Wednesday, May 6, 2026
Google search engine
Home Blog Page 183

‘ಚೆ’ ಫೋಟೋದಲ್ಲಿ ನೆಲೆ ನಿಂತರು

0

ಜಿ ಎನ್ ಮೋಹನ್


ಕೋರ್ಡಾ ಇನ್ನಿಲ್ಲ-
ಪತ್ರಿಕೆಯಲ್ಲೊಂದು ಪುಟಾಣಿ ಸುದ್ದಿ.

ಪತ್ರಿಕೆಯ ಪುಟಗಳಲ್ಲಿ ಕ್ಯೂಬಾ ಸುದ್ದಿಯೇನಾದರೂ ಇದೆಯೇ ಎಂದು ಭೂತಕನ್ನಡಿ ಹಿಡಿದು ಹುಡುಕಬೇಕು. ಅಷ್ಟು ವಿರಳ. ಬಹುಶಃ ಜಗತ್ತಿನ ಎಲ್ಲ ಮಾಧ್ಯಮಗಳ ಮಟ್ಟಿಗೂ ಈ ಮಾತು ನಿಜ. ಭಾರತದಲ್ಲಿ ಕ್ಯೂಬಾ ಸುದ್ದಿ ಸಿಗಬೇಕಾದರೆ ಒಂದೋ ‘ದಿ ಹಿಂದೂ’ ವಿನಲ್ಲಿ ಇಲ್ಲಾ ‘ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ. ಈ ಎರಡು ಪತ್ರಿಕೆ ಹೊರತುಪಡಿಸಿದರೆ ಕ್ಯೂಬಾ ಯಾವ ಪತ್ರಿಕೆಗೂ ವಿಷಯವೇ ಅಲ್ಲ.

ಎಷ್ಟೋ ಬಾರಿ ಕ್ಯೂಬಾ ಸುದ್ದಿಯಾಗುತ್ತಿದ್ದುದೂ ಸಹಾ ಸುದ್ದಿಯಾಗಬಾರದ ಕಾರಣಕ್ಕೆ. ಕ್ಯೂಬಾ ಬಗ್ಗೆ ಇರುವ ಇಮೇಜ್ ಈ ಸುದ್ದಿಗಳನ್ನು ಓದುತ್ತಿದ್ದರೆ ಕಡಿಮೆಯಾಗುತ್ತಿತ್ತೇ ಹೊರತು ಸದ್ಭಾವನೆ ಬರುತ್ತಿರಲಿಲ್ಲ.

ಕ್ಯೂಬಾ ಮತ್ತು ಅಮೇರಿಕಾ ನಡುವೆ ಇಷ್ಟು ದೊಡ್ಡ ಬಿಕ್ಕಟ್ಟು ಬೆಳೆಯಲು ಪತ್ರಿಕೆಗಳೇ ಕಾರಣ ಎನ್ನುವವರಿದ್ದಾರೆ. ಕ್ಯೂಬಾ ಮತ್ತು ಅಮೇರಿಕಾ ನಡುವೆ ದೊಡ್ಡ ಪೇಪರ್ ಗೋಡೆಯಿದೆ ಎನ್ನುತ್ತಾರೆ. ಈ ಗೋಡೆಯ ಕಾರಣದಿಂದಾಗಿ ಎರಡೂ ದೇಶಗಳು ದೂರವೇ ಉಳಿದವು.

ಬಹುಶಃ ಕ್ಯೂಬಾ ಮತ್ತು ಇಡೀ ಜಗತ್ತಿನ ಮಧ್ಯೆ ಇದೇ ಪೇಪರ್ ಗೋಡೆ ಎಬ್ಬಿಸುವ ಸಂಚು ನಡೆಯುತ್ತಿದೆಯೇನೋ? ಕ್ಯೂಬಾ ಎನ್ನುವ ಪರಮಹೊರಾಟಗಾರನ ಎದೆಯ ಆ ಮಿಣಿ ಮಿಣಿ ಬೆಳಕು ಇನ್ನೊಂದು ದೇಶಕ್ಕೆ ಗೊತ್ತಾಗದೆ ಹೋಗುವಂತೆ ಜಗತ್ತಿನ ಮೇಸ್ತ್ರಿಗಳು ಗೋಡೆ ಎಬ್ಬಿಸುತ್ತಲೇ ಇದ್ದಾರೆ.

ಆದರೂ.. ಆದರೂ.. ಗೋಡೆಯನ್ನು ಮೀರುವ ಕ್ಯೂಬಾದ ವಿಶ್ವಾಸ ಆಚಲವಾದದ್ದು. ಈ ಜಗತ್ತಿನ ಪ್ರತಿಯೊಬ್ಬರಲ್ಲಿಯೂ ಒಂದೊಂದು ಆಂಟೆನಾ ಇದೆ. ಅದರಿಂದ ಕ್ಯೂಬಾದೊಳಗೆ ನಡೆಯುತ್ತಿರುವ ಪ್ರತಿಯೊಂದೂ ಅವರಿಗೆ ಗೊತ್ತಾಗುತ್ತದೆ ಎನ್ನುವ ಕ್ಯಾಸ್ಟ್ರೋ ತಮ್ಮ ಜನರ ಕ್ಯೂಬಾ ಪ್ರೀತಿಯ ಬಗ್ಗೆ ವಿಸ್ಮಿತರಾಗಿದ್ದಾರೆ.

ಕೋರ್ಡಾ ಸಾವಿನ ಪುಟ್ಟ ತುಣುಕು ಈ ಎಲ್ಲವನ್ನೂ ನೆನಪಿಗೆ ತಂದಿತು.

ಎಲ್ಲಾ ಪತ್ರಿಕೆಗಳ ಪುಟವನ್ನೂ ತಿರುವಿದೆ. ಸಮ್ಮೇಳನ ಬಂದಿಳಿದ ಪಡ್ಡೆ ಹುಡುಗರ ತಂಡಕ್ಕೆ ಏನೇನೋ ಕನಸು. ಕೇವಲ ಸಮ್ಮೇಳನದಲ್ಲಿ ಕೂರುವುದು, ಮೆರವಣಿಗೆಯಲ್ಲಿ ಭಾಗವಹಿಸುವುದು ಮಾತ್ರ ಈ ತಂಡದ ಮುಂದಿರಲಿಲ್ಲ.

ಅವರ ಡೈರಿಯಲ್ಲಿ ಇಣುಕು ಹಾಕಿದ್ದರೆ ಕ್ಯೂಬಾ ಬಗೆಗಿನ ಏನೇನು ಅದ್ಭುತಗಳು ಸಿಗುತ್ತಿದ್ದವೋ! ಸಿಗಾರ್ ಹುಡುಕುವುದು, ಪುಸ್ತಕದಂಗಡಿ ಅಲೆಯುವುದು, ಸಾಧ್ಯವಿದ್ದಷ್ಟೂ ‘ಚೆ’ ಫೋಟೋ ಸಂಗ್ರಹಿಸುವುದು ಮತ್ತು ಆ ‘ಚೆ’ ಯನ್ನು ಸೆರೆಹಿಡಿದ ಕೋರ್ಡಾನ ಮುಂದೆ ಕೂತು ಕಥೆ ಕೇಳುವುದು..

ಕೋರ್ಡಾ ಎಂದರೆ ಸಾಕು ಜನರಿಗೆ ನೆನಪಿಗೆ ಬರುವುದು ಚೆ ಗೆವಾರ. ಇಂದು ಜಗತ್ತಿನ ಎಲ್ಲೆಡೆ ಹರಡಿ ಹೋಗಿರುವ, ಎಲ್ಲರ ಮನದಲ್ಲಿ ಅಚ್ಚೊತ್ತಿ ನಿಂತಿರುವ ಆ ‘ಚೆ’ ಮುಖ ಕೋರ್ಡಾನ ಕ್ಯಾಮೆರಾ ಕ್ಲಿಕ್ಕಿಸಿದ್ದು.

ಪೋಸ್ಟರ್ ಗಳಾಗಿ, ಟಿ-ಶರ್ಟ್, ಟೋಪಿ, ಕೀ ರಿಂಗ್, ಪುಸ್ತಕ ಕರವಸ್ತ್ರ, ಬ್ಯಾನರ್, ಎಲ್ಲೆಡೆಯೂ ಈ ಚಿತ್ರ ಎಷ್ಟು ರೀತಿಯಲ್ಲಿ ಮುದ್ರಣಗೊಂಡಿದೆ ಎಂಬುದೇ ಲೆಕ್ಕಕ್ಕೆ ಸಿಕ್ಕಿಲ್ಲ.

‘ಚೆ’ ಎಂದ ತಕ್ಷಣ ನೆನಪಿಗೆ ಬರುವ ಚಿತ್ರ ಯಾವುದು ಒಮ್ಮೆ ನೋಡಿ. ಹಾಂ, ಆ ಚಿತ್ರವೇ ಕೋರ್ಡಾ ತೆಗೆದದ್ದು. ಈ ಚಿತ್ರದಿಂದಾಗಿಯೇ ಕೋರ್ಡಾ ಜಗತ್ತಿನ ಉದ್ದಗಲಕ್ಕೂ ಹರಡಿಹೋದ.

ತನ್ನ 16ನೇ ವಯಸ್ಸಿನಲ್ಲಿ ಪ್ರೇಯಸಿಯನ್ನು ಸೆರೆಹಿಡಿಯಲು ಪುಟಾಣಿ ಕ್ಯಾಮೆರಾ ಹಿಡಿದ ಆಲ್ಬರ್ಟೋ ಡಯಾಜ್ ಕೋರ್ಡಾ ನಂತರ ಫ್ಯಾಷನ್ ಛಾಯಾಗ್ರಹಣದತ್ತ ವಾಲಿದ.

ಕ್ಯಾಮೆರಾಗೆ ಅಂಟಿಕೊಳ್ಳುವ ಮುನ್ನ ವಿವಿಧ ವೇಷಗಳಲ್ಲಿ ಕಾಣಿಸಿಕೊಂಡ ಕೋರ್ಡಾ ಚಳವಳಿಯ ಒಂದು ಮಹಾನ್ ಘಟನೆಯ ಕಣ್ಣಾಗಿಹೋದ. ಪುಟ್ಟ ಕ್ಯಾಮೆರಾ ದೊಡ್ಡ ಹೋರಾಟವನ್ನು ಒಡಲಲ್ಲಿ ಹೊತ್ತುಕೊಂಡಿತ್ತು.

ಆಗ ಆರಂಭವಾಯಿತು ಅಮೇರಿಕಾದ ದಾಳಿ. ಕ್ಯೂಬಾದ ಮೇಲೆ ಕಂಡು ಕಂಡಲ್ಲೆಲ್ಲಾ ಬಾಂಬ್ ದಾಳಿ ಆರಂಭವಾಯಿತು. ಕ್ಯೂಬಾ ತಲೆ ಎತ್ತಿ ನಿಂತಿತು.

ತನ್ನ ದೇಶಕ್ಕಾಗಿ ಶಸ್ತ್ರಾಸ್ತ್ರ ನೀಡುವವರನ್ನು ಎದುರು ನೋಡಿತು. ಆಗ ಫ್ರಾನ್ಸ್ ‘ಲಾ ಕೊಬೆ’ ಹಡಗು ಬೆಲ್ಜಿಯಂನಿಂದ ಶಸ್ತ್ರಾಸ್ತ್ರಗಳನ್ನು ಹೊತ್ತು ಕ್ಯೂಬಾ ಬಂದರಿಗೆ ಬಂದಿತು. ಒಂದೊಂದೇ ಶಸ್ತ್ರಾಸ್ತ್ರ ಕೆಳಗಿಳಿಯುತ್ತಿದ್ದಂತೆಯೇ ಅಮೇರಿಕಾ ಬಾಂಬ್ ಎಸೆಯಿತು.

ಕ್ಯೂಬಾದ ರೋದನ ಹೇಳತೀರದು. ಹಡಗಿನಲ್ಲಿದ್ದ ಎಲ್ಲ 75 ಕ್ಯೂಬನ್ನರೂ ಇಲ್ಲವಾಗಿದ್ದರು. ಶಸ್ತ್ರಾಸ್ತ್ರಗಳು ಇಲ್ಲ. ಕ್ಯೂಬಾದಲ್ಲಿ ಶೋಕ ಸಾಗರದ ಅಲೆಗಳೆದ್ದವು.

ಜನರು ಬೀದಿಗಿಳಿದರು. ಜನರ ದಂಡುನದಿಯಾಯಿತು, ಕಡಲಾಗಿ ಬದಲಾಯಿತು. ಮುಂದೆ ಇದ್ದವರು ಕ್ಯಾಸ್ಟ್ರೋ, ಚೆ. ಇವರೊಂದಿಗೆ ಕಣ್ಣೀರಿಟ್ಟವರು ಜೀನ್ ಪಾಲ್ ಸಾರ್ತ್ರೆ, ಸಿಮನ್ ದಿ ಬುವಾ.

ಕ್ಯೂಬಾದ ಬೀದಿಗಳು ಜನರಿಂದ ತುಂಬಿ ಹೋಗಿದ್ದವು.

ಸಿ ಐ ಎ ನ ಪೆಂಟಗನ್ ಈ ದಾಳಿ ನಡೆಸಿದೆ ಎಂದು ಕ್ಯಾಸ್ಟ್ರೋ ಕಣ್ಣೀರಿಟ್ಟು ಹೇಳಿದರು. ಇನ್ನಿರುವುದು ಒಂದೇ ದಾರಿ ‘ಪೆಟ್ರಿಯಾ ಓ ಮ್ಯೂರ್ಟೆ’ (ತಾಯ್ನಾಡು ಇಲ್ಲವೇ ಸಾವು).

