Thursday, May 7, 2026
Google search engine
Home Blog Page 182

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ..?

0

ಜಿ.ಎನ್.ಮೋಹನ್


ಯಾರ್ ಹೇಳಿದ್ರು ನಿಮಗೆ ಆ ಚಾಕಲೇಟ್ ತಿನ್ನೋಕೆ?- ಅಂತ ಗದರಿಸಿದ್ದು ನಿಗೆಲ್ ಪ್ರಾಗ್ಬೇಡ್.

ಸಿ ಎನ್ ಎನ್ ನ ಕಾನ್ಫರೆನ್ಸ್ ರೂಮಲ್ಲಿ ಕುಳಿತಿದ್ದ ನಾನೆಂಬ ನಾನೂ, ಪಕ್ಕದಲ್ಲಿದ್ದ ದಕ್ಷಿಣ ಆಫ್ರಿಕಾದ ಶಬಲಾಲ, ಜಪಾನಿನ ಮೆಗ್, ಸ್ಲೊವೇನಿಯಾದ ಪೋಲೊಂಕಾ, ಆಸ್ಟ್ರೇಲಿಯಾದ ಗೆರ್ದಾ, ರುಮೇನಿಯಾದ ಕ್ರಿಸ್ಟಿ, ಇರಾನಿನ ಹಮೀದ್, ಕೆನ್ಯಾದ ಏಂಜೆಲೋ, ಜೆಕ್ ನ ಮೆರೆಕ್ ಎಲ್ಲರೂ ದಂಗಾಗಿಹೋದೆವು.

ನುಂಗಲೂ ಆಗದೇ, ಉಗುಳಲೂ ಆಗದಂತೆ ಚಾಕಲೇಟ್ ನಮ್ಮ ಬಾಯೊಳಗೆ ಕುಳಿತಿತ್ತು.

ಯಾವ್ಯಾವುದೋ ದೇಶದಿಂದ ಬಂದು ಇಲ್ಲಿ ಚಾಕಲೇಟ್ ತಿಂದು ಬೈಸಿಕೊಳ್ಳಬೇಕಾಗಿ ಬಂತಲ್ಲಪ್ಪಾ ಎನ್ನುವ ಭಾವವೇ ಎಲ್ಲರ ಮುಖದಲ್ಲಿ ನಾಟ್ಯವಾಡುತಿತ್ತು.

ಆಗಿದ್ದು ಇಷ್ಟೇ.

ಸಿಎನ್ ಎನ್ ಚಾನಲ್ ನಲ್ಲಿ ಪಬ್ಲಿಕ್ ರಿಲೇಶನ್ ನಿಭಾಯಿಸುವ ನಿಗೆಲ್ ಟಕಟಕ ಹೆಜ್ಜೆ ಹಾಕುತ್ತಾ ನಮ್ಮ ಕ್ಲಾಸ್ ರೂಂ ಒಳಗೆ ಬಂದರು. ಕೈಯಲ್ಲಿ ದೊಡ್ಡ ಚಾಕಲೇಟ್ ಪ್ಯಾಕೆಟ್. ಎದುರಿಗಿದ್ದ ಬೌಲ್ ಗೆ ಆ ಚಾಕಲೇಟ್ ಗಳನ್ನೆಲ್ಲಾ ಸುರಿದರು. ನಂತರ ತಮ್ಮ ಪಾಡಿಗೆ ತಾವು ಪಾಠ ಶುರು ಹಚ್ಚಿಕೊಂಡರು.

ಏನೋ ಬರೆಯಲು ನಿಗೆಲ್ ಬೋರ್ಡ್ ಕಡೆ ತಿರುಗಿದ್ದೇ ತಡ ನಮ್ಮ ತಂಡದಲ್ಲೇ ಅತಿ ತರಲೆ ಎನಿಸಿಕೊಂಡಿದ್ದ ಮೆಗ್ ಒಂದು ಚಾಕಲೇಟ್ ಎತ್ತಿ ಬಾಯಿಗೆ ಎಸೆದುಕೊಂಡವಳೇ ‘ಹೆಂಗೆ’ ಅನ್ನುವಂತೆ ಎಲ್ಲರ ಕಡೆ ನೋಡಿದಳು.

ಆ ಕಲೆ ಅವಳೊಬ್ಬಳಿಗೆ ಮಾತ್ರ ಬರುತ್ತದೆಯೇ? ಅಂತ ನಾವೆಲ್ಲರೂ ಪೈಪೋಟಿಗೆ ಬಿದ್ದೆವು.

ಆಮೇಲೆ ಬಟ್ಟಲು ಕುಳಿತ ಕಡೆ ಕುಳಿತಿರಲಿಲ್ಲ. ಎಲ್ಲರ ಮುಂದೆ ಸುತ್ತುತ್ತಾ ಹೋಯಿತು. ಆಗಲೇ ನಿಗೆಲ್ ನಮ್ಮೆಡೆ ತಿರುಗಿ ಗದರಿದ್ದು.

ನಮ್ಮ ಮುಖಗಳು ಕಪ್ಪಿಟ್ಟು ಹೋಗಿದ್ದು ನೋಡಿಯೇ ಇರಬೇಕು ನಿಗೆಲ್ ನಿಧಾನವಾಗಿ ತಮ್ಮ ‘ವಿಕ್ಕೋ ವಜ್ರದಂತಿ’ ಹಲ್ಲುಗಳನ್ನು ಪ್ರದರ್ಶಿಸುತ್ತಾ ‘yes! That is called temptation’ ಅಂದರು.

ಆಗ ಬಲ್ಬ್ ಹತ್ತಿತ್ತು.

ನಿಗೆಲ್ ಪಾಠ ಮಾಡಲು ಬಂದದ್ದು ‘ಮೀಡಿಯಾ ಎಥಿಕ್ಸ್’ ಬಗ್ಗೆ. ಒಬ್ಬ ಪತ್ರಕರ್ತ ಹೇಗೆ ಆಸೆ ಆಮಿಷಗಳನ್ನ ಗೆದ್ದು ನಿಲ್ಲಬೇಕು ಅನ್ನೋದರ ಬಗ್ಗೆ.

ಆದರೆ ಜಗತ್ತಿನ ಅಷ್ಟೂ ದೇಶಗಳ ‘ಘನಂಧಾರಿ’ ಪತ್ರಕರ್ತರಾದ ನಾವು ಅತ್ಯಂತ ಸುಲಭದಲ್ಲಿ ಖೆಡ್ಡಾದಲ್ಲಿ ಬಿದ್ದಿದ್ದೆವು.

ಚಾಕಲೇಟ್ ನಿಂದ ಹಿಡಿದು ರೋಲ್ಸ್ ರಾಯ್ ಕಾರ್ ನವರೆಗೆ ಎಲ್ಲಾ temptationಗೂ ನಾವು ಸುಲಭವಾಗಿ ತುತ್ತಾಗುವವರು ಎಂಬುದನ್ನು ನಿಗೆಲ್ ಸರಳವಾಗಿ ತಿಳಿಸಿ ಹೇಳಿಬಿಟ್ಟಿದ್ದ.

‘ಚಾಕಲೇಟ್ ಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ’ ಅಂತ ಗೊತ್ತಾಗಿಹೋಯಿತು.

ಕಿಂಗ್ ಫಿಷರ್ ಏರ್ ಲೈನ್ಸ್ ತನ್ನ ಮೊದಲ ಹಾರಾಟಕ್ಕೆ ಸಜ್ಜಾಗಿತ್ತು. ಇದ್ದಕ್ಕಿದ್ದಂತೆ ರಾಮೋಜಿರಾಯರಿಂದ ನನಗೆ ಬುಲಾವ್ ಬಂತು. ಪ್ರಶ್ನಾರ್ಥಕ ಮುಖ ಹೊತ್ತು ಹೋದ ನನ್ನ ಕೈಗೆ ವಿಜಯ್ ಮಲ್ಯ ಕಂಪನಿಯ ಲೆಟರ್ ಇಟ್ಟರು.

ಕಿಂಗ್ ಫಿಷರ್ ತನ್ನ ಮೊದಲ ಹಾರಾಟದಲ್ಲಿ ಪತ್ರಕರ್ತರನ್ನು ಇಂಗ್ಲೆಂಡ್ ಗೆ ಹೊತ್ತೊಯ್ಯಲು ಸಜ್ಜಾಗಿತ್ತು. ಹಾರಾಟ, ಓಡಾಟ, ಊಟ ಎಲ್ಲಾ ಅವರ ಖರ್ಚಿನಲ್ಲೇ..

‘ಭಾರತಕ್ಕೊಂದು ಹೊಸ ಏರ್ ಲೈನ್ಸ್, ಅದೂ ಯಶಸ್ವಿ ಉದ್ಯಮಿಯಿಂದ ಅನ್ನೋದು ಖಂಡಿತಾ ನ್ಯೂಸ್. ಆದರೆ ‘ಅದಕ್ಕೆ ಇಂಗ್ಲೆಂಡ್ ಗೆ ಹೋಗೋ ಅಗತ್ಯ ಏನಿದೆ. ವಿಮಾನ ಹೊರಟಾಗ, ಬಂದಾಗ ಮುಂಬೈನಲ್ಲಿ ಬೈಟ್ ತಗೊಂಡ್ರೆ ಸಾಕಲ್ಲ’ ಅಂದರು.

ಹೌದಲ್ವಾ ಅನಿಸ್ತು.

ಆದರೆ ಆ ವೇಳೆಗೆ ನಮ್ಮ ದೇಶದ ಎಷ್ಟೋ ಪತ್ರಕರ್ತರು ದುಬೈ, ಸಿಂಗಾಪುರ್, ಶ್ರೀಲಂಕಾ, ಥೈಲ್ಯಾಂಡ್, ಮಲೇಶಿಯಾ ಅಂತ ಫ್ರೀ ಟ್ರಿಪ್ ಮಾಡಿ ತಮ್ಮ ಪಾಸ್ ಪೋರ್ಟ್ ನಲ್ಲಿ ಬಿದ್ದ ಸೀಲನ್ನೇ ಪದ್ಮ ಪ್ರಶಸ್ತಿ ಥರಾ ತಮ್ಮ ತಮ್ಮ ಕಲೀಗ್ ಗಳ ಎದುರು ಪ್ರದರ್ಶಿಸುತ್ತಿದ್ದರು.

