃ ಇಂತಹ ಉತ್ತರ ಸಿಗದ ಯಕ್ಷಿಣಿಯೇ ನನ್ನನ್ನು ಸಿನೆಮಾ ಲೋಕಕ್ಕೆ ಎಳೆದುಕೊಂಡು ಬಂತು’ ಎಂದರು.

‘ಆಕ್ಟ್ ೧೯೭೮’ ಮಂಸೋರೆ ಅವರ ಮೂರನೆಯ ಚಿತ್ರ ಹೊಸ್ತಿಲು ದಾಟಲು ಸಿದ್ಧವಾಗಿತ್ತು. ಆ ಸಮಯದಲ್ಲಿಯೇ ನಾನು ಮಂಸೋರೆ ಅವರನ್ನು ಅಕ್ಷರಶಃ ಎದುರಿಗೆ ನಿಲ್ಲಿಸಿಕೊಂಡಿದ್ದೆ. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಪಿಯುಸಿಯಲ್ಲಿ ಡುಮ್ಕಿ ಹೊಡೆದ ಅಷ್ಟೂ ಪೇಪರ್ ಗಳಿಗೆ ಬಂದ ಮಾರ್ಕ್ಸ್ ಗಳನ್ನು ಕೂಡಿದರೂ ೧೦ ಅಂಕ ದಾಟದ ಹುಡುಗ ಇವನೇನಾ ಎನ್ನುವಂತಾಗಿತ್ತು.

‘ನನಗೆ ಕಥೆ ಹೇಳೋದು ಅಂದರೆ ತುಂಬಾ ಇಷ್ಟ. ಇದಕ್ಕೂ ಅಪ್ಪನೇ ಕಾರಣ. ಅಪ್ಪ ವಯಸ್ಕರ ಶಿಕ್ಷಣ ಇಲಾಖೆಯಲ್ಲಿದ್ದರು. ಹಾಗಾಗಿ ಆ ಇಲಾಖೆ ಪ್ರಕಟಿಸಿದ ಪುಸ್ತಕ ಎಲ್ಲಾ ನನ್ನ ಕೈನಲ್ಲಿರುತ್ತಿತ್ತು. ಓದಿಯೇ ಓದಿದೆ. ಕಥೆ, ಕಥನ ಕಲೆ ಎರಡೂ ನನ್ನೊಳಗೆ ಇಳಿದು ಹೋಯ್ತು’ ಎಂದರು.

ಊರಲ್ಲಿ ಸೈನ್ ಬೋರ್ಡ್ ಮಾಡುತ್ತಿದ್ದ ನೆಂಟರಿದ್ದರು. ಅವರ ಜೊತೆ ಸೇರಿ ಬ್ಯಾನರ್ ಗೆ ಬಣ್ಣ ತುಂಬುತ್ತಾ, ಇಲ್ಲವೇ ಅವರು ಪೇಂಟ್ ಮಾಡುವಾಗ ಬಣ್ಣದ ಡಬ್ಬ ಹಿಡಿದುಕೊಂಡು ನಿಂತಿರುತ್ತಿದ್ದೆ. ಅಮ್ಮ ಒಡವೆ ಮಾರಿ ನನ್ನನ್ನ ಚಿತ್ರಕಲಾ ಪರಿಷತ್ ಮೆಟ್ಟಿಲು ಹತ್ತಿಸದೇ ಇದ್ದಿದ್ದರೆ ಬಹುಷಃ ಈಗಲೂ ಬ್ಯಾನರ್ ಬರೆದುಕೊಂಡು ಇರುತ್ತಿದ್ದೆನೇನೋ..’ ಎಂದು ಗತಕಾಲಕ್ಕೆ ಜಾರಿದರು.

ಚಿತ್ರಕಲಾ ಪರಿಷತ್ ನಲ್ಲಿ ನನಗೆ ಎಚ್ ಎ ಅನಿಲ್ ಕುಮಾರ್ ಸಿಕ್ಕಿದ್ದು ನನ್ನ ಮುಂದಿನ ದಾರಿ ಬೇರೆಯದೇ ದಿಕ್ಕಿಗೆ ಹೊರಳಲು ಕಾರಣವಾಯಿತು. ಇದಕ್ಕೆ ಕ್ಲೈಮಾಕ್ಸ್ ಎನ್ನುವಂತೆ ಸಿಕ್ಕಿದ್ದು ೨೦೧೧ರಲ್ಲಿ ಪ್ರಕಟವಾದ ಆಶಾ ಬೆನಕಪ್ಪ ಅವರ ‘ಪ್ರಜಾವಾಣಿ’ ಅಂಕಣ ಎಂದು ಮಾತು ನಿಲ್ಲಿಸಿದರು.

ಅಲ್ಲಿಂದ ಅವರು ಉಸಿರುತೆಗೆದುಕೊಳ್ಳಲು ಒಂದಷ್ಟು ಸಮಯ ಬೇಕಾಯಿತು. ‘ಮಗನ ಚಿಕಿತ್ಸೆಗೆ ಹಣವಿಲ್ಲದ ಅಪ್ಪನೊಬ್ಬ ಮಗ ಇಲ್ಲವಾದಾಗ ಊರಿಗೆ ದೇಹವನ್ನು ಸಾಗಿಸಲು ಪಡುವ ಯಾತನೆಯ ಕಥೆ ಅದು. ಒಂದು ಟ್ರಂಕ್ ಖರೀದಿಸಿ ಅದರಲ್ಲಿ ಮಗನ ಶವ ಇಟ್ಟುಕೊಂಡು ಊರು ಸೇರುವ ಮನ ಕಲಕುವ ಕಥೆ ಅದು. ಆಶಾ ಬೆನಕಪ್ಪ ಅವರ ಕಣ್ಣೆದುರು ನಡೆದದ್ದು. ಅದೇ ಮಂಸೋರೆ ಕಣ್ಣಲ್ಲಿ ಹರಿವು ಆಯಿತು.

‘ಬಡವರ ಬದುಕು ತುಟ್ಟಿ, ಸಾವು ಇನ್ನೂ ತುಟ್ಟಿ’ ಎನ್ನುವ ಕಥನ ಅದು. ಅಪ್ಪ ಮಗನ ದೇಹ ಸಾಗಿಸಿದ ಪಯಣ ಇದೆಯಲ್ಲಾ ಅದು ಇನ್ನೊಂದು ರೀತಿಯಲ್ಲಿ ನನ್ನ ಬದುಕಿನಲ್ಲಿ ಆಗಿತ್ತು. ನಾನು ಪ್ರಜ್ಞೆ ಇಲ್ಲದ, ಇನ್ನು ಕೆಲವೇ ದಿನಗಳ ಕಾಲ ಬದುಕುತ್ತಾರೆ ಎನ್ನುವ ಅಪ್ಪನನ್ನು ಇದೆ ರೀತಿ ಊರಿಗೆ ಕರೆದುಕೊಂಡು ಹೋದ ನೆನಪು ಅದರೊಳಗಿತ್ತು ಹಾಗಾಗಿ ಬಹುಷಃ ಆ ಸಿನೆಮಾ ಅಷ್ಟು ಇಂಟೆನ್ಸ್ ಆಗಿ ಬಂದುಹೋಯಿತು’ ಎಂದರು.

ಆಗಲೇ ನಾನು ಅವರಿಗೆ ಈ ಮಂಸೋರೆ’ ಎಂದರೆ ಯಾರು ಎನ್ನುವ ಪ್ರಶ್ನೆ ಕೇಳಿದ್ದು.

‘ಸೋಮಕೇಶವ ರೆಡ್ಡಿಯ ಮಗ ಈ ಮಂಜುನಾಥ. ಮೂರರಿಂದಲೂ ಒಂದು ಅಕ್ಷರ ಆಯ್ದುಕೊಂಡು ಈ ಮಂಸೋರೆ ಹುಟ್ಟಿದ’ ಎಂದು ನಕ್ಕರು.

ನನಗೆ ಜಾತಿ ಸೂಚಕ ಹೆಸರು ಖಂಡಿತಾ ಇಷ್ಟ ಇಲ್ಲ. ಹಾಗಾಗಿ ನಾನು ಮಂಜುನಾಥ ಅಷ್ಟೇ ಆಗಿದ್ದೆ. ಆದರೆ ನನ್ನೊಳಗೆ ಅಪ್ಪನನ್ನು ಸದಾ ಉಳಿಸಿಕೊಳ್ಳಲು ಅವರ ಹೆಸರು ಸೇರಿಸಿಕೊಂಡೆ. ಹಾಗಾಗಿ ಸೋಮಕೇಶವರ ಜೊತೆಗೆ ರೆಡ್ಡಿಯೂ ಬಂದು ಸೇರಿಹೋಯ್ತು’ ಎಂದರು ‘ಮಂ’ಜುನಾಥ ‘ಸೋ’ಮಕೇಶವ ‘ರೆ’ಡ್ಡಿ.

‘ಹರಿವು ಒಂದು ಸಿನೆಮಾ ಅಲ್ಲ ಎರಡು ಗೊತ್ತಾ..’ ಎಂದು ಮಂಸೋರೆ ನನ್ನತ್ತ ನೋಡಿ ಮುಗುಳ್ನಕ್ಕರು. ನನಗೂ ಅದು ಬ್ರೇಕಿಂಗ್ ನ್ಯೂಸೇ. ಹೌದಾ ಎಂದು ಕಣ್ಣರಳಿಸಿದೆ.