ಆಗ ಕೋರ್ಡಾ ವೇದಿಕೆಯತ್ತ ನೋಡಿದರು. ನಾಯಕರ ಸಾಲಿನಲ್ಲಿ ಇರಬೇಕಾದವರಲ್ಲಿ ಒಬ್ಬ ನಾಪತ್ತೆ. ಕೋರ್ಡಾ ಕಣ್ಣು ಆತನಿಗಾಗಿ ಹುಡುಕಲು ಆರಂಭಿಸಿತು. ಚೆ ಗೆವಾರ ಒಂದು ಕ್ಷಣ ವೇದಿಕೆಯ ಮುಂಭಾಗಕ್ಕೆ ಬಂದದ್ದೇ ಜನರತ್ತ ದಿಟ್ಟಿಸಿ ನೋಡಿದರು.

ಜನಸಾಗರದ ಕೊನೆಯೆಲ್ಲಿ ಎಂದು ಹುಡುಕುತ್ತಿದ್ದಾರೇನೋ ಎಂಬ ದೂರ ನೋಟ. ಗಡಸು ಮುಖ, ಅದೇ ಗಡ್ಡ, ಕೆಂಪು ನಕ್ಷತ್ರ ಹೊತ್ತ ಅದೇ ಕಪ್ಪು ಹ್ಯಾಟ್, ಅದೇ ಕೋಟು.

ಕೋರ್ಡಾ ಪಟ ಪಟ ಎಂದು ಕ್ಯಾಮೆರಾ ಕ್ಲಿಕ್ಕಿಸಿದರು. ಸಿಕ್ಕಿದ್ದು ಎರಡೇ ಅವಕಾಶ. ಚೆ ಅಲ್ಲಿಂದ ಜಾಗ ಬದಲಿಸಿಯಾಗಿತ್ತು.

ಆ ರಾತ್ರಿ ಕತ್ತಲ ಕೋಣೆಯಲ್ಲಿ ನೆಗೆಟಿವ್ ಗೆ ಉಸಿರು ತುಂಬುತ್ತಿದ್ದ ಕೋರ್ಡಾ ಕಣ್ಣು ಮಿನುಗಲಾರಂಭಿಸಿತು. ಆ ಚಿತ್ರ ಕಣ್ಣ ಮುಂದಿತ್ತು.

ಕೋರ್ಡಾ ತೆಗೆದ ಆ ಚಿತ್ರ ಆತನ ಮನೆಯ, ಗೋಡೆಯ ಮೇಲೆ 7 ವರ್ಷ ತೂಗುತ್ತಿತ್ತು. ಆಗ ಇಟಲಿಯ ಪ್ರಕಾಶನ ಕೋರ್ಡಾನನ್ನು ಹುಡುಕುತ್ತಾ ಬಂದ.

ಆ ಸಂಸ್ಥೆ ಜಗತ್ತಿನ ಎಲ್ಲೆಡೆ ಇದ್ದ ಚೆ ಗೆವೆರಾನ ಚಿತ್ರಗಳನ್ನು ಕಲೆಹಾಕುತ್ತಿತ್ತು. ಕೋರ್ಡಾ ತನ್ನಲ್ಲಿದ್ದ ಫೋಟೋ ಸಂಸ್ಥೆಯ ಕೈಗಿತ್ತರು.

ಕೆಲವೇ ತಿಂಗಳು ಅಷ್ಟೇ ಬೊಲಿವಿಯಾದ ಕಾಡುಗಳಲ್ಲಿ ಸಿ ಐ ಎ ತನ್ನ ಗುರಿ ಸಾಧಿಸಿಯೇ ಬಿಟ್ಟಿತು. ಚೆ ಈಗ ನೆನಪು ಮಾತ್ರ, ಇಟಲಿಯ ಈ ಸಂಸ್ಥೆ ಕೋರ್ಡಾನಿಂದ ಪಡೆದಿದ್ದ ಆ ಗಂಭೀರ ಕಣ್ಣುಗಳ ‘ಚೆ’ ಫೋಟೋವನ್ನು ಪೋಸ್ಟರ್ ಆಗಿ ಮುದ್ರಿಸಿತು.

ಹತ್ತು ಲಕ್ಷ ಪೋಸ್ಟರ್ ಗಳು, ಜಗದುದ್ದ, ಜಗದಗಲ ಅದೇ ‘ಚೆ’, ದಿಟ್ಟ ನೋಟದ, ಗಂಭೀರ ಮುಖದ ‘ಚೆ’.

‘ಈ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸಿಡಿದೆದ್ದರೆ ನೀನು ನನ್ನ ಸಂಗಾತಿ’ ಎಂದ ಚೆ ಗೆವೆರಾ. ಕೋರ್ಡಾನ ಈ ಫೋಟೋ ಅದಕ್ಕೆ ಮಾತು ಕೊಟ್ಟಿತ್ತು. ಪ್ರತಿಯೊಬ್ಬರಿಗೂ ‘ಚೆ’ ಈ ಮಾತು ಹೇಳುತ್ತಿದ್ದಾನೆ ಎನ್ನುವ ಚಿತ್ರ.

ಈ ಚಿತ್ರ ಎಲ್ಲೆಡೆ ಹರಿಯಲಾರಂಭಿಸಿತು. ಯಾರು ಲೆಕ್ಕ ಇಟ್ಟರು ಎಲ್ಲೆಲ್ಲಿ ಹೋಯಿತೆಂದು, ಯಾವ ಒಡಲೊಳಗೆ, ಯಾವ ಕಡಲು ದಾಟಿ, ಯಾವ ದೇಶದ ಗಡಿ ಮೀರಿ..

ಒಂದು ಚಿತ್ರ ಸಾವಿರ ಪದಕ್ಕೆ ಸಮ ಎನ್ನುತ್ತಾರೆ, ‘ಚೆ’ ಯ ಚಿತ್ರ ಅದನ್ನು ಸಾಧಿಸಿತ್ತು. ಆ ಒಂದು ನೋಟ ನೂರಾರು ಕಥೆ ಹೇಳುವಂತೆ. ಕೋರ್ಡಾ ಅದಕ್ಕೆ ‘ಹಿರಾಯಿಕ್ ಗೆರಿಲ್ಲಾ’ ಎಂದು ಹೆಸರಿಟ್ಟರು.

ಕೋರ್ಡಾ ಮನೆಗೆ ಜನರ ಮುತ್ತಿಗೆ ಈಗಲೂ ನಿಂತಿಲ್ಲ. ಕಾಲ ಬದಲಾಗಿ, ತಂತ್ರಜ್ಞಾನ ಬದಲಾಗಿ ನೂರಾರು ರೀತಿಯ ಕ್ಯಾಮೆರಾ ಬದಲಾಗಿದ್ದರೂ ಜನ ಆ ‘ಚೆ’ ಯನ್ನು ಸೆರೆಹಿಡಿದ ಕ್ಯಾಮೆರಾ ನೋಡಲು ಕೋರ್ಡಾ ಮನೆಯ ಬಾಗಿಲು ತಟ್ಟುತ್ತಲೇ ಇದ್ದಾರೆ. ಆ ಕ್ಯಾಮೆರಾ, ಆ ನೆಗೆಟಿವ್ ಈಗಲೂ ಮ್ಯೂಸಿಯಂನ ವಸ್ತು.

ಕೋರ್ಡಾ ಈ ಚಿತ್ರಕ್ಕೆ ಒಂದು ಬಿಡಿಗಾಸೂ ಪಡೆಯಲಿಲ್ಲ. ಹೋರಾಟದ ಹುಮ್ಮಸ್ಸಾಗಿ ಎಲ್ಲ ದಿಕ್ಕುಗಳಲ್ಲಿ ಹರಡಿ ಹೋಗಲಿ ಎಂದರು.

ಆ ಚಿತ್ರ ಹೋರಾಟದ ಸಂಕೇತವಾಗಿ ಹೋಗಿತ್ತು. ಆದರೆ ಆ ‘ಚೆ’ ಮುಖ ವೋಡ್ಕಾ ಬಾಟಲ್ ನ ಮೇಲೆ ಕಂಡದ್ದೇ ಕೋರ್ಡಾ ಬೆಂಕಿಯಾದರು.

ಯಾವ ‘ಚೆ’ಯನ್ನು, ಕ್ಯೂಬಾವನ್ನು, ಅಂತಹ ಹೋರಾಟದ ಹುಮ್ಮಸ್ಸನ್ನು ತಣ್ಣಗಾಗಿಸಲು ಶ್ರಮಿಸುತ್ತಿದ್ದ ಅದೇ ಅಮೇರಿಕಾ, ಬ್ರಿಟನ್ ಈಗ ‘ಚೆ’ಯನ್ನು ಅಸ್ತ್ರವಾಗಿ ಬಳಸಿದ್ದವು. ಬ್ರಿಟನ್ ನ ಜಾಹಿರಾತು ಸಂಸ್ಥೆ ವೋಡ್ಕಾ ಮಾರಲು ಜನರ ಎದೆಯಾಳದ ‘ಚೆ’ಯನ್ನೇ ಬಳಸಿತು. ಇಳಿವಯಸ್ಸಿನ ಕೋರ್ಡಾ ಬ್ರಿಟನ್ ನ್ಯಾಯಾಲಯದ ಕಟ್ಟೆ ಏರಿದರು.

ಎಂದಿಗೂ ಈ ಚಿತ್ರ ನನ್ನದು ಎಂದು ಹೇಳದಿದ್ದ ಕೋರ್ಡಾ ಇದೇ ಮೊದಲ ಬಾರಿಗೆ ವ್ಯಗ್ರರಾಗಿ ನಿಂತಿದ್ದರು. ಅವರ ಕೈಗಳಲ್ಲಿ ಆ ನೆಗೆಟಿವ್ ಇತ್ತು. ಯಾರನ್ನು ಕೇಳಿದಿರಿ ಎಂದು ಗುಡುಗಲು ಸಜ್ಜಾಗಿದ್ದರು. ವಿಶ್ವದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ಅಲೆ ಎದ್ದಿತು.

ವೋಡ್ಕಾ ಸಂಸ್ಥೆ ತಕ್ಷಣವೇ ‘ಚೆ’ ಚಿತ್ರವನ್ನು ತೆಗೆಯಿತು. ಕೋರ್ಡಾ ಹೇಳಿದರು: ‘ಚೆ’ ಎಂದರೆ ಪ್ರತಿಭಟನೆ ಎಲ್ಲಿ ಯಾವ ಮನಸ್ಸಿನಲ್ಲಿಯೇ ಆಗಲಿ ಹೋರಾಟದ ಹುಮ್ಮಸ್ಸಾಗಿ ನನ್ನ ಆ ಫೋಟೋ ಇರಲಿ. ಚೆಗೆವಾರ ಪ್ರತಿನಿಧಿಸಿದ ಮೌಲ್ಯಗಳಿಗಾಗಿ ಮಾತ್ರ ಈ ಫೋಟೋ, ಅಷ್ಟು ನೆನಪಿರಲಿ ಎಂದರು.

ಕೋರ್ಡಾರಿಗೆ ಬ್ರಿಟನ್ ನ ಕಂಪೆನಿ 50 ಸಾವಿರ ಡಾಲರ್ ಗಳನ್ನು ಪರಿಹಾರವಾಗಿ ನೀಡಿತು. ಕ್ಯೂಬಾದ ಮಕ್ಕಳ ಆರೋಗ್ಯವನ್ನು ಕಾಪಾಡಲು ಈ ಎಲ್ಲಾ ಹಣವನ್ನು ಕೋರ್ಡಾ ಸರ್ಕಾರದ ಕೈಗಿತ್ತರು. ಜಗತ್ತಿನ ಕಣ್ಣು ಹನಿಗೂಡಿತು.

ಕೋರ್ಡಾ ಹೇಳಿದರು- ಚೆ ಗೆವಾರ ಈಗ ಬದುಕಿದ್ದಿದ್ದರೆ ಆತ ಮಾಡುತ್ತಿದ್ದುದೂ ಇದನ್ನೇ ತಾನೇ?

ಆ ಕೋರ್ಡಾ ಇನ್ನಿಲ್ಲ.
—-
ನಾನು ಇತ್ತೀಚೆಗೆ ಕ್ಯೂಬಾ ಬಗ್ಗೆ ಬರೆದಾಗ ರೇಣುಕಾ ಮಂಜುನಾಥ್ ಕೋರ್ಡಾ ಬಗ್ಗೆ ಪ್ರಸ್ತಾಪ ಮಾಡಿದ್ದರಲ್ಲದೆ ಸಾಕಷ್ಟು ಲಿಂಕ್ ಕಳಿಸಿದ್ದರು. ಕ್ಯೂಬಾಗೆ ಸಂಬಂಧಿಸಿದಂತೆ ಏನನ್ನಾದರೂ ಆಗಲಿ ಹುಡುಕುವ ಆ ಮನಸ್ಸುಗಳಿಗೆ ನಮನ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರು ಚೆನ್ನಾಗಿಯೇ ಇದ್ದು, ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ, ವೈದ್ಯರ ಸಲಹೆ ಮೇರೆಗೆ ಹಳೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅವರ ಕಾರು ಚಾಲಕ, ಅಡುಗೆ ಸಿಬ್ಬಂದಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು.

ಕೊರೊನ ದೃಢಪಟ್ಟಿರುವುದನ್ನು ಬಿಎಸ್ ವೈ ಸಾಮಾಜಿಕ ಖಾತೆಯಲ್ಲಿ ಬರೆಯಲಾಗಿದೆ.

ತಿಪಟೂರು, ಚಿಕ್ಕನಾಯಕನಹಳ್ಳಿಯಲ್ಲಿ ಹೆಚ್ಚಿದ ಸೋಂಕು

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 135 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 1916 ಕ್ಕೆ ಏರಿಕೆಯಾಗಿದೆ ಎಂದು ಡಿಎಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಭಾನುವಾರ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ನಿಯಂತ್ರಣಕ್ಕೆ ಕ್ರಮ‌ ಕೈಗೊಳ್ಳುವುದು ಅಗತ್ಯವಿದೆ.

ಒಂದೇ ದಿನ ಮೂರು ಮಂದಿ ಸಾವಿಗೀಡಾಗಿದ್ದು, ಜನರನ್ನು ಭಯಭೀತರನ್ನಾಗಿಸಿದೆ.