ಈ ಮಧ್ಯೆ ಒಂದು ಕಗ್ಗಂಟು ಎದುರಾಯ್ತು. ಅಮೆರಿಕಾದಲ್ಲಿ ನಡೆಯೋ ‘ಅಕ್ಕ’ ಸಮ್ಮೇಳನ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ಕಾಲ ಅದು. ಅದನ್ನ ಚಾನಲ್ ಗೆ ಕವರ್ ಮಾಡಿದ್ರೆ ಅಲ್ಲಿನ, ಅಂತೆಯೇ ಇಲ್ಲಿನ ಕನ್ನಡಿಗರಿಗೆ ಒಳ್ಳೆಯ ಸುದ್ದಿ ಅಂತ ಯೋಚನೆ ಮಾಡಿದ್ದೆ.

‘ಸಂಘಟಕರಿಗೆ ಹೇಳಿ ಟಿಕೆಟ್ ಮಾಡಿಸಿದರೆ ನಮ್ಮ ರಿಪೋರ್ಟರ್ ಒಬ್ಬರನ್ನು ಅಮೆರಿಕಾಗೆ ಕಳಿಸಬಹುದು’ ಅಂತ ರಾಮೋಜಿರಾಯರ ಮುಂದೆ ಪ್ರಸ್ತಾಪ ಇಟ್ಟೆ.

ಅವರು ನನ್ನ ಮುಖ ನೋಡಿದವರೇ ‘ಅಲ್ಲ ಆರ್ಗನೈಸರ್ ಕೊಡೋ ಟಿಕೆಟ್ ನಲ್ಲಿ ಅಮೆರಿಕಾಗೆ ಹೋದವರು ತಮ್ಮ ಕಣ್ಣಿಗೆ ಕಂಡದ್ದೆಲ್ಲಾ ಹಾಗಾಗೇ ವರದಿ ಮಾಡೋದಿಕ್ಕೆ ಸಾಧ್ಯ ಅಂತೀರಾ’ ಅಂತ ಪ್ರಶ್ನಿಸಿದರು.

ನನ್ನ ಉಭಯ ಸಂಕಟ ಗೊತ್ತಾಯ್ತೋ ಏನೋ ‘ರಾಮೋಜಿ ಗ್ರೂಪ್ ಇನ್ನೂ ಬಡವಾಗಿಲ್ಲ ಮೋಹನ್. ನಿಮಗೆ ಅಗತ್ಯ ಅನ್ನಿಸಿದ್ರೆ ನಮ್ಮ ಹಣದಲ್ಲೇ ಕಳಿಸಿ’ ಅಂದರು.

ಒಂದು ಕ್ಯಾಲೆಂಡರ್, ಒಂದು ಪೆನ್ನು, ಒಂದು ಡೈರಿಗಾಗಿ ಮುಗಿಬೀಳೋ ಕಾಲ ಒಂದಿತ್ತು. ಅದನ್ನು ಪಡಕೊಂಡವರು ‘ಧನ್ಯೋಸ್ಮಿ’ ಅಂತ ನಿಟ್ಟುಸಿರು ಬಿಡ್ತಿದ್ರು.

ಆದ್ರೆ ಈಗ ಬದಲಾವಣೆಯ ಕಾಲ ಬಂದಿದೆ. ಜನ ಚೇಂಜ್ ಕೇಳ್ತಿದ್ದಾರೆ. ಹಾಗೇನೆ ಪತ್ರಕರ್ತರೂ ಕೂಡಾ. ಅಲಾರಾಂ ಕ್ಲಾಕ್, ಫ್ಲಾಸ್ಕ್, ಬ್ಯಾಗು, ವಿಐಪಿ ಸೂಟ್ ಕೇಸು, ಸೂಟ್ ಪೀಸು ಹೋಗಿ ವಾಚು, ಬೆಳ್ಳಿ ಲೋಟ, ಗೋಲ್ಡ್ ಕಾಯಿನ್ ಕಾಲ ಬಂತು. ಅದರ ಮಧ್ಯೆ ಗಿಫ್ಟ್ ವೋಚರ್ರು, ಕಂಪನಿ ಶೇರು, ಕ್ಲಬ್ ಮೆಂಬರ್ ಶಿಪ್ ಇಣುಕಿ ಹಾಕ್ತು.

ಈಗ ಅದೆಲ್ಲಾ ಯಾವ ಲೆಕ್ಕ ಅನ್ನೋ ಹಾಗೆ ಕಾರು, ಸೈಟು, ಸೀಟು, ಫಾರಿನ್ ಟ್ರಿಪ್ಪು ಕಾಲ ಬಂದಿದೆ. ಜರ್ನಲಿಸಂ ಖದರ್ರೇ ಬದಲಾಗಿದೆ. ಸಂಸ್ಥೆಗಳೇ ಇಷ್ಟು ದುಡ್ಡು ಕೊಟ್ರೆ ಇಷ್ಟು ಪ್ರಚಾರ ಫ್ರೀ. ಒಂದು ಬನಿಯನ್ ಕೊಂಡ್ಕೊಂಡ್ರೆ ಒಂದು ಕಾಚ ಫ್ರೀ ಅಂತ ನಿಂತಿರೋವಾಗ ಪತ್ರಕರ್ತರ ಸ್ಟೇಟಸ್ಸೂ ಬದಲಾಗಿದೆ.

ಮೊನ್ನೆ ಪಿ.ಸಾಯಿನಾಥ್ ಜೊತೆ ಮಾತಾಡ್ತಾ ಇದ್ದಾಗ ಅವರು ಹೇಳಿದ್ದೂ ಅದೇ- ಮೊದಲು ಗಿಫ್ಟು, ಲಂಚ ಅನ್ನೋದು ವ್ಯಕ್ತಿಗತವಾಗಿತ್ತು. ಈಗ ಸಾಂಸ್ಥಿಕ ರೂಪ ಪಡಕೊಂಡಿದೆ ಅಂತ. ಅದನ್ನೇ ‘ಪೇಯ್ಡ್ ನ್ಯೂಸ್’ ಅಂತ ಅವರು ಕರೆದಿದ್ದು.

ಮಂಗಳೂರಿನಲ್ಲಿದ್ದೆ. ನನ್ನ ವಾಚು ಬಿಲ್ಕುಲ್ ಕೆಲಸ ಮಾಡಲ್ಲ ಅಂತ ಮುಷ್ಕರ ಹೂಡಿತ್ತು. ಸರಿ ವಾಚ್ ಡಾಕ್ಟರ್ ಗಾದ್ರೂ ತೋರಿಸೋಣ ಅಂತ ಕರಕೊಂಡು ಹೋದೆ.

ಸ್ವಲ್ಪ ಹೊತ್ತಿಗೆ ನನ್ನ ಕಲೀಗ್ ಕೂಡಾ ಅಲ್ಲಿಗೆ ಬಂದ್ರು. ಏನ್ಸಮಾಚಾರ ಇಲ್ಲಿ ಅಂದೆ. ದರಿದ್ರ ಬರೀ ಜೆಂಟ್ಸ್ ವಾಚೇ ಕೊಡ್ತಾರೆ. ಮನೇಲಿ ಆಗಲೇ ಐದು ವಾಚಿದೆ. ಇವತ್ತು ಬೆಳಗ್ಗೆ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮತ್ತೆ ಅದೇ ವಾಚ್ ಬಂತು. ಅದಕ್ಕೆ ಆರ್ಗನೈಸರ್ ಹತ್ರ ಯಾವ ಅಂಗಡೀನಲ್ಲಿ ಕೊಂಡ್ಕೊಂಡರು ಅಂತ ಕೇಳಿಕೊಂಡು ಇಲ್ಲಿಗೆ ಬಂದೆ. ಇದನ್ನ ಕೊಟ್ಟು ನನ್ನ ಮಿಸೆಸ್ ಗೆ ಲೇಡೀಸ್ ವಾಚ್ ತಗೊಂಡ್ ಹೋಗ್ತೀನಿ ಅಂದ್ರು.

ಕಾಲ ಒಂದು ಕ್ಷಣ ಸ್ಥಬ್ಧವಾದ ಹಾಗಾಯ್ತು.

ಇವತ್ತು ವಿಧಾನಸೌಧ ಅನ್ನೋದು ಕೇವಲ ರಾಜಕಾರಣಿಗಳ ಲಾಬಿ ಕೇಂದ್ರ ಅಂದ್ರೆ ಅದು ಅರ್ಧ ಸತ್ಯ ಮಾತ್ರ. ಅದು ಜರ್ನಲಿಸ್ಟ್ ಗಳ ಲಾಬಿ ಕೇಂದ್ರಾನೂ ಹೌದು.

ಸಚಿವರಾಗಿದ್ದ ಬಸವರಾಜ ಹೊರಟ್ಟಿ ಒಂದು ದಿನ ಫೋನ್ ಮಾಡಿದ್ರು ‘ನಿಮ್ಮ ರಿಪೋರ್ಟರ್ ಗೆ ಅವರ ಊರಲ್ಲಿ ಒಂದು ಕಾಂಪೌಂಡ್ ಕಟ್ಟಿಸಬೇಕಂತೆ ಕಟ್ಟಿಸಲಾ ಅಂತ. ನಾನು ಹ್ಞೂ ಅನ್ನೋ ಅಷ್ಟರಲ್ಲಿ ಅವರ ಚಿಕ್ಕಮ್ಮನಿಗೆ ವರ್ಗಾ ಆಗಬೇಕಂತೆ ಮಾಡಿಸಿಕೊಡ್ಲಾ ಅಂದ್ರು. ಈಟಿವಿಯಲ್ಲಿ ಒಂದು ವಿಕೆಟ್ ಬಿತ್ತು.

ಇದಾದ ಕೆಲವೇ ತಿಂಗಳಲ್ಲಿ ಈಟಿವಿಯ ಹನ್ನೆರಡೂ ಚಾಲನ್ ಗಳ ಮುಖ್ಯಸ್ಥರು ರಾಮೋಜಿರಾಯರ ಮುಂದೆ ಕುಳಿತಿದ್ದೆವು.

‘ಈ ಆಸೆಗೆ ಕಡಿವಾಣ ಹಾಕುವ ಸವಾಲ್ ಯಾರು ಸ್ವೀಕರಿಸ್ತೀರಾ?’ ಅಂತ ಕೇಳಿದ್ರು. ನಾನು ಕೈ ಎತ್ತಿದೆ. ಹೀಗೆ ಎತ್ತುವಾಗ ನನ್ನ ಕೈಗಳನ್ನೂ ಒಮ್ಮೆ ನೋಡಿಕೊಂಡೆ. ಕಣ್ಣಿಲ್ಲದವನ ರಾಜ್ಯದಲ್ಲಿ ಮೆಳ್ಳಗಣ್ಣಿನವನೇ ವಾಸಿ ಎನ್ನುವಂತಿತ್ತು ನನ್ನ ಸ್ಥಿತಿ.

