Tuesday, May 5, 2026
Google search engine
Home Blog Page 178

ಕಾಯ್ದೆಗಳ ತಿದ್ದುಪಡಿ: ತುಮಕೂರಿನಲ್ಲಿ ದನಿ ಎತ್ತಿದ ದೇವೇಗೌಡರು

Publicstory


Tumkuru: ರೈತ ವಿರೋಧಿಯಾದ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸುಧಾರಣ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ ಜಾತ್ಯತೀತ ಜನತಾ ದಳ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ತಿದ್ದುಪಡಿ ಕಾಯ್ದೆಗಳಿಂದ ರೈತರು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ರೈತರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ಪ್ರತಿಭಟನಾಕಾರರು ದೂರಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ ಭೂಸುಧಾರಣ ಕಾಯ್ದೆ ತಿದ್ದುಪಡಿಯಿಂದ ಬಂಡವಾಳಗಾರರು ಕೃಷಿ ಕ್ಷೇತ್ರಕ್ಕೆ ಕಾಲಿಡುತ್ತಾರೆ. ನಿಜವಾದ ರೈತರು ಅಂಚಿಗೆ ತಳ್ಳಲ್ಪಡುತ್ತಾರೆ. ಇದರಿಂದ ಕೃಷಿ ನಾಶವಾಗಲಿದೆ. ಕೃಷಿಕರು ಇನ್ನಿಲ್ಲವಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಭೂಸುಧಾರಣ ಕಾಯ್ದೆ ತಿದ್ದುಪಡಿಯಿಂದ ಬಂಡವಾಳಗಾರರು ಮತ್ತು ಕಾರ್ಪೋರೇಟ್ ಕುಳಗಳು ನೂರಾರು ಏಕರೆ ಭೂಮಿಯನ್ನು ಖರೀದಿಸಿ ರೈತರನ್ನು ಕೂಲಿಗಳನ್ನಾಗಿ ಇಟ್ಟುಕೊಳ್ಳುತ್ತಾರೆ. ಇದರಿಂದ ರೈತರು ತೀವ್ರ ಸಮಸ್ಯೆಗೆ ಗುರಿಯಾಗುತ್ತಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ಕಾಯ್ದೆಗಳನ್ನ ತರುತ್ತಿವೆ ಎಂದು ದೂರಿದರು.

ಎಪಿಎಂ ಕಾಯ್ದೆ ತಿದ್ದುಪಡಿಯೂ ಕೂಡ ಸಣ್ಣ, ಮಧ್ಯಮ ವರ್ತಕರು ಮತ್ತು ರೈತರಿಗೆ ಸಮಸ್ಯೆಯನ್ನು ತಂದೊಡ್ಡಲಿದೆ. ಈ ವಿಭಾಗ ಇಕ್ಕಟ್ಟಿಗೆ ಸಿಲುಕಲಿದೆ. ಇದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಕಾರ್ಮಿಕ ಕಾನೂನುಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಇದರಿಂದ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗುತ್ತದೆ. ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ ಮಾಲಿಕರ ಪರವಾದ ನೀತಿಗಳಿಂದಾಗಿ ಅವರ ಲಾಭ ಪಡೆಯುತ್ತಾರೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಗೌರಿಶಂಕರ್, ವೀರಭದ್ರಯ್ಯ, ಬೆಮೆಲ್ ಕಾಂತರಾಜು, ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತ ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ದೇವರಾಜ ಅರಸು ಕೊಡುಗೆ ಅಪಾರ: ಕುಲಪತಿ ಸಿದ್ದೇಗೌಡ

Publicstory


Tumkuru: ರಾಜ್ಯದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಕೊಡುಗೆ ಅಪಾರ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಕೋಶ ಹಾಗೂ ಡಿ. ದೇವರಾಜ ಅರಸು ಅಧ್ಯಯನ ಪೀಠ ಗುರುವಾರ ಆನ್ಲೈನ್ ಮೂಲಕ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತಿಯಲ್ಲಿ ಮಾತನಾಡಿದರು.

ಅರಸು ಹಿಂದುಳಿದ ವರ್ಗಗಳ ದನಿಯಾಗಿದ್ದರು. ಸಾಮಾಜಿಕ ನ್ಯಾಯ, ಭೂಸುಧಾರಣೆಗಳಂತಹ ಕ್ರಾಂತಿಕಾರಿ ಕ್ರಮ ಕೈಗೊಂಡರು. ಅಂಥವರನ್ನು ಸ್ಮರಿಸಬೇಕು ಎಂದರು.

ಸಂವಿಧಾನದ ಸವಲತ್ತುಗಳು ಎಲ್ಲರಿಗೂ ದೊರಕುವಂತೆ ಆಗಬೇಕೆಂಬುದು ಅರಸು ಅವರ ಏಕೈಕ ಕನಸಾಗಿತ್ತು. ಅವರ ಯೋಜನೆಗಳ ಸಮರ್ಪಕ ಅನುಷ್ಠಾನ ಇಂದಿನ ಅಗತ್ಯವಾಗಿದೆ ಎಂದರು.

ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಜಿ. ಆರ್. ಅರಸ್ ಮಾತನಾಡಿ, ಮಲಹೊರುವ ಪದ್ಧತಿ, ಜೀತಪದ್ಧತಿಗಳಂತಹ ಅನಿಷ್ಟಗಳನ್ನು ಹೋಗಲಾಡಿಸಿ ಉಳುವವನೇ ಹೊಲದೊಡೆಯ ಕಾನೂನನ್ನು ಜಾರಿಗೆ ತಂದು ಭೂಸುಧಾರಣೆಗೆ ಕಾರಣರಾದ ದೇವರಾಜ ಅರಸು ಸಮಾನತೆಗಾಗಿ ಅವಿರತವಾಗಿ ಶ್ರಮಿಸಿದರು ಎಂದರು.

ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಡಿ. ದೇವರಾಜ ಅರಸು ಅಧ್ಯಯನ ಪೀಠದ ನಿರ್ದೇಶಕ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಸ್ವಾಗತಿಸಿದರು. ಹಿಂದುಳಿದ ವರ್ಗಗಳ ಕೋಶದ ಸಂಯೋಜಕ ವೆಂಕಟರೆಡ್ಡಿ ರಾಮರೆಡ್ಡಿ ವಂದಿಸಿದರು.

ಡಾ ರಾಜ್ ಸಿಕ್ಕರು..

0

ಜಿ.ಎನ್.ಮೋಹನ್


ಅದು ಹೀಗಾಯ್ತು..

ಗೊರೂರು ರಾಮಸ್ವಾಮಿ ಐಯ್ಯಂಗಾರ್ ರು ತೀರಿಕೊಂಡಿದ್ದರು.

ರಾತ್ರಿಯಾಗಿತ್ತು. ‘ಪ್ರಜಾವಾಣಿ’ಯಿಂದ ಅದನ್ನು ವರದಿ ಮಾಡಲು ಹೋಗಿ ಇನ್ನೇನು ಮತ್ತೆ ಕಾರು ಏರುವವನಿದ್ದೆ.

ನನ್ನ ಪತ್ರಕರ್ತ ಮೂಗಿಗೆ ಇಲ್ಲಿ ಎಲ್ಲವೂ, ಏನೋ ಸರಿ ಇಲ್ಲ ಅನಿಸಿತು. ಒಂದಷ್ಟು ಸರಬರ, ಕ್ಷಣಗಳಲ್ಲಿ ಹೆಚ್ಚಾದ ಪೊಲೀಸ್ ಸಿಬ್ಬಂದಿ. ಅವರ ನಡುವೆ ಪಿಸುಮಾತುಗಳು.

ಗೊರೂರರ ವರದಿ ಫೈಲ್ ಮಾಡಲು ಡೆಡ್ ಲೈನ್ ತೀರಾ ಹತ್ತಿರದಲ್ಲಿತ್ತು. ಅದರ ನಡುವೆಯೂ ನಾನು ರಿಸ್ಕ್ ತೆಗೆದುಕೊಳ್ಳಲು ರೆಡಿ ಆದೆ.

ಏನಿದೆ ಎಂದು ಗೊತ್ತಿಲ್ಲದಿದ್ದರೂ ‘waiting for godot’ ಥರಾ ಕಾಯುತ್ತ ನಿಂತೆ.

ನನ್ನ ಸುದ್ದಿ ನಾಸಿಕ ಕೈಕೊಟ್ಟಿರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಸದ್ದಿಲ್ಲದಂತೆ ಹತ್ತಾರು ಕಾರು ಬಂದವು. ಅದರಲ್ಲಿ ಡಾ ರಾಜಕುಮಾರ್!

ಸಾಹಿತಿಗಳ ಸಂಗದಲ್ಲಿ ಇದ್ದವರು ಡಾ ರಾಜ್. ಹಾಗಾಗಿ ಅವರು ಅಂತಿಮ ದರ್ಶನಕ್ಕೆ ಬರುವುದರಲ್ಲಿ ತುಂಬಾ ವಿಶೇಷವೇನಿರಲಿಲ್ಲ. ಆದರೆ ಆ ದಿನ, ಹಾಗೆ, ಆ ಹೊತ್ತಲ್ಲಿ ದರ್ಶನಕ್ಕೆ ಬಂದದ್ದರಲ್ಲಿ ವಿಶೇಷವಿತ್ತು.

ಏಕೆಂದರೆ ‘ಡಾ ರಾಜ್ ರನ್ನು ನಮ್ಮ ಮುಂದೆ ಕರೆತಂದು ತೋರಿಸಿ’ ಎಂದು ಜನ ಬೀದಿಗಿಳಿದಿದ್ದರು.

