Wednesday, May 6, 2026
Google search engine
Home Blog Page 179

ತುಮಕೂರು: ಒಂದೇ ದಿನ ಐದು ಮಕ್ಕಳಿಗೆ ಕೊರೊನಾ

ತುಮಕೂರು: ಜಿಲ್ಲೆಯಲ್ಲಿ ಇಂದು ಒಂದೇ ದಿನ ಕೊರೊನ ಸೋಂಕಿಗೆ ಆರು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಐವರು ಪುರುಷರು ಮತ್ತು ಓರ್ವ ಮಹಿಳೆ ಸೇರಿದ್ದಾರೆ. ಸಾವಿನ ಸಂಖ್ಯೆ 115ಕ್ಕೆ ಏರಿದಂತೆ ಆಗಿದೆ.

ಇಂದು 108 ಹೊಸ ಪ್ರಕರಣಗಳು ದೃಢಪಟ್ಟಿವೆ. ತುಮಕೂರು ತಾಲೂಕಿನಲ್ಲಿ 57 ಕೊರೊನ ಸೋಂಕು ಪ್ರಕರಂಗಳು ಕಂಡುಬಂದಿವೆ. ಇವರಲ್ಲಿ ಐದು ವರ್ಷದೊಳಗಿನ ಐದು ಮಕ್ಕಳು ಸೇರಿದ್ದಾರೆ.
[8/18, 19:52] Siddaiah @1: ಒಟ್ಟು 58 ಜನರಲ್ಲಿ ಕೊರೊನ ಲಕ್ಷಣಗಳು ಇರುವುದು ದೃಢಪಟ್ಟಿದ್ದರೆ 50 ಜನರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಕೊರೊನ ಪಾಸಿಟೀವ್ ಬಂದಿದೆ.

ಅರವತ್ತು ವರ್ಷ ಮೇಲ್ಪಟ್ಟವರು 17 ಮಂದಿಗೆ ಕೊರೊನ ಇರುವುದು ಪತ್ತೆಯಾಗಿದೆ. 8 ಮಂದಿ ಪುರುಷರು ಮತ್ತು 9 ಮಂದಿ ಮಹಿಳೆಯರು ಸೇರಿದ್ದಾರೆ. ಮೂವರು ಪೊಲೀಸರಿಗೂ ಕೊರೊನ ಬಂದಿದೆ

ಬಂಧನಕ್ಕೆ ಪತ್ರಕರ್ತರ ಒತ್ತಾಯ

C N Halli: ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ದಾಂಧಲೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು ತಾಲ್ಲೂಕು ಪತ್ರಕರ್ತರ ಸಂಘ ತಹಸೀಲ್ದಾರ್ ಮುಖಾಂತರ ರಾಜ್ಯ ಸರ್ಕಾರವನ್ನು ಒತ್ತಾಯಿಸಿತ್ತು .

ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಂಗನಕೆರೆ ಮಹೇಶ್‌‌‌ ಸಂಘದ ಎಲ್ಲ ಪದಾಧಿಕಾರಿಗಳು, ಪತ್ರಕರ್ತರು ಇದ್ದರು.

ನಿನ್ನೊಳು ನಾ, ನನ್ನೊಳು ನೀ..

0

ಜಿ.ಎನ್.ಮೋಹನ್


‘ಬೆಟ್ಟದಿಂದ ಬಟ್ಟಲಿಗೆ’ ನನ್ನನ್ನು ಇನ್ನಿಲ್ಲದಂತೆ ಕಾಡಿದ ಕೃತಿ.

ಜಾನಪದ ಲೋಕವನ್ನು ಕಟ್ಟಿದ ಎಚ್ ಎಲ್ ನಾಗೇಗೌಡರ ಕೃತಿ. ಕಾಫಿ ಬೀಜ ತನ್ನ ಪಯಣವನ್ನು ಆರಂಭಿಸಿ ಬೆಟ್ಟಗಳಿಂದ ನಮ್ಮ ಅಂಗೈನಲ್ಲಿದ್ದ ಕಪ್ ಗಳಿಗೆ ಇಳಿದು ಬಂದ ಕಥೆ.

ಆ ಕೃತಿ ಓದುವಾಗ ನನಗರಿವಿಲ್ಲದೆ ಕಾಫಿಯ ಘಮ ನನ್ನೊಳಗೆ ಇಳಿದುಹೋಗಿತ್ತು. ಅಂದಿನಿಂದ ಇಂದಿನವರೆಗೂ ಕಾಫಿ ನನ್ನನ್ನು ಅಡಿಯಾಳಾಗಿಸಿಕೊಂಡಿದೆ.

ಕಾಫಿಗಿರುವ ಶಕ್ತಿ ಅಂತಹದ್ದು.

ಅದಾಗಿ ಸಾಕಷ್ಟು ಕಾಲವಾಗಿತ್ತು. ನಾನು ‘ಪ್ರಜಾವಾಣಿ’ಯಲ್ಲಿ ಕೆಲಸ ಮಾಡುತ್ತಿದ್ದಾಗ ಎಂ ಜಿ ರೋಡ್ ನ ನಮ್ಮ ಕಚೇರಿಯ ಪಕ್ಕದಲ್ಲೇ ಇದ್ದ ‘ಕಾಫಿ ಹೌಸ್’ ನನ್ನ ಪ್ರೇಕ್ಷಣೀಯ ಸ್ಥಳವಾಗಿ ಹೋಯ್ತು.

ದಿನಕ್ಕೆ ಏನಿಲ್ಲೆಂದರೂ 20 ಕಾಫಿಯನ್ನು ಸಲೀಸಾಗಿ ಒಳಗಿಳಿಸಿಕೊಳ್ಳುತ್ತಿದ್ದ ನನಗೆ ಕಾಫಿ ನನ್ನ ಅನುದಿನದ ಜೊತೆಗಾರನಾಗಿ ಹೋಯಿತು.