ರಾಮೋಜಿರಾಯರು ನೇರಾನೇರ ಕೇಳಿದರು. ನೀವೇನು ಪರಿಶುದ್ಧರೇ ಅಂತ. ನಾನೂ ಆಸೆಯೆಂಬ ಬಿಸಿಲು ಕುದುರೆ ಏರಿದವನೇ. ಆದರೆ ಆ ಕುದುರೆಯಿಂದ ಕೆಳಗಿಳಿಯಲೂ ನನಗೆ ಸಾಧ್ಯವಾಗಿದೆ. ನನ್ನ ತಪ್ಪುಗಳು ನನ್ನನ್ನು ಎಚ್ಚರಿಸಿವೆ ಎಂದೆ. ತಪ್ಪು ಮಾಡಿದವರಿಗೆ ಆ ಪಂಜಾಬಿನ ಗುರುದ್ವಾರದಲ್ಲೂ ಚಪ್ಪಲಿ ಒರೆಸಿ ಪಶ್ಚಾತ್ತಾಪ ಮಾಡಿಕೊಳ್ಳುವ ಅವಕಾಶವಿದೆಯಲ್ಲ ಎಂದು ಕೇಳಿದೆ.

ಹಾಗೆ ಕೇಳಿದ ಮೇಲೆ ನಿಜವಾದ ಸವಾಲು ಎದುರಾದದ್ದು. ನಮ್ಮ ರಕ್ತದೊಳಗೇ ಸೇರಿ ಹೋಗಿದ್ದ ಗಿಫ್ಟ್ ಕೊಳಕನ್ನು ಹೊರತೆಗೆಯುವ ಕೆಲಸ ಆರಂಭವಾಯಿತು.

ಕಚೇರಿಯ ಒಳಗೂ, ಕಚೇರಿಯ ಹೊರಗೂ ನಡೆಯ ಬಹುದಾದ ಅವ್ಯವಹಾರ ಪಟ್ಟಿ ಮಾಡಿದೆ. ಕಣ್ಣಿಗೆ ರಾಚುವಂತೆ, ಅಂತೆಯೇ ಕದ್ದೂ ಮುಚ್ಚಿ ನಡೆಯುವ ಅವ್ಯವಹಾರಗಳ ಸರಮಾಲೆ ತಯಾರಾಯಿತು.

ಸುದ್ದಿ ಬರೆಯುವುದಕ್ಕೆ ಹಾಗೆ ಸುದ್ದಿ ಬರೆಯದಿರುವುದಕ್ಕೂ ಕೈ ಸೇರುವ ಹಣ, ಆಮಿಷಗಳ ಲಿಸ್ಟ್ ನನ್ನ ಕೈಯಲ್ಲಿತ್ತು. ರಾಮೋಜಿರಾಯರು ಇದಕ್ಕೆ ತಮ್ಮ ಒಪ್ಪಿಗೆಯ ಸೀಲ್ ಒತ್ತಿದರು. ದೇಶದ ಮೂಲೆಮೂಲೆಗೆ ನಮ್ಮ ಪಟ್ಟಿ ಹೋಗುತ್ತಿದ್ದಂತೆ ಒಂದು ಬಿರುಗಾಳಿಯೇ ಎದ್ದಿತು.

ಬಸ್ ಪಾಸ್, ರೈಲು ರಿಯಾಯಿತಿ, ಟೆಲಿಫೋನ್ ಕನೆಕ್ಷನ್, ಪೊಲೀಸರಿಂದ ಎಸ್ಕೇಪ್ ಆಗಲು, ಹೋದ ಪ್ರೆಸ್ ಕಾನ್ಫರೆನ್ಸ್ ಗಳಲ್ಲಿ ಮಧ್ಯಾಹ್ನವೇ ಬಾಟಲಿಯ ಬಿರಡೆ ಬಿಚ್ಚಲು ಸಿದ್ಧವಾಗುತ್ತಿದ್ದವರು ಕುಡಿಯದೆಯೂ ಕಣ್ಣು ಕೆಂಪಗೆ ಮಾಡಿಕೊಂಡರು.

ಅಲೆಯ ವಿರುದ್ಧ ಈಜುವುದೇನು ಸುಲಭದ ಕೆಲಸವಲ್ಲವಲ್ಲ.

ಚಿಕ್ಕನಾಯಕನಹಳ್ಳಿ: ರಾಮನಿಗೆ ಅಭಿಷೇಕ

ಚಿಕ್ಕನಾಯಕನಹಳ್ಳಿ : ರಾಮಮಂದಿರ ಶಿಲಾನ್ಯಾಸ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ರಾಮನಿಗೆ ಅಭಿಷೇಕ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದರು

ಪಟ್ಟಣದ ಶ್ರೀರಾಮ ಮಂದಿರದಲ್ಲಿ ರಾಮ ಮೂರ್ತಿಗೆ ಅಭಿಷೇಕ ವಿಶೇಷ ಅಲಂಕಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ದಿನವನ್ನು ಸಂಭ್ರಮಿಸಿದರು .
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಎಂಎಂ ಜಗದೀಶ್ ಎಬಿವಿಪಿ ಚೇತನ್ ಪೇಪರ್ ಸಿದ್ದರಾಮಣ್ಣ ಮಂಜುನಾಥ್ ಎಬಿವಿಪಿ ದಿಲೀಪ್ ಮನು ನರಸಿಂಹ ಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು

ಸಕಲ‌ ಸರ್ಕಾರಿ ಗೌರವದೊಂದಿಗೆ ಶಾಸಕ ಸತ್ಯನಾರಾಯಣ್ ಅಂತ್ಯಕ್ರಿಯೆ

ಶಿರಾ: ಮಾಜಿ ಸಚಿವ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಸತ್ಯನಾರಾಯಣ ಅವರ ಅಂತಿಮ ಸಂಸ್ಕಾರವು ಶಿರಾ ತಾಲ್ಲೂಕಿನ ಭುವನಹಳ್ಳಿಯಲ್ಲಿರುವ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಆಗಸ್ಟ್ 5 ರಂದು ಸಂಜೆ 4-30 ಗಂಟೆಗೆ ನಡೆದ ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕರಾದ ಡಿ.ಕೆ. ಶಿವಕುಮಾರ್, ಶ್ರೀನಿವಾಸ್, ಗೌರಿಶಂಕರ್, ಶಿವಲಿಂಗೇಗೌಡ, ರಂಗನಾಥ್, ವಿಧಾನ ಪರಿಷತ್ ಶಾಸಕರಾದ ಬೆಮಲ್ ಕಾಂತರಾಜ್, ಚೌಡರೆಡ್ಡಿ ತೂಪಲ್ಲಿ, ತಿಪ್ಪೇಸ್ವಾಮಿ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ಟಿ.ಬಿ.ಜಯಚಂದ್ರ, ರಫೀಕ್ ಅಹಮ್ಮದ್, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

ಮಾಜಿ ಸಚಿವ ಹಾಗೂ ಶಾಸಕರಾದ ಡಾ: ಜಿ. ಪರಮೇಶ್ವರ್, ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ.ರೇವಣ್ಣ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಸುರೇಶ್‍ಗೌಡ, ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಹಾಗೂ ಅಭಿಮಾನಿಗಳು ಶಾಸಕ ಸತ್ಯನಾರಾಯಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ತುಮಕೂರು ನಗರದಲ್ಲಿರುವ ಪಕ್ಷದ ಕಛೇರಿ ಹಾಗೂ ಶಿರಾ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗಿತ್ತು. ಶಾಸಕರ ಅಪಾರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ಯೂ ಟೂ ಬ್ರೂಟಸ್

0

ಜಿ.ಎನ್.ಮೋಹನ್


ಬಾಗಿಲು ತೆಗೆದದ್ದೇ ತಡ ಇದ್ದ ಸಂಭ್ರಮವೆಲ್ಲ ಸಡನ್ನಾಗಿ ಜಾರಿ ಹೋಯಿತು.

ಅವಳು ಮಾತಿಲ್ಲದೇ ನಿಂತಳು. ಅವಳ ಕಣ್ಣುಗಳಲ್ಲಿ ‘ಷಾಕ್’ ಮನೆ ಮಾಡಿ ನಿಂತಿತ್ತು. ಅದು ಖಂಡಿತ ಕಣ್ಣೀರಲ್ಲ. ಅದಕ್ಕೂ ಮೀರಿದ್ದು.

ಕಣ್ಣೀರನ್ನು ಎದುರಿಸಿ ನಿಲ್ಲಬಹುದೇನೋ ಆದರೆ ಷಾಕ್ ಗಳನ್ನು ನೇರ ನೇರ ಕಣ್ಣಲ್ಲಿ ಕಣ್ಣಿಟ್ಟು ಎದುರಿಸಲು ಸಾಧ್ಯವೇ ಇಲ್ಲ ಎಂದು ನನಗೆ ಆ ಕ್ಷಣ ಅರಿವಾಗಿ ಹೋಯಿತು.

ಆದದ್ದು ಇಷ್ಟೇ: ಕಿವಿ ಚುಚ್ಚಿಸಿಕೊಂಡು, ಒಂದು ಚೆಂದದ ಕಿವಿ ಓಲೆ ಹಾಕಿಕೊಂಡು, ಹೊಸ ಜನರೇಷನ್ ಬಣ್ಣಗಳನ್ನು ಹೊದ್ದುಕೊಳ್ಳಬೇಕು ಎನ್ನುವುದು ನನ್ನ ಬಹುದಿನದ ಆಸೆ.

ಆದರೆ ಎರಡು ಜನರೇಷನ್ ನಡುವಿನ ಕೊಂಡಿಯಂತೆ ನಿಲ್ಲುವುದು ಅರಗಿಸಿಕೊಳ್ಳುವುದೇ ಕಷ್ಟವಾಗಿ ಹೋಗಿತ್ತು. ಅತ್ತ ಆ ಜನರೇಷನ್ ಗೂ ಸಲ್ಲದ ಇತ್ತ ಈ ಜನರೇಷನ್ ನವನೂ ಆಗದವನ ಎಡಬಿಡಂಗಿ ಕಥೆಗೆ ನಾನು ಸಾಕ್ಷಿಯಾಗಿ ಹೋಗಿದ್ದೆ.