‘ಅಕ್ಕನ ಮದುವೆಗೆ ಅಂತ ಇಟ್ಟಿದ್ದ ಲಕ್ಷಾಂತರ ಹಣವನ್ನ ಖರ್ಚು ಮಾಡಿ ಸಿನೆಮಾ ಮಾಡಲು ದಂಡು ಕಟ್ಟಿಕೊಂಡು ಹೋದೆ. ಸಿನೆಮಾ ಹೇಗೆ ನಿರ್ದೇಶಿಸಬೇಕು ಎನ್ನುವುದೇ ಗೊತ್ತಿಲ್ಲದ, ಶೂಟಿಂಗ್ ಸ್ಕ್ರಿಪ್ಟ್ ಮಾಡಲು ಗೊತ್ತಿಲ್ಲದ ನಾನು ಅಷ್ಟೂ ಹಣವನ್ನು ಕಳೆದು ಡಿಪ್ರೆಶನ್ ಗೆ ಜಾರಿ ಹೋದೆ.

ಆದರೆ ಸಿನೆಮಾದಲ್ಲಿ ತಂದೆ ಪಾತ್ರ ಮಾಡುತ್ತಿದ್ದ ಸಂಚಾರಿ ವಿಜಯ್ ಬಿಡಲಿಲ್ಲ. ಎರಡು ವರ್ಷದ ನಂತರ ಮತ್ತೆ ಬಂದು ಈ ಕಥೆ ನನ್ನನ್ನು ಎರಡು ವರ್ಷದಿಂದ ಮಲಗಲು ಬಿಟ್ಟಿಲ್ಲ ಬನ್ನಿ ಇಬ್ಬರೂ ಸೇರಿ ಯಾರಾದರೂ ಪ್ರೊಡ್ಯೂಸರ್ ಹುಡುಕಿಯೇ ಬಿಡೋಣ ಅಂದರು. ಎರಡು ವರ್ಷದ ನಂತರ ಮತ್ತೆ ಡೈರೆಕ್ಷನ್ ಗೆ ನಿಂತಾಗ ಈ ಮಂಸೋರೆ ಸಾಕಷ್ಟು ಪಾಠ ಕಲಿತಿದ್ದ’ ಎಂದರು.

ಇಷ್ಟೆಲ್ಲಾ ಆದ ನಂತರ ನಾನೂ, ಮಂಸೋರೆ ಕನ್ನಡ ಭವನದ ಅಂಗಳದಲ್ಲಿ ನಿಂತಿದ್ದೆವು. ‘ಏನ್ ಗೊತ್ತಾ’ ಎಂದರು. ‘ಏನು’ ಎಂದೆ. ‘ಹೊಸ ಸಿನೆಮಾ ಪ್ಲಾನ್ ಮಾಡ್ತಾ ಇದ್ದೀನಿ’ ಅಂದರು ‘ವಾಹ್!’ ಎಂದವನೇ ಅಲ್ಲಿದ್ದ ಗೆಳೆಯರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಸಂಜೆ ಸಿಟ್ಟಿಂಗ್ ಮಾಡಿಯೇಬಿಟ್ಟೆವು.

ಆಗಲೇ ಅವರು ಹೇಳಿದ್ದು ಹೆಸರು ‘ನಾತಿಚರಾಮಿ’ ಅಂತ. ನನ್ನ ಕಿವಿ ದೊಡ್ಡದಾಯಿತು. ಮಂಸೋರೆಗೂ ಗೊತ್ತಾಯಿತೇನೋ ಎಂ ಎಸ್ ಆಶಾದೇವಿ ಅವರು ಬರೆಯುತ್ತಿದ್ದ ‘ನಾರಿ ಕೇಳಾ’ ಅಂಕಣ ನನ್ನೊಳಗನ್ನು ಶೋಧಿಸಿಕೊಳ್ಳಲು ಕಾರಣ ಆಯಿತು. ಹೆಣ್ಣಿನ ದೃಷ್ಟಿಯಿಂದ ನೋಡುವುದು ಕಲಿತೆ. ಅಷ್ಟೇ ಅಲ್ಲ ಗಂಡಾಗಿ ನಾನು ಮಾಡುತ್ತಿರುವ ತಪ್ಪನ್ನು ಗೊತ್ತುಮಾಡಿಕೊಳ್ಳುತ್ತಾ ಹೋದೆ. ಅದರ ಪರಿಣಾಮವೇ ‘ನಾತಿಚರಾಮಿ’. ಹೆಣ್ಣಿನ ಒಳತುಮುಲಕ್ಕೆ ಒಂದು ಕನ್ನಡಿ ಎಂದರು.

ನಾವು ಮಾತನಾಡುತ್ತಲೇ ಹೋದೆವು. ಹತ್ತು ಹಲವಾರು ಕಥೆ. ಮಂಸೋರೆ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದು. ಬೆನ್ನತ್ತಿ ಬಂದ ರಾಷ್ಟ್ರ ಪ್ರಶಸ್ತಿಗಳು ಅವರನ್ನು ಚಿತ್ರರಂಗದಲ್ಲೇ ಉಳಿಯುವಂತೆ ಮಾಡಿದ್ದು, ಅವರ ಪತ್ರಕರ್ತ ರೂಪ ಹೀಗೆ ಏನೆಲ್ಲಾ..

ಇಷ್ಟು ಮಾತಾಡುವಾಗಲೇ ‘ಹೇಳಿ ಈಗ ‘ಆಕ್ಟ್ ೧೯೭೮’ ಸಿನೆಮಾ ರಿಲೀಸ್ ಗೆ ನಿಂತಿದ್ದೀರಿ. ಈ ಕ್ಷಣದಲ್ಲಿ ಅಪ್ಪನಿಗೆ ಏನು ಹೇಳಲು ಬಯಸುತ್ತೀರಾ’ ಎಂದೆ.
ಹನಿಗಣ್ಣಾದ ಮಂಸೋರೆ ‘ಅಪ್ಪನ ಹಗ್’ ಎಂದರು.

ಗೊತ್ತಿಲ್ಲ ಯಾಕೆ ಅಂತ. ನಾನು ಕ್ಯಾಮೆರಾ ರೋಲ್ ಆಗುತ್ತಿರುವುದನ್ನೂ ಮರೆತು ಮಂಸೋರೆಯನ್ನು ಬಾಚಿ ಅಪ್ಪಿಕೊಂಡೆ. ಆದರೆ ಅದು ಆ ಅಪ್ಪನ ಹಗ್ ಗೆ ಸಮನಾದದ್ದಾಗಿರಲಿಲ್ಲ.

ಸಂವಿಧಾನ ಎಂದರೇ ಮೀಸಲಾತಿಯೇ.?

0
ಸಂವಿಧಾನ ಹೇಗೆ ಹುಟ್ಟಿತು, ಅದನ್ನು ಏಕಾಗಿ ಎಲ್ಲರೂ ಓದಬೇಕು. ಅಂಬೇಡ್ಕರ್ ಅವರು ಸಂವಿಧಾನ ಬರೆಯದಿದ್ದರೆ ದಲಿತರಷ್ಟೇ ಅಲ್ಲದೇ ಇಡೀ ದೇಶದ ಎಲ್ಲ ಜನಸಮುದಾಯಗಳು ಏನನ್ನು ಕಳೆದುಕೊಳ್ಳುತ್ತಿದ್ದವು. ನಮ್ಮ ಮುಂದಿರುವ ಸವಾಲುಗಳು ಏನು ಎಂಬುದನ್ನು ತುಮಕೂರು ವಿ.ವಿ. ಅಕಾಡೆಮಿಕ್ ಕೌನ್ಸಿಲ್ ನ ಮಾಜಿ ಸದಸ್ಯ ಹೆತ್ತೇನಹಳ್ಳಿ ಮಂಜುನಾಥ್ ಸವಿಸ್ತಾರವಾಗಿ ಬರೆದಿದ್ದಾರೆ. ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಈ ಲೇಖನ ಬರೆಯಲಾಗಿದೆ. ಕೊನೆವರೆಗೂ ಓದಿದ ಬಳಿಕ ಒಹ್ ಎಂಬ ಉದ್ಗಾರ ಬರಲಿದೆ ಮಾತ್ರವಲ್ಲ ನಮಗೇ ನಾವೇ ಹೆಮ್ಮೆಪಟ್ಟುಕೊಳ್ಳುವಂತೆ ಈ ವಿಶೇಷ ಲೇಖನ ಮಾಡುತ್ತದೆ.

ಸಂವಿಧಾನ ಸಮರ್ಪಣಾ ದಿನದ ಶುಭಾಶಯಗಳು.
ಭಾರತೀಯರಾದ ನಮಗೆ ಸುಪರಿಚಿತವಾದ ಆಚರಣೆಗಳು ಎಂದರೆ
1) ನಮ್ಮ ಸಾಂಪ್ರದಾಯಿಕ ಹಬ್ಬದ ದಿನಗಳಾದ ಗಣೇಶ, ಗೌರಿ, ಮಹಾನವಮಿಯಂತವು.
2)ರಾಷ್ಟ್ರೀಯ/ನಾಡ ಹಬ್ಬಗಳಾದ ಸ್ವತಂತ್ರ್ಯ ದಿನಾಚರಣೆ ಗಣರಾಜ್ಯೊತ್ಸವ ಕನ್ನಡ ರಾಜ್ಯೊತ್ಸವವೇ ಚಿರಪರಿಚಿತ ಹಬ್ಬದಾಚರಣೆಗಳು.

