Saturday, May 9, 2026
Google search engine
Home Blog Page 191

SBI ಬ್ಯಾಂಕ್ ನಕಲಿ ಶಾಖೆ ಬೆಳಕಿಗೆ

ತುಮಕೂರು: ಎಂತೆಂಥ ಕಳ್ಳರು, ಕದೀಮರು,‌ನಕಲಿಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭೂಪ sbi ಬ್ಯಾಂಕ್ ನ ನಕಲಿ ಶಾಖೆಯನ್ನೇ ವಹಿವಾಟು ನಡೆಸುತ್ತಿದ್ದ.

ತಮಿಳುನಾಡಿನ ಪನುರುಟ್ಟಿ ನಗರದಲ್ಲಿ ಈ ಶಾಖೆ ಕಾರ್ಯನಿರ್ವಹಿಸುತ್ತಿತ್ತು. ಕದ್ಲರ್ ಜಿಲ್ಲೆಯಲ್ಲಿ ಇದು ಇದೆ.

ಬ್ಯಾಂಕ್ ಗೆ‌ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದ ಅವನು sbi ಬ್ಯಾಂಕ್ ಗಳಂತೆಯೇ ಕೆಲಸ ಮಾಡಿಸುತ್ತಿದ್ದನು.

ಈ ಶಾಖೆಯಲ್ಲಿ ನೂರಾರು ಜನರು ಖಾತೆ ತೆರೆದಿದ್ದರು. ಇದೇ ನಗರದಲ್ಲಿ SBI ಬ್ಯಾಂಕ್ ಗೆ ಸೇರಿದ ಇನ್ನೂ ಎರಡು ಶಾಖೆಗಳಿವೆ.

ಈ ಎರಡು ಶಾಖೆಗಳು ಇದ್ದರೂ ನಕಲಿ ಬ್ಯಾಂಕ್ ಶಾಖೆಯ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ.

ಮೂರು ತಿಂಗಳಿಂದ ಈ‌ ನಕಲಿ ಶಾಖೆ ಕೆಲಸ ನಿರ್ವಹಿಸುತ್ತಿತ್ತು.

ಗ್ರಾಹಕರೊಬ್ಬರು ಅಸಲೀ ಶಾಖೆಗೆ ಹೋಗಿದ್ದಾಗ ಹೊಸದಾಗಿ ತೆರೆದಿರುವ ಈ ಶಾಖೆಯ ಬಗ್ಗೆ ಅಲ್ಲಿನ ಮ್ಯಾನೇಜರ್ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ. ಆಗ ಈ ಕಥೆ ಬೆಳಕಿಗೆ ಬಂದಿದೆ.

ದೂರಿನ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿಯ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಮ್ಯಾನೇಜರ್ ತಲೆ ತಪ್ಪಿಸಿಕೊಂಡಿದ್ದಾನೆ.

ದೇವಾಂಗರ ಬೀದಿ ಸೀಲ್ಡ್ ಡೌನ್‌‌ ನೆರವು

ಚಿಕ್ಕನಾಯಕನಹಳ್ಳಿ: ಪುರಸಭಾ ವ್ಯಾಪ್ತಿಯ ದೇವಾಂಗರ ಬೀದಿ ಸೀಲ್ ಡೌನ್ ಆಗಿದ್ದು ಅಲ್ಲಿನ ಕೊರೋನಾ ಪೀಡಿತ ಪ್ರದೇಶದ ಕುಟುಂಬಗಳಿಗೆ ಆತ್ಮವಿಶ್ವಾಸ ತುಂಬಿ ಅವರಿಗೆ ದಿನನಿತ್ಯದ ವಸ್ತುಗಳಾದ ದಿನಸಿ, ತರಕಾರಿ, ಅಗತ್ಯ ಔಷಧಿಗಳನ್ನು ನೀಡಿ ಧೈರ್ಯ ತುಂಬಲಾಹಿತು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರು, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚೇತನ್ ಗಂಗಾಧರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಲ್ಲೇಶ್ ರವರು ಮತ್ತು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಮಚಂದ್ರಯ್ಯ ನವರು ಪಾಲ್ಗೊಂಡಿದ್ದರು.

ಕ್ಲಾಸ್ ರೂಂ v/s ನ್ಯೂಸ್ ರೂಂ

ಜಿ.ಎನ್.ಮೋಹನ್


ಹೆಸರು?
-ಕಾಶೀನಾಥ ಚಂದ್ರಕಾಂತ ಬಗರೆ.

‘ಬಗರೆ’ ಅಂದ್ರೇನು?
-ನಮ್ಮ ತಂದೆ ಇಟ್ಟಿರೋ ಹೆಸರು.

ಅದು ಸರಿ, ಆದ್ರೆ ‘ಬಗರೆ’ ಅಂತ ಯಾಕಿಟ್ರು?
-ಗೊತ್ತಿಲ್ಲ ಸಾರ್, ಅವರು ಇಟ್ರು

ಎದುರುಗಡೆ ಕುಳಿತಿದ್ದ ಹುಡುಗನ ಮುಖ ನೋಡಿದೆ.

ಅವನ ಕಣ್ಣಲ್ಲಿ ಫಳ ಫಳ ಅನ್ನೋ ಆತ್ಮವಿಶ್ವಾಸ ಮಿಂಚ್ತಿತ್ತು. ಇನ್ನು ಎರಡೇ ಎರಡು ತಿಂಗಳು. ಇದು ಮುಗಿದುಬಿಟ್ರೆ ನಾನೂ ಕೂಡಾ ‘ಜರ್ನಲಿಸ್ಟ್’ ಆಗಿಬಿಡ್ತೀನಿ ಅನ್ನೋ ಅವಸರ ಇಣುಕ್ತಾ ಇತ್ತು. ಎರಡೇ ತಿಂಗಳು- ನೂರೆಂಟು ರಾಜದೀಪ್ ಸರ್ದೇಸಾಯ್, ನೂರೆಂಟು ಬರ್ಖಾ ದತ್ ಸೃಷ್ಟಿ ಆಗ್ಬಿಡೋದಿಕ್ಕೆ.

ಜುಲೈ – ಆಗಸ್ಟ್ ತಿಂಗಳು ಬಂತು ಅಂದ್ರೆ ಸಾಕು ಯಾವ ಪೇಪರ್, ಚಾನಲ್, ಮೀಡಿಯಾ ಹೌಸ್ ಗಳಿಗೆ ಹೋದ್ರೂ ಗಿಜಿ ಗಿಜಿ ವಾತಾವರಣ. ಹತ್ತಾರು ಹೊಸ ಮುಖಗಳು.

ಮೀಡಿಯಾ ಲೋಕದಲ್ಲಿ ಇರುವವರಿಗೆ ಚೆನ್ನಾಗಿ ಗೊತ್ತು. ಆಷಾಡ ಮಾಸ ಮುಗಿದ ಮೇಲೆ ಬರೋದು ವಸಂತ ಮಾಸ ಅಲ್ಲ ‘ಇಂಟರ್ನ್ ಶಿಪ್ ಮಾಸ’ ಅಂತ.

ಬೇರೆ ಬೇರೆ ಕಾಲೇಜು, ಯೂನಿವರ್ಸಿಟಿಗಳಲ್ಲಿ ಪತ್ರಿಕೋದ್ಯಮ ಓದಿದ ವಿದ್ಯಾರ್ಥಿಗಳು ಪ್ರಾಕ್ಟಿಕಲ್ ಆಗಿ ಮೀಡಿಯಾ ಹೇಗಿರುತ್ತೆ ಅಂತ ತಿಳಕೊಳ್ಳೋದಿಕ್ಕೆ ಮೀಡಿಯಾ ಆಫೀಸ್ ಗಳಿಗೆ ಬರ್ತಾರೆ.

ಒಂದು – ಎರಡು ತಿಂಗಳು ಇದ್ದು ತಾವು ಕಲಿತದ್ದನ್ನೆಲ್ಲ ಟೆಸ್ಟ್ ಮಾಡಿ ನೋಡ್ಬಿಡಬೇಕು ಅಂತ ಚಡಪಡಿಸ್ತಿರ್ತಾರೆ. ‘I am from the Press’ ಅಂತ ಹೇಳಿಕೊಳ್ಳೋದಿಕ್ಕೆ ಇರೋ ದೂರ ಕೇವಲ ಎರಡು ತಿಂಗಳಿನದ್ದು.

‘ಅಲ್ಲಪ್ಪಾ, Nose for the News ಮೊದಲ ಶುರುವಾಗೋದು ನಮ್ಮಿಂದಲೇ, ನಮ್ಮ ಹೆಸರಿಂದಲೇ. ಬೇರೆ ಯಾವುದೋ ಪ್ರೊಫೆಶನ್ ನವರಿಗೆ ‘ಬಗರೆ’ ಅಂತ ಯಾಕಿಟ್ರು ಅಂತ ಗೊತ್ತಿಲ್ಲದೆ ಹೋದ್ರೆ ಪರವಾಗಿಲ್ಲ. ಆದ್ರೆ ನೀನು ಜರ್ನಲಿಸ್ಟ್ ಆಗೋನು. ಸುದ್ದೀಗೆ ಮೂಗು ತೂರಿಸೋನು, ನ್ಯೂಸ್ ಅನ್ನೋದು ನಮ್ಮಿಂದಾನೆ ಶುರು ಆಗ್ಬೇಕು ಅಲ್ವಾ’ ಅಂದೆ.

ಮಾರನೆಯ ದಿನ ಅದೇ ಕಾಶೀನಾಥ ಬಗರೆ ನನ್ನೆದ್ರು ನಿಂತಾಗ ಅವನ ಮುಖದಲ್ಲಿ ಕಾನ್ಫಿಡೆನ್ಸ್ ಹತ್ತು ಪಟ್ಟು ಜಾಸ್ತಿ ಆಗಿತ್ತು.

‘ಸಾರ್, ನಮ್ಮ ಪೂರ್ವಜರು ಬಣ್ಣದ ಕೆಲಸದಲ್ಲಿದ್ದವರು. ಅವ್ರಿಗೆ ರಂಗದಾಳೆ ಅಂತ ಕರೀತಿದ್ರು. ನಮ್ಮ ಫ್ಯಾಮಿಲಿ ಬುಗುರೀಗೆ ಬಣ್ಣಾ ಹಾಕೋದ್ರಲ್ಲಿ ಎತ್ತಿದ ಕೈ. ಹಾಗಾಗಿ ಅದೇ ಹೆಸರು ಅಂಟಿಕೊಳ್ತು. ಬುಗರಿಹೋಗಿ ಬಗರೆ ಆಯ್ತು’ ಅಂದ.

ಆತ ಅಷ್ಟಕ್ಕೆ ಸುಮ್ಮನಾಗಲಿಲ್ಲ.

