Saturday, May 9, 2026
Google search engine
Home Blog Page 190

ತುಮಕೂರಿನಲ್ಲಿ 600ರ ಗಡಿ ಮುಟ್ಟಿದ ಕೊರೊನಾ ಸೋಂಕಿತರು; ಮಹಿಳೆ ಸಾವು

ತುಮಕೂರು; ಜಿಲ್ಲೆಯಲ್ಲಿ ಬುಧವಾರ 32 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 597 ಆಗಿದೆ.

ತುಮಕೂರು ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ನಗರದ ನಾಗರಿಕರನ್ನು ಭಯಭೀತರಾಗಿಸಿದೆ. ಒಂದೇ ದಿನ 17‌ಮಂದಿಗೆ ಸೋಂಕು ತಗುಲಿದೆ.

ಇದನ್ನು ಓದಿ:ಕೊರೊನಾ: ತುಮಕೂರು ಜಿಲ್ಲಾಡಳಿತಕ್ಕೆ ಪ್ರಶ್ನೆಗಳಿವೆ ಎಂದ ಮಂಜುನಾಥ್

ತುಮಕೂರು ತಾಲ್ಲೂಕಿನ ಚಿಕ್ಕಸಾರಂಗಿಯ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ.

ಮಧುಗಿರಿಯಲ್ಲಿ ಎಂಟು, ಚಿಕ್ಕನಾಯಕನಹಳ್ಳಿಯಲ್ಲಿ ಏಳು ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ಹರಡಿದಿದೆ.

ಕೊರೊನಾ ನಿಯಂತ್ರಣ: ತುಮಕೂರು ಜಿಲ್ಲಾಡಳಿತಕ್ಕೆ ಪ್ರಶ್ನೆಗಳಿವೆ ಎಂದ ಮಂಜು‌ನಾಥ್

3
ತುಮಕೂರು‌ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ‌ ಮಂಜುನಾಥ್ ಹೆತ್ತೇನಹಳ್ಳಿ ಅವರು‌ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ‌ ಸಿಗದ ಕೊರೊನಾ ವಿಚಾರದಲ್ಲಿ ಅಧಿಕಾರಿಗಳು ಎಡವುತ್ತಿರುವ ಬಗ್ಗೆ, ಗುಣಮಟ್ಟದ ಆರೋಗ್ಯ ಸೇವೆ, ಹೆಚ್ಚು ಸಾವು ಸಂಭವಿಸಲು ಕಾರಣವೇನು ಎಂದು ಪ್ರಶ್ನೆ ಕೇಳಿ ನೀಡಿರುವ ಪತ್ರಿಕಾ ಹೇಳಿಕೆಯನ್ನು ಇಲ್ಲಿ ಯಥಾವತ್ ಪ್ರಕಟಿಸಲಾಗಿದೆ.

ತುಮಕೂರು: ಕೊರೋನಾ ಮಹಾಮಾರಿಗೆ ಜಗತ್ತೇ ತಲ್ಲಣಿಸಿದೆ, ಇದಕ್ಕೆ ತುಮಕೂರು ಹೊರತಲ್ಲಾ, ತುಮಕೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹೆಚ್ಚುತ್ತಿರುವ ಸೋಂಕು ತುಮಕೂರು ಜಿಲ್ಲೆಯಲ್ಲಿ ದಿನಗೂಲಿ ಕಾರ್ಮಿಕರನ್ನು, ರೈತರನ್ನು, ವಿಧ್ಯಾರ್ಥಿಗಳನ್ನು ಮತ್ತು ಯುವ ಜನತೆಯನ್ನು ಆತಂಕದಲ್ಲಿಟ್ಟಿರುವುದು ಶೋಚನೀಯ & ಗಂಭೀರ ವಿಷಯವಾಗಿದೆ.

“ಸಮಸ್ಯೆ ಎಲ್ಲಿ ಹೆಚ್ಚಿರುತ್ತದೊ ಅಲ್ಲೇ ಪರಿಹಾರವಿರುತ್ತದೆ” ಎಂಬ ಹಿರಿಯರ ನಾಣ್ಣುಡಿಯನ್ನು ಸರ್ಕಾರ & ಜಿಲ್ಲಾಡಳಿತ ಮರೆತಂತೆ ಕಾಣುತ್ತಿದೆ & ಸತ್ಯವೂ ಕೂಡಾ ಆಗಿದೆ. ಇಂದಿಗೆ ತುಮಕೂರಿನ ಒಟ್ಟು ಕೊರೋನಾ ಸೋಂಕಿತರು ೫೬೨ ಆಗಿದೆ.

ಆದಾಗ್ಯೂ ಕೂಡಾ ವಿಪರ್ಯಾಸ ಎಂದರೆ ಇಲ್ಲಿಯವರೆವಿಗೂ ಅಧಿಕಾರಿಗಳು AC ಕೊಠಡಿಬಿಟ್ಟು ಹೊರಬರದೇ ಇರುವುದು, ಜಿಲ್ಲಾಧಿಕಾರಿಗಳಾಗಲಿ, ಜಿಲ್ಲಾ ಆರೋಗ್ಯಾಧಿಕಾರಿಗಳಾಗಲಿ, ಜಿಲ್ಲಾ ಸರ್ಜನ್ ಆಗಲಿ ಇದುವರೆವಿಗೂ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿಯೇ ಇಲ್ಲ.

. ಒಂದು ಸೀಲ್ ಡೌನ್ ಪ್ರದೇಶಕ್ಕೆ ಮೀಸಲಿಟ್ಟ ಹಣವೆಷ್ಟು.? ಸೋಂಕಿತ ವ್ಯಕ್ತಿಗೆ ಚಿಕಿತ್ಸೆಗೆ ಬರಿಸುವ ವೆಚ್ಚವೆಷ್ಟು..?

ರೋಗಿಗೆ ಯಾವ ರೀತಿಯಾದ ಪೋಷಣೆ ಹಾರೈಕೆ & ಶುಶ್ರುಷೆ ಮಾಡಲಾಗುತ್ತಿದೆ.‌ ಅವರಿಗೆ ಪ್ರತಿದಿನ‌ ಎಷ್ಟು‌ ಖರ್ಚು ಮಾಡಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕವಾಗಿ ಹೇಳಿಯೇ ಇಲ್ಲ. ಸುಮ್ಮನಿರುವುದು ಹತ್ತು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ನಿಮ್ಮ ಹೇಳಿಕೆಗೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲದಂತಾಗಿದೆ, ಮಾತಿನಲ್ಲೇ ಅರಮನೆ ಕಟ್ಟಿ ಪೈಸೆಯಷ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸದೇ ಕಣ್ಣೊರಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿಯೇ ಕೇಳಿ ಬರುತ್ತಿವೆ. ಇದನ್ನು ನೋಡಿಯೇ,

ಶರಣರು ಹೀಗೇಳೆದ್ದಾರೆ,
“ಚಿತ್ರದ ಹೂವು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ,
ಅಪ್ಪಿದರೆ ಸುಖವಿಲ್ಲಾ, ಮೆಲ್ಲಿದರೇ ರುಚಿಯಿಲ್ಲಾ”, ಎಂದು.

ಚಿತ್ರದ ಜೊತೆ ವಿಚಿತ್ರವನ್ನೇ ತೋರಿಸುತ್ತಿರುವ ನೀವು ಜನಸಾಮಾನ್ಯರಿಗೆ ನೈಜ ಸ್ಥಿತಿ ಹೇಳಿ.

ಅಘೋಷಿತ ವಿಪತ್ತಿನಲ್ಲಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸದಿದ್ದರೇ ಹೇಗೆ..? ಬಹುತೇಕ ಜಿಲ್ಲೆಗಳಲ್ಲಿ ICU ನಲ್ಲಿದ್ದ ಕೊರೋನಾ ರೋಗಿಗಳು ಗುಣಮುಖರಾಗಿ ಬಂದಿದ್ದಾರೆ & ಬರುತ್ತಿದ್ದಾರೆ. ಆದರೆ ತುಮಕೂರು ಕೋವಿಡ್ ಆಸ್ಪತ್ರೆಯಲ್ಲೇಕೆ ಸಾಧ್ಯವಾಗುತ್ತಿಲ್ಲಾ ಎನ್ನುವ ಪ್ರಶ್ನೆಯನ್ನು ಅಧಿಕಾರಿಗಳು ನೇರವಾಗಿ ತಮ್ಮನ್ನು ತಾವೇ ಕೇಳಿಕೊಳ್ಳಬೇಕಿದೆ..? ಜೊತೆಗೆ ಉತ್ತರವನ್ನು ನೀಡಬೇಕಿದೆ.

ಬಾಬಾ ಸಾಹೇಬ್ ಡಾ ಬಿ.ಆರ್ ಅಂಬೇಡ್ಕರ್ ರವರು ಸರ್ಕಾರಗಳ ಕುರಿತು, “ಸರ್ಕಾರಗಳು ಇರಬೇಕಾಗಿರುವುದು ಬಡವರಿಗಾಗಿಯೇ ಹೊರತು ಶ್ರೀಮಂತರಿಗಲ್ಲಾ” ಎಂದೇಳುತ್ತಾರೆ. ವಾಸ್ತವ ಹೇಗಿದೆಯೆಂದರೇ ತುಮಕೂರು ಆಸ್ಪತ್ರೆಗೆ ಬಡವನೇನಾದರೂ ICU ಗೆ ಹೋದರೇ ಜೀವಂತವಾಗಿ ಹೊರಬರುವುದೆ ಸಾಧ್ಯವಿಲ್ಲದಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿ & ಸರ್ಕಾರ ಪ್ರಜೆಗಳ ಮನೆಬಾಗಿಲನ್ನು ಕಾಯಬೇಕಾಗಿತ್ತು, ವಿಪರ್ಯಾಸ ಮುಗ್ದ ಅಮಾಯಕ ನಮ್ಮ ಜನಗಳು ಸರ್ಕಾರ & ಅಧಿಕಾರಿಗಳ ಮನೆ ಬಾಗಿಲು ತಟ್ಟಬೇಕಾಗಿದೆ

ಕೆಳಹಂತದ‌ ಕೋವಿಡ್ ಸಿಬ್ಬಂದಿ‌ ನೋವು‌ ಹೇಳತೀರಲಾಗಿದೆ. ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಏಕೆ?