ಆದರೆ ಇಂದು ಅತ್ಯವಶ್ಯಕ ಹಾಗೂ ಅಖಂಡ ಭಾರತ ಶೋಷಣೆಮುಕ್ತವಾಗಿ, ಎಲ್ಲರಿಗೂ ಸಮಾನತೆ ನೀಡಿ ಸರ್ವರೂ ಸಮಾನರೆಂದು ಸಾರಿದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನಿಲುವಿನೊಂದಿಗೆ ಸ್ವಾತಂತ್ರ್ಯ, ಸಮಾನತೆ & ಸಹೋದರತ್ವ ಸಾರಿ ಭಾರತೀಯರ ಘನತೆಯ ಜೀವನಕ್ಕೆ ಮುನ್ನುಡಿ ಬರೆದ ದೇಶವೆಂದು ಮರೆಯದ ಹೆಮ್ಮೆಯ ಹಬ್ಬ ಅದುವೇ “ಸಂವಿಧಾನ ಸಮರ್ಪಣಾ ದಿನ”ದ ಹಬ್ಬ.

ಸಂವಿಧಾನ ಸಮರ್ಪಣೆಯಾದ ದಿನ ಇದೊಂದು ಐತಿಹಾಸಿಕ ಮತ್ತು ಭಾರತೀಯರಾದ ನಾವು ಸಾವಿರಾರು ವರ್ಷ ಭಯಭೀತರಾಗಿ, ಗೌರವಿಲ್ಲದ, ಗುಲಾಮಗಿರಿ ಸಂಸ್ಕೃತಿಯೊಂದಿಗೆ, ಅಶಿಕ್ಷಿತರಾಗಿ, ಅಧಿಕಾರವಿಲ್ಲದೆ, ಆರ್ಥಿಕ ಸ್ವಾವಲಂಬನೆ ಇಲ್ಲದಂತಹ “ಮನುಸ್ಮೃತಿ” ಎಂಬ ವಿಕೃತ ಮನಸ್ಥಿತಿಯ ಕಾನೂನು ಕಟ್ಟಳೆ ಮಾಡಿಕೊಂಡು ವಿಕೃತ ಮೆರೆದ ಅದೆಷ್ಟು ಸಂಪ್ರದಾಯವಾದಿಗಳಿಗೆ ಹೊಡೆತ ಕೊಟ್ಟ ದಿನ.

ಸಾವಿರಾರು ವರ್ಷ ಸರ್ವಾಧಿಕಾರ, ಅರಾಜಕತೆ ನಡೆಸಿದ ಸನಾತನಿಗಳ, ಪಟ್ಟಭದ್ರ ಹಿತಾಸಕ್ತಿಗಳ, ಮೂಲಭೂತವಾದಿಗಳ ಹುಟ್ಟಡಗಿಸಿ, ದೇಶದಲ್ಲಿ ಅವರನ್ನು (ಶೋಷಕರು) ಸೇರಿದಂತೆ ಶೋಷಿತವರ್ಗಗಳ ಬಹುಜನರಿಗೆ ನ್ಯಾಯ, ಘನಗೌರವ ಜೀವನ ನಡೆಸಲು ಅವಕಾಶ ಸೃಷ್ಟಿಸಿದ ದಿನ. ಮುಂದೆಂದು ದೇಶ ಮತ್ತೆ “ಮನುವಿನ ಮನುಶಾಸ್ತ್ರ” ದಡಿಗೆ ಹೋಗದಂತೆ ಜನಸಾಮಾನ್ಯರು ನೆಮ್ಮದಿಯಿಂದ ಬದುಕುವಂತೆ ದೇಶಕ್ಕೆ ಮಾರ್ಗಸೂಚಿ ನೀಡಿದ ದಿನ.

ಸಂವಿಧಾನ ಎಂದರೇನು.? ಅದರಲ್ಲೇನಿದೆ.? ಅದರ ಕರ್ತೃ ಯಾರು.? ಮತ್ತು ಹೇಗೆ ರಚಿತವಾಯಿತು.? ಸಂವಿಧಾನ ಎಂದರೇ ಮೀಸಲಾತಿಯೇ.? ಸಂವಿಧಾನ ಬದಲು ಮಾಡುವುದೆಂದರೇನು.? ಅದರಿಂದಾಗುವ ಲಾಭ ನಷ್ಟಗಳೇನು.?

ಸಂವಿಧಾನವನ್ನು ಸಾಧ್ಯವಾದಷ್ಟು ಆಡು ಭಾಷೆಯಲ್ಲೇಳಿದರೇ ಒಳಿತೆಂದು ಭಾವಿಸಿ ಚರ್ಚೆ ಪ್ರಾರಂಭ ಮಾಡುತ್ತಿದ್ದೇನೆ.

ಸಂವಿಧಾನ ಎಂದರೆ ಒಂದು ದೇಶ ವ್ಯವಸ್ಥಿತವಾಗಿ ನಡೆಯಲು ದೇಶದ ಎಲ್ಲಾ ಜನಾಂಗಗಳನ್ನು ಒಳಗೊಂಡಂತೆ ಪ್ರಾಣಿ-ಪಕ್ಷಿ,
ಗಿಡ-ಮರ, ನೀರು, ಭೂಮಿ, ಗಡಿ, ಭೌಗೋಳಿಕವಾಗಿ, ಶಿಕ್ಷಣ, ಆರೋಗ್ಯ, ವಸತಿ & ದೇಶದ ಆಡಳಿತ ನಡೆಸಲು ಬೇಕಾದಂತಹ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮಾಂಗ, ಎಲ್ಲವನ್ನೂ ಒಳಗೊಂಡಂತೆ ಕಾನೂನು ಕಟ್ಟಳೆಯಿಂದ ಭ್ರಾತೃತ್ವ ಭಾವನೆಯೊಂದಿಗೆ ಸ್ವಾತಂತ್ರ್ಯವಾಗಿ, ಸಮಾನವಾಗಿ, ನ್ಯಾಯಯುತವಾಗಿ ಎಲ್ಲವನ್ನೂ ಕ್ಷೇಮವಾಗಿರುಸುವ ವ್ಯವಸ್ಥಿತ, ವೈಜ್ಞಾನಿಕ & ವೈಚಾರಿಕವಾದ ಮಾರ್ಗಸೂಚಿಯೇ ಸಂವಿಧಾನ.

ಮಹಾಯುದ್ಧದ ನಂತರ ಇಡೀ ವಿಶ್ವವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಭಾರತ ದೇಶವನ್ನು ತನ್ನ ಆಧೀನದಲ್ಲಿಟ್ಟುಕೊಳ್ಳುವ ಶಕ್ತಿ ಬ್ರಿಟೀಷರಿಗಿಲ್ಲದಂತಾಯಿತು & ದೇಶದೆಲ್ಲೆಡೆ ಸ್ವಾತಂತ್ರ್ಯದ ಚಳುವಳಿಯೂ ಕೂಡಾ ಉಗ್ರರೂಪ ಪಡೆದುಕೊಂಡಿತ್ತು.

ಭಾರತದಲ್ಲಿ ಬ್ರಿಟೀಷ್ ಅಧಿಕಾರಿಗಳು ಕೆಲಸ ನಿರ್ವಹಿಸಲು ಅಸಹನೆ ತೋರುತ್ತಿದ್ದರು ಇಷ್ಟೆಲ್ಲದರ ಪರಿಣಾಮ ಅಂದಿನ ಲೇಬರ್ ಪಕ್ಷದ ಬ್ರಿಟನ್ ಪ್ರಧಾನಿ ಅಟ್ಲೆ ಯವರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾಗಿ ತಮ್ಮ ಸಂಸತ್ ಸಭೆಯಲ್ಲಿ ಘೋಷಿಸಿ ಭಾರತಕ್ಕೆ “ಕ್ಯಾಬಿನೆಟ್ ಮಿಷನ್ ಆಯೋಗ’ ವನ್ನು ಕಳಿಸಿದರು.

ಸದರಿ ಆಯೋಗವು 1946 ಮಾರ್ಚ್ 16 ರಂದು ‘ಭವಿಷ್ಯದ ಭಾರತದ ಸರ್ಕಾರಕ್ಕಾಗಿ ಒಂದು ಸಂವಿಧಾನ ರಚಿಸಲು ಸಂವಿಧಾನ ಸಭೆಯೊಂದನ್ನು ರಚಿಸುವ ಅಗತ್ಯವಿದೆ’ ಎಂದು ಘೋಷಿಸಿತು. ಅಂತೆಯೇ ಆ ಸಭೆ ಪ್ರಜಾಸತ್ತಾತ್ಮಕವಾಗಿರಬೇಕೆಂಬ ನಿಟ್ಟಿನಲ್ಲಿ ಚುನಾವಣೆ ನಡೆಸಲು ತಯ್ಯಾರಿ ದೇಶ ನಡೆಸುತ್ತದೆ.