ಕೆಂಪೇಗೌಡ ರಸ್ತೆಯಲ್ಲಿ ಕಲ್ಲು ತೂರಾಟ ನಡೆದುಹೋಗಿತ್ತು. ಬಸ್ ಓಡಾಡದಂತೆ ಮಾಡಿದ್ದರು. ರಾಜ್ ಮನೆ ಮುಂದೆ ಅಂತೂ ಘೋಷಣೆ ಕೂಗುತ್ತಿದ್ದ ಜನಸ್ತೋಮ.

‘ಡಾ ರಾಜ್ ಅವರಿಗೂ ಮಕ್ಕಳಿಗೂ ಜಗಳವಾಗಿದೆಯಂತೆ. ನೊಂದ ಅಣ್ಣಾವ್ರು ಮನೆ ಬಿಟ್ಟು ಹೋಗಿಬಿಟ್ಟಿದ್ದಾರೆ. ಎಲ್ಲಿದ್ದಾರೆ ಎನ್ನುವುದೇ ಗೊತ್ತಿಲ್ಲ’ ಎನ್ನುವ ಸುದ್ದಿ ಬಾಯಿಂದ ಬಾಯಿಗೆ ಹರಡಿ ಎರಡು ದಿನಗಳ ಕಾಲ ಬೆಂಗಳೂರು ಬಾಣಲೆಯ ಮೇಲೆ ಕೂತಂತಿತ್ತು.

ಡಾ ರಾಜ್ ಬದುಕಿಲ್ಲ ಎನ್ನುವ ಆತಂಕವೇ ಎಲ್ಲರದ್ದೂ.

ಆ ನಡುವೆಯೇ ಇದು ಜರುಗಿದ್ದು. ಎರಡು ದಿನಗಳ ಕಾಲ ರಾಜ್ ಏನಾಗಿದ್ದಾರೆ ಎನ್ನುವುದೇ ಗೊತ್ತಿಲ್ಲದಿರುವಾಗ ಡಾ ರಾಜ್ ಗೊರೂರರ ಮನೆಗೆ ನೇರವಾಗಿ ಬಂದರು. ಅವರಿಗೆ ನಮಸ್ಕರಿಸಿದರು.

ನಾನು ನೇರ ರಾಜ್ ಕುಮಾರ್ ಅವರ ಬಳಿಗೆ ಹೋದೆ. ‘ಪಕ್ಕದ ರೂಮಿಗೆ ಬನ್ನಿ ಮಾತಾಡಬೇಕು’ ಎಂದೆ.

ಅವರು ಬಂದರು. ನೇರಾ ನೇರ ಯಾವ ಪೀಠಿಕೆಯೂ ಇಲ್ಲದೆ ‘ಎಲ್ಲಿಗೆ ಹೋಗಿದ್ರಿ?’ ಎಂಬ ಪ್ರಶ್ನೆ ಇಟ್ಟೆ.

ಡಾ ರಾಜ್ ಮಾತನಾಡುತ್ತಾ ಹೋದರು. ನನಗೂ ಪ್ರಶ್ನೆ ಬೇಕಾದಷ್ಟಿತ್ತು. ಯಾಕೆ ಎಂದು ಗೊತ್ತಿಲ್ಲ. ಡಾ ರಾಜ್ ಕೂಡಾ ನನ್ನೊಡನೆ ಬೇಕಾದಷ್ಟು ಮಾತನಾಡಲು ರೆಡಿ ಇದ್ದರು.

ಆದರೆ ಪತ್ರಿಕೆಯ ಡೆಡ್ ಲೈನ್ ರೆಡಿ ಇರಲಿಲ್ಲ.

ಹಾಗಾಗಿ ಹತ್ತು ನಿಮಿಷ ಮಾತನಾಡಿದವನೇ ಅಣ್ಣಾವ್ರ ಕೈಕುಲುಕಿ ‘ಸರ್ ನೀವು ಇನ್ನೂ ಇರಬೇಕು’ ಎಂದು ಹೇಳಿ ಕಚೇರಿಗೆ ಹೊರಟೆ.

ಇದ್ದ ಹತ್ತು ನಿಮಿಷದಲ್ಲಿ ಬರೆದುಕೊಟ್ಟ ಡಾ ರಾಜ್ ಜೊತೆಗಿನ ಮಾತು ಮಾರನೆಯ ದಿನ ‘ಪ್ರಜಾವಾಣಿ’ಯ ಮೊದಲ ಪುಟದಲ್ಲಿ ಹೀಗೆ ಕಾಣಿಸಿಕೊಂಡಿತು.

ಕೆರಳಿದ್ದ ಬೆಂಗಳೂರು ಮತ್ತೆ ಉಸಿರುಬಿಟ್ಟು ಎಂದಿನಂತೆ ಹೆಜ್ಜೆ ಹಾಕತೊಡಗಿತು.

7 ವರ್ಷದ ಹೆಣ್ಣು ಚಿರತೆ ಸೆರೆ

ಹುಲಿಯೂರುದುರ್ಗ: ಹೋಬಳಿ ಹುನುಗನಹಳ್ಳಿ ಗ್ರಾಮದಲ್ಲಿ ಅನೇಕ‌ ದಿನಗಳಿಂದ ಜನರನ್ನು ಭಯಭೀತಗೊಳಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

ಶಿವರಾಮು ಅವರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು

ಬೋನಿಗೆ ಏಳು ವರ್ಷದ ಹೆಣ್ಣು ಚಿರತೆ ಸೆರೆ ಸಿಕ್ಕಿದೆ. ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ದಲಿತ ಸಂಘಟನೆಗಳ ಒಕ್ಕೂಟಕ್ಕೆ ನೇಮಕ

ತುಮಕೂರು: ದಲಿತ ಸಂಘಟನೆಗಳ ಒಕ್ಕೂಟ(ರಿ) ತುಮಕೂರು ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ ದಿನಾಂಕ 15/8/2020 ರಂದು ನಗರದ ಅಂಬೇಡ್ಕರ್ ಭವನ ದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳನ್ನು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷರಾದ ಡಾಕ್ಟರ್ ಎಂ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ : ಎಂ.ರಾಮಯ್ಯ, ಅಧ್ಯಕ್ಷರಾಗಿ : ರಾಜಣ್ಣ ಯಲದಬಾಗಿ, ಉಪಾಧ್ಯಕ್ಷರಾಗಿ : ಎನ್‌.ಎಸ್.ಸಿದ್ದೇಶ್ ನೇಗಲಾಲ, ಎಸ್.ಎಲ್. ಹನುಮಂತರಾಯಪ್ಪ, ಪ್ರಧಾನ ಕಾರ್ಯದರ್ಶಿ : ನಟರಾಜು.ಜಿ.ಎಲ್. ಖಜಾಂಚಿ : ಎಲ್.ನರಸಿಂಹಮೂರ್ತಿ ಹೆಬ್ಬಾಕ, ಸಹ ಕಾರ್ಯದರ್ಶಿ : ಎಂ.ಪ್ರಭಣ್ಣ, ಸಂಘಟನಾ ಕಾರ್ಯದರ್ಶಿ : ಸಿ.ಎಲ್.ಮಂಜುನಾಥ್, ನಗರ ಅಧ್ಯಕ್ಷ : ಪಿ.ಸಂಜಯ್, ಸಂಘಟನಾ ಕಾರ್ಯದರ್ಶಿ : ಟಿ.ಎಸ್. ಮಾರುತಿ ಅವರನ್ನು ಆಯ್ಕೆ ಮಾಡಲಾಯಿತು.

ಡಾಕ್ಟರ್ ಎಂ.ವೆಂಕಟಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಲ್ಲಿ ಸರ್ಕಾರಗಳು ಸೇವೆ ಮಾಡುವ ನೆಪದಲ್ಲಿ ಶೋಷಿತರು ಶತಮಾನಗಳಿಂದ ಉಳಿಸಿಕೊಂಡು ಬಂದ ಜಮೀನು ಕಿತ್ತುಕೊಳ್ಳಲು ಭೂಸುಧಾರಣೆ ಕಾಯ್ದೆಯಂತಹ ಕಾನೂನುಗಳನ್ನು ಜಾರಿ ಮಾಡಿವೆ.ಇದರ ವಿರುದ್ಧ ಎಲ್ಲ ಸಂಘಟನೆಗಳು ಜೊತೆಗೂಡಿ ಭೂಮಿ ಉಳಿಸುವ ಹೋರಾಟಕ್ಕೆ ಸಜ್ಜಾಗಬೇಕು ಎಂದರು. ಪ್ರಕಟಣೆ ನಟರಾಜು ಜಿ ಎಲ್ ದಲಿತ ಸಂಘಟನೆಗಳ ಒಕ್ಕೂಟ (ರಿ) ಪ್ರಧಾನ ಕಾರ್ಯಧರ್ಶಿಗಳು ಫೋನ್ : 9741717700.

ಥೇಟ್ ನನ್ನಂತೆಯೇ..!l

0

ಜಿ.ಎನ್.ಮೋಹನ್


‘ಹೌದೇನೇ ಉಮಾ ಹೌದೇನೇ ಜಗವೆನ್ನುವುದಿದು ನಿಜವೇನೇ ?’ -ಇವು ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಜನಪ್ರಿಯ ಸಾಲುಗಳು.

