Saturday, May 9, 2026
Google search engine
Home Blog Page 184

ಕೊರೊನಾ: ಹೆಗ್ಗೆರೆ, ನಿಟ್ಟೂರಿನಲ್ಲಿ ಸಾವು:1617ಕ್ಕೆ ಏರಿಕೆ

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 81 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 1617 ಕ್ಕೆ ಏರಿಕೆಯಾಗಿದೆ ಎಂದು ಡಿಎಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ಗುರುವಾರ ಒಂದೇ ದಿನ ನಾಲ್ಕು ಮಂದಿ ಸಾವಿಗೀಡಾಗಿದ್ದು, ಜನರನ್ನು ಭಯಭೀತರನ್ನಾಗಿಸಿದೆ.

ತುಮಕೂರು ನಗರವೊಂದರಲ್ಲೇ 38 ಮಂದಿಗೆ ಸೋಂಕು ತಗುಲಿದೆ. ಗುಬ್ಬಿಯಲ್ಲಿ 4, ಕುಣಿಗಲ್ ನಲ್ಲಿ 11, ತಿಪಟೂರು 8, ಮಧುಗಿರಿ 10 ಹಾಗೂ ಶಿರಾದಲ್ಲಿ ಒಬ್ಬರಿಗೆ, ಪಾವಗಡದಲ್ಲಿ 5, ಕೊರಟಗೆರೆ, ತುರುವೇಕೆರೆ ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

ಕೆಎಚ್.ಬಿ. ಕಾಲೋನಿಯಲ್ಲಿ ಗಂಡು, ಹೆಗ್ಗೆರೆಯಲ್ಲಿ ವೃದ್ದ, ಹುಳಿಯಾರಿನಲ್ಲಿ ವೃದ್ಧ, ನಿಟ್ಟೂರಿನಲ್ಲಿ ಮಹಿಳೆ ಮೃತಪಟ್ಟಿದ್ದಾರೆ.

ಇನ್ನೂ, ಒಟ್ಟು ನಾಲ್ಕು ಮಂದಿ ಸಾವಿಗೀಡಾಗಿದ್ದು, 11 ಜನರು ಗುಣಮುಖರಾಗಿದ್ದಾರೆ.

ಚಿಕ್ಕನಾಯಕನಹಳ್ಳಿ: 20 ನಿಮಿಷದಲ್ಲೇ ಕೊರೊನಾ ವರದಿ

Publicstory


ಚಿಕ್ಕನಾಯಕನಹಳ್ಳಿ; ಕೊರೊನಾ ತಡೆಗಟ್ಟಲು ಹಾಗೂ ಶೀಘ್ರವಾಗಿ ಕೊವಿಡ್ ವರದಿಯನ್ನು ಪಡೆದುಕೊಳ್ಳಲು ತಾಲ್ಲೂಕಿನ ರಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ತೇಜಸ್ವಿನಿ ತಿಳಿಸಿದ್ದಾರೆ .

ತಾಲ್ಲೂಕು ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರ ವರದಿಗಳು ತಡವಾಗಿ ಬರುತ್ತಿರುವುದರಿಂದ ಸೋಂಕು ಹೆಚ್ಚು ಜನರಲ್ಲಿ ಹರಡುವ ಸಾಧ್ಯತೆ ಇರುವುದರಿಂದ ತಾಲ್ಲೂಕಿನಲ್ಲಿ rapid ಆ್ಯಂಟಿಜನ ಟೆಸ್ಟ್ ಮೂಲಕ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಕೊರೊನಾ ವರದಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು .

ಯಾವುದೇ ವ್ಯಕ್ತಿ ಕೆಮ್ಮು ,ಜ್ವರ ಅಥವಾ ದೇಹದಲ್ಲಿ ನೋವು ಕಾಣಿಸಿಕೊಂಡರೆ ಅಂಥವರನ್ನು ಕೂಡಲೇ ಕೋರನ ಪರೀಕ್ಷೆಗೆ ಒಳಪಡಿಸಬೇಕು ಇದರಿಂದ ಸೋಂಕಿತರ ವ್ಯಕ್ತಿ ಬೇರೆಯವರ ಸಂಪರ್ಕ ಹೊಂದದಂತೆ ಹರಡದಂತೆ ತಡೆಗಟ್ಟಬಹುದು .

ಪಟ್ಟಣದ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕೋವಿಲ್ ಕೇರ್ ಮಾಡಲಾಗಿದ್ದು 114 ಬೆಡ್ ವ್ಯವಸ್ಥೆ ಇದ್ದು ಇಲ್ಲಿನ ಸೋಂಕಿತರಿಗೆ ಸರಕಾರದ ನಿರ್ದೇಶನದಂತೆ ಊಟ ,ಬಿಸಿನೀರಿನ ವ್ಯವಸ್ಥೆ, ಸ್ನಾನಕ್ಕೆ ಸೌಕರ್ಯ ದಿನಕ್ಕೆ ಎರಡು ಬಾರಿ ತಪಾಸಣೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಅಲ್ಲಿನ ಕೇಂದ್ರಕ್ಕೆ ಮಾಡಲಾಗಿದೆ ಎಂದರು.

24 ಗಂಟೆಗಳ ಕಾಲ ಪೊಲೀಸ್ ಕಾವಲು ವ್ಯವಸ್ಥೆ ಮಾಡಲಾಗಿದೆ ಅಲ್ಲಿನ ರೋಗಿಗಳನ್ನು ಯಾರೂ ಭೇಟಿ ಮಾಡುವಂತಿಲ್ಲ ಒಂದು ವೇಳೆ ಕಾನೂನು ಮೀರಿ ಹೋದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ವೈದ್ಯಾಧಿಕಾರಿಗಳು ಮಾತನಾಡಿ ತಾಲ್ಲೂಕಿನಲ್ಲಿ ಇದುವರೆಗೆ 2077 ಕೊರೊನಾ ಟೆಸ್ಟ್ ಮಾಡಲಾಗಿದ್ದು 10 ರಿಂದ 20 ವರದಿಯ ಫಲಿತಾಂಶ ಮಾತ್ರ ಬಾಕಿ ಇದೆ . ಸಾರ್ವಜನಿಕರು ಜನನ ಕೊರೊನಾ ಬಂದರೆ ಭಯಪಡುವ ಅವಶ್ಯಕತೆ ಇಲ್ಲ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ.‌ವಿಟಮಿನ್ ಸಿ ಅಂಶವಿರುವ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.

ರಾತ್ರೋರಾತ್ರಿ ಫೋನ್ ‘ಕುಯ್’ ಎಂದಾಗ

ಜಿ ಎನ್ ಮೋಹನ್


ಸಾರ್, ನಾನು ವೆಂಕಪ್ಪಗೌಡ- ರಾತ್ರೋರಾತ್ರಿ ಫೋನ್ ‘ಕುಯ್’ ಎಂದಾಗ ಕಂಡದ್ದು ಅಪರಿಚಿತ ನಂಬರ್.

ಯಾರು? ಅಂತ ಕೇಳುವ ಮುನ್ನವೇ ಆ ಕಡೆ ಇದ್ದ ವ್ಯಕ್ತಿ ತನ್ನನ್ನು ಪರಿಚಯಿಸಿಕೊಂಡರು.

ಎಲ್ಲಿಂದ ಅಂತ ಕೇಳಿದೆ.

ವೈಟ್ ಫೀಲ್ಡ್ ನಿಂದ ಅಂದರು.

‘ಏನು ವಿಷಯ?’ ಅಂತ ಕೇಳುವ ಪ್ರಮೇಯವೇ ಬರಲಿಲ್ಲ. ಅವರು ಆಗಲೇ ಶುರು ಮಾಡಿದ್ದರು. ‘ಸಾರ್, ಸರ್ಕಾರದವರು ಶಾಲಾ ಮಕ್ಕಳಿಗೆ ಸೈಕಲ್ ಕೊಡ್ತಾರಲ್ಲಾ ಅದನ್ನೆಲ್ಲಾ ಅವರ ಅಪ್ಪ ಅಮ್ಮ ಮಾರಿಕೊಳ್ತಾ ಇದಾರೆ. ಹಾಫ್ ರೇಟ್ ಗೆ..’ ಅಂದರು.

ತಕ್ಷಣ ನನ್ನ ಕಿವಿ ನೆಟ್ಟಗಾಯಿತು.

ಅಲರ್ಟ್ ಆದ ನಾನು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ಹೋದೆ. ವೆಂಕಪ್ಪಗೌಡ ಸಹ ಪಟ ಪಟ ಉತ್ತರ ಕೊಡುತ್ತಾ ಹೋದರು.

ಆ ನಿಮಿಷಕ್ಕೆ ನಾನೇ ‘ಸಿ ಎಸ್ ಪಿ, ಟಿ ಎನ್ ಸೀತಾರಾಂ’. ಅಲ್ರೀ ವೆಂಕಪ್ಪ, ಯಾರೋ ಒಬ್ರು ಸೈಕಲ್ ಮಾರಿಬಿಟ್ರು ಅಂತ ಎಲ್ರೂ ಹಾಗೆ ಅನ್ನೋ ತೀರ್ಮಾನಕ್ಕೆ ಬರೋಕಾಗಲ್ಲ ಅಂತ ಲಾಯರ್ ಪಾಯಿಂಟ್ ಹಾಕಿದೆ.

ವೆಂಕಪ್ಪ ಗೌಡ ನನ್ನ ಮುಂದೆ ಇಡೀ ಕಥೆಯನ್ನೇ ಬಿಚ್ಚಿಟ್ಟರು.

ವೆಂಕಪ್ಪ ಇನ್ನೂ ಮಾತಾಡ್ತಾ ಇದ್ದರು. ನಾನು ನನ್ನ ನೆನಪುಗಳ ರಿವೈಂಡ್ ಮಾಡತೊಡಗಿದೆ. ಸುಮಾರು 12 ವರ್ಷದ ಹಿಂದೆ ನನಗೆ ಇದೇ ತರಹದ ಕಾಲ್ ಬಂದಿತ್ತು. ‘ಸೊಲ್ಲಾಪುರದ ಇಂತಿಂತಾ ಸ್ಟೇಶನ್ ನಲ್ಲಿ ಒಬ್ಬನ್ನ ಅರೆಸ್ಟ್ ಮಾಡಿದ್ದಾರೆ. ಕರ್ನಾಟಕಕ್ಕೆ ಕರ್ನಾಟಕಾನೇ ಬೆಚ್ಚಿ ಬೀಳೋ ವಿಷ್ಯ ಇದೆ’ ಅಂತ. ಏನು, ಎತ್ತ ಕೇಳೋಣ ಅಂದ್ರೆ ಆ ಕಡೆ ಇದ್ದ ವ್ಯಕ್ತಿ ಫೋನ್ ಕಟ್ ಮಾಡಿ ಆಗಿತ್ತು.

