Thursday, May 7, 2026
Google search engine
Home Blog Page 181

ತಂದೆ ಜೀವಂತದ ಪ್ರಶ್ನೆ ಇಲ್ಲ: ಹೆಣ್ಣು ಮಕ್ಕಳಿಗೆ ಸಮ ಭಾಗ-ಸುಪ್ರೀಂ ಕೋರ್ಟ್ ತೀರ್ಪು

publicstory


ನವದೆಹಲಿ: ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಗಂಡ ಮಕ್ಕಳಂತೆ ಸಮನಾದ ಭಾಗ ಪಡೆಯುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

2005ಕ್ಕಿಂತ ಮುಂಚೆ ತಂದೆ ಸಾವಿಗೀಡಾಗಿದ್ದರೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಭಾಗ ಇಲ್ಲ ಎಂಬ ಹಿಂದಿನ ತೀರ್ಪು ಇದರೊಂದಿಗೆ ಅಸ್ತಿತ್ವ ಕಳೆದುಕೊಳ್ಳಲಿದೆ.

ಹಿಂದೂ ಉತ್ತರಾಧಿಕಾರಿ ಕಾಯ್ದೆ ತಿದ್ದುಪಡಿ (2005) ಯಾದ ದಿನದಿಂದಲೇ ಈ ಹಕ್ಕು ಅನ್ವಯಿಸುತ್ತದೆ, ತಂದೆ ಬದುಕಿರಲಿ ಅಥವಾ ಸಾವಿಗೀಡಾಗಿರಲಿ. ಜೀವಂತ ಇರುವ ಹೆಣ್ಣು ಮಕ್ಕಳು 2005ರಿಂದಲೇ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಂತೆ ಸಮನಾದ ಭಾಗ ಪಡೆಯುವ ಹಕ್ಕು ಹೊಂದಿರುತ್ತಾರೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ತೀರ್ಪು ನೀಡಿದರು.

ಈ ಕಾಯ್ದೆಯು 9-9-2005ರಿಂದಲೇ ಜಾರಿಗೆ ಬಂದಿದ್ದು, ಕಾಯ್ದೆ ಜಾರಿಯಾದ ದಿನದಿಂದಲೇ ಹೆಣ್ಣು ಮಕ್ಕಳು ಗಂಡ ಮಕ್ಕಳಂತೆ ಸಮಾನ ಅಧಿಕಾರ ಹೊಂದಿರುತ್ತಾರೆ ಎಂದು ಹೇಳಿದ್ದಾರೆ.

ನಿನ್ನ ಕೈಲಾಡೋ ಗೊಂಬೆ ನಾನಯ್ಯ…

0

ಸಿ ಎನ್ ಎನ್ ಚಾನಲ್ ನ ಅಟ್ಲಾಂಟ ಪ್ರಧಾನ ಕಚೇರಿಯಲ್ಲಿ ಜಿ.ಎನ್.ಮೋಹನ್

ಜಿ.ಎನ್.ಮೋಹನ್


ಶ್ರೀದೇವಿ ಧಡ ಧಡ ಹೆಜ್ಜೆ ಹಾಕುತ್ತಾ ನನ್ನ ಕ್ಯಾಬಿನ್ ನತ್ತ ಬರುತ್ತಿರುವುದನ್ನು ನೋಡಿದಾಗಲೇ ನನಗೆ ಗೊತ್ತಾಯ್ತು. ಇವತ್ತೇನೋ ಗ್ರಹಚಾರ ಕಾದಿದೆ ಅಂತ.

ಕ್ಯಾಬಿನ್ ಒಳಗೆ ಬಂದವಳೇ ‘ಪ್ರೋಮೋದಲ್ಲಿರುವ ಆ ಲೈನ್ ತೆಗೀಲೇಬೇಕು’ ಅಂದಳು.

ನಾನು ‘ಯಾವ ಪ್ರೋಮೋ’ ಎಂದು ಏನೂ ಗೊತ್ತಿಲ್ಲದವನಂತೆ ಕೇಳಿದೆ.

‘ಅದೇ ನ್ಯೂಸ್ ರೀಡರ್ ಗಳು ಬೇಕು ಅಂತ ಬರ್ತಾ ಇದೆಯಲ್ಲ ಆ ಪ್ರೋಮೋ.. ನೋಡೋದಿಕ್ಕೆ ಚಂದ ಇರ್ಬೇಕು ಅಂದರೇನು ಸಾರ್. ಚಂದ ಇಲ್ದೆ ಇದ್ರೂ ನ್ಯೂಸ್ ಗೊತ್ತಿದ್ದರೆ ಸಾಕಾಗಲ್ವಾ. ನೀವೂ ಹೀಗೆ ಯೋಚನೆ ಮಾಡ್ತೀರಾ ಅಂದುಕೊಂಡಿರಲಿಲ್ಲ’ ಅಂತ ಒಂದೊಂದೇ ಬುಲೆಟ್ ಅನ್ನು ಎದೆಗೆ ಅಪ್ಪಳಿಸುತ್ತಾ ಹೋದಳು.

ಲೈಫ್ ಜ್ಯಾಕೆಟ್ ಧರಿಸದೇ ಇವತ್ತು ಯಾವ್ ನ್ಯೂಸ್ ಪೇಪರ್, ಚಾನಲ್ ನ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ!

ನಾನು ಶ್ರೀದೇವಿ ಹೇಳಿದ ಕಾರಣಕ್ಕೆ ಬುದ್ದಿ ಬಂತೇನೋ ಎಂಬಂತೆ ‘ಹೋಗ್ಲಿ ಬಿಡು, ಸರಿ ಮಾಡೋಣ’ ಅಂದೆ.

ಆಗಿದ್ದದ್ದು ಇಷ್ಟು. ಈಟಿವಿಗೆ ಆ ದಯಾಮಯನು ಕೊಟ್ಟ ಶಾಪಗಳಲ್ಲಿ ಮೊದಲನೆಯದು ನಿಮಗೆ ಎಂದೆಂದೂ ನ್ಯೂಸ್ ರೀಡರ್ ಗಳು ಸಿಗದೇ ಇರಲಿ ಅನ್ನೋದು.

ನ್ಯೂಸ್ ರೀಡರ್ ಗಳು ಒಂದು ದಿನ ಬವಳಿ ಬಿದ್ದರೆ, ನಾಕು ದಿನ ಊರಿಗೆ ಹೋದರೆ, ಇದ್ದವರೂ ಮೂಗು ಮೇಲೇರಿಸಿಕೊಂಡು ನಡೆದಾಡಿದರೆ ಡೆಸ್ಕ್ ನಲ್ಲಿ ಪೀಕಲಾಟ.

ಇದ್ದ ಐದು ಬುಲೆಟಿನ್ ಗೂ ನ್ಯೂಸ್ ಓದುವವರು ಇಲ್ಲ ಅನ್ನೋ ಪರಿಸ್ಥಿತಿ. ಹಾಗಾಗಿ ರಾಜ್ಯಾದ್ಯಂತ ಬಲೆ ಬೀಸಿಯಾದರೂ ಸಮಸ್ಯೆ ರಿಪೇರಿ ಮಾಡಿಯೇ ಸೈ ಅಂತ ಸಿದ್ಧನಾಗಿಬಿಟ್ಟೆ.

ಅದಕ್ಕೆ ಮೊದಲ ಹೆಜ್ಜೆಯಾಗಿ ತೆರೆಯ ಮೇಲೆ ಕಾಣಿಸಿಕೊಂಡದ್ದೇ ’25 ವರ್ಷ ದಾಟಿರದ, ಪದವಿ ವ್ಯಾಸಂಗ ಮಾಡಿರುವ, ವಿಷಯ ಜ್ಞಾನ, ಸ್ಪಷ್ಟ ಉಚ್ಚಾರಣೆ ಗೊತ್ತಿರುವ, ನೋಡಲು ಚೆನ್ನಾಗಿರುವ ಯುವಕ/ಯುವತಿಯರು ಬೇಕಾಗಿದ್ದಾರೆ’ ಅನ್ನೋ ಪ್ರೋಮೋ..

ಆಗ ಎದ್ದದ್ದೇ ಈ ಚಂಡಮಾರುತ. ಗ್ರಾಫಿಕ್ಸ್ ಮುಖ್ಯಸ್ಥರನ್ನು ಕರೆಸಿ ‘ನೋಡಲು ಚೆನ್ನಾಗಿರುವ’ ಅನ್ನೋದನ್ನ ತೆಗೆದುಬಿಡಿ ಎಂದೆ.

ನಿಜಕ್ಕೂ ಆಗ ಚಂಡಮಾರುತದ ಕಾಲ. ಅದೇ ಕಾಲಕ್ಕೆ ನಾನು ಅಟ್ಲಾಂಟದ ಸಿಎನ್ ಎನ್ ಕಚೇರಿಯಲ್ಲಿ ನ್ಯೂಸ್ ರೀಡರ್ ಜೇನ್ ವೆರ್ಗೀ ಮುಂದೆ ಕುಳಿತಿದ್ದೆ.

ಅಮೆರಿಕಾವನ್ನು ‘ಕತ್ರಿನಾ’ ಚಂಡಮಾರುತ ಕೊಚ್ಚಿಹಾಕಿತ್ತು. ಈಗ ‘ವಿಲ್ಮಾ’ ಅದೇ ಸಾವಿನ ಸದ್ದಿನೊಂದಿಗೆ ಫ್ಲೋರಿಡಾದ ಮೂಲಕ ಅಮೆರಿಕಾವನ್ನು ಅಪ್ಪಳಿಸುತ್ತಿತ್ತು.

ನನ್ನ ಮಂಗಳೂರು ಗೆಳೆಯ ‘ಯಾಕೆ, ಈ ಚಂಡಮಾರುತಗಳಿಗೆ ಕತ್ರಿನಾ, ರೀಟಾ, ವಿಲ್ಮಾ ಅಂತ ಹುಡುಗಿಯರ ಹೆಸರೇ ಇಡುತ್ತಾರೆ’ ಅಂತ ಕೇಳಿದ್ದ.

ವೆರ್ಗೀ ಜೊತೆ ಮಾತನಾಡುತ್ತಾ ಇದ್ದವನಿಗೆ ಅದು ತಟಕ್ಕನೆ ನೆನಪಿಗೆ ಬಂತು. ಕೇಳಿಯೂಬಿಟ್ಟೆ.

ಆಕೆ ಮುಗುಳ್ನಗುತ್ತಾ ‘ಅದು ಹುಡುಗಿಯರ ಹೆಸರಲ್ಲ. ಲ್ಯಾಟಿನ್ ವರ್ಣಮಾಲೆಯ ಅಕ್ಷರಗಳು. ಲ್ಯಾಟಿನ್ ನಲ್ಲಿ ‘K’ ಅಂದರೆ ‘ಕತ್ರೀನಾ’, ‘W’ ಅಂದರೆ ‘ವಿಲ್ಮಾ’ ಅಂತ ಅಷ್ಟೇ’ ಅಂದರು.

ನನ್ನ ಸಮಸ್ಯೆ ಇನ್ನೂ ಮುಗಿದಿರಲಿಲ್ಲ.

ಏಕೆಂದರೆ ಲ್ಯಾಟಿನ್ ನಲ್ಲಿ ಇಂಗ್ಲಿಷ್ ನಂತೆ X,Y,Z ಇಲ್ಲ. Wನೊಂದಿಗೆ ಮುಗಿಯುತ್ತದೆ. ‘ಹಾಗಾದರೆ ಮುಂದಿನ ಚಂಡಮಾರುತಗಳ ಗತಿ. ಅದಕ್ಕೇನು ಮಾಡುತ್ತೀರಾ?’ ಅಂದೆ.

ಆಕೆ ಇನ್ನು ಮುಂದೆ ಬರುವ ಚಂಡಮಾರುತಕ್ಕೆ ಗ್ರೀಕ್ ವರ್ಣ ಮಾಲೆಯ ಹೆಸರು ಇಡಬೇಕು ಅಂತ ನಿರ್ಧರಿಸಿ ಆಗಿದೆ. ಮುಂದೆ ಬರುವ ಮೊದಲ ಚಂಡಮಾರುತದ ಹೆಸರು ಆಲ್ಫಾ, ನಂತರ ಬೀಟಾ, ಆಮೇಲೆನದ್ದು ತೀಟಾ ಅಂದರು.