ದೇಶ ವ್ಯವಸ್ಥಿತ ಆಡಳಿತ ನಡೆಸಲು ಸಂವಿಧಾನದ ಅವಶ್ಯಕತೆ & ಅನಿವಾರ್ಯತೆ ಎದುರಾದಾಗ ಸಂವಿಧಾನದ ಕರಡನ್ನು ರಚಿಸಲು ಇಲ್ಲಿನ ಸಂಪ್ರದಾಯವಾದಿಗಳು ವಿಶ್ವಜ್ಞಾನಿಯಾದ ಬಾಬಾ ಸಾಹೇಬರಿಂದ ಬರೆಸಲು ಜಾತಿಯ ಕಾರಣದಿಂದ ಒಪ್ಪದೇ, ಐರೋಪ್ಯ ರಾಷ್ಟ್ರದ ಸಂವಿಧಾನ ತಜ್ಞ ಐವರ್ ಜೆನ್ನಿಂಗ್ ಬಳಿ ಹೋಗುತ್ತಾರೆ. ಐವರ್ ಜೆನ್ನಿಂಗ್ ರವರ ಉತ್ತರ ಹೀಗಿದೆ. ನನ್ನ ಕೈಯಲ್ಲಿ ಇನ್ನೂ ಹಲವು ರಾಷ್ಟ್ರಗಳಿಗೆ ಸಂವಿಧಾನ ಬರೆದುಕೊಡುವ ಶಕ್ತಿ ಇದೆ. ಆದರೆ ಭಾರತದಂತಹ ವೈವಿಧ್ಯಮಯ ರಾಷ್ಟ್ರಕ್ಕೆ ಸಂವಿಧಾನದ ಕರಡನ್ನು ಬರೆದು ಕೊಡುವಷ್ಟು ಜ್ಞಾನಶಕ್ತಿ ನನ್ನಲ್ಲಿಲ್ಲಾ. ಇಂತಹ ಶಕ್ತಿ ಇರುವುದು ಇಡೀ ವಿಶ್ವದ ಒಬ್ಬರಿಗೆ ಮಾತ್ರ, ಅವರು ನಿಮ್ಮ ದೇಶದಲ್ಲೇ ಇದ್ದಾರೆ. ಅಲ್ಲಿ ಹೋಗಿ ಎಂದು ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ಹೆಸರನ್ನು ಸೂಚಿಸುತ್ತಾರೆ. ಅಲ್ಲಿಂದ ಬಂದಂತಹ ತಂಡ ಸಬರಮತಿಯಲ್ಲಿ ಮಹಾತ್ಮ ಗಾಂಧಿಯವರ ಬೇಟಿ ಮಾಡಿ ಅಲ್ಲಿ ನಡೆದಂತಹ ಘಟನೆ ತಿಳಿಸಿದಾಗ ಗಾಂಧೀಜಿಯವರು ಕೂಡಾ ಬಾಬಾ ಸಾಹೇಬರ ಹೆಸರನ್ನೇ ಸೂಚಿಸುತ್ತಾರೆ.

ಇಷ್ಟಾದ ನಂತರ ಸಂವಿಧಾನ ರಚಿಸಲು ಸಂವಿಧಾನ ಸಭೆಯನ್ನು ಪ್ರಾರಂಭಿಸುವ ಉದ್ದೇಶದಿಂದ 1946 ಜುಲೈನಲ್ಲಿ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ 15 ಮಹಿಳೆಯರನ್ನು ಸೇರಿದಂತೆ 296 ಸದಸ್ಯರು ಆಯ್ಕೆಯಾಗುತ್ತಾರೆ. ಅಂದಹಾಗೆ ಆ ಸಭೆಗೆ ಭಾರತದ ಪಶ್ಚಿಮದ ತುದಿ ಬಾಂಬೆ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಅಂಬೇಡ್ಕರರು ಕಾಂಗ್ರೆಸ್ಸಿನ ಅವಿಚ್ಛಿನ್ನ ವಿರೋಧದಿಂದ ಸೋಲಬೇಕಾಗುತ್ತದೆ. ಆದರೂ ಪೂರ್ವದ ದೂರದ ಬಂಗಾಳದಿಂದ ಅಲ್ಲಿಯ ಮುಸ್ಲಿಂ ಲೀಗ್ ನ ಪರಿಶಿಷ್ಟ ಜಾತಿಯ ನಾಯಕ ಜೋಗೇಂದ್ರನಾಥ ಮಂಡಲ್‍ರವರ ರಾಜೀನಾಮೆ & ಬೆಂಬಲದ ಮೂಲಕ ಅವರು ಮತ್ತೆ ಸಂವಿಧಾನ ಸಭೆಗೆ ಆರಿಸಿಬರುವಲ್ಲಿ ಸಫಲರಾಗುತ್ತಾರೆ.

ಈ ಸಂವಿಧಾನ ಸಭೆ ಮೊದಲಿಗೆ 1946 ಡಿಸೆಂಬರ್ 6 ರಲ್ಲಿ ನಡೆಯುತ್ತದೆ. ಮತ್ತು 29 ಆಗಸ್ಟ್ 1947 ರಲ್ಲಿ 7 (ಏಳು) ಜನ ಸದಸ್ಯರನ್ನೊಳಗೊಂಡಂತೆ ಸಂವಿಧಾನ ಕರಡು ಸಮಿತಿಯನ್ನು ರಚಿಸಲಾಗುತ್ತದೆ. ಸಮಿತಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ.

ಕರಡು ಸಮಿತಿಯ 6 ಸದಸ್ಯರೂ ಒಂದಿಲ್ಲೊಂದು ವೈಯಕ್ತಿಕ ಕಾರಣದಿಂದ ಎಲ್ಲರೂ ಸಮಿತಿಯಿಂದ ದೂರ ಉಳಿಯುತ್ತಾರೆ. ಆದರೂ ಬಾಬಾ ಸಾಹೇಬರು ಸಂಪೂರ್ಣ ಜವಾಬ್ದಾರಿ ಹೊತ್ತು 1948 ಜನವರಿ 21 ರಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಿಗೆ ಸಂವಿಧಾನದ ಕರಡನ್ನು ರಚಿಸಿ ಒಪ್ಪಿಸುತ್ತಾರೆ. ಅದೇ ವರ್ಷ ಫೆಬ್ರವರಿ 26 ರಂದು ಸಂವಿಧಾನದ ಕರಡನ್ನು ಜನಾಭಿಪ್ರಾಯಕ್ಕೆ ಇಡಲಾಗುತ್ತದೆ ಅದಾದ ನಂತರ 1948 ನವಂಬರ್ 5 ರಂದು ಸಂವಿಧಾನ ರಚನಾ ಸಭೆಯ ಮುಂದೆ ಕರಡನ್ನು ಮಂಡಿಸಿದರು.

ಸಂವಿಧಾನ ರಚನಾ ಸಭೆಯಲ್ಲಿ 296 ಆಯ್ಕೆಯಾದ ಸದಸ್ಯರಿದ್ದರು. ಮುಸ್ಲಿಂಲೀಗ್ ನ ಕೆಲ ಸದಸ್ಯರು ಸಂವಿಧಾನ ಸಭೆಗೆ ಹಾಜರಾಗಲು ನಿರಾಕರಿಸಿದರು. ಸಂವಿಧಾನದ ಕರಡನ್ನು 11 ಅಧಿವೇಶನದಲ್ಲಿ 165 ದಿನಗಳ ಚರ್ಚಿಸಿ 7635 ತಿದ್ದುಪಡಿಗೆ ಸೂಚಿಸಲಾಗುತ್ತದೆ. ಅಂತಿಮವಾಗಿ 365 ವಿಧಿ, 8 ಅನುಸೂಚಿ 22 ಭಾಗಗಳಲ್ಲಿರಿಸಲಾಯಿತು. 1949 ನವಂಬರ್ 26ರಂದು 284 ಸದಸ್ಯರ ರುಜುವಿನೊಂದಿಗೆ ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನದ ಕರಡನ್ನು ಅಂಗೀಕರಿಸಲಾಗುತ್ತದೆ.

ಬರೋಬ್ಬರಿ 2 ವರ್ಷ 11 ತಿಂಗಳು 17 ದಿನಗಳ ಸುಧೀರ್ಘವಾದ ಕಾರ್ಯದಲ್ಲಿ ಬಾಬಾ ಸಾಹೇಬರು 18 ಗಂಟೆಗಳ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ.

ಇಂತಹ ಬೃಹತ್ ಸಂವಿಧಾನ ತನ್ನ ಮೂಲತತ್ವವನ್ನು ಪ್ರಸ್ತಾವನೆಯಲ್ಲೇ ಅರ್ಥಪೂರ್ಣವಾಗಿ ತಿಳಿಸುತ್ತದೆ.
ಪ್ರಸ್ತಾವನೆ ಪ್ರಾರಂಭವಾಗುವುದೇ “”ಭಾರತೀಯ ಜನತೆಯಾದ ನಾವು ಎಂದು.
ಭಾರತೀಯರೆಲ್ಲರಿಗೂ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ “ನ್ಯಾಯವನ್ನು”,
ವಿಚಾರ ಅಭಿವ್ಯಕ್ತಿ ನಂಬಿಕೆ ಧರ್ಮ ಮತ್ತು ಉಪಾಸನೆಯ “ಸ್ವಾತಂತ್ರ್ಯ”ವನ್ನು,
ದೇಶದ ಏಕತೆ ಮತ್ತು ಸಮಗ್ರತೆಗೆ ಎಲ್ಲರಲ್ಲಿ “ಭ್ರಾತೃತ್ವದ” ಭಾವನೆಯನ್ನು ಮೂಡಿಸುವ ಸಂಕಲ್ಪವನ್ನು ಹೊಂದಿದೆ ಎಂದು ಹೇಳುತ್ತದೆ. ಇದರ ಅರ್ಥ ಭಾರತದ ಪ್ರತಿಯೊಬ್ಬ ನಾಗರಿಕರ ಘನತೆಯ ಜೀವನಕ್ಕಾಗೇ ರೂಪುಗೊಂಡದ್ದು ಸಂವಿಧಾನ.
ಇಂತಹ ವಿಶ್ವದ ಶ್ರೇಷ್ಠ ಸಂವಿಧಾನವು ಇಂದಿಗೆ 71 ವರ್ಷಗಳ ಹಿಂದೆ ಅಂದರೆ 1949 ನವಂಬರ್ 26ರಂದು ನಮಗೆ ನಾವೇ ಶಾಸನಬದ್ಧವಾಗಿ ಅರ್ಪಿಸಿಕೊಂಡಿದ್ದೇವೆ.