ಸೊಲ್ಲಾಪುರ ಏನ್ ಪಕ್ಕದಲ್ಲಿದ್ಯಾ? ಹಿಂಗ್ ಹೋಗಿ ಹಂಗ್ ಬಂದ್ಬಿಡೋದಕ್ಕೆ. ಅದಿರೋದು ಮಹಾರಾಷ್ಟ್ರದಲ್ಲಿ. ಗಂಟೆಗಟ್ಟಲೆ ಜರ್ನಿ. ಆಗ ಹೇಳಿ ಕೇಳಿ ಗುಲ್ಬರ್ಗದಲ್ಲಿ ರಣಬಿಸಿಲು. ಒಂದು ಕಿಲೋ ಮೀಟರ್ ದಾಟೋ ವೇಳೆಗೆ ‘ಹಾರುತಿದೆ ಎನ್ನಯ ಹರಣ, ಕೇಳಬೇಡ ಕಾರಣ..’ ಅನ್ನೋ ಸ್ಥಿತಿ.

ಅಲ್ಲಿ ಕನ್ನಡ ಬೇರೆ ನಡೆಯೋದಿಲ್ಲ. ಜೇಬಲ್ಲಿ ಸ್ವಲ್ಪಾನಾದ್ರೂ ಮರಾಠಿ ಇರ್ಬೇಕು. ಫೋನ್ ಮಾಡಿದವನು ತಾನು ಯಾರು ಅಂತ ಹೇಳಿರಲಿಲ್ಲ. ಕಪಿಚೇಷ್ಟೆ ಮಾಡೋರಿಗೆ ಫೋನ್ ಒಂದು ಒಳ್ಳೆ ಆಟದ ಸಾಮಾನು.

ರಾತ್ರಿ 2 ಗಂಟೆಗೆ ಫೋನ್ ಮಾಡೋದು ಎತ್ತಿದರೆ ‘ಬ್ಯಾ ಬೋ..ಬ್ಲ..’ ಅನ್ನೋ ಭಾಷೆ ಬಳಸೋದು. ಯಾಕಪ್ಪಾ? ಏನಪ್ಪಾ? ಅಂತ ಕೇಳೋದ್ರೊಳಗೆ ಬಾಯಿ ತೀಟೆ ತೀರಿಸಿ ಸುಮ್ಮನಾಗೋದು.

ಇಂತದ್ದೇ ನೂರಾರು ಆಶೀರ್ವಾದ ಪಡಕೊಂಡ ನಾನು ಇದನ್ನೂ ಅದೇ ಲಿಸ್ಟ್ ಗೆ ಸೇರಿಸಿ ಸುಮ್ಮನಾಗಿಬಿಡೋಣ ಅಂದುಕೊಂಡೆ.

ಆದರೂ ಜರ್ನಲಿಸ್ಟ್ ಬುದ್ದಿ. ‘ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು’ ಅಂತ ಕಲಿತಿರೋವ್ರು. ಎಷ್ಟು ದೂರ ಆಗ್ಲಿ, ಯಾವ ಭಾಷೆ ಆದರೂ ಅಗಲಿ ಹೋಗಿ ಬಂದುಬಿಡಬಾರದ್ಯಾಕೆ? ಹೋದ್ರೆ ಕಲ್ಲು, ಬಂದ್ರೆ ಬೆಟ್ಟ ಅನಿಸ್ತು.

‘ಕನ್ನಡಪ್ರಭ’ದ ಶೇಷಮೂರ್ತಿ ಅವಧಾನಿ, ಯು ಎನ್ ಐನ ವೆಂಕಟೇಶ್ ಒಟ್ಟಾಗಿ ಪೋಲೀಸ್ ಸ್ಟೇಶನ್ ಗೆ ನುಗ್ಗಿದಾಗ ಷಾಕ್ ಕಾದಿತ್ತು.

ಅಲ್ಲಿನ ಪೋಲೀಸ್ ವರಿಷ್ಠರ ಮುಂದೆ ನಿಂತಿದ್ದ ಕೇಡುಗಣ್ಣಿನ, ಕುರುಚಲು ಗಡ್ಡದ ಆ ವ್ಯಕ್ತಿ ನಾನು ಏನಿಲ್ಲಾ ಅಂದ್ರು 20 ಕೊಲೆ ಮಾಡಿದ್ದೀನಿ ಅಂದ ಹೇಳಿಕೆ ಕೊಡ್ತಾ ಇದ್ದ.

ಯಾರೇ ದುಡ್ಡು ಕೊಟ್ರು ನಾವು ಕೊಲೆಗೆ ರೆಡಿ. ಕರ್ನಾಟಕ ಮಿನಿಸ್ಟರ್ ಒಬ್ರು ಹೇಳಿದ್ದಕ್ಕೆ ಹತ್ತು ಕೊಲೇನಾದ್ರೂ ಮಾಡಿದೀವಿ ಅಂತ ‘ಹೀಗೂ ಉಂಟೆ?’ ಅನ್ನೋ ಥರಾ ಕಥೆ ಹೇಳ್ತಾ ಇದ್ದ.

‘ಸುಪಾರಿ ಮರ್ಡರ್’ ಅನ್ನೋ ಹೊಸ ಶಬ್ದ ಕೇಳಿದ್ದೇ ಅವಾಗ.

ಇದು ಗೊತ್ತದದ್ದೇ ಕರ್ನಾಟಕ ಅದುರಿ ಹೋಗಿತ್ತು. ಮಿನಿಸ್ಟ್ರು ಸಾಹೇಬರು ವರ್ಷಗಟ್ಟಲೆ ಮೀಡಿಯಾ ಕಟಕಟೆಯಲ್ಲಿ ನಿಂತ್ಕೋಬೇಕಾಗಿ ಬಂತು.

ನೀವು ಯಾರ ಜೊತೆಗಾದರೂ ಕೈ ಕುಲುಕಿ. ನೀವು ಜರ್ನಲಿಸ್ಟ್ ಅಂತ ಗೊತ್ತಾದ ತಕ್ಷಣ ಎರಗಿ ಬರೋ ಮೊದಲ ಪ್ರಶ್ನೆ ‘ಅಲ್ಲಾ, ಅದೆಲ್ಲೋ ಕೆಂಗೇರಿನಲ್ಲಿ ಬಾಂಬ್ ಇಟ್ರೆ ಎಂಜಿ ರೋಡ್ ಆಫೀಸ್ ನಲ್ಲಿ ಕುಳಿತಿರೋ ನಿಮಗೆ ಹೆಂಗೆ ಗೊತ್ತಾಗುತ್ತೆ ಅಂತಾನೋ, ಸೌಂದರ್ಯ ಹೆಲಿಕಾಪ್ಟರ್ ಕ್ರ್ಯಾಶ್ ಆಯ್ತು ಅಂತ ಅಷ್ಟು ಬೇಗ ಹೇಗೆ ಗೊತ್ತಾಗುತ್ತೆ? ಅಂತಾನೋ, ಐಶ್ವರ್ಯ ರೈ ಕ್ಯಾರಿಯಿಂಗಾ ಇಲ್ವಾ ಅಂತ ಹೇಗೆ ಗೊತ್ತು ಮಾಡ್ಕೋತೀರಾ? ಅಂತಾನೋ, ಕೊತ್ವಾಲ ರಾಮಚಂದ್ರ ಮರ್ಡರ್ ಆಗಿದ್ದ ನೆಕ್ಸ್ಟ್ ಸೆಕೆಂಡ್ ಅಲ್ಲಿರ್ತೀರಲ್ಲ. ಅದು ಹೆಂಗೆ? ಅಂತಾನೋ ಪ್ರಶ್ನೆ ಬಂದೇ ಬರುತ್ತೆ.

ನಾನು ಯಾವಾಗಲೂ ಹೇಳ್ತಿರ್ತೀನಿ. ‘ನಾವು ಸಾಯಿಬಾಬಾ ಥರಾ. ಯಾವಾಗಲೂ ಗಾಳೀಲಿ ಕೈ ಆಡಿಸ್ತಾ ಇರ್ಬೇಕು. ಒಂದು ಸಲ ನೆಲ್ಲೀಕಾಯಿ ಸಿಗುತ್ತೆ. ಇನ್ನೊಂದ್ಸಲ ಕುಂಬಳ ಕಾಯೀನೆ ಸಿಗಬಹುದು’ ಅಂತ.

ನ್ಯೂಸ್ ಅನ್ನೋದು ಎಲ್ಲಿ ಬೇಕಾದರೂ ಇರುತ್ತೆ. ನೋಡೋ ಕಣ್ಣಿರ್ಬೇಕು ಅಷ್ಟೇ. ಮೂಸೋ ಮೂಗಿರ್ಬೇಕು. ಕೇಳೋ ಕಿವಿ ಇರ್ಬೇಕು. ಅವಾಗ್ಲೇ ‘ಎಲ್ಲಿದ್ದೆ ಇಲ್ಲೀ ತನಕ, ಎಲ್ಲಿಂದ ಬಂದ್ಯವ್ವಾ?’ ಅಂತ ಕುತೂಹಲ ಹುಟ್ಟೋದು.

ಮೊನ್ನೆ ಮಂಗಳೂರಿಗೆ ಹೋಗಿದ್ದೆ. ರೈಲಿನಿಂದ ಇಳಿದ ಟಾಯ್ಲೆಟ್ ಕಡೆ ಹೋಗ್ತಿದ್ದವನು ಥಟ್ಟಂತ ನಿಂತೆ. ಆ ಟಾಯ್ಲೆಟ್ ಮುಂದೆ ಒಂದು ಸ್ಮಾರಕ. ಅದು ಯಾವ ವ್ಯಕ್ತಿಯದ್ದೂ ಅಲ್ಲ, ಯಾವ ಶಕ್ತಿಯದ್ದೂ ಅಲ್ಲ. ಒಂದು ಮೈಲಿಕಲ್ಲಿನದ್ದು.

‘ಮದ್ರಾಸ್ 550 ಮೈಲು’ ಅಂತಿತ್ತು.

ಟಾಯ್ಲೆಟ್ ಹೋಗಬೇಕು ಅನ್ನೋದು ಮರತೇಹೋಯ್ತು. ಅಲ್ಲಿದ್ದ ಕೂಲಿಯಿಂದ ಹಿಡಿದು ಸ್ಟೇಶನ್ ಮಾಸ್ತರ್ ವರೆಗೆ ಗರ ಗರ ತಿರುಗಿದೆ.

