Saturday, May 9, 2026
Google search engine
Home Blog Page 186

ಸಾವಿರ ಗಡಿ ದಾಟಿದ ಕೊವಿಡ್ ಪ್ರಕರಣ – ಇದುವರೆಗೆ 42 ಮಂದಿ ಬಲಿ

ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊರೊನ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದೆ. ಇಂದು ಒಂದೇ ದಿನ 119 ಮಂದಿಗೆ ಕೊರೊನ ಪಾಸಿಟೀವ್ ಇರುವುದು ದೃಢಪಟ್ಟಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 1110ಕ್ಕೆ ತಲುಪಿದೆ. ಇದುವರೆಗೆ ಕೊವಿಡ್ -19ಕ್ಕೆ ಬಲಿಯಾಗಿರುವವರ ಸಂಖ್ಯೆ 42ಕ್ಕೆ ಏರಿದೆ.

ತುಮಕೂರು 49, ಮಧುಗಿರಿ 9, ಗುಬ್ಬಿ 1, ತಿಪಟೂರು 9, ಕುಣಿಗಲ್ 8, ತುರುವೇಕೆರೆ 5, ಚಿಕ್ಕನಾಯಕನಹಳ್ಳಿ 13, ಶಿರಾ 4, ಪಾವಗಡ 13, ಕೊರಟಗೆರೆ 8 ಮಂದಿಗೆ ಸೋಂಕು ದೃಡಪಟ್ಟಿದೆ. ಇಂದು 43 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 595 ಮಂದಿ ಬಿಡುಗಡೆಯಾಗಿದ್ದಾರೆ. 473 ಸಕ್ರಿಯ ಪ್ರಕರಣಗಳಿವೆ.

ತುಮಕೂರಿನಲ್ಲಿ ನಾಗರ ಪಂಚಮಿ, ಶ್ರಾವಣ ಸಂಭ್ರಮ

ತುಮಕೂರು; ಜಿಲ್ಲೆಯಲ್ಲಿ ಶನಿವಾರ ಮೊದಲ ಶ್ರಾವಣದ ಸಂಭ್ರಮ ಕಾಣಿಸಿತು. ನಾಗರ ಪಂಚಮಿಯ ಪೂಜೆಯೂ ಜೋರಾಗಿತ್ತು.

ಕೊರೊ‌ನಾ ಕಾರಣ ಹಬ್ಬದ ಗುಂಪು ಸಂಭ್ರಮಕ್ಕೆ ಕಡಿವಾಣ ಹಾಕಿತ್ತಾದರೂ ಅವರರವರ ಮನೆಯಲ್ಲಿ ಪಂಚಮಿಯ ಸಡಗರ ಎಲ್ಲೆ ಮೀರಿತ್ತು.

ಮನೆಯಲ್ಲಿ, ನಾಗರ ಗುಡಿಗಳಲ್ಲಿ ವಿಶೇಷ ಆಲಂಕಾರ ಮಾಡಲಾಗಿತ್ತು.ಪಾವಗಡದ ಉತ್ತರ ಪಿನಾಕಿನಿ ನದಿ ತಟದಲ್ಲಿರುವ ನಾಗಲ ಮಡಿಕೆಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಖ್ಯ ಅರ್ಚಕರಾದ ಬದರೀನಾಥ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಅರ್ಚನೆ, ಅಭಿಷೇಕದ ಸಮೇತ ಪಂಚಮಿಯ ವಿಶೇಷ ಪೂಜೆಗಳು ನಡೆದವು.

ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ಸಿ.ಎನ್.ಪಾಳ್ಯದ ರವೀಂದ್ರ ಅವರ ನಾಗ ಕ್ಷೇತ್ರದಲ್ಲಿ ಪೂಜೆ ನಡೆಯಿತು.

ಮೊದಲ ಶ್ರಾವಣದ ಕಾರಣ ದೇವರಾಯನದುರ್ಗದಲ್ಲಿ ವಿಶೇಷ ಪೂಜೆಗಳು ನಡೆದವು.ಶ್ರಾವಣದಲ್ಲಿ ದಾಸಪ್ಪರನ್ನು ಕರೆದು ದೇವರಿಗೆ ಎಡೆ ಇಟ್ಟು ಪೂಜೆ ಸಲ್ಲಿಸುವ ಪರಿಪಾಠ ಜಿಲ್ಲೆಯಲ್ಲಿದೆ.

ಆದರೆ ಕೊರೊನಾ ಕಾರಣ ಸಾಕಷ್ಟು ಕಡೆಗಳಲ್ಲಿ ದಾಸಪ್ಪ ರನ್ನು ಕರೆಸದೇ ಮನೆಯವರೇ ಪೂಜೆ ಸಲ್ಲಿಸಿದ್ದು ಕಾಣಿಸಿತು.

ನಾಗರಪಂಚಮಿಗೆ ಬಂತು ಹೆಬ್ಬಾವು!

ಚಿಕ್ಕನಾಯಕನಹಳ್ಳಿ: ನಾಗರಪಂಚಮಿಯಂದು ಅತಿಥಿಯಾಗಿ ಬಂತು ಹೆಬ್ಬಾವು!

ತಾಲ್ಲೂಕಿನ ಸಾಸಲು ಗ್ರಾಮದ ತೋಟದಲ್ಲಿ ಈ ಹಾವು ಹರಿದಾಡುತ್ತಿತ್ತು. ಈ ಹೆಬ್ಬಾವನ್ನು ನೋಡಿದ ಜನರು ತಕ್ಷಣ ಅರಣ್ಯ ಇಲಾಖೆಯವರ ಗಮನಕ್ಕೆ ತಂದರು.

ನಂತರ ಅರಣ್ಯ ಇಲಾಖೆಯವರು ಉರಗಪ್ರೇಮಿ ಪವನ್ ಅವರಿಗೆ ಕರೆ ಮಾಡಿದರು.

ತೋಟಕ್ಕೆ ಬಂದ ಪವನ್ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟರು.

ಒಂದೇ ಒಂದು ‘ಸಾರಿ’

ಜಿ.ಎನ್.ಮೋಹನ್


‘ಮ್ಯಾಕ್ ಬೆತ್’ ನಾಟಕದಲ್ಲಿ ಒಂದು ಪ್ರಸಂಗ ಬರುತ್ತೆ.

ನಟ್ಟ ನಡುರಾತ್ರಿ ಎದ್ದು ಲೇಡಿ ಮ್ಯಾಕ್ ಬೆತ್ ದಿಕ್ಕಿಲ್ಲದವಳ ಹಾಗೆ ಅಲೆಯಲು ಪ್ರಾರಂಭಿಸುತ್ತಾಳೆ. ಕೈಯನ್ನು ತೊಳೆದೇ ತೊಳೆಯುತ್ತಾಳೆ. ಮತ್ತೆ ಮತ್ತೆ ಕಣ್ಣ ಮುಂದೆ ಕೈ ತಂದು ನೋಡಿಕೊಳ್ಳುತ್ತಾಳೆ. ಹತಾಶಳಾಗುತ್ತಾಳೆ.

ಕೈಯಲ್ಲಿರುವ ಕಲೆಗಳು ಒಂದಿನಿತೂ ಮಾಯವಾಗಿಲ್ಲ. ಜಗದ ನೀರನ್ನು ತಂದು ತೊಳೆದರೂ ಕರಗಿಲ್ಲ. ನಿಡುಸುಯ್ಯುತ್ತಾಳೆ. ಸುಗಂಧದ್ರವ್ಯ ಪೂಸಿ ಅಂಗೈಯ ಕಲೆಯ ಕಮಟು ವಾಸನೆಯನ್ನು ಇಲ್ಲವಾಗಿಸಿಬಿಡಲು ಒದ್ದಾಡುತ್ತಾಳೆ.

ಊಹೂಂ. ಆಗುತ್ತಿಲ್ಲ. ‘ಓಹ್! ಇಡೀ ಅರೇಬಿಯಾದ ಸುಗಂಧ ದ್ರವ್ಯಗಳೂ ನನ್ನ ಕೈಗಳ ಕಲೆಯನ್ನು ತೊಳೆಯಲಾರವೇ’ ಎಂದು ಉದ್ಗರಿಸುತ್ತಾಳೆ.

ಲೇಡಿ ಮ್ಯಾಕ್ ಬೆತ್ ನಿದ್ದೆಯಲ್ಲೂ ನಿದ್ದೆ ಕಳೆದುಕೊಂಡಿದ್ದಾಳೆ. ನಿದ್ದೆಯ ಆ ನಡಿಗೆಯೂ ಅವಳು ನಡೆದ ವಿಕಾರಗಳನ್ನೇ ಮತ್ತೆ ಮತ್ತೆ ನೆನಪಿಗೆ ತರುತ್ತದೆ.

ಒಂದು ಹತ್ಯೆ, ಅದಕ್ಕಾಗಿ ಮತ್ತೊಂದು, ಅದನ್ನು ಮುಚ್ಚಿಹಾಕಲು ಮತ್ತಷ್ಟು? ಎಲ್ಲೆಡೆ ರಕ್ತ. ಕೊಂದದ್ದು ಬೇರೆಯವರಾದರೂ ರಕ್ತದ ಕಲೆ ಇವಳ ಕೈಯಲ್ಲಿದೆ. ಸಾಮ್ರಾಜ್ಯ ಮುಳುಗಿ ಹೋಗುವಷ್ಟು ಕೊಲೆಗಳು ನಡೆದುಹೋಗಿವೆ. ಅದರ ಇಡೀ ಸೂತ್ರ ಅದೇ ಅದೇ ಲೇಡಿ ಮ್ಯಾಕ್ ಬೆತ್ ಳ ಕೈಯಲ್ಲಿ.

ನಾನು ಚಿಕ್ಕವನಾಗಿದ್ದಾಗ ಪೇಪರ್ ನಲ್ಲಿ ಒಂದು ಫೋಟೋ ನೋಡಿದ್ದೆ- ಪಂಜಾಬಿನ ಮುಖ್ಯಮಂತ್ರಿಯದ್ದು. ಆತ ಅಲ್ಲಿನ ಸ್ವರ್ಣಮಂದಿರದ ಮುಂದೆ ಚಪ್ಪಲಿ ಕಾಯುತ್ತಾ ಕೂತಿದ್ದಾನೆ. ಶೂಗಳನ್ನು ತಿಕ್ಕಿ ಹೊಳಪು ಮಾಡುತ್ತಿದ್ದಾನೆ.

ಇನ್ನೊಂದು ಚಿತ್ರ ನನ್ನ ತಲೆಯಲ್ಲಿ ಕೂತಿದೆ. ಮೋನಿಕಾ ಬೇಡಿಯದ್ದು. ಅದೇ ಸ್ವರ್ಣ ಮಂದಿರದಲ್ಲಿ ಪೊರಕೆ ಹಿಡಿದು ನೆಲ ಗುಡಿಸುತ್ತಿದ್ದಾಳೆ. ಪಾತ್ರೆ ಉಜ್ಜುತ್ತಿದ್ದಾಳೆ.

ಇವರೂ ಅಷ್ಟೆ. ಕೈಯಲ್ಲಿರುವ ಕಲೆ ತೊಳೆದುಕೊಳ್ಳಲು ಯತ್ನಿಸುತ್ತಿದ್ದಾರೆ. ಲೇಡಿ ಮ್ಯಾಕ್ ಬೆತ್ ಕೈಯೂ ಕಲೆಯಿಂದ ತುಂಬಿದೆ. ಆಕೆ ಸುಗಂಧದ್ರವ್ಯ ಪೂಸಿ ಅದನ್ನು ಮರೆಮಾಚಿಕೊಳ್ಳಲು ಯತ್ನಿಸುತ್ತಿದ್ದಾಳೆ.

ಇಲ್ಲಿ ಸ್ವರ್ಣಮಂದಿರದ ಅಂಗಳದಲ್ಲಿರುವವರ ಕೈಗಳಲ್ಲೂ ಕಲೆ ಇದೆ. ಅವರು ನೆಲ ಗುಡಿಸುತ್ತಿದ್ದಾರೆ, ಚಪ್ಪಲಿ ಕಾಯುತ್ತಿದ್ದಾರೆ, ಶೂ ಉಜ್ಜುತ್ತಿದ್ದಾರೆ.

ಆಟೋದಲ್ಲಿ ಹೋಗುತ್ತಿದ್ದೆ. ಜೊತೆಗೆ ಮಗಳಿದ್ದಳು. ಯಾವ ಮೂಡ್ ನಲ್ಲಿದ್ದೆನೋ. ಅವಳ ಯಾವುದೋ ತುಂಟಾಟಕ್ಕೆ ಗದರಿಬಿಟ್ಟಿದ್ದೆ. ಅವಳ ಕಣ್ಣಾಲಿಗಳು ತುಂಬಿ ಹೋಗಿದ್ದವು. ಒಂದಿಷ್ಟು ಕುರುಹು ಬಿಟ್ಟುಕೊಡದಂತೆ ಅಪಾರವಾಗಿ ದುಃಖಿಸುತ್ತಿದ್ದಳು. ಒದ್ದಾಡಿಹೋದೆ.