ಚಾನಲ್ ಒಳಗೆ ಕಾಲಿಟ್ಟು ಆಗಲೇ ವರ್ಷಗಳೇ ಕಳೆದಿತ್ತು. ನ್ಯೂಸ್ ರೂಂ, ನ್ಯೂಸ್ ರೀಡರ್ ರೂಂ ಎರಡರಲ್ಲಿಯೂ ಸುದ್ದಿ ವಾಸನೆ ಹಿಡಿಯುವ ಮೂಗುಗಳು ಕಾಣದೆ ಕಂಗಾಲಾಗಿ ಕುಳಿತಿದ್ದೆ.

‘ನಿನ್ನ ಕೈಲಾಡೋ ಗೊಂಬೆ ನಾನಯ್ಯ, ಗೊಂಬೆ ನಾನಯ್ಯ..’ ಅಂತ ಚೆಂದವಾಗಿ ಸುದ್ದಿ ಓದುತ್ತಿದ್ದ ಸಂತತಿಯೇ ಸಾವಿರವಿತ್ತು.

ಈಗ ನನ್ನ ಕಿವಿಯನ್ನು ನಾನೇ ನಂಬದ ಸ್ಥಿತಿಗೆ ಬಂದಿದ್ದೆ. ಒಳ್ಳೆ ಶತಾವಧಾನದ ಪಟ್ಟು ಹಾಗೂ ಗುಟ್ಟು ಎಲ್ಲಾ ಗುತ್ತಿರುವವಳಂತೆ ವೆರ್ಗೀ ಬಳಿ ಎಲ್ಲಕ್ಕೂ ಉತ್ತರವಿತ್ತು.

ನಾನು ಕುತೂಹಲದಿಂದ ಕೇಳಿದೆ. ‘ನಿಮ್ಮ ದಿನಚರಿ ಹೇಗಿರುತ್ತೆ. ನ್ಯೂಸ್ ಗೆ ಹೇಗೆ ಪ್ರಿಪೇರ್ ಆಗ್ತೀರಾ’ ಅಂತ.

ಬೆಳಗ್ಗೆ ನಾಲ್ಕಕ್ಕೆ ಎದ್ದು ವೆಬ್ ಸೈಟ್, ಪೇಪರ್, ಸಂಪಾದಕೀಯ ಎಲ್ಲಾ ತಿರುವಿ ಹಾಕಿ ಆ ದಿನವನ್ನ ತಿಳಿದುಕೊಳ್ಳುವುದು ಮೊದಲ ಕೆಲಸ.

ಆಫೀಸಿಗೆ ಬಂದ ನಂತರ ಬುಲೆಟಿನ್ ಪ್ರೊಡ್ಯೂಸರ್ ಜೊತೆ ಚರ್ಚಿಸಿ ಸ್ಕ್ರಿಪ್ಟ್ ಬರೆಯಲು, ಪ್ಯಾಕೇಜ್ ಎಡಿಟ್ ಮಾಡಲು ಕೂಡುವುದು. ಬುಲೆಟಿನ್ ನ ರನ್ ಆರ್ಡರ್ ರೆಡಿ ಆಗುತ್ತಿದ್ದಂತೆ ವಾಯ್ಸ್ ಎಕ್ಸರ್ಸೈಸ್ ತೆರಳಿ ಐದು ನಿಮಿಷದಲ್ಲಿ ಸ್ಟುಡಿಯೋ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳುವುದು…

ನ್ಯೂಸ್ ರೂಂ ನಲ್ಲಿರುವವರಿಗೆ ನ್ಯೂಸ್ ಜ್ಞಾನ ಇರಬೇಕು ಅನ್ನುವುದನ್ನು ಆಕೆ ನನಗೆ ಮನದಟ್ಟು ಮಾಡಿಕೊಡುತ್ತಾ ಇದ್ದರು.

ತಕ್ಷಣ ನನಗೆ ಬಾಲು ನೆನಪಿಗೆ ಬಂದ. ನ್ಯೂಸ್ ಓದಿ ಮೀಟಿಂಗ್ ಗೆ ಬರುವ ನ್ಯೂಸ್ ರೀಡರ್ ಗಳಿಗೆ ಬಾಲು ಕೇಳುತ್ತಿದ್ದ ಮೊದಲ ಪ್ರಶ್ನೆ ‘ಇವತ್ತಿನ ಐದು ಹೆಡ್ ಲೈನ್ ಯಾವುದಿತ್ತು’ ಅಂತ.

ನನಗೆ ಇದು ತುಂಬಾ ಕ್ರೂರವಾದ ಪ್ರಶ್ನೆ ಅನಿಸುತ್ತಿತ್ತು. ಆದರೆ ಆಶ್ಚರ್ಯ, ಆದರೆ ಅಷ್ಟೇ ನಿಜ. ಆಗಷ್ಟೇ ತಾವೇ ಎರಡು ಬಾರಿ ಓದಿರುವ ಸುದ್ದಿಯ ಐದು ಹೆಡ್ ಲೈನ್ ಗಳು ಬಹುತೇಕರಿಗೆ ನೆನಪಿಗೆ ಬರುತ್ತಿರಲಿಲ್ಲ.

ನ್ಯೂಸ್ ಸೆನ್ಸ್ ಅನ್ನೋದು ನ್ಯೂಸ್ ರೂಂಗಳಲ್ಲಿ ಸಿಗುವ ಅಪರೂಪದ ಪದಾರ್ಥ ಅನ್ನುವಂತಹ ಸ್ಥಿತಿಗೆ ಬಂದು ನಿಂತಿದ್ದೇವೆ.

ಸ್ಟುಡಿಯೋದಲ್ಲಿ ಮುಗುಳ್ನಗುತ್ತಾ ಸುದ್ದಿಯ ಕೊನೆಹನಿಗೆ ಬಂದಿರುವ ನ್ಯೂಸ್ ರೀಡರ್ ಇಯರ್ ಫೋನ್ ಸದ್ದು ಮಾಡುತ್ತದೆ.

ಪಕ್ಕದ ಕಂಟ್ರೋಲ್ ರೂಮಿನಿಂದ ‘ಆಲಮಟ್ಟಿಯಲ್ಲಿ ಲಾರಿ ನದಿಗೆ ಬಿದ್ದುಬಿಟ್ಟಿದೆ. 15 ಸಾವು ಬ್ರೇಕ್ ಮಾಡಿ’ ಅಂತ ನಿರ್ದೇಶನ ಬರುತ್ತೆ.

ಮುಗುಳ್ನಗುತ್ತಾ ಇದ್ದ ನ್ಯೂಸ್ ರೀಡರ್ ತಕ್ಷಣ ಮುಖ ಬಿಗಿ ಮಾಡಿಕೊಂಡು, ದನಿಗೆ ಗಂಭೀರತೆ ತಂದು ‘ಇದೀಗ ತಾನೇ ಬಂದ ಸುದ್ದಿ..’ ಅಂತ ಶುರು ಮಾಡಬೇಕು.

ನ್ಯೂಸ್ ರೀಡರ್ ಬಳಿ ಇರುವುದು ಕಿವಿಗೆ ಸಿಕ್ಕ ಒಂದೆರಡು ಮಾಹಿತಿ ಅಷ್ಟೇ.. ಆದರೆ ಸುದ್ದಿ ಗಂಭೀರವಾಗಿದೆ. ಹೆಚ್ಚು ಮಾಹಿತಿ ಇಲ್ಲದೆಯೂ ಕುಳಿತ ಕಡೆಯೇ ಸುದ್ದಿ ವಿವರ ಸೃಷ್ಟಿ ಮಾಡುತ್ತಾ ಹೋಗಬೇಕು.

ಇಲ್ಲಿಯೇ ಮೊದಲ ಸವಾಲು ಎದುರಾಗುವುದು.

ಆಲಮಟ್ಟಿಯಲ್ಲಿ ಲಾರಿ ಬಿದ್ದಿದ್ದರೆ, ಆಲಮಟ್ಟಿ ಎಲ್ಲಿದೆ ಅಂತ ಗೊತ್ತಿರಬೇಕು. ಯಾವ ಜಿಲ್ಲೆಗೆ ಬರುತ್ತೆ ಅಂತ ತಿಳಿದಿರಬೇಕು. ಹಿಂದೆ ಆಗಿದ್ದ ದುರ್ಘಟನೆ ಗೊತ್ತಿರಬೇಕು. ಅಲ್ಲಿರುವ ವರದಿಗಾರ ಯಾರು ಅಂತ ಥಟ್ಟಂತ ನೆನಪಿಗೆ ಬರಬೇಕು. ಇಲ್ಲದಿದ್ದಲ್ಲಿ ‘ಜಟ್ಟಿ ಬಲು ಗಟ್ಟಿ, ಹೊಡದ್ರೆ ಮಾತ್ರ ನೂರು ಪಲ್ಟಿ’ ಅನ್ನುವಂತಾಗಿಬಿಡುತ್ತೆ.

ಒಂದು ಕಾಲವಿತ್ತು. ಅದು ನ್ಯೂಸ್ ರೀಡರ್ ಗಳ ಸ್ವರ್ಣ ಯುಗವೂ ಹೌದು.

ಸಿದ್ಧಲಿಂಗಯ್ಯ ‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ. ಚೆಲುವಾದ ನಿನ್ನ ಮಲ್ಲಿಗೆಯ ಮಯ್ಯ ಸುಟ್ಟಾವು ಬೆಳ್ಳಿ ಕಿರಣ’ ಅನ್ನುವ ಕವಿತೆ ಬರೆದದ್ದೇ ನ್ಯೂಸ್ ರೀಡರ್ ಗಳಿಗೇನೋ ಅನಿಸಿಬಿಡಬೇಕು ಹಾಗಿತ್ತು. ಬಿಸಿಲಲ್ಲಿ ಸುಳಿಯುವಂತಿಲ್ಲ, ನಡೆದು ದಣಿಯುವಂತಿಲ್ಲ.

ಆದರೆ ಯಾವಾಗ ಚಾನಲ್ ಗಳಿಗೆ ಸುದ್ದಿ ಸಹಾ ಸಾಕಷ್ಟು ಲಾಭ ತಂದುಕೊಡುತ್ತದೆ ಅಂತ ಗೊತ್ತಾಗಿಹೋಯಿತೋ ಒಂದರ ಮೇಲೊಂದರಂತೆ ನ್ಯೂಸ್ ಚಾನಲ್ ಗಳು ರಂಗ ಪ್ರವೇಶಿಸಿ ಕೂತಿವೆ.

ಕೊರತೆ ದೊಡ್ಡದಾಗಿ ಕಾಣಿಸುತ್ತಿರುವುದು ಈಗಲೇ. ಶ್ರೀದೇವಿ ಹೇಳಿದಂತೆ ‘ನೋಡಲು ಚಂದವಿರುವ’ ಅನ್ನುವ ಸಾಲಿಗೆ ನಿಜಕ್ಕೂ ಅರ್ಥವಿಲ್ಲ. ಆದರೆ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.

ಶಾಲಾ ಪ್ರವಾಸಕ್ಕೆ ಹೋಗಿದ್ದ ಹುಡುಗಿಯೊಬ್ಬಳ ಬದುಕೇ ನಾಶವಾಗಿ ಹೋದ ಕಥೆಯನ್ನ ನ್ಯೂಸ್ ರೀಡರ್ ನಿಭಾಯಿಸ್ತಾ ಇದ್ದ ರೀತಿ ನೋಡಿ ಚಡಪಡಿಸ್ತಾ ಇದ್ದ ಜೊತೆಯಲ್ಲಿದ್ದವರು ‘ಕನ್ನಡ ಚಾನಲ್ ಗಳಿಗೆ ಯಾಕೆ ಒಬ್ಬ ಬರ್ಖಾದತ್ ನ ಕೊಡೋಕೆ ಆಗಲ್ಲ’ ಅಂತ ಕೇಳಿದ್ರು.

ಒಬ್ಬ ಬರ್ಖಾದತ್ ನ ಹುಡುಕಿಬಿಡ್ಬೇಕು ಅಂತಲೇ ಬಿರುಗಾಳಿಯಂತೆ ಇಡೀ ಕರ್ನಾಟಕ ಸುತ್ತಿದ್ದು ನೆನಪಿಗೆ ಬಂತು.