ಸಾಮಾನ್ಯ ಜನಗಳ ಸಹನೆಯನ್ನು ಪರೀಕ್ಷಿಸದಿರಿ, ಸಾಮಾನ್ಯ ಜನಗಳ ಆಕ್ರೋಶದ ಕಟ್ಟೆ ಹೊಡೆದರೇ ಗಂಭೀರವಾದ ಪರಿಸ್ಥಿತಿ ಎದುರಿಸಬೇಕಾಗುತ್ತೆ. ಈಗಲಾದರೂ ಜಿಲ್ಲಾಧಿಕಾರಿಗಳ ನೇತೃತ್ವ, ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ, ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಮುಂದಾಗಬೇಕಿದೆ.

ಕೊರೋನಾ ಹಣಕಾಸಿನ ನಿರ್ವಹಣೆಯನ್ನು ಪಾರದರ್ಶಕವಾಗಿ ಮಾಡಿ, ಸಾರ್ವಜನಿಕವಾಗಿ ಮಾಹಿತಿ ತಿಳಿಸಿ. AC ಕೊಠಡಿ ಬಿಟ್ಟು ಕೋವಿಡ್ ಕೇರ್ ಸೆಂಟರ್ & ಸೀಲ್ ಡೌನ್ ಪ್ರದೇಶಗಳಿಗೆ ಭೇಟಿ ನೀಡಿ ಜನಸಾಮಾನ್ಯರಿಗೆ ವಸ್ತುಸ್ಥಿತಿಯನ್ನು ನೈಜವಾಗಿ ತಿಳಿಸಿ ಧೈರ್ಯ ತುಂಬುವಂತಹ ಕೆಲಸ ಮಾಡಬೇಕಿದೆ.

ರೋಗಿಯ ಶುಶ್ರುಷೆಯನ್ನು ಈಗ ಉನ್ನತಿಕರಿಸಬೇಕಿರುವ ಅನಿವಾರ್ಯ & ಅವಶ್ಯಕತೆ ತುಂಬಾ ಇದೆ.

ಸಂವಿಧಾನಾತ್ಮಕ ಹಕ್ಕುಗಳಾದ ಆಹಾರ, ಆರೋಗ್ಯ, ಶಿಕ್ಷಣ ಇದನ್ನು ಭರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ನಿರ್ವಹಿಸಬೇಕು. ಈಗ ತ್ವರಿತವಾಗಿ ಬೇಕಾಗಿರುವ ಆರೋಗ್ಯವನ್ನು ಕಾಪಾಡಬೇಕಾದ ಗುರುತರವಾದ ಜವಾಬ್ದಾರಿ ಸರ್ಕಾರ & ಜಿಲ್ಲಾಡಳಿತದ ಮೇಲಿದೆ ಎಂಬುದನ್ನು ಅರಿತು ಕೆಲಸ ನಿರ್ವಹಿಸಿದರೆ ಒಳಿತಾಗುತ್ತದೆ. ಇಲ್ಲವೆಂದರೆ ಜನಗಳ ಹಿಡಿಶಾಪಕ್ಕೆ ಗುರಿಯಾಗುತ್ತೀರಿ.


ಮಂಜುನಾಥ್ ಹೆಚ್.ಎನ್(ಹೆತ್ತೇನಹಳ್ಳಿ)
ಮಾಜಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು
ತುಮಕೂರು.
ದೂರವಾಣಿ:- 9916222281

ಓ ಅಲ್ಲಿ ನೋಡಿ, ಅದೇ ‘ಮುಂಗಾರು’

ಜಿ.ಎನ್.ಮೋಹನ್


‘ಬಾಳೆಗಿಡ ಗೊನೆ ಹಾಕಿತು’ ಬರೆದು ಸಾಹಿತ್ಯಲೋಕಕ್ಕೆ ಅಧಿಕೃತ ಎಂಟ್ರಿ ಪಡೆದ ಬಿ.ಎಂ. ಬಶೀರ್ ಮುಂದೆ ಕುಳಿತಿದ್ದೆ.

ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅವರ ಆಫೀಸಿನಲ್ಲಿ . ‘ವಾರ್ತಾ ಭಾರತಿ’ಯ ಸುದ್ದಿ ಸಂಪಾದಕ ಬಶೀರ್ ತನ್ನ ಹಿಂದೆ ಇದ್ದ ಕಿಟಕಿಯತ್ತ ನನ್ನನ್ನು ಕರೆದೊಯ್ದರು.

ಕಿಟಕಿಯಿಂದ ಇಡೀ ಕೈಗಾರಿಕಾ ಜಗತ್ತೇ ಕಾಣುತ್ತಿತ್ತು. ಜಾಗತೀಕರಣದ ಒಂದೇ ಏಟಿಗೆ ತತ್ತರಿಸಿ ಮುಚ್ಚಿಹೋಗಿದ್ದ ಕೈಗಾರಿಕೆಗಳು, ಅದರ ವಿರುದ್ಧ ಈಜುತ್ತಾ ಇನ್ನೂ ಏದುಸಿರು ಬಿಡುತ್ತಿರುವ ಕೆಲವು.

ಒಂದು ಕಾಲಕ್ಕೆ ಮಂಗಳೂರನ್ನು ಅತಿ ಜೀವಂತ ಕೇಂದ್ರ ಎನಿಸಿದ್ದ ಈ ಪ್ರದೇಶ ಆ ಕಲರವವನ್ನು ಕಳೆದುಕೊಳ್ಳುತ್ತಾ ಸಾಗಿತ್ತು.

‘ಹೇಗೆಲ್ಲಾ ಆಗಿ ಹೋಯ್ತಲ್ಲಾ ಬಶೀರ್’ ಎಂದೆ.

ಬಶೀರ್ ಒಂದು ವಿಷಾದದ ನಗೆ ನಕ್ಕು ‘ಅದಲ್ಲ ಸಾರ್ ನಾನು ಹೇಳಲು ಹೊರಟಿದ್ದು. ಓ ಅಲ್ಲಿ ನೋಡಿ, ಆ ರಸ್ತೆಯಲ್ಲಿದ್ದದ್ದು ‘ಮುಂಗಾರು’ ಈ ಕಡೆ ನೋಡಿ ಆ ರಸ್ತೆಯಲ್ಲಿದ್ದದ್ದು ‘ಜನವಾಹಿನಿ” ಎಂದರು.

ನಾನು ಒಂದು ಕ್ಷಣ ಬೆಚ್ಚಿದೆ. ಬಶೀರ್ ಒಂದು ಪುಟ್ಟ ಕಿಟಕಿಯಿಂದ ನನಗೆ ಕನ್ನಡ ಪತ್ರಿಕೋದ್ಯಮದ ನಿನ್ನೆ- ಇಂದು- ನಾಳೆಯನ್ನು ಪರಿಚಯಿಸುತ್ತಿದ್ದರು.

ಈಗಲೂ ಚೆನ್ನಾಗಿ ನೆನಪಿದೆ. ಕನ್ನಡ ಪತ್ರಿಕೋದ್ಯಮ ಒಮ್ಮೆ ಬೆಚ್ಚಿಕುಳಿತಿತ್ತು. ಕನ್ನಡ ಪತ್ರಿಕೋದ್ಯಮ ಕಂಡರಿಯದ ಒಂದು ಮಹಾನ್ ವಲಸೆಗೆ ವಡ್ಡರ್ಸೆ ರಘುರಾಮ ಶೆಟ್ಟರು ನಾಂದಿ ಹಾಡಿದ್ದರು.

ಇಟ್ ವಾಸ್ ಎ ಗ್ರೇಟ್ ಮೈಗ್ರೇಶನ್..

ಎಲ್ಲರಿಗೂ ಗೊತ್ತಿತ್ತು. ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಜಾವಾಣಿಯೇ ಕೊನೆಯ ನಿಲ್ದಾಣ. ಆನಂತರ ಇನ್ನೊಂದು ಹೆಸರೇ ಇರಲಿಲ್ಲ.

ಯಾವುದೇ ಪತ್ರಕರ್ತನಿಗೂ ಇದ್ದ ಒಂದೇ ಕನಸೆಂದರೆ ಆ ಕೊನೆಯ ತಾಣ ತಲುಪಿಕೊಳ್ಳುವುದು.

ಆದರೆ ವಡ್ಡರ್ಸೆ ಒಂದೇ ಏಟಿಗೆ ಈ ನಂಬಿಕೆಯನ್ನು ಬುಡಮೇಲು ಮಾಡಿಬಿಟ್ಟಿದ್ದರು.

ಸತತವಾಗಿ 20 ವರ್ಷಗಳ ಕಾಲ ಪ್ರಜಾವಾಣಿ – ಡೆಕ್ಕನ್ ಹೆರಾಲ್ಡ್ ವರದಿಗಾರಿಕೆಯನ್ನು ನಿಭಾಯಿಸಿದ ‘ವರಶೆ’, ‘ದಿ ಪ್ರಿಂಟರ್ಸ್ (ಮೈಸೂರು) ಲಿಮಿಟೆಡ್’ಗೆ ಗುಡ್ ಬೈ ಹೇಳಿದ್ದರು.