ನಾನು ಕೆಲಸ ಮಾಡಿದ್ದು ಅದಮ್ಯ ಉತ್ಸಾಹಿಗಳ ಮಧ್ಯೆ. ಅದೇ ತಾನೆ ಜಗತ್ತಿಗೆ ಕಣ್ಣು ಬಿಡುತ್ತಿದ್ದ, ಸಾವಿರಾರು ಕನಸು ಹೊಂದಿದ್ದ ಉತ್ಸಾಹದ ಬುಗ್ಗೆಯಾಗಿದ್ದವರ ಮಧ್ಯೆ. ಇದೇ ಕಾರಣಕ್ಕೆ ಇರಬೇಕು ನಾನು ಅವರಿಗೆ ಕೊಟ್ಟಿದ್ದಕ್ಕಿಂತ ಹೆಚ್ಚು ಪಡೆದುಕೊಂಡುಬಿಟ್ಟಿದ್ದೆ. ನನ್ನ ಮನಸ್ಸು ಯಂಗ್ ಯಂಗ್ ಆಗಿ ಹೋಗಿತ್ತು.

ಹಾಗಾಗಿಯೇ ಮನಸ್ಸು ಎನ್ನುವುದು ದೇಹದಿಂದ ಬಿಡಿಸಿಕೊಂಡು ಫ್ರೆಶ್ ಆಗಿಯೇ ಉಳಿದಿತ್ತು. ಸಾಗರಕ್ಕೆ ಸಾವಿರಾರು ಬಂಡೆ ಉರುಳಿಸಿ ಸೇತುವೆ ಕಟ್ಟುವ ಹನುಮ ಉತ್ಸಾಹ ಈಗಲೂ ನನಗೆ ಇತ್ತು.

ಆದರೆ ಆ ಪುಟ್ಟ ಹುಡುಗಿ ಷಾಕ್ ಆಗಿ ಹೋಗಿದ್ದಳು. ಅವಳ ಒಂದು ನಂಬಿಕೆ ಕುಸಿದು ಹೋಗಿತ್ತು. ಅವಳ ಆಧರಿಸಿದ್ದ ನಂಬಿಕೆಯ ಆ ಆಲದ ಮರಕ್ಕೆ ಬೃಹತ್ ಕೊಡಲಿ ಪೆಟ್ಟು ಬಿದ್ದಿತ್ತು.

ಆ ಹುಡುಗಿ ಕಿವಿ ಚುಚ್ಚಿಸಿಕೊಳ್ಳುವುದು ಬೇಡ ಎಂದು ಹೇಳುತ್ತಾ ಬಂದಿದ್ದಳು. ಅವಳು ಬೇಡ ಎನ್ನುವುದು.. ಉಹುಂ ನಾನು ಮಾಡಿಯೇ ಸೈ ಎನ್ನುವುದು ನಡೆದುಕೊಂಡೇ ಬಂದಿತ್ತು.

ನಾನೇನೂ ಅವಳಿಗೆ ಅವಳ ಮಾತು ಕೇಳುತ್ತೇನೆ ಎಂಬ ಭರವಸೆಯನ್ನೇನೂ ಕೊಟ್ಟಿರಲಿಲ್ಲ. ಆದರೆ ಅವಳ ಒಳಗೆ ಮಾತ್ರ ಈತ ನನ್ನ ಒಂದು ಮಾತನ್ನು ತಳ್ಳಿಕೊಂಡು ಹೋಗಿಬಿಡಬಹುದು ಎಂಬ ಒಂದು ಸಣ್ಣ ಗುಮಾನಿಯೂ ಇರಲಿಲ್ಲ.

ಆದರೆ ಅದು ಆಗಿ ಹೋಯಿತು. ಅವಳು ಅಂದುಕೊಂಡಿದ್ದ ಒಂದು ವಿಶ್ವಾಸಕ್ಕೆ ಕೊಡಲಿ ಪೆಟ್ಟು. ಆ ಪುಟ್ಟ ಹೃದಯ ತಲ್ಲಣಿಸಿ ಹೋಗಿತ್ತು. ಕಣ್ಣು ‘ಷಾಕ್’ಗೆ ಮಾತು ಕೊಟ್ಟಿತ್ತು. ನಂಬಿಕೆ ಎಂಬುದು ಒಂದು ಸೇತುವೆ ಅಲ್ಲವೇ?

ಬದುಕು ಎಂಬುದು ವಿಶ್ವಾಸದ ಒಂದು ಮೊತ್ತ ಎಂದೇ ಅಂದುಕೊಂಡಿದ್ದ ಆ ಎಳೆಯ ಜೀವ ಮಾತುಗಳ ಬಟ್ಟಲನ್ನು ಖಾಲಿ ಮಾಡಿದಂತೆ ನಿಂತುಬಿಟ್ಟಿತ್ತು. ಮಾತುಗಳ ಆಗರವೇ ಆಗಿದ್ದ ಆ ಹುಡುಗಿ ಆ ಕ್ಷಣದಲ್ಲಿ ಮಾತು ಕಳೆದುಕೊಂಡುಬಿಟ್ಟಿದ್ದಳು. ಅವಳು ಅಂದುಕೊಂಡಿದ್ದ ಮಾತೊಂದು ಕುಸಿದುಹೋಗಿತ್ತು.

ಇಲ್ಲ ಅವ ನಾನು ಹೇಳದೆ ನನ್ನನ್ನು ಕೇಳದೆ ಎಂಬ ನಂಬಿಕೆಯೊಂದು ಅವಳ ಕಣ್ಣೆದುರಲ್ಲೇ ನುಚ್ಚುನೂರಾಗಿ ಹೋಗಿತ್ತು. ಆಕೆ ಮೌನದ ಪರದೆ ಹೊಕ್ಕುಬಿಟ್ಟಳು.

‘ಬಾಳಿಗೊಂದು ನಂಬಿಕೆ’ ಎಂಬ ಪುಸ್ತಕ ಬರೆದ ಆ ಅವರಿಗೆ ನನ್ನ ನಮಸ್ಕಾರ ಒಂದಿರಲಿ.

ಬಾಳಿಗೊಂದು ನಂಬಿಕೆ ಬೇಕೇನೋ? ಪುಟ್ಟ ಪುಟ್ಟ ನಂಬಿಕೆಗಳೆಂಬ ತೆಪ್ಪಗಳೇ ಎಂತಹ ಕಷ್ಟದ ಕಡಲನ್ನಾದರೂ ದಾಟಿಸಿಬಿಡುತ್ತವೆ. ಕಾಳಿಯಲ್ಲಿ, ಹರಿದ್ವಾರದಲ್ಲಿ, ನಮ್ಮ ಊರಿನಲ್ಲಿ, ಕಡಲು, ನದಿ, ಕೆರೆಯಲ್ಲಿ ಒಂದು ಪುಟ್ಟ ಕಾಗದದ ದೋಣಿಯಲ್ಲಿ ಆ ಬೆಳಕಿನ ಜ್ಯೋತಿಯನ್ನು ಹರಿಯ ಬಿಡುತ್ತಾರಲ್ಲ, ಅದು ಬಾಗುತ್ತ ಬಳುಕುತ್ತ ಇನ್ನೇನು ಮುಳುಗಿಯೇ ಬಿಟ್ಟೆ ಎನ್ನುತ್ತಾ ಆದರೂ ಬಚಾವಾಗುತ್ತಾ ಸಾಗುತ್ತಲೇ ಇರುವುದನ್ನು ನೋಡುವಾಗಲೆಲ್ಲ ಎಷ್ಟು ಅಚ್ಚರಿಗೊಳ್ಳುತ್ತೇನೆ.

ಆ ಹಣತೆಗೂ, ಆ ಗಾಳಿಗೂ, ಆ ನೀರಿಗೂ ಒಂದು ನಂಬಿಕೆಯ ಎಳೆ ಇರಬೇಕಲ್ಲವೇ?

‘ದೀಪವೂ ನಿನ್ನದೆ, ಗಾಳಿಯೂ ನಿನ್ನದೆ, ಆರದಿರಲಿ ಬೆಳಕು’ ಎನ್ನುವ ಹಾಡು ತೇಲಿ ಬಂದಾಗಲೆಲ್ಲ ನನ್ನೊಳಗೆ ಅದು ಒದ್ದು ಎದ್ದು ನಿಂತಾಗಲೆಲ್ಲಾ ಅನಿಸುತ್ತದೆ ಹೌದಲ್ಲ, ಬೆಳಗುವ ದೀಪ, ಆರಿಸುವ ಆ ಗಾಳಿ ಎರಡೂ ನನ್ನ ಕೈಯಲ್ಲೇ ಇದೆ. ದೀಪ ಬೇಕೋ ಇಲ್ಲ, ಆರಿಸಿದ ನಂತರದ ಆ ಕತ್ತಲ ಬದುಕು ಬೇಕೋ ಎಂದು ನಿರ್ಧಾರ ಮಾಡುವುದು ಮಾತ್ರ ನನ್ನ ಕೈಯಲ್ಲಿ.

ಈ ನಿರ್ಧಾರದ ಸೂತ್ರ ಒಂದು ಹೆಜ್ಜೆ ತಪ್ಪಿದರೆ ಸಾಕು ದೀಪಕ್ಕೆ ವಿದಾಯ. ಒಂದೊಂದು ನಂಬಿಕೆಯೂ ನನಗೆ ಈ ದೀಪದಂತೆಯೇ ಕಾಣುತ್ತದೆ. ಅದನ್ನು ಆರಿಸುವ ಗಾಳಿ ನನ್ನ ಬಳಿ ಇದೆ ಎಂಬುದು ಯಾಕೆ ಕಾಣುವುದಿಲ್ಲ?

ಆಕೆಗೂ ಅಷ್ಟೇ. ಎಷ್ಟು ಗಾಢ ನಂಬಿಕೆ ಇತ್ತು. ‘ಒಲಿದಮೇಲುಂಟೆ ನಾ ನೀ’ ಎಂಬ ನಂಬಿಕೆ. ಆದರೆ ರಾತ್ರೋ ರಾತ್ರಿ, ಬಹುಶಃ ಎದ್ದು ನಡೆದು ಹೋದ ಆ ನಳನಂತೆ, ಇದ್ದರೂ ತೊರೆದು ಹೋದ ಸಿದ್ದಾರ್ಥನಂತೆ ದಿಢೀರನೇ ಆ ನಾ ಈ ನೀ ಬೇರೆಬೇರೆಯೇ ಎಂಬುದು ಗೊತ್ತಾದಾಗ ಕುಸಿದ ಆ ನಂಬಿಕೆಗೆ ಜಗತ್ತಿನ ಯಾವ ಮೂಲೆಯಲ್ಲಿ ಮದ್ದು ಸಿಗಬಹುದು?