ಐದು ಸಾವಿರಕ್ಕೂ ಜಾಸ್ತಿ ಮುಖಗಳನ್ನ ನೋಡಿ ವಾಪಸ್ ಬಂದಾಗ ನನ್ನ ಕರ್ನಾಟಕ ಜ್ಞಾನ ಜಾಸ್ತಿ ಆಗಿತ್ತೇ ಹೊರತು ಬರ್ಖಾದತ್ ಮಾತ್ರ ಸಿಕ್ಲಿಲ್ಲ.

ಇಷ್ಟೆಲ್ಲಾ ಆದ ಮೇಲೆ ಅದೇ ಗ್ರಾಫಿಕ್ಸ್ ನವರನ್ನ ಕರೆದು ‘ನೋಡಲು ಚೆನ್ನಾಗಿರುವ’ ಅನ್ನೋ ಲೈನ್ ಸೇರಿಸಪ್ಪಾ ಅಂದೆ. ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣುವವರು ಸಿಕ್ಕರೂ ಸಾಕಾಗಿತ್ತು.
—-

ಬನ್ನಿ ಬೆನ್ನು ತಟ್ಟೋಣ..

0

ಜಿ.ಎನ್.ಮೋಹನ್


‘ಮೊದಲು ನನ್ನ ಮುಖಕ್ಕೆ ಬಂದು ಬಿದ್ದದ್ದು ಮೊಟ್ಟೆ..
ಆ ನಂತರ ಚಪ್ಪಾಳೆ..’

– ಹೀಗೆ ಹೇಳಿದ್ದು ಜಿ ಆರ್ ವಿಶ್ವನಾಥ್.

ಹೌದು ಅದೇ ಜಿ ಆರ್ ವಿಶ್ವನಾಥ್.

ತಮ್ಮ ಮೊದಲ ಟೆಸ್ಟ್ ನಲ್ಲೇ ಸೆಂಚುರಿ ಸಿಡಿಸಿದ, ಎಲ್ಲರೂ ಅಬ್ಬರದ ಆಟಕ್ಕೆ ಶರಣಾಗಿದ್ದ ಸಮಯದಲ್ಲಿ ಕ್ರಿಕೆಟ್ ನ ಒಂದೊಂದು ಹೊಡೆತಕ್ಕೂ ಕಾವ್ಯದ ಸ್ಪರ್ಶ ನೀಡಿದ ಜಿ ಆರ್ ವಿಶ್ವನಾಥ್.

ಆಸ್ಟ್ರೇಲಿಯಾ ವಿರುಧ್ದದ ಟೆಸ್ಟ್ ಅದು.

4 ನೇ ಕ್ರಮಾಂಕ ಎಂದ ತಕ್ಷಣವೇ ಟೆನ್ಷನ್ ಗೆ ಒಳಗಾದ ಜಿ ಆರ್ ವಿಶ್ವನಾಥ್ ಮೊದಲ ಇನ್ನಿಂಗ್ಸ್ ನಲ್ಲಿ ಸಿಡಿಸಿದ್ದು ಭರ್ಜರಿ ಸೊನ್ನೆ.

ತಲೆ ತಗ್ಗಿಸಿ ಸ್ಟಾಂಡ್ ಗೆ ಮರಳುತ್ತಿದ್ದ ಜಿ ಆರ್ ಗೆ ಅಪ್ಪಳಿಸಿದ್ದು ಮೊಟ್ಟೆ, ಕೊಳೆತ ಮೊಟ್ಟೆ..

-ಹಾಗಂತ ಹೇಳುವಾಗ ಜಿ ಆರ್ ವಿಶ್ವನಾಥ್ ಅವರ ದನಿಯಲ್ಲಿ ಇನ್ನೂ ಖೇದವಿತ್ತು.

ಆದರೆ ಅದೇ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಅದೇ ಜಿ ಆರ್ ವಿಶ್ವನಾಥ್ ಸಿಡಿಸಿದ್ದು 137 ರನ್. ಅದರಲ್ಲಿ 25 ಬೌಂಡರಿಗಳೇ..

ಜಿ ಆರ್ ವಿಶ್ವನಾಥ್ ಸ್ಟಾಂಡ್ ಗೆ ಮರಳುವಾಗ ಯಾವ ಕೈಗಳು ಮೊಟ್ಟೆ ಎಸೆದಿದ್ದವೋ ಅದೇ ಕೈಗಳು ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟುತ್ತಿದ್ದವು.

‘ಬಿಗ್ ಬಾಸ್’ನ ಯಾವುದೋ ಒಂದು ಸೀಸನ್ ನಲ್ಲಿ ಕಿಚ್ಚನ ಜೊತೆ ಅಡುಗೆ ಮನೆಗೆ ಬಂದ ಜಿ ಆರ್ ಸರ್ ಸುದೀಪ್ ಗೆ ಒಂದು ಮಾತು ಕೇಳಿದರು-
‘ಸುದೀಪ್ ಈ ಎರಡರ ನಡುವೆ ಏನು ವ್ಯತ್ಯಾಸವಾಯ್ತು ಗೊತ್ತಾ?’ ಎಂದರು.

‘ನಾನು ಮೊಟ್ಟೆ ಹೊಡೆಸಿಕೊಂಡು ಆತಂಕದಿಂದ ಕುಳಿತಿದ್ದೆ. ನನ್ನ ಬೆನ್ನು ಯಾರೋ ತಟ್ಟಿದರು. ಯಾರು ಎಂದು ತಿರುಗಿನೋಡಿದರೆ ತಂಡದ ಕ್ಯಾಪ್ಟನ್’.

‘ಯಂಗ್ ಬಾಯ್, ಟೆನ್ಷನ್ ಮಾಡಿಕೊಳ್ಳಲೇಬೇಡ. ನೀನು ಈ ಇನ್ನಿಂಗ್ಸ್ ನಲ್ಲಿ ಸೆಂಚುರಿ ಹೊಡೆಯುತ್ತೀಯಾ’ ಅಂತ ಅಂದರು.

ಆ ಒಂದು ಪುಟ್ಟ ಬೆನ್ನು ತಟ್ಟುವಿಕೆ ಎಲ್ಲವನ್ನೂ ಬದಲು ಮಾಡಿಹಾಕಿಬಿಟ್ಟಿತು.

ಸೋಲಿನಿಂದ ಎತ್ತಿಕೊಂಡು ಗೆಲುವಿನ ದೋಣಿಯ ಮೇಲೆ ಕೂಡಿಸಿಬಿಟ್ಟಿತು.

ಹೌದಲ್ಲಾ, ಒಂದು ಪುಟ್ಟ ಬೆನ್ನು ತಟ್ಟುವಿಕೆ. ದೊಡ್ಡ ಗೆಲುವು. ಬನ್ನಿ ಬೆನ್ನು ತಟ್ಟೋಣ

ನಾಗಸಾಕಿಯ ಮೇಲೆ ತಲ್ಲಣದ ಮಳೆ ಸುರಿದ ದಿನ ಇಂದು.

0

ಜಿ.ಎನ್.ಮೋಹನ್


ನಾನು ೧೯೮೬ರಲ್ಲಿ ಬರೆದಿದ್ದ ಈ ಪುಟ್ಟ ಬರಹ ಮತ್ತೆ ಕಲಕಿತು.
——

3+1=0

ಎಂದು ಬರೆದರೆ ಬಹುಶಃ ನಿಮಗೆ ಸಿಗುವ ಅಂಕಿ ಕೂಡ ಸೊನ್ನೆಯೇ ಆಗಬಹುದು.

ಆದರೆ ಯುದ್ಧ ದೇಶಗಳಲ್ಲಿ ಅಪಾರ ಸಹಾನುಭೂತಿ ಸಿಗುತ್ತದೆ.

ನಿಮ್ಮ ದೇಶದಲ್ಲಿ ಮೂರಕ್ಕೆ ಒಂದು ಕೂಡಿದರೆ ನಾಲ್ಕಾಗುತ್ತದೆ.

ಆದರೆ ಯುದ್ಧ ದೇಶಗಳಲ್ಲಿ ಹಾಗಲ್ಲ.

ಮೂರಕ್ಕೆ ಒಂದು ಕೂಡಿದರೆ ಸೊನ್ನೆಯಾಗುತ್ತದೆ.

ಗಣಿತ ಜಾಗತಿಕ ಸತ್ಯ. ಯಾವಾಗಲೂ ಸುಳ್ಳು ಹೇಳುವುದಿಲ್ಲ ಎಂದು ಸಾಬೀತಾಗಿರುವಾಗ ನೀವು ಒಂದು ಕ್ಷಣ ಬೆರಗಾಗಬಹುದು.

ಆದರೆ ಇದು ವಿಚಿತ್ರ ಆದರೂ ಸತ್ಯ, ಕ್ರೂರವಾಸ್ತವ.

ತನ್ನ ತಂದೆ, ತಾಯಿ, ತಮ್ಮ ಮೂವರನ್ನೂ ಕೇವಲ ಒಂದು ಯುದ್ಧ ಬಾಂಬಿನಿಂದ ಕಳೆದುಕೊಂಡ ಈ ಏಕಾಂಗಿ ಬಾಲಕ ತಾನೇ ಕಂಡು ಹಿಡಿದ ಹೊಸ ಅಂಕಗಣಿತ ಇದು.

3+1=0

ಹೌದು! ಯುದ್ಧ ಒಮ್ಮೆ ನಿಮ್ಮ ಮನೆ ಬಾಗಿಲಿಗೆ ಬಂದರೆ ಸಾಕು ಅದು ಜಗತ್ತಿನ ಅನೇಕ ಸತ್ಯಗಳನ್ನು ಬದಲು ಮಾಡುತ್ತದೆ.

3+1=0 ಈ 3 ರ ಸ್ಥಾನದಲ್ಲಿ ನೀವು ನೂರು ಇಟ್ಟರೂ ಅಷ್ಟೆ. ಲಕ್ಷ ಇಟ್ಟರೂ ಅಷ್ಟೆ. ಅದರ ಬದಿಗೆ ಒಂದೇ ಒಂದು ಬಾಂಬು ಇಡಿ. ನಿಮ್ಮ ಅಂಕಗಣಿತವೆಲ್ಲಾ ತಲೆಕೆಳಗಾಗುತ್ತದೆ.

ಹಾಗೇ ನಿಮ್ಮ ಜೀವಗಳು ಕೂಡಾ…

₹1 ಕೋಟಿ ಪರಿಹಾರ ಕೊಡಲು ಶಾಸಕ ಮಸಾಲ ಜಯರಾಂ ಒತ್ತಾಯ

ತುಮಕೂರು: ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ ಐ.ಎ.ಎಸ್. ಅಧಿಕಾರಿ ಹೆಚ್.ಗಂಗಾಧರಯ್ಯ ಕೃಟುಂಬಸ್ತರಿಗೆ ಒಂದು ಕೋಟಿ ಪರಿಹಾರ ನೀಡುವಂತೆ ಶಾಸಕ ಮಸಾಲಜಯರಾಮ್ ಸರ್ಕಾರಕ್ಕೆ ಒತ್ತಾಯಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನೋಡೆಲ್ ಅಧಿಕಾರಿಯಾಗಿ (ಕೆಎಎಸ್) ಕೋವಿಡ್ 19 ಕರ್ತವ್ಯದಲ್ಲಿದ್ದ ಹೆಚ್.ಗಂಗಾಧರಯ್ಯ ಅವರು ಹೃದಯಾಘಾತದಿಂದ ಮರಣ ಹೊಂದಿದ್ದು,ತುಂಬಾ ದುಃಖ ಕರವಾದ ಸಂಗತಿಯಾಗಿದ್ದು ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿಯಿಂದ ತಾಲೂಕಿಗೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು 25ಲಕ್ಷ ಪರಿಹಾರವನ್ನು ಈಗಾಗಲೇ ಘೊಷಿಸಿದ್ದಾರೆ ಆದರೆ 1ಕೋಟಿ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಭಾರತೀಯ ವಾಯು ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ ನಂತರ,ಸರ್ಕಾರದ,ಕಂದಾಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ,ಕಾರ್ಯನಿರ್ವಹಿಸಿ,ಕೆ.ಎ.ಎಸ್ ಅಧಿಕಾರಿಯಾಗಿದ್ದು ಅಕಾಲಿಕ ಮರಣ ಹೊಂದಿರುವುದು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಪ್ರಾರ್ಥಿಸಿದರು.

ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಶಾಸಕ ಮಸಾಲಜಯರಾಮ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಉಪವಿಭಾಗಾಧಿಕಾರಿಗಳು, ಹಾಗೂ ತಹಶೀಲ್ದಾರ್ ರವರು ಅಂತಿಮ ಹಂತದವರೆಗೂ ಜೊತೆಗಿದ್ದು ಕುಟುಂಬದವರಿಗೆ ಧೈರ್ಯ ತುಂಬಿದರು.

ಕೋವಿಡ್: ತುಮಕೂರು ಖಾಸಗಿ ಆಸ್ಪತ್ರೆ ಗಳಲ್ಲಿ 2500 ಹಾಸಿಗೆ ಲಭ್ಯ

Publicstory


ತುಮಕೂರು: ಕೋವಿಡ್ ಪರೀಕ್ಷೆ ಹೆಸರಲ್ಲಿ ಬೇರೆಡೆಗೆ ಕಳುಹಿಸದೆ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಳಿಸಿಕೊಂಡು ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಬೇಕು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚನೆ ನೀಡಿದರು.

ತುಮಕೂರು ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳು ಒಗ್ಗೂಡಿ ಅಶ್ವಿನಿ ಆಯುರ್ವೇಧಿಕ್ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ ಆಸ್ಪತ್ರೆ ವೀಕ್ಷಿಸಿದ ನಂತರ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್-19ನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕೋೀವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವುದು ನಿಮ್ಮ ಕರ್ತವ್ಯವಾಗಿದೆ. ಆಸ್ಪತ್ರೆಗೆ ಬರುವವರನ್ನು ಚಿಕಿತ್ಸೆ ನೀಡದೆ ಕೋವಿಡ್ ಪರೀಕ್ಷೆಯ ವರದಿ ಕೇಳಿ ವಾಪಸ್ಸು ಕಳುಹಿಸಿದರೆ ಹೇಗೆ ? ತುರ್ತು ಸಂದರ್ಭದಲ್ಲಿ ಬರುವ ರೋಗಿಗಳಿಗೆ ಮೊದಲು ಚಿಕಿತ್ಸೆ ನೀಡಿ ಬಡವರ ಸೇವೆ ಮಾಡಿದರೆ ನಿಮ್ಮ ವೃತ್ತಿಗೆ ಗೌರವ ಬರುತ್ತದೆ ಎಂದರು.

ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿ ಮೀಸಲಿಡಬೇಕು, ಅದರಂತೆ ಜಿಲ್ಲೆಯಲ್ಲಿ 80 ಖಾಸಗಿ ಆಸ್ಪತ್ರೆಗಳಿವೆ. ತುಮಕೂರು ನಗರದಲ್ಲಿಯೇ 39 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿ ಲಭ್ಯವಿರುವ ಹಾಸಿಗೆ ಹಾಗೂ ಐ.ಸಿ.ಯುಗಳ ಪೈಕಿ ಶೇ.50ರಷ್ಟು ಸರ್ಕಾರಕ್ಕೆ ದೊರೆಯಲಿವೆ. ಜಿಲ್ಲೆಯಲ್ಲಿ ಸುಮಾರು 2500ಕ್ಕೂ ಹೆಚ್ಚು ಹಾಸಿಗೆಗಳು ಖಾಸಗಿ ಆಸ್ಪತ್ರೆಗಳಿಂದ ಲಭ್ಯವಾಗಲಿವೇ ಎಂದು ತಿಳಿಸಿದರು.

ವೈದ್ಯಕೀಯ ವೃತ್ತಿ ಶ್ರೇಷ್ಠವಾಗಿದ್ದು ಹಣಕ್ಕಿಂತ ಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಅನಾರೋಗ್ಯದಿಂದ ಆಸ್ಪತ್ರೆಗೆ ಬರುವವರಿಗೆ ಮಾಮೂಲಿನಂತೆ ಸೂಕ್ತ ಚಿಕಿತ್ಸೆ ನೀಡಿ, ಕೋವಿಡ್ ಲಕ್ಷಣವಿರುವ ರೋಗಿಗಳು ಬಂದರೆ, ಪರೀಕ್ಷೆಮಾಡಿ ಚಿಕಿತ್ಸೆ ನೀಡಬೇಕು, ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿ ಮಾಡಬೇಕು. ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾದರೆ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕೋವಿಡ್ ನಮ್ಮ ದೇಶ ಅಲ್ಲದೆ ಇಡೀ ಪ್ರಪಂಚಕ್ಕೆ ವ್ಯಾಪಿಸಿದೆ. ನಾವೆಲ್ಲರೂ ಒಂದಾಗಿ ಕೋವಿಡ್ ವಿರುದ್ದ ಹೋರಾಡಬೇಕು. ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಖಾಸಗೀ ಆಸ್ಪತ್ರೆಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಮಾತನಾಡಿ ಖಾಸಗಿ ಆಸ್ಪತ್ರೆಗಳ ಮನವಿಯಂತೆ ಕೆಲ ಆಸ್ಪತ್ರೆಗಳು ಒಗ್ಗೂಡಿ ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್ ಆಸ್ಪತ್ರೆ ತೆರೆಯಲು ಅನುಮತಿ ನೀಡಲಾಗಿದೆ, ಅದರಂತೆ ತುಮಕೂರು ನಗರದಲ್ಲಿ ಎರಡು ಕಡೆ ಕೋವಿಡ್ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳು ತೆರೆದಿವೆ ಎಂದರು.

ಸರ್ಕಾರದ ನಿರ್ದೇಶನದಂತೆ ಖಾಸಗೀ ಆಸ್ಪತ್ರೆಗಳು ಶೇ.50ರಷ್ಟು ಬೆಡ್ ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು. ಜಿಲ್ಲೆಯಲ್ಲಿ ಆರ್.ಟಿ.ಪಿಸಿಆರ್ ಲ್ಯಾಬ್ ಗಳ ಸಂಖ್ಯೆ ಹೆಚ್ಚಳ ಮಾಡುತ್ತಿರುವುದರಿಂದ ಪರೀಕ್ಷೆಗಳ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ, ರೆಡ್ ಕ್ರಾಸ್ ಛೇರ್ಮನ್ ನಾಗಣ್ಣ, ಚರಕ ಆಸ್ಪತ್ರೆಯ ಡಾ. ಬಸವರಾಜ್, ಡಾ. ಪ್ರಭಾಕರ, ಡಾ. ಮಹೇಶ ಸೇರಿದಂತೆ ಖಾಸಗೀ ಆಸ್ಪತ್ರೆಯ ವೈದ್ಯರು/ಪ್ರತಿನಿಧಿಗಳು ಭಾಗವಹಿಸಿದ್ದರು.

ಗಿರೀಶ್ ಕಾರ್ನಾಡ್ ಎಂಬ ‘ಆಂಬ್ಯಾ ತಾಳ್ಯೋ’

0

ಜಿ.ಎನ್.ಮೋಹನ್


‘ಹುಷಾರು, ಒಮ್ಮೆ ಬಾಟಲಿಯಿಂದ ಅದನ್ನು ಹೊರಬಿಟ್ಟರೆ ಮತ್ತೆ ಒಳಗೆ ಸೇರಿಸುವುದು ಅಸಾಧ್ಯ’ ಎಂದವರು ಗಿರೀಶ್ ಕಾರ್ನಾಡ್.

ಅದು ೧೯೯೧.

ಆಗ ತಾನೆ ಲಾಲಕೃಷ್ಣ ಅಡ್ವಾಣಿ ಅವರು ತಮ್ಮ ಮಹತ್ವದ ಕನಸಾದ ರಥವನ್ನು ಹತ್ತಿ ಯಾತ್ರೆ ಹೊರಟಿದ್ದರು. ಅದೊಂದು ಸೂಚನೆಯೇನೋ ಎಂಬಂತೆ ಉತ್ತರ ಪ್ರದೇಶ, ಬಿಹಾರದ ಹಲವು ನಗರಗಳು ಬೆಂಕಿಯಲ್ಲಿ ಉರಿಯತೊಡಗಿದವು. ಹೆಂಗಸರು ಮಕ್ಕಳೆನ್ನದೆ ಕೋಮು ಹಿಂಸಾಚಾರ ತನ್ನ ಉರಿ ನಾಲಗೆಯನ್ನು ಚಾಚಿತು.

ಆಗಲೇ ಗಿರೀಶ್ ಕಾರ್ನಾಡ್ ಮಾತನಾಡಿದ್ದು- ‘ಕೋಮು ವಿಷ ಎನ್ನುವುದು ಬಾಟಲಿಯಲ್ಲಿರುವ ದೆವ್ವ ಅದನ್ನು ಮತ್ತೆ ಒಳಗೆ ಸೇರಿಸಿ ಬಂಧಿಸುವುದು ಕಷ್ಟ’ ಎಂದು.

ಹಾಗೆ ಹೇಳುವ ಕೆಲವೇ ದಿನಗಳ ಹಿಂದಷ್ಟೇ ಕೋಮುವಾದಿಗಳು ಕಾರ್ನಾಡರು ರಾಮ ಮಂದಿರದ ಬಗ್ಗೆ ನೀಡಿದ ಹೇಳಿಕೆಗಾಗಿ ಅವರ ಮನೆಯ ಮೇಲೆ ಕಲ್ಲು ತೂರಿದ್ದರು.

ಅದರಿಂದ ಒಂದಿಂಚೂ ವಿಚಲಿತರಾಗದೆ ಕಾರ್ನಾಡ್ ನೇರ ಎದ್ದು ‘ಏಕತೆಗಾಗಿ ನಾವು- ನೀವು’ ಎನ್ನುವ ಹೆಸರಲ್ಲಿ ನಡೆದ ಇಡೀ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಕಾರ್ನಾಡರೆಂದರೆ ಕಾರ್ನಾಡರೇ.. ಅವರಿಗೆ ಮಾತಿಗಿಂತಲೂ ಕೃತಿಯಲ್ಲಿ ಹೆಚ್ಚು ವಿಶ್ವಾಸವಿತ್ತು.

ಹಾಗಾಗಿ ಅವರು ನೇರವಾಗಿ ಹೆಜ್ಜೆ ಹಾಕಿ ಎದುರಿಗೆ ಹರಡಲಾಗಿದ್ದ ೨೦೦ ಅಡಿ ಕ್ಯಾನ್ವಾಸ್ ನಲ್ಲಿ ಬಣ್ಣದ ಗೆರೆ ಎಳೆದರು.

ಅವರು ಬರೆದದ್ದು ಪಿಕಾಸೋನ ಅತ್ಯಂತ ಜನಪ್ರಿಯ ‘ಗೆರ್ನಿಕಾ’ ಕೃತಿಯನ್ನು. ಸತ್ತ ಮಗುವನ್ನು ಕೈನಲ್ಲಿ ಹೊತ್ತುಕೊಂಡು ನಗರಗಳ ಶಾಂತಿಯನ್ನು ಕದಡಿ ಹಾಕುವಂತೆ ಅಳುತ್ತಿರುವ ತಾಯಿಯ ಚಿತ್ರ ಅದು. ಯುದ್ಧ ವಿರೋಧಕ್ಕೆ ರೂಪಕವಾಗಿ ನಿಂತ ಚಿತ್ರ.

ಕಾರ್ನಾಡರು ನಾಳೆಯ ಭವಿಷ್ಯವನ್ನು ಅರಿತವರಂತೆ ಹೇಳುತ್ತಾ ಹೋದರು- ‘ಒಂದು ಜಾತಿ ಅಥವಾ ಒಂದು ಧರ್ಮಕ್ಕೆ ಬುದ್ದಿ ಕಲಿಸುತ್ತೇವೆ ಎಂದು ಹೊರಟರೆ ಬುದ್ದಿ ಕಲಿಯುವುದು ಆ ಜಾತಿ, ಧರ್ಮ, ವರ್ಗವಲ್ಲ ಬದಲಿಗೆ ಅದು ಇಡೀ ಸಮಾಜವನ್ನೇ ದುರಂತದತ್ತ ಕೊಂಡೊಯ್ಯುತ್ತದೆ. ಕೊನೆಗೆ ನಮ್ಮ ಮಕ್ಕಳನ್ನೇ ಬಲಿ ತೆಗೆದುಕೊಳ್ಳುತ್ತದೆ’ ಎಂದರು.