ನನ್ನ ಬದುಕಿನ ಬೆಸ್ಟ್ ಮೊಮೆಂಟ್ ಯಾವುದು ಎಂದರೆ ನನಗೆ ನೆನಪಾಗುವುದರಲ್ಲಿ ಬೆಳ್ಳಂಬೆಳಗ್ಗೆ ಕಣ್ಣು ಬಿಡುತ್ತಿದ್ದಂತೆಯೇ ನನ್ನೆದುರು ಹಾಜರಾಗುತ್ತಿದ್ದ ಕಾಫಿ ಕ್ಷಣವೂ ಒಂದು.

ಆ ನಂತರ ಕಾಫಿ ಸುತ್ತಲೇ ನಾನು ಒಂದು ಜಗತ್ತನ್ನು ಸೃಷ್ಟಿಸಿಕೊಂಡೆ. ಕಾಫಿ ಬೋರ್ಡ್ ನ ಬಳಿ ಹೀಗೇ ಒಮ್ಮೆ ಹಾದು ಹೋಗುವಾಗ coffee drinkers are true lovers ಎನ್ನುವ ಸಾಲು ಕಣ್ಣಿಗೆ ಬಿತ್ತು.

ಕಾಫಿ ಹಾಗೂ ಪ್ರೇಮ.. ಆಹಾ! ಎಂತಹ ಅದ್ಭುತ ಕಾಂಬಿನೇಷನ್.

ಕೆ ನಲ್ಲತಂಬಿ ಕಾಫಿ ಆಧ್ಯಾತ್ಮವನ್ನು ಫೇಸ್ ಬುಕ್ ನಲ್ಲಿ ಹಂಚಲು ಆರಂಭಿಸಿದಾಗ ನಾನು ಒಂದೇ ಏಟಿಗೆ ಅದಕ್ಕೆ ‘ಫಿದಾ’ ಆಗಿದ್ದು ಈ ಕಾರಣಕ್ಕೆ.

ಅವರು ಬಣ್ಣಿಸಿರುವ ‘ಕೋಶಿ’ಸ್’ ನನಗೆ ನನ್ನ ಕಾಫಿ ಹೌಸ್ ನ ಘಳಿಗೆಗಳನ್ನು ನೆನಪಿಗೆ ತಂದಿತು, ನನ್ನ ಯೌವನದ ಓಣಿಯಲ್ಲಿ ಓಡಾಡಲು ನಲ್ಲತಂಬಿ ಈ ಕವಿತೆಗಳ ಸೇತುವೆ ಒದಗಿಸಿಕೊಟ್ಟರು.

ಹಾಗೆ ನೋಡಿದರೆ ಕಾಳಿಮುತ್ತು ನಲ್ಲತಂಬಿ ಸಾಹಿತ್ಯ ಲೋಕದ ಸೇತುವೆಯೇ. ಕನ್ನಡ ಮತ್ತು ತಮಿಳಿನ ನಡುವೆ ಇರುವ ಮಹತ್ವದ ಸೇತುವೆ. ಎರಡೂ ಭಾಷೆಗಳ ಮೇಲೆ ಸ್ಪಷ್ಟ ಹಿಡಿತ ಹೊಂದಿರುವ ನಲ್ಲತಂಬಿ ಸರ್ ಎರಡೂ ಭಾಷೆಯ ಮಹತ್ವದ ಕೃತಿಗಳನ್ನು ನಮ್ಮ ಕೈಗಿಟ್ಟಿದ್ದಾರೆ.

ಸದಾ ಮುಗುಳ್ನಗುವ, ಅವರೊಡನೆ ಎರಡು ಮಾತನಾಡಿದರೆ ಸಾಕು ಆತ್ಮೀಯ ಎನಿಸಿಬಿಡುವ, ನಾಲ್ಕು ಮಾತಿಗೆ ಕೋಶಿ’ಸ್ ನಲ್ಲಿ ಅವರ ಜೊತೆ ಕಾಫಿ ಕುಡಿಯಲು ಕಾರಣವಾಗಿಬಿಡುವ ವ್ಯಕ್ತಿತ್ವ ಅವರದ್ದು.

‘ನಲ್ಲತಂಬಿ, ವಿನ್ಸೆಂಟ್ ಹಾಗೂ ಕಾಫಿ’ ಈ ಮೂರೂ ಸಖತ್ ಕಾಂಬಿನೇಷನ್.

‘ನಿನ್ನೊಳು ನಾ, ನನ್ನೊಳು ನೀ, ಒಲಿದಮೇಲುಂಟೆ ನಾ..ನೀ..’ ಎನ್ನುವ ಪುತಿನ ಅವರ ಕವಿತೆಯಂತೆ ನಲ್ಲತಂಬಿಯವರೊಳಗೆ ಕಾಫಿಯೋ, ಕಾಫಿಯೊಳಗೆ ನಲ್ಲತಂಬಿಯವರೋ ಗೊತ್ತಿಲ್ಲ.

ಆದರೆ ನಲ್ಲತಂಬಿಯವರು ಮೊಗೆದು ಕೊಟ್ಟಿರುವ ಕಾಫಿ ಜ್ಞಾನ ನಮ್ಮೊಳಗೆ ಹಬೆಯಾಡುತ್ತಲೇ ಇರುತ್ತದೆ.