‘ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ’ ಎನ್ನುತ್ತಾರೆ. ಆತ ನೆಮ್ಮದಿಯ ಆ ನಿದ್ದೆಯ ನಡುವೆ ಒಂದು ನಂಬಿಕೆಯನ್ನು ಒದ್ದು ಎದ್ದು ಹೋದದ್ದು ಯಾಕೆ ಮುಖ್ಯವಾಯಿತು ಜಗತ್ತಿಗೆ?

‘ಸಂಬಂಜ ಅನ್ನೋದು ದೊಡ್ಡದು ಕನಾ….’ ಅನ್ನುವಾಗ ಸಂಬಂಜ ಮಾತ್ರವಲ್ಲ, ನಂಬಿಕೆ ಅನ್ನುವುದು ಸಹಾ ಅನ್ನುತ್ತದೆ ಮನಸ್ಸು. ನಂಬಿಕೆ ಎಂಬುದರ ತಳಪಾಯದ ಇಟ್ಟಿಗೆಗಳು ಒಂದೊಂದೆ ಕುಸಿಯುತ್ತಾ ಹೋದಂತೆ ನಾನು ಅನುಭವಿಸಿದ ಷಾಕ್ ನನ್ನೊಳಗೆ ಇನ್ನೂ ಇದೆ.

ಜಗತ್ತು ಎಷ್ಟೇ ಬದಲಾಗಿದೆ ಎಂದು ಅನ್ನಿಸಿದರೂ ಸಂಬಂಧಗಳು ಕೆಡಲಿಲ್ಲ ಎನ್ನುವ ದೊಡ್ಡ ನಂಬಿಕೆ ಹೊಂದಿದ್ದವನು ನಾನು.

ಈಗ ಬರುತ್ತೇನೆ ಎಂದು ಎಲ್ಲಿಗೋ ನಡೆದು ಹೋದವರು, ಮಗ್ಗುಲಲ್ಲಿಯೇ ಇದ್ದು ಇನ್ನೊಂದು ಮಜಲಿಗೆ ಏರಲು ಏಣಿ ಹಾಕಿದವರು, ಹುಷಾರಿಲ್ಲ ಎಂದು ಕಣ್ಣೀರಿಟ್ಟು ಎದುರು ಪಾಳಯಕ್ಕೆ ಹಾರಿಕೊಂಡವರು, ಎಲ್ಲರೂ ನಂಬಿಕೆ ಎಂಬುದರಲ್ಲಿ ನಂಬಿಕೆ ಬೇಡ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಒಂದು ಸಲ ಹೀಗಾಯಿತು. ಆತ ಕನಸುಗಣ್ಣಿನ ಹುಡುಗ. ಫ್ರೆಶ್ಯಾಗಿ ಕ್ಯಾಂಪಸ್ಸಿನಿಂದ ಆಚೆ ಕಾಲಿಟ್ಟದ್ದ. ನನಗೆ ಗೊತ್ತಿರುವ, ನಾನು ಗೌರವಿಸುವ, ನಾನು ನಂಬಿಕೆ ಇರಿಸಿದವರ ಕೈಯಡಿ ಅರಳಿದವ. ಹೀಗಾಗಿ ನನ್ನೊಳಗೂ ನಡೆದು ಬಂದ. ನನ್ನ ಜೊತೆ ಜೊತೆಯೇ ಹೆಜ್ಜೆ ಹಾಕಿದ.

ನನ್ನೊಳಗೊಂದು ಅದಮ್ಯ ನಂಬಿಕೆ ಕುಡಿಯೊಡೆದಿತ್ತು. ಇಲ್ಲ ಈತ ಎಲ್ಲರಂತಲ್ಲ, ನನ್ನೊಡನೆ ಮಾತನಾಡದೆ ಸಂಬಂಧ ಹರಿದುಕೊಂಡು ಹೋಗುವವನಲ್ಲ ಅಂತ.

ಆದರೆ ಆತ ಹಾಗೇ ಹೋಗಲಿಲ್ಲ. ನನಗೆ ಫೋನ್ ಮಾಡಿದ. ನೂರೆಂಟು ಮಾತಾಡಿದ. ಸೀದಾ ಎದುರು ಪಾಳಯಕ್ಕೆ ನಡೆದು ಹೋದ. ಆತ ಅಲ್ಲಿ ಮೊಬೈಲ್ ಗುಂಡಿ ಒತ್ತಿ ನಾನು ಮಾತಾಡಿದ್ದನ್ನೆಲ್ಲ ಅವರೆದುರು ಬಿಚ್ಚಿಟ್ಟು ಕೇಳಿಸುತ್ತಿದ್ದ. ಆತನ ಮೊಬೈಲ್ ನನಗೆ ಗೊತ್ತಿಲ್ಲದಂತೆಯೇ ನಾನು ಮಾತಾಡಿದ್ದನ್ನೆಲ್ಲ ರಿಕಾರ್ಡ್ ಮಾಡಿಕೊಂಡಿತ್ತು. ನಾನು ಟ್ರ್ಯಾಪ್ ಆಗಿ ಹೋಗಿದ್ದೆ. ನಂಬಿಕೆ ಎನ್ನುವುದು ತಲೆ ಎತ್ತಲಾಗದಂತೆ ಕುಸಿದು ಹೋಗಿತ್ತು.

ಆದರೆ ನನಗೆ ಇನ್ನೂ ನಂಬಿಕೆ ಇದೆ. ಏಕೆಂದರೆ ಆ ಅರ್ಭುತನ ಮುಂದೆ ಹೋಗಿ ಆ ಪುಣ್ಯಕೋಟಿ ನಿಂತಿತಲ್ಲ ಅಂತ.

ಅರ್ಭುತನಿಗೆಲ್ಲಿತ್ತು ಆ ನಂಬಿಕೆ. ತಿನ್ನಬೇಕು, ಕೊಲ್ಲಬೇಕು, ಹೀರಬೇಕು ಎಂದೇ ಹಾರಲು ಸಜ್ಜಾಗುತ್ತಿದ್ದಾಗ ‘ಒಂದು ನಿಮಿಷ ಮಗುವಿಗೆ ಹಾಲು ಊಡಿಸಿ ಬರುವೆ’ ಎಂದಾಗ ಆ ಅರ್ಭುತ ಎಂಬ ಹುಲಿರಾಯನಿಗೆ ಎಲ್ಲಿತ್ತು ನಂಬಿಕೆ.

ಆದರೆ ಆ ಪುಣ್ಯಕೋಟಿ ಬಂದೇ ಬಂತಲ್ಲಾ. ಹುಲಿರಾಯ ಬೆಟ್ಟದ ಮೇಲಿಂದ ಜಿಗಿದು ತನ್ನ ಪ್ರಾಣ ಬಿಟ್ಟನಲ್ಲಾ. ಈ ಕಥೆ ಇನ್ನೂ ಜನರ ನಾಲಿಗೆಯಲ್ಲಿದೆಯಲ್ಲಾ. ಆ ಕಾರಣಕ್ಕೇ ನನಗೆ ಇನ್ನೂ ನಂಬಿಕೆ, ನಂಬಿಕೆ ಎನ್ನುವುದರ ಮೇಲೆ.

‘ಯೂ ಟೂ ಬ್ರೂಟಸ್?’ ಎಂದು ಜೂಲಿಯಸ್ ಸೀಸರ್ ಉದ್ಗಾರ ತೆಗೆದಾಗ ತಾನು ಬದುಕಿನ ಯಾತ್ರೆ ಮುಗಿಸುತ್ತಿದ್ದೇನೆ ಎಂಬ ನೋವಿಗಿಂತ ತನ್ನ ಒಂದು ಮಹಾನ್ ನಂಬಿಕೆಯೊಂದು ಕುಸಿದು ಹೋಯಿತಲ್ಲ ಎಂಬುದು ಎಂತಹ ಷಾಕ್ ನೀಡಿರಬೇಕು.

ಇತ್ತೀಚೆಗೆ ಏಷ್ಯಾನೆಟ್ ನಲ್ಲಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ. ಜೇಬು ಇರುವವರೆಗೂ ಜೇಬುಗಳ್ಳರು ಇರುತ್ತಾರೆ ಅನ್ನುವುದನ್ನು ತಮಾಷೆಯಾಗಿ ಹೇಳುತ್ತಿದ್ದರು.

ನನಗೆ ಆಗ ಅನಿಸಿತು ‘ನಂಬಿಕೆ ಎನ್ನುವುದು ಇರುವವರೆಗೂ ಬ್ರೂಟಸ್ ಗಳೂ ಇರುತ್ತಾರೆ’ ಅಂತ.

ಸತ್ಯನಾರಾಯಣ್ ನನ್ನ ಮಗನಂತೆ: ದೇವೇಗೌಡ

Publicstory


ತುಮಕೂರು: ಶಿರಾ ಶಾಸಕ ಬಿ.ಸತ್ಯನಾರಾಯಣ್ ಅವರ ನಿಧನ ಅತ್ಯಂತ ದುಃಖವನ್ನು ತರಿಸಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕಂಬನಿ ಮಿಡಿದಿದ್ದಾರೆ.

ತುಮಕೂರು ನಗರದ ಜಾತ್ಯತೀತ ಜನತಾ ದಳದ ಕಚೇರಿ ಆವರಣದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿದ್ದ ಬಿ.ಸತ್ಯನಾರಾಯಣ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕೆ ಮಾಧ್ಯಮಗಳೊಂದಿಗೆ ತಿಳಿಸಿದರು.

ಸತ್ಯನಾರಾಯಣ್ ನನ್ನ ಮಗನಂತೆ ಇದ್ದರು. ಅತ್ಯಂತ ಸರಳ ಮತ್ತು ಸಜ್ಜನ ವ್ಯಕ್ತಿ. ಅವರನ್ನು ಎರಡು ಬಾರಿ ಸಚಿವರನ್ನಾಗಿ ಮಾಡಿದ್ದೆ. ಅವರು ಪಕ್ಷ ನಿಷ್ಠೆಗೆ ಹಸರಾಗಿದ್ದರು. ಅವರನ್ನು ಕಳೆದುಕೊಂಡಿರುವುದು ನೋವು ತಂದಿದೆ ಎಂದು ಹೇಳಿದ್ದಾರೆ.