ಸಂವಿಧಾನದ ಕರ್ತೃ ಯಾರೆಂದು ಇಂದಿಗೂ ಕೂಡ ಹಲವಾರು ಪಟ್ಟಭದ್ರ ಹಿತಾಸಕ್ತಿಗಳು ಸನಾತನಿಗಳು ದೇಶದಲ್ಲಿ ಗೊಂದಲ ಸೃಷ್ಟಿಸುತ್ತಿವೆ.

ಇದಕ್ಕೆ ಪೂರಕವಾಗುವಂತೆ ಸಂವಿಧಾನ ಸಭೆಯ ಅಂತಿಮ ದಿನದಲ್ಲಿ ಸದಸ್ಯರಾದ ಟಿಟಿ ಕೃಷ್ಣಮಾಚಾರಿ ಯವರ ಹೇಳಿಕೆ ಹೀಗಿದೆ, ನನ್ನನ್ನೂ ಸೇರಿದಂತೆ 7 ಜನ ಸಂವಿಧಾನ ಕರಡು ಸಮಿತಿಯಲ್ಲಿದ್ದೆವು. ಎಲ್ಲರೂ ತಮ್ಮ ವೈಯಕ್ತಿಕ/ ಆರೋಗ್ಯ/ ರಾಜಕಾರಣದ ಕಾರಣಗಳಿಂದ ಸಂವಿಧಾನ ಕರಡು ರಚನೆ ಪ್ರಕ್ರಿಯೆಯಿಂದ ಹೊರಗುಳಿದೆವು. ಸಂವಿಧಾನದ ಕರಡನ್ನು ಸಂಪೂರ್ಣವಾಗಿ ಬಾಬಾಸಾಹೇಬರೇ ನಿರ್ವಹಿಸಿದರು. ಈ ಸಂಪೂರ್ಣ ಯಶಸ್ಸು ಬಾಬಾಸಾಹೇಬರಿಗೆ ಸಲ್ಲಬೇಕು ಎಂದೇಳುತ್ತಾರೆ.

ಮದ್ರಾಸಿನ ಮುನಿಸ್ವಾಮಿ ಪಿಳ್ಳೈ ಎಂಬುವವರು “ಪರಿಶಿಷ್ಟ ಜಾತಿಯು ನಂದನಾರ್, ತಿರುಪಳನಾಳ್ವರ್, ತಿರುವಳ್ಳುವರ್ ಹೀಗೆ ಶ್ರೇಷ್ಠ ಸಂತರನ್ನು, ಜ್ಞಾನಿಗಳನ್ನು ನೀಡಿದೆ. ನಿಸ್ಸಂಶಯವಾಗಿ ಡಾ.ಅಂಬೇಡ್ಕರರು ಅಂತಹವರ ಸಾಲಿಗೆ ಸೇರ್ಪಡೆಯಾಗುತ್ತಾರೆ ಎಂದೇಳುತ್ತಾರೆ.
ಸೇಠ್ ಗೋವಿಂದದಾಸ್ ರವರು “ಡಾ.ಅಂಬೇಡ್ಕರರನ್ನು ‘ವರ್ತಮಾನ ಕಾಲದ ಮನು’ ಎನ್ನಬಹುದು” ಎನ್ನುತ್ತಾರೆ.

ಎಂ.ಅನಂತಶಯನಂ ಅಯ್ಯಂಗಾರ್ ಎನ್ನುವವರಂತೂ “ಯಾವ ವ್ಯಕ್ತಿ ನಮ್ಮನ್ನು ಟೀಕಿಸುವ ಮತ್ತು ಅನುಮಾನದಿಂದ ನೋಡುವ ಉದ್ದೇಶದಿಂದ ಸಭೆಗೆ ಬಂದರೋ, ಕಡೆಗೆ ಅವರೇ ಸಂವಿಧಾನದ ಹೊಣೆಹೊತ್ತುಕೊಂಡರು ಮತ್ತು ಅದನ್ನು ರಚಿಸಿದರು” ಎಂದರು!

ಹಾಗೆ ಪಂಡಿತ್ ಠಾಕೂರ್ ದಾಸ್ ಭಾರ್ಗವ ಎಂಬುವವರು ಮಾತನಾಡುತ್ತಾ “ಡಾ.ಅಂಬೇಡ್ಕರರು ನಮ್ಮ ಹೃದಯಗಳಲ್ಲಿ ಇಂದು ಉನ್ನತ ಸ್ಥಾನ ಅಲಂಕರಿಸಿದ್ದಾರೆ” ಎನ್ನುವ ಮೂಲಕ ತಮ್ಮ ಅಭೂತಪೂರ್ವ ಪ್ರೀತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಡೆಯದಾಗಿ ಶ್ರೀ ಹೆಚ್.ಜೆ.ಖಾಂಡೇಕರ್ ಎಂಬುವವರ ಹೇಳಿಕೆಯನ್ನು ದಾಖಲಿಸುವುದಾದರೆ “ಮಾನ್ಯರೆ, ನಾವು ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ. ಹಾಗೆ ಈ ಕಾನೂನನ್ನು ನಾನು “ಮಹಾರ್ ಕಾನೂನು” ಎನ್ನಲಿಚ್ಚಿಸುತ್ತೇನೆ ಯಾಕೆಂದರೆ ಡಾ.ಅಂಬೇಡ್ಕರರು ಮಹಾರ್ ಸಮುದಾಯದವರು ಮತ್ತು ಮುಂದೆ 1950 ಜನವರಿ 26ರಂದು ಈ ಕಾನೂನು ಉದ್ಘಾಟನೆಗೊಂಡಾಗ ನಾವು ಮನುವಿನ ಕಾನೂನಿನ ಬದಲು ಮಹಾರರ ಕಾನೂನನ್ನು ಹೊಂದುತ್ತೇವೆ. ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ, ಆದರೆ ಮಹಾರರ ಕಾನೂನು, ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ… ನನಗೆ ಆ ಭರವಸೆ ಇದೆ”. ಎಂದೇಳುತ್ತಾರೆ. ಈಗ ಸಂವಿಧಾನ ರಚಿಸಿದವರ್ಯಾರೆಂದು ತಿಳಿಯುತ್ತದೆ.

ಈ ಎಲ್ಲಾ ಸಂವಿಧಾನ ಸಭೆಯ ನಡಾವಳಿಗಳನ್ನು ಭಾರತ ಸರ್ಕಾರ, ಕರ್ನಾಟಕ ಸರ್ಕಾರ & ಆಯಾ ರಾಜ್ಯ ಸರ್ಕಾರಗಳು ಆಯಾ ಭಾಷೆಗಳಲ್ಲೆ ಸಂಪುಟ ರೂಪದಲ್ಲಿ ಹೊರತಂದಿವೆ.

ಬಾಬಾ ಸಾಹೇಬರು ಸಂವಿಧಾನ ರಚಿಸುವ ಕಾರ್ಯದಲ್ಲಿ ಪಾಲ್ಗೊಳ್ಳದಿದ್ದರೇ ಅವರ ವೈದ್ಯರೇ ಹೇಳುವಂತೆ ಅವರ ಆಯಸ್ಸು ಕನಿಷ್ಠ ಇನ್ನೂ 15 (ಹದಿನೈದು) ವರ್ಷ ಹೆಚ್ಚಾಗುತ್ತಿತ್ತು. ಅಂದರೆ ಬಾಬಾ ಸಾಹೇಬರು ಒಂದು ಕಡೆ ಈ ದೇಶಕ್ಕಾಗಿ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿದರೆ, ಇನ್ನೊಂದು ಕಡೆ
ಈ ದೇಶಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸಿ ದೇಶಪ್ರೇಮ ಮೆರೆದವರು.

ಸಂವಿಧಾನ ಬದಲು ಮಾಡುತ್ತೇವೆಂಬ ಈಗಿನ ಕೆಲ ಹೇಳಿಕೆಗಳು ಯಾವ ಉದ್ದೇಶಕ್ಕಾಗಿ ಎಂದು ಸ್ವಲ್ಪ ಯೋಚಿಸೋಣಾ..