ಯಾಕೋ ಗೊತ್ತಿಲ್ಲ ಆಗೀಗ ಈ ಸಾಲುಗಳು ನನ್ನ ಮನದೊಳಗೆ ಗುಂಯ್ ಗುಡುತ್ತಲೇ ಇರುತ್ತದೆ.

ಹಾಗಿರುವಾಗ ಈ ಸಾಲುಗಳು ನಿಜವೇನೋ ಎನ್ನುವಂತೆ ಉಮಾ ಮುಕುಂದ್ ತಮ್ಮ ಕವಿತೆಗಳೊಂದಿಗೆ ರಂಗ ಪ್ರವೇಶಿಸಿಯೇಬಿಟ್ಟರು.

ಮುಕುಂದ್, ಮುಕುಂದ್ ಮತ್ತು ಮುಕುಂದ್ ಕುಟುಂಬದಲ್ಲಿ ಎ ಎನ್ ಮುಕುಂದ್ ಹಾಗೂ ಪ್ರತೀಕ್ ಮುಕುಂದ್ ಇಬ್ಬರೂ ಕ್ಯಾಮೆರಾ ಕಣ್ಣಿನ ಮೂಲಕ ಜಗತ್ತನ್ನು ಅಳೆದವರು. ಆ ಕಾರಣಕ್ಕಾಗಿಯೇ ಸಾಕಷ್ಟು ಬೆಳಕನ್ನು ಪಡೆದವರು.

ಈ ಇಬ್ಬರೂ ಕ್ಯಾಮೆರಾ ಕಣ್ಣಿನಿಂದ ಜಗತ್ತನ್ನು ನೋಡುತ್ತಿರುವ ವೇಳೆ ಸದ್ದಿಲ್ಲದೇ ಕಾವ್ಯ ಕಣ್ಣಿನ ಮೂಲಕ ಜಗತ್ತನ್ನು ನೋಡಲು ಹೊರಟವರು ಉಮಾ ಮುಕುಂದ್.

ಖ್ಯಾತ ಛಾಯಾಗ್ರಾಹಕರಾದ ಎ ಎನ್ ಮುಕುಂದ್ ಅವರು ತಮ್ಮ ಕೃತಿಯಲ್ಲಿ ಹೇಗೆ ಉಮಾ ತಮ್ಮ ಫೋಟೋ ಯಾನದ ಭಾಗವಾಗಿದ್ದರು ಹಾಗೂ ಅದರ ಯಶಸ್ಸಿನ ಪಾಲುದಾರರು ಎನ್ನುವುದನ್ನು ಹೇಳಿದ್ದಾರೆ.

ಅಷ್ಟು ಮಾತ್ರ ಎಂದು ನಾವೆಲ್ಲರೂ ಅಂದುಕೊಂಡಿರುವಾಗ ಉಮಾ ಕವಿತೆಗಳ ಮೂಲಕ ಮಾತನಾಡಲಾರಂಭಿಸಿದರು. ತಮ್ಮ ಬದುಕಿನ ಐದು ದಶಕದ ನಂತರ. ಆಗಲೇ ಜಿ ಎಸ್ ಎಸ್ ಕವಿತೆಗೆ ಆದ ಆಶ್ಚರ್ಯ ನನಗೂ ಆದದ್ದು.

ಉಮಾ ಮುಕುಂದ್ ಅವರ ಕವಿತೆಗಳು ಫೇಸ್ ಬುಕ್ ನಲ್ಲಿ ತುಂಬು ಸಂಕೋಚದಿಂದ ಇಣುಕಲು ಆರಂಭಿಸಿದಾಗ ನಾನು ‘ಅವಧಿ’ಗಾಗಿ ಅವರ ಒಂದಷ್ಟು ಕವಿತೆಗಳನ್ನು ಓದುವ ಅವಕಾಶ ದೊರೆಯಿತು.

ಅಷ್ಟೇ..! ನಂತರ ಅವರ ಕವಿತೆಗಳ ಗುಂಗಿನಲ್ಲಿ ಸಿಕ್ಕಿಕೊಂಡೆ.

ಯಾಕೆಂದರೆ ಅವರು ‘ಥೇಟ್ ನನ್ನಂತೆಯೇ..’

ಅವರ ಕವಿತೆಗಳು ಸಹಜವಾಗಿ ಸರಾಗವಾಗಿ ಎಲ್ಲರ ಮಧ್ಯೆ ಓಡಾಡುತ್ತದೆ. ಸೊಪ್ಪು ಕೊಳ್ಳುತ್ತದೆ, ಕೆಪುಚಿನೊಗೆ ಆರ್ಡರ್ ಮಾಡುತ್ತದೆ, ಸಾರನ್ನವೇ ಮುಗಿದಿಲ್ಲದಿರುವಾಗ ವಡೆ ಪಾಯಸ ಬರುತ್ತಿರುವುದನ್ನು ಗೊತ್ತು ಮಾಡಿಕೊಳ್ಳುತ್ತದೆ.

ಹತ್ತು ರೂಪಾಯಿಗೆ ಮೂರು ನಿಂಬೆಹಣ್ಣು ಕೊಳ್ಳಲು ಇಡೀ ಬುಟ್ಟಿಯನ್ನೇ ತಲೆಕೆಳಗು ಮಾಡುತ್ತದೆ, ಅಬ್ಬರದ ನಗುವಿನ ಮಧ್ಯೆ ಭಿಕ್ಕುಗಳನ್ನು ಹುಡುಕುತ್ತದೆ, ಸುಬ್ಬಮ್ಮನ ಅಂಗಡಿಯ ಸಾರಿನ ಪುಡಿ, ಡಿಮಾನಿಟೈಸೇಷನ್ ನಂತರದ ಜಿ ಎಸ್ ಟಿ..

…ಹೀಗೆ ಉಮಾ ಮುಕುಂದ್ ಅವರ ಕವಿತೆ ಕಿರೀಟ ಸಿಕ್ಕಿಸಿಕೊಂಡು ಅಂಬಾರಿಯಲ್ಲೇ ಪಯಣ ಮಾಡುವ ಅನಿವಾರ್ಯತೆ ಸೃಷ್ಟಿಸಿಕೊಳ್ಳದೆ.. ಹವಾಯಿ ಚಪ್ಪಲಿಯನ್ನೇ ಮೆಟ್ಟಿ, ಬೇಕೆಂದಕಡೆ ಬಿಂದಾಸಾಗಿ ಸಂಚಾರ ಹೊರಟುಬಿಡುತ್ತದೆ. ಇವರ ಕವಿತೆಗೆ ಕಾಲು ದಾರಿಯೂ ಗೊತ್ತು, ಹೈವೇಯೂ ಗೊತ್ತು,

ಬಿ ವಿ ಕಾರಂತರು ಸಖತ್ ಮೂಡ್ ನಲ್ಲಿರುವಾಗ ಒಮ್ಮೆ ನನ್ನೊಡನೆ ಮಾತನಾಡುತ್ತ ‘An Actor is like a beggar’s Bag’ ಎಂದಿದ್ದರು. ‘ಒಬ್ಬ ಕಲಾವಿದನಾದವನು ಭಿಕ್ಷುಕನ ಜೋಳಿಗೆಯಂತಿರಬೇಕು. ಅದರಲ್ಲಿ ಸಿಕ್ಕ ಸಿಕ್ಕದ್ದೆಲ್ಲಾ ತುಂಬಿರಬೇಕು. ಅವು ಅರ್ಥಪೂರ್ಣವಾಗಿ ಆಚೆ ಬರಬೇಕು’ ಎನ್ನುತ್ತಿದ್ದರು.

ಹಾಗೆ.. ಥೇಟ್ ಹಾಗೆಯೇ ಉಮಾ ಕವಿತೆಗಳು. ಇಲ್ಲಿ ಎಲ್ಲವೂ ಇವೆ. ಕಂಡದ್ದು, ಕೇಳಿದ್ದು, ಸುತ್ತಿದ್ದು, ನಕ್ಕಿದ್ದು, ಹರಟಿದ್ದು.. ಈ ಎಲ್ಲವೂ ನಿಧಾನವಾಗಿ ಐದು ದಶಕದ ಸೋಸುವಿಕೆಗೆ ಒಳಪಟ್ಟು ಕವಿತೆಗಳಾಗಿ ಚಿಮ್ಮಿವೆ.

ಬಿ ಎ ವಿವೇಕ ರೈ ಅವರು ‘ಬಿಚ್ಚಬೇಕಾದ ಕಟ್ಟಡಗಳು, ಆಲಿಸಬೇಕಾದ ದನಿಗಳು’ ಎನ್ನುವ ಅಂಕಣ ಬರಹದಲ್ಲಿ ಮನಸ್ಸುಗಳನ್ನು ಅರಿಯಲು ಬಿಚ್ಚಬೇಕಾದ ಕಟ್ಟಡಗಳೇನು ಎಂದು ವಿವರಿಸಿದ್ದರು.

ಉಮಾ ಇಲ್ಲಿ ತಾವೇ ತಾವಾಗಿ ತಮ್ಮ ಕವಿತೆಗಳ ಮೂಲಕ ಆಲಿಸಬೇಕಾದ ದನಿಗಳನ್ನು ಮುಂದಿಟ್ಟಿದ್ದಾರೆ.