ಕಥೆ ಇಷ್ಟು. ಬ್ರಿಟಿಶ್ ಆಡಳಿತ ಇದ್ದಾಗ ಹಾಕಿದ ಕಲ್ಲು ಅದು. ಆಗ ಒಂದು ಪುಟ್ಟ ಊರಾಗಿದ್ದ ಮಂಗಳೂರು ಈಗ ದೊಡ್ಡ ಜಂಕ್ಷನ್ ಆಗಿ ಬೆಳೆದಿದೆ. ಆಗಿನ ಕಾಲ ನೆನಪಿರಲಿ ಅಂತ ಆ ಕಲ್ಲಿಗೂ ಒಂದು ಸ್ಮಾರಕ ಕಟ್ಟಿದ್ದಾರೆ. ಆ ಕಲ್ಲು ಅಂದಿನ ಚರಿತ್ರೆ ಹೇಳುತ್ತಾ ನಿಂತಿದೆ.

ಸುದ್ದಿ ಅನ್ನೋದೇ ಹಾಗೆ. ಒಬ್ಬ ವರದಿಗಾರ ಅದನ್ನ ಬರೆದಿರಬಹುದು. ಆದರೆ ಅದಕ್ಕೆ ಕಣ್ಣು ಕೈ ಕಿವಿ ಬಾಯಿ ಮೂಡಿಸೋಕೆ ಅನಾಮಿಕರು ಹತ್ತಾರು ಜನ ಕೈ ಜೋಡಿಸಿರ್ತಾರೆ. ‘ಎನಿತು ಜನ್ಮದಲಿ, ಎನಿತು ಜೀವರಿಗೆ, ಎನಿತು ನಾವು ಋಣಿಯೋ..’

ಹಾಗಿಲ್ಲದೆ ಹೋದ್ರೆ, ಮಿಸ್ಟರ್ ರೇಣುಕಾಚಾರ್ಯ ಅವರು ನರ್ಸ್ ಜಯಲಕ್ಷ್ಮಿ ಜೊತೆ ಟಚಿಂಗ್ ಟಚಿಂಗ್ ಮಾಡ್ತಾ ಇರೋದು ಪತ್ರಿಕೆ ಪುಟಕ್ಕೆ ಬಂದು ಬೀಳೋದಾದ್ರೂ ಹೇಗೆ. ಬುರ್ಖಾ ಹಾಕ್ಕೊಂಡು ಹಾಸ್ಪಿಟಲ್ ಗೆ ಹೋದರೂ ಅದು ರಾಧಿಕಾನೇ ಅಂತ ಗೊತ್ತಾಗೋದಾದ್ರೂ ಹೇಗೆ?

ಮಂಗಳೂರು ರೋಡ್ ಸೈಡ್ ನಲ್ಲಿ ಪಾನಿಪೂರಿ ತಿಂದು ಕೈ ಒರೆಸಿಕೊಳ್ಳೋಕೆ ಒಂದು ಪೇಪರ್ ಎಳ್ಕೊಂಡೆ. ಕೈ ತಿಕ್ಕಿದ ನಂತರ ಅದರ ಮೇಲೆ ಕಣ್ಣಾಡಿಸಿದರೆ ಒಳ್ಳೆ ವರದಿ ಇತ್ತು.

ಪುತ್ತೂರು ಕಡಬದ ಹತ್ತಿರ ಬಂಟ್ರ ಅನ್ನೋ ಹಳ್ಳಿ ಇದೆ. ಮನೆಗೆಲಸ ಮಾಡ್ಕೊಂಡು ಬಡತನ ಹೊದ್ದುಕೊಂಡು ಇದ್ದ ಹುಡುಗಿಯೊಬ್ಬಳಿಗೆ ಸಾಕ್ಷರತಾ ಆಂದೋಲನ ಶುರುವಾದದ್ದೇ ಹುರುಪು ಬಂದುಬಿಡ್ತು.

ನೇರ ಏಳನೇ ಕ್ಲಾಸ್ ಎಗ್ಸಾಮ್ ಬರೆದಳು. ನಂತರ ನೇರ ಎಸ್ ಎಸ್ ಎಲ್ ಸಿ.. ಸೈ ಅನ್ನೋ ಅಂತ ಮಾರ್ಕ್ಸು.

ಆ ಪೇಪರ್ ತುಂಡನ್ನ ಜೋಬಿಗೆ ಸೇರಿಸಿದೆ. ಆಫೀಸಿಗೆ ಬಂದವನೇ ಗೆಳೆಯ, ಪುತ್ತೂರಿನ ಐ ಕೆ ಬೊಳುವಾರ್ ಗೆ ಫೋನ್ ತಿರುಗಿಸಿದೆ. ಮನೆಯ ಕತ್ತಲ ಕೋಣೆಯಲ್ಲಿ ಉಳಿದು ಹೋಗಿಬಿಟ್ಟಿದ್ದ ಒಬ್ಬ ಹುಡುಗಿ ಉಡುಪಿಯ ಪ್ರತಿಷ್ಠಿತ ವೈಕುಂಠ ಬಾಳಿಗಾ ಲಾ ಕಾಲೇಜು ಸೇರಿ ನಂತರ ವಕೀಲೆಯಾಗುವವರೆಗೂ ಬೆಳೆದಿದ್ದಳು.

ಹೌದಲ್ಲಾ ಒಂದು ಪೇಪರ್ ತುಂಡು ನನ್ನನ್ನ ಎಳೆದುಕೊಂಡು ಹೋಗಿ ಕೋರ್ಟ್ ಬಾಗಿಲಿಗೆ ನಿಲ್ಲಿಸಿತಲ್ಲಾ!

ಇನ್ನೊಂದು ಘಟನೆ ನೆನಪಾಯ್ತು. ಗುಲ್ಬರ್ಗದ್ದು. ಗೆಳೆಯ, ವಕೀಲ ಪಿ ವಿಲಾಸ್ ಕುಮಾರ್ ಜಿಲ್ಲಾ ಕೋರ್ಟ್ ನಲ್ಲಿದ್ದರು. ಹಾಯ್ ಹೇಳಿ ಹೋಗೋಣ ಅಂತ ಸ್ಕೂಟರ್ ತಿರುಗಿಸಿದೆ. ಆ ಸಂತೆಯಲ್ಲಿ ಕಂಡ ಒಂದು ಮುಖ ಪರಿಚಯದ್ದು. ಹೆಸರು ಮಾಡಿದ್ದ ಸಾಹಿತಿ.

ಕೋರ್ಟ್ ಕಡತಗಳ ಬೆನ್ನತ್ತಿದ್ದಾಯ್ತು. ಆಗ ಹೊರಬಂತು ಒಂದು ಹೊಸ ಹಗರಣ. ಎಲ್ಲರೂ ಮರತೇಹೋಗಿದ್ದ, ಮುಗಿದು ಹೋಯ್ತು ಅಂದುಕೊಂಡಿದ್ದ ಒಂದು ಕೇಸು ಮತ್ತೆ ತಲೆ ಎತ್ತಿ ನಿಂತಿತ್ತು. ಕೆಎಎಸ್ ಪರೀಕ್ಷೆಯ ಮೌಲ್ಯಮಾಪನವನ್ನು ತಾನು ಮಾಡದೇ ತನ್ನ ವಿದ್ಯಾರ್ಥಿನಿಯಿಂದ ಮಾಡಿಸಿ ಸಿಕ್ಕಿಹಾಕಿಕೊಂಡಿದ್ದ ಸಾಹಿತಿ ಮತ್ತೆ ಕೋರ್ಟ್ ಬಾಗಿಲಿಗೆ ಬರುವಂತಾಗಿತ್ತು. ಪ್ರಜಾವಾಣಿಯ ಪುಟಕ್ಕೆ ತಿಂಗಳುಗಟ್ಟಲೆ ಸುಗ್ರಾಸ ಸುದ್ದಿ.

ಬೀದರ್ ನ ಬಸವ ಕಲ್ಯಾಣದಲ್ಲಿ ಹದಿನಾರು ಸಾವಿರಕ್ಕೂ ಹೆಚ್ಚು ಲಾರಿ ಕಂಡಾಗ, ಗುಲ್ಬರ್ಗದ ಆಸ್ಪತ್ರೆಯಲ್ಲಿ ಕಂಡ ಮಕ್ಕಳ ಕಾಲುಗಳು ಸ್ಟ್ರಿಂಗ್ ನಂತಿದೆಯಲ್ಲಾ ಅನಿಸಿದಾಗ, ಪ ತ್ರಿಕಾ ಹೇಳಿಕೆಗಳಲ್ಲಿ, ಜನರ ಫೋನ್ ಕಾಲ್ ನಲ್ಲಿ, ಯಾವುದೋ ಕಚೇರಿಯ ಜವಾನನ ಬಳಿ, ದಾರಿ ಸವೆಸಲು ಸಿಕ್ಕ ಆಟೋ ಡ್ರೈವರ್ ನ ಹರಟೆಯಲ್ಲಿ ಸುದ್ದಿ ಅಡಗಿ ಕುಳಿತಿರುತ್ತದೆ.

187 Lives ಅನ್ನೋ ಪುಸ್ತಕ ಸಿಕ್ಕಿತು.

ಮುಂಬೈ ರೈಲು ಬಾಂಬ್ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡದ್ದು 187 ಜೀವಗಳು. ಆ ಮನೆಗಳು ಈಗ ಏನಾಗಿವೆ ಅಂತ ಇಂಡಿಯನ್ ಎಕ್ಸ್ ಪ್ರೆಸ್ ಭೇಟಿ ಕೊಟ್ಟಾಗ ಹೊರಬಂದ ಕಣ್ಣೀರ ಕಥೆಯೇ ಸುದ್ದಿಯಾಗಿ, ಪುಸ್ತಕವಾಗಿ ನನ್ನ ಕೈಲಿತ್ತು.

ಯಾಕೋ ನನಗೆ ಸರ್ಕಸ್ ಅಗ್ನಿ ದುರಂತದಲ್ಲಿ ಮಡಿದ, ಗಂಗಾರಾಮ್ ಪುಸ್ತಕ ಮಳಿಗೆಯ ಕುಸಿತದಲ್ಲಿ ಇಲ್ಲವಾಗಿ ಹೋದವರ ಮನೆಯ ಬಾಗಿಲು ಬಡಿಯಬೇಕು ಅನಿಸಿತು.

ರಾಜ್ಯದಲ್ಲಿ ಕೊರೋನಾ ರಣಕೇಕೆ: ತುಮಕೂರಿನಲ್ಲಿ ಒಂದು ಸಾವು

Publicstory


Bengalooru: ರಾಜ್ಯದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು, ಬುಧವಾರ 5,503 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 1,12,504 ಕ್ಕೆ ಏರಿಕೆಯಾಗಿದೆ.