ತನ್ನ ತಾಯಿ ಪಾರ್ವತಿ ಅಚಲ್ ಕರ್ ಅವರ ಹೆಸರಲ್ಲಿದ್ದ ಅಚಲ್ ಕರ್ ಬೆನ್ನಿಗೂ ಬಿದ್ದಿದ್ದ. ಅಷ್ಟೇ ಆಗಿದ್ದರೆ ಆಶ್ಚರ್ಯ ಆಗ್ತಿರಲಿಲ್ಲ. ಆತ ತನ್ನ ಕಿವಿ ಮೇಲೆ ಆಗೀಗ ಬೀಳ್ತಿದ್ದ ರಾಶೀನ್ ಕರ್, ಧಾರವಾಡಕರ್, ಕುಮಟೆ, ಪುಠಾಣೆ- ಹೀಗೆ ಎಲ್ಲಾ ಹೆಸರುಗಳ ಬೆನ್ನಟ್ಟಿ ಹೋಗಿದ್ದ.

ತಮ್ಮ ಅನೇಕ ಸರ್ ನೇಮ್ ಗಳಲ್ಲಿ ಈ ‘ಕರ್’ ಯಾಕೆ ಮೇಲಿಂದ ಮೇಲೆ ಬರುತ್ತೆ ಅಂತ ಹುಡುಕಿದ್ದ.

ಅಷ್ಟಕ್ಕೂ ನಿಲ್ಲಿಸದೆ ತಮ್ಮ ಪೂರ್ವಜರು ಎಲ್ಲಿದ್ದರು, ನಂತರ ಎಲ್ಲೆಲ್ಲಾ ಹರಡಿ ಹೋದರು, ತಮ್ಮ ಕುಟುಂಬಗಳು ಯಾಕೆ ಬಟ್ಟೆ ಮಾರಾಟ ಹಾಗೂ ಟೈಲರಿಂಗ್ ಗೆ ಸೀಮಿತ ಆಗಿದೆ. ಈ ಎರಡೂ ವೃತ್ತಿ ಈಗ ಹೇಗೆ ಏದುಸಿರುಬಿಡ್ತಾ ಇದೆ ಅಂತೆಲ್ಲಾ ವಿಚಾರಿಸಿದ್ದ.

‘ಷೂವಣ್ ಸರ್ ಲ್ ನಹೀ, ಪೋಟ್ ಭರ್ ಲ್ ನಹೀ’ (ಹೊಲಿಗೆ ಹೊಲಿಯೋದು ತಪ್ಪಲಿಲ್ಲ, ಹೊಟ್ಟೆ ತುಂಬಲಿಲ್ಲ) ಹಾಗಾಗೀನೇ ನಾನು ಸೂಜಿ ಹಿಡಿಯೋದು ಬಿಟ್ಟು, ಮೀಡಿಯಾ ಸ್ಟೂಡೆಂಟ್ ಆದೆ ಅಂತ ನಿಟ್ಟುಸಿರಿಟ್ಟ.

ಅರೆ! ತನ್ನ ಜೊತೆಯೇ 22 ವರ್ಷಗಳಿಂದ ಓಡಾಡಿದ್ದ ಒಂದು ಹೆಸರು ಏನೆಲ್ಲಾ ಕಥೆಯನ್ನು ಬಚ್ಚಿಟ್ಟುಕೊಂಡಿತ್ತು.

ಬಗರೆ ಎನ್ನುವ ಒಂದು ಹೆಸರು ಹೇಗೆ ಭಾವಸಾರ ಕ್ಷತ್ರಿಯ ಲೋಕದ ದುರಂತವನ್ನೇ ಅನಾವರಣ ಮಾಡಿತ್ತು.

ಒಂದು ಕುತೂಹಲ ಒಂದು ಹಪಾಹಪಿ, ಅಥವಾ ಸರಿಯಾಗಿರುವ ಒಂದು ಮೂಗು ಏನೆಲ್ಲಾ ನಮ್ಮ ಮುಂದೆ ತಂದು ಹರಡಲು ಸಾಧ್ಯ ಅನಿಸಿತು.

ನನ್ನ ಮುಂದಿದ್ದ ಮನೋಜ್, ವಿನಯ್, ಸಂತೋಷ್, ಮಲ್ಲೇಶಪ್ಪ, ನಂದೀಶ್, ನಂಜೇಗೌಡ, ಅನಿಲ್, ರವಿಚಂದ್ರ, ಗುರು ಅವರ ಮುಖ ನೋಡಿದೆ.

ಅವರ ಹೆಸರುಗಳು ಸರ್ ನೇಮ್ ತಗುಲಿಸಿಕೊಂಡಿರದಿದ್ದರೂ ಒಂದು ಸಿನೆಮಾ, ಟಿವಿ ಸೀರಿಯಲ್ ಗೆ ಬೇಕಾದ ಎಲ್ಲಾ ತಿರುವುಗಳನ್ನೂ ಹೊಂದಿತ್ತು.

ಆ ಹೆಸರುಗಳ ಹಿಂದೆ ಹಳೆಯ ನೆನಪಿತ್ತು, ಪೂರ್ವಿಕರ ಸ್ಮರಣೆ ಇತ್ತು, ಇಲ್ಲವಾದವರ ಬಗೆಗಿನ ಕಣ್ಣೀರಿತ್ತು, ಜಾತಿಯಿಂದ ನೊಂದ ನಿಟ್ಟುಸಿರಿತ್ತು.

ಇದೆಲ್ಲಾ ನನಗೆ ನೆನಪಾಗಿದ್ದು ಎಕ್ಸ್ ಪ್ರೆಸ್ ಗ್ರೂಪ್ ನೀಡಿದ್ದ ಜಾಹೀರಾತಿನಿಂದ.

ತಾನು ಆರಂಭಿಸಲಿರುವ ಪತ್ರಿಕೋದ್ಯಮ ಕೋರ್ಸ್ ಗೆ ಅದು ನೀಡಿದ ಕರೆ- ‘ಕ್ಲಾಸ್ ರೂಂ ಬಿಡಿ, ನ್ಯೂಸ್ ರೂಂ ಸೇರಿ’. ನಾಲ್ಕು ಗೋಡೆಯ ನಡುವೆ ಕಟ್ಟಿ ಹಾಕದೆ ಮೊದಲ ದಿನದಿಂದಲೇ ಫೀಲ್ಡ್ ನಲ್ಲಿ ತರಬೇತಿ ನೀಡುವ ಭರವಸೆಯನ್ನು ಅದು ನೀಡುತ್ತಿತ್ತು.

ಇವತ್ತು ಕೆಲವೇ ಕೆಲವು ಅಪವಾದ ಬಿಟ್ಟರೆ ಕ್ಲಾಸ್ ರೂಂ ಹಾಗೂ ನ್ಯೂಸ್ ರೂಂಗಳು ಪರಸ್ಪರ ಬೆನ್ನು ಹಾಕಿ ಕೂತುಬಿಟ್ಟಿದೆ.

ತರಗತಿಯಲ್ಲಿ ಕಲಿತ ಪತ್ರಿಕೋದ್ಯಮ ನಿಜಕ್ಕೂ ‘ಪುಸ್ತಕದ ಬದನೇಕಾಯಿ’ ಅನ್ನೋದು ಗೊತ್ತಾಗುತ್ತಿದೆ. ಅದಕ್ಕೆ ತದ್ವಿರುದ್ಧವಾಗಿ ‘ಪುಸ್ತಕ ಓದಿದ ಜರ್ನಲಿಸ್ಟ್ ಗಳೆಲ್ಲಿದ್ದಾರೆ?’ ಅಂತ ಕೇಳುವವರೂ ಇದ್ದಾರೆ.

ಇಷ್ಟು ಮಾತ್ರ ನಿಜ. ಕ್ಲಾಸ್ ರೂಂ ಹಾಗೂ ನ್ಯೂಸ್ ರೂಂ ಇನ್ನೂ ಕೈ ಕುಲುಕಿಲ್ಲ. ಪತ್ರಿಕೋದ್ಯಮ ಓದಿದರೆ ಸಾಲದು ಪೋಲ್ ವಾಲ್ಟ್ ಜಿಗಿತ ಮಾಡಿದರಷ್ಟೇ ಮೀಡಿಯಾದಲ್ಲಿ ನಿಲ್ಲಲ್ಲು ಜಾಗ ಎಂಬುದು ನ್ಯೂಸ್ ರೂಂ ಪ್ರವೇಶಿಸಿದ ಬಹುತೇಕ ಎಲ್ಲರ ಅನುಭವ.

‘ಪ್ರಜಾವಾಣಿ’ಗೆ ಆಯ್ಕೆಯಾಗಿ ಕಾಲಿಟ್ಟ ಮೊದಲ ದಿನದ ನೆನಪು ಇನ್ನೂ ಹಸಿರಾಗಿದೆ. ಕನ್ನಡ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡು, ಲ್ಯಾಬ್ ಜರ್ನಲ್ ನಲ್ಲಿ ಒಳ್ಳೇ ಮಾರ್ಕ್ಸ್ ಪಡೆದು, ಎಡಿಟಿಂಗ್ ನಲ್ಲೂ ಪರವಾಗಿಲ್ಲ ಎನಿಸಿಕೊಂಡಿದ್ದ ನಾನು ಕುಳಿತದ್ದು ನೇರ ಎಡಿಟೋರಿಯಲ್ (ಜನರಲ್) ಡೆಸ್ಕ್ ನಲ್ಲಿ.

ನ್ಯೂಸ್ ಮುಖ್ಯಸ್ಥ ಕೆ ಎಸ್ ನಾಗಭೂಷಣಂ ನನಗೆ ಏಜನ್ಸಿ ಕಾಪಿ ಕೊಟ್ಟರು. ನಾನು ಅದರ ಮೇಲೆ ಕೈಯಾಡಿಸಿ ಹತ್ತೇ ನಿಮಿಷದಲ್ಲಿ ಅವರಿಗೆ ವಾಪಸ್ ಕೊಟ್ಟೆ.

ಅವರು ಅವಾಕ್ಕಾಗಿ ‘ನೀವು ಸೆಲೆಕ್ಟ್ ಆಗಿರೋದು ಪ್ರಜಾವಾಣಿಗೋ, ಡೆಕ್ಕನ್ ಹೆರಾಲ್ಡ್ ಗೋ’ ಅಂತ ಕೇಳಿದ್ರು.

ಆಗಿದ್ದು ಇಷ್ಟೇ- ಅವರು ಕೊಟ್ಟ ಪಿಟಿಐ ಕಾಪಿಯನ್ನು ನಮ್ಮ ಕ್ಲಾಸ್ ರೂಂನಲ್ಲಿ ಹೇಳಿಕೊಟ್ಟಂತೆ ಹೆಡ್ ಲೈನ್ ಹಾಕಿ, ಕ್ಯಾಪ್ಸ್ ಮಾರ್ಕ್ ಮಾಡಿ, ಪ್ಯಾರಾ ಸಪರೇಟ್ ಮಾಡಿ, ಅನಗತ್ಯ ವಿಷಯ ಡೆಲಿಟ್ ಮಾಡಿ ಅವರ ಮುಂದಿಟ್ಟಿದ್ದೆ.