ಕಾರ್ನಾಡ್ ಅವರ ಕೃತಿಗಳಿಗಾಗಿ ಎಷ್ಟು ಇಷ್ಟವೋ ಅದಕ್ಕಿಂತ ಒಂದು ತೂಕ ಈ ಕಾರಣಕ್ಕಾಗಿ ನನಗೆ ಇಷ್ಟ.

ನಿಸಾರ್ ಅಹ್ಮದ್ ರ ‘ನಾನೆಂಬ ಪರಕೀಯ’ ‘ರಂಗೋಲಿ ಮತ್ತು ಮಗ’ ಹೀಗೆ ತಣ್ಣನೆ ದನಿಯಲ್ಲಿ ಸಮಾಜದ ಮಧ್ಯೆ ಕಂಡೂ ಕಾಣದಂತೆ ಏಳುತ್ತಿರುವ ಗೋಡೆಗಳ ಬಗ್ಗೆ ಇದ್ದ ಕವಿತೆಗಳನ್ನು ಓದುತ್ತಿದ್ದ ದಿನಗಳು ಅವು. ಜೊತೆಗೆ ‘ಅಲ್ಲಾನೂ ಒಂದೇ, ಬೆನಕಾನೂ ಒಂದೇ..’ ಎಂದು ಬಿ ವಿ ಕಾರಂತರ ‘ಆಲಿಬಾಬಾ’ ನಾಟಕ ಬಿಟ್ಟುಕೊಟ್ಟಿತ್ತು.

ಹೀಗೆ ಸಮಾಜದ ಮಧ್ಯೆ ಏಳುತ್ತಿರುವ ಗೋಡೆಯನ್ನು ಕಾಲಕ್ಕೂ ಮೊದಲೇ ಕಂಡವರು ಗಿರೀಶ್ ಕಾರ್ನಾಡ್.

ಹಾಗಾಗಿಯೇ ಅವರು ಗೆರ್ನಿಕಾ ಕೃತಿ ರಚಿಸಿದ ನಂತರ ‘ಲೆಬನಾನ್ ನಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತರ ನಡುವೆ ನಡೆದ ಹಿಂಸೆಯಿಂದ ಅಲ್ಲಿನ ನಾಲ್ಕು ವಿಶ್ವವಿದ್ಯಾಲಯಗಳು ಹಾಳಾದವು. ಹನ್ನೆರಡೂವರೆ ಲಕ್ಷದಷ್ಟಿದ್ದ ಜನಸಂಖ್ಯೆ ಅಪಾರ ಸಾವು ನೋವುಗಳಿಂದ ಎರಡೂವರೆ ಲಕ್ಷಕ್ಕೆ ಇಳಿದಿದೆ’ ಎಂದಿದ್ದರು.

ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ದಲ್ಲಿ ನೆಲಕ್ಕೆ ಕಿವಿಕೊಟ್ಟು ಎಲ್ಲೋ ದೂರ, ಬಹು ದೂರದಲ್ಲಿ ಹರಿದು ಬರುತ್ತಿರುವ ನೀರನ್ನು ಗುರುತಿಸುವವರಿದ್ದಾರೆ.

ನನಗೆ ಗಿರೀಶ್ ಕಾರ್ನಾಡ್ ಅರ್ಥವಾಗಿದ್ದು ಹಾಗೆ.

ಅವರು ನಾಟಕಗಳಲ್ಲಿ ಪುರಾಣ, ಚರಿತ್ರೆಯ ಪದರುಗಳನ್ನು ಬಿಡಿಸುತ್ತಾ ಹೋದರೆ ತಮ್ಮ ಮಾತು, ನಡೆಯಲ್ಲಿ ವರ್ತಮಾನದ ತಲ್ಲಣಗಳನ್ನು ಬಿಡಿಸಿಡುತ್ತಾ ಹೋದರು. ಅವರ ಚರಿತ್ರೆ, ಪುರಾಣದ ಮರು ವ್ಯಾಖ್ಯಾನ ಹಾಗೂ ಅವರ ಇಂದಿನ ಮಾತೆಲ್ಲವೂ ಒಟ್ಟಿಗೆ ದುಡಿಯುತ್ತಿದ್ದುದು ನಾಳೆಗೆ ಎಲ್ಲರಿಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಡಬೇಕು ಎನ್ನುವುದರ ಕಡೆಗೆ.

ಕಾರ್ನಾಡರ ಕೃತಿಗಳು ಸಾಕಷ್ಟು ಚರ್ಚೆಗೆ ದಾರಿಮಾಡಿದ್ದವು. ಅದು ಅಂದೂ ಸಾಕಷ್ಟು ವಿರೋಧವನ್ನೂ ಎದುರಿಸಿತ್ತು. ಆದರೆ ಅಂದಿನ ಕಾಲ ‘ಟ್ರಾಲ್ ಫ್ಯಾಕ್ಟರಿ’ಗಳ ಕಾಲವಲ್ಲ. ಹಾಗಾಗಿ ಆಗಿನ ಚರ್ಚೆ ಮಾತು ಮಾತು ಮಥಿಸಿ ಬರುವ ನವನೀತಕ್ಕೆ ಒಂದಿಷ್ಟು ಕಾರಣವಾಗಿತ್ತು.

ಆದರೆ ಜಾಗತೀಕರಣ ಹಾಗೂ ನಮ್ಮ ಮೇಲೆ ಇನ್ನಿಲ್ಲದಷ್ಟು ಹಿಡಿತ ಸಾಧಿಸಿರುವ ತಾಂತ್ರಿಕತೆ ಮಾಧ್ಯಮದ ವಿನ್ಯಾಸವನ್ನೇ ಬದಲಿಸಿಹಾಕಿದೆ. ಜಾಗತೀಕರಣ ಸಮೂಹ ಪ್ರಜ್ಞೆಯನ್ನು ಇನ್ನಿಲ್ಲವಾಗಿಸುತ್ತಾ ಹೋದಾಗಲೇ ಎದ್ದು ಬಂದ ಭಿನ್ನ ಮಾಧ್ಯಮಗಳು ಅಸಹನೆಯ ಅಂಗಳಗಳಾಗಿವೆ.

ಅಸಹನೆ ಇಂದು ಬದುಕು, ಮಾಧ್ಯಮ, ರಾಜಕಾರಣ ಎಲ್ಲದರ ಕೇಂದ್ರ ಬಿಂದು. ಹಾಗಾಗಿಯೇ ಗಿರೀಶ್ ಕಾರ್ನಾಡರಿಗೆ ಹೆಚ್ಚು ಮಾತನಾಡಬೇಕಾದ ಅನಿವಾರ್ಯತೆ ಬಂತು. ಹಾಗಾಗಿಯೇ ಹೆಚ್ಚು ಅಸಹನೆಯನ್ನು ಎದುರಿಸಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಯಿತು.

ಮನೆಗೆ ಕಲ್ಲು ಹೊಡೆದವರನ್ನು ಕಂಡು ಹಿಡಿದುಬಿಡಬಹುದು. ಸೋಶಿಯಲ್ ಮೀಡಿಯಾದ ಮರೆಯಲ್ಲಿ ನಿಂತು ಎಸೆಯುವ ಅಸ್ತ್ರಗಳನ್ನು ಎದುರಿಸುವುದು ಹೇಗೆ ಎಂದು ಗೊತ್ತಾಗದೆ ತಬ್ಬಿಬ್ಬಾಗಿರುವ ದಿನಗಳು ಇವು.

ಕಾರ್ನಾಡರು ನನಗೆ ಹತ್ತಿರವಾಗಲು ಅವರು ಫಾದರ್ ಮಾರ್ಟಿನ್ ನೆಮ್ಯೂಲರ್ ಅವರ ಕವಿತೆಗೆ ವಿರುದ್ಧವಾಗಿ ಬದುಕಿದರು ಎನ್ನುವುದೂ ಮುಖ್ಯ ಕಾರಣ.

‘ಅವರು ಕೊನೆಗೆ ನಮ್ಮನ್ನೇ ಹುಡುಕಿ ಬಂದರು, ಆಗ ನಮ್ಮ ಪರವಾಗಿ ದನಿ ಎತ್ತುವವರು ಯಾರೂ ಇರಲಿಲ್ಲ’ ಎನ್ನುತ್ತದೆ ಕವಿತೆ.

ಇಲ್ಲ, ಕಾರ್ನಾಡರು ಹಾಗಲ್ಲ. ಅವರು ಇದ್ದಾರೆ ಅವರು ದನಿ ಎತ್ತುತ್ತಾರೆ ಎನ್ನುವ ಅಪಾರ ವಿಶ್ವಾಸ ಎಲ್ಲರಿಗೂ ಇತ್ತು.

ಅವರು ದನಿ ಎತ್ತುತ್ತಿದ್ದರು ಮಾತ್ರವಲ್ಲ ಅವರು ಈ ಒಳಿತಿನ ಪರವಾಗಿ ಮತ್ತೊಬ್ಬರೂ ಸಹಾ ದನಿ ಎತ್ತಲು ಕಾರಣರಾಗುತ್ತಿದ್ದರು.

‘ಶಿವ’ ನಾಟಕಕ್ಕೆ ಬಂದ ಬೆದರಿಕೆಯ ಹಿನ್ನೆಲೆಯಲ್ಲಿ ಆ ನಾಟಕವನ್ನು ಹಿಂದೆಗೆದುಕೊಂಡಾಗ ಕಾರ್ನಾಡರು ಇಲ್ಲ ಇದು ಮುಗಿಯಬೇಕಾದದ್ದು ಹೀಗಲ್ಲ ಎಂದು ಸ್ಪಷ್ಟವಾಗಿ ತಿಳಿದವರಾಗಿದ್ದರು.

ಹಾಗಾಗಿಯೇ ಆ ತಂಡದ ಮುಖ್ಯಸ್ಥರಿಗೆ ‘ಇದು ಈ ರೀತಿ ಅಂತ್ಯವಾಗಲು ನೀವು ಬಿಡಬಾರದಿತ್ತು. ನಾವು ಬೆದರಿಕೆಯ ವಿರುದ್ಧ ದನಿ ಎತ್ತದಿದ್ದರೆ ಅವರು ನಮ್ಮನ್ನು ಭಯಪಡಿಸುತ್ತಲೇ ಇರುತ್ತಾರೆ’ ಎಂದು ಅವರು ಮನಗಾಣುವಂತೆ ಮಾಡಿದ್ದರು.

ಖ್ಯಾತ ಸಂಗೀತಗಾರರಾದ ಟಿ ಎಂ ಕೃಷ್ಣ ಹೇಳುತ್ತಾರೆ- ‘ಕಲೆ ಮುಂದೊಡ್ಡುವ ಅನಾಮಿಕ ಬಾಗಿಲು, ಕಿಟಕಿಗಳ ಮೂಲಕ ನಾವು ಬದುಕನ್ನು ಅರ್ಥೈಸಿಕೊಳ್ಳುತ್ತೇವೆ. ಈ ಬಾಗಿಲು, ಕಿಟಕಿಗಳನ್ನು ತೆರೆದುಕೊಡುವ ಕೆಲಸ ಕಲಾವಿದನದ್ದು. ಆದರೆ ಗಿರೀಶ್ ಕಾರ್ನಾಡರು ಕೇವಲ ಆ ಬಾಗಿಲುಗಳನ್ನು ತೆರೆದುಕೊಡುವ ಕೆಲಸ ಮಾಡಲಿಲ್ಲ ಬದಲಿಗೆ ಕೆಲವನ್ನು ಮುರಿದರು ಕೂಡಾ’ ಎಂದು.

ಗಿರೀಶ್ ಕಾರ್ನಾಡ್ ನಾಟಕಗಳಲ್ಲಿ ಹೇಗೆ ಒಂದು ಕಥೆಯನ್ನೋ, ಪಾತ್ರವನ್ನೋ ಮುರಿದು ಕಟ್ಟುತ್ತಿದ್ದರೋ ಥೇಟ್ ಹಾಗೆಯೇ ತಮ್ಮ ಬದುಕಿನಲ್ಲೂ ಸಮಾಜ, ವ್ಯವಸ್ಥೆ ಈಗಾಗಲೇ ಕಟ್ಟಿಬಿಟ್ಟಿದ್ದ ಗೋಡೆಗಳನ್ನು ಕೆಡಹುತ್ತಲೇ ಹೋದರು.