ತುಮಕೂರಿನಲ್ಲಿ 63 ಜನರಿಗೆ ಸೋಂಕು ತಗುಲಿದ್ದು, ಚಿಕ್ಕನಾಯಕನಹಳ್ಳಿ ಸೋಂಕಿತ ವ್ಯಕ್ತಿ ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಇವತ್ತು 2397 ಜನ ಗುಣಮುಖರಾಗಿ ಬಿಡುಗಡೆಯಾದರು. 67,448 ಸಕ್ರಿಯ ಪ್ರಕರಣಗಳಿದ್ದು 639 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬುಧವಾರ 92 ಜನ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 2147ಕ್ಕೇರಿದೆ.

ಬೆಂಗಳೂರು ನಗರ 2270, ಬಳ್ಳಾರಿ 338, ಬೆಳಗಾವಿ 279, ದಾವಣಗೆರೆ 225, ದಕ್ಷಿಣ ಕನ್ನಡ 208, ಮೈಸೂರು 200, ಧಾರವಾಡ 175, ಉಡುಪಿ 173, ಕಲಬುರಗಿ 168, ಶಿವಮೊಗ್ಗ 131, ತುಮಕೂರು 63, ಯಾದಗರಿ 114, ಚಿಕ್ಕಬಳ್ಳಾಪುರ 96, ಹಾಸನ 95, ಬೀದರ್ 91, ವಿಜಯಪುರ 90, ಕೊಪ್ಪಳ 84, ಉತ್ತರ ಕನ್ನಡ 75, ರಾಯಚೂರು 73, ಮಂಡ್ಯ 70, ಗದಗ 61, ಬಾಗಲಕೋಟೆ 57, ರಾಮನಗರ 56, ಚಿತ್ರದುರ್ಗ 52, ಹಾವೇರಿ 50, ಬೆಂಗಳೂರು ಗ್ರಾಮಾಂತರ 49, ಕೋಲಾರ 34, ಚಿಕ್ಕಮಗಳೂರು 33, ಚಾಮರಾಜನಗರ 20 ಮತ್ತು ಕೊಡಗು 08.

ಬಕ್ರೀದ್:50 ಜನರ ಮೇಲೆ ಸೇರುವಂತಿಲ್ಲ, ಆಲಿಂಗನಕ್ಕೂ ಬ್ರೇಕ್

Publicstory


ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬ ಹೇಗೆ ಆಚರಿಸಬೇಕೆಂಬ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರು ಮುಸ್ಲಿಂ ಮುಖಂಡರೊಂದಿಗೆ ನಗರದಲ್ಲಿ ಸಭೆ ನಡೆಸಿದರು.

ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಡಿಸೆಂಬರ್ ಗೂ ಮುನ್ನ ಲಸಿಕೆ ಬರುವುದು ಅನುಮಾನ. ಅಕ್ಟೋಬರ್, ನವಂಬರ್ ತಿಂಗಳಲ್ಲಿ ಸೋಂಕು ಇನ್ನೂ ವ್ಯಾಪಕವಾಗಿ ಹರಡಲಿದೆ ಎಂದು ಅಂದಾಜಿಸಲಾಗಿದ್ದು, ಸಮುದಾಯಕ್ಕೂ ಹಬ್ಬಲಿದೆ ಎಂದು ಎಚ್ಚರಿಸಿದರು.

ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ತಡೆಯಲು ಸರ್ಕಾರದ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ಬಕ್ರೀದ್ ಆಚರಿಸುವಾಗ ಸರ್ಕಾರದ ಆದೇಶದ ಅನುಸಾರವಾಗಿಯೇ ಆಚರಿಸಬೇಕು ಎಂದರು.

ಮಸೀದಿಯಲ್ಲಿ 50 ಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಬ್ಯಾಚ್ ಗಳನ್ನು ಮಾಡಿ ನಮಾಝ್ ಸಲ್ಲಿಸಬೇಕು. ಒಂದು ಬ್ಯಾಚ್ ಗೆ 50 ಜನರ ಮೇಲೆ ಇರುವಂತಿಲ್ಲ. ಪ್ರತಿಯೊಬ್ಬರು ಆರು ಅಡಿ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಹಾಕಿರಬೇಕು ಎಂದರು.

ಬಕ್ರೀದ್ ಆಚರಣೆಯಲ್ಲಿ ಒಬ್ಬರಿಗೊಬ್ಬರು ಆಲಿಂಗನ ಮಾಡಿಕೊಳ್ಳುವುದು ರೂಢಿಗತವಾಗಿ ಬಂದಿದೆ. ಆದರೆ ಸೋಂಕು ತಗುಲುವ ಅಪಾಯದ ಕಾರಣ ಯಾರು ಆಲಿಂಗಿಸಿಕೊಳ್ಳಬಾರದು. ಮಸೀದಿಯಲ್ಲಿ ಯಾವುದೇ ವಸ್ತು ಮುಟ್ಟಬಾರದು ಎಂದು ಸೂಚಿಸಿದರು.

ಎಲ್ಲ ಮಸೀದಿಗಳನ್ನು ಪೊಲೀಸರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವರು. ಅಲ್ಲಿ ಥರ್ಮಲ್ ಸ್ಕ್ಯಾನರ್ ಇಟ್ಟಿರಬೇಕು. ಸ್ಯಾನಿಟೈಜ್ ಮಾಡಬೇಕು. ಮಾಸ್ಕ್ ಧರಿಸಿರಲೇ ಬೇಕು. ಕಾನೂನು, ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಈಗಾಗಲೇ ಮಸೀದಿಯಲ್ಲಿ ಕಡ್ಡಾಯ ಅಂತರ ಕಾಪಾಡಲಾಗುತ್ತಿದೆ. ಸಾಮೂಹಿಕ ಪ್ರಾರ್ಥನೆ ಸಲ್ಲಿಸುವವರ ಸಂಖ್ಯೆಯೂ ಕಡಿಮೆ ಇದೆ. ಬಕ್ರೀದ್ ನಲ್ಲೂ ಇದನ್ನು ಕಾಪಾಡಿಕೊಳ್ಳಬೇಕು. ಸೋಂಕು ತಡೆಯುವ ನಿಟ್ಟಿನಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಮುಂಜಾಗ್ರತಾ ಕ್ರಮವಾಗಿ ಯಾವ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ಜಿಲ್ಲಾ ಎಸ್ಪಿ ರವರು ನೀಡಿದರು.

ಈ ಸಮಯದಲ್ಲಿ ಎಎಸ್ಪಿ, ಆರೋಗ್ಯಾದಿಕಾರಿಗಳಾದ ನಾಗೇಶ್ ,,ಪಶುಪಾಲನಾ ಇಲಾಖೆಯ ಅಧಿಕಾರಿ ಬಾಬು ರೆಡ್ಡಿ ,ವಕ್ತ್ ಬೋರ್ಡ್ ಸಿಇಒ ಫರಿದಾ ಲ, ಮಹಾಗರಪಾಲಿಕೆ ಸದಸ್ಯ ನಯಾಜ್ ರವರು, ಹಾಗೂ ನಗರದ ಅದಿಕಾರಿಗಳು ಉಪಸ್ಥಿತಿತರಿದ್ದರು.

‘ಪಾಪದ ಹೂಗಳನ್ನು’ ಕೈಯಲ್ಲಿ ಹಿಡಿದುಕೊಂಡು…

ಜಿ ಎನ್ ಮೋಹನ್


“ಮನುಷ್ಯ ಸದಾ ಕುಡಿದ ಸ್ಥಿತಿಯಲ್ಲಿರಬೇಕು. ಅದೊಂದೇ – ಒಂದೇ ಪರಿಹಾರ ಸಮಸ್ಯೆಗೆ” – ಎಂದು ಕವನ ವಾಚಿಸಿದ ತಕ್ಷಣ ‘ರಂಗಶಂಕರ’ದ ಅಂಗಳದಲ್ಲಿದ್ದವರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು.

ನಾನು ಕವಿತೆ ಓದುವುದನ್ನು ಬಿಡಲಿಲ್ಲ, ಮುಂದುವರಿಸಿದೆ..

“ಏನನ್ನು ಕುಡಿಯುವುದು? ವೈನ್, ಕಾವ್ಯ, ಋಜುತ್ವ .. ಯಾವುದನ್ನಾದರೂ, ಕುಡಿಯುತ್ತಿರಬೇಕು ಮಾತ್ರ”. ಕೇಳುತ್ತಿದ್ದವರು ಒಂದಿಷ್ಟು ನಿರಾಳಾರಾದಂತೆ ಕಂಡರು.

ಕೆಲವು ವರ್ಷಗಳ ಹಿಂದೆ ‘ರಂಗಶಂಕರ’ ಲಂಕೇಶರನ್ನು ಥೀಮ್ ಆಗಿ ಇಟ್ಟುಕೊಂಡು ರಂಗ ಉಗಾದಿಗೆ ಸಜ್ಜಾಗಿತ್ತು. ಬೆಳಗ್ಗೆಯಿಂದ ಆರಂಭಿಸಿ ರಾತ್ರಿ ತನ್ನ ಹೆಜ್ಜೆಗಳನ್ನು ಇಳಿಸಿ ಹೋಗುವವರೆಗೆ ಲಂಕೇಶ್ ಎಲ್ಲೆಲ್ಲೂ ಇರಬೇಕು ಎನ್ನುವುದು ರಂಗಶಂಕರದ ಆಶಯವಾಗಿತ್ತು.

ಹಾಗಾಗಿಯೇ ಲಂಕೇಶರ ಕಥೆ, ಕವಿತೆ, ಏಕಾಂಕ, ಇಂದಿಗೂ ಕಾಡುವ ’ಸಂಕ್ರಾಂತಿ’, ಲಂಕೇಶರ ಮಲೆನಾಡಿನ ತಿಂಡಿ ತಿನಿಸು, ನೆಂಚಿಕೊಳ್ಳಲು ನೀಲು ಪದ್ಯಗಳು ಎಲ್ಲವೂ ಇತ್ತು.

ಈ ಮಧ್ಯೆ ನನ್ನ ಕೈಗೆ ಬಂದಿದ್ದು ಬೋದಿಲೇರನ ಕಾವ್ಯ. ಲಂಕೇಶ್ ಅವರು ಅನುವಾದ ಮಾಡಿದ್ದ ಬೋದಿಲೇರನ ಕವಿತೆಗಳನ್ನು ಸುಮಾರು ಅರ್ಧ ಗಂಟೆ ಕೇಳುಗರಿಗೆ ದಾಟಿಸಬೇಕಿತ್ತು.

ಯೋಗರಾಜ ಭಟ್ಟರ ಕೈಗೆ ನೀಲು ಕವಿತೆಗಳು ಸಿಕ್ಕಿದ್ದವು. ನೀಲೂ ಪದ್ಯಗಳಂತೂ ಶಾಯರಿಯಂತೆ ಪಟಕ್ಕನೆ ಯಾವಾಗ ಬೇಕಾದರೂ ಉದುರುತ್ತದೆ ಎನ್ನುವಂತೆ ನಾಲಿಗೆಯ ತುದಿಯಲ್ಲಿ ಕುಣಿಯುತ್ತಿರುತ್ತದೆ.