ಅವಳತ್ತ ತಿರುಗಿ ‘ಸಾರಿ’ ಎಂದೆ.

ಆಡಿದ್ದು ಒಂದೇ ಒಂದು ಪದ. ಆದರೆ ಅವಳು ನೀರಾಗಿ ಹೋದಳು. ಮಿಂಚಿನಂತೆ ಎಗರಿ ನನ್ನ ಭುಜ ತಬ್ಬಿಕೊಂಡಳು. ‘ಐ ಆಮ್ ವೆರಿ ಸಾರಿ ಪಪ್ಪ’ ಅಂದಳು.

ಒಂದು ‘ಸಾರಿ’ ಇನ್ನೊಂದು ‘ಸಾರಿ’ಯನ್ನು ಪಡೆದು ನಿಂತಿತ್ತು. ಎರಡು ‘ಸಾರಿ’ ಘಟನೆಗಳನ್ನು ಸೃಷ್ಟಿಸಿದ್ದ ಇಬ್ಬರು ತಮ್ಮ ತಪ್ಪು ಅರಿತುಕೊಂಡು ಮೆತ್ತಗಾಗಿದ್ದರು. ತಪ್ಪುಗಳನ್ನು ನಿವೇದಿಸಿಕೊಂಡು ಹಗುರಾಗಿದ್ದರು.

ಒಂದು ‘ಸಾರಿ’ ಇದನ್ನು ಮಾಡಿತ್ತು.

ಆಫೀಸ್ ನಲ್ಲಿದ್ದೆ. ಏನೋ ದಿಢೀರ್ ವಿಷಯ. ಸಹೋದ್ಯೋಗಿಗಳಿಗೆ ಫೋನ್ ಮಾಡಿದೆ. ಎತ್ತುವುದು ತಡವಾಯಿತು. ಆ ಕಡೆಯ ದನಿಯಲ್ಲಿ ಏನೋ ಬೇಕಾಬಿಟ್ಟಿ ಭಾವನೆ. ಗದರಿಬಿಟ್ಟೆ.

ಆಮೇಲೆ ನನಗೇ ನಾನು ಒದ್ದುಕೊಂಡೆ. ಆತ ನಾನೇ ಆಯ್ದುಕೊಂಡು ಬಂದ ಹುಡುಗ. ಆತ ಹೇಳುತ್ತಿದ್ದ ‘ಸರ್! ನನ್ನ ದನಿ ಇರುವುದೇ ಹಾಗೆ ಸಾರ್’. ಅದು ನನಗೂ ಗೊತ್ತಿತ್ತು. ಆದರೆ ಆ ಗದರುವಿಕೆಯ ಧಿಮಾಕಿನಲ್ಲಿ ಅದು ನನ್ನ ಕಣ್ಣಮುಂದೆ ಬರುತ್ತಲೇ ಇಲ್ಲ.

ಆತ ಹೇಳಿಕೇಳಿ ಮೆತ್ತನೆಯ ಹುಡುಗ. ಆ ಕಾರಣಕ್ಕಾಗೇ ಎಲ್ಲರಿಗೂ ಇಷ್ಟವಾದ ಹುಡುಗ. ಹೌದು, ನಾನು ತಪ್ಪು ಮಾಡಿಬಿಟ್ಟೆ ಎನಿಸಿತು. ರಾತ್ರಿ ನಿದ್ದೆ ಕಳೆದುಕೊಂಡೆ.

ಮಾರನೆಯ ದಿನ ಆಫೀಸಿನಲ್ಲಿ ಎಲ್ಲರ ಮೀಟಿಂಗ್ ಕರೆದವನೇ ‘ಸಾರಿ’ ಎಂದೆ. ಬೆದರಿ ಗುಬ್ಬಚ್ಚಿಯಾಗಿ ಹೋಗಿದ್ದ ಆತನ ಮುಖ ಒಂದಿಷ್ಟೇ ಅರಳುತ್ತಾ ಹೋಗಿದ್ದು ನನಗೆ ಗೊತ್ತಾಯಿತು. ಅದಕ್ಕಿಂತಲೂ ಹೆಚ್ಚಾಗಿ ನನ್ನೊಳಗಿನ ನಾನು ಶುದ್ಧವಾಗುತ್ತಾ ಹೋಗಿದ್ದೆ.

ಅದೂ ಒಂದು ‘ಸಾರಿ’ಯಿಂದಾಗಿ.

ಆಗಿನ್ನೂ ಮದುವೆಯಾಗಿದ್ದೆ. ಬೀದಿ ಬೀದಿ ತಿರುಗುತ್ತಿದ್ದ ಕಾಲ. ಇದನ್ನು ಸಾಧ್ಯ ಮಾಡಲು ಕೈನೆಟಿಕ್ ಜೊತೆ ಇತ್ತು. ಸಿಕ್ಕಿದ್ದನ್ನು ಮುಕ್ಕಲು ಸಿಕ್ಕಲ್ಲಿ ನುಗ್ಗುತ್ತಿದ್ದೆವು.

ಹೀಗೆ ಪಾನಿ ಪೂರಿ ಉಡಾಯಿಸಿ ಸ್ಕೂಟರ್ ಹತ್ತಲು ಬಂದಾಗ ಆತ ಎದುರಾದ. ಹರಿದ ಅಂಗಿ ಚಡ್ಡಿಗಿಂತ ಅವನ ಮುಖದಲ್ಲಿ ಇನ್ನಿಲ್ಲದಷ್ಟು ಹಸಿವು ಮುದುರಿಕೊಂಡು ಬಿದ್ದಿತ್ತು. ಆತ ಪಾರ್ಕಿಂಗ್ ಫೀಸ್ ಕೇಳಿದ.

ತಕ್ಷಣ ನನ್ನ ತರ್ಕ ಎಚ್ಚರವಾಗಿ ಕೂತಿತು. ಇದು ಪಾರ್ಕಿಂಗ್ ಜಾಗ ಅಲ್ಲ. ಎರಡನೆಯದಾಗಿ ಸ್ಕೂಟರ್ ಪಾರ್ಕ್ ಮಾಡುವಾಗ ನೀನು ಇರಲೇ ಇಲ್ಲ. ನಾಟಕ ಮಾಡ್ತೀಯಾ ಅಂತ ಬೈದೆ. ಆ ಎಲ್ಲದರ ಮಧ್ಯೆಯೂ ಚಿಲ್ಲರೆಗಾಗಿ ಪರ್ಸ್ ತಡಕುತ್ತಿದ್ದ ಅವಳನ್ನೂ ಗುರ್ ಅನ್ನುವ ಕಣ್ಣಿನಿಂದ ನೋಡಿದ್ದಾಯ್ತು. ದುಡ್ಡು ಕೊಡಲು ಬಿಡಲೇ ಇಲ್ಲ.

ಅವಳು ಹೇಳುತ್ತಿದ್ದಳು: ‘ಹಾಗಲ್ಲ’ ಆತ ಹಸಿದಿದ್ದಾನೆ. ನೋಡಿದರೆ ಸಾಕು, ಬಡವ ಅನ್ನೋದು ಗೊತ್ತಾಗುತ್ತೆ. ಪಾರ್ಕಿಂಗ್ ಫೀಸ್ ಕೇಳ್ತಾ ಇದಾನೆ ಅಂತ ಯಾಕ್ ಅನ್ಕೋತೀಯಾ? ದಾನ ಅಂತಾದ್ರೂ ಕೊಟ್ಬಿಡು’. ‘ಊಹೂಂ’ ಅಂದೆ.

ಆಗ ಗೊತ್ತಾಗಿದು ಅಷ್ಟೆ. ಆದ್ರೆ ಆಮೇಲೆ ಆಮೆಲೆ ಆ ಹುಡುಗನ ಮುಖ ಒದ್ಕೊಂಡು ಬರೋಕೆ ಶುರುವಾಯಿತು. ಅವನ ಮುಖಾನಾ ಸ್ಟಡಿ ಮಾಡ್ದೆ. ಹೌದು, ಅವತ್ತು ನೋಡಿದ ಮುಖದಲ್ಲಿ ನೋವಿತ್ತು, ಹಸಿವಿತ್ತು ಅಂತ ಅನ್ನಿಸ್ತು.

ಹಸಿದವನ ಮುಂದೆ ಲಾ ಪಾಯಿಂಟ್ ಗೆ ಏನಿದೆ ಅರ್ಥ? ಯಾಕೆ ಅವತ್ತು ಲಾ ಪಾಯಿಂಟ್ ಗಟ್ಟಿಯಾಗಿ ಹಿಡಕೊಂಡು ಬಿಟ್ಟೆ ಅನಿಸ್ತು. ಅದು ಅವನ ಮುಖಾನ ಹೇಗೆ ನನ್ನ ಮುಂದೆ ಬಿಚ್ಚಿಟ್ಟಿತ್ತೋ ಹಾಗೇ ನನ್ನ ಮುಖಾನಾ ಬಿಚ್ಚಿಟ್ಟುಬಿಡ್ತು.

ಏನು ಮಾಡೋದು ‘ಸಾರಿ’ ಕೇಳ್ಬೇಕು ಅನ್ಸುತ್ತೆ. ಆದ್ರೆ ಹೇಗೆ? ಎಲ್ಲಿ ಹುಡುಕ್ಕೊಂಡು ಹೋಗ್ಲಿ? ಎಲ್ಲಿದಾನೋ? ಒದ್ದಾಡ್ತಾ ಇದೀನಿ.

ಈಗ ಬಂದ ಬಂದ ಹುಡುಗರಿಗೆ ಕೈತುಂಬಾ ಕೊಡ್ತೀನಿ. ಅವರ ಮುಖಾ ಕೂಡ ನೋಡಲ್ಲ. ಹೆದರಿಕೆ ಆಗುತ್ತೆ. ಪಾಪ ಕಳಕೊಳ್ಳೋಕೆ ಅದು ಒಂದು ದಾರಿ ಇರಬಹುದು. ಆದ್ರೆ ಆ ಹುಡುಗನಿಗೆ ‘ಸಾರಿ’ ಕೇಳ್ದೆ ಹೇಗೆ ಬದುಕ್ಲಿ ಅನ್ಸುತ್ತೆ.

ಒಂದಿನಾ ನನ್ನ ಕೊಲೀಗ್ ನ ಡ್ರಾಪ್ ಮಾಡೋಕೆ ಹೋಗಿದ್ದೆ. ನೈಟ್ ಶಿಫ್ಟ್ ಮುಗಿಸಿ ಬಹುಶಃ ರಾತ್ರಿ 3 ಗಂಟೆ. ಹೋಗಿ ಬರ್ತಿರೋವಾಗ ಏನೋ ಅಡ್ಡ ಅನಿಸ್ತು. ಗೊತ್ತಾಗ್ಲಿಲ್ಲ. ಬೀದಿ ದೀಪಾನೂ ಇರ್ಲಿಲ್ಲ ಓಡಿಸ್ಬಿಟ್ಟೆ. ತಕ್ಷಣ ‘ಕುಂಯೋ’ ಅನ್ನೋ ಅರ್ತನಾದ ಕೇಳಿಸ್ತು.

ಏನಾಯ್ತು? ಪುಟಾಣಿ ನಾಯಿ ಮರಿಗಳ ದನಿ. ನಾನು ಅದನ್ನ ಸಾಯಿಸೇಬಿಟ್ನಾ?

ಕಾರ್ ತಗೊಂಡಾಗ ಡ್ರೈವಿಂಗ್ ಕಲಿಯೋ ಟೈಮಲ್ಲಿ ಬ್ರೇಕ್ ಯಾವ್ದು ಅಂತ ಗೊತ್ತಾಗ್ದೆ ಎದುರು ನಿಂತಿದ್ದ ಹಸೂಗೆ ಡಿಕ್ಕಿ ಹೊಡ್ದೆ. ಆ ಹಸೂ ನನ್ನನ್ನ ನೋಡ್ತಲ್ಲ. ಅದು ನೋಡಿದ ಬಗೆ ನನ್ನೊಳಗೆ ಇನ್ನೂ ಇದೆ. ಹೇಗೆ ತಪ್ಪಾಯ್ತು ಅಂತ ಕೇಳೋದು?

ಇದನ್ನು ಬರೀತಾ ಬರೀತಾನೇ ನನ್ನ ಅಂಗೈನೂ ನೋಡ್ಕೊಂಡೆ. ಓಹ್! ಡಿಟೋ ಲೇಡಿ ಮ್ಯಾಕ್ ಬೆತ್ ಅಂಗೈ ಥರಾ ಆಗೋಗಿದೆ. ತುಂಬಾ ಕಲೆ ಇದೆ. ತೊಳ್ಕೊಳ್ಳೋದು ಹೇಗೆ, ಕಳ್ಕೊಳ್ಳೋದು ಹೇಗೆ ಅನ್ಸುತ್ತೆ.