ತುಮಕೂರು ನಗರವೊಂದರಲ್ಲೇ 36ಮಂದಿಗೆ ಸೋಂಕು ತಗುಲಿದೆ. ಗುಬ್ಬಿಯಲ್ಲಿ 1, ಕುಣಿಗಲ್ ನಲ್ಲಿ 13, ತಿಪಟೂರು 21, ಮಧುಗಿರಿ 6 ಹಾಗೂ ಶಿರಾದಲ್ಲಿ 24, ಪಾವಗಡದಲ್ಲಿ 7, ಕೊರಟಗೆರೆ 3, ತುರುವೇಕೆರೆ ತಾಲ್ಲೂಕಿನಲ್ಲಿ 7 ಸೋಂಕು ತಗುಲಿದೆ.

ಅಮಿತ್ ಶಾಗೆ ಕೊರೊನಾ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಈ ವಿಷಯವನ್ನು ಅವರೇ ದೃಢಪಡಿಸಿದ್ದು, ಆರೋಗ್ಯ ಚೆನ್ನಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆ ಸೇರಿದ್ದೇನೆ ಎಂದು ತಿಳಿಸಿದ್ದಾರೆ.

ತಂದೆ ತಾಯಿ ಇರುವಾಗಲೇ ಕೃಷಿಹೊಂಡಕ್ಕೆ ಬಿದ್ದು ಇನ್ಬರ‌ ಮಕ್ಕಳ‌ ಧಾರುಣ ಸಾವು

Publicstory


ಮಧುಗಿರಿ: ಇಲ್ಲಿನ ಕಾಯಿ ತಿಮ್ಮ‌ನಹಳ್ಳಿಯಲ್ಲಿ ತಂದೆ ತಾಯಿ ಹೊಲದಲ್ಲಿ ಇರುವಾಗಲೇ ಇಬ್ಬರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವಿಗೀಡಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಐದು ವರ್ಷದ ಶರತ್, ಮೂರು ವರ್ಷದ ಲೋಚನ್ ಸಾವೀಗೀಡಾದ ಮಕ್ಕಳು.

ಮಳೆ ಚೆನ್ನಾಗಿ ಆಗಿದ್ದರಿಂದ ಕೃಷಿ ಹೊಂಡ ತುಂಬಿ ತುಳುಕುತ್ತಿತ್ತು.

ಬೇಸಾಯದ ಕಾರಣಕ್ಕಾಗಿ ತಂದೆ ತಾಯಿಗಳು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು.

ಮಕ್ಕಳನ್ನು ಆಟಕ್ಕೆ ಬಿಟ್ಟು ಹೊಲದ ಇನ್ನೊಂದು ಬದಿಯಲ್ಲಿ ಕೆಲಸ ಮಾಡುತ್ತಿದ್ದರು.

ಆಡುತ್ತಿದ್ದ ಮಕ್ಕಳಿಬ್ಬರು ಕೃಷಿ ಹೊಂಡಕ್ಕೆ‌ ಹೋಗಿ ಬಿದ್ದಿವೆ.

ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಊರಿಗೆ ಊರೇ ನೆರೆಯಿತು. ಎಲ್ಲರಲ್ಲೂ ದುಂಖ ಉಮ್ಮಳಿಸಿ ಬರುತ್ತಿತ್ತು.

ತಂದೆ ತಾಯಿಗಳ ರೋಧನ ಮುಗಿಲು ಮುಟ್ಟಿತ್ತು.

50 ಸಾವಿರ ಬೀಜ ಎರಚಿದ ಚಿಕ್ಕ‌ನಾಯಕನಹಳ್ಳಿ ಗುಡ್ಡ ಹೇಗಿದೆ ಗೊತ್ತಾ

Chikkanayakanahalli: ಚಿತ್ರಗಳನ್ನು ನೋಡಿ ಕಕ್ಕಾಬಿಕ್ಕಿಯಾಗಬೇಡಿ.

ಇದು ಚಿಕ್ಕನಾಯಕನಹಳ್ಳಿಯ ಮನಮೋಹಕ ಗುಡ್ಡವೊಂದರ ಚಿತ್ರಣ.

ಚಾರಣದ ಪ್ರದೇಶವಾಗಿ ವಿಖ್ಯಾತವಾಗಬೇಕಿದ್ದ ಇಂಥ ಚಿಕ್ಕನಾಯಕನಹಳ್ಳಿ ಗುಡ್ಡಗಳನ್ನು ಗಣಿಗಾರಿಕೆಗೆ ಕೊಟ್ಟು ಆ ತಾಲ್ಲೂಕಿನ ಬೆರಳಣಿಕೆಯ ಮಂದಿ ಶ್ರೀಮಂತರಾದರು. ಆದರೆ ಇಡೀ ತಾಲ್ಲೂಕಿನ ಜನರು ಅದರ ಪರಿಣಾಮ ಅನುಭವಿಸುತ್ತಿದ್ದಾರೆ. ಅಂತರ್ಜಲ ಕುಸಿದು ನೀರಿಗಾಗಿ ಬಾಯ್ಬಿಡುತ್ತಿದ್ದಾರೆ.

ಮರಗಳನ್ನು ಕಳೆದುಕೊಂಡರೂ ಸೌಂದರ್ಯದ ಖನಿಗಳೇ ಆಗಿರುವ ಗುಡ್ಡಗಳಲ್ಲಿ ಮರಗಳನ್ನು ಕಾಣುವ ಕನಸನ್ನು ಅಲ್ಲಿನ ಕೆಲವು ಕ್ರಿಯಾಶೀಲ ಹುಡುಗ-ಹುಡುಗಿಯರು ಕಾಣುತ್ತಿದ್ದಾರೆ.

ಸ್ನೇಹಿತರ ದಿನಾಚರಣೆಗೆ ಅವರು ಮೋಜು ಮಾಡಲಿಲ್ಲ. ಆದರೆ ಸೀದಾ ಬೆಟ್ಟಕ್ಕೆ ಹೋಗಿ 50 ಸಾವಿರ ಬೀಜದಗಳನ್ನು ಗುಡ್ಡದ ತುಂಬಾ ತೂರಿ ಬಂದಿದ್ದಾರೆ.

ಬೀಜಗಳು ಮೊಳಕೆ ಒಡೆದು, ಮರಗಳಾಗಿ ನೆರಳಾಗುವಂತೆ ನಮ್ಮ ಸ್ನೇಹವು ಬೆಳೆದು ಮರವಾಗಲಿ ಎಂದು ಅವರ ಕನಸು.

ಅಂದಹಾಗೆ ಈ ಕೆಲಸ ಮಾಡಿದ್ದು ಚಿಕ್ಕನಾಯಕನಹಳ್ಳಿಯ ನೆರಳು ಸಂಘಟನೆಯವರು.

ಮಹಾಗನಿ‌, ತೇಗ ಲ, ಕಾಡು ಬಾದಮಿ ಮತ್ತಿ, ರಕ್ತ ಚಂದನ, ಶ್ರೀ ಗಂಧ, ನೇರಳೆ,ಬುಗರಿ, ಬೀಜಗಳನ್ನು ಚಾರಣದ ಮೂಲಕ ನೇರವಾಗಿ ಗುಡ್ಡಕ್ಕೆ ಎರಚಲಾಯಿತು .

ಸಹಾಯಕ್ಕೆ ರಮ್ಯಾ, ಲಕ್ಷ್ಮಿ ಕಾಂತ, ಸಚಿನ್, ಭರತ್ ಮಂಜು, .ಶರತ್, ನಾಗರಾಜ್, ಹಾಗೂ ಹೊಸಬೀದಿ ಯುವಕರಾದ ಭಾನುಪ್ರಸಾದ್ ಸಂಜು, ಅನಿಲ್ ಕುಮಾರ್, ಹಿಮವಂತ್ ರಂಗನಾಥ್ ರೇಣುಕಾ, ಯಶೂ ಇದ್ದರು
ಆಲದ ಗಿಡವನ್ನು ಹಾಕಲಾಯಿತು.

ಇನ್ನಿನಿಸು ದಿನ ಮಹಾತ್ಮ ನೀ ಬದುಕಬೇಕಿತ್ತು…

0

ಜಿ.ಎನ್.ಮೋಹನ್


‘ಒಂದ್ನಿಮಿಷ ಬರ್ತೀನಿ ಇರಿ’ ಎಂದು ಟೆಡ್ ಟರ್ನರ್ ತಮ್ಮ ಖಾಸಗಿ ಕೋಣೆ ಹೊಕ್ಕರು.

ಜಗತ್ತಿಗೆ ಜಗತ್ತೇ ನಿಬ್ಬೆರಗಾಗುವಂತೆ ಟೆಡ್ ಟರ್ನರ್ ಬೆಳೆದು ನಿಂತು ಬಿಟ್ಟಿದ್ದರು.

ಮನೆಯ ಮೂಲೆಯಲ್ಲಿ ಕಣ್ಣೀರು ಉಕ್ಕಿಸುವ , ಹ ಹ ಹಾ ಎಂದು ಲಾಫರ್ ಕ್ಲಬ್ ಗಳಂತೆ ನಗಿಸುವ ವಸ್ತುವಾಗಿದ್ದ ದೂರದರ್ಶನ ಈಗ ಅಫೀಮಿನಂತೆ ಆಗಿ ಹೋಗಿತ್ತು.

ಟೆಡ್ ಟರ್ನರ್ ಕೊಲ್ಲಿ ಯುದ್ಧಕ್ಕೆ ಆಂಟೆನಾ ಜೋಡಿಸಿದ್ದೇ ತಡ ಜಗತ್ತು ಟೆಲಿವಿಷನ್ ಎಂಬ ಮಾಯಾ ಜಿಂಕೆಯ ಬೆನ್ನ ಹಿಂದೆ ಬಿತ್ತು.

ಮತ್ತೆ ಬಾಗಿಲು ತೆರೆದು ಟೆಡ್ ಟರ್ನರ್ ನಮ್ಮ ಮುಂದೆ ನಿಂತಾಗ ಅವರ ಕೈಯಲ್ಲಿ ಒಂದು ಪುಟ್ಟ ಪ್ರತಿಮೆ.

ಟೆಡ್ ಜೊತೆ ಲೋಕಾಭಿರಾಮವಾಗಿ ಹರಟೆ ಕೊಚ್ಚುತ್ತಾ ‘ನಿಮಗೆ ತೀರಾ ಇಷ್ಟವಾದವರು ಯಾರು? ಜೇನ್ ಫಾಂಡಾಳನ್ನು ಬಿಟ್ಟರೆ..’ ಅಂತ ಕೇಳಿದ್ದೆ.

ಅದಕ್ಕೆ ಉತ್ತರವಾಗಿ ಟೆಡ್ ಈ ಪ್ರತಿಮೆ ಹಿಡಿದು ನಿಂತಿದ್ದರು.

‘ವಾಹ್, ಗಾಂಧಿ!’ ಅಂತ ಆಶ್ಚರ್ಯದ ಉದ್ಘಾರ ಹೊರಟಿದ್ದು ನನ್ನಿಂದ ಮಾತ್ರವಲ್ಲ ಪಕ್ಕದಲ್ಲಿಯೇ ಚಿಲಿ, ದಕ್ಷಿಣ ಆಫ್ರಿಕಾ, ಸ್ಲೊವೇನಿಯಾ. ಜೆಕ್, ಜರ್ಮನಿ, ಕೀನ್ಯಾ, ಕೊರಿಯಾ, ಜಪಾನ್, ಆಸ್ಟ್ರೇಲಿಯಾ ದೇಶದ ಎಲ್ಲರ ಬಾಯಿಂದಲೂ ಈ ಉದ್ಘಾರ ಹೊರಬಿತ್ತು.

ಇನ್ನೇನು ಸಿ ಎನ್ ಎನ್ ಕಚೇರಿಯಿಂದ ಬೀಳ್ಗೊಳ್ಳಲು ಎರಡೇ ಎರಡು ದಿನ ಬಾಕಿ ಇತ್ತು.

ಅಟ್ಲಾಂಟಾದ ಮೂಲೆ ಮೂಲೆಯನ್ನೆಲ್ಲಾ ಜಾಲಾಡಿಬಿಡೋಣಾ ಎಂದು ದಂಡು ಕಟ್ಟಿ ಹೊರಟಿದ್ದು ಮಾರ್ಟಿನ್ ಲೂಥರ್ ಕಿಂಗ್ ನೆನಪಿನ ಮನೆಗೆ.

ಇನ್ನೂ ಕಾಂಪೌಂಡ್ ಒಳಗೆ ಕಾಲಿಟ್ಟಿರಲಿಲ್ಲ. ಅಲ್ಲಿ ಆಳೆತ್ತರದ ಪ್ರತಿಮೆ– ಅದು ಗಾಂಧಿ.

ನನ್ನ ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಿದ್ದ ದಕ್ಷಿಣ ಆಫ್ರಿಕಾದ ನೋಕ್ವಾಸಿ ಶಬಲಾಲ ಓಡಿಹೋಗಿ ಆ ಗಾಂಧಿಯ ಕೆನ್ನೆಗೊಂದು ಮುತ್ತು ತೂರಿದಳು. ನನ್ನ ಕ್ಯಾಮೆರಾ ‘ಕ್ಲಿಕ್’ ಎಂದಿತು.

ಶಾಪ್ ಹಾಪಿಂಗ್ ಮಾಡುತ್ತಾ ಮಾಡುತ್ತಾ ಸಮಯ ರಾತ್ರಿ ಮೂರರ ಗಡಿ ದಾಟಿತ್ತು. ಗೆಳೆಯರ ಜೊತೆ ಇನ್ನೂ ಸುತ್ತುವುದಕ್ಕೆ ನಾನು ಸಿದ್ದನಿರಲಿಲ್ಲ. ಎಲ್ಲರಿಗೂ ಒಳ್ಳೆಯ ಹಗ್ ಕೊಟ್ಟು ‘ಗುಡ್ ಬೈ’ ಹೇಳಿದೆ. ’ಹುಷಾರು, ಇದು ಆಮೇರಿಕಾ, ಒಬ್ಬನೇ ಹೋಗುತ್ತಿದ್ದೀಯಾ’ ಎಂದು ಜೆಕ್ ಗೆಳೆಯ ಮೆರೆಕ್ ಬ್ರಾಡ್ಸ್ಕಿ ಪಿಸುಗಟ್ಟಿದ.