ಹೀಗೆ ಲಂಕೇಶರ ಬಹು ಚರ್ಚಿತ, ಓದಿಸಿಕೊಂಡ ನಾಟಕ ಕವಿತೆಗಳ ಮಧ್ಯೆ ನಾನು ಬೋದಿಲೇರನನ್ನು ಹಿಡಿದುಕೊಂಡು ಕೂತಿದ್ದೆ.

ಬೋದಿಲೇರ್ ನನಗಂತೂ ಅಥವಾ ಕಾವ್ಯಕ್ಕೆ ಮೈ ತೆತ್ತುಕೊಳ್ಳುತ್ತಿದ್ದ ನನ್ನ ತಲೆಮಾರಿನವರಿಗಂತೂ ಅಪರಿಚಿತನಾಗಿರಲಿಲ್ಲ. ಲಂಕೇಶ್ ಫ್ರೆಂಚ್ ಭಾಷೆಯ ’ಲೆ ಫ್ಲೂರ್ ದು ಮಾಲ್’’ ಕೃತಿಯನ್ನು ’ಪಾಪದ ಹೂವುಗಳು’’ ಎನ್ನುವ ಹೆಸರಿನಲ್ಲಿ ಕೈಗಿತ್ತಾಗಲೇ ನಮ್ಮ ಪೀಳಿಗೆ ಥಂಡಾ ಹೊಡೆದು ಹೋಗಿತ್ತು.

ಏಕೆಂದರೆ ಆ ತಲೆಮಾರೇ ಹಾಗಿತ್ತು. ಎಲ್ಲರೂ ಬಾಯಿಬಿಟ್ಟುಕೊಂಡು ’ಆ ದಶಕ’ ಎಂದು ಬಣ್ಣಿಸುವ ೭೦ ರ ದಶಕದಲ್ಲಿ ಲಂಕೇಶ್ ಬೋದಿಲೇರನ ಹೆಗಲು ಬಳಸಿ ಸಲೀಸಾಗಿ ವಾಕಿಂಗ್ ಗೆಂದು ಲಾಲ್‌ಬಾಗ್‌ಗೋ, ಬ್ಯೂಗಲ್ ರಾಕ್ ಪಾರ್ಕಿಗೋ ಕರೆದುಕೊಂಡು ಬಂದವರಂತೆ ಕನ್ನಡದ ಅಂಗಳಕ್ಕೆ ಕರೆದುಕೊಂಡು ಬಂದುಬಿಟ್ಟಿದ್ದರು.

ಸಿಟ್ಟು, ಆಕ್ರೋಶಕ್ಕೆ ಕ್ಯಾನ್ ವಾಸ್ ಸಿಕ್ಕಿದ್ದ ದಿನಗಳು ಅವು. ಹಾಗಾಗಿ ಒಂದು ರೊಚ್ಚಿನ ಜನಾಂಗವೇ ಎದ್ದು ನಿಲ್ಲುತ್ತಿತ್ತು.

ಆಗಲೇ ಬೋದಿಲೇರ್ ಸಿಗಬೇಕೆ? ‘ಸದಾ ಕುಡಿದಿರು, ಏನನ್ನಾದರೂ..’ ಎಂದು ಬೋದಿಸಿದ ಬೋದಿಲೇರ್. ಹಾಗಾಗಿ ನಮ್ಮ ಕಾಲಕ್ಕೆ ಅದು ಮಿಂಚಿದ, ಆದರೆ ಮಾಸಿಹೋಗದ ಬೆಳಕು.

ಅಂತಹ ಬೋದಿಲೇರ್ ನನ್ನ ಕೈಗೆ ಸಿಕ್ಕಿ ಹಾಕಿಕೊಂಡಿದ್ದ. ನನಗಂತೂ ಬೋದಿಲೇರ್ ಕವಿತೆಗಳ ಬಾಗಿಲು ಬಡಿಯಲು ಲಂಕೇಶ್ ಕೊಟ್ಟ ಹತಾರಗಳು ಕೈಲಿದ್ದವು.

ಆದರೆ ಕೇಳುಗರಿಗೆ ಬೋದಿಲೇರ್ ಅಪರಿಚಿತನಾಗಿ ಹೋಗಿದ್ದ. ಏಕೆಂದರೆ ಅಲ್ಲಿದ್ದವರು ಸಿಟ್ಟು, ಆಕ್ರೋಶ, ಬಂಡಾಯವನ್ನು ಯಾವ ಭೇದ ಭಾವ ಮಾಡದೆ, ಮುಲಾಜಿಲ್ಲದೆ ಸಪಾಟು ಮಾಡುವ ಜಾಗತೀಕರಣದ ಕಾಲದವರು.

ಹಾಗಾಗಿ ಜಾಗತೀಕರಣ ಬೋದಿಲೇರನ ಕವಿತೆ ಹುಟ್ಟುಹಾಕುತ್ತಿದ್ದ ತಲ್ಲಣ, ವಿಕ್ಷಿಪ್ತತೆ, ಆಕ್ರೋಶ, ಅಸಹನೆಯನ್ನು ಬುಲ್ಡೋಜ್ ಮಾಡಿ ಅಥವಾ ಪರೋಕ್ಷವಾಗಿ ಬೋದಿಲೇರನನ್ನೇ ತಿಂದು ಹಾಕಿ ಮುಗಿಸಿತ್ತು.

ಹಾಗಾಗಿ ಬೋದಿಲೇರ್ ನನ್ನು ಕೇಳುಗರ ಕಿವಿಗೆ, ಆ ಮೂಲಕ ಅವರ ಮನಸ್ಸಿಗೆ ತಾಕಿಸುವುದು ಸುಲಭವಾದ ಮಾತಾಗಿರಲಿಲ್ಲ.

ಹಾಗಾಗಿಯೇ ನಾನು ಮತ್ತೆ ಮತ್ತೆ ಬೋದಿಲೇರನ ಪಾಪದ ಹೂವುಗಳಲ್ಲಿ ಮುಖ ಹುದುಗಿಸಿ ಕುಳಿತೆ. ಬೋದಿಲೇರನನ್ನು ಓದುತ್ತಾ, ಓದುತ್ತಾ ನನ್ನೊಳಗೂ ಒಂದು ಕತ್ತಲು, ನನ್ನೊಳಗಿನ ಅನಾಚಾರ, ನನ್ನೊಳಗಿನ ಅಧೋಲೋಕ, ನನ್ನೊಳಗಿನ ಸಂಕಟಕ್ಕೂ ಈ ಕವಿತೆಗಳು ಕೀಲಿ ಕೈ ಒದಗಿಸುತ್ತಾ ಹೋದವು.

ಜಂಬಣ್ಣ ಅಮರಚಿಂತ ಅವರು ಆ ಕಾಲಕ್ಕೇ ’ಅಧೋ ಜಗತ್ತಿನ ಅಕಾವ್ಯ’ ಎನ್ನುವ ಕವನ ಸಂಕಲನ ಹೊರತಂದಿದ್ದರು. ಪಾಪದ ಹೂವುಗಳನ್ನು ಮೂಸುತ್ತಾ ಕೂತವನಿಗೆ ಇದೂ ಅಂತಹದ್ದೇ ಅಧೋ ಜಗತ್ತಿನ ಅಕಾವ್ಯ ಅನ್ನಿಸಿತು.

ಲಂಕೇಶ್ ಸಹಾ ತಮ್ಮ ಲೋಕಕ್ಕೂ ಈ ಕೃತಿಯಿಂದ ಇಂತಹದ್ದೇ ಕೀಲಿ ಕೈ ಪಡೆದಿದ್ದರೇನೋ? ’ಇದು ಕಾವ್ಯಕ್ಕೂ, ಜೀವನಕ್ಕೂ ಇರಬಹುದಾದ ಸಂಬಂಧದ ಬಗ್ಗೆ ಚಿಂತಿಸುವವನೊಬ್ಬ ತಾನು ಬೋದಿಲೇರನ ಬದುಕು, ಕಾವ್ಯದಿಂದ ಇಸಿದುಕೊಂಡ ಆಶ್ಚರ್ಯ, ಆಘಾತಗಳನ್ನು ಯೋಚಿಸುತ್ತಾ, ಟಿಪ್ಪಣಿ ಮಾಡಿದ್ದರಿಂದ ಹುಟ್ಟಿದ ಪುಸ್ತಕ’ ಎನ್ನುತ್ತಾರೆ.

ಲಂಕೇಶರಂಥ ಲಂಕೇಶರಿಗೇ ಆಘಾತ ಕೊಟ್ಟ ಈ ಕೃತಿಯ ಒಳಗೆ ಹೆಜ್ಜೆ ಹಾಕುತ್ತಾ ಹೋದರೆ ’ಇದು ಹಸಿರಿಲ್ಲದ, ಉಸಿರಿಲ್ಲದ, ಹೆಸರಿಲ್ಲದ ನರಕ’.

’ಹೆಣ್ಣಿನ ಕೂದಲಲ್ಲಿ ಭೂಮಿಯ ಅರ್ಧ ಭಾಗ’ ಎನ್ನುವ ಕವಿತೆಯ ನಡುವೆ ನನ್ನ ಬೆರಳಾಡಿಸುತ್ತಾ, ’ನಿನ್ನ ಕೂದಲಲ್ಲಿ ನಾನು ಕಂಡಿದ್ದು, ಕೇಳಿದ್ದು ನಿನಗೆ ಗೊತ್ತಿಲ್ಲ! ಜನರ ಮನಸ್ಸು ಸಂಗೀತದಲ್ಲಿ ತೇಲುವಂತೆ ನನ್ನ ಚೇತನ ನಿನ್ನ ಕೂದಲ ವಾಸನೆಯಲ್ಲಿ ತೇಲುತ್ತದೆ. ನಿನ್ನ ಕೂದಲು ಸಂಪೂರ್ಣ ಸ್ವಪ್ನ ನನ್ನ ಪಾಲಿಗೆ – ಚರ ರೂಪುಗಳು, ಅಚರ ಆಕಾರಗಳು! ಅದರಲ್ಲಿ ನನ್ನನ್ನು ದೂರ ದೇಶಗಳಿಗೆ ಒಯ್ಯುವ, ಇಲ್ಲಿಗಿಂತ ನೀಲ, ಆಳ ಜಾಗಗಳಿಗೆ ಕೊಂಡೊಯ್ಯುವ, ಅಲ್ಲಿ ಹಣ್ಣು, ಎಲೆ, ಮನುಷ್ಯ ಚರ್ಮದ ವಾಸನೆ ತೋರುವ ಸಮುದ್ರದ ಮುಂಗಾರು ಇದೆ ನನ್ನ ಪಾಲಿಗೆ ….’ ಎಂದು ಓದುತ್ತಾ ಇದ್ದಂತೆ ಕೇಳುಗರು ಬೆಚ್ಚಿಬಿದ್ದಿದ್ದರು, ಥೇಟ್ ನಾನು ಬೆಚ್ಚಿ ಬಿದ್ದಿದ್ದಂತೆಯೇ.