ಕೋವಿಡ್ ಗೆ ಐವರು ಬಲಿ;103 ಮಂದಿ ಗುಣಮುಖ

Publicstory.in


ತುಮಕೂರು: ಜಿಲ್ಲೆಯಲ್ಲಿ ಕೊರೊನ ಸೋಂಕಿಗೆ ಇಂದು ಐವರು ಬಲಿಯಾಗಿದ್ದು 80 ಹೊಸ ಪ್ರಕರಣಗಳು ಪತ್ತೆಯಾಗಿವೆ.

ತುಮಕೂರು ನಗರದ ಹೆಗಡೆ ಕಾಲೋನಿಯ 44 ವರ್ಷದ ಮಹಿಳೆ ಹಾಗೂ ಅಂತರಸನಹಳ್ಳಿ 75 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

ತಿಪಟೂರಿನ ಶಾರದನಗರದ ವಾಸಿ 68 ವರ್ಷದ ಮಹಿಳೆ ಕೊರೊನ ಪಾಸಿಟೀವ್ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪಾವಗಡ ತಾಲೂಕು ವೈ.ಎನ್. ಹೊಸಕೋಟೆಯಲ್ಲಿ 37 ವರ್ಷದ ಯುವಕ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಒಂದೇ ದಿನ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಇಂದು ಕಡಿಮೆ ಪ್ರಕರಣಗಳು ಕಂಡುಬಂದಿದ್ದು 103 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ 109ಕ್ಕೆ ಏರಿದೆ.

ಇದುವರೆಗೂ 60 ವರ್ಷ ಮೇಲ್ಪಟ್ಟ ವಯಸ್ಕರು ಮೃತರಾಗುತ್ತಿದ್ದರು. ಕಳೆದ ಎರಡು ದಿನಗಳಿಂದ ಯುವಕರು ಕೂಡ ಮೃತಪಟ್ಟಿದ್ದಾರೆ. ಇದುವರೆಗೆ ನಾಲ್ಕು ಮಂದಿ ಯುವಕ-ಯುವತಿಯರು ಸಾವನ್ನಪ್ಪಿದ್ದಾರೆ.

ಕೊರೊನಾ: ತುಮಕೂರಿನಲ್ಲಿ ಸಾವಿನ ಸಂಖ್ಯೆ ಏರಿಕೆ: ಇಂದು ಇಬ್ಬರು ಯುವಕರ ಸಾವು

0

Tumkuru: ಕೊರೊನ ಸೊಂಕಿಗೆ ಇಂದು ಇಬ್ಬರು ಬಲಿಯಾಗಿದ್ದು ತುಮಕೂರು ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿಂದು 109 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ 3420 ಮಂದಿಗೆ ಸೋಂಕು ತಗುಲಿದ್ದು 2359 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು 959 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ತುಮಕೂರು ನಗರದಲ್ಲಿ 38, ತುರುವೇಕೆರೆಯಲ್ಲಿ 22, ತಿಪಟೂರಿನಲ್ಲಿ 13 ಪ್ರಕರಣಗಳು ಇಂದು ಹೊಸದಾಗಿ ಪತ್ರೆಯಾಗಿವೆ.

ಕೊರಟಗೆರೆ 10 ಪ್ರಕರಣಗಳು, ಶಿರಾ 8 ಪ್ರಕರಣಗಳು ದೃಢಪಟ್ಟಿವೆ. ತುಮಕೂರು ನಗರದ ಸಂತೇಪೇಟೆಯ 29 ವರ್ಷದ ಯುವಕ, ಪಾವಗಡ ತಾಲೂಕು ಶೈಲಾಪುರ ಗ್ರಾಮದ 35 ವರ್ಷದ ಯುವಕ ಕೋವಿಡ್-19ಗೆ ಬಲಿಯಾಗಿದ್ದಾರೆ.

ರೈತ ಹೋರಾಟಗಾರ ದೇವರಾಜ್ ಗೆ ಡಾಕ್ಟರೇಟ್ ಪದವಿ

ತುಮಕೂರು: ಭಾರತೀಯ ಕೃಷಿಕ ಸಮಾಜ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಅಧ್ಯಕ್ಷರಾದ ರೈತಪರ ಹೋರಾಟಗಾರ ದೇವರಾಜ್ ಆಚಾರ್ಯ ರವರಿಗೆ ಶಿಲ್ಪಕಲೆಯ ಅತ್ಯುನ್ನತ ಸಾಧನೆ ಮಾಡಿ ಗೌರವಾನ್ವಿತ ಡಾಕ್ಟರೇಟ್ ಪದವಿ ಲಭಿಸಿದೆ.

ಭಾರತೀಯ ಕೃಷಿಕ ಸಮಾಜದ ತುಮಕೂರು ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ಮಾರ್ಗದರ್ಶನದಲ್ಲಿ ಒಟ್ಟುಗೂಡಿ ರೈತಪರ ಹೋರಾಟಗಳಲ್ಲಿ ,ಧರಣಿಗಳಲ್ಲಿ ಭಾಗವಹಿಸಿದ್ದಾರೆ.

ಇವರು ಸಾಮಾನ್ಯ ರೈತ ಕುಟುಂಬದಿಂದ ಬದುಕು ನಡೆಸುವ ವೃತ್ತಿ ಜೀವನದಲ್ಲಿ ಶಿಲ್ಪಕಲೆಯ ಕಲಾವಿದರಾದ ದೇವರಾಜ್ ಆಚಾರ್ಯರವರು ಅವರ ತಂದೆ ಸುರೇಶ್ ಆಚಾರ್ಯ ರವರೊಂದಿಗೆ ಶಿಲ್ಪಕಲಾ ಶಿಕ್ಷಣ ಅಭ್ಯಾಸ ಮಾಡುತ್ತಾ ಅವರಿಗೆ ಸಹಾಯಕರಾಗಿ ಶಿಷ್ಯರಾಗಿ ಬಂದವರು.