ಚಿಕ್ಕಪುಟ್ಟ ವಿಷಯ ಆದ್ರೆ ಬರೆದು ಬಿಸಾಡಬಹುದು. ಆದ್ರೆ ಜೀವನವೇ ಒದ್ದಾಡಿ ಹೋಗೋ ಸಂಗತಿಗಳನ್ನು ಬರೆದು ಹೇಳೋದಾದ್ರೂ ಹೇಗೆ?

ಬದುಕು ಅನ್ನೋದು ನಿರಂತರವಾಗಿ ‘ಸಾರಿ’ ಕೇಳುತ್ತೆ. ಕೇಳೋ ಹಾಗೂ ಮಾಡುತ್ತೆ. ಆದ್ರೆ ‘ಸಾರಿ’ ಅಂತ ಕೇಳಿದ್ರೂ ನೂರೆಂಟು ಬಾರಿ ಕೇಳಿದ್ರೂ ಮಾಯ ಆಗ್ದೇ ಇರೋ ಹೊಡೆತ ಇರುತ್ತಲ್ಲ, ಅದನ್ನ ಮಾಯಿಸೋದು ಹೇಗೆ?

ಒಂದು ಕಮೋಡ್ ನಲ್ಲಿ ಬಿದ್ದರೋ ಆ ಮೊಬೈಲು, ಕದ್ದು ನೋಡಿದ ಒಂದು ಈ-ಮೇಲೂ, ಬಾಗಿಲು ಹಾಕಿಕೊಂಡು ತಡಕಾಡಿದ ಎಸ್ ಎಂಎಸ್ ಗಳು, ಎದ್ದೆದ್ದು ಕುಣಿದ ರಾಕ್ಷಸಾಕಾರದ ಆಕೃತಿಗಳು, ಕೊಳ್ಳಿದೆವ್ವಗಳಂತೆ ಕುಣಿದಾಡಿದ ವಿಷಯಗಳು ಇವೆಲ್ಲ ನಿಂತುಬಿಟ್ಟಿದೆ, ಎದೆಯೊಳಗೆ, ಮನಸ್ಸೊಳಗೆ, ಕಾಡುತ್ತೆ.

ಅದ್ರಿಂದ ಬಿಡುಗಡೆ ಪಡ್ಕೊಂಡುಬಿಡ್ಬೇಕು, ನಿರಾಳ ಆಗಿಬಿಡಬೇಕು ಅಂತೇನೂ ಅನ್ಸಲ್ಲ. ಆದ್ರೆ ಆ ಗಾಯಗಳನ್ನು ತೊಳೀಬೇಕು ಅನ್ಸುತ್ತೆ. ಮುಲಾಮು ಹಚ್ಚಬೇಕು ಅನ್ಸುತ್ತೆ. ಆದ್ರೆ ಮುಲಾಮು ಹಚ್ಚೋ ಜಾಗಗಳು ಒಂದೆರಡಾ! ಇಡೀ ದೇಹಾನೇ ಕೊಚ್ಚಿ ಹಾಕಿದಾಗ ಇಷ್ಟಕ್ಕೇ ಅಂತ ಮುಲಾಮು ಹಚ್ಚೋ ಜಾಗ ಹುಡುಕೋದಾದ್ರೂ ಹೇಗೆ?

ಅವತ್ತು ಏನೂ ಅರ್ಥ ಆಗ್ದೆ ಪಿಳಿಪಿಳಿ ಅನ್ತಿದ್ದ ಕಣ್ಣುಗಳಲ್ಲಿ ಇತ್ತಲ್ಲ, ಆತಂಕ, ಸುರಿಸ್ತಾ ಇತ್ತಲ್ಲ ಕಣ್ಣೀರು, ಅದನ್ನ ತೊಳೆದು ಹಾಕೋದು ಹೇಗೆ?

ಗಾಂಧೀಜಿ ಏನೋ ತಪ್ಪು ಮಾಡಿದ್ದರ ಬಗ್ಗೆ ಬರೆದು ಅಪ್ಪನಿಗೆ ಕೊಟ್ಬಿಟ್ರು. ಮಹಾತ್ಮ ಆಗೋ ದಾರೀಲಿ ಒಂದು ಹೆಜ್ಜೇನೂ ಹಾಕ್ಬಿಟ್ರು. ಏನು ತಪ್ಪು ಅಂತ ಮಾಡಿದ್ರು ಅವರು? ಬೀಡಿ ಸೇದಿದ್ರು, ಕದ್ದು ಸೇದಿದ್ರು.

ಬೆಂಕಿ ಬೀಡೀನ ಮಾತ್ರ ಸುಡ್ಲಿಲ್ಲ. ಜೊತೆಗೆ ಅವರನ್ನೂ ಸುಟ್ಟು ಹಾಕಿತ್ತು. ಆದ್ರೆ ನನ್ನೊಳಗೆ ಇರೋ ನಾನು ಮಾಡಿರೋ ಗಾಯಗಳಿಗೆ ಯಾರಿಗೆ ಪತ್ರ ಬರೆಯೋದು? ಎಷ್ಟು ಜನರಿಗೆ ಅಂತಾ ಬರೆಯೋದು?

‘ನಿನ್ನಂತರಗದಲ್ಲೊಂದು ನೋವು ನಾನಾಗಿ ನಿಂತುಬಿಟ್ಟೆ
ನೀನೊಪ್ಪಿಕೊಂಡ ಬಾಳ ಚಂದಿರನ
ಕಲೆಯಾಗಿ ಕೂಡಿಕೊಂಡೆ’

ಅಂತ ಆ ಕವಿ ಬರೆದಾಗ ಆತನೂ ಯಾರಿಗೋ ‘ಸಾರಿ’ ಕೇಳ್ತಿದಾನೆ ಅನಿಸ್ತು. ನಾನೂ ಒಂದು ಕಲೆಯಾಗಿ ಕೂಡಿಕೊಂಡ ಘಟನೆಗಳು ಸುರುಳಿಸುರುಳಿಯಾಗಿ ಬಿಚ್ಚಿಕೊಳ್ತಾ ಇದೆ.

ಯಾಕೋ ಇದೆಲ್ಲಾ ನೆನಪಾಗಿದ್ದು, ಆಸ್ಟ್ರೇಲಿಯಾ ಪ್ರಧಾನಿ ಶತಮಾನದ ತಪ್ಪಿಗೆ ಜನರೆದುರು ನಿಂತು ‘ಸಾರಿ’ ಅಂತ ಕೇಳಿದ್ರಲ್ಲ ಅದಕ್ಕೆ.

ಅದಕ್ಕಿಂತ ಮುಖ್ಯವಾಗಿ ಕಲ್ಪನಾ ಶರ್ಮ ಹಿಂದೂ ಪತ್ರಿಕೇಲಿ ‘ಸಾರಿ’ ಅನ್ನೋದು ದೊಡ್ಡ ಶಬ್ದ ಅಂತ ಬರೆದ್ರಲ್ಲಾ ಅದಕ್ಕೆ.

ಕೊರೊನಾ ಅಲ್ಲ, ಮಾಹಿತಿಮಾರಿಯ ರುದ್ರ ನರ್ತನ

0

ನಾಗೇಶ ಹೆಗಡೆ


‘ಝೋನರಿಸಂ’ ಎಂದರೇನು ಗೊತ್ತೆ? ಸತ್ಯವನ್ನೇ ಹೇಳಿ ದಾರಿತಪ್ಪಿಸುವುದು!
1997ರಲ್ಲಿ ಅಮೆರಿಕದ ಹೈಸ್ಕೂಲ್ ಹುಡುಗನೊಬ್ಬ ಅಂದಿನ ವಿಜ್ಞಾನ ಸ್ಪರ್ಧೆಗೆಂದು ಒಂದು ಉಪನ್ಯಾಸ ಕೊಟ್ಟ. DHMO ಎಂಬ ರಾಸಾಯನಿಕ ವಸ್ತು ಅದೆಷ್ಟು ಅಪಾಯಕಾರಿ ಎಂಬುದನ್ನು ವಿವರಿಸಿದ. ಈ ಕೆಮಿಕಲ್ ನಿಂದಾಗಿ ಅಮೆರಿಕದ ಸಾವಿರಾರು ಜನರು ಪ್ರತಿ ವರ್ಷವೂ ಸಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸಾವಿನಂಚಿಗೆ ಬಂದವರ ಕ್ಯಾನ್ಸರ್ ಗಡ್ಡೆಯಲ್ಲೂ ಅದು ಪತ್ತೆಯಾಗಿದೆ; ಆಕಾಶದಿಂದ ಸುರಿಯುವ ಆಸಿಡ್ ಮಳೆಯಲ್ಲೂ ಅದು ಕಂಡುಬಂದಿದೆ ಎಂದ.

DHMO ಸೋಂಕಿದರೆ ಕಬ್ಬಿಣ ಮತ್ತಿತರ ಕೆಲವು ಲೋಹಗಳು ಸುಟ್ಟುಹೋಗುತ್ತವೆ. ನೀವು ಅದರ ಕಣಗಳನ್ನು ನಿಷ್ಕಾಳಜಿಯಿಂದ ಸೇವಿಸಿದರೆ ಹೊಟ್ಟೆ ಉಬ್ಬರಿಸಿ ಬೆವರು ಕಿತ್ತು ಬರುತ್ತದೆ, ಮೂತ್ರವಿಸರ್ಜನೆಗೆ ಓಡಬೇಕಾಗುತ್ತದೆ.

ಅದು ನಿಮ್ಮನ್ನು ಸುಡಬಹುದು. ಅಷ್ಟೇಕೆ, ಅದರ ಹಬೆ ನಮ್ಮ ಶ್ವಾಸಕೋಶಕ್ಕೆ ತುಸು ದೊಡ್ಡ ಪ್ರಮಾಣದಲ್ಲಿ ಹೊಕ್ಕರೆ ಸಾವು ನಿಶ್ಚಿತ. ಚಟದಂತೆ ಅದನ್ನೇ ಅವಲಂಬಿಸಿದವರು, ಕೊನೆಕೊನೆಗೆ ಪೂರೈಕೆ ನಿಂತರೆ ಬದುಕುವುದೇ ಕಷ್ಟವಾಗುತ್ತದೆ. ನಮ್ಮ ದೇಶದ ಎಲ್ಲ ಕೆರೆಯಲ್ಲೂ ಅದು ಕಂಡುಬಂದಿದೆ. ಸರೋವರ, ನದಿಗಳಲ್ಲಿ ಅಷ್ಟೇ ಏಕೆ, ನಲ್ಲಿಯಲ್ಲೂ ಅದು ಪತ್ತೆಯಾಗಿದೆ….

ಅಷ್ಟೊಂದು ಬಗೆಯ ಸಾವುನೋವಿಗೆ ಕಾರಣವಾಗಬಲ್ಲ ಆ DHMO ರಸಾಯನ ಸಂಯುಕ್ತದ ಪೂರ್ಣ ಹೆಸರು dihydrogen monoxide.

ಆತ ಹೇಳಿದ್ದೆಲ್ಲವೂ ವೈಜ್ಞಾನಿಕ ಸತ್ಯವೇ ಆಗಿತ್ತು. ಅದರಲ್ಲಿ ಯಾವುದೂ ಉತ್ಪ್ರೇಕ್ಷೆ ಇರಲಿಲ್ಲ. Nathan Zohner ನಾಥಾನ್ ಝೋನರ್ ಎಂಬ ಹೆಸರಿನ ಆ ಹುಡುಗ ತನ್ನ ಉಪನ್ಯಾಸವನ್ನು 50 ವಿದ್ಯಾರ್ಥಿಗಳ ಕ್ಲಾಸಿನಲ್ಲಿ ಮಂಡಿಸಿ, ಕೊನೆಗೆ ಇಂಥ ಅಪಾಯಕಾರಿ ಕೆಮಿಕಲ್‌ಗೆ ನಿಷೇಧ ಹಾಕಬೇಕೊ ಬೇಡವೊ ಎಂದು ಪ್ರಶ್ನಿಸಿದ.
43 ಮಕ್ಕಳು (86%) ‘ನಿಷೇಧಿಸಬೇಕು’ ಎಂದರು.

ತಮಾಷೆ ಏನೆಂದರೆ, ಆ ರಸಾಯನ ಸಂಯುಕ್ತಕ್ಕೆ H2O ಅಥವಾ ಸರಳ ಇಂಗ್ಲಿಷ್ನಲ್ಲಿ ವಾಟರ್ ಎನ್ನುತ್ತಾರೆ. ಕನ್ನಡದಲ್ಲಿ ಅದು ನೀರು! ಎರಡು ಜಲಜನಕ ಮತ್ತು ಒಂದು ಆಮ್ಲಜನಕದ ಅಣುಗಳಿರುವ ಸಂಯುಕ್ತವಸ್ತು ಅದು. ಹಾಗಾಗಿ ಅದನ್ನು ಡೈಹೈಡ್ರೊಜೆನ್‌ ಮೊನಾಕ್ಸೈಡ್‌ ಎಂತಲೂ ಕರೆಯಬಹುದು.

ಈಗ ಮತ್ತೊಮ್ಮೆ ಆ ಹುಡುಗ ಹೇಳಿದ್ದೆಲ್ಲವನ್ನೂ ಓದಿ. ಅವೆಲ್ಲವೂ ಸತ್ಯ ತಾನೆ?