ಬಿಎಚ್.ರಸ್ತೆಯ ಕುಂಚಿಟಿಗ ಒಕ್ಕಲಿಗರ ಹಾಸ್ಟೆಲ್ ಬಳಿಯೂ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ಇಲ್ಲಿಗೆ ಆಗಮಸಿದ ಮಾಜಿ ಸಚಿವ ಎಸ್. ಶಿವಣ್ಣ, ಬಿಜೆಪಿ ನಗರ ಶಾಸಕ ಜ್ಯೋತಿಗಣೇಶ್ ಮತ್ತು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಸಿದ್ದೇಗೌಡ ಮೊದಲಾದವರು ಮೃತ ದೇಹದ ಅಂತಿಮ ದರ್ಶನ ಪಡೆದರು.

ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕರಾದ ಎಸ್.ಆರ್. ಶ್ರೀನಿವಾಸ್, ವೀರಭದ್ರಯ್ಯ, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕರಾದ ಎಂಟಿ.ಕೃಷ್ಣಪ್ಪ, ಕೆ.ಎಂ.ತಿಮ್ಮರಾಯಪ್ಪ, ಬೆಮೆಲ್ ಕಾಂತರಾಜು, ಗೌರಿಶಂಕರ್ ಸೇರಿದಂತೆ ಜೆಡಿಎಸ್ ಹಾಲಿ ಮಾಜಿ ಶಾಸಕರು ಮುಖಂಡರು ಪಾಲ್ಗೊಂಡು ಬಿ.ಸತ್ಯನಾರಾಯಣ ಅವರ ಪಾರ್ಥೀವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.

ಆಕ್ಟೀವಾದಲ್ಲಿ ಮದ್ಯ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದ!

ಚಿಕ್ಕನಾಯಕನಹಳ್ಳಿ: ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ಅಬಕಾರಿ ಪೊಲೀಸರು ಕೆಂಗಣ್ಣು ಬೀರಿದ್ದಾರೆ.

ಡಾಬಾ ವೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಆಕ್ಟೀವಾ ಹೋಂಡದಲ್ಲಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ರಸ್ತೆ ಮಧ್ಯೆದಲ್ಲೇ ಹಿಡಿಯುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪೊಲೀಸರ ಈ ಕೆಲಸ ಮೆಚ್ಚುಗೆಗೆ ಕಾರಣವಾಗಿದೆ.

ತಿಪಟೂರು ಹುಳಿಯಾರು ಮಾರ್ಗಮಧ್ಯೆ ಈ ಭೂಪ ಸಿಕ್ಕಿಬಿದ್ದಿದ್ದಾನೆ.

ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಅಬಕಾರಿ‌ ಇಲಾಖೆಯ ಅಧಿಕಾರಿಗಳಾದ ಗಂಗರಾಜು, ರಶ್ಮಿ , ಸಿಬ್ಬಂದಿಗಳಾದ ಪರಶುರಾಮ್, ರಾಜ್ ಕುಮಾರ, ಮಲ್ಲಿಕಾರ್ಜುನ,ಮಂಜು,ಚಿದಾನಂದ ಸ್ಥಳದಲ್ಲಿದ್ದರು.

ಅಬಕಾರಿ ಪೊಲೀಸರ ಕ್ರಮ ಶಾಘ್ಲನೀಯ. ತಾಲ್ಲೂಕಿನಲ್ಲಿ ಎಲ್ಲೂ ಅಕ್ರಮವಾಗಿ ಮದ್ಯ ಸಿಗದಂತೆ ನೋಡಿಕೊಳ್ಳಬೇಕು. ದಕ್ಷತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ವಕೀಲ ಮಹಾವೀರ ಜೈನ್ ಹೇಳಿದರು.

ಸಿರಾ ಎಂಎಲ್ಎ ಸತ್ಯನಾರಾಯಣ್ ನಿಧನ

0

ತುಮಕೂರು

ಜಿಲ್ಲೆಯ ಶಿರಾ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಸತ್ಯ ನಾರಾಯಣ ನಿಧನರಾಗಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮಂಗಳವಾರ ನಿಧನರಾಗಿದ್ದಾರೆ. ಈ ಹಿಂದೆ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು.

ಸಿದ್ದರಾಮಯ್ಯಗೆ ಕೊರೊನಾ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಮಣಿಪಾಲ ಆಸ್ಪತ್ರೆಗೆ ಸೋಮವಾರ ತಡರಾತ್ರಿ ದಾಖಲಾಗಿದ್ದು, ಆರೋಗ್ಯವಾಗಿಯೇ ಇದ್ದಾರೆ.

ಸಿದ್ದರಾಮಯ್ಯ ಅವರು ಬೇಗ ಗುಣಮುಖರಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹಿತ ಹಲವರು ಹಾರೈಸಿದ್ದಾರೆ.

ಕೊರೊನಾ ಚಿಕಿತ್ಸೆ ನೆಪದಲ್ಲಿ ಸರ್ಕಾರ ಅವ್ಯವಹಾರ ಎಸಗಿದೆ‌. ಎರಡು ಸಾವಿರ ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಅವರು ಹೋರಾಟ ರೂಪಿಸಿದ್ದರು.

ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಅವರು ಜನಸೇವೆಯಿಂದ ಹಿಂದೆ ಸರಿದಿರಲಿಲ್ಲ.

ಸಿದ್ದರಾಮಯ್ಯ ಅವರ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ.

ಬನ್ನಿ, ಒಳ್ಳೆಯ ಸುದ್ದಿಗಳನ್ನು ಕೇಳೋಣ…

0

ಜಿ ಎನ್ ಮೋಹನ್


‘Yes, I am Back’ ಎಂದರು ಡಿ ವಿ ಶ್ರೀಧರನ್.

ಕಾಸರಗೋಡು ಹಾಗೂ ಪಯ್ಯನೂರಿನ ನಡುವೆ ದಟ್ಟವಾಗಿ ಹರಡಿಕೊಂಡಿದ್ದ ಕಾಡಿನಲ್ಲಿ ಬೆಳಕು ಹೊತ್ತಿದಂತಾಯಿತು.

‘Yes, I am Back’ ಎಂದರು ಡಿ ವಿ ಶ್ರೀಧರನ್.

ಸುಳ್ಯದ ಪಯಸ್ವಿನಿ ನದಿಗೆ ಅಡ್ಡವಾಗಿ ಕಟ್ಟಿದ ತೂಗುಸೇತುವೆಯ ಎರಡೂ ಬದಿಯಲ್ಲಿ ಹರಡಿ ಹೋಗಿದ್ದ ನೂರಾರು ಮನೆಗಳಲ್ಲಿ ಬೆಳಕು ಹೊತ್ತಿದಂತಾಯಿತು.

ಶ್ರೀಧರನ್ ಮತ್ತೆ ನಾನು ಬರುತ್ತಿದ್ದೇನೆ ಎಂದಾಗ ಜೈಪುರದ ಆಸ್ಪತ್ರೆಯಲ್ಲಿ ಆಗ ತಾನೇ ಕೃತಕ ಕಾಲು ತೊಟ್ಟುಕೊಳ್ಳಲು ಸಜ್ಜಾಗಿದ್ದ ನೂರಾರು ಅಂಗವಿಕಲರ ಕಣ್ಣುಗಳಲ್ಲಿ ಬೆಳಕು ಮಿಂಚಿತು.

ಶ್ರೀಧರನ್ ಬರುತ್ತಿದ್ದಾರೆ ಎಂದು ಗೊತ್ತಾದದ್ದೇ ತಡ ದೆಹಲಿಯ ರಸ್ತೆಗಳಲ್ಲಿ ಚಳಿ ತಡೆಯಲಾಗದೆ ಗಡ ಗಡ ನಡುಗುತ್ತಿದ್ದವರಿಗೆ ಒಂದಿಷ್ಟು ಬೆಚ್ಚನೆಯ ಬೆಳಕು ಕಂಡಂತಾಯಿತು.

ಸುನಾಮಿಯಲ್ಲಿ ನಾಶವಾಗಿ ಹೋಗಿ ನಿಟ್ಟುಸಿರಿಡುತ್ತಿದ್ದವರ ಮುಖದಲ್ಲೂ ಒಂದು ಮಿಣ ಮಿಣ ಬೆಳಕು.

ಇಡೀ ಜಗತ್ತು ಭಾರತವನ್ನು ಬರ, ಕ್ಷಾಮ, ಆಕ್ರಂದನ, ಸಾವಿನ ಕಗ್ಗತ್ತಲ ಲೋಕ ಎನ್ನುವಂತೆ ಚಿತ್ರಿಸಿದ್ದಾಗ ಒಬ್ಬ ಶ್ರೀಧರನ್, ಒಬ್ಬೇ ಒಬ್ಬ ಶ್ರೀಧರನ್ ವರ್ಷಗಟ್ಟಲೆ ಸುತ್ತಿ ಭಾರತದ ಎದೆಯಾಳದಲ್ಲಿರುವ ಬೆಳಕಿನ ಕಿಡಿಗಳನ್ನು ಜಗತ್ತಿಗೆ ತೋರಿಸುತ್ತಾ ಬಂದರು.

ಖಾಸಗಿ ನೌಕೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರನ್ ತಮ್ಮ ಕೆಲಸದ ನಿಮಿತ್ತ ಇನ್ನಿಲ್ಲದಷ್ಟು ದೇಶಗಳಿಗೆ ಭೇಟಿ ಕೊಟ್ಟರು.

ಎಲ್ಲೆಡೆಯೂ ಭಾರತ ಎಂದರೆ ‘ಅಯ್ಯೋ ಪಾಪ’ ಎನ್ನುವ ಕನಿಕರ ವ್ಯಕ್ತವಾಗುತ್ತಿದ್ದುದು ಶ್ರೀಧರನ್ ಅವರನ್ನು ಕಾಡಿತು.

ಆಗ ಭಾರತದಲ್ಲಿ ಭೀಕರ ಕ್ಷಾಮ. ಶ್ರೀಧರನ್ ಇದ್ದ ಹಡಗಿಗೆ ವಿದೇಶಿಯರು ಅಕ್ಕಿ ಬೇಳೆ ದಾನ ನೀಡಿ ‘ನಿಮ್ಮ ದೇಶದಲ್ಲಿ ಹಸಿವಿನಿಂದ ನರಳುತ್ತಿರುವವರಿಗೆ ನೀಡಿ’ ಎನ್ನುತ್ತಿದ್ದರು.