ಈಗಲೂ ರೈತ ಪರ ಹೋರಾಟದಲ್ಲಿ ಭಾಗವಹಿಸುವುದು. ಶಿಲ್ಪಿಯಾಗಿ ಸತತವಾಗಿ ಶ್ರಮಿಸಿ ಸಾಕಷ್ಟು ಆಯಾಮಗಳಿಂದ ಹೆಸರುಗಳಿಸಿದ್ದಾರೆ ಕಲೆಗಾಗಿ ಹಾಗೂ ರೈತಪರ ಹೋರಾಟಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ,

ಗ್ರಾಮೀಣ ಪ್ರದೇಶದ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ ಇವರಿಗೆ ಭಾರತೀಯ ಕೃಷಿಕ ಸಮಾಜ ತುಮಕೂರು ಜಿಲ್ಲಾ ವತಿಯಿಂದ ಹಾಗೂ ರೈತಬಾಂಧವರು ದೇವರಾಜ್ ಆಚಾರ್ಯ ರವರಿಗೆ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ ಗೌರವಾಧ್ಯಕ್ಷರಾದ ಪುಟ್ಟರಾಜು ಬ್ರಹ್ಮಸಂದ್ರ ಕಾರ್ಯಾಧ್ಯಕ್ಷರಾದ ಪಾಂಡುರಂಗ ಕೆ ಖಜಾಂಚಿ ಯಾದ ಧನಂಜಯ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವಮೂರ್ತಿ ಸಂಘಟನಾ ಕಾರ್ಯದರ್ಶಿಗಳಾದ ಸಿದ್ದಪ್ಪ ಗೌಡಿಹಳ್ಳಿ ವಿಶ್ವಕರ್ಮ ಸಮುದಾಯದ ಗುರುಗಳಾದ ವೇದ ಬ್ರಹ್ಮ ಶ್ರೀ ನಾಗಲಿಂಗ ಚಾರ್ಯರು ಮತ್ತಿತರರು ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

ಹಸ್ತ ಲಾ ವಿಕ್ಟೋರಿಯಾ ಸಿಯಂಪ್ರೆ..

0

ಜಿ.ಎನ್.ಮೋಹನ್


‘ಹಸ್ತ ಲಾ ವಿಕ್ಟೋರಿಯಾ ಸಿಯಂಪ್ರೆ’-

ಕ್ಯೂಬನ್ನರಲಿ ಕ್ಯೂಬನ್ನನಾಗಿ ಹೋಗಲು ಈ ನಾಲ್ಕು ಪದಗಳು ಸಾಕು.

ಕ್ಯೂಬಾದ ಎದೆಬಡಿತಗಳಲ್ಲಿ ಇದೂ ಒಂದು. ಕ್ಯೂಬಾದ ಗೋಡೆಗಳ ಮೇಲೆ, ಮನೆಯೊಳಗೆ, ಎಲ್ಲೆಡೆ ಇದೇ ನಾಲ್ಕು ಶಬ್ದ.

ಒಬ್ಬ ಕ್ರಾಂತಿಕಾರಿ ಇನ್ನೊಬ್ಬ ಕ್ರಾಂತಿಕಾರಿಯನ್ನು, ದೇಶವನ್ನು ಅಗಲುವಾಗ ಬರೆದ ಪತ್ರದ ಕೊನೆಯ ಸಾಲು ಇದು.

ಆದರೆ, ಈ ಸಾಲು ಈಗ ಕ್ಯೂಬಾದ ಅತ್ಯಂತ ಬೆಲೆಯುಳ್ಳ ಸಾಲಾಗಿದೆ.

ಕ್ಯೂಬಾದಲ್ಲಿ ಫಿಡೆಲ್ ರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕ್ರಾಂತಿ ನಡೆಸಿದ ಚೆಗೆವಾರ ದಿಢೀರನೆ ಕ್ಯೂಬಾವನ್ನು ಅಗಲಿ ಬೊಲಿವಿಯಾಗೆ ತೆರಳುವ ಮುನ್ನ ಬರೆದ ಪತ್ರ ಇದು.

‘ಜಯ ಸಿಕ್ಕುವವರೆಗೆ, ಎಂದೆಂದಿಗೂ ನಿಮ್ಮವನೇ’ – ಈ ಸಾಲನ್ನು ಈಗ ಕ್ಯೂಬಾ ತನ್ನ ನಾಲಿಗೆಯ ತುದಿಯಲ್ಲಿರಿಸಿಕೊಂಡಿದೆ.

ಕ್ರಾಂತಿಗಾಗಿ ನಡೆದ ದೀರ್ಘ ಹೋರಾಟ, ಕ್ರಾಂತಿಯ ಮರುಕ್ಷಣದಿಂದಲೇ ಆರಂಭವಾದ ಅಮೆರಿಕದ ಮುನಿಸು, ದಿಗ್ಭಂಧನ, ‘ಬೇ ಆಫ್ ಪಿಗ್ಸ್’ ನಲ್ಲಿ ಜರುಗಿದ ಯುದ್ಧ, ಸದಾ ನೆತ್ತಿಯ ಮೇಲೆ ಹಾರುವ ಸಿಐಎ ವಿಮಾನಗಳು, ಸೋವಿಯತ್ ದೇಶದ ಕುಸಿತ..

ಕ್ಯೂಬನ್ನರು ಸದಾ ಹೋರಾಟಗಾರರು. ಆ ಕಾರಣಕ್ಕಾಗಿಯೇ ಜಯ ಸಿಕ್ಕುವವರೆಗೆ ಎಂಬ ಮಾತು ಕ್ಯೂಬನ್ನರಿಗೆ ಅತ್ಯಂತ ಪ್ರಿಯ.