ಆದರೆ ಅದರ ಅನುವಾದ ಮಾಡಿರಲಿಲ್ಲ. ಯಾಕೆಂದರೆ ನಮ್ಮ ಎಡಿಟಿಂಗ್ ಕ್ಲಾಸ್ ಇಂಗ್ಲಿಷ್ ಎಡಿಟಿಂಗ್ ಮಾತ್ರ ಹೇಳಿಕೊಟ್ಟಿತ್ತು. ಕನ್ನಡ ಪತ್ರಿಕೋದ್ಯಮ ಕ್ಲಾಸ್ ನಲ್ಲಿ ಇಷ್ಟು ದಪ್ಪದ ನಾಡಿಗ ಕೃಷ್ಣಮೂರ್ತಿ ಪುಸ್ತಕ ಕೈಗಿಟ್ಟು ಓದಿಕೊಂಡ್ಬಿಡಿ ಅಂದಿತ್ತು.

ನ್ಯೂಸ್ ರೂಂ ನಲ್ಲಿ ಕುಳಿತಿದ್ದ ನಾನು ಕ್ಲಾಸ್ ರೂಂನ ಎಲ್ಲಾ ಅವಘಡಗಳಿಗೆ ಸಾಕ್ಷಿಯಾಗಿದ್ದೆ.

ಕೊಳವೆ ಬಾವಿಯೊಳಗೆ ಕ್ಯಾಮೆರಾ ಇಳಿಸುವ ಕಾಲಕ್ಕೆ ಬಂದಿರುವಾಗಲೂ, ತೆಹೆಲ್ಕಾ ಸ್ಟಿಂಗ್ ಗಳು ನೂರೆಂಟು ಕಡೆಯಿಂದ ಕಚ್ತಾ ಇರುವಾಗಲೂ ನಾವು ಅದೇ ಅದೇ ವಿಲ್ಬರ್ ಸ್ಕ್ರಾಂ ಕಮ್ಯುನಿಕೇಶನ್ ಮಾಡೆಲ್ ಗಳಿಗೆ ಗಂಟು ಬಿದ್ದಿದ್ದೀವಿ.

ಹೊಸಾ ಹೊಸಾ ಮಾಧ್ಯಮ, ಮಾಧ್ಯಮ ತಂತ್ರಜ್ಞಾನದಲ್ಲಿ ದಿನಕ್ಕೊಂದು ಬದಲಾವಣೆ ಆಗುತ್ತಿದ್ದರೂ ನಮ್ಮ ಸಿಲಬಸ್ ಗಳಲ್ಲಿ ಮಾತ್ರ ಅದೇ ಮುಗ್ಗುಲು ವಾಸನೆ.

ಯಾವುದೋ ದೇಶದ ಯಾವುದೋ ಕಪಾಟಿನಿಂದ ಹೆಕ್ಕಿದ ಪಾಠಗಳು ನಮ್ಮನ್ನು ‘ನ್ಯೂಯಾರ್ಕ್ ಟೈಮ್ಸ್’ಗೆ ರೆಡಿ ಮಾಡುತ್ತದೆ ಆದರೆ ವಾಸ್ತವದಲ್ಲಿ ‘ಸಂಜೆವಾಣಿ’ ಬಾ, ಬಾ ಅನ್ನುತ್ತದೆ.

‘ಈಟಿವಿ’ಗಾಗಿ ಕ್ಯಾಂಪಸ್ ಇಂಟರ್ವ್ಯೂ ನಡೆಸಲು ಹೋಗಬೇಕಾಗಿ ಬಂದಾಗ ಒಂದು ಆಸೆ ಇತ್ತು. ಏನೇನೋ ಬದಲಾಗಿವೆ. ಹಾಗೆ ನಮ್ಮ ಕ್ಲಾಸ್ ರೂಂಗಳೂ ಬದಲಾಗಿರಬಹುದೂ ಅಂತ.

‘ಮತ್ತದೇ ಬೇಸರ, ಅದೇ ಸಂಜೆ’ ಎಂಬಂತೆ ಎಲ್ಲವೂ ಅದೇ, ಅದೇ!

ಆಯ್ಕೆಯಾದ ಎಲ್ಲರಿಗೂ ಎರಡು ತಿಂಗಳು ‘ಈನಾಡು ಜರ್ನಲಿಸಂ ಸ್ಕೂಲ್’ ನಲ್ಲಿ ತೀವ್ರ ತರಬೇತಿ ಕೊಡುತ್ತಿದ್ದೆವು.

ಕಾರಣ ಇಷ್ಟೇ- ರಾಮೋಜಿ ರಾವ್ ಹೇಳಿದ್ದರು- ಕಲಿಸುವ ಮುಂಚೆ, ಕಲಿತದ್ದು ತೆಗೆಸೋದು ಮುಖ್ಯ. Do Unlearning ಅಂತ.

ಹೊಸ ನೋಟದ ಲೆಕ್ಚರರ್ಸ್ ಇಲ್ಲ ಅಂತಲ್ಲ, ಸಿಲಬಸ್ ಏನೇನೂ ಬದಲಾಗಿಲ್ಲ ಅಂತಾನೂ ಅಲ್ಲ, ಬರೀ ಥಿಯರಿ ಮಾತ್ರ ಇದೇ ಅಂತಾನೂ ಅಲ್ಲ. ಆದ್ರೆ ಇವತ್ತಿನ ಮಾಧ್ಯಮಕ್ಕೆ, ಮಾಧ್ಯಮದಲ್ಲಿ ಬದಲಾಗ್ತಿರೋ ಗ್ರಾಮರ್ ಗೆ ಏನು ಬೇಕಾಗಿದೆ ಅನ್ನೋದರ ಗ್ಯಾಪ್ ತುಂಬೋದಿಕ್ಕೆ ಆಗ್ತಾ ಇಲ್ಲ.

5W+1H ಕಾಲದಿಂದ ಸುದ್ದಿ ಅನ್ನೋದು ಸಾಕಷ್ಟು ದೂರ ಬಂದಿದೆ. ಬೋರ್ಡ್ ಮೇಲೆ ಕ್ಯಾಮೆರಾ ಬರೆದು ಅದರ ಭಾಗಗಳನ್ನು ವಿವರಿಸ್ತಾ ಇದ್ದ ಕಾಲದಿಂದ ಒಂದಿಷ್ಟಾದರೂ ನಮ್ಮ ಪಾಠಗಳು ದೂರ ಬಂದಿದೆ ಅನ್ನೋದೇ ಸಮಾಧಾನ.

‘ನಮಗೆ ಇದೆಲ್ಲಾ ಗೊತ್ತೇ ಇಲ್ಲ, ನಮಗೆ ಇದೆಲ್ಲಾ ಹೇಳಿಕೊಟ್ಟಿಲ್ಲ’ ಅನ್ನೋ ಉದ್ಗಾರ ನ್ಯೂಸ್ ರೂಂನಲ್ಲಿ ತೀರಾ ಸಾಮಾನ್ಯ.

ಅಂದ್ರೆ, ಆ ಸ್ಟೂಡೆಂಟ್ ಗಳು ಕ್ಲಾಸ್ ರೂಂನಿಂದ ನ್ಯೂಸ್ ರೂಂಗೆ ಅಡ್ಜಸ್ಟ್ ಆಗೋದಿಕ್ಕೆ ಪೋಲ್ ವಾಲ್ಟ್ ಕೈನಲ್ಲಿ ಹಿಡಿದು ಸಜ್ಜಾಗಿದ್ದಾರೆ ಅಂತಾನೇ ಅರ್ಥ.

‘ನಿಮ್ಮ ಹತ್ರ ಎಷ್ಟು ಫೋನ್ ನಂಬರ್ ಇದೆ ಹೇಳಿ’ ಅಂತ ಇಂಟರ್ನಿಗಳಿಗೆ ಕೇಳಿದೆ. ಮೊಬೈಲ್ ನಲ್ಲಿ ಕ್ಲಾಸ್ ಮೆಟ್ ಗಳು, ನೆಂಟರಿಷ್ಟರದ್ದು ಬಿಟ್ಟರೆ ಇನ್ನೊಂದು ನಂಬರ್ ಅಪರೂಪ ಆಗಿತ್ತು.

ವಿಧಾನಸೌಧದಲ್ಲಿ ಗರ ಗರ ಸುತ್ತೋ ಎಲ್ಲಾ ಪತ್ರಕರ್ತರಿಗೂ ಗೊತ್ತಿರುತ್ತೆ ಮಿನಿಸ್ಟರ್ ನಷ್ಟೇ ಅಲ್ಲಿರೋ ಪ್ಯೂನ್ ಕೂಡ ನ್ಯೂಸ್ ನ ದೊಡ್ಡ ಜೀವಾಳ ಅಂತ.

ಕ್ಲಾಸ್ ರೂಂಗಳು ಹಾಗೂ ನ್ಯೂಸ್ ರೂಂಗಳು ಕೈಕುಲುಕದೆ ಹೋದರೆ ಆಗೋ ಪರಿಣಾಮ ಇದು. ಕನಿಷ್ಠ ‘ಕಾಂಟ್ಯಾಕ್ಟ್’ ಅನ್ನೋದು ಜರ್ನಲಿಸ್ಟ್ ನ ಜೀವಾಳ ಅಂತ ಗೊತ್ತಾಗದೇ ಜರ್ನಲಿಸಂ ಮಾಡೋದು ಹೇಗೆ?

ತಕ್ಷಣ ನನಗೆ ‘ಈಟಿವಿ’ ನ್ಯೂಸ್ ಡೆಸ್ಕ್ ನ ಮೀಟಿಂಗ್ ಗಳು ಜ್ಞಾಪಕಕ್ಕೆ ಬಂತು.

ಮೊಬೈಲ್ ಗಳಲ್ಲಿ T9 ಅನ್ನೋ ಲಾಂಗ್ವೇಜ್ ಬಳಸ್ತಾರೆ. ಯಾಕೆ T9 ಅಂತ ಕರೀತಾರೆ? ಏನದು T9 ಅಂದ್ರೆ? Star TV ಎಕ್ಸ್ ಪ್ಯಾನ್ಶನ್, ವಾಟರ್ ಗೇಟ್ ಅಂದ್ರೇನು? ಕನ್ನಡ ಸಾಹಿತ್ಯ ಪರಿಷತ್ ಗೆ ಮೈಸೂರು ರಾಜರೂ ಅಧ್ಯಕ್ಷರಾಗಿದ್ರು ಅಂತ ಇದೇ ಮಹೇಶ್, ಮೊಯಿದ್ದೀನ್, ಕಲ್ಲೇಶಪ್ಪ, ಯೋಗೀಶ್, ಆಶಾ ಪಟ ಪಟಾ ಅಂತ ಇವತ್ತು ಕ್ಲಾಸ್ ಕೊಡ್ತಾರೆ.