ಈ ನೈಜ ಘಟನೆಯ ಬಗ್ಗೆ Washington Post ಪತ್ರಿಕೆಗೆ ಜೇಮ್ಸ್ ಗ್ಲಾಸ್ಮನ್ ಎಂಬಾತ ಬರೆದ. ಸುತ್ತುಬಳಸಿದ ಸತ್ಯದ ಮಾತುಗಳಿಂದಲೇ ದಾರಿ ತಪ್ಪಿಸುವ ಅಥವಾ ತೀರ ಸುಲಭವಾಗಿ ಮೋಸಗೊಳಿಸುವ ಈ ತಂತ್ರಕ್ಕೆ ಆತ ‘ಝೋನರಿಸಂ’ ಎಂದು ಆ ಝೋನರ್ ಹುಡುಗನ ಹೆಸರನ್ನೇ ಇಟ್ಟ.

ಹಾಗೆ ನೋಡಿದರೆ, ಇದು ಝೋನರ್‌ನ ಒರಿಜಿನಲ್‌ ಕಾಪಿರೈಟ್ ಐಡಿಯಾ ಏನಲ್ಲ. 1983ರಲ್ಲಿ ಅಮೆರಿಕದ ಮಿಶಿಗನ್ ರಾಜ್ಯದ Durand Express ಎಂಬ ವಾರಪತ್ರಿಕೆಯಲ್ಲಿ ಇದು ಮೊದಲು ದಾಖಲಾಗಿತ್ತು. DHMOದಿಂದಾಗುವ ಎಲ್ಲ ಅಪಾಯಗಳನ್ನೂ ಪಟ್ಟಿಮಾಡಿತ್ತು. “…inhalation of this chemical “nearly always results in death,” ಎಂದು ಕೂಡ ಬರೆದಿತ್ತು. ಅದು ಏಪ್ರಿಲ್ 1ರ ಮೂರ್ಖರ ದಿನದಂದು ಪ್ರಕಟವಾಗಿದ್ದರಿಂದ ಜಾಣರು ಅದನ್ನೊಂದು ತಮಾಷೆ ಎಂಬಂತೆ ಓದಿಕೊಂಡರು.

ಯಾಕೊ, ಕೊರೊನಾ ಕುರಿತಂತೆ ದಿನನಿತ್ಯದ ‘ಭಯಾನಕ’ ವರದಿಗಳನ್ನು ಗ್ರಹಿಸುವಾಗಲೆಲ್ಲ ಝೋನರಿಸಂ ನೆನಪಿಗೆ ಬರುತ್ತಿದೆ. ಸತ್ಯವನ್ನು ಹೇಳುತ್ತಲೇ ಯಾರೆಲ್ಲ ನಮ್ಮ ದಾರಿ ತಪ್ಪಿಸುತ್ತಾರೆ! ವೈರಸ್ಸು, ಬ್ಯಾಕ್ಟೀರಿಯಾ ಸದಾಕಾಲ ನಮ್ಮೊಂದಿಗೆ ಇವೆ. ಉಪಕಾರಿ ವೈರಸ್‌ಗಳು ತುಂಬ ಇವೆ. ನಮ್ಮ ಕಫ, ಸಿಂಬಳದಲ್ಲೇ ಅವಿತಿರುವ ವೈರಸ್ ಬಗ್ಗೆ ಗೊತ್ತೆ? ಅದು ನಮಗೆ ಅಪಾಯ ತರಬಲ್ಲ ಬ್ಯಾಕ್ಟೀರಿಯಾಗಳನ್ನು ಅಲ್ಲೇ ಹಿಡಿದು ನುಂಗಿಹಾಕುತ್ತಿರುತ್ತದೆ. ಅದಕ್ಕೆ ಬ್ಯಾಕ್ಟೀರಿಯಾಫೇಜಿಸ್ ಎನ್ನುತ್ತಾರೆ. ಅದರ ಅರ್ಥವೇ ‘ಬ್ಯಾಕ್ಟೀರಿಯಾವನ್ನು ನುಂಗುವ’ ವೈರಸ್ ಅಂತ.

ಈಗ ಈ ನುಂಗುಬಾಕ ವೈರಸ್‌ಗಳನ್ನು (ಫೇಜಿಸ್‌ಗಳನ್ನು) ಅಷ್ಟಿಷ್ಟು ಬದಲಾಯಿಸಿ ಔಷಧವನ್ನಾಗಿ ಬಳಸಲಾಗುತ್ತಿದೆ. ಬೇರೆ ಗತಿ ಇಲ್ಲ! ಈಗೀಗ ಬಹಳಷ್ಟು ಆಂಟಿಬಯಾಟಿಕ್ ಔಷಧಗಳು ಯೂಸ್‌ಲೆಸ್ ಆಗುತ್ತಿವೆ; ಏಕೆಂದರೆ ಅವನ್ನೇ ಜಾಸ್ತಿ ಬಳಸಿ ಬಳಸಿ, ಬ್ಯಾಕ್ಟೀರಿಯಾಗಳೇ ಪ್ರತಿರೋಧ ಬೆಳೆಸಿಕೊಂಡು ಬಲಾಢ್ಯ ಆಗಿವೆ. ಅಂಥವುಗಳನ್ನು ಬಗ್ಗುಬಡಿಯಲು ಹೀಗೆ ಫೇಜಿಸ್‌ಗಳನ್ನು ದುಡಿಸಿಕೊಳ್ಳಲಾಗುತ್ತಿದೆ.

ಮಕ್ಕಳಿಗೆ ವೈರಸ್‌ಗಳು ದಾಳಿ ಮಾಡುವುದು ಒಳ್ಳೆಯದೆಂದೇ ವೈದ್ಯವಿಜ್ಞಾನಿಗಳು ಹೇಳುತ್ತಾರೆ. ಅವು ಎಳೆಯರಲ್ಲಿ ರೋಗ ನಿರೋಧಕ ಶಕ್ತಿಯನ್ನು (ರೋ.ಶ.) ಹೆಚ್ಚಿಸುತ್ತವೆ. ಮತ್ತೆ ಕೆಲವು ವೈರಸ್‌ಗಳು ನಮ್ಮ ದೇಹದೊಳಗೆ ಸೇರಿದ, ರೋಗಕಾರಕ ವೈರಸ್‌ಗಳನ್ನು ಬಗ್ಗುಬಡಿಯುತ್ತವೆ.

ಪೆಗಿವೈರಸ್ ಎಂಬುದೊಂದಿದೆ. ಅದು ನಮ್ಮೊಳಗಿದ್ದರೂ ನಮಗೆ ಏನೂ ಅಪಾಯ ಉಂಟುಮಾಡುವುದಿಲ್ಲ. ಆದರೆ ಆ ವೈರಸ್ ಇದ್ದವರಿಗೆ ಏಡ್ಸ್ ರೋಗ ಬಂದಿದ್ದರೆ ಅವರು ದೀರ್ಘ ಕಾಲ ಬದುಕುತ್ತಾರೆ ಎನ್ನುವುದು ಗೊತ್ತಾಗಿದೆ.

ರೋಗಕಾರಕ ವೈರಸ್‌ಗಳಲ್ಲಿ ತುಂಬ ಕ್ರೂರವಾದವೂ ಇವೆ. ಎಬೊಲಾ, ಝೀಕಾ ಅಂಥವು. ಆದರೆ ಕೊರೊನಾ ವೈರಸ್ ಅಷ್ಟೇನೂ ಭೀಕರ ಅಲ್ಲ. ಆರೋಗ್ಯವಂತ ವ್ಯಕ್ತಿಗಳಿಗೆ ಅದು ಜಾಸ್ತಿ ತೊಂದರೆ ಕೊಡುವುದಿಲ್ಲ. ಈಚೆಗೆ ನಮ್ಮ ದೇಶದಲ್ಲೇ ನಡೆದ ಸಮೀಕ್ಷೆಯ ಪ್ರಕಾರ ಶೇಕಡಾ 22ರಷ್ಟು ಜನರಿಗೆ ವೈರಸ್ ಬಂದು ಹೋಗಿದ್ದೇ ಗೊತ್ತಾಗಲಿಲ್ಲ. ಆದರೆ ಅವರ ರಕ್ತದಲ್ಲಿ ಬಡಿದಾಟದ ಕುರುಹುಗಳು ಕಂಡುಬಂದಿವೆ.

ಅಂಥವರ ದೇಹದಲ್ಲಿ ಕೊರೊನಾ ಥೇಟ್‌ ಬೆಕ್ಕಿನ ಮರಿಯಂತೆ ತೆಪ್ಪಗೆ ಕೂತಿರುತ್ತದೆ. ತನ್ನ ಸ್ವಭಾವವನ್ನೇ ಮರೆತು!

ಕೊರೊನಾದ ಸ್ವಭಾವ ಏನು ಹೇಳಿ? ನಮ್ಮ ಗಂಟಲು-ಮೂಗಿನಲ್ಲಿ ತುರಿಕೆ ಉಂಟುಮಾಡಿ ‘ಆಕ್ಷೀ…’ ಎಂದು ಸೀನುವಂತೆ ಮಾಡುವುದು. ಆ ಮೂಲಕ ನಮ್ಮ ದೇಹದಿಂದ ತಾನೇ ಹನಿರೂಪದಲ್ಲಿ ಸಿಡಿದು ಆಚೆಗಿನ ಇನ್ನೊಬ್ಬರ ದೇಹಕ್ಕೆ ಹೋಗುವುದು. ಹಾಗೆ ಮಾಡುವ ಮೂಲಕ ಅದು ತನ್ನ ಪ್ರಸಾರ ಸಂಖ್ಯೆಯನ್ನು (ಟಿಆರ್ಪಿಯನ್ನು ಎನ್ನಿ!) ಹೆಚ್ಚಿಸಿಕೊಳ್ಳುತ್ತದೆ.

ಗಟ್ಟಿ ಮನುಷ್ಯರಲ್ಲಿ ಹೊಕ್ಕ ಕೊರೊನಾ ಆ ಗುಣವನ್ನೇ ಕಳೆದುಕೊಂಡು ತೆಪ್ಪಗೆ ಕೂತಿರುತ್ತದೆ. ಯಾಕೊ ಗೊತ್ತಿಲ್ಲ.

ಸಾಮಾನ್ಯ ನೆಗಡಿಗೆ ಕಾರಣವಾಗುವ ಮಾಮೂಲು ವೈರಸ್ ಕೂಡ ದುರ್ಬಲರನ್ನು/ಅತಿವೃದ್ಧರನ್ನು ಬಲಿ ತೆಗೆದುಕೊಳ್ಳುತ್ತದೆ. ಪ್ರತಿ ವರ್ಷ 12-15 ಸಾವಿರ ಜನರು ಇಂಥ ಮಾಮೂಲು ನೆಗಡಿ ವೈರಸ್ಸಿನಿಂದ ಸಾಯುತ್ತಾರೆಂದು ಡಾ. ಬಿ.ಎಂ. ಹೆಗ್ಡೆ ಹೇಳುತ್ತಾರೆ. ಅಂಥ ಸಾವು ನಮ್ಮ ಸುತ್ತಮುತ್ತ ಸಂಭವಿಸಿದರೂ ನಾವು ಗಮನಿಸಿರುವುದಿಲ್ಲ ಅಷ್ಟೆ. ‘ಹುಷಾರಿರಲಿಲ್ಲ/ವಯಸ್ಸಾಗಿತ್ತು’ ಎಂದುಕೊಳ್ಳುತ್ತೇವೆ.

ಎಷ್ಟೊಂದು ಹಿರಿಯ ನಾಗರಿಕರು ಹೀಗೆ ಸಾವಪ್ಪುತ್ತಾರೆ. ಪದ್ಮಭೂಷಣ ಡಾ. ಎಚ್ ನರಸಿಂಹಯ್ಯ ಹೀಗೆಯೇ ಕಾಲವಶರಾದರು. ಶ್ವಾಸಕೋಶದ ಸೋಂಕಿನಿಂದಲೇ ಸಾವಪ್ಪಿದ ಹಿರಿಯರು ನಿಮಗೂ ಗೊತ್ತಿರಬಹುದು. ಆ ಬಗೆಯ ನೆಗಡಿಗೆ ಕಾರಣವಾಗುವುದೂ ಕೊರೊನಾ ವೈರಸ್ ಎಂತಲೇ 1980ರ ದಶಕದಲ್ಲೇ ಮಿತ್ರ ಕೊಳ್ಳೇಗಾಲ ಶರ್ಮ ‘ತರಂಗ’ದಲ್ಲಿ ಲೇಖನ ಬರೆದಿದ್ದರು. ಈಗಿನ ನಾವೆಲ್ ಕೊರೊನಾ ಅದರ ಹೊಸರೂಪ. ತುಸು ಜಾಸ್ತಿ ಅಂಟುಗುಣ ಇದಕ್ಕಿದೆ ಮತ್ತೇನಿಲ್ಲ. ಇದಕ್ಕೆ ಹೆದರಿಕೊಂಡರೆ ದೇಹದ ರೋ.ಶ. ಕಡಿಮೆಯಾಗಿ ಕೋವಿಡ್ ಉಗ್ರವಾಗುತ್ತದೆ. ಈಗ ಎಲ್ಲ ತಜ್ಞರೂ ಅದನ್ನೇ ಹೇಳುತ್ತಿದ್ದಾರೆ.