’ಚೆ’ ಅಂದೊಮ್ಮೆ ಫಿಡೆಲ್ ಗೆ ಬರೆದ ಪತ್ರ ಇನ್ನೂ ಹೋರಾಟ ನಡೆಸುತ್ತಿರುವ ಕ್ಯೂಬಾದ ಜನತೆಗೆ ಮತ್ತೆ ಮತ್ತೆ ಸ್ಫೂರ್ತಿ ತುಂಬುವ ಚೇತನವಾಗಿದೆ.

‘ನೀವು ನನ್ನಲ್ಲಿಟ್ಟ ಅಗಾಧ ನಂಬಿಕೆಯನ್ನು ಹೊಸ ಯುದ್ಧಭೂಮಿಗಳಿಗೆ ಕೊಂಡೊಯ್ಯುತ್ತೇನೆ’ ಎಂದ ‘ಚೆ’, ಫಿಡೆಲ್ ರಿಂದ ದೂರ ಹೋದರು…

‘ಈ ಜಗತ್ತಿನ ಬೇರೆ ಭಾಗಗಳಲ್ಲಿ ನನ್ನ ಅಲ್ಪಸೇವೆಯ ಅಗತ್ಯವಿದೆ.
ಅದು ನನ್ನಿಂದ ಸಾಧ್ಯ. ನಿಮಗೆ ಆ ಅವಕಾಶವಿಲ್ಲ. ಏಕೆಂದರೆ ನಿಮ್ಮ
ಬೆನ್ನ ಮೇಲೆ ಈಗ ಕ್ಯೂಬಾದ ಜವಾಬ್ದಾರಿ ಇದೆ. ಆ ಕಾರಣಕ್ಕಾಗಿಯೇ
ಈಗ ಅಗಲುವ ಸಮಯ. ನನ್ನನ್ನು ಮಗನಂತೆ ನೋಡಿಕೊಂಡ ಕ್ಯೂಬಾದ ಜನತೆಯನ್ನು ಅಗಲುತ್ತಿದ್ದೇನೆ, ಇದು ನನಗೆ ನೋವು ತರುತ್ತಿದೆ… ಹಸ್ತ ಲಾ ವಿಕ್ಟೋರಿಯಾ ಸಯಂಪ್ರೆ -‘ಚೆ’

ಉತ್ಸವದ ಮೆರವಣಿಗೆಯಲ್ಲಿ ಸುರಿದ ಹಾಡುಗಳು, ಎಲ್ಲೆಲ್ಲೂ ಮೊಳಗಿದ ಘೋಷಣೆಯ ಅರ್ಥ ಏನು ಎಂದು ಆಗ ಗೊತ್ತಾಗಿರಲಿಲ್ಲ. ಆದರೆ ನಡುರಾತ್ರಿ ಮನೆಗೆ ಬಂದ ನಾನು ರೂಮಿನೊಳಗೆ ತಲೆಗೆ ಹೊಕ್ಕಿದ್ದ ಪದಗಳನ್ನೇ ಗುಣಗುಣಿಸುತ್ತಿದ್ದಾಗ ಬಾಗಿಲು ತಟ್ಟಿದ ಶಬ್ದವಾಯಿತು.

ತೆರೆದಾಗ ಗುಸ್ತೋ, ಓಲಿವಾ ಇಬ್ಬರೂ ನಿಂತಿದ್ದರು. ಕಣ್ಣಲ್ಲಿ ಮಿಂಚು. ಕೈಕುಲುಕಿ ಹೇಳಿದರು. ‘ಹಸ್ತ ಲಾ ವಿಕ್ಟೋರಿಯಾ ಸಿಯಂಪ್ರೆ’

ನಾನು ಗುಣಗುಣಿಸುತ್ತಿದ್ದ ಪದಗಳಿಗೆ ಅರ್ಥ ವಿವರಿಸಲು ಯತ್ನಿಸಿದರು. ‘ಇಂಗ್ಲಿಸ್’ ಕೈಕೊಟ್ಟಿತು. ತಮ್ಮ ಬಳಿ ಇದ್ದ ಪುಸ್ತಕಗಳ ಪುಟ ತಿರುವಿ ತೋರಿಸಿದರು. ಏನು ಗೊತ್ತಾಗಲಿಲ್ಲ. ಆದರೆ ‘ಚೆ’ ಚಿತ್ರ ಕಂಡಿತು.

ಉತ್ಸವದ ಸಂಕಿರಣಗಳಲ್ಲಿ, ಭಾಷಣಗಳಲ್ಲಿ, ಮೆಚ್ಚುಗೆಯನ್ನು ವ್ಯಕ್ತಪಡಿಸುವಾಗ ಹೀಗೆ ಮತ್ತೆ ಮೇಲಿಂದ ಮೇಲೆ ಕೇಳಿ ಬಂದ ಮತ್ತೊಂದು ಘೋಷಣೆ ‘ಪೇಟ್ರಿಯಾ ಓ ಮ್ಯೂರ್ಟೆ’ ‘ಸೋಷಿಯಲಿಸ್ಮೋ ಓ ಮ್ಯೂರ್ಟೆ’

ಈ ಎರಡೂ ಕ್ಯೂಬಾದ ಸೂರ್ಯ-ಚಂದ್ರರು.

ಕ್ರಾಂತಿಯ ನಂತರ ಕ್ಯೂಬಾ ಮೈ ಕೊಡವಿ ಎದ್ದು ನಿಲ್ಲಲು ಸಜ್ಜಾಗುತ್ತಿದ್ದಾಗ ಅಮೆರಿಕ ಸಂಕೋಲೆಯನ್ನು ತೊಡಿಸಲು ಆರಂಭಿಸಿತು.