ಹಾಗೆ ಹೇಳಿದ್ದು ಅವರೊಬ್ಬರೇ ಅಲ್ಲ. ಒಳ್ಳೆ ಕಿಂದರಿಜೋಗಿಯ ಹಿಂದೆ ನಡೆದುಹೋಗುವಂತೆ ಇಂದೂಧರ ಹೊನ್ನಾಪುರ, ಎನ್.ಎಸ್. ಶಂಕರ್, ಕೆ.ಪುಟ್ಟಸ್ವಾಮಿ, ಮಹಾಬಲೇಶ್ವರ ಕಾಟ್ರಹಳ್ಳಿ, ಎಂ.ಬಿ. ಕೋಟಿ, ಶಂಕರ್ ಲಾಳಾಪುರ ಎಲ್ಲರೂ ‘ಪ್ರಜಾವಾಣಿ’ಯ ನಂತರವೂ ಜಗತ್ತಿದೆ ಎನ್ನುವುದನ್ನು ನಿಜ ಮಾಡಲು ಹೊರಟಿದ್ದರು.

ಇದಕ್ಕೆ ಇನ್ನೊಂದು ದಿಕ್ಕಿನಿಂದ ಈಗಿನ ‘ಆದಿಮ’ದ ಕೆ. ರಾಮಯ್ಯ, ಸಿನಿಮಾ ಸಂಗೀತ ನಿರ್ದೇಶಕ ವಿ. ಮನೋಹರ್, ಕೆ.ಎಸ್. ಕೇಶವಪ್ರಸಾದ್, ಕೃಪಾಕರ್ ಸೇನಾನಿ ಜೋಡಿಯ ಕೃಪಾಕರ್, ಕೆ.ಕೆ.ಮಕಾಳಿ ಸೇರಿಕೊಂಡರು.

ದಕ್ಷಿಣ ಕನ್ನಡದಿಂದಲೇ ದಿನೇಶ್ ಅಮಿನ್ ಮಟ್ಟು, ಬಿ.ಎಂ.ಹನೀಫ್, ಮಂಜುನಾಥ ಭಟ್, ಚಿದಂಬರ ಬೈಕಂಪಾಡಿ, ಯಶವಂತ ಬೋಳೂರು, ಸುಧಾಕರ ಬನ್ನಂಜೆ ಸಾಥ್ ನೀಡಿದರು.

ಜೆಸುನ, ರಾಮಣ್ಣ ಕೋಡಿಹೊಸಳ್ಳಿ, ಗಂಗಾಧರ ಹಿರೇಗುತ್ತಿ, ಗಣಪತಿ ಭಂಡಾರಿ, ಮಂಜುನಾಥ್ ಚಾಂದ್, ವಿಜು ಪೂಣಚ್ಚ. ಥೇಟ್ ಸಿದ್ಧಲಿಂಗಯ್ಯನವರ ಕವಿತೆಯ ಸಾಲುಗಳಂತೆ ಕಪ್ಪುಮುಖ, ಬೆಳ್ಳಿಗಡ್ಡ ಉರಿಯುತ್ತಿರುವ ಕಣ್ಣುಗಳನ್ನು ಹೊತ್ತವರ ಸಾಲು ‘ಮುಂಗಾರು’ವಿನತ್ತ ನಡೆದು ಹೋಯಿತು.

ಮತ್ತೆ ನೆನಪಾಗುತ್ತಿದೆ,

ಇನ್ನೂ ಪಿಯುಸಿ ಓದುವಾಗಲೇ ನನಗೆ ಜರ್ನಲಿಸ್ಟ್ ಆಗಬೇಕೆಂಬ ಆಸೆಯೊಂದು ಕುಡಿಯೊಡೆದಿತ್ತು. ಜರ್ನಲಿಸ್ಟ್ ಆಗುವುದು ಎಂದರೆ ಇನ್ನಾವ ಅರ್ಥವೂ ಇಲ್ಲ. ‘ಪ್ರಜಾವಾಣಿ’ಯಲ್ಲಿ ಕೆಲಸ ಮಾಡುವುದು.

ಹಾಗಾಗಿ ಸ್ನಾತಕೋತ್ತರ ಅಧ್ಯಯನಕ್ಕೆ ಸಂವಹನವನ್ನೇ ಆಯ್ಕೆ ಮಾಡಿಕೊಂಡಿದ್ದ ನಾನು ಅಲ್ಲಿನ ಲೈಬ್ರರಿಯಲ್ಲಿದ್ದೆ.

ಲಲಿತಮ್ಮ ಮೇಡಂ ನನ್ನ ಮುಂದೆ ಪತ್ರಿಕೆಯ ಕಟ್ಟೊಂದನ್ನು ಇಟ್ಟರು. ಅದು ‘ಮುಂಗಾರು’.

ಪತ್ರಿಕೆಯ ಪುಟ ತಿರುವುತ್ತಾ ಹೋದಂತೆ ನಾನು ‘ಮುಂಗಾರು’ ಮ್ಯಾಜಿಕ್ ಗೆ ಸಿಕ್ಕುಬಿದ್ದಿದ್ದೆ. ‘ಲಂಕೇಶ್ ಪತ್ರಿಕೆ’ ತಂದಾಗಲೂ ಹೀಗೆ ಆಗಿತ್ತು. ಆ ಎಂಟು ಪುಟದ ಪತ್ರಿಕೆಗಾಗಿ ಒಂದು ಕ್ಲಾಸ್ ಗೆ ಚಕ್ಕರ್ ಹಾಕಿ ಪೇಪರ್ ಮಾರುವ ಅಂಗಡಿಗಳನ್ನು ಸುತ್ತುತ್ತಿದ್ದೆವು.

‘ಗುಂ’ ‘ಬಂ’ ಗಳ ಸುತ್ತಾ ಇದ್ದ ಪ್ರಭಾವಳಿಯನ್ನು ಕಿತ್ತುಹಾಕಿ ಪತ್ರಿಕೆ ಅವರನ್ನು ಜನರ ಕಟಕಟೆಯಲ್ಲಿ ನಿಲ್ಲಿಸಿತ್ತು.

ಈಗ ನನ್ನ ಮುಂದೆ ‘ಮುಂಗಾರು’ ಹಿಡಿದಾಗ ಅದೇ ಮುಂಗಾರಿ ಮಿಂಚು ಮೈಯೊಳಗೆ ಹಾದು ಹೋಯಿತು.

ನನ್ನ ನಿರ್ಧಾರ ಬದಲಾಗಿ ಹೋಗಿತ್ತು. ನನ್ನ ನಿಲ್ದಾಣ ‘ಪ್ರಜಾವಾಣಿ’ಯಲ್ಲ, ಮುಂಗಾರು.

ಗೆಳೆಯ ಆರ್.ಜಿ.ಹಳ್ಳಿ ನಾಗರಾಜ್, ಜಿ.ಕೆ.ಮೈರುಗರನ್ನು ಕಟ್ಟಿಕೊಂಡು ಮಂಗಳೂರಿಗೂ ಕಾಲಿಟ್ಟದ್ದಾಯ್ತು. ಕಂಕನಾಡಿ, ವೆಲೆನ್ಸ್ಹಿಯಾದ ಮುಂಗಾರು ಕಚೇರಿಯನ್ನು ಎಡತಾಕಿದ್ದೂ ಆಯಿತು. ಬೀಡಿ ಸೇದುತ್ತಾ, ಹೊಗೆ ಬಿಡುತ್ತಾ ರಘುರಾಮಶೆಟ್ಟರು ‘ನೊ ವೇಕೆನ್ಸಿ’ ಅಂತ ಕೈ ಆಡಿಸಿದ್ದೂ ಆಯಿತು.

ಒಂಬತ್ತನೇ ಕ್ಲಾಸ್ ಓದಿದ್ದ ಹುಡುಗ ಮುಂಬೈ ಬಸ್ ಹತ್ತಿ ಬದುಕಲು ‘ಫ್ರೀ ಪ್ರೆಸ್ ಜರ್ನಲ್’ ಕಚೇರಿಗೆ ತಿಂಡಿ ಕಾಫಿ ಸಪ್ಲೈ ಮಾಡಲು ಹೊರಟಾಗ ಕನ್ನಡ ಪತ್ರಿಕೋದ್ಯಮದ ವ್ಯಾಕರಣವನ್ನೇ ಬದಲಿಸಿಬಿಡಬಿಲ್ಲ ತಾಕತ್ತು ಅವನೊಳಗಿದೆ ಎಂದು ಯಾರಿಗೂ ಗೊತ್ತಿರಲಿಲ್ಲ,

ಫ್ರೀ ಪ್ರೆಸ್ ಜರ್ನಲ್, ಅದಕ್ಕೂ ಮುಂಚೆ ಕಲ್ಯಾಣಪುರದಲ್ಲಿ ಕಲಿತ ಇಂಗ್ಲಿಷ್, ಮುಂಬೈನ ಲೈಬ್ರರಿಗಳ ಅಗಾಧ ಓದು, ಜೊತೆಗೆ ಇದೇ ರೀತಿ ಹೋಟೆಲ್ ಗಳಲ್ಲಿ ದುಡಿಯುತ್ತಿರುವವರ ಸಂಕಷ್ಟ ಎಲ್ಲಾ ಸೇರಿ ಒಬ್ಬ ರಘುರಾಮಶೆಟ್ಟಿ ಎದ್ದು ನಿಂತರು.