ಲಂಕೇಶ್ ಹೇಳುತ್ತಾರೆ – ‘ಇದೇ ಬೋದಿಲೇರನ ಕವಿತೆಯ ಶಕ್ತಿ. ’ಜಡಗೊಂಡ ಓದುಗರನ್ನು ತನ್ನ ಅನುಭವದಿಂದ ಬೆಚ್ಚಿ ಬೀಳಿಸದೆ ಇರುವ ಲೇಖಕ ಎಂಥದನ್ನೂ ಮಾಡಲಾರ ಎಂಬುದು ಬೋದಿಲೇರನ ನಂಬಿಕೆ’ ಎನ್ನುತ್ತಾ ’ಕೊನೆಯ ಪಕ್ಷ ಬೋದಿಲೇರನ ನರಕದಿಂದಾದರೂ ನಮ್ಮ ವಾಚಕರು ಎಚ್ಚರಗೊಳ್ಳಲಿ ಎಂಬುದು ನನ್ನ ಆಶೆ’ ಎನ್ನುತ್ತಾರೆ ಅವರು.

ಆದರೆ ನಾನೋ ಇಲ್ಲಿ ಕೇಳುಗರಿಗೆ ಬೋದಿಲೇರನ ಲೋಕ ಹಂಚುತ್ತಾ ಬೆಚ್ಚಿಬೀಳಿಸುತ್ತಿದ್ದೆ.

ನಾವು – ನೀವೇನು, ಸರಿಯಾಗಿ ೧೨೬ ವರ್ಷಗಳ ಹಿಂದೆ ಬೋದಿಲೇರ್ ಈ ಪುಸ್ತಕ ಹಿಡಿದು ನಿಂತಾಗ ಫ್ರಾನ್ಸ್ ಗೆ ಫ್ರಾನ್ಸೇ ಬೆಚ್ಚಿಬಿದ್ದಿತ್ತು.

ವಿಕ್ಟರ್ ಹ್ಯೂಗೋ, ವಿಗ್ನಿ ಕಟ್ಟಿಕೊಡುತ್ತಿದ್ದ ರೋಮ್ಯಾಂಟಿಕ್ ಸಾಹಿತ್ಯದ ಕಾಲದಲ್ಲಿ ಒಂದು ಅಕಾವ್ಯ ಎದ್ದು ನಿಂತಿತ್ತು. ಥೇಟ್ ಸಿದ್ದಲಿಂಗಯ್ಯನವರ ‘ಹೊಲೆ ಮಾದಿಗರ ಹಾಡಿ’ನ ಹಾಗೆ. ಕನ್ನಡ ಕಾವ್ಯ ಒಂದು ಸುಮಧುರವಾದ ಅನುಭವಕ್ಕೆ ಮೈಯೊಡ್ಡಿಕೊಂಡಿದ್ದಾಗಲೇ ’ಇಕ್ರಲಾ, ಒದೀರ್ಲಾ, ಆ ನನ್ಮಕ್ಕಳ ಚರ್ಮ ಎಬ್ರಲಾ…’ ಎಂದು ಎದ್ದು ನಿಂತಿತು.

ಹೌದಲ್ಲಾ! ಇಲ್ಲೂ ಒಂದು ಸಾಮ್ಯತೆಯಿದೆ. ಬೋದಿಲೇರನ ಪುಸ್ತಕ ಪ್ರಕಟಿಸಲು ಹೊರಡುವಾಗ ಲಂಕೇಶರು, ’ಈ ಕವಿತೆಗಳನ್ನು ಓದುಗರು ಗಟ್ಟಿಯಾಗಿ ಓದಿಕೊಂಡರೆ ಒಳ್ಳೆಯದು ಎಂದು ನನಗೆ ಅನ್ನಿಸಿದೆ. ಇದನ್ನು ಕೆಲವರ ಮೇಲೆ ಪ್ರಯೋಗಿಸಿ ಈ ಮಾತನ್ನು ಹೇಳುತ್ತಿದ್ದೇನೆ’, ಎಂದು ಬರೆಯುತ್ತಾರೆ.

ಸಿದ್ದಲಿಂಗಯ್ಯನವರ ’ಹೊಲೆ ಮಾದಿಗರ ಹಾಡು’, ’ಸಾವಿರಾರು ನದಿಗಳು’ ಬಂದಾಗಲೂ ಇದನ್ನು ಗಟ್ಟಿಯಾಗಿ ಓದಿ ಎಂಬ ಸೂಚನೆ ಪುಸ್ತಕದಲ್ಲಿತ್ತು.

ಅಂದರೆ ಅದುವರೆಗೂ ಮೆಲು ಮಾತಿನಲ್ಲಿ, ಒಳ ಮಾತಿನಲ್ಲಿ, ಪಿಸುಮಾತಿನಲ್ಲಿ ತೇಲುತ್ತಿದ್ದ ಕನ್ನಡ ಕಾವ್ಯ ಗಟ್ಟಿಯಾಗಿ ಮಾತನಾಡಲು ಹೆಜ್ಜೆ ಹಾಕಿತ್ತು.

ಇದನ್ನು ಬರೆಯುತ್ತಾ, ಬರೆಯುತ್ತಾ ಇರುವಾಗಲೇ ಆ ಬೋದಿಲೇರ್ ಕಟ್ಟಿಕೊಟ್ಟ ಆ ಜಗತ್ತಿಗೂ ಸಿದ್ದಲಿಂಗಯ್ಯ ಹಾಗು ಆ ನಂತರ ಹುಟ್ಟಿಕೊಂಡ ಕಾವ್ಯಕ್ಕೂ ಎಷ್ಟೊಂದು ಸಾಮ್ಯತೆಯಿದೆ.

ಬೋದಿಲೇರ್ ಬಣ್ಣಿಸಿದ್ದು ಚೆಲುವಾದ ಫ್ರಾನ್ಸಿನ ಆಳದಲ್ಲಿ ತೇಲುತ್ತಿದ್ದ ನರಕವನ್ನು, ಎದೆಯೊಳಗಿನ ವಿಷಾದವನ್ನು. ಇಲ್ಲಿ ನಾವು ಓದತೊಡಗಿದ್ದು ಉಸಿರುಗಟ್ಟಿಕೊಂಡು ಇದ್ದ ಒಂದು ಲೋಕ ಮಾತಾಡಲು ಶುರು ಮಾಡಿದ್ದನ್ನು.

’ನಿನ್ನೆ ದಿನ ನನ್ನ ಜನ, ಬೆಟ್ಟದಂತೆ ಬಂದರು. ಕಪ್ಪು ಮುಖ, ಬೆಳ್ಳಿ ಗಡ್ಡ, ಉರಿಯುತಿರುವ ಕಣ್ಣುಗಳು…’ ಕನ್ನಡ ಕಾವ್ಯಲೋಕವನ್ನು ಪ್ರವೇಶಿಸಿತ್ತು.

ಅಂತಹ ಕಪ್ಪು ಮುಖ, ಬೆಳ್ಳಿಗಡ್ಡ, ಉರಿಯುತಿರುವ ಕಣ್ಣುಗಳು ಬೋದಿಲೇರನಿಗಿತ್ತೋ ಇಲ್ಲವೋ ಆದರೆ ಆತನ ಕಾವ್ಯಕ್ಕಂತೂ ಇತ್ತು ಉರಿಯುತ್ತಿರುವ ಕಣ್ಣುಗಳು.

ಪಾಪದ ಹೂವುಗಳ ಮೂಲಕ ಬೋದಿಲೇರ್ ತನ್ನ ನರಕವನ್ನು ಮೊಗೆದು, ಮೊಗೆದು ಕೊಟ್ಟಿದ್ದ. ಅದು ಸಾಮಾನ್ಯರ ಎದೆಯನ್ನೂ ತಟ್ಟಿತ್ತು.

ಆ ಕಾರಣಕ್ಕಾಗಿಯೇ ಪಾಪದ ಹೂವುಗಳು, ಕೋರ್ಟಿನ ಕಟಕಟೆಯಲ್ಲಿ ನಿಲ್ಲಬೇಕಾಯಿತು. ಬರೆದ ಬೋದಿಲೇರನಿಗೂ ದಂಡ, ಜೊತೆಗೆ ಐದಾರು ಕವಿತೆಗಳನ್ನು ಕಿತ್ತು ಹಾಕಲಾಯಿತು.

ಅದರೆ ಬೋದಿಲೇರ್ ಲಂಕೇಶ್ ಬಣ್ಣಿಸುವಂತೆ ‘ಕತ್ತಲ ಜಗತ್ತನ್ನು ಪ್ರವೇಶಿಸಿ ಬೆಳಕಿನ ಬಾಗಿಲುಗಳನ್ನು ಮುಚ್ಚಿಕೊಂಡವ’.

ಫ್ರಾನ್ಸಿನ ವಿಮರ್ಶಕರು ಈ ಕೃತಿಯ ವಿಮರ್ಶೆ ಮಾಡಲು ಬೇಕಾದ ಮಾನದಂಡಗಳನ್ನೇ ಹೊಂದಿರಲಿಲ್ಲ. ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು ಇದನ್ನು ’ಅವಿವೇಕದ ಹೂವುಗಳು’ ಎಂದು ಕರೆದು ಕೈ ತೊಳೆದುಕೊಂಡರು.

ಹೌದಲ್ಲ, ಹಾಗಾದರೆ ನಮ್ಮ ’ಬೋದಿಲೇರನ ಸಖ’ ಲಂಕೇಶ್ ಈ ಅವಿವೇಕವನ್ನು ಕನ್ನಡದ ಅಂಗಳಕ್ಕೆ ತಂದಿದ್ದಾದರೂ ಯಾಕೆ? ಎಂದು ಅಚ್ಚರಿಗೊಳ್ಳುತ್ತಾ ಕುಳಿತೆ.

‘ಈ ಜಗತ್ತು ಯಾವುದನ್ನು ವಿವೇಕ ಎನ್ನುತ್ತದೋ ಅದು ಎಷ್ಟೋ ವೇಳೆ ಅವಿವೇಕವೂ, ಯಾವುದನ್ನು ಅವಿವೇಕ ಎನ್ನುತ್ತದೋ ಅದೇ ವಿವೇಕವಾಗಿರುತ್ತದೆ’ ಎನ್ನುವುದನ್ನು ಕಲಿಸಿಕೊಟ್ಟಿದ್ದು ಇದೇ ಲಂಕೇಶ್ ವಿಶ್ವವಿದ್ಯಾಲಯವಲ್ಲವೇ…?