ಇವರೂನೂ ಕುವೆಂಪು, ಬೆಂಗಳೂರು, ಗಂಗೋತ್ರಿ, ಮಂಗಳೂರು ಯೂನಿವರ್ಸಿಟಿ ಕ್ಲಾಸ್ ಗಳಿಂದ ಎದ್ದು ಬಂದವರೇ. ಆದ್ರೆ ಇವರು ಕ್ಲಾಸ್ ರೂಂನ ಕೊರತೆಯನ್ನು ತುಂಬಿಸಿಕೊಂಡು ನ್ಯೂಸ್ ರೂಂಗೆ ರೆಡಿ ಆಗಿದ್ದಾರೆ. ಪೋಲ್ ವಾಲ್ಟ್ ಮಾಡಿ ಗೆದ್ದುಕೊಂಡಿದ್ದಾರೆ.

ಈ ರೀತಿ ಬದಲಾದ ಎರಡು ಘಟನೆ ಹೇಳಬೇಕು. ನರೇಂದ್ರ ಮಡಿಕೇರಿ ಮೈಸೂರು ಯೂನಿವರ್ಸಿಟಿಯಲ್ಲಿ ಬೇಷ್ ಅನಿಸಿಕೊಂಡು ಬಂದ ಹುಡುಗ. ನ್ಯೂಸ್ ರೂಂಗೆ ಬಂದಾಗ ತಬ್ಬಿಬ್ಬಾಗಿ ಕುಳಿತಿದ್ದ. ಕೆಲವೇ ದಿನ ಅಷ್ಟೇ ನ್ಯೂಸ್ ರೂಂ ನ ಗಿರಣಿ ಅವನನ್ನ ಬದಲು ಮಾಡಿತ್ತು.

ಅನಿಲ್ ಕುಂಬ್ಳೆ ಒನ್ ಡೇ ಮ್ಯಾಚ್ ಗೆ ವಿದಾಯ ಹೇಳಿದ್ದರು. ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ. ತಾವು ಬರೆದುಕೊಂಡು ಬಂದಿದ್ದ ವಿದಾಯ ಹೇಳಿಕೆ ಓದಿ ಎದ್ದರು.

ಅದರಲ್ಲಿ ನ್ಯೂಸ್ ಅನ್ನೋದು ಎಲ್ಲಿರುತ್ತೆ? ಕುಂಬ್ಳೆ ಹೊರಗಡೆ ಬರಲಿ ಬೈಟ್ ತಗೊಳ್ಳೋಣ ಅಂತ ಎಲ್ಲಾ ಚಾನಲ್ ನವರೂ ಕಾಯ್ತಿದ್ರು.

ಆದ್ರೆ ಕುಂಬ್ಳೆ ನೇರವಾಗಿ ಕಾರ್ ಹತ್ತಿ ಹೊರಟರು. ನರೇಂದ್ರ ಮಡಿಕೇರಿ ಜಿಗಿದವನೇ ಗೇಟ್ ಹಾಕಿಬಿಟ್ಟ. ಕಾರ್ ನಿಲ್ಲಲೇಬೇಕಾಯ್ತು. ಬೇಕಾದ ಹೆಡ್ ಲೈನ್ ಸಿಕ್ತು.

ಇನ್ನೊಂದು ಘಟನೆ- ಎಲ್ಲಾ ಪತ್ರಕರ್ತರೂ ಜನಾರ್ದನ ರೆಡ್ಡಿ ಸಿ.ಡಿ. ರಿಲೀಸ್ ಮಾಡ್ತಾರೆ ಅಂತ ಬಳ್ಳಾರಿ ಮನೆಯಲ್ಲಿ ಮುತ್ತಿಕೊಂಡಿದ್ರು. ಎಷ್ಟೋ ಚಾನಲ್ ಗಳು ನೇರ ಪ್ರಸಾರಕ್ಕೆ ಅಂತ ಓ.ಬಿ. ವ್ಯಾನ್ ತಗೊಂಡು ಬಳ್ಳಾರಿ ಎಂಟರ್ ಆಗಿತ್ತು.

ಆದ್ರೆ ಜ್ಯೋತಿ ಇರ್ವತ್ತೂರು ಬೆಂಗಳೂರಿನಲ್ಲಿ ಎಡವಿ ಬಿದ್ರೆ ಸಿಗೋ ಚಾಲುಕ್ಯ ಹೋಟೆಲ್ ಪಕ್ಕದ ರೆಡ್ಡಿ ಮನೆಯಲ್ಲಿದ್ಲು. ಅವರ ಅಡುಗೆಮನೆ ಅಕ್ಕಿಡಬ್ಬಿಯಲ್ಲಿ ಅದೇ ಸಿ.ಡಿ.ಗಳಿದ್ವು.

ಜ್ಯೋತಿ ಮಂಗಳೂರು ಯೂನಿವರ್ಸಿಟಿಯಿಂದ ಬಂದು ರಾಮೋಜಿ ಫಿಲಂ ಸಿಟಿಯಲ್ಲಿ ಹತ್ತರಲ್ಲಿ ಹನ್ನೊಂದು ಅನ್ನುವ ಹಾಗೆ ಕುಳಿತಿದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ.

ಹಾಗಾದ್ರೆ ಎಲ್ಲಾ ಪತ್ರಕರ್ತರೂ ಬೆಂಗಳೂರು ಟು ಬಳ್ಳಾರಿ ಯಾತ್ರೆ ಮಾಡ್ತಿದ್ದಾಗ ಅಕ್ಕಿ ಡಬ್ಬದಲ್ಲಿರೋ ಸಿ.ಡಿ. ಅವಳಿಗೆ ಕಂಡಿದ್ದಾದರೂ ಹೇಗೆ? ಗೇಟ್ ಕ್ಲೋಸ್ ಆದ್ರೆ ಬುಲೆಟಿನ್ ಓಪನ್ ಆಗುತ್ತೆ ಅಂತ ನರೇಂದ್ರ ಮಡಿಕೇರಿಗೆ ಹೇಳಿಕೊಟ್ಟವರು ಯಾರು?

ಅದೇ ನ್ಯೂಸ್ ರೂಂನ ಚಮತ್ಕಾರ.

‘ಯಾಕಪ್ಪಾ ಇಷ್ಟು ಸ್ಪೆಲಿಂಗ್ ಮಿಸ್ಟೇಕ್’ ಅಂತ ಗುರುಪ್ರಸಾದ್ ಬರೆದಿದ್ದ ರಿಪೋರ್ಟ್ ನೋಡ್ತಾ ಕೇಳಿದಾಗ ಚಾನಲ್ ಗಳಲ್ಲಿ ಬರೆಯೋದೇನಿರಲ್ಲ ಅಂತ ಉತ್ತರ ಕೊಟ್ಟಿದ್ದ.

ಅದೇ ಹುಡುಗ ಎರಡು ದಿನ ಬಿಟ್ಟು ಎಲ್ಲಾ ಇಂಟರ್ನಿಗಳಿಗೆ ಚಂದ್ರಯಾನ ಪಾಠ ಮಾಡ್ತಿದ್ದ. ವಿ.ಐ.ಪಿ. ಸೆಕ್ಯುರಿಟಿಯಲ್ಲಿ ಎಷ್ಟು ವಿಧ ಅಂತ ವಿವರಿಸ್ತಿದ್ದ. ನ್ಯೂಸ್ ಅದರಿಂದಾನೂ ಹೇಗೆ ತೆಗೀಬಹುದು ಅಂತ ಹುಡುಕಿ ಕೊಡ್ತಾ ಇದ್ದ. ಕ್ಲಾಸ್ ರೂಂನಿಂದ ಒಂದಷ್ಟು ದಿನ ಹೊರಗೆ ಬಂದಿದ್ದ.

ರವೀಂದ್ರನಾಥ ಟ್ಯಾಗೂರರ ‘ಪಂಜರ ಶಾಲೆ’ ನಾಟಕ ನೋಡಿದ್ದೀರಾ.

ಮತ್ತೆ ಕಾಶೀನಾಥ ಬಗರೆ ನೆನಪಿಗೆ ಬಂದ.

ಜರ್ನಲಿಸಂ ಅನ್ನೋದು ದರ್ಜಿ ಕೆಲಸಾನೇ. ಕ್ಲಾಸ್ ರೂಂ ಅನ್ನೋ ಸೂಜಿ ತಗೋಬೇಕು, ನ್ಯೂಸ್ ರೂಂ ಅನ್ನೋ ದಾರ ಪೋಣಿಸಬೇಕು, ನ್ಯೂಸ್ ಅನ್ನೋ ಕೌದಿ ತಯಾರು ಮಾಡ್ಬೇಕು.

ರಾತ್ರೋರಾತ್ರಿ ಹಳೇ ಕಟ್ಟಡದಲ್ಲಿ ಬಿಜೆಪಿ ಶಾಸಕ ನೇಣಿಗೆ

ಪಶ್ಚಿಮಬಂಗಾಲ: ಬಿಜೆಪಿ ಶಾಸಕರೊಬ್ಬರ ಶವ ಮಾರುಕಟ್ಟೆಯೊಂದರ ಹಳೇ ಕಟ್ಟಡದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಧ್ಯರಾತ್ರಿ ಅವರು ಮನೆಯಿಂದ ಹೊರ ಹೋಗಿದ್ದರು. ಬೆಳಿಗ್ಗೆ ಕಟ್ಟಡವೊಂದರಲ್ಲಿ ಬಹಿರಂಗವಾಗಿ ಕಾಣುವಂತೆ ಅವರ ಶವ ಜಂತೆಗೆ ನೇತಾಡುತ್ತಿತ್ತು.

ಕೊಲೆ ಮಾಡಿದ ಬಂತರ ಶವವನ್ನು ನೇಣು ಬಿಗಿದಿರಬಹುದು ಎಂದು ಅಲ್ಲಿನ ಜನರು ಅನುಮಾನಪಟ್ಟಿದ್ದಾರೆ.

ಶಾಸಕರನ್ನು ದೇಬೇಂದ್ರನಾಥ ರಾಯ್ ಎಂದು ಗುರುತಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ರಾಜಕೀಯ ತಿಕ್ಕಾಟ, ಘರ್ಷಣೆ ನಡೆಯುತ್ತಿದ್ದು, ಘಟನೆ ರಾಜಕೀಯ ತಿರುವು ಪಡೆಯಬಹುದು ಎಂದು ಹೇಳಲಾಗುತ್ತಿದೆ.