ಭಾರತದಿಂದ ಹೊರಡುವಾಗಲೂ ಎಲ್ಲರದ್ದೂ ಇದೇ ಕಿವಿಮಾತು ಟ್ಯಾಕ್ಸಿ ಏರಿದೆ. ಜೇಬಿನಲ್ಲಿದ್ದ ಪಾಸ್ ಪೋರ್ಟ್, ಡಾಲರ್ ಗಳ ಮೇಲೆ ಎರಡಲ್ಲ, ಹತ್ತು ಕಣ್ಣಿಟ್ಟಿದ್ದೆ.

ರೊಯ್ರಂನೆ ಬೀದಿ ಬೀದಿ ಸುತ್ತಿದ ಟ್ಯಾಕ್ಸಿ ನನ್ನ ಹೋಟಲ್ ಮುಂದೆ ನಿಂತಿತ್ತು. ಟ್ಯಾಕ್ಸಿ ಮೀಟರ್, ಅದಕ್ಕೆ ಹತ್ತು ಪರ್ಸೆಂಟ್ ಟಿಪ್ಸ್ ಸೇರಿಸಿ ಡ್ರೈವರ್ ಕೈಗಿಟ್ಟೆ.

ನಾನು ಟಿಪ್ಸ್ ಎಂದು ಕೊಟ್ಟ ಹತ್ತು ಡಾಲರ್ ನೋಟನ್ನು ಆತ ನನ್ನ ಕೈಗೇ ತುರುಕಿದ.

ಯಾಕೆ ಎಂದು ಕೇಳಿದೆ. ‘ಗಾಂಧಿ?’ ಅಂತ ಕೇಳಿದ .

ನಾನು ‘ಯಸ್, ಇಂಡಿಯಾ’ ಎಂದೆ. ಕೈ ಬೀಸುತ್ತಾ ಹೊರಟೇ ಬಿಟ್ಟ.

ಗೆಳತಿ ನೇಮಿಚಂದ್ರ ಪೆರುವಿನ ಪವಿತ್ರ ಕಣಿವೆಗಳನ್ನು ಹುಡುಕುತ್ತಾ ದಕ್ಷಿಣ ಅಮೆರಿಕಾ ಹೊಕ್ಕಿದ್ದರು.

ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ? ಎಂಬಂತೆ ಸ್ಪಾನಿಷ್ ನೆಲದಲ್ಲಿ ಇಂಗ್ಲಿಷ್ ಗೇನು ಕೆಲಸ?. ಹೇಗಪ್ಪಾ ಇಲ್ಲಿನವರ ಜೊತೆ ಮಾತಾಡುವುದು ಎಂದು ನೇಮಿ ಕಕ್ಕಾಬಿಕ್ಕಿಯಾಗಿದ್ದರು.

ಆದರೆ, ಅದು ಕೆಲವೇ ಕ್ಷಣ ಅಷ್ಟೆ. ಜನ ಅವರನ್ನು ಮುತ್ತಿಕೊಳ್ಳತೊಡಗಿದ್ದರು. ಎಲ್ಲರ ಬಾಯಲ್ಲೂ ‘ಗ್ಯಾಂಡಿ’ ಪದ. ಗೊತ್ತಿಲ್ಲದ ದೇಶದಲ್ಲಿ ಗಾಂಧಿ ಮಾತು ಕೂಡಿಸುವ ಸೇತುವೆಯಾಗಿ ಹೋಗಿದ್ದರು.

ಅದೆಲ್ಲಾ ಬಿಡಿ, ಒಬ್ಬ ಪುಟ್ಟ ಹುಡುಗಿ ಬರಾಕ್ ಒಬಾಮಾಗೆ ಪ್ರಶ್ನೆ ಎಸೆದಳು. ‘ನೀವು ಔತಣ ಕೂಟ ಏರ್ಪಡಿಸಿದರೆ ಅದಕ್ಕೆ ಆಹ್ವಾನಿಸಬೇಕೆಂದು ಬಯಸುವವರ ಪೈಕಿ ಮೊದಲು ಯಾರು ನಿಲ್ಲುತ್ತಾರೆ?’.

ಒಬಾಮ ಒಂದು ಕ್ಷಣವೂ ತಡಮಾಡದೆ ಹೇಳಿದರು- ಗಾಂಧಿ.

ಅಮೇರಿಕಾದಿಂದ ಬೀಳ್ಕೊಡುವಾಗ ನೆನಪಿಗೆಂದು ನಾನು ಇಲ್ಲಿಂದ ಕೊಂಡೊಯ್ದಿದ್ದ ಗಣೇಶನನ್ನು ಕೈಗಿಡುತ್ತಿದ್ದೆ. ತಕ್ಷಣ ಅವರು ಇನ್ನೊಂದು ಕೈಯನ್ನೂ ಚಾಚುತ್ತಿದ್ದರು. ‘One Gandhi please…’ ಎನ್ನುತ್ತಿದ್ದರು.

ನನಗೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ರಾಮಮೂರ್ತಿ ಬರೆದ ಕಾರ್ಟೂನ್ ನೆನಪಿಗೆ ಬಂತು. ಅಪ್ಪ, ಮಗ ಗಾಂಧಿ ಪ್ರತಿಮೆಯ ಮುಂದೆ ಹಾದು ಹೋಗುತ್ತಿದ್ದಾರೆ.

ಪ್ರತಿಮೆ ತೋರಿಸಿ ಮಗ ಅಪ್ಪನಿಗೆ ಕೂಗಿ ಹೇಳ್ತಿದಾನೆ- ‘ಅಪ್ಪಾ ಬೆನ್ ಕಿಂಗ್ಸ್ಲೆ’ ರಿಚರ್ಡ್ ಆಟಿನ್ ಬರೋ ನಿರ್ದೇಶಿಸಿದ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ‘ಗಾಂಧಿ’ ಸಿನಿಮಾದಲ್ಲಿ ಗಾಂಧಿ ಪಾತ್ರ ಮಾಡಿದ ನಟ ಬೆನ್ ಕಿಂಗ್ಸ್ಲೆ. ಇವತ್ತು ಗಾಂಧಿಗೂ ಬೆನ್ ಕಿಂಗ್ಸ್ಲೆಗೂ ಇರುವ ಗೆರೆಯೇ ಅಳಿಸಿಹೋಗುತ್ತಿದೆ.

ಎಚ್ ನಾಗವೇಣಿ ಬರೆದ ‘ಗಾಂಧಿ ಬಂದ’ ನನ್ನನ್ನು ಮತ್ತೆ ಮತ್ತೆ ಸೆಳೆದು ಕೊಳ್ಳುವ ಕೃತಿ. ಅಂದಿನ ‘ಕನ್ನಡ’ ಜಿಲ್ಲೆಗೆ ಗಾಂಧಿ ಬಂದ ಹಿನ್ನೆಲೆಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಥನ ಇದು.

ಗೊತ್ತಿಲ್ಲದ ಒಬ್ಬ ಗಾಂಧಿ ಎಲ್ಲಿಯೋ ಇರುವವರನ್ನು ಬದಲಿಸುತ್ತಾ ಹೋಗುತ್ತಾನೆ. ‘ಗಾಂಧಿ ಬಂದ’ ಎಂಬ ಹೆಸರಿಡುವ ಮುನ್ನ ಕಲಾವಿದ ಸುದೇಶ್ ಮಹಾನ್ ಕಾದಂಬರಿಗೆ ‘ಮಾಯಿದ ಪುರುಷೆ’ ಎನ್ನುವ ಹೆಸರಿಡ ಬೇಕು ಎಂದು ನಾಗವೇಣಿಯ ಜೊತೆ ವಾದ ಮಾಡುತ್ತಾ ಇದ್ದ.

ಮಾಧ್ಯಮ ಲೋಕದ ಬಹುದೊಡ್ಡ ಥಿಯರಿ “medium is the message “ ಎನ್ನುವುದು ನೆನಪಿಗೆ ಬಂದಾಗ . ಹೌದಲ್ಲಾ ಗಾಂಧಿ ಎಂಬ ಗಾಂಧಿ ತಾವೇ ಒಂದು ಸಂದೇಶವಾಗಿ ಬದುಕಿಬಿಟ್ಟರು.

‘ಲಂಕೇಶ್ ಪತ್ರಿಕೆ’ ಮಾರುಕಟ್ಟೆಗೆ ಬಂದಾಗ ನಮಗೆಲ್ಲಾ ಆಶ್ಟರ್ಯವಾಗಿ ಹೋಗಿತ್ತು. ಜಾಹಿರಾತು ಇಲ್ಲದೆ ಬದುಕುವುದಕ್ಕೆ ಸಾಧ್ಯವೇ ಎನ್ನುವ ಪ್ರಶ್ನೆ ಕುಣಿದಾಡುತ್ತಿತ್ತು. ಏನೇ ಬರಲಿ, ಜಾಹಿರಾತು ನನ್ನ ಪತ್ರಿಕೆಯಲ್ಲಿರುವುದಿಲ್ಲ ಎಂದು ಲಂಕೇಶ್ ಘೋಷಿಸಿ ಕುಳಿತಿದ್ದರು.

ಜಾಹಿರಾತಿಲ್ಲದೆ ಒಂದು ಪತ್ರಿಕೆ ನಡೆಸಲು ಸಾಧ್ಯ ಎಂಬುದನ್ನು ಗಾಂಧಿ ತೋರಿಸಿಕೊಟ್ಟಿದ್ದರು ಎಂಬುವುದು ಅರ್ಥವಾಗುತ್ತಿರುವುದು ಈಗ.

ಗಾಂಧೀಜಿಗೆ ವೈದ್ಯರೊಬ್ಬರು ಬೆಡ್ ರೆಸ್ಟ್ ಹೇಳಿದರು. ಮಲಗಿ ಸಾಕಾದ ಗಾಂಧೀಜಿ ಪತ್ರಿಕೆಯ ಪ್ರಬಂಧ, ಜಾಹಿರಾತು ತಿರುವಿಹಾಕುತ್ತಾ ಹೋದರು. ಜಾಹಿರಾತಿನ ಬಗ್ಗೆ ಅವರ ಅಸಹನೆ ಎಷ್ಟು ಹೆಚ್ಚುತ್ತಾ ಹೋಯಿತೆಂದರೆ ‘ಅಯೋಗ್ಯ ಜಾಹಿರಾತು’ ಅನ್ನುವ ಸಂಪಾದಕೀಯವನ್ನೇ ಬರೆದರು.

ಗಾಂಧಿಯವರ ವಾದ ಇಷ್ಟೆ. ಯೋಗದ ಪುಸ್ತಕ ಅಂತ ಜಾಹಿರಾತು ಕೊಡುತ್ತಾರೆ, ಆದರೆ ಆ ಪುಸ್ತಕ ಪಟ್ಟಿ ನೋಡಿದರೆ ಅಲ್ಲಿರೋದು ಒಂದೇ ಒಂದು ಯೋಗದ ಪುಸ್ತಕ . ಇನ್ನುಳಿದದ್ದೆಲ್ಲಾ ಸೆಕ್ಸ್ ಬುಕ್ ಗಳು ಅನ್ನೋ ಆಕ್ರೋಶ ಅವರದ್ದು. ಇದನ್ನೆಲ್ಲಾ ನನ್ನ ಪತ್ರಿಕೆಗೆ ಹೇಗೆ ತರಲಿ ಅನ್ನೋ ತಲೆ ಬಿಸಿ ಅವರದ್ದು.

ಗಾಂಧಿಗೆ ಪತ್ರಿಕೋದ್ಯಮ ಅನ್ನೋದು ಬರಿ ಪತ್ರಿಕೋದ್ಯಮ ಆಗಿರಲಿಲ್ಲ. ಅವರೇ ಹೇಳಿಕೊಳ್ಳುವ ಪ್ರಕಾರ ಅದು ಅವರ ಆತ್ಮದ ತಳಮಳಕ್ಕೆ ನೀಡಿದ ಅಕ್ಷರ ರೂಪವಾಗಿತ್ತು.

ಗಾಂಧಿಗೆ ಗಾಂಧಿಯನ್ನು ನೋಡಿಕೊಳ್ಳುವ ಒಂದು ಕನ್ನಡಿಯಾಗಿ ಅದು ರೂಪುಗೊಳ್ಳುತ್ತಿತ್ತು. ಗಾಂಧಿ ಪತ್ರಿಕೆಗೆ ಬರೆಯುತ್ತಲೇ ತಮ್ಮ ದೌರ್ಬಲ್ಯಗಳನ್ನೂ ಕಂಡುಕೊಳ್ಳುತ್ತಾ ಹೋದರು.

ಪತ್ರಿಕೆ ಎನ್ನುವುದು ಒಂದು ಉದ್ಯಮ ಆಗುವುದೇ ಗಾಂಧಿಗೆ ಸರಿ ಬರದ ವಿಚಾರವಾಗಿತ್ತು. Journalism should never be prostituted for selfish ends or for the sake of carrying livelihood ಅಂದಿದ್ದರು.

ಭಾರತದ ಪತ್ರಿಕೋದ್ಯಮ ಅಂದರೆ ಬ್ರಿಟಿಷರು ಕಿಸಕ್ಕನೆ ನಗುವ ಪರಿಸ್ಥಿತಿ ಇತ್ತು. ಭಾರತದ ಪತ್ರಿಕೆ ಓದಿದರೆ ಅರೇಬಿಯನ್ ನೈಟ್ಸ್ ಕಥೆ ಓದಿದ ಹಾಗಿರುತ್ತದೆ ಅಂತ ಬ್ರಿಟನ್ನಿನ ಪ್ರಧಾನಿ ಬೆಂಜಮಿನ್ ಡಿಸ್ರೇಲಿ ನಗಾಡಿದ್ದ.