ಕೊರೊನಾ: ತುಮಕೂರಿನಲ್ಲಿ ಒಂದೇ ದಿನ 4 ಸಾವು: ಪಿಡಿಒ, ಪೌರಕಾರ್ಮಿಕನಿಗೂ ತಟ್ಟಿದ ಸೋಂಕು

ಪಬ್ಲಿಕ್ ಸ್ಟೋರಿ


ತುಮಕೂರು: ಜಿಲ್ಲೆಯಲ್ಲಿ ಕೊರೊನ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ದಿನನಿತ್ಯ ನೂರರ ಗಡಿ ದಾಟುತ್ತಲೇ ಇದೆ.

ತುಮಕೂರು ನಗರವೊಂದರಲ್ಲೇ ಇಂದು 60 ಕೊರೊನ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಪ್ರತಿಯೊಂದು ಬಡಾವಣೆಗಳಲ್ಲೂ ಸೋಂಕಿತರು ಕಂಡುಬರುತ್ತಿದ್ದು ಸೀಲ್ ಡೌನ್ ಏರಿಯಾಗಳು ಹೆಚ್ಚುತ್ತಲೇ ಇವೆ.

ಮಧುಗಿರಿ-7, ಗುಬ್ಬಿ-7, ತಿಪಟೂರು-8, ಕುಣಿಗಲ್ 13, ಸಿರಾ-6, ತುರುವೇಕೆರೆ-9, ಪಾವಗಡ-10 ಮತ್ತು ಕೊರಟಗೆರೆ ತಾಲೂಕಿನಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ.

ಇಂದು ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿ ನಾಗೇಂದ್ರ ತಿಳಿಸಿದ್ದಾರೆ.

ಸೋಂಕಿತರು ಮತ್ತು ಸಾವಿನ ಸಂಖ್ಯೆ ಏರುತ್ತಿರುವುದು ಜನರನ್ನು ಭೀತರನ್ನಾಗಿಸಿದೆ. ಮಾಸ್ಕ ಧರಿಸುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕು ಹರಡುವುದನ್ನು ತಡೆಯಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಇದುವರೆಗೆ ಸೋಂಕಿತರ ಸಂಖ್ಯೆ 1473ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 49ಕ್ಕೆ ತಲುಪಿದೆ.

ಪಿಡಿಓ ಮತ್ತು ಲೆಕ್ಕಾಧಿಕಾರಿಯೊಬ್ಬರಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿರುವುದರಿಂದ ಹೆಬ್ಬೂರು ಗ್ರಾಮ ಪಂಚಾಯಿತಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ತುಮಕೂರು ನಗರದಲ್ಲಿ ಪೌರಕಾರ್ಮಿಕರೊಬ್ಬರಿಗೆ ಸೋಂಕು ತಗುಲಿದೆ. ಹಾಗಾಗಿ ಈತನ ಸಂಪರ್ಕದಲ್ಲಿದ್ದ 15 ಮಂದಿ ಪೌರಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ.

ಕುಮಾರಸ್ವಾಮಿ ಪತ್ರಕ್ಕೆ ಕಾಂಗ್ರೆಸ್ ತತ್ತರ

Publicstory. in


ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಿದ ಬಳಿಕ ಇದೇ ಮೊದಲ ಸಲ ಕಾಂಗ್ರೆಸ್ ವಿರುದ್ಧ ಜೋರು ದ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕರನ್ನು ಖರೀದಿಸುವ ಕೆಲಸ ಮೊದಲು ಆರಂಭಿಸಿದ್ದೇ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಏನ್ನೆಲ್ಲ ಮಾಡಿದೆ, ಪ್ರಜಾಪ್ರಭುತ್ವ ಉಳಿಸಿ ಎಂದು ಕೇಳಲು ಕಾಂಗ್ರೆಸ್ ಗೆ ಯಾವ ನೈತಿಕತೆ ಇದೆ ಎಂದು ಟ್ಚೀಟ್ ಮಾಡಿರುವ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.

ಅವರ ಟ್ವೀಟ್ ಪೂರ್ಣ ಪಾಠ ಇಲ್ಲಿದೆ


ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ “ಪ್ರಜಾಪ್ರಭುತ್ವ ಉಳಿಸಿ” ಎಂದು ಹೋರಾಟ ನಡೆಸುತ್ತಿದೆ. ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ? ಸರ್ಕಾರ ರಚಿಸಲು ಬೆಂಬಲ ನೀಡಿದ BSPಯ ಎಲ್ಲ ಶಾಸಕರನ್ನೂ ಕಾಂಗ್ರೆಸ್ ಸೆಳೆದಿಲ್ಲವೇ? ಇದು ಖರೀದಿಯಲ್ಲವೇ?

ಸರ್ಕಾರ ರಚಿಸಲು ಬೆಂಬಲ ಕೊಟ್ಟವರನ್ನೇ ಕುತಂತ್ರದಿಂದ ಸೆಳೆದುಕೊಳ್ಳುವುದು, ಇಡೀ ಪಕ್ಷವನ್ನೇ ವಿಲೀನ ಮಾಡಿಸಿಕೊಳ್ಳುವುದು ಪ್ರಜಾಪ್ರಭುತ್ವ ನಡೆಯೇ? ಸಮಾನ ಮನಸ್ಕ ಪಕ್ಷಗಳನ್ನು ಒಡೆದು ಶಾಸಕರನ್ನು ಸೆಳೆಯುತ್ತಿದ್ದರೆ ನಿಮಗೆ ಯಾರು ಬೆಂಬಲ ಕೊಟ್ಟಾರು. ಈ ತಪ್ಪುಗಳು ನಿಮಗೆ ಕಾಣುತ್ತಿಲ್ಲವೇ?

ಶಾಸಕರ ಖರೀದಿ ವಿಚಾರವಾಗಿ ದೊಡ್ಡ ಗಂಟಲು ಮಾಡುತ್ತಿರುವ ಕಾಂಗ್ರೆಸ್ ಹಿಂದೆ ಜೆಡಿಎಸ್ ಅನ್ನು ಒಡೆದಿಲ್ಲವೇ? ಒಡೆಯಲು ಪ್ರಯತ್ನಗಳನ್ನು ಮಾಡಲಿಲ್ಲವೇ? ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಮಂದಿಯನ್ನು ಕೇವಲ ರಾಜ್ಯಸಭೆ ಚುನಾವಣೆಗಾಗಿ ಖರೀದಿಸಲಿಲ್ಲವೇ? ಇದು ಪ್ರಜಾಸತ್ತಾತ್ಮಕವೇ? ಖರೀದಿ ವಿಚಾರದಲ್ಲಿ ಎರಡೂ ಪಕ್ಷಗಳೂ ‘ಅಪರಾಧಿ’ಗಳೇ

ಎಸ್.ಎಂ ಕೃಷ್ಣ ಅವರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಮ್ಮ ಶಾಸಕರನ್ನು ಖರೀದಿ ಮಾಡಿರಲಿಲ್ಲವೇ? 2018ರ ವಿಧಾನಸಭೆ ಚುನಾವಣೆ ನಂತರ ನಮ್ಮ ಶಾಸಕರನ್ನು ಖರೀದಿಸಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಹೊಂಚು ಹಾಕಿರಲಿಲ್ಲವೇ? ಕಾಂಗ್ರೆಸ್ ಬಳಿ ಈ ಪ್ರಶ್ನೆಗಳಿಗೆ ಉತ್ತರಿಸಲು ನೈತಿಕತೆ ಇದೆಯೇ?

2004ರ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಇದೇ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಇದನ್ನು ಮನಗಂಡೇ ನಾನು ಕ್ಷಿಪ್ರ ರಾಜಕೀಯ ಕ್ರಾಂತಿ ಮಾಡಬೇಕಾಯಿತು. ಪಕ್ಷಗಳನ್ನು ಒಡೆಯುವ, ಶಾಸಕರನ್ನು ಖರೀದಿಸುವ ವ್ಯವಾಹರದಲ್ಲಿ ಕಾಂಗ್ರೆಸ್ ನಿಪುಣ. ‘ಕುದುರೆ ವ್ಯಾಪಾರ’ ಎಂಬ ಭಾಷೆ ಹುಟ್ಟಿದ್ದೇ ಕಾಂಗ್ರೆಸ್ನಿಂದ.

ಪಕ್ಷಾಂತರ ನಿಷೇಧ ಕಾಯ್ದೆ ಪರಿಣಾಮಕಾರಿಯಾಗಿಲ್ಲ.‌ ಆದ್ದರಿಂದಲೇ ಈ ಪ್ರಜಾಪ್ರಭುತ್ವ ವಿರೋಧಿ ಪ್ರಹಸನಗಳು ನಡೆಯುತ್ತಿವೆ. ಹಾಗಾಗಿ ಪಕ್ಷಾಂತರ ಮಾಡಿದ ವ್ಯಕ್ತಿ, ಆತನ ಕುಟುಂಬಕ್ಕೆ 2 ಅವಧಿಗೆ ಚುನಾವಣೆ ನಿರ್ಬಂಧಿಸುವ ಮತ್ತು ಈ ಅವಧಿಯಲ್ಲಿ ಯಾವುದೇ ಅಧಿಕಾರ ಹೊಂದದಂತೆ ಮಾಡುವುದು ಸೂಕ್ತ. ಇದರತ್ತ ಚರ್ಚೆಗಳಾದರೂ ನಡೆಯಲಿ. ಪ್ರಜಾಪ್ರಭುತ್ವ ಉಳಿಯಲಿ.

ಪ್ರಜಾಪ್ರಭುತ್ವ ಉಳಿಸಲು ಪ್ರಾಣ ನೀಡುವುದಾಗಿ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಹೇಳುತ್ತಿದ್ದರು. ಸ್ವಾಮಿ, ಜೀವ ಅಮೂಲ್ಯ. ನೀವು ಪ್ರಾಣ ಕೊಡುವುದು ಬೇಡ. ಕಾಂಗ್ರೆಸ್‌ ನಡೆದು ಬಂದ ದಾರಿಯನ್ನು ಒಂದು ಬಾರಿ ನೆನಪಿಸಿಕೊಳ್ಳಿ. ನಂತರ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸದೃಢಗೊಳಿಸುವತ್ತ ಚಿಂತನೆ ಮಾಡಿ. ಪ್ರಜಾಪ್ರಭುತ್ವ ತಂತಾನೆ ಉಳಿಯುತ್ತದೆ.