ಹೆದರಿಕೆಯನ್ನು ಹೆಚ್ಚಿಸುವ ಮಾಧ್ಯಮಗಳು ತುಸು ಜೋರಾಗಿ ‘ಝೋನರಿಸಂ’ ತಮ್ಮಟೆ ಬಾರಿಸುತ್ತಿವೆ ಎಂದು ನಿಮಗೂ ಅನ್ನಿಸುತ್ತಿಲ್ಲವೆ?

ಕೋವಿಡ್ ನಿಂದ (ಅಥವಾ ಅದರ ಭಯದಿಂದ) ತುಸು ಜಾಸ್ತಿ ಜನ ಸಾಯುತ್ತಿದ್ದಾರೆ. ನಾವೆಲ್ಲರೂ ಎಚ್ಚರವಾಗಿರಬೇಕು; ಮುಖವಾಡ ಧರಿಸಿ ಓಡಾಡಬೇಕು (ಅದರಿಂದ ವಾಯುಮಾಲಿನ್ಯದ ಪರಿಣಾಮವೂ ತಗ್ಗುತ್ತದೆ); ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು (ಅದರಿಂದ ಕ್ಯೂಗಳಲ್ಲಿನ ನೂಕು ನುಗ್ಗಲೂ ತಪ್ಪುತ್ತದೆ); ಕೈಕಾಲು ಮುಖ ತೊಳೆಯುತ್ತಿರಬೇಕು (ಅದನ್ನು ಪೂರ್ವಿಕರು ಹಿಂದೆಯೇ ಹೇಳಿದ್ದಾರೆ). ಸಣ್ಣಪುಟ್ಟ ನೆಗಡಿ-ಕೆಮ್ಮಿಗೆಲ್ಲ ಡಾಕ್ಟರ್ ಬಳಿ ಓಡುವ, ಇಲ್ಲವೆ ಆಂಟಿಬಯಾಟಿಕ್ ನುಂಗುವ ಅಭ್ಯಾಸ ಇರಬಾರದು (ಹಿಂದೆಲ್ಲ ಆ ಅಭ್ಯಾಸ ಇರಲಿಲ್ಲ). ಮನೆಯಲ್ಲೇ ವಿಶ್ರಾಂತ ಸ್ಥಿತಿಯಲ್ಲಿರಬೇಕು.

ಮನೆಯಲ್ಲೇ ಕೋವಿಡ್ ಕಾಯಿಲೆಯಿಂದ ಗತಿಸಿದವರ ಅಂಕಿಸಂಖ್ಯೆಗಳೇ ಪ್ರಕಟವಾಗುತ್ತಿಲ್ಲ; ಹಾಗೆ ಮನೆಯಲ್ಲಿ ಕೋವಿಡ್‌ನಿಂದ ಸಾಯುವವರು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಯಾಕೆ ಹೇಳಿ? ನಮ್ಮ ಆಸ್ಪತ್ರೆಗಳೆಂದರೆ ನಾನಾ ಬಗೆಯ ವೈರಸ್ಸುಗಳ, ಬ್ಯಾಕ್ಟೀರಿಯಾಗಳ ಸಂತೆ.

ಈಗ ಪ್ರಚಲಿತವಿರುವ ಅಂಕಿಸಂಖ್ಯೆಗಳ ಬಗ್ಗೆ ನನಗೆ ನಾನಾ ಬಗೆಯ ಸಂದೇಹ ಕಾಡುತ್ತಿವೆ. ನಮ್ಮ ದೇಶದಲ್ಲಿ ಕೋವಿಡ್ ನಿಂದ ಗತಿಸಿದವರ ಸಂಖ್ಯೆ 30 ಸಾವಿರ ಮುಟ್ಟುತ್ತಿದೆಯಂತೆ. ಇವರಲ್ಲಿ ಸಾಮಾನ್ಯ ನೆಗಡಿಯಿಂದ ಸತ್ತವರ (ಈ ನಾಲ್ಕು ತಿಂಗಳಲ್ಲಿ 5 ಸಾವಿರ ಜನ) ಸಂಖ್ಯೆಯನ್ನು ವಜಾ ಮಾಡಬೇಕೋ ಬೇಡವೊ?

ನಮ್ಮ ದೇಶದಲ್ಲಿ ಸರಾಸರಿ ಪ್ರತಿವರ್ಷ ಪ್ರತಿ ಸಾವಿರ ಜನರಲ್ಲಿ ಏಳು ಜನರು ಸಾಯುತ್ತಾರೆ. ಆ ಅಂದಾಜು ಲೆಕ್ಕದ ಪ್ರಕಾರ ಬೆಂಗಳೂರಿನಲ್ಲಿ ನಾಲ್ಕು ತಿಂಗಳಲ್ಲಿ ಏನಿಲ್ಲೆಂದರೂ 15-20 ಸಾವಿರ ಜನರು ಗತಿಸಿರಬೇಕು. ಅವರನ್ನೆಲ್ಲ ಬದಿಗಿಟ್ಟು ಕೊರೊನಾದಿಂದ 750 ಜನರ ಸಾವನ್ನಷ್ಟೇ ಎತ್ತಿ ಹೇಳಲಾಗುತ್ತಿದೆ. ಹಾಗಿದ್ದರೆ ಇವರೆಲ್ಲ ಬರೀ ಕೋವಿಡ್19ರಿಂದ ಸತ್ತಿದ್ದಾರೆಯೆ? ಹೃದಯಾಘಾತ, ಕಿಡ್ನಿವೈಫಲ್ಯ, ಕ್ಯಾನ್ಸರ್ ಇತ್ಯಾದಿಗಳಿಂದಾಗಿ ಗತಿಸಿದವರು ಇದರಲ್ಲಿ ಸೇರಿದ್ದಾರೆಯೆ?

ಅವರ ದೇಹದಲ್ಲಿ ಕೊರೊನಾ ಯಾವ ಹಾನಿಯನ್ನೂ ಮಾಡದೆ ಗಪ್‌ಚಿಪ್ ಕೂತಿದ್ದರೂ ಅದನ್ನೇ ಅಪರಾಧಿ ಎಂದು ಬಿಂಬಿಸಬೇಕೆ? ಅಂಥವರನ್ನೂ ಕೊರೊನಾ ‘ಮೃತ್ಯುಪಾಶ’ದಲ್ಲಿ ಬಂಧಿಸಿ, ಅನಾಥ ಶವವಾಗಿ ಬಿಸಾಕಿದ್ದು ಯಾವ ಶಕ್ತಿ ಗೊತ್ತೆ? ಇದೇ ಝೋನರಿಸಂ.

ಟಿವಿ, ಕಂಪ್ಯೂಟರ್, ಮೊಬೈಲ್ ಪರದೆಗಳ ಮೇಲೆ ಗಂಟೆಗಂಟೆಗೂ ಯಾರು ಅಂಕಿಸಂಖ್ಯೆಗಳನ್ನು ಸುರಿಯುತ್ತಿದ್ದಾರೊ, ಅವು ಎಲ್ಲಿಂದ ಬಂತೆಂತಲೂ ಯಾರೂ ಹೇಳುತ್ತಿಲ್ಲ. (ಈ ಲೇಖನದ ಆರಂಭದಲ್ಲಿ ಕೊಟ್ಟ ಕಾರ್ಟೂನನ್ನು ಮೀಮ್‌ me.me ಎಂಬ ವೆಬ್‌ಸೈಟಿನಿಂದ ಪಡೆದಿದ್ದು. ಮೀಮ್‌ ಅಂದರೆ ಮಿದುಳಿಗೆ ವಿಚಾರವೈರಸ್‌ಗಳನ್ನು ತುಂಬುವುದು).
ಅಂಕಿಸಂಖ್ಯೆ ವಿಚಾರ ಬಂದಾಗ ಕಾಝಿರಂಗಾ ಉದಾಹರಣೆ ನೋಡಿ. ಅಲ್ಲಿ ಮುಳುಗಡೆ ಆಗಿದ್ದರಿಂದ 116 ವನ್ಯಜೀವಿಗಳು, ಅದರಲ್ಲೂ 13 ಘೇಂಡಾಗಳು ಸತ್ತವೆಂದು ನಿನ್ನೆ ಟಿವಿಗಳಲ್ಲಿ ಚರ್ಚೆ ನಡೆಯಿತು. ಆದರೆ ಸತ್ತ ಪ್ರಾಣಿಗಳ ಲೆಕ್ಕ ಹೇಗೆ ಸಿಕ್ಕಿತು? ಸುಮಾರು 850 ಚದರ ಕಿ.ಮೀ. ವಿಸ್ತೀರ್ಣದ ಆ ಉದ್ಯಾನದ ಬಹುಭಾಗ ನೀರಲ್ಲಿ ಮುಳುಗಿದ್ದಾಗ ಯಾರು ಡ್ರೋನ್ ಮೇಲೆ ಹೋಗಿ ಇಷ್ಟು ಶೀಘ್ರವಾಗಿ ಅಂಕಿಸಂಖ್ಯೆಗಳನ್ನು ಎತ್ತಿ ತಂದರು? ಡ್ರೋನ್‌ನಲ್ಲಿ ಅವು ಕಾಣುತ್ತವೆಯೆ? ಎಷ್ಟು ಸಾವಿರ ಬೋಟ್‌ಗಳಲ್ಲಿ ಅದೆಷ್ಟು ಲಕ್ಷ ಮುಳುಗುವೀರರು, ಗಣತಿ ಸೈನಿಕರು ಹೋಗಿ ಸಮೀಕ್ಷೆ ಮಾಡಿದರೊ? ಯಾರೂ ಪ್ರಶ್ನೆ ಮಾಡುತ್ತಿಲ್ಲ.

ಆ ಅಷ್ಟೂ ಪ್ರಾಣಿಗಳು ಸತ್ತಿದ್ದು ಹೇಗೆ ಗೊತ್ತೆ? ನೆರೆಯಿಂದಲ್ಲ, ಝೋನರಿಸಂನಿಂದ.
ಕೊರೊನಾ ಸೋಂಕುಮಾರಿ 50 ವರ್ಷಗಳ ಹಿಂದೆ ಬಂದಿತ್ತೆಂದು ಊಹಿಸಿಕೊಳ್ಳಿ. ಆಗ ಟಿವಿ ಇರಲಿಲ್ಲ; ಕಂಪ್ಯೂಟರ್ ಇರಲಿಲ್ಲ. ಕ್ಷಣಕ್ಷಣದ ಗ್ರಾಫ್ ಇರುತ್ತಿರಲಿಲ್ಲ. ಹಾಗಾಗಿ ಈ ಮಟ್ಟದ ಸಾಮಾಜಿಕ ಗಾಬರಿ, ಪ್ರಧಾನಿಯವರ ‘ಘಂಟಾ’ಘೋಷ ಇರುತ್ತಿರಲಿಲ್ಲ; ಬಾಲ್ಕನಿದೀಪ ಇರುತ್ತಿರಲಿಲ್ಲ.

ಆಗೆಲ್ಲ ಕೊರೊನಾ ಸಾಂಕ್ರಾಮಾರಿ ತಾನೇ ಮುಸುಕು ಹಾಕಿಕೊಂಡು ಗೂಢಚಾರಿಣಿ ಥರಾ ಬರಬೇಕಿತ್ತು ತಾನೆ? ಈ ಥರಾ ಲಾಕ್‌ಡೌನ್ ಮುಚ್ಚಳ ಹಾಕೋದು, ತೆರೆಯೋದು, ಕಾರ್ಮಿಕರು ಹೌಹಾರಿ ಮನೆಯ ಹಾದಿ ಹಿಡಿಯುವುದು -ಯಾವುದೂ ಇರುತ್ತಿರಲಿಲ್ಲ.

ಮಾರಿಗೆ ಬೆದರಿ ಇಷ್ಟೊಂದು ಆತ್ಮಹತ್ಯೆಗಳು, ಹೃದಯಾಘಾತಗಳು ನಡೆಯುತ್ತಿರಲಿಲ್ಲವೇನೊ. ಹೆಚ್ಚೆಂದರೆ ಪ್ರತಿ ಮನೆಯ ಬಾಗಿಲ ಮೇಲೆ ‘ನಾಳೆ ಬಾ’ ಎಂಬ ಸೀಮೆಸುಣ್ಣದ ಬರಹ ಇರುತ್ತಿತ್ತು. ಗತಿಸಿದ ಯಾರೂ ಹೀಗೆ ಅನಾಥವಾಗಿ, statiಸ್ಟಿಕ್ಕಾಗಿ ಹೋಗುತ್ತಿರಲಿಲ್ಲ. ಏಕೆಂದರೆ ಆಗ ಝೋನರಿಸಂ ಹಾವಳಿ ಅಷ್ಟಾಗಿರಲಿಲ್ಲ.