ತುಮಕೂರು: 500ರ‌ ಹತ್ತಿರ ಸಾಗುತ್ತಿರುವ ಕೊರೊನಾ, Sp ಕಚೇರಿ ಸೀಲ್ಡ್ ಡೌನ್, ಗರ್ಭಿಣಿಯರನ್ನು ಬಿಡದ ಸೋಂಕು

Publicstory


ತುಮಕೂರು; ಜಿಲ್ಲೆಯಲ್ಲಿ ಕೊರೊನಾ ರುದ್ರ ತಾಂಡವ ನಿಲ್ಲುವಂತೆ ಕಾಣುತ್ತಿಲ್ಲ. ಭಾನುವಾರವೂ ಮತ್ತೇ 25 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರಲ್ಲಿ ಗರ್ಭಿಣಿಯರು, ಪೊಲೀಸರು ಸೇರಿದ್ದಾರೆ.

ಒಟ್ಟು 25 ಪ್ರಕರಣಗಳು ಪಾಸಿಟಿವ್ ಬಂದಿವೆ.
ಹೊಸ ಸೋಂಕಿತರ ಪೈಕಿ ಮೂವರು ಗರ್ಭಿಣಿಯರಾಗಿದ್ದಾರೆ. ಉಳಿದಂತೆ 11 ಜನ ರೋಗದ ಲಕ್ಷಣಗಳಿದ್ದವರು, 11 ಜನರು ಯಾವುದೇ ರೋಗ ಲಕ್ಷಣಗಳಿಲ್ಲದವರು ಹಾಗೂ 3 ಮಂದಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರಾಗಿದ್ದಾರೆ. ಉಳಿದ ಮೂವರು ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ. ಮಧುಗಿರಿಯಲ್ಲಿ ಒಂದು ಸಾವು ಸಂಭವಿಸಿದೆ.

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರೂ ಸೇರಿದಂತೆ ಮೂರು ಮಂದಿ ಪೊಲೀಸರಿಗೆ ಕೊರೊನ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

ಎಸ್ಪಿ ಕಚೇರಿಯನ್ನು ಸ್ಯಾನಿಟೈಜ್ ಮಾಡಲಾಗಿದೆ. ಪೊಲೀಸರಲ್ಲಿ ಹೆಚ್ಚಾಗಿ ಸೋಂಕು ಕಂಡು ಬರುತ್ತಿರುವುದು ಅವರ ಮಾನಸಿಕ ಸ್ಥೈರ್ಯಕ್ಕೆ ಸವಾಲಾಗಿದೆ.

ಕೊರೊನ ಸೋಂಕಿತ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಮಧುಗಿರಿ ಡಿವೈಎಸ್ಪಿ ಕಚೇರಿ ಮತ್ತು ಕೋಡಿಗೇನಹಳ್ಳಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಈಗ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಯನ್ನು ಸೀಲ್ ಮಾಡಿದೆ.

ಸೋಂಕಿತ ಸಿಬ್ಬಂದಿಯ ಪ್ರಯಾಣ ಇತಿಹಾಸ, ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಿತರ ವಿವರವನ್ನು ಆರೋಗ್ಯ ಮತ್ತು ಕುಟುಂಬ ಇಲಾಖೆ ಸಂಗ್ರಹಿಸುತ್ತಿದೆ. ಇಬ್ಬರು ಕೆಎಸ್.ಆರ್.ಪಿ ಪೊಲೀಸರಿಗೂ ಕೊರೋನ ದೃಢಪಟ್ಟಿದೆ.

ವೀರಸಾಗರದ ಮುನಿಸಿಪಲ್ ಕಚೇರಿಯಲ್ಲೂ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇಂದು ತುಮಕೂರು ಜಿಲ್ಲೆಯಲ್ಲಿ 25 ಪ್ರಕರಣಗಳು ಕಂಡುಬಂದಿದ್ದು, ತುಮಕೂರಿನಲ್ಲಿ 11 ಕೇಸುಗಳು ದಾಖಲಾಗಿವೆ. .
ಸಪ್ತಗಿರಿ ಬಡಾವಣೆ, ಎಸ್.ಐ.ಟಿ ಬಡಾವಣೆ ಸೇರಿದಂತೆ ಜಿಲ್ಲೆಯ ಕುಣಿಗಲ್, ಪಾವಗಡ, ಕೊರಟಗೆರೆ ತಾಲೂಕುಗಳಲ್ಲೂ ಕೊರೊನ ಪ್ರಕರಣಗಳು ವರರಿಯಾಗಿವೆ.

ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 478 ಮುಟ್ಟಿದ್ದು, 500 ಗಡಿ ದಾಟುವ ದಿನ ದೂರವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಸೋಂಕು ಪೀಡಿತರ ಬದಲಿಗೆ ಗುಣಮುಖರಾಗಿ ಹೊರ ಹೋಗುತ್ತಿರುವ ಸಂಖ್ಯೆ ಕಡಿಮೆಯಾಗಿದ್ದು, ಇದು ಆತಂಕ ಮೂಡಿಸಿದೆ. ಸಾವಿನ ಸಂಖ್ಯೆಯೂ ಏರುತ್ತಿದ್ದು, ಇದು ಸಹ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಲಾಗುತ್ತಿದೆ.

ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣ ಮಾಡುವಲ್ಲಿ ಮುನ್ನೆಚ್ಚರಿಕೆ ಮೂಡಿಸುವಲ್ಲಿ ಜಿಲ್ಲಾಡಳಿತ ಸೋಲುತ್ತಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಆಡಳಿತ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳ ನಡುವಿನ ಸಹಭಾಗಿತ್ವದ ಕೊರತೆಯೂ ಸೋಂಕು ಹೆಚ್ಚಲು ಕಾರಣವಾಗುತ್ತಿದೆ. ಮಾಸ್ಕ್ ಧರಿಸದಿದ್ದರೆ ದಂಡ ಹಾಕುವುದಾಗಿ ಪತ್ರಿಕಾ ಹೇಳಿಕೆ ನೀಡಿ ಜಿಲ್ಲಾ ಪಂಚಾಯತ್ ಸಿಇಒ ಕಚೇರಿಯಲ್ಲಿ ಕುಳಿತುಕೊಂಡರೆ ಸಾಲದು, ಹಳ್ಳಿಗಳಿಗೆ, ಗ್ರಾಮ, ತಾಲ್ಲೂಕು ಪಂಚಾಯತ್ ಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅರಿಯಬೇಕಾಗಿದೆ. ಜಿಲ್ಲಾಧಿಕಾರಿ ಅವರಯ ಸಿಇಒ ಅವರಿಗೆ ಈ ಬಗ್ಗೆ ತಾಖೀತು ಮಾಡಬೇಕು ಎಂದು ತುಮಕೂರು ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಮಂಜುನಾಥ್ ಪ್ರತಿಕ್ರಿಯಿಸಿದರು.

ಇನ್ನೂ ಇಂದು, ತುಮಕೂರಿನಲ್ಲಿ 11, ತುರುವೇಕೆರೆಯಲ್ಲಿ 7, ಪಾವಗಡದಲ್ಲಿ ಮೂವರಿಗೆ, ಕೊರಟಗೆರೆ, ಮಧುಗಿರಿಯಲ್ಲಿ ಒಬ್ಬರಿಗೆ, ಕುಣಿಗಲ್ ನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.

ತುಮಕೂರು: ಗರ್ಭಿಣಿ, ಪೋಲಿಸರಿಗೆ ಸೋಂಕು

ತುಮಕೂರು ಜಿಲ್ಲೆಯಲ್ಲಿ ಭಾನುವಾರವೂ ಸಹ 25 ಮಂದಿಗೆ ಕೋವಿಡ್ 19 ದೃಢಪಟ್ಟಿದೆ.

ತುಮಕೂರು 11, ತುರುವೇಕೆರೆ 7, ಪಾವಗಡ 3, ಕೊರಟಗೆರೆ 1, ಮಧುಗಿರಿ 1, ಕುಣಿಗಲ್ ನಲ್ಲಿ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇವರಲ್ಲಿ ಮೂರು ಮಂದಿ ಗರ್ಭಿಣಿಯರು, 3 ಮಂದಿ ಪೊಲೀಸರಿಗೂ ಸೋಂಕು ತಗುಲಿದೆ.    11 ಮಂದಿಯಲ್ಲಿ ರೋಗದ ಲಕ್ಷಣಗಳಿವೆ. ಉಳಿದ 11 ಮಂದಿಯಲ್ಲಿ ಯಾವುದೇ ಲಕ್ಷಣಗಳಿರುವುದಿಲ್ಲ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 3 ಮಂದಿಗೆ ಸೊಂಕು ತಗುಲಿದೆ.

ಚಿಕ್ಕನಾಯಕನಹಳ್ಳಿ: ಅಧಿಕಾರಿಗಳಿಗೆ ಬೇಕಿದೆ ಮತ್ತಷ್ಟು ಬದ್ಧತೆ,‌ ಜನರಿಗಿಲ್ಲ ತಿಳವಳಿಕೆ

ಭರತ್ ಎಂ.ಎನ್


ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನ ಪಾಸಿಟಿವ್ ಹೆಚ್ಚಾಗುತ್ತಿದ್ದು ಇನ್ನೂ ದ್ವಿಶತಕ ದಷ್ಟು ಕೊರೊನ ಪರೀಕ್ಷೆ ವರದಿ ಬರಬೇಕಿದೆ. ಸಾಮಾಜಿಕ ಅಂತರ ,ಮಾಸ್ ಬಳಕೆಯಾಗದಿದ್ದರೆ ಕೊರೊನ ಸ್ಫೋಟ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಜೂನ್ 1 ರವರೆಗೆ ತಾಲ್ಲೂಕಿನಲ್ಲಿ 1096 ಕೊರೊನ ಪರೀಕ್ಷೆ ನಡೆಸಲಾಗಿದ್ದು 835 ಪರೀಕ್ಷೆ ವರದಿ ಪ್ರಕಟವಾಗಿದೆ ಇದರಲ್ಲಿ 30 ರಲ್ಲಿ ಪಾಸಿಟಿವ್ ಬಂದಿದ್ದು ಇನ್ನೂ 261 ವರದಿ ಫಲಿತಾಂಶ ಬರಬೇಕಾಗಿದೆ.

ತಾಲ್ಲೂಕಿಗೆ ನೂರಾರು ಜನ ಬೆಂಗಳೂರು ಸೇರಿದಂತೆ ವಿವಿಧ ಪಟ್ಟಣಗಳಿಂದ ಹಳ್ಳಿಗಳಿಗೆ ಬಂದಿದ್ದು ತಾಲೂಕಿನಲ್ಲಿ ಆತಂಕ ಹೆಚ್ಚಾಗಿದೆ.