ಹೊರಗೆ ನಿಂತ ಸಂತ

0

ದೇವರಹಳ್ಳಿ ಧನಂಜಯ


ಮೈ ಮೂಳೆ ಚಕ್ಕಳ
ಸಾಮುಗೊಂಡು ಎಕ್ಕಡ
ಅರ್ಥ ಪಡೆದುಕೊಂಡಿತೀಗ
ಬದುಕು ನಿನ್ನ ಸಂಗಡ

ನರ ನರಗಳು ಉರಿ ಗೊಂಡು
ಕಣಕಣದಲಿ ಚಲನಗೊಂಡು
ಹೊಲೆಯ ಹೊಲೆದ ಜೋಡ ನೋಡು
ಮೊಳಗುತಿದೆ ದುಡಿಮೆ ಹಾಡು

ಕೋಟಿ ಕಷ್ಟ ಮೌನ ನುಡಿ
ಎದೆಯ ತಿದಿಗೆ ಕಾದ ದುಡಿ
ಆದಿ-ಅಂತ್ಯ ತಮಟೆ ಸದ್ದು
ಗಲ್ಲೆಬಾನಿ ಕಾವ್ಯವು
ಕೇಳಬೇಕುಲೋಕವು

ನೂಕು ನೆಲದ ನಾಕುತಂತಿ
ಕಾಲ ಮೀರಿ ಬೆಳೆದು ತಂತು
ಹೊರಗೆ ಉಳಿದು ಬಿಟ್ಟನು
ಬೇರ ಬೆವರ ಸಂತನು

ಮಗಳೇ..

0

ಜಿ ಎನ್ ಮೋಹನ್

”ಮಗಳೇ..”
ಅಂತ ಕರೆದಾಗ ಇಡೀ ಸಭೆಯೇ ಸ್ತಬ್ಧವಾಗಿ ಹೋಯಿತು.

ಎಲ್ಲರ ಹುಬ್ಬುಗಳೂ ಮೇಲೇರಿದವು
ಇದೇನಪ್ಪಾ ಹೀಗೆ, ಅದೂ ಈ ಕಾರ್ಯಕ್ರಮದಲ್ಲಿ.. ಎಂದು ಗುಸು ಗುಸು ಆರಂಭವಾಯಿತು.

ಆಗ ಸಿ ಆರ್ ಸಿಂಹ ಕೇಳಿದರು – Alieda, you are my daughter u know, can i take the privilege of calling you as daughter?? ಅಂತ.

ವೇದಿಕೆಯ ಮೇಲಿದ್ದ ದೂರ ದೇಶದ ಹಕ್ಕಿ ಅಲೀಡಾಗೂ, ವೇದಿಕೆಯ ಮುಂದಿದ್ದ ಸಭಿಕರಿಗೂ ತಲೆಬುಡ ಅರ್ಥವಾಗಲಿಲ್ಲ

ಆಗ ಆಗ ಸಿ ಆರ್ ಸಿಂಹ ಹೇಳಿದರು-
”ಮಗೂ ನಾನು ಚೆ ಗೆವಾರ ನಾಟಕದಲ್ಲಿ ಚೆ ಗೆವಾರನ ಪಾತ್ರ ಮಾಡಿದವನಮ್ಮ, ಚೆಗೆವಾರ ಅಂದಿನಿಂದ ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಾನೆ.
ನೀನು ನನ್ನ ಮಗಳಲ್ಲದೆ ಇನ್ನೇನು?”

ಆಗ ನೋಡಬೇಕಿತ್ತು ಚಪ್ಪಾಳೆಯ ಸುರಿಮಳೆ.

ವೇದಿಕೆಯ ಮೇಲೆ ಕುಳಿತಿದ್ದ ಅಲೀಡಾ ಅಲ್ಲಿಂದ ಎದ್ದು ಬಂದವರೇ ತನ್ನ ಅಪ್ಪ ಸಿ ಆರ್ ಸಿಂಹ ಅಲಿಯಾಸ್ ಚೆಗೆವಾರನನ್ನು ಅಪ್ಪಿಕೊಂಡರು

ಇದು ನಡೆದದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ

1998 ಇರಬೇಕು

ಚೆ ಗೆವಾರನ ಮಗಳು ಅಲೀಡಾಗೆ ಕ್ಯೂಬಾವನ್ನು, ಚೆಗೆವಾರನನ್ನು ಇನ್ನಿಲ್ಲದಂತೆ ಪ್ರೀತಿಸಿದ ಭಾರತಕ್ಕೆ ಭೇಟಿ ನೀಡಬೇಕು ಎನ್ನುವ ಆಸೆ ಇತ್ತು

ಅದು ನನಸಾಯಿತು. ಕ್ಯೂಬಾದ ರಾಯಭಾರಿಯ ಜೊತೆ ಬೆಂಗಳೂರಿಗೂ ಬಂದಿಳಿದರು

ಬೆಂಗಳೂರಿಗೆ ಬರುತ್ತಾರೆ ಎಂದು ಗೊತ್ತಾಗಿದ್ದು ಹಿಂದಿನ ದಿನವಷ್ಟೇ..
ಆಗ ಮೊಬೈಲ್ ಇಲ್ಲದ ಕಾಲ

ವಿಷಯ ತಿಳಿಸಲು ಪ್ರಜಾವಾಣಿ, ಕನ್ನಡಪ್ರಭದ ‘ನಗರದಲ್ಲಿ ಇಂದು’ ಕಾಲಂ ಮಾತ್ರವೇ ಆಧಾರ

ಕೇವಲ ಎರಡು ಸಾಲಿನ ‘ನಗರದಲ್ಲಿ ಇಂದು’ ಹೇಗೆ ಕೆಲಸ ಮಾಡಿತೆಂದರೆ ಸಭಾಂಗಣದ ಹೊಟ್ಟೆ ಬಿರಿದು ಹೋಯಿತು

ಆಗ ಮುಖ್ಯಮಂತ್ರಿ ಆಗಿದ್ದ ಎಸ್ ಎಂ ಕೃಷ್ಣರೇ ‘ನಗರದಲ್ಲಿ ಇಂದು’ ನೋಡಿ ಸೀದಾ ಬಂದು ಸೆನೆಟ್ ಹಾಲ್ ಸೇರಿಕೊಂಡರು.

ಆಗಲೇ ಈ ಘಟನೆ ನಡೆದದ್ದು

ಬಿ ವಿ ಕಾರಂತರು ಕನ್ನಡ ಹವ್ಯಾಸಿ ರಂಗಭೂಮಿ ಇನ್ನೂ ಕಣ್ಣು ಬಿಡುವಾಗಲೇ ‘ಚೆ ಗೆವಾರ’ ನಾಟಕ ನಿರ್ದೇಶಿಸಿದ್ದರು
ಆಗ ಚೆಗೆವಾರನ ಪಾತ್ರ ಮಾಡಿದ್ದು ಸಿ ಆರ್ ಸಿಂಹ

ಇದೆಲ್ಲಾ ಆಗಿ ವರ್ಷಗಳು ಸರಿದು ಹೋಗಿದ್ದವು

ಬ್ರಿಗೆಡ್ ರೋಡ್ ನ ಪರಮೇಶ್ ಸ್ಟುಡಿಯೋದಲ್ಲಿ ನನ್ನ ಕವಿತೆಗಳ ರೆಕಾರ್ಡಿಂಗ್ ನಡೆಯುತ್ತಿತ್ತು.

ನನ್ನ ‘ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ’ ಕವನ ಸಂಕಲನದ ಬಿಡುಗಡೆ ಸಮಯದಲ್ಲೇ ಅದನ್ನು ‘ಕೇಳು ಕವಿತೆ’ಯಾಗಿ ಸಿ ಡಿ ರೂಪದಲ್ಲಿ ಓದುಗರ ಕೈಗಿಡಲು ‘ಅಭಿನವ’ದ ರವಿಕುಮಾರ್ ಮುಂದಾಗಿದ್ದರು.

ಸಿ ಆರ್ ಸಿಂಹ ನನ್ನ ‘ಜಕ್ಕಿಣಿಯರ ಮುಂದೆ ಮ್ಯಾಕ್ಬೆತ್’ ಕವಿತೆ ವಾಚಿಸುವವರಿದ್ದರು.

ನಾನು ಅವರೂ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೆವು

ನಾನು ಅವರನ್ನು ನೋಡಿದೊಡನೆ ‘ಗುಡ್ ಮಾರ್ನಿಂಗ್ ಚೆ ಗೆವಾರ’ ಎಂದೆ

ಅಷ್ಟೇ ಆ ಪಾಸ್ ವರ್ಡ್ ಇನ್ನಿಲ್ಲದಂತೆ ಕೆಲಸ ಮಾಡಿತು

ಚೆ ಗೆವಾರ ಎನ್ನುವ ಹೆಸರು ನಮ್ಮಿಬ್ಬರ ನಡುವೆ ಎಷ್ಟು ಅನ್ಯೋನ್ಯತೆ ಉಂಟು ಮಾಡಿತೆಂದರೆ ನಾನು ಅವರೂ ಕ್ಯೂಬಾ, ಚೆ, ಕ್ಯಾಸ್ಟ್ರೋ ಬಗ್ಗೆ ಮಾತನಾಡಿಕೊಂಡದ್ದು ಅದೆಷ್ಟು ಬಾರಿಯೋ..

‘ನಡೀರಿ ಕ್ಯೂಬಾಗೆ ಹೋಗಿ ಬರೋಣ’ ಎಂದು ನನಗೆ ಬಲವಂತ ಮಾಡುತ್ತಿದ್ದರು.

ಸಿ ಆರ್ ಸಿಂಹ ನಮ್ಮೊಂದಿಗೆ ಇಲ್ಲ.
ಅವರ ನೆನಪಿಗೆ ಮಗ ಋತ್ವಿಕ್ ಸಿಂಹ ರಂಗ ಉತ್ಸವ ಹಮ್ಮಿಕೊಂಡಿದ್ದರು.

ಆಹ್ವಾನ ಪತ್ರಿಕೆಯಲ್ಲಿ ಸಿಂಹರ ಮುಖ ಕಂಡೊಡನೆ ಈ ಎಲ್ಲವೂ ಸುರುಳಿ ಬಿಚ್ಚಿಕೊಳ್ಳುತ್ತಾ ಹೋಯಿತು

ಅದಿರಲಿ ‘ಸಂಚಯ’ದ ಗಣೇಶ್ ಗೊತ್ತಲ್ಲಾ
ಅವರು ನನ್ನ ಬೆನ್ನು ಹತ್ತಿದ್ದಾರೆ
ಚೆ ಗೆವಾರ ನಾಟಕ ಬರೆದುಕೊಡಿ ಅಂತ
ಎಸ್ , ನಾನೂ ಮನಸ್ಸು ಮಾಡಿದ್ದೇನೆ.