ಈಗ ಕಾಣುತ್ತಿರುವ ವಿಕಾರಗಳೆಲ್ಲ ಮಾಹಿತಿಕ್ರಾಂತಿಯ ರುದ್ರನರ್ತನವೇ ತಾನೆ?

ಮನುಕುಲವನ್ನು ಕಂಗೆಡಿಸಿದ ನಿಜವಾದ ಸಾಂಕ್ರಾಮಿಕ ಅದು -ಮಾಹಿತಿಮಾರಿ! ಅದೇ ಇಂದು ಕೊರೊನಾ ಸುನಾಮಿಯನ್ನು ಸೃಷ್ಟಿಸಿದೆ. ಲಕ್ಷಾಂತರ ಉದ್ಯಮಗಳು ನೆಲ ಕಚ್ಚಿವೆ. ಅದೆಷ್ಟೊ ಕೋಟಿ ಮಂದಿ ನೆಲೆ ಕಳೆದುಕೊಂಡಿದ್ದಾರೆ.
ಆದರೆ ಇಲೆಕ್ಟ್ರಾನಿಕ್ ಮಾಹಿತಿ ಉದ್ಯಮ (ICT) ಮೆಡಿಕಲ್ ಉದ್ಯಮ, ಮತ್ತು ಅದರ ಬಾಲ ಹಿಡಿದು ಪ್ಲಾಸ್ಟಿಕ್ ಉದ್ಯಮ ಸಿಕ್ಕಾಪಟ್ಟೆ ಮೇಲೇಳುತ್ತಿವೆ. ಅವಕ್ಕೆ ಭುಜಬಲ ಕೊಟ್ಟಿದ್ದು ಇದೇ ಝೋನರಿಸಂ.

ಈ ಮೂರೂ ಸೇರಿ ತೋಳೇರಿಸಿ ನಮ್ಮೆಲ್ಲರ ರಕ್ಷಕನ ವೇಷ ಧರಿಸಿ ನಿಂತಿವೆ.

ಜಗತ್ತಿನ ಏಳುನೂರು ಕೋಟಿ ಜನರ ತೋಳಿಗೆ ಸೂಜಿ ಚುಚ್ಚಿದ ನಂತರವೇ ಇವು ಹೊಸವೇಷ ತೊಡಲಿವೆ.

ಶಾಸಕ ಗೌರಿಶಂಕರ್ ವಿರುದ್ಧ ತನಿಖೆಗೆ ಪ್ರಧಾನಿ ಸೂಚನೆ: ಇಕ್ಕಟ್ಟಿಗೆ ಸಿಕ್ಕ ಜೆಡಿಎಸ್

ತುಮಕೂರು; ವಿಧಾನಸಭಾ ಚುನಾವಣೆ ವೇಳೆ ತೀವ್ರ ಆರೋಪಕ್ಕೆ ಕಾರಣವಾಗಿದ್ದ ನಕಲಿ ಆರೋಗ್ಯ ವಿಮೆ ಪಾಲಿಸಿ ವಿಷಯ ಈಗ ಶಾಸಕ ಬಿ.ಸಿ.ಗೌರಿಶಂಕರ್ ಕೊರಳಿಗೆ ಉರುಳಾಗಿದೆ.
ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ತನಿಖೆಗೆ ಸೂಚನೆ ಬಂದಿದ್ದು, ಜೆಡಿಎಸ್ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಇದರ ಹಿಂದೆ ಮಾಜಿ ಶಾಸಕ ಸುರೇಶಗೌಡ ಅವರ ಸಹೋದರ ಇರುವುದು ವಿಶೇಷ.

ಚುನಾವಣೆ ಸಮಯದಲ್ಲಿ ನಕಲಿ ಗುಂಪು ಆರೋಗ್ಯ ವಿಮೆ ಬಾಂಡ್ ಗಳನ್ನು ಹಂಚಲಾಗಿದೆ. ಇದರ ಹಿಂದೆ ಶಾಸಕ ಗೌರಿಶಂಕರ್ ಅವರ ಚುನಾವಣಾ ಆಮಿಷದ ಭಾಗವಾಗಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಮಾಜಿ ಶಾಸಕ ಬಿ.ಸುರೇಶಗೌಡರ ತಮ್ಮ ರಮೇಶ್ ಬೆಟ್ಟಯ್ಯ ದೂರು ನೀಡಿದ್ದರು.
ಈ ದೂರಿನ ತನಿಖೆ ನಡೆಸುವಂತೆ ಪ್ರಧಾನಿಮಂತ್ರಿ ಕಾರ್ಯಾಲಯದಿಂದ ಮುಖ್ಯಮಂತ್ರಿ ಕಚೇರಿಗೆ ಸೂಚನೆ ಬರುತ್ತಿದ್ದಂತೆ ಹಳೆಯ ಆರೋಪಕ್ಕೆ ಜೀವ ಬಂದಂತಾಗಿದೆ.

ಈಗ ತು‌ಮಕೂರು ಗ್ರಾಮಾಂತರ ಠಾಣೆಯಲ್ಲಿ ಗೌರಿಶಂಕರ್ ವಿರುದ್ದ ವಂಚನೆ ಸೇರಿದಂತೆ ವಿವಿಧ ಅರೋಪಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ಇನ್ನೂ ನಡೆಯಬೇಕಷ್ಟೆ..

ಪ್ರಕರಣದಲ್ಲಿ ಶಾಸಕರೇ A1 ಆರೋಪಿಯಾಗಿದ್ದಾರೆ. ಒಟ್ಟು ಐವರನ್ನು ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದು, ಇನ್ನೂ ಇತರರು ಎಂದು ಸೇರಿಸಲಾಗಿದೆ. ಹೀಗಾಗಿ ತನಿಖೆಯ ಬಳಿಕ ಎಷ್ಟೆಲ್ಲ ಆರೋಪಿಗಳು ಇದ್ದಾರೆ ಎಂದು ತಿಳಿದು ಬರಲಿದೆ.

ಪಾಲಿಸಿ ನೀಡುವಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು irda ಈಗಾಗಲೇ ಪಾಲಿಸಿಗಳನ್ನು ರದ್ದುಪಡಿಸಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದ 16 ಸಾವಿರ ಮಕ್ಕಳಿಗೆ ವಿಮೆ ಬಾಂಡ್ ವಿತರಿಸಲಾಗಿದೆ ಎಂಬ ಅಂಕಿ ಅಂಶ ದೂರಿನಲ್ಲಿದೆ.
ಕ್ಷೇತ್ರದಲ್ಲಿ ನಲವತ್ತು ಸಾವಿರ ನಕಲಿ ಬಾಂಡ್ ಗಳನ್ನು ಹಂಚಲಾಗಿದೆ ಎಂದು ರಮೇಶ್ ಬೆಟ್ಟಯ್ಯ ದೂರಿನಲ್ಲಿ ಹೇಳಿದ್ದಾರೆ.

ಶಾಸಕರು ಅಷ್ಟೇ ಅಲ್ಲದೇ ಕಿಶೋರ್, ದಿ ನ್ಯೂ ಇಂಡಿಯಾ ಅಷ್ಯೂರೆನ್ಸ್ ಕಂಪೆನಿಯ ಡಿಎಂ ದೇವೇಂದ್ರ ಪ್ರಸಾದ್, ಕಮ್ಮಗೊಂಡನಹಳ್ಳಿ ಮಾರುತಿ ಸೇವಾ ಸಮಿತಿ, ಒನ್ ರೂಪಿ ಚಾರಿಟಬಲ್ ಟ್ರಸ್ಟ್, ಮೆಡಿ ಅಸಿಸ್ಟೆಂಟ್ ಕಂಪನಿಯ ಅಧಿಕಾರಿಗಳ ವಿರುದ್ಧವೂ ಎಫ್ ಐಆರ್ ದಾಖಲಿಸಲಾಗಿದೆ.

ಚುನಾವಣಾ ಅಕ್ರಮದ ಕುರಿತು ಶಾಸಕರ ವಿರುದ್ದ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಈ ವಿಷಯ ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗುತ್ತಿದೆ.

ರಮೇಶ್ ಬೆಟ್ಟಯ್ಯ ಅವರು ಮೂಲತಃ ಸಾಪ್ಟ್ ವೇರ್ ಎಂಜಿನಿಯರಾಗಿದ್ದು, ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇವರು ಅಷ್ಟೇನು ಪರಿಚಿತರಲ್ಲ. ಆದರೆ ರಾಜ್ಯದ ಶಿಕ್ಷಣ ರಂಗದಲ್ಲಿ ಇವರ ಹೆಸರು ಚಿರಪರಿಚಿತ.

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು, ಗುಣಮಟ್ಟದ ಪಾಠದ ವಿಚಾರದಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ.
ಮಾಹಿತಿ ಹಕ್ಕು ಕಾರ್ಯಕರ್ತರು ಆಗಿರುವ ಅವರು ಶಿಕ್ಷಣದ ಬಗ್ಗೆ ವಿಶೇಷ ಅಸ್ಥೆ ವಹಿಸಿದ್ದಾರೆ. ಎಲೆ‌ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಅವರು ಈ ದೂರಿನ ಮೂಲಕ ಒಮ್ಮೆಲೆ ಮುಂಚೂಣಿಗೆ ಬಂದಿದ್ದಾರೆ.

ಕೊರೊನೋ ಸೋಂಕಿಗೆ ವ್ಯಕ್ತಿ ಬಲಿ

ತುಮಕೂರು

ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಲ್ಕೆರೆ ಗ್ರಾಮದ 57 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇದರಿಂದ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಎರಡನೇ ಪ್ರಕರಣ ಇದಾದಂತಾಗಿದೆ.

ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಈ ವೇಳೆ ಚಿಕಿತ್ಸೆ ನೀಡುವ ಮುನ್ನವೇ ಸಾವನ್ನಪ್ಪಿದರು. ವ್ಯಕ್ತಿಯ ಸ್ವಾಬ್ ಟೆಸ್ಟ್ ಮಾಡಿದ ವೇಳೆ ಸೋಂಕಿರುವುದು ದೃಢಪಟ್ಟಿದೆ.

ಮುಂಜಾಗ್ರತಾ ಕ್ರಮವಾಗಿ ಸೋಂಕು ಹರಡದಂತೆ ಮರಣಹೊಂದಿದ ವ್ಯಕ್ತಿಯ ಅಂತ್ಯಸಂಸ್ಕಾರವನ್ನ ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯೇ ನಡೆಸಿದ್ದಾರೆ.

ಕೊರಟಗೆರೆ ತಾಲ್ಲೂಕಿನಲ್ಲಿ ಕಳೆದ ಹತ್ತು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದರು.‌ ಇದು ಎರಡನೇ ಪ್ರಕರಣವಾಗಿದೆ.

ತುಮಕೂರು, ಕುಣಿಗಲ್, ಕೊರಟಗೆರೆಯಲ್ಲಿ ಕೊರೊನಾಗೆ ಬಲಿ:991ಕ್ಕೇರಿದ ಸೋಂಕು

Publicstory


ತುಮಕೂರು: ಜಿಲ್ಲೆಯಲ್ಲಿ ಕೊರೊನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಜನರ ನಿದ್ದೆಗೆಡಿಸಿದೆ. ಇಂದು ತುಮಕೂರು ನಗರದಲ್ಲಿ 22 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ 59 ಪಾಸಿಟೀವ್ ಪ್ರಕರಣಗಳು ದೃಢಪಟ್ಟಿವೆ.

ಮಧುಗಿರಿಯಲ್ಲಿ 8, ಗುಬ್ಬಿ ತಾಲೂಕಿನಲ್ಲಿ 7, ತಿಪಟೂರು ತಾಲೂಕಿನಲ್ಲಿ 7 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ತುರುವೇಕೆರೆ ಮತ್ತು ಕುಣಿಗಲ್ ತಾಲೂಕುಗಳಲ್ಲಿ ತಲಾ 5 ಪ್ರಕರಣಗಳು ಪತ್ತೆಯಾಗಿವೆ.

ಚಿಕ್ಕನಾಯಕನಹಳ್ಳಿ 2, ಸಿರಾ, ಪಾವಗಡ ಮತ್ತು ಕೊರಟಗೆರೆಯಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿದೆ.

ಗಂಗೋತ್ರಿ ನಗರದ 70 ವರ್ಷದ ವ್ಯಕ್ತಿ ಕೊರೊನಕ್ಕೆ ಬಲಿಯಾಗಿದ್ದಾರೆ. ಕೊರಟಗೆರೆ ತಾಲೂಕು ಕಲ್ಕರೆ ಗ್ರಾಮದ 68 ವರ್ಷದ ವ್ಯಕ್ಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಕುಣಿಗಲ್ ನ ಹೌಸಿಂಗ್ ಬೋರ್ಡ್ ಬಡಾವಣೆಯ 75 ವರ್ಷದ ವ್ಯಕ್ತಿ ಮರಣ ಹೊಂದಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಾಗೇಂದ್ರಪ್ಪ ತಿಳಿಸಿದ್ದಾರೆ.
ಕೊರೊನಾಗೆ ಮೂರು ಬಲಿಯಾಗಿ 991ಕ್ಕೆ ಏರಿಕೆಯಾಗಿದೆ.