ಈ ದೇಶದಲ್ಲಿ ಸಂಪ್ರದಾಯವಾದಿಗಳು ಸುಮಾರು 2500 ವರ್ಷ ತಮ್ಮ ಅರಾಜಕತೆ ಮೆರೆದು, ತಾವೇ ಸೃಷ್ಟಿಸಿಕೊಂಡ ಮನುಸ್ಮೃತಿ ಕಾನೂನನ್ನು 97% ರಷ್ಟು ಜನರ ಮೇಲೆ ಏರಿ ವ್ಯವಸ್ಥಿತ ರೀತಿಯಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆ ಸೃಷ್ಟಿಸಿ, ತನ್ನ ಅಧೀನದಲ್ಲಿ ಈ ದೇಶವನ್ನು ಕಟ್ಟಿಹಾಕಿ, ಅಸಹಾಯಕತೆ ಮರೆಯುವಂತೆ ಮಾಡಿ ಕೇವಲ ಒಂದು ವರ್ಗ ತಾನೇ ಶ್ರೇಷ್ಠ ಎಂಬ ಹುಂಬತನ ಪ್ರದರ್ಶಿಸಿತ್ತು. ಆ ಹುಂಬತನದ ಪ್ರದರ್ಶನ ಮರೆಯಾಗಿ ಇಂದಿಗೆ 71 ವರ್ಷವಾಯಿತು. ಈಗ ಅದೇ ವರ್ಗಕ್ಕೆ ಮತ್ತೆ ತನ್ನಡಿಯಲ್ಲಿ ಗುಲಾಮಗಿರಿ ಸಂಸ್ಕೃತಿ ನಡೆಸುವ ಆಸೆಯಾಗಿದೆ, ಆ ಸಂಸ್ಕೃತಿಯನ್ನು ಮತ್ತೆ ಮತ್ತೆ ಅದೇ ಶೋಷಿತ ಸಮುದಾಯಗಳ ಮೇಲೇರುವ ಆಸೆ. ಇಲ್ಲಸಲ್ಲದ ಆಮಿಷವೊಡ್ಡಿ, ಷಡ್ಯಂತ್ರದಿಂದ ಸಂಚು ರೂಪಿಸುತ್ತಿದೆ.

ಅರೆಜ್ಞಾನಿಗಳಾದ ಶೋಷಿತ ಸಮುದಾಯಗಳು ಮತ್ತೆಮತ್ತೆ ಅವರ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.
ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರನ್ನು ಮೃಗೀಯ ರೀತಿಯಲ್ಲಿ ಬಳಸಿಕೊಂಡು ಬಂದವರು ಯಾರು.? ಎಂಬ ಪ್ರಶ್ನೆ ಒಮ್ಮೆ ನಾವೇ ಹಾಕಿಕೊಂಡರೆ ಮತ್ತೆ ನಾವು ಅವರ ಷಡ್ಯಂತ್ರಕ್ಕೆ ಬಲಿಯಾಗಲು ಸಾಧ್ಯವಿಲ್ಲಾ.

ಇಂದಿನ ಶೋಷಿತ ಸಮುದಾಯಗಳ ಕನಿಷ್ಠ ಗೌರವಯುತ, ಅಧಿಕಾರಯುಕ್ತ, ಆರ್ಥಿಕ ಸಬಲತೆ, ಶೈಕ್ಷಣಿಕ ಬೆಳವಣಿಗೆಗೆ ಕಾರಣವಾದದ್ದು ಇದೇ ಬಾಬಾಸಾಹೇಬರು ಕೊಟ್ಟ ಸಂವಿಧಾನ. ಅದು ಹೇಗೆ ಎಂದು ಕೇಳುವುದಾದರೇ, ಒಮ್ಮೆ ಇದರ ವಿಮರ್ಶೆ ನಡೆಸಿ ಬಿಡೋಣಾ.

ಉದಾಹರಣೆ:- ಸಂವಿಧಾನದ ಪೂರ್ವ ಮತ್ತು ಸಂವಿಧಾನದ ನಂತರ ಶಿಕ್ಷಿತರ ತಳಸಮುದಾಯಗಳ (97%) ಸರಾಸರಿ ಎಷ್ಟು?
ಉದ್ಯೊಗದಲ್ಲಿ ತಳಸಮುದಾಯಗಳ (97%) ಪಾಲೆಷ್ಟು?
ರಾಜ್ಯಾಧಿಕಾರದಲ್ಲಿ ತಳಸಮುದಾಯಗಳ (97%) ಪಾಲೆಷ್ಟು?
ಆರ್ಥಿಕ ಸಬಲೀಕರಣದಲ್ಲಿ ತಳಸಮುದಾಯಗಳ (97%) ಪಾಲೆಷ್ಟು?
ತಳಸಮುದಾಯಗಳಲ್ಲಿ ಭೂ ಒಡೆತನ ಎಷ್ಟು.?
ಸಾಮಾಜಿಕ ಸಮಾನತೆಯಲ್ಲಿ ಬಹುಜನರಲ್ಲಾದ ಬದಲಾವಣೆ ಏನು? ಉತ್ತರವೇನು ಗೊತ್ತೇನು..

ಸಂವಿಧಾನ ಪೂರ್ವದಲ್ಲಿ 2500 ವರ್ಷಗಳಿಂದ ಶೋಷಿತವರ್ಗಗಳ 97% ಜನರಲ್ಲಿ ಎಲ್ಲಾ ಕ್ಷೇತ್ರದಲ್ಲಿ ಶೇಕಡವಾರು ತೆಗೆದುಕೊಂಡರೆ ಪ್ರಾತಿನಿಧ್ಯ 1% ಗಿಂತಲೂ ಕಡಿಮೆ. ಸಂವಿಧಾನ ಜಾರಿಯಾದ ನಂತರ ಕೇವಲ 71 ವರ್ಷದಲ್ಲಿ 97 % ಶೋಷಿತ ಬಹುಜನರ ಪ್ರಾತಿನಿಧ್ಯ ಎಲ್ಲಾ ಕ್ಷೇತ್ರದಲ್ಲೂ ಶೇಕಡ 50 ಕ್ಕೂ ಹೆಚ್ಚು.

ಈ ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಹೇಳುವುದಾದರೆ ಬಾಬಾಸಾಹೇಬರು ಸದಾ ಹೇಳುತ್ತಿದ್ದರು “ಇತಿಹಾಸ ತಿಳಿಯದವರು, ಇತಿಹಾಸ ಸೃಷ್ಟಿಸಲಾರರು” ಎಂದು. ನಮಗೆ ಇತಿಹಾಸ ತಿಳಿಯಲಿಲ್ಲಾ ನಾವು ಇತಿಹಾಸವನ್ನು ಮರೆತೆವು.

ಮತ್ತದೇ ಪುನರಾವರ್ತನೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಪೂರಕವಾಗಿ 2 ಉದಾಹರಣೆ ನೋಡೋಣಾ ಇತಿಹಾಸದೊಂದಿಗೆ ತುಲನೆ ಮಾಡೋಣಾ.

ಉದಾಹರಣೆ1:-ಈ ದೇಶವನ್ನು ಯುರೋಪಿಯನ್ನರು ಎಂದಿಗೂ ಗೆಲ್ಲಲು ಸಾಧ್ಯವಾಗಲಿಲ್ಲಾ ಕಾರಣ ಅವರಲ್ಲಿ ಅಷ್ಟು ಶಕ್ತಿ ಸಾಮರ್ಥ್ಯ ಇರಲಿಲ್ಲಾ. ಆದರೇ ಗೆಲ್ಲಲು ಅವರಲ್ಲಿದ್ದ ಒಂದೇ ಒಂದು ಅಸ್ತ್ರ ಎಂದರೆ ಶಿಸ್ತು. ಆ ಶಿಸ್ತಿಗೆ ಈ ದೇಶದ ತಳ ಸಮುದಾಯಗಳು ಆಕರ್ಷಿತರಾಗಿ ಯುರೋಪಿಯನ್ನರ ಸೈನ್ಯ ಸೇರಿ ಈ ದೇಶವನ್ನು ಈ ದೇಶದ ಜನರಿಂದಲೇ ಸೋಲಿಸಿದ ಕೀರ್ತಿ ಯುರೋಪಿಯನ್ನರಿಗೆ ಸಲ್ಲಿಸಬೇಕಾಗುತ್ತದೆ. (ಬಾ ಬ ಭಾ ಸಂ 12)

ಉದಾಹರಣೆ 2:- ಈ ದೇಶವನ್ನಾಳಿದ್ದು ಭಾರತೀಯರ ಮನಸ್ಸಿನಲ್ಲಿರುವುದು ಬ್ರಿಟಿಷರಿಂದ ಎಂದು. ಆದರೆ ಅದು ಸುಳ್ಳು ಈ ದೇಶವನ್ನು ಸಂಪೂರ್ಣ ಆಳಿದ್ದು “ಈಸ್ಟ್ ಇಂಡಿಯಾ”ಎಂಬ ಒಂದು ಕಂಪನಿ ಅಂದರೆ ಖಾಸಗಿ ಸಂಸ್ಥೆ. ಖಾಸಗಿ ಸಂಸ್ಥೆಯ ಒಡೆತನಕ್ಕೆ ದೇಶ ಸಿಕ್ಕರೆ ಪರಿಸ್ಥಿತಿ ಏನಾಗಬಹುದೆಂದು, ಬಾಬಾಸಾಹೇಬರು ಅಂದೇ ಊಹಿಸಿದ್ದರು. ಈ ಕಾರಣಕ್ಕಾಗಿ ಬಾಬಾಸಾಹೇಬರು ದೇಶದ ಉದ್ಯಮಗಳು ಈ ದೇಶದಲ್ಲಿ ರಾಷ್ಟ್ರೀಕರಣವಾಗಬೇಕೆಂಬ ಎಂಬ ವಾದವನ್ನು ಮಂಡಿಸುತ್ತಿದ್ದರು.