ಅಂತಹ ಕಾಲದಲ್ಲೇ ಗಾಂಧಿ ಪತ್ರಿಕೆಯ ಅಂಗಳ ಪ್ರವೇಶಿಸಿದರು. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವಾಗ ಗಾಂಧಿ ರೈಲು ಡಬ್ಬಿಯಿಂದ ಬಿಳಿಯರು ಎಸೆದ ಸೂಟ್ ಕೇಸನ್ನು ಮಾತ್ರ ಹೊತ್ತು ತರಲಿಲ್ಲ. ಪ್ರತಿಭಟನೆಯ ಕಿಚ್ಚನ್ನೂ, ಪತ್ರಿಕೆ ಎಂಬ ಕಂದೀಲನ್ನೂ ಹಿಡಿದುಕೊಂಡೇ ಬಂದರು.

ಯಂಗ್ ಇಂಡಿಯಾ ಕೈಗೆತ್ತಿಕೊಂಡರು. ನವ ಜೀವನ, ಸತ್ಯಾಗ್ರಹಿ, ಹರಿಜನ, ಹರಿಜನ ಬಂಧು, ಹರಿಜನ ಸೇವಕ…ಹತ್ತು ಭಾಷೆಯನ್ನು ಆವರಿಸಿ ನಿಂತರು. ಅಷ್ಟೇ ಅಲ್ಲ, ಏನಿಲ್ಲೆಂದರೂ ಐದು ದಶಕ ಅವರಿಗೆ ಪತ್ರಿಕೆ ಇನ್ನೊಂದು ಊರುಗೋಲೇ ಆಗಿಹೋಗಿತ್ತು.

ಪತ್ರಿಕೆಗೆ ಒಂದು ಎಥಿಕ್ಸ್ ಇರ್ಬೇಕು ಅನ್ನೋದು ಗಾಂಧಿಯವರಿಗೆ ಗೊತ್ತಾಗಿತ್ತು. ‘ಜಾಹೀರಾತಿಲ್ಲದೆ ಪತ್ರಿಕೆ ನಡೆಸೋದಕ್ಕಾಗಲ್ಲ ಅಂತ ಸುಳ್ಳು ಹೇಳೋ ಜಾಹೀರಾತೆಲ್ಲಾ ಹಾಕೋದಿಕ್ಕೆ ಆಗುತ್ತಾ. ಒಂದಿಷ್ಟು ನೀತಿ ನಿಯಮ ಇರ್ಬೇಕು, ಪತ್ರಕರ್ತರ ಸಂಘಗಳು ನಿಬಂಧನೆ ಮಾಡ್ಬೇಕು’ ಅಂತಿದ್ರು.

ಸಂತೋಷ್ ಕುಮಾರ್ ಗುಲ್ವಾಡಿ ಅವರ ಪುಸ್ತಕ ತೆಗೆದು ನೋಡಿ. ಗಾಂಧಿ ಹೇಳಿದರಂತೆ- ‘ಪತ್ರಕರ್ತರು ನಡೆದಾಡೋ ಪ್ಲೇಗ್ ನಂತ ಮಹಾರೋಗಿಗಳು. ಪತ್ರಿಕೆಗಳು ಬೈಬಲ್, ಕುರಾನ್, ಗೀತೆ ಎಲ್ಲವನ್ನೂ ಒಂದರಲ್ಲೇ ಅಳವಡಿಸೋ ಕೃತಿಗಳಾಗಿವೆ. ಇಷ್ಟರಲ್ಲೇ ರಾಜಕೀಯ ದೊಂಬಿಯಾಗಲಿದೆ ಅಂತ ಪತ್ರಿಕೆಗಳಲ್ಲಿ ಪ್ರಕಟವಾದರೆ ದೆಹಲಿಯಲ್ಲಿರುವ ಎಲ್ಲಾ ಕತ್ತಿ, ಬಾರುಕೋಲುಗಳು ಕ್ಷಣ ಮಾತ್ರದೊಳಗೆ ಮಾರಾಟವಾಗುತ್ತವೆ. ಜನರು ಧೈರ್ಯಶಾಲಿಗಳಾಗಬೇಕೆಂದು ಪತ್ರಿಕೆಗಳು ಕಲಿಸಿಕೊಡಬೇಕೇ ಹೊರತು ಅವರಲ್ಲಿ ಭಯವನ್ನು ಹುಟ್ಟಿಸುವುದಲ್ಲ’.

ಕಾಲೇಜಿನಲ್ಲಿದ್ದಾಗ ನಮ್ಮ ನಡುವೆ ಒಂದು ಹಾಡು ಭಾರೀ ಪಾಪ್ಯುಲರ್ ಆಗಿತ್ತು.’ಗಾಂಧಿ ಹೇಳಿಕೊಟ್ಟ ಪಾಠ, ಗುರುವಿಗೆ ತಿರುಮಂತ್ರ ಮಾಟ, ಸತ್ಯಾಗ್ರಹ- ಸ್ಟ್ರೈಕ್, ಸ್ಟ್ರೈಕ್, ಸ್ಟ್ರೈಕ್…’ ಅಂತ ಹೇಳಿ ಸ್ಟ್ರೈಕ್ ಗೆ ಇಳೀತಿದ್ವಿ.

ಈಗ ‘ಗಾಂಧಿ ಜರ್ನಲಿಸಂ’ಗೆ ಬಂದಿರೋ ಸ್ಥಿತೀನೂ ಅದೇ.

ಇವತ್ತಿನ ಪತ್ರಿಕೋದ್ಯಮ ಗಾಂಧಿ ಎಂಬ ಗುರುವಿಗೇ ತಿರುಮಂತ್ರ ಹೇಳುತ್ತಿದೆ.

ಗಾಂಧಿಯ ನೆನಪಿನ ಓಣಿಯಲ್ಲಿ ನಡೆಯುತ್ತಾ ಇರುವಾಗ ಏಕೋ ಗೋವಿಂದ ಪೈ ಬರೆದ ‘ಇನ್ನಿನಿಸು ದಿನ ಮಹಾತ್ಮ ನೀ ಬದುಕಬೇಕಿತ್ತು…’ ಸಾಲುಗಳು ನೆನಪಿಗೆ ಬಂತು.

ಹೌದು, ನೀ ಇನ್ನಿನಿಸು ದಿನ ಬದುಕಬೇಕಿತ್ತು…

ಇನ್ನೆಂದೂ ಈ ಮಣ್ಣಲಿ ಭೋಪಾಲ್ ಗಳು ಬೇಡ…

0

ಜಿ ಎನ್ ಮೋಹನ್


ಲಂಡನ್ ನ ಸೌತ್ ವಾರ್ಕ್ ನಲ್ಲಿ ಒಲಂಪಿಕ್ ಜ್ಯೋತಿಯನ್ನು ಹೊತ್ತ ಅಮಿತಾಬ್ ಬಚನ್ ಹೆಮ್ಮೆಯಿಂದ ಹೆಜ್ಜೆ ಹಾಕುತ್ತಿದ್ದರು. ಕಿಕ್ಕಿರಿದ ಜನಸಂದಣಿಯತ್ತ ಕೈ ಬೀಸುತ್ತಾ ಮುಂದೆ ಮುಂದೆ ಸಾಗಿದ್ದರು.

ಆದರೆ ಅದೇ ವೇಳೆ ಭೂಪಾಲದಲ್ಲಿ ಇದೇ ಒಲಂಪಿಕ್ಸ್ ಕಾರಣಕ್ಕೇ ನೂರಾರು ಮಂದಿ ಸೇರಿದ್ದರು.

ನಡೆಯಬೇಕೆಂದರೆ ಎಷ್ಟೋ ಜನಕ್ಕೆ ಕಾಲುಗಳೇ ಇರಲಿಲ್ಲ. ಏನಾದರೂ ಹಿಡಿಯಬೇಕೆಂದರೆ ಕೈಗಳೂ ಇರಲಿಲ್ಲ. ಏಕೆ ಇಲ್ಲಿ ಸೇರಿದ್ದೇವೆ ಎಂದು ತಿಳಿಯಬೇಕೆಂದರೆ ಹಲವರಿಗೆ ಮಾನಸಿಕ ಸ್ವಾಸ್ತ್ಯವೂ ಇರಲಿಲ್ಲ.

ಅಲ್ಲಿದ್ದ ತಾಯಂದಿರ ಕಣ್ಣಲ್ಲಿ ನೀರಿತ್ತು. ತಮ್ಮ ಏಳಲಾಗದ, ಓಡಲಾಗದ ಮಕ್ಕಳನ್ನು ತಳ್ಳು ಖುರ್ಚಿಯಲ್ಲಿ ಕೂರಿಸಿಕೊಂಡು ಅವರು ಹೆಜ್ಜೆ ಹಾಕುತ್ತಿದ್ದರು.

ಲಂಡನ್ ಒಲಂಪಿಕ್ಸ್ ನ್ನು ವಿರೋಧಿಸಿ ಇಲ್ಲಿ ನಡೆಯುತ್ತಿದ್ದುದು ಪ್ಯಾರಾ ಒಲಂಪಿಕ್ಸ್.

ಅಲ್ಲಿ ಅಮಿತಾಬ್ ಬಚನ್ ಕೈನಲ್ಲಿ ಒಲಂಪಿಕ್ ಜ್ಯೋತಿ ಇದ್ದರೆ, ಇಲ್ಲಿದ್ದವರ ಕೈಯಲ್ಲಿ ಪೊರಕೆಗಳಿದ್ದವು.

ಅಮಿತಾಬ್ ಒಲಂಪಿಕ್ಸ್ ನ್ನು ಜಗತ್ತಿನ ಹೆಮ್ಮೆ ಎಂದು ಬಣ್ಣಿಸುತ್ತಿದ್ದರೆ, ಇಲ್ಲಿ ಎಲ್ಲರೂ ‘ಲಂಡನ್ ಒಲಂಪಿಕ್ಸ್, ನಿನ್ನ ಕೈಗೆ ರಕ್ತ ಮೆತ್ತಿದೆ’ ಎಂದು ಘೋಷಣೆ ಕೂಗುತ್ತಿದ್ದರು.

ಅದು 1984, ಡಿಸೆಂಬರ್ ಎರಡು ಹಾಗೂ ಮೂರರ ನಡುವಣ ರಾತ್ರಿ.
ಭೂಪಾಲಕ್ಕೆ ಆಗ ಗಾಢ ನಿದ್ದೆ.

ಇದ್ದಕ್ಕಿದ್ದಂತೆ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ನುಸುಳಿ ಹೊರ ಬಂದ ಅನಿಲ ಊರಿಗೆ ಊರನ್ನೇ ಆವರಿಸಿಕೊಳ್ಳತೊಡಗಿತು.

ಮಲಗಿದ್ದವರನ್ನು ನಿದ್ದೆಯಲ್ಲೇ ಇಲ್ಲವಾಗಿಸಿತು. ಎದ್ದಿದ್ದವರನ್ನು ಇದ್ದಲ್ಲೇ ಹೊಸಕಿ ಹಾಕಿತು. ಆ ಅನಿಲಕ್ಕೆ ಕರುಣೆಯ ಕಣ್ಣು ಎನ್ನುವುದೇ ಇರಲಿಲ್ಲ.

ಇಡೀ ಜಗತ್ತಿಗೇ ಜಗತ್ತೇ ಬೆಚ್ಚಿ ಬಿದ್ದು ಕೂತಿತು. ಭೂಪಾಲದ ಯೂನಿಯನ್ ಕಾರ್ಬೈಡ್ ಸಂಸ್ಥೆ ‘ಜಗತ್ತಿನ ಅತ್ಯಂತ ದೊಡ್ಡ ಕೈಗಾರಿಕಾ ದುರಂತ’ಕ್ಕೆ ಕಾರಣವಾಗಿ ಹೋಯಿತು.

ಅದಾಗಿ 28 ವರ್ಷಗಳು ಕಳೆದಿದೆ. ಸಾವಿನ ಎಣಿಕೆ ಮಾತ್ರ ಇನ್ನೂ ಮುಗಿದಿಲ್ಲ. ಮಧ್ಯಪ್ರದೇಶ ಸರ್ಕಾರ ಸತ್ತವರ ಸಂಖ್ಯೆಯನ್ನು 5295 ಎಂದು ಸಾರಿದೆ. ಆ ಸರ್ಕಾರಕ್ಕೆ ಆ ದಿನ ಸಂಭವಿಸಿದ ಸಾವು ಮಾತ್ರ ಲೆಕ್ಕ.

ಆದರೆ ಭಾರತ ವೈದ್ಯಕೀಯ ಸಂಶೋಧನಾ ಮಂಡಳಿ ದುರಂತದ ದಿನ ಹಾಗೂ ಅನಂತರ ಅನಿಲದ ಕಾರಣದಿಂದಾಗಿ ಸತ್ತವರ ಸಂಖ್ಯೆಯನ್ನು 25 ಸಾವಿರ ಎಂದು ಗುರುತಿಸಿದೆ.

5 ಲಕ್ಷಕ್ಕೂ ಹೆಚ್ಚು ಮಂದಿ ಒಂದಲ್ಲಾ ಒಂದು ರೀತಿ ಈ ಅನಿಲ ದುರಂತಕ್ಕೆ ಈಡಾಗಿದ್ದಾರೆ ಎನ್ನುವುದು ಮಾತ್ರ ನಿರ್ವಿವಾದ.

ಈ ದುರಂತ ನಡೆದು ದಶಕಗಳಾದರೂ ಈ ಅನಿಲ ಮಾತ್ರ ಸಾವಿನ ಕುಣಿಕೆಯನ್ನು ಇನ್ನೂ ಬಿಗಿ ಮಾಡುತ್ತಲೇ ನಡೆದಿದೆ. ಭೂಪಾಲದ ನೀರು ಕಲುಪಿತವಾಗಿದೆ. ಭೂಮಿ ವಿಷಮಯವಾಗಿದೆ. ಈ ನೀರು, ಈ ನೆಲವಲ್ಲದೆ ಬದುಕುವ ಬೇರೆ ಮಾರ್ಗವೂ ಇಲ್ಲದ ಜನ ಅಂಗವಿಕಲತೆಗೆ ಪಕ್ಕಾಗುತ್ತಲೇ ಇದ್ದಾರೆ.