ತಂಗಿಗೆ ಕೊಟ್ಟ ಪೆನ್ಸಿಲ್

ಜಿ ಎನ್ ಮೋಹನ್


ಬರ್ಥ್ ಡೇ ಬಂತು ಅಂದ್ರೆ ಸಾಕು ನನಗೆ ಬರ್ಥ್ ಡೇ ಮಾಡಿಕೊಳ್ಳುವವರಿಗಿಂತ ಸಂಭ್ರಮ.

ಅವರಿಗೆ ಏನು ಗಿಫ್ಟ್ ಕೊಡಬೇಕು. ಯಾವ ಗಿಫ್ಟ್ ಅವರಿಗೆ ಇಷ್ಟ ಆಗುತ್ತೆ, ಯಾವ ಗಿಫ್ಟ್ ಅವರ ಊಹೆಗೂ ಮೀರಿರುತ್ತೆ ಅಂತ. ಯಾವ ಅಂಗಡೀಲಿ ತಗೋಬೇಕು, ಹೇಗೆ ಅವರಿಗೆ ಆ ದಿನ ಬೆಳ್ಳಂಬೆಳಗ್ಗೇನೇ ಮುಟ್ಟಿಸಬೇಕು, ಹೇಗೆ ಅವರ ಕಣ್ಣು ಬಿಟ್ಟ ತಕ್ಷಣದ ಮೊದಲ ಗಿಫ್ಟ್ ನನ್ನದಾಗಬೇಕು ಅಂತೆಲ್ಲಾ ಯೋಚಿಸ್ತೀನಿ. ಅಷ್ಟೇ ಅಲ್ಲ, ತಲೆ ಮೇಲೆ ತಲೆ ಬೀಳ್ಲಿ ಅದನ್ನ ಮಾಡೇ ಮಾಡ್ತೀನಿ.

ಒಂದು ಮೊಬೈಲ್ ಕೊಟ್ರೆ, ಒಂದು ಐಪಾಡ್ ಕೊಟ್ರೆ ಅದು ತುಂಬಾ ಕಾಸ್ಟ್ಲೀದು ಅನ್ನೋ ಒಂದೇ ಕಾರಣಕ್ಕೆ ಖುಷಿ ಆದ್ರೆ ನನಗೇನೂ ಅದು ಕಿಕ್ ಕೊಡೋಲ್ಲ. ಆದ್ರೆ ಅದು ಅವರಿಗೆ ಬೇಕು ಅನಿಸಿರಬೇಕು. ಅದು ಇದ್ರೆ ಎಷ್ಟು ಚೆನ್ನಾಗಿರುತ್ತೆ ಅನ್ನಿಸಿರಬೇಕು. ಇಲ್ಲಾ ಅಂದ್ರೆ ಇಂಥದ್ದು ಸಿಗುತ್ತೆ ಅಂತ ಗೊತ್ತೇ ಆಗಿರಬಾರದು ಅಂಥಾ ಟೈಮಲ್ಲಿ ಅಂತಹ ಗಿಫ್ಟ್ ಕೊಡಬೇಕು.

ಇತ್ತೀಚೆಗೆ ಒಂದು ಬರ್ಥ್ ಡೇ ಬಂತು. ಸದಾ ಹಾಡು ಅಂದ್ರೆ ಸಾಕು ಮೈಮರೆಯೋಳಿಗೆ ಐಪಾಡ್ ಅಲ್ಲದೆ ಇನ್ನಾವುದು ಬೆಸ್ಟ್ ಗಿಫ್ಟ್? ನನ್ನ ತಿಂಗಳ ಖರ್ಚು ವೆಚ್ಚದ ಲೆಕ್ಕಾಚಾರ ಎಲ್ಲಾ ಮೀರಿ ಸ್ವಲ್ಪ ಕೈ ದೊಡ್ಡದು ಮಾಡಿ ಸಾವಿರಾರು ರೂಪಾಯಿ ಐಪಾಡ್ ಗೆ ಸುರಿದೇಬಿಟ್ಟೆ. ಆದ್ರೆ ಆ ಗಿಫ್ಟ್ ಕೊಟ್ಟಾಗ ಆ ಜೋಡಿ ಕಣ್ಣು ಅರಳ್ತಲ್ಲಾ? ಅದನ್ನ ನೋಡಿಯೇ ಅನುಭವಿಸಬೇಕು. ಓಹ್! ಇಟ್ ಇಸ್ ಗ್ರೇಟ್.

ಈ ಥರಾನೇ ಕಣ್ಣು ಅರಳಿದ ಆ ಘಟನೇನೂ ಇನ್ನೂ ಚೆನ್ನಾಗಿ ನೆನಪಿದೆ. ಏಳನೇ ಕ್ಲಾಸ್ ಮುಗಿಸಿ ಎಂಟಕ್ಕೆ ಕಾಲಿಟ್ಟಿದ್ದೆ. ಏಳನೇ ಕ್ಲಾಸ್ ನವರೆಗೆ ಮನೆ ಹತ್ತಿರಾನೇ ಇರೋ ಸ್ಕೂಲು. ಆಮೇಲೆ ದೂರದ ಸ್ಕೂಲು ಅನ್ನೋದು ನಮ್ಮನೇಲಿ ಜಾರೀಲಿದ್ದ ಅಘೋಷಿತ ಸೂತ್ರ.

ಒಳ್ಳೆ ಸ್ಕೂಲು ಆಗ್ಬೇಕು, ಎಷ್ಟು ದೂರ ಆದ್ರೇನು ಅನ್ನೋದು ನಮ್ಮಪ್ಪನ ಲಾಜಿಕ್. ಇದರ ಜೊತೆಗೆ ಬಸ್ ಹತ್ತಿ ಬಸ್ ಇಳಿದು ಓಡಾಡ್ತಾ ಇದ್ರೆ ತಮ್ಮನ್ನೇ ಸಂಭಾಳಿಸಿಕೊಳ್ಳೋದು ಕಲೀತಾರೆ ಅನ್ನೋದು ಮನಸ್ಸಲ್ಲಿ ಇತ್ತೇನೋ. ಅಂತೂ ನಾನೂ ಸಹ ದೂರದ ಸ್ಕೂಲ್ ಸೇರ್ಕೊಂಡೆ.

ಎರಡು ಬಸ್ ಹಿಡಿದು ಹೋಗಬೇಕಾದ ದೂರ ಅದು. ಬಸ್ ಪಾಸ್ ಮಾಡಿಸ್ಲೇ ಬೇಕಲ್ವಾ? ಎರಡು ಬಸ್ ಗೆ ಪಾಸ್ ಮಾಡ್ಸಿದ್ರು. ಓಡಾಡ್ತಾ ಇದ್ದೆ. ಹೈಸ್ಕೂಲ್ ಅನ್ನೋದು ಇದೆಯೆಲ್ಲಾ, ಅದರಲ್ಲೂ ಬಸ್ಸಲ್ಲಿ ಓಡಾಡೋ ಅಂತ ದೂರದ ಹೈಸ್ಕೂಲ್ ಇರುತ್ತಲ್ಲಾ ಅದು ಬಿಚ್ಚಿಡೋ ಜಗತ್ತೇ ಬೇರೆ.

ಎರಡು ಬಸ್ ಹತ್ತಿ ಹೋಗಿ ಬರೋವಾಗ ಎಷ್ಟೊಂದು ಟೈಮ್ ಇರುತ್ತೆ. ಸಿಕ್ಕಾಪಟ್ಟೆ ಹರಟೆ ಹೊಡೀತೀವಿ, ಕ್ಲಾಸಿಗೆ ಚಕ್ಕರ್ ಹಾಕಿದ್ರೆ ಹೆಂಗೆ ಅಂತ ಹೇಳೋರು ಇರ್ತಾರೆ. ಪಕ್ಕದ ಯಾವುದೋ ಸ್ಕೂಲ್ ಗೆ ಹೋಗೋ ಹುಡುಗೀನ ನೋಡಿದ ತಕ್ಷಣ ಅವರು ಹೆಂಗೆ ಅಂತ ಕೇಳೋರು ಇರ್ತಾರೆ. ಸ್ಕೂಲ್ ನಲ್ಲಿ ಆದ್ರೆ ಅದೇ ಕ್ಲಾಸು ಅದೇ ಹುಡುಗರು.

ಆದ್ರೆ ಬಸ್ ನಲ್ಲಿ ಆದ್ರೆ ಎಷ್ಟೊಂದು ಸ್ಕೂಲು, ಎಷ್ಟೊಂದು ಕ್ಲಾಸು, ಎಷ್ಟೊಂದು ಹುಡುಗರು! ಒಳ್ಳೇವ್ರು, ಕಟ್ಟವರು, ಒಳ್ಳೇವ್ರಾ ಕೆಟ್ಟವ್ರಾ ಗೊತ್ತೂ ಆಗದ ಹಾಗಿರೋರು…

ಹೀಗೆ ಬಸ್ಸಲ್ಲಿ ಹೋಗೋವಾಗ್ಲೇನೇ ಅದು ಕಣ್ಣಿಗೆ ಬಿದ್ದದ್ದು. ದೊಡ್ಡ ನಟರಾಜ ಪೆನ್ಸಿಲ್.

ಪೆನ್ಸಿಲ್ ಅಂದ್ರೆ ಹೆಂಗಿರುತ್ತೆ? ಎಲ್ಲಾ ಒಂದೇ ಥರಾ. ಒಂದೇ ಸೈಜು. ಆದ್ರೆ ಆ ಪೆನ್ಸಿಲ್ ಇತ್ತಲ್ಲ, ನನಗಂತೂ ಆ ಕಾಲಕ್ಕೆ ಅದು ಕುತುಬ್ ಮಿನಾರ್ ಅನಿಸಿಬಿಟ್ಟಿತ್ತು. ಎಷ್ಟು ದಪ್ಪ, ಎಷ್ಟು ಉದ್ದ, ಕೈಯಲ್ಲಿ ಹಿಡಿಯೋಕ್ಕಾದ್ರೂ ಆಗುತ್ತಾ? ಉಹುಂ? ಬಸ್ ನಲ್ಲಿ ಅದನ್ನ ಯಾರ ಹತ್ರಾನೋ ನೋಡಿದ ನನಗೆ ಅದರದೇ ಗುಂಗು ಹತ್ತಿತ್ತು.

ಅದನ್ನ ಹಿಡಕೊಳ್ಳೋದು ಹೆಂಗಪ್ಪಾ? ಅದು ಸರಿ, ಅದನ್ನ ಮೆಂಡ್ ಮಾಡೋದು ಹೇಗೆ? ಆಕಸ್ಮಾತ್ ಸೀಸ ಮುರಿದು ಹೋಯ್ತಪ್ಪಾ ಆಗ ಅದನ್ನ ಮತ್ತೆ ಹೆರೆಯೋದು ಹೇಗೆ? ಹಿಂಗೆ ಮಲಗಿದ್ದಾಗಲೂ ಇದೇ ಯೋಚನೆ.

ಆವಾಗ್ಲೇ ಬಂತು ನೋಡಿ ನನ್ನ ತಂಗಿ ಹುಟ್ಟಿದ ಹಬ್ಬ. ಅವಳೋ ಆರನೇ ಕ್ಲಾಸು. ನಾನು ಎಂಟು ಆದ್ರೂ ನನಗೆ ಬರ್ಥ್ ಡೇ ಗಿಫ್ಟ್ ಕೊಡಬೇಕು ಅನಿಸ್ತು. ಗಿಫ್ಟ್ ಮಾಡಿದ್ರೆ ಆ ನಟರಾಜ ಪೆನ್ಸಿಲ್ಲೇ ಮಾಡ್ಬೇಕು ಅನ್ನಿಸ್ತು.

ಗಿಫ್ಟ್ ಮಾಡೋ ಐಡಿಯಾ ಏನೋ ಸರಿ. ಆದ್ರೆ ಅದಕ್ಕೆ ದುಡ್ಡು ಹೊಂಚೋದು ಎಲ್ಲಿಂದ? ಆವಾಗ ನಮ್ಮ ಕೈಲಿ ದುಡ್ಡು ಅಂತ ಓಡಾಡ್ತಾ ಇದ್ದದ್ದೇ ಸ್ಕೂಲ್ ಆರಂಭ ಆಗಿ ಇನ್ನೂ ಪಾಸ್ ಮಾಡಿಸ್ದೇ ಇದ್ದಾಗ. ಬಸ್ ಚಾರ್ಜ್ ಅಂತ ಕೊಡ್ತಾ ಇದ್ದದ್ದು ಮಾತ್ರ. ಅದೂ ಒಂದೆರಡು ದಿನ. ಏನ್ಮಾಡೋದು ಅನ್ನೋ ಚಿಂತೆಗೆ ಬಿದ್ದೆ. ಗಿಫ್ಟ್ ಕೊಡೋ ಐಡಿಯಾ ಮಾತ್ರ ಮಾಯ ಆಗ್ಲಿಲ್ಲ.