ಈಗ ಯೋಚಿಸಿ ಉದಾಹರಣೆಗಳೊಂದಿಗೆ ಇಂದಿನ ಪರಿಸ್ಥಿತಿಯನ್ನು ತುಲನೆಮಾಡಿ ರಾಜ್ಯಾಧಿಕಾರ ಇದು ಯಾರ ಕೈಲಿದೆ ಮತ್ತು ಅಂತಹ ಅಧಿಕಾರ ಅಂದು ಯಾರ ಕೈಲಿತ್ತು.? ಅವರು ಈ ದೇಶ ಗೆಲ್ಲಲು ಯಾರನ್ನು ಬಳಸಿಕೊಂಡರು ? ಇಂದು ಈ ಅಧಿಕಾರ ಉಳಿಸಿಕೊಳ್ಳಲು ಯಾರನ್ನು ಬಳಸಿಕೊಳ್ಳುತ್ತಿದ್ದಾರೆ.? ಇಷ್ಟರಮಟ್ಟಿಗೆ ಅರಿವಾದರೆ ಬಹುಜನರಿಗೆ ಒಳಿತು.

ಉದಾಹರಣೆ 2 ರೊಂದಿಗೆ ಇಂದಿನ ದೇಶದ ಪರಿಸ್ಥಿತಿ ತುಲನೆ ಮಾಡಿದರೆ, ಅಂದು ಈಸ್ಟ್ ಇಂಡಿಯಾ ಕಂಪನಿಯಾದರೆ, ಇಂದು ಅಂಬಾನಿ, ಅದಾನಿಗಳಂತಹ ಕೈಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ನಲಗುತ್ತಿದೆ. ಆರ್ಥಿಕವಾಗಿ ದುರ್ಬಲಗೊಳಿಸಿದರೇ ಮನುಷ್ಯ ಬದುಕಿದ್ದು ಸತ್ತಂತೆ ಎನ್ನುವ ಪಾಠ ಮನುವಾದಿಗಳು ಅರಿತಿದ್ದಾರೆ. ಈ ಆರ್ಥಿಕ ದುಸ್ಥಿತಿ ಮತ್ತೊಮ್ಮೆ ತಳಸಮುದಾಯಗಳನ್ನು ಶಕ್ತಿಹೀನ ಮಾಡುತ್ತಿದೆ. ನಂತರದ ದಿನದಲ್ಲಿ ಆರ್ಥಿಕತೆಯ ದುರ್ಬಲತೆ ಮಾನವನನ್ನು ಗುಲಾಮಗಿರಿಗೆ ತಳ್ಳುತ್ತದೆ.

ಯಾವ 2500 ವರ್ಷಗಳ ಸನಾತನಿಗಳ ಸರ್ವಾಧಿಕಾರ 70 ವರ್ಷ ಅಡಗಿತ್ತೊ, ಮತ್ತೆ ನಮ್ಮ ಅಜಾಗರೂಕತೆಯಿಂದ ಸಂಪ್ರದಾಯವಾದಿಗಳು ಮೆರೆಯುವ ಕಾಲ ಸನ್ನಿಹಿತವಾಗುತ್ತಿದೆ ಎಂಬ ಭಯವಂತೂ ಕಾಡುತ್ತಿದೆ.

ಅಂದು ಭಾರತ ರಕ್ಷಿಸಲು ಬ್ರಿಟಿಷರ ವಿರುದ್ಧ ಹೋರಾಡಲು ಹೋರಾಟ ರೂಪಿಸಿದ ಹಾಗೆ,
ಇಂದು ಭೀಮಾ ಭಾರತವನ್ನುಳಿಸಲು ಬಾಬಾಸಾಹೇಬರ ಅನುಯಾಯಿಗಳು, ಬಾಬಾಸಾಹೇಬರ ಋಣ ಉಂಡು ಗುಳ್ಳೆ ನರಿಗಳ ಹಾಗೇ ಅಡಗಿರುವ ಶೋಷಿತರು ಮೈಕೊಡವಿ ದೇಶದ ಒಳಗಿರುವ ಈಸ್ಟ್ ಇಂಡಿಯಾ ಸಂತಾನಿಗಳ, ಸಂಪ್ರದಾಯವಾದಿಗಳ, ಮನುವಾದಿಗಳ ವಿರುದ್ಧ ಜನಾಂದೋಲನ ರೂಪಿಸಿ ಸಂವಿಧಾನ ಉಳಿಸಿಕೊಂಡು ಜಾತ್ಯಾತೀತ ರಾಷ್ಟ್ರ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ.

ಈ ದೇಶದ ಸಂವಿಧಾನ ಕೇವಲ ಒಂದು ವರ್ಗಕ್ಕೆ ಅಲ್ಲ ಬರೆದದ್ದು ಅನುಮಾನವಿದ್ದರೆ ಓದಿ ನಂತರ ನಿಮ್ಮ ಅನುಮಾನ ಪರಿಹರಿಸಿಕೊಳ್ಳಿ ಎಂದು ಬಾಬಾಸಾಹೇಬರು ಹೇಳಿದ್ದರು.

ಯಾವ ಸಂವಿಧಾನ ದೇಶವನ್ನು ಸುಭದ್ರವಾಗಿ ಕಟ್ಟಿ, ಬಹುಜನರ ಜೀವನವನ್ನು ರೂಪಿಸಿದ ಸಂವಿಧಾನ ಎನೆಂಬುದನ್ನು ತಿಳಿಯದೆ ಸಂಪ್ರದಾಯವಾದಿಗಳ, ಮನುಸ್ಮೃತಿಯ ಮುಖವಾಡವನ್ನು ಹೊತ್ತ ಗ್ರಂಥಗಳ ದಾಸರಾಗಿ ಸಂವಿಧಾನದ ವಿರುದ್ಧ ಮಾತನಾಡುವ ನವಮೂಲಭೂತವಾದಿಗಳಿಗೆ, ನವಸಂಪ್ರದಾಯವಾದಿಗಳಿಗೆ ಸಾಮಾನ್ಯನೊಬ್ಬ ತಿಳಿಹೇಳುವ ಜರೂರು ಈಗಿದೆ.

ಅದೇನೆಂದರೆ ಬಾಬಾಸಾಹೇಬರು ನೀಡಿದ ಸಂವಿಧಾನ ಆಶಯದಿಂದಲೇ ನೀವು ಈ ದೇಶದ ರಾಜ್ಯಾಧಿಕಾರ ಹಿಡಿದದ್ದು, ನೀವು ಆ ರಾಜ್ಯಾಧಿಕಾರ ಹಿಡಿಯಲು ಅದೇ ಸಂವಿಧಾನ ನಮಗೆಲ್ಲಾ ನಿಮ್ಮನ್ನು ಆಯ್ಕೆಮಾಡುವ ಮತದಾನದ ಹಕ್ಕನ್ನು ನೀಡಿದ್ದು, ಸಂವಿಧಾನದ ಬಗ್ಗೆ ಮಾತನಾಡುವ ಮೊದಲು ಅದರಲ್ಲೇನಿದೆ ಎಂದು ಓದಿ ತಿಳಿಯಿರಿ.

ಇಲ್ಲವಾದರೆ ನೀವು ಆ ಸ್ಥಾನಕ್ಕೆ ಶೋಭೆ ತರುವುದಿಲ್ಲಾ. ಮತ್ತೆ ನಿಮ್ಮ ಮನುವಾದಿ ಮನಸ್ಥಿತಿಗಳು ಸಂವಿಧಾನ ಎಂದರೆ ಮೀಸಲಾತಿ, ದಲಿತರಿಗೆ ಎಂಬ ಕೀಳು ಮನಸ್ಥಿತಿಯ ಅಪಪ್ರಚಾರ ಮಾಡುವುದನ್ನು ಬಿಡಬೇಕು. ಮೀಸಲಾತಿ ಇರುವುದು ಕೇವಲ ಸಂವಿಧಾನದ 1 ವಿಧಿ (16 ನೇ ವಿಧಿ) ಅಷ್ಟೇ, ಅದರಲ್ಲೇನಿದೆ ಎಂಬುದನ್ನು ತಿಳಿದು ನಡೆಯಿರಿ ಎಂದು.