ಪಟ್ಟಣದಲ್ಲಿ ನಿರ್ಲಕ್ಷ್ಯ ತೋರಿಸುವುದೇ ಇದಕ್ಕೆ ಕಾರಣವಾಗಿದೆ .

ಇಲ್ಲಿನ ಅಂಗಡಿ ಮುಗ್ಗಟ್ಟು ವ್ಯಾಪಾರ ಸ್ಥಳಗಳಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಮರೆತಂತೆ ಕಾಣುತ್ತಿದೆ .ಪುರಸಭೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ನಾಮಕಾವಸ್ತೆ ಎಂಬಂತೆ ದಂಡ ಹಾಕುತ್ತಿದ್ದು ಯಾವುದೇ ಪ್ರಯೋಜನವಾಗುತ್ತಿಲ್ಲ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ರಸ್ತೆಗಿಳಿದು ಸಾರ್ವಜನಿಕರ ಅರಿವು ಮೂಡಿಸುವ ಜೊತೆಗೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ.

ಅಮಿತಾಬ್ ಬಚನ್, ಅಭಿಷೇಕ್ ಬಚನ್ ಗೆ ಕೊರೊನಾ

ಮುಂಬೈ: ಖ್ಯಾತ ಹಿಂದಿ ನಟ ಅಮಿತಾಬ್ ಬಚನ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅವರ ಪುತ್ರ ಅಭಿಷೇಕ್ ಬಚ್ಚನ್ ಗೂ ಸೋಂಕು ತಗುಲಿದೆ.

ಬಿಗ್ ಬಿ ಗೆ ಸೋಂಕು ತಗುಲಿದೆ ಎಂದು ತಿಳಿಯುತ್ತಿದ್ದಂತೆ ಅಭಿಮಾನಿಗಳು ದುಂಖಭರಿತರಾಗಿದ್ದಾರೆ. ನಮ್ಮ ನೆಚ್ಚಿನ ನಟ ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಅಮಿತಾಬ್ ಬಚ್ಚನ್ (77) ಮತ್ತು ಪುತ್ರ ಅಭಿಷೇಕ್ (44) ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ನನಗೆ ಕೋವಿಡ್ ಪಾಸಿಟಿವ್ ಇರುವುದು ದೃಢವಾಗಿದೆ. ಕುಟುಂಬಸ್ಥರು ಮತ್ತು ಸಿಬ್ಬಂದಿಗೂ ಪರೀಕ್ಷೆ ಮಾಡಿಸಲಾಗಿದ್ದು, ವರದಿಗಾಗಿ‌ ಕಾಯುತ್ತಿದ್ದೇವೆ. ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅಮಿತಾಬ್‌ ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ.

ನರಗುಂದದ ಆ ನಿಟ್ಟುಸಿರಿನೊಳಗೆ..

0

ಜಿ.ಎನ್.ಮೋಹನ್


ನಾನು ಅಮ್ಮನ ಮುಂದೆ ಕುಳಿತಿದ್ದೆ.

ಅಮ್ಮ ಉರಿಯುತ್ತಿದ್ದ ಒಲೆಯ ಮೇಲೆ ಚಪಾತಿ ಸುಡುತ್ತಲೇ ಇದ್ದರು.

ಆ ಬೆಂಕಿಯ ಕುಣಿತದಲ್ಲಿ ಅಮ್ಮನ ಮುಖವೂ ಉರಿವ ಉಂಡೆಯಂತೆಯೇ ಕಾಣುತ್ತಿತ್ತು.

ಆ ಉರಿ ಅಲ್ಲಿಂದ ಹಾರಿ ನನ್ನನ್ನೂ ಸೇರಿಸಿಕೊಂಡು ಇಡೀ ಕೋಣೆಯನ್ನೇ ಆವರಿಸಿತ್ತು. ನನ್ನ ಮನೆಯೊಳಗೆ ಒಂದು ಸಿಟ್ಟಿನ, ರೋಷದ ಕುಣಿತ ನಡೆಯುತ್ತಿದೆಯೇನೋ ಎನ್ನುವಂತೆ.

ಅಮ್ಮ ಏನೊಂದೂ ಮಾತನಾಡದೆ ಚಪಾತಿ ಮಾಡುತ್ತಲೇ ಇದ್ದರು.

ಒಂದು.. ಎರಡು.. ಮೂರು.. ಹತ್ತು.. ಇಪ್ಪತ್ತು.. ಮೂವತ್ತು.. ಉಹುಂ, ನೂರು.. ಒಂದರ ಮೇಲೆ ಒಂದರಂತೆ ಚಪಾತಿಯ ಬೆಟ್ಟವೇ ಸೃಷ್ಟಿಯಾಗುತ್ತಿತ್ತು.

ಅಮ್ಮ ತನ್ನ ಅಸಹಾಯಕತೆಯನ್ನು, ತನ್ನೊಳಗಿದ್ದ ಕುದಿತವನ್ನು, ತನ್ನ ಅವಮಾನವನ್ನು, ತನ್ನ ರೋಷವನ್ನೆಲ್ಲಾ ಹೀಗೆ ಚಪಾತಿ ಮಾಡುವ ಮೂಲಕ ತೀರಿಸಿಕೊಳ್ಳುತ್ತಿದ್ದಂತೆ ಕಾಣುತ್ತಿತ್ತು .

ಅದು ನಮ್ಮೊಬ್ಬರ ಮನೆಯ ಕಥೆ ಮಾತ್ರವಾಗಿರಲಿಲ್ಲ. ಬೆಂಗಳೂರಿನ ಸಹಸ್ರಾರು ಮನೆಗಳಲ್ಲಿ ಆ ದಿನ ಎಷ್ಟೋ ಅಮ್ಮಂದಿರು ಹೀಗೆ ಚಪಾತಿ ಮಾಡುತ್ತಲೇ ಇದ್ದರು.

ಅಡುಗೆಮನೆಯಲ್ಲಿ ಚಪಾತಿಯ ರಾಶಿಯನ್ನೇ ಸೃಷ್ಟಿಸುವ ಮೂಲಕ ತಮ್ಮೊಳಗಿನ ನೋವಿಗೆ ದನಿ ನೀಡುತ್ತಿದ್ದರು.

ಅದು ಬೆಂಗಳೂರಿನ ಕಥೆ ಮಾತ್ರವಾಗಿರಲಿಲ್ಲ. ಬಯಲು ಸೀಮೆ, ಮಲೆನಾಡು, ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಎಂಬ ಯಾವ ಬೇಧಭಾವವೂ ಇಲ್ಲದಂತೆ ಸಹಸ್ರಾರು ಮನೆಗಳಲ್ಲಿ ಒಂದು ಸಿಟ್ಟು, ಅಡಗಿಸಿಟ್ಟ ಸಿಟ್ಟು ತಾನೇ ತಾನಾಗಿ ಚಪಾತಿಯಾಗಿ, ರೊಟ್ಟಿಯಾಗಿ, ಚಟ್ನಿಯಾಗಿ, ಎಣ್ಣೆಗಾಯಿಯಾಗಿ, ಚಟ್ನಿ ಪುಡಿಯಾಗಿ ನಾನಾ ಆಕಾರ ತಳೆಯುತ್ತಾ ಹೋಯಿತು

ಇದು ನರಗುಂದ ರೈತ ಬಂಡಾಯದ ಯಶಸ್ಸು.

ನರಗುಂದದಲ್ಲಿ ಮುಷ್ಠಿ ಹಿಡಿದೆತ್ತಿದ ರೈತ ಕೇವಲ ನರಗುಂದದ ಪ್ರತೀಕವಾಗಿ ಉಳಿಯಲಿಲ್ಲ. ಆತನ ಸಿಟ್ಟು, ಆತನ ಅವಮಾನ ಆತನೊಬ್ಬನದ್ದೇ ಅಗಿರಲಿಲ್ಲ.

ಅದು ನೋವಿನಿಂದ ಮುಖ ಮುಚ್ಚಿಕೊಂಡಿದ್ದ, ಅಸಹಾಯಕತೆಯಿಂದ ನರಳುತ್ತಿದ್ದ, ಬೆಂಕಿಯ ಕಿಚ್ಚನ್ನು ಅಡಗಿಸಿಟ್ಟುಕೊಂಡಿದ್ದ ಎಲ್ಲರ ಪ್ರತೀಕವಾಗಿ ಹೋಯ್ತು.

ಆ ಕಾರಣಕ್ಕಾಗಿಯೇ ನರಗುಂದದಲ್ಲಿ ಪೋಲೀಸರ ಗೋಲೀಬಾರಿಗೆ ಇನ್ನಿಲ್ಲವಾಗಿ ಹೋದ ಈರಪ್ಪ ಕಡ್ಲಿಕೊಪ್ಪ, ನವಲಗುಂದದಲ್ಲಿ ಇಲ್ಲವಾದ ಬಸಪ್ಪ ಶಿವಪ್ಪ ಲಕ್ಕುಂಡಿ ಅಲ್ಲಿನವರಾಗಿ ಮಾತ್ರ ಉಳಿಯಲಿಲ್ಲ.

ಎಲ್ಲರ ನೋವು, ಎಲ್ಲರ ಅವಮಾನದ ಪ್ರತೀಕವಾಗಿ ನರಗುಂದ ಎದ್ದು ನಿಂತುಬಿಟ್ಟಿತು.

ಇದೇ ಜುಲೈನಲ್ಲಿ ಮೂರು ದಶಕಗಳ ಹಿಂದೆ ನರಗುಂದವೆಂಬ ಪುಟ್ಟ ಊರಿನಿಂದ ಹೊರಟ ದನಿ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸುತ್ತಾ ನಾಡ ತುಂಬಾ ಹರಿಯಿತು.

ಕೇವಲ ಇನ್ನೂರು ಜನರ ಒಂದು ಮೆರವಣಿಗೆ ಸಹಸ್ರಾರು ಜನರ ಆಂದೋಲನವಾಯಿತು.

ಇದು ಸಾಲದೆಂಬಂತೆ ೨೦ ದಿನ ನಡೆದೇ ನ್ಯಾಯ ಕೇಳುತ್ತೇನೆ ಎಂದು ಹೊರಟ ರೈತನನ್ನು ಹುರಿದುಂಬಿಸಲು ಆ ರೈತರು ಚಲಿಸಿದ ಊರುಗಳಲ್ಲಿ ಜನ ದಂಡುಗಟ್ಟಿ ನಿಂತರು.