ಕವಿತೆಯೆಂಬ ಕ್ಯಾಮೆರಾದಲ್ಲಿ ಕಾಣುವುದಕ್ಕೂ, ಕ್ಯಾಮೆರಾದಲ್ಲಿ ಕಾಣುವ ಲೋಕಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕ್ಯಾಮೆರಾ ಕಂಡ ಲೋಕದ ಮೂಲಕ ತಮ್ಮ ಜಗತ್ತು ಕಟ್ಟಿಕೊಂಡ ಉಮಾ ಮುಕುಂದ್ ಕವಿತೆಯೆಂಬ ಕ್ಯಾಮೆರಾ ಮೂಲಕ ಹೊಸದನ್ನೇ ನಮಗೆ ಕಾಣಿಸುತ್ತಿದ್ದಾರೆ.

ಇವರ ಕವಿತೆಗಳು ಕಾಫಿ ಡೇಯ ಕೆಪುಚಿನೊ ಅಲ್ಲ , ನಮ್ಮ ಮನಸ್ಸು ಸದಾ ಹಾತೊರೆಯುವ ಫಿಲ್ಟರ್ ಕಾಫಿ….

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಡ್ಡಿ: ಪ್ರತಿಭಟನೆ

ಚಿಕ್ಕನಾಯಕನಹಳ್ಳಿ: ಬೆಳಗಾವಿ ಜಿಲ್ಲಾ, ಬೆಳಗಾವಿ ತಾಲೂಕು ಪೀರನವಾಡಿಯಲ್ಲಿ ಸ್ವತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಸ್ಥಾಪನೆ ವೇಳೆ ನಡೆದಿರುವ ಪೊಲೀಸ್ ನವರ ವರ್ತನೆಯನ್ನು ಖಂಡಿಸುತ್ತೇವೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳ ಬಳಗ ಒತ್ತಾಯಿಸಿತು.

ಪಿರನವಾಡಿ ಯಲ್ಲಿ ಅವರ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ಪೊಲೀಸರು ಅಡ್ಡಿಪಡಿಸಿದರ ಜೊತೆಗೆ ಪ್ರತಿಮೆಯನ್ನು ತೆಗೆದುಕೊಂಡು ಹೋಗಿರುವುದು ಖಂಡನೀಯ ಕೂಡಲೇ ಸರಕಾರ ಮುಂದೆ ಬಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆಯನ್ನು ನಿಗದಿತ ಸ್ಥಳದಲ್ಲಿ ಸ್ಥಾಪಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ರಾಯಣ್ಣನ ಅಭಿಮಾನಿಗಳು ಉಗ್ರವಾದ ಹೋರಾಟವನ್ನು ಮಾಡಲಾಗುತ್ತದೆ ಎಂದು ಈ ಮೂಲಕ ಸರಕಾರಕ್ಕೆ ಎಚ್ಚರಿಸುತ್ತೆವೆ ಎಂದು ಚಿಕ್ಕನಾಯಕನಹಳ್ಳಿ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿ.ಡಿ. ಚಂದ್ರಶೇಖರ್, ಸಿ.ಎಲ್ ರವಿಕುಮಾರ್, ಪವನ್ ಕುಮಾರ್, ಸಿ ಎಚ್ ಗಂಗಾಧರಯ್ಯ, ವಿನಯ್ ಸೀಮೆಎಣ್ಣೆ, ಆಟೋ ಮಂಜುನಾಥ್, ಸಿ.ಡಿ ಗಂಗಾಧರಯ್ಯ, ರೇಣುಕುಮಾರ್, ಲವ ಮತ್ತಿತರು ಉಪಸ್ಥಿತರಿದ್ದರು.

ಫೋಟೊ ಮಾಲಿಕನ ಕೊಲೆ ಯತ್ನ: ವಕೀಲ ಸೇರಿ ಆರೋಪಿಗಳ ಬಂಧನ

Publicstory


ಕುಣಿಗಲ್: ಇಲ್ಲಿನ ಧನು ಶ್ರೀ ಫೋಟೊ ಮಳಿಗೆ ಮಾಲೀಕನ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ವಕೀಲ ಸೇರಿ ಏಳು ಆರೋಪಿಗಳನ್ನು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಒಂದೇ ದಿನಕ್ಕೆ ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಪಾಂಡುರಂಗ ಅವರು ತಮ್ಮ ಸ್ಟುಡಿಯೊ ದಲ್ಲಿ ಕೆಲಸ ಮಾಡುತ್ತಿದ್ದಾಗ ಮುಸುಕಿ ಹಾಕಿಕೊಂಡು ಬಂದ ಇಬ್ಬರು ಅವರನ್ನು ಚಾಕುವಿನಿಂದ‌ ತಿವಿದು ಕೊಲೆ ಮಾಡಲು ಯತ್ನಿಸಿ ದ್ದರು.

ತಪ್ಪಿಸಿಕೊಳ್ಳಲು ಅವರು ಯತ್ನಿಸಿದಾಗ ಅವರ ಕೈಗೆ, ತಲೆಗೆ ಚಾಕುವಿನಿಂದ ಇರಿಯಲಾಗಿತ್ತು.

ಗಲಾಟೆ ಕೇಳಿ ಪಕ್ಕದ ಅಂಗಡಿಯ ಮಾಲಿಕ ಓಡಿ ಬಂದಾಗ ಆರೋಪಿಗಳಿಬ್ಬರು ಪರಾರಿಯಾಗಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲಿಸರು ಗಾಯಾಳು ಹೇಳಿಕೆ ಆಧರಿಸಿ ತನಿಖೆ ಕೈಗೊಂಡಿದ್ದರು.

ಆರೋಪಿಗಳು ಬಳಸಿದ್ದ ಕಾರು, ಐದು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಸಾದಿಕ್, ವಕೀಲ ಶಿವಪ್ರಸಾದ್, ಮಹಮ್ಮದ್ ಅಕ್ಬರ್ಮ, ಯಾಸೀನ್, ಶಾರುಕ್, ಫರಾಜ್, ಅರುಣ, ಟಗರು ಕಾರ್ತಿಕೆಯನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿಗಾಹಿ ಆದಾಯ ವರ್ಷಕ್ಕೆ ₹1 ಕೋಟಿ: ಪ್ರಧಾನಿ ಮೋದಿ ಕರೆಸಿಕೊಂಡು ಸನ್ಮಾನ ಮಾಡಿದ್ರು..

0

ಸಿದ್ದೇಶ್ ತ್ಯಾಗಟೂರು


ಕುರಿ ಕಾಯೋ ಮುತ್ತಣ್ಣನ ಮುತ್ತಿನಂತ ಕಥೆ…!
ಈ ಬದುಕೇ ಹಾಗೆ..ಅದೊಂತರಾ ಕನ್ ಫ್ಯೂಷನ್… ಮನಸಿದ್ರೆ ಮಾತ್ರ ಸೆನ್ಸೇಷನ್…ಸಾಧಿಸಬೇಕು ಅನ್ನೋನಿಗೆ ಇದು ಸದಾ ಕಾಲವೂ ಟೆಮ್ಟೇಷನ್..ಅಂದ್ಹಾಗೆ,ಸಾಧಿಸೋಕೆ ನಾವು ರೆಡಿ ಇದ್ದೀವಿ.. ಆದ್ರೆ,ಅವಕಾಶ ಸಿಗ್ತಾ ಇಲ್ಲ ಅಂತಾ ಹೇಳೋರ ಸಂಖ್ಯೆನೇ ಜಾಸ್ತಿ…

ಫಾರ್ ಯುವರ್ ಕೈಂಡ್ ಇನ್ ಫರ್ಮೇಷನ್,ಈ ಸ್ಟೋರಿ ಓದಿ…

ಅವಕಾಶ ಯಾರಿಗೂ ಸಿಗೋಲ್ಲ..ನಾವೇ ಕ್ರಿಯೇಟ್ ಮಾಡ್ಕೋಬೇಕು ಅನ್ನೋ ಸತ್ಯ ನಿಮಗೂ ಅರಿವಾಗುತ್ತೆ..ಸಾಧನೆ ಮಾಡೋಕೆ ಡಿಗ್ರಿ,ಮಾಸ್ಟರ್ ಡಿಗ್ರಿ ಓದಬೇಕಿಲ್ಲ…ಡಾಕ್ಟರೇಟ್ ಪದವಿ ಗಳಿಸಬೇಕಿಲ್ಲ..

ಬದಲಿಗೆ ಕುರಿ,ಕುರಿ ಸಾಕಾಣೆ ಮಾಡಿ ಕೋಟಿಗಳ ಒಡೆಯನಾಗಬಹುದು,ಸಮಾಜಕ್ಕೆ ಆ ಮೂಲಕ ತನ್ನ ಸಾಧನೆಯ ಅನುಭವದ ಪಾಠ ಮಾಡಬಹುದು ಅನ್ನೋ ಸ್ಟೋರಿ ಇದು…ಹಂಡ್ರೆಡ್ ಪರ್ಸೆಂಟ್ ನಿಮ್ಮನ್ನ ಕನ್ ಫ್ಯೂಷನ್ ಮಾಡ್ತಾ ಇಲ್ಲ..ಇದು ಇನ್ಸ್ ಪಿರೇಷನ್ ಮಾಡೋ ರಿಯಲ್ ಸ್ಟೋರಿ…

ಆತ ಜಸ್ಟ್ 8 ರಿಂದ 9 ವರ್ಷದ ಪುಟ್ಟ ಹುಡುಗ..ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೋಕಿನ ನವಿಲೆಹಾಳು ಅನ್ನೋ ಕುಗ್ರಾಮದ ಕುರಿ ಕಾಯುವವರ ಮನೆಯಲ್ಲಿ ಹುಟ್ಟಿದ ಕೂಸು…ಆ ಕೂಸಿನ ಹೆಸರೇ ಮುತ್ತಣ್ಣ…ಬಡ ಕುಟುಂಬದಲ್ಲಿ ಹುಟ್ಟಿದ ಮುತ್ತಣ್ಣನಿಗೆ ಎಲ್ಲರಂತೆ ನಾನೂ ಶಾಲೆಗೆ ಹೋಗಿ ವಿದ್ಯಾವಂತನಾಗಬೇಕು ಎಂಬ ಮಹದಾಸೆ ಇತ್ತು..