ಈ ದೇಶದ ಬಹುಜನರು ಬಹುಸಂಖ್ಯಾತ ಶೋಷಿತರ ಜೀವನವನ್ನು ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಕಟ್ಟಿಕೊಟ್ಟ ಸಂವಿಧಾನದ ಪ್ರತಿಯನ್ನು ಪ್ರತಿಯೊಬ್ಬ ಭಾರತೀಯ ತಮ್ಮ ಮನೆಗಳಲ್ಲಿಟ್ಟು ತಮ್ಮ ಮನೆಮಂದಿಗೆಲ್ಲ ಸಂವಿಧಾನದ ಪರಿಚಯ ಮಾಡಿಸುವ ಜವಾಬ್ದಾರಿ ಶಿಕ್ಷಿತ ಶೋಷಿತ ಸಮುದಾಯದ ಮೇಲಿದೆ. ಆ ಕೆಲಸ ಮಾಡದಿದ್ದರೆ ಮತ್ತೆ ವಿಕೃತ ಮೆರೆಯುವ ಸಂಪ್ರದಾಯವಾದಿಗಳಿಗೆ ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಬನ್ನಿ ಬಾಬಾಸಾಹೇಬರ ಸಮಸಮಾಜದ ಕಲ್ಪನೆ ಇರುವ ಸಂವಿಧಾನವನ್ನು ಬಹುಜನರು ಜಾಗೃತರಾಗಿ ರಕ್ಷಿಸುವ ಕೆಲಸ ಮಾಡಬೇಕಿದೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ ಎಂಬ ಪ್ರಾಯೋಗಿಕ ಅಂಶವನ್ನು ಈಗಾಗಲೇ 70 ವರ್ಷದಲ್ಲಿ ಸಂವಿಧಾನ ನಮಗೆ ತಿಳಿಸಿದೆ.

ಸಂವಿಧಾನ ಬದಲಾದರೇ ದಲಿತರಿಗಷ್ಟೆ ಸಂಕಷ್ಟ ಎಂದು, ಸಂವಿಧಾನ ಬದಲಾದರೇ ಹಿಂದುಳಿದ ವರ್ಗಗಳಿಗಷ್ಟೆ ಸಂಕಷ್ಟ ಎಂದು, ಸಂವಿಧಾನ ಬದಲಾದರೇ ಧಾರ್ಮಿಕ ಅಲ್ಪಸಂಖ್ಯಾತರಿಗಷ್ಟೆ ಸಂಕಷ್ಟ ಎನ್ನುವ ಉಡಾಫೆ ಬಿಟ್ಟು ಶೋಷಿತರೆಲ್ಲರೂ ಒಟ್ಟಾಗಿ ಸಂವಿಧಾನದ ಪರ ನಿಲ್ಲುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಅವಶ್ಯಕವಾಗಿದೆ.

ಜೈ ಭೀಮ್


ಎಚ್. ಎನ್ ಮಂಜುನಾಥ್ ಹೆತ್ತೇನಹಳ್ಳಿ.
ಮಾಜಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ತುಮಕೂರು ವಿಶ್ವವಿದ್ಯಾನಿಲಯ. ತುಮಕೂರು.
ಮೊ: 9916222281

ತುಮಕೂರು: 9 ಸಾವಿರ ವೈದ್ಯ ಸಿಬ್ಬಂದಿಗೆ ಕೊರೊನಾ ಲಸಿಕೆ ಕೊಡಲು ರೆಡಿಯಾದ ಇಲಾಖೆ

ತುಮಕೂರು: ಜಿಲ್ಲೆಯಲ್ಲಿರುವ 90000 ವೈದ್ಯ ಸಿಬ್ಬಂದಿಗೆ ಕೊರೊನಾ ಲಸಿಕೆ ಕೊಡಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ.

ಜಿಲ್ಲೆಯಲ್ಲಿರುವ ಖಾಸಗಿ ಹಾಗೂ ಸರ್ಕಾರಿ ವೈದ್ಯರು, ದಾದಿಯರ ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಖಾಸಗಿ ಕ್ಲಿನಿಕ್ ಗಳ ವೈದ್ಯರಿಗೂ ಕರೆ ಮಾಡಿ ಅವರ ಹೆಸರುಗಳನ್ನು ಬರೆದುಕೊಳ್ಳಲಾಗಿದೆ.

ವೈದ್ಯರ ಬಳಿಕ ಪ್ರಾಮುಖ್ಯತೆಯನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿದೆ. ವೈದ್ಯ ಸಿಬ್ಬಂದಿಗೆ ಲಸಿಕೆ ನೀಡಿದ ಕೂಡಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ.

ಲಸಿಕೆ ಸಂಗ್ರಹಿಸಿಕೊಳ್ಳಲು ಎಲ್ಲ‌ ರೀತಿಯ ಸಿದ್ಧತೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ಮಾಡಿಕೊಳ್ಳಲಾಗಿದೆ.

ಜಿಲ್ಲೆಗೆ ಮೊದಲ ಹಂತದಲ್ಲಿ ಎಷ್ಟು ಸಾವಿರ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಲಸಿಕೆಯ ಲಭ್ಯತೆಯ ಆಧಾರದಲ್ಲಿ ಮೊದಲು ಅಥವಾ ಎರಡು ಹಂತಗಳಲ್ಲಿ ಲಸಿಕೆ ನೀಡಲಾಗುತ್ತದೆ.

ಕೊರೋನಾಗಿಂತ ಕೋಮುವಾದ ಅಪಾಯಕಾರಿ: ಎಸ್ ಜಿ ಸಿದ್ದರಾಮಯ್ಯ

Publicstory


ಬೆಂಗಳೂರು: ‘ಕೋಮುವಾದ ಕೊರೋನಾಗಿಂತಲೂ ಅಪಾಯಕಾರಿಯಾದ ವೈರಸ್’ ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.

‘ಅವಧಿ’ ಹಮ್ಮಿಕೊಂಡಿದ್ದ ಎಸ್ ಜಿ ಸಿದ್ದರಾಮಯ್ಯನವರ ‘ಬಿಜ್ಜಳ ನ್ಯಾಯ’ ಹಾಗೂ ‘ದಕ್ಕದ ದಾರಿಯಲ್ಲಿ’ ಕವನ ಸಂಕಲನಗಳ ಆನ್ಲೈನ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ದೇಶಕ್ಕೆ ಶತಮಾನಗಳಿಂದ ಅಂಟಿಕೊಂಡುಬಂದಿರುವ ಕೋಮುವಾದವೇ ಅತ್ಯಂತ ವಿಷಕಾರಿಯಾದ ರೋಗ. ಅದನ್ನು ದಾಟುವುದೇ ಇಂದಿನ ಮುಖ್ಯ ಸವಾಲು. ಅದರಿಂದ ಮುಕ್ತವಾಗದ ಹೊರತು ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಅವರು ವಿಷಾದಿಸಿದರು. ಯಾರು ಈ ಕೋಮುವಾದಕ್ಕೆ ಬಲಿಯಾಗುತ್ತಿದ್ದಾರೋ ಅವರೇ ಈ ಕೋಮುವಾದದ ಮುನ್ನಡೆಗೆ ಕಾಲಾಳುಗಳಾಗಿರುವ ದುರಂತವನ್ನು ನಾವು ಕಾಣುತ್ತಿದ್ದೇವೆ ಎಂದರು.

ಖ್ಯಾತ ವಿಮರ್ಶಕರಾದ ಎಂ ಎಸ್ ಆಶಾದೇವಿ ಅವರು ಮಾತನಾಡಿ ಎಸ್ ಜಿ ಸಿದ್ದರಾಮಯ್ಯನವರ ವ್ಯಕ್ತಿತ್ವ ಹಾಗೂ ಕಾವ್ಯ ಎರಡೂ ನಿಷ್ಠುರ ಗುಣವನ್ನು ಹೊಂದಿವೆ. ಮನುಷ್ಯರನ್ನು ಮನುಷ್ಯರನ್ನಾಗಿ ಉಳಿಸಿಕೊಳ್ಳಬೇಕಾಗಿರುವ ಈ ಕಾಲದಲ್ಲಿ ಸಿದ್ಧರಾಮಯ್ಯನವರ ಕಾವ್ಯದ ತಾಯ್ತನ ಕಾಡುತ್ತದೆ ಎಂದರು.

ವಿಮರ್ಶಕ ರಾಮಲಿಂಗಪ್ಪ ಟಿ ಬೇಗೂರು ಅವರು ಮಾತನಾಡಿ ಎಸ್ ಜಿ ಸಿದ್ದರಾಮಯ್ಯ ಅವರ ಜನಪರ, ಜೀವಪರ ದೃಷ್ಟಿಕೋನ ಅವರ ಬರವಣಿಗೆಯ ಮುಖ್ಯ ಕೇಂದ್ರವಾಗಿದೆ. ಓದುಗನೂ ಕವಿತೆಯನ್ನು ಅನುಭವಿಸುವಂತೆ ಸಿದ್ದರಾಮಯ್ಯ ಅವರು ಬರೆಯುತ್ತಾರೆ ಅವರಿಗೆ ಅಪರಿಮಿತದ ಹಂಬಲ ಮತ್ತು ಓದುಗನಿಗೆ ಅರ್ಥದ ತೊಡಕಾಗಬಾರದು ಎನ್ನುವ ಕಾಳಜಿಯಿದೆ ಎಂದರು.

‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಮಾತನಾಡಿ ‘ಬಿಜ್ಜಳ ನ್ಯಾಯ’ದ ಮೂಲಕ ಸಿದ್ದರಾಮಯ್ಯನವರು ಸುಳ್ಳುಗಳ ಕೋಟೆಯಿಂದ ಆತನ್ನು ಬಿಡಿಸಿಕೊಂಡು ಹೊರತಂದಿದ್ದಾರೆ. ಬಿಜ್ಜಳ ಜನಪರವಾಗಿದ್ದ ಎನ್ನುವುದನ್ನು ಮರೆಸುವ ಕುತಂತ್ರವನ್ನು ಸಿದ್ದರಾಮಯ್ಯನವರ ಕಾವ್ಯ ಬಯಲು ಮಾಡುತ್ತದೆ ಎಂದರು.