‘ಸಕ್ಕರೆ ಬೇಡ, ಏನೂ ಬೇಡ’ ಎಂಬ ರಾಗ ತೆಗೆಯಿತು. ಕ್ಯೂಬಾ ಜಗ್ಗದಿದ್ದಾಗ ಬಾಂಬ್ ಎಸೆತ ಆರಂಭವಾಯಿತು. ಕ್ಯೂಬಾ ಕಂಗೆಡದೆ ಅಮೆರಿಕವನ್ನು ಬಗ್ಗುಬಡಿಯಲು ಶಸ್ತ್ರಾಸ್ತ್ರಗಳನ್ನು ಕೊಡುವ ದೇಶಗಳನ್ನು ಹುಡುಕಿ ಹೊರಟಿತು.

ಫ್ರೆಂಚ್ ನೌಕೆಯೊಂದರಲ್ಲಿ ಬಂದ ಶಸ್ತ್ರಾಸ್ತ್ರಗಳನ್ನು ಹವಾನಾದ ಬಂದರಿನಲ್ಲಿ ಇಳಿಸುತ್ತಿದ್ದಾಗ ದಿಢೀರ್ ಬಾಂಬ್ ಸ್ಫೋಟವಾಯಿತು. ನೂರಕ್ಕೂ ಹೆಚ್ಚು ಜನ ಛಿದ್ರವಾದರು.

ಇಡೀ ಕ್ಯೂಬಾ ಮಮ್ಮುಲಮರುಗಿತು. ಫಿಡೆಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ ಜನಸಾಗರದ ಸತ್ತವರಿಗಾಗಿ ಶೋಕ ಮೆರವಣಿಗೆ ನಡೆಸಿತು.

ನೋವಿನಿಂದ ಭಾರವಾಗಿದ್ದ ಹೃದಯವನ್ನು ಹೊತ್ತ ಫಿಡೆಲ್ ಕ್ಯಾಸ್ಟ್ರೋ ಅಮೆರಿಕದ ಸಿಐಎ- ಪೆಂಟಗನ್ ಈ ದಾಳಿ ನಡೆಸಿದೆ ಎಂದು ಜನರಿಗೆ ತಿಳಿಸಿ ಹೇಳಿದರಲ್ಲದೆ ‘ತಾಯ್ನಾಡು ಇಲ್ಲವೇ ಸಾವು’- ‘ಪೇಟ್ರಿಯಾ ಓ ಮ್ಯೂರ್ಟೆ’ ಎಂದು ಘೋಷಿಸಿದರು.

ಅದೇ ಮುಂದೆ ಪ್ರಸಿದ್ಧ ಘೋಷಣೆಯಾಯಿತು.

ಕ್ಯೂಬಾ ಬದಲಾವಣೆಯ ಹರಿಕಾರನಾಯಿತು. ಒಂದೊಂದೇ ಹೆಜ್ಜೆ ಸಾವಿರಾರು ಜನರಿಗೆ ಹೊಸ ಬೆಳಕು ನೀಡಿತು. ಕೃಷಿ ಭೂಮಿ ಉಳುವವರಿಗೆ, ನೊಂದವರಿಗೆ ಸಿಕ್ಕಿತು. ಮನೆ ಇಲ್ಲದವರು ಮನೆಯೊಳಗೆ ಸೇರಿದರು. ಕೈಗಾರಿಕೆಗೆ ಕಾರ್ಮಿಕರನ್ನು ಕೂಗಿ ಕರೆದವು.

ಹವಾನಾದ ಕ್ರಾಂತಿ ಚೌಕದಲ್ಲಿ ಫಿಡೆಲ್ ಘೋಷಿಸಿದರು. ‘ಸೋಷಿಯಲಿಸ್ಮೋ ಓ ಮ್ಯೂರ್ಟೆ’- ‘ಸಮಾಜವಾದ ಇಲ್ಲವೇ ಸಾವು’

ಇದರೊಂದಿಗೆ ಮತ್ತೊಂದು ದನಿ ಇದೆ. ಕ್ಯೂಬನ್ನರು ಪ್ರತೀ ಬಾರಿ ಸಂಕಷ್ಟಗಳ ಪ್ರವಾಹ ಬಂದಾಗಲೆಲ್ಲಾ ಹಿಡಿದ ಹುಲ್ಲುಕಡ್ಡಿ ಅದು.

ಈ ಹುಲ್ಲುಕಡ್ಡಿಯೇ ಕ್ಯೂಬಾದ ಪ್ರತಿಯೊಬ್ಬರನ್ನು ತನ್ನ ಮೇಲೆ ಕೂರಿಸಿಕೊಂಡು ಹೊಸ ದಾರಿ ಹುಡುಕುತ್ತಾ ನಡೆದಿದೆ.

ಅದೇ ‘ವೆನ್ಸಿರಿಮೋಸ್’- ‘ವಿ ಶಲ್ ಓವರ್ ಕಂ’ – ಗೆದ್ದೇ ಗೆಲ್ಲುವೆವು.

‘ಗೆದ್ದೇ ಗೆಲ್ಲುವೆವು’ ಎಂಬ ಭಾವ ಕೂಗಿ ಹೇಳಬೇಕಾಗಿದ್ದಿಲ್ಲ. ಕ್ಯೂಬನ್ನರ ಪ್ರತಿ ಮುಖದಲ್ಲೂ ಈ ಘೋಷಣೆ ಫಳಫಳ ಹೊಳೆಯುತ್ತಿದೆ. ಪ್ರತಿಯೊಬ್ಬರೂ ಅಚಲವಿಶ್ವಾಸಿಗಳು. ಅವರಿಗೆ ಚೆನ್ನಾಗಿ ಗೊತ್ತು- ‘ನಾವು ಗೆದ್ದೇ ಗೆಲ್ಲುವೆವು’.