ಬಳಿಯಲ್ಲಿತ್ತು ತಿನ್ನೋ ಬಡತನ ಮುತ್ತಣ್ಣನ ಆಸೆಗೆ ಕೊಳ್ಳಿ ಇಟ್ಟಿತ್ತು..ಯಾಕಂದ್ರೆ ಕುರಿ ಕಾಯೋದನ್ನ ಬಿಟ್ಟು ಆ ಕುಟುಂಬಕ್ಕೆ ಬೇರೆ ಉದ್ಯೋಗವಿರಲಿಲ್ಲ..ಹೀಗಾಗಿ ಮುತ್ತಣ್ಣನ ತಂದೆ ಬೀರಪ್ಪ ಹಾಗು ತಾಯಿ ಶಾರದಮ್ಮ ,ಮಗನಿಗೆ ಮನೆಯಲ್ಲಿರೋ ಒಂದೈವತ್ತು ಕುರಿಗಳನ್ನು ಮಂದೆ ಜೊತೆ ಹೋಗಿ ಮೇಯಿಸಲು ಕಳುಹಿಸುತ್ತಾರೆ.

ಆವತ್ತಿಗೆ ಮುತ್ತಣ್ಣನ ವಯಸ್ಸು ಕೇವಲ ಒಂಬತ್ತು ವರ್ಷ…ಆಡಿ ನಲಿಯುತ್ತಾ ಅ ಆ ಇ ಈ ಕಲಿಯಬೇಕಾದ ಪುಟ್ಟ ವಯಸ್ಸಿನಲ್ಲಿ ಮುತ್ತಣ್ಣ ಕುರಿಗಳನ್ನು ಹೊಡೆದುಕೊಂಡು ಚಿಕ್ಕೋಡಿಯಿಂದ ಹೊರಡುತ್ತಾನೆ…ಆವತ್ತು ಅವನ ಕೈಯಲ್ಲಿ ಇದ್ದದ್ದು ಎರಡೇ..ಒಂದು ಮಾರುದ್ದದ ಬಿದಿರಿನ ಕೋಲು..ಇನ್ನೊಂದು ಕುರಿ ಉಣ್ಣೆಯ ಕರಿ ಕಂಬಳಿ…

ಹೀಗೆ ಮುತ್ತಣ್ಣನ ಕುರಿಮಂದೆ,
ಧಾರವಾಡ ಹುಬ್ಬಳ್ಳಿ ಮೂಲಕ ಶಿವಮೊಗ್ಗದ ಮಲೆನಾಡಿಗೆ ಬರುತ್ತೆ..ಭದ್ರಾವತಿಯನ್ನು ಹಾದು ಬೀರೂರನ್ನ ತಲುಪುತ್ತೆ..ಹೀಗೆ ಯಾವ ಪ್ರದೇಶದಲ್ಲಿ ಕುರಿಗಳಿಗೆ ಹೆಚ್ಚು ಮೇವು ಸಿಗುತ್ತೋ ಅಲ್ಲಿ ತಿಂಗಳುಗಳ ಕಾಲ ಉಳಿದುಕೊಳ್ಳುತ್ತಾನೆ ಮುತ್ತಣ್ಣ…ಕುರಿಗಳು ಹಾಗು ಅವುಗಳ ಜೊತೆಗಿನ ಸಂಚಾರವೇ ಅವನ ಬದುಕು..ಕುರಿ ಮಂದೆಯ ಜೊತಗೆ ಮುತ್ತಣ್ಣ ಕೂಡ ಹೆಜ್ಜೆ ಹಾಕುತ್ತಾನೆ…

ಕಾಡು ಮೇಡುಗಳನ್ನ ಅಲೆಯುತ್ತಾನೆ..ಹಳ್ಳ ಕೊಳ್ಳಗಳ ನೀರು ಕುಡಿದು ದಿನ ಕಳೆಯುತ್ತಾನೆ…
ಇಲ್ಲಿ ನಿಮಗೆ ಹೇಳಬೇಕಾದ ಒಂದು ಅಚ್ಚರಿಯ ಸಂಗತಿ ಏನಂದ್ರೆ ಕುರಿಗಳನ್ನು ಹೊಡೆದುಕೊಂಡು “ಮಂದೆ” ಜೊತೆಯಲ್ಲಿ ಬಂದ ಮುತ್ತಣ್ಣ ಪುನಃ ಮನೆಗೆ ಮರಳಿದ್ದು 25 ವರ್ಷಗಳ ಬಳಿಕ…ಬರೋಬ್ಬರಿ ಹದಿನೇಳು ವರ್ಷಗಳ ಕಾಲ ಮುತ್ತಣ್ಣ ಕುರಿ ಮೇಯಿಸುತ್ತಾ ಇಡೀ ರಾಜ್ಯವನ್ನೇ ಸುತ್ತುತ್ತಾನೆ…!

ಇದರ ನಡುವೆ ನಿಮಗೆ ಹೇಳಲೇಬೇಕಾದ ಇನ್ನೊಂದು ಇಂಟೆರೆಸ್ಟಿಂಗ್ ವಿಷ್ಯ ಏನಪ್ಪ ಅಂದ್ರೆ ಕುರಿ ಕಾಯೋ ಕಾಯಕ ಮಾಡಿದ್ರೂ ಮುತ್ತಣ್ಣನ ಕಲಿಕೆಯ ಆಸೆ ಹೋಗಿರಲಿಲ್ಲ…ಹೀಗಾಗಿ ಮನೆಯಿಂದ ಹೊರಡುವಾಗ ಮಂದೆ ಜೊತೆಯಲ್ಲಿದ್ದ ಹಿರಿಯರ ಬಳಿ ಕಾಡಿ ಬೇಡಿ ಒಂದು ಸ್ಲೇಟು ಪಡೆದುಕೊಂಡಿದ್ದ.

.ತಾನು ಹೋಗುವ ದಾರಿಯಲ್ಲಿ ಸಿಗುವಂತಾ ಶಾಲೆಗಳ ಮುಂದೆ ಕುರಿ ಮಂದೆಯನ್ನು ಕೂಡಿ ಹಾಕಿ ,ಅಲ್ಲಿನ ಶಾಲಾ ಮಕ್ಕಳ ಜೊತೆ ಸೇರುತ್ತಿದ್ದ …ಅವರಿಂದ ಅ ಆ ಇ ಈ ಬರೆಯೋದನ್ನ ಕಲಿಯುತ್ತಿದ್ದ…ಬಳಪ ಕಾಲಿಯಾದ್ರೆ ಮರಳಿನಲ್ಲಿ ಅಕ್ಷರಾಭ್ಯಾಸ ಮಾಡುತ್ತಿದ್ದ…ಹೀಗೆ ಶಾಲೆಗೆ ಹೋಗದೆ ವಿದ್ಯಾವಂತನೂ ಆದ…

ಹೀಗೆ ಅವನ ಪ್ರಯಾಣ ಸಾಗಿರುವಾಗಲೇ ಭದ್ರಾವತಿ ತಾಲ್ಲೂಕಿನ ಬಂಡಿಗುಡ್ಡದ ಫಾರೆಸ್ಟ್ ಇಲಾಖೆಯ ಒಂದು ಫಲಕ ಮುತ್ತಣ್ಣನ ಕಣ್ಣಿಗೆ ಬೀಳುತ್ತೆ..ಅದರಲ್ಲಿ‌” ಕಾಡೆಂದರೆ ನೀರು…ನೀರೆಂದರೆ ಅನ್ನ…ಅನ್ನವೆಂದರೆ ಪ್ರಾಣ” ಅಂತ ಬರೆದಿತ್ತು…ನಿಜ ಹೇಳಬೇಕಂದ್ರೆ ಅದು ಮುತ್ತಣ್ಣ ಸರಿಯಾಗಿ ಓದಿದ ಮೊದಲ ಅಕ್ಷರಗಳಾಗಿತ್ತು..ಹೀಗಾಗಿ ಆ ಪದ ಅವನ ಮನಸಿನಲ್ಲಿ ಅಚ್ಚಳಿಯದೇ ಉಳಿದಿತ್ತು…ಅದರ ಜೊತೆ ಜೊತೆಯಲ್ಲೇ ಹಸಿರು ಪ್ರೀತಿ ಅವನನ್ನು ಆವರಿಸಿಕೊಂಡಿತ್ತು.

.ಅದು ಕೃಷಿ ಕಾಯಕದೆಡೆ ಸೆಳೆತವಾಗಿತ್ತು…
ವಿಷ್ಯ ಏನಪ್ಪ ಅಂದ್ರೆ ತನ್ನ ಒಂಬತ್ತನೇ ವಯಸ್ಸಿಗೆ ಮನೆ ಬಿಟ್ಟ ಮುತ್ತಣ್ಣನ ಬಳಿ ಇದ್ದದ್ದು ಕೇವಲ ಐವತ್ತು ಕುರಿ…ಹದಿನೇಳು ವರ್ಷದ ಬಳಿಕ ಆತನ ಬಳಿಯಲ್ಲಿ ಇದ್ದ ಕುರಿಗಳ ಸಂಖ್ಯೆ ಮೂರು ಸಾವಿರ…!
ಹೀಗೆ ಕುರಿ ಮೇಯಿಸುತ್ತಾ ಹದಿನೇಳು ವರ್ಷಗಳ ಕಾಲ ಅಲೆಮಾರಿ ಜೀವನ ಸಾಗಿಸಿದ ಮುತ್ತಣ್ಣನಿಗೆ ಮದುವೆಯೂ ಆಗುತ್ತೆ.