ಅವರ ಜೊತೆ ನಡೆದು ನೀವು ಒಬ್ಬಂಟಿಯಲ್ಲ ಎಂದು ಮನದಟ್ಟು ಮಾಡಿಕೊಟ್ಟರು. ರೈತ ಬಂಡಾಯಕ್ಕೆ ಇನ್ನಿಲ್ಲದ ಶಕ್ತಿ ಬಂತು

‘ಸರಿ ಸರಿ ಸರಿ ಹಿಂದಕ್ಕ, ನಾವು ಸಾಗಿ ಬರುತೇವ ಮುಂದಕ್ಕ’ ಎಂಬ ಘೋಷವಾಕ್ಯ ಮೊಳಗಿಯೇಬಿಟ್ಟಿತು

ಚಂದ್ರಶೇಖರ ಕಂಬಾರರ ಆ ಬೆಳಗಾವಿ, ಆ ಶಿವಾಪುರ, ಆ ಘೋಡಗೇರಿ ಎಲ್ಲವನ್ನೂ ಒಮ್ಮೆ ಕಣ್ಣಿಂದ ಕಂಡೇ ಬಿಡಬೇಕು ಎಂದು ಹೊರಟಿದ್ದ ನಮ್ಮ ಕಿವಿಯಲ್ಲಿ ಕಂಬಾರರ ಹಾಡುಗಳದ್ದೇ ದರ್ಬಾರು.

‘ಹೇಳತೇನ ಕೇಳ ಗೆಳೆಯ ನಿನ ಮುಂದ ಕತಿಯೊಂದ ನನ ಮುಂದ ಕೂಂಡ್ರ ಹಿಂಗ ತೆರೆದ ಮನಾ’ ಹಾಡು ಮೊರೆಯುತ್ತಿರುವಾಗಲೇ ಈ ಭಾಗದಲ್ಲಿ ಸಾಕಷ್ಟು ಓಡಾಡಿದ್ದ ಎಂಜಿನಿಯರ್ ರಾಜಶೇಖರ್ ‘ಅಲ್ಲಿ ನೋಡ್ರಿ ಘಟಪ್ರಭಾ’ ಎಂದರು.

ನಾನು, ಶೇಕರಪ್ಪ, ರಾಮಚಂದ್ರಪ್ಪ, ನಿಂಗಣ್ಣನವರ್ ಎಲ್ಲರೂ ಓಡುತ್ತಿದ್ದ ಗಾಡಿಯಿಂದ ಕತ್ತು ಹೊರಚಾಚಿ ನೋಡಿದೆವು.

ಸುರಿದ ಮಳೆಯನ್ನೆಲ್ಲಾ ಒಡಲಲ್ಲಿಟ್ಟುಕೊಂಡು ಘಟಪ್ರಭಾ ಉದ್ದೋ ಉದ್ದಕ್ಕೆ ಓಡುತ್ತಿತ್ತು ‘ಇದರ ಅವಳಿ ಸಹೋದರಿಯೇ ಮಲಪ್ರಭಾ’ ಎಂದರು.

ಆ ಕ್ಷಣಕ್ಕೆ ನನ್ನೊಳಗೆ ಒಂದು ನೋವಿನ ಎಳೆ ಹಾಯ್ದು ಹೋಯ್ತು.

ಈ ಮಲಪ್ರಭೆಯ ತೆಕ್ಕೆಯಲ್ಲಿರುವುದೇ ನರಗುಂದ, ನವಲಗುಂದ, ಸವದತ್ತಿ..

ಇನ್ನೂ ಮೀಸೆ ಮೂಡುತ್ತಿದ್ದ ದಿನಗಳಲ್ಲಿ ನಾನು ನರಗುಂದದ ಆ ಕಪ್ಪು ಮಣ್ಣಿನ ಮೇಲೆ ಎಷ್ಟು ಬಾರಿ ಹೆಜ್ಜೆ ಹಾಕಿದ್ದೇನೋ. ಕೃಷಿ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿದ್ದ ಅಣ್ಣನ ಕಾರಣದಿಂದಾಗಿ ಆ ನರಗುಂದ ನನಗೆ ಮತ್ತೆ ಮತ್ತೆ ಧಕ್ಕಿತ್ತು.

ನರಗುಂದದ ಆ ಬಾಬಾ ಸಾಹೇಬ ಬ್ರಿಟಿಷರ ವಿರುದ್ಧ ಸೆಟೆದೆದ್ದು, ಅವರ ರುಂಡ ಚಂಡಾಡಿ, ಊರ ಅಗಸೆಯ ಬಾಗಿಲಿಗೆ ನೇತಾಡಿಸಿದ್ದ ಎಂದು ಕೇಳಿ ಸಾಕಷ್ಟು ಸಲ ಆ ಅಗಸೆಯ ಬಾಗಿಲಿಗೆ ಹೋಗಿ ಕತ್ತೆತ್ತಿ ನೋಡಿದ್ದೆ.

ಬಾಬಾಸಾಹೇಬನ ಧೀರತನದ ಬಗೆಗಿನ ಲಾವಣಿಗಳು ಊರೂರಿನಲ್ಲಿ ಸ್ವಾಭಿಮಾನದ ಬೀಜ ಬಿತ್ತುತ್ತಾ ಸಾಗಿದ್ದನ್ನು ಕಂಡಿದ್ದೆ.

ನರಗುಂದ ನನಗೆ ಕೇವಲ ಮತ್ತೊಂದು ಊರು ಆಗಿರಲಿಲ್ಲ. ಅದು ಒಡಲಾಳದ ಕಿಚ್ಚಿನ ಪಾಠ ಕಲಿಸಿದ ಊರಾಗಿತ್ತು.

ಅದೇ ಊರಿನಲ್ಲಿದ್ದಾಗಲೇ ನನಗೆ ‘ನೆಲಮನೆ ಪ್ರಕಾಶನ’ದ ಪುಸ್ತಕಗಳ ಪರಿಚಯವಾಗಿದ್ದು. ಆ ಕಾರಣಕ್ಕಾಗಿಯೇ ಲಂಕೇಶ್, ದೇವನೂರು, ಬೆಸಗರಹಳ್ಳಿ ರಾಮಣ್ಣ ಪರಿಚಯವಾಗಿದ್ದರು.

ಅದೇ ಊರಿನಲ್ಲಿಯೇ ನನಗೆ ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ‘ಹೋರಾಟದ ಹಾಡು’ ಕೈಗೆ ಸಿಕ್ಕಿತ್ತು. ಅದೇ ಊರಿನಲ್ಲಿಯೇ ಕೃಷ್ಣ ಆಲನಹಳ್ಳಿ ತನ್ನ ಕಥೆಗಳ ಮೂಲಕ ನನ್ನೊಳಗೆ ತಾರುಣ್ಯದ ಬಿಸಿ ಹೆಚ್ಚಿಸಿದ್ದ. ಹಾಗಾಗಿ ಇದು ನನಗೆ ಒಂದು ನೋಟವನ್ನು ತಂದುಕೊಟ್ಟ ಊರೂ ಆಗಿತ್ತು.

ಒಂದು ಬಂಡಾಯದ ಕುಡಿ ಈ ಊರೊಳಗೆ ಶಾಲ್ಮಲೆಯಂತೆ ಗುಪ್ತಗಾಮಿನಿಯಾಗಿ ಹರಿಯುತ್ತಲೇ ಇತ್ತು.

ಇಡೀ ನರಗುಂದ ಬಂಡಾಯವನ್ನು ಮೊದಲಿನಿಂದ ಕೊನೆಯವರೆಗೆ ನೋಡಿದ ಬಿ ಎಸ್ ಸೊಪ್ಪಿನ ಅವರ ‘ಮಲಪ್ರಭೆಯ ಸಿಡಿದೆದ್ದ ರೈತ’ ಕೃತಿ ಹಿಡಿದು ಕುಳಿತಿದ್ದೇನೆ.

ಒಂದು ನೋವಿನ ಓಣಿಯಲ್ಲಿ ಓಡಾಡಿದ ಅನುಭವ.

ಮಲಪ್ರಭೆಗೆ ನವಲಗುಂದದ ನವಿಲುತೀರ್ಥ ಎಂಬಲ್ಲಿ ಅಣೆಕಟ್ಟೆ ಕಟ್ಟಲು ಹೊರಟದ್ದೇ ಅದು ಬರೀ ನೀರನ್ನಲ್ಲ, ಕಣ್ಣೀರನ್ನೂ ಹೊತ್ತು ತರುತ್ತದೆ ಎಂದು ಯಾರಿಗೆ ಗೊತ್ತಿತ್ತು?

ಕಪ್ಪು ಮಣ್ಣು, ಬಿರಿದ ಭೂಮಿಯಲ್ಲಿ ನಡೆಯುವ ಕಾಲುವೆ ಕಾಮಗಾರಿ ಎಷ್ಟು ಪಕ್ಕಾ ಆಗಿರಬೇಕೆಂದರೆ ಒಂದು ಹನಿ ನೀರೂ ಸೋರದಂತಿರಬೇಕು ಆದರೆ ಎಲ್ಲೆಡೆಯಂತೆ ಅಲ್ಲಿ ಆದದ್ದೂ ‘ಸರ್ಕಾರಿ’ ಕಾಮಗಾರಿ. ಒಂದೇ ಕಾಮಗಾರಿಯಲ್ಲಿ ಕಾರು ಖರೀದಿಸಿಬಿಡಬೇಕೆಂಬ ಹಂಬಲದವರು ಅಲ್ಲಿಯೂ ಇದ್ದರು.

ನೀರಾವರಿಗೆ ಹೇಗೆ ಹೊಂದಿಕೊಳ್ಳಬೇಕು ಎಂದು ಗೊತ್ತಾಗದೆ ಚಡಪಡಿಸುತ್ತಿದ್ದ, ಕೃಷಿಯ ಅರ್ಥಶಾಸ್ತ್ರ ಬದಲಾಗುತ್ತಿರುವುದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದ ರೈತನ ಮುಂದೆ ಎದ್ದು ನಿಂತದ್ದು ಸರ್ಕಾರದ ನೋಟೀಸುಗಳು..

ಹರಿಸದ ನೀರಿಗೂ ತೆರಿಗೆ ಪಾವತಿಸುವಂತೆ ಹೇಳಿದಾಗ ರೈತ ಸಿಡಿದೆದ್ದು ನಿಂತ.

‘ನಿನ್ನೆ ದಿನ, ನನ್ನ ಜನ, ಬೆಟ್ಟದಂತೆ ಬಂದರು’ ಎನ್ನುವ ಸಾಲುಗಳ ಅರ್ಥ ಏನು ಎಂದು ಗೊತ್ತಾಗಬೇಕಿದ್ದರೆ ಆ ನರಗುಂದ ಬಂಡಾಯವನ್ನು ನೋಡಬೇಕಿತ್ತು.