ನನಗೆ ಕಾರ್ನಾಡರ ಬಗ್ಗೆ ಇರುವ ಒಂದು ಅಚ್ಚರಿಯೆಂದರೆ ಅವರು ಒಂದು ಕೃತಿ ರಚನೆಯ ಬಗ್ಗೆ ಹೇಗೆ ಸಾಕಷ್ಟು ಹೋಮ್ ವರ್ಕ್ ಮಾಡುತ್ತಿದ್ದರೋ ಹಾಗೆಯೇ ವಿವೇಕ್ ಶಾನಭಾಗ್ ಹೇಳುವಂತೆ ತಾವು ಕೈಗೆತ್ತಿಕೊಳ್ಳುತ್ತಿದ್ದ ಒಂದು ಕವಿತೆಯ ಅನುವಾದಕ್ಕೂ ಅಷ್ಟೇ ಹೋಮ್ ವರ್ಕ್ ಮಾಡುತ್ತಿದ್ದರು.

ಒಂದು ಕವಿತೆಯ ಬೆನ್ನತ್ತಲು ಅವರು ಆ ಕವಿಯ ಎಲ್ಲ ಕೃತಿಗಳ ಆಳಕ್ಕೆ ಇಳಿಯುತ್ತಿದ್ದರು.

ನನಗೆ ಅನಿಸುತ್ತದೆ ಅವರು ತಮ್ಮ ಬಗ್ಗೆ ಬರುವ ವಿರೋಧ, ಹತಾಶೆ, ಸಿಟ್ಟು, ಆರ್ಭಟಗಳನ್ನೂ ಸಹಾ ಅರ್ಥ ಮಾಡಿಕೊಳ್ಳಲು ಅಷ್ಟೇ ಹೋಮ್ ವರ್ಕ್ ಮಾಡುತ್ತಿದ್ದರು ಎಂದು.

ಇಲ್ಲದಿದ್ದರೆ ಕ್ಯಾ. ಗೋಪಿನಾಥ್ ಅವರು ಹೇಳುವಂತೆ ಗಿರೀಶ್ ಕಾರ್ನಾಡರು ‘ಜನರನ್ನು ಒಡೆಯುವ ಪ್ರಯತ್ನಗಳು ಸಹಾ ಪ್ರಜಾಪ್ರಭುತ್ವದ ಒಂದು ಭಾಗವೇ. ನಾವು ಅದನ್ನು ಎದುರಿಸಬೇಕು ಸೋಶಿಯಲ್ ಮೀಡಿಯಾಗಳಿಂದಾಗಿ ಆದು ವಿವಾದವೋ ಭಾವನಾತ್ಮಕ ಸಂಗತಿಯೋ ಆಗುತ್ತದೆ. ಅದನ್ನು ನಿಯಂತ್ರಿಸಲು ಬರುವುದಿಲ್ಲ. ಪ್ರಜಾಪ್ರಭುತ್ವ ಕೆಲಸ ಮಾಡುವುದೇ ಹಾಗೆ’ ಹೇಳಲು ಸಾಧ್ಯವಾಗುತ್ತಿರಲಿಲ್ಲ .

ಕವಿ ಎಕ್ಕುಂಡಿಯವರು ನನ್ನೊಂದಿಗೆ ಹೇಳುತ್ತಿದ್ದರು- ‘ನಾನು ಯೋಧನಾಗಿ ರಣರಂಗಕ್ಕೆ ಹೋಗಲಾಗಲಿಲ್ಲ. ಆದರೆ ಅವರಿಗೆ ಬೇಕಾದ ಕತ್ತಿ ಗುರಾಣಿಗಳನ್ನು ಮಾಡಿಕೊಟ್ಟೆ’.

ಗಿರೀಶ್ ಕಾರ್ನಾಡ್ ಅವರನ್ನು ಅವರಿಲ್ಲದ ಈ ಕಾಲದಲ್ಲಿ ನೆನಪಿಸಿಕೊಳ್ಳುವಾಗ ನನಗೆ ಸ್ಪಷ್ಟವಾಗುತ್ತಿರುವುದು- ಅವರು ಯೋಧರೂ ಆಗಿದ್ದರು ಹಾಗೂ ಅವರು ಯೋಧರಿಗೆ ಬೇಕಾದ ಕತ್ತಿ ಗುರಾಣಿಗಳನ್ನೂ ಮಾಡಿಕೊಟ್ಟರು.

ಗಿರೀಶ್ ಕಾರ್ನಾಡ್ ಅಂತಹ ನಂಬುಗೆಯ ನೆರಳಾಗಿದ್ದರು. ಅಷ್ಟೇ ಅಲ್ಲ ಕಾರ್ಮೋಡ ಆವರಿಸುವ ಸಂದರ್ಭದಲ್ಲಿ ಅದರಿಂದ ರಕ್ಷಿಸುವ ನೆರಳೂ ಆಗಿದ್ದರು.

ಗಿರೀಶ್ ಕಾರ್ನಾಡ್ ಅವರಿಗೆ ಹೊಸ ಬೆಳವಣಿಗೆಗಳು ಹುಟ್ಟು ಹಾಕುತ್ತಿರುವ ಹೊಸ ಭಾಷೆಯ ಬಗ್ಗೆ ಆತಂಕವಿತ್ತು.

ಲಿಂಚಿಂಗ್, ನಗರ ನಕ್ಸಲ್, ಟುಕುಡೆ – ಟುಕುಡೆ, ದೇಶ ವಿರೋಧಿ ಎನ್ನುವ ಪದಗಳು ಹುಟ್ಟುತ್ತಿರುವ ಭಾಷೆಯ ಹೊಸ ಬೆಳವಣಿಗೆಯ ಬಗ್ಗೆ ಅವರು ಆತಂಕಿತರಾಗಿದ್ದರು.

‘ಹೊಸ ಭಾಷೆಯ ಶಬ್ದಗಳು ರಾಜಕೀಯವನ್ನು, ನಾಗರಿಕ ಹಕ್ಕುಗಳನ್ನು ಎಲ್ಲಾ ಜನರ ಮನಸ್ಸನ್ನು ವಿರೂಪಗೊಳಿಸುತ್ತಿದೆ’ ಎನ್ನುವುದು ಅವರಿಗೆ ಗೊತ್ತಾಗಿ ಹೋಗಿತ್ತು.

ಗಿರೀಶ್ ಕಾರ್ನಾಡರದ್ದು ಸದಾ ಮುಂದೆ ನಿಂತು ಗೆದ್ದು ಬರುವ ಗುಣ. ಕಾಲೇಜಿನಲ್ಲಿ ಕಾರ್ನಾಡರನ್ನು ಸಹಪಾಠಿಯಾಗಿ ಹೊಂದಿದ್ದ ವಿವೇಕ್ ಶಾನಭಾಗ್ ರ ಅಮ್ಮ ವಿವೇಕರ ಬಳಿ ಕಾರ್ನಾಡರ ಸದಾ ಮುನ್ನುಗ್ಗುವ ಸ್ವಭಾವ ಹಾಗೂ ಗೆದ್ದು ಬರುವ ಗುಣದಿಂದಾಗಿಯೇ ಅವರ ಕಾಲೇಜು ದಿನಗಳಲ್ಲಿ ಅವರಿ ಗೆ ‘ಆಂಬ್ಯಾ ತಾಳ್ಯೋ’ ಎಂದು ಹೆಸರಿಟ್ಟಿದ್ದೆವು ಎಂದಿದ್ದರಂತೆ.

‘ಆಂಬ್ಯಾ ತಾಳ್ಯೋ’ ಎಂದರೆ ಮಾವಿನ ತಳಿರು. ಅದಕ್ಕೆ ಹೆಬ್ಬಾಗಿಲ್ಲಲ್ಲೇ ಇದ್ದು ಗೊತ್ತು ಹಾಗೂ ಹೆಬ್ಬಾಗಿಲಲ್ಲೇ ಎಲ್ಲರನ್ನು ಎದುರಿಸುವುದೂ ಗೊತ್ತು. ಅಂತಹ ಮಾವಿನ ಎಲೆ ಈಗಿಲ್ಲ.
—–
ಫೋಟೋ-
‘ರಂಗಶಂಕರ’ದಲ್ಲಿ ಗಿರೀಶ್ ಕಾರ್ನಾಡ್, ನಾನು ಹಾಗೂ ಪಲ್ಲವಿ ಅರುಣ್

ತುಮಕೂರು ಟೂಡಾ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಯಾರಿಗೆ ದಕ್ಕಲಿದೆ ಅಧಿಕಾರ?

0

Publicstory


ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯೊಳಗೆ ಪೈಪೋಟಿ ಆರಂಭವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾರಿಗೆ ತಥಾಸ್ತು ಅನ್ನುತ್ತಾರೆ ಎಂಬ ಕುತೂಹಲ ಗರಿಗೆದರಿದೆ.

ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರ ನಡುವೆ ಪೈಪೋಟಿ ಆರಂಭವಾಗಿದೆ. ಸಂಘ ಪರಿವಾರದಿಂದ ಜಿ.ಕೆ.ಶ್ರೀನಿವಾಸ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ನಗರದ ಅಭಿವೃದ್ಧಿ. ಆಸ್ತಿ ಕಬಳಿಕೆದಾರರ ವಿರುದ್ಧ ಹೋರಾಟ, ನಗರದಲ್ಲಿ ಮರಗಳ ಕಡಿಯುವುದರ ವಿರುದ್ಧ ಅವಿರತ ಹೋರಾಟ ಶ್ರೀನಿವಾಸ್ ಅವರದು.ಕಟ್ಟಾ ಹಿಂದೂ ಪ್ರತಿಪಾದಕರು ಆಗಿರುವ ಅವರು ಲಾಗಾಯ್ತಿನಿಂದಲೂ ಬಿಜೆಪಿಗೆ ಅವರ‌ ನಿಷ್ಠೆ. ಮಾಹಿತಿ ಹಕ್ಕು ಕಾರ್ಯಕರ್ತರಾಗಿ ನಗರದ ಎಲ್ಲ ಜನ ಸಮುದಾಯದ ನಡುವೆಯೂ ಅವರು ಚಿರಪರಿಚಿತ. ಅವರ ತೆಕ್ಕೆಗೆ ಬರುವ ಎಲ್ಲ ಜಾತಿ, ಧರ್ಮೀಯರನ್ನು ಬಿಜೆಪಿಗೆ ಎಳೆದು ತರುವ ಚಾಣಾಕ್ಷ. ತುಮಕೂರು ನಗರದಲ್ಲಿ ಬ್ರಾಹ್ಮಣರಿಗೆ ಶಕ್ತಿ ತರುವಲ್ಲಿಯೂ ಅವರ ದುಡಿಮೆ ಕೆಲಸ ಮಾಡಿದೆ.


ಶ್ರೀನಿವಾಸ್ ಅವರು ಆಯ್ಕೆಯಾದರೆ ಬಿಜೆಪಿಯ ಇಬ್ಬರು-ಮೂವರು ಮುಖಂಡರು ಬಿಟ್ಟರೆ ಪಕ್ಷಾತೀತವಾಗಿ ಎಲ್ಲರಿಂದಲೂ ಅವರಿಗೆ ಸ್ವಾಗತ ಸಿಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ರಾಜಕಾರಣದಲ್ಲಿ ಇದೆಲ್ಲ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ಬೇರೆ ಮಾತು. ಅಧಿಕಾರ ಗದ್ದುಗೆಗೆ ಅದರದೇ ಆದ ಚೆಸ್ ಆಟಗಳಿರುತ್ತವೆ ಎಂಬುದು ಇಷ್ಟು ವರ್ಷ ಹಿಂದುತ್ವಕ್ಕಾಗಿ, ನಗರದ ಅಭಿವೃದ್ಧಿಗಾಗಿ ದುಡಿದಿರುವ ಶ್ರೀನಿವಾಸ್ ಅವರಿಗೆ ಈಗ ಗೊತ್ತಾಗಬಹುದೇನೋ?