ಎನ್.ಎಸ್. ಕಿಲ್ಲೆ ಅವರ ‘ಸರ್ವೋದಯ’ ಪತ್ರಿಕೆಗೆ ಶೆಟ್ಟರು ಬರೆದ ಮೊದಲ ಲೇಖನ ಮುಂಬೈ ಹೋಟೆಲ್ ಉದ್ಯಮವನ್ನೇ ತಲ್ಲಣಿಸಿ ಹಾಕಿತ್ತು.

ತಿಂಗಳುಗಳು ಕಳೆದರೂ ಈ ಲೇಖನದ ಕಾವು ನಿಲ್ಲಲಿಲ್ಲ. ವಡ್ಡರ್ಸೆಯಿಂದ ಬಂದ ಹುಡುಗ ಪೆನ್ ಕೈಗೆತ್ತಿಕೊಂಡದ್ದು ಹೋಟೆಲ್ ಕಾರ್ಮಿಕರ ಕಥೆ ಹೇಳಲು.

ಇದರಿಂದಾಗಿ ನೇರಾನೇರ ರಾಮಮನೋಹರ ಲೋಹಿಯಾ ಸಂಪರ್ಕ. ಒಡಲೊಳಗಿನ ಕೆಚ್ಚಿಗೆ ಬಿರುಗಾಳಿ ಜೊತೆಯಾಯ್ತು. ವಡ್ಡರ್ಸೆಯ ಈ ಹುಡುಗನಿಗೆ ಬರಹಕ್ಕೆ ಎಂತಾ ಬೆಂಕಿಯನ್ನೂ ಹುಟ್ಟು ಹಾಕುವ ಶಕ್ತಿ ಇದೆ ಎಂದು ಗೊತ್ತಾಗಿಹೋಯಿತು.

ಹಾಗಾಗಿಯೇ ನವಭಾರತ- ತಾಯಿನಾಡು- ವಿಶ್ವವಾಣಿ ಮೂಲಕ ಹೊರಟ ಬೆಂಕಿಯುಂಡೆಯೊಂದು ‘ಪ್ರಜಾವಾಣಿ’ ತಲುಪಿಕೊಂಡಿತು.

‘ಚಿಂತನೆಯ ಮಳೆ ಸುರಿಸಿ, ಜನಶಕ್ತಿಯ ಬೆಳೆ ತೆಗೆವ ಮುಂಗಾರು’ ಎನ್ನುವ ಘೋಷಣೆ ನಿಜಕ್ಕೂ ಮಿಂಚಿನಂತೆಯೇ ಸಂಚರಿಸಿತು.

ಜನಶಕ್ತಿ ಎನ್ನುವುದು ವಡ್ಡರ್ಸೆ ಅವರಿಗೆ ಸದಾ ಕಾಡುತ್ತಿದ್ದ ಕನಸು.

ಮುಂಗಾರು ಏಕೆ ಆರಂಭಿಸಿದ್ದು ಎನ್ನುವ ಪ್ರಶ್ನೆ ಹಲವರಲ್ಲಿದೆ. ಮುಂಗಾರು ಎಂಬುದು ರಘುರಾಮ ಶೆಟ್ಟರು ಅದುವರೆಗೆ ಕಟ್ಟಿಕೊಂಡ ಅಸಮಾಧಾನದ ಕ್ಷಣಿಕ ಸ್ಫೋಟವಲ್ಲ. 1951ರಿಂದಲೇ ಜನರದ್ದೇ ಆದ ಒಂದು ಪತ್ರಿಕೆ ಹೆರಬೇಕು ಎನ್ನುವ ಕನಸು ಅವರಲ್ಲಿತ್ತು.

ಅದಕ್ಕೆ ಕಾರಣವಾದದ್ದು ಪತ್ರಿಕಾ ಮಂಡಳಿಯ ಒಂದು ವರದಿ. ಸಿ.ಪಿ.ಆರ್.ಅಯ್ಯರ್ ರೂಪಿಸಿದ ಆ ವರದಿ ಯಾವುದೇ ಉದ್ಯಮಿ ನಡೆಸುವ ಪತ್ರಿಕೆ ಅವರ ಹಿತಾಸಕ್ತಿಯ ರಕ್ಷಣೆಗೆ ಮಾತ್ರ ಇರುತ್ತದೆ. ಇದರಿಂದ ಪೆಟ್ಟು ಬೀಳುವುದು ಪ್ರಜಾಸತ್ತೆಗೆ. ನಿಜಕ್ಕೂ ಪತ್ರಿಕೆ ಪ್ರಜಾಸತ್ತೆಗೆ ಬೆಂಬಲವಾಗಿರಬೇಕಾದರೆ ಅದರ ಒಡೆತನ ಜನರ ಕೈಯಲ್ಲಿರಬೇಕು ಎಂದಿತ್ತು.

ಆ ಜನ ನಾನೇ ಏಕಾಗಬಾರದೆಂದು ಶೆಟ್ಟರಿಗೆ ಅನಿಸಿತೇನೋ. ಒಂದು ಕನಸು, ಮುಂಗಾರನ್ನು ಹೆರುವ ಕನಸು ಆರಂಭವಾಗಿ ಹೋಯಿತು.

ಸಂಪಾದಕೀಯ ಇಲ್ಲದ ಪತ್ರಿಕೋದ್ಯಮಕ್ಕೆ ನೆಲೆ ಒದಗಿಸಿದ್ದ ಕರಾವಳಿಯ ಪರಿಸ್ಥಿತಿಯೂ ಒಂದು ಮುಂಗಾರು ಎದ್ದು ನಿಲ್ಲಲು ಕಾರಣವಾಯಿತು.

ಕಂದಾಚಾರದ ಆಲದ ಮರಕ್ಕೆ ಜೋತುಬಿದ್ದ, ಪತ್ರಿಕೋದ್ಯಮದಿಂದ ವಿಮುಖರಾಗಿದ್ದವರಿಗೆ ಮುಂಗಾರು ಒಂದು ದೊಡ್ಡ ಭರವಸೆಯಾಗಿತ್ತು.

ಒಂದು ಜಾತಿ, ಒಂದು ಧರ್ಮ, ಒಂದು ಪ್ರದೇಶ, ಒಂದು ಉದ್ಯಮದ ಸೂತ್ರಕ್ಕೆ ಸಿಕ್ಕಿಹಾಕಿಕೊಂಡಿದ್ದ ಕರಾವಳಿಯಲ್ಲಿ ಜನರ ಭಾಷೆ ಮಾತನಾಡುವ, ಜನರ ಗೋಳು ಮಾತನಾಡುವ ಪತ್ರಿಕೆ ಬರುತ್ತದೆ ಎನ್ನುವುದೇ ‘ಭರವಸೆಯ ವ್ಯವಸಾಯ’ವಾಗಿತ್ತು.

ಮುಂಗಾರು ಭರವಸೆಯನ್ನು ಬಿತ್ತಿದ್ದು, ಕೈ ಬದಲಾದದ್ದು, ಕುಸಿದದ್ದು, ಮುಚ್ಚಿಹೋದದ್ದು ಎಲ್ಲವೂ ಓದುಗರ ಕಣ್ಣೆದುರು ನಡೆದು ಹೋಗಿದೆ. ಆದರೆ ಮುಂಗಾರು ಏರು ಹಾಗೂ ಬೀಳು ಎರಡೂ ಸಹಾ ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಪಾಠ.

ಗೆಳೆಯ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಮೊನ್ನೆ ಒಂದು ದೊಡ್ಡ ಕಟ್ಟು ಹೊತ್ತು ಹಾಕಿದ್ದ. ಬಿಡಿಸಿ ನೋಡಿದರೆ ಅದೇ ಮುಂಗಾರು ಕಥೆ.

ಓದುತ್ತಾ, ಓದುತ್ತಾ ಮುಂಗಾರು ಹಾಗೂ ವಡ್ಡರ್ಸೆ ರಘುರಾಮಶೆಟ್ಟರು ಸಂಪೂರ್ಣ ಅರ್ಥವಾಗಲಿಲ್ಲ ಎನಿಸಿತು.

ಗೆಳೆಯ ಬಿ.ಎಂ.ಹನೀಫನಿಗೆ ಫೋನಾಯಿಸಿದೆ. ಮುಂಗಾರು ಬಗ್ಗೆ ಸಾಕಷ್ಟು ಮಾತನಾಡಿದೆವು. ಮುಂಗಾರು ಬೀಳಲು ಒಂದಿಷ್ಟು ಜನ ಅಲ್ಲ, ಒಂದು ವ್ಯವಸ್ಥೆಯೇ ಕಾರಣವಾಗಿತ್ತು ಅಂದ.

ಮುಂಗಾರು ಇದ್ದದ್ದೇ ಹಾಗೇ, ಕುರುಡರು ಆನೆಯನ್ನು ಅರ್ಥ ಮಾಡಿಕೊಂಡಂತೆ. ಒಬ್ಬೊಬ್ಬರಿಗೆ ಒಂದೊಂದು ನೋಟ. ವಡ್ಡರ್ಸೆ ಹುಟ್ಟು ಬಂಡಾಯಗಾರ. ಮನೆಯಲ್ಲಿ ಬಂಡೆದ್ದರು, ಹೋಟೆಲ್ ಕಾರ್ಮಿಕರಿಗಾಗಿ ಬಂಡೆದ್ದರು…

…ಮೊದಲು ಕೆಲಸ ಕೊಟ್ಟ ಕುಡ್ಪಿ ಅವರ ವಿರುದ್ಧ ಬಂಡೆದ್ದರು, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ವಿರುದ್ಧ ಬಂಡೆದ್ದರು, ಗುಂಡೂರಾವ್ ವಿರುದ್ಧ, ರಾಮಕೃಷ್ಣ ಹೆಗಡೆ ವಿರುದ್ಧ ಬಂಡೆದ್ದರು. ದೇವರಾಜ ಅರಸು ಅಧ್ಯಯನ ಕೇಂದ್ರಕ್ಕೆ ಸರ್ಕಾರದ ಗಮನ ಸಿಗಲಿಲ್ಲ ಎನ್ನುವುದಕ್ಕೂ ಬಂಡೆದ್ದರು. ತಮ್ಮೊಳಗಿನ ತಮ್ಮ ಬಗ್ಗೆಯೂ ಬಂಡೆದ್ದರು.