‘ಕಪ್ಪು ಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳು’ ಎನ್ನುವಂತೆಯೇ ಇದ್ದ ನರಗುಂದ ನವಲಗುಂದ ಸವದತ್ತಿಯ ರೈತರು ಬೆಸೆದುಕೊಳ್ಳುತ್ತಾ ಸಾಗಿದರು

ಬಿ ಎಸ್ ಸೊಪ್ಪಿನ, ಎಸ್ ಎಚ್ ಕಪ್ಪಣ್ಣನವರ್, ವಿ ಎನ್ ಹಳಕಟ್ಟಿ, ಬಿ ಆರ್ ಯಾವಗಲ್, ಶಿವದೇವ ಗೌಡ ಪಾಟೀಲ್, ಬಿ ಬಿ ಗಾಣಿಗೇರ, ಎಸ್ ಎನ್ ಈರೇಶನವರ.. ಹೀಗೆ ಹಲವಾರು ಮುಖಂಡರು ಹಳ್ಳಿ ಹಳ್ಳಿ ಸುತ್ತಿದರು. ರೈತರನ್ನು ಸಂಘಟಿಸಿದರು

ಆಕ್ರೋಶ ಹೊತ್ತ ರೈತರು ೨೧ನೆಯ ದಿನ ರಾಜಧಾನಿಯನ್ನು ಪ್ರವೇಶಿಸಿದಾಗ ಬೆಂಗಳೂರಿನಲ್ಲಿ ಹೋರಾಟದ ಹಾಡುಗಳದ್ದೇ ಪಲ್ಲವಿ.

ರೈತರು ಹೋದೆಡೆಯೆಲ್ಲಾ ಜನರಿಂದ ಹೂವಿನ ಸುರಿಮಳೆ.

‘ಇವರೆಲ್ಲಾ ಬಾಡಿಗೆ ರೈತರು’ ಎಂದು ಮುಖ್ಯಮಂತ್ರಿ ಗುಂಡೂರಾವ್ ಜರಿದರು.

ಅಷ್ಟೇ ಸಾಕಿತ್ತು. ರೈತರು ಪೋಲೀಸರ ಕೋಟೆಯನ್ನೂ ದಾಟಿಕೊಂಡು ವಿಧಾನೌಧದ ಮೆಟ್ಟಿಲ ಮೇಲೆ ತಾವು ಹೊತ್ತು ತಂದಿದ್ದ ಹುತಾತ್ಮ ಜ್ಯೋತಿಯನ್ನು ಸ್ಥಾಪಿಸಿಯೇ ಬಿಟ್ಟರು.

ನರಗುಂದದಿಂದ ಹೊರಟಾಗ ರೈತರು ‘ಈಗ ಮಾಡೀವಿ ಆರಂಭ, ವಿಧಾನಸೌಧದಿ ರಣಗಂಭ’ ಎಂದು ಸಾರಿದ್ದರು.

ರೈತರ ಸಿಟ್ಟೇ ಒಟ್ಟಾಗಿ ಅಲ್ಲಿಯವರೆಗೂ ಕರ್ನಾಟಕದಲ್ಲಿ ಭದ್ರವಾಗಿದ್ದ ಕಾಂಗ್ರೆಸ್ ಸರ್ಕಾರ ಅದುರಿಹೋಯಿತು

ಈ ರೈತ ಬಂಡಾಯ ಎಷ್ಟೊಂದು ಜನರನ್ನು ಬದಲಿಸಿತು. ರೈತರನ್ನು, ಕಾರ್ಮಿಕರನ್ನು, ದೇಶವನ್ನು, ನನ್ನನ್ನೂ ಬದಲಿಸಿತು.

ಅವರೊಬ್ಬರಿದ್ದರು ನಿತ್ಯಾನಂದಸ್ವಾಮಿ.

ಸವದತ್ತಿಯಲ್ಲಿ ಆಶ್ರಮ ನಡೆಸುತ್ತಿದ್ದ ಕಾವಿಧಾರಿ. ಕಾವಿ ಧರಿಸಿಯೇ ಹೋರಾಟದ ಜೊತೆ ಹೆಜ್ಜೆ ಹಾಕಿದ್ದರು. ರೈತ ಬಂಡಾಯ ಅವರನ್ನೂ ಬದಲಿಸಿತು. ಕಾವಿ ಕಳಚಿ, ತಮ್ಮ ನೀಳ್ಗೂದಲನ್ನು ಕತ್ತರಿಸಿ ಹೋರಾಟದ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡರು

‘ರಂಗಶಂಕರ’ದಲ್ಲಿ ಅದೇ ನನ್ನ ಪ್ರೀತಿಯ ಕಂಬಾರರ ಉತ್ಸವವಿತ್ತು. ಬಿಡುವಿನ ನಡುವೆ ಊಟ ಮಾಡಲು ಎದುರಿಗಿದ್ದ ಹೋಟೆಲ್ ನಲ್ಲಿ ಕುಳಿತಿದ್ದೆ.

ಪಕ್ಕ ತಿರುಗಿ ನೋಡುತ್ತೇನೆ. ಅದೇ ಹಳಕಟ್ಟಿ. ರೈತ ಬಂಡಾಯಕ್ಕೆ ಕಿಡಿ ಹೊತ್ತಿಸಿದವರಲ್ಲೊಬ್ಬರಾದ ವಿ ಎನ್ ಹಳಕಟ್ಟಿ.

ನನಗೆ ಅರಿವಿಲ್ಲದೇ ನಾನು ಎದ್ದು ನಿಂತಿದ್ದೆ. ಮತ್ತೆ ಕೂಡಲು ಸಾಧ್ಯವಾಗಲಿಲ್ಲ.

ನರಗುಂದದ ಆ ಬಂಡಾಯದ ಬಿಸಿಯುಸಿರು ಇನ್ನೂ ನನ್ನೊಳಗೆ ಆಡುತ್ತಿತ್ತು.

ಮಂಗಳೂರಿನ ಕೊರೊನಾ ಕತೆಗಳು

0

ಮುನೀರ್ ಕಾಟಿಪಳ್ಳ


ಮಂಗಳೂರು: ಸುರತ್ಕಲ್ ನ ವೃದ್ದೆಯೊಬ್ಬರಿಗೆ ವಾತದ ಸಮಸ್ಯೆ ಇತ್ತು. ಬಜಾಲ್ ನ ಖಾಸಗಿ ಅಯರ್ವೇದಿಕ್ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಮೂರು ದಿನದ ಹಿಂದೆ ಅವರ ಸಮಸ್ಯೆ ಉಲ್ಬಣಿಸಿತು.‌ ಮನೆಯವರು ಬಜಾಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ “ದಾಖಲಿಸುವ ಮುನ್ನ ಕೋವಿಡ್ ಪರೀಕ್ಷೆ ಮಾಡಿ ಬನ್ನಿ” ಎಂದು ಶರತ್ತು ವಿಧಿಸಿದರು.

ಮನೆಯವರು 8 ನೇ ತಾರೀಖಿಗೆ ಸರಕಾರಿ ವೆನ್ ಲಾಕ್ ಗೆ ಕೊರೊನಾ ಪರೀಕ್ಷೆಗಾಗಿ ಕರೆದೊಯ್ದರು. ಅಲ್ಲಿ ಸ್ಯಾಂಪಲ್ ಕೊಟ್ಟು ವೃದ್ದೆಯನ್ನು ಮನೆಗೆ ಕರೆತಂದರು.

ಮನೆಯಲ್ಲಿ ವರದಿಗಾಗಿ ಕಾಯುತ್ತಲೇ ಚಿಕಿತ್ಸೆ ದೊರಕದೆ ನಿನ್ನೆ ಸಂಜೆ (ಜುಲೈ 9) ವೃದ್ದೆ ಮೃತ ಪಟ್ಟಿದ್ದಾರೆ. ಅಲ್ಲಿಂದ ಅಸಲೀ ಕತೆ ಶುರುವಾಗಿದೆ.

ಕುಟುಂಬಸ್ಥರು ಅಂತ್ಯ ಕ್ರಿಯೆಗೆ ಸಿದ್ದತೆ ಆರಂಭಿಸಿದ್ದಾರೆ. ಆಗ ಸಮಸ್ಯೆ ಎದುರಾಗಿದೆ. “ಕೊರೋನ ಪರೀಕ್ಷೆ ಮಾಡಿದ ವ್ಯಕ್ತಿ ಮೃತ ಪಟ್ಟರೆ ವರದಿ ಬರದೆ ಅಂತ್ಯಕ್ರಿಯೆ ನಡೆಸುವಂತಿಲ್ಲ” ಎಂಬ ನಿಯಮ ಎದ್ದು ನಿಂತಿದೆ‌.

ಈಗ ಮೃತದೇಹಕ್ಕೆ ಇಪ್ಪತ್ತನಾಲ್ಕು ತಾಸು ದಾಟಿದೆ. ವೆನ್ ಲಾಕ್ ನಲ್ಲಿ ವರದಿ ಕೈ ಸೇರುತ್ತಿಲ್ಲ. “ಎರಡು ತಾಸು ಕಾಯಿರಿ” ಎಂಬ ಡೈಲಾಗ್ ನಿನ್ನೆಯಿಂದ ರಿಪೀಟ್ ಆಗುತ್ತಿದೆ.

ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಿಕ್ಕವರದ್ದು ಹಾರಿಕೆಯ ಅಥವಾ ಅಸಹಾಯಕತೆಯ ಮಾತು. ಉಳಿದವರು ಫೋನ್ ಎತ್ರುತ್ತಿಲ್ಲ. ವೃದ್ದೆ ವಾಸ ಇರುವುದು ಬಾಡಿಗೆ ಮನೆಯಲ್ಲಿ. ಕೋವಿಡ್ ಭಯದಿಂದ ಮನೆ ಮಾಲಿಕರು, ನೆರೆಕರೆಯವರು ಆತಂಕಗೊಂಡಿದ್ದಾರೆ. ಮೃತದೇಹದ ಬಳಿ ಯಾರೂ ಸುಳಿಯುವಂತಿಲ್ಲ.

ಕುಟುಂಬ ಸದಸ್ಯರು ದಿಕ್ಕು ತೋಚದೆ ಪರಿತಪಿಸುತ್ತಿದ್ದಾರೆ. ಜಿಲ್ಲಾಡಳಿತ ಉಸಿರಾಡುವ ಲಕ್ಷಣ ಕಾಣುತ್ತಿಲ್ಲ.

ಈಗ ಹೇಳಿ, ಇಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸದೆ ಬೆಟ್ಟ ಮಾಡುವ ಜಿಲ್ಲಾಧಿಕಾರಿ, ಶಾಸಕ, ಸಂಸದರು ನಮಗೆ ಬೇಕಾ ? ಎಂದು ಇಲ್ಲಿನ ಜನ ಕೇಳುತ್ತಿದ್ದಾರೆ. ಆದರೆ ಏನು ಮಾಡುವುದು. ಇದನ್ನು ಕೇಳಿಸಿಕೊಳ್ಳುವವರು ಯಾರಾದರೂ ಬರಬೇಕಾದರೆ ಇನ್ನೊಂದು ಚುನಾವಣೆಯೇ ಬರಬೇಕೇನೊ?