ಇದೇನೆ ಇರಲಿ, ಹೋಟೆಲ್ ಉದ್ಯಮ ಸೇರಿದಂತೆ ನಗರದ ಅಭಿವೃದ್ಧಿಗಾಗಿ ಹಲವು ದಶಕಗಳಿಂದ ದುಡಿಯುತ್ತಿರುವ ಶ್ರೀನಿವಾಸ್ ಅವರ ಪರ ನಗರ ಜನರ ಒಲವು ಹೆಚ್ಚಿದೆ
ಕಟ್ಟಾ ಹಿಂದೂ ಪ್ರತಿಪಾದಕರು ಆಗಿರುವ ಅವರು ಲಾಗಾಯ್ತಿನಿಂದಲೂ ಬಿಜೆಪಿಗೆ ಅವರ‌ ನಿಷ್ಠೆ. ಮಾಹಿತಿ ಹಕ್ಕು ಕಾರ್ಯಕರ್ತರಾಗಿ ನಗರದ ಎಲ್ಲ ಜನ ಸಮುದಾಯದ ನಡುವೆಯೂ ಅವರು ಚಿರಪರಿಚಿತ. ಅವರ ತೆಕ್ಕೆಗೆ ಬರುವ ಎಲ್ಲ ಜಾತಿ, ಧರ್ಮೀಯರನ್ನು ಬಿಜೆಪಿಗೆ ಎಳೆದು ತರುವ ಚಾಣಾಕ್ಷ. ತುಮಕೂರು ನಗರದಲ್ಲಿ ಬ್ರಾಹ್ಮಣರಿಗೆ ಶಕ್ತಿ ತರುವಲ್ಲಿಯೂ ಅವರ ದುಡಿಮೆ ಕೆಲಸ ಮಾಡಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ವಿ.ಸೋಮಣ್ಣ, ಸುರೇಶ್ ಕುಮಾರ್ ಅವರು ಸಹ ಶ್ರೀನಿವಾಸ್ ಅವರಿಗೆ ಸ್ಥಾನ ಸಿಗಲಿ ಎಂಬ ಆಶಯ ಹೊಂದಿದ್ದಾರೆ. ಶ್ರೀನಿವಾಸ್ ಪರ ಗಟ್ಟಿಯಾಗಿ ನಿಂತಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.

ಇನ್ನು, ಪಾಲಿಕೆ ಮಾಜಿ ಸದಸ್ಯ, ಮಾಜಿ ಸಚಿವ ಸೊಗಡು ಶಿವಣ್ಣ ಅವರ ಭಾವಮೈದ ನಾಗಣ್ಣ ಸಹ ಪೈಪೋಟಿಯಲ್ಲಿದ್ದಾರೆ. ನಾಗಣ್ಣ ಪರ ಸದ್ಯಕ್ಕೆ ಜಿಲ್ಲೆಯಲ್ಲಿ ಯಾರು ಇದ್ದಂತೆ ತೋರುತ್ತಿಲ್ಲ. ಆದರೆ ಶಿವಣ್ಣ ಅವರೊಂದಿಗಿನ ಯಡಿಯೂರಪ್ಪ ಅವರ ಸಂಬಂಧದ ಕಾರಣ ನಾಗಣ್ಣ ಅವರ ಪರ ಒಲವು ಮುಖ್ಯಮಂತ್ರಿಗಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಎಲ್ಲ ಕಡೆಯೂ ಲಿಂಗಾಯತರೇ ಆಗುತ್ತಾರೆ, ಲಿಂಗಾಯತಯೇತರರಿಗೂ ಅಧಿಕಾರ ಕೊಡಬೇಕಾದರೆ ಶ್ರೀನಿವಾಸ ಅವರಿಗೆ ನೀಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕ ಜ್ಯೋತಿ ಗಣೇಶ್ ಸಹ ಜಿ.ಕೆ.ಶ್ರೀನಿವಾಸ್ ಪರ ಇದ್ದಾರೆ ಎಂದು ಹೇಳಲಾಗುತ್ತಿದೆ.

ತಾವು ಹೇಳಿದ ಇಬ್ಬರಿಗೆ ಸದಸ್ಯರಾಗಿ ಮಾಡಬೇಕು. ಟೂಡಾ ಅಧ್ಯಕ್ಷ ಯಾರಿಗಾದರೂ ಕೊಡಿ. ಮಾಜಿ ಸಚಿವ ಶಿವಣ್ಣ, ಶಾಸಕ ಜ್ಯೋತಿಗಣೇಶ್ ಅವರು ಹೇಳಿದವರಿಗೆ ಅಧ್ಯಕ್ಷ ಸ್ಥಾನ ಕೊಡಲಿ. ಇದರಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸುರೇಶ ಗೌಡ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಶಿವಣ್ಣ ಅವರೊಂದಿಗೆ ಸುರೇಶಗೌಡ ಸಂಬಂಧ ಚೆನ್ನಾಗಿರುವ ಕಾರಣ ಶಿವಣ್ಣ ಯಾರ ಕಡೆ ಹೇಳುತ್ತಾರೋ ಅವರ ಪರ ಸುರೇಶಗೌಡ ಒಲವು ವ್ಯಕ್ತಪಡಿಸುತ್ತಾರೆ ಎಂದು ಹೇಳಲಾಗಿದೆ.

ಆದರೆ ಶಿವಣ್ಣ ಅವರೊಂದಿಗೆ ಸುರೇಶಗೌಡ ಸಂಬಂಧ ಚೆನ್ನಾಗಿರುವ ಕಾರಣ ಶಿವಣ್ಣ ಯಾರ ಕಡೆ ಹೇಳುತ್ತಾರೋ ಅವರ ಪರ ಸುರೇಶಗೌಡ ಒಲವು ವ್ಯಕ್ತಪಡಿಸುತ್ತಾರೆ ಎಂದು ಹೇಳಲಾಗಿದೆ.

ಜಿ.ಕೆ.ಶ್ರೀನಿವಾಸ್ ಅವರು ಮೃದು ಸ್ವಭಾವಿ. ಪ್ರಾಮಾಣಿಕ. ಇವರು ಅಧ್ಯಕ್ಷರಾದರೆ ಕಷ್ಟ ಎಂಬ ಕಾರಣದಿಂದ ಭೂಗಳ್ಳರು ಸಹ ಶ್ರೀನಿವಾಸ್ ವಿರುದ್ಧ ಕೆಲಸ ಮಾಡಲು ಆರಂಭಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಚುನಾವಣೆ ವೇಳೆಯಲ್ಲಿ ಹೋರಾಟಗಾರ, ಆರ್ ಟಿಐ ಕಾರ್ಯಕರ್ತರಾದ ಇಮ್ರಾನ್ ಪಾಷ ಅವರ ಜೊತೆಗೆ ಜಿ.ಕೆ.ಶ್ರೀನಿವಾಸ್ ಇದ್ದ ಫೋಟೊವನ್ನು ಬಳಸಿಕೊಂಡು ಕೆಲವರು ಅವರ ವಿರುದ್ಧ ತಂತ್ರ ಹೆಣೆಯುವ ಕೆಲಸ ಆರಂಭಿಸಿದ್ದಾರೆ.

ನಗರ ಶಾಸಕ ಜ್ಯೋತಿಗಣೇಶ್ ಅವರ ನಿರ್ಧಾರವೇ ಹೆಚ್ಚು ಪ್ರಭಾವ ಬೀರುವುದರಿಂದ ಅವರ ಗಟ್ಟಿ ನಿರ್ಧಾರದ ಮೇಲೆ ಶ್ರೀನಿವಾಸ್ ಅಥವಾ ನಾಗಣ್ಣ ಅವರ ಭವಿಷ್ಯ ಅಡಗಿದೆ‌
ಇದೆಲ್ಲರ ನಡುವೆ, ಈ ಸಲದ ಟೂಡ ಅಧ್ಯಕ್ಷ ಸ್ಥಾನದ ಆಯ್ಕೆಯ ಹಿಂದೆ ರಾಜ್ಯ ಬಿಜೆಪಿಯಲ್ಲಿರುವ ಒಳ ಜಗಳ, ಬಲವನ್ನು ಗಟ್ಟಿಗಳಿಸಿಕೊಳ್ಳುವ ಎರಡು ಗುಂಪುಗಳ ನಡುವಿನ ಲೆಕ್ಕಾಚಾರದ ಮೇಲೆಯೂ ನಿಂತಿದೆ ಎಂಬುದು ಬಿಜೆಪಿಯ ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ.

ಜಿಲ್ಲೆಯಲ್ಲಿಂದು 133 ಮಂದಿಗೆ ಕೋವಿಡ್-19 ಸೋಂಕು ದೃಢ.

ತುಮಕೂರು: ಜಿಲ್ಲೆಯಲ್ಲಿ 133 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2411ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಂದು ತುಮಕೂರು-44, ಕುಣಿಗಲ್-13, ಕೊರಟಗೆರೆ-15, ಚಿಕ್ಕನಾಯಕನಹಳ್ಳಿ-4, ಶಿರಾ-5, ಮಧುಗಿರಿ-4, ಗುಬ್ಬಿ-7, ಪಾವಗಡ-5, ತಿಪಟೂರು-25, ತುರುವೇಕೆರೆ-11 ಸೇರಿದಂತೆ ಒಟ್ಟು 133 ಮಂದಿಯಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.

ಇಂದು ಜಿಲ್ಲಾಸ್ಪತ್ರೆಯಿಂದ 104 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 1369 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 972 ಸಕ್ರಿಯ ಪ್ರಕರಣಗಳಿದ್ದು, ಇಂದು ಮೂವರು ಮೃತಪಟ್ಟಿದ್ದಾರೆ. ಈವರೆಗೆ 70 ಮಂದಿ ಕೋವಿಡ್-19 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿ ರಂ ಎಂಬ ಘಮ

0

ಜಿ.ಎನ್.ಮೋಹನ್


ಅದು ‘ಕಾವ್ಯ ಮಂಡಲ’ದ ಕನಸನ್ನು ಹೆರಲು ಕಿ ರಂ ಸಜ್ಜಾಗುತ್ತಿದ್ದ ದಿನಗಳು.

ಅವರೊಳಗೆ ಒಂದು ಅಶಾಂತ ಸಂತನ ತಹತಹವಿತ್ತು. ಯಾವುದೋ ಒಂದು ದುಂಬಿ ಪರಾಗಸ್ಪರ್ಶ ಮಾಡುತ್ತದೆ ಎನ್ನುವಂತೆ ಕಿ ರಂ ಕಾಯುತ್ತಿದ್ದರು. ಅವರು ಕನಸುಗಳನ್ನು ಸಾಕಷ್ಟು ಹೆರುತ್ತಿದ್ದರು.

ಆದರೆ ಆ ಕನಸು ಇನ್ನಷ್ಟು ರೆಕ್ಕೆ ಪಡೆಯಲು ಅವರಿಗೆ ಕೇಳುವ ಕಿವಿಗಳು ಬೇಕಿತ್ತು. ನೆಲದಲ್ಲಿ ಆ ಕನಸ ಬೀಜ ಊರುವವರು ಬೇಕಾಗಿತ್ತು. ಅವರು ಹಾಗೆ ಅರಸುತ್ತಿದ್ದಾಗ ಕಾಲಿಗೆ ತೊಡರಿಕೊಂಡವರು ನಾವು.

ಅದು ನಾನು ‘ಸಂಗೀತ, ನೃತ್ಯ ಮತ್ತು ನಾಟಕ ವಿಭಾಗ’ದಲ್ಲಿ ಓದುತ್ತಿದ್ದ ದಿನಗಳು. ಹಲವು ವರ್ಷ ಸಂಸ್ಕೃತ ಕಲಿತು ಬಂದವನನ್ನು ಕ ವೆಂ ರಾಜಗೋಪಾಲ್ ತಮ್ಮ ಸಾತ್ವಿಕ ಬೆದರಿಕೆಯಿಂದ ಕನ್ನಡದ ಕ್ಯಾನ್ ವಾಸ್ ಗೆ ಎಳೆದು ತಂದು ಕೂರಿಸಿದ್ದರು.

ಇಲ್ಲೊಂದು ಆಶ್ಚರ್ಯವಿತ್ತು. ಇಡೀ ವಿಭಾಗಕ್ಕೆ ನಾನೊಬ್ಬನೇ ಕನ್ನಡ ಐಚ್ಚಿಕ ವಿದ್ಯಾರ್ಥಿ.

ನನ್ನ ಪದವಿ ವಿಭಾಗವನ್ನು ನೇರವಾಗಿ ಬೆಂಗಳೂರು ವಿಶ್ವವಿದ್ಯಾಲಯವೇ ನಡೆಸುತ್ತಿದ್ದರಿಂದ ದೂರದ ಜ್ಞಾನ ಭಾರತಿ ಆವರಣದಿಂದ ನನ್ನೊಬ್ಬನಿಗೆ ಪಾಠ ಮಾಡಲೆಂದೇ ಕಿ ರಂ ನಾಗರಾಜ್, ಸಿದ್ದಲಿಂಗಯ್ಯ, ಡಿ ಆರ್ ನಾಗರಾಜ್, ಬಸವರಾಜ ಕಲ್ಗುಡಿ ಎಲ್ಲರೂ ನಗರದ ಸೆಂಟ್ರಲ್ ಕಾಲೇಜಿಗೆ ಬರಬೇಕಿತ್ತು.