ಅವರೆಲ್ಲರ ಬೇಡಿಕೆ ಒಂದೇ- ನಮ್ಮ ನೀರು, ನಮ್ಮ ನೆಲವನ್ನು ಸ್ವಚ್ಛ ಮಾಡಿಕೊಡಿ ಎಂದು. ಅದಕ್ಕಾಗಿಯೇ ಪೊರಕೆಯ ಮೆರವಣಿಗೆ.

ಲಂಡನ್ ಒಲಂಪಿಕ್ಸ್ ಜಗತ್ತಿಗೆ ಸುಂದರತೆಯ ಸಂದೇಶ ರವಾನಿಸುತ್ತಿದ್ದರೆ, ಇಲ್ಲಿ ಜಗತ್ತಿಗೆ ಕರಾಳತೆಯ ಸಂದೇಶದ ರವಾನೆಯಾಗುತ್ತಿದೆ.

ಲಂಡನ್ ಒಲಂಪಿಕ್ಸ್ ನ ಪ್ರಾಯೋಜಕರಾಗಿ ‘ಡೋ ಕೆಮಿಕಲ್ಸ್’ ಕಂಪನಿಯನ್ನು ಸೇರಿಸಿಕೊಂಡಿದ್ದೆ ತಡ ಭೂಪಾಲದ ಸಂತ್ರಸ್ಥರು ರೊಚ್ಚಿಗೆದ್ದರು.

ಯೂನಿಯನ್ ಕಾರ್ಬೈಡ್ ಸಂಸ್ಥೆಯ ಮಾಲೀಕತ್ವ ಈಗ ಡೋ ಕೆಮಿಕಲ್ಸ್ ನ ಕೈನಲ್ಲಿದೆ. ಡೋ ಕೆಮಿಕಲ್ಸ್ ಸಂಸ್ಥೆ ನಮ್ಮ ನೀರು, ನೆಲವನ್ನು ಸ್ವಚ್ಛ ಮಾಡಿಕೊಡುವ ಹೊಣೆಗಾರಿಕೆಯಿಂದ ಜಾರಿಕೊಂಡಿದೆ, ಹಾಗಾಗಿ ಆ ಸಂಸ್ಥೆಯನ್ನು ಒಲಂಪಿಕ್ಸ್ ನಿಂದ ಹೊರಗಿಡಿ ಎಂಬ ಒತ್ತಡವನ್ನು ಭೂಪಾಲ ಸಂತ್ರಸ್ಥರು ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿಯ ಮೇಲೆ ಹೇರಿದರು.

‘ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಳುವಿನ ಚಾರಿತ್ರ್ಯದ ಬಗ್ಗೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತೀರಿ. ಆದರೆ ಪ್ರಾಯೋಜಕರ ಚಾರಿತ್ರ್ಯವನ್ನು ಯಾಕೆ ಪರಿಶೀಲಿಸುವುದಿಲ್ಲ?’ ಎಂದು ಭಾರತದ 25 ಒಲಂಪಿಯನ್ ಗಳು ಒಲಂಪಿಕ್ ಸಮಿತಿಯನ್ನು ಪ್ರಶ್ನಿಸಿದರು.

ಐದು ತಿಂಗಳ ಕೂಸಾಗಿದ್ದಾಗ ಅನಿಲದ ಈ ದಾಳಿಯಲ್ಲಿ ತನ್ನ ತಂದೆ ತಾಯಿ ಬಂಧುಗಳನ್ನು ಕಳೆದುಕೊಂಡ ಸಂಜಯ್ ವರ್ಮ ಯುರೋಪಿನಲ್ಲಿ ತನ್ನ ಕಥೆಯನ್ನು ಎಲ್ಲರ ಮುಂದೆ ಹರಡಿದ.

ಇದು ಲಂಡನ್ ನಲ್ಲೂ ಪ್ರತಿರೋಧದ ಅಲೆ ಏಳಲು ಕಾರಣವಾಯಿತು. ಲಂಡನ್ ಅಸೆಂಬ್ಲಿಯ ಸದಸ್ಯ ನವೀನ್ ಷಾ ಖುದ್ದಾಗಿ ಭೂಪಾಲಕ್ಕೆ ಭೇಟಿ ಕೊಟ್ಟು ಸಂತ್ರಸ್ತರ ನೋವಿಗೆ ಕಿವಿಯಾದರು. ಡೋ ಕೆಮಿಕಲ್ಸ್ ವಿರುದ್ಧ ಲಂಡನ್ ನಲ್ಲಿ ಸಹಿ ಅಭಿಯಾನಕ್ಕೆ ಕಾರಣರಾದರು.

ಆದರೆ ಅಂತರರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ‘ಈ ದುರಂತ ನಡೆದಾಗ, ದುರಂತದ ಬಗ್ಗೆ ನ್ಯಾಯಾಲಯ ತೀರ್ಪು ನೀಡುವಾಗ ಡೋ ಕೆಮಿಕಲ್ಸ್ ಸಂಸ್ಥೆ ಅದರ ಮಾಲೀಕರಾಗಿರಲಿಲ್ಲ’ ಎಂಬುದನ್ನು ಮುಂದೆ ಮಾಡಿ ಭಾರತ ಒಲಂಪಿಕ್ಸ್ ಸಂಸ್ಥೆ ಮಾಡಿದ್ದ ಮನವಿಯನ್ನು ತಳ್ಳಿಹಾಕಿತು.

ಇದು ಭೂಪಾಲ ಸಂತ್ರಸ್ತರ ಎದೆಯಲ್ಲಿ ಆಳವಾದ ಒಂದು ಗಾಯಕ್ಕೆ ಕಾರಣವಾಗಿದೆ.

‘ಒಂದು ಸಂಸ್ಥೆಯನ್ನು ಕೊಳ್ಳುವುದು ಎಂದರೆ ಅದು ಮಾಡಿದ ಅಪರಾಧ, ಹಾನಿಗಳನ್ನೂ ಕೊಳ್ಳುವುದು ಎಂದೇ ಅರ್ಥ’ ಎಂದು ಸಂತ್ರಸ್ಥರು ಗಟ್ಟಿ ದನಿಯಲ್ಲಿ ಹೇಳಿದ್ದಾರೆ.

ಲಂಡನ್ ಒಲಂಪಿಕ್ಸ್ ನಡೆಯುವ ಪ್ರಧಾನ ಕ್ರೀಡಾಂಗಣಕ್ಕೆ ಬಣ್ಣ ಬಣ್ಣದ ಬಟ್ಟೆ ತೊಡಿಸುವ ಕೆಲಸವನ್ನು ಈ ಡೋ ಸಂಸ್ಥೆ ಹೊತ್ತುಕೊಂಡಿದೆ. ಇದಕ್ಕೆ ಖರ್ಚು ಮಾಡುತ್ತಿರುವ ಹಣ 100 ದಶಲಕ್ಷ ಡಾಲರ್.

ಸತತ ಸಾವು, ನೋವು ಕಾಡುತ್ತಿರುವ ಅನಿಲ ಸಂತ್ರಸ್ಥರಿಗೆ ಯೂನಿಯನ್ ಕಾರ್ಬೈಡ್ ಪರಿಹಾರ ಎಂದು ಕೊಡಲು ಒಪ್ಪಿದ್ದು ತಾನು ಕೊಡಬೇಕಾಗಿದ್ದ ವಿಮೆಯ ಹಣ ಮಾತ್ರ. ಆದರೆ ಈ ವಿವಾದ ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿದಾಗ ಸಂಸ್ಥೆ ವಿಮೆಯ ಜೊತೆಗೆ ಸೇರಿಸಿ ಕೊಡಲು ಒಪ್ಪಿದ್ದು ಅದರ ಬಡ್ಡಿ ಹಣವನ್ನು ಮಾತ್ರ.

ಅಂದರೆ 470 ದಶಲಕ್ಷ ಡಾಲರ್ ಮಾತ್ರ. ಅಂದರೆ ಒಬ್ಬ ಸಂತ್ರಸ್ಥನಿಗೆ ಕೇವಲ 25 ರಿಂದ 50 ಸಾವಿರ ಮಾತ್ರ. ಸತ್ತವರ ಕುಟುಂಬಕ್ಕೆ 10 ಲಕ್ಷ, ಅಂಗವಿಕಲರಾದವರಿಗೆ 5 ಲಕ್ಷ ನೀಡಬೇಕೆಂಬ ಆಗ್ರಹದ ಮುಂದೆ ಡೊ ಕೆಮಿಕಲ್ಸ್ ನೀಡಲು ಮಂದಾಗಿದ್ದು ಇಷ್ಟು ಮಾತ್ರ.

ಅನಿಲ ದುರಂತ ನಮ್ಮ ಸುತ್ತಲಿನ ಗಾಳಿ, ನೀರನ್ನೇ ಆವರಿಸಿ ಕೂತಿದೆ. ಸದ್ದಿಲ್ಲದೆ ಸಾವು ಹೆಜ್ಜೆ ಹಾಕುತ್ತಿದೆ ಎನ್ನುವುದು ಪ್ರತಿಯೊಬ್ಬ ಸಂತ್ರಸ್ಥನಿಗೂ ಗೊತ್ತು. ಹಾಗಾಗಿಯೇ ಇಲ್ಲಿನ ನೀರು ನೆಲವನ್ನು ಸ್ವಚ್ಛ ಮಾಡಿಕೊಡಿ ಎಂಬ ಬಲವಾದ ಬೇಡಿಕೆಯನ್ನು ಮುಂದಿಟ್ಟಿದೆ.

ಈ ಬೇಡಿಕೆ ಅಮೇರಿಕಾ ನ್ಯಾಯಾಲಯದ ಮುಂದೆಯೂ ಬಂದಿದ್ದು ಅಲ್ಲಿನ ನ್ಯಾಯಾಲಯ ಡೋ ಕೆಮಿಕಲ್ಸ್ ಈ ಯಾವುದೇ ಹೊಣೆ ಹೊರಬೇಕಾಗಿಲ್ಲ ಎಂದು ತೀರ್ಪು ನೀಡಿದೆ.

ತನ್ನ ದೇಶದ 250ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳ ತಂಡದೊಂದಿಗೆ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಿಳಿದಾಗ ಭೂಪಾಲ ಅನಿಲ ಸಂತ್ರಸ್ಥರು ಬೀದಿಗಿಳಿದರು. 8 ಬಿಲಿಯ ಡಾಲರ್ ಪರಿಹಾರ ಕೊಡಿಸುವಂತೆ ಒಬಾಮಾಗೆ ಆಗ್ರಹಿಸಿದರು.

ಇಷ್ಟೆಲ್ಲಾ ಆದರೂ ಒಲಂಪಿಕ್ಸ್ ಸಮಿತಿ ಡೋ ಕೆಮಿಕಲ್ಸ್ ಗೆ ಬೆಂಗಾವಲಾಗಿ ನಿಂತಿದೆ. ಇದು ಸಂತ್ರಸ್ಥರನ್ನು ಇನಷ್ಟು ಕೆರಳಿಸಿದೆ.

ಲಂಡನ್ ಮೇಯರ್ ಬೋರಿಸ್ ಜಾನ್ಸನ್, ಒಲಂಪಿಕ್ಸ್ ಸಂಘಟನಾ ಸಮಿತಿಯ ಅಧ್ಯಕ್ಷ ಸೆಬಾಸ್ಟಿಯನ್ ಕೊ ಗೆ ‘ಬನ್ನಿ ಒಂದೇ ಒಂದು ಲೋಟ ಭೂಪಾಲದ ನೀರು ಕುಡಿದು ನೋಡಿ’ ಎಂದು ಸವಾಲು ಹಾಕಿದೆ.

ಭೂಪಾಲ ಅನಿಲ ಸಂತ್ರಸ್ಥರ ಹೋರಾಟದ ಹುಮ್ಮಸ್ಸು ಮಾತ್ರ ದೊಡ್ಡದು. ಹಾಗಾಗಿಯೇ ದಶಕಗಳ ಕಾಲ ತಮ್ಮ ಹೋರಾಟವನ್ನು ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ. ಒಲಂಪಿಕ್ಸ್ ಗಿರುವ ಡೋ ಎಂಬ ಕರಾಳ ಮುಖವನ್ನು ಬಯಲು ಮಾಡಲು ಯಶಸ್ವಿಯೂ ಆಗಿದ್ದಾರೆ.

ಈ ಕಾರಣಕ್ಕಾಗಿಯೇ ಒಲಂಪಿಕ್ಸ್ ನೈತಿಕತೆ ಸಮಿತಿಯ ಮುಖ್ಯಸ್ಥೆ ಮೆರೆದಿತ್ ಅಲೆಕ್ಸಾಂಡರ್ ತಮ್ಮ ಜವಾಬ್ದಾರಿಗೆ ರಾಜಿನಾಮೆ ನೀಡಿದರು.

ಒಲಂಪಿಕ್ಸ್ ಸ್ಟೇಡಿಯಂ ಸುತ್ತಾ ಡೋ ಕೆಮಿಕಲ್ಸ್ ಹೊದಿಸಿದ ರಂಗು ರಂಗಿನ ವಸ್ತ್ರದಲ್ಲಿ ತನ್ನ ಲಾಂಛನವನ್ನು ಎಲ್ಲಿಯೂ ಬಳಸದಂತೆ ಒಲಂಪಿಕ್ಸ್ ಸಮಿತಿ ತಾಕೀತು ಮಾಡಿತು.

ಇವೆಲ್ಲವೂ ದೊಡ್ಡ ಹೋರಾಟದ ಹಾದಿಯಲ್ಲಿ ಸಿಕ್ಕ ಪುಟ್ಟ ಪುಟ್ಟ ಜಯ.