ಪತ್ನಿಯ ಸಂಗಡ ಮತ್ತೆ ಕುರಿ ಕಾಯೋ ಕಾಯಕ ಮುಂದುವರೆಸಿ ಅದೊಂದು ದಿನ ಹಾವೇರಿ ಜಿಲ್ಲೆಯ ಹಾನಗಲ್ ಸಮೀಪದ ಮಂತಗಿ ಅನ್ನೋ ಗ್ರಾಮದ ಬಳಿ ಬರುತ್ತಾನೆ..ಅದೇನು ದುರಂತವೋ ಗೊತ್ತಿಲ್ಲ..ಅದೊಂದು ದಿನ ಇದ್ದಕ್ಕಿದ್ದಂತೆ ಮುತ್ತಣ್ಣನ ಮುನ್ನೂರಕ್ಕು ಹೆಚ್ಚು ಕುರಿಗಳು ಸಾವನ್ನಪ್ಪುತ್ತವೆ.

ಕಣ್ಣ ಮುಂದೆಯೇ ತಾನು ಸಾಕಿ ಸಲಹಿದ ಕುರಿಗಳು ಸಾವನ್ನಪ್ಪಿದ್ದು ಮುತ್ತಣ್ಣನಿಗೆ ನೋಡಲಾಗಲಿಲ್ಲ..ಆಗಲೇ ಮುತ್ತಣ್ಣನಿಗೆ ಅಲೆಮಾರಿ ಜೀವನ ಇನ್ನು ಮುಂದೆ ಕಷ್ಟ ಅನ್ನೋ ಅರಿವಾಗುತ್ತೆ..ಆ ಕೂಡಲೇ ತನ್ನ ಬಳಿ ಇದ್ದ ಸಾವಿರಾರು ಕುರಿಗಳಲ್ಲಿ ಐನೂರು ಕುರಿಗಳನ್ನು ಮಾರಾಟ ಮಾಡುತ್ತಾನೆ.

ಅದರಿಂದ ಬಂದ ಹಣದಲ್ಲಿ ಮಂತಗಿ ಗ್ರಾಮದಲ್ಲಿ 10 ಎಕರೆ ಭೂಮಿಯನ್ನ ಖರೀದಿ ಮಾಡುತ್ತಾನೆ…ಆ ಭೂಮಿಯಲ್ಲಿ ಕೃಷಿ ಮಾಡಿ ಮಹತ್ತರವಾದದ್ದು ಏನನ್ನೋ ಸಾಧಿಸೋ ಕನಸು ಮುತ್ತಣ್ಣನದಾಗಿತ್ತು.

ಯಾಕಂದ್ರೆ,ಮುತ್ತಣ್ಣ ಹೆಚ್ಚು ಸಂಚಾರ ಮಾಡಿದ್ದು ಮಲೆನಾಡು ಭಾಗದಲ್ಲಿ..ಅಲ್ಲಿನ ಹಸಿರನುಟ್ಟು ಸದಾ ಕಂಗೊಳಿಸೋ ಹೊಲ ಗದ್ದೆ ತೋಟಗಳು ಅವರನ್ನ ಆಕರ್ಷಿಸಿದ್ದವು..ಬದುಕಿದರೆ ಭೂಮ್ತಾಯಿ ಒಡಲಲ್ಲಿ ಬದುಕಬೇಕು ಅನ್ನೋ ಆಸೆ ಹುಟ್ಟಿತ್ತು..ಹೀಗಾಗಿ ಕಡಿಮೆ ಬೆಲೆಯ ಬರಡು ಭೂಮಿಯನ್ನ ಖರೀದಿ ಮಾಡಿ ಅಲ್ಲಿ ಕೃಷಿ

ಕಾಯಕ ಆರಂಭಿಸುತ್ತಾರೆ…
ವಿಷ್ಯ ಏನಪ್ಪ ಅಂದ್ರೆ ಮುತ್ತಣ್ಣ ಜಮೀನು ಖರೀದಿಸಿದಾಗ ಕಂಡ ಕಂಡವರೆಲ್ಲಾ ನೋಡಿ ನಕ್ಕಿದ್ದರು..ಹಾಸ್ಯ ಮಾಡಿದ್ದರು..ಅದಕ್ಕೆ ಎರಡು ಕಾರಣಗಳಿದ್ದವು..ಒಂದು ಮುತ್ತಣ್ಣ ಖರೀದಿಸಿದ ಭೂಮಿ ಬರಡಾಗಿತ್ತು…ಅಲ್ಲಿ ಕೃಷಿ ಮಾಡಲು ಸಾಧ್ಯವೇ ಇಲ್ಲ ಎಂದು ಜನ ಕೈ ಚೆಲ್ಲಿದ್ದರು..

.ಇನ್ನೊಂದು ಕುರಿ ಕಾಯೋನಿಗೆ ಭೂಮಿ ಒಲಿಯೋದಿಲ್ಲ ಅನ್ನೋದು ಕೆಲವರ ನಂಬಿಕೆಯಾಗಿತ್ತು…ಆದ್ರೆ ,ಛಲಬಿಡದ ಮುತ್ತಣ್ಣ ಬರಡು ಭೂಮಿಯಲ್ಲಿ ಮುತ್ತು ಬೆಳೆಯುತ್ತೇನೆ ಅನ್ನೋ ವಿಶ್ವಾಸದಲ್ಲಿ ಭತ್ತ ನಾಟಿ ಮಾಡುತ್ತಾರೆ…ಆದ್ರೆ, ಜನ ಹೇಳಿದ್ದೇ ನಿಜವಾಗುತ್ತೆ..ಆರಂಭದಲ್ಲಿ ಮುತ್ತಣ್ಣ ಸಾಕಷ್ಟು ನಷ್ಟ ಅನುಭವಿಸುತ್ತಾರೆ.

ನಷ್ಟವಾಯ್ತು ಅಂತ ಅವರು ಕೃಷಿಯನ್ನ ಬಿಡಲಿಲ್ಲ…ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಅನ್ನುತ್ತಾ ಮತ್ತೆ ಕೃಷಿಯನ್ನ ಆರಂಭಿಸುತ್ತಾರೆ..ಮುತ್ತಣ್ಣನ ಶ್ರಮ,ಅವರ ಆಸಕ್ತಿ ಹಾಗು ಅವರ ಸಾಧಿಸುವ ಛಲದ ಮುಂದೆ ಭೂಮಿತಾಯಿ ಕೂಡ ಕರಗಿ ಬಿಡ್ತಾಳೆ…ನೋಡ ನೋಡುತ್ತಲೇ ಬರಡು ಭೂಮಿಯಲ್ಲಿ ಬಂಗಾರದ ಪೈರು ಬೆಳೆದು ನಿಲ್ಲುತ್ತೆ…

ಅದು ಎಷ್ಟರ ಮಟ್ಟಿಗೆ ಅಂದ್ರೆ ಮುತ್ತಣ್ಣ ತಮ್ಮ ಜಮೀನಿನ ಒಂದು ಎಕರೆ ಪ್ರದೇಶದಲ್ಲಿ ಶ್ರೀ ಪದ್ಧತಿಯಲ್ಲಿ 44 ಕ್ವಿಂಟಾಲ್ ಭತ್ತ ಬೆಳೆಯುತ್ತಾರೆ..ಇದು ಕರ್ನಾಟಕದಲ್ಲೇ ದಾಖಲೆಯಾಗುತ್ತೆ.

ಅಂದ್ಹಾಗೆ ಮುತ್ತಣ್ಣ ಕೃಷಿ ಕಾಯಕ ಆರಂಭಿಸಿದ್ದು 1999 ರಲ್ಲಿ …ಇಲ್ಲೊಂದು ಕುತೂಹಲಕಾರಿ ಸಂಗತಿ ಅಡಗಿದೆ…ಕುರಿ ಕಾಯುತ್ತಾ ಬದುಕು ಸಾಗಿಸುತ್ತಿದ್ದ ಮುತ್ತಣ್ಣನಿಗೆ ಒಂದು ಆಸೆ ಇತ್ತು..ಅದೇನಂದ್ರೆ ನಾನು ಕಷ್ಟ ಪಟ್ಟು ಅಕ್ಷರ ಕಲಿತೆ …ಅದ್ರೆ ನನ್ನ ಮಕ್ಕಳಿಗೆ ಹಾಗಾಗಬಾರದು..ಅವರು ವಿದ್ಯಾವಂತರಾಗಬೇಕು …

ಅದಕ್ಕಾಗಿಯಾದ್ರೂ ನಾನು ಒಂದಡೆ ನೆಲೆ ನಿಲ್ಲಬೇಕು ಅನ್ನೋ ಆಲೋಚನೆ ಇತ್ತು..ಹಾಗಾಗಿ ಮಂತಗಿಯಲ್ಲಿ ಭುತಾಯಿಯ ಸೇವೆಗೆ ಇಳಿಯುತ್ತಾರೆ..ಕಷ್ಟ ಪಟ್ಡು ದುಡಿಯುತ್ತಾರೆ..ಇಂದು ಮುತ್ತಣ್ಣನವರ ಮೂವರು ಮಕ್ಕಳು ಪ್ರತಿಷ್ಠಿತ ರೆಸಿಡೆನ್ಸಿಯಲ್ ಸ್ಕೂಲಿನಲ್ಲಿ ಓದುತ್ತಿದ್ದಾರೆ..