ಆದರೆ ಕಿ ರಂ ನನಗೆ ಪಾಠ ಮಾಡಲು ಹೊಸ ಹಾದಿ ಕಂಡುಕೊಂಡರು.

ಕೆಂಪೇಗೌಡ ರಸ್ತೆ, ಅವಿನ್ಯೂ ರಸ್ತೆ, ಕೆ ವಿ ಟೆಂಪಲ್ ಸ್ಟ್ರೀಟ್ ನಲ್ಲಿದ್ದ ಅಸಂಖ್ಯಾತ ಹೋಟೆಲುಗಳ ಪಟ್ಟಿಯನ್ನು ನನ್ನ ಮುಂದೆ ವಗಾಯಿಸಿದವರೇ ‘ಇನ್ನು ಮುಂದೆ ಇವೇ ನಿನ್ನ ಕ್ಲಾಸ್ ರೂಮ್’ ಎಂದು ಘೋಷಿಸಿಬಿಟ್ಟರು.

ಯೋಚನೆ ಮಾಡಲು ಒಂದು ಕ್ಷಣವೂ ಅವಕಾಶ ನೀಡದೆ ಪ್ರತೀ ದಿನ ಒಂದೊಂದು ಹೋಟೆಲಿಗೆ ಕರೆದೊಯ್ದು ಅಲ್ಲಿ ತಿಂಡಿ ತಿನಿಸುತ್ತಾ ಹೋದರು. ಕಾವ್ಯ ಮೀಮಾಂಸೆ ಪಾಠ ಕೇಳಲು ಸಜ್ಜಾಗಿ ಹೋಗುತ್ತಿದ್ದ ನಾನು ಪಾಕಶಾಸ್ತ್ರಜ್ಞನಾಗಿ ಪಳಗುತ್ತಾ ಹೋದೆ.

ನಾನು ಯಾವುದೇ ಶೂಟ್ ಮುಗಿಸಿ ಬರುವಾಗ ನನ್ನ ಕ್ಯಾಮೆರಾ ‘ಕ್ರ್ಯೂ’ನೊಂದಿಗೆ ಅಥವಾ ದೂರದೂರುಗಳಿಂದ ಬೆಂಗಳೂರಿಗೆ ಬರುವ ಗೆಳೆಯರೊಂದಿಗೆ ದಾಳಿ ಇಡುವುದು ಇಂತಹ ಸಂದಿಗೊಂದಿಯ ರಸಾಗಾರಗಳಿಗೇ..

ಅವರೆಲ್ಲರಿಗೂ ಅಚ್ಚರಿ ಈ ನಿಗೂಢ ಲೋಕವನ್ನು ಇವನು ಹೊಕ್ಕಿದ್ದಾದರೂ ಯಾವಾಗ ಎಂದು. ಆಗೆಲ್ಲಾ ನಾನು ಕಿ ರಂ ರನ್ನು ದಂತ ಕಥೆಯಾಗಿ ಪರಿವರ್ತಿಸುತ್ತಿದೆ.

ಬೆಂಗಳೂರಿನ ಹೋಟೆಲ್ ಗಳನ್ನು ರಸಾಸ್ವಾದನೆಗೆ ಬಳಸಿಕೊಂಡ ನನಗೆ ಕಾವ್ಯದ ರುಚಿ ಹತ್ತಿದ್ದು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕಣ್ಣು ತೆರೆಯುತ್ತಾ ಹೋದ ‘ಕಾವ್ಯ ಮಂಡಲ’ದ ಅಂಗಳದಲ್ಲಿ.

ಕಾವ್ಯ ಮಂಡಲಕ್ಕೆ ನಿಸಾರ್ ಬರುತ್ತಾರೆ ಎಂದೋ, ಎಚ್ ಎಸ್ ಶಿವಪ್ರಕಾಶ್ ಬರುತ್ತಾರೆ ಎಂದೋ ಉತ್ಸಾಹ ತುಂಬಿಕೊಳ್ಳುತ್ತಿದ್ದ ಕಿ ರಂ ಅದಕ್ಕೆ ಬೇಕಾದ ರಂಗ ಸಜ್ಜು ಮಾಡಬೇಕಾದದ್ದನ್ನು ಯೋಚನೆ ಮಾಡಿ ಸಪ್ಪೆಯಾಗುತ್ತಿದ್ದರು.

ಆಗ ನಾವೇ ಅವರ ತೋಳುಗಳಾಗಿ ಕ್ಲಾಸ್ ರೂಮ್ ನ ಡೆಸ್ಕು ಟೇಬಲುಗಳನ್ನು ಎಳೆದಾಡುತ್ತಾ ವೇದಿಕೆಯಾಗಿ ಪರಿವರ್ತಿಸಿಬಿಡುತ್ತಿದ್ದೆವು. ಕಿ ರಂ ಮುಖದಲ್ಲಿ ಮತ್ತೆ ಮಂದಹಾಸ.

ಹೀಗಿರುವಾಗಲೇ ‘ಮಿಲರೇಪ’ವನ್ನೂ, ‘ಸಮಗಾರ ಭೀಮವ್ವ’ಳನ್ನೂ ನಮ್ಮ ಎದೆಯೊಳಗೆ ಗೊತ್ತಿಲ್ಲದಂತೆ ಸುರಿಯುತ್ತಾ ಹೋದರು. ಒಂದು ಭಾನುವಾರದ ಕಾವ್ಯ ಮಂಡಲದಲ್ಲಿ ಎಚ್ ಎಸ್ ಶಿವಪ್ರಕಾಶರ ಕವಿತೆಗಳನ್ನು ಓದಲು ನನಗೇ ಆಹ್ವಾನ ನೀಡಿದರು.

ಆ ವೇಳೆಗೆ ನಾನು ಶಿವಪ್ರಕಾಶರ ಜೊತೆಗೆ ಎಷ್ಟು ಸುತ್ತಿದ್ದೆ ಮತ್ತು ಅವರ ಬಹುತೇಕ ಎಲ್ಲಾ ಕವಿತೆ, ನಾಟಕಕ್ಕೆ ಕಿವಿಯಾಗಿದ್ದೆ. ಎಂದರೆ ನಾನು ನನಗೆ ಗೊತ್ತಿಲ್ಲದಂತೆಯೇ ಥೇಟ್ ಶಿವಪ್ರಕಾಶರ ವಾಚನದ ವಿನ್ಯಾಸದಲ್ಲಿಯೇ ಕವಿತೆಗಳನ್ನು ಓದಿದ್ದೆ.

ಕಿ ರಂ ನಂತರ ಹೇಳಿದ್ದರು ‘ಕವಿತೆಗೆ ಒಂದೇ ದನಿಯಿರುವುದಿಲ್ಲ. ಅದಕ್ಕೆ ನಿನ್ನದೇ ಉಸಿರು ಜೋಡಿಸಿ ನೋಡು’ ಎಂದು. ಆ ಕ್ಷಣದಲ್ಲಿ ಅವರು ನನಗೆ ಕವಿತೆಯನ್ನು ನನ್ನದಾಗಿಸಿಕೊಳ್ಳಲು ಒಂದು ದೊಡ್ಡ ಪಟ್ಟು ಕಲಿಸಿದ ಜಟ್ಟಿಯಂತೆ ಕಂಡಿದ್ದರು.

ಕಿ ರಂ ಹಾಗೆ ಬಿಟ್ಟುಕೊಟ್ಟ ಗುಟ್ಟುಗಳ ಲೆಕ್ಕ ಇಟ್ಟವರಾರು. ಪ್ರತಿಯೊಬ್ಬರಿಗೂ ಇಂತಹ ಎಷ್ಟೋ ನೆನಪುಗಳನ್ನು ಕೈನಲ್ಲಿಟ್ಟು ಅವರು ನಡೆದು ಹೋದರು.

ನನ್ನ ಮೊದಲ ಕವಿತಾ ಸಂಕಲನ ‘ಸೋನೆ ಮಳೆಯ ಸಂಜೆ’ ಹೊರ ಬಂದಾಗ ವಿಶ್ವವಿದ್ಯಾಲಯ ಹೊರತರುತ್ತಿದ್ದ ಸಾಹಿತ್ಯ ಪತ್ರಿಕೆಗೆ ಪರಿಚಯಿಸಲು ನನ್ನ ಕೃತಿಯನ್ನೇ ಆಯ್ದುಕೊಂಡರು ಎನ್ನುವುದು ನನ್ನ ತುರುಬಿಗೆ ಸಿಕ್ಕ ಗರಿ.

ನನ್ನ ಕನಸಾದ ‘ಮೇಫ್ಲವರ್ ಮೀಡಿಯಾ ಹೌಸ್’ನ ಅಂಗಳಕ್ಕೆ ಬಂದು ಲಂಕೇಶರ ಬಗ್ಗೆ ಹಲವು ಒಳನೋಟಗಳನ್ನು ಕಟ್ಟಿಕೊಟ್ಟದ್ದು, ಶಿವಾಜಿನಗರ ಎನ್ನುವುದು ರಾತ್ರಿಯಾಗುತ್ತಿದ್ದಂತೆ ಮಾಂಸದ ಅಡ್ಡೆಯಾಗುವುದು..

ನಾನು ಪದವಿಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ನಿಂತಾಗ ತಾವೂ ಪ್ರಚಾರದ ಪೋಸ್ಟರ್ ಅಂಟಿಸಿದ್ದು, ನನ್ನ ‘ಪಂಪ ಬಿಕ್ಕುತಾನೆ..’ ಕವಿತೆಯನ್ನು ಅವರ ಕವಿತೆಯೇನೋ ಎಂಬಂತೆ ಮೆರೆಸಿದ್ದು ಎಲ್ಲವೂ ನನ್ನೊಳಗೆ ಇರುವ ಘಮ.

ಹೀಗನ್ನುವಾಗಲೇ ನನಗೆ ಗೆಳೆಯ, ಚಿತ್ರ ನಿರ್ದೇಶಕ ಪರಮೇಶ್ವರ ಗುರುಸ್ವಾಮಿ ಹೇಳಿದ್ದು ನೆನಪಿಗೆ ಬರುತ್ತದೆ. ಅವರಿಗೆ ‘ಘಮ’ದ ಬಗ್ಗೆ ಒಳ್ಳೆಯ ಜ್ಞಾನವಿತ್ತು.

ಅತ್ತರಿನ ಬಗ್ಗೆ ಇದ್ದ ಜ್ಞಾನ ಅವರನ್ನು ಬೆಂಗಳೂರಿನ ನೂರೆಂಟು ಗಲ್ಲಿಗಳನ್ನು ಸುತ್ತಿಸಿತ್ತು, ಹಲವಾರು ಪುಸ್ತಕ ತಿರುವಿ ಹಾಕುವಂತೆ ಮಾಡಿತ್ತು, ಮನೆಯನ್ನು ಒಂದು ಪರಿಮಳದ ಪಲ್ಲಕ್ಕಿಯೇನೋ ಎಂದು ಅನುಮಾನ ಬರುವಂತೆ ಪರಿವರ್ತಿಸುವುದನ್ನು ಕಲಿಸಿತ್ತು. ಅತ್ತರಿನ ಬಗ್ಗೆ ಆ ವೇಳೆಗೆ ಇದ್ದ ಎಲ್ಲಾ ಚಲನಚಿತ್ರಗಳನ್ನು ಸಂಗ್ರಹಿಸಿ ನೋಡುವಂತೆ ಮಾಡಿತ್ತು.

ಕನ್ನಡವನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿದ, ಕವಿತೆಯನ್ನು ಇನ್ನಷ್ಟು ಎದೆಗೆ ಹತ್ತಿರವಾಗುವಂತೆ ಮಾಡಿದ ಕಿ ರಂ ಬಗ್ಗೆ ಎಲ್ಲರಿಗೂ ವಿಶೇಷ ಪ್ರೀತಿ. ಅಂತಹ ಘಮ ನಿಮ್ಮೊಳಗೂ ಅರಳಲಿ..