ಹೆಂಡತಿಯ ಬಳೆ ಅಡ್ಡವಿಟ್ಟು, ತಮ್ಮ ಕೋಪ ಅದುಮಿಟ್ಟು, ಜನರ ಸಂಕಟವನ್ನು ಒರೆಗಿಟ್ಟು, ತುಂಟ ಹುಡುಗರ ತಂಡ ಕಟ್ಟಿಕೊಂಡು ಮುಂಗಾರು ಕಟ್ಟಿದ್ದರು.

ಮಂಗಳೂರಿನಲ್ಲಿದ್ದಾಗ ಭಾರತ ಬೀಡಿ ಕಚೇರಿಗೆ ಹಾದು ಹೋಗುವಾಗ ಮುಂಗಾರು ಬೋರ್ಡ್ ಹೊತ್ತ ಕಚೇರಿ ಇತ್ತು. ಆ ವೇಳೆಗೆ ಮುಂಗಾರು ಆರಿಹೋಗಲು ಸಜ್ಜಾಗಿದ್ದ ಮಿಣಿಮಿಣಿ ದೀಪ.

ಇದಕ್ಕೂ ಸ್ವಲ್ಪ ವರ್ಷ ಮುನ್ನ ಪ್ರಜಾವಾಣಿ ಕಚೇರಿಯ ಡೆಸ್ಕ್ ನಲ್ಲಿ ಕೆಲಸ ಮಾಡುತ್ತಿದ್ದೆ. ಹೊಸ ಹುಡುಗರ ದಂಡೇ ಬಂತು. ತಿರುಗಿ ನೋಡಿದರೆ ದಿನೇಶ್ ಅಮಿನ್ ಮಟ್ಟು, ಬಿ.ಎಂ.ಹನೀಫ್, ವಿಜು ಪೂಣಚ್ಚ, ಜೆ.ಎ. ಪ್ರಸನ್ನ ಕುಮಾರ್, ನೆತ್ರಕೆರೆ ಉದಯ ಶಂಕರ್ ಭಟ್, ಆ ಮುನ್ನ ಜಿ.ಕೆ. ಮಧ್ಯಸ್ಥ ಎಲ್ಲರೂ ಮುಂಗಾರುವಿನಿಂದ ಪ್ರಜಾವಾಣಿಗೆ ಬಂದಿದ್ದರು.

ಕೆ.ಎನ್. ಹರಿಕುಮಾರ್ ಅವರ ಲೆಕ್ಕ ಚುಕ್ತಾ ಆಗಿಹೋಗಿತ್ತು.

ಮಠಕ್ಕೆ ಬಂದ ವಿ.ಸೋಮಣ್ಣ

Publicstory


ತುಮಕೂರು: ಬೆಂಗಳೂರಿನಲ್ಲಿ ಕೊರೊನ ಸೋಂಕು ಹರಡದಂತೆ ಕ್ರಮ ವಹಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿ ಜೊತೆ ಮಾತನಾಡಿದ ಅವರು 52 ವಾರ್ಡ್ ಗಳಲ್ಲಿ ಸುಮಾರು 26 ಕೋವಿಟ್ ಸೆಂಟರ್ ಗಳನ್ನು ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

: ಪ್ರತಿ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರು, 24 ಗಂಟೆಗಳ ಕಾಲ ಸಹಾಯವಾಣಿ, ಒಂದು ಅಂಬುಲೆನ್ಸ್ ಒದಗಿಸಿದ್ದು ಆಯಾ ಕೇಂದ್ರದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಇದೇ ವೇಳೆ ಡಾ.ಶಿವಕುಮಾರಸ್ವಾಮೀಜಿ ಗದ್ಗುಗೆಗೂ ಭೇಟಿ ನೀಡಿ ನಮನ ಸಲ್ಲಿಸಿದರು.

ಸಚಿವರ ಜೊತೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಜ್ಯೋತಿಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ಇದೇನು ಸಚಿವರೇ‌ ನಿಮ್ಮೂರಲ್ಲಿ…?

ಚಿಕ್ಕನಾಯಕನಹಳ್ಳಿ: ಪಟ್ಟಣದ ತುಮಕೂರು ಸಹಕಾರಿ ಕೇಂದ್ರ ಬ್ಯಾಂಕ್ ಮುಂಭಾಗ ಸಾಮಾಜಿಕ ಅಂತರವಿಲ್ಲದೆ ಸಾರ್ವಜನಿಕರು ಬ್ಯಾಂಕ್ ಗೇಟ್ ಮುಂದೆ ನಿಂತಿರುವುದು ಆತಂಕ ಮೂಡಿಸುತ್ತಿದೆ .

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೋನ ಪಾಸಿಟಿವ್ ಕೇಸ್ ಗಳು ಹೆಚ್ಚಾಗುತ್ತಿದ್ದು ತಾಲ್ಲೂಕು ಆಡಳಿತಕ್ಕೆ ತಲೆನೋವು ಪರಿಣಮಿಸಿದೆ.

ಜನರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೊರೊನಾ ಭಯವಿಲ್ಲದೆ ಬ್ಯಾಂಕ್ ಮುಂಭಾಗದಲ್ಲಿ ಗುಂಪು ಗುಂಪಾಗಿ ಸೇರುತ್ತಿರುವುದನ್ನು ಗಮನಿಸಿದರೆ ಕರೊನಾ ವೈರಸ್ಗು ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ .

ದಂಡ ವಿಧಿಸುವಲ್ಲಿ ವಿಫಲ:; ಪಟ್ಟಣದಲ್ಲಿ ಸಾಮಾಜಿಕ ಅಂತರ ಮಾಸ್ಕ್ ಪಾಲನೆಯಾಗದಿದ್ದರೆ ದುಬಾರಿ ದಂಡ ವಿಧಿಸಲು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಪುರಸಭಾ ಅಧಿಕಾರಿಗಳಿಗೆ ಸೂಚಿಸಿದರೂ ಮತ್ತು ಕಾನೂನು ಮಂತ್ರಿ ಸೂಚನೆ ನೀಡಿದ್ದರೂ ಪುರಸಭೆ ಅಧಿಕಾರಿಗಳು ಉದಾಸೀನ ಮಾಡುತ್ತಿದ್ದಾರೆ .

ಅಮಾಯಕರಿಗೆ ಮಾತ್ರ ದಂಡ ಹಾಕಿ ಸುಮ್ಮನಾಗುತ್ತಿದ್ದಾರೆ. ದಿನನಿತ್ಯ ನೂರಾರು ಜನ ಮಾಸ್ ದರಿಸದೆ ಓಡಾಡುತ್ತಿದ್ದು ಹಾಗೂ ಬಹುತೇಕ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದಿಲ್ಲ ಆದರೂ ಸಹ ಪುರಸಭೆ ಮುಖ್ಯಾಧಿಕಾರಿಗಳು, ಸಿಬ್ಬಂದಿ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ .

ತುಮಕೂರು‌‌ ಮತ್ತೇ 52 ಮಂದಿಗೆ ಕೊರೊನಾ

ತುಮಕೂರು: ಜಿಲ್ಲೆಯಲ್ಲಿ ಹೊಸದಾಗಿ 52 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 565 ಕ್ಕೆ ಏರಿಕೆಯಾಗಿದೆ ಡಿಎಚ್ಒ ಡಾ. ನಾಗೇಂದ್ರಪ್ಪ ತಿಳಿಸಿದರು.

ತುಮಕೂರು ನಗರದಲ್ಲಿ 31‌ಮಂದಿಗೆ ಸೋಂಕು‌ ತಗುಲಿದೆ.

ತಿಪಟೂರು, ತುರುವೇಕೆರೆ ತಾಲ್ಲೂಕಿನಲ್ಲಿ ತಲಾ ಐವರು, ಗುಬ್ಬಿ 1 , ಕುಣಿಗಲ್ ನಲ್ಲಿ ಇಬ್ಬರಿಗೆ, ಪಾವಗಡದಲ್ಲಿ 4, ಚಿಕ್ಕನಾಯಕನಹಳ್ಳಿ 2, ಮಧುಗಿರಿ ಹಾಗೂ ಕೊರಟಗೆರೆಯಲ್ಲಿ ತಲಾ ಒಂದು ಪ್ರಕರಣಗಳು ಕಂಡುಬಂದಿವೆ.

ಒಬ್ಬರು ರೋಗಿ ಸಾವಿಗೀಡಾಗಿದ್ದಾರೆ.

PUC ಫಲಿತಾಂಶ: ತುಮಕೂರಿನಲ್ಲಿ ಅರ್ಧಕರ್ಧ ಗಂಡುಮಕ್ಕಳು ಫೇಲು!

Publicstory


ತುಮಕೂರು: ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡ ಗಂಡು ಮಕ್ಕಳಲ್ಲಿ ಅರ್ಧಕರ್ಧ ಹುಡುಗರು ಫೇಲಾಗಿದ್ದಾರೆ.

ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ.

ಶೈಕ್ಷಣಿಕ ಹೆಮ್ಮೆಯ ಜಿಲ್ಲೆಯ ಈ ಫಲಿತಾಂಶ ಕಳಪೆ ಎಂದೇ ಹೇಳಬೇಕು. ಶಿಕ್ಷಣ ಇಲಾಖೆ,‌ಇಲ್ಲಿಯ ಶಾಸಕರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಕಲಾ ವಿಭಾಗದ ಫಲಿತಾಂಶ ಶೋಚನೀಯವಾಗಿದೆ. ಇಲ್ಲಿ ಪರೀಕ್ಷೆ ತೆಗೆದುಕೊಂಡರವಲ್ಲಿ ಅರ್ಧಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಂದರೆ ನೂರು ವಿದ್ಯಾರ್ಥಿಗಳಲ್ಲಿ 61 ವಿದ್ಯಾರ್ಥಿಗಳು ಫೇಲಾಗಿದ್ದಾರೆ. ಇದು ಉನ್ನತ ಶಿಕ್ಷಣದ ಬೆಳವಣಿಗೆ ಮೇಲು ಪರಿಣಾಮ ಬೀರಲಿದೆ. ಇದರಿಂದಾಗಿ ಹೆಚ್ಚು ಮಕ್ಕಳು ಕಳಪೆ ಕೆಲಸ ಹುಡುಕುವಂತಾಗಲಿದೆ.

ಇನ್ನೂ ವಿಜ್ಞಾನದ ವಿಭಾಗದಲ್ಲಿ ಶೇ 77 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 64.5 ರಷ್ಟು ಫಲಿತಾಂಶ ಬಂದಿದ್ದು, ಇದು ಸಹ ಕಡಿಮೆಯಾಗಿದೆ.

ಈ ಸಲ ಫಲಿತಾಂಶವನ್ನು ನೇರವಾಗಿ ಮಕ್ಕಳ ಪೋಷಕರ ಮೊಬೈಲ್ ನಂಬರುಗಳಿಗೆ ಕಳುಸಿರುವುದರಿಂದ ಅತಿ ಹೆಚ್ಚು ಅಂಕ ಯಾರು ಪಡೆದಿದ್ದಾರೆಂದು ತಕ್ಷಣಕ್ಕೆ ಹೇಳಲು ಸಾಧ್ಯವಾಗುತ್ತಿಲ್ಲ.

ಫಲಿತಾಂಶ ಕಡಿಮೆ ಬರಲು ಕೊರೊನಾ ಗೊಂದಲ, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಭಯ ಕಾರಣ ಎಂದು ಮೇಲ್ನೋಟಕ್ಕೆ ವಿಶ್ಲೇಷಣೆ ಮಾಡಲಾಗುತ್ತಿದೆ.

ಎಲ್ಲಿ ಹೋದಿರಿ ತೇಜಸ್ವಿ…?

ಜಿ.ಎನ್.ಮೋಹನ್


ಪತ್ರಿಕೆ ಎನ್ನುವುದು ಪೆಪ್ಸಿ ಕೋಲಾ ಅಲ್ಲ’ ಎಂದೆ.

ಅದುವರೆಗೂ ಪಕ್ಕದಲ್ಲಿದ್ದ ಕಥೆಗಾರ ಜಿ ಎಸ್ ಸದಾಶಿವ ಅವರೊಂದಿಗೆ ಶತಮಾನದ ಗುಟ್ಟನ್ನು ಹಂಚಿಕೊಳ್ಳುವವರಂತೆ ಮಾತನಾಡುತ್ತಾ ಕುಳಿತಿದ್ದ ತೇಜಸ್ವಿ ತಕ್ಷಣ ನನ್ನತ್ತ ತಿರುಗಿದರು.

ನಾನು ಮಾತು ಮುಂದುವರಿಸಿದೆ.

‘ಪತ್ರಿಕೆ ಎನ್ನುವುದು ಸಮಾಜದ ಸೇತುವೆ. ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಇರುವ ಊರುಗೋಲು. ಅದು ಕೋಲಾದಂತೆ, ಚಿಪ್ಸ್ ನಂತೆ, ಟೂಥ್ ಪೇಸ್ಟ್ ನಂತೆ ಬಳಸಿ ಎಸೆಯುವ ವಸ್ತುವಲ್ಲ’.

ಅದು ಸಂದೇಶ ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭ. ಸಂದೇಶ ಮಾಧ್ಯಮ ಪ್ರತಿಷ್ಠಾನ ಪ್ರತೀ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಸಮಾರಂಭ.

ಆ ವರ್ಷ ತೇಜಸ್ವಿ, ಜಿ ಎಸ್ ಸದಾಶಿವ ಇದ್ದರು. ಪತ್ರಿಕೋದ್ಯಮದಲ್ಲಿದ್ದ ಎಳೆಯರನ್ನು ಗುರುತಿಸಿದ ಪಟ್ಟಿಯಲ್ಲಿ ನಾನಿದ್ದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಲು ನಮ್ಮ ಮುಂದೆ ಇದ್ದದ್ದು ಎರಡು ನಿಮಿಷಗಳು ಮಾತ್ರ. ಅಷ್ಟರಲ್ಲಿ ನಾನು ಮಾತನಾಡಿದ್ದು ಇಷ್ಟು.

ಸಮಾರಂಭ ಮುಗಿದು ಗ್ರೂಪ್ ಫೋಟೋಗೆ ಪೋಸ್ ನೀಡಿ ಇನ್ನೂ ಕೆಳಗಿಳಿದಿರಲಿಲ್ಲ. ತೇಜಸ್ವಿ ನನ್ನತ್ತ ಬಂದರು ಕೈ ಹಿಡಿದು ಅದುಮಿದರು ಅವರ ಕಣ್ಣುಗಳಲ್ಲಿ ಪ್ರೀತಿಯ ಒರತೆ.

‘ಹೌದು ಮಾಧ್ಯಮ ಖಂಡಿತಾ ಬಳಸಿ ಬಿಸಾಡುವ ವಸ್ತುವಲ್ಲ’ ಎಂದರು. ಅವರ ಕೈನ ಆ ಬಿಸುಪು ಈಗಲೂ ನನ್ನೊಳಗೆ ಹಾಗೇ ಉಳಿದಿದೆ.

ನಾನು ತೇಜಸ್ವಿ ಲೋಕದಲ್ಲಿ ಸೇರಿಹೋದೆ ಎಂದರೆ ಯಾರಾದರೂ ನಕ್ಕಾರು. ಯಾಕೆಂದರೆ ತೇಜಸ್ವಿ ಎಂಬ ಜಗತ್ತಿನಲ್ಲಿ ಸೇರಿ ಹೋಗದಿದ್ದವರಾರು?

ತೇಜಸ್ವಿಯತ್ತ ಹೇಗೆ ಜನ ಮುಗಿಬಿದ್ದು ಬಂದರೋ ಅದೇ ರೀತಿ ತೇಜಸ್ವಿ ಸಹಾ ಮುಗಿಬಿದ್ದು ತಮ್ಮ ಲೋಕವನ್ನು ಜನರ ಎದೆ ಹೊಲದೊಳಗೆ ನಡೆಸಿಕೊಂಡುಬಂದುಬಿಟ್ಟರು.

ತೇಜಸ್ವಿ ಗೊತ್ತಿರುವ ಪ್ರತಿಯೊಬ್ಬರಿಗೂ ರಾಜೇಶ್ವರಿ ಗೊತ್ತು. ಸುಸ್ಮಿತಾ, ಈಶಾನ್ಯೆ ಗೊತ್ತು.

ತೇಜಸ್ವಿ ಕುಟುಂಬ ಮಾತ್ರವಲ್ಲ ಅವರ ಗೆಳೆಯರ ಗುಂಪೂ ಗೊತ್ತು. ಅವರ ಜೊತೆ ಗಾಳ ಹಿಡಿದು ನಡೆದವರು ಗೊತ್ತು, ಅವರ ಸ್ಕೂಟರ್ ರಿಪೇರಿ ಮಾಡಿದವರು ಗೊತ್ತು. ಅವರಿಗೆ ನ್ಯೂಸ್ ಪೇಪರ್ ಕೊಡುತ್ತಿದ್ದವರು ಗೊತ್ತು.

ಅವರೆಲ್ಲಾ ಗೊತ್ತಿಲ್ಲದೆಯೂ ಇರಬಹುದೇನೋ? ಆದರೆ ಆ ಕುಬಿ, ಆ ಇಯಾಲ, ಕರ್ವಾಲೋ, ಮಂದಣ್ಣ, ಎಂಗ್ಟ, ಕೃಷ್ಣೇಗೌಡ, ಆ ಗಯ್ಯಾಳಿಯರು, ಬಿರಿಯಾನಿ ಕರಿಯಪ್ಪ ಎಲ್ಲರೂ ಗೊತ್ತು.

ನನಗೆ ಈಗಲೂ ವಿಸ್ಮಯ ತೇಜಸ್ವಿ ಆ ಮ್ಯಾಜಿಕ್ ಸಾಧಿಸಿದ್ದು ಹೇಗೆ?

‘ತೇಜಸ್ವಿ ಇನ್ನಿಲ್ಲ’ ಎಂಬ ಸುದ್ದಿ ಬಂದಾಗ ಸೂರ್ಯ ಇನ್ನೂ ಬಾಡಿರಲಿಲ್ಲ. ಆದರೂ ಒಂದು ಕಾರ್ಮೋಡ ಧುತ್ತನೆ ಎಲ್ಲಿಂದಲೋ ಎದ್ದು ತೇಜಸ್ಸನ್ನು ನುಂಗಿ ಹಾಕಿದ ಅನುಭವ.