ಕೃಷಿ ಜೊತೆಗೆ ಕುರಿಕಾಯೋ ಕುಲಕಸುಬನ್ನು ಮರೆಯದ ಮುತ್ತಣ್ಣ ಕುರಿಮಂದೆಯನ್ನು ಜೊತೆಯಲ್ಲೇ ಇಟ್ಟುಕೊಳ್ಳುತ್ತಾರೆ…ಕುರಿಗಳ‌ ಜೊತೆ ಅವರಿಗೆ ಅಂಥಾದ್ದೊಂದು ಆತ್ಮೀಯ ಭಾವವಿತ್ತು..

ಭಾವನಾತ್ಮಕ ಸಂಬಂಧವಿತ್ತು..ಹೀಗಾಗಿ ಆ ಕುರಿಗಳನ್ನ ಸಾಕೋ ಜವಾಬ್ದಾರಿಯನ್ನ ಸಹೋದರನಿಗೆ ವಹಿಸಿಕೊಡ್ತಾರೆ…ನಿಜ ಹೇಳಬೇಕಂದ್ರೆ ಇವತ್ತು ಕುರಿ ಸಾಕಾಣಿಕೆಯಲ್ಲಿ ಕೃಷಿಗಿಂತಲೂ ಅಧಿಕ ಲಾಭವಿದೆ.ಮನೆ ಪಕ್ಕದ ಕೊಟ್ಟಿಗೆಯಲ್ಲಿ ನೂರು ಕುರಿ ಇದೆ ಅಂದ್ರೆ ,ಮನೆ ಪಕ್ಕದಲ್ಲಿ ಬ್ಯಾಂಕ್ ಇದೆ ಅಂತಾನೇ ಅರ್ಥ..ಹಿರಿಯರು ಹೇಳಿದಂತೆ,ಕುರಿಗಳು ಅಂದ್ರೆ ನಡೆದಾಡೋ ಬ್ಯಾಂಕ್ ಗಳು…
ಮುತ್ತಣ್ಣನ ಜರ್ನಿಯಲ್ಲಿ ತರೀಕೆರೆ ಸುತ್ತಮುತ್ತ ಅಲ್ಲಿನ ತೆಂಗು ಹಾಗು ಅಡಿಕೆ ತೋಟಗಳನ್ನ ಕಂಡಿದ್ದ..

ತನ್ನ ಜಮೀನಿನಲ್ಲೂ ಅಂತದ್ದೇ ತೋಟ ಕಟ್ಟಬೇಕು ಅನ್ನೋ ಕನಸಿನೊಂದಿಗೆ ಕೃಷಿ ಕಾಯಕ ಆರಂಭಿಸಿದ್ದ…ನೋಡ ನೋಡುತ್ತಲೇ ಆ ಜಮೀನಿನಲ್ಲಿ ತೆಂಗಿನ ಮರಗಳು ಬೆಳೆದು ನಿಂತವು…ಅಡಿಕೆ ಮರಗಳು ತೊನೆದಾಡಿದವು..

ಹತ್ತು ಎಕರೆ ಇದ್ದ ತೋಟ ಇಪ್ಪತ್ತಾಯ್ತು..ಇಪ್ಪತ್ತು ನಲವತ್ತಾಯ್ತು…ಕೊನೆಗೊಂದು ದಿನ ಮುತ್ತಣ್ಣ ಫಾರ್ಮ್ ಅನ್ನೋ ಬೋರ್ಡ್ ಕೂಡ ಬಂತು…
ಕೃಷಿಯಲ್ಲಿ ಮುತ್ತಣ್ಣ ಯಾವ ಪರಿ ಯಶಸ್ಸು ಕಂಡರು ಅಂದ್ರೆ,ಒಂದು ಕಾಲಕ್ಕೆ ಹಾಸ್ಯ ಮಾಡಿದವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಂಡರು…

ಕೊನೆಗೆ ಮುತ್ತಣ್ಣನ ತೋಟಕ್ಕೆ ಕೂಲಿ ಮಾಡಲು ಬಂದರು..ಮುತ್ತಣ್ಣನ ಸಾಧನೆಯ ಕಥೆ ನೋಡಿ ಬೆಕ್ಕಸ ಬೆರಗಾದರು…ಯಾಕಂದ್ರೆ ಕುರಿ ಕಾಯೋ ಮುತ್ತಣ್ಣ ಒಂದು ವರ್ಷಕ್ಕೆ ಕೇವಲ ಕೃಷಿಯಿಂದಲೇ 1 ಕೋಟಿಗೂ ಅಧಿಕ ಲಾಭ ಗಳಿಸುತ್ತಿದ್ದಾರೆ.

ನೂರಾರು ಆಳು ಕಾಳು,ತೋಟದ ಮೈಂಟೆನೆನ್ಸ್ ಖರ್ಚು ವೆಚ್ಚ ಎಲ್ಲವನ್ನೂ ಕಳೆದು ಒಂದು ಕೋಟಿಗೂ ಹೆಚ್ಚು ಹಣ ಗಳಿಸುತ್ತಿದ್ದಾರೆ ಅಂದರೆ ಅದೊಂದು ಮಹತ್ತರವಾದ ಸಾಧನೆಯಲ್ಲವೇ…

ಶಾಲೆಗೆ ಹೋಗಲಿಲ್ಲ…ಗುರುಗಳ ಬಳಿ ಅಕ್ಷರ ಕಲಿಯಲಿಲ್ಲ…ಸಮಾಜದ ಜೊತೆ ಬೆರೆಯಲಿಲ್ಲ…ಆದ್ರೆ ಕುರಿ ಕಾಯೋ ಮುತ್ತಣ್ಣ ಮಾಡಿದ ಸಾಧನೆ ಇಡೀ ಸಮಾಜಕ್ಕೆ ಮಾದರಿಯಾಗಿದೆ..ಅವರ ಈ ಸಾಧನೆ ಎಲ್ಲೆಲ್ಲಿ ಪಸರಿಸುತ್ತೆ ಅಂದ್ರೆ ಸ್ವತಃ ನಮ್ಮ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಂದ್ರೆ 2013 ರಲ್ಲಿ “ವೈಬ್ರೆಂಟ್ ಗುಜರಾತ್” ಕಾರ್ಯಕ್ರಮಕ್ಕೆ ಮುತ್ತಣ್ಣನನ್ನು ಕರೆಸಿಕೊಂಡು ಸನ್ಮಾನ ಮಾಡಿದ್ದರು.

ಮುತ್ತಣ್ಣನ ಕೃಷಿ ಸಾಧನೆಗೆ ಶಹಬ್ಬಾಸ್ ಮುತ್ತಣ್ಣ ಅಂತ ಬೆನ್ನು ತಟ್ಟಿದ್ದಾರೆ…ಮೋದಿಯೊಬ್ಬರೇ ಅಲ್ಲ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಾಧನೆ ಗುರುತಿಸಿ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಮುತ್ತಣ್ಣನ ಯಶೋಗಾಥೆಗೆ ಮರುಳಾದವರೇ ಆಗಿದ್ದಾರೆ…ಹೀಗೆ ಮುತ್ತಣ್ಣನಿಗೆ ನೂರಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ..ಅದರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶ್ರೇಷ್ಠ ಕೃಷಿಕ ಹಾಗು ಸುಕೋ ಬ್ಯಾಂಕ್ ನೀಡೋ ಸುಕೃತ ಪ್ರಶಸ್ತಿಯೂ ಲಭಿಸಿದೆ.

ಅದೆಷ್ಟೇ ಸನ್ಮಾನ ಪುರಸ್ಕಾರಗಳು ಬಂದರೂ ಮುತ್ತಣ್ಣ ಹಿರಿ ಹಿರಿ ಹಿಗ್ಗಲಿಲ್ಲ…ಕರಿ ಕಂಬಳಿ ಹೆಗಲಮೇಲೆ ಹಾಕಿಕೊಂಡು ಕುರಿ ಕಾಯೋದನ್ನ ನಿಲ್ಲಿಸಲಿಲ್ಲ…ತಾನು ನಂಬಿದ ಭೂತಾಯ ಮಡಿಲಲ್ಲಿ ಕೃಷಿ ಕಾಯಕ ಮಾಡೋದನ್ನ ಮರೆಯಲಿಲ್ಲ…

ಯಾಕಂದ್ರೆ ಪ್ರಶಸ್ತಿ ಸಮಾರಂಭಗಳ ಗದ್ದಲ ಮುತ್ತಣ್ಣನಿಗೆ ಬೇಕಿಲ್ಲ..ಕಾಯಕವೇ ಕೈಲಾಸ ಅನ್ನೋ ಸಿದ್ದಾಂತ ಅವರದ್ದು…ಅಷ್ಟಕ್ಕೂ ಕೋಟಿ ಕೋಟಿ ಲಾಭ ಗಳಿಸೋ ಮುತ್ತಣ್ಣನ ಕೃಷಿ ಭೂಮಿಯಲ್ಲಿ ಏನೇನಿದೆ ಅನ್ನೋ ಕುತೂಹಲವೆ…ಹೌದು ಕುರಿ ಕಾಯುತ್ತಾ ಕೃಷಿ ಆರಂಭಿಸಿದ ಮುತ್ತಣ್ಣ ಇಂದು ಒಂದು ಕೃಷಿ ವಿಶ್ವ ವಿದ್ಯಾಲಯವನ್ನೇ ನಿರ್ಮಾಣ ಮಾಡಿದ್ದಾರೆ…!