ಎಲ್ಲಾ ಮಾಧ್ಯಮಗಳಲ್ಲೂ ಒಂದೇ ರೀತಿಯ ಚಿತ್ರಣ. ಭಾರತ ಬಡ ದೇಶ, ಹಸಿವಿನಿಂದ ನರಳುತ್ತಿರುವವರ ದೇಶ. ಬೆಳಕು ಕಾಣದ ಲೋಕ.

ಇದನ್ನೇ ಕಿವಿಯಲ್ಲಿ ತುಂಬಿಕೊಂಡಿದ್ದ ಶ್ರೀಧರನ್ ಚೆನ್ನೈ ನಲ್ಲಿ ನೆಲೆ ನಿಂತರು. ನಿಜ ಭಾರತ ಅರಿಯಲು ಮನಸ್ಸು ಮಾಡಿ ನರ್ಮದಾ ಕಣಿವೆಗೆ ಹೋಗಲು ರೈಲು ಹತ್ತಿದರು.

ರೈಲಿನಲ್ಲಿ ಇವರ ಮಾತಿಗೆ ಸಿಕ್ಕಿದ್ದು ಇಬ್ಬರು ತರುಣರು. ಒಬ್ಬ ನಾನು ದೇಶ ಕಟ್ಟುವ ಯೋಧನಾಗಬೇಕು ಎಂದು ತನ್ನ ಕನಸು ಬಿಚ್ಚಿಟ್ಟ. ಜೊತೆಗಿದ್ದ ತರುಣಿ ನಾನು ನನ್ನ ಪುಟ್ಟ ಗ್ರಾಮದಲ್ಲಿಯೇ ಉಳಿಯುತ್ತೇನೆ ಎಂದಳು.

ಆ ವೇಳೆಗಾಗಲೇ ಒಂದಿಷ್ಟು ಶಿಕ್ಷಣ ಸಿಕ್ಕರೆ ಸಾಕು ವೀಸಾ ಹೊಂದಿಸಿಕೊಂಡು ಅಮೇರಿಕಾ ಸೇರಿ ಬೆಚ್ಚಗಿದ್ದು ಬಿಡುತ್ತಿದ್ದವರನ್ನು ಮಾತ್ರ ಕಂಡಿದ್ದ ಶ್ರೀಧರನ್ ಗೆ ಅವರ ಮಾತಲ್ಲಿ ಪಕ್ಕನೆ ಒಂದು ಬೆಳಕು ಕಂಡಿತು.

ಆಗಲೇ ಅವರಿಗೆ ಮನವರಿಕೆಯಾಗಿ ಹೋಯಿತು ದೇಶದ ಆಳದಲ್ಲಿ ಇಂತಹ ಎಷ್ಟೋ ದನಿಗಳಿವೆ ಈ ಭರವಸೆಯ, ಆಶಾದಾಯಕ ದನಿಗಳನ್ನು ಇಡೀ ದೇಶಕ್ಕೆ ಕೇಳಿಸಬೇಕು. ಅಷ್ಟೇ ಅಲ್ಲ, ಇಡೀ ಜಗತ್ತಿಗೆ ಮುಟ್ಟಿಸಬೇಕು. ಭಾರತ ಭರವಸೆಯ ಕಿರಣ ಎನ್ನುವುದು ಎಲ್ಲರಿಗೂ ಅರಿವಾಗಬೇಕು ಎಂದು ನಿರ್ಧರಿಸಿಬಿಟ್ಟರು.

ಆಗ ಶುರುವಾಯಿತು ಅವರ ನಿಲ್ಲದ, ನಿಲ್ಲದ ಪಯಣ.

ತಮ್ಮ ವಾಹನದ ಸ್ಟೀರಿಂಗ್ ಹಿಡಿದರು. ಒಂದು ವರ್ಷ, ಎರಡು ವರ್ಷ, ಐದು ವರ್ಷ..

60 ದಾಟಿದ ಶ್ರೀಧರನ್ ದಣಿವಿಲ್ಲದಂತೆ ಊರೂರು ಸುತ್ತುತ್ತಿದರು. ಕಾಡು, ಕಣಿವೆ, ಬೆಟ್ಟ, ಗುಡ್ಡ,ಕಡಲು ಭಾರತದ ಯಾವೊಬ್ಬ ವರದಿಗಾರನೂ ಹೋಗದ ಕುಗ್ರಾಮಗಳಿಗೆ ಹೋಗಿ ಬಂದರು.

ಎಲ್ಲೋ ಯಾರೋ ಉಸುರಿದ ಒಂದು ಎಳೆ ಹಿಡಿದು ಸಾವಿರಾರು ಕಿ.ಮಿ ವಾಹನ ಚಲಾಯಿಸಿಕೊಂಡು ತಮಗೆ ಬೇಕಿರುವವರ ಕೈಕುಲುಕಿದರು.

ಅವರೊಡನೆ ಓಡಾಡಿ, ಅವರೊಡನೆ ದಿನಗಟ್ಟಲೆ ಮಾತಾಡಿ ಅವರ ಕಥೆಗಳನ್ನು ಕೇಳಿದರು. ಕುಳಿತ ಕಡೆಯೇ ತಮ್ಮ ಲ್ಯಾಪ್ ಟಾಪ್ ತೆರೆದು ಅವರ ಕಥೆಗೆ ಅಕ್ಷರ ರೂಪ ನೀಡಿದರು.

ಇಲ್ಲಿದೆ ಇನ್ನೊಂದು ಗುಡ್ ನ್ಯೂಸ್ ಎನ್ನುತ್ತಾ ತಾವೇ ರೂಪಿಸಿದ ಅಂತರ್ಜಾಲ ಪತ್ರಿಕೆಗೆ (www.goodnewsindia.com) ಏರಿಸಿದರು.

‘ಆರು ವರ್ಷದಲ್ಲಿ ನಾನು ಏನಿಲ್ಲೆಂದರೂ ನಾಲ್ಕು ನೂರು ಸುದ್ದಿಗಳನ್ನು ಪ್ರಕಟಿಸಿದ್ದೀನಿ’ ಎಂದು ಶ್ರೀಧರನ್ ನನ್ನೊಂದಿಗೆ ಮಾತಿಗಿಳಿದರು. ಅವರ ಎದುರು ಲ್ಯಾಪ್ ಟಾಪ್ ಇತ್ತು.

ಕಾಸರಗೋಡಿನ ಮೂಲೆಯ ಹಳ್ಳಿಯಲ್ಲಿ ಅಬ್ದುಲ್ ಕರೀಂ ಎನ್ನುವ ಜೀವ ಕಲ್ಲಿನ ಎದೆಯಲ್ಲೂ ಒಂದು ಕಾಡು ಉಕ್ಕಿಸಿದ್ದರು. ಶ್ರೀಧರನ್ ಕ್ವಾಲಿಸ್ ಏರಿ ಹೊರಟೇಬಿಟ್ಟರು.

ಈಗ ನನ್ನೆದುರು ಅವನ ಬಾಯಿಂದ ಅವನ ಕಥೆ ಹೊರಡಿಸುತ್ತಾ ಕುಳಿತಿದ್ದರು. ಆ ವೇಳೆಗಾಗಲೇ ಅವರು ಚೇರ್ಕಾಡಿ ರಾಮಚಂದ್ರರಾಯರನ್ನು, ಮೂಡಬಿದ್ರೆಯ ಸೋನ್ಸ್ ಅವರನ್ನೂ ಮಾತಾಡಿಸಿಕೊಂಡು ಬಂದಿದ್ದರು.

‘ಇದೇನು ಹುಚ್ಚು? ಈ ವಯಸ್ಸಿನಲ್ಲಿ?’ ಅಂದೆ.

ಒಂದು ಕ್ಷಣ ನನ್ನ ಮುಖ ನೋಡಿದವರೇ ‘ನೀವು ಎಂದಾದರೂ ಈ ಅಬ್ದುಲ್ ಕರೀಂನನ್ನು ಮಾತಾಡಿಸಿದ್ದಿರಾ? ಇಲ್ಲಿ ಬಂದಿದ್ದಿರಾ?’ ಎಂದರು.

‘ಉಹೂಂ’ ಎಂದೆ.

‘ಹಾಗಾಗಿ ನನಗೆ ತುಂಬಾ ಕೆಲಸ ಬಿತ್ತು’ ಎಂದರು.

ನಂತರ ನಸುನಗುತ್ತಾ ‘ನೋಡಿ, ಇಂದಿನ ಮಾಧ್ಯಮಗಳಲ್ಲಿ ಬರೀ ವ್ಯಗ್ರ ಸುದ್ದಿಗಳಿಗೇ ಜಾಗ. ನಿರಾಶೆ ಮೂಡಿಸುವ, ದೇಶ ಹಾಳಾಗಿ ಹೋಗಿದೆ ಎನ್ನುವ ಭಾವ ಮೂಡಿಸುವ ಸುದ್ದಿಗಳು’.

‘ಈ ಪೈಪೋಟಿಯಲ್ಲಿ ನಿಜಕ್ಕೂ ಭಾರತದಲ್ಲಿ ಒಂದು ಬೆಳಕಿದೆ ಎನ್ನುವ ಅಂಶವೇ ಮರೆಯಾಗಿ ಹೋಗುತ್ತಿದೆ. ಭಾರತಕ್ಕೆ ಒಂದು ಧೀಶಕ್ತಿಯಿದೆ ಎನ್ನುವುದೇ ಮರೆಯಾಗಿ ಹೋಗುತ್ತಿದೆ. ಅದನ್ನು ಜನರ ಮುಂದಿರಿಸುವ ಕೆಲಸವನ್ನು ಮಾಡುತಿದ್ದೇನೆ. ಒಳ್ಳೆಯ ಸುದ್ದಿಗಳು ಕೊಡುವ ಚೈತನ್ಯವನ್ನು ಕೆಟ್ಟ ಸುದ್ದಿಗಳು ಎಂದಿಗೂ ಕೊಡಲು ಸಾಧ್ಯವಿಲ್ಲ’ ಎಂದರು.

ಹಾಗಂದವರೇ ಅವರು ಮತ್ತೆ ಸ್ಟೀರಿಂಗ್ ಹಿಡಿದರು.

ಆ ವೇಳೆಗಾಗಲೇ ಅವರ ಬಳಿ ಇನ್ನೊಂದು ಸುದ್ದಿಯಿತ್ತು. ಒಳ್ಳೆಯ ಸುದ್ದಿ. ಅದರ ಬೆನ್ನು ಹತ್ತಲು ಸಜ್ಜಾಗಿದ್ದರು.