ಒಂದಷ್ಟು ವರ್ಷಗಳ ಹಿಂದೆ ‘ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್’ ತನ್ನ ನಾಟಕ ತಂಡದೊಂದಿಗೆ ಬೆಂಗಳೂರಿಗೆ ಬಂದಿತ್ತು.

‘ಇನ್ನೆಂದೂ ಈ ಮಣ್ಣಲಿ ಭೋಪಾಲ್ ಗಳ್ ಬೇಡ…’ ಎಂದು ಆ ನಟರು ಹಾಡುತ್ತಿದ್ದ ಹಾಡು ಇನ್ನೂ ನನ್ನ ಕಿವಿಯಲ್ಲಿ ಗುಂಯ್ ಗುಟ್ಟುತ್ತಿದೆ.


ಇಲ್ಲಿರುವ ಫೋಟೋ ರಘುವೀರ್ ರಾಯ್ ಅವರದ್ದು. ಭೂಪಾಲ ದುರಂತದ ಬಗ್ಗೆ ಅವರು ತೆಗೆದ ಫೋಟೋಗಳು ಜಗತ್ತಿನಾದ್ಯಂತ ಆಕ್ರೋಶದ ಅಲೆ ಏಳಲು ಕಾರಣವಾಯಿತು. ಸಂತ್ರಸ್ಥರ ನೋವನ್ನು ಪರಿಣಾಮಕಾರಿಯಾಗಿ ತಲುಪಿಸಿತು.

ಹೊರಗೆ ನಿಂತ ಸಂತನಿಗೆ ರಾಜ್ಯ ಮಟ್ಟದ ಮೊದಲ ಪ್ರಶಸ್ತಿ

Publicstory


ತುಮಕೂರು: ಪಬ್ಲಿಕ್ ಸ್ಟೋರಿ.ಇನ್ ಡಿಜಿಟಲ್ ಮೀಡಿಯಾದಲ್ಲಿ ಪ್ರಕಟಗೊಂಡಿದ್ದ ದೇವರ ಹೊಸಹಳ್ಳಿ ಧನಂಜಯ ಅವರ ಹೊರಗೆ ನಿಂತ ಸಂತ ಕವನಕ್ಕೆ ರಾಜ್ಯ ಮಟ್ಟದ ಮೊದಲ ಪ್ರಶಸ್ತಿ ಸಂದಿದೆ.

ಶಿಕ್ಷಕರಾಗಿರುವ ಧನಂಜಯ ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದವರು.

ಕವನ ಓದಿ:ಹೊರಗೆ ನಿಂತ ಸಂತ


ಅವರು ಹಲವು ಕವನಗಳನ್ನು ಬರೆದಿದ್ದಾರೆ. ಪತ್ರಕರ್ತರೂ ಆಗಿರುವ ಅವರು ಸಮಾಜಮುಖಿ ಚಿಂತಕ. ಅವರ ಹೊರಗೆ ನಿಂತ ಸಂತ‌ ಕವನವನ್ನು ಈಚೆಗೆ Publicstory ಯಲ್ಲಿ ಪ್ರಕಟಿಸಲಾಗಿತ್ತು.

ಈ ಕವನವನ್ನು ಬೇರು ಬಳಗ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದ ಆಶು ಕವನ ಸ್ಪರ್ಧೆಯಲ್ಲಿ ವಾಚಿಸಿದ್ದರು.

ಇಡೀ ಕವನವು ಚಪ್ಪಲಿಯ ತ್ಯಾಗವನ್ನು ಹೇಳುತ್ತದೆ.

ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ.

ಪ್ರಶಸ್ತಿ ಪಡೆದ ಧನಂಜಯ ಅವರನ್ನು Publicstory.in ಅಭಿನಂದಿಸಿದೆ.

ಹೆಮ್ಮಿಂಗ್ವೇ ಎಂಬ ಕಡಲಹಕ್ಕಿ

ಜಿ ಎನ್ ಮೋಹನ್


ಹವಾನಾಕ್ಕೆ ಅನತಿ ದೂರದಲ್ಲಿರುವ ಹೋಟೆಲೊಂದರಲ್ಲಿ, ಸಂಭ್ರಮವೋ ಸಂಭ್ರಮ.

ನೊಬೆಲ್ ಪ್ರಶಸ್ತಿ ಪಡೆದ ಹೆಮ್ಮಿಂಗ್ವೇ ಅವರ ‘ಓಲ್ಡ್ ಮ್ಯಾನ್ ಅಂಡ್ ಸೀ’ ಕೃತಿಯ ಕೇಂದ್ರ ಪಾತ್ರ ಎಂದೇ ಬಣ್ಣಿಸಲ್ಪಟ್ಟ ಗ್ರೆಗೋರಿಯೋ ಫ್ಯೂಂಟೆಸ್ ಗೆ ನೂರು ತುಂಬುವ ಸಂತಸದಲ್ಲಿ ಭಾಗಿಯಾಗಲು ಮೂಲೆ ಮೂಲೆಗಳಿಂದ ಜನ ಆಗಮಿಸಿದ್ದರು.

ಕ್ಯೂಬಾದಲ್ಲಿ ಜರುಗುತ್ತಿದ್ದ ವಿಶ್ವ ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಯ ಉತ್ಸವಕ್ಕೆ ಬಂದ ಪ್ರತಿನಿಧಿಗಳು, ಪತ್ರಕರ್ತರು, ಹೋಟೆಲ್ ಗೆ ಧುಮ್ಮಿಕ್ಕಿದರು. ಫ್ಯೂಂಟೆಸ್ ದೋಣಿಯಾಕಾರದ ಕೇಕ್ ಕತ್ತರಿಸಿದ್ದೇ ತಡ- ಅಲ್ಲಿ ಹರಿದದ್ದು ಹೆಮ್ಮಿಂಗ್ವೇ ನೆನಪು.

ಅರ್ನೆಸ್ಟ್ ಹೆಮ್ಮಿಂಗ್ವೇ ಕ್ಯೂಬಾದ ಎದೆಯ ಮೇಲೆ ಹೆಮ್ಮೆಯಿಂದ ಬೀಗುತ್ತಿರುವ ಪದಕ. ಕ್ಯೂಬಾದ ಮೂಲೆ ಮೂಲೆಯಲ್ಲಿ ಈತನ ನೆನಪು ಹರಡಿ ಹೋಗಿದೆ.

ಅಮೆರಿಕದ ಈ ಸಾಹಿತಿ ಎದೆತುಂಬಿ ಪ್ರೀತಿಸಿದ್ದು ಕ್ಯೂಬಾವನ್ನು.

ಕ್ಯೂಬಾದ ಕಡಲ ತೀರದಲ್ಲಿ ಅಡ್ಡಾಡಿಹೋಗಲು ಬಂದ ಹೆಮ್ಮಿಂಗ್ವೇ ಮತ್ತೆ ಅಮೆರಿಕಾಗೆ ಹಾರಲೇ ಇಲ್ಲ. ಕ್ಯೂಬಾವನ್ನೇ ಮನೆ ಮಾಡಿಕೊಂಡರು. ದಶಕಗಳ ಕಾಲ ಮೀನುಗಾರರೊಂದಿಗೆ ಬೆರೆತು, ಮೀನುಗಾರ ಹೆಮ್ಮಿಂಗ್ವೇ ಆಗಿಹೋದರು.

ಕ್ಯೂಬಾದ ನೆನಪುಗಳ ಖಜಾನೆಯ ಮೇಲೆ ಕೈಯಿಟ್ಟರೆ ಸಾಕು ಹೆಮ್ಮಿಂಗ್ವೇ ಹೆಸರು ಮೇಲೆದ್ದು ಬರುತ್ತೆದೆ. ಕಡಲ ತೀರದ ಮೀನುಗಾರರಿಲಿ, ಬೀಚ್ ಗಳಲ್ಲಿ ಮೈಯೊಡ್ಡಿ ಮಲಗುವವರಿರಲಿ, ವಿಹಾರಕ್ಕೆಂದು ದೋಣಿ ಹತ್ತಿ ತೇಲುವವರಿರಲಿ ಎಲ್ಲರೂ ‘ಇವ ನಮ್ಮವ, ಇವ ನಮ್ಮವ’ ಎನ್ನುತ್ತಾರೆ.

‘ಪಾಪಾ’ ಎಂದರೆ ಸಾಕು ಕ್ಯೂಬನ್ನರ ಮುಖ ಅರಳುತ್ತದೆ. ಅದು ಅವರು ಹೆಮ್ಮಿಂಗ್ವೇಗೆ ಕೊಟ್ಟ ಪ್ರೀತಿಯ ಹೆಸರು. ಹೀಗೆ ಪಾಪಾ ಹೆಮ್ಮಿಂಗ್ವೇ ನೆನಪುಗಳು ಝರಿಯಾಗಿ ಹರಿಯುತ್ತಲೇ ಇದೆ.

ಹೆಮ್ಮಿಂಗ್ವೇ ಬದುಕು ಹಾಗೂ ಬರಹ ಎರಡೂ ಕ್ಯೂಬನ್ನರಿಗೆ ಪ್ರಿಯ. ಸಾಹಿತ್ಯಕ್ಕೆ ಕೈಮುಗಿದು ದಿಢೀರನೆ ಯುದ್ಧ ಭೂಮಿಯಲ್ಲಿ ಸೇನೆಯ ಟ್ರಕ್ ಚಾಲಕನಾದ, ಗುಂಡೇಟು ತಗುಲಿದರೂ ಸೈನಿಕರನ್ನು ಬದುಕಿಸಿದ ಹೆಮ್ಮಿಂಗ್ವೇ ನಿಜ ಅರ್ಥದಲ್ಲಿ ಜನಪರ.

ಹೆಮ್ಮಿಂಗ್ವೇ ನೆನಪನ್ನು ಕ್ಯೂಬಾ ಜತನದಿಂದ ಕಾಯ್ದುಕೊಂಡು ಬಂದಿದೆ. ಹೆಮ್ಮಿಂಗ್ವೇ ಉಂಡ, ಓಡಾಡಿದ, ಮೀನು ಹಿಡಿದ ಜಾಗ, ಕುಡಿದು ಕೇಕೆ ಹಾಕಿದ ನೆಲ, ಇಣುಕಿ ನೋಡಿದ ಕಿಟಕಿ, ಕುಳಿತ ಸ್ಟೂಲ್… ಎಲ್ಲವೂ ಈಗ ಇಲ್ಲಿ ಹೆಮ್ಮಿಂಗ್ವೇ ನೆನಪನ್ನು ಚಿಮ್ಮಿಸುತ್ತದೆ.

ಹವಾನಾದ ಎದೆಯಲ್ಲಿ ಇರುವ ‘ಫ್ಲೋರಿಡಿಟಾ’ ಬಾರ್ ಸದಾ ತನ್ನ ಜಾಹೀರಾತಿನಲ್ಲಿ ಹೆಮ್ಮಿಂಗ್ವೇ ಈ ಬಾರ್ ಗೆ ಬಂದು ರಮ್ ಹಾಗೂ ನಿಂಬೆ ಹುಳಿ ಬೆರೆಸಿ ‘ಡೈಕ್ವಿರಿ’ ಕುಡಿದ ಚಿತ್ರವನ್ನು ಪ್ರಕಟಿಸುತ್ತದೆ.

1932 ರಿಂದ 1939ರ ವರೆಗೆ ಹೆಮ್ಮಿಂಗ್ವೇ ಉಳಿದುಕೊಂಡಿದ್ದ ‘ಆಯಂಬೋಸ್ ಮುಂಡೋಸ್’ ಹೋಟೆಲ್ ಗೆ ಈಗಲೂ ಜನ ಹೆಮ್ಮಿಂಗ್ವೇ ನೆನಪು ಆಯ್ದುಕೊಳ್ಳಲು ಧಾವಿಸುತ್ತಾರೆ.

ಹಳೆಯ ಹವಾನಾದ ಕಿರಿದಾದ ಓಣಿಗಳಲ್ಲಿ ಇರುವ ‘ಲಾ ಬೊಡೆಕ್ವಿಟಾ ಡೆಲ್ ಮೀಡಿಯೋ’ ಹೋಟೆಲ್ ನ ಕೋಣೆಗಳ ಗೋಡೆಗಳಲ್ಲಿ ಹೆಮ್ಮಿಂಗ್ವೇ ಛಾಯಾಚಿತ್ರಗಳು ತುಂಬಿವೆ.

ಹವಾನಾದ ಪೂರ್ವದಿಕ್ಕಿನಲ್ಲಿರುವ ಕೊಜಿಮಾರ್ ಗ್ರಾಮಕ್ಕೆ ಬಂದರಂತೂ ಎಲ್ಲೆಲ್ಲೂ ಹೆಮ್ಮಿಂಗ್ವೇ.

ಹೆಮ್ಮಿಂಗ್ವೇ ಮತ್ತು ಗ್ರೆಗೋರಿಯೋ ಫ್ಯೂಂಟೆಸ್ ಒಂದೇ ಜೀವ ಎನ್ನುವಂತೆ ಬೆರೆತುಹೋದರು. ನೂರು ತುಂಬಿದ ಫ್ಯೂಂಟೆಸ್ ಹೆಮ್ಮಿಂಗ್ವೇಯ ಬಗ್ಗೆ ಇರುವ ನಡೆದಾಡುವ ನೆನಪಿನ ಸಂಚಿಕೆ.

ಫ್ಯೂಂಟಸ್ ಒಮ್ಮೆ ಹಡಗಿನಲ್ಲಿ ಬರುವಾಗ ಸಮುದ್ರದಲ್ಲಿ ಎದ್ದ ಅಬ್ಬರದ ಅಲೆಗಳ ಮಧ್ಯೆ ಪುಟ್ಟ ದೋಣಿಯಲ್ಲಿ ಗುದ್ದಾಡುತ್ತಿದ್ದವನೊಬ್ಬನನ್ನು ಕಂಡರು. ಹಾಗೂ ಹೀಗೂ ಮಾಡಿ ಅವರ ಜೀವ ಉಳಿಸಿದ್ದಾಯಿತು. ಹಾಗೆ ಉಳಿದಾತ ಹೆಮ್ಮಿಂಗ್ವೇ.