ಎದೆ ಭಾರವಾಗಿ ಹೋಗಿತ್ತು.

ನಾನು ಆಗ ‘ಈಟಿವಿ’ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದೆ. ಎದೆಯೊಳಗೆ ಅಳಲು ಇದ್ದರೂ ದಿಢೀರನೆ ರಂಗಕ್ಕೆ ಧುಮುಕಲೇಬೇಕಾದ ಅನಿವಾರ್ಯತೆ.

ತೇಜಸ್ವಿ ಇಲ್ಲ ಎನ್ನುವ ಸುದ್ದಿ ಗೊತ್ತಾಗುತ್ತಾ ಹೋದಂತೆ ಒಬ್ಬೊಬ್ಬರೇ ನಾನಿದ್ದ ಕಡೆಗೆ ನಡೆದು ಬಂದರು.

ಕೆಲ ಕ್ಷಣಗಳಲ್ಲಿ ನೋಡುತ್ತೇನೆ ಅಲ್ಲಿದ್ದವರು ಸಂಪಾದಕೀಯ ವಿಭಾಗದವರು ಮಾತ್ರವಲ್ಲ, ಐ ಟಿ ತಂಡದವರು, ಕ್ಯಾಮೆರಾಮನ್ ಗಳು, ಸಂಕಲನಕಾರರು ಕೊನೆಗೆ ನಮ್ಮ ರಿಸೆಪ್ಶನಿಸ್ಟ್.. ಎಲ್ಲರೂ ಸೇರುತ್ತಲೇ ಇದ್ದರು.

ಹೌದಲ್ಲಾ ಈ ಎಲ್ಲರೊಳಗೂ ತೇಜಸ್ವಿ ಹರಡಿ ಹೋಗಿದ್ದು ಹೇಗೆ?

ಆ ಒಂದು ಕಾಲದಲ್ಲಿ ನಮ್ಮ ಮನೆಯ ಕಪಾಟಿನ ತುಂಬಾ ಕುವೆಂಪು. ನನ್ನ ಅಣ್ಣ ಗಂಟೆಗಟ್ಟಲೆ ನಡೆದು ಬಸ್ ಚಾರ್ಜ್ ಉಳಿಸಿ ದೊಡ್ಡ ಕ್ಯೂ ನಲ್ಲಿ ನಿಂತು ಕೊಂಡು ತಂದಿದ್ದ ‘ಶ್ರೀ ರಾಮಾಯಣ ದರ್ಶನಂ’ನಿಂದ ಹಿಡಿದು ಒಂದು ಮಹಾ ಕಾವ್ಯದಂತೆಯೇ ಮತ್ತೆ ಮತ್ತೆ ನಾವು ಓದುತ್ತಿದ್ದ ‘ಮಲೆಗಳಲ್ಲಿ ಮದುಮಗಳು’ ‘ಕಾನೂರು ಹೆಗ್ಗಡತಿ’.. ಹೀಗೆ.

ಒಂದಷ್ಟು ವರ್ಷ ಸರಿದುಹೋಯ್ತು. ನೋಡಿದರೆ ನಮಗೆ ಅರಿವಿಲ್ಲದಂತೆ ತೇಜಸ್ವಿ ಅಪ್ಪನ ಪಕ್ಕ ಜಾಗ ಮಾಡಿ ಕುಳಿತುಬಿಟ್ಟಿದ್ದರು.

ತೇಜಸ್ವಿ ನನ್ನೊಳಗೆ ಪ್ರವೇಶಿಸಿದ್ದು ಹೀಗೆ..

ತೇಜಸ್ವಿಯವರನ್ನು ನಾನು ಮೊದಲು ಕಂಡಿದ್ದು ಬಿ ಎ ವಿವೇಕ ರೈ ಅವರ ಮೂಲಕ. ಮಂಗಳ ಗಂಗೋತ್ರಿಯ ಅಂಗಳದಲ್ಲಿ. ಅವರು ಹಮ್ಮಿಕೊಂಡಿದ್ದ ವಿಚಾರ ಸಂಕಿರಣಕ್ಕೆ ತೇಜಸ್ವಿ ತೆರೆ ಎಳೆಯಬೇಕಿತ್ತು.

ಆಗ ತಾನೇ ಪದವಿ ಮುಗಿಸಿದ್ದ ನಾವು ತೇಜಸ್ವಿಯವರನ್ನು ನೋಡಿಯೇಬಿಡೋಣ ಎಂದು ರಾತ್ರೋರಾತ್ರಿ ಮಂಗಳೂರಿನ ಬಸ್ ಹತ್ತಿಬಿಟ್ಟಿದ್ದೆವು.

ಸಂಕಿರಣ ಮುಗಿಯುತ್ತಾ ಬಂದರೂ ತೇಜಸ್ವಿ ಸುಳಿವಿಲ್ಲ.

ಕೈ ಕೊಟ್ಟರು ಎಂದುಕೊಂಡು ಕಟ್ಟಡದ ಹೊರಗೆ ಬಂದರೆ ಆ ಕಲ್ಲು ನೆಲದ ಮೇಲೆ ತೇಜಸ್ವಿ ಆರಾಮವಾಗಿ ಹರಟೆ ಹೊಡೆಯುತ್ತಿದ್ದಾರೆ. ಸುತ್ತ ಒಂದು ದೊಡ್ಡ ಹಿಂಡು. ಮಾತು ಮಾತಿಗೂ ಕುಲು ಕುಲು ನಗುತ್ತಾ ಪಕ್ಕದಲ್ಲಿದ್ದವರಿಗೂ ಆ ಸಾಂಕ್ರಾಮಿಕ ರೋಗವನ್ನು ಹಂಚುತ್ತಾ ತೇಜಸ್ವಿ ಕುಳಿತಿದ್ದರು.

ಒಮ್ಮೆ ಹೀಗೇ ಹುಕಿ ಬಂದು ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ‘ಧೋ’ ಎಂದು ಸುರಿಯುವ ಮಳೆಯಲ್ಲಿ ಪಶ್ಚಿಮ ಘಟ್ಟಗಳನ್ನು ಮಣಿಸಿಯೇಬಿಡಬೇಕು ಎಂದು ನಮ್ಮ ತಂಡ ಹೊರಟಿತ್ತು.

ಕಡಿದಾದ ತಿರುವುಗಳ, ಮೈ ಜುಂ ಎನಿಸುವ ಚಾರ್ಮಾಡಿ ಘಟ್ಟವನ್ನು ಹಿಂದಿಕ್ಕಿ ಅಬ್ಬ ಎಂದು ಉಸಿರೆಳೆದುಕೊಳ್ಳುತ್ತಾ ಪಕ್ಕಕ್ಕೆ ತಿರುಗಿದರೆ ಅರೆ! ತೇಜಸ್ವಿ.

ಮನೆಮಂದಿಯನ್ನೆಲ್ಲ ಒಟ್ಟು ಮಾಡಿಕೊಂಡು ನಮ್ಮಂತೆಯೇ ಅವರೂ ಅದೇ ಘಟ್ಟಕ್ಕೆ ಬಂದು ನಿಂತಿದ್ದಾರೆ. ಕಾಲ ಕೆಳಗೆ ಅಗಾಧವಾಗಿ ಮೈ ಚೆಲ್ಲಿಕೊಂಡಿದ್ದ ಕಾಡನ್ನು ನೋಡುತ್ತಾ..

ತೇಜಸ್ವಿಯವರೊಡನೆ ಮೀನು ಹಿಡಿದು, ಹಂದಿ ಶಿಕಾರಿ ಮಾಡಿ, ಅವರೊಡನೆ ಕ್ಯಾಮೆರಾ ಏರಿಸಿಕೊಂಡು ಹಕ್ಕಿಗಳ ಕ್ಲಿಕ್ಕಿಸಿ, ಬ್ರಶ್ ಹಿಡಿದು ಬಣ್ಣ ಹರಡಿ, ಒಲೆ ಮೇಲೆ ಅನ್ನ ಬೇಯಿಸಿ, ಕಂಪ್ಯೂಟರ್ ಮುಂದೆ ಕೂತು ನಾಳೆಗೆ ಒಂದು ತತ್ರಾಂಶ ರೂಪಿಸಲು ಯತ್ನಿಸಿ..

…ಹೀಗೆ ತೇಜಸ್ವಿ ಮಾಡುತ್ತಿದ್ದ ಯಾವ ಕೆಲಸದಲ್ಲೂ ತಾವು ಹೊರಗೆ ನಿಂತವರಲ್ಲ ಎಂದು ತೇಜಸ್ವಿಯ ಪ್ರತೀ ಓದುಗರಿಗೆ ಅನಿಸುತ್ತಿತ್ತು.

ತೇಜಸ್ವಿ ಇಲ್ಲವಾಗಿ ಹೋದಾಗ ಹರಿದಾಡಿದ ರಾಶಿ ರಾಶಿ ಮೆಸೇಜ್ ಗಳು, ಈ- ಮೇಲ್ ಗಳು ನನ್ನನ್ನು ಇನ್ನೂ ವಿಸ್ಮಯಕ್ಕೆ ತಳ್ಳಿದೆ.

ಹಾಗಾಗಿಯೇ ತೇಜಸ್ವಿ ಇಲ್ಲವಾದ ಆ ದಿನ ಇಡೀ ನಮ್ಮ ಬುಲೆಟಿನ್ ಅನ್ನು ತೇಜಸ್ವಿಗೆ ಮೀಸಲಿಟ್ಟುಬಿಟ್ಟೆ.