ಅವರ ಸಾಧನೆ ನೋಡಿ ತಿಳಿಯೋಕೆ ನಿತ್ಯ ನೂರಾರು ಮಂದಿ ಬರುತ್ತಾರೆ..ಯಾಕಂದ್ರೆ ಅದೊಂದು ಸಮಗ್ರ ಕೃಷಿ ಪರಿಕಲ್ಪನೆಯ ಪರಿಪೂರ್ಣ ಪ್ರದೇಶ…ಮುತ್ತಣ್ಣನ 40 ಎಕರೆಯಲ್ಲಿ ಏನುಂಟು ಏನಿಲ್ಲ..
ಮಾವು,ಬೇವು,ಹಲಸು,ಚಿಕ್ಕು,ಅಡಿಕೆ,ತೆಂಗು,
ಬಾಳೆ,ಹೀಗೆ ತೋಟಗಾರಿಕಾ ಬೆಳೆಗಳು ನಳ ನಳಿಸುತ್ತಿವೆ..ಒಂದಿಂಚೂ ಜಾಗವನ್ನ ವ್ಯರ್ಥ ಮಾಡದೆ ಬದುಗಳ ಮೇಲೆ ಸಾಗುವಾನಿ ಮರಗಳ ಸಾಲು,
ನಿಂಬೆ,ಕರಿಬೇವು ಗಿಡಗಳು ಇದರ ಜೊತೆ ಜೋಳ,ಉದ್ದು,ಹಲಸಂದೆ,ಶೇಂಗಾ,ಸೂರ್ಯಕಾಂತಿ, ಮೆಣಸು ಸೇರಿದಂತೆ ಎಲ್ಲಾ ರೀತಿಯ ತರಕಾರಿಗಳು ಕೂಡ ಮುತ್ತಣ್ಣನ ತೋಟದಲ್ಲಿ ಸಿಗುತ್ತವೆ…ಮಳೆ ನೀರು ಸಂಗ್ರಹಕ್ಕೆ ಪುಟ್ಟ ಕೆರೆ ನಿರ್ಮಾಣ ಮಾಡಿ ಅಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ..ಮುತ್ತಣ್ಣನದ್ದು ಸಂಪೂರ್ಣ ಸಾವಯವ ಕೃಷಿ…ಒಂದೇ ಒಂದು ಹಿಡಿ ರಾಸಾಯನಿಕ ಗೊಬ್ಬರ ಬಳಸೋದಿಲ್ಲ..ಕೀಟನಾಶಕ ಉಪಯೋಗಿಸೋದಿಲ್ಲ…

ಅದಕ್ಕಾಗಿಯೇ ಅವರು ದನ ಕರುಗಳನ್ನು ಕಟ್ಟಿಕೊಂಡು ಸಾವಯವ ಗೊಬ್ಬರ ಉತ್ಪಾದನೆ ಮಾಡುತ್ತಿದ್ದಾರೆ..ಎಮ್ಮೆ ದನಗಳ ಗಂಜಲವನ್ನೇ ಜೀವಾಂಮೃತ ಮಾಡಿ ಬೆಳೆಗೆ ಸಿಂಪಡಿಸುತ್ತಿದ್ದಾರೆ…ಆ ಕಾರಣಕ್ಕೇ ಮುತ್ತಣ್ಣನ ಇಡೀ ಭೂಮಿ ಎರೆಹುಳುಗಳಿಂದ ಸಂಮೃದ್ಧಿಯಾಗಿದೆ…

ಇನ್ನು ಇದಷ್ಟೇ ಅಲ್ಲದೆ ನಾಟಿ ಕೋಳಿ ಸಾಕಾಣೆ,ಜೇನು ಸಾಕಾಣೆ,ನರ್ಸರಿ,ಸೇರಿದಂತೆ ಇನ್ನೂ ಹತ್ತು ಹಲವು ವೈಶಿಷ್ಟ್ಯತೆಗಳನ್ನ ಇಲ್ಲಿ ಕಾಣಬಹುದಾಗಿದೆ…
ನೀವು ಅಚ್ಚರಿ ಪಡೋ ಒಂದು ವಿಷ್ಯ ಏನು ಅಂದ್ರೆ ಮುತ್ತಣ್ಣನ ತೋಟದಲ್ಲಿರೋ ಪ್ರತಿ ಗಿಡ ಮರಗಳು,ಅಲ್ಲಿರೋ ಪ್ರಾಣಿ ಪಕ್ಷಿಗಳು ಸದಾ ಕಾಲವೂ ಸಂಗೀತ ಕೇಳುವಂತೆ ಮಾಡಲಾಗಿದೆ..ಅಲ್ಲಲ್ಲಿ ಸ್ಪೀಕರ್ ಬಾಕ್ಸ್ ಗಳನ್ನು ಇಟ್ಟು ಸಂಗೀತ ಹಾಕೋ ಮೂಲಕ ಸಸ್ಯಗಳಿಗೂ ಜೀವವಿದೆ,ಅವುಗಳು ಸಂಗೀತ ಕೇಳಿ ಸಂಮೃದ್ಧಿಯಿಂದ ಬೆಳೆಯುತ್ತವೆ ಅನ್ನೋ ಕಾನ್ಸೆಪ್ಟ್ ಮುತ್ತಣ್ಣನದ್ದು…

ನಿತ್ಯ ತನ್ನ ತೋಟ ನೋಡಲು ಬರೋ ನೂರಾರು ಕೃಷಿ ಆಸಕ್ತರು,ರೈತರಿಗೆ ಮುತ್ತಣ್ಣ ತನ್ನ ಅನುಭವದ ಕೃಷಿ ಪಾಠ ಮಾಡುತ್ತಾ..ಹಸಿದು ಬಂದವರಿಗೆ ಅನ್ನ ದಾಸೋಹ ನೀಡುತ್ತಾ..ನೀವೂ ಕೃಷಿಯಲ್ಲಿ ಸಾಧನೆ ಮಾಡಿ ಎಂದು ಹುರಿದುಂಬಿಸುತ್ತಾರೆ…
ಈಗ ಹೇಳಿ…ಇಂಥಾದ್ದೊಂದು ಸಾಧನೆ ಮಾಡೋಕೆ ಮುತ್ತಣ್ಣನಿಗೆ ಯಾವ ಅವಕಾಶ ಸಿಕ್ಕಿತ್ತು..ಯಾರು ಅವಕಾಶ ಮಾಡಿಕೊಟ್ರು..ಯಾರೂ

ಕೊಟ್ಟಿಲ್ಲ..ಮುತ್ತಣ್ಣನಿಗೆ ಮುತ್ತಣ್ಣನೇ ಇನ್ಸ್ ಪಿರೇಷನ್…ಅವರ ಕನಸೇ ಅವರಿಗೆ ಸ್ಪೂರ್ತಿ…ಸಾಧಿಸಬೇಕು ಅನ್ನೋ ಛಲ..ಭೂಮಿ ತಾಯಿ ಮೇಲಿನ ಪ್ರೀತಿ,ನಂಬಿಕೆ ಹಾಗು ಅವರ ಪರಿಶ್ರಮ ಅವರನ್ನು ಇಷ್ಟೊಂದು ಎತ್ತರಕ್ಕೆ ಬೆಳಸಿದೆ…ಈ ಭೂಮಿಯ ಮೇಲೆ ಯಾರು ಬೇಕಿದ್ರೂ ಮೋಸ ಮಾಡಬಹುದು..ಆದ್ರೆ ಭೂಮಿ ತಾಯಿ ಎಂದಿಗೂ ಮೋಸ ಮಾಡೋಲ್ಲ ಅನ್ನೋದು ಮುತ್ತಿನಂತ ಮುತ್ತಣ್ಣನ ಕಟ್ಟ ಕಡೇ ಮಾತು…
….ಮುತ್ತಣ್ಣನಿಗೆ ಒಂದು ಸಲಾಂ…

ಕುರಿ ಸಾಕಾಣಿಕೆ ಆನ್ ಲೈನ್ ತರಬೇತಿ…

Kolar: ಕೋಲಾರ ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವಕ-ಯುವತಿಯರಿಗಾಗಿ ಉಚಿತವಾಗಿ 10 ದಿನಗಳ ಕಾಲದ ಕುರಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಭೋದನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
ಆಸಕ್ತ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು (ಗಾ) ಮತ್ತು ನಗರ ಜಿಲ್ಲೆಯ ನಿರುದ್ಯೋಗ ಯುವಕ-ಯುವತಿಯರು ಆ.20 ತರಬೇತಿ ಸಂಸ್ಥೆ ಕಚೇರಿಯಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ದಾಖಲೆಗಳೊಂದಿಗೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಮೊ.8971308776, 7760313833, 9483652240, ಕ.ದೂ.08152-297214 ಸಂಪರ್ಕಿಸಬಹುದಾಗಿದೆ.
ಗೂಗಲ್ ಫಾರ್ಮ್ ಮೂಲಕ ಆನ್ಲೈನಲ್ಲೇ ಉಚಿತ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಸಲ್ಲಿಸಬಹುದು.

ಅದರ ಲಿಂಕ್ https://docs.google.com/forms/d/1IW3iMi2q9d–KPTnTgEwESB7AigDublyKEJY7XCxZOY/edit