ಇದು ಕ್ಯೂಬನ್ನರಿಗೆ ಕೇವಲ ಹುಸಿ ಭರವಸೆಯಲ್ಲ. ಏಕೆಂದರೆ, ಪ್ರತಿ ಬಾರಿಯೂ ಅವರು ಗೆದ್ದು ಬಂದಿದ್ದಾರೆ. ನಿನ್ನೆ, ಇಂದು ಗೆದ್ದು ಬಂದಿದ್ದಾರೆ ಅಂತೆಯೇ ನಾಳೆ ಗೆದ್ದೇ ಗೆಲ್ಲುವೆವು ಎಂಬ ಆಶಯ ಹುದುಗಿಸಿಟ್ಟುಕೊಂಡಿದ್ದಾರೆ.

ಫಿಡೆಲ್ ಕ್ಯಾಸ್ಟ್ರೋ 1960ರಲ್ಲಿ ಸಮ್ಮೇಳನವೊಂದರಲ್ಲಿ ಮಾತನಾಡುತ್ತಾ, ‘ಯಾವ ಬೆಲೆ ತೆರಬೇಕಾಗಿ ಬಂದರೂ ಸರಿಯೇ ನಮ್ಮ ಜನತೆ ಗೆದ್ದೇ ಗೆಲ್ಲುತ್ತಾರೆ. ಏಕೆಂದರೆ, ಈ ದೇಶದ ಜನತೆಗೆ ಧೈರ್ಯವಿದೆ, ದೇಶಪ್ರೇಮವಿದೆ, ಇಂತಹ ಪ್ರತಿಜ್ಞೆ ಕೈಗೊಳ್ಳುವ ಏಕತೆ ಇದೆ…’

‘..ಏಕೆಂದರೆ, ಪ್ರತಿಯೊಬ್ಬರೂ ತಾಯ್ನಾಡು ಇಲ್ಲವೇ ಸಾವು ಎಂದು ಘೋಷಿಸಿದ್ದಾರೆ. ನಮ್ಮೆಲ್ಲರಿಗೂ ಇರುವ ಘೋಷಣೆ ತಾಯ್ನಾಡು ಇಲ್ಲವೇ ಸಾವು. ಆದರೆ, ಮುಂದೆ ಗೆದ್ದು ಬರಲಿರುವ ಜನತೆಗೆ ಘೋಷಣೆ ‘ವೆನ್ಸಿರಿಮೋಸ್’- ವಿ ಶಲ್ ಓವರ್ ಕಂ.’ ಎಂದು ಹೇಳಿದರು.

ಕ್ಯೂಬಾದಲ್ಲಿ ನಡೆದಾಡಿದ ಎಲ್ಲರಿಗೂ ಅರಿವಾಗುತ್ತದೆ – ಅವರು ಗೆದ್ದೇ ಗೆಲ್ಲುವರು.

ತುಮಕೂರು ಜಿಲ್ಲಾಸ್ಪತ್ರೆ 8 ವೈದ್ಯರಿಗೆ ಕೊರೊನಾ ಸೋಂಕು

ತುಮಕೂರು; ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ 8 ವೈದ್ಯರಿಗೆ ಕೊರೊನಾ ಸೋಂಕು ತಗುಲಿದ್ದು, ಆತಂಕಕ್ಕೆ ಕಾರಣವಾಗಿದೆ.

ಈ ಎಂಟು ವೈದ್ಯರಲ್ಲಿ ಐವರು ವೈದ್ಯರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದವರು.

ಉಳಿದ ಮೂವರು ವೈದ್ಯರು ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು.

ಉಳಿದ ನಾಲ್ಕು ಮಂದಿಯಲ್ಲಿ ಸ್ಟ್ಯಾಪ್ ನರ್ಸ್ ಹಾಗೂ ಡಿಎಚ್ಒ ಕಚೇರಿ ಸಿಬ್ಬಂದಿ ಸೇರಿದ್ದಾರೆ.

ಈ ಎಲ್ಲ ವೈದ್ಯರು ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇಷರತ್ ಕ್ಷಮೆಯಾಚಿಸಿದ ಸಚಿವ ಮಾಧುಸ್ವಾಮಿ

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕ್ಷಮೆ ಯಾಚಿಸಿದ ಪ್ರಸಂಗ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನಡೆಯಿತು.

ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹಣಕ್ಕೂ ಮುನ್ನ ಅಗಲಿದ ಶಾಸಕ ಸತ್ಯನಾರಾಯಣ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು. ಉಸ್ತುವಾರಿ ಸಚಿವರ ಭಾಷಣದಲ್ಲಿ ಅವರ ಹೆಸರನ್ನು ಪ್ರಸ್ತಾಪಿಸಬೇಕಿತ್ತು.

ಆದರೆ ಇದ್ಯಾವುದು ಆಗಲಿಲ್ಲ. ಸತ್ಯನಾರಾಯಣ ಅವರ ಕೊಡುಗೆಯನ್ನು ಸ್ಮರಿಸಲಿಲ್ಲ. ಕನಿಷ್ಟ ಪಕ್ಷ ಅವರ ಹೆಸರನ್ನು ಸಹ ಎಲ್ಲೂ ಹೇಳಲಿಲ್ಲ.

ಸಮಾರಂಭದ ಬಳಿಕ ಈ ಬಗ್ಗೆ ಪತ್ರಕರ್ತರು ಸಚಿವರನ್ನು ಪ್ರಶ್ನಿಸಿದಾಗ ಅವರಿಗೆ ತಿಳಿಯಿತು.