ತಕ್ಷಣ ಫೋನ್ ಬಂತು ‘ಯಾಕೆ ಇವತ್ತು ಜಗತ್ತಿನಲ್ಲಿ ಇನ್ನೇನೂ ಘಟಿಸಲೇ ಇಲ್ಲವಾ’ ಅಂತ. ನಾನು ಒಂದು ಕ್ಷಣ ಮೌನವಾಗಿದ್ದು ಹೇಳಿದೆ ‘ಇಲ್ಲ ಕನ್ನಡದ ಲೋಕದ ಮಟ್ಟಿಗಂತೂ ಇವತ್ತು ಇನ್ನೇನೂ ಕಾಣಲು ಸಾಧ್ಯವಿಲ್ಲ’.

ತೇಜಸ್ವಿ ನನ್ನೊಳಗೆ ಒಂದು ಅಗಾಧ ನಿಟ್ಟುಸಿರನ್ನು ಬಿಟ್ಟು ಹೋದರು

ಈಗಲೂ ಅಷ್ಟೇ ಈಟಿವಿಯ ಬುಲೆಟಿನ್ ಗಳನ್ನ ತಿರುವಿ ಹಾಕುತ್ತಾ ಕುಳಿತರೆ ಕಣ್ಣು ಮಂಜಾಗುತ್ತದೆ. ನಮ್ಮ ಮನೆಯ ನೆಂಟನೊಬ್ಬ ಎದ್ದು ಹೋಗಿಬಿಟ್ಟರೇನೋ ಎಂಬಂತೆ.

ಇದೇ ನನಗೆ ತೇಜಸ್ವಿಯವರ ಬೆನ್ನು ಬೀಳಲು ಒತ್ತಾಸೆಯಾಯಿತೇನೋ. ಆ ವೇಳೆಗೆ ಪಿ ಮಹಮದ್ ತೇಜಸ್ವಿಯವರ ಕ್ಯಾರಿಕೇಚರ್ ಒಂದನ್ನು ಬರೆದಿದ್ದರು ಬಹುಷಃ ತೇಜಸ್ವಿಯವರ ಎಲ್ಲಾ ‘ಹುಚ್ಚಾಟ’ವನ್ನೂ ಕಟ್ಟಿಕೊಡುವ ಚಿತ್ರ ಅದು.

ಅದನ್ನಿಟ್ಟುಕೊಂಡು ತೇಜಸ್ವಿ ಗ್ರೀಟಿಂಗ್ ಕಾರ್ಡ್, ತೇಜಸ್ವಿ ಚಹಾ ಕಪ್, ಓದುವ ಕೋಣೆಗೆಂದೇ ಟೈಲ್ ಗಳನ್ನೂ ರೂಪಿಸಿದೆವು. ಅದನ್ನು ಬಿಡುಗಡೆ ಮಾಡಲು ಬಂದಿದ್ದ ಜಯಂತ್ ಕಾಯ್ಕಿಣಿ ‘ತೇಜಸ್ವಿ ಏನಾದರೂ ಇದನ್ನು ನೋಡಿದ್ದರೆ ನನಗೆ ಎಂತಾ ಸ್ಥಿತಿ ತಂದ್ಯಲ್ಲಪ್ಪಾ ಎಂದು ಗಹಗಹಿಸಿ ನಗುತ್ತಿದ್ದರು’ ಎಂದರು.

ತೇಜಸ್ವಿ ಗುಂಗು ನನ್ನನ್ನು ಖಂಡಿತಾ ಬಿಟ್ಟಿಲ್ಲ. ಹಾಗಾಗಿಯೇ ಆ ನಂತರವೂ ‘ಸಮಯ’ ಚಾನಲ್ ಗಾಗಿ ‘ಹಾಯ್ ತೇಜಸ್ವಿ’ ರೂಪಿಸಿದ್ದಾಯ್ತು.

ತೇಜಸ್ವಿಯವರ ಜೊತೆ ಒಡನಾಡಿದವರ ಕಣ್ಣುಗಳ ಮೂಲಕ ತೇಜಸ್ವಿಯವರನ್ನು ಕಟ್ಟಿಕೊಡುವ ಪ್ರಯತ್ನ ಅದು. ತೇಜಸ್ವಿ ಇನ್ ಲವ್, ಸ್ಕೂಟರ್ ಮೆಕ್ಯಾನಿಕ್ ತೇಜಸ್ವಿ, ಹಂಟಿಂಗ್ ವಿಥ್ ತೇಜಸ್ವಿ, ಇದು ತೇಜಸ್ವಿ ಮದುವೆ, ಫಿಶಿಂಗ್ ವಿಥ್ ತೇಜಸ್ವಿ ಹೀಗೆ ತೇಜಸ್ವಿಯ ಮಾಯಾ ಲೋಕವನ್ನು ಬಿಚ್ಚಿಡುತ್ತಾ ಸಾಗಿದೆವು.

ಇಷ್ಟಾದರೂ ತೇಜಸ್ವಿ ನನ್ನೊಳಗೆ ಭೋರ್ಗರೆಯುತ್ತಲೇ ಇದ್ದಾರೆ.

ತೇಜಸ್ವಿ ಇಲ್ಲ ಎನ್ನುವ ಸುದ್ದಿಯನ್ನು ನಾವು ಬಿತ್ತರಿಸುತ್ತಿದ್ದಂತೆ ಸವಿತಾ ನಾಗಭೂಷಣ-
‘ಎಲ್ಲೋ ಅಲ್ಲೇ ಇರುವಂತಿದೆ ಕಾಡಿನೊಳಗೆ ಜೀವ
ಗಿಳಿ ಗೊರವಂಕ ಮರಕುತಿಟಿಗ ಒಯ್ದು ನೀಡಿರೇ ಕಂಬನಿ ಹೂವ’ ಎನ್ನುವ ಮೆಸೇಜ್ ಕಳಿಸಿದರು.

ಮತ್ತೆ ತೇಜಸ್ವಿ ನನ್ನೊಳಗಾಡಿದರು..


ಫೋಟೋ: fb/tejasviniruttara

ರಾಯಲ್ ಎನ್ ಫೀಲ್ಡ್ ಅಪಘಾತ; ವ್ಯಕ್ತಿ‌ ಚಿಂತಾಜನಕ ಸ್ಥಿತಿ

ತುಮಕೂರು: ಡಾಬಸ್ ಪೇಟೆ ಬಳಿ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

ರಾಯಲ್ ಎನ್ ಫೀಲ್ಡ್ ನಲ್ಲಿ ಬೆಂಗಳೂರಿಂದ ಬರುತ್ತಿದ್ದಾಗ ಡಾಬಸ್ ಪೇಟೆ ಬ್ರಿಡ್ಜ್ ಬಳಿ ಅಪಘಾತವಾಗಿದೆ.

ಸಾವಿನೊಂದಿಗೆ ಹೋರಾಡುತ್ತಿರುವ ವ್ಯಕ್ತಿಯನ್ನು ಪಾವಗಡ ತಾಲೂಕು ಬ್ಯಾಡನೂರು ದೊಡ್ಡಹಟ್ಟಿಯವರೆಂದು ಗುರುತಿಸಲಾಗಿದೆ.
ಬುಲೆಟ್ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ತಲೆಗೆ ಪೆಟ್ಟು ಬಿದ್ದಿದೆ.

ತುಮಕೂರು ಕೊರೊನಾ ಆರ್ಭಟ: ಇಲ್ಲಿದೆ ವಿವರ

ತುಮಕೂರು; ಜಿಲ್ಲೆಯಲ್ಲಿ ಹೊಸದಾಗಿ 35 ಮಂದಿಗೆ ಕೋವಿಡ್ -19 ಸೋಂಕು ದೃಢ, ಒಟ್ಟು ಸೋಂಕಿತರ ಸಂಖ್ಯೆ 513 ಕ್ಕೆ ಏರಿಕೆಯಾಗಿದೆ ಎಂದು ಡಿಹೆಚ್ಒ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.

ತುಮಕೂರು ನಗರದಲ್ಲಿ ಸೋಂಕು ಹೆಚ್ಚುತ್ತಿದ್ದು, ಇವೊತ್ತು ಮತ್ತೇ 31 ಮಂದಿಗೆ ಸೊಂಕು ಕಾಣಿಸಿಕೊಂಡಿದೆ.

ಸಿಬ್ಬಂದಿಗೆ ಸೋಕು ದೃಢಪಟ್ಟ ಹಿನ್ನೆಲೆಯಲ್ಲಿ ತುಮಕೂರು‌ ನಗರ ಠಾಣೆಯನ್ನು ಸೀಲ್ಡ್ ಡೌನ್ ಮಾಡಲಾಗಿದೆ.

ಇನ್ನೂ ಗ್ರಾಮಾಂತರ ಠಾಣೆಯಲ್ಲೂ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ.

ಗುಬ್ಬಿಯಲ್ಲಿ ಎರಡು ಪ್ರಕರಣಗಳು ಕಂಡು ಬಂದಿದ್ದು, ಹೆಸರಾಂತ ರಾಸುಗಳ ಸಂತೆ ನಡೆಯುವ ಕೆ.ಜಿ.ಟೆಂಪಲ್ ಸೀಲ್ಡ್ ಡೌನ್ ಮಾಡಲಾಗಿದೆ.

ಕುಣಿಗಲ್, ಶಿರಾದಲ್ಲಿ ತಲಾ ಒಂದು ಪ್ರಕರಣ ಕಂಡು ಬಂದಿವೆ. ಈ ದಿನ ಮತ್ತೊಂದು ಸಾವು ಆಗಿದೆ.