ಆಗಲೇ ನನಗೆ ಸ್ವರ್ಗದ ಬಾಗಿಲು ತೆರೆದಿದ್ದು. ನಾನು ಬಸ್ಸಲ್ಲಿ ಬರ್ತಾ ಇರೋವಾಗ ಮಾರ್ಕೆಟ್ ಬಸ್ ಸ್ಟಾಪ್ ನಲ್ಲಿ ನನ್ನ ಫ್ರೆಂಡ್ ಕ್ಯೂನಲ್ಲಿ ನಿಂತಿದ್ದ. ಯಾಕಪ್ಪಾ ಅನಿಸ್ತು. ನಾವೆಲ್ಲಾ ಸ್ಕೂಲ್ ಮುಂದೇನೇ ಇರೋ ಬಸ್ ಸ್ಟಾಪ್ ನಲ್ಲಿ ನಿಂತ್ರೆ ಇವನು ಇಷ್ಟು ದೂರ ಸ್ಟಾಪ್ ನಲ್ಲಿ ನಿಂತಿದಾನೆ.

ಮಾರನೇ ದಿನಾ ಕ್ಲಾಸಲ್ಲಿ ‘ಯಾಕೋ’ ಅಂತ ಕೇಳಿದೆ. ಸ್ಕೂಲ್ ಹತ್ರ ಹತ್ತಿದ್ರೆ ಎರಡು ಬಸ್ ಹೀಡೀಬೇಕು. ಅದರ ಬದಲು ಬಸ್ ಹತ್ತೋಕೆ ಮುಂಚೆ ಎರಡು ಸ್ಟಾಪ್, ಇಳಿದ ಮೇಲೆ ಎರಡು ಸ್ಟಾಪ್ ನಡೆದ್ರೆ ಒಂದೇ ಬಸ್ ಸಾಕು ಅಂದ.

ಯುರೇಕಾ! ಅಂತ ನಾನು ಕೂಗೋದೊಂದೇ ಬಾಕಿ.

ಒಂದೇ ಬಸ್ ಅಂದ್ರೆ ಬಸ್ ಚಾರ್ಜ್ ಉಳಿಯುತ್ತೆ. ಅಪ್ಪ ಯಾವಾಗ್ಲೂ ಕೊಡೋ ಹಾಗೆ ಬಸ್ ಚಾರ್ಜ್ ಕೊಟ್ರೆ ತಗೊಳ್ಳೋದು. ಒಂದೇ ಬಸ್ ಗೆ ಪಾಸ್ ಮಾಡಿಸೋದು. ಉಳಿದ ದುಡ್ಡು ಕೂಡಿ ಹಾಕಿ ಗಿಫ್ಟ್ ತಗೊಳ್ಳೋದು. ಅಬ್ಬಬ್ಬಾ ಅಂದ್ರೆ ನಡೀಬೇಕಾಗುತ್ತೆ. ನಡೆದರೆ ಆಯ್ತು ಬಿಡು ಅಂತ ನಿರ್ಧಾರ ಮಾಡಿಬಿಟ್ಟೆ.

ವಾಹ್! ಎಲ್ಲಾ ಪ್ಲಾನ್ ಮಾಡಿದ ಹಾಗೇ ಕರೆಕ್ಟ್ ಆಗಿ ಆಯ್ತು. ಗಲ್ಲಿ ಗಲ್ಲಿ ಹುಡುಕಿ ಆ ಫ್ರೆಂಡ್ ಹತ್ರ ವಿಚಾರಿಸಿ ಆ ದೊಡ್ಡ ನಟರಾಜ ಪೆನ್ಸಿಲ್ ತಗೊಂಡೆ. ಅದನ್ನ ತಂದು ನನ್ನ ತಂಗಿಗೆ ಕೊಟ್ಟಾಗ ಆಯ್ತಲ್ಲಾ ಸಂತೋಷ.. ಈಗ್ಲೂ ಮರೆಯಕ್ಕಾಗಲ್ಲ!

ಪಟಾರ್! ಅಂತ ಏಟು ಬಿತ್ತು.

ಏನಾಯ್ತು ಅಂತ ನೋಡೋದ್ರೊಳಗೆ ಬೆನ್ನಿಗೆ ಇನ್ನೊಂದು ಗುದ್ದು ಬಿತ್ತು. ಅಯ್ಯೋ ಅಂತ ಕಿರುಚಿಕೊಂಡು ಎದ್ದೇಳೋ ಅಷ್ಟೊತ್ತಿಗೆ ಕಪಾಳಕ್ಕೆ ಬಿತ್ತು. ಅಪ್ಪ ಮುಖಮೂತಿ ನೋಡದೆ ಗುದೀತಾ ಇದ್ರು. ಎದ್ದರೆ ಒಂದು, ಬಿದ್ದರೆ ಒಂದು ಬೀಳ್ತಾನೇ ಇತ್ತು.

ಎಡವಟ್ಟಾಗಿ ಹೋಗಿತ್ತು. ಹಿಂದಿನ ದಿನ ಬರ್ತಾ ಇರೋವಾಗ ವಾಕಿಂಗ್ ಗೆ ಹೊರಟಿದ್ದ ಅಪ್ಪ ನಾನು ನಡೆದು ಒರ್ತಾ ಇದ್ದಿದ್ದನ್ನ ನೋಡಿಬಿಟ್ಟಿದ್ರು. ಯಾವುದೋ ದಿಕ್ಕಲ್ಲಿ ಬರಬೇಕಾದವನು ಇನ್ನಾವುದೋ ದಿಕ್ಕಲ್ಲಿ ಬರ್ತಾ ಇದಾನಲ್ಲಾ ಅಂತಾ ನಾನು ಮಲಗಿದ ಮೇಲೆ ಬ್ಯಾಗ್ ಜಾಲಾಡಿದ್ರು,

ಜಾಮಿಟ್ರಿ ಬಾಕ್ಸ್ ನಲ್ಲಿ ಇಟ್ಟಿದ್ದ ಪಾಸ್ ಸಿಕ್ಕಿಹಾಕಿಕೊಂಡುಬಿಟ್ಟಿತ್ತು. ಅಪ್ಪ ಕೊಟ್ಟಿದ್ದ ದುಡ್ಡಿಗೂ ಪಾಸ ನಲ್ಲಿದ್ದ ಅಮೌಂಟ್ ಗೂ ತಾಳೇನೇ ಇರಲಿಲ್ಲ.

ಮಾರನೆಯ ದಿನ ಎದ್ದೇಳ್ತಿದ್ದ ಹಾಗೇನೇ ಗುದ್ದು ಬೀಳಲಿಕ್ಕೆ ಶುರುವಾಗಿತ್ತು.

‘ಬೊಗಳು ಏನ್ಮಾಡ್ದೆ? ಉಳಿದ ದುಡ್ಡು ಎಲ್ಲಿ ತಿಂದು ಹಾಕಿದೆ’ ಅಂತಾ ಅಪ್ಪ ಗುದೀತಾನೇ ಇದ್ರು. ಆದ್ರೆ ನಾನಂತೂ ಕಮಕ್ ಕಿಮಕ್ ಅನ್ನಲಿಲ್ಲ. ಗಿಫ್ಟ್ ಕೊಟ್ಟೆ ಅಂದ್ರೆ ಯಾರು ನಂಬ್ತಾರೆ? ಅವರಿಗೂ ಗುದ್ದಿ ಗುದ್ದಿ ಸಾಕಾಗಿ ಹೋಯಿತು.

ಬಗ್ಗೂ ಪಾವನಾ ಅಂದ್ರು. ಅದೋ ನನಗಂತೂ ಯಮಯಾತನೆಯ ಶಿಕ್ಷೆ. ಬಗ್ಗಿಕೊಂಡು ಕಿವಿ ಹಿಡಕೊಳ್ಳೋದು. ಶಾಲೆಗೆ ಹೋಗೋ ಹಾಗಿಲ್ಲ ಎಂದರು. ಊಟ ಹಾಕ್ಬೇಡ ಅಂತ ಅಮ್ಮನಿಗೆ ತಾಕೀತು ಮಾಡಿದ್ರು. ನಾನಂತೂ ಉಸಿರು ಹಿಡಿದು ಎಲ್ಲಾ ಅನುಭವಿಸ್ತಿದ್ದೆ. ಬಾಯಿ ಮಾತ್ರ ಬಿಡ್ಲಿಲ್ಲ.

ಆದ್ರೆ, ಆದ್ರೇನು? ಎಷ್ಟೇ ಏಟು ಬೀಳಲಿ, ಆ ಗಿಫ್ಟ್ ತಂದು ಕೊಟ್ಟಾಗ ತಂಗಿ ಕಣ್ಣು ಹೊಳೀತಲ್ಲ, ಅದರ ಮುಂದೆ ಇದು ಯಾವ ಲೆಕ್ಕಾ?

ಈಗ ಕ್ಯಾಮೆರಾ. ಐಪಾಡ್, ಲಿಯೋ ಟಾಯ್ಸ್ ಏನೇನೋ ತರ್ತೀನಿ. ಆದ್ರೆ ಆ ಎರಡು ಸ್ಟಾಪ್ ನಡೆಯೋಲ್ಲವಲ್ಲ.. ಆ ಪೆನ್ಸಿಲ್ ತರೋಲ್ವಲ್ಲ.. ಇನ್ನೇನಿದೆ ಮಜಾ?

ತುಮಕೂರಿಗೆ ಕೊರೊನಾ ಬರಸಿಡಿಲು: 5 ಸಾವು, ಸಾವಿರಕ್ಕೆ ಕೈ ಚಾಚಿದ ಸೋಂಕು

Publicstory. in


ತುಮಕೂರು: ಜಿಲ್ಲೆಗೆ ಕೊರೊನಾ ಬರಸಿಡಿಲು ಬಡಿದಿದ್ದು, ಗುರುವಾರ ಒಂದೇ ದಿನ ಐದು ಜನರು ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಇದೇ ಮೊದಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಸಾವಿಗೀಡಾಗಿದ್ದು, ಜನರ ವಿಶ್ವಾಸದ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ.

ಜಿಲ್ಲೆಯಲ್ಲಿ ಒಂದೇ ದಿನ 67 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 931ಕ್ಕೆ ಏರಿಕೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಸಾವಿರವನ್ನು ಮೀರಿ ಹೋಗಲಿದೆ ಎಂದು ಹೇಳಲಾಗುತ್ತಿದೆ.

ತುಮಕೂರಿನಲ್ಲಿ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 26 ಜನರಿಗೆ ದೃಢಪಟ್ಟಿದೆ.

ಉಳಿದಂತೆ, ಗುಬ್ಬಿಯಲ್ಲಿ 9, ಪಾವಗಡದಲ್ಲಿ 6, ಶಿರಾದಲ್ಲಿ 4, ತಿಪಟೂರಿನಲ್ಲಿ 2, ಮಧುಗಿರಿ ತಾಲ್ಲೂಕಿನಲ್ಲಿ 7, ತುರುವೇಕೆರೆಯಲ್ಲಿ 5 ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.

ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹಾಗೂ ಚಿನ್ನನಾಯಕನಪಾಳ್ಯ ಸೇರಿ ಮೂವರಿಗೆ ಒಂದೇ ದಿನ ಕೊರೊನಾ ಸೊಂಕು ದೃಢಪಟ್ಟಿದೆ.

ಸಿ.ಎಸ್.ಪುರದಲ್ಲಿ ಮಹಿಳೆಗೆ ಹಾಗೂ ಚಿಣ್ಣನಾಯಕನಪಾಳ್ಯದಲ್ಲಿ ಅಪ್ಪ ಮಗನಿಗೆ ಇಬ್ಬರಿಗೆ ಸೋಂಕು ತಗುಲಿದೆ.

ಚಿಣ್ಣನಾಯಕನಪಾಳ್ಯವನ್ನು ಪಂಚಾಯತಿ ಅಧಿಕಾರಿಗಳು ಸೀಲ್ಡ್ ಡೌನ್ ಮಾಡಿದರು.

ಬೆಂಗಳೂರಿನ ಕೊರೊನಾ ಸೋಂಕಿತರೊಂದಿಗೆ ಇವರ ಸಂಪರ್ಕದ ಕಾರಣ ಸೋಂಕು ಕಾಣಿಸಿದೆ ಎನ್ನಲಾಗಿದೆ.

ನಿಧಾನವಾದ ವರದಿ: ಅಸಮಾಧಾನ: ಸೋಂಕಿತರ ಸ್ವ್ಯಾಬ್ ಮಾದರಿಯನ್ನು ಹತ್ತು ದಿನಗಳ ಹಿಂದೆಯೇ ಪಡೆಯಲಾಗಿತ್ತು. ಆದರೆ ಇಷ್ಟು ತಡವಾಗಿ ವರದಿ ಬಂದಿದೆ.

ಸೋಂಕಿತರ ಸಾಮಾನ್ಯರಂತೆಯೇ ಇದ್ದರು. ಹೀಗಾಗಿ ಗ್ರಾಮದಲ್ಲಿರುವ ಜನರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.