ಹೌದು, ಅಗಲಿದ ಶಾಸಕರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು. ನನ್ನ ಭಾಷಣದಲ್ಲಾದರೂ ಅವರ ಹೆಸರನ್ನು ಹೇಳಿ ಅವರ ಕೊಡುಗೆಯನ್ನು ತಿಳಿಸಬೇಕಿತ್ತು. ನನ್ನಿಂದ ತಪ್ಪಾಗಿದೆ. ಇದಕ್ಕಾಗಿ ಜಿಲ್ಲೆಯ ಜನರ ಬೇಷರತ್ ಕ್ಷಮೆ ಯಾಚಿಸುತ್ತೇನೆ ಎಂದರು.

ಈ ಅತಾಚುರ್ಯಕ್ಕೆ ಯಾರು ಹೊಣೆಯಲ್ಲ. ನಾನೇ ನೋಡಿಕೊಳ್ಳಬೇಕಿತ್ತು ಎಂದರು.

ಪ್ರಜಾವಾಣಿ ವರದಿಗಾರ ಜಯಣ್ಣ ನೆನೆದು ಮರುಗಿದ ಗುಬ್ಬಿ

ಗುಬ್ಬಿ: ಕೋವಿಡ್ 19 ವೈರಸ್ ಸೋಂಕಿಗೆ ತೀವ್ರ ಅಸ್ವಸ್ಥರಾಗಿದ್ದ ಪತ್ರಕರ್ತ ಎಸ್.ಎಚ್.ಜಯಣ್ಣ
(37) ಶುಕ್ರವಾರ ತಡರಾತ್ರಿ ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ
ನಿಧನರಾದರು. ನಿಧನ ಬಗ್ಗೆ ತಾಲ್ಲೂಕಿನ ಜನರು ಮರುಗಿದರು.

ಈ ಸಂಬಂಧ ಶನಿವಾರ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಕಾರ್ಯನಿರತ
ಪತ್ರಕರ್ತರ ಸಂಘದ ವತಿಯಿಂದ ಶ್ರದ್ದಾಂಜಲಿ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.

ನುಡಿನಮನ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ
ಉಪನಿರ್ದೇಶಕ ಎಚ್.ಕೆ.ನರಸಿಂಹಮೂರ್ತಿ ಮಾತನಾಡಿ 10 ವರ್ಷದ ಬಾಲಕನಿಂದ
ಪತ್ರಿಕೆಗಳನ್ನು ಮನೆಮನೆಗೆ ಹಂಚುತ್ತಾ ಕಷ್ಟಪಟ್ಟು ಸ್ನಾತಕೋತ್ತರ ಪದವಿ
ಪಡೆದು ಅರೆಕಾಲಿಕ ವರದಿಗಾರನಾಗಿ ಪ್ರಜಾವಾಣಿ ಪತ್ರಿಕೆಗೆ ಕೆಲಸ ನಿರ್ವಹಿಸುತ್ತಿದ್ದರು ಎಂದರು.

ಜಯಣ್ಣ ತುಂಬಾ ಸರಳ ವ್ಯಕ್ತಿತ್ವ ಹೊಂದಿದ್ದರು. ಬಡತನದ ಬೇಗೆಯಲ್ಲಿ ಅರಳಿದ ಈ
ವ್ಯಕ್ತಿ ಸ್ನೇಹಜೀವಿಯಾಗಿ 25 ವರ್ಷಗಳ ಕಾಲ ಪೇಪರ್ ವಿತರಣೆ ನಡೆಸಿಕೊಂಡು ಜೀವನ
ನಿರ್ವಹಣೆ ಮಾಡಿದ್ದರು.
ಪೇಪರ್ ಹಂಚುವ ಜೊತೆಯಲ್ಲೇ ಎಂಎ ಅರ್ಥಶಾಸ್ತ್ರ ಸ್ನಾತ್ತಕೋತ್ತರ ಪದವಿ ಮಾಡಿ
ನೂರಾರು ಮಕ್ಕಳಿಗೆ ಪಾಠ ಮಾಡುವ ಮೂಲಕ ಉತ್ತಮ ಶಿಕ್ಷಕನಾಗಿ
ಗುರುತಿಸಿಕೊಂಡಿದ್ದರು. ಇಂತಹ ವ್ಯಕ್ತಿಯ ಅಕಾಲಿಕ ಮರಣ ತೀವ್ರ ನೋವು ತಂದಿದೆ
ಎಂದು ವಿಷಾದಿಸಿದರು.

ವಿವೇಕಾನಂದ ವಿದ್ಯಾಸಂಸ್ಥೆ ಕಾರ್ಯದರ್ಶಿ ಅರುಣ್‍ಕುಮಾರ್ ಮಾತನಾಡಿ ನಮ್ಮ
ಸಂಸ್ಥೆಯಲ್ಲಿ ಐದು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದ ಜಯಣ್ಣ ಅವರು ಉತ್ತಮ
ಬೋಧನೆಯಿಂದ ನೂರಾರು ಶಿಷ್ಯರಿಗೆ ದಾರಿ ದೀಪವಾಗಿದ್ದರು. ಅವರ ಕುಟುಂಬಕ್ಕೆ ನೆರವು
ನೀಡುವ ದೃಷ್ಟಿಯಿಂದ ಆತನ ಮಗುವಿಗೆ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ರಾಜೇಶ್‍ಗುಬ್ಬಿ, ಸಾಮಾಜಿಕ ಕಾರ್ಯಕರ್ತ ನಾಗಸಂದ್ರ
ವಿಜಯ್‍ಕುಮಾರ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಆಂಜಿನಪ್ಪ ಸೇರಿದಂತೆ
ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಕೆಲಕಾಲ ಮೌನಾಚರಣೆ
ಮೂಲಕ ಶ್ರದ್ದಾಂಜಲಿ ಸಮರ್ಪಿಸಿದರು.