ಜೀವ ಉಳಿಸಿದ ಫ್ಯೂಂಟೆಸ್ ನನ್ನು ‘ದೋಣಿಯ ಚಾಲಕನಾಗಿ ಬಾ’ ಎಂದು ಹೆಮ್ಮಿಂಗ್ವೇ ಬೆಂಬತ್ತಿದ್ದರು. ಫ್ಯೂಂಟೆಸ್ ಒಪ್ಪಿದ್ದೇ ತಡ ಕ್ಯೂಬಾವನ್ನು ಸುತ್ತುವರಿದಿರುವ ಕೆರೆಬ್ಬಿಯನ್ ಸಮುದ್ರದ ಎಲ್ಲೆಡೆ ಇವರು ಮೇಲಿಂದ ಮೇಲೆ ಕಂಡರು.

ಹೆಮ್ಮಿಂಗ್ವೇಯ ‘ಪೈಲಾರ್’ ದೋಣಿಗೆ ಸುಸ್ತೇ ಇರಲಿಲ್ಲ.

ದೋಣಿಯಲ್ಲಿ ಹೋಗುವಾಗ ಫ್ಯೂಂಟಸ್ ಸಮುದ್ರದ ಅಲೆಗಳ ಮಧ್ಯೆ ಗುದ್ದಾಡುವ ಮೀನುಗಾರರ ಕಥೆ ಹೇಳುತ್ತಾ ಹೋದರು. ತಮ್ಮ ಜೀವನವನ್ನು ಬಣ್ಣಿಸಿದರು. ಹೆಮ್ಮಿಂಗ್ವೇ ಸಹ ಹತ್ತು ಹಲವರೊಂದಿಗೆ ಬೆರೆತು, ಸಾಕಷ್ಟು ಅರಿತರು.

ಹೆಮ್ಮಿಂಗ್ವೇ ನೆನಪಿನ ಚೀಲದಿಂದ ಒಂದೊಂದೇ ಕಾದಂಬರಿಗಳು ಈ ಬದುಕನ್ನು ಆಧರಿಸಿ ಹೊರ ಜಿಗಿದವು. ‘ಐಲ್ಯಾಂಡ್ ಇನ್ ದಿ ಸೀ’ ಅಷ್ಟು ಸಾಕಾಗಿತ್ತು.

ನೊಬೆಲ್ ಸಾಹಿತ್ಯ ಪ್ರಶಸ್ತಿ ಕೊಜಿಮಾರಿನ ಕಡಲ ತೀರಕ್ಕೆ ಬಂತು.

ಹೆಮ್ಮಿಂಗ್ವೇ ‘ನಾನು ಕೊಜಿಮಾರೋನ ಪ್ರಜೆ’ ಎಂದು ಹೆಮ್ಮೆಯಿಂದ ಬಣ್ಣಿಸಿಕೊಳ್ಳುತ್ತಿದ್ದರು.

ಕಡಲು, ಇಲ್ಲಾ ಕೊಜಿಮಾರೋನ ಬಾರ್ ಹೆಮ್ಮಿಂಗ್ವೇಯ ಪ್ರೀತಿಯ ತಾಣ. ಸಮುದ್ರದ ಕಡೆಗೆ ಮುಖಮಾಡಿ ನಿಂತ ‘ಲಾ ಥೆರ್ರಾಜ್’ ಬಾರ್ ನ ಕಿಟಕಿಯಲ್ಲಿ ನಿಂತು ಮನೆಗೆ ಹೋಗುತ್ತಿದ್ದ ಮೀನುಗಾರರನ್ನು ಹೆಮ್ಮಿಂಗ್ವೇ ‘ರಂ’ ಕುಡಿಯಲು ಕೈಬೀಸಿ ಕರೆಯುತ್ತಿದ್ದರು.

ಈಗ ಈ ಕಿಟಕಿ ಪ್ರವಾಸಿಗರ ಪ್ರಮುಖ ತಾಣ. ಈ ಕಿಟಕಿಯಿಂದ ಕೈಬೀಸಿ ಫೋಟೋ ತೆಗೆಸಿಕೊಳ್ಳದ ಪ್ರವಾಸಿಗನೇ ಇಲ್ಲ.

ಕೊಜಿಮಾರೋನ ಪ್ರತೀ ಮೀನುಗಾರರ ಮನೆಯ ಗೋಡೆಯಲ್ಲಿ ಈ ‘ಪಾಪಾ’ ಇನ್ನೂ ನಗುತ್ತಿದ್ದಾನೆ. ಹೆಮ್ಮಿಂಗ್ವೇ ನೆನಪು ಎಷ್ಟು ಸಿಹಿಯಾದದ್ದೆಂದರೆ ಕೊಜಿಮಾರೋನ ಕಡಲ ಕಿನಾರೆಯಲ್ಲಿ ಮೀನುಗಾರರೆಲ್ಲಾ ಸೇರಿ ಸಮುದ್ರದತ್ತ ಮುಖಮಾಡಿ ನಿಂತ ಹೆಮ್ಮಿಂಗ್ವೇ ಪ್ರತಿಮೆಯನ್ನು ನಿಲ್ಲಿಸಿದ್ದಾರೆ.

ಫ್ಯೂಂಟೆಸ್ ಅಂತೂ ತಮ್ಮ ನೆನಪಿನ ಗಣಿಯಿಂದ ನೆನಪು ಹೆಕ್ಕುತ್ತಲೇ ಇರುತ್ತಾರೆ.

ಎರಡನೇ ಮಹಾಯುದ್ಧ ನಡೆಯುವಾಗ ಈ ಇಬ್ಬರೂ ನಾಜಿಗಳ ಸಬ್ ಮೇರಿನ್ ಗಳನ್ನು ಪತ್ತೆ ಹಚ್ಚಿದ್ದನ್ನು ಹೆಮ್ಮೆಯಿಂದ ಬಣ್ಣಿಸುತ್ತಾರೆ. ಈ ನೆನಪೇ ‘ಐಲ್ಯಾಂಡ್ಸ್ ಇನ್ ದಿ ಸ್ಟ್ರೀಮ್’ ಕಾದಂಬರಿಗೆ ಪ್ರೇರಣೆಯಾಯಿತು.

ಹೆಮ್ಮಿಂಗ್ವೇ ಸದಾ ಫ್ಯೂಂಟೆಸ್ ರೊಂದಿಗೆ, ‘ನಿನಗಾಗಿ ಮತ್ತು ನನಗಾಗಿ ಒಂದು ಕಾದಂಬರಿ ಬರೆಯುತ್ತೇನೆ’ ಎನ್ನುತ್ತಿದ್ದರು. ಈ ಕಾರಣಕ್ಕಾಗಿಯೇ ‘ಎ ಫೇರ್ ವೆಲ್ ಟು ಆರ್ಮ್ಸ್’ ಹೊರಬಂತು.

ಹೆಮ್ಮಿಂಗ್ವೇ ಅವರಿಗೆ ನೊಬೆಲ್ ಮುಕುಟ ತಂದುಕೊಟ್ಟ ‘ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ’ಯ ಓಲ್ಡ್ ಮ್ಯಾನ್ ಈ ಫ್ಯೂಂಟೆಸ್ ಅವರೇ ಎಂದು ಜಗತ್ತಿನಾದ್ಯಂತ ಚರ್ಚೆಯಾಗಿದೆ. ಆದರೆ, ಫ್ಯೂಂಟೆಸ್ ಹೇಳುವುದೇ ಬೇರೆ…

ಹೆಮ್ಮಿಂಗ್ವೇ ಮತ್ತು ಫ್ಯೂಂಟೆಸ್ ಇಬ್ಬರೂ ಒಮ್ಮೆ ದೋಣಿಯಲ್ಲಿ ಹೋಗುವಾಗ ಕ್ಯೂಬಾದ ಹಡಗು ಕಟ್ಟೆಯ ಆಚೆ ದೋಣಿಯೊಂದರಲ್ಲಿ ಒಬ್ಬ ಮುದುಕ ಹಾಗೂ ಬಾಲಕನನ್ನು ಕಂಡರು. ಮುದುಕ ಆಗ ತಾನೇ ಹಿಡಿದ ಮರ್ಲಿನ್ ಮೀನನ್ನು ಶಾರ್ಕ್ ನ ಬಾಯಿಂದ ತಪ್ಪಿಸಲು ಹೆಣಗಾಡುತ್ತಿದ್ದ.

ಇದನ್ನು ನೋಡಿದ ಹೆಮ್ಮಿಂಗ್ವೇ ದೋಣಿ ಅಲ್ಲಿಗೆ ಹೋಯಿತು.

ಮುದುಕನನ್ನು ರಕ್ಷಿಸಲು ಹೋದ ಹೆಮ್ಮಿಂಗ್ವೇಯನ್ನು ಆತ ನಿಂದಿಸಿದ. ಹೆಮ್ಮಿಂಗ್ವೇ ಹೇಳಿದರು. ‘ಆತ ನಾವು ಮೀನು ಕದಿಯಲು ಬಂದಿದ್ದೇವೆ ಎಂದು ಭಾವಿಸಿರಬೇಕು, ಬೇಡ ನಡಿ’ ಇದು ‘ಓಲ್ಡ್ ಮ್ಯಾನ್’ಗೆ ಎಳೆಯಾಯಿತು.

ಹೆಮ್ಮಿಂಗ್ವೇಯೇ ಒಮ್ಮೆ ‘ಕೊಜಿಮಾರ್ ನ ನಾವಿಕರ ನೆನಪುಗಳನ್ನು ಆಧರಿಸಿ ಈ ಪುಸ್ತಕ ಬರೆದಿದ್ದೇನೆ’ ಎಂದಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.

ಫ್ಯೂಂಟೆಸ್ ರ ಕಣ್ಣು ಮಂಜಾಗುವುದು ಹೆಮ್ಮಿಂಗ್ವೇ ಅವರ ಮನೆಯಿಂದ ಬಂದ ಒಂದು ಪತ್ರ ‘ಎಲ್ ಪೈನಾರ್’ ದೋಣಿಯನ್ನು ನಿಮಗೆ ಕೊಡಬೇಕೆಂದು ಹೆಮ್ಮಿಂಗ್ವೇ ವಿಲ್ ನಲ್ಲಿ ಬರೆದಿದ್ದಾರೆ ಎಂಬ ಸುದ್ದಿ ತಂದಾಗ.

ಹೆಮ್ಮಿಂಗ್ವೇ 1961ರಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ಹೆಮ್ಮಿಂಗ್ವೇ ಈಗಲೂ ಕ್ಯೂಬಾದಲ್ಲಿ ಜೀವಂತ ನೆನಪು. ಹೆಮ್ಮಿಂಗ್ವೇ ಬದುಕಿದ್ದ ಕೊಜಿಮಾರ್ ನ ಮನೆ ಈಗ ಹೆಮ್ಮಿಂಗ್ವೇ ಮ್ಯೂಸಿಯಂ ಆಗಿ ಬದಲಾಗಿದೆ. ಫ್ಯೂಂಟೆಸ್ ಗೆ ನೀಡಿದ ‘ಎಲ್ ಪೈನಾರ್’ ದೋಣಿ ಈ ಸಂಗ್ರಹಾಲಯದಲ್ಲಿ ಜನರ ಮುಂದೆ ಕಥೆಗಳನ್ನು ಹರಡುತ್ತಿದೆ.

ಹೆಮ್ಮಿಂಗ್ವೇ ನೆನಪಿಗಾಗಿ ಅಂತಾರಾಷ್ಟ್ರೀಯ ಮರ್ಲಿನ್ ಮೀನು ಹಿಡಿಯುವ ಸ್ಪರ್ಧೆಯನ್ನು ನಡೆಸುತ್ತಾ ಬಂದಿದೆ. ಮೀನುಗಾರರು ನಡೆಸುವ ಉತ್ಸವಗಳು ಹೆಮ್ಮಿಂಗ್ವೇ ಹೆಸರನ್ನು ಹೊತ್ತಿವೆ. ಹತ್ತು ಹಲವು ಉತ್ಸವಗಳಲ್ಲಿ ಹೆಮ್ಮಿಂಗ್ವೇ ಟ್ಯಾಬ್ಲೋಗಳು ಕಾಣಿಸಿಕೊಳ್ಳುತ್ತವೆ.

ಹೆಮ್ಮಿಂಗ್ವೇ ಪ್ರೀತಿಸಿದ ಅದೇ ‘ರಂ’, ಅದೇ ಊಟ ಈಗ ಪ್ರವಾಸಿಗರ ಪ್ರಿಯವಾದ ಆಹಾರವಾಗಿದೆ.

1929ರಲ್ಲಿ ಕ್ರಾಂತಿಯಾದ ವರ್ಷವೇ ಹೆಮ್ಮಿಂಗ್ವೇ ಹೆಸರಿನಲ್ಲಿ ಜರುಗುವ ಮರ್ಲಿನ್ ಮೀನು ಹಿಡಿಯುವ ಸ್ಪರ್ಧೆಯಲ್ಲಿ ಫಿಡೆಲ್ ಕ್ಯಾಸ್ಟ್ರೋ 215 ಕೆ.ಜಿ. ತೂಕದ ಮೀನು ಹಿಡಿದು ಟ್ರೋಫಿ ಬುಟ್ಟಿಗೆ ಹಾಕಿಕೊಂಡಿದ್ದರು.

ಹೆಮ್ಮಿಂಗ್ವೇ ಫಿಡೆಲ್ ಕ್ಯಾಸ್ಟ್ರೋಗೆ ಟ್ರೋಫಿ ನೀಡುತ್ತಿರುವ ಚಿತ್ರಗಳಂತೂ ಎಲ್ಲೆಡೆ ಹರಡಿಹೋಗಿವೆ.