ಬೀಳ್ಕೊಡಲು ನಿಂತಿದ್ದ ನಮ್ಮ ಬಳಿ ‘ದೇಶದಲ್ಲಿ ದಾರಿದ್ರ್ಯ ಇದೆ ಎನ್ನುತ್ತಾರಲ್ಲ, ಖಂಡಿತವಾಗಿಯೂ ಇದೆ. ಆದರೆ ಅದು ಆದರ್ಶದ ದಾರಿದ್ರ್ಯ. ಯಾರನ್ನು ಅನುಸರಿಸಬೇಕು ಎನ್ನುವುದೇ ಗೊತ್ತಾಗದೆ ಹೋದರೆ ದೇಶ ಹೋಗಿ ಮುಟ್ಟುವುದಾದರೂ ಎಲ್ಲಿಗೆ? ಹಾಗಾಗಿಯೇ ನಾನು ಯಾರಿಗೂ ಇದುವರೆಗೂ ಗೊತ್ತಿರದ, ಆದರೆ ದೇಶಕ್ಕೇ ಬೆಳಕಾಗಬಲ್ಲ ಆದರ್ಶ ವ್ಯಕ್ತಿಗಳನ್ನು ಹುಡುಕುತ್ತಾ ಹೊರಟ್ಟಿದ್ದೇನೆ’ ಎಂದರು.

ಅಲ್ಲೊಂದು ಊರಿತ್ತು ಸ್ಯಾನಿಟರಿ ನ್ಯಾಪ್ಕಿನ್ ಗೊತ್ತಿಲ್ಲದ, ಬೇಕೆಂದರೂ ಶುಚಿ ವ್ಯವಸ್ಥೆ ಮಾಡಿಕೊಳ್ಳಲಾಗದ ಲೋಕ. ಹಾಗಾಗಿ ಋತುಮತಿಯಾದರೆ ಶಾಪ ಧರಿಸಿದಂತೆ ಒದ್ದಾಡುತ್ತಿದ್ದ ಲೋಕ.

ಇದನ್ನು ಅರಿತ ದಂಪತಿಯೊಬ್ಬರು ಇದ್ದುದ್ದರಲ್ಲಿಯೇ ಸ್ವಚ್ಚ ಬಟ್ಟೆ ಹುಡುಕಿ ಅದನ್ನು ಅವರಿಗೆ ಬೇಕಾದಂತೆ ಪರಿವರ್ತಿಸಿದರು. ದಶಕಗಳ ಕಾಲ ರೋಗದಲ್ಲಿ ಬಳಲುತ್ತಿದ್ದ ಹೆಣ್ಣುಮಕ್ಕಳ ಮುಖದಲ್ಲಿ ಸಂತಸ ಚಿಮ್ಮಿತು.

ಆ ದಂಪತಿಗಳನ್ನು ಶ್ರೀಧರನ್ ಬೆನ್ನತ್ತಿದರು. ಈ ಕಥೆ ದೇಶದ ಮುಂದಿಟ್ಟರು. ಪುಟ್ಟ ಕೆಲಸ ದೊಡ್ಡ ಪರಿಹಾರ.

ಸುನಾಮಿ ಚೆನ್ನೈ ಯನ್ನು ಅಪ್ಪಳಿಸಿ ಹಾಕಿತ್ತು. ಸಾವಿರಾರು ಜನ ರಾತ್ರೋ ರಾತ್ರಿ ನಿರಾಶ್ರಿತರಾದರು. ಇವರ ಮೈಗೆ ಒಂದಿಷ್ಟಾದರೂ ಬೆಚ್ಚಗಿಡಲು ‘ಗೂಂಜ್’ ಎನ್ನುವ ಸಂಸ್ಥೆ ತಯಾರಾಗಿ ನಿಂತಿತು. ತಲೆಯ ಮೇಲೆ ಸೂರಿಲ್ಲದ ಜನಕ್ಕೆ ಮೈ ತುಂಬಾ ಇದ್ದ ನಡುಕವಾದರೂ ಕುಗ್ಗಿತು.

ಶ್ರೀಧರನ್ ವಾಹನ ಅಲ್ಲಿಯೂ ಹೋಗಿ ನಿಂತಿತು.

ಇನ್ನೊಂದು ಸಂಸ್ಥೆ ಇತ್ತು ಅವರು ಶಾಲೆಯಿಂದ ಶಾಲೆಗೆ ಎನ್ನುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ನೀವು ಬಳಸಿದ ನೀರಿನ ಬಾಟಲಿ, ಬಿಸಾಡಲು ಹೊರಟಿರುವ ಬ್ಯಾಗ್ ನೀಡಿ ಎಂದು ಕೇಳಿ ಸಂಗ್ರಹಿಸಿದರು ಕುಗ್ರಾಮಗಳಿಗೆ ಹೋಗಿ ಅಲ್ಲಿನ ಮಕ್ಕಳಿಗೆ ಕೊಟ್ಟು ಬಂದರು.

ಅಲ್ಲಿಯೂ ಶ್ರೀಧರನ್ ಬಂದು ನಿಂತರು.

ಇನ್ನೂ ಒಂದು ಸಂಸ್ಥೆಯಿತ್ತು ಕೊಡುಗೆ ಎನ್ನುವುದು ಬಿಟ್ಟಿಯಾಗಿ ಬರುವುದಿಲ್ಲ ಎಂದು ಕಲಿಸಿದ ಸಂಸ್ಥೆ. ನೀವು ನಮ್ಮಿಂದ ಏನಾದರೂ ಕೊಡುಗೆ ಪಡೆದರೆ ಪ್ರತಿಯಾಗಿ ಜನರಿಗೆ ನೆರವಾಗುವ ಕೆಲಸಕ್ಕೆ ಶ್ರಮದಾನ ಮಾಡಬೇಕು ಎಂದು ತಾಕೀತು ಮಾಡಿದರು. ಹಾಗಾಗಿ ಆ ಊರ ಶಾಲೆಗೆ ಕಾಂಪೌಂಡ್ ಬಂತು. ಕೆರೆಯಲ್ಲಿದ್ದ ಹೂಳು ಖಾಲಿಯಾಯಿತು.

ಶ್ರೀಧರನ್ ಅಲ್ಲೂ ಕಣ್ಣಿಟ್ಟರು.

ಹೀಗೆ ಗಿರೀಶ್ ಭಾರದ್ವಾಜ್ ಕಟ್ಟಿದ ತೂಗು ಸೇತುವೆ, ನಂದನಾ ರೆಡ್ಡಿ ದಾಮೋದರ ಆಚಾರ್ಯ ಅವರ ‘ನಮ್ಮ ಭೂಮಿ’, ಕೃತಕ ಕಾಲುಗಳ ಮೂಲಕ ಹೊಸ ಬೆಳಕಾದ ಜೈಪುರ ಫುಟ್ಸ್ ಹೀಗೆ ಕಥೆ ಹೇಳುತ್ತಾ ಹೋದರು.

ಶ್ರೀಧರನ್ ಬರೀ ಕಥೆ ಹೇಳಲಿಲ್ಲ ಇವೆಲ್ಲವನ್ನೂ ಬೇರೆಯವರು ಮಾತ್ರ ಮಾಡಲು ಸಾಧ್ಯ ನಮ್ಮ ಕೈನಿಂದಲ್ಲ ಎಂದು ಜನರಿಗೆ ಅನಿಸಬಾರದು ಎನ್ನುವ ಕಾರಣಕ್ಕೆ ತಮ್ಮ ಲ್ಯಾಪ್ ಟಾಪ್ ಮಡಿಚಿಟ್ಟರು. ವಾಹನವನ್ನು ಗ್ಯಾರೇಜ್ ನಲ್ಲಿ ನಿಲ್ಲಿಸಿದರು. ಸತತ ೫ ವರ್ಷ ಚೆನ್ನೈ ನ ಒಂದು ಬಂಜರು ನೆಲದಲ್ಲಿ ನಿಂತರು. ನೀರುಣಿಸಿ ಆರೈಕೆ ಮಾಡಿ ಹಸಿರು ಕಾಡಾಗಿಸಿದರು. ಹಣ್ಣು, ತರಕಾರಿಗಳ ನೆಲೆಯಾಗಿಸಿದರು

ಯಾರು ಬೇಕಾದರೂ ಬದಲಾವಣೆಯ ಹರಿಕಾರರಾಗಬಹುದು. ಯಾರು ಬೇಕಾದರೂ ಆತ್ಮ ವಿಶ್ವಾಸ ಬಿತ್ತಬಹುದು ಎನ್ನುವುದನ್ನು ಶ್ರೀಧರನ್ ಮನವರಿಕೆ ಮಾಡಿಕೊಟ್ಟ ನಂತರ, ಸತತ ಐದು ವರ್ಷಗಳ ನಂತರ ಮತ್ತೆ ಲ್ಯಾಪ್ ಟಾಪ್ ಕೈಗೆತ್ತಿಕೊಂಡಿದ್ದಾರೆ. ಅವರ ವಾಹನವೂ ಸಜ್ಜಾಗಿದೆ.

ಬನ್ನಿ ಒಳ್ಳೆಯ ಸುದ್ದಿಗಳನ್ನು ಕೇಳೋಣ…

ಡಾಬ ಮೇಲೆ ಪೊಲೀಸರ ದಾಳಿ

ಚಿಕ್ಕನಾಯಕನಹಳ್ಳಿ: ಖಚಿತ ಮಾಹಿತಿಯ ಮೇರೆಗೆ ಇಲ್ಲಿನ ಹೊಯ್ಸಳಕಟ್ಟೆ ಬಳಿರುವ ನ್ಯೂ ಹೈವೇ ಡಾಬದ ಮೇಲೆ ಅಬಕಾರಿ ಪೊಲೀಸರು ದಾಳಿ ನೆಡಸಲಾಗಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯ‌ ಹಾಗೂ ಬಿಯರ್ ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಇಬ್ಬರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ‌ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ದಾಳಿಯಲ್ಲಿ ಅಧಿಕಾರಿಗಳಾ ಗಂಗರಾಜು ಹೆಚ್ ಟಿ, ರಶ್ಮಿ, ಸಿಬ್ಬಂದಿ ಪರಶುರಾಮ್, ರಾಜ್ ಕುಮಾರ, ಮಲ್ಲಿಕಾರ್ಜುನ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.